ರಂಗನಾಥ ವಿಜಯ ಭಾಗ ಏಳು

ಮಾನವ ಚಂದ್ರನ ಮೇಲಿಟ್ಟ ಮೊದಲ ಹೆಜ್ಜೆ ಮನುಕುಲಕ್ಕೆ ಏನೇ ಇರಲಿ, ಆರ್ಮ್ ಸ್ಟ್ರಾಂಗ್ ಎನ್ನುವ ವ್ಯಕ್ತಿಗೆ ಅದು ಮರಳುವಲ್ಲಿ ಅಷ್ಟಷ್ಟು ಒಜ್ಜೆಯೇ ಎಂಬುದನ್ನು ಯಾರೂ ಮರೆಯುವಂತಿಲ್ಲ. ನಮ್ಮ ಸ್ಥಿತಿಯೂ ಅದಕ್ಕೇನೂ ಕಡಿಮೆಯದ್ದಲ್ಲ. ‘ಗಗನಗಾಮಿತನ’ ದೊಡ್ಡ ಅನುಭವದ ಒಂದು ತುಣುಕು ಮಾತ್ರ. ಅದರ ಪೂರ್ಣತೆಗಾಗಿ ನಾವು ಬೇಗನೆ ಸ್ಮರಿಸಿಕೊಂಡೆವು – ಏರಿದವನಿಳಿಯಲೇಬೇಕು. ಹಾಂ, ಆದರೆ ಹೇಳಿದಷ್ಟು ಸುಲಭವಲ್ಲ ಬಂಡೆ ಇಳಿಯುವುದು. ಕಡಿದಾದ ಏರಿನಲ್ಲಿ ನಡೆಯನ್ನು ನಿರ್ದೇಶಿಸಲು ನಮ್ಮ ನೇರ ದೃಷ್ಟಿಯೊಡನೆ ಕೈಕಾಲುಗಳನ್ನು ತೊಡಗಿಸುತ್ತೇವೆ. ಹಾಗೇ ಇಳಿದರಾಯ್ತು ಎನ್ನುವಂತಿಲ್ಲ. ನಾವು ಹಲ್ಲಿ ಉಡಗಳಂತೆ ತಲೆಕೆಳಗಾಗಿ ಇಳಿಯುವ ಭಾಗ್ಯ ಪಡೆದಿಲ್ಲವಲ್ಲಾ! ಮತ್ತೆ ಕಾಲಿಗೇ ದೃಷ್ಟಿ ಸಂಯೋಜಿಸಿದರಾಯ್ತು ಎನ್ನಲು ನಾವು ಏಡಿಗಳಂತೆ ಚಾಚು ನೇತ್ರರೂ ಅಲ್ಲ. ಸೀದಾ ನಡೆದಿಳಿಯಲಾಗದ ಜಾರಿನಲ್ಲೆಲ್ಲಾ ನಾವು ಮೊದಲು ಪ್ರಪಾತಕ್ಕೆ ಬೆನ್ನು ಹಾಕಿ, ಕೈಗಳನ್ನು ಭದ್ರ ಹಿಡಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅನಂತರ ಪ್ರತಿ ಹೆಜ್ಜೆಯಲ್ಲಿ ಇಳಿದಿಕ್ಕು ಸ್ಪಷ್ಟಪಡಿಸಿಕೊಳ್ಳುತ್ತಿರಬೇಕು. ಮತ್ತೆ ಏಣಿ ಇಳಿಯುವವನಂತೆ ಒಂದೊಂದೇ ಹೆಜ್ಜೆ ಕೆಳಬಿಟ್ಟು ‘ಮೆಟ್ಟಿಲು’ ದಕ್ಕುವವರೆಗೆ ಸಣ್ಣದಾಗಿ ಪರದಾಡಬೇಕು. ಮೇಲೆ ಹತ್ತುವಾಗ ಕೊಳ್ಳ ನಿರುಕಿಸುವ ಭಯದಿಂದ ವಿನಾಯ್ತಿ ಪಡೆದವರಿಗೆ ಇಲ್ಲಿ ಚಳಿ ಕೂರುವುದು ಖಾತ್ರಿ. ನೈಜ ಶಿಲಾರೋಹಣದಲ್ಲಿ ಹತ್ತಿದೆಲ್ಲಾ ಶಿಲಾಮುಖಗಳು ಇಳಿಯಲು ಹಾಗೇ ದಕ್ಕುತ್ತವೆ ಎಂದಿಲ್ಲ. ಹಾಗಾಗಿ ಕಡಿದಾದ ಶಿಲಾರೋಹಣದಲ್ಲಿ ‘ನೈಜ’ ಮತ್ತು ‘ಕೃತಕ’ ಎಂಬೆರಡು ಪಾಠ ಇದ್ದರೆ ಶುದ್ಧ ಶಿಲಾವರೋಹಣದಲ್ಲಿ ಹಗ್ಗಗಳನ್ನು ಬಳಸಿ ಮಾಡುವ ಕೃತಕ – ರ್ಯಾಪೆಲಿಂಗ್ (rapelling) ತಂತ್ರ ಒಂದೇ.

