ಹಣ್ಣು ಬಂದಿದೆ, ಕೊಳ್ಳಿರೋ: ಏಕವ್ಯಕ್ತಿ ಯಕ್ಷಗಾನ ಪ್ರಯೋಗಕ್ಕೀಗ ಹತ್ತು ಮೀರಿದ ಹರಯ, ಸಾವಿರಕ್ಕೂ ಮಿಕ್ಕ ಪ್ರದರ್ಶನಗಳ ದೃಢತೆ ಬಂದಿವೆ. ಸಂಶೋಧನೆ, ಪರಿಕಲ್ಪನೆ ಮತ್ತು ಸಾಹಿತ್ಯದ ನೆಲೆಯಲ್ಲಿ ಶತಾವಧಾನಿ ಡಾ| ರಾ. ಗಣೇಶರದು ಬತ್ತದ ಹೆದ್ದೊರೆ. ಅವೆಲ್ಲವೂ ಅಸಂಖ್ಯ (ಧ್ವನಿಮುದ್ರಿತ) ಭಾಷಣ, ವಿಚಾರಗೋಷ್ಠಿ, ಪತ್ರಿಕಾ ಲೇಖನಗಳಲ್ಲಿ ಅಲ್ಲದೇ ಎರಡು ಪುಸ್ತಕಗಳಲ್ಲು ಸಾಕಷ್ಟು ವಿವರಗಳಲ್ಲಿ ದಾಖಲಾಗಿವೆ. (೧. ಶತಾವಧಾನಿ ಗಣೇಶರ ‘ಯಕ್ಷರಾತ್ರಿ’ – ಯಕ್ಷ-ಲೇಖನಗಳ ಸಂಚಯ ಮತ್ತು ೨. ಪಾದೇಕಲ್ಲು ವಿಷ್ಣು ಭಟ್ಟರ ಸಂಪಾದಕತ್ವದ ‘ಅನನ್ಯ ವ್ಯಕ್ತಿ’ – ಏಕವ್ಯಕ್ತಿ ಯಕ್ಷಗಾನದ ಸಾವಿರನೇ ಪ್ರದರ್ಶನದಂದು ಬಿಡುಗಡೆಗೊಂಡ ಗೌರವ ಗ್ರಂಥ. ಎರಡೂ ರಾ.ಗೋ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ ಕಾಲೇಜು, ಉಡುಪಿ-೨ ಇಲ್ಲಿ ಲಭ್ಯ.) ಆದರೆ ಹೊಸ ದಿನ, ಹೊಸ ಪರಿಸರಕ್ಕೆ ಪುನಃಸೃಷ್ಟಿಗೊಳ್ಳುತ್ತಲೇ ಬಂದ ನಿಜ ಪ್ರದರ್ಶನ ಅಂದರೆ, ಭಾಗವತ ಗಣಪತಿ ಭಟ್ಟರ ರಸಧಾರೆ, ಅನಂತಪದ್ಮನಾಭ ಪಾಠಕರ ಮದ್ದಳೆ ಹಾಗೂ ಕೃಷ್ಣಯಾಜಿಯರ ಚಂಡೆಗಳ ಅಪೂರ್ವ ಲಯವಿನ್ಯಾಸ ಮತ್ತು ಎಲ್ಲಕ್ಕೂ ಸಾರ್ಥಕತೆ ಒದಗಿಸುವಂತೆ ಮಂಟಪ ಪ್ರಭಾಕರ ಉಪಾಧ್ಯರ ರಂಗಪ್ರಸ್ತುತಿ ಮತ್ತು ಅಭಿನಯ ವಿಲಾಸ ಸಹೃದಯರ ಭಾವಕೋಶವನ್ನು ಮಾತ್ರ ಸಂಪನ್ನಗೊಳಿಸುತ್ತಿತ್ತು. ಕಾಲದ ಹರಿವಿಗೆ ಹುಡಿಮಣ್ಣ ಕಟ್ಟೆ ಕಟ್ಟುವವರು ಅಸಂಖ್ಯ ಸ್ಥಿರ ಚಿತ್ರಗಳಲ್ಲಿ, ಹವ್ಯಾಸೀ ವಿಡಿಯೋ ತುಣುಕುಗಳಲ್ಲಿ ಅವನ್ನು ದಾಖಲಿಸಿದ್ದೂ ಧಾರಾಳ ಸಿಗುತ್ತವೆ. ಆದರೆ ಇಂದು ವಿದ್ಯುನ್ಮಾನ ದೃಶ್ಯ ಮಾಧ್ಯಮ ಬೆಳೆದು ನಿಂತ ಎತ್ತರಕ್ಕೆ ಇವರ ಪ್ರದರ್ಶನಗಳ ಪರಿಪೂರ್ಣ ದಾಖಲೀಕರಣ ಆಗಿಯೇ ಇರಲಿಲ್ಲ ಎನ್ನುವ ಕೊರತೆ ತುಂಬುವಂತೆ ಈಗ ಬಂದಿದೆ – ಎಂಟು ಡೀವೀಡಿಗಳ ಕಟ್ಟು. ಅದೂ ಕೇವಲ ಐದು ನೂರು ರೂಪಾಯಿಗೆ!
ಸಾರ್ವಜನಿಕ ಪ್ರದರ್ಶನಗಳ ಇತಿಮಿತಿಗಳನ್ನು ನಿರಾಕರಿಸಿ, ಯಕ್ಷಗಾನ ಪ್ರಯೋಗದ ಸಮೃದ್ಧತೆಗೆ ಸಿನಿಮಾರಂಗದ ವೃತ್ತಿಪರತೆ ಪೂರಕವಾಗಿ ಬೆಸುಗೆಗೊಂಡ ರಸಗಟ್ಟಿಗಳು ಈ ಎಂಟು ಡೀವೀಡಿಗಳು. ಅವುಗಳ ಮೇಲೆ ನಮೂದಿಸಿದ ಶೀರ್ಷಿಕೆಗಳನ್ನು ನಾನು – ಪೂರ್ವರಂಗ, ಪ್ರಸಂಗಗಳು, ಯುಗಲ ಪ್ರಸಂಗ ಮತ್ತು ಮಂಟಪರ ಎರಡು ಮಗಳಂದಿರಿಂದ ಬಾಲಗೋಪಾಲ (ಪೂರ್ವರಂಗ) ಎಂದು ನಾಲ್ಕು ವಿಭಾಗಗಳಲ್ಲಿ ನೋಡುತ್ತೇನೆ.
ಪೂರ್ವರಂಗ: ಏಕವ್ಯಕ್ತಿ ಯಕ್ಷಗಾನಕ್ಕೆ ಪ್ರವೇಶಿಕೆಯಾಗಿ ಬರುವ ಪ್ರಸಂಗ ‘ಭಾಮಿನಿ’. ಅದು ರಂಗಕ್ಕೆ ಬಂದ ಹೊಸತರಲ್ಲೇ ನಾನದನ್ನು ಬಹುವಾಗಿ ಮೆಚ್ಚಿಕೊಂಡು ಉದಯವಾಣಿಯಲ್ಲಿ ಬರೆದ ಲೇಖನವನ್ನೇ ಇಲ್ಲಿ ಸಂಗ್ರಹಿಸಿ ಹೇಳುವುದಾದರೆ… ಭರತನ ನಾಟ್ಯಶಾಸ್ತ್ರದ ಪರಿಪೂರ್ಣ ಪ್ರತಿನಿಧಿ ಇಂದು ಪ್ರಚಾರದಲ್ಲಿರುವ ‘ಭರತ ನಾಟ್ಯ’ ಅಲ್ಲ. ಯಕ್ಷಗಾನವೇ ಹೌದು ಎನ್ನುವುದು ಭಾಮಿನಿಯ ಪರಿಕಲ್ಪನೆಯನ್ನು ಸಂಶೋಧಿಸಿ, ಸಾಹಿತ್ಯ ಬೆಸೆದು ನಿರ್ದೇಶನ ಕೊಟ್ಟ ಶತಾವಧಾನಿ ಡಾ| ರಾ. ಗಣೇಶರ ಸ್ಪಷ್ಟ ನುಡಿ. ಯಕ್ಷಗಾನದಲ್ಲೂ ಭಾರತದ ಸಂದರ್ಭ ನೆನೆಸಿಕೊಂಡು, ದಾಕ್ಷಿಣಾತ್ಯರ ಲಾಲಿತ್ಯ, ಕೋಮಲ ಭಾವಗಳನ್ನು ಪ್ರತಿನಿಧಿಸುವ ಸ್ತ್ರೀ ವೇಷವನ್ನೇ ಇವರು ಪ್ರಯೋಗಕ್ಕೆ ಆರಿಸಿಕೊಂಡಿದ್ದಾರೆ. ಆಯ್ಕೆಯಲ್ಲಿ ಮತ್ತಷ್ಟು ಸಂಕೀರ್ಣಗೊಂಡು ರಸರಾಜ ಶೃಂಗಾರವನ್ನು ಪ್ರಧಾನವಾಗಿಟ್ಟುಕೊಂಡು ದಟ್ಟ ಛಾಯೆಗಳಲ್ಲಿ ನವರಸಗಳನ್ನು ಹೊಮ್ಮಿಸುವ ಪ್ರಯೋಗ ಭಾಮಿನಿ. ಇದಕ್ಕೆ ಚಾಲ್ತಿಯಲ್ಲಿರುವ ಯಾವುದೇ ಪ್ರಸಂಗದಿಂದ ಸಾಹಿತ್ಯವನ್ನು ಅಳವಡಿಸಿಕೊಂಡರೂ (ಉದಾ: ರಾಧೆ, ರುಕ್ಮಿಣಿ ಇತ್ಯಾದಿ) ಪಾತ್ರಮಿತಿ ಕಾಡುತ್ತದೆ ಎಂಬುದನ್ನು ಅರಿತು ಗಣೇಶರು ಸ್ವಂತ ಸಾಹಿತ್ಯ ರಚಿಸಿದ್ದಾರೆ. ಅನಿರ್ದಿಷ್ಟವಾಗಿ ಪತಿ ದೂರಳಾದ ಪ್ರಿಯಸತಿಯೊಬ್ಬಳ ವಿವಿಧ ಛಾಯೆಗಳ ಶೃಂಗಾರ ಭಾವಲಹರಿಯೇ ಭಾಮಿನಿಯ ಕತೆ. ಸೂತ್ರಗಳ ಜಾಲ, ಭಾವಹೀನ ಕುಣಿತ ಮಣಿತಗಳ ಕಸರತ್ತನ್ನು ಮೀರಿದ ಸುಂದರ ಯಕ್ಷ-ವ್ಯಾಕರಣವೇ ಇದು.
