ಮೂರನೇ ಬೆಳಿಗ್ಗೆಯ ಉದಯರಾಗ – ಜಲಸಂರಕ್ಷಣೆ ಮತ್ತು ಮರುಪೂರಣದ ಪ್ರಾತ್ಯಕ್ಷಿಕೆ. ಇದಕ್ಕೆ ನಾಯಕತ್ವ ಎಡೆಂಬಳೆಯ ಸತ್ಯನಾರಾಯಣನದ್ದೇ. ಎಡೆಂಬಳೆ ಕೃಷಿಕ್ಷೇತ್ರ ವ್ಯಾಪ್ತಿಯಲ್ಲಿ ಐವತ್ತು ಎಕ್ರೆಗೂ ಮಿಕ್ಕ ನೆಲವಾದರೂ ಅಂದು ಸ್ಪಷ್ಟ ಕೃಷಿಗೆ ಒಡ್ಡಿಕೊಂಡ ಜಾಗ ಎರಡು ಮೂರೆಕ್ರೆ ಮಾತ್ರ. ಉಳಿದವು ಮುರಕಲ್ಲಿನ ಹಾಸು, ಮುಳಿಗುಡ್ಡೆ (ಇಂದು ರಬ್ಬರ್ ತೋಟ ಬಂದು ಇವರಿಗೆ ಆರ್ಥಿಕ ಚೈತನ್ಯ ಊಡಿದೆ). ಮನೆ ಸಮೀಪದ ಬಾವಿ, ಕೆರೆ ಒರತೆಯಿಲ್ಲದ ಕಗ್ಗಲ್ಲ ಕೋರೆಯಂತಾಗಿ ಫೆಬ್ರವರಿ ಮಾರ್ಚಿನಲ್ಲೇ ನೀರಿಗೆ ತತ್ವಾರ. ತೋಟದ ಪಾಡು ಬಿಡಿ, ಸ್ವಂತದ ಗೃಹೋಪಯೋಗಕ್ಕೂ ತೋಟದ ಇನ್ನೊಂದೇ ತುದಿಯಲ್ಲಿರುವ ದೂರದ ತೂತುಬಾವಿ ನೆಚ್ಚುವುದು ಅನಿವಾರ್ಯವಾಗಿದೆ. ತೋಟ, ಗುಡ್ಡೆ ಪೂರ್ತಿ ಓಡಾಡಿಸಿ ಮಳೆನೀರಿಗಡ್ಡಗಟ್ಟಿದ ದಿಂಡುಗಳು, ತೋಡಿದ ಇಂಗುಗುಂಡಿಗಳು ಮತ್ತವುಗಳ ಇಳಿದಿಕ್ಕಿನ ದಂಡೆಗಳ ನೆಲಹಿಡಿದಿಡುವ ಸಸ್ಯ ವೈವಿಧ್ಯ, ಅನಿವಾರ್ಯವಾಗಿ ಒದಗಿದ ಮಾಜೀ ಕಲ್ಪಣೆಗಳು ಮತ್ತವಕ್ಕೆ ಪದವಿನ ಹರಿನೀರನ್ನು ಒಡ್ಡಿಸಿಕೊಡುವ ಚರಂಡಿಗಳು, ಗುಡ್ಡೆಯಲ್ಲಿ ನೆಟ್ಟ ಸಸಿಗಳಿಗೆ ಬೇಸಗೆಯಲ್ಲಿ ಸೀಮಿತ ನೀರೂಡುವ ವ್ಯವಸ್ಥೆಗಳು, ಗೃಹ ಬಳಕೆಯ ಕ್ರಮಗಳೊಂದೊಂದೇ ಅನಾವರಣಗೊಂಡಾಗ ನಗರದಲ್ಲಿ ನಲ್ಲಿಯ ಕೊನೆಯನ್ನಷ್ಟೇ ನೋಡುವ ಮಂದಿಗೆ ಹೊಸಬೆಳಗು ಮೂಡಿದ್ದರೆ ಆಶ್ಚರ್ಯವಿಲ್ಲ.
ಡಾ| ಪ್ರಭಾಕರ ಜೋಷಿ (“ನನಗೆ ‘ಷಿ’ ಅಲ್ಪಪ್ರಾಣ ಬಳಸಿದರೂ ನಡೀತದೆ” ಎನ್ನುತ್ತದೆ ಜೋಷಿಯವರ ವಿನಯ) – ಎರಡೇ ಮಾತಿನಲ್ಲಿ ಪರಿಚಯಿಸುವುದಾದರೆ ವೃತ್ತಿಯಲ್ಲಿ ಅರ್ಥಶಾಸ್ತ್ರಿ (ಬೆಸೆಂಟ್ ಪ.ಪೂ ಕಾಲೇಜಿನ ಅರ್ಥಶಾಸ್ತ್ರ ಅಧ್ಯಾಪಕ ಮತ್ತು ಪ್ರಾಂಶುಪಾಲನಾಗಿ ನಿವೃತ್ತ), ಪ್ರವೃತಿಯಲ್ಲಿ ಅರ್ಥದಾರಿ (ತಾಳಮದ್ದಳೆಯಲ್ಲಿ ಅತ್ಯುನ್ನುತ ಸ್ತರದ ಕಲಾವಿದ. ಅಭಯಾರಣ್ಯದ ಪ್ರಥಮ ಕಾರ್ಯಕ್ರಮದ – ಮಾರಿಷಾ ಕಲ್ಯಾಣ ತಾಳಮದ್ದಳೆಯಲ್ಲಿ ಅವರು – ಪ್ರಚೇತಸ, ಬಲು ಮುಖ್ಯ ಪಾತ್ರ). ಪ್ರಚಂಡ ವಾಗ್ಮಿ (ಎಂದೂ ವಾಚಾಳಿಯಲ್ಲ! ನೀವು ನಾಲ್ಕು ಚೀನೀ ಮಾತಾಡಿದರೆ ನಾಳೆ ಜೋಶಿ ನಿಮ್ಮೊಡನೆ ಸಹಜವೆನ್ನುವಂತೆ ಚೀನೀಯಲ್ಲೇ ಸಂಭಾಷಣೆಗಿಳಿದಾರು ಜಾಗ್ರತೆ), ಬಹು ವ್ಯಾಪೀ ಲೇಖಕ – ಕೋಶ, ಆಕರಗ್ರಂಥ, ಲೇಖನಗಳಿಂದ ತೊಡಗಿ (ಘನತೆವೆತ್ತ ಲೇಖಕರು ಸಾಮಾನ್ಯವಾಗಿ ಉಪೇಕ್ಷಿಸುವ) ವಾಚಕರ ವಾಣಿಯ ಟಿಪ್ಪಣಿಗಳವರೆಗೂ ಇವರು ತಮ್ಮ ವಸ್ತು ವೈವಿಧ್ಯ ಹಾಗೂ ಭಾಷಾ ವೈವಿಧ್ಯದಲ್ಲಿ (ಕನ್ನಡ, ಇಂಗ್ಲಿಶ್, ತುಳು, ಕೊಂಕಣಿ, ಹಿಂದಿ, ಚಿತ್ಪಾವನೀ ಇತ್ಯಾದಿ) ಮೆರೆಸಿದವರು ಮತ್ತು ಇಂದಿಗೂ ತೀವ್ರವಾಗಿಯೇ ತೊಡಗಿಸಿಕೊಂಡಿರುವವರು. ಎಲ್ಲೂ ಯಾವ ಪಾತ್ರಕ್ಕೂ ಕರೆಯಬಹುದು, ಔಚಿತ್ಯ ನೋಡಿ, ಅವರು ನಿರ್ವಿವಾದವಾಗಿ ಮತ್ತು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ನೆಚ್ಚಬಹುದು. ಅವರು ಶಿಬಿರಾರ್ಥಿಗಳನ್ನುದ್ದೇಶಿಸಿ ಯಕ್ಷಗಾನದ ಕುರಿತು (ನಾವು ಬಯಸಿದಂತೆ) ಪರಿಚಯಾತ್ಮಕ ಮಾತುಗಳನ್ನೂ ಅರ್ಥಪೂರ್ಣ ಸಂವಾದವನ್ನೂ ನಡೆಸಿಕೊಟ್ಟರು.
ಡಾ| ರಾಘವ ನಂಬಿಯಾರ್, ಜೋಷಿಯವರ ಕಾರ್ಕಳ ಸಹಪಾಠಿ ಮತ್ತಷ್ಟೇ ತೀವ್ರ ಯಕ್ಷಗಾನ ವ್ಯವಸಾಯಿ. ಇವರ ವಿದ್ವತ್ತು, ಸಂಶೋಧನ ಬರಿಯ ತಾತ್ವಿಕ ಮಾತು, ಬರಹಗಳ ಆಚೆಗೆ ಪ್ರಾಯೋಗಿಕ ರಂಗಕ್ಕಿಳಿದು ಯಕ್ಷ-ಪುನರುತ್ಥಾನವನ್ನೇ ನಡೆಸಿದೆ. (ಅಭಯಾರಣ್ಯದಲ್ಲಿ ಅವರು ನಡೆಸಿದ ದೀವಟಿಗೆ ಪ್ರದರ್ಶನದ ಕುರಿತು ಇಲ್ಲೇ ಹಿಂದಿನ ಕಡತಗಳನ್ನು ನೋಡಬಹುದು) ಆನುವಂಶಿಕವಾಗಿ ಆಯುರ್ವೇದ ಪಂಡಿತರಾದರೂ ವೃತ್ತಿಯಾಗಿ ನೆಚ್ಚಿದ್ದು ಪತ್ರಿಕೋದ್ಯಮ. ಲಲಿತಕಲೆ, ಸಂಸ್ಕೃತ, ಸಾಹಿತ್ಯಾಸಕ್ತಿ ಇವರಲ್ಲಿ ಪ್ರ-ಮುಖಗಳೇ ಆದರೂ ಉದಯವಾಣಿಯ ತಾಪೇದಾರಿಯಲ್ಲಿ ಕ್ರೀಡೆ, ಸಾಮಾನ್ಯ ವರದಿಗಳಲ್ಲಿ ಕಳೆದುಹೋಗಿದ್ದವರು. ಇಂದು ಮನದ ಭಾವಕ್ಕಾಗಿ ಅವಧಿಪೂರ್ವ ನಿವೃತ್ತಿ ಪಡೆದು (ಗಟ್ಟಿ ಅನ್ಯ ಆದಾಯ ಇಲ್ಲದಿದ್ದರೂ), ಆಂಶಕಾಲಿಕ ಅಧ್ಯಾಪನ ಮತ್ತು ಮುಖ್ಯವಾಗಿ ಯಕ್ಷಗಾನದ ಅಧ್ಯಯನ, ಲೇಖನ ನೆಚ್ಚಿ ನಿಂತ ಧೀಮಂತ. ನಂಬಿಯಾರ್ ಯಕ್ಷಗಾನದ ವರ್ಣವಿನ್ಯಾಸವನ್ನೇ ಲಕ್ಷ್ಯವಾಗಿಟ್ಟುಕೊಂಡು ಒಂದು ಗಂಟೆ ನಡೆಸಿದ ಸಂವಾದ ಶಿಬಿರಾರ್ಥಿಗಳಿಗೆ ಹೊಸಬೆಳಕನ್ನೇ ಚೆಲ್ಲಿತು.
