‘ಝಗಮಗಿಸುವ ವಿದ್ಯುದ್ದೀಪಾಲಂಕೃತ’ ಎನ್ನುವುದು ಹೆಚ್ಚುಗಾರಿಕೆಯಾಗಿದ್ದ ಕಾಲದಲ್ಲಿ ಯಕ್ಷವೀಕ್ಷಣೆಗೆ ಬಂದವನು ನಾನು. ಎತ್ತರಿಸಿದ ಚೌಕಾಕಾರದ ವೇದಿಕೆಯ ಮೂರೂ ಬದಿಗೆ ಕಂಬದ ಮೇಲಿನುದ್ದಕ್ಕೂ ಮೇಲಿನಡ್ಡಕ್ಕೂ ಬಿಗಿದ ಟ್ಯೂಬ್ ಲೈಟುಗಳು ಏಕಕಾಲಕ್ಕೆ ರಂಗವನ್ನೂ ನಮ್ಮ ಕಣ್ಣನ್ನೂ ತುಂಬುತ್ತಿದ್ದವು. ರಂಗದ ಎದುರಿನ ಭಾರೀ ಬುರುಡೆಯ ಬಲ್ಬ್ಗಳು ನಮ್ಮತ್ತ ಮರೆಕಟ್ಟಿಕೊಂಡರೂ ರಂಗಕ್ರಿಯೆಯನ್ನು ಹೆಚ್ಚಿನ ಪ್ರಖರತೆಯಲ್ಲಿ, ಸೂಕ್ಷ್ಮದಲ್ಲಿ ತೋರಿಸುತ್ತಿದ್ದವು. ಮುಂದುವರಿದ ದಿನಗಳಲ್ಲಿ ಈ ದೀಪಗಳಲ್ಲಿ ಹಲವು ತೆರನ ವರ್ಣ ಸಂಯೋಜನೆಗಳು, ಆರಿಸಿ ಬೆಳಗಿಸುವ ಚಮತ್ಕಾರಗಳು ಹೆಚ್ಚಿನ ರಸಪೋಷಣೆಗೆಂದೇ ಬಂದಂತಿತ್ತು. [ಬ್ರಹ್ಮಕಪಾಲ ಪ್ರಸಂಗದಲ್ಲಿ ಬಿಕ್ಷೆಬೇಡುವ ಶಿವನಿಗೆ ಪ್ರೇಕ್ಷಕ-ಭಕ್ತರು (ಪ್ರದರ್ಶನ ಚಟದವರು?) ಎಸೆದ ನಾಣ್ಯ ಬಲ್ಬ್ ಒಡೆದಾಗ ಪಾತ್ರಧಾರಿಯ ಲಾಭದಲ್ಲಿ ಮೇಳದ ಯಜಮಾನನ ಕಷ್ಟ, ನಷ್ಟ ನನಗೂ ತಟ್ಟಿತ್ತು.] ಬರಬರುತ್ತ ಪ್ರೇಕ್ಷಕನ ಕಣ್ಣು ಕುಕ್ಕುವ ದೀಪಗಳು ಬಹುತೇಕ ಮರೆಸೇರಿದರೂ ರಂಗದ ಬೆಳಕಿನ ಹಬ್ಬ ನಡೆದೇ ಇತ್ತು.
ರಾಘವ ನಂಬಿಯಾರ್ ಪರಿಚಯ ನನಗೆ ಕೇವಲ ಉದಯವಾಣಿಯ ಪತ್ರಕರ್ತ ಎಂಬ ಮಟ್ಟದ್ದಲ್ಲ. ಧರ್ಮಸ್ಥಳ ಮೇಳದ ಯಶಸ್ವೀ ಪ್ರಸಂಗಕರ್ತರಲ್ಲಿ ಒಬ್ಬರು ಎಂಬಲ್ಲಿಂದ ತೊಡಗಿ ಯಕ್ಷಗಾನದ ಶುದ್ಧಾಶುದ್ಧ ನಿರ್ಣಯಕ್ಕೆ ಇವರೂ ಒಂದು ನೆಚ್ಚಬಲ್ಲ ಒರೆಗಲ್ಲು ಎಂಬಲ್ಲಿವರೆಗೆ ಬೆಳೆದಿತ್ತು. ನಂಬಿಯಾರ್ ತನ್ನ ಕೆಲವು ಯಕ್ಷ ಲೇಖನಗಳ ಸಂಕಲನ – ತಿಳಿನೋಟ, ಹೊರತರಲು ಉಡುಪಿಯಲ್ಲಿ ಒಂದು ವಿಶಿಷ್ಟ ಸಭೆ ನಡೆಸಿದರು. ಅದು ಯಕ್ಷಗಾನ ಮಾತ್ರವಲ್ಲದೆ ಹಲವು ರಂಗಶಿಸ್ತಿನ ಕಲಾವಿದರ, ವಿಮರ್ಶಕರ ಕೂಟ. ಪುಸ್ತಕದ ‘ಯಜಮಾನ’ ಘನಪೃಷ್ಟರ ದಾಕ್ಷಿಣ್ಯದಲ್ಲಿ ಬೆಳಗುವ ಸನ್ನಿವೇಶವೇ ಇರಲಿಲ್ಲ. ಬೆಳಗ್ಗಿನ ಕಾಫಿ ತಿಂಡಿಯಿಂದ ತೊಡಗಿ ಮಧ್ಯಾಹ್ನದ ಊಟದವರೆಗಿನ ವ್ಯವಸ್ಥೆ ಮಾಡಿ ಪುಸ್ತಕವನ್ನು ಇಡಿಯಾಗಿಯೂ ಕೆಲವು ವಿಚಾರಧಾರೆಗಳ ಮೂಲವಾಗಿಯೂ ಹಲವು ವಿದ್ವಾಂಸರು ವಿಮರ್ಶಿಸಿದರು. ಅದರೆಲ್ಲ ವಿವರಗಳನ್ನು ಇಂದು ನೆನಪಿನಿಂದ ಹೆಕ್ಕುವ ಪ್ರಕೃತಿ ನನ್ನದಲ್ಲ. ಆದರೆ ಯಕ್ಷಗಾನ ಕಾಲದ ಜತೆ ಕಾಲಿಡುವುದೆಂದರೆ ಆಧುನಿಕ ಸರಕುಗಳನ್ನು ಕುರುಡಾಗಿ ಹೇರುವುದು ಅಲ್ಲ ಎಂಬ ದಿವ್ಯ ಸತ್ಯ ಮಾತ್ರ ನನ್ನ ಅರಿವಿಗೆ ಬಂತು, ಅಚ್ಚಳಿಯದೆ ಉಳಿದಿದೆ. ಜಾನಪದದೊಳಗಿನ ಶಾಸ್ತ್ರ ಗಟ್ಟಿಯಿದೆ, ಅಭಿವೃದ್ಧಿಯ ಬೆಳಕು ತೋರುವವರಿಗೆ ಅರಿವಿನ ಕೊರತೆಯಿದೆ ಎನ್ನುವುದು ಸ್ಪಷ್ಟವಾದಾಗ ಶಾಕ್ ಹೊಡೆದಂತೇ ಆಯ್ತು. ಬೆಳಕಿನ ಪ್ರಖರತೆಯೊಡನೆ ಉಡುಪು ತೊಡಪುಗಳ (ಆಹಾರ್ಯ) ಬದಲಾವಣೆ ಮೇಳೈಸಿ ಕಲೆ ತೀವ್ರ ಇಳಿದಾರಿಯಲ್ಲಿ ಸಾಗಿದೆ. ರಾತ್ರಿಯಿಡೀ ಎವೆಯಿಕ್ಕದ ಪ್ರೇಕ್ಷಕ ಅರಿವಿಲ್ಲದೆ ತಪ್ಪು ಸವಾರಿಯಲ್ಲಿ ಬಳಲುತ್ತಿದ್ದಾನೆ. ನಿರಂತರ ಏಕರೂಪದ ಅದರಲ್ಲೂ ಪ್ರಖರ ಬೆಳಕು, ಅದಕ್ಕೊಪ್ಪುವ ಮುಖವರ್ಣಿಕೆಯ ಬಣ್ಣ ಮತ್ತು ಉಡುಪು ತೊಡಪುಗಳ ಬದಲಾವಣೆಗಳನ್ನು ನಂಬಿಯಾರ್ ಸತರ್ಕ, ಸುವಿಸ್ತರವಾಗಿ ಖಂಡಿಸುವುದರೊಡನೆ ‘ಏನೋ ಸರಿಯಿಲ್ಲ’ ಎಂದು ತಹತಹಿಸುವ ಮನಗಳಿಗೆ ಆಶಾದೀವಿಗೆ ಬೆಳಗಿದರು. ಅಲ್ಲಿಗೇ ನಿಲ್ಲದೆ ಹವ್ಯಾಸಿಗಳನ್ನು ಕಟ್ಟಿಕೊಂಡು (ಯಕ್ಷಕೌಮುದಿ) ಆಡಿದ್ದನ್ನು ಮಾಡಿಯೂ ತೋರಲು ಹೆಣಗಿದ ಫಲವೇ ದೀವಟಿಗೆಯ ಆಟ.
