ಜಿಟಿಎನ್ ಅವರ ಬಗ್ಗೆ ನಾನೀಗ ಏಕೆ ಬರೆಯುತ್ತಿದ್ದೇನೆ? ಗೊತ್ತಿಲ್ಲ. ಅವರ ಬಗ್ಗೆ ಇತರರೊಡನೆ ಮಾತನಾಡುವಾಗ, ಅವರ ಕೃತಿಗಳನ್ನು ಓದುವಾಗ, ನಾನು ಅವರೊಡನೆ ಕಳೆದ ಅನೇಕ ಸ್ವಾರಸ್ಯಪೂರ್ಣ ಸಂದರ್ಭಗಳು ನೆನಪಿಗೆ ನುಗ್ಗಿ ಬರುತ್ತವೆ; ಅವುಗಳಿಂದ ಬಿಡುಗಡೆ ಪಡೆಯಲು ಅವನ್ನು ಮೂರ್ತ ಲಿಖಿತ ರೂಪಕ್ಕೆ ತರುವುದೇ ಮಾರ್ಗ ಎಂದೆಣಿಸಿ, ಈ ನೆನಪುಗಳನ್ನು ಅವುಗಳು ಬಂದ ಹಾಗೆ ದಾಖಲಿಸುತ್ತಿದ್ದೇನೆ. ಓದುಗರಿಗೆ (ಯಾರಾದರೂ ಓದಿದರೆ) ಇವು ‘ಬೋರಿಂಗ್’ ಎನಿಸಿದರೆ – ಕ್ಷಮಿಸಿ.

ನಾನು ಜಿಟಿಎನ್ ಅವರನ್ನು ಮೊದಲ ಬಾರಿಗೆ ಭೇಟಿಯಾದುದು ಕೋಣಾಜೆಯಲ್ಲಿರುವ ಮಂಗಳೂರು ವಿ.ವಿ.ಯ ಕ್ವಾರ‍್ಟರ್ಸ್‌ನಲ್ಲಿ. ೧೯೮೭-೮೮ ಇರಬಹುದು. ಒಂದು ಬೆಳಿಗ್ಗೆ, ಸುಮಾರು ೧೦ ಘಂಟೆಯ ಹೊತ್ತಿಗೆ ಅವರು, ಅಶೋಕ್ ಕುಮಾರ್ ಎನ್ನುವವರು, ಮತ್ತೊಬ್ಬರು ಅಲ್ಲಿಗೆ ಬಂದರು. ನನಗೆ ಜಿಟಿಎನ್ ಅವರ ಹೆಸರು ಗೊತ್ತಿದ್ದಿತೇ ಹೊರತು ಅವರನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ. ಉಭಯಕುಶಲೋಪರಿ ಆದ ಮೇಲೆ ತಾವು ಬಂದ ಉದ್ದೇಶವನ್ನು ತಿಳಿಸಿದರು; ಅದೆಂದರೆ ನಾನು ಎಮ್‌ಎಸ್‌ಐಎಲ್ (Mysore Sales International Limited) ಪ್ರತಿವರ್ಷ ನಡೆಸುವ ಪ್ರತಿಷ್ಠಿತ ‘ಲೇಖಕ್’ ಸ್ಪರ್ಧೆಯ ತೀರ್ಪುಗಾರರ ಸಮಿತಿಯ ಸದಸ್ಯನಾಗಬೇಕು. (ಆಗ, ತಮ್ಮ ಜೊತೆಯಲ್ಲಿ ಬಂದಿದ್ದ ಅಶೋಕ್ ಕುಮಾರ್ ಕೆ.ಎ.ಎಸ್. ಅಧಿಕಾರಿಗಳೆಂದು, ಎಮ್‌ಎಸ್‌ಐಎಲ್ ಸಂಸ್ಥೆಯ ಉನ್ನತಾಧಿಕಾರಿಗಳೆಂದು, ಕಮಿಟಿಡ್ ವರ್ಕರ್ ಎಂದೂ ತಿಳಿಸಿದರು.) ನನಗೆ ಆ ಸಂಸ್ಥೆಯ ಹೆಸರಾಗಲಿ ಲೇಖಕ್ ಸ್ಪರ್ಧೆಯ ಮಾಹಿತಿಯಾಗಲಿ ಏನೂ ಗೊತ್ತಿರದಿದ್ದ ಕಾರಣ ಸ್ವಲ್ಪ ಹಿಂದೇಟು ಹಾಕಿದಾಗ, ಅವರು ಹಿಂದಿನ ವರ್ಷಗಳ ಪ್ರಶ್ನಾಪತ್ರಿಕೆಗಳನ್ನು ನನಗೆ ತೋರಿಸಿ, ಸ್ಪರ್ಧೆ ಎರಡು ಹಂತಗಳಲ್ಲಿ ಹೇಗೆ ತುಂಬಾ ‘ವಸ್ತುನಿಷ್ಠ’ವಾಗಿ ನಡೆಯುತ್ತದೆ ಎಂಬುದನ್ನು ವಿವರಿಸಿದರು. ಹಾಗೆ ವಿವರಿಸುವಾಗ ಜಿಟಿಎನ್ ಅವರಿಗಿದ್ದ ಉತ್ಸಾಹವನ್ನು ಕಂಡು ನಾನು ಒಪ್ಪಿಕೊಂಡೆ.

ಅದಾದ ಒಂದು ತಿಂಗಳಲ್ಲಿಯೇ ನಾನು ಮೈಸೂರಿಗೆ ಹೋದಾಗ, ಅಲ್ಲಿ ದಳವಾಯ್ ಹೈಸ್ಕೂಲ್‌ನಲ್ಲಿ ಪ್ರಾಚಾರ್ಯರಾಗಿದ್ದ ನನ್ನ ದೊಡ್ಡಪ್ಪನವರ ಮಗ ರಾಮಚಂದ್ರ ಅವರ ಮನೆಗೆ ಹೋಗಿದ್ದೆ. ಅದೂ ಇದೂ ಮಾತಾಡುತ್ತಾ, ‘ಲೇಖಕ್’ ಸ್ಪರ್ಧೆಯ ಬಗ್ಗೆ ಅವರಿಗೇನಾದರೂ ಗೊತ್ತೆ ಎಂದು ಕೇಳಿದೆ. ಅವರು ಅದೊಂದು ತುಂಬಾ ಪ್ರತಿಷ್ಠಿತ ಸ್ಪರ್ಧೆಯೆಂದು, ಆ ಸ್ಪರ್ಧೆಗಾಗಿಯೇ ಅನೇಕ ವಿದ್ಯಾರ್ಥಿಗಳು ತಿಂಗಳು ಗಟ್ಟಲೆ ತಯಾರಿ ಮಾಡುತ್ತಾರೆಂದು ವಿವರಿಸಿ, ಕೊನೆಗೆ ಹೇಳಿದರು: “ ಆದರೆ, ಜಿಟಿಎನ್ ಅವರ ಜೊತೆಯಲ್ಲಿ ಯಾರೂ ಕೆಲಸ ಮಾಡಲು ಸಾಧ್ಯವಿಲ್ಲ. ಅವರು ಮಹಾ ಕೊಬ್ಬಿನ ಮನುಷ್ಯ, ತನ್ನನ್ನು ಬಿಟ್ಟು ಉಳಿದವರೆಲ್ಲಾ ಮೂರ್ಖರು ಮತ್ತು ಅಯೋಗ್ಯರು ಎಂದು ವರ್ತಿಸುತ್ತಾರೆ. ನೀನು ಆ ಮಂಡಳಿಯ ಸದಸ್ಯನಾಗಿರಲು ಒಪ್ಪಬಾರದಾಗಿತ್ತು.” ಇರಲಿ, ಆಗದಿದ್ದರೆ ಯಾವಾಗ ಬೇಕಾದರೂ ರಾಜೀನಾಮೆ ಕೊಡಬಹುದಲ್ಲ ಎಂದು ಹೇಳಿ ಹೊರಬಂದೆ.

ಆದರೆ, ಹೇಗಾದರೂ ಮಾಡಿ ಜಿಟಿಎನ್ ಅವರ ‘ಸರ್ವಾಧಿಕಾರಿ’ ವರ್ತನೆಯನ್ನು ಮುರಿಯಬೇಕು ಎಂದುನಿರ್ಧರಿಸಿದೆ. ಹಾಗೆಯೇ, ಅನಂತರ ನಡೆದ ದೀರ್ಘ ‘ಮೌಖಿಕ ಪರೀಕ್ಷೆ’ಯಲ್ಲಿ ತುಂಬಾ ಅಗ್ರೆಸಿವ್ ಆಗಿ ವರ್ತಿಸಿದೆ -ಅತಿ ಹೆಚ್ಚು ಪ್ರಶ್ನೆಗಳನ್ನು ನಾನೇ ಕೇಳುವುದು, ಇತರ ಸದಸ್ಯರಿಗೆ ಸಮಯ ಕಮ್ಮಿಯಾಗುವಂತೆ ಮಾತನಾಡುವುದು, ಇತ್ಯಾದಿ. (ಆದರೆ, ಈ ನನ್ನ ವರ್ತನೆಯಿಂದ ಆ ಸಮಿತಿಯಲ್ಲಿದ್ದ ಮತ್ತೊಬ್ಬ ಸದಸ್ಯರು, ಹಿರಿಯ ಎಚ್ಚೆಸ್ಕೆ, ಅವರಿಗೆ ಎಷ್ಟು ನೋವಾಗಬಹುದು ಎಂದು ಯೋಚಿಸಲೇ ಇಲ್ಲ.) ಆ ವರ್ಷದ ಆಯ್ಕೆ ಪ್ರಕ್ರಿಯೆ ಮುಗಿದನಂತರ, ಮುಂದಿನ ವರ್ಷ ನನ್ನನ್ನು ಕರೆಯುವುದಿಲ್ಲ, ಇವರಿಗೆ ಚೆನ್ನಾಗಿ ಪಾಠ ಕಲಿಸಿದ್ದೇನೆ, ಎಂದು ಬೀಗಿದೆ.