ಯಕ್ಷಗಾನದ ಯಾವುದೇ ಕಮ್ಮಟ, ಗೋಷ್ಠಿ, ವಿಶಿಷ್ಟ ಪ್ರದರ್ಶನ ನಡೆಯುವಲ್ಲಿ ನೀವು ಅನಿವಾರ್ಯವಾಗಿ ಕಾಣುವ ವ್ಯಕ್ತಿ ಎರ್ಮಾಳಿನ ಮನೋಹರ ಕುಂದರ್. ಇವರು ಸದಾ (ತನ್ನದೇ ಸ್ಥಿರ) ಕ್ಯಾಮರಾದ ಹಿಂದೆ ಇದ್ದರೂ ಯಾವುದೇ ಜನ ಅಥವಾ ಸನ್ನಿವೇಶಕ್ಕೆ ಒಗ್ಗಿಕೊಳ್ಳುವಂತೆ ಅಪಾರ ಹಸನ್ಮುಖಿ, ಅದಮ್ಯ ಸ್ನೇಹಜೀವಿ. ಇವರ ಮುಖ್ಯ ಹವ್ಯಾಸ (ಅಂದರೆ, ಯಾವುದೇ ಅನುದಾನ ಮತ್ತು ನಿಶ್ಚಿತ ಪ್ರತಿಫಲ ನಿರೀಕ್ಷೆಯಿಲ್ಲದೇ ಸ್ವಂತ ಖರ್ಚಿನಲ್ಲಿ) ಯಕ್ಷಗಾನವನ್ನು ಅದರೆಲ್ಲಾ ಬಣ್ಣ, ವೈಭವಗಳೊಡನೆ ಛಾಯಾಚಿತ್ರಗಳಲ್ಲಿ ದಾಖಲಿಸುವುದು. ಇದರ ‘ಅತಿರೇಕ’ ಇವರೇ ಪ್ರಕಟಿಸಿರುವ ಒಂಬೈನೂರು ರೂಪಾಯಿ ಬೆಲೆಯ ಪುಸ್ತಕ – ಬಣ್ಣಗಳಲ್ಲಿ ಯಕ್ಷಗಾನ; ಅವರೇ ತೆಗೆದ ಮತ್ತು ಅವರಿಗೆ ಸಿಕ್ಕಿದ ವಿಶಿಷ್ಟ ಯಕ್ಷ-ವೇಷಗಳ, ವ್ಯಕ್ತಿಗಳ ಛಾಯಾ ಚಿತ್ರಗಳ ಬಲುದೊಡ್ಡ ಸಂಗ್ರಹ. (ಸಣ್ಣ ಮಟ್ಟದ ಅರ್ಥದಾರಿ, ಯಕ್ಷಗಾನ ಕುರಿತಂತೆ ಒಳ್ಳೆಯ ಸಂಪನ್ಮೂಲ ವ್ಯಕ್ತಿಯೂ ಹೌದು) ಮನೋಹರ ಕುಂದರ್ ವೃತ್ತಿ ಹವ್ಯಾಸಗಳನ್ನು ಸಂತುಲಿಸುವ ತನ್ನ ಅನುಭವದ ಪಾಠವನ್ನು ಸಣ್ಣ ಅವಧಿಯಲ್ಲಿ ಹಂಚಿಕೊಂಡದ್ದು ಶಿಬಿರಾರ್ಥಿಗಳಿಗೆ ಅಯಾಚಿತ ಬೋನಸ್!
ಕಾಶೀಯಾತ್ರೆ ಎಂದರೆ ವೈಯಕ್ತಿಕ ಜೀವನದ ಕೊನೆ ಎಂಬ ಭಾವ ಇದ್ದ ಕಾಲವೊಂದಿತ್ತು ಮತ್ತು ಅದಕ್ಕೆ ತಯಾರಿಯೂ ಹಾಗೇ ಇರುತ್ತಿತ್ತು. ಅಂಥ ನೂರೆಂಟು ಅನಿವಾರ್ಯ ಅಪರಿಚಿತ ನೆಲೆಗಳಿಗೆ ಹೋಗಿಬರುವಲ್ಲಿ ಮಾರ್ಗಕ್ರಮಣ, ಊಟ, ವಾಸ, ಉಪಚಾರಗಳೆಲ್ಲ ಬಿಡಿಬೀಸಾಗಿದ್ದವು. ಅವು ಸಂಘಟನೆಗೊಂಡು ಪ್ರಯಾಸ ಎನ್ನುವುದು ಪ್ರವಾಸದ ಸುಂದರ ಮುಖ ರೂಪುಗೊಳ್ಳುತ್ತಿದ್ದಂತೆ ಅರ್ಥಾತ್ ಅದೊಂದು ಉದ್ಯಮವೇ ಆಗುತ್ತಿದ್ದಂತೆ ಅದರ ವಿಕೃತ ಇತ್ತಲೆಯೂ (ಕರಾಳ ಎರಡನೇ ಮುಖ) ಕಾಣತೊಡಗಿತು. ಪ್ರಜೆಗಳ ಮೂಲ ಸೌಕರ್ಯದ (ದಾರಿ, ಬೆಳಕು, ನೀರು, ಭದ್ರತೆ, ಆರೋಗ್ಯ ಇತ್ಯಾದಿ) ಕುರಿತು ನಿಗಾ ವಹಿಸಬೇಕಾದ ಜನಪರ ಸರಕಾರಗಳು ವಹಿವಾಟು ಮೂಲವಾದ ಉದ್ದಿಮೆಯನ್ನೇ ಬಲಪಡಿಸುವಾಗ ಮಂಗಳೂರಿನಲ್ಲಿ ನಾವು ಕೆಲವರು – ಪ್ರವಾಸವನ್ನು ಸದಾ ಬಯಸುತ್ತಲೂ ಅವಕಾಶ ಸಿಕ್ಕಾಗೆಲ್ಲಾ ನಡೆಸುತ್ತಲೂ ಇರುವವರೇ ‘ಪ್ರವಾಸೋದ್ಯಮ’ವನ್ನು ವಿರೋಧಿಸಿ ಸಣ್ಣ ಮಟ್ಟದ ಚಳವಳಿ ನಡೆಸಿದ್ದೆವು. ಘೋಷಿತ ಪ್ರವಾಸೋದ್ಯಮ ದಿನದಂದು ಅದರ ವಿಕೃತಿಯ ಕುರಿತು ಬೀದಿ ಬದಿಯಲ್ಲಿ ಚಿತ್ರ ಪ್ರದರ್ಶನ ನಡೆಸಿದೆವು. ಲೇಖನಗಳನ್ನು ಪ್ರಕಟಿಸಿದೆವು. ಬೆಂಗಳೂರು, ಗೋವಾಗಳಿಂದಲೂ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ, ಒಂದು ದಿನದ ಕಮ್ಮಟವನ್ನೇ ನಡೆಸಿ, ಜನಜಾಗೃತಿ, ಸರಕಾರಕ್ಕೆ ಎಚ್ಚರಿಕೆ ನೀಡಿದೆವು. ಇವೆಲ್ಲ ನಡೆಸಿದ ‘ಯಾನ’ ಎಂಬ ಹೆಸರಿನ ನಮ್ಮ ಔಪಚಾರಿಕ ಸಂಘಟನೆಯ ನಿಜ ನಾಯಕ ನಟೇಶ ಉಳ್ಳಾಲ್. (ಆತ ಇಂದು ವೃತ್ತಿಪರ ಸಿನಿ-ಉದ್ಯಮಿಯಾದರೂ ಸಾರ್ವಜನಿಕ ಹಿತರಕ್ಷಣೆಯ ಹೋರಾಟದ ಮುಂಚೂಣಿಯಲ್ಲೇ ಇದ್ದಾರೆ. ನಟೇಶ್, ಹೆಂಡತಿ ವಿದ್ಯಾದಿನಕರ್ ಜೊತೆಗೆ ಎಸ್.ಇ.ಜ಼ೆಡ್ ವಿರುದ್ಧ ನಡೆಸಿರುವ ಹೋರಾಟ, ಆ ಕುರಿತು ನಟೇಶರ ಒಂದು ಲೇಖನವನ್ನೂ ಇಲ್ಲೇ ನನ್ನ ಕಡತಗಳ ಹಿಂದಿನ ಪುಟಗಳಲ್ಲಿ ನೋಡಬಹುದು.) ಆಳಂಗದಲ್ಲಿ, ಸಂವಹನ ಬಲದಲ್ಲಿ ನಟೇಶ್ ಕ್ಷೀಣವಾಗಿ ಕಾಣಿಸಿದರೂ ಶಿಬಿರಾರ್ಥಿಗಳಿಗೆ ಕೊಟ್ಟ ಸ್ಫೂರ್ತಿ ಬಲು ಬಲುಹಿನದು.
ಸೊಕ್ಕಿದ ತರಕಾರಿ, ಚಂದದ ಹಣ್ಣು, ಔಷಧೀಯ ಗುಣಗಳಿಗೇ ಹೆಸರಾದ ಹಲವು ಬಗೆಯ ಸೊಪ್ಪು, ಗೆಡ್ಡೆ, ದಟ್ಟಕೆನೆಗಟ್ಟುವ ಹಾಲು, ಬಣ್ಣದಲ್ಲಿ ಸಕ್ಕರೆಗೆ ಪರ್ಯಾಯವಾಗಿ ಚಿನ್ನದ ಗಟ್ಟಿಯಂತೇ ತೋರುವ ಬೆಲ್ಲ ಮುಂತಾದವುಗಳ ಮೂಲೋತ್ಪಾಟನೆ ಮಾಡುತ್ತಾ ಪ್ರತಿ ಖಂಡನೆಗೆ (ಮಂಡನೆಯಾಗಿ) ವೃತ್ತಿಪರವಾಗಿ ಸ್ವಂತ ಜಮೀನು, ಜಾನುವಾರುಗಳ ಮೂಲಕ ಸಾಧಿಸಿ ತೋರುತ್ತಾ ಮೈಸೂರಿನ ಸಮೀಪ ನೆಲೆಸಿರುವ ಎ.ಪಿ.ಚಂದ್ರಶೇಖರ ನನ್ನ ಹಿರಿಯ ಸೋದರಮಾವನ ಮಗ. (ಕಲಿಕೆಯಲ್ಲಿ ಇಂಜಿನಿಯರ್, ಪ್ರಾಥಮಿಕ ಸಾಧನೆಯಲ್ಲಿ ಮ್ಯಾಟಡೋರ್ ವಾಹನಗಳ ಕಾರ್ಯಾಗಾರದ ಮೇಲ್ವಿಚಾರಕ. ಇಲ್ಲೆ ನನ್ನ ಕಡತಗಳಲ್ಲಿ ಕುಮಾರಪರ್ವತ ಸೇರಿದಂತೆ ಹಲವು ಓಡಾಟಗಳಲ್ಲಿ ಇವನ ಭಾಗವಹಿಸುವಿಕೆ ನೀವು ಗಮನಿಸಬಹುದು.) ಸರಕಾರ ಪುರಸ್ಕಾರ ಸಹಿತ ಕೊಟ್ಟ ಬಿರುದಿನ ಅಗತ್ಯವಿಲ್ಲದೆಯೂ ನಿಸ್ಸಂದೇಹ ಕೃಷಿಪಂಡಿತ. ಇವನ ಸುಮಾರು ಹದಿಮೂರು ಎಕ್ರೆಯ ‘ಇಂದ್ರಪ್ರಸ್ಥ ಸಸ್ಯವಾಟೀ’ ಮತ್ತು ಅದರ ಸಾವಯವ ಉತ್ಪನ್ನಗಳ ಮಾರುಮುಖವಾಗಿ ಮೈಸೂರು ಪೇಟೆಯಲ್ಲೇ ಇರುವ ‘ನೇಸರ’ ಪ್ರಕೃತಿಪಾಠದಲ್ಲಿ ಇಂದು ಬಹುದೊಡ್ಡ ಆದರ್ಶಗಳು. ಚಂದ್ರ ಶಿಬಿರಾರ್ಥಿಗಳೊಡನೆ ನಡೆಸಿದ ಸಂವಾದ ತುಂಬಾ ಉಪಯುಕ್ತವಿತ್ತು ಎಂದು ಬೇರೇ ಹೇಳಬೇಕೇ!
