ದಿಟದ ನಾಗರಕ್ಕೆ ಮಣಿಯಿರೋ

ನನ್ನ ಹವ್ಯಾಸೀ ವಾಸನೆಗಳು ನನ್ನ ವೃತ್ತಿರಂಗಕ್ಕೂ (ಪುಸ್ತಕ ವ್ಯಾಪಾರ) ದಟ್ಟವಾಗಿ ವ್ಯಾಪಿಸಿರುವುದರಿಂದ ಪರ್ವತಾರೋಹಣ ಕೂಟ ಕಟ್ಟಿದೆ, ಯಕ್ಷಗಾನಾಸಕ್ತರನ್ನು ಮೇಳೈಸಿದೆ, ಬಳಕೆದಾರ, ವನ್ಯ, ಪರಿಸರ ಇತ್ಯಾದಿ ಜಾಗೃತಿಗಳಲ್ಲಿ ಕೈಜೋಡಿಸುವಂತಾದೆ. ನನ್ನ ಹುಚ್ಚುಗಳಿಗೆ ಪೂರಕವಾಗಿ ನನ್ನಲ್ಲಿಗೆ ಬರುವ ಗಿರಾಕಿಗಳಲ್ಲೂ ಸುಮಾರು ಜನ ‘ವಿಚಿತ್ರದವರೇ’! ಉಳಿದವರ ವಿಚಾರ ಹಾಗಿರಲಿ, ಹೀಗೇ ಕೆಲವು ವರ್ಷಗಳ ಹಿಂದೆ ಪರಿಚಯವಾದ ಉಡುಪಿಯ ಗುರುರಾಜ ಸನಿಲ್ ಬಗ್ಗೆಯಂತೂ ‘ಇವರದು ಒಂದು ಸುತ್ತು ಹೆಚ್ಚು’ ಎಂದನ್ನಲೇಬೇಕು. ಪ್ರಾಯ ನಲ್ವತ್ಮೂರು ವರ್ಷ, ಓದು ಕೇವಲ ಎಸ್ಸೆಲ್ಸಿ, ಹೆಂಡತಿ ಮತ್ತು ಒಬ್ಬ ಮಗನ ಸಂಸಾರಿ, ವೃತ್ತಿಯಲ್ಲಿ ಕಾರು ಬಾಡಿಗೆಯ ಚಾಲಕ. ಇವರ ಹವ್ಯಾಸ ಜೀವಪಣಕ್ಕಿಟ್ಟು ಹಾವುಗಳ ರಕ್ಷಣೆ ಎಂದರೆ ನೀವು ನಂಬಲೇಬೇಕು. ಒಂದಲ್ಲ, ಎರಡಲ್ಲ ಹನ್ನೊಂದು ಬಾರಿ ವಿಷದ ಹಾವುಗಳಿಂದ ಕಚ್ಚಿಸಿಕೊಂಡು ಪಡಬಾರದ ಸಂಕಟವೆಲ್ಲ ಅನುಭವಿಸಿ (ಅದರಲ್ಲೂ ಎರಡು ಸಲವಂತೂ ಮರಣಾಂತಿಕ ಎನ್ನುವ ಸ್ಥಿತಿ ಮುಟ್ಟಿ, ಮರಳಿ) ಬಂದರೂ ಸ್ವಂತ ಮಗನ ತಲೆಯ ಮೇಲೇ ಕೈಯಿಟ್ಟು ಪಾರಂಪರಿಕ ನಂಬಿಕೆಯ ಆಣೆ ಹಾಕಿ ‘ಹಾವಿನ ಉಸಾಬರಿ ಬಿಟ್ಟೆ’ ಎಂದರೂ ಬಿಡದ ನಂಟು ಇವರದು ಹಾವುಗಳೊಡನೆ. ಸುಮಾರು ಮೂವತ್ತು ವರ್ಷಗಳಲ್ಲಿ ಇವರು ರಕ್ಷಿಸಿದ ಹಾವುಗಳ ಸಂಖ್ಯೆ ಕಡಿಮೆ ಎಂದರೂ ಹದಿನೈದು ಸಾವಿರ ಮೀರುತ್ತದೆ!

