ಪತ್ರಿಕೆಯ ಬರಹಗಳ ಬಗ್ಗೆ (ನೇರ ಲೇಖಕನಿಗೂ) ಪ್ರತಿಕ್ರಿಯಿಸುವವರೇ ಕಡಿಮೆ. ಹಾಗೆ ಬರೆದದ್ದೆಲ್ಲ ಸ್ವೀಕಾರವಾಗುವುದು, ಸ್ವೀಕಾರವಾದದ್ದರಲ್ಲೂ ಪೂರ್ಣ ಪಾಠ ಬರುವುದು, ಬಂದದ್ದೂ ವಸ್ತುನಿಷ್ಠವಾಗಿರುವುದು ಮತ್ತಷ್ಟು ಮತ್ತಷ್ಟು ಕಡಿಮೆ. ಆ ಲೆಕ್ಕದಲ್ಲಿ ಸದಾ ಸಾರ್ವಜನಿಕದಲ್ಲೇ ಇರುವ ಅದೂ ಜಗತ್ತಿನ ಆಗುಹೋಗುಗಳ ಬಗ್ಗೆ ಸದಾ ಮುಕ್ತ ಮಾತುಕತೆಗೆ ತೆರೆದುಕೊಂಡೇ ಇರುವ (“ಅಂಗಡಿ ಎಲ್ಲಾ ಸರಿ ಆದರೆ ಆ ಮೀಸೆಯವರಿಗೆ ಮಾತು ಹೆಚ್ಚು” ಎಂದು ಪರೋಕ್ಷವಾಗಿ ಕೇಳುವವರೆಗೆ) ನನಗೆ ನೇರ ಸಿಗುತ್ತಿದ್ದ ಪ್ರತಿಕ್ರಿಯೆಗಳು ತುಸು ಹೆಚ್ಚೇ ಎನ್ನಬಹುದು. ವಾಸ್ತವದಲ್ಲಿ ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳಿ’ಗೆ ಮಾಹಿತಿ ಸಂಗ್ರಹವಾಗುವುದು, ಅದು ಕಾರ್ಯಕ್ರಮದಿಂದ ಕಾರ್ಯಕ್ರಮಕ್ಕೆ ಸದಸ್ಯರನ್ನು ಸಂಗ್ರಹಿಸಿ ನಡೆಯುತ್ತ ಬಂದಿರುವುದು ಈ ಸಂವಹನದಲ್ಲೇ. ನಿಮಗೆ ತಿಳಿದಿರಬಹುದು ಆರೋಹಣ ಹೆಸರು ಮಾತ್ರ. ನೋಂದಣಿ, ಸದಸ್ಯತ್ವ, ಸೇವಾಶುಲ್ಕ, ದಾನ ಸ್ವೀಕಾರ ಕಡ್ಡಾಯವಾಗಿ ಇಲ್ಲ. ‘ಮನೆಯನೆಂದೂ ಕಟ್ಟದಿರು’ ನನಗೆ ಬಹುಪ್ರಿಯ ಪಲ್ಲವಿ. ನೆಲ್ಲಿತಟ್ಟು ತೀರ್ಥದ ಲೇಖನ ಪ್ರಕಟವಾಗಿ ಹತ್ತು ದಿನದಲ್ಲಿ ದೂರದ ಗೆಳೆಯ ಎಂ. ಶಶಿಧರ ‘ಗುಹಾ ಸಾಹಸಗಳು ಇನ್ನೂ ಬರಲಿ’ ಎಂಬ ಶೀರ್ಷಿಕೆ ಕೊಟ್ಟು ಪ್ರತಿಕ್ರಿಯಿಸಿದ್ದು ಪತ್ರಿಕೆಯಲ್ಲಿ ಪ್ರಕಟವಾಯ್ತು. ಅವರ ಆಶಯ ದೊಡ್ಡದೇ ಇದ್ದರೂ “… ಅಶೋಕರು ಧಾರ್ಮಿಕವಾಗಿ ಪವಿತ್ರವೆಂದು ಜನರಿಂದ ನಂಬಲ್ಪಟ್ಟಿರುವ ಗುಹಾಪ್ರವೇಶ ಸಾಹಸದ ಲೇಖನಗಳನ್ನು ಮಾತ್ರ ಏಕೆ ಪ್ರಕಟಿಸುತ್ತಿದ್ದಾರೆ?” ಎಂದು ಸಂಶಯದ ಬೀಜ ಬಿತ್ತಿದರು. ಹಿಂಬಾಲಿಸಿದಂತೆ ಮಣಿಲ ಈಶ್ವರ ಶಾಸ್ತ್ರಿ ಎನ್ನುವವರು ದಂಬೆ ಗುಡ್ಡೆಯ ತೀರ್ಥ ಗುಹೆಗೆ ನಮ್ಮನ್ನು ‘ಛೂ’ ಬಿಡುವಂತೆ ಮಾಹಿತಿಯೊಡನೆ ಸವಾಲನ್ನೇ ಎಸೆದರು (‘ಧೈರ್ಯವಿದ್ದರೆ ಪರೀಕ್ಷಿಸಲಿ’ ಅವರದೇ ಪದಗಳು!). ನನಗೆ ಒದಗುತ್ತಿದ್ದ ಖಾಸಗಿ ಸಂಭಾಷಣೆಗಳಲ್ಲೂ ಗುಹೆಗಳ ಪ್ರಾಕೃತಿಕ ವೈಶಿಷ್ಟ್ಯಗಳಿಗಿಂತಲೂ ಮೂಢಾಮೂಢ ವಿಚಾರಗಳ ಜಿಜ್ಞಾಸೆ ಹೆಚ್ಚು ಬಣ್ಣ ಪಡೆಯುತ್ತಿತ್ತು. ನೆಲ್ಲಿತಟ್ಟುತೀರ್ಥದ ನೇರ ಅನುಭವದಲ್ಲಿ ನಾನೇ ಬರೆದ ವಾಕ್ಯ ‘ವಿದೇಶಗಳಲ್ಲಿ ಗುಹೆಗಳೇ ಆರಾಧನೀಯವಾಗಿ ಹೆಚ್ಚೆಚ್ಚು ತೆರೆದುಕೊಳ್ಳುತ್ತಿರುವಾಗ ನಮ್ಮಲ್ಲಿ ಇದ್ದದ್ದನ್ನೂ ಮುಚ್ಚಿಕೊಳ್ಳಲು ನೋಡುತ್ತೇವೆ; ತೆರೆದು ಹೇಳುವವರ ಬಾಯಿ ಕಟ್ಟಲು ಪ್ರಯತ್ನಗಳಾಗುತ್ತವೆ’ ಎನ್ನುವುದು ಪಲ್ಲವಿಯ ಹಾಗೆ ಮತ್ತೆ ಮತ್ತೆ ನನ್ನ ನೆನಪಿಗೆ ಬರುತ್ತಿತ್ತು. ಭೂಗರ್ಭದಲ್ಲಿ ಹೊಟ್ಟೆ ಎಳೆದದ್ದು ನನಗೆ ಅಯಾಚಿತವಾಗಿ ಪತ್ರಿಕಾ ಪ್ರಚಾರ ಒದಗಿಸಿದ್ದರೂ ನನಗದನ್ನು ಉಳಿಸಿ ಬೆಳೆಸಿಕೊಳ್ಳುವುದಕ್ಕಿಂತಲೂ ಕಳಚಿಕೊಳ್ಳುವ ಉತ್ಸಾಹ ಒಳಒಳಗೇ ಹೆಚ್ಚಾಗತೊಡಗಿತು. ಎಲ್ಲೋ ಪತ್ರಿಕೆಯ ಮಾರಾಟ ತಂತ್ರಕ್ಕೆ ನಾನು ಸರಕು ಕೊಡುತ್ತಿದ್ದೇನೇನೋ ಎಂದು ಅನ್ನಿಸಿ, ಯಾರನ್ನೂ ಕೇಳದೆ ‘ಗುಹಾ ವಿವಾದಕ್ಕೆ ಮಂಗಳ’ ಹಾಡಿದೆ. ೧೮-೯-೧೯೮೧ರ ಉದಯವಾಣಿಯಲ್ಲಿ ಪ್ರಕಟವಾದ ಅದರ ಪೂರ್ಣ ಪಾಠ ನೋಡಿ (ಇಂದಿನ ಮನೋಸ್ಥಿತಿಗೆ ಹೊಂದುವ ಸಣ್ಣ ಪುಟ್ಟ ಪರಿಷ್ಕರಣೆಯೊಡನೆ):

ಸ್ವಯಂಭೂ ಜಾತ್ರೆಯ ಸಂದರ್ಭಕ್ಕೆ ಲೇಖನ ಕೊಟ್ಟೆ. ಅದರಿಂದೆದ್ದ ವಿವಾದದಲ್ಲಿ ಧಾರ್ಮಿಕ ಹಿನ್ನೆಲೆಯವುಗಳಿಗೆ ಮಹತ್ವ ಬಂದದ್ದು ನಿಜ. ಆದರೆ ನನ್ನ ಉದ್ದೇಶ ಅದಲ್ಲ. ನಾನು ನುಗ್ಗಿದ ಪ್ರತಿ ಗುಹೆಯ ಅನುಭವ ಅನನ್ಯ, ಅಮೂಲ್ಯ. ಆದರೆ ಎಲ್ಲವನ್ನು ವಿವರವಾಗಿ ಬರೆಯಲು ಇಲ್ಲಿ ಅವಕಾಶವಿಲ್ಲ. ಮತ್ತೆ ಹಾಗೆ ಬರೆಯುತ್ತ ಹೋದರೆ ಸಾಮಾನ್ಯ ಓದುಗನಿಗೆ ಚರ್ವಿತ ಚರ್ವಣ ಅನಿಸಿದರೆ ಆಶ್ಚರ್ಯವಿಲ್ಲ. ಹಾಗಾಗಿ ನಾನು ಇದುವರೆಗೆ ಕಂಡ ಗುಹೆಗಳ ವೈಶಿಷ್ಟ್ಯವನ್ನಷ್ಟೇ ನೆನಪಿನಾಳದಿಂದ ಹೆಕ್ಕಿ ಲೇಖಿಸುತ್ತೇನೆ.

ನೆಲ್ಲಿತೀರ್ಥ: ಮಂಗಳೂರು ಮೂಡಬಿದ್ರೆ ನಡುವಿನ ಎಡಪದವು, ಮುಚ್ಚೂರಿನ ಬಳಿ ದೇವಾಲಯವೊಂದಕ್ಕೆ ಸಂಬಂಧಿಸಿದಂತಿದೆ. ಮಳೆ ದಿನಗಳನ್ನು ಬಿಟ್ಟು ಸುಮಾರು ಆರು ತಿಂಗಳು ಇದು ಸರ್ವರಿಗೂ ಮುಕ್ತ (ಇಂದು ಹಾಗಿಲ್ಲ! ಮುಂದೆಂದಾದರೂ ವಿಸ್ತರಿಸುತ್ತೇನೆ). ಇದರಲ್ಲಿ ಸುಮಾರು ಇನ್ನೂರಡಿ ಒಳಗೆ ತೆಳು ಹರಿನೀರಿನಲ್ಲಿ ತೆವಳಿದರೆ ಸಿಗುವ ವಿಶಾಲ ಗುಹಾ ಗರ್ಭದಲ್ಲಿನ ತಿಳಿನೀರ ಕೊಳ ‘ತೀರ್ಥಸ್ನಾನ’ಕ್ಕೂ ಕಗ್ಗಲ್ಲಿನ ಲಿಂಗ ಭಕ್ತಾದಿಗಳ ಪೂಜೆಗೂ ಸಲ್ಲುತ್ತವೆ. ಲಿಂಗದಿಂದಲೂ ಮುಂದೆ ಗುಹೆ ಇದ್ದರೂ ಸಾಮಾನ್ಯರು ಅದರಲ್ಲಿ ನುಗ್ಗಿದ ದಾಖಲೆ ಇಲ್ಲ. ನಾವು ಅದರಲ್ಲಿ ಮುನ್ನೂರಡಿಗೂ ಮಿಕ್ಕು ನುಗ್ಗಿ ಮುಖ್ಯ ಗುಹೆಯ ಕೊನೆ ಕಂಡಿದ್ದೇವೆ. ಅಲ್ಲೂ ನೆಲದಾಳಕ್ಕಿಳಿದಿದ್ದ ಮತ್ತಷ್ಟು ಸಪುರ ಬಿಲದಲ್ಲಿ ನೂರಿಪ್ಪತ್ತಡಿಯ ಅಂದಾಜು ನಮ್ಮ ಸಣ್ಣಾಳುಗಳಿಬ್ಬರು (ಜಯಂತ ಮತ್ತು ಬಹುಶಃ ಸೂರ್ಯ) ನುಸುಳಿ ಕೊನೆಗಾಣದೆ, ಮುಂದುವರಿಯಲು ರಕ್ಷಣೆಯ ಬಲ ಸಾಲದೆ ಮರಳಿದರು. ಇದಕ್ಕೆ ಇನ್ನೊಂದೇ ಬಾಯಿಯಿರುವ ಸಾಧ್ಯತೆ ಇದೆ.

ಪೊಸವಡಿ ಗುಂಪೆ ಗುಡ್ಡೆಯ ಗುಹೆಗಳು: ಕಾಸರಗೋಡು ಜಿಲ್ಲೆಯ ಬಾಯಾರಿನ ಬಳಿಯ ಮುರಕಲ್ಲಿನ ಗುಡ್ಡೆ ಪೊಸವಡಿ ಅಥವಾ ಪೊಸಡಿ ಗುಂಪೆ. ಅದರ ಶಿಖರದ ಮೇಲಿನ ಎರಡು, ಮಧ್ಯಂತರದ ಎರಡು ವಾಸ್ತವದ ಅರಿವಿಲ್ಲದವರಿಂದ ತಪ್ಪಾಗಿ ಎಣಿಸಲ್ಪಟ್ಟು (ಅಥವಾ ಅಶ್ವಿನೀ ಕುಮಾರರಿಗೆ ಒಂದು ಸಾಕೆಂದು ಲೆಕ್ಕ ಹಿಡಿದರೋ ಏನೋ!) ಪಾಂಡವರ ಗುಹೆಗಳೆಂದೇ ಹೆಸರಾಂತಿವೆ. ಅವಲ್ಲದೆ ಗುಡ್ಡೆಯ ಬುಡದಲ್ಲಿ ತೀರ್ಥಗುಹೆ ಮತ್ತು ವಿಭೂತಿ ಗುಹೆ ಎಂದೇ ಪ್ರಖ್ಯಾತವಾದ ಬೇರೆರಡು ಗುಹೆಗಳೂ ಇವೆ. ಇವೆಲ್ಲವನ್ನೂ ನಾವು ತಾರ್ಕಿಕ ಕೊನೆಯವರೆಗೆ ಶೋಧಿಸಿದ್ದೇವೆ.

ಶಿಖರದ ಒಂದು ಮೂವತ್ತಡಿ ನೇರ (ಮನುಷ್ಯರು ತೋಡಿದ ಬಾವಿ ಹೊಟ್ಟಾದ ಪ್ರಕರಣವೇ ಇರಬೇಕು) ಹೊಂಡದ ತಳದಿಂದ ತೊಡಗಿ ಸ್ವಲ್ಪ ಹರಡಿಕೊಂಡಿದೆ. ಆ ಆಳದಿಂದೆದ್ದ ಮರ ಅಥವಾ ಹಗ್ಗದ ಸಹಾಯವಿಲ್ಲದೆ ಇಳಿಯುವುದು ಕಷ್ಟ. ಆ ಪೊಳ್ಳಿನಲ್ಲಿ ಏನೂ ವಿಶೇಷವಿರಲಿಲ್ಲ. ಶಿಖರದ್ದೇ ಇನ್ನೊಂದಕ್ಕೆ ಎರಡು ಬಾಯಿಯಿದೆ. ಇದಕ್ಕೆ ಇಳಿಯಲು ಹಗ್ಗ ಬೇಕೇ ಬೇಕು. ಇದರ ನೆಲ ಒಂದು ಮೂಲೆಗೆ ಇಳಿಜಾರಾಗಿದೆ. ಹರಡಿದ ಹುಡಿ ಮಣ್ಣು ಗುಹೆಯ ಅಭದ್ರತೆ ಸೂಚಿಸುತ್ತದೆ. ಒಳಗೆ ಹಸುವೊಂದರ ಅಸ್ಥಿಪಂಜರ ಹಸಿರುಗಟ್ಟಿ ಕೊಂಡು ಬಿದ್ದಿತ್ತು. (ಗುಡ್ಡೆಗೆ ಮೇಯಲು ಬಿಟ್ಟದ್ದು ಕಾಲು ಜಾರಿ ಬಿದ್ದಿರಬೇಕು. ನೋವಿನಲ್ಲೂ ಪಾರುಗಾಣಲು ಯತ್ನಿಸುತ್ತಾ ಗುಹೆಯ ಒಳಸರಿದು ಸತ್ತಿರಬೇಕು.) ಹಾಗೇ ಯಾರೋ ಒಲೆಹೂಡಿ ಏನೋ ಕಾಯಿಸಿದ (ಕಳ್ಳ ಭಟ್ಟಿ?) ಉಳಿಕೆಗಳು, ದೊಡ್ಡ ಒಡಕು ಮಡಿಕೆಯೂ ಬಿದ್ದಿತ್ತು. ಗುಂಪೆಯ ಮಧ್ಯಂತರದಲ್ಲಿರುವ ಒಂದರ ಪ್ರವೇಶ ಸ್ಪಷ್ಟವಾಗಿ ಮನುಷ್ಯ ನಿರ್ಮಿತ – ಚಚ್ಚೌಕ. ಬಹುಶಃ ಯಾರೋ ಕೆರೆಯೋ ಬಾವಿಯೋ ತೋಡಲು ಹೋಗಿ ಅಡಿ ಮಾಟೆ ಬಿದ್ದು ಕೈಚಲ್ಲಿದಂತಿತ್ತು. ಇದರ ಪ್ರವೇಶವನ್ನು ನಾನು ಉದ್ದದ ಹಗ್ಗ ಕಟ್ಟಿ ಒಳಗೆ ಬಿಟ್ಟು, ಸರಿಯಾದ ಶಿಲಾವರೋಹಿಯಂತೆ ಇಳಿದಿದ್ದೆ. [ಇಳಿಯುವಲ್ಲಿ ಅನುಸರಿಸಿದ ತಂತ್ರ ಮಾತ್ರ ಪರ್ವತಾರೋಹಣದ್ದು. ಅಂದರೆ ಸಾಮಾನ್ಯವಾಗಿ ಬಾವಿ ಇಳಿಯುವವರು ಒಂದೋ ಮೇಲಿನ ಗಟ್ಟಿ ಆಧಾರಕ್ಕೆ ಹಗ್ಗವನ್ನು ಬಿಗಿಯುತ್ತಾರೆ. ಮತ್ತೆ ರಟ್ಟೆ ಬಲದಲ್ಲಿ ಹಗ್ಗವನ್ನೂ ಅನುಕೂಲವಿದ್ದಲ್ಲಿ ಬಾವಿಯ ಗಟ್ಟಣೆಗಳನ್ನೂ ಮೆಟ್ಟಿಲಂತೆ ಬಳಸುತ್ತ ಇಳಿದು, ಹತ್ತುತ್ತಾರೆ. ಇಲ್ಲವೇ ತಮ್ಮ ಸೊಂಟಕ್ಕೆ ಹಗ್ಗವನ್ನು ಬಿಗಿದುಕೊಂಡು ಮೇಲೊಂದೆರಡು ಗಟ್ಟಿಯಾಳುಗಳ ಕೈಗೆ ಹಗ್ಗ ಒಪ್ಪಿಸಿ ಹೆಚ್ಚು ಕಡಿಮೆ ಕೊಡಪಾನದಂತೆ ಇಳಿದು ಹತ್ತುವುದೂ ಇದೆ. ಆದರೆ ನಾನು ಬಳಸುತ್ತಿದ್ದದ್ದು ನೈಲಾನ್ ಮಿಶ್ರಿತ ಹತ್ತಿ ಹಗ್ಗ – ತೋರ ಕಡಿಮೆ ಆದರೆ ಶಕ್ತಿ ಜಾಸ್ತಿ; ಪಕ್ಕಾ ಪರ್ವತಾರೋಹಣದ ಹಗ್ಗ. ಹಾಗಾಗಿ ಇಳಿಯುವ ಕ್ರಮ ಬಾವಿ ಇಳಿಯುವವರಿಂದ ಭಿನ್ನ, ಹೆಚ್ಚು ವ್ಯವಸ್ಥಿತ. ಇನ್ನೂ ವಿವರಗಳನ್ನು ನಾನು ಮುಂದೆಂದಾದರೂ ಶಿಲಾವರೋಹಣದ ಕತೆ ಹೇಳುವ ಕಾಲಕ್ಕಿಟ್ಟುಕೊಳ್ಳುತ್ತೇನೆ] ಆಗ ಗೋಡೆಗೆ ಅಂಟಿಕೊಂಡಂತೆ ನಿಶ್ಚಲವಾಗಿದ್ದ (ಮಲಗಿದ್ದ?) ಹಾವೊಂದನ್ನು ಸಕಾಲಕ್ಕೆ ಗುರುತಿಸಿ ಮೆಟ್ಟದೆ ಮತ್ತೆ ಹಗ್ಗ ಅದಕ್ಕೆ ತಾಗಿ ಎಚ್ಚರಿಸದಂತೆ ನೋಡಿಕೊಂಡೆ. ಆದರೆ ನನ್ನ ಸಂಗಾತಿಗಳು ಹಾವನ್ನು ವಿಷದ್ದೋ ಆಲವೋ ಎಂದು ಗುರುತಿಸಲಾಗದಿದ್ದರೂ ಭಯದಲ್ಲಿ ನನ್ನನ್ನು ಅನುಸರಿಸದೇ ಮೇಲೇ ಉಳಿದುಬಿಟ್ಟರು. ಒಳಗೆ ಗುಹೆ ವಿವಿಧ ಹಂತಗಳಲ್ಲಿ ಜಗ್ಗಿತ್ತು, ವಿವಿಧ ಉದ್ದಕ್ಕೆ ಚಾಚಿತ್ತು. ಕವಲುಗಳ ಶೋಧದಲ್ಲಿ ಹೊರದಾರಿ ಮರೆಯದಂತೆ ಎಚ್ಚರಿಕೆ ವಹಿಸಿದ್ದೆ. ಅಲ್ಲಿನ ಇನ್ನೊಂದು ಗುಹೆ ಇರ್ವಾಯಿ. ಇದಕ್ಕೂ ಹಗ್ಗದ ಆಧಾರ ಸ್ವಲ್ಪ ಬೇಕು. ಇದು ಸುಮಾರು ನೂರಡಿ ಆಳದ ಅಗಲ ಕಿರಿದಾದ ಕೊರಕಲಿನಂತಿತ್ತು. ಇದೂ ಮಾನವಕೃತ ರಚನೆಗೆ ತಳದಲ್ಲಿ ಪ್ರಾಕೃತಿಕ ಪೊಳ್ಳು ಸೇರಿಕೊಂಡು ಆದದ್ದೇ ಸರಿ. ಇಲ್ಲಿನ ಎರಡು ಬಾಯಿಗಳ ನಡುವಣ ಮಣ್ಣಿನಲ್ಲೂ ಅಡ್ಡ ಗುಹೆ ತೋಡಿ ಸಂಪರ್ಕ ಸೇತು ಒಂದೆರಡು ಕಡೆ ಮಾಡಿದ್ದು ಕಾಣಿಸಿತು. ಎಲ್ಲಾ ರಚನೆಗಳೂ ಶಿಥಿಲಗೊಂಡು ಹೆಚ್ಚಿನ ಶೋಧ ಅಪಾಯಕಾರಿ (ನಿರರ್ಥಕವೂ ಸರಿ).

