ಪ್ರವಾಸಿ, ತಾನು ಭೇಟಿಕೊಟ್ಟ ಸ್ಥಳ ಚರಿತ್ರೆಯೊಡನೆ ತನ್ನ ಭಾವ ಸಂಬಂಧವನ್ನು ಸೇರಿಸಿದರಷ್ಟೇ ಪ್ರವಾಸ ಕಥನ, ಎಂದು ನಂಬಿದವ ನಾನು. ಆದರೆ ಇಲ್ಲೊಂದು ಕಾದಂಬರಿ – ಬೆಳಗಿನೊಳಗು, ಲೇಖಕಿ ಎಚ್.ಎಸ್. ಅನುಪಮಾ (ಲಡಾಯಿ ಪ್ರಕಾಶನ, ಗದಗ. ಚರವಾಣಿ, ೯೪೮೦೨೮೬೮೪೪, ಬೆಲೆ ರೂ ೬೫೦) ನನಗಂತೂ ಪರಮಾದ್ಭುತ ಪ್ರವಾಸ ಕಥನವೇ ಆಗಿದೆ.

ಸರಳವಾಗಿ ಹೇಳುವುದಿದ್ದರೆ, ಇದು ಅಕ್ಕಮಹಾದೇವಿಯ ಜೀವನ ವೃತ್ತಾಂತ. ಹನ್ನೆರಡನೇ ಶತಮಾನದ ಈ ಶಿವಶರಣೆ, ಹುಟ್ಟೂರು ಉಡುತಡಿಯಿಂದ ಕಲ್ಯಾಣಕ್ಕಾಗಿ, ಶ್ರೀಶೈಲದವರೆಗೆ ಸುಮಾರು ಸಾವಿರಕ್ಕೂ ಮಿಕ್ಕು ಕಿಮೀ ಅಂತರವನ್ನು ಅಕ್ಷರಶಃ ಜೀವನ ಪಥ ಹಾಗೂ ಸಾಧನೆಯ ಕಳವಾಗಿಸಿಕೊಳ್ಳುತ್ತಾಳೆ. ಮಹಾ ರಾಕೆಟ್ಟೊಂದು ನೆಲ ಒದ್ದು ನೆಗೆದು, ದೃಢವೆಂದು ಕಟ್ಟಿಕೊಂಡ ಗ್ರಹಿಕೆಗಳನ್ನೆಲ್ಲ ಹಂತಹಂತವಾಗಿ ಕಳಚಿಕೊಳ್ಳುತ್ತಾ ಪರಮ ಸಂಕೀರ್ಣ ಸ್ಥಿತಿಯತ್ತ ಸಾಗಿಹೋದ ಕತೆ ಇದು. ಅದಕ್ಕೆ ವಿಶ್ವವೇ ಲಕ್ಷ್ಯ, ಮುಕ್ತಾಯವಿಲ್ಲ, ಕಾಲ ಅನಂತ.

ಪುಟ್ಟ ಊರಿನ, ಚಿಕ್ಕ ಸಂಸಾರದ, ಮುಗ್ಧೆ – ‘ಮಾದಿ’. ಈಕೆ ಹುಟ್ಟಿನ ಜತೆಗೂಡಿದ ಪಾರಿಸರಿಕ ಕಟ್ಟುಪಾಡುಗಳನ್ನು ಎಳೆಯ ಪ್ರಾಯದಲ್ಲೇ ಅರ್ಥೈಸಿಕೊಳ್ಳುತ್ತಾಳೆ. ಮತ್ತೆ ಅವು ನಿಃಸ್ವಾರ್ಥ ವೈಯಕ್ತಿಕ ಬೆಳವಣಿಗೆಗೆ ಅಡ್ಡಿಯಾಗುವಾಗ ದಿಟ್ಟ ಆದರೆ ಸ್ಪಷ್ಟ ಮಾನವೀಯ ಸಮಾಧಾನವನ್ನು ಕಂಡುಕೊಳ್ಳುತ್ತಾಳೆ. ಈಕೆ ಘೋಷಿಸಿ ಪಂಥವನ್ನು ಹಿಡಿದವಳಲ್ಲ, ಸ್ವಾನುಭವವನ್ನು ಮೀರಿದ ಪ್ರವಚನಗಳನ್ನು ಕೊಟ್ಟವಳೂ ಅಲ್ಲ. ಸ್ವಂತ ಆಚರಣೆಯಿಂದ ಗಳಿಸಿದ ಅನುಭವವನ್ನು ಇತರರ ಒಳಿತಿಗೆ ವಿನಿಯೋಗಿಸುವಲ್ಲಿ ಸದಾ ಧಾರಾಳಿ. ಇಲ್ಲಿ ಪವಾಡಗಳಿಲ್ಲ – ಹಸಿವು, ನಿದ್ರೆ, ಮುಟ್ಟು, ಅಸೌಖ್ಯ ಮುಂತಾದ ದೈಹಿಕ ಕಷ್ಟಗಳೆಲ್ಲವನ್ನು ಮಾದಿಯಾಗಿಯೇ ಅನುಭವಿಸುತ್ತಾಳೆ. ಲೌಕಿಕ ಕುಹಕಗಳನ್ನು (ತರುಣಿ, ಗಂಡ ಬಿಟ್ಟವಳು, ಏಕಾಂಗಿ, ಬಹುತೇಕ ನಗ್ನೆ….) ಪೂರ್ಣ ಆಯಾಮದಲ್ಲಿ ಅರಿತೂ ವೈಯಕ್ತಿಕ ಶ್ರದ್ಧೆಯ ಬಲದಲ್ಲಿ ಮೀರುತ್ತಾಳಿ, ಮಹಾದೇವಿ ಆಗುತ್ತಾಳೆ. ತಿಳಿವಿನ ಆಕಾಶದ ಎಂದೂ ಮುಗಿಯದ ಪಯಣದಲ್ಲಿ, ಪ್ರಾಯದ ಹಂಗಿಲ್ಲದೆ ಸಾಗುತ್ತಾ ಎಲ್ಲರಿಗು ಅಕ್ಕನೇ ಆಗುತ್ತಾಳೆ.