ನಾನು ಕತ್ತು ಹೊರಳಿಸಿ ೧೯೭೮-೭೯ರಷ್ಟು ಹಿಂದೆ ನೋಡುತ್ತೇನೆ – ಶರತ್, ಚಾರ್ಲ್ಸ್ ಮತ್ತು ಸೂರ್ಯ ಎಂಬ ತನ್ನ ಉತ್ಸಾಹೀ ವಿದ್ಯಾರ್ಥಿಗಳನ್ನು ನಂಬಿಕೊಂಡು ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲಿಶ್ ಅಧ್ಯಾಪಕ ಸನ್ನಿ ತರಪ್ಪನ್ Mangalore Wild life Trust ಕಟ್ಟಿದ್ದು ಕಾಣುತ್ತದೆ. ಈ ಮೂರು ‘ಮಂಗ’ಗಳು ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪಾಠ ಪಡೆದರೆ, ಫರಂಗಿಪೇಟೆಯ ಪಾದ್ರಿಯೋರ್ವರಲ್ಲಿ ಪ್ರಯೋಗ ಕಲಿತು ‘ಹಾವಾಡಿಗ’ರೇ ಆದರು. ಇವರ ನಾಗರ, ಕನ್ನಡಿ, ಕಡಂಬಳಗಳ ಸಂಗ್ರಹ ಕಾಲೇಜು ಉದಾರವಾಗಿ ಕೊಟ್ಟ ಪ್ರೌಢಶಾಲೆಯ ಹಳೇ ಕಟ್ಟಡದ ಮಾಳಿಗೆಯಲ್ಲಿ ಉಗಮಿಸಿ, ವಿಖ್ಯಾತ ರೊಮುಲಸ್ ವಿಟೇಕರ್ ಸಮಕ್ಷಮದಲ್ಲಿ ಕದ್ರಿ ಪಾರ್ಕಿಗೆ ವರ್ಗಾವಣೆಗೊಳ್ಳುವವರೆಗೂ ನನ್ನದು ಸಂಜಯಸಾಕ್ಷಿ. ಅವರು ಎರಡು ಬಾರಿ ಸಾರ್ವಜನಿಕ ಶಿಕ್ಷಣಕ್ಕಾಗಿ ನಡೆಸಿದ ಉರಗ ಪ್ರದರ್ಶನ, ನನಗೆ ತಿಳಿದಂತೆ ಈ ವಲಯದ ಹಾವುಗಳ ಕುರಿತು ಪ್ರಥಮ ಪ್ರಕಟಣೆ ಎನ್ನಬಹುದಾದ ವರ್ಣಚಿತ್ರ ಸಹಿತವಾದ ಇಂಗ್ಲಿಷ್ ಪುಸ್ತಿಕೆ ನಿಜಕ್ಕೂ ಚರಿತ್ರಾರ್ಹ. ಅಂದು ರೋಮುಲಸ್ ವಿಟೇಕರ್ ಸಹಾಯಕನಾಗಿ ಬಂದಿದ್ದೊಬ್ಬ ತಮಿಳುನಾಡಿನ ಹಾವಾಡಿಗನನ್ನು (ಇರುಳರು ಎಂಬ ತಮಿಳು ಕಾಡುಜನಾಂಗದ ವ್ಯಕ್ತಿ) ನನ್ನ ಸ್ಕೂಟರ್ ಬೆನ್ನಿಗೇರಿಸಿಕೊಂಡು ಸೀತಾನದಿ ಮೂಲದಲ್ಲಿ ಕಾಳಿಂಗ ಸರ್ಪವನ್ನು ಹುಡುಕಿಕೊಂಡು ತಿರುಗಿದ್ದಂತೂ ನನ್ನ ಸ್ಮೃತಿಪಟಲದ ಒಂದು ರೋಚಕ ಅಧ್ಯಾಯ. ಆಗ ಪ್ರಧಾನ ‘ಹಾವಾಡಿಗ’ನಾಗಿದ್ದ ಶರತ್ ಅಧ್ಯಾಪಕನಾಗಿದ್ದುಕೊಂಡು ಬಿಸಿಲೆ ವಲಯದಲ್ಲಿ ಕೇರೇ ಹಾವಿನ ಮೇಲೆ ಸಂಶೋಧನೆ ನಡೆಸಿದ್ದಲ್ಲದೆ ಹೆಚ್ಚಿನ ಅಧ್ಯಯನ ಮತ್ತೆ ವೃತ್ತಿ ಆಸಕ್ತಿಗಳಲ್ಲಿ ಅಮೆರಿಕದಲ್ಲಿ ಕಳೆದುಹೋದ! ಆದರೆ ಚಾರ್ಲ್ಸ್ (ಚರವಾಣಿ: ೯೮೪೪೦೦೧೩೫೧) ಯಾವುದೇ ಪ್ರಚಾರದ ಕುದುರೆ ಏರದೆ ಇಂದಿಗೂ ಮಂಗಳೂರಿನ ಆಸುಪಾಸಿನಲ್ಲಿ ಆಪ್ತ ಉರಗರಕ್ಷಕನಾಗಿಯೇ ಮುಂದುವರಿದಿದ್ದಾರೆ. ಅವರ ಸಂಚಾಲಕತ್ವದ Animal Care Trustನ ಸೇವೆಯಲ್ಲಿ ಬರಿಯ ಉರಗಗಳಲ್ಲ (ಮನುಷ್ಯನೆಂಬ ದುಷ್ಟಮೃಗವನ್ನು ಬಿಟ್ಟು) ಮಂಗಳೂರಿನ ಸಕಲ ಜೀವರಾಶಿಯೂ ಲಾಭ ಪಡೆಯುತ್ತಿದೆ ಎಂದರೆ ಅತಿಶಯೋಕ್ತಿಯಾಗದು. ಜಿಲ್ಲೆಯೊಳಗಿನ ಪ್ರಾದೇಶಿಕ ಅಗತ್ಯಕ್ಕೆ ತಕ್ಕಂತೆ ಆ ಕಾಲದಲ್ಲೇ ನಾನು ಮನ್ಮಥ, ಐತಾಳ, ವಳಲಂಬೆ ಮುಂತಾದವರ ಇನ್ನೊಂದೇ ಸ್ತರದ ‘ನಾಗಾಭರಣರ’ ಬೆಳವಣಿಗೆಯನ್ನೂ ಸಾಕಷ್ಟು ಕಂಡವನೇ. ಪ್ರಚಾರದ ಹುಚ್ಚೋ ಹಣಮಾಡುವ ಗೀಳೋ ಅಂತೂ ಒಂದು ಮಟ್ಟದ ಪರಿಸರ ಜಾಗೃತಿ ಮೂಡಿಸುವಲ್ಲಿ ಅವರು, ಅಂಥವರು ತೀರಾ ಆವಶ್ಯಕರೇ ನಿಜ. ಹಾಗೇ ಇನ್ನೊಬ್ಬ ಎನ್ನುವಂತೆ, ಅಲ್ಲಿ ಇಲ್ಲಿ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಾ ನನ್ನಲ್ಲಿಗೆ ಪುಸ್ತಕ ಹುಡುಕಿ ಬಂದಾಗ ಮಾತು ಬೆಳೆಸುತ್ತಾ ಒಂದು ಮಟ್ಟಿನ ಆಪ್ತರಾದವರು ಈ ಗುರುರಾಜ ಸನಿಲ್.