ಪೊಸಡಿ ಗುಂಪೆಯ ತಪ್ಪಲಿನಲ್ಲಿದ್ದು ನಿಜದ ಲೆಕ್ಕದಲ್ಲಿ ಅದಕ್ಕೇ ಸೇರಿದ್ದರೂ ಖ್ಯಾತಿಯಲ್ಲಿ ತೀರ್ಥ ಗುಹೆ ಮತ್ತು ವಿಭೂತಿ ಗುಹೆ ಪ್ರತ್ಯೇಕ ಅಸ್ಥಿತ್ವ ಗಳಿಸಿಕೊಂಡಿರುವುದು ಅವು ಪೂರ್ಣ ಪ್ರಾಕೃತಿಕ ರಚನೆಗಳಾದ್ದರಿಂದ ಇರಬೇಕು. ಹಾಗಾಗಿ ಅವುಗಳೊಡನೆ ಹಳಗಾಲದಿಂದ ಜನರಿಗೆ ಭಾವನಾತ್ಮಕ ಸಂಬಂಧವೂ ಬೆಳೆದದ್ದಕ್ಕೆ ಸಾಕ್ಷಿ ಈ ಹೆಸರುಗಳು. ಗುಡ್ಡೆಯ ತಪ್ಪಲಿನ ಜಾರು ಮೈಯಲ್ಲಿ ನೇರ ನಡೆದೇ ನುಗ್ಗಬಹುದಾದ, ಅಗಲ ಕಿರಿದಾದ ಗುಹಾ ಓಣಿ ‘ತೀರ್ಥಗುಹೆ’ಯ ಒಂದು ಮುಖ. ಈ ದ್ವಾರಕ್ಕೆ ಮನುಷ್ಯ ಒಪ್ಪವೂ ಸಿಕ್ಕಿದಂತಿದೆ. ಇಲ್ಲಿ ಒಳಗಿನಿಂದ ಹೊರಕ್ಕೆ ಹರಿದು ಬರುವ ತೆಳು ತೊರೆಯೂ (ತೀರ್ಥ) ಇದೆ. ಒಳ ಹೋಗುತ್ತಿದ್ದಂತೆ ಗುಹೆ ವಿಸ್ತಾರವಾಗುತ್ತದೆ, ತೆರೆದು ಬಿದ್ದ ಇನ್ನೊಂದು ಕೊನೆಯ ಸ್ವಾಭಾವಿಕ ಬೆಳಕೂ ಸಿಗುತ್ತದೆ. ಆ ಕೊನೆ ಜರಿದ ಬಂಡೆ, ಮಣ್ಣು, ಗೊಸರು ಒತ್ತಿನ ಕೃಷಿಕರು (ಬಾವಲಿ ಬೇಟೆಯಾಡುವವರೂ ಇರಬಹುದು) ಹೇರಿದ ಮುಳ್ಳಬಲ್ಲೆಗಳಿಂದ ಗೊಂದಲಮಯ. ಮಧ್ಯಂತರದಲ್ಲಿ ಒಂದೆಡೆ ಗುಹೆಯ ಚಪ್ಪರ ಸಣ್ಣದಾಗಿ ಕಂಡಿಬಿದ್ದು ಹೆಚ್ಚಿನ ಬೆಳಕಿಂಡಿಯೂ ಇಲ್ಲಿ ಒದಗಿದೆ. ಇದರ ವಿಸ್ತಾರವಾದ ಕೊನೆ ಸಮೀಪಿಸುವಲ್ಲಿ ಒಂದು ಕೇರೇ ಹಾವು ಬಾವಲಿ ಬೇಟೆಯಾಡಿ ನುಂಗುತ್ತಿರುವುದನ್ನೂ ಕಂಡೆವು. ಪ್ರಕೃತಿಯ ನ್ಯಾಯದಲ್ಲಿ ನಾವು ಮೂಗು ತೂರಿಸದ ಎಚ್ಚರವಹಿಸಿ, ಮುಳ್ಳಬಲ್ಲೆಗಳನ್ನು ಹಗುರವಾಗಿ ಬಿಡಿಸಿಕೊಂಡು ಹೊರಬಿದ್ದದ್ದುಒಂದು ಆಡಿಕೆ ತೋಟಕ್ಕೆ. ಅದೇ ತೋಟದ ಇನ್ನೊಂದು ಅಂಚಿನಲ್ಲಿ ಇರುವ ಗುಹೆ ವಿಭೂತಿ ಖ್ಯಾತಿಯದ್ದು. ಮೊದಮೊದಲು ಕುಕ್ಕರಗಾಲಿಟ್ಟು ಮತ್ತೆ ತೆವಳಿ ಸರಿದರೆ ಸುಮಾರು ಇನ್ನೂರಡಿ ಇದರೊಳಗೆ ಸಾಗಬಹುದು. ಇದರ ಒಣ ಸೇಡಿ ಮಣ್ಣಿನ ಅಂಶವನ್ನು ಜನಪದರು ವಿಭೂತಿಗೆ ಪರ್ಯಾಯವಾಗಿ ನಂಬಿದ್ದಾರೆ.

ಬಾವಲಿಮಾಟೆ: ಜಾಂಬ್ರಿ ಇರುವ ಚಂಡೆತಡ್ಕ ಕಾಡಿನ ಇನ್ನೊಂದು ಮಗ್ಗುಲಿನ ಅಂದರೆ ಸೂಳೆಪದವಿನಲ್ಲಿರುವ ವಿಶಾಲ ಕೊಠಡಿಯಂತಿರುವ ಗುಹೆ ಬಾವಲಿಮಾಟೆ. ಇದು ಬಾವಲಿ ಬೇಟೆಗೆ ಆ ವಲಯದಲ್ಲಿ ಹೆಸರುವಾಸಿ. ಇದರೊಳಗಿನ ಒಂದು ಸಣ್ಣ ಬಿಲ (ಆ ಕಾಲದಲ್ಲಿ) ಯಾರದೋ ಕೊಲೆಗೂ ಸಾಕ್ಷಿಯಾಗಿತ್ತಂತೆ. ಇದರೊಳಗೆ ಹೆಚ್ಚಿನ ಶೋಧ ಸಾಧ್ಯತೆ ಏನೂ ಕಾಣಲಿಲ್ಲ.

