ಗಣಪತಿಭಟ್ಟರ ಸ್ವಗತ: “ಊಟಿಗೆ ಬರ್ತೀರಾ” ಅದೊಂದು ದಿನ ಹೀಗೇನೋ ಅಶೋಕರು ಕೇಳಿದರು. ಊಟಿಯ ಆಕರ್ಷಣೆಯಲ್ಲಿ ವಿಳಂಬಿಸದೆ ಒಪ್ಪಿದ್ದೆ. ವಿರಾಮದಲ್ಲಿ ತಯಾರಿ ನಡೆಸಿದ್ದಂತೆ, ‘ಕೆಲಸ’ ಸಣ್ಣದಿರಲಾರದು ಎಂದನಿಸಿತು. ಕನಿಷ್ಠ ರಾತ್ರಿ ಬಸ್ಸಿನಲ್ಲಿ ನಿದ್ರೆಯಾದರೂ ಗಟ್ಟಿ ಮಾಡಬೇಕೆಂದು ನಿರ್ಧರಿಸಿದ್ದೆ. ಬಸ್ಸೇರಿದ ಕೂಡಲೇ ಎಲ್ಲರ ನಿದ್ರೆ ತಾನೇ ವಹಿಸಿಕೊಂಡಂತೆ ಪ್ರಸನ್ನ ಬಸ್ಸಿನ ಸದ್ದಿಗೆ ಶ್ರುತಿ ಸೇರಿಸಿದರು. ದೇವು ಕಡಿಮೆ ಸ್ಪರ್ಧೆ ಕೊಡಲಿಲ್ಲ. ನಾನು ಯೋಜನೆಯಲ್ಲೇ ಬಾಕಿ, ನಿದ್ದೆ ನಾಸ್ತಿ. ಮರುದಿನ ಹಗಲಿನ ಸುಮೋ ಯಾನದಲ್ಲಿ ಹೊಸದಾರಿ ನೋಡುವ ಉತ್ಸಾಹ. ನಂಜನಗೂಡು, ಗುಂಡ್ಲುಪೇಟೆಗಳವರೆಗೆ ದೃಶ್ಯಗಳ ಬಗ್ಗೆ ಉದಾಸೀನವಿದ್ದರೂಪರ್ಸ್ಪರ ಪರಿಚಯ ಬೆಳೆಸುವ ಮಾತಿಗೆ ಬರವಿರಲಿಲ್ಲ. ಮುಂದೆ ವೀರಪ್ಪನ್ ವಲಯ – ಬಂಡಿಪುರ, ಕರ್ನಾಟಕದ ಗಡಿ ದಾಟಿದ ಮೇಲೆ ಮುದುಮಲೈ. ವನಧಾಮಗಳನ್ನು ಹಾದುಹೋಗುವಾಗ ನಮ್ಮ ಕತ್ತು ಜಿರಾಫೆ. ದಕ್ಕಿದ್ದು ಮಾತ್ರ ನವಿಲು, ಜಿಂಕೆ, ಬರೀ ಮಂಗ (ಮುಸುವ).
ತೆಪ್ಪಕಾಡಿನಲ್ಲಿ ಹೆದ್ದಾರಿ ಬಿಟ್ಟು ಊಟಿಗೆ ಒಳದಾರಿ ಅನುಸರಿಸಿದೆವು. ಮಸಣಿಗುಡಿಯಿಂದ ಮುಂದೆ ಹಲವು ತಿರುವು ಮುರುವುಗಳ ದಾರಿಯಲ್ಲಿ ಒಮ್ಮೆಗೇ ಘಟ್ಟ ಏರತೊಡಗಿದೆವು. ಅಷ್ಟೇ ವೇಗದಲ್ಲಿ ಆಳಕ್ಕಿಳಿಯುತ್ತಿದ್ದ ಕೊಳ್ಳ, ವಿಸ್ತರಿಸುತ್ತಿದ್ದ ದಿಗಂತ ಮತ್ತು ಹೆಚ್ಚುತ್ತಿದ್ದ ಪ್ರಕೃತಿ ಸೌಂದರ್ಯ ಮನಸೂರೆಗೊಳಿಸಿತು. ಮುಂದೆ ಸಾರ್ವಜನಿಕ ಮೋಹದ ಊಟಿಯೇನೋ ಬಂತು. ಆದರೆ ಅದನ್ನು ಮೀರಿದ ಮಹತ್ತರ ಯೋಜನೆಯ ನಮ್ಮ ಓಟಕ್ಕೆ ಭಂಗ ಇಲ್ಲ. ಹೊರವಲಯದ ಮಾರ್ಗದ ಬದಿಯಲ್ಲೇ ಐದು ಮಿನಿಟಿನ ಚಾ ವಿರಾಮವಷ್ಟೇ ಪಡೆದು ಮುಂದುವರಿದೆವು. ದೂರದವರಿಗೆ ಊಟಿ ಅಥವಾ ಉದಕಮಂಡಲ, ನೀಲಗಿರಿ ಪರ್ವತ ಶ್ರೇಣಿಯ ಒಂದು ವಿಹಾರಧಾಮ. ವಾಸ್ತವದಲ್ಲಿ ಇದು ಊಟಿ, ಕೂನೂರು ಮತ್ತು ಕೋತಗೇರಿ ಎಂಬ ಮೂರು ಮುಖ್ಯ ಪೇಟೆಗಳು ಸೇರಿದಂತೆ ಸುಮಾರು ೪೦-೫೦ ಕಿಮೀ ಉದ್ದಕ್ಕೂ ಮಿಕ್ಕ ದಾರಿಜಾಲದ ವಲಯದಲ್ಲಿ ಹರಡಿಬಿದ್ದ ಅಸಂಖ್ಯ ಪ್ರಾಕೃತಿಕ ವೈಶಿಷ್ಟ್ಯಗಳ ಗಿರಿಧಾಮ. ಅಲ್ಲಿ ನಮ್ಮ ಮಧ್ಯಾಹ್ನದ ಊಟ ಕೋತಗೇರಿಯಲ್ಲಿ.
