ಆರ್ಥಿಕ ವರ್ಷದ ಕೊನೆಯ ತರಾತುರಿಯಲ್ಲಿ ೨೩-೩-೧೧ರಂದು ಮೂಲ್ಕಿ ಕಾಲೇಜಿನ ಅಧ್ಯಾಪಕ ವೃಂದ ಕೆಲವು ಪುಸ್ತಕಗಳನ್ನು ಆಯ್ದು, ಬಿಲ್ಲು ಮಾಡಿಸಿಕೊಂಡರು. ಪುಸ್ತಕಗಳ ಕಟ್ಟನ್ನು ಅವರ ಇಚ್ಛೆಯ ಮೇರೆಗೆ ಮಾರಣೇ ದಿನ ಲಾರಿ ಪಾರ್ಸೆಲ್ ಮಾಡಿ ನಾನೇ ಕಳಿಸಿಕೊಟ್ಟೆ. ಕಾಲೇಜಿನೊಡನೆ ನನ್ನ ಸಂಬಂಧ ಅಂಗಡಿಯ ಪ್ರಾಯದಷ್ಟೇ (ಮೂವತ್ತೈದು ವರ್ಷ) ಹಳತು ಮತ್ತು ಎಂದೂ ಹಳಸದ್ದೇ ಇದ್ದುದರಿಂದ ನಿಶ್ಚಿಂತೆಯಲ್ಲಿ ಪಾವತಿಗೆ ಕಾದು ಕುಳಿತೆ. ಮಾರ್ಚ್ ೨೫-೨೬ರಂದು ಪುಸ್ತಕದ ಕಟ್ಟು ಸಿಕ್ಕಿರುತ್ತದೆ. ನನ್ನ ಬಿಲ್ಲು (ಅಲ್ಲಿನ ಕ್ರಮದಂತೆ) ಕಾಲೇಜಿನ ಸಹಕಾರಿ ಸಂಘದ ಮೂಲಕ ಗ್ರಂಥಾಲಯಕ್ಕೆ ಹೋಗಿ, ಪುಸ್ತಕಗಳ ತನಿಖೆಯಾಗಿ, (ಮಾಮೂಲಿನಲ್ಲಿ ಗ್ರಂಥಾಲಯದ ದಫ್ತರದಲ್ಲಿ ನಮೂದು ಪಡೆದು, ಕ್ರಮಸಂಖ್ಯೆ ಹೊತ್ತು) ಪಾವತಿ ಅನುಮೋದನೆ ಪಡೆಯಲಿದೆ. ಅನಂತರ ಕಾಲೇಜು ಸಂಘಕ್ಕೂ ಸಂಘ ನನ್ನ ಹೆಸರಿಗೂ ಪಾವತಿ ರವಾನಿಸುವ ಕ್ರಮಕ್ಕೆ ವಾರವೆರಡಾದರೂ ಬೇಕಾದೀತು ಎಂದು ಸುಮ್ಮನಿದ್ದೆ. ಸುಮಾರು ಇಪ್ಪತ್ತು ದಿನ ಕಳೆದ ಮೇಲೂ ಪಾವತಿ ಬರದಿದ್ದಾಗ ಸಣ್ಣದಾಗಿ ನೆನಪಿಸುವ ಕ್ರಮವಾಗಿ ದೂರವಾಣಿಸಲು ನೋಡಿದರೆ ನನ್ನಲ್ಲಿದ್ದ ಅವರ ದೂರವಾಣಿ ಸಂಖ್ಯೆಗಳೆಲ್ಲಾ ಬದಲಿದ್ದವು. ಕಾಲೇಜಿನ ನಿವೃತ್ತ ಗ್ರಂಥಪಾಲರನ್ನು (ನನ್ನ ಗೆಳೆಯರು) ಹೊಸ ಸಂಖ್ಯೆಗಳಿಗಾಗಿ ಸಂಪರ್ಕಿಸಿದೆ. ಆಗ ವಿವರಗಳನ್ನು ಕೇಳಿಕೊಂಡ ಅವರು ಹೆಚ್ಚಿನ ಉತ್ಸಾಹದಲ್ಲಿ “ನಾನು ಕಾಲೇಜಿನವರಿಗೆ ಜ್ಞಾಪಿಸಬೇಕಾ” ಎಂದು ಕೇಳಿಕೊಂಡರೂ ನನಗೆ ಕಾಲೇಜಿನ ಬಗ್ಗೆ ಇದ್ದ ವಿಶ್ವಾಸದಲ್ಲಿ ನಿರಾಕರಿಸಿದೆ. ಇವೆಲ್ಲಾ ವಿರಾಮದಲ್ಲೇ ನಡೆದುದರಿಂದ ಏಪ್ರಿಲ್ ೨೮ರಂದು ನನಗೆ ಕಾಲೇಜು ಕಛೇರಿಯನ್ನು ಸಂಪರ್ಕಿಸಲು ‘ಮುಹೂರ್ತ’ ಕೂಡಿ ಬಂತು.

