(ಕುಮಾರಪರ್ವತದ ಆಸುಪಾಸು ಭಾಗ ಐದು)

“ನೀವು ಕಾಡಿಗೆ ಯಾಕ್ ಬಂದ್ರಿ?” ಕತ್ತು ಮುಚ್ಚುವ ಸ್ವೆಟ್ಟರ್ ಹಾಕಿದ್ದ ಡ್ರೈವರ್ ಪ್ರಶ್ನಿಸಿದ. ಜೀಪಿನ ಹೆದ್ದೀಪ ಕತ್ತಲಮೊತ್ತದಲ್ಲಿ ಆಳದ ಗುಹೆ ಕೊರೆಯುತ್ತಾ ನಮ್ಮನ್ನು ಒಳಗೊಳಗೆ ಒಯ್ಯುತ್ತಿತ್ತು. “ಹೊಳೆ, ಕಾಡು, ಬೆಟ್ಟ ಸುತ್ತುವುದು ನಮ್ಮ ಹವ್ಯಾಸ” ನಾನಂದೆ. ಎದುರು ಇನ್ನೊಂದು ಬದಿಯಲ್ಲಿ ಕುಳಿತವ, ಉಣ್ಣೆ ಟೊಪ್ಪಿಯವ “ಓಹೋ ಮೌಂಟೇರಿಂಗ್ ವರ್ಕ್ ಮಾಡ್ತಾ ಇದ್ದೀರಾ! ಸ್ಟೂಡೆಂಟ್ಸಾ?” ಜೀಪಿನ ಜೋಡಣೆಗಳು ಕಿರಿಗುಟ್ಟುವಂತೆ ಕುಲುಕುತ್ತಾ ಒರಟು ದಾರಿಯ ಸಡಿಲ ಕಲ್ಲುಗಳ ಮೇಲೆ ತೊನೆಯುತ್ತಾ ಸಾಗಿತ್ತು. “ಎಲ್ಲಾ ತರದವರೂ ಇದ್ದೇವೆ” ನನ್ನ ಮಾತಿಗೆ ನಡುವೆ ಕುಳಿತ ಕುಳ್ಳ ಥಟ್ಟನೆ ಕೇಳಿದ “ನಿಮ್ಮಲ್ಲಿ ಡಿಪಾರ್ಮೆಂಟ್ನವರೂ ಇದ್ದಾರಾ? ಜರ್ನಲಿಸ್ಟ್ಸೂ?” ಬೆಳಕೋಲು ಆಚೀಚಿನ ಕುಮಾರಧಾರಾ ಕೊಳ್ಳದ ಆಳವನ್ನಾಗಲೀ ಕನ್ನಡಿಕಲ್ಲಿನ ಎತ್ತರವನ್ನಾಗಲೀ ತೋರುತ್ತಿರಲಿಲ್ಲ. ನಾನು “ಇಲ್ಲ” ಎಂದೆ. ಎಲ್ಲ ಸ್ವಲ್ಪ ಹಗುರಾದಂತನ್ನಿಸಿತು. ದಾರಿ ಮಟ್ಟವಿತ್ತು, ಸವಾರಿ ಹಗುರಾಯ್ತು. “ನಾವೂ ನಿಮ್ಮಂಗೇ,” ಡ್ರೈವರು ಮುಂದುವರಿಸಿದ “ಅಡ್ವೆಂಚರ್ ಲವ್ವಿಂಗ್. ಹೀಗೆ ಜಾಲಿಯಾಗಿ ಹಂಟಿಂಗ್ ಮಾಡಾಣಾಂತ ಬಂದ್ವಿ. ಆದ್ರೆ ಗೇಟ್ನಲ್ಲಿ ಹೇಳೋಹಾಗಿಲ್ಲ. ಅದ್ಕೇ ಸುಬ್ರಹ್ಮಣ್ಯದ ಸಂಬಂಧಿಕರ ಕಥೆ ತಗ್ದ್‌ವೀ. ಗಾರ್ಡ್ ತಪ್ಪುಸ್ಕೊಳಾಣಾಂತಂದ್ರೆ ನೀವು ಗಂಟುಬಿದ್ರೀ. ಏನೇ ಇರಲೀ ಒಪ್ಕೊಂಡಿದ್ದಕ್ಕೆ ನಿಮ್ನ ಕೆಳ ಗೇಟಿನ ಹತ್ರ ಬಿಡ್ತೀವಿ. ಯಾರ್ಗೂ ಹೇಳಕ್ಕೊಗ್ಬೇಡಿ” ಮುಗಿಸಿದ. ದಾರಿ ಬೆಟ್ಟದ ತೆರೆಮೈಗೆ ಬಂದು ಬಲಕ್ಕೆ ಹೊರಳಿದಾಗ ಬೆಳಕು ಶೂನ್ಯವನ್ನೇ ವ್ಯಾಪಿಸಿದರೂ ಎಲ್ಲ ನಿಚ್ಚಳವಾದಂತಿತ್ತು.