ಕೋತರು ಕನ್ನಡ ಮನೆಮಾತಿನ ಉದಕಮಂಡಲದ ಮೂಲವಾಸಿಗಳು. ಭಾಷಾವಾರು ರಾಜ್ಯ ವಿಂಗಡಣೆಯಲ್ಲಿ ಇದು ತಮಿಳುನಾಡು ಸೇರಿತು. ಈಗ ರಾಜಕೀಯ ಪ್ರೇರಿತ ಭಾಷಾ ದುರಭಿಮಾನದ ಹೇರಿಕೆಯಲ್ಲಿ ತಮಿಳು ರಾಡಿ ರಾಚುತ್ತದೆ. ಸಾಲದ್ದಕ್ಕೆ ಚಾ ತೋಟದ ನೌಕರಿಯ ನೆಪದಲ್ಲಿ ಪೂರ್ವದಿಂದ ಅಚ್ಚ ತಮಿಳರು ಆಮದಾಗಿ ಇಂದು ಅಂತಃವಾಹಿನಿಯೂ ‘ಉದಗಮಂಡಲಂ’ ಒಪ್ಪಿಕೊಂಡಿದೆ. ಮೂಲದಲ್ಲಿ ಕೋತರ ಕೇರಿ > ಕೋತಗೇರಿ ಸರಿಯೇ (ಕೋಟಗಿರಿ ಎನ್ನುವವರೂ ಕಡಿಮೆಯಿಲ್ಲ). ಅಲ್ಲಿಂದಲೂ ಕೆಳಗಿನ ಕೇರಿ ಇಂದು ಕೀಳ್ (ಅಥವಾ ಕೀಲು) ಕೋತಗೇರಿ. ಅದೇನೇ ಇರಲಿ, ಕೀಲ್‌ಕೋತಗೇರಿಯಿಂದ ನಮ್ಮ ನಡಿಗೆ ಸುರು. ರಾತ್ರಿ ಪ್ರಯಾಣದ ಆಯಾಸ, ಹೇರೆತ್ತಿನ ನಡಿಗೆ, ನಾಳೆ ಹೇಗೆಂಬ ಆತಂಕ. ಹೇಗೂ ಇಲ್ಲಿತನಕ ಬಂದಾಯ್ತು, ಏರಲು ಸಾಧ್ಯವಾಗದಿದ್ದಲ್ಲೆ ಬುಡದಲ್ಲಿ ಕುಳಿತು ನೋಡಿದರಾಯ್ತು ಎಂದು ಧೈರ್ಯ ತಂದುಕೊಂಡು ನಡೆದೆ. ರಂಗನಾಥ ಸ್ತಂಭವಿರುವ ಕಣಿವೆಯ ಅಂಚು ತಲಪುವಾಗ ಗಂಟೆ ನಾಲ್ಕು.
ಸ್ತಂಭ ನೋಡಿ ಸ್ತಂಭೀಭೂತನಾದೆ! ಛೆ, ಇದನ್ನು ಏರುವುದು ಉಂಟೇ? ಏರುವುದು ಹಾಗಿರಲಿ, ಇದರ ಬುಡಕ್ಕಾದರೂ ಹೋಗುವುದು ಸಾಧ್ಯವೇ! ಹೆಸರು ಏನು ಹೇಳಿದರೂ ಇದು ಬರಿಯ ಸ್ತಂಭ ಎನ್ನುವುದು ತಪ್ಪು. ಎಲ್ಲ ದಿಕ್ಕಿನಲ್ಲೂ ನೇರಮೈಯನ್ನೇ ತೋರುವ ದೊಡ್ಡ ಬೆಟ್ಟ, ಏಕಶಿಲಾ ಬೆಟ್ಟ ಎಂದೇ ಹೇಳಬೇಕು. ಸಂಪೂರ್ಣ ಶಿಲೆ, ಅಲ್ಲಲ್ಲಿ ಓರೆಯಾದ ಬಿರುಕುಗಳು, ಕೊರಕಲುಗಳು. ಅಗಲದ ಬಿರುಕುಗಳಲ್ಲಿ, ಚಡಿಗಳಲ್ಲಿ ಸಂದ ಶತಮಾನಗಳ ಕಲ್ಲಹುಡಿ ಮಣ್ಣಾಗಿ ಪಾಚಿ, ಹುಲ್ಲು, ಗಿಡಗಳು ಬೆಳೆದು ಬಂಡೆಗೆ ವರ್ಣಸಂಪತ್ತು ಹೆಚ್ಚಿಸಿತ್ತು. ನನಗಂತೂ ಭಯಂಕರ ಗಾತ್ರದ ಭೀಕರ ರಾಕ್ಷಸಿಯಂತೇ ಕಾಣಿಸಿತು. ಆಕೆ ನಮಗೆ ಬೆನ್ನು ಹಾಕಿ “ನಮ್ಮ ತಳ್ಳಿಗೆ ಬರಬೇಡಿ, ಜಾಗ್ರತೆ! ಅನಾಹುತಗಳಾದರೆ ನೀವೇ ಜವಾಬ್ದಾರರು” ಎಂದು ಎಚ್ಚರದ ನುಡಿಯಾಡಿದಂತಿತ್ತು.
ದೇವು ಕಷ್ಟ: ಜೀನಸು, ಜೀನು, ಪಾತ್ರೆ, ಪಡಗ ಹೇರೆತ್ತಿನಂತೆ ಹೊತ್ತು ಲಾಗಾಯ್ತಿನಿಂದ ಚಾರಣವೆಂಬ ದಂಡಯಾತ್ರೆಗೆ ಹೋಗುತ್ತಿದ್ದ ನನಗೆ ಶಿಲಾರೋಹಣ ಹೊಸತು. ಆದರೂ ಹೊರುವ ನಡೆಯುವ ತಾಕತ್ತು, ಕಾಡಲ್ಲೇ ಕೂರುವ ಹುಂಬತನದ ‘ಪ್ರಾವೀಣ್ಯ’ದಲ್ಲೇ ವರ್ಧನರು ಕೇಳಿದಾಗ “ಓಹೋ” ಎಂದುಬಿಟ್ಟೆ. ಆದರೆ ಆ ದಾರ್ಷ್ಟ್ಯ ರಂಗನಾಥ ಸ್ತಂಭದದೆದುರು ನಿಂತಾಗ ಉಳಿದಿರಲಿಲ್ಲ. ‘ಕೋಟಗಿರಿ’ಯ ಚಳಿಯಲ್ಲೋ ಇದನ್ನು ಏರಬೇಕೆಂಬ ಭಯದಲ್ಲೋ ಮರಗಟ್ಟಿಹೋದೆ. ಗುಟ್ಟುಬಿಡದೆ ರಾತ್ರಿ ನಿದ್ರಿಸಲು ಪ್ರಯತ್ನಿಸಿದರೂ ಅದು ಬರಲೇ ಇಲ್ಲ ಎಂದರೆ ಯಾರೂ ನಂಬರು ನನ್ನ!