ನಾನು ಕ್ರಮದಂತೆ ನಮಸ್ಕಾರ ಕೊಟ್ಟು, ಪ್ರವರ ಹೇಳಿ “ಮಾರ್ಚ್ ಕೊನೆಯಲ್ಲಿ ನನ್ನಿಂದ ಕೊಂಡ ಪುಸ್ತಕಗಳ ಪಾವತಿ ಇನ್ನೂ ಬಂದಿಲ್ಲ, ಸ್ವಲ್ಪ ನೋಡ್ತೀರಾ?” ನನ್ನ ಮಾತು ಮುಗಿಯುವುದಕ್ಕಿಲ್ಲ, ಕಛೇರಿಯ ವಕ್ತಾರ ದುಡುಕಿದ “ಎಂಥ ಸ್ವಾಮಿ, ಪಾವತಿ ಕೊಟ್ಟಾಗಿದೆ. ಯಾವ ಬಾಕಿಯೂ ಇಲ್ಲ.” ಆತನ ಸ್ವರಭಾರ ಮತ್ತು ಅನಿರೀಕ್ಷಿತ ಉತ್ತರ ನನ್ನನ್ನು ಒಂದು ಗಳಿಗೆ ಯೋಚಿಸುವಂತೆ ಮಾಡಿತು. ನಿಧಾನಕ್ಕೆ ಮುಂದುವರಿಸಿದೆ “ನಾನು ಕಾಲೇಜಿನ ಹೆಸರಿಗೆ ಕ್ರೆಡಿಟ್ ಬಿಲ್ಲ್ ಕೊಟ್ಟಿದ್ದೆ. ನಿಮ್ಮ ಪಾವತಿ ಹೇಗೆ ಹೋಗಿದೆ? ಪ್ರತಿಯಾಗಿ ನನ್ನ ರಸೀದಿ ನಿಮ್ಮಲಿದೆಯೇ?” “ಅದೆಲ್ಲಾ ಆಗಿರ್ತದೆ, ನಮ್ಮಲ್ಲಿ ಯಾವ ಬಿಲ್ಲೂ ಪೆಂಡಿಂಗಿಲ್ಲ. ನಿಮ್ಮ ಕಡತ ಸರೀ ತನಿಖೆ ಮಾಡಿಕೊಳ್ಳಿ” ಎಂದು ಅಸಹನಾವಾಣಿ ಕುಟುಕಿತು. ಈಗ ನನಗೂ ಹಠ ಬಂತು “ಪಾವತಿ ಕೊಟ್ಟ ವಿವರ, ನನ್ನ ರಸೀದಿ ಸಂಖ್ಯೆ ಹೇಳಿ” ಎಂದು ಒತ್ತಾಯಿಸಿದೆ. ಅತ್ತಣ ಗಂಟುಮೋರೆ “ತಗೊಳಿ, ಗ್ರಂಥಪಾಲರಲ್ಲೆ ಮಾತಾಡಿಕೊಳ್ಳಿ” ಎಂದು ಕಾಲೇಜಿನ ಅಂತಃಸಂಪರ್ಕದಲ್ಲಿ ನನ್ನನ್ನು ತಳ್ಳಿದರು. ಗ್ರಂಥಪಾಲ ಅಸಹಾಯಕ – ಕಾಲೇಜು ಕಛೇರಿ ಮತ್ತು ಸಹಕಾರಿ ಸಂಘದ ನಡುವಣ ಕೇವಲ ರಬ್ಬರ್ ಮೊಹರು ಇರಬೇಕು. ಆತ ಸಹಜವಾಗಿ “ಸಂಘದ ಕಾರ್ಯದರ್ಶಿ (ಓರ್ವ ಹಿರಿಯ ಅಧ್ಯಾಪಿಕೆ, ನನಗೆ ಪರಿಚಿತರೇ) ಈಗ ಇಲ್ಲಿಲ್ಲ. ವಿವರಗಳು ಅವರಲ್ಲಿವೆ. ನಾನವರಿಗೆ ನಾಳೆ ಬಂದಾಗ ತಿಳಿಸುತ್ತೇನೆ. ಮತ್ತವರೇ ನಿಮ್ಮನ್ನು ಸಂಪರ್ಕಿಸುತ್ತಾರೆ.”