“ಮೀಟುಗೋಲು, ಸನ್ನೆ ಮತ್ತು ನಿಲ್ಲಲು ಒಂದು ಜಾಗವಿದ್ದರೆ ಭೂಮಿಯನ್ನೂ ಜರುಗಿಸಿಯೇನು” ಎಂದ ಆರ್ಕಿಮಿಡೀಸ್ ಹೇಳಿಕೆಯನ್ನು ನಾನು, “ಇಳಿಯುವ ಆಳದ ಕೊನೆ ಮುಟ್ಟುವ ಹಗ್ಗವಿದ್ದರೆ ನಾನೂ ಅತಳ, ವಿತಳ, ಪಾತಾಳಕ್ಕೂ ಇಳಿದೇನು” ಎಂದು ಮರುಜಪಿಸಬಲ್ಲೆ! ರ್ಯಾಪೆಲಿಂಗ್ ಸಲಕರಣೆಗಳು ಮತ್ತು ಅದರ ಬಳಕೆಯ ಮೂಲ ಜ್ಞಾನ ಇದ್ದರೆ ಸಾಕು. ವಾಸ್ತವದಲ್ಲಿ ಒಂದೇ ಕೊರಗು, ನಿಜ ಸವಾಲಿನೆದುರು ರ್ಯಾಪೆಲಿಂಗಿನಲ್ಲಿ ಉಳಿಸಿದ ಶ್ರಮಕ್ಕೆ ಸಲಕರಣೆಯನ್ನು ತ್ಯಜಿಸುವ ದಂಡ ಕೊಡಬೇಕಾಗುತ್ತದೆ. ತರಬೇತಿ, ಪ್ರದರ್ಶನಗಳಲ್ಲಿ ಯಾವುದೇ ಸಲಕರಣೆಯನ್ನು ಹಿಂದುಳಿಸುವ ಪ್ರಮೇಯವಿರುವುದಿಲ್ಲ. ಆದರೆ ರಂಗನಾಥ ಸ್ತಂಭದಂಥ ಸವಾಲಿನಲ್ಲಿ ನಮಗದು ಸಾಧ್ಯವಿರಲಿಲ್ಲ. ಮೊದಲನೆಯದಾಗಿ ನಮ್ಮ ಬಳಿ ಇದ್ದ ಹಗ್ಗದ ಉದ್ದ ಕೇವಲ ಇನ್ನೂರಡಿ. ಮತ್ತದನ್ನು ಒಮ್ಮೆ ಕೃತಕ ಶಿಲಾವರೋಹಣಕ್ಕೆ ಬಳಸಿದ್ದೇ ಆದರೆ ಕಳಚಿ ತರುವ ಅನುಕೂಲವಿಲ್ಲದೆ ಉಳಿದ ಆಳವನ್ನು ಇಳಿಯುವುದೂ ದುಸ್ತರವಾಗಲಿತ್ತು. ಘನ ಪರ್ವತಾರೋಹಣ ಯಾತ್ರೆಗಳಲ್ಲಿ (ಉದಾಹರಣೆಗೆ ಭಾರೀ ಪ್ರಾಯೋಜಕರ ಬಲದಲ್ಲಿ ನಡೆಯುವ ಎವರೆಸ್ಟ್ ಆರೋಹಣ) ಸಾವಿರಾರು ಮೀಟರ್ ಹಗ್ಗಗಳನ್ನು ಅಲ್ಲಲ್ಲೇ ಖಾಯಂ ಬಿಟ್ಟೇ ಬರುತ್ತಾರೆ. ಎಲ್ಲಕ್ಕೂ ಮುಖ್ಯವಾಗಿ ಅಂದಿಗೆ ಸುಮಾರು ಇಪ್ಪತ್ತು ವರ್ಷಗಳಷ್ಟು ಹಳೆಯದಾಗಿದ್ದರೂ (ಮೂಲ ಬೆಲೆ ಸುಮಾರು ರೂ ಮುನ್ನೂರು) ನಮ್ಮ ಹಗ್ಗವನ್ನು ಬಿಟ್ಟು ಬರುವ ಆರ್ಥಿಕ ಧಾರಾಳತನ ನಮ್ಮದಲ್ಲ. ಮತ್ತೆ ಇವೆಲ್ಲಾ ವಿರಾಮ ಸಮಯದ ವಾದವಿಸ್ತಾರಗಳು ಮಾತ್ರ. ಬನ್ನಿ, ವಾಸ್ತವದಲ್ಲೇನಾಯ್ತೂಂತ ನೋಡೋಣ.

ಇಳಿಯೋಣದಲ್ಲಿ ನಾನು ಕೊನೆಯಾಳು. ಹೆಚ್ಚು ಯೋಚನೆ ಮಾಡದೇ ಕೇವಲ ಹಗ್ಗದ ರಕ್ಷಣೆಯೊಡನೆ, ಸ್ವಂತ ತಾಕತ್ತಿನಲ್ಲಿ ನಾಲ್ವರು ಇಳಿಯತೊಡಗಿದರು. ಜಾಡು, ದಿಕ್ಕು ಮಾತ್ರವೇಕೆ ಪ್ರತಿ ಹಿಡಿಕೆ, ಸ್ಥಳದ ದೌರ್ಬಲ್ಯಗಳ ಅರಿವು ಎಲ್ಲರಿಗೂ ಸ್ಪಷ್ಟವಿತ್ತು. ಆದರೂ ಪದಕುಸಿಯೆ (ಇಲ್ಲಿ ಮಂಕುತಿಮ್ಮನನ್ನು ನಂಬಬೇಡಿ, ನೆಲ ತುಂಬಾ ಆಳ್ದಲ್ಲಿದೆ!) ರಜ್ಜುರಕ್ಷಣೆ ಇಹುದು ಎಂಬ ಭಾವ ಅವರದು. ಪ್ರತಿ ಕಠಿಣ ಹಂತದಲ್ಲಿ ನಾನು ಅವರನ್ನು ಇಳಿಸಿದ ಮೇಲೆ, ಹೆಚ್ಚಿನ ಅನುಭವದ ಬಲದಲ್ಲಿ, ಹೆಚ್ಚು ಎಚ್ಚರದಿಂದ ಇಳಿಯುವುದು ಅನಿವಾರ್ಯವಿತ್ತು. ಉದ್ದಕ್ಕೂ ನಾವು ಹತ್ತುವಾಗ ಅನುಸರಿಸಿದ ‘ಹೆಚ್ಚಿನ ಅನಾಹುತ’ ತಪ್ಪಿಸುವ ಕ್ರಮವನ್ನು ಮಾತ್ರ ಉಳಿಸಿಕೊಂಡಿದ್ದೆವು. ಮುಂದಿಳಿದ ನಾಲ್ವರಲ್ಲಿ ಸಮರ್ಥನೊಬ್ಬ ನನಗೂ ಹಗ್ಗದ ರಕ್ಷಣೆ ಕೊಡುತ್ತಲೇ ಇದ್ದ. ಆದರೆ ಇದನ್ನು ಒಂದು ತೀವ್ರ ಇಳಿತದ ಮುಖದಲ್ಲಿ ಅನುಸರಿಸಲು ನನಗೇ ಧೈರ್ಯ ಸಾಲಲಿಲ್ಲ. ಬದಲಿಗೆ ನಾನಿದ್ದಲ್ಲಿಯೇ ಇದ್ದ ದೃಢ ಬಂಡೆಯೊಂದಕ್ಕೆ ಹಗ್ಗವನ್ನು ಸುತ್ತು ಹಾಕಿ ಎರಡೂ ತುದಿಗಳನ್ನು ಆ ಹಂತದ ಕೆಳಗಿನ ತಾಣಕ್ಕೆ ಮುಟ್ಟುವಂತೆ ನೋಡಿಕೊಂಡೆ. ಆ ಬಂಡೆ ಮೈಯಲ್ಲಿ ಹಗ್ಗ ಸಲೀಸಾಗಿ ಜಾರುವುದನ್ನು ಖಾತ್ರಿ ಮಾಡಿಕೊಂಡ ಮೇಲೆ ಎರಡೂ ಎಳೆಗಳನ್ನು ಒಟ್ಟಿಗೆ ಹಿಡಿದುಕೊಂಡು ಬಾವಿಗೆ ಇಳಿಯುವವರಂತೆ ಇಳಿದೆ. ಅನಂತರ ಒಂದೇ ಎಳೆಯನ್ನು ಎಳೆದು ಹಗ್ಗವನ್ನೂ ಪಾರುಗಾಣಿಸಿಕೊಂಡೆ. ರಕ್ಷಣೆ ಆಯ್ತು, ಹಗ್ಗದ ತ್ಯಾಗ ಇಲ್ಲ. ಆದರೆ ಇದು ತತ್ವತಃ ಸರಿಯಾದ ಕ್ರಮ ಅಲ್ಲ. ಇಲ್ಲಿ ಆಧಾರ (ಕಾಡುಬಂಡೆ), ಬಳಕೆಯ ಸ್ಥಿತಿಗಳು ಪ್ರಯೋಗಶಾಲೆಯ ಹದದಲ್ಲಿಲ್ಲ. ಬಂಡೆಯ ಒರಟು ಮೈಗೆ ಉಜ್ಜಿ ಹಗ್ಗ ಹರಿದುಹೋಗಬಹುದು, ಸಂದಿನಲ್ಲಿ ಸಿಕ್ಕಿಕೊಂಡು ಸತಾಯಿಸಬಹುದು. ಎಲ್ಲಕ್ಕೂ ಅಪಾಯಕರವಾಗಿ ಹಗ್ಗದ ತುಯ್ತಕ್ಕೆ ಬಂಡೆಯೇ ಕಳಚಿಕೊಂಡು ನಮ್ಮ ಮೇಲೆ ಕವುಚಬಹುದು! ಆದರೂ ಸ್ತಂಭ ಪೂರ್ತಿ ಇಳಿದು ಮುಗಿಯುವುದರೊಳಗೆ ಮತ್ತೆರಡು ಬಾರಿ ನಾನಿದನ್ನು ಬಳಸಿದ್ದು ಅದೃಶ್ಟವಶಾತ್ ನಮ್ಮ ಲಾಭಕ್ಕೇ ಒದಗಿತು.

