ಪ್ರಿಯ ಮುರಳಿ ಕಡೇಕಾರರೇ,

ಪದಾಧಿಕಾರಿಗಳ ಭಾರಕ್ಕೆ ಕುಸಿಯುವ, ಸ್ಥಾವರ ಕಟ್ಟುವ (ಕಛೇರಿ, ಸಭಾಭವನ ಇತ್ಯಾದಿ) ಹುಚ್ಚಿನಲ್ಲಿ ಆಶಯ ಸಮಾಧಿಸುವ ಸಂಘಟನೆಗಳ (ಹೆಚ್ಚಾಗಿ ಸರಕಾರೀ) ನಡುವಣ ಕಮಲ ನಿಮ್ಮ (ಉಡುಪಿಯ) ಯಕ್ಷಗಾನ ಕಲಾರಂಗ (ರಿ). ಅಂದಿನ (೯-೧೧-೨೦೦೮ ಆದಿತ್ಯವಾರ) ಸಭಾಸದರ ಸಂಖ್ಯೆಗೆ ಕಲಾರಂಗದ ಕಛೇರಿ ಕಿಷ್ಕಿಂಧೆಯೇ ಆಯ್ತು. ಆದರೆ ಅದನ್ನು ಮರೆಸುವಂತಿದ್ದ ಕಲಾಪಗಳು ಸುಂದರಕಾಂಡವೇ ಸರಿ! ಕಾರ್ಯಕ್ರಮ ನನಗೆ ಕೊಟ್ಟ ಸಂತೋಷವನ್ನು ಈ ಬಹಿರಂಗ ಪತ್ರದ ಮೂಲಕ ಹಂಚಿಕೊಳ್ಳಲು ಬಯಸುತ್ತೇನೆ. ಕಲೆಯ ಮತ್ತು ಕಲಾವಿದರ ಪೋಷಣೆ, ರಕ್ಷಣೆಗಳ ಗಿರಿಯನ್ನು ಹಳಗಾಲದ ಕಟ್ಟಡವೊಂದರ ಕಿರಿ (ಬೆರಳಿನಲ್ಲಿ?) ಕೋಣೆಯಲ್ಲೇ ನಿಭಾಯಿಸುವ ನಿಮ್ಮ ಸಂಸ್ಥೆಗೆ ಕಲಾರಸಿಕರ ಪೂರ್ಣ ಮನ್ನಣೆ ಮತ್ತು ದಾನಿ, ಪ್ರಾಯೋಜಕ ಸಂಸ್ಥೆಗಳ ನಿಷ್ಕಾಮ ಬೆಂಬಲ ಈ ಮೂಲಕವೂ ಒದಗಬಾರದೆಂದಿಲ್ಲವಲ್ಲ! ಮೊದಲೊಂದು ಪ್ರವಾಸ ಕಥನ. ಕಲಾರಂಗದ ಸಕ್ರಿಯ ಸದಸ್ಯ ಎಸ್.ವಿ. ಭಟ್ಟರಿಗೆ ತಮ್ಮ ಮಗಳ ಮನೆಗೆ ಒಮ್ಮೆಯಾದರೂ ಭೇಟಿಕೊಡುವ ಅನಿವಾರ್ಯತೆ. ಮೇಲೆ ಅಲ್ಲಿಗೆ ಭೇಟಿಕೊಟ್ಟ ತನ್ನ ಹೆಂಡತಿಯನ್ನು ಮರಳಿ ತರುವ ಹೊಣೆ. ಹೀಗೆ ವಿದೇಶೀ ವ್ಯಾಮೋಹವಿಲ್ಲದೆಯೂ ಸಿಂಗಾಪುರಕ್ಕೆ ಹೋದವರು ಎರಡು ತಿಂಗಳು ಇದ್ದು ಬಂದರು. ಅವರು ಅಲ್ಲಿದ್ದ ಎರಡು ತಿಂಗಳಲ್ಲಿ ವರ್ತಮಾನದ ಸಾಮಾನ್ಯ ಶಿಕ್ಷಕ ಮನೋವೃತ್ತಿಗೆ ಅಪವಾದವಾಗಿ (ಇಲಾಖೆ ವಿಧಿಸಿದ ಪಾಠಪಟ್ಟಿಯನ್ನು ಮೀರಿದಂತೆ), ಆ ಊರು ಸಂಸ್ಕೃತಿಯ ಬಗ್ಗೆ ವ್ಯಾಪಕವಾಗಿ ತಿಳಿದುಕೊಂಡರು. ಕಲಾರಂಗದ ಔಪಚಾರಿಕ ವೇದಿಕೆಯಲ್ಲಿ ಅದನ್ನು ಹಂಚಿಕೊಳ್ಳುವ ಪ್ರಸಂಗ ಒದಗಿದಾಗ ವೈಯಕ್ತಿಕತೆಯನ್ನು ತೆಳು ಮಾಡಿ (ಮಜ್ಜಿಗೆ?) ಅನುಭವ ನವನೀತವನ್ನಷ್ಟೆ ಹಂಚಿದರು. `ಸಂಗ್ರಹಕ್ಕೆ’ ವಿವೇಚನೆಯ ಕಾವುಕೊಟ್ಟು, ಹಾಸ್ಯದ ಲೇಪವಿಟ್ಟು ನಮಗೆ ಉಣಬಡಿಸಿದ್ದಷ್ಟೂ ರುಚಿಕಟ್ಟಾಗಿತ್ತು. ಕಥನ ನಮ್ಮ ದೇಶದ ಆಡಳಿತದ ದಿಕ್ಚ್ಯುತಿಯನ್ನು ತೋರುವ ಕೈಕಂಬವೇ ಆಯ್ತು.

ಭಟ್ಟರು ಸಿಂಗಾಪುರಿಗಳ ವೃತ್ತಿಪರತೆಯನ್ನು ಮೆಚ್ಚುವುದರಲ್ಲಿ ಭಾರತೀಯರನ್ನು ಚುಚ್ಚುತ್ತಲೂ ಇದ್ದರು, ಹೆಚ್ಚಿಸುತ್ತಲೂ ಇದ್ದರು. ಸಿಂಗಾಪುರ ಇಲ್ಲದ್ದನ್ನು ಇದೆಯೆಂಬಂತೆ ಬಿಂಬಿಸಿ ಯಶಸ್ವಿಯಾದ ಕಥೆ ಹೇಳುವಾಗ ನಮ್ಮದು ಎಷ್ಟು ಶ್ರೀಮಂತ ಹಾಗೂ ಅದನ್ನು ನಿರ್ವಹಿಸುವಲ್ಲಿ ನಾವೆಷ್ಟು ಮೂಢರು ಎಂಬೆರಡೂ ಎಳೆಗಳು ಹಾಸುಹೊಕ್ಕಾಗುತ್ತಿತ್ತು. ಭಾರತದ ಅವಹೇಳನವೇ ಬೂಕರ್ ಪ್ರಶಸ್ತಿ (ವೈಟ್ ಟೈಗರ್) ವಿಜಯಕ್ಕೆ ಯೋಗ್ಯತೆ ಎಂಬಂತೆ ಯೋಚಿಸುವ ಮನಸ್ಸುಗಳು, ಕಾಯಿಲೆಯ ಉಲ್ಬಣಾವಸ್ಥೆಯಲ್ಲಿ ಎಸ್. ವಿ ಭಟ್ಟರನ್ನೂ ದೇಶದ್ರೋಹಿಯ ನೆಲೆಯಲ್ಲಿ ಗುರುತಿಸಿದರೆ ಆಶ್ಚರ್ಯವಿಲ್ಲ. ಸ್ವವಿಮರ್ಶೆಯ ಬಲವಿಲ್ಲದ ಯಾವುದೇ ಅಭಿವ್ಯಕ್ತಿ ಕೇವಲ ಪ್ರಚಾರ ಸಾಹಿತ್ಯ. ಇದನ್ನು ಭಾರತದ ಅಭಿಮಾನಿಗಳೂ ಅರ್ಥಮಾಡಿಕೊಳ್ಳುವುದು ಇಂದಿನ ತುರ್ತು. ಭಾಷಣಕ್ಕೆ ಜನ ನಾನಲ್ಲ ಎಂಬ ವಿನಯದೊಡನೆ ಮೈಕ್ ಹಿಡಿದರೂ ಹೇಳಿದ್ದಷ್ಟೂ ಕಾಲಕ್ಷೇಪವಲ್ಲ ಎಂದು ಕಾಣಿಸಿದ್ದು ಭಟ್ಟರ ಹೆಚ್ಚುಗಾರಿಕೆ. ಭಟ್ಟರಿಗೆ ಮೂಲದಲ್ಲಿ ವಿದೇಶಯಾನದ ಬಗ್ಗೆ ಮೋಹವಿರಲಿಲ್ಲ. ಹಾಗೆಂದು ಊರಿಗೆ ಮರಳಿದ ಮೇಲೆ ಪಶ್ಚಾತ್ತಾಪಪಡುವ ಬದಲು (ಯಾರದೇ ಹಂಗಿಲ್ಲದೆ) ಇನ್ನೊಮ್ಮೆ ಹೋಗುವ ಅವಕಾಶ ಒದಗಿದರೆ ಅಲ್ಲಿ ತಿಳಿದುಕೊಳ್ಳುವ ಅಂಶಗಳು ಇನ್ನಷ್ಟು ಇವೆ ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರಾಂಜಲವಾಗಿ ಒಪ್ಪಿ ಮುಗಿಸಿದರು.