ಬಿಲದ್ವಾರ: ಸುಬ್ರಹ್ಮಣ್ಯದ ಸ್ಥಳ ಪುರಾಣದೊಡನೆ ಇದು ಬೆಸೆದುಕೊಂಡಿದೆ. ಇದನ್ನು ಮಳೆಗಾಲ ಮುಗಿದ ಹೊಸದರಲ್ಲಿ ನಾವು ನೋಡಿದ್ದೆವು. ದಾರಿ ಬದಿಯ ದ್ವಾರದಲ್ಲಿ ನುಗ್ಗಿ, ಕೆಸರಿನಿಂದ ಜಾರುವ ನೆಲದಲ್ಲಿ ಸ್ವಲ್ಪವೇ ಇಳಿದರೆ ಮೂರು ನಾಲ್ಕಡಿ ಎತ್ತರದ ಸಣ್ಣ ದರೆಯಲ್ಲಿ ಮತ್ತೂ ಕೆಳಕ್ಕೆ (ಹುಶಾರಾಗಿ ಹಾರಬೇಕು) ಇಳಿಯಬೇಕು. ಅಲ್ಲಿ ಮೊಣಕಲಾಳದ (ಕಲಂಕು) ನೀರು ನಿಂತುಕೊಂಡಿತ್ತು. ಅಚೆಗೆ ಮೂವತ್ತಡಿಯಲ್ಲೆ ದೊಡ್ಡದಾಗಿ ತೆರೆದುಕೊಂಡಿತ್ತು ಗುಹೆಯ ಹಿಂಬಾಗಿಲು. ಒಣದಿನಗಳಲ್ಲಿ [ಇದರಲ್ಲಿ ಹೆಚ್ಚಿನ ಶೋಧ ಸಾಧ್ಯತೆಗಳನ್ನು ನಡೆಸಬೇಕು ಎಂದು ಅಂದು ಯೋಚಿಸಿದ್ದೆ. ಆದರೆ ದೇವಾಲಯಗಳ ವಾಣಿಜ್ಯೀಕರಣದಲ್ಲಿ ಕೇವಲ ಬೋರ್ಡು ಮಾತ್ರವಾಗಿದ್ದ ಬಿಲದ್ವಾರ ಎಂಬ ಒಂದು ಪ್ರಾಕೃತಿಕ ಪೊಳ್ಳಿನ ಮೇಲಿನ ವಲಯಕ್ಕೆ ಆಲಂಕಾರಿಕ ಆರ್.ಸಿ.ಸಿ ಚಪ್ಪರ, ಸಿಮೆಂಟ್ ಗ್ರಿಲ್ಲಿನ ಆವರಣ, ದ್ವಾರಕ್ಕೆ ಬಾಗಿಲು ಬೀಗ ಬಿದ್ದಿದೆ. ಚಪ್ಪರದಡಿಯಲ್ಲಿ ಅಷ್ಟೂ ಜಾಗವನ್ನು ಆವರಿಸುವಂತೆ ಹಲವು ಜಡೆಗಳ ಭಾರೀ ಕಾಂಕ್ರೀಟ್ ನಾಗಪ್ರತಿಮೆ, ಗಾಢ ಬಣ್ಣಗಳಲ್ಲಿ ಮುಳುಗೆದ್ದು ಕುಳಿತು ಬಹುಶಃ ನಾಗಲೋಕದ ಅಭಿವೃದ್ಧಿಗೆ ವಂತಿಗೆ ಕೇಳುವಂತೆ ಹುಂಡಿಯನ್ನು ಪ್ರದರ್ಶಿಸುತ್ತಿದೆ.]

ಹರೇಕಳದ ಅನಾಮಧೇಯ ಮೂರು ಮಾಟೆಗಳು: ಮಂಗಳಗಂಗೋತ್ರಿಯ ಸಮೀಪದ ಹಳ್ಳಿ ಹರೇಕಳ. ಅಲ್ಲಿನ ಪುಟ್ಟಪೇಟೆಯ ಮೊದಲು ಸಿಗುವ ಗುಡ್ಡೆಯ ತಲೆಯಲ್ಲಿ ನೆಲದಾಳಕ್ಕಿಳಿಯುವ ಮೂರು ಪ್ರತ್ಯೇಕ ಗುಹೆಗಳಿವೆ. ದೊಡ್ಡದು, ಒಂದೆಡೆ ನೆಲ ಸುಮಾರು ಇಪ್ಪತ್ತಡಿ ವ್ಯಾಸದಲ್ಲಿ ಐದಾರಡಿ ಆಳಕ್ಕೆ ಜಗ್ಗಿದ ಹಳ್ಳದಂತಿದೆ. ಅದರ ಒಂದಂಚಿನಲ್ಲಿ ಗುಹಾಮುಖವಿದೆ. ಇದೂ ನರಬೇಟೆಯ ಇನ್ನೊಂದು ರೂಪಕ್ಕೆ ಸಾಕ್ಷಿಯಾಗಿತ್ತಂತೆ. ಇನ್ನೊಂದು ಗುಹೆ ಕಾಲ್ದಾರಿಯೊಂದರ ಪಕ್ಕದಲ್ಲೇ ಇದ್ದು ನಿರುಪಯೋಗೀ ವಸ್ತುಗಳ ಗುಂಡಿಯಂತಾಗಿದೆ. ಲೆಕ್ಕಕ್ಕೆ ಮೂರನೆಯ ಪೊಳ್ಳೂ ಒಂದು ಇಲ್ಲೇ ಸಿಗುತ್ತದೆ.

