ಕೊಡಂಜೆ ಕಲ್ಲಿನ ಕಥಾಜಾಲ – ಭಾಗ ೧
ನನ್ನ ಈ ವಲಯದ ಬೆಟ್ಟಗಾಡು ಸುತ್ತಾಟಕ್ಕೆ ಪ್ರಾಯ ಮೂವತ್ತೈದು ಕಳೆಯಿತು. ನನ್ನಜ್ಜ (ಅಪ್ಪನಪ್ಪ) ಪ್ರಾಯ ಎಂಬತ್ತರ ಹತ್ತಿರವಿದ್ದಾಗಲೂ ಮಡಿಕೇರಿಗೆ ಹೊರಟರೂಂದ್ರೆ ಕೋಟೂ ಬೂಟೂ ಹಾಕಿ ತಲೆಗೆ ಹ್ಯಾಟು ಇಟ್ಟು, ಕೈಯಲ್ಲೊಂದು (ಕೋಲಲ್ಲ) ಭಾರದ ಹ್ಯಾಂಡ್ ಬ್ಯಾಗ್ ಹಿಡಿದುತೋಟದ ಮನೆಯಿಂದ (ಮೋದೂರಿನ ಶುಭೋದಯ ಕೃಷಿಕ್ಷೇತ್ರ), ಎಂದರೆ ಅಕ್ಷರಶಃ ಪಾತಾಳದಿಂದ ಒಮ್ಮೆಯೂ ಉಸಿರಿಗಾಗಿ ನಿಲ್ಲದೆ ದಾರಿಗೆ ನಡೆದು ಬರುತ್ತಿದ್ದರು! ನನ್ನಪ್ಪ ಎಪ್ಪತ್ತೈದರ ಪ್ರಾಯದವರೆಗೂ ಮೈಸೂರಿನ ಅಳತೆ ಮಾಡಲು ಸೈಕಲ್ಲೇ ಬಳಸುತ್ತಿದ್ದರು. ನಾನು ಮಾಡುವುದೇನೇ ಇರಲಿಕೊಚ್ಚಿಕೊಳ್ಳುವುದು ಕೇಳಿದ ಈ ಕಾಲದ ಹಲವು ಚಾರಣ ಗೆಳೆಯರು ಶುದ್ಧ ಶಿಲಾರೋಹಣದ ದರ್ಶನ ಮತ್ತು ಅನುಭವ ತನಗೆ ಬೇಕಿತ್ತು ಎಂದು ಬಯಸುತ್ತಲೇ ಇದ್ದರು. ಆಗೆಲ್ಲಾ ನಾನು, ಒಂದಿನ ಕೊಡಂಜೆಕಲ್ಲಿಗೇ ಹೋಗೋಣ ಬನ್ನಿ ಎನ್ನುವುದೂ ನಡೆದೇ ಇತ್ತು. ಧರ್ಮಕರ್ಮ ಸಂಯೋಗದಿಂದ ಈಚೆಗೆ ನಾವೊಂಬತ್ತು ಮಂದಿ ಬೆಳಿಗ್ಗೆಯೇ ಕೊಡಂಜೆಗೆ ಸಕಲ ಸಜ್ಜಿಕೆಗಳೊಡನೆ ಲಗ್ಗೆಯಿಟ್ಟೆವು. ಕಾರೇರಿ ಮೂಡಬಿದ್ರೆ. ಹೊಟೆಲಿನಲ್ಲಿ ತಿಂಡಿ ತಿಂದದ್ದಲ್ಲದೆ ಮಧ್ಯಾಹ್ನಕ್ಕೆ ಬುತ್ತಿಯನ್ನೂ ಕಟ್ಟಿಸಿಕೊಂಡೆವು. ಅನಂತರ ಶಿರ್ತಾಡಿ ದಾರಿಯಲ್ಲಿ ಸುಮಾರು ನಾಲ್ಕೇ ಕಿಮೀ ರ್ರುಮ್ಮ. ಎಲ್ಲ ಕಾಲಕ್ಕೆ ಇದು ಹೀಗಿರಲಿಲ್ಲ. ಮೂಡಬಿದ್ರೆಯಿಂದ ಬೇರೇ ಬಸ್ಸು ಹಿಡಿದೋ ಬೈಕ್ ಸ್ಕೂಟರ್ ಏರಿಯೋ ಬಂದದ್ದೂ ಇತ್ತು. ಹಿಂದೆ ಹೋಗುವಾಗ ಏನೂ ಸಿಗದೆ ಮೂಡಬಿದ್ರೆಯವರೆಗೆ ನಡೆದು ಹೋದದ್ದೂ ಇತ್ತು.
ಭಾರೀ ‘ಕಲ್ಲನ್ನೇ ಉದ್ದೇಶಿಸಿ ಒಟ್ಟಾರೆ ಪೊದರು ತುಳಿದು ನಡೆದಲ್ಲಿಂದ ಡಾಮರು ದಾರಿಯ ಎಡಬದಿಯ ಸಣ್ಣ ಮರನೆರಳಿನ ಪುಟ್ಟ ಕಾಡುಗಲ್ಲು ಆರಾಧನೀಯ ದೈವವಾಗಿ ಕೈಮರವಾದ್ದೂ ನನ್ನ ಬಗೆಗಣ್ಣಲ್ಲಿದೆ. ಹೆಚ್ಚಿನಂಶ ಭಕ್ತಾದಿಗಳ ಸೇವಾ ಕೈಂಕರ್ಯದಲ್ಲಿ ಸವಕಲು ಜಾಡು, ಕಾಲುದಾರಿಯಾಗಿ ಮತ್ತೆ ನೂರಿನ್ನೂರು ಅಡಿಯ ಮಣ್ಣ ದಾರಿಯಾಗುವವರೆಗೂ ಶಿಲಾರೋಹಣಕ್ಕೆ ಹೋಗುತ್ತಿದ್ದ ನಮ್ಮ ವಾಹನಗಳಿಗೆಲ್ಲ ಡಾಮರು ದಾರಿಯಂಚಿನ ದೈವದ ಕಟ್ಟೆಯೇ ನೆರಳು, ರಕ್ಷೆ! ಈಗ ಹಾಗಿಲ್ಲ. ದಾರಿಯಂಚಿನ ದೈವಕ್ಕೆ ಭವ್ಯ ಮಂಟಪವಿದೆ. ‘ಕೊಣಜೆ ಕಲ್ಲು ಗುಹಾಶ್ರಮಕ್ಕೆ ವರ್ಣರಂಜಿತ ಸ್ವಾಗತ ಕಲ್ಲು ಕರೆಯುತ್ತದೆ. ಪರಿಷ್ಕೃತ ಮಣ್ಣ ದಾರಿ ಸ್ವಲ್ಪ ದೂರ ಒಯ್ದು ಮತ್ತೆ ಎಡ ತಿರುವಿನಲ್ಲಿ ಅನತಿದೂರದ ಕಗ್ಗಲ್ಲ ಕೋರೆಗೆ ಹೋಗುವುದನ್ನು ಕಾಣುತ್ತೇವೆ. ಬಲಗವಲು ಮತ್ತೂ ನೂರಿನ್ನೂರು ಮೀಟರ್‌ಗೆ ಪ್ರಗತಿ ರೇಖೆಯೇ ಆಗಿದೆ. ಹರಕು ಕಲ್ಲು, ಮುಳ್ಳಬಲ್ಲೆಗಳ ಜಾಡಿನಂಚುಗಳು ಹೋಗಿ, ಪೌಳಿ ಸಹಿತ ಪುಟ್ಟ ಆಧುನಿಕ ಮನೆಗಳು, ಕೈತೋಟದ ಕೃಷಿಯೊಡನೆ ನೆಲೆಸಿವೆ. ಪಂಚಾಯತಿನ ನೀರು ಸರಬರಾಜು ವ್ಯವಸ್ಥೆ ತನ್ನೆಲ್ಲಾ ಕೊರತೆಗಳೊಡನೆ ಜ್ಯಾರಿಗೆ ಬಂದಿರುವುದೂ ಕಾಣುತ್ತೇವೆ. ಬೇಸಗೆಯ ದಿನಗಳಿನ್ನೂ ತೊಡಗುವ ಮೊದಲೇ ಎರಡು ದಿನಕ್ಕೊಮ್ಮೆ ಅದೂ ಕೆಲವು ಗಂಟೆ ಮಾತ್ರ ಇಲ್ಲಿ ಗಂಗಾವತರಣವಂತೆ. ಆದರೂ ಗುಟ್ಕಾ ಚೀಟಿ ನೇಲಿಸಿಕೊಂಡು ಅಲ್ಲಿರುವ ಅಂಗಡಿಯೊಂದರ ಬೋರ್ಡು ‘ಇಲ್ಲಿ ತಂಪು ಪಾನೀಯಗಳು ಸಿಗುತ್ತವೆ, ನಿಜ ಅಭಿವೃದ್ಧಿಯ ಸೂಚಿಯೇ ಸರಿ!
