[ಅನಂತ ಮೈಸೂರಿನಲ್ಲಿರುವ ನನ್ನ ಎರಡನೇ ತಮ್ಮ. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್. ಹವ್ಯಾಸದಲ್ಲಿ ಯಕ್ಷಗಾನ ಇವನಿಗೂ ಅಂಟಿದ ಗೀಳು ಎಂಬುದಕ್ಕೇ ನಾನೀ ಮುಕ್ತ-ಪತ್ರವನ್ನು ಅವನಿಗುದ್ದೇಶಿಸಿ ಬರೆದಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಇಲ್ಲಿ ಮೂಡಿಸಿದ ಅಭಿಪ್ರಾಯಗಳಿಗೆ ಖಾಸಗಿತನದ ರಕ್ಷಣೆ ಬಯಸಿಲ್ಲ – ಇದು ಸಾರ್ವಜನಿಕ. ಕಲಾವಿದರ ವೈಯಕ್ತಿಕತೆಯನ್ನು ಬದಿಗಿಟ್ಟು ಕಲೆಯ ಉನ್ನತಿಗಾಗಿ ಪ್ರತಿಕ್ರಿಯೆಗಳನ್ನು ಕಾದಿದ್ದೇನೆ. ಮೈಸೂರಿನ ಕಲಾಪದ ಹೆಚ್ಚಿನ ವಿವರಗಳನ್ನೂ ತಿಳಿಯಲು ಕುತೂಹಲಿಯಾಗಿದ್ದೇನೆ. ಪೂರಕವಾಗಿ ಮಿತ್ರ ಮನೋಹರ ಉಪಾದ್ಯರು ಒದಗಿಸಿದ ಚಿತ್ರ ಹಾಗೂ ಚಲಚಿತ್ರ ಅಪೂರ್ವ, ಸುಂದರ ಹಾಗೂ ಸಂಗ್ರಾಹ್ಯ]

ಪ್ರಿಯ ಅನಂತಾ,

ಪ್ರಭಾಕರ ಜೋಶಿಯವರು ಮೊನ್ನೆ ಮೊನ್ನೆ ಮೈಸೂರಿನಿಂದ ಬಂದವರೇ ನನ್ನನ್ನು ಸಂಪರ್ಕಿಸಿದರು. ಬಹಳ ಸಂತೋಷದಿಂದ “ನಿಮ್ಮಪ್ಪನ ಕನಸಿನ ಸಾಕಾರ – ವೀಣೆ ಶೇಷಣ್ಣ ಭವನದಲ್ಲಿ, ಒಂದು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾಡಿ ಬಂದಿದ್ದೇನೆ. ಸಹಜವಾಗಿ ಮಾತಿನ ಮೊದಲಲ್ಲೇ ನಾರಾಯಣ್ರಾಯರಿಗೆ ನುಡಿನಮನ ಮಾಡಿದ್ದೆ. ಕಾರ್ಯಕ್ರಮ ಚಂದವಾಗಿತ್ತು.” ಮುಂದುವರಿದು ನೀನು ಸಿಕ್ಕಿದ್ದು, ತಾಳಮದ್ದಳೆಯಿದ್ದದ್ದು ಪ್ರಸ್ತಾಪಿಸಿ, ವಿಷಾದದೊಡನೆ ಹೇಳಿದರು “ಅಶೋಕರೇ ನೀವು ಹಿಂದೆಲ್ಲಾ ಅರ್ಥಗಾರಿಕೆ ಮುರಿದುಬಿದ್ದದ್ದು ಕೇಳಿರಬಹುದು, ಹಾಗೇ ಆಯ್ತು ಇಲ್ಲಿ. ಆಗಲಿಕ್ಕೆ ನನ್ನದೇ ತಪ್ಪು – ಸಂಘಟಕರು ತಾಳಮದ್ದಳೆಯೂ ಒಂದು ಆಗಬೇಕು ಎಂದು ಸೂಚಿಸಿದಾಗ ನಾನೇ ಗನಾ ಭಟ್ಟರ ಹೆಸರನ್ನು ಹೇಳಿ, ಸ್ಥಳೀಯ ಖ್ಯಾತನಾಮರನ್ನು ಬಿಡಬಾರದು ಎಂದಿದ್ದೆ.” ಪ್ರಸಂಗದ ವಿವರಗಳೇನೂ ಗೊತ್ತಿಲ್ಲದ ನಾನು ಕೆದಕಿ ಕೇಳಿದೆ. ಜೋಶಿ ಸೂಕ್ಷ್ಮವಾಗಿ ಹೇಳಿದರು “ರಾಮ ವಾಲಿಯರ ಸಂಭಾಷಣೆಯಲ್ಲಿ ವ್ಯಕ್ತಿ ನಿಂದನೆ ಮುಖ್ಯವಾಗಬಾರದಿತ್ತು. ಅದು ಭಟ್ಟರಿಂದ ಮಿತಿಮೀರಿ ಹರಿದಾಗ, ಔಚಿತ್ಯಮೀರಿದ ಸಾಹಿತ್ಯವೆಂದು ಸಭಿಕರೂ ಕೆರಳಿದಾಗ ಭಾಗವತರು ಸ್ಪಷ್ಟ ಮಾತುಗಳೊಡನೆ ತಡೆದು `ಕರದೊಳು ಪರಶು’ ಹಾಡಿಯೇಬಿಟ್ಟರು.” ಇದರ ಕುರಿತು ನಿನ್ನ ಅಂದರೆ ಪ್ರತ್ಯಕ್ಷದರ್ಶಿಯ ಮಾತುಗಳನ್ನು ಕಾದಿದ್ದೇನೆ.