ಆನಂದ ಪುರಾಣ: ನನಗೆ ರಂಗನಾಥ ಸ್ತಂಭದ ಹುಚ್ಚು ಹಿಡಿಸಿದವ ನನ್ನ ತಮ್ಮ ಆನಂದ ವರ್ಧನ (ಪ್ರಸ್ತುತ ತಂಡಕ್ಕೆ ಆನಂದ ವರ್ಜನ). ಸದ್ಯ ಅಮೆರಿಕದಲ್ಲಿ ಉದ್ಯೋಗಿಯಾಗಿರುವ ಈತ ಎಂದೂ ನನಗಿಂತ ಮುದಿಯನಾಗುವುದು ಸಾಧ್ಯವಿಲ್ಲವಾದರೂ ಬರೆಯುತ್ತಾನೆ…
ನನ್ನ ಯೌವನದ ಮದದಲ್ಲಿ ಅಂದರೆ ೧೯೭೫ರ ಸುಮಾರಿಗೆ ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯಿಂದ ಶ್ರೀ ವಿ. ಗೋವಿಂದರಾಜರ ನೇತೃತ್ವದಲ್ಲಿ ನಾವೊಂದಷ್ಟು ಸದಸ್ಯರು ರಂಗನಾಥಸ್ತಂಭ ಹತ್ತುವ ಸಾಹಸಕ್ಕೆ ಅಣಿಯಾದೆವು. ಗೋವಿಂದ್ರಾಜರ ಗೆಳೆಯ ಅರುಣಾಚಲಂ ಮದ್ರಾಸಿನ (ಇಂದಿನ ಚನ್ನೈ) ‘ಗಿರಿವಿಹಾರಿ ಮಂಡಲ’ದ ನಾಯಕ. ಅವರ ಶಿಷ್ಯವೃಂದದಲ್ಲಿ ಒಬ್ಬಳು ಕೀಲುಕೋತಗೇರಿಯ ಭಾರೀ ಜಮೀನ್ದಾರರ ಮಗಳು. ಆ ಬಳಗದ ಮತ್ತು ಆಕೆಯ Kilmel Fort Tea Estateನ ಖಾಸಾ ಆಮಂತ್ರಣದೊಡನೆ ಅಲ್ಲಿಗೆ ಹೋದ ನಮಗೆ ಸಿಕ್ಕ ರಾಜೋಪಚಾರವನ್ನು ನಾನೀಗಲೂ ಮರೆಯಲಾರೆ.
ರಾಜ ಎಂಬ ಒಬ್ಬ ತೋಟದ ಮೇಲ್ವಿಚಾರಕನ ಮಾರ್ಗದರ್ಶನ. ನಾವು ನಡೆಯುತ್ತಿದ್ದಂತೆ ಆತನ ಸಹಾಯಕರಲ್ಲಿ ಒಬ್ಬ ಮೌತ್ ಆರ್ಗನ್ ಬಾರಿಸತೊಡಗಿದ. ಇನ್ನೊಬ್ಬ ಡೋಲು. ನಾವೋ ದಿಬ್ಬಣದ ಗಂಡುಗಳು! ತೋಟ ಕಳೆದು ಕಾಡು ಸೇರಿದೆವು. ಮರೆಯಬೇಡಿ, ನಾನು ಹೇಳುತ್ತಿರುವುದು ಕಾಲು ಶತಮಾನದ ಹಿಂದಿನ ಕಾಡು. ಆ ಭೀಕರ ಕಾನನಾಂತರದೊಳು ಮಹಾಕವಿ ಕುವೆಂಪು ಹೇಳಿದಂತೆ ಜಗ್ಗದೆಯೆ ಕುಗ್ಗದೆಯೆ ಸಾಗಿದ ನಮ್ಮ ಮಂತ್ರ ಒಂದೇ – ನಡೆ ಮುಂದೆ, ನಡೆ ಮುಂದೆ. ಹಾಗೇ ಸಾಗಿದ್ದಂತೆ ಒಂದು ಕಡೆ ಬೆಟ್ಟದ ಅಂಚಿನಿಂದ ಹೊರಬರುತ್ತಿದ್ದಂತೆ ಪಾತಾಳದಿಂದ ಭುಗಿಲ್ ಎಂದು ಎದ್ದು ನಿಂತಂತೆ ಕಂಡ ದೀರ್ಘ ಕಾಯ ರಂಗನಾಥ ಸ್ತಂಭ. ದೇವರು ದಿಂಡರು ಎಂದರೇ ಅಷ್ಟಕ್ಕಷ್ಟೇ ಇರುವ ನನಗೂ ಇದನ್ನು ನೋಡಿದಾಗ ಒಮ್ಮೆಲೇ ಭಯ, ಭಕ್ತಿ ಪ್ರವಹಿಸಿತು. ಏನಿದು, ಇದರ ಸ್ಥಳಪುರಾಣ ಏನು ಎಂದು ಚಿಂತಿಸಿದಾಗಾ…