ದಾರಿ ಕರೆಯಲ್ಲೊಬ್ಬ ಟಾರ್ಚ್ ಹಿಡಿದುಕೊಂಡು ನಿಂತಿದ್ದ. ಜೀಪೂ ನಿಂತಿತು. ಅವನಿಗೂ ನಮ್ಮ ಚಾಲಕನಿಗೂ ಏನೋ ಪಿಸಿಪಿಸಿ. ಮತ್ತೆ ಆತ ದಾರಿಯಂಚಿಗೆ ಸರಿದು ಕಣೆವೆಗೇನೋ ಸಂದೇಶ ಸಾರಿದ. ಐದೇ ಮಿನಿಟಿನಲ್ಲಿ ಇಬ್ಬರು ಕೋವಿ, ಹೆಡ್ ಲೈಟು ಮತ್ತೇನೇನೋ ಚೀಲ ಹಿಡಿದುಕೊಂಡು ಏರಿ ಬಂದರು. ಆ ಮೂವರೂ ಜೀಪೇರಿದ್ದೇ ಪಯಣ ಮುಂದುವರಿಯಿತು. ಹಾಗೇ ಅವರ ಪುರಾಣ ಬಿಚ್ಚಿದರು. ಕೆಲವರು ಸೋಮವಾರ ಪೇಟೆಯವರು, ಬೇಟೆ ಖಯಾಲಿಯವರು. ಕಳ್ಳಬೇಟೆಗೆ ಸಲಕರಣೆ, ಮಾರ್ಗದರ್ಶನ ಬಿಸಿಲೆಯಮಿತ್ರರದ್ದು. ಗೇಟಿನವರಿಗೆ ಪರಿಚಯ ಬೇರೇ ಇರುವುದರಿಂದ ಬಿಸಿಲೆಯವರು ಸಲಕರಣೆ ಸಹಿತ ಕಾಲ್ದಾರಿಯಲ್ಲಿ ಗೇಟು ತಪ್ಪಿಸಿ ಸೇರಿಕೊಳ್ಳುವುದು ಮಾಮೂಲಂತೆ. ಬಿಸಿಲೆ-ಕುಳ್ಕುಂದ ದಾರಿ ಒಳ್ಳೆಯ ಬೇಟೆ ಅವಕಾಶಗಳನ್ನು ಕೊಡುತ್ತದಂತೆ. ಆನೆ, ಹುಲಿ, ಚಿರತೆ, ಕಾಟಿ, ಕರಡಿ, ಕಡವೆಗಳಾದಿ ಎಲ್ಲ ಇಲ್ಲಿವೆ. ಇವರಗೆ ಆನೆಯೊಂದು ಬಿಟ್ಟು ಏನು ಕಣ್ಣು ಕೊಟ್ಟರೂ ಈಡಂತೆ! ಹಿಂದೊಮ್ಮೆ ಇದೇ ತಂಡಕ್ಕೆ ಇಲ್ಲೇ ಕಿರು ಸೇತುವೆಯೊಂದರ ಬಳಿ ಸಾಕ್ಷಾತ್ ಹುಲಿರಾಯನನ್ನೇ ನೋಡಿದ್ದರಂತೆ. ಹತ್ತು ಮಾರಿನ ಚಂಡವ್ಯಾಘ್ರ ಹತ್ತುಮಣ ತೂಕದ ಕಾಟಿಯನ್ನು ಅನಾಮತ್ತು ಎತ್ತಿಕೊಂಡು ಸೇತುವೆಯಿಂದಾಚೆ ನೆಗೆದು ಮಾಯವಾಗಿತ್ತಂತೆ. (ಕಂತೆ ಪುರಾಣ ನಂಬಬೇಕಾಗಿಲ್ಲ.) ಹೀಗೆ ಒಮ್ಮೆ ಇವರ ಬೇಟೆಗೆ ಒಂಟಿ ಸಲಗನ ಉಪಟಳ ಹೆಚ್ಚಾಯ್ತೆಂದು ಇವರು ಕೊಟ್ಟ ಬೆಂಕಿ ಕಾಡಿಗೆ ವ್ಯಾಪಿಸಿ ಬಿಸಿ ಸುದ್ದಿಯಾಗಿತ್ತಂತೆ. (ಇಲಾಖೆ ಬಿಡಿ, ‘ಕೊಂಬೆಗೆ ಕೊಂಬೆ ಉಜ್ಜಿ ಬೆಂಕಿಯಾಯ್ತು’ ಎಂದು ಕಡತ ಮುಚ್ಚಿರ್ತಾರೆ!) ದರೆ ಜರಿದು, ಮರಬಿದ್ದು ಎರಡು ವರ್ಷ ದಾರಿ ಮುಚ್ಚಿಹೋಗಿದ್ದಾಗ ಸರಕಾರದ ಬೇಜವಾಬ್ದಾರಿಯನ್ನು ಇವರೂ ಕಟುವಾಗಿ ಟೀಕಿಸಿದ್ದರಂತೆ! ಮಾತು ಬೆಳೆದಂತೆ ಘಾಟಿಯ ಇಳುಕಲು ತೀವ್ರವಾಯ್ತು, ದಾರಿ ಹೆಚ್ಚು ಹಾಳೂ ಆಗಿತ್ತು. ಜೀಪು ಕಲ್ಲು ಕೊರಕಲುಗಳಲ್ಲಿ ನ್ಯರನ್ಯರಗುಟ್ಟುತ್ತಾ ದಿಣ್ಣೆ ತಗ್ಗುಗಳಲ್ಲಿ ಧಡಕಾಯಿಸುತ್ತಾ ಇಳಿದಿತ್ತು. ಹೀಗೇ ಒಮ್ಮೆ ತೀವ್ರ ಬಲ ತಿರುವು ತೆಗೆಯುತ್ತಿದ್ದಂತೆ ಎಲ್ಲರಿಗೂ ಮುಗ್ಗರಿಸಿದ ಅನುಭವ. ಜೀಪಿನ ಅಡಿ ನೆಲ ಉಜ್ಜಿ, ದೂಳೆಬ್ಬಿಸಿ ನಿಂತೇ ಬಿಟ್ಟಿತು. ಜಗ್ಗಿದ್ದ ಬಲಭಾಗದಿಂದಲೇ ಚಾಲಕ ಹುಶಾರಾಗಿಳಿದು, ಟಾರ್ಚ್ ಹಾಕಿ ನೋಡಿ, “ಥತ್ ಮಗಂದು! ಯಾಕ್ಸಿಲ್ ಕಟ್ಟು.” ತರಹೇವಾರಿ ವಿಷಾದಸೂಚಕಗಳೊಡನೆ ಎಲ್ಲರೂ ಇಳಿಯುತ್ತಿದ್ದಂತೆ ಇನ್ನೊಬ್ಬ ಘೋಷಿಸಿದ “ನಡ್ಯೋ ಪ್ರೀತ್ಯೋರ್ನ ತುಂಬ್ಕೊಂಡಿದ್ದಕ್ಕೆ ಎಲ್ರೂ ನಡ್ಯಂಗಾಯ್ತು.”

*** ***

ಕುಮಾರಪರ್ವತ ಶಿಖರದೊಡನೆ ಕುಮಾರಧಾರಾ ನದಿ ತಳುಕು ಹಾಕಿಕೊಂಡಿರುವುದು ಸ್ಥಳ ಪುರಾಣದ ನಿಜ. ಆದರೆ ಹಿಂದಿನ ಕಂತುಗಳಲ್ಲಿ ನಾನು ಉಲ್ಲೇಖಿಸಿದ ಸರ್ವೇಕ್ಷಣ ಇಲಾಖೆಯ ಭೂಪಟದಲ್ಲಿ ಕಣ್ಣು ಹಾಯಿಸಿದರೆ ಕಾಣುವ ವಾಸ್ತವ ಬೇರೇ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಪುಷ್ಪಗಿರಿಯ (ಉರುಫ್ ಕುಮಾರಪರ್ವತದ) ತೀರಾ ಪೂರ್ವಕ್ಕೆ ಕುದಿಗಾನ, ನಾದೇನಹಳ್ಳಿ ಮೂಲಕ ಹಾದು ಬರುವ ಕಾಡ ತೊರೆಯೊಂದು ಬೆಳೆಬೆಳೆದು ಹೆಗಡೆಮನೆ ಎಂಬಲ್ಲಿ ಕುಮಾರಧಾರಾ ಹೊಳೆಯ ಗಾತ್ರ ಮತ್ತು ಅಂತಸ್ತು ಪಡೆಯುತ್ತದೆ. ಅಲ್ಲೇ ಬಳಿಯ ಮಲ್ಲಹಳ್ಳಿಯಲ್ಲಿ ಜಲಪಾತವಾಗಿ ಮೊರೆದು, ಮತ್ತೆ ಕಾಡು ಸೇರುವ ನೀರು ಕುಮಾರಪರ್ವತ ಶ್ರೇಣಿಯ ಉತ್ತರದ ಮಹಾ ಕಣಿವೆ ಸೇರುತ್ತದೆ. ಹಿಂದಿನೊಂದು ಅಧ್ಯಾಯದಲ್ಲಿ ನಾನು ಈಗಾಗಲೇ ಉಲ್ಲೇಖಿಸಿದಂತೆ ನೇರ ಕುಮಾರಪರ್ವತಾಗ್ರದಲ್ಲಿ ಜಿನುಗಿ ಹರಿಯುವ ತೀರಾ ಸಣ್ಣ ತೊರೆ ಲಿಂಗದ ಹೊಳೆಗೋ ಲಿಡಿಸಿಲ್ಕೆ ಹೊಳೆಗೋ ಸೇರಿ, ಈ ಮಹಾಕಣಿವೆಯಲ್ಲಿ ಕುಮಾರಧಾರೆಯಲ್ಲಿ ಲೀನವಾಗುವುದಷ್ಟೇ ನಿಜ. ‘ಇಷ್ಟೆಲ್ಲಾ ಸೂಕ್ಷ್ಮ ಯಾಕೆ’ ಎಂದು ಮುಂದಿನೊಂದು ಕಂತಿನಲ್ಲಿ ಅವಶ್ಯ ವಿಸ್ತರಿಸುತ್ತೇನೆ. ಅಲ್ಲಿವರೆಗೆ. . .

