ಪುಸ್ತಕ ಅಂಗಡಿಯಲ್ಲಿ ಕಾಗದದ ಮರುಬಳಕೆಯ ಅವಕಾಶ ಅಸಂಖ್ಯ. ಅವನ್ನು ಆಡುನುಡಿಯಲ್ಲೇ ಹೇಳುವುದಾದರೆ ಕ್ಯಾಟಲಾಗು (ಬರಿಯ ಪಟ್ಟಿಯಲ್ಲ, ಪ್ರಚಾರ ಸಾಹಿತ್ಯವೂ ಆಗಬಹುದು), ಇನ್ವಿಟೇಶನ್ನು (ಅಂಗಡಿಯಲ್ಲಿ ವಿತರಿಸಬೇಕೆಂಬ ಬೇಡಿಕೆಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲೂ), ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್ ಮತ್ತು ವಿವಿಧ ಇನ್ಸ್ಟಿಟ್ಯೂಶನ್ನುಗಳ ಸೆಲ್ಫ್ ಎಡ್ರೆಸ್ಸ್‌ಡ್ ಕವರ್ಸ್ ನಿತ್ಯ ಬರುತ್ತಿರುತ್ತವೆ. ಎಲ್ಲಾ ಬೆಸ್ಟ್ ಪೇಪರ್, ಸೈಜ್ ಮತ್ತು ಎಷ್ಟೋ ಭಾಗ ನೀಟಾಗಿ ಬ್ಲ್ಯಾಂಕ್ ಕೂಡಾ ಇದ್ದೇ ಇರುತ್ತವೆ. ಬಿಲ್ಲುಗಳ (ಅನಾವಶ್ಯಕ) ಎಕ್ಸ್ಟ್ರಾ ಕಾಪೀಸ್ (ಹೆಚ್ಚುವರಿ ಪ್ರತಿಗಳ ಹಿಂಬದಿ), ಕವರಿಂಗ್ ಲೆಟರ್ರು (ಮೇಲ್ಮುಚ್ಚುವ ಪತ್ರ?), ಮತ್ತೆ (ಸಾರ್ವಜನಿಕ ಸಾಗಣೆಯಲ್ಲಿ ಕಳಿಸಿದ್ದಾದರೆ) ಡ್ಯುಪ್ಲಿಕೇಟೋ ಟ್ರಿಪ್ಲಿಕೇಟೋ ಪ್ರತಿಗಳಲ್ಲಿ ಡೆಲಿವರಿ ಚಲನ್ನು ಸಹಾ ಬರುತ್ತವೆ. (ಅವನ್ನೆಲ್ಲ ನೇರಾನೇರ ಕನ್ನಡ ಶಬ್ದಗಳಲ್ಲಿ ಹೇಳುವುದೂ ಒಂದೇ ದೇವಭಾಷೆ ಬಿಟ್ಟ ಪುರೋಹಿತನೂ ಒಂದೇ!) ಅಗತ್ಯಕ್ಕಿಂತ ಹೆಚ್ಚಿಗೆ ಔಪಚಾರಿಕತೆಗೇ ವ್ಯರ್ಥವಾಗುವ ಇವನ್ನೆಲ್ಲ ಆವಶ್ಯಕತೆಯ ನೆಲೆಯಲ್ಲಿ ಕಡಿತಕ್ಕೊಳಪಡಿಸಲು ನಾನು ಬಳಸುವ ಅಸ್ತ್ರ ಮರುಬಳಕೆ. (ಹೆಚ್ಚಿನ ವಿದ್ಯಾಸಂಸ್ಥೆಗಳು ಪಾವತಿ ಕಳಿಸಲು ಪೂರ್ವಮುದ್ರಿತ ಮೇಲ್ಮುಚ್ಚುವ ಪತ್ರಗಳನ್ನಿಟ್ಟುಕೊಂಡಿರುತ್ತವೆ. ಸಹಜವಾಗಿ ಅದರ ಖಾಲಿ ಜಾಗಗಳಲ್ಲಿ ಪಡೆಯುವವರ ಹೆಸರು, ವಿಳಾಸ, ಖಾತೆಯ ವಿವರ ತುಂಬಿಬಿಡುತ್ತಾರೆ. ಕೆಲವೊಮ್ಮೆ ಸಂಸ್ಥಾ ಮುಖ್ಯಸ್ಥನ ರುಜು ರಬ್ಬರ್ ಮೊಹರು ಇರುತ್ತದೆ. ನಾನು ಕಳಿಸಲೇ ಬೇಕಾದ ರಸೀದಿ ಜೊತೆಗೆ ಆ ಪತ್ರಗಳಲ್ಲೇ ಕೃತಜ್ಞತೆಯ ಒಂದು ಸಾಲು ಕೈಯಾರೆ ಬರೆದುಬಿಡುತ್ತೇನೆ. ‘ಇದು ಅವಮಾನಕಾರಿ’ ಎಂದೊಬ್ಬ ಪ್ರಾಂಶುಪಾಲ ನನಗೆ ಹೇಳಿ ಕಳಿಸಿದ್ದರೂ ನಾನು ವ್ರತ ಬದಲಿಸಿಲ್ಲ!) ಅದರಲ್ಲಿ ಲಕೋಟೆಗಳ ಮರುಬಳಕೆಯಲ್ಲಿ ಉಂಟಾದ ಮೂರು ರಸಪ್ರಸಂಗಗಳನ್ನು ಮಾತ್ರ ಇಲ್ಲಿ ವಿಸ್ತರಿಸುತ್ತೇನೆ.

ಕೈಕೊಟ್ಟ ವಿವೇಕ!

ನಾನು ಯಾವ್ಯಾವುದೋ ಹಳೆ ಲಕೋಟೆಗಳನ್ನು ಕತ್ತರಿಸಿ, ಅಂಟಿಸಿ, ಪಾವತಿ ಕಳಿಸುತ್ತಿದ್ದದ್ದನ್ನು ಗಮನಿಸಿದ ವೃತ್ತಿಮಿತ್ರ – ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ, ಅವರಲ್ಲಿ ಉಳಿದಿದ್ದ ಯಾವ್ಯಾವುದೋ (ಅವರದೇ ಹಳೇ ಕಾರ್ಯಕ್ರಮಗಳ) ಖಾಲೀ ಲಕೋಟೆಗಳನ್ನು ಒಂದಷ್ಟು ನನ್ನ ಒಂದು ಪಾರ್ಸೆಲ್ಲಿಗೆ ಹಾಕಿ ಕಳಿಸಿಕೊಟ್ಟಿದ್ದರು. ಅದರಲ್ಲೊಂದನ್ನುಎಳೆದು ಇನ್ನೋರ್ವ ಮಿತ್ರ – ವಿವೇಕ ಶಾನಭಾಗರಿಗೆ, ದೇಶಕಾಲದ ಮೂರು ತಿಂಗಳ ಲೆಕ್ಕ ತುಂಬಿಸಿ, ಎಡಮೂಲೆಯಲ್ಲಿ ನನ್ನಂಗಡಿಯ ಮೊಹರು ಹೊಡೆದು, ಕೊರ್ಯರ್ ಮಾಡಿದೆ. ತಿಂಗಳು ಕಳೆದರೂ ಚೆಕ್ ತಲಪಿದ ಬಗ್ಗೆ ರಸೀದಿ ಬರಲಿಲ್ಲ, ನನ್ನ ಖಾತೆಯಿಂದ ಹಣವೂ ವಜಾ ಆಗಲಿಲ್ಲ. ದೂರವಾಣಿ ಬಳಕೆಯಲ್ಲಿ (ಮುಖ್ಯವಾಗಿ ಚರವಾಣಿಗ್ರಸ್ತರಂತೆ) ದಾರಿಯ ಆಚೆ ಬದಿಯಲ್ಲಿ ನಿಂತವನಿಗೂ ಕಾಲ್ ಹೊಡೆದು, ಹಾಯ್ ಹೇಳುವ ಧಾರಾಳಿ ನಾನಲ್ಲ. ಆದರೂ ವಿವೇಕರನ್ನು ವಿಚಾರಿಸಿದೆ, ಕೊರ್ಯರ್ ಬರಲೇ ಇಲ್ಲ ಎಂದುಬಿಟ್ಟರು. ತತುಕ್ಷಣವೇ ನಮ್ಮಲ್ಲಿ ಕೊರ್ಯರ್ ಸಂಗ್ರಹಿಸಲು ಬರುವ ಹುಡುಗನಿಂದ ತೊಡಗಿ, ಬೆಂಗಳೂರಿನಲ್ಲಿ ನನ್ನ ಪತ್ರ ಹೋದ ದಿನ ವಿತರಣೆಗಿದ್ದ ಹುಡುಗನವರೆಗೆ ಎಲ್ಲರ ಜಾತಕ ಶುದ್ಧ ಮಾಡಿದೆ. ಪಾಪ ಕೊರ್ಯರ್ರಿನವರು ತಿಂಗಳ ಹಿಂದಿನ ಕಡತ ಮತ್ತು ನೆನಪುಗಳ ದೂಳು ಹೊಡೆದು, ವಿವೇಕರ ತಂದೆಯೇ ‘ಪತ್ರ ಪಡೆದು ಕೊಟ್ಟ ರಸೀದಿ’ (ಪೀಓಡೀ) ಹಾಜರು ಪಡಿಸಿ “ಅಪರಾಧಿ ನಾವಲ್ಲ” ಎಂದರು. (ಪುಣ್ಯಕ್ಕೆ ನನ್ನ ಮೇಲೆ ಹರಿಹಾಯಲಿಲ್ಲ!) ಸಂಪಾದಕತ್ವದೊಡನೆ ವಿವೇಕ್ ಸಹಜವಾಗಿ ದೊಡ್ಡ ‘ಕಬು’ (ಕಸದ ಬುಟ್ಟಿ) ಇಟ್ಟುಕೊಂಡಿದ್ದರು. ಮತ್ತದರ ತಲಾಷಿ ನಡೆಯಿತಂತೆ. ಅಲ್ಲಿ ಭದ್ರವಾಗಿ ಮಲಗಿತ್ತು ನನ್ನ ಲಕೋಟೆ! ಜೊತೆಗೆ ಅಂಥವೇ ಬೇರೆರಡೋ ಮೂರೋ ಲಕೋಟೆಗಳಿದ್ದವಾದರೂ ಅವುಗಳ ಹೂರಣ ನಿಜ ಆಮಂತ್ರಣ ಮಾತ್ರ (ಪ್ರಕಾಶಕ, ಬಿಡುಗಡೆಯಾಗಲಿದ್ದ ಪುಸ್ತಕಗಳ ಲೇಖಕರು ಪ್ರತ್ಯೇಕ ಪ್ರತ್ಯೇಕವಾಗಿ ಕಳಿಸಿದ್ದಿರಬೇಕು). ಲಕೋಟೆಯ ಮೇಲಿನ ಮುದ್ರಿತ ವಿವರಗಳನ್ನಷ್ಟೇ ನೋಡಿ, ‘ಒಂದೇ ಕಾರ್ಯಕ್ರಮಕ್ಕೆ ಎಷ್ಟು ಆಮಂತ್ರಣಪ್ಪಾ’ ಎಂಬ ವಿವೇಕದ ಮಾತು ಮಾತ್ರ ಸಿಕ್ಕಲಿಲ್ಲ. ಕಸದ ಬುಟ್ಟಿಯೂ ಕಥೆ ಹೇಳಲು ಹೊರಟರೆ ಎಷ್ಟು ಚೆನ್ನಾಗಿರುತ್ತೆ!