ಪುತ್ತೂರಿನ ಸಂತ ಫಿಲೊಮಿನಾ ಕಾಲೇಜಿನಲ್ಲಿ ಬುಡ, ವಿವೇಕಾನಂದ ಕಾಲೇಜಿನಲ್ಲೂ ಹೂ ಹಣ್ಣು (ಭೌತ ವಿಜ್ಞಾನ ಅಧ್ಯಾಪಕ), ಪಿತ್ರಾರ್ಜಿತ ಸಂಟ್ಯಾರ್ ಕೃಷಿಭೂಮಿಯ ಆಪ್ತತೆ, ಅಜ್ಜ (ಎ.ಪಿ. ಸುಬ್ಬಯ್ಯ) ಅಪ್ಪರ (ಎ.ಪಿ. ಗೋವಿಂದಯ್ಯ) ಓದಿನ ಹುಚ್ಚು, ಅಮ್ಮನ (ಎ.ಪಿ. ಮಾಲತಿ) ಅಸಾಮಾನ್ಯ ಬರವಣಿಗೆ ಛಲದ ಮುಂದುವರಿಕೆಯ ಕೆಚ್ಚು, ಮಾವ ಜಿಟಿನಾರ (ನನ್ನಪ್ಪ) ಏಕಲವ್ಯ ಶಿಷ್ಯತ್ವ, ಬಂಧುಗಳೆಲ್ಲರ ‘ರಾಧಕ್ಕ’, ಅಪಾರ ಶಿಷ್ಯ ಸಂದೋಹದ ಏಪಿಸರ್ ಉರುಫ್ ರಾಧಾರಾಮಣ್ಣ (ಭಾರತದ ಪರಮಾಣು ವಿಭಾಗದ ವಕ್ತಾರರಾಗಿದ್ದ ರಾಜಾರಾಮಣ್ಣರಿಗೆ ಸಂವಾದಿಯೆನ್ನುವಂತೆ) ಯಾನೆ ಡಾ| ಎ.ಪಿ. ರಾಧಾಕೃಷ್ಣ (ನೋಡಿ: apkrishna.wordpress.com) ಸಾಮರ್ಥ್ಯದ ನೆಲೆಯಿಂದಲೇ ಪುಸ್ತಕದ ಓದಿನ ಬಗ್ಗೆ ಶಿಬಿರಾರ್ಥಿಗಳಿಗೆ ಪ್ರೇರಣೆ ನೀಡಿದ.
ಅಪ್ಪ ಇಟ್ಟ ಹೆಸರು ಕೇಳಿದರೆ ಪುರಾಣ ಪುಣ್ಯ ಪುರುಷ ದೇವರಾತ (ಕಲ್ಕೂರ), ಮಣ್ಣಿನ ವಾಸನೆಯಲ್ಲಿ ಸ್ವಂತಕ್ಕೆ ರೂಢಿಸಿಕೊಂಡ ಹೆಸರು ದೇವು ಹನೆಹಳ್ಳಿ. ಜೀವನದ ಓಟದಲ್ಲಿ ಪೂರ್ಣ ಆಚಾರಕ್ಕೆ ತರಲಾಗದ ಹತ್ತೆಂಟು ಕಟು ಆದರ್ಶಗಳು, ನೂರೆಂಟು ಒಗ್ಗದಿಕೆಗಳ ಹೇರು ಹೊತ್ತ ದೇವು ಒಂದು ತರದಲ್ಲಿ ಮಹಾಸಿನಿಕ (ಸ್ವಲ್ಪ ನಾವೆಲ್ಲರೂ ಹಾಗೇ), ಸ್ನೇಹಕ್ಕೆ ಜೀವ ಕೊಡುವ ಜೀವ. ಈತ ಬೆನ್ನ ಚೀಲದಲ್ಲಿ ಚಾರಣ, ಸಾಹಿತ್ಯ, ಪರಿಸರ, ಯಕ್ಷಗಾನ, ಜಾನಪದ ಮುಂತಾದ ತೀವ್ರ ಆಸಕ್ತಿಗಳ ಹೊರೆ ಹೊತ್ತು ಓದಿನ ಯೋಗ್ಯತೆಯಲ್ಲಿ ಸರಕಾರೀ ಕಾಲೇಜಿನ ಆಂಗ್ಲ ಅಧ್ಯಾಪಕತನದಲ್ಲೂ ಡೆಕ್ಕನ್ ಹೆರಾಲ್ಡಿನಲ್ಲಿ ವರದಿಗಾರಿಕೆಯಲ್ಲೂ ಸ್ವಲ್ಪ ಪಾದ ಸವೆಸಿದ್ದುಂಟು. ಆದರೆ ನೆಲೆಸಿದ್ದು ಆಕಾಶವಾಣಿ, ಮಂಗಳೂರಿನಲ್ಲಿ. (ಇದೇ ಈಗ ಸುದ್ದಿ ಬಂತು ದೇವು ದೂರದೂರೊಂದಕ್ಕೆ ವರ್ಗಾಯಿಸಲ್ಪಟ್ಟಿದ್ದಾರೆ, ಇವರ ಕುರಿತ ಹೆಚ್ಚಿನ ವಿವರಗಳಿಗೆ ಇಲ್ಲೇ ನನ್ನ ರಂಗನಾಥ ವಿಜಯದ ಕಥನ ನೋಡಿ) ಸಹಜವಾಗಿ ಬಹುಮಂದಿಗೆ ಚಿತ್ರಗೀತೆಗೋ ಭಜನಾಸಾಹಿತ್ಯಕ್ಕೋ ಪರ್ಯಾಯನಾಮವಾಗುಳಿದಿರುವ (ಅಂದು ಎಫ್.ಎಂ ಹಾವಳಿ ಸುರುವಾಗಿರಲಿಲ್ಲ!) ಆಕಾಶವಾಣಿಯ ಎಲ್ಲೂ ಪ್ರಸಾರವಾಗದ ಬಹುಮುಖೀ ಉಪಯುಕ್ತತೆ ಮತ್ತು ಸಾಧನೆಯ ಗೆಲುವು ಸೋಲುಗಳನ್ನು ಕೇವಲ ಶಿಬಿರಾರ್ಥಿಗಳ ಉಪಯೋಗಕ್ಕಾಗಿ ಬಿಡಿಸಿಟ್ಟರು.
ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದ್ದು ಅಂತಾರಲ್ಲ, ಅಂಥ ಹಿನ್ನೆಲೆ ಪುತ್ತೂರಿನ ನಿರೇನ್ ಜೈನರದ್ದು. ಮತ್ತೆ ಕಲಿಕೆ, ಒಲವು ಮತ್ತು ಮಂಗಳೂರಿನಲ್ಲಿ ತೊಡಗಿಕೊಂಡ ವೃತ್ತಿ ಪಕ್ಕಾ ಇಂಜಿನಿಯರ್ನದ್ದೇ (ಆರ್ಕಿಟೆಕ್ಟ್ ಅಥವಾ ವಾಸ್ತುಶಿಲ್ಪಿ) ಆದರೂ ಅದೇ ಮಟ್ಟದ ಪರಿಣತಿ ಮತ್ತು ಪೂರ್ಣಾವಧಿ ತೆತ್ತುಕೊಂಡ ಹವ್ಯಾಸ ತೀರಾ ಶ್ರಮಪೂರ್ಣ ಸಾಧನೆಯಾದ ವನ್ಯಸಂರಕ್ಷಣೆ. ಉಲ್ಲಾಸ ಕಾರಂತ, ಕೆ.ಎಂ ಚಿಣ್ಣಪ್ಪರ ಪಟ್ಟ ಶಿಷ್ಯತ್ವದಲ್ಲಿ ಈತ ಪಶ್ಚಿಮ ಘಟ್ಟದ ಈ ವಲಯದಲ್ಲಿ ತೊಡಗಿಕೊಂಡ ಪರಿ ಅನನ್ಯ. (ಹಾಗೇ ಇಂದು ನಿರೇನ್ ಸಾಧಿಸಿದ ಗುರಿ ಅಸಂಖ್ಯ.) ನಮ್ಮ ಶಿಬಿರ ಅಣಕದ ಅಭಯಾರಣ್ಯದಲ್ಲೇ ನಡೆದಿದ್ದರೂ ನಿಜ ವನ್ಯ ಪ್ರೇಮದ ಪ್ರಧಾನ ಧಾರೆಗೆ ನಿರೇನ್ ಮಾತುಗಳು ಉತ್ಸಾಹದ ಉಕ್ಕು ಬರಿಸಿತು.
ಲೋಕೋಪಯೋಗೀ ನೂರೆಂಟು ಸಂಶೋಧನೆಗಳ (ಗೃಹೋಪಯೋಗೀ ಕೆಲವು ಸಾಮಾನುಗಳ ಚಿತ್ರ ನೋಡಿ) ಗೆಳೆಯ ವೆಂಕಟ್ರಮಣ ಉಪಾಧ್ಯ (ಮೂರನೇ ಕ್ಲಾಸ್ ಪಾಸ್!) ಇಲ್ಲದೇ ನನ್ನ ಯಾವ ಹವ್ಯಾಸೀ ಚಟುವಟಿಕೆಗಳೂ ಕಳೆಗಟ್ಟಿದ್ದಿಲ್ಲ. ರಂಗನಾಥ ಸ್ತಂಭ, ಅಂಡಮಾನ್, ಸೈಕಲ್ ರ್ಯಾಲೀ ಮುಂತಾದ ಇಲ್ಲೇ ನನ್ನ ಹಳೆಕಡತಗಳಲ್ಲಿ ನಿಮಗೆ ಸಾಕಷ್ಟು ಪರಿಚಿತರೇ ಇರುವ ಈ ಪುಣ್ಯಾತ್ಮ ಔಪಚಾರಿಕ ಭಾಷಣಕ್ಕೆ ಹೇಸುತ್ತಾರೆ (ಅಯ್ಯೋ ನನ್ನಿಂದಾತ್ತಿಲ್ಲಪ್ಪಾ!). ಆದರೂ ನನ್ನ ಸ್ನೇಹದ ಕಟ್ಟುಪಾಡಿಗೆ ಮಣಿದು ಸಾಲಿಗ್ರಾಮದಿಂದ ಶಿಬಿರಕ್ಕೆ ಒಂದು ದಿನ ಬಂದಿದ್ದರು. ಅವರನ್ನು ದೇವು ಮತ್ತಿತರ ಕೆಲವು ಗೆಳೆಯರು ಸಾರ್ವಜನಿಕವಾಗಿ ಮಾತಿಗೆ ಎಳೆದು ಒಂದು ಅವಧಿ ತುಂಬಿದ್ದು ಯಾರಿಗೂ ವ್ಯರ್ಥವೆನ್ನಿಸಲಿಲ್ಲ.