ಕುಮಾರಪರ್ವತದಲ್ಲಿ ನಾವು ಬೆಂಬತ್ತಿದ್ದ ‘ಜಲಪಾತ’ದ ತಳ ನಿಷ್ಕರ್ಷೆಗೆ ಅಂತಿಮ ರುಜು ಹಾಕಿದ್ದು ಈ ಕುಮಾರಧಾರೆ. ಸಮುದ್ರ ಮಟ್ಟದಿಂದ ಸುಮಾರು ೯೧೦ ಮೀಟರ್ ಔನ್ನತ್ಯದಿಂದ ಸುಬ್ರಹ್ಮಣ್ಯದ ೧೨೪ ಮೀಟರಿಗೆ ಇಳಿಯುವ ಈ ಜಾಡು ಸಪಾಟು ನೆಲದ ಅಂದಾಜಿನಲ್ಲಿ (ಭೂಪಟದಿಂದ) ಉದ್ದ ತೆಗೆದರೂ ಸುಮಾರು ೨೬ ಕಿಮೀ ಉದ್ದವಿದೆ. (ಬೆಟ್ಟಗುಡ್ಡಗಳ ಚಾರಣದಲ್ಲಿ ಅಂತರವನ್ನು ಕೇವಲ ಎರಡುಬಿಂದುಗಳ ವ್ಯತ್ಯಾಸವೆಂದು ಲೆಕ್ಕ ಹಾಕುವುದೇ ಸರಿಯಲ್ಲ) ಅದನ್ನು ನಡೆದು ನೋಡುವ ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು’ ತಂಡದ ಉತ್ಸಾಹಕ್ಕೆ (೧೯೮೯ರ) ಕ್ರಿಸ್ಮಸ್ ಹಿಂದಿನ ಸೋಮವಾರ ಮತ್ತು ಆದಿತ್ಯವಾರದ ಬಿಡುವುಗಳನ್ನು ಹೊಂದಿಸಿಕೊಂಡೆವು. ಆ ದಿನಗಳಲ್ಲಿ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ವಿರಳ ಬಸ್ ಸಂಚಾರವಿದ್ದರೂ ರಾತ್ರಿ ಎಂಟೊಂಬತ್ತು ಗಂಟೆಗಷ್ಟೇ ಹೊರಡಬಹುದಾಗಿದ್ದ ನಮ್ಮ ಅನುಕೂಲಕ್ಕೆ ಯಾವುದೂ ದಕ್ಕುವಂತಿರಲಿಲ್ಲ. ಮತ್ತೆ ನಮ್ಮ ಚಾರಣದ ನಿಜ ಆರಂಭ ಬಿಂದು ಬೂದಿಚೌಡಿ (ಸುಬ್ರಹ್ಮಣ್ಯದಿಂದ ಸುಮಾರು ಒಂಬತ್ತು ಕಿಮೀ). ನನ್ನ ಹಿಂದಿನ ಕಥಾನಕಗಳಲ್ಲಿದ್ದದ್ದಕ್ಕಿಂತ ದಾರಿ ಜೀರ್ಣೋದ್ಧಾರವಾಗಿತ್ತು. ಆದರೆ ನಾವು ತಿಳಿದಂತೆ ಶಿರಾಡಿ ಘಾಟಿಯ ವಾಣಿಜ್ಯ ಇಲಾಖೆಯ ತಪಾಸಣಾ ಠಾಣೆಯಲ್ಲಿ ಕೊಡಬೇಕಾದ ಲಂಚದ ಹಣವನ್ನೂ ತಪ್ಪಿಸಬಯಸುವ ಲಾರಿಗಳು ಮುಖ್ಯವಾಗಿ ಬಳಸುತ್ತಿದ್ದವು. ಅವುಗಳಲ್ಲೂ ಮುಖ್ಯ ಮೂರೂ ದಿಕ್ಕುಗಳಲ್ಲಿ ಭಾರೀ ಹೊರಚಾಚಿಕೆಯಲ್ಲಿ ತುಂಬಿ ಬರುವ ಹುಲ್ಲ ಲಾರಿಗಳಂತೆ. ಸಹಜವಾಗಿ ದಾರಿಯ ಹರಹು ಕಡಿಮೆಯಿದ್ದಲ್ಲಿ, ತೀರಾ ಆಕಸ್ಮಿಕವಾಗಿ ಎದುರು ವಾಹನ ಸಿಕ್ಕಲ್ಲಿ ಇವು ನುಗ್ಗಿದ್ದಕ್ಕೆ ಧಾರಾಳ ಹುಲ್ಲು ಉದುರಿದ್ದು, ಮರಗಿಡಗಳ ಮೇಲೆಲ್ಲಾ ನೇಲುತ್ತಿದ್ದದ್ದು ನೋಡಬಹುದಿತ್ತು. ನಂಬಿದರೆ ನಂಬಿ, ಕುಳ್ಕುಂದದ ಒಂದು ಸಣ್ಣ ಟೆಂಪೋದವನು ಬೆಳಿಗ್ಗೆ, ಸಂಜೆ ಒಮ್ಮೆ ಘಾಟಿಯುದ್ದಕ್ಕೆ ಉದುರುಹುಲ್ಲು ಸಂಗ್ರಹಿಸಲು ಟ್ರಿಪ್ ಹಾಕಿ ಭರ್ತಿ ಲೋಡ್ ತರುತ್ತಿದ್ದನಂತೆ! (ಹುಲ್ಲಿನ ಲಾರಿ ಅಟಕಾಯಿಸಲು ಕಾಡಾನೆಗಳೂ ಬರುತ್ತಿದ್ದವು ಎನ್ನುವ ಇನ್ನೊಂದು ಕತೆ ನನಗಂತೂ ಅಷ್ಟೇನೂ ವಿಶ್ವಾಸಾರ್ಹವಾಗಿ ಕೇಳಲಿಲ್ಲ.) ಅವೆಲ್ಲಾ ಏನಿದ್ದರೂ ಯಾವ ವೇಳೆಯಲ್ಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಾತ್ರ ಇಲ್ಲದ ದಿನಗಳವು. ಹಾಗಾಗಿ ತಂಡ ಸ್ವಂತ ದ್ವಿಚಕ್ರ ವಾಹನಗಳಲ್ಲಿ ಮೊದಲು ಸುಬ್ರಹ್ಮಣ್ಯಕ್ಕೆ ಹೋಗಿ ಮತ್ತೆ ಬಾಡಿಗೆ ವಾಹನವನ್ನೇನಾದರೂ ಹಿಡಿದು ಬೂದಿಚೌಡಿ ತಲಪುವುದೆಂದು ನಿಶ್ಚಯಿಸಿಕೊಂಡೆವು.

