(ಸೂರಿಕುಮೇರು ಗೋವಿಂದ ಭಟ್ಟರ ಆತ್ಮಕಥೆಗೊಂದು ಅರೆಖಾಸಗಿ ಅನಿಸಿಕೆ) ಪ್ರಿಯ ಗೋವಿಂದ ಭಟ್ಟರೇ ನಾನು ವ್ಯಾಪಾರೀ ಅಗತ್ಯದಲ್ಲಿ ಯಕ್ಷೋಪಾಸನೆ ಕೊಳ್ಳುತ್ತಿದ್ದರೂ ನೀವು ವೈಯಕ್ತಿಕವಾಗಿ ನನಗೆ ಒಂದು ಗೌರವಪ್ರತಿ ಕೊಡುವ ಉತ್ಸಾಹ ತೋರಿಸಿದಿರಿ. ನಾನು ಪ್ರತಿ ಒಪ್ಪಿಸಿಕೊಳ್ಳದಿದ್ದರೂ ನೀವು “ನನ್ನಿಂದ ಗೌರವ ಪ್ರತಿ ಪಡೆದ ಅಥವಾ ಪುಸ್ತಕ ಕೊಂಡ ಎಲ್ಲರಿಗೆ ನಾನು ಹೇಳುವುದಿಲ್ಲ. ಆದರೆ ನೀವು ಮಾತ್ರ ಪುಸ್ತಕ ಓದಿ ನಿಮ್ಮ ಅಭಿಪ್ರಾಯ ತಿಳಿಸಬೇಕು” ಎಂದು ಹೇಳಿಹೋದಿರಿ. ಹಾಗಾಗಿ ಮುಂದಿನ ಸಾಲುಗಳನ್ನು ಓದುವ ಕಷ್ಟ ಕೊಡುತ್ತಿದ್ದೇನೆ. ಕಡುಬಡತನ, `ನಮ್ಮವರು’ ಎನ್ನಬಹುದಾದವರಿಂದಲೂ (ಅದೇ ಹೆಚ್ಚೇನೋ!) ಆದ ದ್ರೋಹಗಳು, ಯಾವುದೇ ಆದರ್ಶ ಕಟ್ಟಿಕೊಡುವವರಿಲ್ಲದೆಯೂ ನೀವು ರೂಪಿಸಿಕೊಂಡ ಜೀವನ, ಹಳೆಯ ಕಹಿಗಳ್ಯಾವವೂ ನಿಮ್ಮ ವರ್ತಮಾನವನ್ನು ಕಲುಷಿತಗೊಳಿಸದಂಥ ನಿಮ್ಮ ಸಂಯಮ ಹೀಗೆ ಪಟ್ಟಿ ಮಾಡ ಹೋದರೆ ಮೊದಲೇ ನಿಮ್ಮ ಬಗ್ಗೆ ಇದ್ದ ಪ್ರೀತಿ, ಗೌರವ ಅಪಾರವಾಗುತ್ತದೆ. ಹೀಗೆ ಇನ್ನಷ್ಟು ವಿವರಗಳಲ್ಲಿ ನಿಮ್ಮನ್ನೇ ನಿಮಗೆ ತೋರಿಸುವ ಬದಲು ಸದ್ಯ ನನಗೆ ಕಾಣಿಸಿದ ಭಿನ್ನಮತವನ್ನಷ್ಟೇ ಒಕ್ಕಣಿಸುತ್ತೇನೆ.