ರಾಘವ ನಂಬಿಯಾರ್ ಒಮ್ಮೆ ತಮ್ಮ ದೀವಟಿಗೆ ಪ್ರಯೋಗ ನೋಡಲು ಪಡುಬಿದ್ರೆಗೆ ಆಹ್ವಾನಿಸಿದರು. ಹವ್ಯಾಸಿಗಳ ಕೂಟದ ಅಶಿಸ್ತಿನಲ್ಲಿ ನನ್ನ ಸಮಯದ ಮಿತಿ ಮೀರಿ ಬರಿದೇ ಮರಳಿದೆ. ಮುಂದೆ ಮಂಗಳೂರು ವಿವಿನಿಲಯದ ಯಕ್ಷಗಾನ ಭವನದ ಅಂಗಳದಲ್ಲಿ ಮೊದಲ ಬಾರಿಗೆ ನೋಡಿದೆ. ಆದರೆ ಅಲ್ಲಿ ಪರಿಸರದ ಕೊರತೆ ಕಾಡುವುದನ್ನು ಕಂಡು ನನ್ನ ‘ಅಭಯಾರಣ್ಯ’ದೊಳಗೊಂದು ಪ್ರಯೋಗ ಮಾಡಲು ನಾನು ವೀಳ್ಯ ಕೊಟ್ಟೇಬಿಟ್ಟೆ. ಅದೇ ಆವೇಶದಲ್ಲಿ ರಾಘವ ನಂಬಿಯಾರ್ ಕಷ್ಟವೋ ನಷ್ಟವೋ ಲೆಕ್ಕಿಸದೆ, ತಂಡ ಮತ್ತು ಪ್ರಯೋಗದ ಬಿಡಿ ವಿವರಗಳ ಗೋಜಲು ಬಿಡಿಸುವ ಕಾರ್ಯಭಾರದೊಡನೆ, ನಾಮಕಾವಸ್ಥೆ ಸಗಟು ಸಂಭಾವನೆಗೆ ಪ್ರದರ್ಶನ ನೀಡಲು ಒಪ್ಪಿಕೊಂಡರು. ಸಹಾಯಕ್ಕೆ ಸರಕಾರೀ ಇಲಾಖೆಗಳ ಎಡತಾಕುವುದು, ಆರ್ಥಿಕ ಪ್ರಾಯೋಜಕರನ್ನು ಒಪ್ಪಿಕೊಳ್ಳುವುದು ನನ್ನ ಜಾಯಮಾನದಲ್ಲೇ ಇರಲಿಲ್ಲ. ತೋರಿಕೆಂii ಲಕ್ಷ್ಯವೊಂದನ್ನು ಇಟ್ಟು ಪರೋಕ್ಷ ಆದಾಯಮೂಲಗಳನ್ನು ಶೋಧಿಸುವುದಂತೂ ನಾನು ಕಾಯಾ ವಾಚಾ ಮನಸಾ ವಿರೋಧಿಸಿದವನು. (ಕರ್ಣನ ಮಾತು ‘ಎರಡು ಮನ, ಎರಡು ನಾಲಗೆ ಎಂದು ಕಂಡೈ’) ನನ್ನ ಆರ್ಥಿಕ ಮಿತಿ, ಸಂಘಟನೆಯ ಶಕ್ತಿಗಳ ಅರಿವಿಲ್ಲದೆ ಧುಮುಕಿದ್ದೇ ಆದರೂ ಅವನ್ನು ಸಂಚಯಿಸಲು ಸಾಕಷ್ಟು ಸಮಯವಿತ್ತು ಎನ್ನುವುದೊಂದೇ ಸಮಾಧಾನದ ಸಂಗತಿ.
ಜುಲೈ ತಿಂಗಳ ಜಿಟಿಜಿಟಿ ಮಳೆಯಲ್ಲೊಂದು ಆದಿತ್ಯವಾರ ನಾನು ದೇವಕಿ ಅಭಯರು ‘ಅಭಯಾರಣ್ಯ’ದಲ್ಲಿ ನೈಜಾರ್ಥದಲ್ಲಿ ಮಣ್ಣಿನ ಮಕ್ಕಳಾಗಿದ್ದಾಗ ರಾಘವ ನಂಬಿಯಾರ್ ಬಂದರು. ಒತ್ತಿನ (ನನ್ನ ಚಿಕ್ಕಮ್ಮನ ಕೃಷಿಭೂಮಿ) ಎಡೆಂಬಳೆಯ ಪದವು (ಮುಳಿ ಹುಲ್ಲಷ್ಟೇ ಇರಬಹುದಾದ ಗುಡ್ಡೆಯ ಬೋಳು ನೆತ್ತಿ) ಒಂದನ್ನು ಆಯ್ದು, ರಂಗ ಚೌಕಿ ಇತ್ಯಾದಿ ಆಯ ಅಳತೆಗಳನ್ನು ಸೂಚಿಸಿದರು. ಕನಿಷ್ಠ ಐದು ತಿಂಗಳ ಬಿಡುವಿಟ್ಟುಕೊಂಡು ನವೆಂಬರಿನ ಒಂದು ದಿನವನ್ನು ಪ್ರದರ್ಶನಕ್ಕೆ ನಿಷ್ಕರ್ಷಿಸಿ ನಿರ್ಗಮಿಸಿದರು. ನನ್ನದೇನಿದ್ದರೂ ಅಂತಾರಾಷ್ಟ್ರೀಯ ಕ್ರಿಯಾಸೂಚಿಗಳನ್ನು ರುಜು ಮಾಡುವ ಕೋಟುಬೂಟಿನವರ ಸ್ಥಾನ! ಕ್ರಿಯಾ ಮುಖದಲ್ಲಿ ಚಿಕ್ಕಮ್ಮನ ಮಗ ಸತ್ಯನಾರಾಯಣ (ಉರುಫ್ ಸತ್ಯ ಉರುಫ್ ಪಾಪಣ್ಣ, ನನಗೆ ಸಂಬಂಧದಲ್ಲ್ನಿ ತಮ್ಮ) ಅವನ ತಂದೆ (ನನ್ನ ಚಿಕ್ಕಪ್ಪ) ಗೋಪಾಲ ಭಟ್ಟರ ಅನುಮೋದನೆಯೊಡನೆ ನಡೆಸಿಕೊಡುವವನಿದ್ದ. ಮಳೆಗಾಲ ಮುಗಿದು ಚಳಿ ನಡೆಯುವ ಕಾಲದಲ್ಲಿ ಮುಳಿ ಹೆರೆದು, ಪೊದರು ಸವರಿ ಪ್ರೇಕ್ಷಾಂಗಣ, ವೇದಿಕೆ ಮತ್ತು ಚೌಕಿಯ ಜಾಗಗಳನ್ನು ತೆರವುಗೊಳಿಸುವಲ್ಲಿಂದ ತೊಡಗಿ ಪ್ರದರ್ಶನದ ದಿನದವರೆಗೂ ವ್ಯವಸ್ಥಿತವಾಗಿ ಕೆಲಸ ಸಾಗಿತು. ಹಾಳುಬಿದ್ದ ಕಲ್ಪಣೆಗಳಿಗೆ ರಕ್ಷಣಾ ಬೇಲಿ ಕಟ್ಟಿ (ಆಟದ ದಿನ ಕತ್ತಲಲ್ಲಿ ಯಾರಾದರೂ ಬೀಳದಂತೆ) ನೆಲದಲ್ಲಿ ಕೂರುವವರಿಗೆ ಕಿರಿಕಿರಿಯುಂಟು ಮಾಡಬಹುದಾದ ಚರಳುಗಲ್ಲುಗಳನ್ನು ಹೆಕ್ಕಿಸುವ ಸೂಕ್ಷ್ಮದವರೆಗೂ ಸತ್ಯ ತಲೆ ಓಡಿಸಿದ. ವೇದಿಕೆಯ ನೆಲಕ್ಕೆ ಒಂದು ಮುರಕಲ್ಲಿನೆತ್ತರಕ್ಕೆ ಮಿದುಮಣ್ಣು ತುಂಬಿ ಬಿಗಿಗೊಳಿಸಿ, ಸೆಗಣಿ ಸಾರಿಸಿದ. ಮೂಲೆಗಳೆಗೆ ನಾಲ್ಕು ಅಡಿಕೆ ಕಂಬ ನೆಟ್ಟು, ಅವಕ್ಕೆಲ್ಲ ಮಾವಿನ ಸೊಪ್ಪಿನ ಕುಚ್ಚು ಕಟ್ಟಿ, ರಂಗದ ನೆತ್ತಿಗೊಂದು ಬಿಳಿ ಬಟ್ಟೆ ಬಿಗಿದು ಮುಗಿಸಿತು. ಅದರ ಹಿತ್ತಿಲಿನಲ್ಲೇ ಚೌಕಿ – ವೇಷ ಕಟ್ಟುವ ಅಂಕಣ. ನನ್ನ ಅಂಗಡಿಯಲ್ಲಿ ಧಾರಾಳ ಬರುವ ಬಿಳಿ ಪ್ಲ್ಯಾಸ್ಟಿಕ್ ನೇಯ್ಗೆಯ ಗೋಣಿಯನ್ನು ಬಿಡಿಸಿ, ಜೋಡಿಸಿ ಮರೆ ಕಟ್ಟಿದೆವು. ಮತ್ತಿಂಥದ್ದೇ ಜೋಪಡಿ ವ್ಯವಸ್ಥೆ ಕ್ಯಾಂಟೀನಿಗೂ ಮಾಡಿದ್ದೆವು.
ನಮ್ಮ ನಿರೀಕ್ಷಿತ ಪ್ರೇಕ್ಷಕ ಸಂಖ್ಯೆ ನೂರಿನ್ನೂರು ಮೀರುವಾಗ, ಕಲಾವಿದರು ಅನಿವಾರ್ಯವಾಗಿ ಆಧುನಿಕರಿರುವಾಗ ಧ್ವನಿವರ್ಧಕದ ವ್ಯವಸ್ಥೆ ಮಾತ್ರ ಅನಿವಾರ್ಯವಿತ್ತು. ಅದಕ್ಕೂ ಮತ್ತು ಚೌಕಿ, ಕ್ಯಾಂಟೀನ್, ಸೀಮಿತ ದಾರಿ ದೀಪಗಳಿಗಾಗಿ ನನ್ನ ಮತ್ತು ನೆರೆಯಂಗಡಿಗಳ ಪುಟ್ಟ ಜನರೇಟರ್ (೬೫೦ ಸಿಸಿ) ಒದಗಿದವು. ರಂಗದ ಕಂಬ ಸುತ್ತಿದ ಎಲೆಗಳ ನಡುವೆ ಮೈಕ್ ಹುಗಿದು ನೋಟಕ್ಕೆ ‘ಶುದ್ಧ’ ಪ್ರಾಚೀನರಾದೆವು. ಮತ್ತೂ ಒದಗಬಹುದಾದ ತುರ್ತು ಪರಿಸ್ಥಿತಿಗಳಿಗೆ ಎರಡು ಮೂರು ಸೋಲಾರ್ ದೀಪಗಳನ್ನೂ ಸಜ್ಜುಗೊಳಿಸಿಟ್ಟುಕೊಂಡಿದ್ದೆವು.
ಮಂಗಳೂರು ನಗರದಿಂದ ಸುಮಾರು ಇಪ್ಪತ್ತೊಂದು ಕಿಮೀ ದೂರದ ಈ ಜಾಗಕ್ಕೆ ಪ್ರೇಕ್ಷಕರು ಕತ್ತಲೆಗೆ ಮುನ್ನ ಬಂದು, ಸಮಾಧಾನ ಚಿತ್ತದಲ್ಲಿ ಆಟದ ನಿರೀಕ್ಷೆಯಲ್ಲಿ ಉಳಿಯುವುದು ಹೇಗೆ? ಆಗ ಆಟಕ್ಕೆ ಪೀಠಿಕೆಯಾಗಿ, ಸಂಜೆಯಿಂದಲೇ ತೊಡಗುವಂತೆ ನನ್ನ ‘ಅಭಯಾರಣ್ಯ’ದ ಪ್ರಾಕೃತಿಕ ಪುನರುತ್ಥಾನದ ಸಂದೇಶವನ್ನು, ವನ್ಯ ಸಂರಕ್ಷಣೆಯ ಪಾಠವನ್ನು ಜೊತೆಗೆ ಬಿಂಬಿಸುವ ಮೂರು ಕಾರ್ಯಕ್ರಮಗಳನ್ನು ಜೋಡಿಸಿಕೊಂಡೆ.