ಅಪರಾತ್ರಿಯಲ್ಲಿ ಕಾಡು ನುಗ್ಗಿ ಶಿಬಿರಹೂಡುವುದು ಕಷ್ಟ. ಇದನ್ನು ತಪ್ಪಿಸಲು ಶನಿವಾರ ಅಪರಾಹ್ನವೇ ಬಿಡುವು ಮಾಡಿಕೊಳ್ಳಬಹುದಾಗಿದ್ದ ನಾಲ್ವರು ಮುಂದಾಗಿ ಹೊರಟರು. ಅರವಿಂದರ ಬೈಕಿಗೆ ಅವರ ಭಾವ ಪಮ್ಮಣ್ಣನೇ (ಪರಮೇಶ್ವರ) ಸಂಗಾತಿ. ಪ್ರಸನ್ನನ ಸ್ಕೂಟರಿಗೆ ಸಮೀರನ ಜೋಡಿ. ಸಂಜೆ ಸುಬ್ರಹ್ಮಣ್ಯದ ಡಾ| ಹೆಗಡೆಯವರಲ್ಲಿ ಸ್ವಂತ ವಾಹನ ಬಿಟ್ಟು, ಹೊಟೆಲಿನಲ್ಲಿ ಮುಂಗಡವಾಗಿ ರಾತ್ರಿ ಊಟ ಮುಗಿಸಿಕೊಂಡರು. ಅನಂತರ ವಟವೃಕ್ಷ (ಮುದ್ರಾ ರಾಕ್ಷಸನಿಗೆ ಕ್ಷಮೆಯಿರಲಿ, ಅದು ಆಟೋರಾಕ್ಷಸ, ಅರ್ಥಾತ್ ಒಟ್ಟೆ ರಿಕ್ಷಾ) ಏರಿ ಹೋದರು. ವಾಸ್ತವದಲ್ಲಿ ನಾವು ‘ಜಲಪಾತದ ಬೆಂಬತ್ತಿ’ ಮರಳಿದಾಗ ಹೊಳೆ ದಾಟಿದ್ದು ‘ಸಂಗಮ’ದ ಬಳಿ, ಅಂದರೆ ಬೂದಿಚೌಡಿ ಮಂಟಪದಿಂದಲೂ ಸ್ವಲ್ಪ ಕೆಳಪಾತ್ರೆಯಲ್ಲಿ. ಬೂದಿಚೌಡಿಯ ಎದುರಿನ ಜೀರ್ಣಾವಸ್ಥೆಯ ಕಾಡುದಾರಿ ಮುಟ್ಟಿಸುವುದು ಅಡ್ಡಹೊಳೆಯ ದಂಡೆ. ನಮ್ಮ ತಂಡ ಮೊದಲು ಅಲ್ಲೊಂದು ಪ್ರಶಸ್ತ ಜಾಗ ನಿಷ್ಕರ್ಷಿಸಿಕೊಂಡರು. ಮತ್ತೆ ರಾತ್ರಿ ಕಳೆಯುವಲ್ಲಿ ವನ್ಯಜೀವಿಗಳನ್ನು ದೂರವಿಡಲು ಮತ್ತು ಚಳಿ ನಿಭಾಯಿಸಲು ಶಿಬಿರಾಗ್ನಿ ಅವಶ್ಯ. ಅಡುಗೆಗೆ ಕಾಡುಕಲ್ಲು ಹೂಡಿ ಒಲೆಮಾಡುವುದು ಅನಿವಾರ್ಯ. (ಎಷ್ಟು ಪುಟ್ಟದೆಂದರೂ ಐದೋ ಮೂರೋ ಕಿಲೋ ತೂಕದ ಗ್ಯಾಸ್ ಅಂಡೆ ನಮಗೆ ಹೆಚ್ಚಿನ ಭಾರವೆಂದೇ ನಾವು ಒಪ್ಪಿಕೊಂಡಿರಲಿಲ್ಲ) ಅದಕ್ಕೆಲ್ಲ ಆಸುಪಾಸಿನ ಒಣ, ಉದುರು ಸೌದೆಗಳನ್ನು ಅಂದಾಜಿನಲ್ಲಿ ಒಟ್ಟು ಮಾಡಿ, ಮಲಗುವ ಜಾಗದ ಕಲ್ಲು ಮುಳ್ಳು ದೂರಮಾಡಿ, ಹೊಳೆಯಿಂದ ಅಗತ್ಯದ ನೀರೂ ಹಿಡಿದಿಟ್ಟು ಬೀಡುಬಿಟ್ಟರು.

ತಂಡದ ಅಪರಾರ್ಧ ಮಂಗಳೂರು ಬಿಡುವಾಗಲೇ ರಾತ್ರಿ ಒಂಬತ್ತು. ನನ್ನ ಬೈಕಿನಲ್ಲಿ ಸಹವಾರ – ತಮ್ಮಣ್ಣ ಉರುಫ್ ಸುಬ್ರಹ್ಮಣ್ಯ. ಬಾಲಕೃಷ್ಣ ಉರುಫ್ ಬಾಲಣ್ಣನ ಬೈಕಿಗೆ ರೋಹಿತ್ ಸಹವಾರ. ಬಂಟ್ವಾಳದಿಂದ ಸೇರಿಕೊಂಡ ಸುಂದರರಾಯರದು ಒಂಟಿ ಸವಾರಿ. ಉಪ್ಪಿನಂಗಡಿಗೂ ಸ್ವಲ್ಪ ಮೊದಲು ಒಂದು ತೀವ್ರ ಇಳುಕಲಿನಲ್ಲಿ ಎದುರಿದ್ದ ಬರಿಗಣ್ಣ ಬಾಲಣ್ಣ ಏನೋ ಬೊಬ್ಬೆ ಹಾಕಿ ಅಡ್ಡಾದಿಡ್ಡಿ ಚಲಿಸಿದಂತೆ ಕಾಣಿಸಿತು. ತಿರುವು ತೆಗೆದುಕೊಳ್ಳುತ್ತಿದ್ದ ದಾರಿ ಬದಿಯ ವಿದ್ಯುತ್ ಸರಿಗೆ ಆತನಿಗೆ ಒಮ್ಮೆಗೇ ಜೋತುಬಿದ್ದಿರುವುದು ಕಾಣಿಸಿತ್ತಂತೆ. ಆತ ಯಾವ ಮಾಯೆಯಲ್ಲೋ ಅದರ ಸಂಪರ್ಕಕ್ಕೆ ಬಾರದಂತೆ ತೂರಾಡಿ, ಹಾಗೂ ಹೀಗೂ ಸಮತೋಲನ ಗಳಿಸಿ, ಹಿಂದಿನವರನ್ನು ಎಚ್ಚರಿಸಬೇಕೆಂದು ದಾರಿ ಬದಿಯಲ್ಲಿ ನಿಲ್ಲುವುದರೊಳಗೆ ನಾನು, ಕೊನೆಯಲ್ಲಿದ್ದ ಸುಂದರರಾಯರೂ ಬಂದಾಗಿತ್ತು. ಚಾಳೀಸ್ ಕಣ್ಣಿನ ನನಗೆ ಸರಿಗೆ ಕಾಣಿಸಿದ್ದೂ ನನ್ನ ಬೈಕ್ ಅದನ್ನೆಳೆದು ಬೀಳಿಸಿದ್ದೂ ಒಟ್ಟೊಟ್ಟಿಗೇ ಆಗಿತ್ತು. ಯಾವುದೋ ಮರದ ಗೆಲ್ಲು ಬಿದ್ದು ತುಂಡಾಗಿ ನೇಲುತ್ತಿದ್ದ ಆ ಸರಿಗೆಯಲ್ಲಿ ನಮ್ಮ ಅದೃಷ್ಟಕ್ಕೆ ಮೊದಲೇ ವಿದ್ಯುತ್ ಸಂಚಾರ ಇಲ್ಲವಾಗಿತ್ತು. (ಸಿನಿಕರು ಹೇಳಿಯಾರು “ಅದೃಷ್ಟ ಏನ್ ಬಂತು, ಮಣ್ಣು. ನಮ್ಮಲ್ಲಿ ಕರೆಂಟಿದ್ದರೇ ಅದೃಷ್ಟ!”) ಮುಂದುವರಿದಂತೆ ಸುಂದರರಾಯರ ಬೈಕಿನ ಹೆದ್ದೀಪದಲ್ಲೇನೋ ಎಡವಟ್ಟು. ಗಾಢಾಂಧಕಾರದಲ್ಲಿ ಅದನ್ನು ಸರಿಪಡಿಸಲು ಹೆಚ್ಚಿನ ವೇಳೆಗಳೆಯದೆ, ನಮ್ಮೆರಡು ಬೈಕುಗಳ ನಡುವೆ ಅವರೋಡುವಂತೆ ಮುಂದಿನ ಓಟದ ವ್ಯವಸ್ಥೆಯನ್ನೇ ಹೊಂದಿಸಿಕೊಂಡೆವು. ಅಂಥದ್ದರಲ್ಲಿ ಸುಬ್ರಹ್ಮಣ್ಯ ತಲಪಿ ಬೈಕ್‌ಗಳನ್ನು ಡಾ|ಹೆಗಡೆಯವರಲ್ಲಿ ಬಿಡುವಾಗ ಹನ್ನೊಂದೂವರೆ ಗಂಟೆ. ಮತ್ತೆ ನಮ್ಮನ್ನು ಕಾದಿದ್ದ ರಿಕ್ಷಾ ಹಿಡಿದು ಶಿಬಿರ ಸೇರುವಾಗ ಇನ್ನೊಂದೇ ದಿನ ಬಂದು ಅರ್ಧ ಗಂಟೆಯಾಗಿತ್ತು!