ಮಾರ್ಗದ ಕೊನೆಯವರೆಗೂ ನಮ್ಮ ಕಾರನ್ನು ಒಯ್ದು ನಿಲ್ಲಿಸಿ ಬಹುಕಾಲದ ಮೇಲೆ ಸಿಕ್ಕ ಆತ್ಮೀಯರನ್ನು ಕಣ್ಣು ತುಂಬಿಕೊಳ್ಳುವಂತೆ ಮಹಾಬಂಡೆ ಜೋಡಿಯನ್ನು ನೋಡುತ್ತಿದ್ದರೂ ತಲೆಯೊಳಗೆ ನನ್ನ ಕೊಡಂಜೆಯ ಪ್ರಥಮ ಪರಿಚಯದ ಚಿತ್ರಗಳ ಸುರುಳಿ ಬಿಚ್ಚಿಕೊಳ್ಳುತ್ತಿತ್ತು. ಐತಿಹಾಸಿಕ ಕಾಲದಲ್ಲಿ ಕಡಲಯಾನಿಗಳು ಈ ವಲಯದ ಭೂನಿಶಾನೆಯಲ್ಲಿ ಸ್ಪಷ್ಟವಾಗಿ ಹೆಸರಿಸಿದ ‘ಕತ್ತೆಕಿವಿ (Ass’s Ears) ಕೊಡಂಜೆ ಕಲ್ಲು. ೧೯೭೭ರ ಸುಮಾರಿಗೆ ಪುತ್ತೂರಿನ ವಕೀಲರಾದ ಬಂದಾರ್ ಶ್ರೀಪತಿರಾಯರು ಇಂಥಾ ಸೂಕ್ಷ್ಮಗಳೊಂದಿಗೆ ಎಲ್ಲಾ ವಿವರಗಳನ್ನು ಹೇಳಿಮೊದಲಬಾರಿಗೆ ಬೋಳು ಬಂಡೆಜೋಡಿಯನ್ನು ನನ್ನ ಗಮಕ್ಕೆ ತಂದರು. ಅದೊಂದು ಆದಿತ್ಯವಾರ ಇದ್ದೊಂದು ನಲ್ವತ್ತೈವತ್ತು ಅಡಿ ಉದ್ದದ ಹತ್ತಿ ಹಗ್ಗ ಹಿಡಿದುಕೊಂಡು ಮಾವಂದಿರ ಮಕ್ಕಳಾದ ಚಂದ್ರ (ಎ.ಪಿ. ಚಂದ್ರಶೇಖರ) ಮತ್ತು ತಮ್ಮಣ್ಣರನ್ನು (ಎ.ಪಿ ಸುಬ್ರಹ್ಮಣ್ಯ) ಒತ್ತಾಯಪೂರ್ವಕವಾಗಿ ಹೊರಡಿಸಿದ್ದೆ. ಜೊತೆಗೆ ಗೆಳೆಯರಾದ ಸಮೀರನೋ ಶ್ರೀಧರಐತಾಳರೋ ಕೃಷ್ಣ ಭಟ್ಟರೋ ಬಂದ ನೆನಪು. ಅಂದೂ ಇದೇ ದಕ್ಷಿಣೋತ್ತರವಾಗಿ ಹಬ್ಬಿದಂತೆ ಕಾಣುವ, ಒಟ್ಟಾರೆ ನೂರಿನ್ನೂರೇ ಅಡಿ ಎತ್ತರವಿರಬಹುದಾದ ಬಂಡೆ ದಿಬ್ಬ ನಮ್ಮನ್ನು ಎದುರುಗೊಂಡಿತ್ತು. ಅದರ ಉತ್ತರ ಕೊನೆಯನ್ನು ನಿರ್ಧರಿಸುವಂತೆ ಒಂದು ಮಹಾ ಕಲ್ಲ ಶಿಖರ ಮತ್ತದರಿಂದಲೂ ಸ್ವಲ್ಪೇ ಅಂತರದಲ್ಲಿ ಬಿಟ್ಟೂ ಬಿಡದಂತೆ ನಿಂತ ಇನ್ನೊಂದು ಬಂಡೆಮಂಡೆ ಕೊಡಂಜೆಯ ಪ್ರಧಾನ ಆಕರ್ಷಣೆ. ನಾವಿಕರು ಕಂಡ ಕತ್ತೆಗಿವಿಗಳೇ ಇವು. ನಾನಂತೂ ಅನುಕೂಲಕ್ಕೆ ಮೊದಲ ಕೋಡುಗಲ್ಲನ್ನು ‘ನಿಮಿರಿದ ಕಿವಿ ಎಂದೂ ಆಚಿನದ್ದು, ಸುಮಾರು ಐವತ್ತು ಅರವತ್ತಡಿ ತಗ್ಗಿನದ್ದನ್ನು ‘ಮೊಂಡುಗಿವಿ ಎಂದೇ ಗುರುತಿಸಿಕೊಂಡಿದ್ದೆ. ನಿಮಿರುಗಿವಿ ಸಮುದ್ರ ಮಟ್ಟದಿಂದ ೧೧೩೫ ಅಡಿ ಎತ್ತರ ಮತ್ತು ಡಾಮರು ದಾರಿಯ ಔನ್ನತ್ಯ ೨೬೮ ಅಡಿ ಎಂದು ಭೂಪಟ ಹೇಳುತ್ತದೆ. ದಿಬ್ಬ ಸಾಲುಪಾದಮೂಲದಲ್ಲೇ ರಾಶಿಬಿದ್ದ ಪುಡಿಗಲ್ಲು, ಮಣ್ಣುಆವರಿಸಿದ ಪೊದರುಮಹಾಮರಗಳನ್ನು ಇತ್ಯಾದಿ ಖಾತೆಗೆ ಬರೆದರೂ ಸುಮಾರು ಏಳ್ನೂರಡಿ ನೇರ ಏರಲೇಬೇಕಾದ ಸವಾಲು ಈ ನಿಮಿರುಗಿವಿ!