ಇದೇ ಜುಲೈ ಆಗಸ್ಟ್ ಸುಮಾರಿಗೆ ಹೀಗೇ ಸಿಕ್ಕ ಗೆಳೆಯ ಹಿರಣ್ಯ ವೆಂಕಟೇಶ್ವರ ಭಟ್ಟ “ಗೋವಿಂದ ಭಟ್ಟರ ಆತ್ಮಕಥೆ ಬರುತ್ತಿದೆ” ಎಂದು ಘೋಷಿಸಿದರು. ನಿಮ್ಮ ಸರ್ವಾಂಗ ಸುಂದರ ಕಲಾಗಾರಿಕೆ, ಲೋಕಾನುಭವ. ಪ್ರಾಯದ ಹಿರಿತನ, ಇನ್ನೂ ರಂಗದಲ್ಲಿ (ತಾಳಮದ್ದಳೆಯೂ ಸೇರಿದಂತೆ) ಎಲ್ಲರೂ ಬಯಸುವಂತೆ ಉಳಿಸಿಕೊಂಡಿರುವ ಚಟುಲತೆ ಮತ್ತೆ ಎಲ್ಲಕ್ಕೂ ಮಿಗಿಲಾಗಿ ನಿಮ್ಮ ವ್ಯಕ್ತಿತ್ವದ ನಿಗರ್ವ, ಸರಳ, ಸ್ನೇಹಶೀಲತೆಗಳ ಮುನ್ನೆಲೆಯಲ್ಲಿ ನನಗೆ ಆ ಸುದ್ದಿ ನಿಜಕ್ಕೂ ರೋಮಾಂಚನ ತಂದಿತ್ತು. ಕೇವಲ ಮಾತನ್ನೇ ಬಂಡವಾಳವಾಗಿಟ್ಟುಕೊಂಡು `ಯಕ್ಷಗಾನದಲ್ಲಿ’ ಅಚ್ಚಳಿಯದ ಮಧುರ ಅನುಭವಗಳನ್ನು ಕಟ್ಟಿಕೊಟ್ಟ ಕುಂಬಳೆಯವರ ಆತ್ಮಕಥೆಯ ಬೆನ್ನಿಗೇ ಬರಲಿದ್ದ `ಯಕ್ಷೋಪಾಸನೆ’ಯ ಬಗ್ಗೆ ನನಗೆ ಬಹುತರವಾದ ನಿರೀಕ್ಷೆಗಳೂ ಬೆಳೆದಿದ್ದವು. ಆದರೆ ಪುಸ್ತಕ ಓದಿದ ಮೇಲೆ ದಕ್ಕಿದ್ದು ಇಂಗ್ಲಿಷಿನ ನುಡಿಗಟ್ಟು – tip of the iceberg, ಅಷ್ಟೆ! (ಅರ್ಥಾತ್ ಮಂಜುಗಡ್ಡೆಯ ಕೊಡಿ. ಧ್ರುವ ಪ್ರದೇಶಗಳಲ್ಲಿ ಕೋಟ್ಯಂತರ ಟನ್ನು ತೂಕ, ಗಾತ್ರದ ಮಂಜುಗಡ್ಡೆಗಳು ಮುಖ್ಯ ಭೂಮಿಯಿಂದ ಕಳಚಿಕೊಂಡು ಸಮುದ್ರದಲ್ಲಿ ತೇಲಿಬರುತ್ತವಂತೆ. ಪ್ರಾಕೃತಿಕವಾಗಿ ಗಡ್ಡೆಯ ಬಹ್ವಂಶ ನೀರಿನಲ್ಲಿ ಮುಳುಗಿಕೊಂಡಿದ್ದು, ಬರಿಯ ಸಣ್ಣ ಅಂಶ ಮಾತ್ರ ನೀರಮೇಲೆ ಕಾಣಿಸಿಕೊಳ್ಳುತ್ತದಂತೆ. ಅನುಭವವಿಲ್ಲದ ನಾವಿಕ ಅಂಥ ಕೊಡಿಯನ್ನು ಉಪೇಕ್ಷಿಸಿ, ಸಮೀಪಿಸಿ ಅಪಾಯಕ್ಕೀಡಾಗಿ ಈ ನುಡಿಗಟ್ಟು ಹುಟ್ಟಿಕೊಂಡಿದೆ).

೧) ನನಗೆ ಮೊದಲು ಕಣ್ಣಿಗೆ ಕಟ್ಟುವ `ಗೋವಿಂದ ಭಟ್ಟ’ ಸುಮಾರು ಮೂವತ್ತು ವರ್ಷಗಳ ಹಿಂದೆ ಮಂಗಳೂರು ಪುರಭವನದ ಮಳೆಗಾಲದ ಪ್ರದರ್ಶನದ ಹನೂಮಂತ. ಪ್ರಚಾರಪತ್ರದ ಸೂಚನೆಯಂತೆ ಹನುಮಂತನ ಸಾಂಪ್ರದಾಯಿಕ ತೆರೆಮರೆ ಕುಣಿತವನ್ನು ನೀವು ಪ್ರದರ್ಶಿಸಿದ್ದಿರಿ. ಹೇನು ಹೆಕ್ಕುವ ಮತ್ತು ತಿನ್ನುವ, ಪಕ್ಕೆ ತುರಿಸುವ, ಹಲ್ಲು ಕಿಸಿದು ಬೆದರಿಸುವ ಬಾಳೆತೋಟದ ಕಪಿತ್ವ ನನಗೆ ಸರಿ ಕಾಣಲಿಲ್ಲ. ನಾನು ಉದಯವಾಣಿಗೊಂದು ಪತ್ರ ಬರೆದು ಟೀಕಿಸಿದೆ. ಪ್ರತಿಕ್ರಿಯೆ ಯಾರಿಂದಲೂ ಬಂದಿರಲಿಲ್ಲ. ಆ ದಿನಗಳಲ್ಲೊಮ್ಮೆ ನೀವು ನನ್ನಂಗಡಿಗೆ ಯಾವುದೋ ಪುಸ್ತಕ ಕೇಳಿಕೊಂಡು ಬಂದಾಗ ಹುಂಬತನದಲ್ಲಿ ನೆನಪಿಸಿದೆ. ತಿರುಗಾಟದಲ್ಲಿದ್ದ ನೀವು ಪತ್ರಿಕೆಯನ್ನೇ ನೋಡಿರಲಿಲ್ಲವೆಂದು ತಿಳಿದು ನಿರಾಶೆಯಾಯ್ತು. ಛಲಬಿಡದೆ ನನ್ನಲ್ಲಿದ್ದ ಪ್ರತಿಯನ್ನು ತೋರಿಸಿದಾಗ, ಓದಿ ದಿವ್ಯ ನಿರ್ಲಕ್ಷ್ಯದಲ್ಲಿ “ನಾನು ಅಷ್ಟೇ ತೋರಿಸಿದೆ. ವಿವೇಚನೆ ಬಳಸದಿದ್ದರೆ ಹನುಮಂತ ತನ್ನದೇ ಹೇಲು ತಿನ್ನುವುದನ್ನು ತೋರಿಸಬೇಕಾಗುತ್ತಿತ್ತು” ಎಂದು ನನ್ನನ್ನು ಅಪ್ರತಿಭನನ್ನಾಗಿಸಿ ನಡೆದಿರಿ. ಅದನ್ನು ಬಿಟ್ಟ ವಿವೇಚನೆ ಇದನ್ನೂ ಯಾಕೆ ಬಿಡಲಿಲ್ಲ? ಶೌರ್ಯದ ಸಂಕೇತಗಳಾದ ಬಂಡೆ ಹೊತ್ತು ಹಾಕುವುದು, ದೀರ್ಘ ಗಗನಗಮನದ ಬಲ ಪ್ರದರ್ಶನಾದಿಗಳನ್ನು ಪರಿಷ್ಕರಿಸಿ ವಿಸ್ತರಿಸಬಹುದಿತ್ತಲ್ಲಾ? ಎಂಬಿತ್ಯಾದಿ ಸಂದೇಹಗಳನ್ನು ನುಂಗಿಕೊಂಡೆ.

೨) ಯಾವತ್ತೋ ಎಲ್ಲೋ ನಿಮ್ಮ ಮೇಳದ ಚೌಕಿಯಲ್ಲಿ ನಾನು ಯಾರದೋ ಬಣ್ಣಗಾರಿಕೆ ನೋಡುತ್ತಾ ನಿಂತಿದ್ದಾಗ ನೀವು ಏನೋ ವೇಷದಲ್ಲಿ ರಂಗಕಲಾಪ ಮುಗಿಸಿ ಬಂದಿದ್ದಿರಿ. ಆಗ ಯಾರೋ ಅಂದಿನ ಪತ್ರಿಕೆಯಲ್ಲಿ ಇನ್ಯಾರೋ (ನಾನಲ್ಲ) ಬರೆದಿದ್ದ ಯಕ್ಷ-ವಿಮರ್ಶಾ ವಾಕ್ಯವನ್ನು ಉದ್ಧರಿಸುತ್ತಾ `ಗೋವಿಂದ ಭಟ್ಟರೂ ಒಳ್ಳೆ ಮಾತಾಡಿದರು’ ಎಂದಾಗ ನೀವು ಅಸಹನೆಯಲ್ಲಿ ಗೊಣಗಿದ್ದು ನನ್ನ ಕಿವಿಗೂ ಬಿತ್ತು – “ಗೋವಿಂದ ಭಟ್ಟ ಒಳ್ಳೇ ಕುಣಿದ, ಒಳ್ಳೇ ಅಭಿನಯ ಕೊಟ್ಟ, ಎಂದ್ಯಾಕೆ ಇವರಿಗೆಲ್ಲಾ ಕಾಣುವುದಿಲ್ಲ”. ರಂಗಕರ್ಮದಲ್ಲಿ ನಗೆಪಾಟಲಾಗುವ ಅಂಗಚೇಷ್ಟೆಗಳಿದ್ದೂ ಮೆರೆಯುತ್ತಿದ್ದ ರಾ.ಸಾಮಗರು, ಕುಣಿತ ಮಣಿತಗಳ ಸಾಧ್ಯತೆಯನ್ನೂ ನಿರಾಕರಿಸಿ ಜನಪ್ರಿಯರಾಗಿದ್ದ ತೆಕ್ಕಟ್ಟೆ ಕುಂಬಳೆಯವರು, ಎಷ್ಟೋ ಬಾರಿ ತಲೆನೋವು ಹಿಡಿಸುವಷ್ಟು ಏಕವ್ಯಕ್ತಿತ್ವವನ್ನು ಮೇಳದೊಳಗೂ ಸಾಧಿಸಿ ಸಹಕಲಾವಿದರು ಬಿಡಿ, ಸಾಮಾನ್ಯ ಪ್ರೇಕ್ಷಕರನ್ನು ಅದುಮಿಡುತ್ತಿದ್ದ ಶೇಣಿಯಂಥವರನ್ನೆಲ್ಲ `ವಿಮರ್ಶಕರು’ ಅಳೆಯುತ್ತಿದ್ದದ್ದು ಮಾತಿನ ಅಡಿಗೋಲಿನಲ್ಲಿ. ಸರ್ವಾಂಗ ಸೌಂದರ್ಯಕ್ಕೆ ಶ್ರಮಿಸಿದ ನಿಮ್ಮನ್ನೂ ಅದೇ ಕೋಲಿನಲ್ಲಿ ಅಳೆದು ಹನ್ನೆರಡಕ್ಕೆ ಒಂದೆರಡು ಇಂಚು ಕಡಿಮೆ ಎನ್ನುವಂತೆ ಹೊಗಳಿದ್ದು ನಿಜಕ್ಕೂ ಅವಮಾನಕರ ಎಂದು ನನಗೂ ಆಗ ಹೊಳೆಯಿತು!

೩) ಬನ್ನಂಜೆ ಸಂಜೀವ ಸುವರ್ಣರ ಬಳಗ ಬಡಗುತಿಟ್ಟಿನ ಪೂರ್ವರಂಗದ ಪುನರುಜ್ಜೀವನ ಪರಿಷ್ಕಾರವಾಗಿ ನಡೆಸುತ್ತಿದ್ದದ್ದು ಡಾ| ಮನೋಹರ ಉಪಾದ್ಯ ಮತ್ತು ನನ್ನ ಗಮನದಲ್ಲಿತ್ತು. ಅದು ಉಡುಪಿಯ ಹೊರಗೂ ಸಾರ್ವಜನಿಕ ವೇದಿಕೆಯಲ್ಲಿ ಪ್ರಚುರಗೊಳಿಸಬೇಕಾದ ವಿಷಯ ಎನ್ನುವುದು ನಮ್ಮ ಪ್ರಜ್ಞೆಯಲ್ಲಿತ್ತು. ಇದೇ ಸಮಯಕ್ಕೆ ನನ್ನ ಮಗ – ಅಭಯಸಿಂಹ, ಪುಣೆಯಲ್ಲಿ ಚಲನಚಿತ್ರದ ನಿರ್ದೇಶಕತ್ವದ ಸ್ನಾತಕೋತ್ತರ ಅಧ್ಯಯನ (ಮೂರು ವರ್ಷದ ಅವಧಿಯದ್ದು) ನಡೆಸುತ್ತಿದ್ದ. ಪ್ರಜ್ಞೆ ವಾಸ್ತವಗಳ ಸಂಗಮವಾಗಿ ನಾವು ಮಂಗಳೂರಿನಲ್ಲಿ ಉಡುಪಿಯ ಯಕ್ಷಗಾನ ಕೇಂದ್ರದ `ಪೂರ್ವರಂಗ ಮತ್ತು ಯಕ್ಷೋತ್ತಮ ಕಾಳಗ’ದ ಸಾರ್ವಜನಿಕ ಪ್ರದರ್ಶನ ಮತ್ತು ವಿಡಿಯೋ ದಾಖಲೀಕರಣವನ್ನು ನಡೆಸಿದೆವು. ಅಭಯನ ನಿರ್ದೇಶನ ಕೇವಲ ದಾಖಲೀಕರಣಕ್ಕೆ ಸೀಮಿತವಿತ್ತು. ಬೇರೆ ಬೇರೆ ಕೋನದಲ್ಲಿ ಮೂರು ಸ್ಥಿರ ಮತ್ತು ಒಂದು ಜಂಗಮ ಕ್ಯಾಮರಾವಿದ್ದರೂ ಟೇಪಿನ ಖರ್ಚು ಮತ್ತು ಚಿತ್ರೀಕರಣದ ಉತ್ತರಕ್ರಿಯೆಗಳ ವೆಚ್ಚ ನಮ್ಮ ಕೈ ಮೀರದಿರಲು ಸ್ಥಳೀಯವಾಗಿಯೇ ಸಂಕಲನ ಕ್ರಿಯೆಯನ್ನೂ ನಡೆಸುತ್ತ ದಾಖಲಿಸಿದೆವಾದರೂ ಅದು ಐದು ಸೀಡಿಗಳಷ್ಟು ದೀರ್ಘವಾಯ್ತು.