ಶಿಬಿರಾಗ್ನಿ ಸೌಮ್ಯವಾಗಿ ಉರಿದಿತ್ತು. ಅಡ್ಡಹೊಳೆಯ ನಿತ್ಯನೂತನ ಧಾರಾವಾಹಿಯಲ್ಲಿ ಎಲ್ಲಿನದೋ ಕುಲುಕು, ಇನ್ನೆಲ್ಲಿನದೋ ಬೀಳು, ಮತ್ತೆಲ್ಲೆಲ್ಲಿನದೋ ಜೀವಜಾಲದ ವಟರು, ಗೊಟಕ್ ನಡೆದೇ ಇತ್ತು. ಕಣಿವೆಗಿಳಿದ ಮಂಜು ಎಲೆಗಳ ಮೇಲೆ ಹನಿಗಟ್ಟಿ, ಜಾರಿ ತಟಕುವ ಅನಿಶ್ಚಿತತೆಗೆ ಜಾಗೃತನಾಗಿ ಸರದಿಯಲ್ಲಿ ಅರವಿಂದರ ಪಹರೆ ನಡೆದಿತ್ತು. ಉಳಿದ ಮೂವರು ಬೆಂಕಿಯತ್ತ ಕಾಲು ಚಾಚಿ ನಿದ್ರೆಯಲ್ಲಿದ್ದರು. ನಮ್ಮಲ್ಲಿದ್ದ ಎರಡು ಪುಟ್ಟ ಗುಡಾರಗಳನ್ನು ಹೆಚ್ಚು ಗದ್ದಲಮಾಡದೆ ಬಳಿಯಲ್ಲೇ ಅರಳಿಸಿ, ಪಹರೆಯ ಸರದಿ ಮತ್ತು ಬೆಳಗಿನ ವ್ಯವಸ್ಥೆಗಳ ಕುರಿತು ಸಣ್ಣ ಮಾತಾಡಿಕೊಂಡು ವಿಶ್ರಮಿಸಿದೆವು. ನಮ್ಮಿಂದ ಸ್ವಲ್ಪ ಕೆಳದಂಡೆಯಲ್ಲಿ, ದಾರಿ ಕೆಲಸ ಮಾಡಲು ಬಂದ ಕೂಲಿಕಾರರ ದಂಡೊಂದು ತಂಗಿತ್ತು. ಅವರಲ್ಲಿ ಕೆಲವರು ನಮ್ಮವರು ಶಿಬಿರ ಹೂಡುವಾಗಲೇ ಬಂದು ಮಾತಾಡಿದ್ದರಂತೆ. ‘ಕ್ರೂರಮೃಗ’ಗಳ ಬಗ್ಗೆ ಅಯಾಚಿತವಾಗಿ ತಮ್ಮದೇ ಅನುಭವವೆಂಬಂತೆ ಜ್ಞಾನಪ್ರಸಾರ ಮಾಡಿದ್ದರು. ಇದರಲ್ಲಿ ಅವರ ಉಪವೃತ್ತಿಯ (ಕಳ್ಳಬೇಟೆ) ಅಡ್ಡಿನಿವಾರಣೆಯ ಜಾಣ್ಮೆ ನಮಗೆ ಅರ್ಥವಾಗದ್ದೇನೂ ಅಲ್ಲ. ಮತ್ತೂ ಅಪರಾತ್ರಿಯಲ್ಲಿ (ನಮ್ಮ ಶಿಬಿರ ಪೂರ್ಣಗೊಂಡ ಮೇಲೆ) ಇನ್ನೊಂದೇ ತಂಡ ಒಂದೆರಡು ಕೋವಿ ಹಿಡಿದುಕೊಂಡು ಬಂದು ನಮ್ಮನ್ನು ವಿಚಾರಿಸಿಕೊಂಡರು. ಅವರು ಬೂದಿಚೌಡಿಗೆ ಕೋಳಿ ಹರಕೆ ಸಲ್ಲಿಸಲು (ದೊಡ್ಡಬೇಟೆಯ ಯಶಸ್ಸಿಗೆ?) ಬಂದವರಂತೆ. ಆ ವಲಯದ ಕುಖ್ಯಾತ ಸಲಗನನ್ನು ಬೆದರಿಸಲಷ್ಟೇ ಅವರು ಕೋವಿ ಹೊತ್ತದ್ದಂತೆ. ಆ ಆನೆ ಬೂದಿ ತಿನ್ನಲು ಬರುವ (ಅಜ್ಜಿ)ಕತೆಯನ್ನು ಪ್ರತ್ಯಕ್ಷದರ್ಶಿಗಳಂತೇ ನಮ್ಮಲ್ಲಿ ಭಯಹುಟ್ಟಿಸಲು ಹೇಳಿ (ವಾಸ್ತವದಲ್ಲಿ ರಂಜಿಸಿ,) ಹೋದರು. ಮರುದಿನ ದಟ್ಟ ಕಾಡಿನೊಳಗೆ ಮುಂದುವರಿಯುವ ನಮ್ಮ ಯೋಜನೆ ತೀರಾ ಅಪಾಯಕಾರಿ ಎಂದು ಎಚ್ಚರಿಸಲು ಅವರು ಮರೆಯಲಿಲ್ಲ!