ಹಿರಣ್ಯಾಕ್ಷನನ್ನು ವರಾಹ ರೂಪದಿಂದ ವಧಿಸಿದ ವಾರ್ತೆ ಕೇಳಿ ಕೆರಳಿದ ಹಿರಣ್ಯ ಕಶ್ಯಪ ಘನಘೋರ ತಪಸ್ಸಿನಿಂದ ಪರ್ಯಾಯ ಅಮರತ್ವವನ್ನು ಪಡೆದದ್ದು ಎಲ್ಲರಿಗೂ ತಿಳಿದದ್ದೇ ಇದೆ. ಅವನ ಅಮರತ್ವಕ್ಕೆ ಕೊನೆ ತರಲು ಶ್ರೀಮನ್ನಾರಾಯಣ ಉದಕಮಂಡಲದಲ್ಲಿ ಉದಯಿಸಿದ. ಕಂಬದಲ್ಲಿ ಬಿಂಬ ರೂಪನಾಗಿ ಬಂದು ಸ್ತಂಭೀಭೂತನಾದ ಹಿರಣ್ಯಕಶ್ಯಪನನ್ನು ವಧಿಸಿದ. ಶ್ರೀ ರಂಗನಾಥನನ್ನು ಉದರದಲ್ಲಿ ಹೊತ್ತು, ನರಸಿಂಹನಾಗಿ ಹೆತ್ತ ಈ ಕಲ್ಲಕಂಬ ಈಗಲೂ ಉದಕಮಂಡಲ ನೈರುತ್ಯಕ್ಕೆ ಕೀಲುಕೋತಗೇರಿಯ ವನ್ಯ ರಾಶಿಯ ಮಧ್ಯೆ ಶ್ರೀರಂಗನಾಥ ಸ್ತಂಭವೆಂದೇ ರಾರಾಜಿಸುತ್ತಿದ್ದರೆ ಅದೇ ಇದು! (ಆನಂದ ಪುರಾಣ, ಅನಾದಿ ಪರ್ವ, ಬುರುಡೆ ಸಂಧಿ ಸಮಾಪ್ತಿ)
ಇರುವಂಥಾ ಸ್ಥಳ: ವಿವಿಧ ಭಾವ, ಪುರಾಣಗಳ ಲೋಕ ಬಿಟ್ಟು ನೆಲದ ಸತ್ಯ ನೋಡೋಣ. ನಾವು ಭವಾನಿ ನದಿಯ ದಕ್ಷಿಣ ದಂಡೆ, (ರಂಗನಾಥ) ಪಿಲ್ಲರ್ ಮಲೈಯ ದಕ್ಷಿಣ ಹುಲ್ಲುಗಾವಲಿನಲ್ಲಿ ನಿಂತಿದ್ದೆವು. ಮೂಲತಃ ಇದು ಹಾಸುಗಲ್ಲು. ಅಲ್ಲಲ್ಲಿ ಉಬ್ಬು ಪ್ರಕಟವಾದರೆ, ತಗ್ಗು ಮಣ್ಣು ಹೊತ್ತು ಹುಲ್ಲು , ಮುಳ್ಳು, ನೆಲ್ಲಿಗಂಟು ರೂಢಿಸಿ ತನ್ನದೇ ಜೀವಜಾಲ ನೇಯ್ದುಕೊಂಡ ಚೋದ್ಯ. ಅಲ್ಲೆ ಒಂದು ಸಣ್ಣ ದಿಬ್ಬಕ್ಕೆ ಕಾಡು ಕಲ್ಲಿನ ಆವರಣ, ಒಳಗೆರಡು ಭರ್ಚಿ ನೆಟ್ಟು ಆರಾಧನೆ ನಡೆಸಿದ ಲಕ್ಷಣಗಳಿವೆ. (ಆದಿವಾಸಿ ಕೋತರದಿರಬಹುದು). ಆ ಮೋಟುಗೋಡೆಯ ಎದುರು ಮೈ ಅಂದರೆ ಪೂರ್ವಕ್ಕೆ ನಮ್ಮ ಶಿಬಿರಾಗ್ನಿ. ಹಿಮ್ಮೈಯ ಮಣ್ಣು ನೆಲದಲ್ಲಿ ಅಡಿಗೆ ಮತ್ತು ಗುಡಾರಗಳು – ಇದು ನಮ್ಮ ಶಿಬಿರದ ವ್ಯವಸ್ಥೆ. ದಕ್ಷಿಣಕ್ಕೆ ಹದಿನೈದೇ ಹೆಜ್ಜೆಗಳಾಚೆ ಒಂದು ನೈಜ ಕಿರುಕೊಳ. ಮೂರು ನಾಲ್ಕಡಿ ಉದ್ದಗಲ, ಸಣ್ಣ ಚೊಂಬು ಮುಳುಗವಷ್ಟೇ ಆಳ. ಆದರೇನು ಇನ್ನೂ ಹಲವು ದಿನಗಳಿಗೆ ನಮ್ಮಂತವರ ಕೇವಲ ಆವಶ್ಯಕತೆಗಳಿಗೆ (swimming fool ಮಾಡಲಿಕ್ಕಲ್ಲ!) ಧಾರಾಳ ಒದಗುವ ನೈರ್ಮಲ್ಯ ಮತ್ತು ಒರತೆಯ ಬಲ ಅದಕ್ಕಿತ್ತು. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ!