ದಿನ ಕಳೆಯಿತು. ಕಾರ್ಯದರ್ಶಿಯವರ ದೂರವಾಣಿ ಕರೆ ಬಂತು ಮತ್ತು ಸಮಾಧಾನದಲ್ಲೇ ಹೇಳಿದರು “ಅತ್ರಿ ಹೆಸರಿನ ಪಾವತಿ ಚೆಕ್‌ನ್ನು (ಮೂಲ್ಕಿ ಸಿಂಡಿಕೇಟ್ ಬ್ಯಾಂಕಿನದು) ನಾನೇ ಸಹೋದ್ಯೋಗಿ ಮಿತ್ರರ ಮೂಲಕ ಕಳಿಸಿಕೊಟ್ಟಿದ್ದೇನೆ ಸಾರ್. ಮತ್ತೆ ನಿಮ್ಮ ರುಜು ಸಹಿತ ವೋಚರ್ ಕೂಡಾ ಪಡೆದುಕೊಂಡಿದ್ದೇನೆ. ನಿಮ್ಮಲ್ಲೇ ಏನೋ…” ಈಗ ನನಗಿದ್ದ ಸಣ್ಣ ಅಧೈರ್ಯ ಕಳಚಿಕೊಂಡಿತು. ಪಾವತಿ ನಗದಿನ ರೂಪದಲ್ಲಿ ಬಂದದ್ದಾಗಿದ್ದರೆ, ನನ್ನನ್ನು ‘ಮುದಿಮರುಳು’ ಎಂದು ಝಾಡಿಸಿಬಿಟ್ಟಿದ್ದರೆ ಸುಧಾರಿಸುವುದು ಕಷ್ಟವಿತ್ತು. ಹಾಗಾಗಿ ಹೆಚ್ಚಿನ ಧೈರ್ಯದಲ್ಲಿ “ಹೋ ಚೆಕ್ಕೇ. ಅಂದರೆ ಅದರ ವಿವರಗಳನ್ನಾದರೂ ಕೊಡಿ. ಮತ್ತೆ ಕ್ರೆಡಿಟ್ ಬಿಲ್ಲಿಗೆ ಪಾವತಿ ಬಂದಾಗ ನಾನು ನನ್ನದೇ ರಸೀದಿ ಕೊಡುವ ಕ್ರಮ ಇಟ್ಟುಕೊಂಡಿದ್ದೇನೆ. ಆ ವಿವರಗಳನ್ನಾದರೂ ಕೊಡಿ” ಎಂದೆ. ಅವರು ಏಪ್ರಿಲ್ ಮೂರರ ಚೆಕ್ ನಂಬರ್ ಏನೋ ಕೊಟ್ಟರು. ನಾನು ರಸೀದಿ ಕೊಡಲಿಲ್ಲವೆಂದೂ ಕಾಲೇಜಿನ ಮುದ್ರಿತ ವೋಚರ್ ಮೇಲೇ ಸಹಿ ಹಾಕಿದ್ದಿದೆಯೆಂದೂ ಅದರ ಛಾಯಾ ನಕಲು ಕಳಿಸುವೆನೆಂದೂ ಹೇಳಿ ಒಮ್ಮೆಗೆ ಮುಗಿಸಿದರು. ಆದರೆ ಅವರು ನಿಜವಾಗಿ ವಿರಮಿಸಲಿಲ್ಲ. ಕೆಲ ಹೊತ್ತು ಕಳೆದು ಹೆಚ್ಚಿನ ವಿವರ ಸಹಿತ ಮತ್ತೆ ದೂರವಾಣಿಸಿದರು. ನನ್ನಂಗಡಿಯ ಹೆಸರಿನಲ್ಲೇ ಇದ್ದ ಚೆಕ್ಕು ಕೆ.ಎಸ್.ರಾವ್ ರಸ್ತೆಯ ಕಾರ್ಪೊರೇಶನ್ ಬ್ಯಾಂಕಿನ ಶಾಖೆಯ ಮೂಲಕ ಹಾಜರಾಗಿ ಏಪ್ರಿಲ್ ಆರರಂದೇ ನಗದಾಗಿರುವುದನ್ನೂ ಸಾರಿದರು. ಹೆಚ್ಚಿನ ತಿಳುವಳಿಕೆಗಾಗಿ ಮಾರಣೇ ದಿನವೇ ಆ ಚೆಕ್ ತಂದೊಪ್ಪಿಸಿದ ವ್ಯಕ್ತಿಯ (ಕಾಲೇಜಿನ ಇನ್ನೋರ್ವ ಜವಾಬ್ದಾರಿಯುತ ಅಧ್ಯಾಪಕ) ಮೂಲಕವೇ ‘ನಾನು ಸಹಿ ಮಾಡಿದ’ ವೋಚರನ್ನೂ ನೋಡಲು ಕಳಿಸಿಕೊಡುವುದಾಗಿ ತಿಳಿಸಿದರು.