ದೇವಕಿ ಬರೆಯುತ್ತಾಳೆ, “ಜೊನಾಸ್‌ಗೆ ಸುಸ್ತು. ರಂಗನಾಥನ ಮಂಡೆಯ ಹೇನುಗಳು (ಹೀಗೆ ಹೇಳಿದ ಅಪರಾಧಿ ನಾನಲ್ಲ, ದೇವು) ಕಣ್ಮರೆಯಾದ ಮೇಲೆ ನಾನು ಮತ್ತು ಉಪಾಧ್ಯ ‘ರಕ್ಕಸ ಕಕ್ಕಸ್’ನತ್ತ ನಿಧಾನಕ್ಕೆ ಹೆಜ್ಜೆ ಹಾಕಿದೆವು. ಹುಲ್ಲು ನಮ್ಮ ತಲೆಗಿಂತ ಒಂದಡಿ ಎತ್ತರವೇ ಇತ್ತು. ಪರಸ್ಪರ ಹತ್ತಡಿ ಮೀರಿ ದೂರಾದರೆ ಪರಸ್ಪರ ಕಾಣದಾಗುವ ಸ್ಥಿತಿ. ನೆಲದಲ್ಲೂ ಹುಲ್ಲುಗುತ್ತಿಗಳ ದಟ್ಟಣೆಯಲ್ಲಿ ಏನಿದ್ದರೂ ಗೊತ್ತಾಗುತ್ತಿರಲಿಲ್ಲ. ಒಮ್ಮೆ ನಾನು ಗಮನಿಸದೇ ನೆಲದಲ್ಲಿದ್ದ ಹಕ್ಕಿಯೊಂದು ಪುರ್ರನೆದ್ದಾಗ ನನ್ನ ಜೀವವೇ ಹಾರಿಹೋಗಿತ್ತು. ಯಾವ ಗೂಡು ಹಾಳಾಯ್ತೋ ಎಷ್ಟು ಪುಟ್ಟ ಜೀವಗಳು ನನ್ನ ಕಾಲಡಿಗೆ ಸಿಕ್ಕಿ ನಷ್ಟವಾಯ್ತೋ ಎಂಬುದೆಲ್ಲಾ ವಿರಾಮದಲ್ಲಿ ಕುಳಿತವರ ಗೀಳು ಮಾತ್ರ. ಹಕ್ಕಿಯೋ ಪಾತರಗಿತ್ತಿಯೋ ನಾನು ಹಾತೊರೆಯಲಿಲ್ಲ. ಹಾವು ಹಂದಿಯನ್ನಂತೂ ನಮ್ಮಲ್ಲಿ ಯಾರೂ ಬಯಸುವಂತಿರಲಿಲ್ಲ. ಹುಲ್ಲಿನಗುತ್ತಿಗಳು ಪರೋಕ್ಷವಾಗಿ ಕೊರಕಲಿಲ್ಲದ ದೃಢ ನೆಲದ ಭರವಸೆ ಎಂದು ನಂಬಿ ಮುಂದುವರಿದೆವು. ಶಿಬಿರ ಸ್ಥಾನದ ಬಾಣೆ ಹಗುರಾಗಿ ಇಳಿದು ಅಷ್ಟೇ ಸುಲಭದಲ್ಲಿ ಮುಂದಿನ ದಿಬ್ಬ ಏರಿದಂತೆ ಕಾಣುತ್ತಿತ್ತು. ಆದರೆ ನಡೆದಂತೆ ದಾರಿ ಉದ್ದಕ್ಕೆ ಬೆಳೆದಂತೇ ಅನ್ನಿಸಿತು. ಒಂದೆರಡು ಕಡೆ ಹಿಂದೆಂದೋ ಕಾಟಿಗಳು ಸೆಗಣಿ ಹಾಕಿ, ಉರುಡಿ ಆಗಿದ್ದ ತಟ್ಟುಗಳು ಕಾಣಿಸಿದವು. ಒಂದೆರಡು ಕಡೆಯಂತೂ ಒತ್ತಿನಲ್ಲೇ ಹಸಿ ಸೆಗಣಿಯೂ ಕಾಣಿಸಿ ನನ್ನನ್ನು ದಿಗಿಲುಗೊಳಿಸಿತು. ನಾವಿಬ್ಬರೇ ಬರಬಾರದಿತ್ತೋ ಎಂಬ ಸಂಶಯ ಉಪಾಧ್ಯರಲ್ಲಿ ತೋಡಿಕೊಂಡೆ. ಅವರು ನಿರುಮ್ಮಳವಾಗಿ ‘ಕಾಟಿ ಎಂತ ಮಾಡ್ತಿಲ್ಲೆ. ನಮ್ಮನ್ ಕೇಂಡ್ರೇ ಓಡ್ತೆ’ ಎಂದು ಮುಗಿಸಿಬಿಟ್ಟರು!