ಇನ್ನೊಂದು ಡೀವೀಡಿಯಲ್ಲಿ ಯಕ್ಷದರ್ಪಣ ಎಂಬ ಮೊದಲ ಭಾಗದಲ್ಲಿ ಏಕವ್ಯಕ್ತಿಯಾಗಿ ಮಂಟಪರು ಸುಮಾರು ಐದು ತೆರನ (ಭೂ ವಂದನೆ, ದಿಕ್ಪಾಲ ವಂದನೆ, ದಶಾವತಾರಕ್ಕೆ ನಮನ, ಚಂದಭಾಮಾ ಮತ್ತು ರಂಗನ್ಯಾತಕೆ ಬಾರನೇ) ಪೂರ್ವರಂಗದ ಕಲಾಪಗಳನ್ನು ಪ್ರದರ್ಶಿಸುತ್ತಾರೆ. ಇದೇ ಡೀವೀಡಿಯ ಉಳಿದ ಭಾಗದಲ್ಲಿರುವ ಕುಂತೀಕ್ಲೇಶವನ್ನು ‘ಪ್ರಸಂಗ’ ವಿಭಾಗದಲ್ಲಿ ಪರಿಗಣಿಸಬಹುದು. ಮತ್ತೊಂದು ಡೀವೀಡಿಯ ಎರಡನೇ ಭಾಗದಲ್ಲಿರುವ ‘ರಂಗನಾಯಕ’ ಸಾಂಪ್ರದಾಯಿಕವಾಗಿ ಯಾವುದೇ ಪೂರ್ಣ ರಾತ್ರಿ ಪ್ರದರ್ಶನದ ಕೊನೆಯಲ್ಲಿ ಬರುವ ಹಾಡು ಮತ್ತು ಅಭಿನಯವಾದ್ದರಿಂದ ಇದೂ ನನ್ನ ಲೆಕ್ಕಕ್ಕೆ ಪೂರ್ವರಂಗಕ್ಕೇ (ಉತ್ತರರಂಗ?) ಸೇರಿಕೊಳ್ಳುತ್ತದೆ.
ಪ್ರಸಂಗಗಳು: ಮೊದಲೇ ಹೇಳಿದ ಕುಂತೀಕ್ಲೇಶದ ಹಾಗೇ ಅನ್ಯ ಡೀವೀಡಿಗಳಲ್ಲಿ ಸೇರಿಕೊಂಡು ಬರುವ ವಿಷಯೆ, ದಾಕ್ಷಾಯಿಣೀ ದೀಕ್ಷೆ, ಮಾಯಾ ಶೂರ್ಪಣಖೆ, ವೇಣು ವಿಸರ್ಜನ, ಪೂತನಾ ಮೋಕ್ಷಗಳು ಇಲ್ಲಿ ಉಜ್ವಲಗೊಂಡಿವೆ. ಅಲ್ಲದೆ ಸ್ವತಂತ್ರವಾಗಿ ಒಂದೊಂದೇ ಡೀವೀಡಿಯಲ್ಲಿ ವ್ಯಾಪಿಸಿರುವ ಕೃಷ್ಣಾರ್ಪಣ ಮತ್ತು ಜಾನಕೀ ಜೀವನವೂ ಲಭ್ಯ. ಏಕವ್ಯಕ್ತಿ ಪರಿಕಲ್ಪನೆ ಸಾಮಾನ್ಯ ತಿಳುವಳಿಕೆಯ ಏಕಪಾತ್ರ ಅಭಿನಯವಲ್ಲ. ಅಂದರೆ ಬಹುಪಾತ್ರಗಳನ್ನು ಏಕವ್ಯಕ್ತಿ ನಿರ್ವಹಿಸುವ ಮೂಲಕ ಸಂಭಾಷಣೆ ನಡೆಸುವ ಪ್ರಮೇಯ ಇಲ್ಲಿಲ್ಲ. ಹಾಗಾಗಿ ಬಹುತೇಕ ಪ್ರಸಂಗಗಳು ಮೂಲ ಯಕ್ಷಗಾನದಲ್ಲಿರುವ ವಾಚಿಕಾಭಿನಯವನ್ನು ನೀಗಿಕೊಂಡಿವೆ. ಅದು ಕಡ್ಡಾಯವೇನೂ ಅಲ್ಲ ಎನ್ನುವಂತೆ ಕೆಲವೆಡೆಗಳಲ್ಲಿ ಉದ್ಗಾರ, ಸ್ವಗತಗಳ ಮಾದರಿಯ ಮಾತುಗಳು ಬರುತ್ತವೆ. ದಾಕ್ಷಾಯಿಣೀ ದೀಕ್ಷೆಯಲ್ಲಂತೂ ಧಾರಾಳ ಬಂದಿದೆ ಮತ್ತು ಹಿತಮಿತವಾಗಿದೆ. ಉಳಿದಂತೆ, ಮಕ್ಕಳಾಟದಲ್ಲಿ ಋಷಿವಾಕ್ಯದ ಪರೀಕ್ಷೆಗೆ ಹೊರಟ ಕುಂತಿ ಮೊದಲ ಮಗನನ್ನು ಪಡೆದು ಪಡುವ ಸಂಕಟ, ವಿಷಯೆ (ನಿದ್ರೆಯಲ್ಲಿದ್ದ) ಚಂದ್ರಹಾಸನನ್ನು ಮೊದಲು ಕಂಡುದಲ್ಲದೆ ಸಿಕ್ಕ ಪತ್ರದಲ್ಲಿನ ‘ಅಪಾರ್ಥ’ವನ್ನು ತಿದ್ದುವಲ್ಲಿನ ಸಂಭ್ರಮ, ತವರ್ಮನೆಯ ಸಂಭ್ರಮವನ್ನೆಳಸಿ ಬಂದ ದಾಕ್ಷಾಯಿಣಿ ಅಪ್ಪನ ನಿರೀಶ್ವರ ಯಾಗಕ್ಕೆ ದೇಹತ್ಯಾಗ ಮಾಡುವ ದುರಂತ, ಶೂರ್ಪಣಖೆಯ ಕಾಮವಿಕಾರಕ್ಕೆ ಲಕ್ಷ್ಮಣನ ಮದ್ದು ನಮ್ಮನ್ನು ವಿಭಿನ್ನ ಸ್ತರಗಳಲ್ಲಿ ರಂಜಿಸುತ್ತವೆ. ಶೂರ್ಪಣಖಾ ಪ್ರಸಂಗದ ಇನ್ನೊಂದು ಛಾಯೆಯೆಂಬಂತೆ ಪೂತನಾಮೋಕ್ಷವೂ ಸೀತಾಪರಿತ್ಯಾಗಕ್ಕೆ ಸಂವಾದಿಯಾಗಿ ವೇಣುವಿಸರ್ಜನವೂ ಗಾಢವಾಗಿ ನಮ್ಮನ್ನು ತಟ್ಟುತ್ತವೆ.
ಕೃಷ್ಣಾರ್ಪಣದಲ್ಲಿ ಯಶೋದಾ, ರುಕ್ಮಿಣೀ ಮತ್ತು ದ್ರೌಪದಿಯರ ನಿವೇದನೆಗಳು ಭಕ್ತಿ ಪ್ರಧಾನವಾಗಿ ನಮ್ಮ ಮನದುಂಬುತ್ತವೆ. ಜಾನಕೀಜೀವನದಲ್ಲಿ ಮೊದಲು ಮಾತ್ರ ಸ್ವಯಂವರದ ಸಂಭ್ರಮ. ಉಳಿದಂತೆ ವನವಿಹಾರದ ಸಂತಸಕ್ಕೆ ಅಪಹರಣದ ಕಾವಳ, ಶ್ರೀರಾಮವಿಜಯಕ್ಕೆ ಉಕ್ಕುವಲ್ಲಿ ಅಗ್ನಿಪರೀಕ್ಷೆಯ ಕಾಠಿಣ್ಯ, ಗರ್ಭಿಣಿಯ ಬಯಕೆಗೆ ಪರಿತ್ಯಾಗದ ಶಾಪ, ಮಕ್ಕಳ ನೆಪದಲ್ಲಿ ಪುನರ್ಮಿಲನದ ಉತ್ತುಂಗಕ್ಕೆ ಭೂಗರ್ಭಕ್ಕೇ ಕುಸಿಯುವ ಅನಿವಾರ್ಯತೆಗಳ ಸರಣಿಯಲ್ಲಿ ಹೃದಯ ಭಾರವಾಗದೇ ಕಣ್ಣು ಮಂಜಾಗದೇ ಇರಲು ಅಸಾಧ್ಯ.