ನಮ್ಮದು ಮೂರು ಗುಡಾರಗಳ ಶಿಬಿರ. ನನ್ನದು ಸರಳ ತ್ರಿಕೋನಾಕೃತಿಯದು – ವಾಸಿಗಳು ಇಬ್ಬರು. ಇನ್ನೊಂದು ಸ್ವಲ್ಪ ದೊಡ್ಡದು – ಚತುರ್ಭುಜ ಮಿಶ್ರ ಗೋಲಾಕಾರ, ಮೂವರಿಗೆ ಧಾರಾಳ. ಇವೆರಡೂ ವಿದೇಶದಿಂದ ಬಂದವು. ಮಡಚಿದರೆ ಎಂಥಾ ಸಣ್ಣ ಬೆನ್ನು ಚೀಲದಲ್ಲೂ ಸುಲಭವಾಗಿ ಸೇರಬಲ್ಲ, ಹೊರಲು ಭಾರವೇ ಇಲ್ಲದ, ಬಿಡಿಸಿದರೆ ಗಾಳಿ ಮಳೆ ಛಳಿಯಿಂದ ಹುಳಹುಪ್ಪಟೆಯವರೆಗೆ ಒಂದಕ್ಕೂ ಪ್ರವೇಶ ಕೊಡದ ಪಕ್ಕಾ ವ್ಯವಸ್ಥೆ. ಉಪಾಧ್ಯರು ಸದಾ ಪ್ರಯೋಗಶೀಲ. ಯಾವುದೋ ಪಾರ್ಸೆಲ್ ಬಂದ ದೊಡ್ಡ ಎಚ್.ಡಿ.ಪಿ.ಯಿ ಚೀಲವನ್ನು ಬಿಡಿಸಿ, ಸಣ್ಣದಾಗಿ ಕತ್ತರಿ, ಹೊಲಿಗೆ ಸೇವೆ ಸಲ್ಲಿಸಿ ಇಲ್ಲಿಗೆ ತಂದಿದ್ದರು. ಒಂದು ಒಣ ಕಾಡುಕೋಲು ಸಂಪಾದಿಸಿ, ಅಗತ್ಯದ ಎತ್ತರಕ್ಕೆ ಕತ್ತರಿಸಿ, ನಡುವಿನ ಆಧಾರವೆಂಬಂತೆ ನಿಲ್ಲಿಸಿ ಸುತ್ತ ತಂದ ಎಚ್.ಡಿ.ಪಿ.ಯಿಯನ್ನು ಅರಳಿಸಿದರು. ಮತ್ತೆ ಆ ಚೀಲದ ಅಂಚುಗಳ ಮೇಲೆ ಕಾಡು ಕಲ್ಲು ಹೇರಿದರು. ಇದರಿಂದ ಆ ಪ್ಲ್ಯಾಸ್ಟಿಕ್ ಹಾಳೆ ಪರೋಕ್ಷವಾಗಿ ನಿಂತ ಒಂಟಿಕೋಲನ್ನು ಸುತ್ತಣಿಂದ ಎಳೆದು ಹಿಡಿದಂತೂ ಒಳಗಿನ ವಿಸ್ತಾರ ಪ್ರದೇಶ ಬಯಸಿದವರಿಗೆ ಬೆಚ್ಚನೆ ಗೂಡೂ ಆಗಿತ್ತು. ರೆಡ್ಡಿಂಡಿಯನ್ನರ ವಿಗ್‌ವ್ಯಾಂನದ್ದೇ (ಗುಡಾರ) ಪ್ರತಿರೂಪ. ಇದರಲ್ಲೂ ಮೂರು ಜನರಿಗೆ ಧಾರಾಳ ಜಾಗವಾಗಿತ್ತು. ಹೀಗೆ ಎಲ್ಲ ಗುಡಾರ ಅರಳಿಸುವ, ಸಂಜೆಯ ಚಾ ಕಾಯಿಸುವ, ಅಡಿಗೆ ಮತ್ತು ಶಿಬಿರಾಗ್ನಿಗೆ ಉರುವಲು ಸಂಗ್ರಹಿಸುವ ಉಮೇದಿನಲ್ಲಿ ಎಲ್ಲರೂ ಬೀಸುತ್ತಿದ್ದ ಚಳಿಗಾಳಿಯನ್ನು ಮರೆತಿದ್ದೆವು ಎಂದರೆ ತಪ್ಪಿಲ್ಲ. ಮಾರ್ಗದರ್ಶಿಗಳಿಗೆ ಚಾ ಮತ್ತು ಕಾಣಿಕೆ ಕೊಟ್ಟು ಬೀಳ್ಕೊಟ್ಟೆವು. ಮತ್ತೂ ಉಳಿದ ಬೆಳಕಿನಲ್ಲಿ ನಮ್ಮ ನೆಲೆಯ ಅಥವಾ ಬಾಣೆಯ ಪೂರ್ವ ಕೊನೆಯವರೆಗೂ ನಡೆದು ಸ್ಥಳ ಪರಿಚಯ ಹೆಚ್ಚಿಸಿಕೊಂಡೆವು.
ಬಾಣೆಯ ಉತ್ತರಕ್ಕೆ (ಭವಾನಿ ನದಿಯ ಕೊಳ್ಳ ಅಥವಾ ರಂಗನಾಥ ಸ್ತಂಭದ ಅಗೋಚರ ಬುಡ ಎನ್ನಿ) ನೂರಿನ್ನೂರಡಿಯ ಕಡಿದಾದ ಪ್ರಪಾತ. ಅದರ ಆಳವನ್ನು ನಿಗೂಢವಾಗಿಡುವಂತೆ ದಟ್ಟ ಕಾಡಿನ ಹೊದಿಕೆ. ಅಲ್ಲೆಲ್ಲೋ ಇಳಿಜಾರು ಮತ್ತೆ ತೊಡಗಿ ಭವಾನಿ ನದಿಗೆ ಜಾಡು ಹುಡುಕುವುದು ಕಷ್ಟವಾಗದು ಎಂದು ನಾವು ಅಂದಾಜಿಸಿಕೊಂಡೆವು. ಪೂರ್ವಕ್ಕೆ ಲಘು ಇಳಿಜಾರಿನ, ಕರಡ ಹುಲ್ಲಿನ ಬಯಲು. ಆಳೆತ್ತರದ ಹುಲ್ಲಿನಲ್ಲಿ ನಿಧಾನಕ್ಕೆ ದಾರಿ ಬಿಡಿಸಿಕೊಳ್ಳುತ್ತ ಹಲವು ನೂರಡಿ ನಡೆದೆವು. ಇಳಿಜಾರು ಹೆಚ್ಚಿದಲ್ಲಿ ನಿಂತು ಕೇವಲ ದೃಷ್ಟಿ ಬೆಳೆಸಿದೆವು. ನಮ್ಮ ಶ್ರೇಣಿ ತುಸು ಇಳಿದು, ವಿಸ್ತಾರ ಹುಲ್ಲುಗಾವಲಿನಂಥ ಕಣಿವೆ ಕಳೆದು ಉತ್ತರಕ್ಕೆ ತಿರುಗಿತ್ತು. ಮತ್ತೆ ಒಮ್ಮೆಗೆ ಏರೇರುತ್ತಾ ಭಾರೀ ದೈತ್ಯೋರಗದಂತೆ ಬಂಡೆಯಲ್ಲಿ ಹುರುಪೆಗಳ ಸಾಲು ನಿಲ್ಲಿಸಿ, ನದಿಯತ್ತ ಇಳಿದು ಹೋಗಿತ್ತು. ಅಲ್ಲಲ್ಲಿ ಕುಸಿದು ಪುಟ್ಟ ಪುಟ್ಟ ಚೂಪುಗಳನ್ನು ಕಾಣಿಸಿದರೂ ಬಹ್ವಂಶ ಮರೆಯಾಗುತ್ತಾ ಹೋಗಿ ಭವಾನಿ ಮಡಿಲಲ್ಲಿ ಲೀನವಾಗಿತ್ತು. ಹುರುಪೆಗಳ ಸಾಲಿನಂಥ ರಚನೆಯಲ್ಲಿ ದೊಡ್ಡವೆರಡರ ಸಂದು ನಮ್ಮವರ ಕುಕವಿ ಸಮಯಕ್ಕೆ ಸಿಕ್ಕು ‘ರಕ್ಕಸ ಕಕ್ಕಸ್ಸು’ ಎಂದು ಹೆಸರು ಪಡೆದದ್ದನ್ನು ನಾನಿಲ್ಲಿ ಸ್ಮರಿಸದಿರಲಾರೆ, ಕ್ಷಮಿಸಿ.
