ಪ್ರಜಾವಾಣಿಯ ಶನಿವಾರದ ಕರಾವಳಿ ಪುರವಣಿಯಲ್ಲಿ ಗೆಳೆಯ ಮಹಾಲಿಂಗ ಭಟ್ಟರು ಕೆಲವು ಸಮಯದಿಂದ ಒಂದು ಅಂಕಣ ನಡೆಸುತ್ತಾ ಇಲ್ಲ! ಬದಲು ಅವರ ಚಿತ್ರ ಮತ್ತು ಹೆಸರು ಹೊತ್ತು ಅವರ ಸಾಹಿತ್ಯ, ಸಂಸ್ಕೃತಿಗಳ ಬಹುಮುಖೀ ಆಸಕ್ತಿಗಳೇ ಸುಮಾರು ಕಾಲುಪುಟದ ಹರವಿನಲ್ಲಿ ಮಾತಾಡುತ್ತವೆ. ವಾಸ್ತವದಲ್ಲಿ ಈ ಅಂಕಣ ಸದಾ ಕರಾವಳಿ ಎಂಬ ಪ್ರಾದೇಶಿಕ ಮಿತಿಯನ್ನು ಮೀರಿ ಕನ್ನಡ ವಲಯದಲ್ಲೇ ಪ್ರಸಾರ ಕಾಣಬೇಕಾದ ಯೋಗ್ಯತೆಯವು ಎಂಬುದು ನನ್ನನ್ನು ಕಾಡುವ ಕೊರಗು. ನಿಮ್ಮದೇ ಒಂದು ಬ್ಲಾಗ್ ತೆರೆಯಿರಿ. ಅದರ ತಾಂತ್ರಿಕ ಕಿರಿಕಿರಿಗಳು ಬೇಡವೆಂದಾದರೆ ಕನಿಷ್ಠ ಅವಧಿ, ಕೆಂಡಸಂಪಿಗೆ, ಸಂಪದಗಳಂತ ಅಂತರ್ಜಾಲ ಪತ್ರಿಕೆಗಳಿಗಾದರೂ ದಾಟಿಸಿ ಪುಣ್ಯ ಕಟ್ಟಿಕೊಳ್ಳಿ ಎಂದದ್ದೂ ಇದೆ. ಇನ್ನೂ ಹೆಚ್ಚಿನ ನನ್ನ ಮಾತಿನ ಹೊರೆಯಲ್ಲಿ ನೀವು ಬಳಲುವ ಬದಲು ಮೊದಲು ಇದೇ ಶನಿವಾರ (೩-೭-೨೦೧೦) ಪ್ರಕಟವಾದ ಲೇಖನದ ಯಥಾ ಪ್ರತಿಯನ್ನು ನಿಮ್ಮ ಓದಿಗೆ ಪ್ರಸ್ತುತಪಡಿಸುತ್ತೇನೆ. ಈ ಪ್ರಕಟಣೆಗೆ ಸಂತೋಷದಿಂದ ಒಪ್ಪಿಗೆ ಕೊಟ್ಟ ಮಹಾಲಿಂಗ ಭಟ್ಟರಿಗೂ ಸಹಕರಿಸಿದ ಪ್ರಜಾವಾಣಿ ಬಳಗಕ್ಕೂ ಕೃತಜ್ಞತೆಗಳು.

ದಾಖಲಾತಿ ವಿಚಾರದಲ್ಲಿ: ೧. ಸುಮಾರು ಇಪ್ಪತ್ತೈದು ವರ್ಷದ ಹಿಂದೆ ಕುಶಿ ಹರಿದಾಸ ಭಟ್ಟರು, ಅವರ ಮತ್ತು ನನ್ನ ತಂದೆಯ ಸಹಪಾಠಿ, ಮಿತ್ರ, ಆಗ ವಿದೇಶದಲ್ಲಿ ಭಾರತದ ರಾಯಭಾರಿಯಾಗಿದ್ದವರು, ಖ್ಯಾತ ಕತೆಗಾರ ಬಾಗಲೋಡಿ ದೇವರಾಯರನ್ನು ನನ್ನಂಗಡಿಗೆ ಕರೆದುಕೊಂಡು ಬಂದಿದ್ದರು. ಕುಶಿಯವರು ಅವರದೇ ವರಸೆಯಲ್ಲಿ ನನ್ನ ಕಾಡುಬೆಟ್ಟ ಸುತ್ತುವ ಹುಚ್ಚನ್ನು ದೇವರಾಯರಿಗೆ ಪರಿಚಯಿಸಿದರು. ಕೂಡಲೇ ದೇವರಾಯರು ಹೇಳಿದ ಮಾತಿನ ಸಾರಾಂಶ – ‘ನಿನ್ನ ಅನುಭವವನ್ನು ಅದೆಷ್ಟೇ ಕಚ್ಚಾವಾದರೂ ಲೇಖನ ಟಿಪ್ಪಣಿಗಳಲ್ಲಿ, ಫೋಟೋಗಳಲ್ಲಿ ದಾಖಲಿಸು. ಅದು ನಿಜವಾದ ದೇಶಸೇವೆ. ವಿದೇಶಿಯರು (ಬ್ರಿಟಿಷರೋ ಮೇಲಿನ ಲೇಖನ ಪ್ರಸ್ತುತಪಡಿಸುವ ಜರ್ಮನ್ ಮಿಶನರಿಗಳೋ) ಯಾವುದೇ ಕಾರಣಕ್ಕೆ ಇದನ್ನು ಮಾಡಿರಲಿ, ಮಾಡಿದ್ದು ನಮಗಿಂದು ಅಪೂರ್ವ ಮತ್ತು ಅನುಪಮ.

ನಾವದನ್ನು ಬೆಳೆಸುವುದಿರಲಿ, ಊರ್ಜಿತದಲ್ಲೂ ಇಡದೆ…’ ಮಹಾಲಿಂಗರು ಎತ್ತಿ ತೋರಿಸಿರುವ ಕೆಟಿಸಿಯ ಸಾಹಸವನ್ನು ವಿಚಾರವಂತರು, ಮುಖ್ಯವಾಗಿ ವಿದ್ಯೆಗೇ ಮೀಸಲೆನಿಸಿಕೊಳ್ಳುವ ವಿವಿನಿಲಯಾದಿ ಶಾಲೆ ಕಾಲೇಜುಗಳು, ಇನ್ನೂ ಮುಖ್ಯವಾಗಿ ದಿನ ಬೆಳಗಾದರೆ ಅಂಕಿಸಂಕಿಗಳ (ಹೆಚ್ಚಿನ ಸಮಯ ಸುಳ್ಳೇ) ಡೊಂಬರಾಟ ತೋರಿಸಿ ಸಂದ ಪ್ರಗತಿಪಥ ಬೆಳಗುವ ಅಥವಾ ಅಭಿವೃದ್ಧಿ ಆಶಯಗಳ ರೇಖೆ ಎಳೆಯುವ ಆಡಳಿತಗಾರರು (ಜನಪ್ರತಿನಿಧಿಗಳೂ ಅಧಿಕಾರಿಗಳೂ) ಗಮನಿಸಲೇಬೇಕು.

೨. ಬೆನೆಟ್ ಅಮ್ಮನ್ನ – ವೃತ್ತಿ ಮತ್ತು ಹವ್ಯಾಸಗಳ ಸಮಪ್ರಮಾಣದ ಮಿಶ್ರಣದಲ್ಲಿ ಮೂಡಿದ ವ್ಯಕ್ತಿ. ಇವರ ಬಗ್ಗೆ ಮಹಾಲಿಂಗರ ಮಾತಿನ ಮುಂದೆ ನಾನು ಹೇಳುವುದೇನೂ ಉಳಿದಿಲ್ಲ.