ಮಹಾಕಾವ್ಯಗಳಾದರೋ ನೂರೆಂಟು ಪಾತ್ರಗಳು, ಸಾವಿರಾರು ಉಪಕಥನಗಳ ಹೆಣಿಗೆಯಲ್ಲಿ ಬಿತ್ತರಗೊಳ್ಳುತ್ತವೆ. ಗಾತ್ರದಲ್ಲಿ ಮಹತ್ತನ್ನು ಎಣಿಸುವುದಿದ್ದರೆ ಬೆಳಗಿನೊಳಗು ಏಳ್ನೂರು ಪುಟಗಳಿಗೂ ಮೀರಿ ಹರಿದ ಕಥನ. ಆದರೆ ಇದು ಎಲ್ಲೂ ಸ್ವಾರಸ್ಯಗೆಡದಂತೆ ನಿರ್ವಹಿಸಿದ ಏಕ ವ್ಯಕ್ತಿಯ ಕಥನ. ತಂದೆ-ತಾಯಿ, ಗುರು, ಗಂಡ-ಸಂಸಾರ, ಗೆಳತಿ-ಸಮಾಜ, ಬಸವಣ್ಣ-ಅಲ್ಲಮಾದಿ ಅದ್ವಿತೀಯ ಮಹಾ ವ್ಯಕ್ತಿಗಳು ಈ ಕಥನದಲ್ಲಿ ಚೆನ್ನಾಗಿಯೇ ರೂಪುಪಡೆದರೂ ಸಹಜವಾಗಿ ಬೆಳಗುವುದು ಅಕ್ಕಮಹಾದೇವಿ ಮಾತ್ರ. ಇಲ್ಲಿ ಯಾರನ್ನೂ ಅಲಕ್ಷಿಸುವ ಅವಹೇಳನ ಮಾಡುವ ಪ್ರಸಂಗಗಳಿಲ್ಲ. ಎಲ್ಲವೂ ಎಲ್ಲರೂ ತನ್ನೊಲವಿನ ಸತ್ಯದರ್ಶನಕ್ಕೆ ಸಹಾಯಕರು ಎಂಬಂತೇ ಅಕ್ಕ ಬೆಳೆದ ಪರಿ ಅದ್ಭುತ. ಕ್ಷಮಿಸಿ, “ಅನುಪಮಾ ಬೆಳೆಸಿದ್ದಾರೆ” ಎಂದು ಹೇಳಲಾಗದಷ್ಟು ಸಹಜತೆ ಅಕ್ಕನ ಪಾತ್ರಪೋಷಣೆಗೆ ಒದಗಿದೆ.

ರಾಜಾರಾಂ ತಲ್ಲೂರು ತನ್ನ ಅಪರಿಮಿತ ಓದು, ಸಾರ್ವಜನಿಕ ಹಿತಾಸಕ್ತಿಯೊಂದನ್ನೇ ಲಕ್ಷ್ಯವಾಗಿಟ್ಟು ನಡೆಸುತ್ತಿರುವ ಅಸಂಖ್ಯ ಸಂಶೋಧನೆ ಮತ್ತು ಬರಹಗಳ ನಡುವೆ, ಪೂರ್ಣ ಭಿನ್ನವಾದ ಈ ಕಾದಂಬರಿಯನ್ನು ಓದಿ, ತಡೆಯಲಾಗದ ಸಂತಸವನ್ನು ಫೇಸ್ ಬುಕ್ಕಿನಲ್ಲಿ ಒಂದೆರಡೇ ಮಾತಿನಲ್ಲಿ ಹಂಚಿಕೊಂಡರು. ಅದೇ ನನಗೆ ದಾರಿದೀಪ. ಇದರ ಓದಿಗೆ ತೊಡಗಿದ ಮೊದಲಲ್ಲಿ, ಇದನ್ನು ಧಾರಾಳ ಮಾತುಗಳಲ್ಲಿ (ಸಣ್ಣ ಗರ್ವದೊಡನೆ?) ನಾನಾದರೂ ಸಾರ್ವಜನಿಕದಲ್ಲಿ ಹಂಚಿಕೊಳ್ಳುತ್ತೇನೆ ಎಂದುಕೊಂಡಿದ್ದೆ. ಆದರೆ ನಾನು ಅಪಾರ ಪ್ರೀತಿಯಿಂದ ಎರಡು ಓದು ಕೊಟ್ಟರೂ ಏನೆಲ್ಲಾ ಟಿಪ್ಪಣಿ ಮಾಡಿಕೊಂಡರೂ ಲೇಖನದ ಸಣ್ಣ ಪುಟಕ್ಕೆ ಇಳಿಸಲಾಗದ ಮಹತ್ವ ಇದರಲ್ಲಿದೆ. ಬೆಳಗಿನೊಳಗು ಕಾದಂಬರಿಗೆ ಅದೇ ಸಾಟಿ. ಅದನ್ನು ಎಲ್ಲರೂ ಎರಡೆರಡು ಬಾರಿ ಓದಿದರೂ ಹೆಚ್ಚಲ್ಲ.