‘ಹಾವು ನಾವು – ಅವಿಭಜಿತ ದಕ ಜಿಲ್ಲೆಯ ಹಾವುಗಳು’ ಎಂಬ ಪುಸ್ತಕ, ಉಡುಪಿಯಲ್ಲಿ ಬಿಡುಗಡೆಯಾದ ಸುದ್ದಿ ವಾರದ ಹಿಂದೆ ದಿನಪತ್ರಿಕೆಯ ಮೂಲೆಯಲ್ಲಿ ಕಂಡಿದ್ದೆ. ಒಂದೆರಡು ದಿನಗಳಲ್ಲೇ ಲೇಖಕ/ಪ್ರಕಾಶಕ ಗುರುರಾಜ ಸನಿಲ್ ನನ್ನಲ್ಲಿಗೂ ಪುಸ್ತಕಗಳನ್ನು ಮಾರಾಟಕ್ಕೆ ತಂದೊಪ್ಪಿಸಿದರು. (೧೮೪ ಪುಟ, ಉತ್ತಮ ಕಾಗದದ, ಲೇಖಕರೇ ತೆಗೆದ ಅಸಂಖ್ಯ ವರ್ಣ ಚಿತ್ರಗಳ ಸುಂದರ ಮುದ್ರಣ. ಗೀತಾ ಪ್ರಕಾಶನ, ಕೊಳಂಬೆ, ಪುತ್ತೂರು, ಸಂತೆಕಟ್ಟೆ ಅಂಚೆ, ಉಡುಪಿ ೫೭೫೧೦೫. ಚರವಾಣಿ: ೯೮೪೫೦೮೩೮೬೯. ಬೆಲೆ ರೂಪಾಯಿ ಮುನ್ನೂರು) ಮೇಲಿಂದಮೇಲೆ ನೋಡುವಾಗ ಮಂಗಳೂರಿನ ಆಕೃತಿ ಪ್ರಿಂಟರ್ಸ್ ಸಹಯೋಗದಲ್ಲಿ ಯಾರೂ ಮೋಹಿಸುವ ಕೃತಿ, ರೂ ಮುನ್ನೂರು ಎಲ್ಲೂ ಸಮರ್ಥಿಸಿಕೊಳ್ಳಬಹುದಾದ ಬೆಲೆ ಎಂದೇ ಅನಿಸಿತು.

‘ಹಾವು ನಾವು’ ತಣ್ಣಗೆ ನನ್ನೊಳಗೆ ಹರಿಯುತ್ತ ಹೋಯ್ತು. ಗುರುರಾಜನೆಂಬ ಬಡ ಹಳ್ಳಿ ಹುಡುಗ ಸುತ್ತಣ ಜೀವವೈವಿಧ್ಯಕ್ಕೆ ಕುತೂಹಲದ ಆದರೆ ಕಾಳಜಿಪೂರ್ಣ ಕಣ್ಣು ತೆರೆದದ್ದು ಮೊದಲು ನನ್ನನ್ನು ಆಕರ್ಷಿಸಿತು. ಆತನ ಪ್ರೀತಿಯ ಬಿಳಿ ಇಲಿಗಳನ್ನು ನುಂಗಬಂದ ನಾಗರಹಾವನ್ನು ದೂರಮಾಡಲು ಹೋಗಿ, ಆತನ ಅಜ್ಜಿಯೇ ಪ್ರಾಣಕ್ಕೆರವಾದದ್ದು, ಸಹಜವಾಗಿ ಹಾವುಗಳ ಬಗ್ಗೆ ಬಾಲಕ ಸನಿಲನಿಗೆ ದ್ವೇಷ ಮೂಡಿದ್ದು ಆಶ್ಚರ್ಯವಾಗಲಿಲ್ಲ. ಆದರೆ ಬಡಿದು ಕೊಲ್ಲಲೆಂದೇ ಆತ ಹಿಡಿದು ತಂದ ನಾಗರಹಾವಿನ ಎದುರು ಆತನ ಬಗೆಗಣ್ಣು ತೆರೆದು, ಉರಗಪ್ರೇಮವಾಗಿ ಪರಿವರ್ತನೆಗೊಂಡದ್ದು ನಿಜಕ್ಕೂ ವಿಶಿಷ್ಟ. ಬಾಲಕನಾಗಿದ್ದಾಗ ಸನಿಲ್ ಮುಗ್ಧವಾಗಿ ಮೀನಿನ ಬಲೆಗೆ ಕೈ ಹಾಕಿ ನೀರೊಳ್ಳೆಯಿಂದ ಕಡಿಸಿಕೊಂಡು ತಾಯಿಯಿಂದ ಗಾಯಕ್ಕೆ ಉಪಚಾರದೊಡನೆ ಬುದ್ಧಿಗೊಂದು ಗುದ್ದೂ ತಿಂದಿದ್ದ. ಆದರೆ ಮುಂದೆ ಬೆಳೆದ ಬುದ್ಧಿಗೆ ತಾನೇ ವಿಧಿಸಿಕೊಂಡ ಸಾಮಾಜಿಕ ಬದ್ಧತೆಯ ಹೊರೆ ಇತ್ತು. ಅದೊಂದು ದಿನ ಎಂದಿನಂತಲ್ಲ. ದಿನದ ಹದಿನೇಳನೇ ‘ಕೊಳ್ಳೆ’ ಹಿಡಿಯಲು ಕರೆ ಸನಿಲ್ ನಿರಾಕರಿಸಲಿಲ್ಲ. ರಾತ್ರಿಯ ಅವೇಳೆ, ಹಾವು ವಿಷಪೂರಿತ ಎಂದೆಲ್ಲ ಅರಿವಿದ್ದೂ ಹಾವನ್ನೇನೋ ಪಾರುಗಾಣಿಸಿದ ಗುರುರಾಜ ಸನಿಲ್ ಪರಿಸ್ಥಿತಿಯ ಪಿತೂರಿಯಲ್ಲಿ ಕಚ್ಚಿಸಿಕೊಂಡು, ತಿಂಗಳುಗಟ್ಟಳೆ ನರಳಿ, ಮರಳಿದ ಆಖ್ಯಾಯಿಕೆಯಂತೂ ಪರಮಾಶ್ಚರ್ಯದೊಡನೆ ಯಾರಲ್ಲೂ ತೀವ್ರ ಭಾವಸ್ಪಂದನ ಮಾಡದಿರದು.

ಹೆಚ್ಚೆಂದರೆ ಹಾವು ಹಿಡಿಯುವ ಇನ್ನೊಬ್ಬ ವ್ಯಕ್ತಿಯಾಗಷ್ಟೇ ಉಳಿಯಬಹುದಾಗಿದ್ದ ‘ಟ್ಯಾಕ್ಸೀ ಡ್ರೈವರನಿಗೆ’ ನೈತಿಕ ಬಲ ಉದ್ದಕ್ಕೂ ಕೊಟ್ಟು, ಉಪಯುಕ್ತ ಕೃತಿಕಾರನ ಮಟ್ಟಕ್ಕೆ ಏರಿಸಿದರೂ ತನ್ನನ್ನು ಮೆರೆಸಿಕೊಳ್ಳದ ಬಲರಾಂ ಭಟ್ಟರು ಬಹುಮುಖ್ಯವಾಗಿ ಅಭಿನಂದನಾರ್ಹರು. (ಕೃತಿ ಪ್ರಕಟಣೆಗೆ ನೆರವಾದವರ ಚಿತ್ರಪುಟದಲ್ಲಿ ಭಟ್ಟರು ತನ್ನ ಚಿತ್ರ ಹಾಕುವುದನ್ನು ಒಪ್ಪಲಿಲ್ಲ. ದಾಖಲೆಯ ಮಟ್ಟದಿಂದ ಆಚೆಗೆ ತನ್ನ ಬಣ್ಣಿಸಲೂ ಅವಕಾಶ ಕೊಟ್ಟಿಲ್ಲ!) ಗೆದ್ದವರ ಆಚೀಚೆ ಮುಖ ತೂರುವವರು ಇದ್ದದ್ದೇ. ಆದರೆ ಜೀವನದುದ್ದಕ್ಕೆ ಎಲ್ಲವನ್ನೂ ಸಮಸ್ಥಿತಿಯಲ್ಲಿ ಪರಿಗ್ರಹಿಸಿ ಜೊತೆಗೊಟ್ಟ ಇವರ ಹೆಂಡತಿ, ಮಗ, ಭಾವ ಇತ್ಯಾದಿ ಪುಸ್ತಕದಲ್ಲಿ ಹೆಸರಿಸಲಾದ ಕೆಲವು ಬಂಧುಗಳ ಪಾತ್ರ ಹೆಚ್ಚು ಹೇಳದಿದ್ದರೂ ಮರೆಯುವಂತದ್ದಲ್ಲ.