ಯುಗಲ ಪ್ರಸಂಗ ಅಥವಾ ಮಂಥರಾ ದುರ್ಮಂತ್ರ: ಚಪ್ಪರಮನೆ ಶ್ರೀಧರ ಹೆಗಡೆ ಮಂಥರೆ, ಮಂಟಪ ಕೈಕೇಯಿಯಾಗಿ ಅಭಿನಯಿಸುವ ಈ ಕಥಾನಕ ಯಕ್ಷಗಾನೀಯವಾಗಿಯೇ ನಡೆಯುತ್ತದೆ. ಯಕ್ಷಗಾನೀಯ ಗುಣ ವಿಂಗಡಣೆಯ (ರಾಜ, ಪುಂಡು, ಸ್ತ್ರೀ, ಹಾಸ್ಯಗಾರ ಇತ್ಯಾದಿ) ಸುಳಿಯಲ್ಲಿ ಸಿಕ್ಕ ಹೆಚ್ಚಿನ ಪ್ರೇಕ್ಷಕರು ಹಾಸ್ಯಗಾರನಲ್ಲಿ ಪಾತ್ರ ಮಿತಿಯನ್ನು ಮರೆತು ವಾಚಿಕದಲ್ಲಿ ಕಳೆದುಹೋಗುತ್ತಾರೆ. ಆದರೆ ಚಪ್ಪರಮನೆ ಅವರ ಸುಖ್ಯಾತಿಗೆ ತಕ್ಕಂತೆ ಪ್ರಸಂಗೌಚಿತ್ಯ, ವೇಷ, ಮಾತು, ಕುಣಿತ, ಅಭಿನಯಗಳನ್ನೇ ಕೊಟ್ಟಿದ್ದಾರೆ. ಮಂಟಪರ (ಕೈಕೇಯಿ) ಅನುರೂಪ ಜೋಡಿಯಿಂದ ಪ್ರದರ್ಶನ ಅವಿಸ್ಮರಣೀಯ.
ಬಾಲಗೋಪಾಲರು: ಪೂರ್ವರಂಗ ಎಂದೇ ಹೆಸರು ಹೊತ್ತ ಡೀವೀಡಿಯಲ್ಲಿ ಬಾಲಗೋಪಾಲರ ವೇಷದಲ್ಲಿ ಮಂಟಪರ ಎರಡು ಮಗಳಂದಿರ ಕಲಾಕೊಡುಗೆ ದಾಖಲಾಗಿದೆ. ಜೊತೆಗೆ ಯಕ್ಷದರ್ಪಣದಲ್ಲಿ ಕಂಡ ಏಕವ್ಯಕ್ತಿ ಪೂರ್ವರಂಗದ ಭಿನ್ನ ಆವೃತ್ತಿಯನ್ನು ಪ್ರಸ್ತುತಪಡಿಸಿದಂತಾಗಿದೆ. ಇದು ಯುಗಲ ಪ್ರಸಂಗವೂ ಹೌದು.
ಇಲ್ಲ, ಅಷ್ಟಕ್ಕೆ ಮುಗಿಯಲಿಲ್ಲ! ಪ್ರತಿ ಡೀವೀಡಿಗೆ ಮುನ್ನುಡಿ, ಪ್ರತಿ ಪ್ರಸಂಗಕ್ಕೆ ಪೀಠಿಕೆ, ಕೊನೆಯಲ್ಲಿ ಧನ್ಯತೆಯ ಬೆನ್ನುಡಿ ಕೊಡುತ್ತಾರೆ ಒಟ್ಟಾರೆ ಏಕವ್ಯಕ್ತಿ ಪ್ರಯೋಗದ ಮಹಾನ್ ಶಿಲ್ಪಿ ಶತಾವಧಾನಿ ಗಣೇಶ್. ಭರತನ ನಾಟ್ಯ ಶಾಸ್ತ್ರದ ನಿಜ ಪ್ರತಿನಿಧಿ ಯಕ್ಷಗಾನ ಎಂದು ತೊಡಗಿ, ಅಖಿಲ ಭಾರತ ಮಟ್ಟದಲ್ಲಿ ಇದರ ವಿಭಿನ್ನ ಛಾಯೆಗಳನ್ನು ಹೆಸರಿಸಿ, ಕರಾವಳಿ ಕನ್ನಡದ ಬಡಗು ತಿಟ್ಟಿಗೇ ತಂದು ನಿಲ್ಲಿಸುವ ಪ್ರಾಂಜಲ ವಿದ್ವತ್ತು ಗಣೇಶರದು. ಅಲ್ಲಿ ಪದ್ಮಾ ಸುಬ್ರಹ್ಮಣ್ಯಂ, (ದಿ) ಸುಂದರಿ ಸಂತಾನಂ, ಇಲ್ಲಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಮುರಳೀಧರ ರಾಯರಂತವರೇ ಯಕ್ಷಗಾನದ ಪಾರಮ್ಯವನ್ನು ಒಪ್ಪಿ ಕೊಂಡಾಡುವಾಗ ಸಮರ್ಥ ಸಾಕ್ಷ್ಯ ಒದಗಿಸುವ ದಾಖಲೆಯಾಗಿ ಈ ಡೀವೀಡಿಗಳು ನಿಲ್ಲುತ್ತವೆ.
ಸುಶ್ರಾವ್ಯತೆ ಮತ್ತು ಸಾಹಿತ್ಯ ಸ್ಪಷ್ಟತೆಯಿಂದ ಸ್ವತಂತ್ರ ಗಾನವೈವಿಧ್ಯವೆಂದು ಪ್ರಮಾಣಿಸಲು ಕೊರತೆಯಿಲ್ಲದಂತೆ ತೋರಿಯೂ ಪೂರ್ಣ ರಂಗಕ್ರಿಯಾ ನಿಷ್ಠೆಯುಳಿಸಿಕೊಳ್ಳುವ ಇಲ್ಲಿನ ಹಿಮ್ಮೇಳಕ್ಕೆ ಯಾವ ಹೊಗಳಿಕೆಯೂ ಕಡಿಮೆಯೇ. ಧ್ವನಿವರ್ಧಕಗಳಿಲ್ಲದ ಕಾಲದಲ್ಲಿ ರೂಢಿಗೊಂಡ ಅಬ್ಬರವನ್ನು ಇಂದು ವಿಪರೀತ ವಿಸ್ತರಿಸಿದ ಪ್ರೇಕ್ಷಕ ವರ್ಗದ ಕರ್ಣ ಕುಹರಗಳಿಗೆ ಕೂರಂಬಾಗುವಂತೇ ವರ್ಗಾಯಿಸುವುದನ್ನು ಇಲ್ಲಿ ಪೂರ್ತಿ ಸೋಲಿಸಲಾಗಿದೆ. ಧ್ವನಿಗ್ರಹಣಕ್ಕೆ ತುಸು ಹೆಚ್ಚೇ ವೆಚ್ಚ ಮಾಡಿ ಪರಿಣಾಮದಲ್ಲಿ ಯಕ್ಷ-ಗಾನ ದೇವ-ಗಾನವಾಗಿದೆ. (ನಾನು ಡೀವೀಡಿ ಹಾಕಿ, ದೃಶ್ಯವನ್ನು ಕೆಳತಳ್ಳಿ, ಕೇವಲ ಹಾಡು ಕೇಳುತ್ತಾ ಅನ್ಯ ಗಣಕ ಕೆಲಸ ನಡೆಸುವುದೂ ಇದೆ! ಅಲ್ಲಿ ಬಳಕೆಯಾದ ರಾಗ, ತಾಳಗಳ ವೈವಿಧ್ಯವನ್ನು ಉದಾಹರಣೆ ಸಹಿತ ಪಟ್ಟಿ ಮಾಡಿ ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಾಗುವಂತೆ ಮಾಡುವ ಹೆಚ್ಚಿನ ಕೆಲಸ ಈಗ ಭಾಗವತ ವಿದ್ವಾನ್ ಗಣಪತಿಭಟ್ಟರ ಪೂರ್ಣ ಸಹಕಾರದೊಡನೆ ನಡೆದಿದೆ. ನೀವು ಅದನ್ನು ನಿರೀಕ್ಷಿಸಬೇಕಾದ ಜಾಲತಾಣ: www.manatapupadhya.com) ಇಲ್ಲಿ ಮುಖ್ಯ ಪ್ರದರ್ಶನ ಸಾಂಪ್ರದಾಯಿಕ ಯಕ್ಷಗಾನ ಕೊಡುವ ಕನಿಷ್ಠ ಆಲಂಬನಗಳನ್ನೂ (ಹಿನ್ನೆಲೆಯಲ್ಲಿ -ಪೂರ್ಣ ಹಿಮ್ಮೇಳ, ಅದಕು ಇದಕು ಎದಕು ಒದಗುವ ಪುಟ್ಟ ರಥ, ಸನ್ನಿವೇಶಕ್ಕೆ ತಕ್ಕಂತೆ ಒಂದೆರಡು ಆಯುಧಗಳೋ ಸಲಕರಣೆಗಳೋ ಇತ್ಯಾದಿ) ನಿರಾಕರಿಸಿ ನಡೆಯುತ್ತದೆ. ಹಾಗಾಗಿ ಪ್ರತಿ ಡೀವೀಡಿಯ ಕೊನೆಯಲ್ಲಿ ಹಿಮ್ಮೇಳದ ಪರಿಚಯವನ್ನು ಸೂಕ್ಷ್ಮವಾಗಿ ಮಾಡಿರುವುದು ಸಮರ್ಪಕವಾಗಿದೆ.