ಆ ಅ-ಮುಖ್ಯ ಕಣಿವೆಯಲ್ಲಿ ನೆಲ್ಲಿಗಿಡ ಎನ್ನುವಷ್ಟೇ ಗಾತ್ರದ ಅಸಂಖ್ಯ ಮರಗಳಿದ್ದವು. ಬಹುಶಃ ಆಳವಿಲ್ಲದ ಮಣ್ಣು, ಧಾರಾಳ ಒದಗದ ನೀರು, ಶೀತ ಬಿಸಿಗಳ ಅತಿಯಲ್ಲಿ ಒಂಥರಾ ಬೊನ್ಸಾಯತನ ಅಥವಾ ಕುಬ್ಜತೆ ಅವಕ್ಕೆಲ್ಲ ಬಂದಂತಿತ್ತು. ಅಂಕುಡೊಂಕಿನ ಸುಕ್ಕು ತೊಗಟೆಯ ಗಿಡ್ಡಗಿಡ್ಡ ಮರಗಳಲ್ಲಿ ಒಂದೇ ಒಂದು ಎಲೆಯಿಲ್ಲ, ಕೊಂಬೆ ಇಲ್ಲ! ಮತ್ತೆ ಹೇಗೆ ಗುರುತಿಸಿದೀ ಎಂದು ಅವಸರದ ಪ್ರಶ್ನೆ ಕೇಳಬೇಡಿ. ಕೊಂಬೆಗಳೇನೋ ಇದ್ದವು ಆದರೆ ಎಲ್ಲಾ ಮುತ್ತಿನ ದಂಡೆಗಳಂತೆ ಒಳ್ಳೆ ಗಾತ್ರದ ನೆಲ್ಲಿಕಾಯಿ ಹೊತ್ತಿದ್ದವು. ನೆಲ್ಲಿಯ ಹುಳಿ ಚಪ್ಪರಿಸಿ, ನೀರ ಸವಿ ಅನುಭವಿಸಿ ಮೊದಲ ದಿಬ್ಬವನ್ನು ಏರಿದೆವು. ಅದರ ಮಂಡೆಯನ್ನು ಹಾಯ್ದು, ಉತ್ತರ ಇಳಿಜಾರು ಕೇವಲ ಇಣುಕಿದೆವು; ಇಳಿಯುವುದು ನಮ್ಮ ಮಿತಿಯಲ್ಲಿರಲಿಲ್ಲ. ಹಿಂಜರಿದು ಒಂದು ಬಂಡೆಯ ಮೇಲೆ ವಿಶ್ರಾಂತಿಸುತ್ತಾ ಅಶೋಕ್ ಮಾತುಗಳನ್ನು ನೆನಪಿಸಿಕೊಂಡೆ. . .”

ಹಿಂದಿನ ದಿನ ಶಿಬಿರಾಗ್ನಿಗೆ ಉದುರು ಕಟ್ಟಿಗೆ ಸಂಗ್ರಹಿಸ ಹೋದವರು ನೆಲ್ಲಿ ಸಮೃದ್ಧಿಯ ವರದಿ ಕೊಟ್ಟಿದ್ದರು. ಅವರು ಸಹಜವಾಗಿ “ಎಷ್ಟೊಂದು ನೆಲ್ಲಿ, ಕೇಳುವವರಿಲ್ಲ ಇಲ್ಲಿ, ವ್ಯರ್ಥವಾಗುತ್ತಿದೆ ಚೆಲ್ಲಿ” ಎಂದು ಶಿಶುಪ್ರಾಸ ಮಾಡಿದಾಗ ನಮ್ಮಲ್ಲಿ ಇನ್ನೇನು ಉಪ್ಪಿನಕಾಯಿ ಕಾರ್ಖಾನೆ ಚಾಲೂ ಆಗುವುದಿತ್ತು. ಕೇಶವೃದ್ಧಿ, ಧಾತುಪುಷ್ಟಿ, ಆಮಹಾರೀ ಮುಂತಾದ ಗುಣಸಹಸ್ರದ ಹಾಡಿಗೆ ನನ್ನದು ಅಪಸ್ವರದ ತಾರ. ಪ್ರಕೃತಿಯನ್ನು ಕೇವಲ ಮನುಷ್ಯನ ಉಪಯುಕ್ತತೆಯ ಮಾನದಂಡದಲ್ಲಿ ಅಳೆಯಬಾರದು. ಇಲ್ಲಿನ ಪ್ರತಿಕೂಲ ಸನ್ನಿವೇಶದಲ್ಲಿ ಬೀಜವಿಕ್ಕಿ, ಮೊಳಕೆ ಒಡೆಸಿ, ಮಣ್ಣುನೀರು ಒದಗಿಸಿ, ಗಾಳಿಯ ಹೊಡೆತ, ಮಳೆಯ ಅಬ್ಬರಗಳನ್ನೆಲ್ಲ ಮೀರಿ ಬದುಕು ರೂಢಿಸಿ, ಫಲಿಸಿದ ಪ್ರಕೃತಿ ಕಾಯಿಗಳನ್ನು ‘ವ್ಯರ್ಥ’ಗೊಳಿಸಿತೆನ್ನುವುದು ನಮ್ಮ ನಾಗರಿಕತೆಯ ಹುಸಿತನ. ಉದುರಿದ ಒಳ್ಳೆ ಕಾಯಿಗಳಲ್ಲಿ ನಾಲ್ಕನ್ನು ನಮ್ಮ ನಾಲಗೆ ಚಪಲಕ್ಕೆ ಬಾಯಿಗಿಕ್ಕಿದ್ದು ಬಿಟ್ಟರೆ ಹೆಚ್ಚಿನದ್ದನ್ನು ಯಾರೂ ಸಂಗ್ರಹಿಸಲಿಲ್ಲ. ಅದಂತಿರಲಿ, ದೇವಕಿಯ ಲಹರಿಯಲ್ಲಿ ಮುಂದೇನಾಯ್ತು ನೋಡೋಣ.