ಆ ಪೂರ್ವರಂಗದ ಸೀಡೀಗಳು ಪ್ರಕಟವಾದ ಕೆಲವೇ ವಾರಗಳಲ್ಲಿ ಪ್ರತಿಸ್ಪರ್ಧೆಯೋ ಎಂಬಂತೆ ನೀವು ತೆಂಕು ತಿಟ್ಟಿನ ಪೂರ್ವರಂಗವನ್ನು ದಾಖಲಿಸಿದ್ದು ಮೊದಲು ಕೇಳಿ, ಅನಂತರ ನೋಡಿ ವಿಷಾದವಾಯ್ತು. ತಿಟ್ಟುಗಳಲ್ಲಿ ಶ್ರೇಷ್ಠ, ಕನಿಷ್ಠ ಎಂಬ ಭಾವ ನಮಗಿರಲಿಲ್ಲ. ಅಲ್ಲಿ ಸಮರ್ಥ ಗುರು ಇದ್ದಾನೆ, (ಕನಿಷ್ಠ ಆರೇಳು ತಿಂಗಳು ಅವರಲ್ಲೇ) ಪಳಗಿದ ಶಿಷ್ಯವೃಂದವಿದೆ, ಕಲಾತ್ಮಕವಾಗಿ ದಾಖಲಿಸಲು ನಮ್ಮಲ್ಲಿ ತಂತ್ರಜ್ಞನಿದ್ದಾನೆ ಮತ್ತು ಯಾರ ಹಂಗೂ ಪ್ರತಿಫಲಾಪೇಕ್ಷೆಯೂ ಇಲ್ಲದೆ ತಯಾರಿಸಲು ನಮ್ಮಿಬ್ಬರಲ್ಲಿ ಸ್ವಲ್ಪ ಹಣವಿದ್ದದ್ದಷ್ಟೆ ನಮಗಿದ್ದ ಪ್ರೇರಣೆ. (ಮುಂದೊಂದು ದಿನ ಹೀಗೇ ಕಳೆದು ಹೋಗುತ್ತಿರುವ ಕರ್ಕಿಶೈಲಿಯ ದಾಖಲೀಕರಣವನ್ನು ನಾವು ಇನ್ನೂ ಹೆಚ್ಚಿನ ತಯಾರಿ ಮತ್ತು ವೆಚ್ಚದೊಡನೆ ಮಾಡಿದ್ದೂ ಉಂಟು.) ನೀವು ಅವನ್ನು ಪರಿಗಣಿಸದೆ ಎಲ್ಲೆಲ್ಲೋ ವೃತ್ತಿರಂಗದಲ್ಲಿ ಕಳೆದುಹೋದವರನ್ನು ಒಟ್ಟುಮಾಡಿ, ಸಾರ್ವಜನಿಕ ಪ್ರದರ್ಶನದ ನಿಕಷಕ್ಕೊಡ್ಡದೆ ಎಲ್ಲೋ ಸಪುರ ಕೋಣೆಯಲ್ಲಿ ಒಂದೇ ಕ್ಯಾಮರಾದಲ್ಲಿ ದಾಖಲಾತಿ ನಡೆಸಿಬಿಟ್ಟಿರಿ. ಸಹಜವಾಗಿ ಅದು ನೀವು ಉದ್ದೇಶಪಡದೇ ಅನುಭವೀ ಯಕ್ಷಗುರುವೂ ಅಪ್ರತಿಮ ಕಲಾವಿದನೂ ಆಗಿದ್ದ ನಿಮ್ಮ ಯೋಜನೆ ಮತ್ತು ಕಾರ್ಯನಿರ್ವಹಣೆ ಎಂಬ ಹೆಸರಿನಲ್ಲಿ ವಿತರಣೆಗೊಳ್ಳುವ ಕಳಪೆ ಮಾಲಾಯ್ತು! ಒಟ್ಟಾರೆ ನಿಮ್ಮ ನಿಜ ಯೋಗ್ಯತೆಯನ್ನೂ ಮತ್ತು ತೆಂಕು ತಿಟ್ಟಿನ ಗುಣವನ್ನೂ ತಪ್ಪು ಬೆಳಕಿನಲ್ಲಿ ದಾಖಲಿಸಿದ ಹಾಗಾಯ್ತು.