ಮೊನ್ನೆ ಆದಿತ್ಯವಾರವನ್ನು (೨೯-೩-೨೦೦೯) ಕಿನ್ನಿಗೋಳಿಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಂಗಿಕಾಭಿನಯ ಅವಲೋಕನಕ್ಕೆ ಮೀಸಲಿಟ್ಟಿತ್ತು. ನನಗೆ ಆಮಂತ್ರಣ ಬಂದಕೂಡಲೇ ಮೊದಲು ನನ್ನ ಕಣ್ಣೋಡಿದ್ದು ಸಂಪನ್ಮೂಲ ವ್ಯಕ್ತಿ ಅಥವಾ ಸಂಸ್ಥೆ ಮತ್ತು ಪ್ರಾತ್ಯಕ್ಷಿಕೆಗಳ ವಿವರಗಳತ್ತ. ಎಲ್ಲಾ ಅನುದಾನಿತ ಸಂಸ್ಥೆಗಳು ಮಾಡುವಂತೆ ಇಲ್ಲೂ ಮುಖ್ಯ ಕೆಲಸವನ್ನು `ಉಳಿದ ಸಮಯಕ್ಕೆ ಸಂಕೋಚಗೊಳ್ಳುವಂತೆ’ ಭರ್ಜರಿ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ಕಾಣುತ್ತಿತ್ತು; ಬೆಳಿಗ್ಗೆ ಒಂಬತ್ತರಿಂದ ಹತ್ತು (ನಿಜದಲ್ಲಿ ನಡೆದಷ್ಟು ಹೊತ್ತು) ಮತ್ತು ಸಂಜೆ ನಾಲ್ಕರಿಂದ ಐದು (ಕೂತವನ ತಾಳ್ಮೆ ಖೈದು). ಎಡೆಯಲ್ಲಿ ಊಟದ ಬಿಡುವಿನೊಡನೆ ಐದು ಪ್ರಾತ್ಯಕ್ಷಿಕೆ ನಡೆಯಬೇಕಿತ್ತು.

ನಾವೇಳು ಜನ ಅಂದರೆ ಡಾ| ಮನೋಹರ ಉಪಾದ್ಯ (ವೃತ್ತಿಯಲ್ಲಿ ಗೋಡಾಕ್ಟರ್ರಾದರೂ ಆಸಕ್ತಿಯಲ್ಲಿ ಯಕ್ಷಗಾನ ವಿಪರೀತ ಹಚ್ಚಿಕೊಂಡ ಜೀವ), ಪ್ರೊ| ಮೊರಿಜಿರಿ (ಜಪಾನಿನ ಪ್ರದರ್ಶನ ಕಲೆಗಳ ತಜ್ಞ ಮತ್ತು ಭಾರತೀಯ ಅದರಲ್ಲೂ ಮುಖ್ಯವಾಗಿ ತೆಂಕು ತಿಟ್ಟಿನ ಯಕ್ಷಗಾನದ ಮೇಲೆ ಸಂಶೋಧನೆ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಮಾರ್ಗದರ್ಶಕ), ಉಚ್ಚಿಲದ ಸದಾಶಿವ ಮಾಸ್ಟರ್ (ವೃತ್ತಿಯಲ್ಲಿ ಸರಕಾರೀ ಪದವಿಪೂರ್ವ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು.

ತೆಂಕು ತಿಟ್ಟಿನ ಹವ್ಯಾಸಿಗಳ ಬಲುಖ್ಯಾತ ಕೂಟ ಕಲಾಗಂಗೋತ್ರಿಯ ಬೆನ್ನೆಲುಬು. ಇವರ ಕೂಟ ನಡೆಸಿಕೊಟ್ಟ ಯಕ್ಷ ಪ್ರದರ್ಶನಗಳು, ಗೋಷ್ಠಿಗಳು, ಪ್ರಕಟಿಸಿದ ಪುಸ್ತಕಗಳು ತೆಂಕು ತಿಟ್ಟು ಯಕ್ಷಗಾನಕ್ಕೆ ಅಧ್ಯಯನದ ಶಿಸ್ತನ್ನು ಗಟ್ಟಿಯಾಗಿ ರೂಪಿಸುವ ಪ್ರಯತ್ನಗಳು), ನಾನು, (ನನ್ನ ಹೆಂಡತಿ) ದೇವಕಿ, ಗೆಳೆಯ ಕೆ.ಎಲ್ ರೆಡ್ಡಿ ಮತ್ತವರ ಹೆಂಡತಿ ಜಾನಕಮ್ಮ ಉದ್ಘಾಟನೆ ತಪ್ಪಿಸಬೇಕೆಂದೇ ನಿಧಾನಕ್ಕೇ ಮಂಗಳೂರು ಬಿಟ್ಟೆವು. ಆದರೂ ಉದ್ಘಾಟಕ ಜೋಶಿಯವರ ಹೆಚ್ಚಿನ ಮಾತು ನಮಗೆ ದಕ್ಕಿತ್ತೋ ದಕ್ಕಿತ್ತು. ಎಂದಿನಂತೆ ಅಧ್ಯಯನ, ಅನುಭವ ಮತ್ತು ವಾಗ್ಮಿತೆಯ ಬೀಸು ಅಲ್ಲಿತ್ತು. ಅದು ಅಥವಾ ಅಂಥಾದ್ದೊಂದನ್ನು ಮಾತ್ರ ಆಶಯ ಅಥವಾ ಪ್ರಾಸ್ತಾವಿಕ ಭಾಷಣ ಎಂದು ಹೆಸರಿಸಿ ಇಟ್ಟುಕೊಂಡಿದ್ದರೆ ಸಾಕಿತ್ತು. ಔಪಚಾರಿಕ ಅಧ್ಯಕ್ಷ, ಮುಖ್ಯ ಅತಿಥಿ (ಉಳಿದವರು ಅಮುಖ್ಯರೇ?), ಸ್ಥಳೀಯ ಸಂಘಟಕ ದ್ವಯರು, ಗೋಷ್ಠಿಯ ನಿರ್ದೇಶಕರಾದಿ ವೇದಿಕೆಯ ಮೇಲೆ ಮೆರೆದದ್ದು, ಪ್ರಾರ್ಥನೆ, ಸ್ವಾಗತ, ಪರಿಚಯ, ಗೌರವಾರ್ಪಣೆ, ದೀಪ ಹಚ್ಚುವುದು, ಅಂತಿಮವಾಗಿ ಎಲ್ಲರೂ ಹೇಳಿದ್ದನ್ನೇ ಹೇಳುವ ಅವಕಾಶ ಎಲ್ಲವನ್ನು ಕಿತ್ತು ಹಾಕಬೇಕಿತ್ತು. (ಕಲಾಪಗಳ ಕೊನೆಯಲ್ಲಿದ್ದ ಸಮಾರೋಪ ಸಮಾರಂಭವೂ ಹೀಗೇ ಇದ್ದಿರಬೇಕು. ಸಹಿಸಿಕೊಳ್ಳುವ ದರ್ದು ನಮಗೇನೂ ಇರಲಿಲ್ಲವಾದ್ದರಿಂದ ಹರ್ದು ಬಿದ್ದೋಡಿದೆವು!) ಸಾರ್ವಜನಿಕ ಹಣ ವಿನಿಯೋಗದ ಆಶಯ, ಕಡತಗಳು ಮತ್ತು ಅನುದಾನಗಳು ಯಾವತ್ತೂ ಘನವಾಗಿಯೇ ಇರುತ್ತವೆ. ಆದರೆ ಹೆಚ್ಚಾಗಿ (ಇಲ್ಲೂ) ಮೆರೆಯುವುದು ನಿರುಪಯುಕ್ತ ಔಪಚಾರಿಕತೆಗಳು. ಎಲ್ಲಾ ಸಮಯವನ್ನು ಉದ್ದೇಶಿತ ಕಲಾಪಕ್ಕೆ ವಿನಿಯೋಗಿಸುವುದನ್ನು ನಾವು ರೂಢಿಸುವುದು ಯಾವಾಗ? ನೇರ ಪ್ರಾತ್ಯಕ್ಷಿಕೆಗಳನ್ನೇ ಅನಾವರಣಗೊಳಿಸುತ್ತೇನೆ.

