ಭೌತಿಕವಾಗಿ ಅಂಗಡಿಯನ್ನು ಕಟ್ಟಿದಷ್ಟೇ ಕಳಚಿಕೊಳ್ಳುವಲ್ಲೂ ಕಟ್ಟುಪಾಡುಗಳಿವೆ! ಆ ಅನಿವಾರ್ಯತೆಯಲ್ಲಿ ನಾನು ತೊಡಗಿದ್ದಂತೆ ಅಂದು (೪-೨-೧೨), ನಾನು ಕಾದಿರದ ಗೆಳೆಯ – ಅಭಿನವ ಪ್ರಕಾಶನದ ನ. ರವಿಕುಮಾರ್ ದೂರವಾಣಿಸಿದರು. ಅವರು ವರ್ಷದ ಹಿಂದೆ ನಾನು ಅತ್ರಿಯ ಪ್ರಕಾಶನ ವಿಭಾಗವನ್ನು ಮುಚ್ಚಿದ ದಿನವೇ ಮನವಿ ಕೊಟ್ಟಿದ್ದರು “ನಿಮ್ಮ ಒಂದಾದರೂ ಕೃತಿಯನ್ನು ಪ್ರಕಟಿಸುವ ಅವಕಾಶ ನನಗೆ ಕೊಡಬೇಕು.” ಗಣಕಕ್ಕೆ ತಲೆ ತುಂಬುವವರಿಗೆಲ್ಲಾ ಇರುವ ಅನುಕೂಲ ನನಗಿತ್ತು. ವಾರಗಟ್ಟಳೆ ಕುಳಿತು, ರಾಶಿ ಕಾಗದದಲ್ಲಿ, ಮಸಿ ಬಸಿದು ಅಕ್ಕರಮಣಿ ಪೋಣಿಸುವ ಶ್ರಮವಿಲ್ಲ. ಇಲ್ಲಿ (ಜಾಲತಾಣದಲ್ಲಿ) ಆಗಷ್ಟೇ ಲಕ್ಷದ್ವೀಪ ಕಥನ ಮುಗಿಸಿದ್ದೆ. ಅದಕ್ಕೆ ಎರಡು ವರ್ಷದ ಹಿಂದೆ ಧಾರಾವಾಹಿಸಿದ್ದ ಅಂಡಮಾನ್ ಕಥನವನ್ನು ಜೊತೆಮಾಡಿ, ಪುಸ್ತಕರೂಪಕ್ಕೆ ಪರಿಷ್ಕರಿಸಿ, ಒಂದೇ ಕೀಲಿ ಬಳಸಿದೆ – ‘ಕಳುಹಿಸು.’ ನಮ್ಮ ರವಿ ಕಾಲನಿಷ್ಠೆಯಲ್ಲಿ (ದಿನಮಣಿಯಂತೆ) ಅನ್ವರ್ಥಕರಲ್ಲ! ಎಂದೋ ಕರಡಚ್ಚು ಕಳಿಸಿದರು, ಮತ್ತೆಂದೋ ಚಿತ್ರಗಳ ಮಾಹಿತಿ ಕೇಳಿದರು, ಮಗುದೆಂದೋ ಮುಖಪುಟ ಕಾಣಿಸಿದರು. ನಾನು ಊಹಿಸಿಯೂ ಇರದಂದು, ಇರದಂತೆ, ಪ್ರೊ| ಸಿ.ಎನ್. ರಾಮಚಂದ್ರನ್ ಅವರಿಗೆ (ಪಾಪ, ಎಷ್ಟು ಗಂಭೀರ ಕೆಲಸಗಳಿತ್ತೋ ಏನೋ – ಕ್ಷಮಿಸಿ ಸಾರ್, ಅಪರಾಧಿ ನಾನಲ್ಲ.) ಕರಡು ಪುಟಗಳನ್ನೇ ಕೊಟ್ಟು, ಬೆನ್ನುಡಿ ತರಿಸಿ, ತೋರಿದರು. ಮತ್ತೂ ಪುಸ್ತಕ ಬರುವ ದರ್ದು, ತುರ್ತು ನನಗಿಲ್ಲ, ರವಿಗೂ ಇಲ್ಲ ಎನ್ನುವ ದಿನಗಳಲ್ಲಿ ಈ ಕರೆ ಅನಿರೀಕ್ಷಿತ! “ನಾಡದ್ದು, ಅಂದ್ರೇ ಎಂಟನೇ ತಾರೀಕಿಗೆ, ಮಂಗಳೂರಿನಲ್ಲಿ ಪ್ರೊ| ಷ. ಶೆಟ್ಟರ್ ಅವರಿಗೆ ಎಸ್ವೀಪೀ ಪ್ರಶಸ್ತಿ ಪ್ರದಾನ. ಪ್ರಕಾಶಕನ ನೆಲೆಯಲ್ಲಿ ನಾನವರನ್ನು ಕರೆದು ಕೊಂಡು ಬರ್ತಾ ಇದ್ದೀನಿ. ಅಂದೇ ಬೆಳಿಗ್ಗೆ ಸರಳವಾಗಿ ನಿಮ್ಮ ಪುಸ್ತಕ ಅನಾವರಣ ಇಟ್ಕೊಳ್ಳೋಣ್ವಾ?”