ಸಂಘದ ಕಾರ್ಯದರ್ಶಿ ಯಶಸ್ವಿಯಾಗಿ ಚೆಂಡನ್ನು ನನ್ನಂಗಳಕ್ಕೆ ದಾಟಿಸಿದ್ದರು. ನನ್ನ ಬ್ಯಾಂಕ್ ಪಾಸ್ ಪುಸ್ತಕ ಮತ್ತು ನಗದು ಅಥವಾ ಚೆಕ್ ಜಮಾ ಮಾಡುವ ಚಲನ್ ಪುಸ್ತಕಗಳನ್ನು ತನಿಖೆ ಮಾಡಿದೆ – ರೂ ೧೦೧೬೭/-ರ ಯಾವುದೇ ನಮೂದುಗಳಿರಲಿಲ್ಲ. ಬ್ಯಾಂಕ್‌ನಲ್ಲಿ ಗಣಕ ಚಾಲಿತ ಮುದ್ರಕ ಪಾಸ್ ಪುಸ್ತಕ ಮುದ್ರಿಸುವಾಗ ಒಮ್ಮೊಮ್ಮೆ ನಡು ಸಾಲಿನ ನಮೂದುಗಳು ಬಾರದಿರುವುದು ಅಥವಾ ಮಸುಕಾಗಿರುವುದು ನನಗೆ ರೂಢಿಸಿತ್ತು. ಹಾಗಾಗಿ ನನ್ನ ಬ್ಯಾಂಕಿಗೂ ಒಮ್ಮೆ ಹೋಗಿ ಆರನೇ ತಾರೀಕಿನ ಹಿಂದು ಮುಂದಿನ ನಾಲ್ಕೈದು ದಿನಗಳನ್ನೇ ಸೇರಿಸಿ ಅದು ಬಂದಿಲ್ಲವೆನ್ನುವುದನ್ನೂ ಖಾತ್ರಿ ಪಡಿಸಿಕೊಂಡೆ. ಇನ್ನು ವೋಚರ್ ಸಂಗತಿ.

ಮಾರಣೇ ದಿನ ಸಂಜೆ ಕಾರ್ಯದರ್ಶಿಯ ಪ್ರತಿನಿಧಿ ವೋಚರ್ ತಂದು ನನ್ನ ಮುಖಕ್ಕೆ ಹಿಡಿದಾಗ ಅದೆಲ್ಲಾದರೂ ನನ್ನದೇ ಸಹಿಯಾಗಿದ್ದರೆ ಏನು ಗತಿ ಎಂದು ಸಂಶಯದ ಹುಳು ಕೊರೆಯತೊಡಗಿತು. ಕೆಲವು ಸಲ ಒಂದೆರಡು ಗಿರಾಕಿಗಳನ್ನು ಸುಧಾರಿಸುವ ಎಡೆಯಲ್ಲಿ ಕೊರಿಯರ್ರೋ ಅಂಚೆಯಣ್ಣನೋ ಯಾವುದಾದರೂ ಪ್ರಕಾಶಕ/ ವಿತರಕರ ಪ್ರತಿನಿಧಿಗಳೋ ‘ಮಾಲು’ ಕೊಟ್ಟು ವೋಚರ್ ಸಹಿ, ಸೀಲು ಪಡೆದುಕೊಂಡು ಹೋಗುವುದು ನಡೆದಿರುತ್ತದೆ. ವಾಸ್ತವವಾಗಿ ಅವರು ಕೊಟ್ಟದ್ದೇನು ಎನ್ನುವುದನ್ನು ಮತ್ತೆ ವಿರಾಮದಲ್ಲಿ ನೋಡಿಕೊಳ್ಳುವುದು ಇದ್ದರೂ ಎಂದೂ ತಪ್ಪಿದ್ದಿಲ್ಲ. ಈ ಕಾಲೇಜಿನ ಪ್ರತಿನಿಧಿಗೆ ಹಾಗೆಲ್ಲಾದರೂ ಅನುಮೋದನೆ ಕೊಟ್ಟದ್ದಿರಬಹುದೇ? ಆತ ದುರುದ್ದೇಶಪೂರ್ವಕವಾಗಿ ಚೆಕ್ಕನ್ನು ತನ್ನಲ್ಲೇ ಉಳಿಸಿಕೊಂಡು ತನ್ನ ಖಾತೆಗೆ ಹಾಕಿಕೊಂಡಿರಬಹುದೇ? ಚೆಕ್ ಕ್ರಾಸ್ ಆಗಿತ್ತೇ ‘ಖಾತಾಪಾವತಿ ಮಾತ್ರ’ ಎಂಬ ಷರಾ ಹೊತ್ತಿತ್ತೇ? ಅಧ್ಯಾಪಕ ಈ ಸ್ಥಿತಿಯನ್ನು ಮುಂದಾಲೋಚಿಸಿ ಸಾದಾ ಚೆಕ್ಕೇ (bearer) ಬರೆಸಿಕೊಳ್ಳುವಲ್ಲಿ ಕಾಲೇಜು ಸಿಬ್ಬಂದಿ ಶಾಮೀಲಾಗಿರಬಹುದೇ? ಕಾರ್ಪೊರೇಶನ್ ಬ್ಯಾಂಕಿನವರು ಆ ಖಾತಾದಾರನ ವಿಶ್ವಾಸಾರ್ಹತೆಯ ಮೇಲೆ ‘ಅತ್ರಿ ಬುಕ್ ಸೆಂಟರ್’ನ್ನು ಅವಗಣಿಸಿರಬಹುದೇ? ಹಾಗೆಲ್ಲಾ ಒಂದು ಮುಖ. ಯಾವುದಕ್ಕೂ ಇರಲಿ ಎಂದು ಒಂದು ಅಂಚೆ ಕಾರ್ಡಿನಲ್ಲಿ ಸೂಕ್ಷ್ಮವಾಗಿ ಇವೆನ್ನೆಲ್ಲಾ ನಮೂದಿಸಿ ಕಾಲೇಜಿನ ಪ್ರಾಂಶುಪಾಲರಿಗೆ ‘ನನಗೆ ಪಾವತಿ ಬಂದಿಲ್ಲ. ಕೂಡಲೇ ನಿಮ್ಮಲ್ಲಿ ತನಿಖೆ ಮಾಡಿ ವ್ಯವಸ್ಥೆ ಮಾಡಿ’ ಎಂದು ಬರೆದು ಹಾಕಿಬಿಟ್ಟೆ.

ಇನ್ನು ನನ್ನ/ನಮ್ಮ ಮರೆವು? ಇಲ್ಲೂ ಕೆಲವು ಸಾಧ್ಯತೆಗಳು ಮೊಳೆತವು! ಹೊರ ಊರಿನ ಚೆಕ್ಕ್ ಬಂದಾಗ ಬ್ಯಾಂಕ್ ವಿಧಿಸುವ ಕಲೆಕ್ಷನ್ ಛಾರ್ಜ್ ಮತ್ತು ವಿಳಂಬ ತಪ್ಪಿಸಲು ಬ್ಯಾಂಕೇ ಸುಲಭ ಉಪಾಯ ಕೊಟ್ಟಿತ್ತು (ಮತ್ತು ನಾನದನ್ನು ಹಲವು ಬಾರಿ ಬಳಸಿದ್ದೂ ಇತ್ತು). ಅಂಥಾ ಚೆಕ್ಕನ್ನು ಕನಿಷ್ಠ ತೊಂಬತ್ತು ದಿನಕ್ಕೆ ಯಾವುದೇ ನಿರಖು ಠೇವಣಿಯಲ್ಲಿ ತೊಡಗಿಸಿದ್ದೇ ಆದರೆ ಶುಲ್ಕ ಹಾಗೂ ವಿಳಂಬ ಇರುವುದಿಲ್ಲ. ಕೂಡಲೇ ನನ್ನ ಕಡತ ತೆರೆದು ನೋಡಿಕೊಂಡೆ. ಇಲ್ಲ, ಆ ಸಮಯದಲ್ಲಿ ನಾನು ಯಾವುದೇ ನಿರಖು ಠೇವಣಿ ಎಲ್ಲೂ ಮಾಡಿಸಿಕೊಂಡಿರಲಿಲ್ಲ. ಅದಕ್ಕೂ ಹೊರತಾಗಿ ನನಗೆ ಕಾರ್ಪೊರೇಶನ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಯಾವುದೇ ರೀತಿಯ ಖಾತೆ ಮತ್ತು ವ್ಯವಹಾರವಿಲ್ಲ.