ದಿಬ್ಬಸಾಲಿನ ನೆರಳಿನಲ್ಲೇ ಗುಹಾಶ್ರಮದ ಭಕ್ತಾದಿಗಳು ಶ್ರಮದಾನದಲ್ಲಿ ಪುಡಿಗಲ್ಲುಗಳನ್ನು ನಿಗಿದು ಮಾಡಿದ ಕಾಲುದಾರಿಯೊಂದು ಸಾಗುತ್ತದೆ. ಇದು ದಿಬ್ಬಸಾಲು ನಿಮಿರುಗಿವಿಯ ಪಾದ ಸಮೀಪಿಸುವಲ್ಲಿ ಬಂಡೆಮೈಗೆ ಮಣ್ಣು ಪೊದರುಗಳ ಹೊದಿಕೆ ಒದಗಿದಲ್ಲಿ ಹಿಮ್ಮುರಿ ತಿರುವು ತೆಗೆದು ಕಚ್ಚಾ ಮೆಟ್ಟಿಲುಗಳ ಸಾಲಿನಲ್ಲಿ ಮೇಲೇರುತ್ತದೆ. ಮತ್ತೆ ಪೂರ್ವ ತಪ್ಪಲಿನ ಗುಹಾಶ್ರಮಕ್ಕೆ ಮುಗಿಯುತ್ತದೆ. ನನಗೋ ದಿಬ್ಬಸಾಲಿನದ್ದೇ ಪ್ರಥಮ ಆಕರ್ಷಣೆ. ಕರಿಕರಿಯಾಗಿ, ಚಳಿಮಳೆಬಿಸಿಲುಗಳ ಕೊರೆತದ ಲಕ್ಷಣಗಳನ್ನು ಮೈತುಂಬಾ ಹೊತ್ತು ಶಿಲಾರೋಹಣದ ಮೊದಲ ಪಾಠಗಳಿಗೆ ಹೇಳಿ ಮಾಡಿದಂತಿತ್ತು. ಅಂದು ಹಳ್ಳಿಗತನಕ್ಕೆ ಸಹಜ ನಡಿಗೆಯಲ್ಲಿ ಚಂದ್ರ ಏರಿದ್ದರೆ ಕಿರಿತನ ಮತ್ತು ಪೇಟಿಗತನದಿಂದಲೂ ತಮ್ಮಣ್ಣ ತಡವರಿಸಿದ್ದ. ಈ ಸಲದ ತಂಡವೇನೋ ಹೆಚ್ಚುಕಡಿಮೆ ಪೂರ್ಣ ಪೇಟೆಯದೇ ಆದರೂ ಕೇವಲ ಮಗುತನದಲ್ಲಿ ಅಭಿನವನನ್ನು (ರೋಹಿತ್ ಪುತ್ರ, ನಾಲ್ಕೇ ವರ್ಷ ಪ್ರಾಯದ ಶಿಶುವಿಹಾರಿ) ಲೆಕ್ಕದಿಂದ ಹೊರಗೆ ಬಿಟ್ಟು ಗಮನಿಸಿದರೆ ಏಕೈಕ ಅಳುಕಿದವ ಮೆಲ್ರಾಯ್. ತಮ್ಮಣ್ಣನಿಗಾದರೋ (ಸೋದರಮಾವನ ಮಗ) ಸಲಿಗೆಯಲ್ಲಿ (ಮತ್ತು ನನ್ನ ಯೌವನದ ಗರ್ವದಲ್ಲೂ ಇರಬಹುದು) ನಾನು ಛೇಡಿಸಿ, ಹೆದರಿಸಿ ಹತ್ತಿಸುವುದು ಸಾಧ್ಯವಾಯ್ತೂಂತ (ಸಂದ ಮೂವತ್ತಕ್ಕೂ ಮಿಕ್ಕು ವರ್ಷಕ್ಕೆ ಗೌರವ ಕೊಟ್ಟು) ಮೆಲ್ರಾಯ್ ಮೇಲೆ ಪ್ರಯೋಗಮಾಡಲಿಲ್ಲ. ಸಪುರ ಚಡಿಯನ್ನು ಬೆರಳುಗಳ ಒಗ್ಗೂಡಿಕೆಯಲ್ಲಿ ಉಗುರಿನಿಂದಲೇ ಜಿಗುಟಿ ಹಿಡಿದು ಏರಲು ಸೂಚಿಸಿದೆ; ಪಂಜಾ ಬಳಸಿ ಮರ ಹತ್ತುವ ಚಿರತೆಯಂತೆ. ಬಂಡೆಯ ಮೇಲೆ ಕುರುಡುಗಾಲಿಡದಂತೆ ಕೊರಕಲುತಗ್ಗುಗಳ ಜಾಡು ಮಾನಸಿಕವಾಗಿ ಆಯ್ದುಕೊಂಡು ತುದಿಗಾಲಿನಲ್ಲಿ ಮೆಟ್ಟಿ ಮೆಟ್ಟಿಲಾಗಿಸಿಕೊಳ್ಳಲು ತೋರಿಸಿಕೊಟ್ಟೆ. ಗೊರಸುಕಾಲಿನ ಆಡು ದರೆಯಂಚಿನ ಹಸಿರಿನಾಸೆಗೆ ಹೆಜ್ಜೆಯಿಡುವ ಚಂದ ಬಂತು. ಶಿಲಾರೋಹಣದಲ್ಲಿ ನಾಲ್ಗಾಲ ಚಲನೆ ಸಹಜ ಮತ್ತು ಭದ್ರ. ಹಾಗೆಂದು ಬರಿದೆ ಹಸ್ತ ಬಂಡೆಗುಜ್ಜಿದರೆ ಹಿಡಿಕೆಯಾಗುವುದಿಲ್ಲ, ಏರುವ ಭರದಲ್ಲಿ ಕಾಲಿಗೆ ಕಾಲು ಕತ್ತರಿ ಹಾಕಿದರೆ ದೇಹದ ಸಮತೋಲ ಉಳಿಯುವುದಿಲ್ಲ. ಮೊಣಕಾಲು ಮೊಣಕೈ ಕೊಟ್ಟರೆ ತರಚಿಕೊಳ್ಳುವುದಷ್ಟೇ ಲಾಭ. ಹೆಚ್ಚಿನ ಹೆದರಿಕೆಗೆ ಮುಖಾಡೆ ಮಲಗಿದರೆ ಬಂಡೆ ಕರಗಿ ತಲೆಯಮೇಲೆ ಹೊರುವುದಿಲ್ಲ! ಚಕ್ಕೆ ಏಳುವ ಕಲ್ಲು ಆಧಾರವಲ್ಲ, ಬಂಡೆಯ ಮೇಲೆ ಹಾಸಿದ ತೆಳು ಹುಲ್ಲೋ ತರಗೆಲೆಯೋ ಭದ್ರ ನೆಲೆಯೂ ಅಲ್ಲ. ರೋಹಿತ್ ಮೋಹಿತ್ ಅಳುವ ಅಭಿನವನನ್ನು ಪುಸಲಾಯಿಸಿ,ಎತ್ತಿಸುಧಾರಿಸಿಕೊಂಡು ದಿಬ್ಬ ಸಾಲಿನ ನೆತ್ತಿಗೆ ತರುವಾಗ ಹೀಗೇ ಸೂಚನೆ, ನೆರವಿನ ಹಸ್ತದೊಡನೆ ಉಳಿದೆಲ್ಲರೂ ಅಲ್ಲಿದ್ದರು.