ಗೆಲಿಲಿಯೋ ತಾನೇ ಪ್ರಮಾಣೀಕರಿಸಿದ ವೈಜ್ಞಾನಿಕ ಸತ್ಯ – ಭೂಮಿ ಸೂರ್ಯನ ಸುತ್ತು ಚಲಿಸುತ್ತದೆ ಎನ್ನುವುದನ್ನು ಮಠದ ಬೆದರಿಕೆಗೆ ಸೋತು ಸಾರ್ವಜನಿಕದಲ್ಲಿ ಅಲ್ಲಗಳೆದನಂತೆ. (“ತಪ್ಪೊಪ್ಪಿಗೆಯ ನಾಟಕ ಮುಗಿದ ಬಳಿಕ ನೆಟ್ಟಗೆ ನಿಂತ ಗೆಲಿಲಿಯೋ ನೆಲ ಬಡಿದು, ‘ಆದರೂ ಇದು ಚಲಿಸುತ್ತದೆ’ ಎಂದನಂತೆ” – ನೋಡಿ: ಕೊಪರ್ನಿಕಸ್ ಕ್ರಾಂತಿ – ಲೇಖಕ ಜಿಟಿನಾರಾಯಣ ರಾವ್). ಗುರುರಾಜ ಸನಿಲ್ ತನ್ನ ಪುಸ್ತಕದಲ್ಲೂ ಇಂಥದ್ದೇ ದಿಟ್ಟ ದರ್ಶನಗಳನ್ನು, ಕೆಲವೆಡೆಗಳಲ್ಲಿ ಅನಿವಾರ್ಯವಾಗಿ ಮಾತಿನಲ್ಲೂ ಹಿಡಿದಿಟ್ಟಿರುವುದು ಈ ಪುಸ್ತಕಕ್ಕೆ ಬಲು ದೊಡ್ಡ ವೈಚಾರಿಕ ಆಯಾಮವನ್ನೂ ಕೊಡುತ್ತದೆ. ನಾಗಾರಾಧನೆಯ ನಂಬಿಕೆ, ಫಲ ಜ್ಯೋತಿಷ್ಯದ ಹುಳುಕು, ಮಡಿ-ಮೈಲಿಗೆ ಮತ್ತು ಜಾತಿ ವಿಂಗಡಣೆಯ ಕೃತ್ರಿಮವೆಲ್ಲವೂ ಇಲ್ಲಿ ಕಟು ವಾಸ್ತವದ ಒರೆಗೆ ಉಜ್ಜಲ್ಪಡುತ್ತವೆ. ಸಂದ ಕಾಲದ ಸತ್ಯಗಳನ್ನು ವರ್ತಮಾನದ ನಿಕಷಕ್ಕೆ ಒಡ್ಡಿಕೊಳ್ಳದೆ ಹೇರುವವರೆಲ್ಲರೂ ‘ಹಾವು ನಾವು’ ಓದಿದರೆ ಆತ್ಮ ನಿರೀಕ್ಷೆ ಮಾಡಿಕೊಳ್ಳುವುದು ಖಾತ್ರಿ. ಇಲ್ಲೆಲ್ಲ ಸನಿಲ್ ‘ಹಾವೊಂದೇ ಸತ್ಯ’ ಎನ್ನುವ ಏಕನಿಷ್ಠೆಯಿಂದ ಪ್ರಸಂಗವನ್ನೂ ವಿರಾಮದಲ್ಲಿ ಓದುವ ನಮ್ಮನ್ನೂ ಗೆಲ್ಲುತ್ತಾರೆ. ಒಂದು ಕಡೆ ನೆಲೆಯೂರಿದ ನಾಗರಹಾವನ್ನು ಹಿಡಿಯಲು ಶೂದ್ರ-ಸನಿಲ್ ಆಂಜನೇಯನ ಗರ್ಭಗುಡಿಗೆ ‘ಶಾಸ್ತ್ರೋಕ್ತವಾಗಿ’ ನುಗ್ಗುತ್ತಾರೆ. ಇನ್ನೊಂದೆಡೆ ಜೋಯಿಸರ ಢೋಂಗಿ ಏನೇ ಇದ್ದರೂ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಕೇರೆ ಹಾವಿಗೂ ಇವರು ಸರ್ಪ ಸಂಸ್ಕಾರ ಕೊಡುತ್ತಾರೆ. ಬನಗಳ ಜೀರ್ಣೋದ್ಧಾರ, ಹಾವಿನ ದ್ವೇಷ, ಹಾವುಗಳ ಕುರಿತ ನೂರೆಂಟು ಮೂಢನಂಬಿಕೆಗಳನ್ನೆಲ್ಲ ಇವರು ಯಾವುದೇ ಬುದ್ಧಿಜೀವಿಯ ಅಬ್ಬರತಾಳದಲ್ಲಿ ರಿಂಗಣಿಸದೆ, ಸತರ್ಕ ಬಿಡಿಸಿಡುತ್ತಾರೆ – “ನೋಡಿ ಸ್ವಾಮೀ ಇದಿರೋದು ಹೀಗೆ.”

