ಭಾಗ ಒಂದು: ಮಾರ್ಗದ ಸಂಗಡ ಮಾತುಕತೆ
ನೀನಾಸಂನ ಕಲೆಗಳ ಸಂಗಡ ಮಾತುಕತೆ-೨೦೨೫ಕ್ಕೆ ನಾವಿಬ್ಬರೇ ದಿನ ಮುಂಚಿತವಾಗಿ ಹೆಗ್ಗೋಡಿಗೆ ಹೋಗಿದ್ದೆವು. ಐದು ದಿನಗಳ ಕಲಾಪ ಮುಗಿದ ಬೆನ್ನಿಗೆ ಇನ್ನಿಬ್ಬರನ್ನು ಸೇರಿಸಿಕೊಂಡು ಮಂಗಳೂರಿಗೆ ಮರಳಿದ್ದೆವು. ನಮಗೆ ಮಾರ್ಗಕ್ರಮಣದ ಸಂತೋಷಾನುಭವಕ್ಕೆ ಸಾರ್ವಜನಿಕ ಬಸ್ಸು ಒಡ್ಡಿಕೊಳ್ಳುವುದಿಲ್ಲ. ಬೈಕೋಡಿಸೋಣವೆಂದರೆ ಅಕಾಲಿಕ ಮಳೆಯ ಭಯ. ಅನಿವಾರ್ಯವಾಗಿ ನಾನು ಕಾರನ್ನೇ ಆರಿಸಿಕೊಂಡಿದ್ದೆ. ಹಾಗಾಗಿ ಒಟ್ಟಾರೆ ಪ್ರವಾಸಾನುಭವದಿಂದಲೇ ಕಥನಕ್ಕಿಳಿಯುತ್ತೇನೆ.
ಹೋಗುವ ದಾರಿಯಲ್ಲಿ…
“ಅನ್ನಪೂರ್ಣೇಶ್ವರಿ ಕರೆಸಿಕೊಂಡಳು”: ಗೂಗಲ್ ನಕ್ಷೆ ವಿಚಾರಿಸಿದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಹ್ಮಾವರಕ್ಕಾಗಿ ಹುಲಿಕಲ್ ಘಾಟಿ ಏರಿಸುತ್ತದೆ. ಮುಂದೆ ಹೊಸನಗರಕ್ಕಾಗಿ ಹೆಗ್ಗೋಡು ನೂರಾತೊಂಬತ್ತು ಕಿಮೀ ಎಂದಿತ್ತು. ಅದು ಎರಡು ಹೆದ್ದಾರಿ ಸುಂಕದ ಕಟ್ಟೆ, ಅಂದರೆ ಪಡುಬಿದ್ರೆ ಮತ್ತು ಸಾಸ್ತಾನಗಳಲ್ಲಿ ನಮ್ಮನ್ನು ಹಿಂಡಲಿತ್ತು. ನಾಗರಿಕರಾಗಿ, ಕಾರು ಕೊಂಡವರಾಗಿ, ಪೆಟ್ರೋಲ್ ಮತ್ತು ಬಿಡಿ ಭಾಗಗಳ ಗಿರಾಕಿಗಳಾಗಿ…. ನಾನು (ಎಲ್ಲ ವಾಹನ ಮಾಲಿಕರೂ) ಹಲವು ಮುಖಗಳಲ್ಲಿ ಹೆಸರಿಸದೇ ‘ಮಾರ್ಗಸುಂಕ’ವನ್ನು (ರೋಡ್ ಟ್ಯಾಕ್ಸ್) ಕೊಡುತ್ತಲೇ ಇದ್ದೇನೆ. ಅದರ ಮೇಲೆ ‘ಒಳ್ಳೇ ದಾರಿ ಕೊಟ್ಟಿದ್ದೇವೆ’ ಎಂಬ ಉದಾತ್ತತೆಯ ಮುಸುಕಿನಲ್ಲಿ, ಹಣಕೀಳುವ ಸುಂಕದ ಕಟ್ಟೆಗಳನ್ನು ನಾನು ನಿರಾಕರಿಸುತ್ತೇನೆ. ಅಲ್ಲದಿದ್ದರೆ, ಕಳೆದ ಎಂಟು ದಶಕಗಳ ಉದ್ದಕ್ಕೆ ನಾವು ಅನ್ಯ ವಿಧಗಳಲ್ಲಿ ಭರಿಸಿದ ಸುಂಕವಷ್ಟೂ ‘ಹಾಳು ದಾರಿ’ಗಳಿಗೆಂದೇ ಅರ್ಥ ಬರುವುದಿಲ್ಲವೇ!! ಈ ವಿಚಾರದಲ್ಲಿ ವ್ಯಕ್ತಿಯಾಗಿ ಕಾನೂನಿನ ಹೋರಾಟ ನಡೆಸುವ ಶಕ್ತಿ ನನ್ನಲ್ಲಿಲ್ಲ. ಹಾಗಾಗಿ ತುಸು ಹೆಚ್ಚಿನ ಅಂತರ ಮತ್ತು ಸಮಯವನ್ನು ಕೇಳುವ ಮೂಡಬಿದ್ರೆ, ಕಾರ್ಕಳ, ಆಗುಂಬೆ ಘಾಟಿ ದಾರಿಯನ್ನು ಆರಿಸಿಕೊಂಡಿದ್ದೆ. ಈ ಮಾರ್ಗದ ಬಹುತೇಕ ಪ್ರೇಕ್ಷಣೀಯ ಸ್ಥಳಗಳನ್ನು, ನಾವಿಬ್ಬರು ಹಲವು ಬಾರಿ ನೋಡಿದ ನೆಪದಲ್ಲಿ, ತುಸು ವಿರಾಮದಲ್ಲೇ ಹೊರಟಿದ್ದೆವು. ಬೆಳಗ್ಗಿನ ಕಾಫಿಂಡಿಯನ್ನೂ ಮನೆಯಲ್ಲೇ ಮುಗಿಸಿಕೊಂಡಿದ್ದೆವು.