ಡೇಟ್ ಬಾರ್

‘ಕೊಡಗಿನ ಖಗರತ್ನಗಳು’ ಬಂದವಕ್ಕೆ ಕೂಡಲೇ ಪಾವತಿ ಕಳಿಸಿದ್ದೆ. ಲೇಖಕ, ಪ್ರಕಾಶಕ, ಎಲ್ಲಕ್ಕೂ ಮಿಗಿಲಾಗಿ ಕುಟುಂಬ ಮಿತ್ರರೇ ಆದ ಡಾ| ನರಸಿಂಹನ್ ಹಿಂದೆಯೇ ಹೇಳಿದ್ದರು “ಅಶೋಕ್, ಪುಸ್ತಕ ಜನಕ್ಕೆ ಮುಟ್ಟಬೇಕು, ನನಗೆ ಪೇಮೆಂಟ್ ಅರ್ಜಂಟಿಲ್ಲ.” ಹಾಗಾಗಿ ಸುಮಾರು ಮೂರ್ನಾಲ್ಕು ವಾರ ಕಳೆದ ಮೇಲೂ ಅವರಿಗೆ ಕಳಿಸಿದ್ದ ಚೆಕ್ ನಗದಾಗದ್ದನ್ನು ನಾನು ಗಮನಿಸಿರಲಿಲ್ಲ. ಅಂದು ನರಸಿಂಹನ್ ಸಂಕೋಚದಿಂದಲೇ ದೂರವಾಣಿಸಿದರು, “ಅಶೋಕ್ ಪುಸ್ತಕ ಬಂತಲ್ಲಾ?” ನಾನಾಶ್ಚರ್ಯದಲ್ಲೇ ಹೇಳಿದೆ, “ಅಂದ್ರೆ ಮೂರು ವಾರದ ಹಿಂದೆಯೇ ಕಳಿಸಿದ ಚೆಕ್ ಬರಲಿಲ್ಲಾಂತಾಯ್ತು!” ಕೊರ್ಯರ್ ರಸೀದಿಗಳ ರಾಶಿಯಲ್ಲಿ ವಿರಾಜಪೇಟೆದು ಹುಡುಕಿ ತೆಗೆದು ವಿವರಗಳನ್ನು ನರಸಿಂಹನ್ನರಿಗೂ ಮಂಗಳೂರು ಶಾಖೆಗೂ ಕೊಟ್ಟೆ. ಅರ್ಧ ಗಂಟೆಯಲ್ಲೇ ಶಾಖೆಯವರು “ಅಂದೇ ಇಲ್ಲಿಂದ ಹೋಗಿದೆ ಸಾರ್. ವಿರಾಜಪೇಟೆಯಲ್ಲೂ ರಿಸೀವ್ ಆಗಿದೆ. ಸ್ವಲ್ಪ ಸಮಯ ಬಿಟ್ಟು ಪೀಓಡೀ (ಪತ್ರ ಪಡೆದು ಕೊಟ್ಟ ರಸೀದಿ) ವಿವರ ಹೇಳ್ತೇವೆ ಸಾರ್.”