ಪೂರ್ವ-ದಕ್ಷಿಣ (ಆಗ್ನೇಯ) ಮೂಲೆಯಲ್ಲಿ ವಿಸ್ತಾರ ಬೋಗುಣಿಯಂಥ ಒಂದು ಕಣಿವೆ. ಅದರ ಎದುರು ಮೈ ಪೂರಾ ಚಾ ತೋಟ, ಒಕ್ಕಲು ಮನೆಗಳು ಮತ್ತು ದಾರಿ ಹರಡಿ ಬಿದ್ದಿದ್ದವು. ಅಷ್ಟೇ ಹೇಳುವುದು ಚಪ್ಪೆ ವರದಿ ಎಂದು ದೇವು ಭಾವಿಸುತ್ತಾರೆ. ಅವರದ್ದು ಸದಾ ಮೂಲಕ್ಕೆ ಪೆಟ್ಟು! ದನ ಎಮ್ಮೆಗಳ ಹಾಲು ಕರುಗಳಿಗೇ ಎನ್ನುವ ಉಗ್ರವಾದಿಗಳ ಪೈಕಿ ಇವರು. ಆ ಹಾಲಿನ ಎಲ್ಲಾ ರೂಪಗಳನ್ನು (ಮೊಸರು, ಬೆಣ್ಣೆ, ತುಪ್ಪ ಇತ್ಯಾದಿ) ಅದರ ಸಹಯೋಗ ಕೋರುವ ಎಲ್ಲಾ ಕೃಷಿ ಅಥವಾ ಉದ್ಯಮಗಳನ್ನೂ (ಚಾ ಕಾಫಿ ಬೆಳೆ ಅಥವಾ ಜಾಮೂನ್ ಫೇಡೆ ಮುಂತಾದ ತಿನಿಸು) ಇವರು ತಿರಸ್ಕರಿಸುತ್ತಾರೆ. ಸಹಜವಾಗಿ ಅವರ ಮಾತಿನಲ್ಲಿ ಚಾತೋಟ “ಬೆಟ್ಟದ ಅಂಚಿನವರೆಗೆ ಹಬ್ಬಿದ ಮನುಷ್ಯನ ದುರಾಶಾಪೀಡಿತ ನಾಲಿಗೆ.”
ನಮ್ಮ ಬಾಣೆಯ ಪೂರ್ವ-ಉತ್ತರ (ಈಶಾನ್ಯ) ಮೂಲೆಯ ಸ್ಥಿತಿ ಭಿನ್ನ. ದಿಗಂತ ಅಂದರೆ ರಕ್ಕಸ ಕಕ್ಕಸ್ಸಿನಿಂದಲೂ ಆಚೆ ಹಸಿರ ಹಚ್ಚಡ ತಿಳಿಯಾಗಿ ಬಿಳಿಯಾಗಿ ನೀರ ಹರಹಾಗಿತ್ತು. ಅದು ಭವಾನಿ ನದಿಗಡ್ಡಲಾದ ಅಣೆಕಟ್ಟಿನ ಹಿನ್ನೀರು, ಭವಾನಿಸಾಗರ. ದಿಟ್ಟಿ ಪೂರ್ತಿ ಉತ್ತರಕ್ಕೆ ತಿರುಗಿಸಿ ಸಮೀಪದ ಕಣಿವೆ ನೋಡಿ. ಇನ್ನೊಂದು ಹುರುಪೆ ಸಾಲು. ಇದೂ ಹಸಿರು ಹೊದಿಕೆ ಹರಿದು ಮತ್ತಷ್ಟು ಹಂತಹಂತವಾಗಿ ಭವಾನಿ ಕಣಿವೆಗೆ ಕುಸಿದು, ಕರಗಿ ಹೋಗುವ ಕಲ್ಲ ಚೂಪುಗಳು. ಅದರ ಒಂದು ಮುಖ್ಯ ಹಾಸು ಬಂಡೆಯ ಅಂಚಿನಲ್ಲಿ ಒಂದು ಮಂಗ ಕುಳಿತಂತೆ ಯಾರೋ ನಿಲ್ಲಿಸಿದ ಕಾಡು ಕಲ್ಲು. ಹೆಸರಿನಲ್ಲೇನುಂಟು ಎಂದರೂ ನಾಗರಿಕ ಅಭ್ಯಾಸದಲ್ಲಿ ಹೆಸರು ಪ್ರಾಥಮಿಕ ಅವಶ್ಯಕತೆ. ಹಾಗಾಗಿ ನಾಳಿನ ನಾಗರಿಕ ಸೌಕರ್ಯಕ್ಕಾಗಿ ಆ ಮೋಟುಗಲ್ಲನ್ನು ನಮ್ಮ ಕುಕವಿ ಸಂದೋಹ ಹೆಸರಿಸಿತು ‘ಮಂಗಕಲ್ಲು.’