ಕಿನ್ಯದ ಸಮೀರ ರಾವ್, ಅವರಪ್ಪ ವಿಠಲ ರಾಯರ ಹಾಗೇ ಓದು, ವೃತ್ತಿ, ಹವ್ಯಾಸ, ಜೀವನವನ್ನೂ ಪ್ರಾಯೋಗಿಕ ಉಪಯುಕ್ತತೆಯ ಒರೆಗೆ ಹಚ್ಚದೇ ಮುಂದುವರಿದದ್ದೇ ಇಲ್ಲ. ಸಹಜವಾಗಿ ಔಪಚಾರಿಕ ವಿದ್ಯಾಭ್ಯಾಸ ನಿರಾಕರಿಸಿ (ದಕ್ಕದ ದಡ್ಡನೇನೂ ಅಲ್ಲ), ಪಾಲಿಟೆಕ್ನಿಕ್ನಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಗಳಿಸಿ ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಸ್ವಲ್ಪ ಕಾಲ ತೊಡಗಿಕೊಂಡಿದ್ದರು. ಮತ್ತದರ ಅನುಭವ ಲಾಭವನ್ನೂ ಸೇರಿಸಿಕೊಂಡು ಕೃಷಿಕನಾಗಿ ಮರಳಿದ್ದರು ಮಣ್ಣಿಗೆ. ಜೊತೆಜೊತೆಗೆ ತನ್ನ ಕಲಿಕಾ ಬಲದಲ್ಲಿ ಅಸಂಖ್ಯ ಕೃಷಿ ಸಲಕರಣೆಗಳ ವಿನ್ಯಾಸದಲ್ಲೂ ತೊಡಗಿ, ಕಡಿಮೆ ಶ್ರಮ ಮತ್ತು ವೆಚ್ಚದೊಡನೆ ಪ್ರಕೃತಿಯ ಅನುಸಂಧಾನಕ್ಕಿಳಿದು ತೃಪ್ತರಾಗಿದ್ದರು (ಗಮನಿಸಿ – ಶ್ರೀಮಂತರಾದದ್ದಲ್ಲ). (ಅಭಯಾರಣ್ಯದ ನಮ್ಮ ಹೊರೆ ಸಾಗಿಸುವ ಕೆಲಸದ ಕೈಗಾಡಿ, ಅಲ್ಲೂ ಮಂಗಳೂರಿನ ಮನೆಯಲ್ಲೂ ತೆಂಗಿನ ಮರ ಹತ್ತುವ ಅಗತ್ಯಕ್ಕೆ ಒದಗುವ ಯಂತ್ರ, ವಿವಿಧ ಗಾತ್ರದ ಮರದ ಹಣ್ಣುಗಳಿಗೆ ಒದಗುವ ಬಲೆ ಸಹಿತ ಕೊಕ್ಕೆಗಳು ಸಮೀರನ ಕಮ್ಮಟದ ಕಿಡಿಗಳು) ಸಮೀರನೊಡನೆ ಪ್ರಶ್ನೋತ್ತರಗಳೂ ಶಿಬಿರಾರ್ಥಿಗಳಿಗೆ ಅಪೂರ್ವ ಅನುಭವವೇ ಸರಿ.
ಶಿಬಿರದ ತಯಾರಿಯ ಕಾಲದಲ್ಲಿ ನಾನು ಅಸಂಖ್ಯ ಸಂಪನ್ಮೂಲ ವ್ಯಕ್ತಿಗಳಿಗೆ ಪತ್ರ ರವಾನಿಸಿದ್ದಿತ್ತು. ಅದಕ್ಕೆ ಒಲಿದವರನ್ನು ದಿನ ಗಂಟೆ ಮೊದಲೇ ತಿಳಿಸಿ, ಮುಖ್ಯ ವಿಷಯಗಳಲ್ಲಿ ಕೊರತೆ ಬಾರದಂತೆ, ಸಮಯದಲ್ಲಿ ಒಂದು ಮಿನಿಟೂ ವ್ಯರ್ಥವಾಗದಂತೆ ಹೊಂದಿಸಿಕೊಂಡಿದ್ದೆ. ಆಗ ನಾನು ಸುದ್ದಿಯ ಮಟ್ಟಕ್ಕೆ ವಿರಾಜಪೇಟೆಯ ಡಾ| ನರಸಿಂಹನ್ (ಇಲ್ಲೇ ಹಳೆಕಡತ ನೋಡಿ: ಕೀಪಿಟಪ್ ನರಸಿಂಹನ್) ಅವರಿಗೂ ಪತ್ರ ಕಳಿಸಿದ್ದು ನಿಜವಾದರೂ ಆ ದೂರ ಮತ್ತು ಸೇರಿಕೊಂಡ ಜಡಿ ಮಳೆಯ ವಾತಾವರಣದಲ್ಲಿ (ಇಲ್ಲದ) ದೇವರಾಣೆಗೂ ಅವರು ಬಂದಾರೆಂದು ಊಹಿಸಿರಲಿಲ್ಲ. ಆದರೆ ಪುಣ್ಯಾತ್ಮ ಸ್ವಂತ ಕಾರಿನಲ್ಲಿ ಒಂದಷ್ಟು ಹೊರೆ ಜಮಾಯಿಸಿ, ಹೆಂಡತಿ ಮತ್ತು ಮಗಳಂದಿರಿಬ್ಬರನ್ನೂ ಸೇರಿಸಿಕೊಂಡು ಶನಿವಾರ ಸಂಜೆಗೆ ಪುತ್ತೂರಿಗೆ ಬಂದು ಗೆಳೆಯರಲ್ಲೆಲ್ಲೋ ಉಳಿದುಕೊಂಡರು. ಮರು ಬೆಳಿಗ್ಗೆ ಬಿಡದ ಬಿರುಮಳೆಯಲ್ಲೂ ಅಭಯಾರಣ್ಯದಲ್ಲಿ ನಿಜವಾದ ಅತಿಥಿಯಾಗಿ (ಹೇಳದೆ ಕೇಳದೆ ಬರುವವರು) ಕಾಣಿಸಿಕೊಂಡ ನರಸಿಂಹನ್ ತನ್ನ ಹೆಸರನ್ನು ಅನ್ವರ್ಥಗೊಳಿಸಿಕೊಂಡರೆಂದೇ ಹೇಳಬೇಕು (ಒಲಿದವನಿಗೆ ಕಂಬ ಒಡೆದು ಮೈದೋರಿದ ದೇವ ನರಸಿಂಹನಲ್ಲವೇ?). ‘ಅಭಯಾರಣ್ಯ’ಕ್ಕಾಗಿ ತಾವೇ ಬೆಳೆಸಿ, ತಂದಿದ್ದ ನಾಲ್ಕು ವಿಶಿಷ್ಟ ಸಸಿಗಳನ್ನು ಕೊಟ್ಟರು. ತಾನೇ ಕೈಯಾರ ಬಿಡಿಸಿ, ಬಣ್ಣದುಂಬಿದ್ದ, ದೊಡ್ಡ ಗಾತ್ರದ ಇಪ್ಪತ್ತು ಮೂವತ್ತಕ್ಕೂ ಮಿಕ್ಕ ವನ್ಯಜೀವಿಗಳ ಚಿತ್ರಗಳನ್ನು ಊಟದ ಬಿಡು ಸಮಯದಲ್ಲಿ ಶಿಬಿರಾರ್ಥಿಗಳು ನೋಡಲೆಂದು ಜಗುಲಿಯಲ್ಲಿ ಪ್ರದರ್ಶಿಸಿದರು. ಅಭಯಾರಣ್ಯದ ಅಕ್ಷಾಂಶ ರೇಖಾಂಶ ಗ್ರಹಿಸಿ ಆ ವಲಯ ಮತ್ತು ಆ ಕಾಲದ ರಾತ್ರಿಯಾಕಾಶದ ಖಚಿತ ನಕ್ಷೆಯನ್ನು ಅಂತರ್ಜಾಲದಿಂದ ಸಂಗ್ರಹಿಸಿ, ಎಲ್ಲಾ ಶಿಬಿರಾರ್ಥಿಗಳಿಗೆ ಒದಗುವಂತೆ ಪ್ರತಿ ಮಾಡಿಸಿಯೂ ತಂದದ್ದನ್ನು ಉಚಿತವಾಗಿ ಹಂಚಿದರು. ಪಕ್ಷಿವೀಕ್ಷಣೆಯ ಯೋಜಿತ ವ್ಯಕ್ತಿಗೆ (ಕೃಶಿ) ಅವಮಾನವಾಗದಂತೆ, ಬೇಕಿದ್ದರೆ ಪೂರಕ ಬಲವೂಡುವಂತೆ, ಎಡೆ ಸಮಯ ಬಳಸಿ ಪಕ್ಷಿವೀಕ್ಷಣೆಯ ಹಲವು ಕಿವಿಮಾತುಗಳನ್ನು ರಮ್ಯವಾಗಿ ಹೇಳಿದರು. ಊಟದ ವೇಳೆ ಕರ್ನಾಟಕ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವಿದ್ದ ಅವರ ಮಕ್ಕಳ ಗಾನಸುಧೆ ಮಳೆರಾಯ ಹಿಡಿದ ಶ್ರುತಿಗೆ ಹೊಂದಿ ಹರಿದದ್ದಂತೂ ಎಲ್ಲರಲ್ಲೂ ಆನಂದದ ಸುಧೆಯನ್ನೇ ಹರಿಸಿತು. ಬಂದಷ್ಟೇ ಅನೌಪಚಾರಿಕವಾಗಿ, ಎಲ್ಲರ ಬಹುಕಾಲದ ಬಂಧುವಿನಂತೆ ವಿದಾಯ ಹೇಳಿದರು.
ಶಿಬಿರಾರ್ಥಿಗಳ ಸಂಬಂಧಿಕರು, ಕುತೂಹಲೀ ಮಿತ್ರ ಬಳಗದ ಭೇಟಿಯಂತೂ ಅವಿರತ ನಡೆದೇ ಇತ್ತು. ಅದು ಎಲ್ಲೂ ನಮ್ಮ ಕಲಾಪಗಳಿಗೆ, ವ್ಯವಸ್ಥೆಗಳಿಗೆ ಹೊರೆಯಾಗಲೂ ಇಲ್ಲ. ಶಿಬಿರ ಘೋಷಣೆಯ ನನ್ನ ಮೊದಲ ಪತ್ರಿಕಾ ಪ್ರಕಟಣೆ ನೋಡಿದ ಕೂಡಲೇ ನಿರ್ಮಲಾ ಟ್ರಾವೆಲ್ಸಿನ ಮಾಲಿಕ, ಅತ್ಯುತ್ಸಾಹೀ ಚೊಲ್ಪಾಡೀ ಉಪೇಂದ್ರ ಕಾಮತ್ ದೂರವಾಣಿಸಿ, “ಅಶೋಕರೇ ಶಿಬಿರಕ್ಕೆ ನಾನೇನಾದರೂ ಕೊಡಬೇಕಲ್ಲಾ” ಅಂದದ್ದನ್ನು ಸವಿನಯ ನಿರಾಕರಿಸಿದ್ದೆ. ಆದರೆ ಪುಣ್ಯಾತ್ಮ ಶನಿವಾರ ಬೆಳಿಗ್ಗೆ, ಅಷ್ಟು ದೂರ ಬಂದು, ಕಾಡ್ಮನೆಯ ಅಂಗಳದಲ್ಲೇ ನಿಂತು, ದೊಡ್ಡ ಪ್ಲ್ಯಾಸ್ಟಿಕ್ ಚೀಲ ತುಂಬಾ ಬಗೆಬಗೆಯ ತಿನಿಸುಗಳ ಹೊರೆ ಕೊಟ್ಟು “ಸಭೆ ಎದುರು ನಾನು ಬರುವುದಿಲ್ಲ. ಮತ್ತೆ ನನ್ನ/ನಮ್ಮ ಹೆಸರೂ ಹೇಳದೇ ಇಷ್ಟನ್ನು ಒಪ್ಪಿಸಿಕೊಳ್ಳಿ” ಎಂದದ್ದನ್ನು ಇಲ್ಲಾದರೂ ಹೃದಯ ತುಂಬಿ ಸ್ಮರಿಸಿಕೊಳ್ಳದಿರಲಾರೆ.
ಮಾಲೆಕಾರರು ಎಷ್ಟಿದ್ದರೇನು, ಮುಡಿದು ಸೊಗಯಿಸುವವರಿಲ್ಲದಿದ್ದರೆ! ನಾವು ಮೊದಲೇ ಹೇಳಿಕೊಂಡಂತೆ ಅಧಿಕೃತ ಕರೆಯನ್ನು ಇಪ್ಪತ್ತೈದಕ್ಕೇ ಗಟ್ಟಿ ಮಾಡಿದ್ದೆವು (ಇಬ್ಬರು ಮಾತ್ರ ಕಾರಣವನ್ನೂ ಕೊಡದೆ ಗೈರುಹಾಜರಾದರು) ಬಂದು ಒಂದು ಗೊಣಗು, ಸೋಮಾರಿತನದ ಪಿಡುಗು ಇಲ್ಲದೆ ಅನುಭವಿಸಿ, ಚಂದಗಾಣಿಸಿದ ಯುವ ಮಿತ್ರರ ವಿವರಗಳಿಗಿಳಿಯದೇ ಕೇವಲ ಹೆಸರಿಸುತ್ತೇನೆ: ೧. ಬಂಟ್ವಾಳದ ಮಹೇಶ ಮಯ್ಯ, ೨. ಮಾಧುರಿ ರಾವ್ ಮತ್ತು ೩. ನಿಶಾಂತ್, ೪. ಮಂಗಳೂರಿನ ಪರಮೇಶ್ವರ, ೫. ಅನಿಲ್ ಪಿಂಟೋ, ೬. ವಿಘ್ನೇಶ್, ೭. ಸಂತೋಷ ಕಾರಂತ ಮತ್ತು ೮. ವಸಂತ ಕುಮಾರ್, ೯. ಸುಬ್ರಹ್ಮಣ್ಯದ ಗಣೇಶಭಟ್ ಕೆ, ೧೦. ಕಾಪುವಿನ ಶ್ರುತಿ ಶೆಟ್ಟಿ, ೧೧. ನರಿಂಗಾನದ ದಿವ್ಯಾ ಡಿ, ೧೨. ಬೈಂದೂರಿನ ಬಾಲಕೃಷ್ಣ ಡಿ, ೧೩. ಮೂಲ್ಕಿಯ ಪವಿತ್ರಾ ಕೆ, ೧೪. ಬ್ರಹ್ಮಾವರದ ಮೈತ್ರೇಯಿ, ೧೬. ಪುತ್ತೂರಿನ ಮನೋಹರ ಕುಮಾರ್ ಮತ್ತು ೧೭. ರೋಹಿತ್ ಪಿ, ೧೮. ಮಂಗಲ್ಪಾಡಿಯ ಚಂದನ್ ಕೆ, ೧೯. ಕುಂದಾಪುರದ ನಾಗರಾಜ ಡಿ.ಎನ್ ಮತ್ತು ೨೦. ಗುರುರಾಜ ರಾವ್ ಜೆ, ೨೧. ಉಡುಪಿಯ ಅನುಪಮಾ ಶೆಣೈ, ೨೨. ಬೆಳ್ತಂಗಡಿಯ ಕ್ಲೋಡಿ ರಾಯನ್ ಸೆರಾವೋ, ಕೊನೆಯದಾಗಿ ೨೩. ಅಡ್ಯನಡ್ಕದ ವಿದ್ಯಾರಶ್ಮಿ.
ಕೆಲವು ಪ್ರೌಢಶಾಲಾ ಅನುತ್ತೀರ್ಣ ವಿದ್ಯಾರ್ಥಿಗಳು ಒಂದೇ ‘ಮಾದರಿ ಪತ್ರ’ದ ನಕಲು ಮಾಡಿ ಸಲ್ಲಿಸಿದ ಅರ್ಜಿಗಳು, ಪಾಲಿಟೆಕ್ನಿಕ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಮನವಿಗಳು, ಪ್ರಾಂii ನಲ್ವತ್ತು ಮೀರಿದ ಕೃಷಿಕ, ಅನ್ಯ ವೃತ್ತಿ ನಿರತ ಸಾಹಿತಿ ಮುಂತಾದವರು ತಮ್ಮನ್ನೂ ಶಿಬಿರಕ್ಕೆ ಸೇರಿಸಿಕೊಳ್ಳಲು ಬರೆದುಕೊಂಡ ಪತ್ರಗಳನ್ನು ನಮ್ಮ ಲಕ್ಷ್ಯದ ಮಿತಿಯರಿತು ನಿರಾಕರಿಸಬೇಕಾಯ್ತು. ಮತ್ತೆ ನಾವು ಮನೆಮಂದಿ ಮತ್ತು ಆಗಿಂದಾಗ್ಗೆ ಬರುತ್ತಿದ್ದ ಕುತೂಹಲಿಗಳೂ ಸೇರಿ, ಎಲ್ಲ ಕಲಾಪಗಳೂ ‘ತುಂಬಿದ ಗೃಹ’ಗಳಲ್ಲೇ ನಡೆಯಿತೆನ್ನಬೇಕು! ಅದರ ಯಶಸ್ಸಿನ ಕುರಿತು ವಾರ ಬಿಟ್ಟು ಇ-ಟೀವಿಯ ಜಿ.ಎನ್ ಮೋಹನ್ ಬರೆದ ವಿ-ಪತ್ರ ಒಂದು ನೋಡಿ: Satya & me are overwhelmed by the enthusiastic reaction form the participants. They were so attentive and as one of the great theatre critic points out were like a beggar’s bag.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲು ಕೇಳಿಕೊಂಡಿದ್ದವರಲ್ಲಿ ನಿವೃತ್ತ ಹಿರಿಯ ಅರಣ್ಯಾಧಿಕಾರಿ ಅಜ್ಜಂಪುರ ಕೃಷ್ಣಸ್ವಾಮಿ, ರಾಜ್ಯ ಪೊಲಿಸ್ ವರಿಷ್ಠ ಟಿ. ಮಡಿಯಾಲ್, ಶತಾವಧಾನಿ ಗಣೇಶ್ ಮುಂತಾದವರು ಶಿಬಿರದ ಔಚಿತ್ಯವನ್ನು ಶ್ಲಾಘಿಸಿ, ಭಾಗವಹಿಸಲಾಗದ ತಮ್ಮ ಅಸಹಾಯಕತೆಗೆ ಪತ್ರ ಮುಖೇನ ವಿಷಾದಿಸಿದ್ದರು. ಶಿಬಿರದ ಮೊದಲಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಂದು ಪಿಡುಗಾದ ಔಪಚಾರಿಕತೆಯನ್ನು ನಿರಾಕರಿಸಿದ್ದು ಹೇಳಿದ್ದೇನೆ. [ನಿರ್ವಾಹಕನೆಂಬ ‘ಸಂವಿಧಾನೇತರ ಮಹಾಶಕ್ತಿ’ ಕೆಲವರನ್ನು ಕೆಲವರ ಮೂಲಕ ವೇದಿಕೆಗೆ ಆಹ್ವಾನಿಸುವುದು (ದೇವತೆಗಳನ್ನು ಮಂತ್ರಪುರಸ್ಸರವಾಗಿ ಯಜ್ಞಮಂಟಪಕ್ಕೆ ಆವಾಹಿಸುವುದು?), ಸ್ವಾಗತ ಮತ್ತು ಹತ್ತು ಮಂದಿಯ ಮೂಲಕ ವೇದಿಕೆ ಅಲಂಕರಿಸಿದ ಎಲ್ಲರಿಗೂ ಸಂಘಟಕರ ಶಕ್ತಿಯಾನುಸಾರ ಹೂವಿನೆಸಳಿನಿಂದ ಹಿಡಿದು ಹೊರಲಾಗದ ಹಾರದವರೆಗೆ ಸಾಂಕೇತಿಕ ಗೌರವಾರ್ಪಣೆ, ದೀಪೋಜ್ವಲನ, ಪ್ರಾಸ್ತಾವಿಕ, ಉದ್ಘಾಟನೆ ಎಂಬ ಮರುದಿನದ ಪತ್ರಿಕೆಗಳಲ್ಲಷ್ಟೇ ಕಾಣಸಿಗುವ ಮಹಾಚೋದ್ಯ (ಸಭಿಕರಿಗೆ ಮಾಧ್ಯಮಿಕರ ಪೃಷ್ಟದರ್ಶನ), ಇತ್ಯಾದಿ ಒಂದೂ ನಡೆಸಲಿಲ್ಲ] ಕೊನೆಯಲ್ಲೂ ಉದ್ದೇಶಪೂರ್ವಕವಾಗಿ ಸಮಾರೋಪ ಸಭೆ ಹಾಗಿರಲಿ, ಔಪಚಾರಿಕ ವಂದನಾರ್ಪಣೆಯ ನಾಲ್ಕು ಮಾತುಗಳಿಗೂ ಅವಕಾಶ ಉಳಿಸಿರಲಿಲ್ಲ. ನಡೆಸಿದ್ದರೆ ಸನ್ನಿವೇಶದ ಒತ್ತಡದಲ್ಲಿ ಕೆಲವಾದರೂ ಶಿಬಿರಾರ್ಥಿಗಳು ಸಂಘಟಕರ ಕುರಿತು ಹೊಗಳು ಸಾಹಿತ್ಯ ರಚಿಸುವ ಅಪಾಯವಿತ್ತು. ವಾಸ್ತವದಲ್ಲಿ ಕೆಲವರು ಅದಕ್ಕೊಂದು ಅವಕಾಶ ಕಲ್ಪಿಸಬೇಕೆಂದು ಕೊಟ್ಟ ಸೂಚನೆಯನ್ನು ನಾನು ಮೊಳಕೆಯಲ್ಲೇ ಚಿವುಟಿದ್ದೆ. ಆದರೂ ಸ್ವಸ್ಥಾನಕ್ಕೆ ಮರಳಿದ ಮೇಲೆ ಕೆಲವು ಶಿಬಿರ ಭಾಗಿಗಳು ಬರೆದ ಪತ್ರಗಳು (ಮೈತ್ರೇಯಿ, ಸಂತೋಷ ಕಾರಂತ, ವಸಂತ ಕುಮಾರ್, ಬಿ. ಬಾಲಕೃಷ್ಣ, ಮಾಧುರಿ ರಾವ್, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಂತೋಷಪಟ್ಟವರಲ್ಲಿ ಜಿ.ಎನ್. ಮೋಹನ್ ದಂಪತಿ, ಡಾ| ನರಸಿಂಹನ್ ಕುಟುಂಬ) ನಮಗೆ ಸಂದ ಸಮ್ಮಾನ. ಅವರು ಮುಂದೆ ಜೀವನರಂಗದಲ್ಲಿ ವಿಕಸಿಸಿ ಎಂದೆಂದೋ ಸಿಕ್ಕಾಗ ಸ್ಮರಿಸಿಕೊಳ್ಳುವ ಪರಿ ನಿಜ ಧನ್ಯತೆಯನ್ನೂ ತರುತ್ತಿದೆ.