ನರಸಿಂಹನ್ ವಿರಾಜಪೇಟೆಯಲ್ಲಿ ತಾವು ಪುಸ್ತಕ ಕಳಿಸಿದ ಪ್ರೊಫೆಶನಲ್ ಕೊರಿಯರ್ ಕಛೇರಿಗೆ ಧಾವಿಸಿ, ತನಿಖೆ ಮಾಡಿ ನನಗೆ ಚರವಾಣಿಸಿದರು “ಇಲ್ಲಿ ಬರಲೇ ಇಲ್ವಂತೆ”. “ನಾನು ಕಳಿಸಿದ್ದು ವೀಯಾರೆಲ್ ಕೊರಿಯರ್” ತಿದ್ದುಪಡಿ ಕೊಟ್ಟೆ. ನನ್ನ ಬಗ್ಗೆ ನನಗಿಂತ ಹೆಚ್ಚು ಕಾಳಜಿಯ ಡಾಕ್ಟರ್ ಸಾಹೇಬರು ಊರಿನ ಇನ್ನೊಂದು ಮೂಲೆಯಲ್ಲೆಲ್ಲೋ ಇರುವ ವೀಯಾರೆಲ್ ಶಾಖೆಗೂ ಧಾವಿಸಿದರು. “ಹೌದು, ರಿಸೀವ್ ಆಗಿದೆ. ಪೀಓಡೀ ಕಾಣ್ತಾ ಇಲ್ಲ. ಆ ದಿನದ ಡೆಲಿವರಿ ಬಾಯ್, ಡೆಲಿವರಿ ಬಾಯ್…” ಎಂದು ತಡವರಿಸಿದರು. ಅವರ ಖಾಯಂ ಡೆಲಿವರಿ ಬಾಯ್ ಆ ದಿನ ರಜೆಯಲ್ಲೋ ಬೇರೇ ಲೈನಿಗೋ ಹೋಗಿದ್ದನಂತೆ. ತತ್ಕಾಲೀನ ಹುಡುಗ, ನರಸಿಂಹನ್ ಲಕೋಟೆ ಒಯ್ದವ ನಾಪತ್ತೆಯಾದದ್ದು ಅವರ ಅರಿವಿಗೆ ಬಂದದ್ದು ನಮ್ಮ ದೂರಿನೊಡನೆ! ಉಗ್ರ ನರಸಿಂಹರು ಹುಡುಗನ ವಿಳಾಸ ತೆಗೆಸಿ, (ಊರು ಸಣ್ಣದಾದ್ದರಿಂದ ಬಚಾವ್) ಮನೆ ಹುಡುಕಿಸಿ, ‘ಅಪರಾಧಿ’ಯನ್ನು ಮಾಲು ಸಹಿತ ಹಿಡಿದೇ ಬಿಟ್ಟರು! ಆತನ ತಪ್ಪೊಪ್ಪಿಗೆ ಸಾರಾಂಶ ಇಷ್ಟು: ಆಗಾಗ ಹೀಗೇ ತತ್ಕಾಲೀನ ಡೆಲಿವರಿ ಮಾಡಿದವನೇ ಅವನು. ಅಂದು ಏನೋ ಕಾರಣಕ್ಕೆ (ಮರವೆ? ಉದಾಸೀನ? ಉಡಾಫೆ?) ಅದನ್ನಿಟ್ಟುಕೊಂಡು ದಿನ ಕಳೆದ. ಎಚ್ಚರವಾದ ದಿನ ಲಕೋಟೆ ನೋಡ್ತಾನೆ, ದಿನಾಂಕ, ಸ್ಥಳ ಎಲ್ಲಾ ಮುದ್ರಿಸಿದ್ದಂತೆ ಅದೇ ದಿನ ಬೆಂಗಳೂರಿನಲ್ಲಿ ನಡೆಯುವ ಯಾವುದೋ ಮಹತ್ತರ ಕಾರ್ಯಕ್ರಮ ಒಂದರ ಆಮಂತ್ರಣ. ಅವನಿಗೆ ಗಾಬರಿಯಾಯ್ತು. ಇಷ್ಟು ತಡವಾಗಿ ಕೊಟ್ರೆ ಈ ಡಾಕ್ಟ್ರು ಬೆಂಗಳೂರಿಗೆ ಹೋಗುವುದಂತೂ ಅಸಾಧ್ಯ. ಆದರೆ ತನ್ನನ್ನು ಸುಮ್ಮನೆ ಬಿಟ್ಟಾರೆಯೇ ಎಂದು ತಲೆ ಓಡಿಸಿ, ಸಾಕ್ಷಿಯನ್ನು (ಪುಣ್ಯಕ್ಕೆ ನಾಶ ಮಾಡಲಿಲ್ಲ) ತನ್ನಲ್ಲೇ ಉಳಿಸಿಕೊಂಡು ಬಿಟ್ಟಿದ್ದ. ನನಗೆ ಗೊತ್ತು, ನಿಮಗೆ ಗೊತ್ತು, ಈ ಹೊತ್ತಿಗೆ ನರಸಿಂಹನ್ನರಿಗೂ ತಿಳಿದಿತ್ತು – ಆ ಲಕೋಟೆ ಮರುಬಳಕೆಯದು. ಹೂರಣ, ಅದರಲ್ಲಿ ನಮೂದಿಸಿದಂತೆ ಆಮಂತ್ರಣದ್ದಲ್ಲ, ನನ್ನ ಪತ್ರ ಮತ್ತು ಚೆಕ್!