ಮಂಗಳೂರು – ಕಾರ್ಕಳ ಮಾರ್ಗದ ಅಗಲೀಕರಣದ ತೊಡಕುಗಳಲ್ಲಿ ತಡವಾಗಿಯೇ ಮೂಡಬಿದ್ರೆ ತಲಪಿದ್ದೆವು. ಮತ್ತೆ ಪೇಟೆಯ ಗೊಂದಲ ಬೇಡವೆಂದು ನಗರ-ಬಳಸು ದಾರಿ (ಬೈಪಾಸ್) ಹಿಡಿದೆವು. ಆದರದು ಮುಖ್ಯ ದಾರಿ ಸೇರುವಲ್ಲಿನ ಗೊಂದಲದಿಂದ ನಾವು ತಪ್ಪು ದಾರಿ ಹಿಡಿದೆವು. ಒಂದೆರಡು ಮಿನಿಟಿನಲ್ಲಿ ತಪ್ಪಿನರಿವಾದರೂ ಮೈಲುಗಲ್ಲಿನ ನಮೂದು – ‘ಹೊಸನಾಡು ಕೊಡ್ಯಡ್ಕ’, ನೋಡಿಯೇ ಬಿಡೋಣವೆಂದು ಮುಂದುವರಿದೆವು.
ಕೊಡ್ಯಡ್ಕದಲ್ಲಿನ ಭಾರೀ ಕಮಾನು (Come On), ಅಷ್ಟೇ ಭರ್ಜರಿಯಾಗಿ ನಿಂತ ಆಂಜನೇಯ ನಮ್ಮನ್ನು ’ಹೊಸನಾಡು ಅನ್ನಪೂರ್ಣೇಶ್ವರಿ’ ಕ್ಷೇತ್ರಕ್ಕೆ ಸ್ವಾಗತಿಸಿದರು. ಡಾ ಕೊಡ್ಯಡ್ಕ ಜಗನ್ನಾಥ ಹೆಗ್ಡೆಯವರ ಸ್ಮರಣಾರ್ಥ ನಿಂತ ಭವ್ಯ, ಆಕರ್ಷಕ, ಶುಚಿಯಾದ ದೇವಳದ ವಠಾರಗಳ ಒಳ ಹೊರಗೆ ಸುತ್ತಾಡಿ, ಸಂತೋಷಿಸಿ, ಮತ್ತೆ ಕಾರೇರಿದೆವು. ನಾವು ಹಿಡಿದದ್ದು ತಪ್ಪು ದಾರಿಯಾದರೂ ಇದು ಸಮೀಪದಲ್ಲೆಲ್ಲಾದರೂ ಕಾರ್ಕಳಕ್ಕೆ ಕವಲುತ್ತದೋ ಎಂದು ದೇವಕಿ ‘ಅಲ್ಲಾವುದ್ದೀನನ ಮಾಯಾದೀಪ’ (ಚರವಾಣಿ) ಉಜ್ಜಿ ಕೇಳಿದಳು. ಗೂಗಲ್ ನಿಷ್ಕರುಣೆಯಲ್ಲಿ “ಬಂದ ದಾರಿಗೆ ಸುಂಕವಿಲ್ಲ” ಎಂದದ್ದಕ್ಕೆ, ಹಿಮ್ಮುರಿ ತಿರುವು ಹೊಡೆದು, ಈ ಬಾರಿ ಸರಿಯಾಗಿ ಮೂಡಬಿದ್ರೆ-ಕಾರ್ಕಳ ರಸ್ತೆ ಸೇರಿಕೊಂಡೆವು.
ತಿಪ್ಪೆ ಶೃಂಗಾರ ಬಿಟ್ಟು ಊರು ನೋಡಿ ಸ್ವಾಮೀ: ಕಾರ್ಕಳವನ್ನೂ ಬಳಸು ದಾರಿಯಲ್ಲಿ ನಿವಾರಿಸಿ, (ಆಗುಂಬೆ ಘಾಟಿಯ ತಪ್ಪಲಿನ) ಸೋಮೇಶ್ವರದಲ್ಲಿ ‘ಚಾ ವಿರಾಮ’ ಪಡೆದೆವು. ಘಾಟಿ ದಾರಿಯಲ್ಲೇರುತ್ತಿದ್ದಂತೇ ದಿನದ ಖೋಟಾ ಕೊಟ್ಟು ಹೋಗುವವರಂತೆ ಚಿರಿಪಿರಿ ಮಳೆ ಸ್ವಲ್ಪ ದೂರ ಜತೆಗೊಟ್ಟಿತು. ಆಗುಂಬೆ ಪುರ ಪ್ರವೇಶಕ್ಕೆ ಮುನ್ನ, ವಾತಾವರಣದ ತಂಪಿಗೋ ಹಿಂದೆ ಹೋಟೆಲಿನ ‘ಮೂತ್ರ ದೊಡ್ಡಿ ಪರೀಕ್ಷೆ’ ಮಾಡದ ತಪ್ಪಿಗೋ ನನ್ನೊಳಗೆ ಒತ್ತಡ ಹೆಚ್ಚಿತ್ತು. ದಾರಿ ಬದಿಯಲ್ಲೇ ಮೂತ್ರ ವಿರಾಮ ಪಡೆದೆ. ಮತ್ತೆ ನಿಸೂರಾಗಿ ಸುತ್ತ ನೋಡಿದಾಗ, ಆಗುಂಬೆಗೆ ಎರಡೆರಡು ಸ್ವಾಗತ ಕಮಾನು ಕಾಣಿಸಿತು. ಭಿನ್ನ ಕಾಲಘಟ್ಟಗಳ ಅವೆರಡೂ ಉದ್ಘಾಟನಾ ದಿನದಿಂದಾಚೆಗೆ ಯಾರೂ ತಮ್ಮನ್ನು ವಿಚಾರಿಸಿದವರಿಲ್ಲ ಎನ್ನುವಂತೆ ತುಕ್ಕು ಹಿಡಿದು, ಬಣ್ಣ ಕಳೆದುಕೊಂಡಿದ್ದವು. ಅವುಗಳ ಬುಡದಲ್ಲಿ ಪೊದರು ಮುತ್ತಿ, ಮಳೆ ನೀರ ಚರಂಡಿ ಕಟ್ಟಿ, ಕೆಸರು ಕೊಳಚೆ ಮಡುಗಟ್ಟಿತ್ತು. ಕಮಾನುಗಳು ಮುಂದೆ ಯಾರದೋ ತಲೆಗೆ ಬಿದ್ದೋ ವಾಹನ ಗುದ್ದಿಯೋ ಮೋಕ್ಷ ಕಾಣ ಬೇಕೋ ಏನೋ. ತೀವ್ರ ವಿಷಾದದಲ್ಲಿ ನನ್ನಷ್ಟಕ್ಕೆ ಹೇಳಿಕೊಂಡೆ “ಪುರ ಪಿತೃಗಳೇ ಕಮಾನಿನಂಥಾ ಠಕ್ಕಿಗೆ ಸಾರ್ವಜನಿಕ ದುಡ್ಡು ಹಾಳು ಮಾಡುವುದು ಬಿಟ್ಟು, ಮಳೆನೀರ ಚರಂಡಿ, ಅಂಚುಗಟ್ಟೇ, ಸ್ವಚ್ಛ ಮತ್ತು ಮುಕ್ತ ಮೂತ್ರದೊಡ್ಡಿಯಾದರೂ ಕೊಡಬಾರದೇ?”
ತೀರ್ಥಳ್ಳಿ ಮುಟ್ಟಿದಾಗ, ಹೊಸದಾಗಿ ಸಂಚಾರಕ್ಕೆ ತೆರೆದುಕೊಂಡ ಸಿಗಂದೂರು ಸೇತುವೆ ನೋಡುವ ಉತ್ಸಾಹದಲ್ಲಿ, ದೇವಕಿ ಕೈಯೊಳಗಿನ ಮಂತ್ರದಂಡ ಉಜ್ಜಿದಳು. ವಿಶ್ವವನ್ನೇ ಅಂಗೈಗೆ ಆವಾಹಿಸುವ ಗೂಗಲಪ್ಪನಲ್ಲಿ ಸಣ್ಣದಾಗಿ ‘ತುಮರಿ’ ಕೇಳಿದಳು. ಅಂವಾ ಗೋಲವನ್ನೇ ಗುಂಡಾಡಿಸಿ, ಮೊದಲಿಗೆ ‘ನಗರ’ದ ದಾರಿ ತೋರಿದ. ಹುಸಿ ಮೋಡ ತೇಲಿದ್ದಂತೆ ಸಿಗುತ್ತಿದ್ದ ಅಚ್ಚ ನೀಲಿಮೆಯ ಇಣುಕು ನೋಟಗಳು, ಹಳ್ಳಿ ಹಸಿರನ್ನು ಅಡ್ಡಾತಿಡ್ಡಾ ಕಟ್ಟುವಂತೆ ಹರಿದೋಡಿದ್ದ ಕಪ್ಪು ದಾರಿಯಲ್ಲಿ, ಲಹರಿ ಉಕ್ಕಿದಂತೆ ಗಾನಸಿಳ್ಳೆ ಬಾರಿಸುತ್ತಾ ಕಾರೋಡಿಸಿದೆ. ಆರಗ, ಕಡೆಗದ್ದೆ, ಮಂದಣಿ, ಬೆಳೂರು ಎಂದೇನೇನೋ ಹತ್ತೆಂಟು ಹಳ್ಳಿ ಹೆಸರುಗಳನ್ನು ಹಿಂದಿಕ್ಕುತ್ತಾ ಹಿಲ್ಕುಂಜಿಯಲ್ಲಿ ಮತ್ತೆ ಮುಖ್ಯ ದಾರಿ ಸೇರಿದೆವು. ಆದರೆ ಮುಂದುವರಿದಂತೆ, ನಮ್ಮರಿವಿಗೆ ಬಾರದಂತೆ, ನಗರಕ್ಕೆ ಪೂರ್ವಪದ ‘ಹೊಸ’ ಸೇರಿಕೊಂಡು ನಮ್ಮ ದಿಕ್ಕೆಡಿಸಿತು. ನಿಷ್ಪಾಪಿ ಕೈಕಂಬವೇನೋ ಎಡಕ್ಕೆ ನಗರ, ಬಲಕ್ಕೆ ಹೊಸನಗರ ಎಂದೇ ಸಾರಿತು. ಆದರೆ ಇಳಿಯೆಣಿಕೆ ಕೊಡುತ್ತಾ ಬಂದ ಕರಸ್ಥಳ ಮಾಯಾವಿ ಕೋಕಿಲವಾಣಿ “Turn right” ಎಂದಾಗ, ವಿಧೇಯವಾಗಿ ಬಲ ಹೊರಳಿ ಹೊಸನಗರ ಸೇರಿಕೊಂಡೆವು.
(ಪಟಗುಪ್ಪ ಸೇತುವೆ: ‘ಉಡುಪಿ ಉತ್ಸವ’ದಲ್ಲಿ ಹೊಟ್ಟೆಪಾಡು ಮುಗಿಸಿಕೊಂಡೆವು. ತಿಳಿಯಾದ ಮನಸ್ಸಿನಲ್ಲಿ ಇನ್ನೊಮ್ಮೆ ಗೂಗಲಪ್ಪನಲ್ಲಿ ‘ತುಮರಿ’ ಬಯಕೆ ಮಂಡಿಸಿದಾಗ, ನಾವು ಹಿಲ್ಕುಂಜಿಯಲ್ಲಿ ಬೇಸ್ತು ಬಿದ್ದದ್ದು ತಿಳಿಯಿತು. ನಾವು ಸಿಗಂದೂರು ಸೇತುವೆಯನ್ನು ತುಮರಿ ದಿಕ್ಕಿನ ಕಳಸವಳ್ಳಿಯಿಂದ ಸಾಗರದ ದಿಕ್ಕಿನ ಹೊಳೆಬಾಗಿಲಿಗೆ ಬಳಸಬೇಕೆಂದಿದ್ದ ಅಂದಾಜನ್ನು ಪರಿಷ್ಕರಿಸಿಕೊಂಡೆವು. ಮಾಯಾರಕ್ಕಸ ಹೊಸದಾಗಿ ನಿರ್ದೇಶಿಸಿದ ಎದುರು ದಿಕ್ಕನ್ನೇ ಬಳಸುವಂತೆ ಕಾರೋಡಿಸಿದೆವು. ಅದು ಸಾರಿಗೆ ಬಸ್ಸುಗಳೋಡುವ ದಾರಿಯಲ್ಲ. ಆದರೆ ನುಣ್ಣನೆ ಡಾಮರ್ ಹೊದ್ದು, ದಟ್ಟ ಕಾಡಿನ ನಡುವೆ ನುಸುಳಿದ್ದ ಬಳಸಂಬಟ್ಟೆಯ ನಿರಾಯಾಸ ಓಟ ಕುಶಿಕೊಟ್ಟಿತು. ಸುಮಾರು ಹದಿಮೂರು ಕಿಮೀ ಓಡೋಡಿ, ಕಾರಿಳಿದು ನಿಂತ ಸ್ಥಳ ಪಟಗುಪ್ಪ ಸೇತುವೆ!