ದಿಬ್ಬ ಸಾಲಿನ ಓರೆಯಲ್ಲಿ ಅಲ್ಲಲ್ಲಿ ತಗ್ಗು ಸಂದುಗಳಲ್ಲಿ ಮಳೆಗಾಲದಲ್ಲಿ ಬೆಳೆದ ಹುಲ್ಲು ಒಣಗಿ ಹಳದಿ ಮಿಂಚುತ್ತಿತ್ತು. ಕೆಲವು ಪುಟ್ಟ ಕೊರಕಲುಗಳಲ್ಲಿ ಮುಳ್ಳಗಂಟಿಯೋ ಕುರುಚಲು ಪೊದರೋ ನಿಂತು ಹಸುರಿನ ವಿಜಯ ಸಾರಿದ್ದೂ ಇತ್ತು. ದಿಬ್ಬ ಸಾಲಿನ ನೆತ್ತಿಯಲ್ಲಿ ಮಣ್ಣ ಟೊಪ್ಪಿ ಗಟ್ಟಿಯಾಗಿಯೇ ರೂಢಿಸಿ ಕುರುಚಲು ಕಾಡೇ ಮೆರೆದಿತ್ತು. ಸ್ವಲ್ಪ ಮುಂದುವರಿದರೆ ಅಲ್ಲೊಂದು ಪುಟ್ಟ ಕೊಳ. ಕಲ್ಲಿನ ತಗ್ಗಿಗೆ ಅಂಚುಗಟ್ಟೆ ಕಟ್ಟಿ (ಆಶ್ರಮವಾಸಿಗಳು?) ನೀರು ನಿಲ್ಲಿಸಿದ್ದರು. ಕಟ್ಟೆಯಲ್ಲಿ ಹುಲ್ಲು ಹಸಿರಾಗಿಯೂ ಸೊಂಪಾಗಿಯೂ ಇತ್ತು. ಭಕ್ತಾದಿಗಳು ಇಟ್ಟ ಒಂದೆರಡು ತೆಂಗಿನ ಬುಡವೂ ಫಲದಾಯಿಯೂ ಆಗಿದ್ದು ನೋಡುವಾಗ, ಒಮ್ಮೆಗೆ ಕೆಲವರಿಗಾದರೂ ಮರುಭೂಮಿ, ಓಯಸಿಸ್ಖರ್ಜೂರದ ಮರ ನೆನಪಿಗೆ ಬಂದರೆ ಆಶ್ಚರ್ಯವಿಲ್ಲ. ಹತ್ತು ಹನ್ನೆರಡಡಿ ಉದ್ದಗಲದ ನೀರ ಹರಹಿನಲ್ಲಿ ಕೋಮಳೆಯೂ (ಪುಟ್ಟ ತಾವರೆ) ಮೀನು ಕಪ್ಪೆಗಳೂ ಶೋಭೆ ಕೊಟ್ಟಿದ್ದವು. ಆಚೀಚೆ ಸುತ್ತಿ ಒಟ್ಟು ಚಂದವನ್ನು ಸುಂದರ ಕ್ಯಾಮರಾ ಚೌಕಟ್ಟಿಗೆ ಹೊಂದಿಸುವಾಗ ಮಾತ್ರ ಯಾರೋ ಹಿಂದಿನವರು ಕೆರೆಯ ಅನ್ಯ ‘ಉಪಯುಕ್ತತೆಯನ್ನು ಕಂಡುಹಸಿ ಕುರುಹುಗಳನ್ನು (ಸಾವಯವ ಗೊಬ್ಬರ?) ಬಿಟ್ಟದ್ದು ನೋಡುವಾಗ ನಮ್ಮಲ್ಲಿ ‘ಅರಳಿದ ತಾವರೆ ಮುದುಡಿತು. ನೀರು ಕುಡಿಯುವ ಯೋಚನೆ ಬಿಡಿಕನಿಷ್ಠ ಮುಖಕ್ಕೆ ಚಿಮುಕಿಸಿಕೊಳ್ಳುವ ಸಂತೋಷದಿಂದಲೂ ದೂರಾದೆವು.