ದಾಖಲಾತಿಗೆ ಪ್ರೇರಣೆ: ಹವ್ಯಾಸಿ ಚಿತ್ರಗ್ರಾಹಿ (ಫೊಟೋಗ್ರಾಫರ್) ಮನೋಹರ ಉಪಾಧ್ಯ (ಮಂಟಪರ ಕೊನೆಯ ತಮ್ಮ), ವೃತ್ತಿಯಲ್ಲಿ ಬಲು ಸಮರ್ಥ (ಮತ್ತು ಬಿಡುವಿರದ) ಪಶುವೈದ್ಯ. ಆದರೂ ವಿಶಿಷ್ಟ ಯಕ್ಷ ಪ್ರಯೋಗ ಮತ್ತು (ತಿರುಗಾಟದ ಅವಧಿಯಲ್ಲಿ, ತಿಟ್ಟು ಬೇಧವಿಲ್ಲದೆ) ವಿವಿಧ ಯಕ್ಷಗಾನ ಮೇಳಗಳ ಪ್ರದರ್ಶನಗಳಲ್ಲಿ (ವಾಣಿಜ್ಯ ಪ್ರದರ್ಶನವಾದರೆ ಟಿಕೆಟ್ ಖರೀದಿಸಿ) ಎಷ್ಟೋ ರಾತ್ರಿ ಇವರ ಠಿಕಾಣಿ ಚೌಕಿಗಳಲ್ಲಿ (ಬಣ್ಣದ ಮನೆ, ಗ್ರೀನ್ ರೂಂ). ನಿಮಗೆಲ್ಲ ತಿಳಿದೇ ಇರುವಂತೆ ಯಕ್ಷಗಾನದಲ್ಲಿ ಶಾಸ್ತ್ರದ ಕಟ್ಟೂ ಜಾನಪದದ ಬಿಚ್ಚೂ ಏಕಕಾಲಕ್ಕೆ ಪ್ರವರ್ತಿಸುತ್ತದೆ. ಹಾಗಾಗಿ ಪ್ರಸಂಗ, ಪರಿಸರ ಮತ್ತು ಕಲಾವಿದನ ವೈಯಕ್ತಿಕ ಕೊಡುಗೆಯಲ್ಲಿ ಪ್ರತಿ ವೇಶ, ಪ್ರತಿ ಪ್ರದರ್ಶನ ವಿಭಿನ್ನವೇ ಆಗಿರುತ್ತದೆ. ಆ ಬಣ್ಣ, ಆ ವೇಷ ಕೆಲವೇ ಗಂಟೆಗಳಿಗೆ ಅರಳಿ, (ಹೆಚ್ಚಾಗಿ) ಮತ್ತೆಂದೂ ಮರುಕಳಿಸದಂತೆ ಮಸಳಿಸುತ್ತದೆ. ಅದರ ವಿಕಾಸ, ವೈವಿಧ್ಯವನ್ನು ತಾಳ್ಮೆಯಿಂದ ಕ್ಯಾಮರಾದಲ್ಲಿ ದಾಖಲಿಸುವುದು ಮನೋಹರ ಉಪಾಧ್ಯರ ಗೀಳು. ಕಲಾಪ್ರವಾಹದಲ್ಲಿನ ಒಂದು ಕಾಲ ಘಟ್ಟಕ್ಕೆ ಶಾಶ್ವತ ಸೂಚಿಪತ್ರ!
ಯಕ್ಷ-ಚಿತ್ರ ದಾಖಲಾತಿಯ ಶ್ರಮ ಮತ್ತು ಖರ್ಚುಗಳಿಗೆ ಉಪಾಧ್ಯರು ಎಂದೂ ಯಾವುದೇ ಅನುದಾನ, ಪ್ರಾಯೋಜಕತ್ವಗಳನ್ನು ಕೇಳಿದ್ದೂ ಇಲ್ಲ, ಅಯಾಚಿತ ಕೊಡುವವರಿದ್ದರೆ ಪಡೆದದ್ದೂ ಇಲ್ಲ. ಆ ದಾಖಲೆಗಳನ್ನು ವಾಣಿಜ್ಯ ಸರಕಾಗಿ ಬಳಸುವುದಿದ್ದರೆ ಖರ್ಚು ತುಂಬಾ ಸಣ್ಣ ಮಾತು! ಇವರು ಮುಂದುವರಿದು, ಹಾಗೆ ತೆಗೆದ ಚಿತ್ರಗಳನ್ನು ಮತ್ತಷ್ಟು ರಾತ್ರಿ ನಿದ್ದೆಗೆಟ್ಟು, ಗಣಕದಲ್ಲಿ ಶುದ್ಧ ಮಾಡಿ, ಎರಡು ತೆರನ ಪ್ರಕಟಣೆ ಮಾಡುತ್ತಾರೆ. ಮೊದಲು, ವೇಷಧಾರಿ ಕಲಾವಿದನಿಗೊಂದು ಸೀಡಿ ಪ್ರತಿ ತೆಗೆದು, ಮೊದಲ ಅವಕಾಶದಲ್ಲಿ ಆತನಿಗೆ ಉಚಿತವಾಗಿ ಕೊಡುತ್ತಾರೆ (ಮೇಲಿನಿಂದ ಗೌರವಧನ ಆಶಿಸಿದವರು ಇರಬಹುದು, ಉಪಾಧ್ಯರು ಕೊಟ್ಟದ್ದೂ ಇರಬಹುದು. ಆದರೆ ಎಂದೂ ಹೇಳಿದ್ದಿಲ್ಲ!). ಎರಡನೆಯದಾಗಿ ಖಚಿತ ಮಾಹಿತಿಗಳೊಡನೆ ಅವನ್ನು ಅಂತರ್ಜಾಲಕ್ಕೇರಿಸಿ ಸಾರ್ವಜನಿಕ ಬಳಕೆಗೆ ಮುಕ್ತವಾಗಿಸುತ್ತಾರೆ. ಅವಶ್ಯ ಗಮನಿಸಿ – ಯಾರೂ ಈ ಚಿತ್ರಗಳನ್ನು ಯಾವುದಕ್ಕೂ ಉಚಿತವಾಗಿ ಬಳಸಿಕೊಳ್ಳಬಹುದು. “ಅಷ್ಟೇ ಅಲ್ಲ, ಚಿತ್ರಗ್ರಾಹಿಯನ್ನು ಸ್ಮರಿಸುವುದೂ ಅಗತ್ಯವಿಲ್ಲ” ಎನ್ನುತ್ತಾರೆ ಈ ನಿರ್ಮೋಹಿ; ಮನೋಹರ! ವಾಸ್ತವವಾಗಿ (ನನ್ನ ಮಗ) ಅಭಯಸಿಂಹನನ್ನು ಯಕ್ಷ-ದಾಖಲೀಕರಣಕ್ಕೆ ಬಲು ದೊಡ್ಡದಾಗಿ ಪ್ರೇರೇಪಿಸಿದವರೇ ಡಾ| ಮನೋಹರ ಉಪಾಧ್ಯ.
ನಮ್ಮ ಕಟ್ಟೆಯೊಳಗಿನ ನೀರು: ಯಕ್ಷಗಾನದ ಆರೋಗ್ಯಪೂರ್ಣ ಚಟುವಟಿಕೆಗಳನ್ನು ಮತ್ತೆ ಖಾಸಗಿ ಮಿತಿಯಲ್ಲೇ ಚಲನಚಿತ್ರ ಮಾಧ್ಯಮದಲ್ಲಿ ದಾಖಲೀಕರಣಕ್ಕೊಳಪಡಿಸುವ ನಮ್ಮ (ಅಭಯ, ಮನೋಹರ ಮತ್ತು ನಾನು) ಕೆಲವು ಪ್ರಯತ್ನಗಳನ್ನು ಇಲ್ಲೇ ಹಿಂದೆ ನೀವು ಓದಿ/ನೋಡಿದ್ದೀರಿ. ಆ ಮಾಲಿಕೆಯಲ್ಲಿ ೧. ಸಾಲಿಗ್ರಾಮ ಮಕ್ಕಳ ಮೇಳಕ್ಕೊಂದು ‘ಪೀಠಿಕೆ’ ೨. ಉಳಿದದ್ದಷ್ಟನ್ನು ದಾಖಲಿಸಿಡುವಂತೆ ‘ಕರ್ಕಿ ಶೈಲಿ’, ೩. ಅಭಿವೃದ್ಧಿ ಸೂಚಕವಾಗಿ ಬಡಗುತಿಟ್ಟಿನ ಪೂರ್ವರಂಗ ಸಹಿತ ‘ಯಕ್ಷೋತ್ತಮ ಕಾಳಗ’, ೪. ಪುನರುಜ್ಜೀವನದ ಸ್ವಸ್ಥತೆ ಮನಗಾಣುವಂತೆಯೂ (ದೀವಟಿಗೆ) ಎರಡೂ ತಿಟ್ಟುಗಳ ಉತ್ತಮ ಮಾದರಿಗಳು ದಕ್ಕುವಂತೆಯೂ ತೆಂಕಿನಿಂದ ‘ಕುಂಭಕರ್ಣ ಕಾಳಗ’ ಮತ್ತು ಬಡಗಿನಿಂದ ‘ಅರಗಿನಮನೆ,’ ಎಲ್ಲ ನಮಗೆ ಅಂದಂದಿಗೆ ಪೂರ್ಣ ತೃಪ್ತಿ ಕೊಟ್ಟಿವೆ. (ಅಂದರೆ, ಮತ್ತೆ ಇನ್ನೂ ಹೆಚ್ಚಿನದರತ್ತ ಬೆಳಕು ಚೆಲ್ಲಿವೆ.) ನಮ್ಮ ಬಳಗದಲ್ಲಿ ಮನೋಹರ ಮತ್ತು ನಾನು ಸಂಘಟನೆ ಮತ್ತು ನಿರ್ಮಾಣದ ಹಣಕಾಸಿನ ಹಂತದಲ್ಲೇ ಕೈತೊಳೆದುಕೊಂಡಿದ್ದೇವೆ. (ಅವನ್ನು ನಿರಂತರ ಪ್ರತಿ ಮಾಡಿಸಿಕೊಂಡು, ತಮ್ಮ ಸಂಸ್ಥೆಗಳ ಉದಾರ ಕಾರ್ಯಗಳಿಗೆ ಒಂದು ಆದಾಯ ಮೂಲವಾಗಿಸಿಕೊಳ್ಳಲು ವಿವಿಧ ಸಂಸ್ಥೆಗಳಿಗೆ ಹಕ್ಕನ್ನೇ ದಾನ ಮಾಡಿದ್ದೇವೆ.) ಆದರೆ ಸಿನಿಮಾವನ್ನು ಕಲಿಕೆ ಮತ್ತು ಸೃಜನಶೀಲ ಕಸಬುಗಾರಿಕೆಯ ತುಡಿತವಾಗಿಯೇ ಬಯಸಿ, ನೆಚ್ಚಿದ ಅಭಯನಿಗೆ ಈ ದಾಖಲೀಕರಣಗಳು ಇನ್ನಷ್ಟು ವ್ಯಾಪಕವಾಗಿ ಯಕ್ಷಗಾನದಲ್ಲಿ ತೊಡಗಿಕೊಳ್ಳಲು ಕುಮ್ಮಕ್ಕು ನೀಡುತ್ತಲೇ ಇದೆ. ಅದಕ್ಕೆ ಸಾಕ್ಷಿ ಈಗ ಸಜ್ಜುಗೊಂಡ ಏಕವ್ಯಕ್ತಿ ಯಕ್ಷಗಾನ ಬಳಗದ ಎಂಟು ಡೀವೀಡಿಗಳು.