*** *** ***

ಕದ್ರಿಗುಡ್ಡೆಯ ಗುಹೆ, ಭೂಮ್ಯಂತರ್ಗತ ಜಲಧಾರೆ ಅರಸಿಕೊಂಡು ಮನುಷ್ಯ ಕೊರೆದ ಹಲವು ಸುರಂಗಗಳು, ರೈಲೋಡಿಸಲು ಕೊರೆದು ಭದ್ರಗೊಳಿಸಿದ ಸುರಂಗಗಳು, ಕೊಡಂಜೆ ಕಲ್ಲು ಏರುಗಲ್ಲಿನ ಗುಹೆಗಳೂ ನಾನು ನೋಡಿದವೇ ಆದರೂ ಇಲ್ಲಿ ಅವುಗಳ ಉಲ್ಲೇಖ ಅಪ್ರಸ್ತುತ. ನನ್ನ ವಿವರಣೆಗೆ ಸಿಕ್ಕ ಎಲ್ಲಾ ಗುಹೆಗಳೂ (ಜಾಂಬ್ರಿ, ನೆಲ್ಲಿತಟ್ಟು ಸೇರಿ) ಮುರ ಕಲ್ಲಿನ ಹಾಸು ಇರುವಲ್ಲಿ ಸಾಧಾರಣವಾಗಿ ಇರುವ ಪೊಳ್ಳುಗಳ ಪ್ರಕಟಿತ ರೂಪಗಳು. ಇವುಗಳಿಗೆ ಮನುಷ್ಯ ಸಹವಾಸ ಒದಗಿದ್ದಿದೆ, ತಿದ್ದುಪಡಿಗಳು ಬಂದದ್ದಿದೆಯಾದರೂ ಮೂಲತಃ ಪ್ರಾಕೃತಿಕ ಸವಕಳಿಯೇ ಮುಖ್ಯ ಶಿಲ್ಪಿ. ಪ್ರಾಕೃತಿಕವಾಗಿಯೇ ಮುರಕಲ್ಲು ರಂಧ್ರಮಯವಾದ್ದರಿಂದ ಇವುಗಳಲ್ಲಿ ಗಾಳಿ, ನೀರು ಶೇಖರಗೊಳ್ಳುವುದು ಕಡಿಮೆ. ಹಾಗಾಗಿ ಸಂಗ್ರಹಿಸಲ್ಪಡುವ ಜೀವಾಂಶಗಳು ಕೊಳೆತು ವಿಷಮಯ ವಾತಾವರಣ ಉಂಟಾಗುವ, ಜವುಗುತನ ಏರ್ಪಡುವ ಭಯ ಕಡಿಮೆ. ಮಳೆಗಾಲದಲ್ಲಿ ಇವು ನೀರಿನಿಂದ ತುಂಬಿ, ಮಿದುವಾಗಿ ಕುಸಿಯುವ ಅಪಾಯವಿದ್ದಂತೆ, ಬಿಸಿಲ ದಿನಗಳಲ್ಲಿ ಒಣಗಿ, ಗಟ್ಟಿಯಾಗಿ ಪರಿಸರಕ್ಕನುಗುಣವಾಗಿ ಮನುಷ್ಯ ಉಪಯೋಗಗಳಿಗೆ ಮುಕ್ತವಿರುತ್ತವೆ. ಇಲ್ಲಿ ಸ್ವಯಂಭೂ, ನೆಲ್ಲಿತಟ್ಟುತೀರ್ಥ, ನೆಲ್ಲಿತೀರ್ಥ ಪ್ರವೇಶ ಮುಹೂರ್ತಗಳೆಲ್ಲಾ ಬಿಸಿಲ ದಿನಗಳಲ್ಲೇ ಎಂಬುದು ಗಮನಾರ್ಹ.

ಸವಾಲಾಗಿ ಬಂದ ದಂಬೆಗುಡ್ಡ, ಕೌಂಡಿಕಾನ, ನಾರಂಪಾಡಿ ಮೊದಲಾದ ಗುಹೆ, ಸ್ಥಳಗಳನ್ನು ಯಥಾವಕಾಶ ನಾನು ನೋಡಿದರೆ, ಸ್ವಾರಸ್ಯವಿದ್ದರೆ ಬರೆಯುತ್ತೇನೆ. ಗುಹಾ ವಿವಾದದುದ್ದಕ್ಕೂ ಅನಿವಾರ್ಯವಾಗಿ ‘ನಾನು’ ಬಂದರೂ ಇವು ವಾಸ್ತವವಾಗಿ ನಾವು ಅಂದರೆ ಆರೋಹಣ ಪರ್ವತರೋಹಿಗಳು ಸಾಹಸಿಗಳು ನಡೆಸಿದ ಪ್ರಕೃತಿ ಅನುಸಂಧಾನದ ಫಲಿತಾಂಶಗಳು. ಜೀವನವನ್ನು ಹಾಳುಗೆಡಹುವ, ಪರಿಸರವನ್ನು ವಿಷಮಯಮಾಡುವ ಹುಚ್ಚು ಸಾಹಸಗಳ ವಿರುದ್ಧ ನಮ್ಮ ಸಾಧನೆಗಳಿವೆ ಮತ್ತು ಅವಕ್ಕೆ ಪ್ರಚಾರ ಅಗತ್ಯ ಎಂದು ಕಂಡದ್ದರಿಂದ ಈ ಚರ್ಚೆಯನ್ನು ಬೆಳೆಸಿದ್ದೇನೆ. (ಕಳೆದ ವರ್ಷ – ೧೯೮೦, ಇಂಥದ್ದೇ ಉದ್ದೇಶದಿಂದ ಪರ್ವತಾರೋಹಣ ಸಪ್ತಾಹವನ್ನು ಆಚರಿಸಿದ್ದೆವು) ನಮ್ಮ ಅನುಭವಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವುದಕ್ಕೆ, ಇನ್ನಷ್ಟು ರೋಚಕವನ್ನು ಸಾಧಿಸಲಿಕ್ಕೆ ಯಾರದರೂ ಹಸಿಬಿಸಿ ಯತ್ನಕ್ಕಿಳಿದು ಎಲ್ಲಾದರೂ ಜೀವಹಾನಿಯೋ ಮನಃಕಷಾಯದ ವಿಪರೀತ ಪಾಕಗಳೋ ಘಟಿಸಬಾರದೆನ್ನುವುದಕ್ಕೆ ಸ್ವತಂತ್ರವಾಗಿ ಗುಹೆ ನುಗ್ಗ ಹೊರಡುವ ನವಸಾಹಸಿಗಳಿಗೆ ನಮ್ಮ ಅನುಭವದ ಕೆಲವು ಕಿವಿಮಾತುಗಳು.