ನನ್ನ ಮೇಲಿನ ಮಾತೆಲ್ಲ ಕೇಳಿ ನೀವು ‘ಹಾವು ನಾವು’ ಪುಸ್ತಕದ ಬಗ್ಗೆ ಇದೇನು ಮಂಡನೆಯೋ ಖಂಡನೆಯೋ ಎಂಬ ತಪ್ಪುಗ್ರಹಿಕೆಗೆ ಒಳಗಾಗಬೇಡಿ. ಪುಸ್ತಕದ ಬಹುದೊಡ್ಡ ಪಾಲು ಅಂದರೆ ಸುಮಾರು ನೂರಿಪ್ಪತ್ತಕ್ಕೂ ಮಿಕ್ಕು ಪುಟಗಳು ಅವಿಭಜಿತ ದಕ ಜಿಲ್ಲೆಯ ಹಾವುಗಳ ಸಚಿತ್ರ ಪರಿಚಯಕ್ಕೇ ಮೀಸಲು. ಗುರು(ಗಳ)ರಾಜ ತನ್ನ ಶಾಲಾ ಕಲಿಕೆಯ ಮಿತಿಯನ್ನು ಕಳಚಿಕೊಂಡು, ಆಧುನಿಕ ಪ್ರಾಣಿ ವಿಜ್ಞಾನದ ವಿದ್ಯಾರ್ಥಿಯಾಗಿ ಮಾಡಿದ ಮನೆಗೆಲಸ ಅಚ್ಚುಕಟ್ಟಾಗಿ ಮೂಡಿದೆ. ಸಾಮಾನ್ಯ ತಿಳುವಳಿಕೆಗೆ ಧಾರಾಳವಾಗುವಷ್ಟು ಹಾವುಗಳ ಲಕ್ಷಣಗಳು, ವರ್ತನ ವಿವರಣೆಗಳು, ಆಕಸ್ಮಿಕಗಳಿಂದ (ಮುಖ್ಯವಾಗಿ ವಿಷ ಕಡಿತ) ಒದಗುವ ಪರಿಣಾಮಗಳು ಮತ್ತು ಪರಿಹಾರಗಳು ನಿಸ್ಸಂದಿಗ್ಧವಾಗಿ ಇಲ್ಲಿದೆ. (ಸ್ವತಃ ಹನ್ನೊಂದು ಬಾರಿ ಕಡಿಸಿಕೊಂಡ ಅನುಭವಿ!) ಇವಕ್ಕೆಲ್ಲ ಸಹಕರಿಸಿದವರನ್ನು ಪುಸ್ತಕದಲ್ಲಿ ಪಟ್ಟಿ ಮಾಡುವುದು ಅಪ್ರಾಯೋಗಿಕವಾದರೂ ಅದನ್ನು ವಿನಯಪೂರ್ವಕವಾಗಿ ಸೂಚಿಸುವ ಕೆಲಸದಲ್ಲಿ ಸನಿಲ್ ಹಿಂದೆ ಬಿದ್ದಿಲ್ಲ. ಮುಖ್ಯವಾಗಿ ಭಾಷೆ ಬಂಧಗಳ ಒಪ್ಪಕ್ಕೆ ಪ್ರಾಧ್ಯಾಪಕ ಗಣನಾಥ ಎಕ್ಕಾರು ಕೈಗೂಡಿಸಿದ್ದಾರೆಂಬ ಉಲ್ಲೇಖ ಮತ್ತೆ ಪುಸ್ತಕಕ್ಕೆ ಅವರ ಬೆನ್ನುಡಿ ಉಚಿತೋಚಿತವಾಗಿದೆ.

ಹಾವುಗಳು ನಮ್ಮವಾಗುವಲ್ಲಿ (ಹಾವು ನಾವು) ಗುರುರಾಜ ಸನಿಲರ ಪುರೋಹಿತ-ತನವನ್ನು ಅರ್ಥಪೂರ್ಣವಾಗಿಸೋಣ. (ಕೊಂಡು, ಮನನ ಮಾಡಿ, ಅನುಷ್ಠಾನಿಸುವಲ್ಲಿ ಪ್ರಾಮಾಣಿಕರಾಗೋಣ) ಆಕಸ್ಮಿಕವಾಗಿ ಬಂದು ಹೋದ ವನ್ಯಜೀವಿ ಸಪ್ತಾಹಕ್ಕೆ (ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರ) ಅದಕ್ಕಿಂತ ದೊಡ್ಡ ಗೌರವ ಇನ್ನೊಂದಿರಲಾರದು. ಅವಾಸ್ತವವಾಗಿ ಗಗನದೆತ್ತರಕ್ಕೆ ನಿಂತು, ತನ್ನ ನೂರೆಂಟು ಜಡೆಬಿಡಿಸಿ, ಸಮಾಜವನ್ನು ಕಾಳಿಂದೀ ಮಡುಮಾಡಿದ ಪರಿಸರನಾಶದ ಕಾಳಿಂಗಗಳನ್ನು ಮೆಟ್ಟಿ ನಿಲ್ಲೋಣ.

(ವಿಶೇಷ ಸೂಚನೆ: ನನ್ನಿಂದ ‘ಹಾವು ನಾವು’ ಕೊಳ್ಳಲಿಚ್ಚಿಸುವವರು ರೂ ಮುನ್ನೂರು ಮತ್ತು ನಿಮ್ಮ ವಿಳಾಸವನ್ನು ಮುಂದಾಗಿ ಕಳಿಸಿಕೊಡಬಹುದು)

ನರಸಿಂಹಾಷ್ಟಮಿ!