ಪಶ್ಚಿಮ ದಿಕ್ಕನ್ನು ಪೂರ್ಣ ಆವರಿಸಿ, ಎಲ್ಲವನ್ನೂ ಆಳುವವನಂತೆ ಸಾಕ್ಷಾತ್ ರಂಗನಾಥನೇ ನಿಂತಿದ್ದ. ಅವನಿಂದಾಚೆ ಸುದೂರದಲ್ಲಿ ಶಿಖರ ಶ್ರೇಣಿ, ವಿಸ್ತೃತ ಅರ್ಧ ವೃತ್ತಾಕಾರದಲ್ಲಿ ಕಣಿವೆಯನ್ನು ಬಳಸಿ ನಮ್ಮ ನೆಲವನ್ನೇ ಸಂಪರ್ಕಿಸಿತ್ತು. ಭವಾನಿ ನದಿಯ ನೂರೆಂಟು ಉಗಮಗಳೂ ಮಳೆಗಾಲದ ಪ್ರಧಾನ ಜಲಾನಯನ ಪ್ರದೇಶವೂ ಇದೇ. ಎದುರಿನ ಬೆಟ್ಟಗಳ ಎತ್ತರದಲ್ಲೆಲ್ಲೋ ಕೊಡನಾಡು ದೃಶ್ಯವೀಕ್ಷಣಾ ಕಟ್ಟೆ ಉಂಟಂತೆ. ಅಲ್ಲಿಗೆ ಸುಖಸವಾರಿಯಲ್ಲಿ ಬಂದ ಪ್ರವಾಸಿಗರು ಅಂಚುಗಟ್ಟೆಯ ಪೈಪಿಗೆ ಜೋತುಬಿದ್ದು, ವಿಸ್ತಾರವಾಗಿ ಹರಡಿಬಿದ್ದ ಏಣು, ಕಣಿವೆ, ಹಸಿರು, ನೀರುಗಳ ವವಿಧ್ಯದಲ್ಲಿ ಹೆಕ್ಕಿದರೆ ಉಂಟು – ರಂಗನಾಥ ಸ್ತಂಭ, ಒಂದು ಕಿರುಕಲ್ಲ ತುಣುಕು! ಅಲ್ಲೇ ಇರುವ ಬಾಡಿಗೆ ದುರ್ಬೀನು ಶೋಕಿಗೋ ಜಂಬದ ಫೋಟೋ ದಾಖಲೆಗೋ ಸಿಕ್ಕಿ ರಂಗನಾಥ ಹತ್ತು ಬಾಯಿಗಳಲ್ಲಿ ಬೆಳೆದದ್ದುಂಟು. ಆದರೆ ನಾವು ಅನುಭವಿಸುತ್ತಿದ್ದ ನಿಜ ಆಯಾಮದಲ್ಲಿ ಕಂಡವರೆಷ್ಟು?
ಕಂಡಿರೇ ನೀವು ಕಂಡಿರೇ?: ಸಣ್ಣ ಕಾಲಾತಿಕ್ರಮಣವನ್ನು ಕ್ಷಮಿಸಿ. ರಂಗನಾಥ ವಿಜಯಾನಂತರದ ಒಂದು ದಿನ ವಿದೇಶೀಯನೊಬ್ಬ ಏನೋ ಧಾವಂತದೆಡೆಯಲ್ಲಿ ನನ್ನ ಪುಸ್ತಕದಂಗಡಿಗೆ ನುಗ್ಗಿ ಅರೆಮನಸ್ಸಿನ ವಿಚಾರಣೆ ನಡೆಸಿದ, “by chance do you have any book on Indian Butterflies?” ನೀಲಗಿರೀಸ್ ವೈಲ್ಡ್ ಲೈಫ್ ಅಸೋಸಿಯೇಶನ್ ಹೊಸದಾಗಿ ಪ್ರಕಟಿಸಿದ್ದ ಪುಸ್ತಕ ನಾನು ಕೊಟ್ಟಾಗ ಆತನಿಗೆ ಇಮ್ಮಡಿ ಹರ್ಷ! ಮೊದಲನೆಯದಾಗಿ ಕೆಲವು ದೊಡ್ಡ ನಗರಗಳ ಮಳಿಗೆಗಳಲ್ಲೂ ಸಿಗದ ಪುಸ್ತಕ ಇಲ್ಲಿ ಸಿಕ್ಕಿದ್ದಕ್ಕೆ ಎಂದ; ನನ್ನ ಮಳಿಗೆಗೆ ಸಮ್ಮಾನವಾಯ್ತು. ಮತ್ತಿನ ಹರ್ಷ ಆ ಪುಸ್ತಕದ ಪ್ರಕಾಶಕರ ನೆಲೆ “Oh Ootacamund! My birthplace.” ಸಹಜವಾಗಿ ನಾನು ರಂಗನಾಥ ಸ್ತಂಭದ ಚಿತ್ರಗಳನ್ನು ಆತನಿಗೊಡ್ಡಿ ಕೆಲವು ಸವಾಲುಗಳನ್ನೆಸೆದೆ. ಈಗ ಅವನ ಸಂತೋಷ ನನ್ನನ್ನೂ ಆವರಿಸಿತು. “I am Tony, not the cricketer Tony Greg…” ಎಂದು ತೊಡಗಿದಾತ ಬ್ರಿಟಿಷ್ ಸೇನಾಧಿಕಾರಿಯೊಬ್ಬನ ಮಗ. ಹುಟ್ಟೂರು ಊಟಿ. ಲಖನೌ ಸೇರಿದಂತೆ ಹಲವು ಭಾರತೀಯ ನಗರಗಳಲ್ಲಿ ವಿದ್ಯಾಭ್ಯಾಸ, ತಂದೆಯಂತೆ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸೈನಿಕನಾಗಿದ್ದದ್ದು ಈತನ ಸುಖಸ್ಮರಣೆಯ ದಾಖಲೆಗಳು. “ನಾಕು ಖನ್ನಡ ಗೊಟ್ಟುಂಟು.” ಈತನ ಯೌವನದ ಗೆಳೆಯ ರಾಮಸ್ವಾಮಿ (ಆ ಕಾಲದ ಲಕ್ಷಾಧೀಶ್ವರನ ಪುತ್ರ) ಹುಚ್ಚು ಸಾಹಸಿಯಂತೆ. ರಾಮಸ್ವಾಮಿ ತನ್ನ ಪುಟ್ಟ ವಿಮಾನವನ್ನು ರಂಗನಾಥ ಸ್ತಂಭದ ಮೇಲೆ ಹಾರಿಸುವ ಪ್ರಯತ್ನಕ್ಕೆ ಬರುತ್ತಿದ್ದಾಗಲೇ ‘ರಕ್ಕಸ ಕಕ್ಕಸ್’ ಒರೆಸಿ, ಸ್ತಂಭಕ್ಕೆ ಢೀ ಕೊಟ್ಟದ್ದನ್ನು ಸ್ಪಷ್ಟವಾಗಿ ಟೋನೀ ಬಿತ್ತರಿಸಿದ. ಆತನ ವಲಯದಲ್ಲಿ ಪಿಲ್ಲರ್ ರಾಮಸ್ವಾಮಿಯ ಸ್ಮರಣಿಕೆ – Ramasvamy’s pinnacle.