1. ಕಥಕ್ಕಳಿ

ಕೇರಳ ಕಲಾಮಂಡಲಂ (ತ್ರಿಶೂರ್) ಇದರ ಕಲಾಧರನ್ ಬಳಗ ಸಮಯ ಮಿತಿಯನ್ನು ನೋಡಿಕೊಂಡು ಬಹಳ ಚೊಕ್ಕವಾಗಿ ಕಥಕ್ಕಳಿಯ ಆಂಗಿಕಾಭಿನಯದ ಪ್ರಾತ್ಯಕ್ಷಿಕೆಯನ್ನು ಕೊಟ್ಟಿತು. ಸಾಂಪ್ರದಾಯಿಕ ಪ್ರದರ್ಶನಗಳಲ್ಲಿ ಪೂರ್ಣ ವಾಚಿಕಾಭಿನಯವನ್ನು ಹಾಡುಗಾರಿಕೆಯಲ್ಲೇ ಅಭಿವ್ಯಕ್ತಿಸಲು ಎರಡು ಭಾಗವತರಿರುತ್ತಾರಂತೆ. ಇಲ್ಲಿ ಪ್ರಾತ್ಯಕ್ಷಿಕೆಯ ಸೀಮಿತ ಆವಶ್ಯಕತೆಗನುಗುಣವಾಗಿ ಒಬ್ಬರೆ ಕೊರತೆಯಾಗದಂತೆ ನಡೆಸಿಕೊಟ್ಟರು. ಪಕ್ಕ ವಾದ್ಯದಲ್ಲಿ ತಾಳ, ಚಂಡ (ಗಮನಿಸು, ಚಂಡೆ ಅಲ್ಲ), ಮದ್ದಳೆ. ಒಬ್ಬನೇ ನಟ ಸರಳ ದಿರುಸಿನಲ್ಲಿ ಪ್ರದರ್ಶನ ಭಾಗದ ವಿನಿಕೆ ನಡೆಸಿದ. ಹಸ್ತ ಮುದ್ರೆಗಳು ಕಥಕ್ಕಳಿಯಲ್ಲಿ ಯಾವುದೋ ವಸ್ತು, ಭಾವಗಳನ್ನು ಪ್ರತಿನಿಧಿಸುವ ಶಬ್ದಗಳಿದ್ದಂತೆ. ಮೊದಲು ಆ ತುಣುಕುಗಳನ್ನು ಪರಿಚಯಿಸಿದರು. ಮುಂದೆ ನವರಸಗಳನ್ನು ಅಭಿವ್ಯಕ್ತಿಸುವ ಮುಖಭಾವಗಳು. ಕೊನೆಯಲ್ಲಿ ಕೆಲವು ಪ್ರಸಂಗಗಳ ಸಣ್ಣ ಒಂದೆರಡು ಸನ್ನಿವೇಶವನ್ನು ಎತ್ತಿಕೊಂಡು, ಹೊಂದುವ ನೃತ್ತ ನೃತ್ಯಗಳ (ಮುಖಭಾವ, ದೇಹಭಾಷೆ ಸೇರಿದಂತೆ) ಜೋಡಣೆ ಮತ್ತು (ಬಣ್ಣ ತೊಡವುಗಳ ಪಾಕ ಮಾತ್ರ ಇಲ್ಲಿರಲಿಲ್ಲ) ಹಿನ್ನೆಲೆಯಿಂದ ಹೊಮ್ಮುವ ಭಾಗವತನ ಹಾಡುಗಾರಿಕೆಯಲ್ಲಿ ಜನಮನ ಸಂಪನ್ನಗೊಳಿಸಿದರು. ಒಂದೆರಡು ಪ್ರೇಕ್ಷಕರ ವಿಶೇಷ ಬೇಡಿಕೆಯ ತುಣುಕನ್ನೂ ಇವರು ಮರುಕ್ಷಣದಲ್ಲಿ ಕಿಸರು ಕೊಸರು ಇಲ್ಲದೆ ಒದಗಿಸಿದ್ದು ಕಲಾವಿದ ಬಳಗದ ಅಪಾರ ಸಿದ್ಧಿಯನ್ನು ಪ್ರಸಿದ್ಧಿಸಿತು. ಅಂದು ಈ ಪ್ರಾತ್ಯಕ್ಷಿಕೆ ಪ್ರೇಕ್ಷಕ ಚಿತ್ತಭಿತ್ತಿಯಲ್ಲಿ ಒತ್ತಿದ ಮುದ್ರೆ ಇಂದು ಕಥಕ್ಕಳಿಗೆ ಒದಗಿರುವ ವಿಶ್ವಮಾನ್ಯತೆಗೆ ಸಂದ ಕಿನ್ನಿಗೋಳಿಯ ಅನುಮೋದನೆ.