ದಿಬ್ಬಸಾಲನ್ನು ಏರಿ ಬಂದ ಗುಹಾಶ್ರಮದ ಪುಟ್ಟಪಥ ಇನ್ನೊಂದು ಮಗ್ಗುಲಿಗೆ ಸರಿಯುವಲ್ಲಿ ಮೊದಲೂ ಇಂದೂ ನನಗಾಸಕ್ತಿ ಇರಲಿಲ್ಲ. ಆದರೆ ಶುದ್ಧ ಕಾಡುಗಲ್ಲನ್ನು ಆಶ್ರಮದ ಹೆಸರಿನಲ್ಲಿ ಪ್ರಾಥಮಿಕ ಜನಾಕರ್ಷಣೆಯ ಕೇಂದ್ರವಾಗಿ ಪರಿವರ್ತಿಸಿದ ಪ್ರಾಕೃತಿಕ ವೈಶಿಷ್ಟ್ಯವೇನೆಂದು ನೋಡುವ ಕುತೂಹಲದಲ್ಲಿ ಮುಂದೆ ಹಲವು ಬಾರಿ ಹೋಗಿದ್ದೇನೆ. ಒಂದು ಪ್ರಸಂಗದಲ್ಲಂತೂ ಅಲ್ಲಿನ ಸಹಕಾರವನ್ನೂ ಸ್ಪಷ್ಟವಾಗಿ ಮತ್ತು ಸ್ಮರಣೀಯವಾಗಿ ಪಡೆದೂ ಇದ್ದೇನೆ. ಆ ವಿವರಗಳಲ್ಲಿ ಕಣ್ಣೆದುರಿನ ಕೋಡುಗಲ್ಲು ಮರೆತು ಹೋಗದಂತೆ ನಾವು ಪುಟ್ಟಪಥದ ಎಡಬದಿಯ ಸವಕಲು ಜಾಡು ಅಂದರೆ ದಿಬ್ಬಸಾಲಿನಲ್ಲಿ ನಾವು ಬಂದ ದಿಕ್ಕಿನದೇ ಮುಂದುವರಿಕೆಯಲ್ಲಿ ತೊಡಗಿಕೊಂಡೆವು. ಪುಡಿಗಲ್ಲಿನ ಮೇಲೆ ಕಲ್ಲುಎಡೆಯಲ್ಲೆಲ್ಲ ತುಂಬಿದ ಮಣ್ಣು ರೂಢಿಸಿಕೊಂಡೇ ಅಬೇಧ್ಯ ಕಾಡು ನಿಮಿರುಗಿವಿಯ ಪಾದ ಮುಚ್ಚಿತ್ತು. ಆಶ್ರಮದ ಜಾನುವಾರುಗಳು ನುಗ್ಗಿದ್ದೋ ಅಲ್ಲಿನ ವಾಸಿಗಳು ಸೌದೆ ಅರಸಿದ್ದೋ ಜಾಡು ಸ್ವಲ್ಪ ನಮ್ಮನುಕೂಲಕ್ಕೆ ಒದಗಿತು. ಹಗ್ಗ ಹಿಡಿದು ಅಳತೆ ತೆಗೆದರೆ ನೂರಿನ್ನೂರಡಿ ಮಿಗದ ಅಂತರವೇ ಇರಬೇಕು. ಆದರೆ ಪ್ರತಿ ಹೆಜ್ಜೆಯನ್ನೂ ಮರೆಮಾಡುವ ಮುಳ್ಳಬಲ್ಲೆ, ಧಿಕ್ಕರಿಸುವ ಬಂಡೆಗಳ ನಡುವೆ ಉಸಿರನ್ನೂ ಹೆಕ್ಕುತ್ತ ಸ್ವಲ್ಪ ಓರೆಯಲ್ಲೇ ಏರಿದೆವು. ಅಲ್ಲೇ ಕಾಲದ ಪ್ರಗತಿ ಸೂಚಿಯ ಹಾಗೆ ಪುಟ್ಟ ಒಂದು ಮೈಕ್ರೋವೇವ್ ಸ್ತಂಭವನ್ನು ಸಖೇದ ನೋಡುತ್ತ ಒಂದು ಎತ್ತರದ ಬಂಡೆಗುಪ್ಪೆಯ ಮೇಲೆ ವಿರಮಿಸಿದೆವು.
ಪ್ರಾಕೃತಿಕ ಕಾಲಮಾನದಲ್ಲಿ ನಿಮಿರುಗಿವಿಯಿಂದ ನಿನ್ನೆ ಮೊನ್ನೆ ಕಳಚಿದ (ನಮ್ಮ ದಿನಮಾನದಲ್ಲಿ ನೂರಾರು ವರ್ಷಗಳೇ ಇರಬಹುದು!) ಭಾರೀ ಬಂಡೆ ಹಳಕುಗಳಿವು. ಪೂರ್ವಕ್ಕೆ ಸುಮಾರು ಅರವತ್ತೆಪ್ಪತ್ತು ಅಡಿ ನೇರ ಆಳದಿಂದ ಎದ್ದ ಮರ ಬಳ್ಳಿ ನಿರಂತರ ಅಲಂಕರಿಸಿ ಓಲೈಸುವ ಭಾರೀ ಬಂಡೆ ಒಂದು. ಅದರ ಮೇಲೆ ಒಂದಕ್ಕೊಂದು ತೆಕ್ಕೆ ಬಿದ್ದಂತೆ ಮತ್ತೆರಡೋ ಮೂರೋ ಹದಿನೈದಿಪ್ಪತ್ತಡಿಯ ಪುಡಿಗುಂಡುಗಳು. ದೂರದ ನೋಟಕ್ಕೆ ಇವು ಸುಲಭವಾಗಿ ಕಣ್ಣಿಗೆ ಬೀಳವು. ಆದರೆ ಹಿಮ್ಮೈಯ ಕಾಡುನೆಲದ ಸಂಪರ್ಕದಲ್ಲಿ ಏರಿ ನಿಲ್ಲುವವರಿಗೆ ಪ್ರಕೃತಿಯೇ ಕಟ್ಟಿಕೊಟ್ಟ ಸುಂದರ ವೀಕ್ಷಣ ಕಟ್ಟೆಯಂತೂ ಹೌದೇ ಹೌದು. ಪುಡಿಗುಂಡುಗಳ ಸುತ್ತಿನ ಮಟ್ಟಸ ಜಗುಲಿಯಲ್ಲಿ ಮೈಚಾಚದವರಿಲ್ಲ. ಇತ್ತ ಮರಗಿಡಗಳ ತಣ್ಣೆಳಲು, ಅತ್ತ ಬಿಸಿಲು ಕಾದರೂ ಕಣ್ಣಿಗೆ ತಂಪೆರೆವ ದೃಶ್ಯ, ತಂಗಾಳಿ. ಅಲ್ಲೂ ನೆಲೆನಿಂತ ಮರದ ಬೊಡ್ಡೆ ತಬ್ಬಿ ಪಡುವ ವಿಸ್ಮಯ, ಭಾರಿ ಬಳ್ಳಿಯಲ್ಲಿ ಜೋಕಾಲಿಯಾಡುವ ಸಂಭ್ರಮ ಸಣ್ಣದಲ್ಲ. ನಾವು ಒಯ್ದ ನೀರು ಕುಡಿಯುವುದು, ಅದೋ ಇದೋ ಕುರುಕುವುದು, ಪುಡಿಗುಂಡುಗಳ ಇರುಕು ಬಿರುಕುಗಳಲ್ಲಿ ಶಿಲಾರೋಹಣದ ಪಾಠ ಒರೆಗೆ ಹಚ್ಚಿ ಅವುಗಳ ನೆತ್ತಿ ಮೆಟ್ಟುವುದು ಮತ್ತವುಗಳ ಸಂದಿಯಲ್ಲಿ ಚಿಮಣಿ ಹತ್ತುವ ತಂತ್ರಕ್ಕೆ ತರಬೇತು ಗಳಿಸುವುದು ಸಾಕಾಗದು.