ಜಂಕ್ ಮೇಲ್

‘ಮೈಸೂರಿನ ಶ್ರೀ ರಾಮಕೃಷ್ಣಾಶ್ರಮಕ್ಕೆ ಪಾವತಿ ಕಳಿಸಿದ್ದು ತಲಪಿಲ್ಲ’ ಎಂದು ಒಂದು ಸಲ ಸ್ಪಷ್ಟವಾಯ್ತು. ಕೊರಿಯರ್‌ನವರು ಮುಟ್ಟಿಸಿದ್ದಕ್ಕೆ ಕೊಟ್ಟ ಅಪೂರ್ಣ ಸಾಕ್ಷಿ (ಅವರ ಗ್ರಹಚಾರಕ್ಕೆ ಸ್ವೀಕರಿಸಿದವರ ರುಜು ಇರಬಹುದಾದ ಪೀಓಡೀ ಸಿಗಲಿಲ್ಲ. ಆದರೆ ಡೆಲಿವರಿ ಚಲನ್ನಿನಲ್ಲಿ ಆಶ್ರಮದ ಸೀಲಿತ್ತು) ನಮಗೆ ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಆಶ್ರಮದ ಪ್ರಸಾರಾಂಗದ ಕಛೇರಿ ಸಿಬ್ಬಂದಿ ನನ್ನ ಮೇಲಿನ ವಿಶ್ವಾಸಕ್ಕೆ ಎಲ್ಲಾ ಕಪಾಟು, ಖಾನಿಗಳನ್ನು (= ಮೇಜಿನ ಡ್ರಾಯರ್) ಹುಡುಕಿ ನಿರಾಶರಾದರು.

ಎರಡನೇ ಯೋಚನೆಯಲ್ಲಿ, ಸಣ್ಣ ಆಸೆಯಿಟ್ಟುಕೊಂಡು ಆಶ್ರಮದ್ದೇ ಆಡಳಿತ ಕಛೇರಿಯ (ಇದು ಪ್ರತ್ಯೇಕವಿದೆ) ತಲಾಷ್ ನಡೆಸಿದರು. ಪುಣ್ಯಕಾಲಗಳಲ್ಲಿ ದೇವಸ್ಥಾನ, ಆಶ್ರಮಗಳಿಗೆ ಬರುವ ಅಂಚೆಯ ರಾಶಿ ಸುಧಾರಿಸುವುದು ಸಣ್ಣ ಕೆಲಸವಲ್ಲ. ನನ್ನ ಪಾವತಿ ಹೋದ ಕಾಲ ಹೊಸ ವರ್ಷದ ಮುನ್ನಾ ದಿನಗಳು. ಹಾಗಾಗಿ ಅಲ್ಲಿನ ಮುಖ್ಯ ಲೆಕ್ಕಾಧಿಕಾರಿ ಮೇಲಿಂದ ಮೇಲೆ ಕಾಣುವಂತೆ ಶುಭಾಶಯ ಕೋರುವ ಪತ್ರಗಳನ್ನೆಲ್ಲ ಪುರುಸೊತ್ತಿನ ವಿಲೇವಾರಿಗೇಂತ ಬಂದ ಕ್ರಮದಲ್ಲೇ ಕಟ್ಟಿ ಮೂಲೆಗೆ ಹಾಕಿದ್ದರಂತೆ. ಅನಿವಾರ್ಯವಾಗಿ ಅದನ್ನು ಕೊನೇಗೆ ಬಿಡಿಸಿದರು; ಅಲ್ಲಿತ್ತು ನನ್ನ ಮೊಹರ್ ಒತ್ತಿದ ಲಕೋಟೆ. ನನಗೆ ಯಾವುದೋ ಕಂಪೆನಿ ಕಳಿಸಿದ ಸ್ವವಿಳಾಸ ಮತ್ತು ಹೊರಗೂ ಆಶಯವನ್ನು ಬಿಂಬಿಸುವ ಸಾಲುಗಳನ್ನು ಮುದ್ರಿಸಿದ ಲಕೋಟೆಯನ್ನು ನಾನು ಸಣ್ಣ ತಿದ್ದುಪಡಿಯೊಡನೆ ಮರುಬಳಸಿದ್ದೆ!