‘ಅಭಿನವ-ಅತ್ರಿ ಸಹಯೋಗದಲ್ಲಿ ಫೆಬ್ರವರಿ ಎಂಟರ ಬೆಳಿಗ್ಗೆ ಹನ್ನೊಂದು ಗಂಟೆಗೆ ದ್ವೀಪಸಮೂಹದ ಕಥೆ – ಪುಸ್ತಕದ ಲೋಕಾರ್ಪಣೆ. ಮಾಡುವವರು ಖ್ಯಾತ ಇತಿಹಾಸಜ್ಞ ಪ್ರೊ| ಷ. ಶೆಟ್ಟರ್, ಅಧ್ಯಕ್ಷತೆ ಬಹುಮುಖೀ ವಿದ್ವಾಂಸ ಪ್ರೊ| ಎಂ. ಪ್ರಭಾಕರ ಜೋಶಿ. ಸ್ಥಳ ಅತ್ರಿ ಬುಕ್ ಸೆಂಟರ್.’ ಹೀಗೊಂದು ಪತ್ರದ ಮೂವತ್ತು ನೆರಳಚ್ಚು ಪ್ರತಿ ಮಾಡಿಸಿ, ಪತ್ರಕರ್ತರ ಸಂಘದ ವ್ಯವಸ್ಥೆ ಮೂಲಕ ಎಲ್ಲ ಮಾಧ್ಯಮಗಳ ಗಮನ ಸೆಳೆದೆ. ಆ ಕರೆಯೋಲೆಯ (ಜನಪ್ರೀಯವಾಗಿ ಇ-ಪ್ರತಿ ಎನ್ನುತ್ತಿದ್ದೆ, ತಲೆಯೊಳಗಿನ ಪಂಡಿತಾರಾಧ್ಯ ಎಚ್ಚರಿಸಿದ್ದಕ್ಕೆ) ವಿದ್ಯುನ್ಮಾನ ಪ್ರತಿಯನ್ನು ನನ್ನ ಜಾಲತಾಣದ ಗೆಳೆಯರಿಗೆಲ್ಲಾ ರವಾನಿಸಿದೆ. ಹಾಂ, ಬರಿದೇ ರವಾನಿಸಲಿಲ್ಲ, ಒಂದು ಅಡಿ ಟಿಪ್ಪಣಿ ಸೇರಿಸಿಬಿಟ್ಟೆ – ‘ಸ್ಥಳ ಸಂಕೋಚದ ಕಾರಣವಾಗಿ ನೀವೆಲ್ಲಾ ನಿಮ್ಮನುಕೂಲದ ಅನ್ಯ ಸಮಯದಲ್ಲಿ ಬಂದರೆ ಸಾಕು.’ ಕಾರ್ಯಕ್ರಮ ಚಿಕ್ಕದಾಗಿ ಚೊಕ್ಕವಾಗಿ ನಡೆಯಿತು. ಒಂದೇ ಅನಪೇಕ್ಷಿತ ಮತ್ತು ನನಗೆ ತೀರಾ ಅನಿರೀಕ್ಷಿತ ಕಲಾಪ – ಲೇಖಕ ಸಮ್ಮಾನ; ರವಿ ಗುಟ್ಟಾಗಿ ಶಾಲು, ಹಾರ, ಫಲ ತಂದು ಶೆಟ್ಟರ್ ಮತ್ತು ಜೋಶಿಯವರ ಮೂಲಕ ನನ್ನ ಮೇಲೆ ಹೇರಿದ್ದು! ಅಂದು ತರಿಸಿದ್ದ ಐವತ್ತು ಕಾಫಿ ಮುಗಿಯದಿದ್ದರೂ ವಾರದಲ್ಲಿ ನೂರು ಕಾಪಿ (ಪ್ರತಿ) ಬಹುತೇಕ ಮಾರಿಯೇ ಮುಗಿದದ್ದು ನಿಜಕ್ಕೂ ಆಶ್ಚರ್ಯ. (ನೀವಿನ್ನೂ ಕೊಂಡಿಲ್ಲವಾದರೆ ಕೂಡಲೇ ಅರವತ್ತೈದು ರೂಪಾಯಿ ವಿಳಾಸ ಸಹಿತ ಕಳಿಸಿ, ಅಂಚೆಯಲ್ಲಿ ತರಿಸಿಕೊಳ್ಳಬಹುದು)
ಅತ್ರಿಯಲ್ಲಿ ಕೇವಲ ಹದಿನೈದು ದಿನಗಳ ದರ ಕಡಿತದ ಮಾರಾಟವನ್ನು ಸುರುಮಾಡಿದ್ದೇವೆ. ಒರತೆಗಳೆಲ್ಲವನ್ನೂ ಬಂದ್ ಮಾಡಿ, ದಾಸ್ತಾನನ್ನು ತಳಮಟ್ಟಕ್ಕಿಳಿಸಿ, ಕಲಕಿ ಬಿಟ್ಟಿದ್ದೇವೆ. ಎಲ್ಲೋ ನಾಲ್ಕೆಂಟು ಸುಲಭ ಬೆಲೆಯಲ್ಲೇ ಬಂದ ಪುಸ್ತಕಗಳನ್ನು ಬಿಟ್ಟು ಉಳಿದೆಲ್ಲವಕ್ಕೂ ಶೇಕಡ ಇಪ್ಪತ್ತರ ರಿಯಾಯ್ತಿ. ತೀರಾ ಹಳೆಯವು ಆದರೆ ಮರಳಿ ದೊರೆಯವು ಎನ್ನುವಂತಾ ಒಂದಷ್ಟು ಕೃತಿಗಳನ್ನು ಶೇಕಡಾ ಐವತ್ತರ ರಿಯಾಯ್ತಿಯಲ್ಲೂ ಬಿಡಿಸಿಟ್ಟಿದ್ದೇನೆ. ಹೆಚ್ಚುವರಿ ಪ್ರತಿಗಳನ್ನು ಕೊಳ್ಳಬಲ್ಲ ವ್ಯಾಪಾರಿಗಳಿಗೆ ಅಗ್ರಾಸನದ ಗೌರವವೂ ಇದೆ! ಗಮನಿಸಿ: ಈ ದಾಸ್ತಾನು ತೀರುವಳಿ ಮಾರಾಟ ಇದೇ ಮಾರ್ಚ್ ೧೭ರಂದು ಕೊನೆ. ತಿಂಗಳ ಮತ್ತುಳಿದ ದಿನಗಳಲ್ಲಿ, ಸಾರ್ವಜನಿಕ ವ್ಯವಹಾರಕ್ಕೆ ಅವಕಾಶವಿಲ್ಲ. ಇಲ್ಲೇ ಏಪ್ರಿಲ್ ಒಂದರಿಂದ ಪುಸ್ತಕ ಮಳಿಗೆಯನ್ನು ಮುಂದುವರಿಸಲಿರುವ ನವಕರ್ನಾಟಕ ಪಬ್ಲಿಕೇಶನ್ಸಿನವರಿಗೆ ಲೆಕ್ಕ ವಹಿಸಿಕೊಡುವ ಕೆಲಸ ನಡೆಯುವುದು ಅನಿವಾರ್ಯ. ಈ ಅತ್ರಿ ವಿದಾಯಕ್ಕೂ ನವಕರ್ನಾಟಕ ಸ್ವಾಗತಕ್ಕೂ ನಡುವಣ ಏಕೈಕ ವಿಶಿಷ್ಟ ಕಾರ್ಯಕ್ರಮವನ್ನು ನಾನಿಲ್ಲಿ ಎತ್ತಿ ಆಡಲೇಬೇಕು. ಸುಮಾರು ಹತ್ತು ದಿನಗಳ ಹಿಂದೆಯೇ ನಾನೊಂದು ಆಮಂತ್ರಣವನ್ನು ಕೆಲವರಿಗೆ ಮಿಂಚಂಚೆಯಲ್ಲಿ ಕಳಿಸಿಕೊಟ್ಟದ್ದು ನೆನಪಿಸಿಕೊಳ್ಳಿ. ಅದೇ ಮಾರ್ಚ್ ಹದಿನೆಂಟೂ ಆದಿತ್ಯವಾರ. ಮಂಗಳೂರು ನಗರದ ಹೃದಯಭಾಗದಲ್ಲೇ ಇರುವ ವಿವಿ ಕಾಲೇಜು (ಅಥವಾ ಹಳೆಯ ಸರಕಾರೀ ಕಾಲೇಜಿನ) ವಠಾರದಲ್ಲಿ ಸಂಜೆ ನಾಲ್ಕೂ ಮೂವತ್ತರಿಂದ ಸುಮಾರು ನಾಲ್ಕು ಗಂಟೆಯ ಕಾಲ ಯಾವುದೇ ಔಪಚಾರಿಕ ಸಭೆ, ಕಲಾಪಗಳಿಲ್ಲದೇ ನಡೆಯುವ ವೈಚಾರಿಕ, ರಸಾತ್ಮಕ ಕೂಟ…
ಮಂದ್ರ ಕಾದಂ-ಸಂಗೀತ ಕಾರ್ಯಕ್ರಮ. ಅತ್ರಿ ಸಹಯೋಗದ ಓದುಗ ಬಳಗದ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮ. ಮೊದಲಿಗೆ ‘ಜ್ಞಾನ ಸಂಪಾದನೆ ಮತ್ತು ಪುಸ್ತಕಮನೆ’ ಎಂಬ ಎಳೆ ಹಿಡಿದು ಡಾ| ವಿಲ್ಲಿ ಡಿ ಸಿಲ್ವ (ದೇಶದ ಶ್ರೇಷ್ಠ ಚಿಂತಕ, ನೂತನ ಮತ್ತು ಪುರಾಣ ಜ್ಞಾನ ಶಾಖೆಗಳ ಅಸಾಧಾರಣ ಓದಿನ ಬಲದ ವ್ಯಾಖ್ಯಾನಕಾರ) ಅವರು ಸುಮಾರು ಹದಿನೈದು ಮಿನಿಟುಗಳ ಮಾತಿನ ಮಂಟಪ ಕಟ್ಟುತ್ತಾರೆ. ಹೀಗೆ ಅನಾವರಣಗೊಂಡ ಓದಿನ ಹೊಸ ಆಯಾಮವನ್ನು ವಿಶಿಷ್ಟವಾಗಿ ವಿಸ್ತರಿಸುವ ಮಹಾ ಕಾರ್ಯ ಅನಂತರದ್ದು!