(ಪಟಗುಪ್ಪ ಹಳೆಯ ಸೇತುವೆಯ ಚಿತ್ರ ಕೃಪೆ: ಜಿ ಆರ್ ಪಂಡಿತ್, ಅಂತರ್ಜಾಲ)
ಶರಾವತಿ ಸಾಗರದ ಒಂದು ಮೂಲೆಯ ಸೆರಗನ್ನು ಹಾಯುವ ಈ ಸೇತನ್ನು ಹಿಂದೊಮ್ಮೆಯೂ ನಾವು ಅನುಭವಿಸಿದ್ದೆವು. ಮಳೆ ತೊಳೆದ ಬಾನಿನಲ್ಲಿ ಸೂರ್ಯ ಕೆಂಡ ಸುರಿದರೂ ನೀರಬಯಲು ಹಾದು ಬರುತ್ತಿದ್ದ ಭೋರ್ಗಾಳಿ ತಣ್ಪು ಸಾರಿ ಕರೆದಿತ್ತು. ಕಾರನ್ನು ಅಲ್ಲೇ ಬಿಟ್ಟು ಸೇತುವೆಯ ಉದ್ದಕ್ಕೆ ನಡೆದೆವು. ತೀರಾ ವಿರಳವಾಗಿ, ಅದರಲ್ಲೂ ಸಾರ್ವಜನಿಕ ಸಾರಿಗೆಗಳೇನೂ ಇಲ್ಲದ ವಾಹನ ಸಂಚಾರ ನೋಡಿದಾಗ ಆಶ್ಚರ್ಯವಾಯ್ತು – ಈ ಸೇತುವೆ ಯಾರಿಗಾಗಿ? ಸಿಗಂದೂರಿನ ನವರಾತ್ರಿ ಪ್ರಸಾದ ಸ್ವೀಕರಿಸಿ, ಬೈಕೇರಿ ಬಂದ ಯುವ ಜೋಡಿ, ವಿರಾಮದಲ್ಲಿ ಸೇತುವೆ ನಡುವೇ ನಿಂತು, ಪಟಯಜ್ಞ ನಡೆಸಿ ಹೋಯ್ತು. ಎದುರು ದಂಡೆಯ ಮರಗಳ ನೆರಳಿನಲ್ಲಿ ಕಾರು ನಿಲ್ಲಿಸಿ, ಮಿತ್ರರಿಬ್ಬರು ತಾಜಾ ಬೀಸುಗಾಳಿಯ ಸಂತೋಷ ಅನುಭವಿಸುತ್ತ ನಿದ್ರಿಸಿದ್ದರು. ತಿರುಗಿ ಬರುತ್ತ ಇನ್ನಿಬ್ಬರು ಮಿತ್ರರು ಸೇತುವೆಯ ನಡುವೆ ಬೈಕ್ ನಿಲ್ಲಿಸಿ, ಒಂದೆರಡು ಭಾವಭಂಗಿಯ ಪಟಗಿರಿ ನಡೆಸಿದರು. ಮತ್ತೆ ಸೇತುವೆಯಲ್ಲಿ ಧಾರಾಳವೇ ಬಿದ್ದಿದ್ದ ಖಾಲೀ ನೀರ ಬಾಟಲುಗಳನ್ನು ಸ್ವಚ್ಛಗೊಳಿಸುವವರಂತೆ ಹೆಕ್ಕಿ ನೀರಿಗೆಸೆಯ ತೊಡಗಿದರು. ಅವರನ್ನು ಸಮೀಪಿಸಿದಾಗ, ದೇವಕಿ ತಡೆಯಲಾಗದೇ ಉದ್ಗರಿಸಿದಳು “ಹೆಕ್ಕುವುದು ಸರಿ, ನೀರಿಗೆಸೆಯುವುದು ಇನ್ನಷ್ಟು ಪರಿಸರ ಹಾನಿಕರವಲ್ಲವೇ…” ಇಬ್ಬರೂ ಮುಜುಗರದಲ್ಲೇ ಬೈಕೇರಿ ಮಾಯವಾದರು!
೧೯೮೩ರ ಸುಮಾರಿಗೆ ಬಿಸಿಲೆಘಾಟಿ ಪೂರ್ಣ ಮುಚ್ಚಿ ಬಹುಕಾಲವಾಗಿತ್ತು. ಸುಮಾರು ಇಪ್ಪತ್ಮೂರು ಕಿಮೀ ಉದ್ದದ ಈ ಪಕ್ಕಾ ವನ್ಯ ರಸ್ತೆಗೆ ಯಾರು ರೋದಿಸದಿದ್ದರೂ ‘ಅನ್ಯ ಲಾಭ’ಗಳ ಕಣ್ಣಿಟ್ಟ ಪುಡಾರಿಗಿರಿ ಇದಕ್ಕೆ ಜನ್ಮ ಕೊಟ್ಟಿತು. ಸಲ್ಲದ ಅಲಂಕಾರಗಳನ್ನು ಹೇರಿ, ಸಾರ್ವಜನಿಕ ಸಾರಿಗೆಯನ್ನೂ ಇಟ್ಟ ಮೇಲೆ ಈಗ, ಬಿಸಿಲೆಘಾಟಿಯಲ್ಲಿ ವಾರ ಒಂದರಲ್ಲೇ ಕ್ವಿಂಟಾಲ್ ಗಟ್ಟಳೆ ಪ್ಲ್ಯಾಸ್ಟಿಕ್ ಕಸ ಹೆಕ್ಕುವ ಸ್ಥಿತಿ ಬಂದಿದೆ. ಪಟಗುಪ್ಪ ಸೇತುವಾದರೂ ಅಭಿವೃದ್ಧಿಯ ಅಂಧಯುಗದೊಡನೆ ಅಂಥಾ ದುಃಸ್ಥಿತಿ ಕಾಣುವ ದಿನಗಳು ದೂರವಿಲ್ಲ.