2. ಭೂತಾರಾಧನೆ

ಎರಡನೇ ಅವಧಿಗೆ ಕಲಾವಿದ ಬರಬೇಕಿತ್ತು ಆದರೆ ಸಂಘಟಕರು ಕರೆಸಿದ್ದು `ಪಾತ್ರಿಯನ್ನ್ರು’. ಆತನಿಗೂ ಸಂಘಟಕರಿಗೂ ಅಂತಿಮ ಕ್ಷಣದವರೆಗೂ ಭೂತಾರಾಧನೆ ಕೇವಲ ಆರಾಧನೆಯೇ ಪ್ರದರ್ಶನ ಕಲೆಯೂ ಹೌದೇ ಎಂಬ ಬಹು ಚರ್ಚಿತ ವಿಷಯ ಹೊಳೆದೇ ಇಲ್ಲವೆಂಬಂತಿದ್ದದ್ದು ಆಶ್ಚರ್ಯ. ಘೋಷಿತ ಪ್ರಬಂಧ ಸ್ಪರ್ಧೆಗೆ ಹೋದ ಅಭ್ಯರ್ಥಿಯೊಬ್ಬ “ನಾನು ಇದುವರೆಗೂ ಪ್ರವಾಸ ಹೋಗಿಲ್ಲವಾದ್ದರಿಂದ (`ಪ್ರವಾಸ ಕಥನ’ ಸ್ಪರ್ಧೆಯ ವಿಷಯ) ಏನೂ ಬರೆಯುತ್ತಿಲ್ಲ” ಎಂದಂತೆಯೇ ಇದನ್ನು ಮುಗಿಸಬೇಕಾಯ್ತು! ಇದು ಬರಿಯ ಭೂತಪಾತ್ರಿಯ ಕೊರತೆಯಲ್ಲ ಎಂಬುದಕ್ಕೆ ಮುಂದಿನ ಮೂರೂ ಪ್ರಾತ್ಯಕ್ಷಿಕೆಗಳು ಸಾಕ್ಷಿಯಾದ್ದು ವಿಷಾದನೀಯ. ಒಟ್ಟು ಕಲಾವಿದರ ಮತ್ತು ಅವರು ಪ್ರತಿನಿಧಿಸಿದ ಕಲಾಪ್ರಕಾರಗಳ ಯೋಗ್ಯತೆ ಮತ್ತು ಅನನ್ಯತೆಯ ಬಗ್ಗೆ ನಮಗ್ಯಾರಿಗೂ ಸಂದೇಹಗಳಿಲ್ಲ. ಕಲಾಪದ ಆಶಯವನ್ನು ಸಂಘಟನೆ ಸಾಕಷ್ಟು ಮುಂದಾಗಿ ಕಲಾವಿದರಿಗೆ ಸ್ಪಷ್ಟಗೊಳಿಸಿದ್ದು ಸಾಲದು ಎನ್ನುವುದು ಮುಖ್ಯ ದೋಷ. ಇನ್ನು ಎಲ್ಲ ಕಲಾವಿದರೂ (ಕಥಕ್ಕಳಿಯೊಂದನ್ನುಳಿದು) ಇದೇ ಭಾಷಾ ಮತ್ತು (ಕರಾವಳಿ ಕರ್ನಾಟಕ) ಭೂವಲಯದವರಾಗಿ ವಿಶೇಷ ವೀಳ್ಯ ಬಂದಾಗ ಸಂವಹನದ ಕೊರತೆ ಕಾಡಲು ಸಾಧ್ಯವಿರಲಿಲ್ಲ. ಗೃಹಕೃತ್ಯ ಮಾಡದೇ ಏನು ಮಾಡಿದರೂ ನಡೆದೀತು ಎನ್ನುವ ಉಡಾಫೆಯ ಅಂಶಗಳು ಇನ್ನಷ್ಟು ದೊಡ್ಡ ದೋಷ. ಎರಡೂ ದೋಷಗಳನ್ನು ಮೀರಿ ನಿಂತ ಕಥಕ್ಕಳಿಯ ಯಶಸ್ಸಿನ ಪ್ರಭೆ ನಮ್ಮವರಿಗೂ ದಾರಿ ತೋರಲಿ ಎಂದು ಆಶಿಸುವುದಷ್ಟೇ ಉಳಿಯಿತು.

3. ನೃತ್ಯಪ್ರಕಾರಗಳಲ್ಲಿ.. .. ..

ವಿದ್ಯಾ ಶಿಮ್ಲಡ್ಕ ಬಳಗ `ಭರತನಾಟ್ಯ’ವನ್ನು ಮುಖ್ಯವಾಗಿರಿಸಿಕೊಂಡು ಪ್ರಬಂಧಮಂಡನೆ ಮತ್ತು ಪ್ರಾತ್ಯಕ್ಷಿಕೆಯನ್ನು ಕೊಡಲು ಸಜ್ಜಾಗಿದ್ದರು. ಸಮಯದ ಮಿತಿ ನೋಡಿಕೊಂಡು ವಿಷಯದ ಪರಿಮಿತಿ ನಿರ್ಧರಿಸಬೇಕಾದವರು ಯಾರು ಎಂಬ ಗೊಂದಲ ಪ್ರದರ್ಶನದ ಕೊನೆಯಲ್ಲಿ ವಿದ್ಯಾ ಅವರ ಮಾತಿನಲ್ಲೇ ಸ್ಪಷ್ಟವಾಯ್ತು. ಭರತ, ನಂದಿಕೇಶ್ವರ, ಪದ್ಮಾಸುಬ್ರಹ್ಮಣ್ಯಂ, ಸುಂದರಿ ಸಂತಾನಂ ಮುಂತಾದವರ ವಾದ ಪ್ರತಿವಾದಗಳ ಸಂತೆಯಲ್ಲಿ ದಾರಿ ಬಿಡಿಸಿಕೊಳ್ಳುತ್ತಿದ್ದ ವಿದ್ಯಾರನ್ನು ನಿರ್ವಹಣೆಯ ಹೊಣೆ ಹೊತ್ತ ಎಂ.ಎಲ್ ಸಾಮಗರು ಹೇಗೋ ಪ್ರಾತ್ಯಕ್ಷಿಕೆಯ ವೇದಿಕೆಗೆ `ಹಾರಿಸಿ’ ತಂದರು. ಆದರೂ ಪ್ರಾತ್ಯಕ್ಷಿಕೆಯ ಸ್ವಾರಸ್ಯ ವಿಕಸಿಸುವ ಮೊದಲು ಪ್ರೇಕ್ಷಕವರ್ಗದ ಓರ್ವರಿಂದ (ವೃತ್ತಿ ಮಾತ್ಸರ್ಯ?) ಮತ್ತೆ ಹಳೆಯ ಜಾಡಿಗೆ ನೂಕಲ್ಪಟ್ಟು ಕಲಾಪ ಅಪರಿಪೂರ್ಣವಾಯ್ತು. (ಆ ಪ್ರೇಕ್ಷಕ ಮಹಾಶಯರಿಗೆ ವಿಮರ್ಶಕನ ವಿನಯದ ಬಗ್ಗೆ ಪ್ರತ್ಯೇಕ ಪಾಠ ಅವಶ್ಯ ಆಗಬೇಕು.) ಕೊನೆಯಲ್ಲಿ ಉತ್ತರ ಕೊಡುವ ಗಡಿಬಿಡಿಯಲ್ಲಿ ಪ್ರದರ್ಶನಕ್ಕೆ ಕರೆತಂದ ಗುರುವೇ ಶಿಷ್ಯೆಯರ ಕಲಾಪದ ಬಗ್ಗೆ ಸಂಶಯ ವ್ಯಕ್ತಪಡಿಸುವಂತಾದದ್ದು ಅನಪೇಕ್ಷಿತ ಬೆಳವಣಿಗೆ.