“ಉಪಾಧ್ಯರ ಸಾವಿರದ ಎರಡನೇ ಪ್ರಯೋಗವಾದ ಒಕ್ಕಣ್ಣಿನ ದೂರದರ್ಶಕವನ್ನು (ಸಾವಿರದ ಒಂದನೆಯದ್ದು ಆಗಲೇ ದೇವು ಹೇಳಿದಂತೆ, ಅವರ ಗುಡಾರ) ಕೇಳಿಕೊಂಡು ಕಣ್ಣು ಕೀಲಿಸಿದೆ. ಅದೇ ಆಗ ಸ್ತಂಭದ ಹಿಂದಿನಿಂದ ಎದುರು ಮೈಗೆ ಬರುತ್ತಿದ್ದ ನಮ್ಮ ತಂಡದವರು ಬಂಡೆಯಂಚಿನಲ್ಲಿ ತಲೆಕೆಳಗಾಗಿ ನೇತಾಡುತ್ತಿದ್ದಾರೆ! ಎದೆ ಝಲ್ಲೆಂದಿತು. ದರ್ಶಕ ಬಿಟ್ಟು, ಎರಡೂ ಕಣ್ಣು ಹೊಸೆದು ನೋಡಿದೆ. ಇಲ್ಲ, ಎಲ್ಲರೂ ಸರಿಯಾಗಿಯೇ ಇಳಿಯುತ್ತಿದ್ದಾರೆ. ತಲೆಕೆಳಗಾದ ದೃಶ್ಯ ದೂರದರ್ಶಕದ ಕೊಡುಗೆ! ಮೊದಲೇ ಹೇಳಿದಂತೆ ಇದು ಉಪಾಧ್ಯರ ರಚನೆ. ಅವರು ಭಾರ ಕಡಿಮೆ ಮಾಡಲು, ಮೊದಲು ಒಂದೇ ಕಣ್ಣಿನಲ್ಲಿ ನೋಡಿದರೆ ಸಾಕೆಂದು ಪೀವೀಸಿ ಕೊಳವೆ ಒಂದೇ ಬಳಸಿದರು. ಮಸೂರದ ಬಲ ಹೊಂದಾಣಿಕೆ ಮಾಡಿ ಮಾರುದ್ದವನ್ನೂ ಎಂಟಿಂಚಿಗೆ ಇಳಿಸಿದರು. ಮತ್ತೂ ಸಾಲದೆನ್ನಿಸಿದಾಗ ದೃಶ್ಯವನ್ನು ನೇರ ಮಾಡುವ ಮಸೂರವನ್ನೇ ಕಳಚಿಹಾಕಿದ್ದರ ಫಲ! ವಿವರಣೆ ಎಲ್ಲಾ ಸರಿ. ಆದರೆ ನನಗೆ ಮತ್ತೆ ಬರಿಗಣ್ಣಿನಲ್ಲೂ ಇಳಿಯುವವರನ್ನು ನೋಡುವುದು ಬೇಡ ಎನ್ನುವಷ್ಟು ಭಯ ಕುಳಿತುಬಿಟ್ಟಿತು. ಉಪಾಧ್ಯರು ಆ ದಿಕ್ಕಿನ ಒಂದೆರಡು ಫೋಟೋ ಕ್ಲಿಕ್ಕಿಸಿಕೊಂಡ ಮೇಲೆ ನಿಧಾನಕ್ಕೆ ಶಿಬಿರಸ್ಥಾನಕ್ಕೆ ಮರಳಿದೆವು.”