ಸಿಗಂದೂರು ಸೇತುವೆ: ಪಟಗುಪ್ಪ ಸೇತುವೆ ಬಿಟ್ಟವರು ‘ಹುಲಿದೇವರ ಬನ’ ಎಂಬ ಕೈಕಂಬ ಕಳೆದು, ಒಟ್ಟಾರೆ ಹದಿನೆಂಟು ಕಿಮೀ ಓಟದಲ್ಲಿ ಸಿಗಂದೂರು ಸೇತುವೆಯ (ಅಂಬಾರಗೊಡ್ಲು) ‘ಹೊಳೆಬಾಗಿಲು’ ಕೊನೆ ಸಮೀಪಿಸುತ್ತಿದ್ದಂತೆ, ಅಂದರೆ ಸುಮಾರು ಐನೂರು ಮೀಟರ್ ಮೊದಲೇ ಮಾರ್ಗ ಹೆಚ್ಚೇ ವಿಸ್ತರಿಸಿ, ದೃಢಗೊಳಿಸಿದ್ದು ಕಾಣಿಸಿತು. ಅಲ್ಲಿ ಹೊಳೆ ಮಗ್ಗುಲಿನಲ್ಲಿ ಸೇತುವೆ ನಿರ್ಮಾಣ ಕಾಲದಲ್ಲಿ ಕಾಂಕ್ರೀಟ್ ತೊಲೆಗಳ ಅಚ್ಚು ತೆಗೆಯುವ ಅಂಗಳವಿತ್ತು. ಮತ್ತೆ ಹಿನ್ನೀರು ಋತುಮಾನಕ್ಕನುಗುಣವಾಗಿ ಏರಿಳಿಯುವುದನ್ನು ಹೊಂದಿಸಿಕೊಂಡು, ಬಾರ್ಜ್ (ದೋಣಿ) ಹತ್ತಿಳಿಯಲು ಅನುಕೂಲವಾಗುವಂತೆ ರೂಪಿಸಿದ್ದ ಇಳಿ ದಾರಿಯೂ ಇತ್ತು. ಸೇತುವೆಯ ಈ ಕೊನೆಯಲ್ಲೇ ನಾವು ಕಾರಿಳಿದು ನಡೆದೆವು.
ಸೇತುವೆ ಅಂಚಿನಿಂದ ಕೆಳದಂಡೆಗೆ ಇಣುಕಿದರೆ ಮುಚ್ಚಿಬರುತ್ತಿರುವ ಪೊದರು, ಮರಗಳ ಮರೆಯಲ್ಲಿ ಹಿಂದೆ ಈ ದಂಡೆ ಆ ದಂಡೆ ಮಾಡುತ್ತಿದ್ದ ಮೂರು ನಾಲ್ಕು ಬಾರ್ಜ್, ಗೊಸರು ಭೂಮಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಗುಜರಿ ಕಬ್ಬಿಣಗಳೆಲ್ಲಾ ನ್ಯಾಯಯುತವಾದ ಮೋಕ್ಷದ ದಾರಿ ಕಾದಿದ್ದವು. ಸೇತುವೆಯ ಎತ್ತರಕ್ಕೆ ಬಂದ ಮಣ್ಣ ದಿಬ್ಬದ ಮಳೆನೀರ ಚರಂಡಿ ಕೆಲಸ ಇನ್ನೂ ನಡೆದೇ ಇತ್ತು.
ಸುಮಾರು ಎರಡೂಕಾಲು ಕಿಮೀ ಉದ್ದದ ಸೇತುವೆಯ ನಡುವಿನ ಭಾರೀ ಆಳದಿಂದ ನಿಯತಾಂತರದಲ್ಲಿ ನಾಲ್ಕು ಜೋಡಿ ಭಾರೀ ಕಾಂಕ್ರೀಟ್ ಸ್ತಂಭಗಳು ಎದ್ದಿದ್ದವು. ಅವುಗಳ ನೆತ್ತಿಯಿಂದ ಎರಡೂ ಮಗ್ಗುಲುಗಳಿಗೆ ವಿಸ್ತರಿಸುವ ಸೂರ್ಯ ಕಿರಣದಂತೆ ಭಾರೀ ಆಚ್ಛಾದಿತ ಮಿಣಿಗಳು ಚಾಚಿ ಸೇತುವನ್ನು ಎತ್ತಿ ಹಿಡಿದಿದ್ದವು. ಸೇತುವಿನ ಉಳಿದ ಅಂಶಕ್ಕೆ ತಳದಲ್ಲಿದ್ದ ನೂರಕ್ಕೂ ಮಿಕ್ಕು ಸ್ತಂಭಗಳು ಬಲಗೊಟ್ಟಿದ್ದವು. ಮಿಣಿ ಹೊತ್ತ ಸ್ತಂಭಗಳ ಎತ್ತರಕ್ಕೆ ಕತ್ತು ಚಾಚಿದ ಎತ್ತುಗವೊಂದು, ಕೆಲವು ಕುಶಲಕರ್ಮಿಗಳ ಜತೆ ಇನ್ನೂ ಬಿಡಿ ಕೆಲಸ ನಿರತವಾಗಿಯೇ ಇತ್ತು. ವಾಹನಗಳಿಗೆ ವಿಸ್ತಾರದ ದ್ವಿಪಥದೊಡನೆ ಎರಡೂ ಮಗ್ಗುಲುಗಳಲ್ಲಿ ಸುರಕ್ಷಿತ ಪಾದಚಾರಿ ಪಥ, ಬೀದಿ ದೀಪಗಳನ್ನೂ ಕೊಟ್ಟಿದ್ದಾರೆ. ಆದರೆ ನಮ್ಜನಾ….
ಬಹುತೇಕ ಯಾತ್ರಿಗಳು ಸೇತುವೆಯಲ್ಲೇ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ, ಪಟಗ್ರಹಣದ ಸರ್ಕಸ್ಸು, ವಿಹಾರದ ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು. ಇಂದು ಭಗವಂತನಿಗಿಂತಲೂ ಭೀಕರವಾಗಿ ಸರ್ವಂತರ್ಯಾಮಿಗಳೇ ಆದ ನೀರು ಬೀರುಗಳ ಬಾಟಲಿ, ಕಸಗಳ ಕುರಿತು ನಾನು ಪ್ರತ್ಯೇಕ ಹೇಳಬೇಕೇ? ಮುಂದಿನಗಳಲ್ಲಿ ಹೀಗೆ ಕಾಣುವುದಕ್ಕೂ ನೂರ್ಮಡಿ ಕಚಡಾವನ್ನು ಸಾರ್ವಜನಿಕರು ಉಡಾಫೆಯಲ್ಲಿ ನೀರಿಗೆಸೆಯುತ್ತಾರೆ. ಅದಕ್ಕೂ ಮಿಕ್ಕು ಪುಡಾರಿಗಳು, ಪುರೋಹಿತರು ವಿವಿಧ ಋತುಮಾನಗಳ ಔಪಚಾರಿಕತೆಗಳಲ್ಲಿ (ಬಾಗಿನ, ಗಂಗಾಪೂಜೆ, ಜಾತ್ರೆ, ವಾರ್ಷಿಕೋತ್ಸವ…), ಆದರೆ ಪೂರ್ಣ ಸಾರ್ವಜನಿಕ ವೆಚ್ಚದಲ್ಲಿ ತಂದು ಹೇರುವ ಕ್ಷಣಿಕ ಅಲಂಕಾರಗಳೂ ಅನಂತರ ಸೇರುವುದೂ ಶರಾವತಿ ಒಡಲನ್ನೇ!