4. ತೆಂಕು ತಿಟ್ಟು

ಕೆ. ಗೋವಿಂದ ಭಟ್ಟರು (ಜೋಶಿಯವರು ಮೊದಲೇ ಹೇಳಿದಂತೆ) ಇಂದು ತೆಂಕು ತಿಟ್ಟಿನಲ್ಲಿ ವೃತ್ತಿಪರರಾಗಿರುವವರಲ್ಲಿ ಅದ್ವಿತೀಯ (ಮತ್ತು ಹಿರಿಯನೂ ಆದ) ಕಲಾವಿದ. ಆದರೆ ಇತರ ರಂಗಪ್ರಕಾರಗಳೊಡನೆ ತುಲನಾತ್ಮಕವಾಗಿ ಅವಲೋಕನ ನಡೆಯುತ್ತಿದ್ದ ಪ್ರಾತ್ಯಕ್ಷಿಕೆಯ ರಂಗದಲ್ಲಿ ಇವರದು ದೊಡ್ಡ ಸೋಲು. ಧರ್ಮಸ್ಥಳದಲ್ಲಿ ಯಕ್ಷ-ಶಿಕ್ಷಕನಾಗಿಯೂ ದುಡಿದ ಅನುಭವದ ಭಟ್ಟರು “ನಾನು ಯಾವುದೇ ಶಾಸ್ತ್ರದ ಉಲ್ಲೇಖ, ವಿವರಣೆಗಳ ಸಹಿತ ಪ್ರಾತ್ಯಕ್ಷಿಕೆ ಕೊಡಲಾರೆ. ಕೆಲವು ಪದ್ಯಗಳಿಗೆ ನನ್ನ ಕುಣಿತ, ಅಭಿನಯದ ಅಳವಡಿಕೆಯನ್ನಷ್ಟೇ ಪ್ರದರ್ಶಿಸುತ್ತೇನೆ. ಬೇಕಾದ್ದನ್ನು ಗ್ರಹಿಸಿಕೊಳ್ಳಿ” ಎಂದು ತೊಡಗಿದ್ದು ಅಭಾಸಕರ. ಮುಂದುವರಿದು “ಸುಮಾರು ಒಂದು ಗಂಟೆಯ ಅವಧಿಯುದ್ದಕ್ಕೆ ಇಪ್ಪತ್ತು ವರ್ಷದ ಹಿಂದೆಯಾದರೆ ಕುಣಿಯುತ್ತಿದ್ದೆ. ಇಂದು ಬಚ್ಚಿದರೆ ಐದಾರು ಮಿನಿಟು ಸುಮ್ಮನೆ ಕುಳಿತೇನು, ಸಹಿಸಿಕೊಳ್ಳಿ” ಎಂದವರೇ ಬಲಿಪ ಭಾಗವತರು ಕೊಡುತ್ತ ಬಂದ ವಿಭಿನ್ನ ಪದ್ಯಗಳಿಗೆ ಅವಿರತ ಕುಣಿಯತೊಡಗಿದರು.

ಗೋವಿಂದ ಭಟ್ಟರ ಪ್ರಾಯಕ್ಕೆ ಅಗತ್ಯವಾದ ವಿಶ್ರಾಂತಿ ಸಿಗುವಂತೆಯೂ ಪ್ರದರ್ಶನದ ಯಾಂತ್ರಿಕತೆಯನ್ನು ನಿವಾರಿಸುವಂತೆಯೂ ಸಾಮಗರು ಮಧ್ಯೆ ಪ್ರವೇಶಿಸಿ, “ನೀವು ಪ್ರದರ್ಶಿಸಲಿರುವ ಪ್ರತಿ ತುಣುಕಿನ ಮೊದಲು ಅಲ್ಲಿ ವ್ಯಕ್ತವಾಗುವ ರಸ, ಆಂಗಿಕಗಳ ಬಗ್ಗೆಯಾದರೂ ನಾಲ್ಕು ಮಾತು ಹೇಳಿ, ವಿರಾಮದಲ್ಲಿ ಕುಣಿದರೆ ಒಳ್ಳೆಯದಿತ್ತು” ಎಂದರು. ಭಟ್ಟರು ಸರಿಯಾಗಿಯೇ ಬಿಡುವನ್ನೇನೋ ಬಳಸಿಕೊಂಡರು. ಆದರೆ ಭಾವ ನಿಲುವುಗಳ ವಿವರಣೆ ಕೊಡಬೇಕಾದಲ್ಲಿ ಪ್ರಸಂಗ, ಸನ್ನಿವೇಶವನ್ನಷ್ಟೇ ಹೇಳುತ್ತ ಮುಂದುವರಿದರು. ಮಾಯಾ ಶೂರ್ಪನಖೆಯ ತುಣುಕನ್ನು ಮುಗಿಸಿದಾಗ ಪ್ರೇಕ್ಷಕ ಸಾಲಿನಲ್ಲಿದ್ದ ಕೋಳ್ಯೂರು ರಾಮಚಂದ್ರರಾಯರು ಒಮ್ಮೆಗೆ ಸವಾಲೊಂದನ್ನು ಎಸೆದರು. “ಸಮರೇಖೆಯಂತೆ ತೋರುವ ಮಾಯಾ ಅಜಮುಖಿಯಿಂದ ಮಾಯಾ ಶೂರ್ಪನಖೆಯನ್ನು ಹೇಗೆ ಭಿನ್ನವಾಗಿಸುತ್ತೀರಿ?” ಸಣ್ಣ ಕೊಸರಾಟ, ಹುಸಿಮುನಿಸಿನ ಬೆನ್ನಲ್ಲಿ ಕೋಳ್ಯೂರರೇ ಉತ್ತರ ಕೊಟ್ಟದ್ದಲ್ಲದೆ ಅಭಿನಯಿಸಿಯೂ ತೋರಿಸಿದ್ದು ಸ್ವಾಗತಾರ್ಹ ಬದಲಾವಣೆ ಆಯ್ತು. (ಒಮ್ಮೆಗೆ ಕೆಲವರಾದರೂ ಕೋಳ್ಯೂರರಿಗೆ `ನನ್ನನ್ಯಾಕೆ ಕರೆಯಲಿಲ್ಲ ಎನ್ನುವ ಹೊಟ್ಟೆಕಿಚ್ಚು’ ಎಂದು ಗ್ರಹಿಸಿರಬಹುದು. ಆದರೆ ಭಟ್ಟರು ತಮ್ಮ ಆತ್ಮಕಥಾನಕದಲ್ಲೂ ಹೇಳಿಕೊಂಡಿದ್ದಾರೆ ಇಲ್ಲೂ ಕೊನೆಯಲ್ಲಿ “ಬೇಸರ ಎಂತದ್ದು, ಕೋಳ್ಯೂರು ನನಗೆ ಯಕ್ಷನರ್ತನವನ್ನು ಕಲಿಸಿದ ಗುರು” ಎಂದದ್ದು ಮೋಡ ಕವಿದ ವಾತಾವರಣದಲ್ಲಿ ಅಪ್ಯಾಯಮಾನವಾದ ತಂಗಾಳಿಯೇ ಆಯ್ತು) ಹಸಿವೆ ನೀಗಲು ಬಂದ ಶೂರ್ಪನಖೆ ರಾಮದರ್ಶನದಿಂದ ಕಾಮಾತುರಳಾಗುತ್ತಾಳೆ. ಅವಳ ಚರ್ಯೆಗಳಲ್ಲಿ ರಾಮನ ಸಂಸ್ಕಾರಕ್ಕೆ ವಿಪರೀತವಾಗದಿರುವ ಎಚ್ಚರ ಇರಬೇಕು. ಅದೇ ಅಜಮುಖಿಯಾದರೋ ಕಾಮೈಕ ಧ್ಯಾನದಲ್ಲಿ ಒಟ್ಟಾರೆ ಪುರುಷನೊಬ್ಬನ ತೀವ್ರ ಹುಡುಕಾಟದಲ್ಲಿದ್ದಾಗ ಬಂದ ದೂರ್ವಾಸನ ಮೇಲೆ ಅಕ್ಷರಶಃ ಬೀಳುತ್ತಾಳೆ.