ವಂದನಾರ್ಪಣೆ: ದೇವು ಮತ್ತು ಗಣಪತಿ ಭಟ್ಟರಿಗೆ ಈಗ ಸಾಧನಾ ಸಂಭ್ರಮ, ವಂದನಾರ್ಪಣೆ ಮಾಡುವಲ್ಲಿ ಸ್ಪರ್ಧೆ! ರಂಗನಾಥನ ಮಂಡೆಗಿಂತ ಒಂದಡಿ ಮೇಲೇ ಇತ್ತು ಸಂತೋಷದಿಂದ ಬೀಗಿದ ಇವರ ಮಂಡೆ. ಇವರ ಧನ್ಯತೆಯ ಮನೋಭಾವ ಇನ್ನೂ ಇಳಿದು ಮುಗಿಯದ ಬಂಡೆಯ ಇಳಿಜಾರಿನ ಅನಿವಾರ್ಯತೆಗಿಂತ ತುಸು ಹೆಚ್ಚೇ ಇವರನ್ನು ಬಾಗಿಸಿತ್ತು! ಆಕಸ್ಮಿಕಗಳ ಸರಣಿಯಲ್ಲದಿದ್ದರೆ ತಾವು ಇದನ್ನೇರುವುದಿರಲಿ, ಊಹಿಸುವುದೂ ಅಸಾಧ್ಯ ಎಂದು ಆತ್ಮನಿರೀಕ್ಷೆಗೆ ತೊಡಗಿಬಿಟ್ಟರು. ಅದೃಷ್ಟವಶಾತ್ ಉಳಿದವರಿಗೆ ಇಂಥಾ ಆರಂಭಿಕರ ಶ್ಯಾಳೆಗಳು ಕಾಡದಿದ್ದುದರಿಂದ ಒಟ್ಟು ತಂಡ ಬಚಾವ್. ಇಲ್ಲವಾದರೆ ಬಹುಮತದ ಹುಯ್ಲಿನಲ್ಲಿ ತೋರಣ, ಹಾರ, ಬ್ಯಾಂಡು, ಬಜಂತ್ರಿ, ಟ್ಯಾಬ್ಲೋ, ಮೆರವಣಿಗೆ ಮುಂತಾದ ಅನಾಗರಿಕ ಅನಿಷ್ಠಗಳು ವಕ್ಕರಿಸಿ ಕಾಡು ನಾಚುತ್ತಿತ್ತೋ ಏನೋ! ಈ ಗೊಂದಲದಲ್ಲಿ ‘ತಂಡದ ಕೊನೆಯ ಸದಸ್ಯ ಕಡೆಯ ಹೆಜ್ಜೆ ಇಡುವವರೆಗೂ ಯಶಸ್ಸು ನಮ್ಮದಲ್ಲ’ ಎನ್ನುವ ತುಂಬಾ ಮುಖ್ಯದ ಭಾವ ಸ್ವಲ್ಪ ಮಸುಕಿ ಹೋಗಿತ್ತು. ಸತ್ಯದ ಅರಿವು ದೇವುಗೆ ಮೂಡಿದ್ದನ್ನು ಅವರ ಮಾತಿನಲ್ಲೇ ಕೇಳಿ. “ಭಟ್ಟರು, ಪ್ರಸನ್ನ ಮತ್ತು ಅಭಯ ಆಗಲೇ ಬಂಡೆ ಬಿಟ್ಟು, ಕಾಡು ಸೇರಿದ್ದರು. ಕೊನೆಯ ಕಡಿದಾದ ಬಂಡೆ ಮುಖದಿಂದ ನಿಧಾನಕ್ಕೆ ಬಲಕ್ಕೆ ಸರಿಯುತ್ತಾ ಇಳಿಯುವ ಬದಲು ಸಂತೋಷಾತಿರೇಕದಲ್ಲಿ ನಾನು ಜಿಗಿದುಬಿಟ್ಟೆ. ಬೆನ್ನುಬಿದ್ದ ಅಸಡ್ಡಾಳ ಚೀಲ ನನ್ನ ನಿಯಂತ್ರಣವನ್ನು ತಪ್ಪಿಸಿ ದೂಡಿತು. ಪಾದ ಕಲ್ಲಿಗೆ ತೊಡರಿ, ಮುಗ್ಗರಿಸಿ ಇನ್ನೇನು ಎಡದ ಆಳಕ್ಕೆ ಬಿದ್ದು, ಗೊತ್ತಿದ್ದೂ ಪರಿಹಾರ ಕೊಡದ ರಾಜಾ ವಿಕ್ರಮನ ತಲೆ ಬೇತಾಳನ ಪೆಟ್ಟಿಗೆ ಚಪ್ಪಾಚೂರಾದಂತೆ ನನ್ನದೂ ಹೋಳಾಗಲಿತ್ತು. ಅದೃಷ್ಟವಶಾತ್ ಕೊಳ್ಳದಾಳದಿಂದೆದ್ದ ಮರದ ಕೊಂಬೆಯೊಂದು ಒದಗಿ, ಗಬಕ್ಕನೆ ತಬ್ಬಿ ಬಚಾವಾದೆ.”

ಬಂಡೆ ಬಿಟ್ಟು ನೆಲ ಮುಟ್ಟಿದ್ದೇ ದೇವು, “ಒಂದು ಕ್ಷಣ ಕಾಲು ಚಾಚಿ ಕುಳಿತು ಸುಧಾರಿಸಿಕೊಂಡೆ. ಮತ್ತೆ ಎಲ್ಲ ಒಟ್ಟಾಗಿ ಶಿಬಿರಸ್ಥಾನದತ್ತ ನುಗ್ಗಲಾರಂಭಿಸಿದೆವು. ಮೊದಲು ಬೆಳಿಗ್ಗೆ ನಮ್ಮಲ್ಲೇ ಹಿಂದುಳಿದವರು ಹೋದ ದಾರಿಯೆಂದು ಅನುಸರಿಸಿದ್ದು ತಪ್ಪಾಗಿ, ಹಿಂದೆ ಬರಬೇಕಾಯ್ತು. ಮತ್ತೆ ಏರು ದಿಕ್ಕನ್ನಷ್ಟು ಗಟ್ಟಿ ಮಾಡಿಕೊಂಡು ಕುರುಡು ಹಂದಿಗಳಂತೆ ನುಗ್ಗಿದೆವು. ಯಾಕಾದರೂ ಬೇಕಿತ್ತೋ ಎಂಬಂತೆ ಮುಳ್ಳಬಲ್ಲೆ, ಕಳ್ಳಿಹಿಂಡು, ಬಿದಿರಮೆಳೆಯೊಳಗೆ ಸಿಕ್ಕು, ಮೈಯೆಲ್ಲಾ ಗೀರುಗಾಯ ಮಾಡಿಕೊಂಡು ಹೇಗೋ ಬಯಲಾದೆವು. ಸುಸ್ತು, ಹೊಟ್ಟೆತಾಳ ಪ್ರತಿಯೊಬ್ಬರ ನೀರಸ ನಡಿಗೆಯಲ್ಲಿ ಎದ್ದು ತೋರುತ್ತಿತ್ತು. ಆದರೂ ಹಿಂದುಳಿದವರ, ಅದಕ್ಕೂ ಮಿಗಿಲಾಗಿ ಅಯಾಚಿತವಾಗಿ ಒದಗಿದ ಹತ್ತೆಂಟು ಪ್ರೇಕ್ಷಕರ ಎದುರು ಅದೆಲ್ಲಾ ಪ್ರಕಟಿಸಬಾರದೆಂಬ ಹಮ್ಮೂ ಸಲ್ಪ ಇತ್ತು. ಪ್ರಸನ್ನ ಮಾತ್ರ ಇದಕ್ಕಪವಾದ, ದೇವು ಮಾತುಗಳಲ್ಲಿ ಕೇಳಿ. “ಪ್ರಸನ್ನ ಮಾತ್ರ ಸುಟಿದೇಹಿ. ಅಡ್ಡಿಗಳನ್ನೆಲ್ಲ ಕುಪ್ಪಳಿಸಿ, ಹರಿದುಕೊಂಡು ನಮಗಿಂತ ಹತ್ತು ಮಿನಿಟು ಮೊದಲೇ ತಲಪಿದ್ದು ಶಿಬಿರಸ್ಥಾನ ಮಾತ್ರ ಅಲ್ಲ, ಉಪಾಧ್ಯರ ಅವಲಕ್ಕಿ ಬಾಣಲೆ!” ಮಧ್ಯಾಹ್ನದ ಊಟ, ಸಂಜೆಯ ತಿಂಡಿ ಎರಡಕ್ಕೂ ಇರಲೀಂತನ್ನುವ ಹಾಗೆ ಉಪಾಧ್ಯರು ಇದ್ದೆಲ್ಲಾ ಸುವಸ್ತುಗಳನ್ನು ಹಾಕಿ ಒಗ್ಗರಿಸಿಟ್ಟ ಅವಲಕ್ಕಿ. ಅಂದು ಅದರ ರುಚಿ ನೋಡದವನ ಜನ್ಮವೇ ಅನ್ಲಕ್ಕಿ.

ಶಿಬಿರಸ್ಥಾನದ ನಮ್ಮೆಲ್ಲಾ ಸಾವಯವ ಉಳಿಕೆಪಳಿಕೆಗಳನ್ನು ಬೆಂಕಿಗೆ ಹಾಕಿ, ಬೆಂಕಿಯ ಉಳಿಕೆಗಳಿಗೆ ನೀರು ಹಾಕಿ, ಸ್ಥಳ ಗುಡಿಸಿಟ್ಟೆವು. ಕುಪ್ಪಿ, ಪ್ಲ್ಯಾಸ್ಟಿಕ್ಕಾದಿ ನಿರುಪಯುಕ್ತಗಳನ್ನು ವ್ರತನಿಷ್ಠೆಯಲ್ಲಿ ನಮ್ಮ ಚೀಲಗಳೊಳಗೆ ಸೇರಿಸಿ ಮರಳಿ ನಾಗರಿಕತೆಗೆ ಮುಟ್ಟಿಸುವ ಜವಾಬ್ದಾರಿ ಉಳಿಸಿಕೊಂಡೆವು. ಹಿಂದಿರುಗುವಾಗ ದಾರಿ ತಪ್ಪಬಾರದೆಂದು ಬರುವಾಗಲೆ ದಾರಿಯಲ್ಲಿ ನಮ್ಮದೇ ಗುರುತುಗಳನ್ನು ಹಾಕಿದ್ದೆವು. ಆದರೆ ಬಂದಿದ್ದ ಪ್ರೇಕ್ಷಕವರ್ಗ ಅಭಿಮಾನೀ ಬಳಗವಾಗಿ, ದಾರಿ ತೋರುವುದಿರಲಿ ನಮ್ಮ ಹೊರೆಗಳನ್ನೂ ಉಚಿತವಾಗಿ ಸಾಗಿಸಿಕೊಡಲು ಮುಂದಾಗಿದ್ದರು.

ಇಷ್ಟುದ್ದಕ್ಕೂ ಜೊತೆಗೊಟ್ಟ ಆನಂದನ ತಂಡದ ‘ವಿಜಯೋತ್ಸವ’ ಕಡಿಮೆ ಸಂಭ್ರಮದ್ದೇನೂ ಆಗಿರಲಿಲ್ಲ. ಆದರೆ ಅವರ ‘ಬುದು’ವಂತಿಕೆ ಒದಗಿಸಿದ ಹೆಚ್ಚಿನ ಸಾಹಸವನ್ನು ಇಲ್ಲಿ ದಾಖಲಿಸದಿರಲಾರೆ. ಅದನ್ನು ಅವನ ಮಾತಿನಲ್ಲೇ ಹೇಳುವುದಾದರೆ, “ಸಾಯಂಕಾಲವೇ ನಾವು ಡೇರೆ ಕಿತ್ತು ಹೊರಟೆವು. ನಾವು ಶಿಖರದಿಂದ ತಂದ ಮೃತ್ತಿಕಾಪ್ರಸಾದದಿಂದ ಆನಂದ ತುಂದಿಲರಾದ ಆ ಮುಗ್ದ ಹಳ್ಳಿಗರು ಅಕ್ಷರಶಃ ಉತ್ಸವಯಾತ್ರೆಯನ್ನೇ ಹೊರಡಿಸಿಬಿಟ್ಟರು. ಗದ್ದಲದಲ್ಲಿ ಮಾರ್ಗದರ್ಶಿಗಳೂ ಸೇರಿದಂತೆ ನಮ್ಮವರೂ ಮುಂದೆ ಹೋಗಿಬಿಟ್ಟರು. ಕೊನೆಗೆ ಹೊರಟ ನಾನು ಮತ್ತು ನರಸಿಂಹಪ್ರಸಾದ್ ದಾರಿ ತಪ್ಪಿ ಆ ಕಾಡಿನಲ್ಲಿ ಕಳೆದುಹೋಗುತ್ತಿದ್ದೆವು. ಇನ್ನೇನು ಕತ್ತಲ ಮುಸುಕಿನೊಳಗೆ ಪೂರ್ಣ ಮುಳೂಗಿಹೋಗುತ್ತೇವೆ ಎನ್ನುವಾಗ ಅದೃಷ್ಟವಶಾತ್ ಸಿಕ್ಕ ಹಳ್ಳಿಗರು, ಸೌದೆ ಸಂಗ್ರಹಿಸಲು ಬಂದು ಮರಳುತ್ತಿದ್ದವರ ಕೃಪೆಯಲ್ಲಿ ಕಿಲ್ಮೆಲ್ ಪೋರ್ಟ್ ಟೀ ಎಸ್ಟೇಟ್ ಸೇರಿಕೊಂಡೆವು!”

ಹೆಚ್ಚುಕಡಿಮೆ ಒಂದೂವರೆ ದಿನ ನಮ್ಮನ್ನೇ ಕಾದಿದ್ದ ಸುಮೋ ಏರುವಾಗ ಅಂದೂ ಪೂರ್ಣ ಕತ್ತಲಾಗಿತ್ತು. ಮೈಸೂರ ದಾರಿಯುದ್ದಕ್ಕೆ ಹೊರಗಿನ ದೃಶ್ಯಗಳು ಮರೆಯಾಗಿದ್ದರೂ ನಮ್ಮ ಕಣ್ಣ ಮುಂದೆ ರಂಗನಾಥ ಸ್ತಂಭ, ಪಿಲ್ಲರ್ಮಲೈ ದೃಶ್ಯಗಳು ಪೂರ್ಣ ಬೆಳಗಿಕೊಂಡೇ ಇತ್ತು. ವಾತಾರಾವಣನ ಚಳಿಕಾಟ ಇದ್ದರೂ ಬೆಚ್ಚಗಿನ ಅನುಭವದ ಗೂಡಿನೊಳಗೆ ಮುದುರಿದ ಉಪಾಧ್ಯರು ಭೀಷ್ಮ ಪ್ರತಿಜ್ಞೆಯನ್ನೇ ಮಾಡಿದರು, “ಇನ್ನ್ ಮನಿ ಬಪ್ಪವರೆಗೂ ನಾ ಏಳ್ತಿಲ್ಲೆ.”