ಹೀಗೇ ಸ್ವಯಂಸ್ಪಷ್ಟವಾಗುವ, ಕಾಲಾನುಕ್ರಮ ವಿಭಿನ್ನ ಆಖ್ಯಾಯಿಕೆಗಳ ಸರಣಿಯಲ್ಲಿ ಕಲಾವಿದ ಗೋವಿಂದ ಭಟ್ಟ ವಿಕಸಿಸಿದ್ದನ್ನು ನೋಡಲು ಬಯಸಿದ್ದೆ. ಮೇಲೆ ಹೇಳಿದ ಮೂರೂ ಘಟನೆಗಳಲ್ಲಿ ನನ್ನದು ಏಕಪಕ್ಷೀಯ ನಿರ್ಧಾರಗಳು ಮತ್ತು ತಪ್ಪೂ ಇರಬಹುದು. ಆದರೆ ಇಂಥವುಗಳು ಕೊಡುವ ಆಪ್ತ ಚಿತ್ರವನ್ನು ಯಾವ ಅಭಿನಂದನಾ ಪತ್ರವೂ (ಅಥವಾ ಆಪಾದನಾ ಪಟ್ಟಿಯೂ) ಕೊಡಲಾರದು. `ಅನುಭವ ಸಿಹಿಯಲ್ಲ, ಅದರ ನೆನಪೇ ಸವಿ’ ಎನ್ನುವುದು ಇದಕ್ಕೇ ಅಲ್ಲವೇ. ಇದು ಸಹಜವಾಗಿ ಹಾಸುಹೊಕ್ಕಾಗಿ ವೈಯಕ್ತಿಕ ಜೀವನವನ್ನು ಹೇಳಿಯೇ ಹೇಳುತ್ತಿತ್ತು. ಪರೋಕ್ಷ ಮಾರ್ಗದಲ್ಲಿ ಕಾಣಿಸಿದರೂ ಕಲೆ ಮತ್ತು ಕಲಾವಿದತನವನ್ನು ಸ್ಪಷ್ಟಗೊಳಿಸುತ್ತಾ ಹೋಗುತ್ತಿತ್ತು. ಪುಸ್ತಕದಲ್ಲಿ ನೀವು ಮೇಳ ಸೇರುವವರೆಗೆ ದೈನಂದಿನ ಕಲಾಪಗಳಲ್ಲಿ ಒಂದು ಮಟ್ಟಿಗೆ ಸರಿಯಾಗಿಯೇ ವಿಶಿಷ್ಟವಾದ್ದನ್ನು ಎತ್ತಿ ಹೇಳುತ್ತಾ ಹೋಗಿದ್ದೀರಿ. ಮತ್ತೆ ಮುಖ್ಯವಾಗಿ ಧರ್ಮಸ್ಥಳ ಮೇಳದಲ್ಲಿ ಗಟ್ಟಿಯಾದಲ್ಲಿಗೆ ಕೇವಲ ಪಟ್ಟಿ ಮಾಡಲು ತೊಡಗಿದ್ದು ನನಗೆ ಸರಿ ಕಾಣಲಿಲ್ಲ. ನಿಮ್ಮ ಬಾಲ್ಯದ ಮತ್ತೂ ಸಾಂಸಾರಿಕ ಜೀವನದ ವಿವರಗಳನ್ನು ಹೇಳುವಲ್ಲಿ ನಿಮಗಿಲ್ಲದ ದಾಕ್ಷಿಣ್ಯ ವೃತ್ತಿರಂಗದ ಮಾತಿಗೆ ಬಂದಾಗ ತುಂಬಾ ಸತಾಯಿಸಿರುವಂತೆ ಕಾಣುತ್ತದೆ. `ಊರೂರಿನ ದೂಳು ತಿನ್ನುವವನಿಗೆ ಮನೆಯಲ್ಲಿ ಜಾಗವಿಲ್ಲ’ ಎಂದು ಭಾವನಿಂದ ನೂಕಿಸಿಕೊಂಡರೂ ಕ್ಷೀಣವಾಗಿ ಅಕ್ಕನ ಬಿಕ್ಕು ಕೇಳುವ ಸೂಕ್ಷ್ಮಜ್ಞ, ವೃತ್ತಿರಂಗದ ವಿಚಾರದಲ್ಲಿ ಒಮ್ಮೆಗೆ ವೈಯಕ್ತಿಕತೆ ಕಳೆದುಕೊಂಡು ಕೇವಲ ಮೇಳದ ವಕ್ತಾರನಂತೆಯೋ ವರದಿಗಾರನ ಪಾತ್ರದಲ್ಲಿ ಬಂದಂತೆಯೋ ಕಾಣುತ್ತದೆ. (ಜಪಾನ್ ಪ್ರವಾಸ ಕಥನ, ಧರ್ಮಸ್ಥಳ ಮೇಳಕ್ಕೆ ಸಂಬಂಧವಿಲ್ಲದ್ದು ಚೊಕ್ಕ ಚಂದವಿದೆ) ಬಾಹುಬಲಿ ಯಾತ್ರೆಯೊಡನೆ ಮೇಳದ ಕಲಾಪ (ನಿಮ್ಮ ಪಾತ್ರ) ಚೆನ್ನಾಗಿಯೇ ಬಂದಿದೆ. ಆದರೆ ಧರ್ಮಸ್ಥಳ ಮೇಳದ ನಲ್ವತ್ತು ವರ್ಷಗಳ ನಿಮ್ಮ ಕಸುಬುದಾರಿಕೆಯಲ್ಲಿ ಉಲ್ಲೇಖನಾರ್ಹ ಅನುಭವ ಇಷ್ಟು ಸ್ವಲ್ಪವೇ ಎಂದು ಆಶ್ಚರ್ಯ ಉಳಿಯುತ್ತದೆ.

ಅಧ್ಯಾಯ ೧೫ರ ಸಂದರ್ಶನ, ಅನುಬಂಧವಾಗಿ ಬಂದ ಕಲಾವಿದನ ಅಂತರಂಗ ಮತ್ತು ಕೆಲವು ನೆನಪುಗಳು, ಅವು ರೂಪುಗೊಂಡ ಘಟನೆಗಳ ಚಿತ್ರಣದೊಂದಿಗೆ ಆತ್ಮವೃತ್ತಾಂತದಲ್ಲಿ ಸೇರಿಹೋಗಬೇಕಿತ್ತು. ಅವನ್ನು ಸೂತ್ರ ರೂಪದಲ್ಲಿ ಗ್ರಹಿಸುವುದೋ ಅಥವಾ ಅರ್ಥ ಕಟ್ಟುವುದೋ ಓದುಗನ ಮನೋಭೂಮಿಕೆಯಲ್ಲಿ ಆಗಬೇಕಿತ್ತು. ಅಧ್ಯಾಯ ೧೩ರ ಆವಿಷ್ಕಾರಿಕ ಪ್ರಸಂಗಗಳು, ೧೪ರ ಎಂತು ಬಣ್ಣಿಪೆ, ೧೭ರ ಯಕ್ಷ ಹಿನ್ನೋಟ ಮುನ್ನೋಟ, ಇವುಗಳು ನೀವು ಬರೆಯಬಹುದಾದ ಪ್ರತ್ಯೇಕ ಶಾಸ್ತ್ರಗ್ರಂಥವೇನಾದರೂ ಇದ್ದರೆ ಅದರ ಅಧ್ಯಾಯಗಳಾಗಲು ಅಡ್ಡಿಯಿಲ್ಲ. ಆತ್ಮಕಥೆಯಲ್ಲಿ ಪ್ರತ್ಯೇಕವಾಗಿ ಬರುವುದು ಸರಿಯಲ್ಲ. ನನ್ನ ಮಿತಿಯಲ್ಲಿ ವ್ಯಕ್ತಿಚಿತ್ರ ಹೇಗಿರಬೇಕಿತ್ತು ಎನ್ನುವುದಕ್ಕೆ ಉದಾಹರಣೆಯಾಗಿಯೂ (ನಿಮ್ಮ ಜೀವನ ಸಾಹಸದಲ್ಲಿ ಏನೂ ಅಲ್ಲದ ನನ್ನನುಭವದ) ಮೇಲೆ ಮೂರು ತುಣುಕುಗಳಲ್ಲಿ ನನ್ನ `ಗೋವಿಂದ ಭಟ್ಟರನ್ನು’ ತೆರೆದಿಟ್ಟಿದ್ದೇನೆ ಎಂಬುದನ್ನು ಗಮನಿಸಿ. ಆ ಉದಾಹರಣೆಯ ಗ್ರಹಿಕೆಗಳೆಲ್ಲ ಏಕಪಕ್ಷೀಯವೂ ತಪ್ಪೂ ಇರಬಹುದು. ಅವನ್ನು ನಿಮ್ಮಲ್ಲಿ ತೆರೆದಿಟ್ಟು ಸರಿಪಡಿಸಿಕೊಳ್ಳಲು ಎಂದೂ ಅವಕಾಶ ಒದಗಲೇ ಇಲ್ಲ. ಕುಂಬಳೆಯವರಿಗೆ ಡೈರಿ ಬರೆಯುವ ಅಭ್ಯಾಸವಿದ್ದದ್ದು ತುಂಬಾ ಸಹಾಯವಾಯ್ತು ಎಂದು ಕೇಳಿದ್ದೇನೆ. ನಿಮಗೆ ಅಂಥ ಬಲವಿರಲಾರದು. ಮತ್ತೆ ಅವರ ಹಾಗೆ ರಂಗದ ಜನಪ್ರಿಯತೆಯನ್ನು ಲೌಕಿಕ ಸಂಬಂಧಗಳಿಗೆ ವಿಸ್ತರಿಸಿ ಬೇರೆಯವರ ನೆನಪಿನಲ್ಲಿ ಪುನರುಜ್ಜೀವನ ಕಾಣಬಹುದಾದ ಜೀವನ ಶೈಲಿಯೂ ನಿಮ್ಮದಲ್ಲ. ಆದರೆ ನೀವು ವಹಿಸಿದ ಪಾತ್ರ ವೈವಿಧ್ಯ ಮತ್ತವಕ್ಕೆ ಮಾತಿನಲ್ಲೇ ಕಟ್ತಿಕೊಟ್ಟ ಸ್ವತಂತ್ರ ನುಡಿಚಿತ್ರಗಳ ತಾಕತ್ತಿನಲ್ಲಿ ನಿಮಗೆ ಆತ್ಮಕಥೆ ಪರಿಷ್ಕರಿಸುವುದು ಕಷ್ಟವಾಗಬಾರದಿತ್ತು; ಈಗಲೂ ತಡವಾಗಿಲ್ಲ.