೧. ಪರಿಸರ ಕೆಡಿಸುವ ಅತಿ ಚಟುವಟಿಕೆಗಳನ್ನು ತೋರಬೇಡಿ. ಬೊಬ್ಬೆ ಹಾಕುವುದು (ನೆಲ್ಲಿತೀರ್ಥದಲ್ಲಿ ಕೆಲವರು ‘ಗೋವಿಂದಾ’ ಎಂದು ಬೊಬ್ಬೆ ಹೊಡೆಯುವುದು ಕೇಳಿದ್ದೇನೆ), ಹಾರುವುದು, ಪ್ರಾಕೃತಿಕ ಸಮತೋಲನವನ್ನು ಕಂಡುಕೊಂಡ ರಚನೆಗಳನ್ನು ಕದಲಿಸಲು ಪ್ರಯತ್ನಿಸುವುದು ನಿಮಗೆ ಮಾರಣಾಂತಿಕವಾಗಬಹುದು. ಬೆಂಕಿ ಮಾಡುವುದು (ಆರಾಧನೆ ನಡೆಯುವಲ್ಲಿ ಬಳಸುವ ತುಪ್ಪದ ದೀಪ, ದೀವಟಿಗೆ ಸೇರಿ) ನಿಮಗೆ ಬೇಡವಾದ್ದನ್ನು (ಹಣ್ಣಿನ ಸಿಪ್ಪೆ, ಬುತ್ತಿ ಒಯ್ದ ಎಲೆ, ಕಾಗದ, ತೊಟ್ಟೆ, ಕಿತ್ತು ಹೋದ ಚಪ್ಪಲಿ ಇತ್ಯಾದಿ) ಅಲ್ಲೇ ಬಿಟ್ಟು ಬರುವುದು (ಎಲ್ಲೂ ಬಿಟ್ಟುಬರಬಾರದು) ಸೀಮಿತ ಪ್ರಾಣವಾಯುವನ್ನು ವಿಷಮಯ ಮಾಡುವುದು ಖಾತ್ರಿ. ೨. ಒಳಗೆ ಕಂಡದ್ದಕ್ಕೆ ಸುಂದರ ಪ್ರಚಾರ ಕೊಡಿ, ಕಾಣದ್ದರ ಬಗ್ಗೆ ತೀರ್ಪು ಬರೆಯಬೇಡಿ. ೩. ನಡೆ ನುಡಿ ‘ವಿದ್ಯಾರ್ಥಿಯದ್ದು’ ಇರಲಿ, ಸ್ಪರ್ಧಾರಹಿತವಿರಲಿ. ಅಂದರೆ ಮೊದಲು ನಿಮ್ಮ ಸಂತೋಷಕ್ಕೇ ಗುಹೆ ನೋಡಿ, ಇನ್ನೊಬ್ಬರ ಸವಾಲಿಗೋ ಗುಹೆಯನ್ನು ಕೀಳೆಣಿಸಿಯೋ ನುಗ್ಗಬೇಡಿ. ೪. ಸೋಲು ಪುನಃ ಪ್ರಯತ್ನಕ್ಕೆ ನಾಂದಿ. ಅಪಾಯ ಸ್ಪಷ್ಟವಿರುವಾಗ ಮುನ್ನುಗ್ಗುವವರಿಗೆ ಜ್ಞಾಪಕವಿರಲಿ – ನಿಮಗಿರುವ ಅಮೂಲ್ಯ ಜೀವ ಒಂದೇ.

*** *** ***

ನನ್ನ ಪತ್ರವೇನೋ ಪ್ರಕಟವಾಯ್ತು. ಆದರೆ ಅದಕ್ಕೆ ಸಂಪಾದಕೀಯ ಅನುಮೋದನೆ, ‘ಇಲ್ಲಿಗೆ ಈ ವಿಚಾರದಲ್ಲಿ ಪತ್ರವ್ಯವಹಾರವನ್ನು ಮುಕ್ತಾಯಗೊಳಿಸಲಾಗಿದೆ- ಸಂ.’ಎಂದು ಹೆಚ್ಚಾಗಿ ಬರುವ ಟಿಪ್ಪಣಿ ಪ್ರಕಟವಾಗಲಿಲ್ಲ! ಅಂದರೆ ವಿವಾದ ಮತ್ತೂ ಬೆಳೇಯಿತೇ ಎಂಬ ನಿಮ್ಮ ಕುತೂಹಲಕ್ಕೆ ‘ಪರಿಹಾರ’ ಕೊಡಲು ಮುಂದಿನ ವಾರಕ್ಕೆ ನಾನೇನೋ ಸಜ್ಜಾಗುತ್ತಿದ್ದೇನೆ. ಆದರೆ ಯಾಕೋ ಕಳೆದ ಬಾರಿ ನಾನು Comments-ಹುಂಡಿ ಒಡ್ಡಿದಾಗ ದಕ್ಕಿದ ‘ಕಾಸು’ ನನ್ನನ್ನು (ಗುಹೆಯೊಳಗೆ ಹೊರಳಿದ್ದು ಸಾಕು!) ಅನ್ಯ ಅನುಭವ ತಾಣಕ್ಕೆ ವಲಸೆ ಹೋಗುವಂತೆ ಸೂಚಿಸುತ್ತಿದೆ. ಇಂದಿನ ಬರಹಕ್ಕಾದರೂ ನಿಮ್ಮ ಸಮದರ್ಶಿತ್ವದ ಸೇಸೆ ಹಾಕಿ ನನ್ನ ಮುಂದಿನ ನಡೆಯನ್ನು ಹೆಚ್ಚು ಉಲ್ಲಾಸಕರವಾಗಿಸುತ್ತೀರಿ ಎಂದು ನಂಬಿದ್ದೇನೆ.