ಕೋಳ್ಯೂರು ಅಭಿನಯಕ್ಕೆ ನಿಂತಾಗ ಅಜಮುಖಿಗೆ ನಾರಾಯಣ ಭಾಗವತರು ಬಲಿಪಶೈಲಿಯಲ್ಲೇ ಪದ್ಯ ಸುರುಮಾಡಿದ್ದರು. ಪ್ರಾತ್ಯಕ್ಷಿಕೆ ಮತ್ತು ಸವಾಲಿಗುತ್ತರ ಕೊಡುವ ಎಚ್ಚರಗಳೆರಡನ್ನು ವಹಿಸಿಕೊಂಡ ಕೊಳ್ಯೂರು ಠಪ್ಪ ತಡೆದರು. ಸ್ವತಃ ಹಾಡಿ, ಕೈತಟ್ಟಿ ತಾಳಹಾಕಿ `ನಿಮ್ಮದು ಶೂರ್ಪನಖೆಗಾದೀತು, ನನ್ನ ಅಜಮುಖಿಗೆ ಇದೂ’ ಎಂದು ಭಾಗವತರನ್ನು ತಿದ್ದಿದ್ದು ನಾನು ಉಲ್ಲೇಖಿಸಲೇಬೇಕು. ಆಗ ಸಾಮಗರು ಗೋವಿಂದ ಭಟ್ಟರನ್ನು ಕೆಣಕಿದರು “ಹೇಗೆ, ನಿಮ್ಮದು ಭಾಗವತಿಕೆಗೆ ತಕ್ಕ ಕುಣಿತವೋ ಅಥವಾ ನಿಮ್ಮ ರಸಭಾವಾನುಸಾರಿಯಾಗಿ ಭಾಗವತಿಕೆ ಹರಿಯಬೇಕೋ?” ಗೋವಿಂದ ಭಟ್ಟರು ನಿಜದಲ್ಲಿ ಎಷ್ಟು ದೊಡ್ಡವರಿದ್ದರೂ ಸಾರ್ವಜನಿಕದ ಪ್ರತಿರೋಧಗಳಿಗೆ ಗೊಣಗಿಯಾರೇ ವಿನಾ ಎಂದೂ ವಿರೋಧಿಸಿದವರಲ್ಲ. ಯಕ್ಷಗಾನದಲ್ಲಿ ಭಾಗವತ ಪ್ರಥಮ ವೇಷಧಾರಿ ಎನ್ನುವ ವಾದವನ್ನು ಪುರಸ್ಕರಿಸುವಂತೆ “ನನ್ನದೇನಿದ್ದರೂ ಭಾಗವತಾನುಸಾರಿ” ಎಂದು ಮುಗಿಸಿಬಿಟ್ಟರು.

[ಅನಂತಾ ನಾನು ಗೋವಿಂದ ಭಟ್ಟರ ಆತ್ಮಕಥೆಗೆ ಬರೆದ ಟಿಪ್ಪಣಿ ನಿನಗೆ ನೆನಪಿರಬಹುದು. ಇಲ್ಲದಿದ್ದರೆ ಇದೇ ಬ್ಲಾಗಿನ ಹಿಂದಿನ ಪುಟಗಳಲ್ಲಿದೆ, ನೋಡಿಕೋ. ಕಿನ್ನಿಗೋಳಿಯಲ್ಲಿ ವೇದಿಕೆಯ ಕೆಳಗೆ ಹೀಗೇ ಸಿಕ್ಕಿದಾಗ ನಾನೇ ಮೇಲೆ ಬಿದ್ದು ಹೇಳಿದೆ “ನನ್ನ ವಿಮರ್ಶೆ ಸಿಕ್ಕಿದ ಮೇಲೆ ನಿಮ್ಮ ದರ್ಶನ, ಉತ್ತರ ಇಲ್ಲ! ನಿಮಗೆ ಬೇಸರವಾಯ್ತೋ ಏನೋ.” Typical ಗೋವಿಂದ ಭಟ್ ಶೈಲಿಯಲ್ಲಿ “ಛೆ, ನನಗೆ ಬೇಸರವಾಗುವುದು ಎಂದೇ ಇಲ್ಲ. ಉತ್ತರ ಬರೆದಿದ್ದೇನೆ ಮಾರಾಯ್ರೇ ನಿಮಗೆ ತಲಪಿಸುವುದು ಆಗಲೇ ಇಲ್ಲ” ಎಂದು ಆತ್ಮೀಯವಾಗಿಯೇ ಹೇಳಿದರು. ಅದೇ ಭಾವ ಪ್ರಾತ್ಯಕ್ಷಿಕೆಯ ಕೊನೆಯಲ್ಲೂ ನೀನು ಗಮನಿಸಬಹುದು]