`ಯಕ್ಷೋಪಾಸನೆ’ ಡಾ| ಪ್ರಭಾಕರ ಶಿಶಿಲರು ಬರೆದ `ಗೋವಿಂದ ಭಟ್ಟರ ಜೀವನ, ಸಾಧನೆ’ಯ ಮಟ್ಟಕ್ಕೆ ಚೆನ್ನಾಗಿ ಬಂದಿದೆ. ಈ ಪುಸ್ತಕ `ರೂಪುಗೊಂಡ ಬಗೆ’ಯಲ್ಲಿ ಶಿಶಿಲರು “…ಜೋಶಿಯವರು ಸಲಹೆ ಸೂಚನೆಗಳ ದೊಡ್ಡ ಪಟ್ಟಿಯನ್ನು ನೀಡಿದರು. ಅವುಗಳು ಸ್ವೀಕಾರಾರ್ಹವಾಗಿದ್ದವು” ಎನ್ನುವಲ್ಲಿ ಕಾಣುವ ಧೋರಣೆ ನನ್ನ ಪುಸ್ತಕದ ಓದನ್ನು ಪ್ರಭಾವಿಸಿದ್ದರೆ ಆಶ್ಚರ್ಯವಿಲ್ಲ! ಇದು ಹೆಚ್ಚು ವಸ್ತುನಿಷ್ಠ ಅಂದರೆ ಆತ್ಮಕಥೆಯಾದ್ದರಿಂದ `ಗೋವಿಂದಭಟ್ಟ’ ನಿಷ್ಠವಾಗಿರಬೇಕಿತ್ತು. ಹಾಗಾಗಿದ್ದರೆ ಅದು ಖಂಡಿತವಾಗಿಯೂ ಇದಕ್ಕೂ ದೊಡ್ಡದಾಗುತ್ತಿತ್ತು. ಮತ್ತದಕ್ಕೆ ಕೇವಲ ಗ್ರಾಂಥಿಕ ಶುದ್ಧ ತರುವಷ್ಟೇ ಕೆಲಸ ಸಂಪಾದಕನಿಂದ ನಡೆಯಬೇಕಿತ್ತು, ಹಾಗೆ ನಡೆದಿಲ್ಲ ಎಂದು ನನ್ನ ಭಾವನೆ.

ತಪ್ಪಿದ್ದರೆ, ಬೇಸರವಾದರೆ ದಯವಿಟ್ಟು ಕ್ಷಮಿಸಿ ಮತ್ತೆ ಅವಶ್ಯ ಸ್ಪಷ್ಟಪಡಿಸಿ. ನೀವು ಏನು ಹೇಳಿದರೂ ಬಿಟ್ಟರೂ ಮೊದಲೇ ನಿಮ್ಮಲ್ಲಿನ ಕಲಾವಿದನಿಂದ ಈಗ ಯಕ್ಷೋಪಾಸನೆಯಲ್ಲಿ ಸಿಕ್ಕಿದ ವ್ಯಕ್ತಿಪರಿಚಯದಿಂದ ನಿಮ್ಮ ಬಗೆಗಿನ ನನ್ನ ಗೌರವ ಹೆಚ್ಚಿದೆ.

ಇಂತು ವಿಶ್ವಾಸಿ
ಜಿ.ಎನ್. ಅಶೋಕವರ್ಧನ
ತಾರೀಕು ೨೧-೧೨-೨೦೦೮

ಪುಸ್ತಕ ಮಾಹಿತಿ: ಯಕ್ಷೋಪಾಸನೆ – ಸೂರಿಕುಮೇರಿ ಗೋವಿಂದ ಭಟ್ಟರ ಆತ್ಮ ವೃತ್ತಾಂತ. (ಸಂಪಾದಕ?/ಲೇಖಕ?) ಡಾ| ಬಿ. ಪ್ರಭಾಕರ ಶಿಶಿಲ, ಸುಳ್ಯ. ಪ್ರಕಾಶನ: ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ. ಪುಟ: ೨೫೨ ಬೆಲೆ ರೂ ೨೦೦.