ಆದರೆ, ಹಾಗಾಗಲೇ ಇಲ್ಲ. ಮುಂದೆ ಅನೇಕ ಸಂದರ್ಭಗಳಲ್ಲಿ ಭೇಟಿಯಾದಾಗಲೂ ಜಿಟಿಎನ್ ನನ್ನ ವರ್ತನೆ ಕುರಿತು ತಮಗಾಗಿದ್ದ (?) ಅಸಂತೋಷವನ್ನು ತೋರಿಸಿಕೊಳ್ಳಲೇ ಇಲ್ಲ; ಹಾಗೆಯೇ, ನಾನು ಬರೆದ (ಉದ್ಧಟತನದ ಆದರೆ ಪ್ರಾಮಾಣಿಕವಾದ) ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಕುರಿತ ಲೇಖನವನ್ನು ಓದಿ, ಪತ್ರ ಬರೆದರು: ‘ನಿಮ್ಮ ಧಾಟಿ ಕುರುಕ್ಷೇತ್ರದಲ್ಲಿ ಅರ್ಜುನನಂತಿದೆ; ಮೊದಲು ಭೀಷ್ಮರಿಗೆ ನಮಸ್ಕಾರಮಾಡಿ ಅನಂತರ ಅವರೊಡನೆ ಯುದ್ಧ ಮಾಡಿದಂತೆ.’ ಆಶ್ಚರ್ಯವಾಯಿತು: ಏಕೆಂದರೆ, ಜಿಟಿಎನ್ ಅವರಿಗೆ ಮಂಕುತಿಮ್ಮನ ಕಗ್ಗದ ಬಗ್ಗೆ ಅತೀವ ಅಭಿಮಾನ; ತಮ್ಮ ಪ್ರತಿಯೊಂದು ಭಾಷಣದಲ್ಲಿ, ಮಾತಿನಲ್ಲಿ ಅದರ ಯಾವುದಾದರೂ ಪದ್ಯವನ್ನು ಉದಹರಿಸದೆ ಅವರು ಇರುತ್ತಿರಲಿಲ್ಲ. (ಮುಂದೆ, ಅನೇಕ ವರ್ಷಗಳನಂತರ, ‘ಪ್ರಜಾವಾಣಿ’ಗಾಗಿ ಆ ಕೃತಿಯ ‘ಅರ್ಥ-ಸಂದೇಶ’ಗಳನ್ನು ಕುರಿತ ಒಂದು ಗ್ರಂಥವನ್ನು ವಿಮರ್ಶಿಸುವಾಗ, ಹೇಗೆ ಕಗ್ಗದ ಅದ್ಭುತ ರೂಪಕಗಳನ್ನು ಮರೆತರೆ, ಅದೊಂದು ಯಾವ ಸಂದರ್ಭದಲ್ಲಿಯೂ, ಯಾವ ಭಾವನೆಯನ್ನು ವ್ಯಕ್ತಪಡಿಸಬೇಕಾದರೂ ಉದ್ದರಿಸಬಹುದಂತಹ ‘ಬುಕ್ ಆಫ಼್ ಕೋಟ್ಸ್’ ಆಗಿದೆ ಎಂದು ಬರೆದಾಗ, ಕೂಡಲೇ ಆ ನಿಲುವನ್ನು ಮೆಚ್ಚಿ ‘ಪ್ರಜಾವಾಣಿ’ಗೆ ಒಂದು ಚಿಕ್ಕ ಪತ್ರವನ್ನೂ ಅವರು ಬರೆದಿದ್ದರು; ವಿಚಿತ್ರ ವ್ಯಕ್ತಿ.) ಮತ್ತೊಮ್ಮೆ, ಬೆಂಗಳೂರಿನಿಂದ ಮೈಸೂರಿಗೆ ಬಸ್ಸಿನಲ್ಲಿ ಬರುವಾಗ, ರಾಮಾಶ್ವಮೇಧವನ್ನು ಕುರಿತ ನನ್ನ ಲೇಖನದ ಚರ್ಚೆಯಿಂದ ಪ್ರಾರಂಭವಾಗಿ, ಅನಂತರ ಕಲೋನಿಯಲ್ ಅನುಭವ, ಕನ್ನಡ ಕಾವ್ಯ, ಇತ್ಯಾದಿಗಳನ್ನು ಕುರಿತು ನಾವು ಮಾತನಾಡುತ್ತಾ, ಅದನ್ನು ನಿಲ್ಲಿಸಿದುದು ಮೈಸೂರಿನಲ್ಲಿ ಬಸ್ ನಿಂತಾಗಲೇ. ಇವರಿಗೆ ಕೊಬ್ಬು ಇರಬಹುದು; ಆದರೆ, ಕನ್ನಡ-ಇಂಗ್ಲೀಷ್ ಸಾಹಿತ್ಯಗಳ ಆಳವಾದ ಅನುಭವವಿದೆ; ಮತ್ತು ಉತ್ತಮ ಅಭಿರುಚಿಯಿದೆ ಎಂದು ನನಗೆ ಗೊತ್ತಾಗುತ್ತಾ ಹೋದಂತೆ ಅವರ ಬಗ್ಗೆ ಇಚ್ಛೆಯಿಲ್ಲದಿದ್ದರೂ ಗೌರವಾದರಗಳು ಬೆಳೆಯಲು ಪ್ರಾರಂಭವಾಯಿತು.

ಎರಡನೆಯ ವರ್ಷದಲ್ಲಿ, ನಾನು ನನ್ನ ಆಕ್ರಾಮಕ ವರ್ತನೆಯನ್ನು ಕಮ್ಮಿ ಮಾಡಿದೆ; ಆದರೆ, ಸ್ಪರ್ಧೆ ಮುಗಿದ ನಂತರ, ನಾನೇ ಮತ್ತೊಂದು ವಿಷಯವನ್ನು ಆ ಸಮಿತಿಯ ಮುಂದೆ ಎತ್ತಿದೆ. ನಾಲ್ಕೈದು ವರ್ಷಗಳ ಪ್ರಶ್ನಾಪತ್ರಿಕೆಗಳನ್ನು ಗಂಭೀರವಾಗಿ ನೋಡಿದಾಗ ನನಗನ್ನಿಸಿದ್ದು, ‘ಈ ಸ್ಪರ್ಧೆ ವಿಜ್ಞಾನದ ವಿದ್ಯಾರ್ಥಿಗಳಿಗಾಗಿ ಮಾತ್ರ ಇದೆ; ಯಾವ ಕಲಾವಿಭಾಗದ ವಿದ್ಯಾರ್ಥಿಯೂ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಿಲ್ಲ,’ ಎಂದು. ಈ ಅಂಶವನ್ನು ಸಮಿತಿಯ ಗಮನಕ್ಕೆ ತಂದೆ. ಕೂಡಲೇ, ಜಿಟಿಎನ್ ‘ಇರಬಹುದು; ಏನು ತಪ್ಪು? ವಿಜ್ಞಾನದ ವಿದ್ಯಾರ್ಥಿಗಳು ಇತರರಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ,’ ಎಂದು ಘಟ್ಟಿಯಾಗಿ ಹೇಳಿದರು. ನಾನು ಸಾಹಿತ್ಯದ ವಿದ್ಯಾರ್ಥಿಯಾದುದರಿಂದ ನನ್ನ ಮುಖ ಕೆಂಪಾಯಿತು. ‘ಇದನ್ನು ನಾನು ಒಪ್ಪುವುದಿಲ್ಲ; ದಿಸ್ ಈಸ್ ಮೀನಿಂಗ್‌ಲಿಸ್’ ಎಂದು ಕೂಗಿದೆ. ಆ ಸಂಸ್ಥೆಯ ಹಿರಿಯ ಅಧಿಕಾರಿ, ‘ಆಯಿತು; ಅದಕ್ಕೆ ಏನು ಮಾಡೋಣ ಅಂತೀರಿ?’ ಎಂದು ಕೇಳಿದರು. ‘ಲಿಖಿತ ಪರೀಕ್ಷೆಯಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಪರ್ಯಾಯವಾಗಿ ಕಲಾವಿಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಇರಬೇಕು; ಎಂದರೆ, ಪ್ರಶ್ನಾಪತ್ರಿಕೆಯಲ್ಲಿ, ಎರಡು ಭಾಗಗಳಿದ್ದು, ಎರಡನೆಯ ಭಾಗದಲ್ಲಿ ಅ ಅಥವಾ ಆ ಭಾಗವನ್ನು ಆಯ್ಕೆಮಾಡಿಕೊಳ್ಳುವ ಅವಕಾಶವಿರಬೇಕು’ ಎಂದು ನಾನು ವಾದಿಸಿದೆ. ‘ಓಹೋ! ಪ್ರಶ್ನೆಗಳಲ್ಲೂ ಮೀಸಲಾತಿ?’ ಎಂದು ಜಿಟಿಎನ್ ನನ್ನತ್ತ ನೋಡಿದರು; ನಾನು ಸುಮ್ಮನಿದ್ದೆ. ಅನಂತರ, ‘ಆಯಿತು; ನಿಮ್ಮ ವಾದವನ್ನು ಒಪ್ಪಿದರೆ, ಕಲಾವಿಭಾಗದ ಪ್ರಶ್ನೆಗಳನ್ನು ತಯಾರಿಸುವುದು ಯಾರು? ‘ಬಹು ಆಯ್ಕೆ’ಯ ಪ್ರಶ್ನೆಗಳನ್ನು ಕಲಾ ವಿಷಯಗಳಲ್ಲಿ ರೂಪಿಸಲು ಅಸಾಧ್ಯ,’ ಎಂದು ಎಲ್ಲರನ್ನೂ ನೋಡಿದರು. ‘ಯಾಕಾಗುವುದಿಲ್ಲ? ನಾನು ಮಾಡಿಕೊಡುತ್ತೇನೆ,’ ಎಂದೆ, ಇದೊಂದು ಸವಾಲಂತೆ. ‘ನೋಡೋಣ,’ ಎಂದರು.