ಅಷ್ಟಮಿ ಕಳೆದು ದಿನವೆರಡರಲ್ಲಿ ನನಗೆ ಮಾಮೂಲಿನಂತಲ್ಲದ ಒಂದು ಕೊರಿಯರ್ ಬಂತು. ಎಚ್ಚರಿಕೆಯಿಂದ ಬಿಚ್ಚಿದರೆ ಅಷ್ಟವಿಧದ ಸವಿತಿನಿಸುಗಳ ಹೊರೆ! ಜೊತೆಯಲ್ಲೊಂದು ಮಧುರತರವಾದ ಪತ್ರ – “ಗೋಕುಲಾಷ್ಟಮಿ, ಶ್ರೀವೈಷ್ಣವರಿಗೆ ಅತಿ ವಿಶಿಷ್ಟವಾದ ಹಬ್ಬ. ಅಂದು ಶ್ರೀ ಕೃಷ್ಣನಿಗೆ ದೊಡ್ಡ ಮಂಟಪವನ್ನು ಕಟ್ಟಿ, ಫಲವಸ್ತ್ರದಿಂದ ಸಿಂಗರಿಸಿ, ರಾತ್ರಿ ಆರಾಧಿಸುತ್ತೇವೆ. ಜೊತೆಗೆ ಬೆಲ್ಲ-ಕಲ್ಲು ಸಕ್ಕರೆಯ ಮಿಶ್ರಣವಾದ ನವನೀತ, ಅವಲಕ್ಕಿಯಿಂದ ಮಾಡಿದ ತಿನಿಸು ಮತ್ತು ವಿವಿಧ ತಿಂಡಿಗಳನ್ನು ಮಾಡಿ ವಾಸುದೇವನಿಗೆ ಸಮರ್ಪಿಸುತ್ತೇವೆ. ಆ ವಾರವೆಲ್ಲ ನಮಗೆ ಸಂಭ್ರಮ! ಬಂಧುಮಿತ್ರರನ್ನು ಆಹ್ವಾನಿಸಿ, ಮುಕುಂದನಿಗೆ ಆರತಿಯೆತ್ತಿ, ಎಲ್ಲರಿಗೂ ಪ್ರಸಾದವನ್ನಿತ್ತು ಸತ್ಕರಿಸುತ್ತೇವೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಸಾದವನ್ನು ಈ ವರ್ಷ ನಿಮಗೆ ಕಳುಹಿಸಿದ್ದೇನೆ. ದಯವಿಟ್ಟು ಸ್ವೀಕರಿಸಿ. “ಪರಮಭಕ್ತಪರಿಪಾಲನ ಚತುರನಾದ ಶ್ರೀಗೋಪಾಲನು ನಿಮ್ಮೆಲ್ಲರಿಗೂ ಸಕಲ ಐಶ್ವರ್ಯ, ಆಯುರಾರೋಗ್ಯವನ್ನಿತ್ತು ಸಲಹಲೆಂದು ಪ್ರಾರ್ಥಿಸುತ್ತೇನೆ. ಇತಿ ತಮ್ಮವ ಎಸ್.ವಿ ನರಸಿಂಹನ್.”

ಹೌದು, ಕಳೆದ ವರ್ಷ ಇಲ್ಲೇ ನನ್ನ ಬ್ಲಾಗಿನಲ್ಲಿ ಕಾಣಿಸಿದ ವಿರಾಜಪೇಟೆಯ ಡಾ| ಎಸ್.ವಿ. ನರಸಿಂಹನ್ ಇವರೇ (ನೋಡಿ: ಕೀಪಿಟಪ್ ನರಸಿಂಹನ್ ೭-೧೦-೨೦೦೯ರ ನನ್ನ ಲೇಖನ ಅಥವಾ ಬಳಸಿ ಈ ಸೇತು. ನಾನವರಿಗೆ ಬರೆದೆ “ವರ್ಷಕ್ಕೊಂದು ಬಾರಿ ಕಡ್ಡಾಯವಾಗಿ ಕಾಣುವ ವಿಳಾಸದೊಡನೆ ದೊಡ್ಡ ಡಬ್ಬಿ ಕೊರಿಯರಿನಲ್ಲಿ ಬಂದಾಗ ನಿಜಕ್ಕೂ ಆಶ್ಚರ್ಯವಾಯ್ತು. ಈ ಬಾರಿ ಚಿತ್ರ, ಸಂದೇಶ ಬಿಟ್ಟು ಹಕ್ಕಿ ಗರಿ, ನಕ್ಷತ್ರದ ತುಣುಕು ಏನು ಕಳಿಸಿದ್ದಾರಪ್ಪಾಂತ ಬಿಲ್ ಮಾಡುತ್ತಿದ್ದ ಗಿರಾಕಿಯನ್ನು ತಳ್ಳಿ ಕಟ್ಟು ಬಿಡಿಸುವ ಕುತೂಹಲ, ಸಂಭ್ರಮ. ಅಂತೂ ಇಂತೂ ಬಿಡುವಾದಾಗ ತೆಗೆದು ನೋಡಿದರೆ ಅಪ್ಪಟ ಗೃಹಸ್ಥ ನರಸಿಂಹನ್! ಹೀಗೂ ನೆನಪಿಸಿಕೊಳ್ಳಬಹುದಲ್ಲವೇ! ನಿನ್ನೆಯಷ್ಟೇ ಅಕ್ಷರಪ್ರಕಾಶನದಿಂದ ಭಾರೀ ಪುಸ್ತಕವೊಂದು ಬಂತು – ಸ್ಮೃತಿ, ವಿಸ್ಮೃತಿ ಮತ್ತು ಭಾರತೀಯ ಸಂಸ್ಕೃತಿ (ಇಂಗ್ಲಿಷಿನಲ್ಲಿ ಎಸ್.