[ಹೀಗೆ ಬಹು ಆಯಾಮಗಳಲ್ಲಿ ಮೈದಳೆದ ರಂಗನಾಥನನ್ನು ಮನದಲ್ಲಿ ತುಂಬಿಕೊಂಡು ಅವನ ಒತ್ತಿನಲ್ಲೇ ಮರುದಿನದ ಸಾಹಸೀ ಆರೋಹಣವನ್ನು ಕನಸಿದ ಹೆಚ್ಚಿನ ಓದಿಗೆ ಅವಶ್ಯ ಮುಂದಿನ ಕಂತು ಕಾಯಿರಿ. ನನ್ನ ಬ್ಲಾಗ್ ಮಾಸ್ಟರ್ – ಮಗ ಅಭಯ ವಾರ, ಹತ್ತು ದಿನ ಅವನ ಕೆಲಸದಲ್ಲಿ ತೀವ್ರವಾಗಿ ತೊಡಗಿಕೊಳ್ಳುವುದರಿಂದ ಪ್ರಕಟಣೆಯ ದಿನವನ್ನು ಈಗಲೇ ಸ್ಪಷ್ಟವಾಗಿ ಹೇಳಲಾರೆ. ಆದರೆ ಈ ಕಾಯುವಿಕೆಯ ತಾಪದಲ್ಲಿ ನಿಮ್ಮ ಪ್ರತಿಕ್ರಿಯೆಯ ಒಸರು ಬತ್ತದಿರಲಿ]
(ಮುಂದುವರಿಯಲಿದೆ)
ಮುಂದೇನು ಎಂಬ ಕುತೂಹಲ ಬತ್ತುವ ಮೊದಲೇ ಮುಂದಿನ ಕಂತು ಬರಲಿ.
ಒಂದು ಚಿತ್ರದ ಬಗ್ಗೆ ಸ್ಪಷ್ಟನೆ: ೧೯೮೩ರಲ್ಲಿ ನಾವು ಮೋಟಾರ್ ಸೈಕಲ್ ಏರಿ ದಕ್ಷಿಣ ಭಾರತದಲ್ಲಿ ಹತ್ತು ದಿನದ ಸಣ್ಣ ಸುತ್ತು ಹಾಕಿದಾಗ ತ್ರಿಚೂರಿನಲ್ಲಿ ಕೇರಳದ ರಾಜವಂಶಜ, ನಮ್ಮ ಕುಟುಂಬ ಮಿತ್ರ ಬಾಲಕೃಷ್ಣ ವರ್ಮರ ಮನೆಯಲ್ಲಿ (ಅವರ ತಾಯಿ, ಮಾಜೀ ಮಹರಾಣಿ ಅಲ್ಲಿ ನೆಲೆಸಿದ್ದರು) ಉಳಿದಿದ್ದೆವು. ಮುಂದುವರಿದು ಕೋತಗೇರಿಗೇ ಹೋದಾಗ ಟ್ರಾವಾಂಕೂರ್ ಹೌಸ್ ಎಂದೇ ಖ್ಯಾತಿವೆತ್ತ ಕೇರಳವರ್ಮರ ಬೇಸಗೆ ಅರಮನೆಯಲ್ಲೇ ನೆಲೆಸಿದ್ದ ಗೆಳೆಯ – ವರ್ಮ ದಂಪತಿಗಳದ್ದೇ ಆತಿಥ್ಯವನ್ನು ಸವಿದಿದ್ದೆವು. ಅವರ ಮನೆಯನ್ನೇ ನೆಲೆಯಾಗಿಟ್ಟುಕೊಂಡೇ ಅಂದು ನಮ್ಮ ತಂಡ ರಂಗನಾಥ ಸ್ತಂಭವನ್ನೂ ಏರಿತ್ತು. ಪ್ರಸ್ತುತ ಚಿತ್ರದಲ್ಲಿ ಕೋತಗೇರಿಯ ಒಂದು ಸಾರ್ವಜನಿಕ ಉದ್ಯಾನದಲ್ಲಿ ಬಿ.ಕೆ. ವರ್ಮ, ಶೋಭಾ ವರ್ಮ ಮತ್ತು ಹಿರಿಮಗು – ಸ್ಯಾಲಿ ಕ್ರಿಸ್ಟೀ (ಇಂದು ಆಕೆಯ ಕೈಯಲ್ಲಿ ಇದಕ್ಕಿಂತಲೂ ದೊಡ್ಡ ಮಗುವಿದೆ!), ನಮ್ಮ ತಂಡದ ಸದಸ್ಯ ಬಾಲಕೃಷ್ಣ, ದೇವಕಿ ಮತ್ತು ನನ್ನನ್ನು ಕಾಣಬಹುದು. ಇನ್ನೋರ್ವ ಸದಸ್ಯ – ಅರವಿಂದರಾವ್ ಕ್ಯಾಮರಾದ ಹಿಂದೆ 🙂
mundina kantina bagye eegagale kutuhala keralide.Jaya(jayakka) engineer obbara pravasa kathana kaluhisiddalu adara gungenalli eruvagale ee kantu bandu naanu ondu pravasakke hodarenu emballige muttide.
ತು೦ಬಾ ಚೆನ್ನಗಿದೆ ನಿರೂಪಣೆ ಅತ್ಯುತ್ತಮ ಕುತೂಹಲ ಕೆರಳಿಸುವ೦ತಿದೆ
ಮುಂದಿನ ಕಂತು ಬೇಗ ಬರಲಿ
ITS NICE….MINDINA KANTANNA ODUVA KUTHOOHALADONDIGE…