ನಾನು ಮಂಗಳೂರಿಗೆ ಹಿಂತಿರುಗಿದನಂತರ, ಸ್ನೇಹಿತರಾದ ಸುರೇಂದ್ರ ರಾವ್ ಅವರೊಡನೆ ಈ ಸಂಗತಿಯನ್ನು ಚರ್ಚಿಸಿ, ಸಾಹಿತ್ಯ-ಭಾಷೆ-ಚರಿತ್ರೆ-ರಾಜಕೀಯ ಶಾಸ್ತ್ರಗಳನ್ನು ಕುರಿತ ‘ಬಹು ಆಯ್ಕೆ’ಯ ಪ್ರಶ್ನೆಗಳನ್ನು ತಯಾರಿಸಿ, ಅವುಗಳನ್ನು ಜಿಟಿಎನ್ ಅವರಿಗೆ ಕಳುಹಿಸಿದೆವು. ಕೂಡಲೇ ಅವರಿಂದ ಪತ್ರ ಬಂದಿತು: “ಅಭಿನಂದನೆಗಳು. ನಾನು ಅಸಾಧ್ಯವೆಂದುದನ್ನು ನೀವು ಸಾಧ್ಯಮಾಡಿ ತೋರಿಸಿದ್ದೀರಿ.” ನನಗೆ ಆಶ್ಚರ್ಯ, ಸಂತೋಷ, ಸಂಕೋಚ ಎಲ್ಲವೂ ಆದುವು. ಆ ಮೂರನೆಯ ವರ್ಷ ಲೇಖಕ್ ಸ್ಪರ್ಧೆಯ ಮೌಖಿಕ ಪರೀಕ್ಷೆ ಪುತ್ತೂರಿನಲ್ಲಿ ನಡೆಯಿತು. ಅದೊಂದು ಮರೆಯಲಾಗದ ಅನುಭವ. ನಾನು ಸ್ವಲ್ಪ ವಿನಯದಿಂದ ನಡೆದುಕೊಂಡೆ; ಜಿಟಿಎನ್ ಅವರೂ ಮತ್ತು ಉಳಿದ ಮತ್ತೊಬ್ಬ ಪರೀಕ್ಷಕರೂ ಪರಸ್ಪರ ಗೌರವದಿಂದ ವರ್ತಿಸಿದರು. (ಆ ವರ್ಷ, ಮಂಗಳೂರಿನ ಸೇಂಟ್ ಅಲೋಶಸ್ ಕಾಲೇಜಿನ ವಿದ್ಯಾರ್ಥಿಗೆ ಮೊದಲ ಅಥವಾ ಎರಡನೆಯ ಸ್ಥಾನ ಬಂದಿತೆಂದು ನೆನಪು.) ಮೂರು ದಿನಗಳಲ್ಲಿ ಎರಡು ದಿನವೂ ಎಲ್ಲಾ ವಿದ್ಯಾರ್ಥಿಗಳೊಡನೆ ನಾನೂ ಜಿಟಿಎನ್ ಅವರೊಡನೆ ನಕ್ಷತ್ರವಿಕ್ಷಣೆಗೆ ಸಾಯಂಕಾಲ ಊರ ಹೊರಗಿನ ದಿಬ್ಬಕ್ಕೆ ಹೋಗಿದ್ದೆವು. ಸುಮಾರು ಒಂದು ತಾಸು, ನಕ್ಷತ್ರಪುಂಜಗಳು, ಅವುಗಳ ಬದುಕು, ಗ್ರೀಕರ ಕಾಲದಿಂದ ಅವುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿದ ರೀತಿ ಇವುಗಳನ್ನು ರೋಚಕವಾಗಿ, ಅಧಿಕಾರಯುತವಾಗಿ, ಸಂಭ್ರಮದಿಂದ, ಜಿಟಿಎನ್ ವರ್ಣಿಸಿದರು. ವಿಶ್ವಸೃಷ್ಟಿಯ ಬಗ್ಗೆ ಹೊಸ ಒಳನೋಟಗಳನ್ನು ಕೊಟ್ಟರು. ಕುಮಾರಸಂಭವದಲ್ಲಿ ಪರಶಿವನು ಉಮೆಯ ತಪಸ್ಸಿಗೆ ಮೆಚ್ಚಿ, “ಅದ್ಯತ್ ಪ್ರಭೃತ್ಯವನತಾಂಗಿ ತವಾಸ್ಮಿ ದಾಸಃ” ಎನ್ನುತ್ತಾನೆ. ಹಾಗೆಯೇ, ನಾನೂ (ಜಿಟಿಎನ್ ‘ಅವನತಾಂಗಿ’ ಎಂದೂ ಆಗದೆ ಇದ್ದರೂ) ‘ಇಂದಿನಿಂದ ನಾನು ನಿಮ್ಮ ದಾಸ/ವಿದ್ಯಾರ್ಥಿ’ ಎಂದು ಹೇಳುತ್ತಾ ಜಿಟಿಎನ್ ಅವರಿಗೆ ಕೈಮುಗಿದೆ.

ಆ ಶಿಬಿರವಾದ ಕೆಲದಿನಗಳಲ್ಲೇ, ಏನು ಕಾರಣಕ್ಕೋ ಕಾಣೆ, ಆ ಲೇಖಕ್ ಸ್ಪರ್ಧೆಯೇ ನಿಂತು ಹೋಯಿತು. ಹೈಸ್ಕೂಲ್-ಪಿಯುಸಿ ವಿದ್ಯಾರ್ಥಿಗಳಲ್ಲಿ ಅಸಾಧಾರಣ ಸಂಚಲನ ಉಂಟುಮಾಡಿದ್ದ, ರಚನಾತ್ಮಕ ಕಾರ್ಯವಾದ ಅದು ನಿಂತುಹೋಯಿತೆಂದು ತಿಳಿದು ಸ್ವಲ್ಪ ಸಮಯ ಬೇಜಾರಾಯಿತು. ಆ ಸಂಸ್ಥೆಯ ಅಶೋಕ್ ಕುಮಾರ್ ತಮ್ಮ ವಿನಯ-ಸಜ್ಜನಿಕೆಗಳಿಂದ ಇಂದೂ ನನ್ನ ನೆನಪಿನಲ್ಲಿದ್ದಾರೆ. ಜಿಟಿಎನ್ ಅವರ ಸಖ್ಯ-ಸಹವಾಸ ಆಗ ಪ್ರಾರಂಭವಾದದ್ದು ಕೊನೆಯವರೆಗೂ ಮುಂದುವರೆಯಿತು. ಇದು ಒಂದು ಘಟ್ಟ.

ಜಿಟಿಎನ್ ಅವರು ಅದ್ಭುತ ಮಾತುಗಾರರು; ಎಂದರೆ, ರೋಚಕವಾಗಿ, ನಾಟಕೀಯವಾಗಿ, ಒಂದು ಘಟನೆಯನ್ನು ಮೊದಲಿಂದ ಕೊನೆಯವರೆಗೆ ಆಸಕ್ತಿಯಿಂದ ನಿರೂಪಿಸುವ ‘ನಟರು.’ ಪ್ರತಿ ವರ್ಷವೂ ಅವರು ಒಂದು ತಿಂಗಳ ಕಾಲ ಮಂಗಳೂರಿಗೆ ‘ಬೇಬಿ ಸಿಟಿಂಗ್’ ಕಾರ್ಯಕ್ಕೆ ಬರುತ್ತಿದ್ದರು. (ಬೇಬಿ ಸಿಟಿಂಗ್ ಅವರದೇ ಪ್ರಯೋಗ; ಈ ಸಂದರ್ಭದಲ್ಲಿ ‘ಬೇಬಿ’ ಅವರ ಮಗನ ಪುಸ್ತಕದ ಅಂಗಡಿ. ಅಶೋಕವರ್ಧನ್ ತಮ್ಮ ಪತ್ನಿಯೊಡನೆ ಪ್ರವಾಸ ಹೊರಟಾಗ ಅಂಗಡಿಯನ್ನು ನೋಡಿಕೊಳ್ಳಲು ಅವರ ತಂದೆ ಬರುತ್ತಿದ್ದರು. ಇಡೀ ಜಿಟಿಎನ್ ಕುಟುಂಬವೇ ಅಪರೂಪದ ಕುಟುಂಬ ಎಂದು ಕಾಣುತ್ತದೆ; ಸಾಧಾರಣವಾಗಿ ಗಂಡನು ಪರ್ವತಾರೋಹಣ, ಕಾಡು ಸುತ್ತುವುದು, ಇತ್ಯಾದಿ ‘ಸಾಹಸ’ಗಳಿಗೆ ಹೊರಟಾಗ ಅವನನ್ನು ತಡೆಯುವುದು ಬಿಟ್ಟು, ಅವನ ಹೆಂಡತಿಯೂ ಜೊತೆಯಲ್ಲಿ ಬೆಟ್ಟ ಹತ್ತುವುದಕ್ಕೆ ಬರುತ್ತಾಳೆಂದರೆ -ಎಕ್ಸೆಂಟ್ರಿಕ್ ಅಲ್ಲವೆ! ಅವರ ಮಗ ಇನ್ನೂ ಎಕ್ಸೆಂಟ್ರಿಕ್ –ಬುದ್ಧಿವಂತ ಹುಡುಗರೆಲ್ಲರೂ ಮೆಡಿಕಲ್-ಎಂಜಿನಿಯರಿಂಗ್ ಇತ್ಯಾದಿ ಓದಿ, ದೊಡ್ಡ ಕೆಲಸ ಹಿಡಿದು, ಹುಡುಗಿಯರ ಹಿಂದೆ ಕಾರುಗಳಲ್ಲಿ ಓಡಾಡುವ ಕನಸು ಕಂಡರೆ, ಈ ಪುಣ್ಯಾತ್ಮ ಪುಣೆಯ ಫ಼ಿಲ್ಮ್ ಇನ್ಸ್ಟಿಟ್ಯೂಟ್‌ಗೆ ಹೋಗಿ, ಅಧ್ಯಯನ ಮಾಡಿ, ಇತ್ತೀಚೆಗೆ ‘ಗುಬ್ಬಚ್ಚಿಗಳು’ ಎಂಬ ಕಿರು ಚಿತ್ರವನ್ನು ತಯಾರಿಸಿ, ರಾಷ್ಟ್ರೀಯ ಪುರಸ್ಕಾರ ಬೇರೆ ಪಡೆದಿದ್ದಾನೆ.)

ಇರಲಿ; ಮತ್ತೆ ಬೇಬಿ ಸಿಟಿಂಗ್‌ಗೆ ಬರೋಣ. ಜಿಟಿಎನ್ ಅಂಗಡಿಯಲ್ಲಿ ಇದ್ದರೆ, ಅಲ್ಲೊಂದಷ್ಟು ಜನ ಸೇರಿದ್ದಾರೆಂದೇ ಅರ್ಥ; ಯಾರಾದರೂ ಒಂದು ಪುಸ್ತಕ ಕೇಳಿದರೆ ಅದನ್ನು ಕೊಟ್ಟು ಅದೇ ವಸ್ತುವನ್ನುಳ್ಳ ಇತರ ಪುಸ್ತಕಗಳನ್ನೂ ಅವರಿಗೆ ತೋರಿಸುತ್ತಾ, ಅದರ ಬಗ್ಗೆ ಮಾತಾಡಲು ಪ್ರಾರಂಭಿಸಿದರೆ, ಗಿರಾಕಿಗೆ ತಾನು ಯಾವ ಪುಸ್ತಕ ಕೊಳ್ಳಲು ಅಂಗಡಿಗೆ ಬಂದಿದ್ದೆ ಎಂದೇ ಮರೆತು ಹೋಗಿ, ಜಿಟಿಎನ್ ಹೇಳಿದ ನಾಲ್ಕೈದು ಪುಸ್ತಕಗಳನ್ನು ಕೊಳ್ಳುವುದೇ ಪದ್ಧತಿ. ಅವರು ಬಂದಾಗ, ಸಾಧ್ಯವಾದರೆ ಮೂರು ದಿನವೂ ಸಾಯಂಕಾಲ, ಒಂದೆರಡು ತಾಸು ಅಂಗಡಿಯಲ್ಲಿ ಕುಳಿತು ಅವರ ಮಾತನ್ನು ಕೇಳುತ್ತಿದ್ದೆ –ಸಾರಿ, ಮಧ್ಯೆ ನಾನೂ ಮಾತನಾಡುತ್ತಿದ್ದೆ: ‘ಹೌದಾ? ನಿಜವಾಗಿಯೂ? ಮೈ ಮೈ!’ ಇತ್ಯಾದಿ.