ನಮ್ಮ ವಿಷಾದಕ್ಕೆ ಜತೆಗೊಡುವಂತೆ ಗಗನವೂ ಹನಿ ಮಿಡುಕಿದಾಗ, ನಾವು ಅರ್ಧ ಸೇತುವಿನಿಂದಲೇ ವಾಪಾಸಾದೆವು. ಮತ್ತೆ ಕಾರೇರಿ, ಬಂದ ದಾರಿಯಲ್ಲೇ ಮರಳಿ, ಹುಲಿದೇವರಬನದಲ್ಲಿ ಕವಲಿ, ಸಂಜೆ ಐದು ಗಂಟೆಯ ಸುಮಾರಿಗೆ ಹೆಗ್ಗೋಡಿನ ನೀನಾಸಂ ವಠಾರ ಮುಟ್ಟಿದೆವು.
ಹಿಂದಿರುಗುವ ದಾರಿಯಲ್ಲಿ…
ಜತೆಗೊಟ್ಟವರು: ಯೋಚನೆಗಳು ಅದೆಷ್ಟು ಸಣ್ಣವಾದರೂ ಯೋಜನೆಗಳಾಗುತ್ತಿದ್ದಂತೆ, ಪರಿಣಾಮದ ಕುರಿತು ಮನಸ್ಸು ತಲ್ಲಣಿಸುತ್ತದೆ. ಹೆಗ್ಗೋಡಿಗೆ ಹೋಗಿ ಬರುವ ದಾರಿ ಮತ್ತು ವಾಹನದ ಕುರಿತೂ ನಮಗೆ ಹೀಗೇ ಆಗಿತ್ತು. ಸಾರಿಗೆ ಬಸ್ಸುಗಳು ಸ್ವೇಚ್ಛಾಗಮನಕ್ಕೆ ಹೇಳಿದ್ದಲ್ಲ. ಇಬ್ಬರಿಗೆ ಮೋಟಾರ್ ಬೈಕ್ ಸಾಕಿತ್ತಾದರೂ ಅಕಾಲಿಕ ಮಳೆಗೇನು ದಾರಿ? ಕರಾವಳಿ ವಲಯದ ನೀನಾಸಂ ಶಿಬಿರಕ್ಕೆ ಹೋಗುವವರ ಅಂದಾಜಿಲ್ಲದೇ ಮೂರು ಸೀಟು ಖಾಲಿ ಇಟ್ಟೇ ಕಾರೋಡಿಸಿದ್ದೆ. ಈ ‘ದುಂದು ವೆಚ್ಚ’ವನ್ನು ಹಿಂಬರುವ ದಾರಿಯಲ್ಲಾದರೂ ಸಮರ್ಥಿಸಿಕೊಳ್ಳಲು ಹಲವು ಶಿಬಿರಾರ್ಥಿಗಳನ್ನು ನುಡಿಸಿ ನೋಡಿದೆವು. ಆಗ ಸಿಕ್ಕವರು…..
ನರೇಂದ್ರನಾಥ್, ಕಾಸರಗೋಡಿನ ಸರ್ಕಾರೀ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಮತ್ತವರ ಭಾವ ಸುಧಾಕರ ಭಟ್ಯ. ನರೇಂದ್ರರು ನನ್ನ ಪುಸ್ತಕ ಮಳಿಗೆಯ ಕಾಲದಲ್ಲೇ ಒಳ್ಳೆಯ ಗಿರಾಕಿಯಾಗಿ ನನಗೆ ಪರಿಚಿತರು. ನಾನು ಹಿಂದಿನ ಒಂದೆರಡು ನೀನಾಸಂ ಶಿಬಿರಗಳಲ್ಲಿ ಇವರನ್ನು ಕಂಡಾಗ, (ಅಪ್ಪಟ ಮಲಯಾಳಿಯಾದ್ದಕ್ಕೆ) ಬೆರಗಿನಲ್ಲೇ ಪ್ರಶ್ನಿಸಿದ್ದಿತ್ತು. ಅವರು ನಮ್ರವಾಗಿಯೇ “ಕನ್ನಡದ ಓದು ತಿಳಿದಿಲ್ಲ, ಮಾತು ಕಷ್ಟ, ಆದರೆ ಧಾರಾಳ ಅರ್ಥೈಸಿಕೊಳ್ಳಬಲ್ಲೆ. ನೀನಾಸಂ ಶಿಬಿರ ನನಗಿಷ್ಟದ ನೆಲೆ” ಎಂದಿದ್ದರು. ಕಳೆದ ವರ್ಷ ಅವರು ಕಾಸರಗೋಡಿನಿಂದ ಸ್ವಂತ ಕಾರಿನಲ್ಲೇ ಹೊರಟಾಗ, ಸಮಾನಾಸಕ್ತಿಯ ಭಾವ – ಸುಧಾಕರರೇ ಚಾಲಕರಾಗಿಯೂ ಜತೆಗೊಟ್ಟಿದ್ದರು. ಈ ಬಾರಿ ಇಬ್ಬರೂ ಬಸ್ಸಿನಲ್ಲಿ ಬಂದವರು, ಮರುಯಾನಕ್ಕೆ ನಮಗೆ ಜತೆಗೊಟ್ಟು, ನನ್ನ ಅಪರಾಧಿ ಭಾವವನ್ನು ಹಗುರಮಾಡಿದರು. ಸುಧಾಕರ್ ಸ್ಟೇಟ್ ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದ್ದರಿಂದ ಮತ್ತು ಕಾಸರಗೋಡಿನ ಸತ್ಯದಲ್ಲಿ ಒಳ್ಳೆಯ ಕನ್ನಡಿಗರೂ ಆಗಿರುವುದರಿಂದ ನಮ್ಮ ಮಾತುಗಳಿಗೆ ಸುಲಭರಾದರು.