ಪ್ರಾಕೃತಿಕ ಸತ್ಯಗಳ ಬಗ್ಗೆ ಪ್ರೀತಿ, ಅಧ್ಯಯನ ಮತ್ತು ಅನುಭವ ಹದವಾಗಿ ಬೆರೆಸಿ ಅಪಾರ ಸಾಹಿತ್ಯ ಸೃಷ್ಟಿಸಿದ ಹಾಗೇ ಅಪಾರ ಜನಪ್ರಿಯತೆಯನ್ನೂ ಗಳಿಸಿದ ಪೂರ್ಣಚಂದ್ರ ತೇಜಸ್ವಿ ನನ್ನ ಮೊದಲ ಲಕ್ಷ್ಯ. ತೇಜಸ್ವಿಯ ಜನಪ್ರಿಯತೆ ಹೆಚ್ಚುವುದಕ್ಕೂ ಹಿಂದೊಮ್ಮೆ ಅವರು ನನ್ನ ಅಂಗಡಿಗೆ ಬಂದ ನೆನಪೇನೋ ನನಗಿತ್ತು. ಅವರದೇ ಸ್ಕೂಟರಿನಲ್ಲೋ ಇನ್ಯಾರದೋ ಬೈಕಿನಲ್ಲೋ ಮಂಗಳೂರಿಗೆ ಬಂದವರು ಹೀಗೇ ನನ್ನಲ್ಲಿಗೆ ಬಂದು ಒಂದೆರಡು ಪುಸ್ತಕ ಕೊಂಡಿರಬೇಕು. ಅದಕ್ಕೂ ಮಿಗಿಲಾಗಿ ಈ ಪುಳಿಚಾರಿನವನ ಬಳಿ ಒಳ್ಳೆಯ (ಮಂಗಳೂರು) ಮೀನಿನಡುಗೆ ಸಿಗುವ ಹೋಟೆಲ್ ಕೇಳಿ ಪೆಚ್ಚಾಗಿದ್ದರು. ಆ ನೆನಪು ಮೀರಿದ ತೇಜಸ್ವಿ ಒಡನಾಟ ನನಗೆ ಇರಲಿಲ್ಲ. ನಮ್ಮಿಬ್ಬರ ತಂದೆಯಂದಿರ (ಕುವೆಂಪು ಮತ್ತು ಜಿಟಿನಾ) ಆತ್ಮೀಯತೆಯ ಅರಿವು ಇಬ್ಬರಿಗೂ ಸ್ಪಷ್ಟವಿತ್ತು. ನಾನೊಬ್ಬ ಉತ್ಸಾಹೀ (ತೇಜಸ್ವಿಯದೂ ಸೇರಿದಂತೆ) ಪುಸ್ತಕ ಮಾರಾಟಗಾರ ಮತ್ತು ಪರ್ವತಾರೋಹಣವೇ ಮೊದಲಾದ ಸಣ್ಣಪುಟ್ಟ ಪ್ರಕೃತಿಪರ ಚಟುವಟಿಕೆಯುಳ್ಳವ ಎಂದು (ತೇಜಸ್ವಿಯವರ) ‘ಪುಸ್ತಕ ಪ್ರಕಾಶನ’ದ ನಿರ್ವಾಹಕ ಗೆಳೆಯ ಪ್ರೊ| ಶ್ರೀರಾಮ್ ಮೂಲಕ ಕಾಲಕಾಲಕ್ಕೆ ತೇಜಸ್ವಿಗೆ ತಿಳಿದಿರುವ ಸಾಧ್ಯತೆಯಿತ್ತು. ಎಲ್ಲಾ ಸೇರಿಸಿ ಒಂದು ದೀರ್ಘ ಪತ್ರ ನೇರ ತೇಜಸ್ವಿಗೆ ಬರೆದೇ ಬಿಟ್ಟೆ. ನನ್ನ ಅನುಮಾನಗಳನ್ನು ಹೊಡೆದು ಹಾಕುವಂತೆ ಮೂರನೇ ದಿನವೇ (ಪತ್ರ ತಲಪಿದಂದೇ) ತೇಜಸ್ವಿ ನನಗೆ ದೂರವಾಣಿಸಿದರು!
“ಆ ಸಿಟಿ ನಡುವೆ, ಕಲ್ಲು ನೆಲದಲ್ಲಿ ಯಾಕ್ರೀ ಹಾಳಾಗ್ತೀರಾ. ಇಲ್ಲಿ ಬನ್ರೀ, ಹಾಳಾಗ್ತಿರೋ ಪಶ್ಚಿಮ ಘಟ್ಟದ ಉದ್ದಕ್ಕೆ ಬನ್ರೀ. ನಾವು ಸಮಾನ ಮನಸ್ಕರು ಸೇರಿ ಒಂದು ನೂರೋ ಐನೂರೋ ಎಕ್ರೆ ಕೊಂಡು ಕಾಪಾಡಬೇಕು ಕಣ್ರೀ” ಹೀಗೆ ಮೊದಲು ಪ್ರೀತಿಯಿಂದ ಎರಡು ಬೈದರು. ಅನಂತರ ನನ್ನ ಪತ್ರದ ನಿಲುಮೆಗೆ ನಿಲುಕದ ನಿಬಂಧನೆಗಳ ಜೊತೆಗೆ ಬರಲೊಪ್ಪಿದರು! ಇದೇನು ವಿಚಿತ್ರ ಎಂದು ನಿಮ್ಮ ಊಹೆಗೆ ಬಿಡದೆ ನಾಲ್ಕು ಮಾತು ಸೇರಿಸಿಬಿಡ್ತೇನೆ. ನನ್ನ ಪತ್ರದಲ್ಲಿ ನಕ್ಷೆ ಸಹಿತ ಮಂಗಳೂರು, ಅಭಯಾರಣ್ಯಗಳನ್ನು ಕಾಣಿಸಿ ಪ್ರಯಾಣ, ವಾಸ ವ್ಯವಸ್ಥೆಗಳ ಬಗ್ಗೆ ಬರೆದುಕೊಂಡಿದ್ದೆ. ಸೆಕೆ, ವಾಹನಗಳ ಹೊಗೆದೂಳಿನ ಮಂಗಳೂರಿನತ್ತ ತಲೆಯೇ ಹಾಕುವುದಿಲ್ಲ ಎನ್ನುವುದರ ಜೊತೆಗೆ ಇಲ್ಲಿ ಉಳಿಯುವ ಯೋಚನೆಯನ್ನೇ ನಿರಾಕರಿಸಿದರು. [ಮೂರು ನಾಲ್ಕು ದಿನಗಳ ಹಿಂದಷ್ಟೇ ಮಂಗಳೂರು ವಿವಿನಿಲಯದ ಕನ್ನಡ ಅಧ್ಯಾಪಕರ ಪುನರ್ಮನನ ಶಿಬಿರದ ಸಮಾರೋಪ ಸಭೆಗೆ ತೇಜಸ್ವಿಯನ್ನು ಆಹ್ವಾನಿಸಲು ಡಾ| ಚಿನ್ನಪ್ಪ ಗೌಡರು ಮೂಡಿಗೆರೆಗೆ ಹೋಗಿ ವಿಫಲರಾಗಿದ್ದರು. ನಾನು ಇದರ ಅರಿವಿಲ್ಲದೆ ಸಮೀಪದ ವಿವಿನಿಲಯದ ಅತಿಥಿಗೃಹದಲ್ಲಿ ವಾಸವ್ಯವಸ್ಥೆ ಬೇಕಾದರೆ ಕಲ್ಪಿಸುವ ಮಾತು ಆಡಿದ್ದೆ!] ಶುದ್ಧ ಗೆಳೆಯನ ನೆಲೆಯಲ್ಲಿ ತಮ್ಮದೇ ವ್ಯವಸ್ಥೆಯಲ್ಲಿ ಸಮಯಕ್ಕೆ ಸರಿಯಾಗಿ ಅಭಯಾರಣ್ಯಕ್ಕೆ ಬಂದು, ಸಭೆಯಲ್ಲಿ ಭಾಗಿಯಾಗಿ, ಯಕ್ಷಗಾನಕ್ಕೆ ಪೂರ್ಣ ಕೂರದೆ ಅಂದೇ ಮರಳಲಿದ್ದರು. ಖರ್ಚು, ಗೌರವಧನಗಳ ನನ್ನ ಪ್ರಸ್ತಾವವನ್ನು ಪೂರ್ಣ ನಿರಾಕರಿಸಿದರು.