ಕ್ಯಾಮರಾಕ್ಕೆ ಕುಣಿಯಲಾರದವ ಎಂಟರ ಗಂಟು ಕೊಟ್ಟದ್ದು! ಅಭಯ ಮತ್ತು ಮನೋಹರ ಕೆಲಕಾಲದಿಂದ ಏಕವ್ಯಕ್ತಿ ಪ್ರದರ್ಶನವನ್ನು ವಿಡಿಯೋ ದಾಖಲೆಗೊಳಪಡಿಸಲು ಮಂಟಪ ಪ್ರಭಾಕರ ಉಪಾಧ್ಯರ ಮೇಲೆ ಒತ್ತಡ ತರುತ್ತಲೇ ಇದ್ದರು. ಪ್ರಭಾಕರ (ಗರ್ವದಿಂದಲ್ಲ) “ನನ್ನದೇನಿದ್ದರೂ ರಸಿಕರ ಕಣ್ಮಣಿ ನೋಡಿಕೊಂಡು ಉಕ್ಕುವ ಭಾವಪ್ರವಾಹ. ನಿರ್ಜೀವ ಕ್ಯಾಮರಾಕ್ಕೆ ಅದರಲ್ಲೂ ‘ಕಟ್’, ‘ಯಾಕ್ಷನ್’ ಹೇರುವಲ್ಲಿ ಅಸಾಧ್ಯ, ಅಸಾಧ್ಯ” ಎಂದು ಮುಂದೂಡುತ್ತಲೇ ಇದ್ದರು. ವರ್ಷದ ಹಿಂದೆ, ‘ಏಕವ್ಯಕ್ತಿ ತಂಡ’ ಅಮೆರಿಕಾದ ಕನ್ನಡ ಸಮ್ಮೇಳನಕ್ಕೆ ಆಯ್ಕೆಗೊಂಡಾಗ ಈ ‘ಪ್ರೇಮಸಲ್ಲಾಪಕ್ಕೆ’ ಹೆಚ್ಚಿನ ಒತ್ತಡ ಬಂತು. “ಪರಿಸರ ರಂಗದ್ದಲ್ಲ, ಸ್ಟುಡಿಯೋದ್ದು ಎನ್ನುವುದು ಮಾತ್ರ ಸರಿ. ಬೇಕಾದರೆ ಮೌನವಾಗಿ ಸಹಕರಿಸುವ ಸಣ್ಣ ಪ್ರೇಕ್ಷಕ ಬಳಗ ಇಟ್ಟುಕೊಂಡೇ ಮಾಡೋಣ. ಉಳಿದಂತೆ, ಅಭಿಜಾತ ಕಲೆಯ ನಿಜ ದಾಖಲೀಕರಣದಲ್ಲಿ ಯಾಂತ್ರಿಕ ವಿವರಗಳು ನಿಮ್ಮನ್ನು ಅನುಸರಿಸುತ್ತವೆ, ಆಳುವುದಿಲ್ಲ. ಭಾಗವತರ ‘ಶ್ರೀ’ಯಿಂದ ತೊಡಗಿ, ‘ಮಂಗಳಂ’ವರೆಗೆ ‘ಕಟ್’ ಬರುವುದಿಲ್ಲ” ಬಂತು ಅಭಯವಚನ. ಅತ್ಯಂತ ಕಿರು ಬಂಡವಾಳದಲ್ಲಿ ಒಂದೇ ಪ್ರಸಂಗ ಹಿಡಿದರು. ದಾಖಲೀಕರಣದ ನಿರ್ದೇಶನ, ಸಂಕಲನ ಅಭಯನದ್ದು ಮತ್ತು ಉಚಿತ. ಎರಡು ಕ್ಯಾಮರಾ, ವಿಶೇಷ ದೀಪಗಳು ಮತ್ತು ಸಿಬ್ಬಂದಿಯ ಬಾಡಿಗೆ ಭತ್ತೆಗಳು, ಮೂಲ ಟೇಪು ಮತ್ತು ಸಿದ್ಧಗೊಂಡ ಪ್ರತಿಯನ್ನು ಸುಂದರವಾಗಿ ಸಾರ್ವಜನಿಕಗೊಳಿಸುವ ವೆಚ್ಚ, ಹಿಮ್ಮೇಳದ ಗೌರವಧನ ಇತ್ಯಾದಿ ಎಲ್ಲವನ್ನು ಸ್ವತಃ ಪ್ರಭಾಕರರೇ ಭರಿಸಿ ‘ಭಾಮಿನಿ’ಯ ಡೀವೀಡಿ ಹೊರಬಿತ್ತು.
ಭಾಮಿನಿಯಲ್ಲಿ ಅಭಯ ಮೂರು ತರದ ಸೌಲಭ್ಯಗಳನ್ನು ಅಳವಡಿಸಿದ್ದಾನೆ. ೧. ಯಥಾವತ್ತು ಪ್ರದರ್ಶನ, ೨. ಪ್ರದರ್ಶನದೊಂದಿಗೇ ಗಣೇಶರ ಇಂಗ್ಲಿಷ್ ವಿವರಣೆ (ಧ್ವನಿ ಮಾತ್ರ) ಮತ್ತು ೩. ಒಟ್ಟು ಪ್ರದರ್ಶನವನ್ನು ವಿಭಾಗೀಕರಿಸಿ ನೋಡುವ ಸೌಲಭ್ಯ. ಡೀವೀಡಿ ಅಮೆರಿಕಾದಲ್ಲಿ ಮಾತ್ರವಲ್ಲ, ಇಲ್ಲೂ ಅವರ ಪ್ರದರ್ಶನಗಳಿದ್ದಲ್ಲೆಲ್ಲಾ ಮಂಟಪ ಐಸ್ ಕ್ರೀಮಿನಂತೇ ಕ್ಷಣಮಾತ್ರದಲ್ಲಿ ಕರಗುತ್ತಲೇ ಇತ್ತು ಮತ್ತು “ಇನ್ನೇನು, ಮತ್ತೆಂದು” ಒತ್ತಡ ತರುತ್ತಲೇ ಇತ್ತು. ಸಾಲದ್ದಕ್ಕೆ ಭಾಮಿನಿಯ ಅನುಭವ ಪ್ರಭಾಕರರಿಗೆ ಹೆಚ್ಚಿನ ಧೈರ್ಯವನ್ನೂ ಕೊಟ್ಟ ಫಲವಾಗಿ, ಈಗ ಭಾಮಿನಿಯೊಡನೆ ಹೊಸದಾಗಿ ತಯಾರಾದ ಇನ್ನೂ ಏಳು ಡೀವೀಡಿ ಸೇರಿ ಎಂಟರ ಕಟ್ಟು (ಬಿಡಿಯಾಗಿಯೂ ಲಭ್ಯ. ಒಂದಕ್ಕೆ ರೂ ನೂರು, ಕಟ್ಟಿಗೆ ರಿಯಾಯ್ತಿಯಲ್ಲಿ ಐದುನೂರು ಮಾತ್ರ).
ಏಕವ್ಯಕ್ತಿ ದಾಖಲಾತಿಯ ಹಣಕಾಸಿನ ಕಡೆಗೆ ಕಣ್ಣು ಹಾಯಿಸುವಾಗ ಮನೋಹರರ ಧಾರಾಳತನ ‘ಹಿರಿಯಣ್ಣನ ಚಾಳಿ’ ಎಂದರಿತೆ. (ಗಾದೆ: ಹಿರಿಯಣ್ಣನ ಚಾಳಿ ಮನೆಮಕ್ಕಳಿಗೆಲ್ಲ) ಮೊದಲು ಭಾಮಿನಿಗೆ ಪ್ರಭಾಕರ ಹಣ ತೊಡಗಿಸಿದ್ದು ಮತ್ತೆ ಈಗ ಒಟ್ಟು ಕಲಾಪಕ್ಕೆ ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ಉದಾರವಾಗಿ ಧನ ಸಹಾಯ ನೀಡಿದ್ದು ಒಂದು ವಾಣಿಜ್ಯ ಹೂಡಿಕೆಯಾಗಿ ಅಲ್ಲ. ಅವು ಹಿಂದೆ ತೆಗೆಯುವ ಉದ್ದೇಶವಿಲ್ಲದ ನಿರ್ಮಾಣ ವೆಚ್ಚ ಮಾತ್ರ. ಈಗ ಡೀವೀಡೀಗಳನ್ನು ಕೇವಲ ಪ್ರತಿ ಮಾಡಿದ ಖರ್ಚಿನ ಮೇಲೆ ಸ್ವಲ್ಪ ಆದಾಯ ಬರುವಂತೆ ಬೆಲೆಯೇನೋ ನಿಗದಿಸಿದ್ದಾರೆ. ಆದರೆ ಈ ಹೆಚ್ಚುವರಿ ಹಣ ಏನಾಗುತ್ತದೆ ಎನ್ನುವುದಕ್ಕೆ, ಎಂಟರ ಕಟ್ಟಿನ ಜೊತೆಗೆ ಬರುವ ‘ದಾನಪತ್ರ’ವನ್ನೇ ಉದ್ಧರಿಸಿಬಿಡುತ್ತೇನೆ.