ಎನ್. ಬಾಲಗಂಗಾಧರ, ಕನ್ನಡಕ್ಕೆ ರಾಜಾರಾಮ ಹೆಗಡೆ. ಬೆಲೆ ರೂ ೪೧೫). ಅದರಲ್ಲಿ ನಾನು ಗ್ರಹಿಸಿದ್ದಿಷ್ಟು, ‘ಭಾರತದಲ್ಲಿ ಜಾತಿಗಳಿಲ್ಲ, ಬ್ರಿಟಿಷರ ಅಪಾರ ಅಜ್ಞಾನದಲ್ಲಿ ಹೇಳಿದ್ದನ್ನು ನಾವು ನಂಬಿಕೊಂಡು, ಸಂಸ್ಕೃತಿಯನ್ನು ಜಾತಿಯೆಂದು ಭ್ರಮಿಸಿದ್ದೇವೆ, ಸಂಭ್ರಮಿಸುತ್ತಿದ್ದೇವೆ.’ (ನಾನಿನ್ನೂ ಪೂರ್ತಿ ಪುಸ್ತಕ ಓದಿಲ್ಲ.) ಎಷ್ಟು ಸರಿಯಾದ ಮಾತು ಎನ್ನುವಂತೆ ‘ಶ್ರೀವೈಷ್ಣವರಿಗೆ ದೊಡ್ಡ ಹಬ್ಬ’ ಎಂದೇ ನೀವು ಹೇಳಿಕೊಂಡರೂ ಲೋಕ ಕಾಣುವಂತೆ ಈ ಸ್ಮಾರ್ತನಿಗೆ, ಇನ್ನೂ ಸರಿಯಾಗಿ ಹೇಳಬೇಕಾದರೆ ಈ ಪಾಖಂಡಿಗೆ (ದೇವರಾಣೆಯಾಗಿ ಮನೆಯಲ್ಲಿ ಒಂದು ಪಟ, ಮೂರ್ತಿ ನಾನು ಇಟ್ಟವನಲ್ಲ. ಒಂದು ಪೂಜೆ, ಒಂದು ಧ್ಯಾನ ಮಾಡಿದವನೂ ಅಲ್ಲ) ಹಬ್ಬದ ಹೆಸರಿನಲ್ಲಿ ಸವಿ ಹಂಚಿಕೊಂಡಿದ್ದೀರಿ, ರಕ್ಷಾಕವಚ ತೊಡಿಸಿದ್ದೀರಿ! ನಿಮ್ಮ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆಗಳು. ಆದರೆ ದಯವಿಟ್ಟು ಈ ಸಾಂಕೇತಿಕತೆಯನ್ನು ಮುಂದಕ್ಕೆ ವಾರ್ಷಿಕ ವಿಧಿಯನ್ನಾಗಿ ಖಂಡಿತಾ ಮಾಡಬೇಡಿ. ನಮ್ಮೊಳಗಿನ ಆತ್ಮೀಯತೆಗೆ ಇಂಥ ‘ಊರೇಗೋಲುಗಳು’ ಬೇಕಾಗದು.”

ನರಸಿಂಹನ್ ಉತ್ತರ ಬರಲಿಲ್ಲ. ಮುಗುಳ್ನಕ್ಕು ಸುಮ್ಮನಾಗಿರಬೇಕು? ಇಲ್ಲ, ಅವರಿಗೆ ಪಾರಂಪರಿಕವಾಗಿ ಬಂದ ಹಬ್ಬಕ್ಕಿಂತ ದೊಡ್ಡದಾದ ಅವರ ವೈಯಕ್ತಿಕ ಮತ್ತು ವೈಚಾರಿಕ ಹಬ್ಬಕ್ಕೆ ತುರುಸಿನ ತಯಾರಿ ನಡೆಸಿದ್ದರು. ಸಾಕ್ಷಿ – ಇಂದು ಸಾದಾ ಅಂಚೆಯಲ್ಲಿ ಬಂದ ಎರಡು ಹಕ್ಕಿ ಚಿತ್ರದ ಕಾರ್ಡು ಮತ್ತು ವನ್ಯ ಸಂದೇಶದ ಪತ್ರ. ಈ ಬಾರಿ ಅವನ್ನು (ಹಿಂದಿನವುಗಳನ್ನೂ ಸೇರಿಸಿದಂತೆ) ಅವರು ತಮ್ಮದೇ ಬ್ಲಾಗಿನಲ್ಲೂ ಹಾಕಿರುವುದರಿಂದ ಇನ್ನು ನನ್ನ ವಗ್ಗರಣೆ ಇಲ್ಲ. ಕೂಡಲೇ ಇಲ್ಲಿ ಚಿಟಿಕೆ ಹೊಡೆದು (ಕಂಬ ಒಡೆದು?) ನರಸಿಂಹ ದರ್ಶನದಿಂದ ಕೃತಾರ್ಥರಾಗಿರಿ. ಅಲ್ಲೂ ಇಲ್ಲೂ ನರಸಿಂಹ ಸ್ತುತಿಗಿಂತಲೂ ಮುಖ್ಯವಾಗಿ ‘ದರ್ಶನ’ದಿಂದ ಪ್ರೇರಿತರಾಗಿ ವನ್ಯಜಪಮಾಲೆಗೆ ನಿಮ್ಮ ನುಡಿವಣಿಗಳನ್ನು ಪೋಣಿಸಿರಿ.