ಈಚೆಗೆ ಅಮೆರಿಕಾದಲ್ಲಿ ನಡೆದ `ಅಕ್ಕ’ ಸಮ್ಮೇಳನದಲ್ಲಿ ಭಾಗವಹಿಸಿ ಬಂದ ಭುವನಪ್ರಸಾದ ಹೆಗ್ಡೆ (ಇನ್ನೊಬ್ಬ ಕಲಾರಂಗದ ಕಾರ್ಯಕರ್ತ) ಅನುಭವ ಕಥನದ ಸರದಿಯಲ್ಲಿ ಎರಡನೆಯವರು. ಆದರೆ ಇವರಲ್ಲಿ ಕಥನ ಪ್ರಯತ್ನದ ಪ್ರಾಮಾಣಿಕತೆಯಷ್ಟೆ ನನ್ನ ಗ್ರಹಿಕೆಗೆ ನಿಲುಕಿತು. ಅಮೆರಿಕಾದ ನೆಲ, ಅಕ್ಕ-ಸಮ್ಮೇಳನದ ಜನ, ಒಟ್ಟಾರೆ ಸಂಸ್ಕೃತಿಯ ಪ್ರತಿಬಿಂಬ ಬಯಸಿ ಕಿವಿ ಅಗಲಿಸಿ ಕುಳಿತವನಿಗೆ ಹೆಗ್ಡೆಯವರ ಸಂಬಂಧಿಕರ ಅಪೂರ್ಣ ಚಿತ್ರ ಮತ್ತು ಅಕ್ಕ-ಸಮ್ಮೇಳನದ ಪತ್ರಿಕಾ ವರದಿಯ ಛಾಯೆ ಮಾತ್ರ ದಕ್ಕಿತು. ಭಾರೀ ಸಾಧಿಸಿದ ಗತ್ತು, ಕೇಳುಗರನ್ನು ಸಣ್ಣ ಮಾಡುವ `ಮತ್ತು’ ಹೆಗ್ಡೆಯವರ (ಲಿಖಿತ) ಭಾಷಣದಲ್ಲಿ ಎಲ್ಲೂ ಸುಳಿಯಲಿಲ್ಲ ಎನ್ನುವುದಷ್ಟೇ ಇಂದಿನ ದಿನಗಳಲ್ಲಿ ಯಾವ್ಯಾವುದೋ ಕಾರಣಕ್ಕೆ ವೇದಿಕೆ ಏರಿಬಿಡುವವರು, ಮೈಕ್ ವಶಪಡಿಸಿಕೊಳ್ಳುವವರು ಗಮನಿಸಬೇಕಾದ ಅಂಶ.