ಅನಪೇಕ್ಷಿತ ಘಟನೆಗಳೇನೂ ಇಲ್ಲದೆ ರಾತ್ರಿ ಕಳೆಯಿತು. ಪಹರೆಯ ಕೊನೆಯ ಜೋಡಿ ಸಮೀರ ಅರವಿಂದರದು. ಅವರು ಬಟಾಟೆ ಪಲ್ಯಮಾಡಿ, ಚಾ ಕಾಸಿ ಉದಯರಾಗ ಹಾಡಿದರು. ಊರಿಂದಲೆ ತಂದಿದ್ದ ಚಪಾತಿಗಳನ್ನು ಬಿಸಿ ಪಲ್ಯದಲ್ಲಿ ಹದಬರಿಸಿ ಹೊಟ್ಟೆಗಿಳಿಸಿ, ಎಡೆಗಳಿಗೆ ಚಾ ಹೊಯ್ದೆವು. ಏಳೂವರೆಗೆ ಶಿಬಿರ ಸ್ಥಾನ ಹಿಂದಿನ ವನ್ಯ ಸ್ಥಿತಿಯಲ್ಲೇ ಇರುವಷ್ಟು ಶುಚಿಗೊಳಿಸಿ, ಭಾರದ ಚೀಲಗಳನ್ನು ಬೆನ್ನಿಗೇರಿಸಿದೆವು. ಶೂ ಕೈಯಲ್ಲಿ ಹಿಡಿದು, ಸುಮಾರು ಇಪ್ಪತ್ತು ಮೀಟರ್ ಅಗಲದ ಹೊಳೆಗೆ ಇಳಿದೆವು. ಕೆಲವು ವರ್ಷಗಳ ಹಿಂದೆಯೇ ಕೂಪಿನವರು ಇಲ್ಲಿ ಹೊಳೆಪಾತ್ರೆಯನ್ನೂ ಲಾರಿಗಾಗಿ ಹಸನುಗೊಳಿಸಿದ್ದು ನಮ್ಮನುಕೂಲಕ್ಕೆ ಒದಗಿತು. ನೀರೇನೋ ಮೊಣಕಾಲಾಳ ಮತ್ತು ಒಳ್ಳೆಯ ಸೆಳವಿನದ್ದೇ ಆದರೂ ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟು ಸುಲಭವಾಗಿಯೇ ದಾಟಿದೆವು. ಮತ್ತೆ ಅವಸರವಸರವಾಗಿ ಕಾಲೊಣಗಿಸಿಕೊಂಡು ಶೂ ಬಿಗಿದು ಕೂಪು ದಾರಿಯಲ್ಲೇ ಮುಂದುವರಿದೆವು.

ಕೂಪುದಾರಿ ಇಲ್ಲಿ ನಮಗೆ ಎರಡು ಸಾಧ್ಯತೆಯನ್ನು ತೋರಿತು. ನಕ್ಷೆ ಮತ್ತು ಆಮೇಲೆ ನಮಗೆ ತಿಳಿದಂತೆ ಎಡದ ಜಾಡು ಹೊಳೆದಂಡೆಯಲ್ಲೇ ಮುಂದುವರಿದು ಮೇಲೆಲ್ಲೋ ಬಿಸ್ಲೆಘಾಟಿದಾರಿಯನ್ನು ಸೇರುತ್ತದೆ. ಅದರಲ್ಲಿ ಮುಖ್ಯದಾರಿಯಂತೆ ವಾಹನ ಸಂಚಾರವಿಲ್ಲದ್ದರಿಂದ ಕಳ್ಳಬೇಟೆಯವರಿಗೆ ಬಲುಪ್ರಿಯವಂತೆ. ಸಹಜವಾಗಿ ದಾರಿಯ ಪೂರ್ಣ ಹರಹು ತೆರವಿತ್ತು ಮತ್ತು ಒಳ್ಳೇ ಸವೆದಿತ್ತು. ಆದರೆ ನಮ್ಮದು ಬಲಪಕ್ಷ. ಇದು ಹೊಳೆ ದಂಡೆ ಬಿಟ್ಟು ದೂರ ಸರಿಯುತ್ತದೆ. ಸಣ್ಣಪುಟ್ಟ ಪೊದರು ಕವಿದು, ಒಣಕೊಂಬೆ, ಮರ ಬಿದ್ದು ಕೂಪು ದಾರಿಯ ಹರಹು ಅಸ್ಪಷ್ಟವಿದ್ದರೂ ಕಾಲುದಾರಿಯಂತೆ ಸ್ಪಷ್ಟ ಸವಕಲು ಜಾಡಿತ್ತು. ನಾವು ತುಟಿಬಿಗಿಹಿಡಿದು ಅನುಸರಿಸಿದೆವು. ಅಡ್ಡಬಿದ್ದ ಮರ, ನೇತುಬಿದ್ದ ಬೀಳಲು, ಬಾಗಿನಿಂತ ಪೊದರು, ಕೊರೆದುಹೋದ ನೆಲ, ಮಡ್ಡಿನಿಂತ ತಗ್ಗು, ಕಲ್ಲು ಕಸ ನಿಗಿದು ಅಡ್ಡಲಾಗುವ ಸಣ್ಣ ಒಣ ಹಳ್ಳಗಳೆಲ್ಲವೂ ಪ್ರಕೃತಿಯ ವಿಕಾಸಪರವಾದ ಮನವಿಗಳು. ಕತ್ತಿ, ಗುದ್ದಲಿಗಳ ಕ್ರಾಂತಿಯನ್ನು ಅಳಿಸುವ ನಿರಂತರ ಪ್ರಯತ್ನಗಳು. ನಾವು ತುರ್ತುಪರಿಸ್ಥಿತಿಗೆಂದು ಒಂದೆರಡು ಕತ್ತಿ ಇಟ್ಟುಕೊಂಡಿದ್ದರೂ ಕುರುಚಲು ಹಸಿರನ್ನು ಕಡಿಯುವ ಗೋಜಿಗೆ ಹೋಗದೆ (ವಿಶೇಷ ಸದ್ದಾಗದಂತೆ) ಓಸರಿಸಿ ಸಾಗಿದೆವು. ಅಡ್ಡಬಿದ್ದ ಮರ, ಒಣಕಡ್ಡಿ, ತರಗೆಲೆಗಳನ್ನು ಆದಷ್ಟು ನಿಶ್ಶಬ್ದದಲ್ಲೇ ನಿವಾರಿಸಿದರೂ ಚುರುಕು ಹೆಜ್ಜೆಗಳನ್ನು ಮರೆಯಲಿಲ್ಲ. ಪಕ್ಷಿಲೋಕದ ಆಕಾಶವಾಣಿಯಲ್ಲಿ ಎಲ್ಲವೂ ಮಂಗಳ ಗೀತೆಗಳು, ನಾವೋ ಶ್ರದ್ಧಾವಂತ ಶೋತೃಗಳು. ಪ್ರಾಣಿಪ್ರಪಂಚದ ನಾಟಕಗಳೇನಾದರೂ ಇದ್ದರೆ ಪ್ರೇಕ್ಷಕರೂ ಆಗುವ ಆಸೆ ನಮ್ಮದು. ನಿರೀಕ್ಷೆ ಹುಸಿಯಾಗದಂತೆ ಅರ್ಧ ಗಂಟೆಯೊಳಗೇ ದೊಡ್ಡ ಕರಡಿಯೊಂದನ್ನು ಬಹಳ ಹತ್ತಿರದಿಂದಲೇ ನೋಡಿದೆವು. ಕಪ್ಪು ಕಂಬಳಿಕುಪ್ಪೆ ಹೊತ್ತ ಗೂನುಬೆನ್ನಿನವ ಉರುಳುರುಳಿ ಹೋದಂತೆ ಅದು ಓಡಿ ಮರೆಯಾಯ್ತು.