೧೯೭೬-೭೮ರ ಸುಮಾರಿಗೆ ಕೆನರಾ ಪಿ.ಯು ಕಾಲೇಜಿನ ರಸಾಯನಶಾಸ್ತ್ರದ ಮೇಷ್ಟ್ರು ಗೆಳೆಯ ಜನಾರ್ದನ ಪೈಗಳಿಗೆ (ಈಗ ಅಲ್ಲೇ ಪ್ರಾಂಶುಪಾಲರು) ಸಹವಾಸ ದೋಷದಿಂದ ಕಾಡುಬೆಟ್ಟದ ಸೀಕು (ಕಾಯಿಲೆ) ಉಲ್ಬಣಿಸಿತ್ತು. ತಾನು ಜಮಾಲಾಬಾದ್, ಏರಿಕಲ್ಲು, ಪೂಮಲೆ ಎಂದಿತ್ಯಾದಿ ಸುತ್ತಿದ್ದೆಲ್ಲಾ ಪ್ರಿಯ ಶಿಷ್ಯರೊಡನೆ ಹಂಚಿಕೊಳ್ಳುತ್ತಿದ್ದರು. ಸಹಜವಾಗಿ ಅವರದೇ ಹತ್ತೆಂಟು ಮಕ್ಕಳ ತಂಡವೊಂದನ್ನು ನಾನು ಅದೊಂದು ಸಂಜೆ (೧೬-೧೨-೭೮) ಇದೇ ಕೊಡಂಜೆಗೆ ತರಬೇಕಾಯ್ತು. ಧಾರಾಳ ನೀರು, ತಿನಿಸುಗಳನ್ನು ಹೊತ್ತ ತಂಡಕ್ಕೂ ದಿಬ್ಬಸಾಲು ಕಡ್ಡಾಯ ಏರಿಸಿಇದೇ ಬಂಡೆ ಹಾಸಿಗೆಯಲ್ಲಿ ರಾತ್ರಿವಾಸ ವಿಧಿಸಿದ್ದೆ. ಪಕ್ಕಾ ಮಂಗಳೂರಿನ ಅದೂ ನಾಲ್ಕು ಗೋಡೆಯ ನಡುವಣ ಮಿದುತಲ್ಪಗಳನ್ನಷ್ಟೇ ಕನಸಬಹುದಾದ ಮಕ್ಕಳಿಗೆ ಇದು ಪರಮಾದ್ಭುತವಾದದ್ದು ಆಶ್ಚರ್ಯವೇನಲ್ಲ. ಕಲ್ಲಿನ ಇರುಕೊಂದರಲ್ಲಿ ಒಲೆಹೂಡಿ ಕಾಸಿದ ಚಾ ಕುಡಿದು, ಶಿಬಿರಾಗ್ನಿಗೆ ಉದುರು ಕಟ್ಟಿಗೆಯ ಸಂಗ್ರಹ ನಡೆಸಿ ಕತ್ತಲನ್ನು ಹೊದ್ದುಕೊಂಡಿದ್ದೆವು. ನಸುಚಳಿಯಲ್ಲಿ ಚಿಟಿಪಿಟಿಗುಟ್ಟುವ ಪುಟ್ಟ ಶಿಬಿರಾಗ್ನಿಯನ್ನು ವಿವಿಧ ಭಾವಭಂಗಿಗಳಲ್ಲಿ ಸುತ್ತುವರಿದು ಕುಳಿತು, ಕುಣಿದುಹಾಡಿ ಸಂಭ್ರಮಿಸಿದ್ದಾಯ್ತು. ಊಟದ ಶಾಸ್ತ್ರಕ್ಕೆ ಅಜೀರ್ಣವಾಗುವಷ್ಟು ತಿನಿಸುಗಳು. ಮತ್ತೆ ನಲಿಯುವ ಬೆಳಕಿನಲ್ಲಿ ಆನೆ ಕರಡಿಹೆಬ್ಬುಲಿಗಳಾದ ಮರಗಿಡಗಳ ಬೊಡ್ಡೆ, ಅನಕೊಂಡವಾದ (ಜತ್ತಿನ ಅತ್ಯಂತ ದೊಡ್ಡ ಹಾವು – ಭಾರತದಲ್ಲಿಲ್ಲ!) ಬೀಳಲುಕತ್ತಲು ಮಾಸಿದ ಕೊಂಬೆ-ಹಸಿರಿನ ನಡುವೆ ಪ್ರತಿ ಹುಡುಗನಿಗೂ ಖಾಸಗಿ ಸೊತ್ತಾಗಿ ಒದಗಿದ ಅನಂತ ಅವಕಾಶ, ಅಲ್ಲಲ್ಲಿಗೆ ಬೆಳಕಿನ ಚುಕ್ಕಿಗಳು. ಬೀಸುಗಾಳಿಯ ಸುಯ್ಯಲು, ಎಲೆ ಕಡ್ಡಿಯುದುರಿದ ನುಡಿತಎಲ್ಲೋ ಬೇಟೆ ಗುರುತಿಸಿದ ಗೂಬೆಯ ಶಹಭಾಸ್ಗಿರಿ – ಗೂಕ್. ತಪ್ಪಲಿನ ಯಾವುದೋ ಹಳ್ಳಿ ಮನೆಯ ನಾಯಿಯ ದೀರ್ಘ ಖಬರ್ದಾರ್. ಮಕ್ಕಳು ಹೊಣಕಿದ್ದು ಹೆಚ್ಚಿ ಕಣಿವೆಗೆ ಉರುಳದಂತೆಬೆಂಕಿ ಪಗರಿ ಖಾಂಡವವನವಾಗದಂತೆ, ಹರಿದಾಡುವ ಜಂತು ಮಲಗಿದವರ ಆಸುಪಾಸು ಸುಳಿದಾಡದಂತೆ ನಮ್ಮ ಸರದಿಯ ಪಹರೆ ನಡೆಸುವವರಿಗೆ ವೈವಿಧ್ಯಮಯ ರಾತ್ರಿ. ಅನುಸರಿಸುವವರಿಗೆ ಪ್ರಕೃತಿಯಲ್ಲಿ ಎಷ್ಟೊಂದು ಮುಖ, ಏನೆಂಥ ಧಾರಾಳ!