ಡಾ| ಎಸ್.ಎಲ್. ಭೈರಪ್ಪನವರ ‘ಮಂದ್ರ’ ಕಾದಂಬರಿ ಬಿಡುಗಡೆಯಾದ ಹೊಸದರಲ್ಲಿ ನಡೆದ ಮುಖ್ಯ ಚರ್ಚೆ ನೈತಿಕತೆಯದ್ದು! ಲಲಿತ ಕಲೆಗಳಲ್ಲಿನ ಲೈಂಗಿಕ ಶೋಷಣೆ ಕಾದಂಬರಿಯಲ್ಲಿ ಹಾಸುಹೊಕ್ಕಾಗಿ ಬಂದದ್ದು ತಪ್ಪು ಎನ್ನುವುದು ದಪ್ಪ ಧ್ವನಿಯಲ್ಲಿ ಕೇಳಿ ಬಂತು. ‘ನಾಗರಿಕ ಸಮಾಜ’ ಗೊತ್ತಿದ್ದೂ ಮರೆಮಾಚಲೆಳೆಸುವ ‘ವಿಕೃತ’ ವಾಸ್ತವಗಳನ್ನು ಇಲ್ಲಿ ಸಾಹಿತ್ಯ ವಿವರಗಳಲ್ಲಿ ಬಿಡಿಸಿಟ್ಟಂತೆ ತೋರುವುದು ನಿಜ. ಆದರೆ ಅದಕ್ಕೂ ಮೇಲಿನ ಸ್ತರದಲ್ಲಿ ಸಂಗೀತವನ್ನೇ ಮತ್ತು ಲಲಿತಕಲಾಲೋಕದ ದಟ್ಟ ಅನುಭವವನ್ನೂ ಮಂದ್ರ ಸಾಹಿತ್ಯದ ಬಂಧದಲ್ಲಿ ಕಟ್ಟಿಕೊಡುತ್ತದೆನ್ನುವುದನ್ನು ವಿಚಾರಪರರು ನಿರ್ವಿವಾದಿತವಾಗಿ ಒಪ್ಪಿದ್ದಾರೆ. ಸಂಗೀತದಲ್ಲಿ ಅಶಿಕ್ಷಿತರಾದ, ಸಾರ್ವಜನಿಕ ಅಭಿವ್ಯಕ್ತಿಯಲ್ಲಿ ಶೂನ್ಯರೂ ಆದ ಬಹು ದೊಡ್ಡ ಓದುಗ ಬಳಗಕ್ಕಂತೂ ಮಂದ್ರ ಅಂತಃಬೋಧೆಯಲ್ಲಿ ಇನ್ನಿಲ್ಲದ ಸಂಗೀತ ರಸಸುಖವನ್ನು ಒದಗಿಸಿದ್ದೂ ಅಷ್ಟೇ ನಿಜ. ಸಹಜವಾಗಿ ಇದಕ್ಕೆ ಬಹುಪ್ರತಿಷ್ಠೆಯ ‘ಸರಸ್ವತೀ ಸಮ್ಮಾನ’ ಪ್ರಶಸ್ತಿ ಕನ್ನಡದಲ್ಲಿ ಸರ್ವಪ್ರಥಮವಾಗಿಯೂ ಸಂದಿದೆ. (ಹೆಚ್ಚಿನದರ ಘೋಷಣೆಯೂ ಕೇಳಿದೆ!) ಇದರಲ್ಲಿ ರೋಚಕ ಕಥನದೊಂದಿಗೇ ಸಂಗೀತವನ್ನು ವಿಶಿಷ್ಟವಾಗಿ ಬಳಸಿಕೊಂಡಿದೆ.
ರಾಗಗಳು ವ್ಯಕ್ತಿಗಳಾಗುವ ಪರಿ, ಅನುರಾಗಗಳು ಅಭಿವ್ಯಕ್ತಿಗಳಾಗುವ ಚಂದ ಇಲ್ಲಿದೆ. ಇದನ್ನು ಪರಿಕಲ್ಪನಾ ನೆಲೆಯಲ್ಲಿ ಕಂಡು ನಿರ್ದೇಶಿಸಿದವರು ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ. ವ್ಯಾಖ್ಯಾನದಲ್ಲಿ ಶತಾವಧಾನಿ ಗಣೇಶ್, ಗಾಯನದಲ್ಲಿ ಉಸ್ತಾದ್ ಫಯಾಸ್ ಖಾನ್, ಪಕ್ಕ ವಾದ್ಯಗಳಾದ ಹಾರ್ಮೋನಿಯಂನಲ್ಲಿ ಡಾ|ರವೀಂದ್ರ ಕಾಟೋಟಿ ಮತ್ತು ತಬ್ಲಾದಲ್ಲಿ ಪಂಡಿತ್ ಗುರುಮೂರ್ತಿ ವೈದ್ಯ ಅಮೋಘವಾಗಿ ಕಳೆಗಟ್ಟಿಸಿದ್ದಾರೆ. ಈ ಮೊದಲ ಪ್ರದರ್ಶನದ ಧ್ವನಿಜಾಲ ಕೇಳಿ. (ಇದು ಬೆಂಗಳೂರಿನ ಪ್ರಯೋಗದ ಅಪರ್ಯಾಪ್ತ ದಾಖಲೆ.) ಇಲ್ಲಿ ಗಣೇಶರು ಸಮರ್ಥವಾದ ಪೀಠಿಕೆ ಕೊಡುವುದರೊಡನೆ ಸಂಗೀತ ಕಲಾಪಕ್ಕೂ ಚಾಲನೆ ಕೊಡುವುದನ್ನು ಕೇಳಬಹುದು. ಒಂದು ಸಾಹಿತ್ಯ ಕೃತಿಯನ್ನು ಸೋದಾಹರಣವಾಗಿ ವಿಶ್ಲೇಷಿಸುವ, ಈ ಕಾರ್ಯಕ್ರಮ ಇದೇ ಮೊದಲು ಎನ್ನುವಂತೆ ಬೆಂಗಳೂರಿನಲ್ಲಿ ನಡೆದಿತ್ತು. ಅದು ನಾಲ್ಕು ಗಂಟೆಗಳ ಉದ್ದಕ್ಕೆ ನಡೆದರೂ ರಸಿಕರು ದಣಿಯಲಿಲ್ಲವಂತೆ. ಸಹಜವಾಗಿ ಕೇಳುಗರು ಮರುಳುಗಟ್ಟಿ ಹುಬ್ಬಳ್ಳಿಯಲ್ಲಿ, ಮೈಸೂರಿನಲ್ಲೂ ಇದನ್ನು ಪಡೆದುಕೊಂಡರು. ಮಂಗಳೂರಿನ ನನ್ನ ಮಿತ್ರ ಬಳಗದಲ್ಲಿ ಕೆಲವರಿಗೆ ಈ ಕಾದಂ-ಸಂಗೀತವನ್ನು ‘ನಾವ್ಯಾಕೆ ತರಿಸಬಾರದು ಎಂಬ ಚಡಪಡಿಕೆ. ಆದರೆ ಇಲ್ಲಿನ ಸಾಮಾನ್ಯ ಸಾಹಿತ್ಯಕ ಮತು ಸಾಂಸ್ಕೃತಿಕ ಕಲಾಪಗಳು ಒಂದೋ ಸಂಘಟನಾತ್ಮಕ ವ್ಯಕ್ತಿಗಳ ಹೆಸರಿನೊಡನೆ ಅಥವಾ ಪ್ರಾಯೋಜಕ ವ್ಯಕ್ತಿ ಅಥವಾ ಸಂಸ್ಥೆಗಳ ಹೆಸರು ಮತ್ತು ಪ್ರಚಾರದೊಡನೆ ಕಲಸಿ ಹೋಗಿರುವುದಕ್ಕೆ ಹೇವರಿಸಿ ಕೇವಲ ‘ಓದುಗ ಬಳಗ ಎಂಬ ಹೆಸರಿನಲ್ಲಿ (ಅನಾಮಧೇಯವಾಗಿ ಉಳಿದು) ವ್ಯವಸ್ಥೆ ಮಾಡಿದ್ದಾರೆ. ಇದರ ಪ್ರಥಮ ಪ್ರಯೋಗದ ಮೊದಲು ಸಮ್ಮಾನ ಸ್ವೀಕರಿಸಿ, ಕಲಾಪದುದ್ದಕ್ಕೆ ಸಾಕ್ಷಿ ಹಾಕಿದ ಸ್ವತಃ ಲೇಖಕ ಭೈರಪ್ಪನವರ ಕುಶಿಯನ್ನು ಈ ಎರಡನೇ ಧ್ವನಿಮುದ್ರಿಕೆಯಲ್ಲಿ ಕೇಳಬಹುದು.