ಜಿಟಿಎನ್ ಅವರ ಮಾತುಗಾರಿಕೆಗೆ ಒಂದು ಉದಾಹರಣೆ. ಅವರ ಒಂದು ಪುಸ್ತಕದಲ್ಲಿ ವಿಜ್ಞಾನಿಗಳನ್ನು ಕುರಿತ ದೀರ್ಘಲೇಖನಗಳಿವೆ (ಹೆಸರು ಮರೆತಿದ್ದೇನೆ; ‘ರಸ ಪ್ರಸಂಗಗಳು’?) ಅದರಲ್ಲಿ ಬರುವ ಸರ್ ಸಿ.ವಿ. ರಾಮನ್ ಅವರ ಸಂದರ್ಶನ ಮಾಡಲು ಜಿಟಿಎನ್ ಪಟ್ಟ ಸಾಹಸ ಹಾಗೂ ಮಾಡಿಕೊಂಡ ತಯಾರಿ, ಅಮೆರಿಕಾದಲ್ಲಿ ಪ್ರಸಿದ್ಧ ವಿಜ್ಞಾನಿ, ನೊಬೆಲ್ ಪ್ರಶಸ್ತಿ ವಿಜೇತ, ಚಂದ್ರಶೇಖರ್ ಅವರ (೧೯೩೬)ರಲ್ಲಿಯೇ ಆದ ಸಂಶೋಧನೆಯನ್ನು ಅಂದಿನ ಪ್ರತಿಷ್ಠಿತ ವಿಜ್ಞಾನಿ ಬಳಗ ಉದ್ದೇಶಪೂರ್ವಕವಾಗಿ ತಿರಸ್ಕರಿಸಿದುದು, ಇವೇ ಮುಂತಾದ ಕೆಲವು ಘಟನೆಗಳನ್ನು ಜಿಟಿಎನ್ ಎಷ್ಟು ಸ್ವಾರಸ್ಯಕರವಾಗಿ ಅರ್ಧ ಘಂಟೆ ಹೇಳಿದರೆಂದರೆ (ಕಥಿಸಿದರೆಂದರೆ), ಕೂಡಲೇ ನಾನು ಆ ಪುಸ್ತಕವನ್ನು ಕೊಂಡುಕೊಂಡು, ಮನೆಗೆ ಹೋಗಿ, ಅದನ್ನು ಓದಿ ಮುಗಿಸಿದೆ. ಅಂದೇ ನಾಲ್ಕು ಘಂಟೆಗೆ ಅವರು ಫೋನ್ ಮಾಡಿದಾಗ ಹೇಳಿದೆ: “ನಿಮ್ಮ ಪುಸ್ತಕವನ್ನು ಓದಿದೆ, ಚೆನ್ನಾಗಿದೆ; ಆದರೆ ನೀವು ಮಾತನಾಡಿದಾಗ ಬರುವ ಥ್ರಿಲ್ ಓದಿದಾಗ ಬರಲಿಲ್ಲ.” ಒಂದು ನಿಮಿಷ ಬಿಟ್ಟು ಅವರು ಹೇಳಿದರು: “ನೋಡಿ, ಮಾತನಾಡುವಾಗ, ಅರ್ಧ ವಾಕ್ಯಗಳು, ಕನ್ನಡ ಇಂಗ್ಲೀಷ್ ಪದಗಳು, ಕವನಗಳ ಉದ್ಧರಣಗಳು, ಇವೆಲ್ಲವನ್ನೂ ಸೇರಿಸಿ ನಾನು ‘ಹೊಡೆದುಕೊಂಡು ಹೋಗಿಬಿಡುತ್ತೇನೆ’ (ಇದು ಅವರದೇ ವಾಕ್ಯ); ಆದರೆ, ಬರೆಯುವಾಗ ಸ್ವಲ್ಪ ಔಪಚಾರಿಕವಾಗಿ ಇರಬೇಕಾಗುತ್ತದೆ, ಅಲ್ಲವೆ?” ಅವರು ಹೀಗೆ ವಿವರಿಸಿದಾಗ, ನನ್ನ ಪ್ರತಿಕ್ರಿಯೆಯಿಂದ ಅವರಿಗೆ ಸಂತೋಷವಾಯಿತೋ ಅಥವಾ ಬೇಜಾರಾಯಿತೋ ಗೊತ್ತಿಲ್ಲ. ಆದರೆ, ಇಷ್ಟಂತೂ ಸತ್ಯಸ್ಯ ಸತ್ಯಂ: ಅವರು ಮಾತನಾಡುವಾಗ ಇರುತ್ತಿದ್ದ ನಾಟಕೀಯತೆ, ಏರಿಳಿತ, ಮುಖಭಾವ, ಸಂಭ್ರಮ, ಇತ್ಯಾದಿ ಅವರ ಬರವಣಿಗೆಯಲ್ಲಿ ಇರಲಿ, ಯಾರ ಬರವಣಿಗೆಯಲ್ಲಿಯೂ ಸಾಧ್ಯವಿಲ್ಲ. (ಇಲ್ಲಿ ನನಗೊಂದು ಸಂದೇಹ: ಇದು ಕೇವಲ ಮೌಖಿಕ ಸಂವಹನೆಯ ಸಾಮರ್ಥ್ಯವಲ್ಲ, ಪ್ರಾಯಃ; ಬದುಕನ್ನು ಕುರಿತ ಉತ್ಸಾಹ –ಲಸ್ಟ್ ಫ಼ಾರ್ ಲೈಫ಼್ – ಇದಕ್ಕೆ ಕಾರಣ. ಕೂಡಲೇ ನನ್ನ ನೆನಪಿಗೆ ಬರುವವರು ಅಂದರೆ ನನ್ನ ತಂದೆ. ವೇದ–ಸಂಸ್ಕೃತ-ಕನ್ನಡ ಸಾಹಿತ್ಯಗಳ ಅಪಾರ ಜ್ಞಾನ-ಅಗಾಧ ನೆನಪು ಇವುಗಳಿದ್ದ ಅವರು ಮಾತನಾಡಲು ಪ್ರಾರಂಭಿಸಿದರೆಂದರೆ ಎಲ್ಲರಿಗೂ ಮೋಡಿಯಾದಂತೆಯೆ. ನನ್ನ ಮದುವೆಯ ಸಂದರ್ಭದಲ್ಲಿ, ಗಾಡಿಯಲ್ಲಿ ರಾತ್ರಿ ನಾವು ಭಾವಿ ಪತ್ನಿಯ ಮನೆಗೆ ಹೋಗುತ್ತಿದ್ದಾಗ, ನನ್ನ ತಂದೆಯವರ -ಕರ್ಣನ ಕಥೆಯನ್ನು ಕೇಳುತ್ತಾ ಗಾಡಿಯವನು ಒಂದು ಹಳ್ಳದ ಬಳಿ ಎತ್ತುಗಳು ನಿಂತಾಗ ಮಾತ್ರ ಆ ಕಡೆ ನೋಡಿದ್ದ; ಆ ಎತ್ತುಗಳಿಗೆ ಅಂತರ್ಜ್ಞಾನವಿಲ್ಲದಿದ್ದರೆ ಇಂದು ನಾನು ಈ ಬ್ಲಾಗ್ ಬರೆಯುತ್ತಿರಲಿಲ್ಲ.)

ಜಿಟಿಎನ್ ಅವರ ಬರವಣಿಗೆಯ ಮತ್ತೊಂದು ಮಿತಿಯೆಂದರೆ (ಮಿತಿ? ಲಕ್ಷಣ?) ಅವರ ಅತಿಯಾದ ಅಲಂಕಾರಪ್ರಿಯತೆ, ಗ್ರಾಂಥಿಕ ಶೈಲಿ. ಇದರ ಬಗ್ಗೆ ಅನೇಕ ಸಂದರ್ಭಗಳಲ್ಲಿ ನಮ್ಮಿಬ್ಬರ ನಡುವೆ ಚರ್ಚೆಯಾಗುತ್ತಿತ್ತು; ಆಗ, ಅವರು ಆವೇಶದಿಂದ ತಮ್ಮ ಶೈಲಿಯನ್ನು ಸಮರ್ಥಿಸಿಕೊಳ್ಳುತ್ತಿದ್ದರು; ‘ವೈಜ್ಞಾನಿಕ ವಿಷಯಗಳ ಬಗ್ಗೆ ಬರೆಯುವಾಗ ನಿಖರತೆ ಇರಬೇಕು; ಅದು ಬರುವುದು ತಕ್ಕ ಪದಗಳನ್ನು ಉಪಯೋಗಿಸಿದಾಗ ಮಾತ್ರ –ಸರಳತೆಯೊಂದೇ ನಿಕಷವಲ್ಲ’ ಎಂದು ಘೋಷಿಸುತ್ತಿದ್ದರು. ಇದಕ್ಕೆ ಕಾರಂತರು ಅಪವಾದವಲ್ಲವೆ ಎಂದರೆ, ಕಾರಂತರದು ವೈಜ್ಞಾನಿಕ ಬರಹವಲ್ಲ, ಅವರದು ಜನಪ್ರಿಯ ಬರಹ ಎಂದು ಹೇಳುತ್ತಾ, ‘ಉದಾಹರಣೆ ಕೊಡಿ’ ಎಂದಾಗ, ಕಾರಂತರು ಗ್ರಹಣಗಳ ಬಗ್ಗೆ ಬರೆದುದನ್ನು ವಿಶ್ಲೇಷಿಸುತ್ತಾ, ಅದರಲ್ಲಿ ಎಷ್ಟು ತಪ್ಪು ಗ್ರಹಿಕೆಗಳಿವೆ ಎಂಬುದನ್ನು ಖಾರವಾಗಿ ವಿವರಿಸುತ್ತಿದ್ದರು. ಕಾದಂಬರಿಕಾರ ಕಾರಂತರ ಬಗ್ಗೆ, ವೈಜ್ಞಾನಿಕ ದೃಷ್ಟಿಕೋನದ ಕಾರಂತರ ಬಗ್ಗೆ ಅವರಿಗೆ ಅಗಾಧ ಗೌರವವಿತ್ತು; ಆದರೆ, ಅವರ ವಿಜ್ಞಾನ ಪ್ರಪಂಚವನ್ನು ಸಂಪೂರ್ಣವಾಗಿ ರಿವೈಸ್ ಮಾಡಬೇಕು ಎನ್ನುತ್ತಿದ್ದರು. ನಾನೂ ವಾದ ಮಾಡುವಾಗ ಬಹು ಬೇಗ ತಾಳ್ಮೆಯನ್ನು ಕಳೆದುಕೊಳ್ಳುತ್ತೇನೆ. ಅಂತಹ ಸಂದರ್ಭಗಳಲ್ಲಿ “ ‘Black Hole ಎನ್ನುವುದನ್ನು ‘ಕೃಷ್ಣ ಕುಹರ’ ಅಥವಾ ‘ಕೃಷ್ಣ ವಿವರ’ ಎನ್ನುವುದು ನಿಮ್ಮ ಪಾಂಡಿತ್ಯ ಪ್ರದರ್ಶನವಲ್ಲವೆ? ‘ಕಪ್ಪು ರಂಧ್ರ’ಎಂದರೇನು ತಪ್ಪು?” ಎನ್ನುತ್ತಿದ್ದೆ. ಆದರೆ, ನಮ್ಮಲ್ಲಿ ಯಾರ ಮನಃಪರಿವರ್ತನೆಯೂ ಆಗುತ್ತಿರಲಿಲ್ಲ.