ಕಾರ್ಯಕ್ರಮದ ಕೊನೆಯ ಭಾಗ ಯಕ್ಷ-ಭಾಗವತ ಕುರಿಯ ಗಣಪತಿ ಶಾಸ್ತ್ರಿಯವರೊಡನೆ ಮುಖಾಮುಖಿ. ಮೊದಲು ಶ್ರುತಿ ಮತ್ತು ಪದ್ಯಾಣ ಶಂಕರನಾರಾಯಣ ಭಟ್ಟರ ಮದ್ದಳೆಯ ಸುಂದರ ಮೇಳದಲ್ಲಿ ಸಾಂಪ್ರದಾಯಿಕ ಪ್ರಾರ್ಥನೆ. ಮುಂದೆ ಸಭೆಯ ಏಕೈಕ ಪ್ರತಿನಿಧಿಯಾಗಿ ಪ್ರಾಧ್ಯಾಪಕ, ಯಕ್ಷ-ಅರ್ಥದಾರಿ ನಾರಾಯಣ ಹೆಗ್ಗಡೆಯವರಿಂದ ಗಣಪತಿ ಶಾಸ್ತ್ರಿಗಳಿಗೆ ಸವಾಲು, ಕೋರಿಕೆಗಳ ಸರಣಿ. ಯಾವುದೇ ಹೆಚ್ಚುಗಾರಿಕೆಯನ್ನು ಮೆರೆಯದೆ ನೇರಾನೇರ ಮಾತು ಮತ್ತು ಗಾಯನದಲ್ಲಿ ಸುಮಾರು ಒಂದೂಕಾಲು ಗಂಟೆಯ ಶ್ರವಣ ಸುಖ ಒದಗಿಸಿದರು ಶಾಸ್ತ್ರಿಗಳು.

ಸಹಜವಾಗಿ ಬಾಲ್ಯದ, ವಿದ್ಯಾಭ್ಯಾಸದ ನೆನಪುಗಳ ಮೆರವಣಿಗೆಯೊಡನೆ ಸಂವಾದ ಮೊದಲಿಟ್ಟಿತು. ಇಲ್ಲೊಂದು ಬಾಲಪ್ರತಿಭೆ ಅಥವಾ ಈತ ಹುಟ್ಟಿದ್ದೇ ಇಂದು ತಾನು ಪ್ರತಿನಿಧಿಸುವ ಕಲಾಪ್ರಕಾರದ ಉದ್ಢಾರಕ್ಕೆ ಎಂಬೆಲ್ಲಾ ಸವಕಲು ನಾಣ್ಯಗಳ ಸೋಂಕಿಲ್ಲ. `ಪೋಕರಿ ಗೆಣಪ್ಪ’ (ಹವ್ಯಕ ಮನೆಮಾತಿನಲ್ಲಿ ಕೃಷ್ಣ>ಕಿಟ್ಟ, ಈಶ್ವರ>ಈಚ, ಕೇಶವ>ಕೇಚ ಇತ್ಯಾದಿ ಇದ್ದಹಾಗೆ ಗಣಪತಿ>ಗೆಣಪ್ಪ) ಮನೆ ಸಮೀಪದ ಶಾಲೆಯಿಂದ ಎರಡು ಗುಡ್ಡೆಯಾಚೆಯ (ಗಟ್ಟಿ ನಾಲ್ಕೈದು ಮೈಲಿನ ನಡಿಗೆ) ಶಾಲೆಗೆ ವರ್ಗಾಯಿಸಲ್ಪಟ್ಟದ್ದು (punishment transfer!) ಗಮನಾರ್ಹ. ಅಷ್ಟಕ್ಕೆ ಕಮರದ ಕಲಿಕೆಯ ಬಲ ಇವರನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೂ ಸೇರಿಸಿತು. ಆದರೆ ಅಲ್ಲಿಗೂ ಜೊತೆಗೊಟ್ಟ `ಹೋರಾಟಗಾರತನ’ ಮತ್ತೆ ನೆಲೆ ತಪ್ಪಿಸಿತು. ಪುತ್ತೂರಿನ (ಸಂತ) ವಿವೇಕಾನಂದ ಕಾಲೇಜು ಸಂತವಿಸಿದ್ದರಿಂದ ಸ್ನಾತಕ ಪದವೀಧರನಾದರು; ಗಣಪತಿ ಶಾಸ್ತ್ರಿ!