ಶಿಬಿರಾರ್ಥಿಗಳಿಗೆ ಜಿಟಿ ನಾರಾಯಣ ರಾವ್ (ನನ್ನಪ್ಪ) ಹೆಸರು ಬಹುಪರಿಚಿತವೇನೂ ಇದ್ದಿರಲಾರದು. ಆದರೆ ಸಂಪನ್ಮೂಲ ವ್ಯಕ್ತಿಗಳಾಗಿ ಬಂದ (ಮತ್ತು ಬಾರದ) ಅಷ್ಟೂ ಮಂದಿಗೆ ಆ ಹೆಸರು ಬಹಳ ದೊಡ್ಡ ಆಕರ್ಷಣೆಯಾಗಿದ್ದದ್ದಂತೂ ಸ್ಪಷ್ಟವಿತ್ತು. ಜಿ.ಟಿ.ನಾ (೧೯೨೬-೨೦೦೮) ಜೀವಿತ ಕಾಲದಲ್ಲಿ ಮಗನಾಗಿ ನನಗೆ ಹೇಳಲು ಸಂಕೋಚವೂ ಮತ್ತೆ ಅವರಿಂದ ಸ್ಪಷ್ಟ ನಿರುತ್ತೇಜನವೂ ಬರಬಹುದಾಗಿದ್ದ ಕೆಲವು ಮಾತುಗಳನ್ನು, ಯಾವುದೇ ಅತಿಶಯೋಕ್ತಿ ಇಲ್ಲದೆ ಈಗ ಇಲ್ಲಿ ದಾಖಲಿಸುವುದು ಅವಶ್ಯ ಎಂದು ಭಾವಿಸುತ್ತೇನೆ. ತಂದೆಗೆ ಅಷ್ಟೂ ಜನರೊಡನೆ ಮತ್ತಷ್ಟೂ ವಿಷಯಗಳೊಡನೆ ಸಹಜವಾಗಿ ಮತ್ತು ಅರ್ಥಪೂರ್ಣವಾಗಿ ಸಂವಾದಿಸಬಲ್ಲ (ಗಮನಿಸಿ, ಎಲ್ಲದರಲ್ಲು ಪರಿಣತಿ ಎಂದಲ್ಲ) ಸ್ನೇಹಾಚಾರ, ಜ್ಞಾನ ಮತ್ತು ಅನುಭವ ಇತ್ತು. ಹಾಗಾಗಿ ಸಂಘಟನಾ ವಿಚಾರಗಳಲ್ಲಷ್ಟೇ ನಾವು (ಮನೆಯವರು) ತೊಡಗಿಕೊಂಡು ಕಲಾಪಗಳನ್ನು ನಿರ್ವಹಣೆಯನ್ನು ಪೂರ್ತಿ ಅವರಿಗೆ ಬಿಟ್ಟು ನಿಶ್ಚಿಂತೆಯಿಂದಿದ್ದೆವು. ಅವರು (ತಾಯಿಯೊಡನೆ) ಹಳೇ ಶಿಸ್ತಿನಂತೆ ತಮ್ಮೆಲ್ಲಾ ಪ್ರಾತಃ ವಿಧಿಗಳನ್ನು ಎಡೆಂಬಳೆ ಮನೆಯಲ್ಲೇ ಮುಗಿಸಿ, ಒಳಾಂಗಣದ ನಮ್ಮ ಪ್ರಥಮ ಕಲಾಪಕ್ಕೆ ಮುಂಚಿತವಾಗಿ ಕಾಡ್ಮನೆಯಲ್ಲಿ ಹಾಜರಿರುತ್ತಿದ್ದರು. ಮತ್ತೆ ದಿನದ ಕೊನೆಯ ಕಲಾಪದವರೆಗೂ (ನಕ್ಷತ್ರವೀಕ್ಷಣೆಯಂದು ರಾತ್ರಿ ಹನ್ನೊಂದು ಗಂಟೆ) ತರುಣರೊಡನೆ ನೆಲದಲ್ಲೇ ಬೈಠಕ್ ಹಾಕಿ, ಮಾತು, ಊಟ, ವಿಶ್ರಾಂತಿಗಳನ್ನು ಸಮಾನವಾಗಿ ಅನುಭವಿಸಿದರು. ತರುಣರಿಗೆ ‘ಚಳಿ’ ಕಾಡದಂತೆ ಚುರುಕಾಯಿಸುತ್ತಿದ್ದರು, ಹೋಮರ್ ತೂಕಡಿಸಿದಲ್ಲಿ (even Homer nods!) ಎಚ್ಚರಿಸುತ್ತಿದ್ದರು. ಅರೆಕೊರೆಗಳನ್ನು ತುಂಬಿಕೊಡುವಲ್ಲಿ ಇವರ ಸವಿನಯ ಪ್ರಶ್ನೆಗಳು ನುರಿತ ಕರಣೆಯಾದರೆ, ರಸಸ್ಯಂದಿಸಿದಲ್ಲಿ ಇವರ ಮುಕ್ತ ಉದ್ಗಾರಗಳು ಕಲಾಪ ನಡೆಸುವವರಿಗೆ ಮತ್ತೆ ಮೈಲಿನ ಓಟಕ್ಕೆ ಕುಮ್ಮಕ್ಕು. ಅಧ್ಯಾಪಕ, ಎನ್ಸಿಸಿ ಅಧಿಕಾರಿ, ನಕ್ಷತ್ರ ವೀಕ್ಷಕ, (ಸಹಕಾರಿ ಸಂಘದ ಅನುಭವದಲ್ಲಿ) ನುರಿತ ವ್ಯಾಪಾರಿ, ಬರಹಗಾರ, ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಬಹುದೊಡ್ಡ ವಕ್ತಾರ, ಆಡಿದಂತೇ ನಡೆಯಲ್ಲೂ ಆದರ್ಶಗಳ ಪ್ರತಿಪಾದಕ, ಸಂಪಾದಕ, ಪತ್ರಕರ್ತ, ಸಮಾಜಸೇವಕ, ಸಂಗೀತಲೋಲ, ಕಲಾರಸಿಕ, ಸರಸ ಸಂಭಾಷಣಾಪಟು ಎಂಬಿತ್ಯಾದಿ ಇವರ ಯೋಗ್ಯತೆಗಳು ತೀರಾ ಅಗತ್ಯ ಬಂದಲ್ಲದೆ ಯಾವುದೇ ಕಲಾಪದ ಮೇಲೂ ಮಿನಿಟೊಂದೋ ಎರಡಕ್ಕಿಂತ ಹೆಚ್ಚು ಸಮಯ ತಿಂದದ್ದಿಲ್ಲ. (ಮುದಿಭ್ರಮೆ ಅಥವಾ ಮಾತಿನ ಚಪಲದಲ್ಲಿ ‘ತನ್ನ ಬಣ್ಣಿಸಲಿಲ್ಲ, ಇತರರ ಸಣ್ಣ ಮಾಡಲಿಲ್ಲ.’ ಜೀವನರಂಗದಲ್ಲೂ ತಂದೆ ಎಂದೂ ಹಣಕ್ಕಾಗಿ, ಪರೋಕ್ಷ ಲಾಭಕ್ಕಾಗಿ, ಪ್ರಚಾರ, ಪ್ರಶಸ್ತಿ, ಪದವಿ ಇತ್ಯಾದಿಗಳಿಗಾಗಿ ಮೂಗು ತೂರಿದ್ದೇ ಇಲ್ಲ.)
ತಂದೆಯ ವಿಷಯ ಸಂಪತ್ತಿನಲ್ಲಿ ಕೆಲವನ್ನಾದರೂ ಎಡೆ ಸಮಯಗಳಲ್ಲಿ ಶಿಬಿರಾರ್ಥಿಗಳಿಗೆ ಚೂರೂಪಾರು ದಕ್ಕಿಸಬೇಕೆಂದು ನಾನೇನೋ ಅಂದಾಜಿಸಿದ್ದೆ. ಆದರೆ ನಾನು ಬಯಸಿ ಹೊರಗಿನಿಂದ ಬಂದವರಿಗೇ ಸಮಯ ಹೊಂದಿಸುವಲ್ಲಿ ಸೋತು, ಎಚ್ಚರದ ಹದಿನೆಂಟು ಗಂಟೆಗಳು ಮಿನಿಟುಗಳಂತೆ ಕಳೆದುಹೋಗಿದ್ದವು. ಕನಿಷ್ಠ ಎರಡು ರಾತ್ರಿಗಳ ನಕ್ಷತ್ರ ವೀಕ್ಷಣೆಯಾದರೂ ತಂದೆಯ ಮೂಲಕ ಶಿಬಿರಾರ್ಥಿಗಳಿಗೆ ದಕ್ಕೀತು ಎಂದಾಶಿಸಿದ್ದೆ, ಮಳೆ ಬಿಡಲಿಲ್ಲ. ಮಳೆ ಬಿಟ್ಟ ಒಂದು ರಾತ್ರಿ ಸಮೀಪದ ಪದವಿನ ತೆರೆಮೈಗೆ ಎಲ್ಲರ ಸವಾರಿ ಹೋಗಿತ್ತು. ಹಾಗೆ ಹೊರಡುವ ಮೊದಲೇ “ಗುಡ್ಡೆಯ ಹುಲ್ಲು, ಕಲ್ಲುಗಳ ಅಸಮ ನೆಲದಲ್ಲಿ ಕತ್ತೆತ್ತಿ ಆಕಾಶ ನೋಡುತ್ತ ಅತ್ತಿತ್ತ ಓಡಾಡುವ ಪ್ರಾಯ ನನ್ನದಲ್ಲ” ಎಂದು ತಂದೆ ಸೂಚನೆ ಕೊಟ್ಟಿದ್ದರು. ನಮ್ಮ ಟಾರ್ಚ್ಲೈಟ್ ಪೆರೇಡಿನಲ್ಲಿ ನಡೆದೇ ಬಂದ ಅವರಿಗೆ ಕುಳಿತು ವಿವರಿಸಲು ಒಂದು ಕುರ್ಚಿಯನ್ನೂ ಹೊತ್ತೊಯ್ದಿದ್ದೆವು. ಆದರೆ ಮೋಡದ ಮುಸುಕು ಹರಿಯದೇ ದಿನದ ಬಿಡು ಸಮಯಗಳಲ್ಲಿ ನಡೆಯುತ್ತಿದ್ದ ವೈಚಾರಿಕ ಮಾತುಗಳ ಮುಂದುವರಿಕೆಯಷ್ಟೇ ಸಾಧ್ಯವಾದದ್ದು ಸಣ್ಣ ಬೇಸರದ ಸಂಗತಿಯಾಗಿ ಉಳಿಯಿತು. ಏನಿಲ್ಲದಿದ್ದರೂ ಅವರ ಉತ್ಸಾಹ ಪ್ರಚಂಡ ಸಾಂಕ್ರಾಮಿಕವಾಗಿ ಶಿಬಿರದ ಮೂರೂ ದಿನ ಎಲ್ಲರನ್ನೂ ಆವರಿಸಿತ್ತು. ಅಭಯನ ನೆಪದಲ್ಲಿ ಶಿಬಿರಾರ್ಥಿಗಳಿಗೆಲ್ಲಾ ‘ಅಜ್ಜ’ನಾದ ನನ್ನಪ್ಪನ ನೆನಪು ನನಗೂ ನಮಗೂ (ನನ್ನ ತಾಯಿ – ಲಕ್ಷ್ಮಿ ದೇವಿ, ಹೆಂಡತಿ – ದೇವಕಿ ಮತ್ತು ಮಗ – ಅಭಯಸಿಂಹ) ಶಿಬಿರದ ಅನುಭವದೊಡನೆ ಅವಿಭಾಜ್ಯವಾಗಿ ಸದಾ ಹಸಿರು.