‘ಯಕ್ಷ ಶಿಕ್ಷಣ ಟ್ರಸ್ಟ್ (ರಿ) ಸಂಸ್ಥೆಯು ಉಡುಪಿ ವಿಧಾನಸಭಾ ವ್ಯಾಪ್ತಿಯ ಎಲ್ಲಾ ಪ್ರೌಢ ಶಾಲೆಗಳಲ್ಲಿ ಕಳೆದ ಐದು ವರ್ಷಗಳಿಂದ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಶ ಶಿಕ್ಷಣ ನೀಡಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದೆ. ಇದರಿಂದ ಯಕ್ಷಗಾನದ ನಾಡಿಗೆ ಹೊಸ ಪ್ರತಿಭೆಗಳ, ಉಜ್ವಲ ರಸಾಸ್ವಾದಿಗಳ ಸೇರ್ಪಡೆಯಾಗುತ್ತಿದೆ. ಜಾತಿ, ಮತ, ಲಿಂಗಬೇಧವಿಲ್ಲದೆ ಪ್ರತಿ ವರ್ಷ ಒಂದೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಮಹತ್ಕಾರ್ಯಕ್ಕಾಗಿ ಸಂಸ್ಥೆಯು ಪ್ರತಿ ವರ್ಷ ಹದಿನೈದು ಲಕ್ಷಕ್ಕೂ ಅಧಿಕ ಹಣವನ್ನು ಬಳಸುತ್ತಿದೆ. ನಮ್ಮ ನಾಡಿನ ಸಂಸ್ಕೃತಿಗೆ ಪೂರಕವಾಗಿ ಎಳೆಯರಲ್ಲಿ ಕಲಾಸಕ್ತಿ ಬೆಳೆಸುವ ಈ ಯೋಜನೆ ಅಪೂರ್ವವಾದುದು. ಈ ಡೀವೀಡಿಯ ಬೆಲೆಯಾಗಿ ನೀವು ನೀಡಿದ ಹಣವು ದೇಣಿಗೆ ರೂಪದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ (ರಿ) ಉಡುಪಿಗೆ ಸಂಪೂರ್ಣವಾಗಿ ಸಂದಾಯವಾಗುತ್ತದೆ. ಬನ್ನಿ, ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಈ ಸತ್ಕಾರ್ಯಕ್ಕೆ ಕೈಜೋಡಿಸಿ.’
ಮಂಟಪ ಪ್ರಭಾಕರ ಉಪಾಧ್ಯರು ತಮ್ಮ ಪ್ರತಿ ಪ್ರದರ್ಶನದ ಕೊನೆಯಲ್ಲಿ ಸಾಮಾನ್ಯವಾಗಿ ಘೋಷಿಸುತ್ತಿರುತ್ತಾರೆ, “ಆಸಕ್ತರು ನಮ್ಮ ಡೀವೀಡಿಗಳನ್ನು ಕೊಳ್ಳಬಹುದು. ನೋಡಿ, ಪ್ರದರ್ಶಿಸಿ, ಪ್ರತಿ ಮಾಡಿ ಹಂಚಿಕೊಳ್ಳಿ – ನಮ್ಮ ಯಾವ ಆಕ್ಷೇಪಣೆಯೂ ಇಲ್ಲ! ಇದರ ಹಕ್ಕು ಕಾಯ್ದಿರಿಸಿಲ್ಲ. ಆದರೆ ನೆನಪಿರಲಿ, ನೀವು ನಮ್ಮಿಂದ ಕೊಳ್ಳುವ ಪ್ರತಿ ಡೀವೀಡಿಯೂ ಯಕ್ಷ-ಶಿಕ್ಷಣಕ್ಕೆ ನೀವು ಕೊಡುವ ಉದಾರ ದಾನಕ್ಕೆ ರಸೀದಿ!!”
ವಿಶೇಷ ಸೂಚನೆ: ಡೀವೀಡೀ ಪ್ರತಿಗಳು ಎಂಟರ ಕಟ್ಟಿಗೆ ರೂ ಐದುನೂರು. ಬಿಡಿ ಬಿಡಿಯಾಗಿಯೂ ಲಭ್ಯ. ಒಂದರ ಬೆಲೆ ರೂ ಒಂದು ನೂರು. ನೀವು ಸಂಪರ್ಕಿಸಬೇಕಾದ ವಿಳಾಸ: ಮಂಟಪ ಐಸ್ ಕ್ರೀಂ, ಕೆಂಪೇ ಗೌಡ ವೃತ್ತ, ಬೆಂಗಳೂರು ೫೬೦೦೦೯. ಚರವಾಣಿ: ೯೪೪೯೮೨೩೨೩೨
Dhanyavadagalu. mantapara abhiyaana ondu itihaasa—-
ಏಕವ್ಯಕ್ತಿಯಕ್ಷಗಾನವನ್ನು ನಿರಂತರವಾಗಿ ನಿಷ್ಪಾಕ್ಷಿಕವಿಮರ್ಶನದಿಂದ, ಅರ್ಥಪೂರ್ಣಸಹಕಾರದಿಂದ ಪೋಷಿಸುತ್ತಿರುವ ನಿಮಗೆ ಾನು ನಮ್ಮ ತಂಡದ ಪರವಾಗಿ ಹಾಗೂ ವೈಯಕ್ತಿಕವಾಗಿ ಎಷ್ಟು ಕೃತಜ್ಞತೆಗಳನ್ನು ಹೇಳದರೂ ಸಾಲದು. ನನ್ನ ಬಗೆಗೆ ತಾವು ಆಡಿರುವ ಒಳ್ಳೆಯ ಮಾತುಗಳಿಗೆ ನನ್ನ ಮೌನದ ನಮನವನ್ನಲ್ಲದೆ ಮತ್ತೇನನ್ನು ಸಲ್ಲಿಸಲಿ?
ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಗಳ ಡೀವೀಡಿಗಳು ಸಂಗ್ರಹಯೋಗ್ಯ ಅಪೂರ್ವ ದಾಖಲೆ. ಉಳಿದೆಲ್ಲವನ್ನೂ ತಾವು ವಿವರಿಸಿದ್ದೀರಿ. ಉಪಾಧ್ಯಾಯರ ಬಳಗಕ್ಕೆ, ಶತಾವಧಾನಿ ಗಣೇಶರಿಗೆ, ಗುರು ಸಂಜೀವರಿಗೆ, ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ಮತ್ತು ಸಂಬಂಧಿಸಿದವರೆಲ್ಲರಿಗೂ ಅಭಿನಂದನೆಗಳು. ಚಿ. ಅಭಯಸಿಂಹರೇ! ಈ ಕಾಣಿಕೆ ಮಹತ್ತರವಾದುದು. ಇಷ್ಟು ಒಳ್ಳ್ಳೆಯ ಚಿತ್ರೀಕರಣ ಮತ್ತು ಯಕ್ಷಗಾನದ ಸೌಂಡ್ ಟ್ರ್ಯಾಕ್ ನಾನು ಇದುವರೆಗೆ ನೋಡಿಲ್ಲ – ಕೇಳಿಲ್ಲ ! ತಮ್ಮೆಲ್ಲರ ಉನ್ನತ ಉದ್ದೇಶ ಈರೇಡಲಿ! ಯಕ್ಷಗಾನವು ಜನಮನದಲ್ಲಿ ಮುದ್ರಿತವಾಗಿ ಬೆಳಗಲಿ. ತಮ್ಮೆಲ್ಲರ ಸೇವಾ ಮನೋಭಾವಕ್ಕೆ ನಾನು ಬೆರಗಾದೆ.ಡೀವೀಡಿಗಳು ಒಂದಕ್ಕಿಂತ ಒಂದು ಉತ್ತಮವಾಗಿ ಮುದ್ರಿತವಾಗಿವೆ. ವಂದನೆಗಳು. ಪೆಜತ್ತಾಯ ಎಸ್. ಎಮ್.