ಕಳೆದುದು ಸಿಕ್ಕಿದೆ

ಗೆಳೆಯ ಲಕ್ಷ್ಮೀನಾರಾಯಣ ರೆಡ್ಡಿ ನನ್ನಲ್ಲೇನೋ ಪುಸ್ತಕ ಕೊಂಡರು. “ರ್ರೀ ಸ್ಕೂಟರಿನಲ್ಲಿ ಕಾಲಬುಡದಲ್ಲಿ ಪುಸ್ತಕ ಇಟ್ಟುಕೊಳ್ಳುವಾಗ ಕೊಳೆಯಾಗುತ್ತೆ. ಯಾವುದಾದರೂ ಹಳೇ ಲಕೋಟೆ ಕೊಡಿ” ಎಂದು ಕೇಳಿ, ಪಡೆದುಕೊಂಡು ಹೋದರು. ಹನ್ನೊಂದು ಗಂಟೆಯ ಸುಮಾರಿಗೆ ಮಿಲಾಗ್ರಿಸ್ ಶಾಲೆಯ ಮುಖ್ಯೋಪಾಧ್ಯಾಯರು ದೂರವಾಣಿಸಿದರು, “ನೀವು ಕಳೆದುಕೊಂಡ ಪುಸ್ತಕ ಸಿಕ್ಕಿದೆ.” ನನ್ನ ಮೊದಲ ಪ್ರತಿಕ್ರಿಯೆ ಠಪ್ಪ ಬಂತು, “ಇಲ್ಲ ನಾನೇನೂ ಕಳೆದುಕೊಂಡಿಲ್ಲ.” ಮತ್ತೆ ವಿವರ ವಿಚಾರಿಸಿದಾಗ ಅದು ರೆಡ್ಡಿ ಕೊಂಡ ಪುಸ್ತಕ. ಆದರೆ ಮರುಬಳಕೆಗೆ ಕೊಟ್ಟ ಲಕೋಟೆಯ ಮೇಲಿನ ವಿಳಾಸ ನನ್ನ ಅಂಗಡಿಯದ್ದೇ ಇತ್ತು.

ಎಚ್ಚರೆಚ್ಚರ: ಈ ಮರುಬಳಕೆ ಪುರಾಣವನ್ನು ಓದಿದವರು, ಕೇಳಿಸಿಕೊಂಡವರು ಕನಿಷ್ಠ ಹತ್ತು ಜನರಿಗಾದರೂ ಮುಂದೂಡದಿದ್ದರೆ (Forward), ಪ್ರತಿ ಮಾಡಿ ಪ್ರಚುರಿಸದಿದ್ದರೆ ಏಳೇಳು ಮರುಜನ್ಮವನ್ನೆತ್ತಿ (ಜೀವವೈವಿಧ್ಯದಲ್ಲಿ ಯಾವುದಾದರೊಂದು ಎಂದಿಟ್ಟುಕೊಳ್ಳಿ) ಬಲುಬನ್ನ ಪಡಬೇಕಾಗುತ್ತದೆ – ಟ್ರಿಪ್ಪಲ್ ಶ್ರೀ ಆಕ್ರೋಶವರ್ಜನ ಮಹಾಸ್ವಾಮಿಗಳು.