ನೀತಿ ಪಾಠ: ಸಾಧಕರ ಮುಂದೆ ಹತ್ತೆಂಟು ಮೈಕ್ ತೂರಿ, ಸಂಬದ್ಧಾಬದ್ಧ ಅಭಿಪ್ರಾಯ ಸಂಗ್ರಹಿಸುವ ಪತ್ರಕರ್ತರ ಜಾಡಿನಲ್ಲಿ ‘ಬತ್ತಿಹೋಯ್ತೇ ಉಪಾಧ್ಯರ ತಿಳಿವಿನ ಹಸಿವು?’ ಮುಂದೊಂದು ದಿನ ಹೀಗೇ ಅವರು ನನ್ನಂಗಡಿಗೆ ಬಂದಾಗ ಕೆಣಕಿದೆ. ಇಲ್ಲ, ಅವರ ಸಾವಿರದ ಮೂರನೇ ಕಲಾಪವೇ ರಂಗನಾಥಸ್ತಂಭ ವಿಜಯವಂತೆ! ದೇವು ತನ್ನ ಆಕಾಶವಾಣಿ ವೃತ್ತಿ ಜಾಣ್ಮೆಯ ಕುಣಿಕೆ ಒಡ್ಡಿದರು. ನಾನೋ ಶಬ್ದಮಿತಿ, ಸಮಯಮಿತಿಗಳ ಕಟ್ಟುಹರಿದು ಮೇಯುವ ಜಾತಿ, ಕುತ್ತಿಗೆ ಕುಸುಕಿ ಬಚಾವಾದೆ. ಗಣಪತಿ ಭಟ್ಟರು ದೇವುಗೆ ಸಿಕ್ಕಿಬಿದ್ದು, ಆಕಾಶವಾಣಿಯಲ್ಲಿ ರಂಗನಾಥ ಸ್ತಂಭಕ್ಕೆ ವೀರಾವೇಶದ ‘ಲಗ್ಗೆ’ ಹಾಕಿದರು. ನಾನು ಉದಯವಾಣಿಗೆ ಅನುಭವ ಕಥನದ ಧಾರಾವಾಹಿ ಮಾಡುವ ಕಾಲದಲ್ಲಿ ದೇವು ಕಾಲೆಳೆದೆ. ಅವರು ತಮ್ಮ ಟಿಪ್ಪಣಿಗಳ ಸರಣಿಯನ್ನು ಮುಗಿಸುತ್ತಾ “ಹಿಂದೊಮ್ಮೆ ಹಾದಿತಪ್ಪಿದ ವಿಮಾನ ಸ್ತಂಭಕ್ಕೆ ಘಟ್ಟಿಸಿತ್ತಂತೆ. ವಿಮಾನ ಪುಡಿಯಾದರೂ ದೈತ್ಯ ವಿಚಲಿತನಾಗಲಿಲ್ಲ. ಅಂಥವನು ಕ್ಷುದ್ರಾತಿಕ್ಷುದ್ರ ನಮ್ಮನ್ನು ಒಪ್ಪಿಸಿಕೊಂಡ ಪರಿ ಮರೆಯುವಂಥದ್ದಲ್ಲ.” ಬೆಟ್ಟಕಾಡು ಸುತ್ತುವ ತನ್ನ ಧಾವಂತದಲ್ಲಿ “ಇನ್ನು ಪ್ರಾಕೃತಿಕ ಸವಾಲುಗಳೇ ಉಳಿದಿಲ್ಲ ಎಂಬ ನನ್ನ ದಾರ್ಷ್ಟ್ಯಕ್ಕೆ ರಂಗನಾಥ ಸ್ತಂಭದ ಮೇಲೆ ನೇಣಾಯ್ತು” ಎಂದೇ ದೇವು ಬರಹ ಮುಗಿಸಿ ಕೊಟ್ಟರು! ಕೊನೆಗುಳಿಯುವುದು ಆನಂದ. “ವೀರಾವೇಶದಲ್ಲಿ ಮೈಸೂರಿಗೆ ಮರಳಿ, ಮನೆಯ ಮೆಟ್ಟಿಲಲ್ಲಿ ಕುಳಿತು, ಬೂಟು ಮತ್ತು ನಾಲ್ಕು ದಿನದಿಂದ ಬದಲಿಸದೇ ನಾರುತ್ತಿದ್ದ ಕಾಲುಚೀಲವನ್ನು ಬಿಚ್ಚಿ ಬಿಸಾಡಿ ಒಳಗೆ ನುಗ್ಗುತ್ತಿದ್ದಂತೆ, ಕಾಲು ಜಾರಿ, ಹೊಸ್ತಿಲು ಒದ್ದು ಕಿರಿಬೆಟ್ಟು ಮುರಿದುಕೊಂಡೆ. ರಂಗನಾಥ ಸ್ತಂಭ ಜಯಿಸಿದರೂ ಎಡಗಾಲು ಮುಂದಾಗಿ ಹೊಸ್ತಿಲು ದಾಟಬಾರದು ಪುರಂದರ ವಿಠಲಾ!”

(ಮುಗಿಯಿತು)

[ನನ್ನ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಮಳೆಬೀಳುತ್ತಿರುವುದನ್ನು (ದಿನಕ್ಕೆ ಸರಾಸರಿ ನೂರು ಮಂದಿ ಭೇಟಿಕೊಡುತ್ತಿದ್ದೀರಿ – ನಾ ಧನ್ಯ) ರಂಗನಾಥವಿಜಯದ ಕಳೆದಾರು ಕಂತಿನ ಉದ್ದಕ್ಕೂ ಗಮನಿಸಿದ್ದೇನೆ. ನಿಮ್ಮ ಲಿಂಗನಮಕ್ಕಿ, ಕೆಯಾರೆಸ್ಸುಗಳ ಸ್ಪಂದನವಾಹಿನಿಯ ದ್ವಾರವನ್ನು ಈಗಲಾದರೂ ದೊಡ್ಡದಾಗಿ ತೆರೆದು ನನ್ನ ಹೆಚ್ಚಿನ ಕೃಷಿಗೆ ಹರಿಸುವಿರಾಗಿ ನಂಬಿದ್ದೇನೆ.]