ಮನೆಯ ವಾತಾವರಣ ಒಂದನ್ನುಳಿದರೆ ಶಾಸ್ತ್ರಿಗಳು ಸುಮಾರು ಮೂವತ್ತು ವರ್ಷಗಳ ಹಿಂದಿನ ಯಾವುದೇ ಬೀಕಾಂ ಪದವೀಧರನ ಯೋಗ್ಯತೆಗೆ ತಕ್ಕಂತೆ ಬ್ಯಾಂಕ್ ಗುಮಾಸ್ತಗಿರಿಗೆ ಬೀಳುವವರಿದ್ದರು. ಇಂದಿರಾಗಾಂಧಿ ಯುಗದ ತುರ್ತು ಪರಿಸ್ಥಿತಿಗೆ ಜಗ್ಗದ ಈ ಪ್ರತಿಭಟನಾಕಾರ ಬ್ಯಾಂಕ್ ನೌಕರಿಯ ಕರೆ ಬರುವಾಗ ಜೈಲಿನೊಳಗಿದ್ದರಂತೆ. ಹೊರಬಂದಾಗ ಧೃತಿಕೊಟ್ಟದ್ದು ಯಕ್ಷಗಾನ; ದೊಡ್ದಪ್ಪ ಕುರಿಯ ವಿಠಲ ಶಾಸ್ತ್ರಿಗಳ ಗರಡಿಯ ಬಾಲಕಲಾವಿದ ಈಗ ವೃತ್ತಿಪರ ವೇಷಧಾರಿ. ಆಜಾನುಬಾಹು, ಗಡಸುಕಂಠದ ಗಣಪತಿ ಶಾಸ್ತ್ರಿಗೆ ನಾಟ್ಯಾಭಿನಯಗಳ, ವೇಷಭೂಷಣಗಳ ಒತ್ತು ಸಿಕ್ಕಿದಾಗ ಪುರಾಣಪುರುಷರೇ ರಂಗಕ್ಕವತರಿಸುತ್ತಿದ್ದರೆಂದು ಸೂರಿಕುಮೇರು ಗೋವಿಂದಭಟ್ಟರು (ಬೇರೇ ಸಂದರ್ಭದಲ್ಲಿ) ಪ್ರಶಸ್ತಿ ಕೊಟ್ಟದ್ದು ನೆನಪಿಗೆ ಬಂತು. ಆದರಿದು ಹೆಚ್ಚುಕಾಲ ಉಳಿದು ಬೆಳೆಯಲು ಅವಕಾಶವಿಲ್ಲದಂತೆ ಶಾಸ್ತ್ರಿಗಳ ಕಾಲಿಗೇ ಊನತೆ ಅಡರಿದ್ದು ವಿಪರ್ಯಾಸ.

ಮನೆತನದ ದಟ್ಟ ಪ್ರಭಾವಕ್ಕೆ ಬೆಲೆ ಬಂದದ್ದು ಇಲ್ಲೇ. ಕಟೀಲು ಮೇಳದ ಯಜಮಾನರು “ಶಾಸ್ತ್ರಿಗಳಿಗೆ ವೇಷ ಕಟ್ಟಿ ಕುಣಿಯಲಾಗದಿದ್ದರೇನು ಕುಳಿತು ಹಾಡಲಿ, ಕೇಳಿದವರನ್ನು ಕುಣಿಸಲಿ” ಎಂದು ಮೇಳದ ಮೂಕಿಯಲ್ಲಿ ಜಾಗಂಟೆ ಕೊಟ್ಟು ಕೂರಿಸಿಬಿಟ್ಟರಂತೆ. “ನನ್ನದು ಕಲಿಕೆಯಲ್ಲ ಕೇವಲ ಕೇಳಿಕೆ (ಆಲಿಸುವಿಕೆ). ಅಂದೂ ಇಂದೂ ನಾನು ಹಾಡುವುದು ಸಂಪ್ರದಾಯದ ಬಲದಿಂದಲ್ಲ, ಸನ್ನಿವೇಶದ ತೂಕದಿಂದ” ಎಂಬರ್ಥದ ಮಾತುಗಳನ್ನು ಶಾಸ್ತ್ರಿಗಳು ಸಂವಾದದ ಈ ಘಟ್ಟದಲ್ಲಿ ಆಡಿದ್ದು ಒಂದು ದಿಕ್ಕಿನಲ್ಲಿ ಅವರ ಪ್ರಾಮಾಣಿಕತೆಯನ್ನು ತೆರೆದಿಡುತ್ತದೆ. `ಯಾವುದೇ ಆಟ ಸೋಲಲು ಬಿಡದಿರುವ’ ವ್ರತಸ್ಥ ಶಾಸ್ತ್ರಿಗಳು, ಯಕ್ಷಗಾನ ಇನ್ನೂ ಜನಪದ ರೂಪದಲ್ಲೂ ಶಕ್ತವಾಗಿ ಉಳಿದಿದೆ ಎಂಬುದನ್ನೂ ಬಿಂಬಿಸುತ್ತಾರೆ. ಪ್ರಶ್ನ ಮಾಲಿಕೆಯಲ್ಲಿ ಕೊನೆಯದಾಗಿಯೇ ಬಂದರೂ ಶಾಸ್ತ್ರಿಗಳ ಅನುಭವದ ನೆಲೆಯಲ್ಲಿ ಯಕ್ಷಗಾನದ ಭವಿತವ್ಯದ ಬಗ್ಗೆ ಬಂದ ಮಾತುಗಳು ಕಹಿಯಾಗಿದ್ದವು. ಅತಿ-ವಾಣಿಜ್ಯೀಕರಣದ ಮಹಿಮೆಯಲ್ಲಿ ಇಂದು ಕಲೆ ಸಂಸ್ಕೃತಿಯ ಅಭಿವ್ಯಕ್ತಿಯಾಗಿ ಉಳಿದಿಲ್ಲ; ಅದೂ ಒಂದು ಸರಕು! ಬಲಿತ ಕಾಯಿ ಮಾಗಿ ಹಣ್ಣಾಗಿ ರುಚಿಸುವ ಕಾಲ ಸಂದುಹೋಯ್ತು. ಸ್ವತಃ ಮಿಡಿಗೇ ಉಪ್ಪುಕಾರವನ್ನೋ ಜೇನುಸಕ್ಕರೆಯನ್ನೋ ತಳಿದುಕೊಂಡು ನಾಲಗೆ ತಣಿಸುವ ಚಪಲ! ಹರಕೆ ಮೇಳಗಳೆಂದೇ ಖ್ಯಾತವಾದ ನಾಲ್ಕೂ ಕಟೀಲು ಮೇಳಗಳಿಗೆ ಇನ್ನು ಇಪ್ಪತ್ತೈದು ವರ್ಷ ಕಳೆದರೂ ಪೂರೈಸಲಾಗದಷ್ಟು ವೀಳ್ಯ ಕೊಟ್ಟವರು (ಪ್ರಾಯೋಜಕರು) ಇದ್ದಾರೆ. ಬಸ್ಸು, ರಂಗಮಂಚ, ದೀಪ, ಉಡುಪು, ತೊಡವುಗಳಿತ್ಯಾದಿಗೆ ಕೊಡುಗೈ ದಾನಿಗಳು ಎಷ್ಟೂ ಸಿಕ್ಕುತ್ತಾರೆ. ಆದರೆ ಸಾಂಪ್ರದಾಯಿಕ ಆಟ ಪ್ರದರ್ಶನಕ್ಕೆ ಅನಿವಾರ್ಯವಾದ ಕಲಾವಿದ ಮಾತ್ರ ಸಿಕ್ಕಲಾರ! ಕೋಡಂಗಿ ಕಟ್ಟುವೇಷ ಬಿಡಿ, ಈ ತಿರುಗಾಟದಲ್ಲಿ ಹೇಗೋ ಉಳಿದಿರುವ ಬಾಲಗೋಪಾಲ ವೇಷವೂ ಮುಂದಿನ ತಿರುಗಾಟಕ್ಕೆ ಕಷ್ಟಸಾಧ್ಯ, ಅಲ್ಲ ಅಸಾಧ್ಯ!