ಇತ್ತ ದೇವಕಿ ಅರ್ಥಾತ್ ನನ್ನ ಹೆಂಡತಿಗೆ ಸ್ವತಂತ್ರ ‘ತಲೆನೋವು’ ಅಂಟಿಕೊಂಡಿತು. ಅಂಗಡಿಯಲ್ಲಿ ನಾನು ಸಂಜೆ ಕಾಫಿ ಕುಡಿಯುವ ನೆಪದಲ್ಲಿ ಹೊರಬಿದ್ದವನು ಕೆಲವೊಮ್ಮೆ ಒಂದೆರಡು ಗಂಟೆ ಹೊರಗೆ ಹೋಗಿರುವುದುಂಟು. ಆಗ ಅಂಗಡಿಯನ್ನು ಹೆಚ್ಚಾಗಿ ದೇವಕಿ (ಕೆಲವೊಮ್ಮೆ ಸಹಾಯಕ ಶಾಂತಾರಾಮನೂ) ವಹಿವಾಟು ನೋಡಿಕೊಳ್ತಾಳೆ. ಅವಳಿಗೆ ಕಾರ್ಪೊರೇಶನ್ ಬ್ಯಾಂಕ್‌ನಲ್ಲಿ ‘ನಾಲ್ಕಾಣೆ’ ಖಾತೆಯೂ ಒಂದಿದೆ. ಅದು ಲೆಕ್ಕಕ್ಕೆ ಬೆಸೆಂಟ್ ಕಾಲೇಜು ಕಟ್ಟಡದ ಒತ್ತಿಗಿರುವ ಶಾಖೆಯಲ್ಲೇ ಆದರೂ ಈ ಬ್ಯಾಂಕುಗಳನ್ನು ಪೂರ್ಣ ನಂಬುವ ಹಾಗಿಲ್ಲ! (ಉದಾ: ಹಂಪನಕಟ್ಟೆಯಲ್ಲೇ ಇದ್ದ ಕೆನರಾ ಬ್ಯಾಂಕಿನ ಎರಡನೇ ಶಾಖೆಗೆ ಭೂ ನಿಶಾನಿ – ಬಲ್ಮಠ ರಸ್ತೆ! ಬಲ್ಮಠ ವೃತ್ತದಲ್ಲಿದ್ದ ಇನ್ನೊಂದೇ ಶಾಖೆಗೆ ಕಲೆಕ್ಟರ್ಸ್ ಗೇಟ್. ಮತ್ತದು ಈಗ ಕಟ್ಟಡ ಬದಲಾಯಿಸುವ ನೆಪದಲ್ಲಿ ಬೆಂದೂರ್ ಸರ್ಕಲ್ಲಿಗೆ ಹೋಗಿ ಕುಳಿತಿದೆ!) ಅಂಗಡಿಯಲ್ಲಿ ನನ್ನ ಗೈರು ಹಾಜರಿನ ವೇಳೆ ತಾನು ಸ್ವೀಕರಿಸಿರಬಹುದಾದ ಚೆಕ್ಕನ್ನು ತಪ್ಪಿ ತನ್ನ ಕಾರ್ಪೊರೇಶನ್ ಖಾತೆಗೆ ಜಮಾ ಮಾಡಿದ್ದಿರಬಹುದೇ? ಅದರ ಅಸಾಧ್ಯತೆಯನ್ನು ತನ್ನೊಳಗೇ ಅವಳು ಬುದ್ಧಿಪೂರ್ವಕವಾಗಿ ಎಷ್ಟು ಕಂಡುಕೊಂಡರೂ ಮೆಟ್ಟಿದಷ್ಟೂ ಮೊಳೆಯುವ ಬಾಳೆ ಕಂದಿನಂತೆ ಕಾಡುತ್ತಲೇ ಇತ್ತು!

ಶನಿವಾರ ಸಂಜೆ ನನ್ನ ಕಾಫಿ ಓಡಾಟವನ್ನೂ ಮೊಟಕು ಮಾಡಿದೆ; ನನ್ನ ಸಹಿಯ ಅಗ್ನಿ ಪರೀಕ್ಷೆಗೆ ಹಾಜರಿರಬೇಕೆಂಬ ಕಾತರ. ಆದರೆ ಮೂಲ್ಕಿಯಿಂದ ಯಾರೂ ಬರಲಿಲ್ಲ. ಸೋಮವಾರ ಹತ್ತು-ಹನ್ನೊಂದು ಗಂಟೆಯ ಸುಮಾರಿಗೆ ಕಾರ್ಯದರ್ಶಿಯ ದೂರವಾಣಿ ಬಂತು. ಧ್ವನಿ ಕುಗ್ಗಿತ್ತು. ಕ್ಷಮಾಯಾಚನೆಯೊಡನೇ ತೊಡಗಿ, ಗೊಂದಲವನ್ನೆಲ್ಲಾ ಬಿಡಿಸಿಟ್ಟು, ನನಗಾದ ತೊಂದರೆಗಳಿಗೆ ವಿಷಾದದೊಡನೆ ಮುಗಿಸಿದರು. ಸಂಜೆ ನನ್ನ ಅಂಗಡಿಯ ಹೆಸರಿಗೆ ಹೊಸದೇ ಚೆಕ್ಕ್ ತಂದೊಪ್ಪಿಸಿದರು. ಅವರೊಪ್ಪಿಸಿದ ಕಥೆಯ ಸಾರಾಂಶ: ಪ್ರತಿನಿಧಿಗೆ ಎರಡು ಚೆಕ್ಕು ಕೊಟ್ಟು ಒಂದು ನವಕರ್ನಾಟಕಕ್ಕೂ ಒಂದು ಅತ್ರಿಗೂ ತಲಪಿಸಲು ಸೂಚನೆಯಾಗಿತ್ತು. ಆತ ಯಾವುದೋ ಯೋಚನೆಯಲ್ಲಿ ಒಂದನ್ನು ಸರಿಯಾಗಿಯೇ ಕೊಟ್ಟರೂ ನನ್ನದನ್ನು ಕಾಲೇಜಿಗೆ ಹೆಚ್ಚು ವಹಿವಾಟು ಇರುವ ಇನ್ನೊಂದೇ ಪುಸ್ತಕ ಮಳಿಗೆಗೆ ಯಾಂತ್ರಿಕವಾಗಿ ಕೊಟ್ಟಿದ್ದರು. ಅಲ್ಲಿ ಚೆಕ್ ಸ್ವೀಕರಿಸಿದ ‘ಬುದ್ಧಿವಂತ’ ವಿವರ ನೋಡದೆ ವೋಚರಿಗೆ ಸೀಲು ಸಹಿ ಕೊಟ್ಟದ್ದಲ್ಲದೆ, ಮರುದಿನ ತಮ್ಮ ಮಳಿಗೆಯ ಖಾತೆಯ ಹೆಸರಿನಲ್ಲಿ ಬ್ಯಾಂಕಿಗೂ ಹಾಕಿಬಿಟ್ಟ. ಬ್ಯಾಂಕಿನ ‘ಪರಮ ಬುದ್ಧಿವಂತರು’ ಚೆಕ್ಕಿಗೆ ಸೂಕ್ತ ಸಂಸ್ಕಾರ ಕೊಟ್ಟು ವಿನಿಮಯ ಕೇಂದ್ರಕ್ಕೆ ರವಾನಿಸಿಬಿಟ್ಟರು. ವಿನಿಮಯ ಕೇಂದ್ರ ಖಾತಾದಾರನ ರುಜು ಮತ್ತು ಖಾತೆಯಲ್ಲಿನ ಶಿಲ್ಕುಗಳನ್ನಷ್ಟೇ ತನಿಖೆ ಮಾಡುತ್ತದೆ. ಮೊತ್ತ ಯಾವ ಖಾತೆಗೆ ಜಮೆಯಾಗುತ್ತದೆ ಎಂಬುದು ಚೆಕ್‌ನ್ನು ವಹಿಸಿಕೊಂಡ ಬ್ಯಾಂಕಿನ ಜವಾಬ್ದಾರಿಗೆ ಬಿಡುವುದಿರಬೇಕು. ಸಹಜವಾಗಿ ಆರನೇ ತಾರೀಕು ನಗದಾದ ‘ನನ್ನ’ ಚೆಕ್, ಇನ್ನೊಂದೇ ಪುಸ್ತಕ ಮಳಿಗೆಯ ಖಾತೆಗೆ ಮಜವಾಗಿ, ಅಲ್ಲಲ್ಲ ಜಮೆಯಾಗಿ ಸೋರಿ ಅಲ್ಲಲ್ಲ ಸೇರಿಹೋಗಿತ್ತು! ಸಹಕಾರಿ ಸಂಘದ ಕಾರ್ಯದರ್ಶಿ ಕಾಲೇಜಿನ ಪ್ರತಿನಿಧಿಗೆ ಸಮಸ್ಯೆ ವಿವರಿಸಿ, ನನ್ನ ಸಹಿ ಇರುವುದೆಂದು ಭಾವಿಸಿದ ವೋಚರನ್ನು ನನ್ನೆದುರು ಹಾಜರು ಪಡಿಸಲು ಸೂಚಿಸಿದಾಗ ಆತ ತಾನು ಚೆಕ್ ಕೊಡಲು ಹೋದಂದಿನ ಘಟನಾವಳಿ ನೆನಪಿಸಿಕೊಂಡರಂತೆ. ಮತ್ತು “ಯಾಂತ್ರಿಕವಾಗಿ ಇನ್ನೊಂದೇ ಪುಸ್ತಕ ಮಳಿಗೆಗೆ ಹೋಗಿದ್ದೆನೇ ಹೊರತು ಅತ್ರಿಗೆ ಹೋಗಲೇ ಇಲ್ಲ” ಎಂದು ಪಶ್ಚಾತ್ತಾಪಿಸಿದರಂತೆ. ಕೂಡಲೇ ಕಾರ್ಯದರ್ಶಿ ಇನ್ನೊಂದೇ ಮಳಿಗೆಯನ್ನು ದೂರವಾಣಿಯಲ್ಲೇ ವಿಚಾರಿಸಿ, ಸಮಸ್ಯೆ ಬಗೆಹರಿಸಿಕೊಂಡದ್ದಕ್ಕೆ ಸೋಮವಾರ ಬೆಳಿಗ್ಗೆ ನನಗವರ ಕ್ಷಮಾಯಾಚನೆಯೂ ಸಂಜೆ ನ್ಯಾಯವೂ ಸಿಕ್ಕಿತು!