ನೀನಾಸಂನ ಆಹಾರ್ಯದಲ್ಲಿ (ಕ್ಯಾಂಟೀನ್) ನಾವು ಖಾಲಿ ಕಾಫಿಯಷ್ಟೇ ಏರಿಸಿ ಹೊರಟೆವು. ನಾನು ಸಹ-ಚಾಲಕಿ ದೇವಕಿಗೆ ಕಿವಿಡುಗಿವಿ ಕೊಟ್ಟು, ನರೇಂದ್ರ, ಸುಧಾಕರರೊಡನೆ ದಾರಿ ಕತೆಗಳನ್ನು ಬೆಳೆಸಿದೆ. ನಾವು ಹೆಗ್ಗೋಡಿಗೆ ಬರುವಾಗ ಕಂಡ ಪಟಗುಪ್ಪ ಮತ್ತು ಸಿಗಂದೂರು ಸೇತುವೆಗಳು, ಶರಾವತಿ ಸಾಗರದ ರೋಚಕ ಅನುಭವ ಕಥನವಷ್ಟೇ ಮಾಡಿದೆ. ಹೊಸ ನಗರದ ಹೋಟೆಲಿನಲ್ಲಿ ತಿಂಡಿ ಮುಗಿಸಿಕೊಂಡೆವು. ಹುಲಿಕಲ್ ಘಾಟಿ ಇಳಿದು, ಕೋಟೇಶ್ವರದಲ್ಲಿ ಹೆದ್ದಾರಿ ಸೇರುವುದು ಸುಖಪುರುಷರ ದಾರಿ. ಅಲ್ಲಿ ನಿತಿನ್ ಗಡ್ಕರಿಗೆ ಹಣ ಕೊಡುವುದನ್ನು (ಟೋಲ್ = ಸರಕಾರೀ ದರೋಡೆ) ನಾನು ಒಪ್ಪದಿರುವುದನ್ನು ಮಿತ್ರರಿಗೆ ವಿವರಿಸಿ, ಹೆಚ್ಚು ಅಂಕಾಡೊಂಕಿನ ತೀರ್ಥಳ್ಳಿ ದಾರಿ ಹಿಡಿದೆ. ಅಲ್ಲಿ ನಮ್ಮ ಬಲಕ್ಕೆ ಹಿಂದೋಡುತ್ತಿದ್ದ ಕಾಡು, ಬೆಟ್ಟ ಸಾಲುಗಳ ಗರ್ಭದ ಕೌಲೇದುರ್ಗದ ಕತೆ ಕೇಳಿದಾಗಂತೂ ಕಾಸರಗೋಡು ಮಿತ್ರರ ಆಶ್ಚರ್ಯಕ್ಕೆ ಪಾರವೇ ಇಲ್ಲ. ಅವರು ಹಿಂದೊಮ್ಮೆ ಸ್ವಂತ ಕಾರಿನಲ್ಲಿ ಬಂದಾಗಲೂ ಹೀಗೆ ಮಾರ್ಗಕ್ರಮಣದ ಉಪ-ಲಾಭಗಳನ್ನು ಯೋಚಿಸಿರಲೇ ಇಲ್ಲವಂತೆ! “ಹಾಗಾದರೆ….”
ಕುಂದಾದ್ರಿ: ನನ್ನಲ್ಲಿ ಮನಮಥನ ನಡೆದಿತ್ತು. ಆರೆಂಟು ಕಿಮೀ ಅಂತರದ ಕೌಲೇದುರ್ಗಕ್ಕೆ ಒಯ್ಯಲೇ? ಬೇಡ, ಅವೇಳೆ ಅನಿಸಿತು. ಅವರ ದೈಹಿಕ ಸಾಮರ್ಥ್ಯ ತಿಳಿಯದೇ ಕಾರಿಳಿಸಿ, ಕನಿಷ್ಠ ಮೂರು ಗಂಟೆ ಏರು ಬಿಸಿಲಿನಲ್ಲಿ ನಡಿಗೆ ಕೊಡಲು ಧೈರ್ಯ ಬರಲಿಲ್ಲ. ತೀರ್ಥಹಳ್ಳಿ ಕಳೆದು ಆಗುಂಬೆಯ ದಾರಿ ಹಿಡಿದಾಗ, ನರೇಂದ್ರ ಅಸ್ಪಷ್ಟವಾಗಿ ಈ ವಲಯದ ಜಲಪಾತಗಳ ಮಾತಾಡಿದರು. ಆಗ ಭಾರೀ ದೂರದಿಂದ ಮತ್ತು ಮೋಡ ಮಂಜು ಹರಿದರಷ್ಟೇ ಕಾಣುವ ಬರ್ಕಣ, ರಗಳೆಯ ಜೋಗಿಗುಂಡಿ, ಅರಣ್ಯ ಇಲಾಖೆ ಗೇಟಿನ ನಿರ್ಬಂಧ ಹೇರಿದ ಒನಕೆ ಅಬ್ಬಿಗಳನ್ನು ಅವರಿಗೆ ಮಾತಿನಲ್ಲೇ ಪರಿಚಯಿಸಿ, ಅಡಿಗೆ ಹಾಕಿದೆ. ಬದಲಿಗೆ ಎಂಬಂತೆ, ಅವರಿಗೆ ತಿಳಿಸದೇ ಗುಡ್ಡೆಕೇರಿಯಲ್ಲಿ ಎಡ ಹೊರಳಿ, ಕುಂದಾದ್ರಿ ಶಿಖರಕ್ಕೇ ಕಾರೋಡಿಸಿದೆ.