ಸಂತೆಮಾಳದಂತಿದ್ದ ವನಧಾಮವೊಂದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಖ್ಯಾತಿ ಕೆ.ಎಂ ಚಿಣ್ಣಪ್ಪನವರದು. ಆ ಕಾಡು ನಾಗರಹೊಳೆ. ಚಿಣ್ಣಪ್ಪನವರ ದೈಹಿಕ ನಿಲುವಿನಷ್ಟೇ (ಸುಮಾರು ಆರೂವರೆ ಅಡಿ ಎತ್ತರ) ಅವರ ವ್ಯಕ್ತಿತ್ವವೂ ಉನ್ನತಮಟ್ಟದ್ದು. ವನ್ಯ ಸಂರಕ್ಷಣೆಯ ಪಣ ತೊಟ್ಟ ಇವರು ಯಾವ ವನ್ಯವಿರೋಧಿಗೂ ಬಾಗಲಿಲ್ಲ. ಸ್ವಂತ ಜೀವ ಒತ್ತೆಯಿಡುವ ಸಂದರ್ಭದಲ್ಲೂ “ಇಷ್ಟು” ಬಳುಕಲಿಲ್ಲ. ಇವರ ಎರಡು ದಶಕಕ್ಕೂ ಮಿಕ್ಕು ನಾಗರಹೊಳೆ ಕಟ್ಟುವ, ಉಳಿಸುವ ಛಲಕ್ಕೆ ಸಿಕ್ಕ ಬಹುಮಾನವೆನ್ನುವಂತೆ ಇವರು ಸ್ವಯಂ ನಿವೃತ್ತಿ ಪಡೆಯುವ ಅನಿವಾರ್ಯತೆ ಬಂದರೂ ಪ್ರವೃತ್ತಿ ವನ್ಯ ಸಂರಕ್ಷಣೆಯದೇ ಉಳಿಸಿಕೊಂಡಿದ್ದಾರೆ. Wild Life First, NAVICOEDಗಳ ಹೆಸರಿನಲ್ಲಿ ನಡೆಯುವ ವನ್ಯದ ರಕ್ಷಣೆ ಮತ್ತು ಸಾರ್ವಜನಿಕ ಶಿಕ್ಷಣಕ್ಕೆ ಇಂದು ಚಿಣ್ಣಪ್ಪ ನೇತಾರ. ಇವರ ಜೀವನಕಥೆಗೂ ವನ್ಯ ರಕ್ಷಣಾ ಮಹಾಕಥನಕ್ಕೂ ಬೇಧ ಕಲ್ಪಿಸುವುದು ಕಷ್ಟ ಎನ್ನುವಂತೆ ಇವರ ಮೂರು ಸಂಪುಟಗಳ ಆತ್ಮಕಥೆಯ ಹೆಸರು ಕಾಡಿನೊಳಗೊಂದು ಜೀವ! ನಮ್ಮ ಕಾರ್ಯಕ್ರಮ ನಿಷ್ಕರ್ಷೆಯಾಗುತ್ತಿದ್ದ ಕಾಲಕ್ಕೆ ಇನ್ನೂ ಅದರ ಎರಡನೇ ಸಂಪುಟ ಬಿಡುಗಡೆಯಾಗುವುದಿತ್ತು. ಆ ಔಪಚಾರಿಕತೆಯೊಂದಿಗೆ ಚಿಣ್ಣಪ್ಪನವರನ್ನೂ ನನ್ನ ಸಭೆಗೆ ಬಯಸಿ ಪತ್ರ ಬರೆದೆ. ಹೊಸ ಜನಕ್ಕೆ, ಹೊಸ ಪರಿಸರದಲ್ಲಿ ‘ವನ್ಯಮತಪ್ರಚಾರದ’ ಅವಕಾಶವನ್ನು ಚಿಣ್ಣಪ್ಪ ತಿರಸ್ಕರಿಸುವುದು ಸಾಧ್ಯವಿರಲಿಲ್ಲ. ಹಾಗೆಂದು ಅವರ ತತ್ವಗಳಲ್ಲೇನೂ ರಾಜಿಯಿರಲಿಲ್ಲ. ಗಟ್ಟಿಯಾಗೇ ಹೇಳಿದರು “ಸ್ಥಳ, ಸಮಯ ತಿಳಿಸಿ. ನಾನು ಜೇನುಗಡ್ಡನ್ನ (ಅಡ್ಡೂರು ಸೂರ್ಯನಾರಾಯಣ ರಾವ್ಗೆ ಇವರಿಟ್ಟ ಪ್ರಿಯನಾಮ) ಬಳಸಿಕೊಂಡು ಅಲ್ಲಿರ್ತೇನೆ. ಊಟ, ವಾಸ, ಗೌರವಧನ ಎಂದು ನೀವೇನಾದರೂ ಮಾಡಿದರೆ ಹುಶಾರ್”
ಪ್ರೇಕ್ಷಕರು ತೇಜಸ್ವಿ ಮತ್ತು ಚಿಣ್ಣಪ್ಪರ ವಾಸ್ತವತೆಯಿಂದ ಹೆಚ್ಚು ಹೊರಹೋಗದಂತೆ ಆದರೆ ಪೂರ್ಣ ಕತ್ತಲೆಯೊಡನೆ ನಡೆಯಲಿದ್ದ ಯಕ್ಷಗಾನದ ಪೌರಾಣಿಕತೆಗೆ ಪ್ರವೇಶವೂ ಸಿಗುವಂತೆ ಕೊನೆಯದಾಗಿ ನಾನು ಆರಿಸಿಕೊಂಡ ವಿಷಯ ‘ಭಾರತೀಯ ಪುರಾಣಗಳಲ್ಲಿ ಪರಿಸರ, ವನ್ಯ ಸಂಬಂಧೀ ಉಲ್ಲೇಖಗಳು ಮತ್ತದರ ವಿಶ್ಲೇಷಣೆ’. ತೇಜಸ್ವಿ ಮತ್ತು ಚಿಣ್ಣಪ್ಪ ವಾಗ್ಮಿಗಳಲ್ಲ. ಆದರೆ ಈ ಮೂರನೇ ವಿಷಯದ ಅಮಿತ ವ್ಯಾಪ್ತಿ ಮತ್ತದರ ಸ್ವಾರಸ್ಯಪೂರ್ಣ ನಿರೂಪಣೆಗೆ, ಮುಸ್ಸಂಜೆಯ ಮಂಕಿನಿಂದ ದೀವಟಿಗೆಯ ಬೆಳಕಿನವರೆಗೆ ಲಂಬಿಸುವ ತಾಕತ್ತಿಗೆ ಶತಾವಧಾನಿ ರಾ. ಗಣೇಶರನ್ನು ಬಿಟ್ಟು ಇನ್ನೊಬ್ಬರನ್ನು ನನಗೆ ಊಹಿಸುವುದೂ ಅಸಾಧ್ಯ. ನಿಜವಿದ್ಯೆ ಕೊಡುವ ವಿನಯಕ್ಕೆ ಮೂರ್ತಿವೆತ್ತ ಉದಾಹರಣೆ ಈ ಗಣೇಶ್. ನನ್ನ ಸೀಮಿತ ಅನುಭವಕ್ಕೆ ನಿಲುಕಿದಂತೆಯೇ ‘ಗಣೇಶಪುರಾಣ’ ತುಂಬಾ ದೊಡ್ದದು ಮತ್ತು ಇನ್ನೊಮ್ಮೆ ಸ್ವತಂತ್ರ ಲೇಖನಕ್ಕೆ ಆಕರವೂ ಹೌದು. ಅವರಿಗೂ ಪತ್ರವೇನೋ ಬರೆದೆ ಆದರೆ ಹೊರಿಸಿದ ಜವಾಬ್ದಾರಿ (ನೂರು ತಾಕತ್ತಿನವರಲ್ಲವೇ) ಮೂರು ಮುಖದ್ದು! ವಿಷಯದ ಮೇಲೆ ದೀರ್ಘ ಮಾತಾಡಬೇಕು. ಎರಡನೆಯದಾಗಿ ಅದರ ಕೊನೆಯಲ್ಲಿ ಅದನ್ನು ಮತ್ತು ಪ್ರೇಕ್ಷಕರಿಂದ ಬರುವ ಸಂದೇಹಗಳಿಗೆ ಪರಿಹಾರಗಳನ್ನೂ ವಿರಾಮದಲ್ಲಿ ಸಂಯೋಜಿಸಿ ನನ್ನ ಪ್ರಕಟಣೆಗೊಂದು ಪುಸ್ತಕವನ್ನು ಬರೆದು ಕೊಡಬೇಕು. ಕೊನೆಯದಾಗಿ ಒಟ್ಟು ನಮ್ಮ ಆಶಯವನ್ನು ಕೀರ್ತಿಸುವಂತೆ ಒಂದು ರಾಗಬದ್ಧವಾದ ಸ್ವಾಗತ ಗೀತೆಯನ್ನು ರಚಿಸಿ ಮುಂದಾಗಿ ಕಳಿಸಿಕೊಡಬೇಕು. ಗಣೇಶ್ ಎಲ್ಲವನ್ನೂ ಲೀಲಾಜಾಲವಾಗಿ ನಡೆಸುವವರೇ. ಆದರೆ ನಾನವರನ್ನು ಸಂಪರ್ಕಿಸುವ ವೇಳೆಗಾಗಲೇ ಬಹುಕಾಲದ ಹಿಂದೆಯೇ ನಿಗದಿಯಾಗಿದ್ದಂತೆ ಅವರು ಅಮೆರಿಕಾದ ಕನ್ನಡ ಬಳಗದ (ಅಕ್ಕ) ಸಮ್ಮೇಳನಕ್ಕೆ ಹೊರಡುವ ಗಡಿಬಿಡಿಯಲ್ಲಿದ್ದರು. ಅವರ ಸಹೃದಯತೆಗೆ ಅವರೇ ಸಾಟಿಯೆನ್ನುವಂತೆ ಎಲ್ಲವನ್ನೂ ಒಪ್ಪಿಕೊಂಡರು. ಅಮೆರಿಕಾದಿಂದಲೇ ಸ್ವಾಗತ ಗೀತೆಯನ್ನು ರಚಿಸಿ ಅವರ ಗೆಳೆಯ ಸೂರ್ಯಪ್ರಕಾಶ ಪಂಡಿತರ ಮೂಲಕ ನನಗೆ ಕಳಿಸಿಕೊಟ್ಟರು.
ಅದ್ಯಾವುದೋ ಭಾವಗಾನ ಸಂದರ್ಭದಲ್ಲಿ ಆಕಾಶವಾಣಿಯ ಶ್ಯಾಮ ಭಟ್ಟರ ಮಗಳು ಮೇಘಾ ನನ್ನ ಗಮನ ಸೆಳೆದಿದ್ದಳು. ಇನ್ನೂ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದ ಅವಳ ಸಂಗೀತ ಪರಿಶ್ರಮದ ಹಿಂದೆ ಸ್ವತಃ ಆಕೆಯ ತಾಯಿಯೂ ಗುರುವಾಗಿದ್ದದ್ದು ತಿಳಿಯಿತು. ಗಣೇಶರ ಹಾಡನ್ನು ಇವರಿಗೊಪ್ಪಿಸಿ, ರಾಗ ಸೂಚನೆಗಳನ್ನು ಗಾನಧಾರೆಯಲ್ಲಿಳಿಸಿ, ನನ್ನ ಸಭೆಗೆ ವಿಸ್ತರಿಸಲು ಕೇಳಿಕೊಂಡೆ. ಶ್ಯಾಮಭಟ್ಟರ ಕುಟುಂಬ ಇದನ್ನು ಸಂತೋಷದ ಸವಾಲಾಗಿ ಸ್ವೀಕರಿಸಿತು. (ಇಂದು ಮೇಘಾ ಇಂಜಿನಿಯರಿಂಗ್ ಮುಗಿಸಿ ನನ್ನ ಚಿಕ್ಕಪ್ಪ – ಜಿ.ಟಿ ದಿವಾಕರನ ಎರಡನೇ ಮಗ – ಹರಿಯ ಹೆಂಡತಿಯಾಗಿ ನಮ್ಮ ಕುಟುಂಬದವಳೇ ಆಗಿದ್ದಾಳೆ)
೫-೧೧-೨೦೦೦, ಆದಿತ್ಯವಾರದಂದು ಅಭಯಾರಣ್ಯದಲ್ಲಿ ನಡೆದ ಕಾರ್ಯಕ್ರಮದ ಆಮಂತ್ರಣದಲ್ಲಿ ಯೋಜಿಸಿದ ಎಲ್ಲಾ ಕಾರ್ಯಗಳು ನಭೂತೋ ನಭವಿಷ್ಯತ್ ಎನ್ನುವ ಪರಿಷ್ಕಾರದಲ್ಲಿ ಐನೂರಕ್ಕೂ ಮಿಕ್ಕ ಪ್ರೇಕ್ಷಕರ ಪೂರ್ಣ ಮೆಚ್ಚುಗೆಯಲ್ಲಿ ಸಂಪನ್ನಗೊಂಡಿತು. ವಿವರಗಳನ್ನು ಕೇಳ್ತೀರಾ? ಸದ್ಯ ಇನ್ನೆರಡು ದೀವಟಿಗೆ ಪ್ರದರ್ಶನದ ವ್ಯವಸ್ಥೆಯಲ್ಲಿ ಮುಳುಗಿರುವುದರಿಂದ ಮುಂದಿನ ವಾರಕ್ಕೆ ಜಾರುತ್ತೇನೆ. ಅಲ್ಲಿವರೆಗೆ ಬರಹಗಾರನಿಗೆ ಠಾನಿಕ್ಕಾಗುವ ನಿಮ್ಮ ನುಡಿವಣಿಗಳಿಗೆ ಕೆಳಗೆ ಪ್ರತಿಕ್ರಿಯಾ ಭಾಂಡವನ್ನಿಟ್ಟಿದ್ದೇನೆ – ತುಂಬುತ್ತೀರಲ್ಲಾ?
ಆಹಾ! ನಾನು ನೋಡದ ಆಟವನ್ನು ಎಷ್ಟು ಬಣ್ಣಿಸುತ್ತೀರಿ!ಮುಂದಿನ ವಾರದ ಬರವಣಿಗೆ ಓದಲು ನಾನೂ ಕಾಯುವೆ!
Nemma chatuvatikegala bagge kelidde.adare Neevu ,nana kalpanegintha,innuu attaradaliddiri.Aatada vivarakke mundina varada varege kayabekalla!!!! Eirali kayona………
ನಿನ್ನೆಯಶ್ಟೆ (ಶನಿವಾರ) ಮಂಟಪ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನವನ್ನು ಆಳ್ವಾಸ್ ನುಡಿಸಿರಿಯಲ್ಲಿ ನೋಡಿದೆ. ಅವರಿನ್ನು ಏಕವ್ಯಕ್ತಿ ಪ್ರದರ್ಶನವನ್ನೇ ಮಾಡಬೇಕಶ್ಟೆ ಯಾಕೆಂದರೆ ಅವರ ಪ್ರತಿಭೆಗೆ ಸರಿದೊರೆಯಾಗಿ ಅಭಿನಯಿಸುವ ಪುರುಶ ಪಾತ್ರ ಸಿಗುವುದು ಸಂಶಯ ನನಗೆ. ಅಂಥ ಪ್ರತಿಭೆಗಳು ಇನ್ನೂ ಹುಟ್ಟಬೇಕಾದರೆ ನಿಮ್ಮಂಥ ಕಾಳಜಿಯವರು ಬೇಕು. ಆದರೆ ಪ್ರಾಯೋಜಕರ ಸಹಾಯ ಪಡೆವ ಬಗ್ಗೆ ಅಥವಾ ಸರಕಾರಿ ಸಂಸ್ಥೆಗಳ ಸಹಾಯ ಪಡೆವ ಬಗ್ಗೆ ನಿಮ್ಮ ಅಸಹನೆ ಸರಿಯೆಂದು ನನಗೆ ಕಾಣುವುದಿಲ್ಲ.ಒಟ್ಟು ಸರಕಾರಿ ವ್ಯವಸ್ಥೆ ಬಗ್ಗೆ , ಅಥವಾ ತಾಪೇದಾರಿಕೆ ಬಗ್ಗೆ ನಿಮಗಿರುವ ಅಸಹನೆ ಬಗ್ಗೆ ಕೂದ ನನಗೆ ಒಪ್ಪಿಗೆಯಿಲ್ಲ.ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಉದ್ದೇಶಕ್ಕೆ ಒಳ್ಳೆಯವರು ಪ್ರಜೆಗಳ ಹಣವಾದ ಸರಕಾರಿ ಹಣ ಕೇಳಬೇಕು. ಅಂದಿನ ನಿಮ್ಮ ದೀವಟಿಗೆ ಆಟಕ್ಕೆ ಬರಬೇಕೆಂದಿದ್ದೆ. ಸ್ವಲ್ಪ ಅಸೌಖ್ಯವಿದ್ದುದರಿಂದ ಸ್ಕೂಟರ್ ಓಡಿಸಲು ಅಂಜಿದೆ. ಹಾಗಾಗಿ ನೋಡಲು ಮರೆತು ನಿರಾಶರಾದವರಲ್ಲಿ ನಾನೂ ಒಬ್ಬ. ಮುಂದಿನ ವರದಿಗೆ ಕಾಯುತ್ತಿದ್ದೇನೆ.
ಪ್ರಿಯ ಗಿರೀಶರೇರಾಜಕಾರಣಿಗಳು ಮತ್ತು ಅಧಿಕಾರಿಗಳು ಎಂದಿನವರೆಗೆ ತಾವು ರಾಜಸತ್ತೆಗೆ ಬದಲಿಯಲ್ಲ ಎಂದು ತಿಳಿಯುವುದಿಲ್ಲವೋ ತಾವು ಒಡೆಯರಲ್ಲ, ಸೇವಕರು ಎಂದು ಕೃತಿಯಲ್ಲಿ ತೋರುವುದಿಲ್ಲವೋ ಕನಿಷ್ಠ ಪ್ರಜಾಪ್ರತಿನಿಧಿಗಳು ಎಂಬ ಭಾವ ಬೆಳೆಸಿಕೊಳ್ಳುವುದಿಲ್ಲವೋ ನನ್ನ ಅಸಹನೆಗೆ ಮದ್ದಿಲ್ಲ. ಸುಮಾರು ಮೂವತ್ನಾಲ್ಕು ವರ್ಷಗಳಿಂದ ಪುಸ್ತಕೋದ್ಯಮ, ಪತ್ರಿಕೋದ್ಯಮ, ಪರ್ವತಾರೋಹಣ, ವನ್ಯ ಸಂರಕ್ಷಣೆ, ಹಲವು ತೆರನ ಸಾರ್ವಜನಿಕ ಸಂಸ್ಥೆಗಳ ಅನಿವಾರ್ಯ ಒಡನಾಟಗಳಲ್ಲಿ ಗಳಿಸಿದ ಅನುಭವ ನನ್ನನ್ನು ಹೀಗೆ ರೂಪಿಸಿದೆ. ಸರಕಾರೀ ಹಣ ಹೊರಡುವಲ್ಲೇ ಕುಲಾಂತಕ ಬೀಜವೂ ಇರುತ್ತದೆ. ಸಿನಿಕತನ ಸೋಮಾರಿತನದ ಸೋದರ. ಹಾಗಾಗಿ ನಮ್ಮ ಮಿತಿಯಲ್ಲಿ ಸಾಮಾಜಿಕ ಹಿತವನ್ನು ಸಾಧಿಸುವ ಪ್ರಯತ್ನ ನಡೆಸುತ್ತಲೇ ಇದ್ದೇವೆ. ಅವು ನಿಮ್ಮಂಥ ಸಹೃದಯಿಗಳಿಗೆ ಇನ್ನಷ್ಟು ಒಳ್ಳೆಯ ಕೆಲಸಗಳಿಗೆ ಪ್ರೇರಣೆ ಕೊಟ್ಟರೆ ನಾವು ಧನ್ಯರು. ಮಂಟಪ ಪ್ರಭಾಕರ ಉಪಾಧ್ಯ ಮೇಳದಲ್ಲಿ ಮೂಡಿದ ಸಿನಿಕತನವನ್ನು ತೊಡೆಯಲು ಚಡಪಡಿಸುತ್ತಿದ್ದವರು. ಎಲ್ಲಾ ಸತ್ಕಾರ್ಯಗಳಿಗೆ ಆರ್ಥಿಕ, ಕೀರ್ತಿಕಾಮನೆಗಳಿಲ್ಲದೆ ತನ್ನನ್ನು ಪೂರ್ಣತೊಡಗಿಸಿಕೊಳ್ಳುವ ಪ್ರಕಾಂಡ ಪಂಡಿತ ಶತಾವಧಾನಿ ಗಣೇಶ್ ಮಂಟಪರಿಗೆ ಜೋಡಿಯಾದದ್ದು ನಮ್ಮೆಲ್ಲರ ಪುಣ್ಯ. (ಎಷ್ಟೋ ಜನರಿಗೆ ತಿಳಿದಿರದ ಸತ್ಯ: ಮಂಟಪರು ತಮ್ಮ ಅನ್ಯ ಉದ್ದಿಮೆಯ ಗಳಿಕೆಯನ್ನು ಇಲ್ಲಿ ವಿನಿಯೋಗಿಸುತ್ತಿದ್ದಾರೆ. ಮತ್ತವರ ಸೇವಾ ಕೈಂಕರ್ಯ ಯಾವ ಕಾರಣಕ್ಕೂ ಮೇಳೈಸುವ ಇತರ ಕಲಾವಿದರ ತ್ಯಾಗದಲ್ಲಿ ಆಗದ ಎಚ್ಚರ ವಹಿಸಿದ್ದಾರೆ. ಪ್ರದರ್ಶನಕ್ಕೆ ಏನಾದರೂ ಗೌರವಧನ ಪಡೆದರೂ ಅದು ಒಟ್ಟು ವೆಚ್ಚದ ಸಣ್ಣಪಾಲೇ ಆಗುತ್ತದೆ) ಮೊದಮೊದಲ ಪ್ರಯೋಗಗಳಲ್ಲಿ ಇಬ್ಬರೂ ಸಾರ್ವಜನಿಕದಲ್ಲಿ ಹೇಳಿಕೊಳ್ಳುವುದಿತ್ತು – ಹೀಗೇ ಬಹುವ್ಯಕ್ತಿ ಪರಿಣತಿ ಸಾಧಿಸುವ ಲಕ್ಷ್ಯವಿದೆ. ವ್ಯಕ್ತಿಯಿಂದ ಮೇಳಕ್ಕೆ, ತುಣುಕುಗಳಿಂದ ಪ್ರಸಂಗಕ್ಕೆ, ಬಡಗು ತಿಟ್ಟೇ ಆಗಬೇಕೆಂದಿಲ್ಲ ತೆಂಕು ತಿಟ್ಟಿನಲ್ಲೂ ಕಲಾವಿದರು ಶ್ರದ್ದೆ ಸಾಮರ್ಥ್ಯಗಳೊಡನೆ ಮುಂದೆ ಬಂದರೆ ಅವಶ್ಯ ಪ್ರಯೋಗ ನಡೆಸೋಣ. ಇಲ್ಲ, ಜನ ಬರಲೇ ಇಲ್ಲ. ಗುರು ಬನ್ನಂಜೆ ಸಂಜೀವ ಸುವರ್ಣರ ಬಳಗ – ಉಡುಪಿಯ ಯಕ್ಷಗಾನ ಕೇಂದ್ರದ ಮಿತಿಯಲ್ಲಿ ಬಡಗು ತಿಟ್ಟಿಗೆ ಬಹಳ ಕಾಯಕಲ್ಪ ನೀಡಿದ್ದಾರೆ. ಮಂಟಪರು ಮೊದಲು ವೃತ್ತಿಮೇಳದಲ್ಲಿ ಹೆಸರು ಮಾಡಿದರೂ ಪರಿಷ್ಕಾರಕ್ಕೆ ಉಡುಪಿ ಕೇಂದ್ರಕ್ಕೆ ಗುರುಕಾಣಿಕೆ ಕೊಟ್ಟದ್ದು ನಿಮಗೆ ತಿಳಿದಿರಬಹುದು. ಇಂಥ ಒಂದು ಗುರುಸ್ಥಾನ ತುಂಬುವಲ್ಲಿ ತೆಂಕು ತಿಟ್ಟಿನಲ್ಲೂ ಜನ ಇದ್ದಾರೆ (ಕರ್ಗಲ್ಲು ವಿಶ್ವೇಶ್ವರ ಭಟ್ಟರಂತವರು). ಆದರೆ ಅವರ್ಯಾರಿಗೂ ಇಲ್ಲದ ಮಂಟಪರ ಆರ್ಥಿಕ ಬಲ, ಉಡುಪಿ ಕೇಂದ್ರದ ಸಂಘಟನಾ ಛಲ ತೆಂಕು ತಿಟ್ಟಿಗೂ ಬರಲಿ ಎಂಬರ್ಥದಲ್ಲೇ ನನ್ನ ಹಿಂದಿನ ಪತ್ರ ಕೀಲಾರು ಪ್ರತಿಷ್ಠಾನವನ್ನು ಉದ್ದೇಶಿಸಿತ್ತು. ಕೇಳಿ ಹೊಡೆದು, ಸಭಾಕ್ಲಾಸೂ ಕೊಟ್ಟಮೇಲೆ ಏನಿರಬೇಕೆಂದು ಊಹಿಸಿ, ವೈಯಕ್ತಿಕವಾಗಿ ಸಂಪರ್ಕಿಸಿ.ಒಳ್ಳೆಯ ಮಾತುಗಳಿಗೆ ಕೃತಜ್ಞತೆಗಳು.
Dear Ashoka Bhava, I heard about this programme through my mother.But reading your own words is really wonderful.I am just learning to write kannada in comp, soon I will reply in kannada.Shaila
ಒಂಬತ್ತು ವರ್ಷಗಳ ಹಿಂದೆ ನೀವು ಏರ್ಪಡಿಸಿದ್ದ ಆಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಗ್ಯ ನನಗೂ ಸಿಕ್ಕಿತ್ತು. ಉಪನ್ಯಾಸ- ಸಂವಾದ, ದೀವಟಿಗೆ ಬೆಳಕಿನ ಯಕ್ಷಗಾನ, ದೇಸಿ ತಿನಿಸುಗಳ ಕ್ಯಾಂಟೀನ್ – ಎಲ್ಲಾ ಒಂದು ಹೊಸ ಲೋಕವನ್ನೇ ಸ್ರಷ್ಠಿಸಿ ರೋಮಾಂಚನವನ್ನುಂಟು ಮಾಡಿದ್ದವು. ನಿಮ್ಮ ಲೇಖನ ಮತ್ತೊಮ್ಮೆ ಆ ಅನುಭವದ ನೆನಪಿಗೆ ಕಾರಣವಾಯಿತು. ಧನ್ಯವಾದಗಳು.
ನಮಸ್ಕಾರ ಅಶೋಕವರ್ಧನರೆ, ನಿಮ್ಮೀ ಲೇಖನ ಓದಿ ಮುದಗೊಂಡಿದ್ದೇನೆ. ನಿಮ್ಮ ಮುಂದಿನ ಪ್ರದರ್ಶನ ಯಾವಾಗ? ನೋಡಲು ಕಾತರಳಾಗಿದ್ದೇನೆ.ಪ್ರಜಾಪ್ರತಿನಿಧಿಗಳ ಬಗ್ಗೆ ನಿಮಗಿರುವ ನಿಲುವಿಗೆ ನನ್ನದೂ ಸಹಮತವಿದೆ. ಅವರನ್ನು ಅನುಸರಿಸಿ-ಅನುಕರಿಸದೆ ನಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಲು ಸಾಧ್ಯವಾಗುವ ಮಟ್ಟದಲ್ಲಿ ಆಗುವುದೆಲ್ಲವನ್ನೂ ಮಾಡುತ್ತಲೇ ಬದಲಾವಣೆಯತ್ತ ಮುಖ ಮಾಡಬಹುದಲ್ಲ! ನಮ್ಮಿಂದ ಆಗುವುದನ್ನು ಮಾಡುತ್ತಿರೋಣ.ನಿಮ್ಮ ಅಭಯಾರಣ್ಯಕ್ಕೊಮ್ಮೆ ಭೇಟಿಕೊಡುವ ಆಸೆಯಿದೆ. ನಿಮ್ಮ ಅಪ್ಪಣೆಗಾಗಿ ಅತ್ರಿಯ ಮುಂದೆ ನಿಲ್ಲುತ್ತೇನೆ, ಸದ್ಯದಲ್ಲಿಯೇ.
mantapara bagge ondu maathu : monne nudisiriyalli avara pradharshanada nanthara prekshakaraagi jeevanram avara nirdheshanada naatakadalli kandaru. marudina munjaane vidushi sheelaavara kacheriyalli kelugaraagi kulithiddaru.avaru adhyayana nadesuvavaru. Andina abhayaaranyada karyakramada nanthara pilikula nisargadhamadalli nadeda samaarambhadalloo ade prarthanaa geethe3 haadi mechchuge galisiddalu.adhakke raaga samyojane maadidavaru avala gurugalaada vidhwan Maraathe avaru.
Dear Mr Ashokawardhana,Thanks for introducing your blog site to me when I visited ABC last evening.I have gone through some of your writings[shall read the others leisurely]as well as Mr Abhay's blog.I must say your writings are wonderful ,hilarious,though humor and irony is natural in you and not intentional in your writings.Your comments about Sampaje Yakshotsava made me regret for not going and missing ,of course not the 'aata' but three course 'oota',thindi , tea and what not !