ಪ್ರಾಚೀನ ಕಥೆ ಹಾಗಿರಲಿ. ಸದ್ಯ ಬಂದವರು ಸಿಕ್ಕಿಹೋದ ಉಸಿರು ಬಿಡಿಸಿ ಎರಡು ಗುಟುಕು ನೀರು ಹಾಕಿ, ಸುತ್ತುನೋಟ ಬೀರುವಾಗಲೇ ಗೊತ್ತು – ಅಭಿನವ್, ಜೊತೆಗೆ ರೋಹಿತ್ ಹಿಂದೆ ಉಳಿದಿದ್ದರು. (ಮತ್ತವರು ನಮ್ಮನ್ನು ಕಾದುಕೂರದೆ ಆಶ್ರಮ, ಕೆರೆ ಸುತ್ತಾಡಿ ಸ್ವತಂತ್ರವಾಗಿ ಮಂಗಳೂರಿಸಿದರು.) ಉಳಿದಷ್ಟು ಮಂದಿಗೆ ಗುಪ್ಪೆ ಬಿದ್ದ ಬಂಡೆಯ ಸಂದಿನಲ್ಲಿ ಚಿಮಣಿ ಏರಿಕೆಯ ಪ್ರಾಥಮಿಕ ಅಭ್ಯಾಸಗಳು ನಡೆಯಿತು. ಎಡದ ಬಂಡೆ ಒಳಬಾಗಿದೆ, ಬಲದ್ದಕ್ಕೆ ಡೊಳ್ಳು. ಇದಕ್ಕೆ ಬೆನ್ನು, ಅದಕ್ಕೆ ಕೈ. ಬಲಗಾಲಿನಲ್ಲಿ ಎದುರು ಅನುಕೂಲ ಇದ್ದಷ್ಟು ಮೇಲೆ ತುಳಿದು ನಿಂತರೆ, ಎಡಗಾಲು ನಮ್ಮದೇ ಕುಂಡೆಯಡಿಗೆ ಮಡಚಿ ಕೂರಬೇಕು. ಈಗ ಕೈಗಳನ್ನು ಬದಲಿ ಬಂಡೆಗಳಿಗೆ ಕೊಟ್ಟು ಎರಡೂ ಕಾಲಿದ್ದಲ್ಲೇ ನಿಂತರಾಯ್ತು ಚಿಮಣಿ ತಂತ್ರ ಸಿದ್ಧಿ. ಇಲ್ಲೇ ಹೀಗೇ ಹಿಂದೊಂದು ಕಾಲೇಜಿನ ತಂಡಕ್ಕೆ ನಾನು ಪಾಠದ ಪರಿವೇಶವಿಲ್ಲದೆ ಶಿಲಾರೋಹಣ ಹೇಳಿಕೊಡುತ್ತಿದ್ದಾಗಿನ ನೆನಪೊಂದು ಒತ್ತಿ ಬರುತ್ತಿದೆ. ಉತ್ಸಾಹಿ ಮೇಶ್ಟ್ರೊಬ್ಬರು ದೂರದ ಪುತ್ತೂರಿನಿಂದ ಮೂವತ್ತಕ್ಕೂ ಮಿಕ್ಕ ವಿದ್ಯಾರ್ಥಿಗಳನ್ನು ವಿಶೇಷ ಬಸ್ ಮಾಡಿ ಕರೆತಂದಿದ್ದರು. ಅವರಿಗೆ ಶಿಲಾರೋಹಣ ಪರಿಚಯಿಸಲು ನಾನೂ ಸ್ವತಂತ್ರವಾಗಿ ಮಂಗಳೂರಿನಿಂದ ಹೋಗಿದ್ದೆ. ಮಕ್ಕಳು ನನ್ನನ್ನನುಸರಿಸಿ ದಿಬ್ಬಸಾಲಿನಲ್ಲಿ ಕೈಕಾಲು ತರಚಿಕೊಂಡು, ಗಾಬರಿ ಹುಟ್ಟಿಸುವ ಕೋಡುಗಲ್ಲು ಏರಲು ಕಾತರರಾಗಿ ಇದೇ ಗುಪ್ಪೆ ಬಿದ್ದ ಕಲ್ಲಿನ ಬಳಿ ಬಂದಿದ್ದಾರೆ. ಮೈಯೆಲ್ಲಾ ಕಿವಿಕಣ್ಣಾಗಿ ನೋಡುತ್ತಾ ಕೇಳುತ್ತಾ ಇದ್ದಾರೆ. ಒಮ್ಮೆಗೆ ಸ್ವಲ್ಪ ಆಚೆಯಿಂದ ಏನೋ ದಢಕ್ಕೆಂದು ಬಿದ್ದ ಸದ್ದು. ಕೂಡಲೇ ನಾನು ಸ್ವಲ್ಪ ಆತಂಕದಲ್ಲೇ ಕೇಳಿದೆ ಯಾರಲ್ಲಿ? ಸಟ್ಟಂತ ಉತ್ತರ ಬಂತುಇಲ್ಲಿಲ್ಲ, ನಾನು ಮೇಷ್ಟ್ರು. ಇಂಥಲ್ಲೆಲ್ಲಾ ಸಾಮಾನ್ಯವಾಗಿ ಸಿಡುಕದ ನನಗೆ ರೇಗಿಹೋಯ್ತು. ಮೇಷ್ಟ್ರು ಕಾಲೇಜಿನಲ್ಲಿ. ಇಲ್ಲಿ ನೀವೂ ಶಿಲಾರೋಹಣ ವಿದ್ಯಾರ್ಥಿ. ನಿಜದಲ್ಲಿ ವಿನಯವಂತರೇ ಆಗಿದ್ದ ಆ ಮೇಷ್ಟ್ರು ಮತ್ತೆ ತಪ್ಪಲಿಲ್ಲ!
(ಮುಂದುವರಿಯಲಿದೆ)
[ಈಗ ನಿಮ್ಮ ಹೌದು, ಪ್ರಿಯ ಓದುಗರಾದ ನಿಮ್ಮ ಏಕಾಗ್ರತೆಯ ಪರೀಕ್ಷೆ. ಇಷ್ಟರಲ್ಲೇ ಒಂಬತ್ತು ಪುಟದುದ್ದಕ್ಕೆ ಬೆಳೆದ ಈ ಮೊದಲ ಭಾಗದ ಬಲದಲ್ಲೇ ನಿಮಗೆ ಮುಂದುವರಿಯುವ ಧೈರ್ಯ ಉಂಟೇ? ಪ್ರತಿಕ್ರಿಯಾ ಅಂಕಣದಲ್ಲಿ ನೀವು ತೋರುವ ವಿಶ್ವಾಸವನ್ನೇ ನನ್ನ ಶ್ವಾಸ ಮಾಡಿಕೊಂಡು (ಎಸ್ವೀಪೀ ಪ್ರಯೋಗ) ಮುಂದಿನ ವಾರದಲ್ಲಿ ಕೊಡಂಜೆ ಕಲ್ಲಿನ ನೆತ್ತಿ ತೋರಿಸುತ್ತೇನೆ.]
I had been to Kurinji Kallu / Kodanji Kallu during 1995-96. It was a nice experience. We took a vehicle from Puttur and from there to Kurinjikallu.Nice Outing.Bedre Manjunath
ಗುಡ್ದದ ಮೇಲಿನ ಆ ಅಪೂರ್ವ ಕೆರೆಯನ್ನು ಸಾವಯವ ಗೊಬ್ಬರದಿಂದ ಶುದ್ದೀಕರಣ ಮಾಡಿದ ಪಾಪಿಗಳಿಗೆ ಏನೆನ್ನುವುದೋ ಗೊತ್ತಾಗುವುದಿಲ್ಲ. ದನ ನೀರು ಕುಡಿಯುತ್ತಿರುವ ನಿಮ್ಮ ಹಳೆಯ ಚಿತ್ರವನ್ನು ನೋಡುತ್ತಿದರೆ ಈಗಿರುವುದು ಅದೇ ಕೆರೆನಾ? ಎಂದು ಆಶ್ಚರ್ಯವಾಗುತ್ತದೆ. ನಾವು ಕಾರಿಳಿದ ನಂತರ ಮೊದಲು ಹತ್ತಿದ ಶಿಲಾಭಾಗ ಮುಂದಿನ “ಸಿದ್ದತಾ” ಮತ್ತು “ಅಂತಿಮ” ಪರೀಕ್ಷೆಗಳಿಗೆ ನಮ್ಮೆಲ್ಲರನ್ನು ಮಾನಸಿಕ ಮತ್ತು ದೈಹಿಕವಾಗಿ ಸಜ್ಜುಗೊಳಿಸಿದ್ದು ನಿಜ. ಆದರೆ ಬೆಳಗ್ಗೆ ತಿಂದಿದ್ದ ಇಡ್ಲಿ, ವಡೆ, ಪೂರಿ, ಸಜ್ಜಿಗೆ ಬಜಿಲ್ (ಐ ಮೀನ್ ಅವಲಕ್ಕಿ), ಚಪಾತಿ, ಶೀರಾ, ಪರೋಟಾ, ದೋಸೆ, ತುಪ್ಪ ದೋಸೆ, ಮಸಾಲೆ ದೋಸೆ……………. (ಈ ಪಟ್ಟಿ ಮುಂದುವರಿಯುತ್ತದೆ! ) ಇವೆಲ್ಲವೂ ಸ್ವಲ್ಪ “ಓವರ್ ಲೋಡ್” ಮಾಡಿ “ಶಿಲಾರೋಹಣ ವೇಗ ನಿಯಂತ್ರಕ”ದಂತೆ ಕೆಲಸ ಮಾಡಿದ್ದೂ ಸುಳ್ಳಲ್ಲ! (ಸ್ವಲ್ಪ ಹೊತ್ತಿನಲ್ಲೇ ತಿಂದದ್ದರ ಎರಡು ಪಟ್ಟು ಕರಗಿಹೋದದ್ದು ಬೇರೆ ಮಾತು!)