ಜಾನಪದ ಕಲೆಗಳ ದಾಖಲೀಕರಣ ಪ್ರಕ್ರಿಯೆಗೆ ನಮ್ಮಲ್ಲಿ ಒಂದು ದೊಡ್ಡ ಪರಂಪರೆಯೇ ಇದೆ. ಮಿಶನರಿಗಳ ಉತ್ಸಾಹದಿಂದ ಆರಂಭವಾದ ಈ ಪ್ರಕ್ರಿಯೆ ಆಯಾ ಕಾಲಕ್ಕೆ ಲಭ್ಯವಾದ ತಾಂತ್ರಿಕ ಸಲಕರಣೆಗಳ ಬಳಕೆಯೊಂದಿಗೆ 'ಬೆಳೆಯುತ್ತಾ' ಬಂದಿದೆ, ಆದರೆ ಅದು 'ಪ್ರಗತಿ' ಹೊಂದಲಿಲ್ಲ. ಎಷ್ಟೇ ತಂತ್ರಜ್ಞಾನವನ್ನು ಬಳಸಿದರೂ ಸೃಜನಶೀಲ ಪ್ರಕ್ರಿಯೆಯ ದಾಖಲೀಕರಣ ಸಾಧ್ಯವಾಗುವುದಿಲ್ಲ. ಆ ಪ್ರಕ್ರಿಯೆಯ ಒಂದು ಫಲಿತಾಂಶವನ್ನಷ್ಟೇ ದಾಖಲಿಸಬಹುದಷ್ಟೇ. ಬಹುಶಃ ಈ ಮಿತಿಯನ್ನು ಮೀರುವುದು ನಮಗೆ ಸಾಧ್ಯವಿಲ್ಲ. ಆದರೆ ಈಗ ನಮಗೆ ಕಾಣಸಿಗುವ ಅನೇಕ ದಾಖಲೀಕರಣಗಳಲ್ಲಿ ಬಹುಸಾಮಾನ್ಯವಾಗಿರುವ ಮಿತಿಗಳನ್ನು ಮೀರಲು ಸಾಧ್ಯ. ಗೆಳೆಯ ಅಭಯಸಿಂಹ ಈ ತನಕ ಮಾಡಿರುವ ಯಕ್ಷಗಾನದ ದಾಖಲೀಕರಣಗಳಲ್ಲಿ ಇಂಥದ್ದೊಂದು 'ಪ್ರಗತಿ'ಯನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತದೆ. ಬಡಗುತಿಟ್ಟಿನ ಪೂರ್ವರಂಗದ ದಾಖಲೀಕರಣದಿಂದ ನಾನು ಈ ಪ್ರಯತ್ನಗಳನ್ನು ಸೂಕ್ಷ್ಮವಾಗಿ ನೋಡುತ್ತಾ ಬಂದಿದ್ದೇನೆ. ತೆಂಕು-ಬಡಗುಗಳ ದೊಂದಿ ಬೆಳಕಿನ ಪ್ರದರ್ಶನದ ದಾಖಲೀಕರಣದ ಕುರಿತ 'ಯೋಜನಾ ಪ್ರಕ್ರಿಯೆ'ಯಲ್ಲಿ ನನ್ನ ಅನಿಸಿಕೆಗಳನ್ನು ಅಭಯ ಅವರ ಜೊತೆ ಹಂಚಿಕೊಂಡಿದ್ದೆ. ಮಂಟಪರ ಏಕವ್ಯಕ್ತಿ ಪ್ರದರ್ಶನದ ದಾಖಲೀಕರಣ ಪ್ರಕ್ರಿಯೆಯನ್ನು ಹತ್ತಿರದಿಂದ ನೋಡಬಹುದಾದ ಸಾಧ್ಯತೆಯನ್ನು ನನ್ನ ಇತರ ಕೆಲಸಗಳಿಂದಾಗಿ ಕಳೆದುಕೊಂಡೆ. ಅವುಗಳ ಕುರಿತ ನಿಮ್ಮ ಬರೆಹವನ್ನು ಓದಿದಾಗ ನಾನು ಪದೇ ಪದೇ ಅಭಯ ಅವರಿಗೆ ನೆನಪಿಸುತ್ತಿರುವ ಬಂದಿರುವ ವಿಚಾರವೊಂದನ್ನು ವಿವರವಾಗಿ ಬರೆಯಬೇಕೆಂದುಕೊಂಡೆ.ರಂಗದ ಮೇಲೆ ಪ್ರದರ್ಶನಗೊಳ್ಳುವ ಕಲೆಯೊಂದು ಟಿ.ವಿ.ಯ ತೆರೆಗೆ ಬರುವುದೇ ಒಂದು ರೂಪಾಂತರ. ಈ ರೂಪಾಂತರದ ವೇಳೆಯೂ ರಂಗ ಪ್ರದರ್ಶನದ ಸೂಕ್ಷ್ಮಗಳನ್ನು ನೋಡುಗನಿಗೆ ತಿಳಿಸಿಕೊಡುವುದು ಸುಲಭವೇನಲ್ಲ. ಅಭಯ ಈ ಕೆಲಸವನ್ನು ಸ್ವಲ್ಪ ಮಟ್ಟಿಗಾದರೂ ಸಾಧಿಸಬೇಕೆಂದುಕೊಂಡು ಇಲ್ಲಿಯ ತನಕದ ತಮ್ಮ ದಾಖಲೀಕರಣದ ಪ್ರಯತ್ನಗಳಲ್ಲಿ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರ ದಾಖಲೀಕರಣಗಳನ್ನು ಕಾಲಾನುಕ್ರಮದಲ್ಲಿ ವೀಕ್ಷಿಸುತ್ತಾ ಬಂದರೆ ಇದು ಸ್ಪಷ್ಟವಾಗಿಯೇ ಗೋಚರಿಸುತ್ತದೆ. ದೊಂದಿ ಬೆಳಕಿನ ಯಕ್ಷಗಾನಕ್ಕೆ ಅಲ್ಲಿಯ ತನಕ ಇದ್ದ ಮೂರು ಕ್ಯಾಮೆರಾಗಳ ಮಾದರಿಯನ್ನು ಅಭಯ ತಿರಸ್ಕರಿಸಿದ್ದು ಇದೇ ಕಾರಣಕ್ಕಾಗಿ. ಆ ತಂತ್ರವನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡ ಉದಾಹರಣೆ ಅವರ ಹೊಸ ದಾಖಲೀಕರಣವೆಂದು ಅದನ್ನು ವೀಕ್ಷಿಸಿದ ಗೆಳೆಯರೊಬ್ಬರು ಹೇಳಿದರು.ನನ್ನ ದೃಷ್ಟಿಯಲ್ಲಿ ಈ 'ಪ್ರಗತಿ'ಯ ಹಾದಿಯನ್ನು ದಾಖಲಿಸುವ ಕೆಲಸವೊಂದು ಅಭಯಸಿಂಹ ಅವರಿಂದ ಆಗಲೇಬೇಕಾಗಿದೆ. ಇದು ಪ್ರದರ್ಶನ ಕಲೆಗಳ ವೈಜ್ಞಾನಿಕ ದಾಖಲೀಕರಣದ ದೃಷ್ಟಿಯಿಂದ ಬಹಳ ಮುಖ್ಯ. ಯಕ್ಷಗಾನ, ಭೂತಕೋಲ ಇತ್ಯಾದಿಗಳ ವಿವರವಾದ ವಿಡಿಯೋ ದಾಖಲಾತಿಯನ್ನು ಹಲವರು ಈಗಾಗಲೇ ಮಾಡಿದ್ದಾರೆ. ಈ ದಾಖಲಾತಿಗಳ ಬಹುಮುಖ್ಯ ಮಿತಿ ಎಂದರೆ ಇಲ್ಲಿನ ವಿಡಿಯೋ ದಾಖಲಾತಿ ಎಂಬುದು ಅಕ್ಷರಗಳಲ್ಲಿ ಹೇಳಿರುವುದಕ್ಕೆ ಒಂದು ಅಡಿ ಟಿಪ್ಪಣಿ ಮಾತ್ರ. ಈ ವಿಡಿಯೋಗಳು ಸ್ವತಂತ್ರವಾಗಿ ಏನನ್ನೂ ಹೇಳುವುದಿಲ್ಲ. ಅಂತ್ರೊಪಾಲಜಿಕಲ್ ಸರ್ವೇ ಆಫ್ ಇಂಡಿಯಾದಂಥ ಸಂಸ್ಥೆಗಳು ಮಾಡಿರುವ ವಿಡಿಯೋ ದಾಖಲಾತಿಗಳಲ್ಲೂ ಇಂಥ ಮಿತಿಗಳಿವೆ ಎಂಬುದು ಸ್ವಲ್ಪ ಕಹಿಯೆನಿಸುವಂಥ ಸತ್ಯ. ಇದಕ್ಕೆ ಮುಖ್ಯ ಕಾರಣ ವಿಡಿಯೋ ದಾಖಲಾತಿಯ ವೈಜ್ಞಾನಿಕತೆಯ ಕುರಿತು 'ಅಕ್ಷರ ಪ್ರತಿಭೆ'ಯುಳ್ಳ ವಿದ್ವಾಂಸರಿಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದೇ ಇರುವುದು. ಅಥವಾ ಅದನ್ನು ಕೇವಲ ಕ್ಯಾಮೆರಾ ಬಳಸುವ ಕೇವಲ ತಾಂತ್ರಿಕ ಪರಿಣತಿಯ ವಿಚಾರ ಎಂದಷ್ಟೇ ಭಾವಿಸಿರುವುದು. ಮಾಧ್ಯಮದ ರೂಪಾಂತರದ ಪರಿಣಾಮ ಅವರ ಸಂಶೋಧನೆಯ ಸಂದರ್ಭದಲ್ಲಿ ಅಷ್ಟೊಂದು ಗಂಭೀರವಾಗಿ ಕಾಣಿಸದೇ ಇರುವುದೂ ಇದಕ್ಕೆ ಕಾರಣವಾಗಿರಬಹುದು. ಒಂದು ವೇಳೆ ಇದೇ ವಿದ್ವಾಂಸರು ಪ್ರದರ್ಶನ ಕಲೆಯ ದಾಖಲೀಕರಣವನ್ನು ಮಾಧ್ಯಮಾಂತರವನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದರೆ ಅದರ ಮಹತ್ವ ಇನ್ನಷ್ಟು ಹೆಚ್ಚುತ್ತಿತ್ತು.ಅಭಯ ತಮ್ಮ ಪ್ರಯತ್ನದ ತಾಂತ್ರಿಕ ಆಯಾಮಗಳು ಮತ್ತು ಅದರ ಕಾರಣಗಳನ್ನು ವೈಜ್ಞಾನಿಕವಾದ ಪರಿಭಾಷೆಯಲ್ಲಿ ವಿವರಿಸುವ ಸಾಮರ್ಥ್ಯವಿರುವವರು. ಆದ್ದರಿಂದ ಅವರು ತಮ್ಮ ಇಲ್ಲಿಯ ತನಕದ ಪ್ರಯತ್ನಗಳ 'ಪ್ರಗತಿ'ಯ ಹಾದಿಯನ್ನು ಕನಿಷ್ಟ ಒಂದು working paperನ ಸ್ವರೂಪದಲ್ಲಾದರೂ ಹೊರ ತರುವುದು ಅಗತ್ಯ ಎನಿಸುತ್ತದೆ. ಇದು ದಾಖಲೀಕರಣಕ್ಕೆ ಹೊರಡುವವರಿಗೆ ಕೇವಲ ಮಾರ್ಗದರ್ಶಿಯಾಗುವುದಷ್ಟೇ ಅಲ್ಲದೆ ಅವರ ಕೆಲಸದ ಮಹತ್ವವನ್ನು ಹೆಚ್ಚಿಸುತ್ತದೆ. ಹಾಗೆಯೇ ಮತ್ತೆ ಮತ್ತೆ ಚಕ್ರವನ್ನು ಕಂಡುಹಿಡಿಯಬೇಕಾದ ಪ್ರಕ್ರಿಯೆಯನ್ನೂ ಇಲ್ಲವಾಗಿಸುತ್ತದೆ.