ಸಾರಿ. ಅದು ಸಂಪೂರ್ಣ ಸತ್ಯವಲ್ಲ. ಒಂದು ಸಂದರ್ಭದಲ್ಲಿ, ಪುತ್ತೂರಿನ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದಾಗ, ಅವರು ನನ್ನನ್ನು ಕೇಳಿದರು (ಅಥವಾ ನನಗೆ ಹೇಳಿದರು): “ನನ್ನ ಕನ್ನಡದ ಕೃತಿಯೊಂದು ಇಂಗ್ಲೀಷಿಗೆ ಅನುವಾದವಾಗಿದೆ; ಅದು ಚಂದ್ರಶೇಖರ್, ರಾಮನ್, ಮುಂತಾದ ಮಹಾನ್ ಮೇಧಾವಿಗಳನ್ನು ಕುರಿತಿದೆ. ಅದಕ್ಕೆ ಈ ಹೆಸರು ಸರಿಯಾಗುತ್ತದೋ ನೋಡಿ” ಎಂದು ಹೇಳುತ್ತಾ, ‘Foot Prints on the Sands of Time’ ಎಂತಲೋ ಏನೋ ಹೇಳಿದರು. ನಾನು ಅಸಮಾಧಾನದಿಂದ “ ಅಷ್ಟೆಲ್ಲಾ ಯಾಕೆ? ಸುಮ್ಮನೆ With the Great Minds ಅನ್ನಿ,’ ಎಂದೆ. ‘ಅಯ್ಯೋ! ಅಷ್ಟೇ ಸಾಕೆ?’ ಎಂದರು. ಸಾಕು ಎಂದೆ ನಾನು. ಎರಡು ತಿಂಗಳುಗಳಾದ ಮೇಲೆ, ನನಗೊಂದು ಪುಸ್ತಕವನ್ನು ಅಶೋಕವರ್ಧನ್ ಕೊಟ್ಟರು; ನಾನು ಸೂಚಿಸಿದ ಶೀರ್ಷಿಕೆಯೇ ಇದೆ. ಆಶ್ಚರ್ಯವಾಯಿತು. (ಆದರೆ, ಈಗ, ಅಲ್ಲಿರುವ ‘ದ’ ಆರ್ಟಿಕಲ್ ಉಚಿತವೆ ಅಲ್ಲವೆ ಎಂಬ ಸಂದೇಹ ನನ್ನನ್ನು ಕಾಡುತ್ತದೆ; ಪ್ರಾಯಃ, ‘ದ’ ಬೇಕಿಲ್ಲ.) ಇದೊಂದೇ ಬಾರಿ ಅವರು ತಮ್ಮ ‘ಕೃಷ್ಣಕುಹರತ್ವ’ವನ್ನು ಬಿಟ್ಟುದು ಎಂದು ಕಾಣುತ್ತದೆ.

ಹಾಗೆಯೇ, ಜಿಟಿಎನ್ ಅವರಿಗೆ ಸಾಹಿತ್ಯವೆಂದರೆ ಕಾಳಿದಾಸ, ಡಿವಿಜಿ; ಸಂಗೀತವೆಂದರೆ ಅಭಿಜಾತ ಸಂಗೀತ; ಈ ಬಗೆಯ ಅಭಿರುಚಿ ಗಟ್ಟಿಯಾಗಿತ್ತು. ಮತ್ತು, ವಿಜ್ಞಾನಿಗಳು, ಸಾಹಿತಿಗಳು, ಸಂಗೀತಕಾರರು ಇವರನ್ನು ಹೊರತುಪಡಿಸಿದರೆ ಇತರರು ಯಾರೂ ‘ಗಣ್ಯ’ರಲ್ಲ ಎಂಬ ನಿಲುವು. ಇದರೊಡನೆ ಅವರಿಗಿದ್ದ ಅಪಾರ ಸ್ವಾಭಿಮಾನ. ಈ ನಿಲುವು ಎಫ಼್. ಆರ್. ಲೀವಿಸ್ ನಂಬಿದ್ದ ‘ಶ್ರೇಷ್ಠ ಸಂಸ್ಕೃತಿ’ ‘ಜನಪ್ರಿಯ ಸಂಸ್ಕೃತಿ’ ಈ ದ್ವಿಮಾನ ವೈರುದ್ಧ್ಯವನ್ನು ಹೋಲುತ್ತದೆ. ಈ ಘಟನೆ ಅವರೇ ನನ್ನೊಡನೆ ಒಂದು ಸಲ ಅದೊಂದು ಸಾಧನೆಯೆಂಬಂತೆ ಹೇಳಿದುದು.

ಮೈಸೂರಿನಲ್ಲಿ ಕೆಲವು ಗಣ್ಯರಿಗೆ ಒಂದು ಖಾಸಗಿ ಸಂಸ್ಥೆ ಸನ್ಮಾನವನ್ನು ಏರ್ಪಡಿಸಿತ್ತು (ಇದು ಜಿಟಿಎನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬರುವುದಕ್ಕೆ ಮುಂಚೆ); ಅದರಲ್ಲಿ, ಜಿಟಿಎನ್, ಜೆ. ಆರ್. ಲಕ್ಷ್ಮಣರಾವ್, ಇವರೇ ಮುಂತಾದ ಐದಾರು ಜನರಿದ್ದರಂತೆ. ಹಾಗೆಯೇ ಜನಪ್ರಿಯ ನಟನೊಬ್ಬನೂ ಇದ್ದನಂತೆ. (ರಾಜ್ ಕುಮಾರ್ ಅಲ್ಲ.) ಸಮಯಕ್ಕೆ ಸರಿಯಾಗಿ ಎಲ್ಲ ಗಣ್ಯರೂ ಸೇರಿದರು – ಆ ನಟನೊಬ್ಬನನ್ನು ಹೊರತುಪಡಿಸಿ; ಅವರು ಬಂದುದು ಅರ್ಧ ಘಂಟೆ ತಡವಾಗಿ. ಅನಂತರ ಆ ನಟ ಬಂದಾಗ ‘ನಾವು ಯಾರೂ ಏಳತಕ್ಕದ್ದಲ್ಲ’ ಎಂದು ಎಲ್ಲರಿಗೂ ಜಿಟಿಎನ್ ತಾಕೀತು ಮಾಡಿದ್ದರಂತೆ. ಹಾಗೆಯೇ, ಆ ನಟನ ಭವ್ಯ ಪ್ರವೇಶವಾದಾಗ ಎಲ್ಲರೂ ಎದ್ದು ನಿಂತರೂ ಈ ಗಣ್ಯರು ಕುಳಿತೇ ಇದ್ದರಂತೆ. ಕಿಕ್ಕಿರಿದಿದ್ದ (ನಟನನ್ನು ನೋಡುವುದಕ್ಕಾಗಿ ಬಂದಿದ್ದ) ಸಭೆಯಲ್ಲಿ ಒಂದಿಬ್ಬರು ‘ಎದ್ದು ನಿಂತುಕೊಳ್ರೀ –ನೀವೇನು ಬೇರೇನಾ?” ಎಂದು ಕಿರುಚಿದರಂತೆ. ಆದರೆ ಜಿಟಿಎನ್ ಇತ್ಯಾದಿ ಆ ಕೂಗು ಕೇಳದವರಂತೆ ಸುಮ್ಮನೇ ಇದ್ದರಂತೆ. (ನಾನಿಲ್ಲಿ ಜಿಟಿಎನ್ ಹೇಳಿದ್ದ ಕಥೆಯ ಸಮ್ಮರಿ ಕೊಡುತ್ತಿದ್ದೇನೆ, ಅಷ್ಟೆ.) ಅನಂತರ, ಕಾರ್ಯಕ್ರಮ ಹೇಗೋ ಮುಗಿಯಿತಂತೆ.

ಈ ಕಥನ ಮುಗಿದನಂತರ ನಾನು ಕೇಳಿದೆ: “ಎದ್ದು ಗೌರವ ಸೂಚಿಸಿದ್ದರೆ ನಿಮಗೇನು ನಷ್ಟವಾಗುತ್ತಿತ್ತು? ಯಾಕೆ ಹಾಗೆ ಮಾಡಿದಿರಿ?” ಅವರು ಒಂದು ವೈಜ್ಞಾನಿಕ ವಿಷಯವನ್ನು ನಿರೂಪಿಸುವಂತೆ ವಿವರಿಸಿದರು: “ ಅವನೇನೂ ವರದಾಚಾರ್ ಅಲ್ಲ; ಅವನಿಗೆ ಸಾಹಿತ್ಯ, ಸಂಗೀತ ಇವುಗಳ ಗಂಧವೂ ಗೊತ್ತಿಲ್ಲ. ಅವನಿಗೆ ನಾವು ಯಾಕೆ ಗೌರವ ಕೊಡಬೇಕು? ವಿದ್ವತ್ತಿಗೆ ಏನೂ ಬೆಲೆಯಿಲ್ಲವೆ?” ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. (ಈಗಲೂ ನನಗೆ ಅವರು ಮಾಡಿದ್ದುದು ಸರಿಯೋ ತಪ್ಪೋ ಗೊತ್ತಾಗುತ್ತಿಲ್ಲ.) ಇಂತಹುದೇ ಮತ್ತೊಂದು ಸಂದರ್ಭ ಅವರು ‘ಸ್ಟಾರ್ ಆಫ಼್ ಮೈಸೂರ್’ ಪತ್ರಿಕೆಗೆ ಸಂಗೀತ ಕಾರ್ಯಕ್ರಮಗಳನ್ನು ಕುರಿತ ತಮ್ಮ ವಿಮರ್ಶೆಯನ್ನು ಬರೆಯುತ್ತಿದ್ದಾಗ ಬಂದಿತಂತೆ. ಚೆನ್ನೈಯಿಂದ ಯುವ ಪ್ರತಿಭೆಯೊಬ್ಬ (ಪ್ರಾಯಃ, ಕೊಳಲು ವಿದ್ವಾಂಸ) ಮೈಸೂರಿಗೆ ಬಂದು, ತನ್ನ ಪ್ರೌಢಿಮೆಯನ್ನು ಪ್ರದರ್ಶಿಸಲು ಬಗೆಬಗೆಯ ಸ್ವರ-ಪ್ರಸ್ತಾರಗಳನ್ನು ನುಡಿಸಿದಾಗ, ಆ ಪ್ರದರ್ಶನವನ್ನು ಕುರಿತು ‘ಅದರಲ್ಲಿ ಗ್ರೇಸ್ ಇರಲಿಲ್ಲ; ಬರೀ ಒಣ ಪಾಂಡಿತ್ಯ, ತಾಳ-ಚಮತ್ಕಾರ’ ಇತ್ಯಾದಿ ಖಾರವಾಗಿ ಬರೆದು, ಅದು ಅನೇಕ ಚೆನ್ನೈ ಮೂಲದ ವಿದ್ವಾಂಸರನ್ನು ರೇಗಿಸಿತ್ತಂತೆ.