ಈಗ ನಮ್ಮ ಜಾಡಿನ ಬಲಕ್ಕೆ ಸಮರೇಖೆಯಲ್ಲಿ ಕುಮಾರಧಾರ ಹೊಳೆ ಪ್ರತ್ಯಕ್ಷವಾಯ್ತು. ವಿರಳ ಮರ, ಪೊದರುಗಳೆಡೆಯಿಂದ ನಲ್ವತ್ತೈವತ್ತಡಿ ದೂರದಲ್ಲಿ ಅಸ್ಪಷ್ಟ ನೋಟ. ಬರಬರುತ್ತಾ ಜಾಡು ಹೊಳೆಗಿಳಿಯಿತು. ಅದು ಕುಮಾರಧಾರೆಯ ಬಲದಂಡೆ. ಭಾರೀ ಬಂಡೆಗುಂಡುಗಳ ರಾಶಿಯೇ ಹರಿದುಬಂದಂಥ ನೋಟ. (ಹಿಂದಿನ ಕಥನದಲ್ಲಿ ನಾವು ‘ಜಲಪಾತದ ಬೆಂಬತ್ತಿ’ ಇಳಿದಾಗಿನದೇ ಒಂದು ಭಾಗ) ಮಳೆಗಾಲದ ಪ್ರವಾಹ ಅವನ್ನೆಲ್ಲ ಮುಳುಗಿಸಿ ವಿಜೃಂಭಿಸುವ ಪಾತ್ರೆ ಭಾರಿಯೇ ಕಾಣುತ್ತಿತ್ತು. ಸದ್ಯ ಹೊಳೆ ಅಸಂಖ್ಯ ಧಾರೆಗಳಲ್ಲಿ ಬಂಡೆಗಳ ಎಡೆಯಲ್ಲಿ ಹಂಚಿ ಹರಿದರೂ ನಮ್ಮ ಜಾಡು ಇಳಿದ ಜಾಗದಲ್ಲಿ ಸಾಕಷ್ಟು ಆಳವೇ ಇತ್ತು. ಮತ್ತೆ ನಮ್ಮದೋ ಹೆಚ್ಚುಕಡಿಮೆ ಎರಡು ದಿನದ, ಪ್ರವಾಹದ ಎದುರುಮುಖೀ ನಡಿಗೆ. ಆಗಲೇ ಬಂಡೆಯಿಂದ ಬಂಡೆಗೆ ಜಾಡು ಮಾಡುತ್ತಾ ನಿಧಾನಿಸುವುದು ನಮಗೆ ಬೇಕಿರಲಿಲ್ಲ. ಹಾಗಾಗಿ ಸ್ವಲ್ಪ ಪೊದರು ನುಗ್ಗಿ, ದರೆ ಏರಿ ಇನ್ನೊಂದೇ ಮಾಸಿದ ಜಾಡು ಕಂಡುಕೊಂಡೆವು. ಕೊಳ್ಳದ ಹೊಳೆಯ ಕಲರವ ತಪ್ಪದಷ್ಟುಸಮೀಪ, ಜಾರುನೆಲ ಮತ್ತು ಅಗಮ್ಯ ಪೊದರುಗಳ ಕೋಟೆಯಲ್ಲಿ ಬೀಳದಷ್ಟು ದೂರ ಸುಮಾರು ಸಾಗಿದೆವು. ಅಲ್ಲಿ ವನೋತ್ಪತ್ತಿ ಸಂಗ್ರಹಿಸುವವರ ಹಳೆಯ, ಮುರುಕಲು ಜೋಪಡಿ ಸಿಕ್ಕಿತು. ಅದರಿಂದ ಸ್ವಲ್ಪ ಮುಂದೆ ಮೊದಲ ವಿಶ್ರಾಂತಿ; ಪಾನಕ ವಿರಾಮ.

ನಮ್ಮ ಮೊದಲ ಸಾಹಸಯಾತ್ರೆಗಳಲ್ಲಿ ಗಂಜಿ, ಉಪ್ಪಿಟ್ಟು, ಸಾರೋ ಸಾಂಬಾರೋ ಬೇಯಿಸುವುದು, ಹಸಿ ತರಕಾರಿ ಖಿಚಡಿ ಮಾಡುವುದು ಎಂದಿತ್ಯಾದಿ ಊಟಪಟ್ಟಿ ಮಾಡಿ ನೂರೊಂದು ಜಿನಸು, ನಾಲ್ಕೈದು ಪಾತ್ರೆ ಪರಡಿ ಹೊತ್ತು ಕಷ್ಟಪಡುತ್ತಿದ್ದೆವು. ಪ್ರಯೋಗಶೀಲತೆ ಸಮೀರನಿಗೆ ಅಪ್ಪ – ವಿಠಲ ರಾಯರಿಂದ ಧಾರಾಳ ಮೈಗೂಡಿತ್ತು. ಹಾಗಾಗಿ ಈ ಸಲದ ಊಟಪಟ್ಟಿಯ ತಯಾರಿ ಮತ್ತು ನಿರ್ವಹಣೆ ಆತನದ್ದೇ. ಸಮೀರ ಸಾಕಷ್ಟು ಚರ್ಚಿಸಿ, ದಿನ ಮತ್ತು ಜನ ಅಂದಾಜು ಮಾಡಿಯೇ ಶನಿವಾರ ಬೆಳಿಗ್ಗೆ ಬೇಕುಬೇಕಾದ ಕಚ್ಚಾ ಸಾಮಗ್ರಿಗಳನ್ನು ಒಟ್ಟು ಮಾಡಿದ. ಅವನ್ನೆಲ್ಲಾ ಬೇರೆ ಬೇರೆ ಹದಗಳಲ್ಲಿ ಮಿಶ್ರ ಮಾಡಿ ಎಲ್ಲರಿಗೂ ಮೂರು ಮೂರು ಪೊಟ್ಟಣ ಕೊಟ್ಟಿದ್ದ. ಅದರಲ್ಲಿ ಒಂದು ಅಡುಗೆಗೇ ಇದ್ದ ಸುಲಭ ಮಿಶ್ರಣ. ಇದು ಹೊರೆಯ ಹಂಚಿಕೆ ಮಾತ್ರ. ದೊಡ್ಡ ವಿರಾಮದಲ್ಲಿ ಒಲೆ ಹೂಡಿ, ಬೇಯಿಸಿ ತಿನ್ನುವಂತದ್ದು. ಇನ್ನೆರಡು ಎಲ್ಲರ ಸಾರ್ವಕಾಲಿಕ ಹಸಿವು, ಬಾಯಾರಿಕೆಗಳಿಗೆ ಸಿದ್ಧಪಾಕ. ಪ್ರೋಟೀನಿಗಾಗಿ ಹಲವು ಧಾನ್ಯಗಳ ಪುಡಿ, ಕೆಲವು ಬೀಜಗಳು ಇಡಿ, ಕೊಬ್ಬಿಗಾಗಿ ಹಾಲಿನ ಹುಡಿ, ನಾರಿಗಾಗಿ ಖರ್ಜೂರದ ಸೀಳು, ಗಾತ್ರಕ್ಕಾಗಿ ಅವಲಕ್ಕಿ, ರುಚಿಗಾಗಿ ಒಣ ದ್ರಾಕ್ಷಿ, ಶೀಘ್ರ ಚೈತನ್ಯಕ್ಕಾಗಿ ಗ್ಲುಕೋಸ್ ಪುಡಿ, ಇತ್ಯಾದಿಗಳ ಅದ್ಭುತ ಮಿಶ್ರಣ (ಅನಂತರದ ದಿನಗಳಲ್ಲಿ ಗನ್ ಪೌಡರ್ ಎಂದೇ ಖ್ಯಾತವಾಯ್ತು!). ಇದು ಹುಡಿಯಾಗಿಯೂ ಗಂಟಲಲ್ಲಿಳಿಯದಿದ್ದರೆ ತುಸುವೇ ನೀರು ಬೆರೆಸಿಕೊಂಡು ‘ಹಸಿ ಉಪ್ಪಿಟ್ಟಿನಂತೆಯೂ’ ಊಟ ತಿಂಡಿಗೆ ಬದಲಿಯಂತೆ. ಇನ್ನೊಂದು ಪಾನಕದ ಸಾಂದ್ರ ಪಾಕ. ಸ್ವಲ್ಪೇ ಪುಡಿ ಲೋಟ ನೀರಿಗೆ ಹಾಕಿ, ಹೆಚ್ಚಿನ ರುಚಿ ಸಮತೋಲನಕ್ಕೆ ಸಕ್ಕರೆಯೋ ನಿಂಬೆ ಹುಳಿಯೋ ಹಿಂಡಿಕೊಂಡರೆ ಪಾನಕ. ತತ್ವ ಸರಿ, ಸಮೀರನ ಶ್ರದ್ಧೆ, ಪ್ರಾಮಾಣಿಕತೆ ಪ್ರಶ್ನಾತೀತ. ಆದರೆ ‘ಆಚಾರವಿಲ್ಲದ ನಾಲಗೆ’ಗೆ ಏನು ಮಾಡ್ತೀರಿ! ಪ್ರಯೋಗದ ಯಶಸ್ಸು ಮಾತ್ರ ಸಂಶಯಾಸ್ಪದ ಎನ್ನುವಂತೆ ಬಹುತೇಕ ಪಾನಕ ಲೋಟಗಳು ಗುಟ್ಟಾಗಿ ಹೊಳೆಗೇ ಖಾಲಿಯಾದವು!