ನಿಜ ಬೆಟ್ಟ ಹತ್ತುವಲ್ಲಿ ಮಾರ್ಗ ಅಗಲ ಕಿರಿದಾಗಿ, ಎದುರು ಬೈಕ್ ಬಂದರೂ ತಿಣುಕುವ ಸ್ಥಿತಿ, ಸೂಪರ್ ಫಸ್ಟ್ ಗೇರ್ ಬೇಕೋ ಎನ್ನುವಂಥ ಕಟ್ಟೇರು, ಸಾಲದ್ದಕ್ಕೆ ಒಂದೆರಡು ಕಡೆ ಮಳೆನೀರ ಹರಿವಿಗೆ ಡಾಮರ್ ತೊಳೆದು ಉಂಟಾದ ಕೊರಕಲು ನೋಡಿ ಗೆಳೆಯರು, ಬಹುಶಃ ಹೆದರಿಕೆಯಲ್ಲಿ “ನಾವೆಲ್ಲಿಗೆ ಹೋಗುತ್ತಿದ್ದೇವೆ…” ಎಂದು ಕೇಳಲೂ ಮರೆತಂತಿದ್ದರು. ಆದರೆ ಶಿಖರದಲ್ಲಿ ಕಾರಿಳಿದಾಗ, ಹಾಳು ಬಿದ್ದ ಬಂಗ್ಲೆ ಸುತ್ತಿ, ನಾಕೆಂಟು ಮೆಟ್ಟಿಲೇರಿ ದೇವಳದ ಬಳಿ ಬಂದಾಗ ಸಿಕ್ಕಿದ್ದ ಮಾತು, ಮೂಕವಾಯ್ತು. ಕುಂದಾದ್ರಿಯ ದೃಶ್ಯಕ್ಕೆ ಪೂರ್ಣ ಮನಸೋತ ನರೇಂದ್ರ, ಸುಧಾಕರರು, ಮುಂದೆ ಮಂಗಳೂರು ಮುಟ್ಟುವವರೆಗೂ ಹೇಳಿದ್ದೇ ಹೇಳಿದ್ದು “ಕುಂದಾದ್ರಿ ಎಷ್ಟು ಚಂದ, ಎಷ್ಟು ಚಂದಾ…”
ಆಗುಂಬೆ, ವರಂಗ: ಬೆಟ್ಟದ ಸ್ವಾಗತ ಕಮಾನಿನ ಬುಡದಲ್ಲಿ ಹತ್ತು ಮಿನಿಟಿನ ಚಾ ವಿರಾಮ. ಆ ನೆಪದಲ್ಲಿ ಸಿಕ್ಕ ಕುಂದಾದ್ರಿಯ ಸಮಗ್ರ ನೋಟವನ್ನು ಕ್ಯಾಮರಕ್ಕಿಂತಲೂ ಗಾಢವಾಗಿ ಮನದಲ್ಲಚ್ಚೊತ್ತಿಕೊಂಡು ಮುಂದುವರಿದೆವು. ಮಿತ್ರರು ಬಯಸಿದ್ದಕ್ಕೆ, ಆಗುಂಬೆ ಘಾಟಿಯ ವೀಕ್ಷಣ ಕಟ್ಟೆಯ ಬಳಿ ಅವರನ್ನಷ್ಟೇ ಇಳಿಸಿ, “ನಿಮ್ಮದೇ ಸಮಯದಲ್ಲಿ ಬನ್ನಿ” ಎಂದು ಬಿಟ್ಟೆ. ತುಸು ಮುಂದಿನ ನೆರಳಿನಲ್ಲಿ ನಾವು ಕಾರು ನಿಲ್ಲಿಸಿ ಮಿನಿಟು ಕಳೆಯುವುದರೊಳಗೆ ಅವರು ಬಂದು ಸೇರಿಕೊಳ್ಳುತ್ತ ನುಡಿದರು “ಕುಂದಾದ್ರಿ ಚಂದದಲ್ಲಿ ಇದು ಏನೂ ಅಲ್ಲ”.
ಸೋಮೇಶ್ವರ, ಮುದ್ರಾಡಿ ಕಳೆದ ಮೇಲೆ ವರಂಗದಲ್ಲಿ ನಿಲ್ಲಿಸಿದೆ. ಇದುವರೆಗೆ ಕುಂಬಳೆ ಬಳಿಯ ಅನಂತಪುರದ ದೇವಳವೇ “ಗ್ರೇಟ್” ಎಂದು ತಿಳಿದಿದ್ದ ಮಿತ್ರರಿಗೆ, ವರಂಗದ ಕೆರೆ ಬಸದಿ ಇನ್ನೊಂದೇ ಅದ್ಭುತ ಅನ್ನಿಸಿರಬೇಕು. ನೀರು ಹಸಿರಿನ ಸಮೃದ್ಧಿಯ ನಡುವೆ ಮೆರೆವ ಪದ್ಮಾವತೀ ಮಂದಿರ, ಹತ್ತಿಪ್ಪತ್ತು ಬಾರಿ ನೋಡಿದ ನಮಗಾದರೂ ನೋಡಿದ್ದು ಸಾಕು ಎಂದನ್ನಿಸಿದ್ದೇ ಇಲ್ಲ. ಜೈನಮಠದ ಆಡಳಿತ ವ್ಯವಸ್ಥೆಯಲ್ಲಿ ಭಕ್ತ-ಕುತೂಹಲಿಗಳನ್ನು ಓಡಾಡಿಸಲು ಅಂದು ಚಾಲನೆಯಲ್ಲಿದ್ದ ಒಂದೇ ದೋಣಿ (ಹುಟ್ಟು ಹಾಕುವಂತದ್ದು) ಕೆರೆ ನಡುವಿನ ದೇವಳದ ದಂಡೆಯಲ್ಲಿತ್ತು. ಮತ್ತೆ ಅಲ್ಲೂ ಇಲ್ಲೂ ಸಾಕಷ್ಟು ಅನ್ಯ ಪ್ರವಾಸಿಗಳು ಕಾದಿದ್ದರು. ಕರಾವಳಿಯವರೇ ಆದ ನಮಗೆ ದೋಣಿ ಸವಾರಿಯ ಬಯಕೆಯಾಗಲೀ ದೇವಬಿಂಬದ ದರ್ಶನ ಮೋಹವಾಗಲೀ ಇರಲಿಲ್ಲ. ದೂರದರ್ಶನಕ್ಕೇ ತೃಪ್ತರಾಗಿ ಕಾರೇರಿದೆವು.
ಮೂಡಬಿದ್ರೆಯಲ್ಲಿ ಉಂಡು, ಮಂಗಳೂರು ಮುಟ್ಟಿದೆವು. ಮಿತ್ರರಿಬ್ಬರನ್ನು ಕಾಸರಗೋಡು ಬಸ್ಸಿಗೆ ಬಿಟ್ಟು ಮನೆ ಸೇರುವಾಗ ಗಂಟೆ ಎರಡು. “ಹೆಗ್ಗೋಡಿನಿಂದ ಮಂಗಳೂರು” ಎಂದಷ್ಟೇ ನಿಶ್ಚೈಸಿಕೊಳ್ಳುವುದಕ್ಕೆ ಭಿನ್ನವಾಗಿ ಯೋಚನೆ ಹರಿದದ್ದರಿಂದ, ಪ್ರಯಾಣದ ಉದ್ದ – ಗುದ್ದುಗಳು ಪ್ರಯಾಸವಾಗಲಿಲ್ಲ. ಐದು ದಿನಗಳ ಕಾಲ ಒಂದೇ ಆವರಣದೊಳಗೆ ಸುಖಾಸನಗಳಲ್ಲಿ ಜಡಗೊಂಡ ದೇಹಕ್ಕೆ ಸಣ್ಣ ಕಾಯಕಲ್ಪದ ಅನುಭವವೂ ದಕ್ಕಿತ್ತು.
(ಮುಂದುವರಿಯಲಿದೆ)





























0 Comments