ಜಿಟಿಎನ್ ಅವರ ಕೃತಿಗಳ ಪ್ರಸಾರ-ವಿಮರ್ಶೆ ಇನ್ನೂ ಆಗಿಲ್ಲ; ಆದರೆ ಆಗಬೇಕಾಗಿದೆ. ಅವರ ಚಂದ್ರಶೇಖರ್ ಅವರ ಜೀವನ ಚರಿತ್ರೆ ಸುಬ್ರಹ್ಮಣ್ಯನ್ ಚಂದ್ರಶೇಖರ್ ಕನ್ನಡದಲ್ಲಿ ಬಂದಿರುವ ಅತ್ಯುತ್ತಮ ಜೀವನಚರಿತ್ರೆಗಳಲ್ಲಿ ಒಂದು; ಅದಕ್ಕೆ ಆ ವರ್ಷ (೨೦೦೩?) ಕ. ಸಾ. ಅಕಾಡೆಮಿಯ ಪುಸ್ತಕ ಬಹುಮಾನ ಬಂದಿತೋ ಇಲ್ಲವೋ ಗೊತ್ತಿಲ್ಲ; ಆದರೆ ಬರಬೇಕಾದ ಕೃತಿ ಅದು. ಅಸಾಧಾರಣ ವಿದ್ವತ್ತು, ತಮ್ಮ ನಾಯಕನ ಬಗ್ಗೆ ಇರುವ ಅನನ್ಯ ಪ್ರೀತಿ-ಗೌರವಗಳು, ಮತ್ತು ಸಂಶೋಧನೆಯಿಂದ ದೊರಕಿದ ಖಚಿತ ವಿವರಗಳು ಇವುಗಳಿಂದ ಕೂಡಿದ ಆ ಜೀವನಚರಿತ್ರೆಯನ್ನು ಓದುವುದೇ ಒಂದು ಅಪೂರ್ವ ಅನುಭವ.

ಜಿಟಿಎನ್ ಅವರ ವ್ಯಕ್ತಿತ್ವಕ್ಕೆ ಎಷ್ಟು ಮುಖಗಳು! ಪವಾಡಗಳನ್ನು ಬಯಲು ಮಾಡಲು ಡಾ. ನರೇಂದ್ರ ನಾಯಕ್ ಅವರೊಡನೆ ಕಾರ್ಯಕ್ರಮಗಳು-ಲೇಖನಗಳು, ವಿಜ್ಞಾನಿಗಳ ಜೀವನಚರಿತ್ರೆಗಳು-ಅನುವಾದಗಳು (ಐನ್‌ಸ್ಟೈನ್ ಜೀವನಚರಿತ್ರೆಯ ಅನುವಾದ), ಅಭಿಜಾತ ಸಂಗೀತದ ಬಗ್ಗೆ ಲೇಖನಗಳು ಮತ್ತು ಮಹಾಲಿಂಗಮ್ ಇತ್ಯಾದಿ ಮಹಾನ್ ಸಂಗೀತಗಾರರ ಸಂದರ್ಶನಗಳು, ಅಂಕಣ ಬರಹಗಳು . . . ಕೊನೆಗೂ ಅವರಿಗೆ ೨೦೦೭ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರಕಿದುದು (ಮತ್ತು ಅವರೊಡನೆಯೇ ನನಗೂ ಆ ಪ್ರಶಸ್ತಿ ದೊರಕಿದುದು) ನಮಗೆಲ್ಲರಿಗೂ ತುಂಬಾ ಸಂತೋ ದ ಸಂಗತಿ.

ತಾವು ನಂಬಿದ ತತ್ವ-ಆದರ್ಶಗಳಿಗೆ ಒಂದು ಚೂರೂ ಧಕ್ಕೆ ಬರದಂತೆ, ಅದಕ್ಕಾಗಿ ಎಷ್ಟು ಬೆಲೆ ತೆತ್ತಾದರೂ ಸರಿಯೆ, ಹಾಗೇ ಜಿಟಿಎನ್ ಬದುಕಿನುದ್ದಕ್ಕೂ ನಡೆದುಕೊಂಡರು. ಅನೇಕರು ಅವರ ಸ್ನೇಹ-ಪ್ರಾಮಾಣಿಕತೆ-ವಿದ್ವತ್ತಿಗೆ ಮಾರು ಹೋದರೆ ಮತ್ತೆ ಅನೇಕರು ಅವರದು ‘ಗರ್ವ, ತಾನು ಸರಿ-ಮಿಕ್ಕವರೆಲ್ಲರೂ ತಪ್ಪು ಎಂಬಂತಹ ಅತಿಯಾದ ಆತ್ಮಪ್ರತ್ಯಯ’ ಎಂದು ಅವರಿಂದ ದೂರವಿದ್ದರು. ಜಿಟಿಎನ್ ಮಾತ್ರ ಸಂತೋಷದಿಂದ, ತೃಪ್ತಿಯಿಂದ ತಮ್ಮ ದಾರಿಯಲ್ಲಿ ತಾವು ನಡೆದರು; ಅವರ ‘ಮುಗಿಯದ ಪಯಣ’ ಒಂದು ಘಟ್ಟದಲ್ಲಿ ಮುಗಿದಾಗಲೂ ತಮ್ಮ ದೇಹವನ್ನು ಆಸ್ಪತ್ರೆಯೊಂದಕ್ಕೆ ದಾನ ಮಾಡಿ ತಮ್ಮ ‘ಸಾಮಾಜಿಕ ಋಣ’ವನ್ನು ತೀರಿಸಿದರು. ಅವರು ಬರೆದ ಕೊನೆಯ ಕೃತಿ ಮುಗಿಯದ ಪಯಣವನ್ನು ನಾನು ಓದಿ, ಅದರ ಬಗ್ಗೆ ಅವರಿಗೆ ಬರೆದ ಒಂದು ಸಣ್ಣ ಪತ್ರದೊಡನೆ ಈ ಕಿರು ಲೇಖನವನ್ನು ಮುಗಿಸಬಹುದು:
“ಮಾನ್ಯ ಪ್ರೊ. ಜಿ. ಟಿ. ಎನ್. ಅವರಿಗೆ:

ನಮಸ್ಕಾರ. ಮೊನ್ನೆ ಕಾರ್ಯಕ್ರಮದಲ್ಲಿ ಅನಾರೋಗ್ಯದ ಕಾರಣದಿಂದ ನೀವು ಭಾಗವಹಿಸಲಿಲ್ಲವೆಂದು ತಿಳಿದು ತುಂಬಾ ಆತಂಕವಾಯಿತು. ಈ ಕಾಗದ ನಿಮ್ಮನ್ನು ತಲಪುವ ಹೊತ್ತಿಗೆ ನೀವು ಸಂಪೂರ್ಣ ಗುಣಮುಖರಾಗಿರುತ್ತೀರೆಂದು ನಂಬಿದ್ದೇನೆ.