ಏಕವ್ಯಕ್ತಿಯಕ್ಷಗಾನದ ಪರಿಚಯವನ್ನು ಸು೦ದರವಾಗಿ ನೀಡಿದ್ದಕ್ಕೆ ಧನ್ಯವಾದಗಳು. ಅಭಯಸಿ೦ಹರ ಚಿತ್ರೀಕರಣ ಸು೦ದರವಾಗಿದೆ.
ಅಶೋಕವರ್ಧನರಿಗೆ ನಮಸ್ಕಾರಗಳು. ನಿಮ್ಮ ನೇರವಾದ ಹಾಗೂ ಸ್ಪಷ್ಟವಾದ ಮಾತುಗಳಿಂದ ನಿಮಗಿರುವ ಕಲಾಪ್ರೀತಿ-ಕಾಳಜಿ-ದೃಷ್ಟಿ ಗೋಚರಿಸಿ ನಿಮ್ಮ ಬಗ್ಗೆ ಹೆಮ್ಮ ಅನ್ನಿಸಿತು. ನಿಮ್ಮನ್ನು ಮೆಚ್ಚಿ ಅದನ್ನು ಸೂಚಿಸಲೂ ಭಯ. ಆದರೂ ನನ್ನ ಅಂತರಂಗದ ಸತ್ಯದ ಅಭಿಪ್ರಾಯಗಳನ್ನು ಹಂಚಿಕೊಳ್ಳದಿದ್ದರೆ ಕೃತಘ್ನನೆನಿಸಿಕೊಳ್ಳುತ್ತೇನೆ.೧. ಮೊದಲನೆಯದಾಗಿ ನಾವೇ ಹೇಳಿಕೊಳ್ಳಬೇಕಾದ ಮಾತುಗಳನ್ನು ನೀವೇ ಹೇಳಿ ನಮ್ಮನ್ನು ಮುಜುಗರದಿಂದ ಬಿಡುಗಡೆ ಮಾಡಿದ್ದಕ್ಕೆ ಕಲಾವಿದರೆಲ್ಲರ ಪರವಾಗಿ ಧನ್ಯವಾದಗಳು.೨. ಈ ಎಲ್ಲ ಸಾಧ್ಯತೆಗಳಿಗೆ ಮೂಲಕಾರಣ ಅಭಯಸಿಂಹರು. ಅವರ ಸಹಜ ಉತ್ಸಾಹ,ಪ್ರೀತಿ, ಸಮರ್ಪಣೆ ,ಬಧ್ಧತೆ,ನಂಬಿಕೆಯಿಂದ ನಮ್ಮನ್ನು ಕಟ್ಟಿಹಾಕಿದರು.೩. ಕಲಾಮಾಧ್ಯಮದಲ್ಲಿ ನಾನು ನನ್ನದೇ ಆದ ಕೆಲವು ಗೆರೆಗಳನ್ನು ಇರಿಸಿಕೊಂಡು ಬೀಗುತ್ತಿದ್ದೆ. ಆದರೆ ಈ ಗೆರೆಗಳಿಲ್ಲದೆಯೇ ಬೀಗದೆ ಇರುವ ವ್ಯಕ್ತಿಯನ್ನು ಕಂಡು ನನ್ನ ಬಗ್ಗೆ ನನಗೇ ನಾಚಿಕೆ ಎನ್ನಿಸಿತು. ಅಂತಹ ವ್ಯಕ್ತಿಗೆ ನನ್ನ ಶುಧ್ಧಮನಸ್ಸಿನ ಪ್ರಣಾಮಗಳು. ಆ ವ್ಯಕ್ತಿಯ ಹೆಸರನ್ನು ಸೂಚಿಸಲಾರೆ, ಸೂಚಿಸಿದರೆ ಆ ವ್ಯಕ್ತಿ ನನ್ನಿಂದ ತುಂಬಾ ದೂರ ಸರಿಯುತ್ತಾರೆ ಎಂಬ ಭಯ.೪. ಈ ಎಲ್ಲ ಡಿವಿಡಿಗಳು ಬಂದಲ್ಲಿಗೆ ನಮ್ಮ ತಂಡದ ಒಂದು ಅಧ್ಯಾಯ ಮುಗಿದಂತೆ. ನಮ್ಮ ದಾರಿಯ ಯಶಸನ್ನು ದಾಖಲಿಸಿ ನಮ್ಮ ಪಾಲಿನ ಕೆಲಸಗಳನ್ನು ಸುಲಭ-ಸರಳವಾಗಿಸಿದ ಅಭಯಸಿಂಹರಿಗೆ ಕೃತಜ್ಞತೆಗಳು.೫. ಒಳ್ಳೆಯ ಮನಸ್ಸುಗಳ ಮಿಲನದಿಂದ ಪ್ರಾರಂಭಗೊಂಡ ’ಯಕ್ಷ ಶಿಕ್ಷಣ ಟ್ರಸ್ಟ್(ರಿ) ಉಡುಪಿ’ ಇವರಿಗೆ ಈ ಡಿವಿಡಿಗಳಿಂದ ಬಂದ ಸಹಾಯಧನ ಸಂದಾಯವಾಗುವಂತೆ ಸಹಕರಿಸಿದ ’ಕೀಲಾರು ಗೋಪಾಲಕೃಷ್ಣ ಪ್ರತಿಷ್ಠಾನ’ದ ವ್ಯಕ್ತಿಗಳಿಗೆ ಹೃದಯದಿಂದ ನಮನಗಳು.೬. ಕೊನೆಯದಾಗಿ ಒಂದು ಮಾತಿಗೆ ಈಗಲೂ ಬದ್ಧನಾಗುತ್ತ ಮಾತು ಮುಗಿಸುತ್ತೇನೆ. ಈ ಎಲ್ಲ ಬೆಳವಣಿಗೆಗಳು ಆರ್.ಗಣೆಶ್ ಅವರ ಮಾರ್ಗದರ್ಶನದಿಂದ, ನನ್ನ ತೆವಲಿಗೆ ಅವರ ಶಕ್ತಿ ಸೇರಿ ರೂಪುಗೊಂಡಿದ್ದು. ಒಂದು ಶಿಕ್ಷಣದ ಮಾದರಿಯಲ್ಲಿ ಸಾಗಿತ್ತು ದಾರಿ. ಸಜ್ಜನಿಕೆಯ ಕಲಾವಿದರ ಸಹಕಾರದಿಂದ ಪ್ರಯೋಗವು ಪ್ರದರ್ಶನದ ಎತ್ತರಕ್ಕೆ ಬೆಳೆದು ಸಾವಿರ ದಾಟಿದ್ದು ಇತಿಹಾಸ. ಇನ್ನು ಏಕವ್ಯಕ್ತಿ ಯಕ್ಷಗಾನದಲ್ಲಿ ಹುಡುಕಾಟ ಇಲ್ಲ. ಅದರ ತೀವ್ರತೆ-ಆಳ-ವಿಸ್ತಾರ-ಸೀಮಿತ ಎಲ್ಲವನ್ನೂ ಕಂಡೆ. ನನ್ನ ಹಸಿವಿಗೆ ಆಹಾರ ಸಿಕ್ಕಿತು. ಜ್ಞಾನದ ಲಾಭ ಆಗಿತ್ತು. ಜೀವನ ಸೌಂದರ್ಯವನ್ನು ಕಂಡೆ. ಹಲವು ಹೃದಯಗಳ ಮಿಡಿತ-ತುಡಿತಗಳನ್ನು ಹತ್ತಿರದಿಂದ ಕಂಡೆ. ಸಹಜವಾಗಿ ಸ್ಪಂದಿಸುವರನ್ನು ಕಂಡು ಅದರ ಅಳತೆಯೂ ಸಿಕ್ಕಿತ್ತು. ಏಕವ್ಯಕ್ತಿ ಪ್ರದರ್ಶನ ಧ್ಯಾನಸ್ಥಮನಸನ್ನು ಬಯಸುತ್ತದೆ. ಅದು ಯಾವಾಗಲು ವೈಯುಕ್ತಿಕ. ಆದರೆ ಸಾಮೂಹಿಕವಾಗಿ ಬಯಸುವುದು ಸಂಭ್ರಮ-ಉತ್ಸವ-ಹಬ್ಬ. ಯಕ್ಷಗಾನ ಎಲ್ಲರಿಗಾಗಿ ಉಳಿಯಬೇಕು, ಬೆಳೆಯಬೇಕು, ಶ್ರೀಮಂತವಾಗಬೇಕು. ನನಗೆ ಕಲೆ ಪ್ರವೃತ್ತಿಯಾದ ಕಾರಣ ಕಲೆ ನನ್ನ ಪಾಲಿಗೆ ಸತ್ಯಾನುಭವ ಪಡೆಯುವ ಮಾರ್ಗ. ಯಕ್ಷಗಾನ ಸಮೂಹ ಕಲೆಯಾಗಿಯೇ ಬೆಳೆಯಲಿ. ಏಕವ್ಯಕ್ತಿಯಲ್ಲಿ ನಾನು ಕಂಡ ಸತ್ಯವನ್ನು ಹಾಗು ಬೆಳಕನ್ನು ಸಮೂಹ ಯಕ್ಷಗಾನದಲ್ಲಿ ಕಾಣಲು ಬಯಸುತ್ತೇನೆ ಎಂಬಲ್ಲಿಗೆ ವಿರಮಿಸುತ್ತೇನೆ.
yakshaganvu samooha kaleyadaru ekavyakthi pradarshana emba prakaravagi chapannu moodisida kalavidara thandakke matthu adara kanasannu kanda shathavadhanigalige yakshana kale chira runi.innu abhayasimhara koduge yavatthu visheshave.mantaparu heluvanthe samooha kale sommohana kaleyagi beleyalu ee thandada shrama thumba doddadu. yakshaganakke sikkida gowrakke ee dakhaleekarana ondu udaharane.
subbanna mattihalli says: in AVADHINovember 17, 2011 at 7:25 pmaparupada ADBHUTA kelasa maadiddeeri.Dhanyavaadagalu.