5. ಬಡಗುತಿಟ್ಟು

ನಾಲ್ಕೂ ಪ್ರಾತ್ಯಕ್ಷಿಕೆಗಳ ನಿರ್ವಹಣೆಯನ್ನು ಪ್ರದರ್ಶನಕ್ಕಾಗಲೀ ಪ್ರೇಕ್ಷಕರಿಗಾಗಲೀ ಹೇರಿಕೆಯಾಗದಂತೆ ನಡೆಸಿದವರು ಎಂ.ಎಲ್ ಸಾಮಗ. ಆದರೆ ಈ ಕೊನೆಯ ಕೆರೆಮನೆ ಶಿವಾನಂದ ಹೆಗಡೆ ಮತ್ತು ಬಳಗದ ಕೆಲಸಕ್ಕೆ ಕೆಜಿ ನಾರಾಯಣರ ನಿರ್ವಹಣೆ ಹೊರೆಯೇ ಆಯ್ತು. ಅದರಲ್ಲೂ ಅವರು ಪ್ರದರ್ಶನದ ಕೊನೆಯಲ್ಲಿ ಭಾರೀ ಮುನ್ನೆಚ್ಚರಿಕೆಯ ಮಾತುಗಳ ಆವರಣ ಕಟ್ಟಿ (“ಈಗ ನಾನೊಂದು statement ಮಾಡಲಿಕ್ಕಿದ್ದೇನೆ! ಸಭೆಯಲ್ಲಿರುವ ಗಣ್ಯಾತಿಗಣ್ಯರು ನನ್ನನ್ನು ವಿರೋಧಿಸಬಹುದು, ವೇದಿಕೆ ಬಿಟ್ಟಿಳಿದಾಗ ಜೋಶಿಯವರು ನನ್ನ ಮೇಲೆ ಧಾಳಿ ಮಾಡಬಹುದು. ಆದರೂ.. .. ..”) `ಇಂದು ಯಕ್ಷಗಾನದಲ್ಲಿ ಕಲಾವಿದರಿಲ್ಲ’ ಎಂದು ಹೇಳಿದ್ದು ದೊಡ್ಡ ಠುಸ್ ಪಟಾಕಿ! ಆಂಗಿಕಾಭಿನಯ ಅವಲೋಕನದ, ಒಂದು ಪ್ರಕಾರದ, ಕೇವಲ ನಿರೂಪಕನ ನೆಲೆಯಲ್ಲಿ ಇದು ಶುದ್ಧ ಅನೌಚಿತ್ಯ. ವೈಯಕ್ತಿಕವಾಗಿ ನಾರಾಯಣ ಏನು, ಅವರ ಇಡೀ ಕುಟುಂಬವೇ ನಾಟಕ, ಯಕ್ಷಗಾನಗಳಲ್ಲಿ ಶ್ರದ್ಧೆಯಿಂದ ಪೂರ್ಣ ತೊಡಗಿಕೊಂಡವರು ಎನ್ನುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಅಂಥವರು ಒಂದು ಹೇಳಿಕೆ ಮಾಡುವುದೇ ಇದ್ದರೆ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭದಲ್ಲಿ ಅವಕಾಶ ಕೋರಿದರೆ ಖಂಡಿತಾ ದಕ್ಕಬೇಕು. ಅವಕಾಶ ಕೊಡಲಿಲ್ಲ ಎಂದಾದರೆ ಪ್ರತಿಭಟನೆ ತೋರಿ ಅಭಿಪ್ರಾಯ ಸ್ವಾತಂತ್ರ್ಯವನ್ನು ಸ್ಥಾಪಿಸಬಹುದಿತ್ತು. ಶಿವಾನಂದ ಹೆಗಡೆ ಪ್ರತ್ಯೇಕ ನಿರೂಪಣೆಗಿಳಿದರು (ಒಂದು ಪ್ರಾತ್ಯಕ್ಷಿಕೆಗೆ ಎರಡು ನಿರ್ವಹಣೆ?).

ಒಂದು ನಿಟ್ಟಿನಲ್ಲಿ ವಿದ್ಯಾ ಶಿಮ್ಲಡ್ಕರ ಹಾಗೇ ವಾದಗಳ ಮಂಡನೆಯಲ್ಲಿ ಕಾಲಕಳೆದರು. ಪ್ರದರ್ಶನಕ್ಕೆ ಇಳಿದಾಗ ಗೋವಿಂದಭಟ್ಟರು ಹಿಡಿದ ಮಾರ್ಗವನ್ನೇ ಅನುಸರಿಸಿ ಒಂದು ಪುಟ್ಟ ಪ್ರಸಂಗವನ್ನೇ (ವಾಚಿಕಾಭಿನಯವೊಂದನ್ನು ಬಿಟ್ಟು ವೇಶಭೂಷಣಸಹಿತ) ಕೊಟ್ಟದ್ದು ನಮಗೆ ನಿರಾಶಾದಾಯಕವೇ ಆಯ್ತು. ಐವತ್ತಕ್ಕೂ ಮಿಕ್ಕು ವರ್ಷಗಳ ಕೆರೆಮನೆ ಮೇಳದ ಶೈಲಿ, ಅಖಂಡ ನಾಲ್ಕನೇ ತಲೆಮಾರಿಗೂ ಹರಿಯುತ್ತಿರುವ ಯಕ್ಷವಾಹಿನಿಯ ಸಾರಾಂಶವನ್ನು ಪ್ರಾತ್ಯಕ್ಷಿಕೆಯಲ್ಲಿ ಅವಲೋಕಿಸಲು ಕಾತರರಾಗಿದ್ದೆವು. ಆದರೆ ಅವರು ಜಿ.ಆರ್.ಪಾಂಡೇಶ್ವರರ ಒಂದು ಪುಟ್ಟ ಪ್ರಸಂಗವನ್ನೇ (ದಿ| ಶಂಭು ಹೆಗಡೆಯವರ ನಿರ್ದೇಶನದ್ದಂತೆ) ಪ್ರಸ್ತುತಪಡಿಸಿದ್ದು ತೀರಾ ಅನಪೇಕ್ಷಿತ. ಎಲ್ಲ ಮುಗಿಯಿತೆನ್ನುವಾಗ ಶಿವಾನಂದ ಹೆಗಡೆ “ವಾಸ್ತವದಲ್ಲಿ ನಾನು ಪ್ರಾತ್ಯಕ್ಷಿಕೆಗಳನ್ನು ಕೊಡಬೇಕು ಎಂದೇ ಗೆಜ್ಜೆ ಗಟ್ಟಿ ಸಜ್ಜಾಗಿದ್ದೆ” ಎಂದು ಸಂಘಟಕರನ್ನು ಪರೋಕ್ಷವಾಗಿ ಹೆಚ್ಚುವರಿ ಸಮಯಕ್ಕೆ ಮಣಿಸಿ, ಅಭಿನಯಿಸಿದಾಗ ಎತ್ತನ್ನು ಗಾಡಿಯ ಹಿಂದೆ ಕಟ್ಟಿದ ಹಾಗಾಯ್ತು!