ಈ ಕಾಗದವನ್ನು ಬರೆಯುತ್ತಿರುವುದರ ಮುಖ್ಯ ಕಾರಣ ನಿಮ್ಮ ಮುಗಿಯದ ಪಯಣವನ್ನು ಓದಿ ನನಗೆ ಆದ ಸಂತೋಷವನ್ನು ನಿಮ್ಮೊಡನೆ ಹಂಚಿಕೊಳ್ಳುವ ತವಕ. ನಿಜ ಹೇಳಬೇಕೆಂದರೆ, ಇಡಿಯಾಗಿ ನಿಮ್ಮ ಕೃತಿಯನ್ನು ನಾನು ಓದಲಿಲ್ಲ; ಈ ಮೊದಲೇ ನಿಮ್ಮ ನನ್ನ ಎನ್‌ಸಿಸಿ ದಿನಗಳು ಓದಿದ್ದೆನಾದ ಕಾರಣ ’ಪಯಣ’ದ ಮಧ್ಯದಿಂದ (ಎಂದರೆ, ನೀವು ಮಾಸ್ತಿಯವರ ಭಾವಕ್ಕೆ ಲಿಪಿಕಾರನಾಗಿ ತೊಡಗಿದಂದಿನಿಂದ ಪ್ರಾರಂಭಿಸಿ), ಕೃತಿಯನ್ನು ಪೂರ್ಣ ಓದಿ ಮುಗಿಸಿದೆ. ಇದು ’ಆತ್ಮಕಥನ’ವಾದರೂ ಒಂದು ರೋಚಕ ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ ಮತ್ತು ಉದ್ದಕ್ಕೂ ನಿಮ್ಮ ನೇರ ಮಾತು-ಕೃತಿ ಮತ್ತು ಅಸೀಮ ಆತ್ಮಪ್ರತ್ಯಯ ಇವುಗಳು ಎದ್ದು ಕಾಣುತ್ತವೆ. ಮಾಸ್ತಿಯವರ ಸುಸಂಸ್ಕೃತ ನಡೆ-ನುಡಿ –ಸಿ. ವಿ. ರಾಮನ್ನರೊಡನೆ ನೀವು ಕಟ್ಟಿಕೊಂಡ ಸಾಹಸಮಯ ಸಾಹಚರ್ಯ (ಈ ಭಾಗವನ್ನು ಇಂಗ್ಲೀಷ್‌ನಲ್ಲಿ ಓದಿಯೂ ಕನ್ನಡದಲ್ಲಿ ಮತ್ತೆ ಓದುವುದು ಬೇಸರವಾಗಲಿಲ್ಲ) — ಬೆಂಗಳೂರು-ಮೈಸೂರು ವಿ. ವಿ.ಗಳಂತಹ ಸಂಸ್ಥೆಗಳೊಡನೆ ನೀವು ನಡೆಸಿದ ಹೋರಾಟ — . . . ವರಂತಹ ಕುಲಪತಿ(?)ಗಳನ್ನು “cheap thirdrate administrator” ಎಂದು ಸಂಬೋಧಿಸುವ ನಿಮ್ಮ ನೈತಿಕ ಸ್ಥೈರ್ಯ — ಅನುವಾದದಲ್ಲಿ ಚರ್ಚು ’Mr. Church’ ಆದದ್ದು — ನೀವು ಮಾಡಿಸಿದ ಮತ್ತು ಮಾಡಿಸದ ಮದುವೆಗಳು — ಇತ್ಯಾದಿಗಳನ್ನು ಓದುತ್ತಿರುವಾಗ, ನಿಜವಾಗಿಯೂ ಇದು ಕೇವಲ ಒಬ್ಬ ವ್ಯಕ್ತಿಯ ಆತ್ಮಕಥೆಯಲ್ಲ; ಒಂದು ಕಾಲಘಟ್ಟದ, ಕರ್ನಾಟಕದ, ಶೈಕ್ಷಣಿಕ-ಸಾಹಿತ್ಯಕ ಆಯಾಮದ ಚರಿತ್ರೆ ಎಂದು ಭಾಸವಾಗುತ್ತದೆ. ಇದಕ್ಕೆ ಕಾರಣ ಪ್ರತಿಯೊಂದು ಘಟನೆಯನ್ನೂ ಆಸಕ್ತಿಯಿಂದ ನೀವು ನಿರೂಪಿಸುವುದು ಮತ್ತು ಅಂತಹ ನಿರೂಪಣೆಯ ಹಿನ್ನೆಲೆಯಲ್ಲಿರುವ ನಿಮ್ಮ ಜೀವನೋತ್ಸಾಹ (ಇನ್ನೊಬ್ಬರ ಮಾತನ್ನು ಕದಿಯುವುದಾದರೆ ’Lust for life’ ಎಂದರೆ ಸರಿಯಾದೀತೆ?). ಒಟ್ಟಿನಲ್ಲಿ, ನಿಜವಾಗಿಯೂ ನಿಮ್ಮ ಕೃತಿಯ ಓದಿನಿಂದ ನನಗೆ ಸಂತೋಷವಾಯಿತು ಮತ್ತು ನನ್ನ ಅನುಭವಲೋಕ ವಿಸ್ತರಿಸಿತು. ಕೃತಿಯನ್ನು ನನಗೆ ಕಳಿಸಿಕೊಟ್ಟ ನಿಮ್ಮ ಪ್ರೀತಿಗೆ ಕೃತಜ್ಞನಾಗಿದ್ದೇನೆ.

ಇನ್ನು, ದೂರವಾಣಿಯಲ್ಲಿ ಮಾತನಾಡುವಾಗ ನೀವು ಪ್ರಸ್ತಾಪಿಸಿದ ನನ್ನ ಭಾಷಣದ ಬಗ್ಗೆ. ನಾನು ಮೊದಲಿಗೆ ’ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕೆಂದು ಹೋರಾಡುವುದು ಹೇಗೆ ಅರ್ಥಹೀನ; ಹೇಗೆ ಎಲ್ಲಾ ಭಾಷೆಗಳೂ ಶಾಸ್ತ್ರಬದ್ಧವಾಗಿಯೇ ಇರುತ್ತವೆ’ ಎಂಬುದನ್ನು ಹೇಳಿ, ಅನಂತರ ’ಯಾವುದೇ ಸಾಹಿತ್ಯಕ್ಕೆ ಎರಡು ಆಯಾಮಗಳಿರುತ್ತವೆ; ಇವನ್ನು ಒಳಮೈ ಮತ್ತು ಹೊರಮೈ ಎಂದು ಕರೆಯಬಹುದು. ಇಂದು (ಎಂದರೆ ಕಳೆದೆರಡು ದಶಕಗಳಿಂದ) ಯಾವ ಚಳುವಳಿಯ ಅಬ್ಬರವೂ ಇಲ್ಲದಿರುವುದರಿಂದ ಕನ್ನಡದ ಒಳಮೈ ಬಹುಧ್ವನಿಯುಕ್ತವಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೃತಿಗಳು ಹೊರಬರುತ್ತಿವೆ. ಆದರೆ, ಅದರ ’ಹೊರಮೈ’ ಚಿಂತನೆಗೆ ಕಾರಣವಾಗಿದೆ; ಏಕೆಂದರೆ, ಸರಕಾರದ ಸಗಟು ಖರೀದಿಯಿಂದಾಗಿ ಪುಸ್ತಕಗಳು ಸರಕಾರದ / ಗ್ರಂಥಾಲಯಗಳ ಉಗ್ರಾಣಗಳಲ್ಲಿ ಕೊಳೆಯುತ್ತವೆ; ಮತ್ತು ಸಗಟು ಖರೀದಿಗಾಗಿಯೇ ಇಂದು ಖಾಸಗಿ ಪ್ರಕಾಶಕರು ಕೇವಲ ೫೦೦ ಪ್ರತಿಗಳನ್ನು ಮುದ್ರಿಸಿ, ತೃಪ್ತರಾಗುತ್ತಾರೆ; ಪುಸ್ತಕವ್ಯಾಪಾರಿಗಳಿಗೆ ಹಾಗೂ ಓದುಗರಿಗೆ ಪುಸ್ತಕಗಳು ದೊರಕುವುದೇ ಇಲ್ಲ. ಇದು ವಿತರಣೆಯ ಸಮಸ್ಯೆಯಾದರೆ, ಇನ್ನು ಎಲ್ಲಾ ವಿವಿಗಳ/ಅಕಾಡೆಮಿಗಳ ’೫೦%’ ರಿಯಾಯಿತಿ ಮಾರಾಟದಿಂದ ಪುಸ್ತಕ ವ್ಯಾಪಾರಿಗಳು ಸೋಲುತ್ತಿದ್ದಾರೆ. ಅತಿ ಮುಖ್ಯವಾಗಿ, ಇಂದು ತೀವ್ರ ಅಸಹನೆಯ ವಾತಾವರಣ ಸಾಹಿತ್ಯ ಲೋಕವನ್ನು ಆವರಿಸಿದೆ; ಇತ್ಯಾದಿ.

ಆದರೆ ಇಷ್ಟು ಸ್ಪಷ್ಟವಾಗಿ ಈ ಅಂಶಗಳನ್ನು ಅಂದು ನಾನು ನಿರೂಪಿಸಿದೆನೋ ಇಲ್ಲವೋ ಗೊತ್ತಿಲ್ಲ. ಸಭೆಯಲ್ಲಿ ನೀವಿದ್ದರೆ ಚೆನಾಗಿರುತ್ತಿತ್ತು. ಇರಲಿ; ಪತ್ರವು ದೀರ್ಘವಾಯಿತು. ತಲಪಿದುದಕ್ಕೆ ದೂರವಾಣಿಯ ಮೂಲಕ ದಯವಿಟ್ಟು ತಿಳಿಸಿ. ವಂದನೆಗಳೊಡನೆ,

ನಿಮ್ಮ,
ರಾಮಚಂದ್ರನ್

ಟಿಪ್ಪಣಿ: ನಾನು ಪತ್ರದಲ್ಲಿ ಉಲ್ಲೇಖಿಸಿರುವ ಕಾರ್ಯಕ್ರಮ, ಪ್ರಾಯಃ, (೨೦೦೭/೦೮?) ರಲ್ಲಿ ನಡೆದ ‘ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ‘ಸಮಾರೋಪ ಭಾಷಣ.’

– ಸಿ. ಎನ್. ರಾಮಚಂದ್ರನ್