******

ವನವಿಹಾರ, ಚಾರಣ ನಮ್ಮ ನಾಗರಿಕ ಒತ್ತಡಗಳಿಂದ ಬಿಡುಗಡೆ ಹೌದು, ತೆವಲುಗಳಿಗೆ ಖಂಡಿತಾ ಅಲ್ಲ. ಪರಿಸರ ಪ್ರೇಮ, ಪ್ರಕೃತಿಯ ಮಡಿಲಲ್ಲಿ, ವನ್ಯದ ಉಡಿಯಲ್ಲಿ ಇತ್ಯಾದಿ ಸುಂದರ ಪದಗಳನ್ನು ಬಳಸುವವರಲ್ಲಿ ಬಹುತೇಕ ಮಂದಿಯ ಕ್ರಿಯೆಗಳು ತದ್ವಿರುದ್ಧ ದಿಕ್ಕಿನಲ್ಲಿರುತ್ತವೆ. ಅಂದು – ಸುಮಾರು ಎರಡು ದಶಕಗಳ ಹಿಂದೆ, ಸಮೀರನ ಸೋಲು ತೀರಾ ಸಣ್ಣ ಮತ್ತು ವೈಯಕ್ತಿಕ ಮಟ್ಟದ ಉದಾಹರಣೆ ಮಾತ್ರ. ಕುಮಾರಧಾರಾ ನಡಿಗೆಯಲ್ಲಿ ‘ಅರ್ರಂಗೇಟ್ರಂ’ ಕೊಟ್ಟಿದ್ದ ರೋಹಿತ್ (ಇಂದು ಕಟ್ಟಾ ವನ್ಯ ಸಂರಕ್ಷಕ) ಮೊನ್ನೆಯಷ್ಟೇ ಕೆಲವು ಸಮಾನಾಸಕ್ತ ಗೆಳೆಯರನ್ನು ಕೂಡಿಕೊಂಡು ಬಲ್ಲಾಳರಾಯನ ದುರ್ಗಕ್ಕೆ ಹೋಗಿದ್ದ. ಇವರ ನಿರೀಕ್ಷೆ ಮೀರಿ ಅಲ್ಲಿ ಚಾರಣಿಗರ ಜಾತ್ರೆಯೇ ನಡೆದಿತ್ತು. ಅದರಲ್ಲೂ ಶಿಸ್ತಿಗೆ ಪರ್ಯಾಯ ನಾಮವಾಗಬೇಕಿದ್ದ ನಮ್ಮದೇ ಊರಿಗೆ ಸೇರಿದ ಒಂದು (ಕಾಲೇಜಿನ) ಎನ್.ಸಿ.ಸಿ ತಂಡ (ಅಧಿಕಾರಿಗಳು ಸೇರಿ ಸುಮಾರು ಐವತ್ತು ಮಂದಿ) ಕೇವಲ ಒಂದು ರಾತ್ರಿಯ ವಾಸದಲ್ಲಿ ಅರೆಬರೆ ತಿಂದು, ಕುಡಿದು, ಬಳಸಿ ಎಸೆದ ಪ್ರಕೃತಿಗೆ ಅಸಹ್ಯವಾಗುವ ಕಸ ಸಾರ್ವಜನಿಕ ಮಟ್ಟದ ದೂಷಣೆ; ಅಕ್ಷರಶಃ ಪರಿಸರ ಮಾಲಿನ್ಯ. ಸಂಖ್ಯಾಬಲದಲ್ಲಿ ಸಣ್ಣಕ್ಕಿದ್ದ ಇವರು, ಹಿಂದಿನ ರಾತ್ರಿಯೇ ಆ ತಂಡ ಪಟಾಕಿ ಸಿಡಿಸಿ, ಬೊಬ್ಬೆ ಹಾಕುವುದನ್ನು ಪ್ರಶ್ನಿಸಿಯೇ ಸಾಕಷ್ಟು ಅಪಾಯವನ್ನು ಎಳೆದುಕೊಂಡಿದ್ದರು. ಬೆಳಿಗ್ಗೆ ಬೇಗ ಶಿಬಿರ ಮುಚ್ಚಿದ ಆ ತಂಡ ಕಣ್ಮರೆಯಾಗುವ ಮೊದಲೇ ಇವರೆಲ್ಲಾದರೂ ಈ ಮಾಲಿನ್ಯವನ್ನೂ ಗುರುತಿಸಿದ್ದರೆ ನಿಜಕ್ಕೂ ಇವರಿಗೆ ಜಖಂ ಆಗುತ್ತಿತ್ತು! ಅದನ್ನು ಹಾಗೇ ಬಿಟ್ಟು ಬರಲು ಮನಸ್ಸಾಗದೇ ಒಟ್ಟು ಮಾಡಿದಾಗ, ಇವರ ತಂಡಕ್ಕೆ ಪೂರಾ ಹೊರಲಾಗದಷ್ಟು ಭಾರೀ ಇತ್ತಂತೆ. ಆದರೂ ಛಲ ಬಿಡದೆ ಇವರ ತಂಡ ಅದನ್ನು ಹೊತ್ತು ತಂದು, ಹೆಚ್ಚಿನ ಬಿಡುವು ಮಾಡಿಕೊಂಡು, ಕಾಲೇಜಿನ ಪ್ರಾಂಶುಪಾಲರಿಗೆ ಒಪ್ಪಿಸಿದ್ದಾರೆ. ಅದರ ಫಲಿತಾಂಶದೊಡನೆ, ಕುಮಾರಧಾರೆಯ ವೀರಪ್ಪನ್ನ್ ಕಥನದ ಮುಂದಿನ ಭಾಗ ಮುಂದಿನ ವಾರಕ್ಕೆ. . .

(ಮುಂದುವರಿಯಲಿದೆ)