[ನಾನು ಮೊದಲಲ್ಲಿ ಶಿಬಿರಾರ್ಥಿಗಳನ್ನು ಆಕರ್ಷಿಸಲು ಪತ್ರಿಕೆಗಳ ಓದುಗರ ಅಂಕಣವನ್ನು ಬಳಸಿಕೊಂಡದ್ದು ಬಿಟ್ಟು ಹೆಚ್ಚಿಗೆ ಏನನ್ನೂ ‘ಸುದ್ದಿ’ ಮಾಡಿರಲಿಲ್ಲ. (ಪತ್ರಕರ್ತರನ್ನು ಔಪಚಾರಿಕವಾಗಿ ಕರೆಯುವುದು, ಕಂಡುಕೊಳ್ಳುವುದು ನಾವು ಅವರ ವೃತ್ತಿಧರ್ಮಕ್ಕೆ ಮಾಡುವ ಅವಮಾನ ಎಂದೇ ನಾನಿನ್ನೂ ನಂಬಿದ್ದೇನೆ.). ಆದರೆ ಯಾವುದೇ ಗೋಪ್ಯವಿಲ್ಲದೆ ನಡೆದ ಮೂರು ದಿನದ ಈ ಶಿಬಿರ ಯಾವುದೇ ಮಾಧ್ಯಮದ ಮಿತ್ರರನ್ನು ಸಹಜವಾಗಿ ಆಕರ್ಷಿಸಲಿಲ್ಲ ಎನ್ನುವುದು ಬಲು ಬೇಸರದ ಸಂಗತಿ. ಕೊನೆಯಲ್ಲಿ ಇತರರಿಗೆ ಪ್ರೇರಣೆ ಕೊಡುವ ಉದ್ದೇಶದಿಂದ, ಸ್ವಪ್ರಚಾರವನ್ನು ದೂರವಿಟ್ಟು ಶಿಬಿರದ ಕುರಿತೊಂದು ಪತ್ರಿಕಾ ಪ್ರಕಟಣೆಯನ್ನಾದರೂ (ಗಮನಿಸಿ: ಜಾಹೀರಾತಲ್ಲ!) ಕೊಡುವುದೆಂದು ನಿಶ್ಚಯಿಸಿ ನಾನು ತಂದೆಯನ್ನು ಕೇಳಿಕೊಂಡೆ. ತಂದೆ ಕೇವಲ ನೆನಪಿನ ಬಲದಲ್ಲಿ ಇಂಗ್ಲಿಷಿನಲ್ಲಿ ಬರೆದು ಕೊಟ್ಟ ಪಕ್ಕಾ ಸಂಕ್ಷಿಪ್ತ ಪತ್ರಿಕಾ ಪ್ರಕಟಣೆಯನ್ನು ಎಲ್ಲಾ ಮಾಧ್ಯಮ ಕಛೇರಿಗಳಿಗೆ ರವಾನಿಸಿ ಬಿಟ್ಟೆ. ಅದರಲ್ಲೂ ಕಲಾಪಗಳ ಪಟ್ಟಿಯನ್ನು ಬಿಟ್ಟು ಉಳಿದದ್ದನ್ನು ಇಲ್ಲಿ ಲಗತ್ತಿಸಿದ್ದೇನೆ]
Three memorable days in Abhayaranya
– GT Narayana Rao
Montepadavu is some 20 km away from Mangalore. There is an apology for a bus road connecting the two: high tech culture at on end and back to nature at the destination. There lies a rugged terrain off Montepadavu. Time, human ravage and cattle damage have rendered it a waste land where rain water doesnot seep into the laterite stone surface and aquifers have naturally dried up.
About 1998 Ashoka Vardhana got an idea: why not purchase an acre of this rugged terrain, fence it with stone walls and just allow nature to rejuvenate it? As a book trader well established in Mangalore (Athree Book Centre, 1975) he had developed the hobby of trekking and hill climbing during week ends. Fairly well he had understood the language of nature: uninterrupted nature recreates itself. That was the beginning of Abhayaranya.
The first rainy season over – it rains heavily in these areas – he was pleasantly surprised to notice greenery gradually covering up the barren slopes, a feeble trickle of spring making its presence felt at the bottom of a long-back-dried-up muddy well and the birds greeting the `intruders’ with their eternal songs! The well was cleaned and deepened and its bund strengthened. For a frugal weekend stay Ashok, his wife Devaki and son Abhaya, built a typical cottage and named it significantly Kaadmane (forest home). No electricity intrusion, no phone nuisance, nor city noise, pollution etc here – yes, in every sense it is a hermitage, “far from the madding crowds.”
This family organized a natural camp here where selected youngsters were exposed to nature’s powers of silent regeneration and resurgence. The entire cost is born by Ashok. The very call from Abhayaranya for the new-short term camp evoked great interest in the city-sick cliché-ridden youth. The three day camp – ‘Personality development camp for youth,’ had more than 70 volunteers for just 25 vacancies. Selection was based on strictly well defined physical criteria.
On the first night Kaadmane buzzed with 24 live wires. Kerosene lamps couldnot drive away the pitch darkness. (ಈ ಎರಡು ವಾಕ್ಯಗಳನ್ನು ತಮ್ಮ ಪತ್ರಿಕಾ ಶೈಲಿಗೆ ಅಳವಡಿಸಿಕೊಂಡ ಒಂದು ಖ್ಯಾತ ಇಂಗ್ಲಿಶ್ ಪತ್ರಿಕೆಯ ವರದಿಯ ಒಂದು ವಾಕ್ಯ ನಿಮ್ಮ ಮನರಂಜನೆಗಾಗಿ ಲಗತ್ತು: However temporarily power lines were drawn for benefit of the camp as the kerosene lamps couldnot drive away the pitch darkness.) Outside heavy downpour added to the mysterious assembly. Actual training began on Oct. 13… Departure time dusk of Oct. 15 the new awareness under natural conditions combined with intimate interaction with experts in different areas of nature study made the trainees remark, “we were taken on a brief pilgrimage of nature in all its resplendent beauty. The mantra that made it possible was total sublimation of the organizers, experts and participants into the unity of life.”
*** *** ***
ಈ ಲೇಖನ ಸರಣಿ ಸದ್ಯಕ್ಕೆ ಮುಗಿದುದು.
ನಾನು ಇತ್ತೀಚೆಗೆ ಮಾತ್ರ ಭೇಟಿನೀಡಲು ಸಾಧ್ಯವಾಗಿದ್ದ ಅಭಯಾರಣ್ಯದಲ್ಲಿ ನಡೆದ ವನ್ಯ ಪುನರುತ್ಥಾನ, ವನ್ಯಲೋಕ ದ ನೆನಪುಗಳನ್ನು ಓದಿ ಸಂತೋಷವಾಯಿತು. ಅದು ಸಮಯಾವಕಾಶವಿದ್ದಿದ್ದರೆ ನಾನು ಭಾಗವಹಿಸುವ ಸಂದರ್ಭ. ಮುಂದೆ ಯಾವಾಗಲಾದರೂ ಮತ್ತೆ ಅಂಥ ಅವಕಾಶ ದೊರೆತೀತು ಎಂದು ಅಶಿಸುವೆ. ವ್ಯತ್ಯಾಸವೆಂದರೆ ಜಿಟಿ ನಾರಾಯಣರಾಯರಿಲ್ಲದೆ ಅವರು ತೋರಿದ ನಕ್ಷತ್ರ, ಪುಂಜಗಳನ್ನು ನೆನಪಿನಿಂದ ನಾವೇ ಹುಡುಕಬೇಕು.
ಪ್ರೀತಿಯ ಅಶೋಕವರ್ಧನರೇ!ಆಕಾಶವನ್ನು ದಿಟ್ಟಿಸಲು ಪುನಹಾ ಆಸೆ ಪಟ್ಟು ಆಕಾಶದ ಮ್ಯಾಪ್ ತಮ್ಮಿಂದ ತರಿಸಿಕೊಂಡೆ.ಚಿಕ್ಕಂದಿನಲ್ಲಿ ನನ್ನ ಅಜ್ಜ ನಕ್ಷತ್ರಗಳನ್ನು ನಕ್ಷತ್ರಗಳ ಬಗ್ಗೆ ಹೇಳುತ್ತಾ ಇದ್ದರು.ಈಗ ಆ ನೆನಪು ಮಾಸಿದೆ.ಮಾನ್ಯ ಜೀಟೀಎನ್ ಅವರನ್ನು ನನ್ನ ಬಾಲ್ಯದ ಎನ್ ಸಿ ಸಿ ಕ್ಯಾಂಪ್ ಗಳಲ್ಲಿ ಕಂಡ ನೆನಪು ಮಾತ್ರ.ಇಂದು ಆ ಮ್ಯಾಪ್ ಕೈಯಲ್ಲಿ ಸವರುತ್ತಾ ದಾರಿತಿಳಿಯದ ನಾವಿಕನಂತೆ ಹಪಹಪಿಸುತ್ತಾ ಇದ್ದೇನೆ.ಮುಂದಿನ ನಕ್ಷತ್ರ ಕ್ಯಾಂಪ್ ಇದ್ದರೆ ಖಂಡಿತಾ ಬರುವೆ.ಪ್ರೀತಿಯಿಂದಎಸ್. ಎಮ್. ಪೆಜತ್ತಾಯ
ಯಾವುದೇ ಮಾಧ್ಯಮ ಮಿತ್ರರನ್ನು ಸಹಜವಾಗಿ ಆಕರ್ಷಿಸಲಿಲ್ಲ ಎಂದಿದ್ದೀರಿ- ಆದರೆ ಈಟಿವಿ ತಂಡ ಅಲ್ಲಿ ಭೇಟಿ ಮಾಡಿ ಚಾರಣವನ್ನೂ, ಪಡ್ರೆ ಅವರ ಸ್ಲೈಡ್ ಪ್ರದರ್ಶನವನ್ನೂ ಜೊತೆಗೆ ಶಿಬಿರವನ್ನೂ ಶೂಟ್ ಮಾಡಿ ಅಭಯ ಸೇರಿದಂತೆ ಹಲವರ ಬೈಟ್ ಹೊತ್ತು ತನ್ನ ಪ್ರೈಮ್ ಬುಲೆಟಿನ್ ನಲ್ಲಿ ಪ್ರಧಾನವಾಗಿ ಒಂದು ಫೀಚರ್ ಪ್ರಸಾರ ಮಾಡಿತ್ತು. ನಾನು, ಕ್ಯಾಮೆರಾಮ್ಯಾನ್ ಸತೀಶ್ ( ನೀವು ಪ್ರಕಟಿಸಿರುವ ಮೊದಲ ಚಿತ್ರದಲ್ಲಿ ಕ್ಯಾಮೆರಾ ಹಿಡಿದವರು-ಕೆಂಪು ನೀಲಿ ಟಿ ಶರ್ಟ್ ) ಹಾಗೂ ರಾಧಾಕೃಷ್ಣ (ನೀಲಿ ಜೀನ್ಸ್) ಇದ್ದೆವು.
ಪ್ರಿಯ ಮೋಹನ್ ನೀವು ಮತ್ತು ಸತ್ಯ ನೇರ ಕಲಾಪದಲ್ಲೇ ಭಾಗಿಯಾದದ್ದು ನನಗೆ, ಶಿಬಿರಕ್ಕೆ ನಿಜ ಸಮ್ಮಾನ. ಈ ಶಿಬಿರವನ್ನು ಸಮಾಜಕ್ಕೊಂದು ಆದರ್ಶಯುತವಾದ ಕಲಾಪವೆಂದು ಬಿಂಬಿಸುವಲ್ಲಿ, ಕೆಲವಾದರೂ ಕಾರ್ಯಪ್ರವೃತ್ತರಾಗಬಹುದಾದ ಉತ್ಸಾಹಿಗಳಿಗೆ ಪ್ರೇರಣೆ ಕೊಡುವಂತೆ ಲೇಖನ, ಕನಿಷ್ಠ ವರದಿ ಬರಲಿಲ್ಲ (ಹಾಗೆ ಬಂದೂ ನನ್ನ ಗಮನಕ್ಕೆ ಬರಲಿಲ್ಲಾಂತೀರಾ?) ಎನ್ನುವುದು ನನ್ನ ಕೊರಗು. ಮತ್ತೆ ನೀವು ಹೇಳುವ ಪಡ್ರೆಯವರ ಭಾಗೀದಾರಿಕೆ ಮತ್ತು ಇಲ್ಲಿ ಕಾಣಿಸಿದ ಮೊದಲ ಚಿತ್ರಗಳೆರಡೂ ವಾಸ್ತವವಾಗಿ ಈ ಶಿಬಿರದ್ದೇ ಅಲ್ಲ! ಅದು ಅಜಿತ್ ಹರಿ ಎನ್ನುವವರು ಅಭಯನ ಮಿತ್ರ ಬಳಗಕ್ಕೆ ಇದೇ ಅಭಯಾರಣ್ಯ ಮತ್ತು ಕಾಡ್ಮನೆಯಲ್ಲಿ ಮಾಧ್ಯಮಕ್ಕೇ ಸಂಬಂಧಿಸಿದಂತೆ ನಡೆಸಿದ ಇನ್ನೊಂದೇ ಶಿಬಿರದ ಕಥೆ. ನಮ್ಮ ಶಿಬಿರದ ಚಾರಣಕ್ಕೆ ವಿಡಿಯೋ ಕ್ಯಾಮರಾವಿರಲಿ ಬರಿಯ ಕಣ್ಣಿನಿಂದಲೂ ಪೂರ್ತಿ ಅನುಭವಿಸಲಾಗದಷ್ಟು ಮಳೆಯ ಅಬ್ಬರವಿತ್ತು. ಕೇವಲ ದೃಶ್ಯ ಸಾಮ್ಯವನ್ನು ಗ್ರಹಿಸಿ ಅಲ್ಲಿನ ಒಂದು ಚಿತ್ರವನ್ನು ಇಲ್ಲಿ ಬಳಸಿದ್ದೇನೆ. ಹಾಗೇ ಜೋಶಿ, ನಂಬಿಯಾರ್, ನಟೇಶ್ ಮತ್ತು ನಿರೇನ್ ಚಿತ್ರಗಳೂ ಶುದ್ಧಾರ್ಥದಲ್ಲಿ ಇಲ್ಲಿ ಪ್ರಕ್ಷಿಪ್ತಗಳೇ :-)ಅಶೋಕ ವರ್ಧನ
ಫೋಟೋ ಕಾರಣದಿಂದಾಗಿ ಕನ್ಫ್ಯೂಸ್ ಆಯಿತು. ಜೊತೆಗೆ ಎರಡೂ ಕಾರ್ಯಕ್ರಮಗಳು ನನ್ನ ತಲೆಯೊಳಗೆ ಒಂದುಗೂಡಿ ಹೋಗಿರಬೇಕು
A very good article.Why this was held secretly?
ಉತ್ತಮ ಮಾಹಿತಿಯೊಂದಿಗೆ ಉತ್ತಮ ಲೇಖನ. ಜೋಶಿಯವರ ಬಹುಮುಖ ಪ್ರತಿಭೆ , ಹಾಸ್ಯಪ್ರಜ್ಞೆ ವಿಡಂಬನಾತ್ಮಕ ಅರ್ಥಗಾರಿಕೆ ಹಾಗೂ ಮಹೋಹರ್ ಅವರ ಛಾಯಾಗ್ರಹಣ ಪ್ರತಿಭೆಗಳನ್ನು ಅಸ್ವಾದಿಸಿ ತಿಳಿಯಬೇಕು.ಧನ್ಯವಾದಗಳು
Why this was held secretly? ಇಲ್ವಲ್ಲಾ. ವಿದ್ಯಾರ್ಥಿಗಳನ್ನು ಆರಿಸಿದ್ದು ಪತ್ರಿಕೆಗಳ ಮೂಲಕವೇ ಎಂದು ಮೊದಲಲ್ಲೇ ಹೇಳಿದ್ದೇನೆ. ಮತ್ತೆ ಕಲಾಪಗಳನ್ನು (ಜಾತ್ರೆ ಮಾಡುವ ಉದ್ದೇಶವೂ ನಮ್ಮದಲ್ಲ) ಸಾರ್ವಜನಿಕರಿಗೆ ಮುಕ್ತವಾಗಿಡಲು ಅಲ್ಲಿ ಸ್ಥಳ, ವ್ಯವಸ್ಥೆ ಹೊಂದಿಸುವುದು ಅಸಾಧ್ಯ. ಹಾಗೆ ಮೊದಲ ತಾಳ ಮದ್ದಳೆ ಮತ್ತು ದೀವಟಿಗೆ ಯಕ್ಷಗಾನವೆರಡನ್ನೂ ಸಾರ್ವಜನಿಕಕ್ಕೇ ಮಾಡಲಾಗಿತ್ತಲ್ಲಾ ಗೋಪಾಲಕೃಷ್ಣ ಭಟ್ಟರೇ :-)ಅಶೋಕವರ್ಧನ
ಪ್ರಿಯ ಮಿತ್ರರಾದ ಶ್ರೀ ಅಶೋಕ್ವರ್ಧನರಿಗೆ,ನನಗಿನ್ನೂ ವಿಶದವಾಗಿ ನೆನಪಿದೆ. ಅಂದಿನ ಆ ಕುಂಭದ್ರೋಣ ಮಳೆಯಿಂದಾಗಿ ಅಭಯಾರಣ್ಯಕ್ಕೆ ನಮ್ಮ ಎರಡನೆ ಭೇಟಿ ಇನ್ನಿಷ್ಟು ರೋಚಕವಾಗಿತ್ತು! ಶಿಬಿರಾರ್ಥಿಗಳಿಗೆ ಆ ದಿನದ ಆಕಾಶದ ಚಿತ್ರಪಟವನ್ನು ಪ್ರಿಂಟಿಸಿಕೊಂಡು ಬಂದದ್ದು ಅವರಿಗೆ ನಕ್ಷತ್ರಲೋಕದ ಅದ್ಭುತಗಳನ್ನು ಹೇಳಲು ಮಾತ್ರವಲ್ಲ, ನನಗೆ ಖಗೋಳದ ವಿಶ್ವರೂಪವನ್ನು ಮೊದಲಿಗೆ ತೋರಿಸಿದ ಪೂಜ್ಯ ಜಿಟಿಎನ್ರವರ ಮುಂದೆ ನನ್ನ ಪಾಂಡಿತ್ಯವನ್ನು ತೋರಿಸಿಕೊಳ್ಳಲು! ದಾರಿಯುದ್ದಕ್ಕೂ ನಾನು ಹೇಳಬೇಕಾಗಿದ್ದನ್ನೆಲ್ಲ ರಿಹರ್ಸಲ್ ಮಾಡುತ್ತ ಬಂದಿದ್ದೆ. ಆದರೆ ಅಲ್ಲಿ ನೆರೆದಿದ್ದ ಶಿಬಿರಾರ್ಥಿಗಳನ್ನು ನೋಡಿದೊಡನೆ “ಇವರೆಲ್ಲರಿಗೂ ಖಗೋಳದ ಮೊದಲ ಪಾಠ ಪ್ರೊಫೆಸರ್ ಜಿ. ಟಿ. ನಾರಾಯಣರಾವ್ರವರಿಂದ ಆದರೇನೇ ಅದೊಂದು ವಿಶಿಷ್ಟವಾದ ಹೆಮ್ಮೆಯ ವಿಚಾರ! ಅವರೇ ಪ್ರತ್ಯಕ್ಷವಾಗಿ ಅಲ್ಲಿರುವಾಗ ಗ್ರಹ-ನಕ್ಷತ್ರಗಳ ಬಗ್ಗೆ ಹೇಳಲು ನಾನೆಷ್ಟರವನು” ಅನ್ನಿಸಿತು. ಹಾಗಾಗಿ ನಾನು ಹಕ್ಕಿಗಳ ಬಗ್ಗೆ ಮಾತನಾಡಲು ಅವಕಾಶ ಮಾಡಿಕೊಂಡೆ. ದಿಗ್ಗಜರ ನಡುವೆ ಎಂಥ ಅನುಭವ! ಮತ್ತೊಮ್ಮೆ-ಮಗುದೊಮ್ಮೆ ಶಿಬಿರ ನಡೆಸಿ. ಕಾಡ್ಮನೆಯಲ್ಲಿ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ನಮ್ಮ ವ್ಯಕ್ತಿತ್ವವೂ ವಿಕಸನಗೊಳ್ಳುತ್ತದೆ!ನರಸಿಂಹನ್.
ವಿಶಿಷ್ಟ ಶಿಬಿರವನ್ನು ಕುರಿತ ಐದನೆಯ ಕಂತನ್ನು ಓದಿ, ಮತ್ತೆಮೊದಲಿನಿಂದ ಇಡೀ ಲೇಖನಮಾಲೆಯ ಮೇಲೆ ಕಣ್ಣಾಡಿಸಿದೆ. ನಿಮ್ಮ ನೆನಪು ಹಾಗೂ ಬರವಣಿಗೆಯ ಪ್ರಾಮಾಣಿಕತೆ ಹಾಗೂ ಆಪ್ತತೆ ನನಗೆ ತುಂಬಾ ಸಂತೋಷವನ್ನು ಕೊಟ್ಟಿತು.ಸಿ.ಎನ್. ರಾಮಚಂದ್ರನ್
ಎಲ್ಲ ಕಂತುಗಳನ್ನೂ ಓದಿದೆ. ನಿಮ್ಮ ನೆನಪಿನಾಲೋಕ ಅದ್ಭುತ. ನಾವೂ ( ಅಕ್ಷರಿ ) ಒಂದು ದಿನ ಬಂದಿದ್ದೆವು. ದೈತೋಟರ ವಿವರಣೆ ಇರುವ ದಿನ. ಅವರು ಏನು ಹೇಳಿದರು ಎಂದು ನೆನಪಿಲ್ಲ. ಆ ದಿನ ಉದ್ದಿನ ವಡೆ ತಿಂದದ್ದು ಮಾತ್ರ ಇನ್ನೂ ನೆನಪಿದೆ!