ತಮ್ಮ ಶಿಲಾರೋಹಣದ ಸಿದ್ಧತೆಗೆ ( = ಬೆಳಗಿನ ಉಪಹಾರಕ್ಕೆ ) ನಾನು ಸದಾ ಸಿದ್ಧ!
ಪುಟ ಎಷ್ಟಾದರೂ ಆಗಲಿ. ೀ ಲೇಖನದಂತೆ ಓದಿಸಿಕೊಂಡು ಹೋಗುವಂತಿದ್ದರೆ ಓದಲು ಸದಾ ಸಿದ್ಧ.
I think it would be great, if you announce (in the site), before you go to the expedition , so that we too can have a chance to mixup with the nature.
As some one said ,better if you could inform me earlier
ನಾನು ಕಾರ್ಯಕ್ರಮಗಳನ್ನು ನನ್ನ (ವೈಯ್ಯಕ್ತಿಕ) ಅನುಕೂಲಕ್ಕನುಗುಣವಾಗಿ, ಪೂರ್ಣ ಹವ್ಯಾಸಿ ಅಸಕ್ತಿಯಲ್ಲಿ ಮಾಡುತ್ತಾ ಬಂದಿದ್ದೇನೆ. ಈ ವಿಚಾರದಲ್ಲಿ ಸಂಸ್ಥೆ ಕಟ್ಟುವುದನ್ನು ನಾನು ನಿರಾಕರಿಸುತ್ತೇನೆ. ಯಾವುದೇ ಕಾರ್ಯಕ್ರಮದಲ್ಲಿ ಕೇಂದ್ರೀಕೃತವಾದ ಯಾವ ಶುಲ್ಕ, ದಾನ, ಪ್ರಾಯೋಜಕತ್ವ ನಾನು ಬುದ್ಧಿಪೂರ್ವಕವಾಗಿ ತಿರಸ್ಕರಿಸುತ್ತೇನೆ. (ಕಲಾಪದಲ್ಲಿ ಒಂದು ಕಾಫಿಯನ್ನೂ ನಾನು ಇನ್ನೊಬ್ಬರ ಖರ್ಚಿನಲ್ಲಿ ಕುಡಿಯುವುದಿಲ್ಲ, ಬೇರೆಯವರಿಗೆ ಕುಡಿಸುವುದೂ ಇಲ್ಲ!) ಸಂಘಟನೆಯ ಮಟ್ಟದಲ್ಲಿ ಮಾತ್ರ ನಾನು ಜವಾಬ್ದಾರಿಯ ಮಟ್ಟದಲ್ಲಿ ಎಲ್ಲರೂ ಸ್ವತಂತ್ರರು. ಹಾಗಾಗಿ ಸಾಂಸ್ಥಿಕ ಮಟ್ಟದ ಸೂಚನೆಗಳನ್ನು ಕಳಿಸುವುದು, ತಿದ್ದುಪಡಿಗಳನ್ನು ಅಳವಡಿಸುವುದೆಲ್ಲ ಸಾಧ್ಯವಾಗುವುದಿಲ್ಲ. ಮೊದಲಿನಿಂದಲೂ ಆಸಕ್ತರು ವಾರಾಂತ್ಯದ, ವಿಶೇಷ ರಜಾದಿನಗಳ ಪೂರ್ವಭಾವಿಯಾಗಿ ನನ್ನನ್ನು ಸಂಪರ್ಕಿಸಿ (ಅಂಗಡಿಯಲ್ಲಿ ಅನಿವಾರ್ಯವಾಗಿ ವಾರದ ಆರೂ ದಿನ, ಹೆಚ್ಚುಕಡಿಮೆ ಎಂಟೂವರೆಯಿಂದ ಒಂದು ಅನಂತರ ಎರಡೂವರೆಯಿಂದ ಎಂಟರವರೆಗೆ) ತಿಳಿದುಕೊಳ್ಳುವುದು ಮತ್ತೆ ತಮಗನುಕೂಲವಾದ್ದಕ್ಕೆ ಸೇರಿಕೊಳ್ಳುವುದು ನಡೆದೇ ಇದೆ. ಬಿ.ಪಿ ಮೋಹನರಿಗೆ ಇದನ್ನು ನಾನು ಪ್ರತ್ಯೇಕ ಹೇಳಬೇಕಾಗಿಯೇ ಇಲ್ಲ. ಎಂಬಿ ಸದಾಶಿವರು ದಯವಿಟ್ಟು ಗಮನಿಸುವುದು. ಅಶೋಕವರ್ಧನ
This reminds me of my earlier attempt with Mohan B.P and Nagendranath, wherein we had literally lost our chapatis before we ate them and of course without chatni as the same could not be picked up from the mud. No drinking water and had to drink the water found in a small pond over the top (after which saw a frog in it). But, if the attempt was with Ashok, then that would have been still more memorable and very adventurous.
ಅ೦ತರ್ಜಾಲದ ಸ೦ಪರ್ಕದಿ೦ದ ದೂರವಿದ್ದ ಕಾರಣ ಓದಲು ತಡವಾಯಿತು. ಕ್ಷಮಿಸಿ. ಕೊಡಂಜೆ ಕಲ್ಲಿನ ಕಥೆ ಮತ್ತು ನಿಮ್ಮ ಸಾಹಸದ ಅನುಭವ ಓದಿ ಸ೦ತೋಷವಾಯಿತು. ಬರವಣಿಗೆ ಓದುವಾಗ ನಾನೂ ನಿಮ್ಮೊಡನೆ ಹೋದ ಅನುಭವವಾಯಿತು. ಧನ್ಯವಾದಗಳು.
ಬಿಸಿಲಲ್ಲಿ ಬೆಂದಿದ್ದ ನಮಗೆ ಕೆರೆ ಕಂಡಾಗ ಸಂತೋಷವಾಯಿತು. ಕೆರೆಯ ನೀರು ಕುಡಿಯಲರ್ಹವಾಗಿರದಿದ್ದರೂ ಮುಖ ತೊಳೆಯಲು ಯಾವುದೇ ತೊಂದರೆಯಿಲ್ಲ. ಕಸ-ಕಡ್ಡಿ,ಪ್ಲಾಸ್ಟಿಕ್ ಮುಕ್ತವಾಗಿತ್ತು.