ಅಕಾಡೆಮಿ ಮಧ್ಯಾಹ್ನಕ್ಕೆ ಎಲ್ಲರಿಗೂ ಸರಳ ಆದರೆ ಅಗತ್ಯದ ಊಟದ ವ್ಯವಸ್ಠೆ ಮಾಡಿತ್ತು. ಆದರೆ ಬಡಿಸುವಲ್ಲಿ ಅವ್ಯವಸ್ಥೆ ನೋಡು. ಉಪ್ಪು, ಉಪ್ಪಿನ್ಕಾಯಿಯಿಂದ ತೊಡಗಿ ಪಲ್ಯ, ಗೊಜ್ಜು, ಮೆಣಸ್ಕಾಯಿ, ಅನ್ನ, ಸಾರು ಸರಿಯಾಗೇ ಬಂತು. ಕೈಖಾಲಿ ಬಿಟ್ಟು ಉಪಪರಿಕರಗಳ ವಿಚಾರಣೆ ಅಥವಾ ಮೇಲೋಗರ ಕಾದವರಿಗೆ ಗರಿಮುರಿ ಹಪ್ಪಳ ಬಂತು. ಮತ್ತೆಲ್ಲೋ ಧರ್ಮರಾಯರು ಘೋಷಿಸಿದಂತೆ ಕೇಳಿತು “ಸಾರೂಊಊ,” ಸಣ್ಣ ಗುನುಗಿನಲ್ಲಿ “ಸಾಂಬಾರು ಬೇಡ ಎಂದಿದ್ದರು ಸರೂ.” ಅನ್ನದ ವಿಚಾರಣೆಯಲ್ಲಿ ಕೊರತೆಯಿರಲಿಲ್ಲ, ಹಿಂಬಾಲಿಸಿದ ಮಜ್ಜಿಗೆ ಮುಕ್ತಾಯಕ್ಕೂ ಆಯ್ತು, ಕುಡಿಯುವುದಕ್ಕೂ ಒದಗಿತು.

ಒಬ್ಬಿಬ್ಬರು ಇನ್ನೇನು ಎದ್ದರು ಎನ್ನುವಾಗ “ಕೂರಿ, ಕೂರಿ ಪಾಯ್ಸ ಪಾಯ್ಸಾ” – ಬಿಟ್ಟಿ ತಿನ್ನುವವರಿಗೆ ಬಿಕ್ಕುವ ಸ್ವಾತಂತ್ರ್ಯವೆಲ್ಲಿ (ದಾನ ಪದೆಯುವವರು ಹಲ್ಲೆಣಿಸಬಹುದೇ?). ಸರಿ ಅದನ್ನೂ ಮುಗಿಸಿ, ಸ್ವತಃ ಅಕಾಡೆಮಿಯ ಸದಸ್ಯರೂ ಆದ ಮುರಳಿ ಕಡೇಕಾರ್, ಕರ್ಕಿ ಕೃಷ್ಣ ಹಾಸ್ಯಗಾರರಂಥವರೇ ಕೈತೊಳೆಯಲು ಹೋಗುತ್ತಿರುವಾಗ ಮತ್ತೆ ಎಳೆದು ತಂದು ಕೂರಿಸಿ ಜಿಲೇಬಿ ಬಡಿಸಿದರು. ಯಾರೋ ಹಾಸ್ಯಕ್ಕೆ “ಇನ್ನೇನಾದರೂ ಉಂಟೋ (ದಕ್ಷಿಣೆ?) ಕೈ ತೊಳೆಯಲು ಹೋಗಬೇಕೋ” ಎನ್ನುವಾಗ ಪಲ್ಯ, ಗೊಜ್ಜು, ಮೆಣಸ್ಕಾಯಿಗಳ ಮೆರವಣಿಗೆ ಹೊರಟದ್ದನ್ನು ನಾನು ಹೇಳಿದರೆ ನೀನೇನು ನನಗೇ ನಂಬಲಾಗುತ್ತಿಲ್ಲ! ಊಟ ದಿನದ ವಿನಿಕೆಯ ಪ್ರತಿಬಿಂಬ – ಉದ್ದೇಶ, ಪಾಕ ಚೆನ್ನಾಗಿಯೇ ಇತ್ತು. ಬಡಿಸಿದ್ದರಲ್ಲೇ ಎಲ್ಲೋ ಐಬು! ಗಾದೆ ಮಾತು: ಮನೆಯ ಸಂಸ್ಕೃತಿಯನ್ನು ಊಟದಲ್ಲಿ ನೋಡು, ಎಷ್ಟು ನಿಜ.

ಪ್ರಸ್ತುತ ಕಲಾಪಗಳ ಕೆಲವು ಕಿರು ಚಲಚಿತ್ರಗಳನ್ನು (ಎಲ್ಲ ಕಥಕ್ಕಳಿ ಪ್ರಾತ್ಯಕ್ಷಿಕೆಯ – ಶೃಂಗಾರ, ಹಸ್ತಮುದ್ರಿಕಾ, ನವರಸ, ರಾಜನಿಲುವು, ಸಿಂಹ, ಸಮಾನ ಸ್ಕಂದರಿಗೆ ಸ್ವಾಗತ, ಹಿರಿಯರ ಸ್ವಾಗತ, ಹಿರಿಯರ ವಿದಾಯ, ಆನೆ, ತಾವರೆ ಅರಳುವುದು ತುಣುಕುಗಳು) ಡಾ| ಮನೋಹರ ಉಪಾದ್ಯರ ಕೆಳಕಾಣಿಸಿದ ವೀಡಿಯೋ ದಾಖಲೆಗಳಲ್ಲಿ ಕಾಣಬಹುದು.

ಬ್ಲಾಗಿನ ಮೊದಲಲ್ಲಿ ಕೊಟ್ಟ ಕಥಕ್ಕಳಿಯ ಆರು ರಸಗಳ ಅಭಿವ್ಯಕ್ತಿಯ ಚಿತ್ರ ಚಿತ್ರ ಡಾ| ಕೃಷ್ಣ ಮೋಹನ್ ಪ್ರಭುರವರದ್ದು. ಉಳಿದ ಚಿತ್ರಗಳು ಹಾಗೂ ಕೆಳಕಾಣಿಸಿದ ವಿಡಿಯೋ ದಾಖಲೀಕರಣಗಳು ಡಾ| ಮನೋಹರ ಉಪಾದ್ಯರದ್ದು.