ಇಲ್ಲಿ ಉದ್ಭವಿಸುವ ಮೂರು ಸಂದೇಹಗಳಿಗೆ (ಕ್ಷಮಾಯಾಚನೆಯಲ್ಲ) ಸಮಾಧಾನ ಕೊಡುವವರು ಇದ್ದಾರೆಯೇ? ೧. ಕಾಲೇಜಿನ ಅಸಹನಾವಾಣಿಗೆ ನಾನೂ ಮಾತಿನ ಪ್ರತಿ ಕಟಕಿ ಕೊಡಬಹುದಿತ್ತಲ್ಲವೇ? ದಾಖಲೆಗಿರಲೆಂದು ನಾನು ಪ್ರಾಂಶುಪಾಲರಿಗೆ ಬರೆದ ಅಂಚೆ ಕಾರ್ಡಿಗೆ ಇನ್ನಾದರೂ ಉತ್ತರಿಸಿದರೆ ‘ವಿದ್ಯೆ ವಿನಯವನ್ನು ಕಲಿಸುತ್ತದೆ’ ಎಂಬ ಆರ್ಯೋಕ್ತಿಗೆ ಈ ವಿದ್ಯಾ ಸಂಸ್ಥೆಯಲ್ಲಿ ಜೀವವಿದೆ ಎಂದು ತಿಳಿದೀತು! ಅಸಂಖ್ಯ ಕನಸುಗಾರರನ್ನು (ವಿದ್ಯಾರ್ಥಿಗಳನ್ನು) ಸರಿ ಮಾರ್ಗಕ್ಕೆ ಹಚ್ಚುವಲ್ಲಿ ವಿಶ್ವಾಸಾರ್ಹತೆ ಉಳಿದೀತು. ೨. ಇನ್ನೊಂದೇ ಪುಸ್ತಕ ಮಳಿಗೆ ಒಮ್ಮೆಗೆ ಚೆಕ್ ಸ್ವೀಕರಿಸುವಲ್ಲಿ ತಪ್ಪಿದ್ದಿರಬಹುದು. ಆದರದನ್ನು ಬ್ಯಾಂಕಿಗೆ ಸಜ್ಜುಗೊಳಿಸುವಲ್ಲಿ, ಸ್ವಂತ ಖಾತಾ ದಾಖಲೆಗೆ ಒಳಪಡಿಸುವಲ್ಲಿ ಇಪ್ಪತ್ತಕ್ಕೂ ಮಿಕ್ಕು ದಿನಗಳ ಮೇಲೂ ಸಂದೇಹ ಬರಲೇ ಇಲ್ಲವೇ?! (ಏಳು ಹಾಸಿಗೆಗಳ ಕೆಳಗೆ ಮಲ್ಲಿಗೆ ಹೂವೊಂದು ಸಿಕ್ಕಿಕೊಂಡಾಗ ಮೇಲೆ ಮಲಗಿದ ರಾಜಕುಮಾರಿಗೆ ಮೈ ನೋವಾದ ಕಥೆ ಸುಳ್ಳೇ ಸುಳ್ಳು) ೩. ಸಾರ್ವಜನಿಕ ಹಣಕಾಸಿನ ನ್ಯಾಸಧಾರಿ ಬ್ಯಾಂಕೊಂದು (ಇಲ್ಲಿ ಕಾರ್ಪೊರೇಶನ್ ಬ್ಯಾಂಕ್, ಕೆ.ಎಸ್.ರಾವ್ ರಸ್ತೆ ಶಾಖೆ) ತನ್ನಲ್ಲಿ ಖಾತೆಯೇ ಇಲ್ಲದವರ ಹೆಸರಿನ ಚೆಕ್ಕೊಂದನ್ನು ಹೇಗೆ ನಗದೀಕರಿಸಿ ಇನ್ನೊಂದೇ ಖಾತೆಗೆ ತುಂಬಿತು? ಈ ಕುರಿತು ಆ ಬ್ಯಾಂಕಿನ ವರಿಷ್ಠರು ಸ್ಪಷ್ಟೀಕರಣವಾದರೂ ಕೊಟ್ಟಾರೆಂಬ ನಿರೀಕ್ಷೆಯಲ್ಲಿ ಈ ಲೇಖನದ ಯಥಾ ಪ್ರತಿಯನ್ನು ಪ್ರತ್ಯೇಕ ಅಂಚೆಯಲ್ಲಿ ಬ್ಯಾಂಕಿಗೂ ಕಳಿಸಿದ್ದೇನೆ. (ಉತ್ತರ ಬಂದರೆ ಮುಂದೆ ಪ್ರಕಟಿಸುತ್ತೇನೆ).