ಮಾತುಗಳ ನಡುವೆ, ಕೋರಿಕೆಯ ಮೇರೆಗೇ ಗಣಪತಿ ಶಾಸ್ತ್ರಿಗಳು ಹರಿಸುತ್ತಿದ್ದ ಹಾಡುಗಳು ಬ್ರಹ್ಮಕಪಾಲ ಪ್ರಸಂಗದ್ದು. `ಎಲ್ಲವೂ ಬ್ರಹ್ಮ ಸೃಷ್ಟಿ’ ಎಂಬಲ್ಲಿ ಬ್ರಹ್ಮನಿಗೆ ಶಾರದೆ ಮಗಳಾಗುವುದು ಸರಿ, ಪತ್ನಿಯಲ್ಲ ಎಂದು ಅಯಾಚಿತ ನ್ಯಾಯ ಹೇಳಲು ಬಂದ ಲಯಕರ್ತನಾದ ಈಶ್ವರ. ವಾಗ್ವಾದದಲ್ಲಿ ಸ್ಥಾನ, ಯೋಗ್ಯತೆಗಳ ಪ್ರಶ್ನೆ ಬಂದಾಗ ಹೆಚ್ಚುಗಾರಿಕೆಗಾಗಿ ಬ್ರಹ್ಮ ತನಗೇ ಹೆಚ್ಚಿನ ತಲೆಯನ್ನು ಮೊಳೆಯಿಸಿಕೊಳ್ಳುತ್ತಾನೆ. ಸವಾಲಿಗೆ ಸೆಡ್ಡುಹೊಡೆದು ಈಶ್ವರ ಆ ತಲೆಯನ್ನು ಚಿವುಟುತ್ತಾನೆ. ಪ್ರತ್ಯೇಕವಾದರೂ ಛಲಬಿಡದ ಬ್ರಹ್ಮಕಪಾಲ ಶಿವನ ಕೈಕಚ್ಚಿ, ಜೀವ ಹಿಂಡತೊಡಗುತ್ತದೆ. ಅದರ ಎಂದೂ ಹಿಂಗದ ಹಸಿವೆಗೆ ಅಶನ ಹುಡುಕುವ ನೆಪದಲ್ಲಿ ಈಶ್ವರ ಅಕ್ಷರಶಃ ಭಿಕಾರಿಯಾಗುತ್ತಾನೆ. ಶಿಕ್ಷೆಯ ವ್ಯಾಪ್ತಿಯನ್ನು ನಿರ್ಧರಿಸುವಂತೆಯೂ ಸೃಷ್ಟಿ ಲಯಗಳ ನಡುವಿನ ಸ್ಥಿತಿಕಾರತ್ವವನ್ನು ನೆನಪಿಸುವಂತೆಯೂ ವಿಷ್ಣು ಪ್ರವೇಶಿಸಿ ಪ್ರಸಂಗಕ್ಕೆ ಸುಖಾಂತ ತರುತ್ತಾನೆ. ಆದರೆ ಕಲಾರಂಗದ ವೇದಿಕೆಯಲ್ಲಿ ಇಬ್ಬರು ಸೃಷ್ಟಿಕರ್ತರು! ಭಾಗವತರ ಉಲಿ, ಪದ್ಯಾಣ ಶಂಕರನಾರಾಯಣ ಭಟ್ಟರು ಕೊಡುತ್ತಿದ್ದ ಮದ್ದಳೆಯ ನುಡಿ. ರಾಗಲಯಗಳ ಸೌಂದರ್ಯಕ್ಕೆ ಪ್ರೇಕ್ಷಕರೇನು ಸ್ವತಃ ಕಲಾವಿದರೇ ಪರಸ್ಪರ ಭಲೇ, ಭೇಷ್ ಕೊಟ್ಟುಕೊಳ್ಳುತ್ತಿದ್ದರು. ಮಾತಿನಲ್ಲೂ ರಾಗದಲ್ಲೂ ಮನಸೂರೆಗೊಂಡ ಕುರಿಯ ಗಣಪತಿ ಶಾಸ್ತ್ರಿಗಳ ಅನುಭವಕ್ಕೂ ಪುಸ್ತಕದ ರೂಪ ದಕ್ಕಬೇಕು ಎಂದನ್ನಿಸುವುದರೊಡನೆ ಅವರ ಇಷ್ಟದೇವತೆ, ಕೋಳ್ಯೂರಿನ ದೇವಿಯ ಮೇಲಿನ ಮಂಗಳ ಹಾಡಿದರು.