ಹೆಚ್ಚಿನ ಕುಶಿಯನ್ನು ಸ್ವಾಂಗೀಕರಿಸಿಕೊಳ್ಳಲು ಮರೆಯದೇ ಬನ್ನಿ – ಮಾರ್ಚ್ ೧೮, ಆದಿತ್ಯವಾರ ಸಂಜೆ ನಾಲ್ಕೂ ಇಪ್ಪತ್ತಕ್ಕೇ ಮಂಗಳೂರು ಸರಕಾರೀ ಕಾಲೇಜಿನ ಕುರ್ಚಿಗಳನ್ನು ತುಂಬಿ. ಗಮನಿಸಿ, ಕಲಾಪಗಳು ಯಾವುದೇ ಔಪಚಾರಿಕ ಸಭೆಯಿಲ್ಲದೆ (ಉದ್ಘಾಟನೆ, ಹಾರತುರಾಯಿಗಳ ಹೆಚ್ಚುಗಾರಿಕೆ, ಅಪ್ರಸ್ತುತ ಮತ್ತು ಅಪ್ರಬುದ್ಧ ಆಶೀರ್ವಚನಗಳು, ಪೇಪೇ ಡುಂಡುಂ, ಸಮಾರೋಪ ಭಾಷಣ, ವಂದನಾರ್ಪಣೆ ಇತ್ಯಾದಿ) ನಾಲ್ಕೂವರೆಗೆ, ಅಂದರೆ ಸಮಯಕ್ಕೆ ಸರಿಯಾಗಿ ಸುರುವಾಗಲಿದೆ. ವಿಶೇಷ ಸೂಚನೆ: ಸ್ವತಃ ಸಾಹಿತ್ಯ ಭಂಡಾರದವರೇ ಬಂದು ಭೈರಪ್ಪನವರ ಎಲ್ಲಾ ಲಭ್ಯ ಕೃತಿಗಳ ಪ್ರದರ್ಶನ ಮಾರಾಟದ ವ್ಯವಸ್ಥೆಯನ್ನೂ ಮಾಡಲಿರುವುದರಿಂದ ನಿಮ್ಮ ಭಂಡಾರ ಬಲಪಡಿಸಿಕೊಳ್ಳಲು ಸಜ್ಜಾಗಿ ಬನ್ನಿ.
ಹುಲಿಮೀಸೆ ರಾಯರೇ! ನಮ್ಮ ಪ್ರೀತಿಯ ಅತ್ರಿ ಪುಸ್ತಕ ಮಳಿಗೆಗೆ ಪದೇ ಪದೇ ವಿದಾಯ ಅನ್ನಲು ಮನಸ್ಸಿಗೆ ಕಷ್ಟ ಅನ್ನಿಸುತ್ತಾ ಇದೆ. ದೂರದಿಂದಲೇ ತಮ್ಮ ಕಾರ್ಯಕ್ರಮಗಳಿಗೆ ಶುಭ ಹಾರೈಸುತ್ತೇನೆ.ಪ್ರೀತಿಯಿಂದಪೆಜತ್ತಾಯ ಎಸ್. ಎಮ್.
ಸರಳಾಕ್ಷ ಹುಲಿಮೀಸೆರಾಯ ಎಂದು ಹಿಂದೆ ಶೆರ್ಲಾಕ್ ಹೋಮ್ಸ್ ಗೆ ಹೇಳಿದ್ದರು. ಅದು ಈಗ ನಿಮ್ಮ ಮೀಸೆಯನ್ನೇ ತಿರುವಿದ್ದು ಯಥೋಚಿತವಾಗಿದೆ!
ಕೆಲವು ದಶಕಗಳಿ೦ದ ಮ೦ಗಳೂರಿನಲ್ಲಿ ನೀವು ಪಟ್ಟ ಶ್ರಮದಿ೦ದ ಹೆಸರಾ೦ತವಾಗಿ ನಡೆಯುತ್ತಿರುವ ಅತ್ರಿ ಬುಕ್ ಸೆ೦ಟರ್ ಮಾರ್ಚ್ ೧೮ ರಿ೦ದ ಓದುಗ ಪ್ರಿಯರಿಗೆ ನಿಮ್ಮ ನೇತ್ರತ್ವದಲ್ಲಿ ಪುಸ್ತಕ ಸಿಗುವ ಭಾಗ್ಯವಿಲ್ಲ ಎ೦ದು ಎಣಿಸಲು ಸಾದ್ಯವಾಗದು. ಆದರೆ ಅದು ವಾಸ್ತವಿಕ ಸ೦ಗತಿ. ನಿಮ್ಮ ನಿರ್ಗಮನದ ಸ೦ದರ್ಭ ನಿರ್ವಿಗ್ನವಾಗಿ ಹಾಗೂ ಮಾರ್ಚ್ ೧೮ ಕ್ಕೆ ನಡೆಯುವ ಕಾರ್ಯಕ್ರಮ ಸಾ೦ಗವಾಗಿ ನೆರವೇರಲಿ ಎ೦ದು ಹಾರೈಸುವೆ.
To think of Athree without Ashoka vardhana is difficult!'.