ಕುಮಾರಪರ್ವತದ ಸುತ್ತ ಮುತ್ತ ಭಾಗ ಏಳು

To see the location and the terrain in Google Mapplease click here.

ಕುಳ್ಕುಂದದಲ್ಲಿ ಸ್ಪಷ್ಟ ಪೂರ್ವಮುಖಿಯಾಗಿ ಹೊರಟ ಬಿಸಿಲೆ ದಾರಿ ಅಡ್ಡ ಹೊಳೆಯಗುಂಟ ಏರೇರುತ್ತಾ ಪೂರ್ಣ ಉತ್ತರಮುಖಿಯೇ ಆಗುವ ಹಂತದಲ್ಲಿ ನಾನು ಹಿಂದೆಲ್ಲಾ ಹೇಳಿದ ಸಂಕ ಹಿಡಿಯುತ್ತದೆ. ಅಲ್ಲಿದು ಹೊಳೆಯ ಪೂರ್ವ ದಂಡೆ ಸೇರಿದರೂ ಹಿಮ್ಮುರಿ ತಿರುವು ತೆಗೆದುಕೊಂಡಂತೇ ಪೂರ್ಣ ದಕ್ಷಿಣ ಮುಖಿಯಾಗಿ ಘಟ್ಟ ನಿಭಾಯಿಸ ತೊಡಗುತ್ತದೆ. ಇಲ್ಲಿನ ದಟ್ಟ ಹಸಿರಿನ ನಡುವೆ ಅನತಿ ದೂರದಲ್ಲೇ ನಮಗೆ ಪುಂಡುಪಾತ್ರವೊಂದು ತೆರೆಕುಣಿತ (=ಪೊರ್ಪಾಟ್, ಯಕ್ಷಗಾನದಲ್ಲಿ ವಿಶಿಷ್ಟ ಪಾತ್ರಗಳ ರಂಗಪ್ರವೇಶ ತಂತ್ರ) ಕೊಟ್ಟಂತೆ, ಪಶ್ಚಿಮಕ್ಕೆ ಬಂಡೆಮೈ ತೆರೆದುಕೊಂಡ ಶಿಖರ ಬಾಳೆಕಲ್ಲು ಬೆಟ್ಟ (ಸಮುದ್ರ ಮಟ್ಟದಿಂದ ೬೫೨ ಮೀ) ನಮ್ಮ ಕುತೂಹಲ ಕೆರಳಿಸುತ್ತದೆ. ಈ ಶಿಖರ ಮಂಕಾಡಿಸುತ್ತ ಇನ್ನೇನು ಅದರೆತ್ತರಕ್ಕೆ ತಲಪಿದೆವೆನ್ನುವಾಗ, ಐದನೆಯ ಹಿಮ್ಮುರಿ ತಿರುವು ಕಳೆದು ಉತ್ತರ-ಪೂರ್ವ ಮುಖಿಗಳಾಗುವಾಗ, ಒಮ್ಮೆಗೆ ಭಾರೀ ಶಿಲಾ ಮುಖದ ಶಿಖರವೊಂದು ಕಣ್ಣ ತುಂಬುತ್ತದೆ. ತೆರೆಮರೆಯ ಕಲಾಪಗಳೆಲ್ಲಾ ಮುಗಿದು ಒಡ್ಡೋಲಗ ದೃಶ್ಯಕ್ಕಾಗುವಾಗ ರಾಜ ವೇಷಧಾರಿ ತಣ್ಣಗೆ ಬಂದು ಸಿಂಹಾಸನ ಆವರಿಸಿಕೊಂಡಹಾಗೆ! ಪಶ್ಚಿಮಕ್ಕೆ ಎದೆ ಸೆಟೆಸಿ ನಿಂತಂತಿರುವ ಈ ಕಡಿದಾದ ಬಂಡೆಮೈ ಬುಡದಿಂದ ಸುಮಾರು ಒಂದುನೂರಾ ಹತ್ತು ಮೀಟರ್ ಎತ್ತರವೂ ಅದರ ಶಿಖರ ಸಮುದ್ರ ಮಟ್ಟದಿಂದ ೮೭೫ ಮೀಟರ್ ಎತ್ತರವೂ ಇದೆ. ಸರ್ವೇಕ್ಷಣ ಇಲಾಖೆಯ ಭೂಪಟ ಇದನ್ನು ಕರ್ಣಕಲ್ ಬೆಟ್ಟವೆಂದು ಹೆಸರಿಸುತ್ತದೆ. ಈ ಬಂಡೆ ಮಳೆ ಕಳೆದ ಮೊದಲಲ್ಲಿ ಮತ್ತೆ ಮಂಜು ಮಿಂದ ಕಾಲಗಳಲ್ಲಿ ಅದರಲ್ಲೂ ಇಳಿಸೂರ್ಯನ ನೇರ ಪ್ರತಿಫಲನಕ್ಕೇ ಇಟ್ಟ ಕನ್ನಡಿಯೋ ಎಂಬಂತೆ ಜನಪದರಿಗೆ ಕಂಡದ್ದಕ್ಕೇ ಜನಜನಿತ ಹೆಸರು ಕನ್ನಡಿಕಲ್ಲು.

ಕನ್ನಡಿ ಮುಡಿಪು

‘ಅಂದ ಕಾಲತ್ತಿಲೆ’ ಎನ್ನುವಷ್ಟು ಹಿಂದೆಂದೋ (೧೯೮೪-೮೫) ಕನ್ನಡಿಕಲ್ಲಿನ ಪ್ರಥಮ ದರ್ಶನವಾದ ಹೊಸತರಲ್ಲೇ ಒಂದು ಆದಿತ್ಯವಾರ ನಮ್ಮ ಆರೋಹಣದ ಬೈಕ್ ಸೈನ್ಯ ಇದನ್ನೇರುವ ಸಂತೋಷಕ್ಕೇ ಸಜ್ಜಾಗಿ ಹೊರಡಿಸಿದ್ದೆವು. ಸ್ಪಷ್ಟ ಶಿಖರವೇ ಕಾಣುತ್ತಿರುವಾಗ ಅವರಿವರನ್ನು ಕೇಳುವ ಯೋಚನೆ ಮಾಡಲಿಲ್ಲ. ಮತ್ತೆ ಶೋಧಿಸಿ, ಸಾಧಿಸುವ ಸಂತೋಷಕ್ಕಾಗಿಯೂ ಬಿಸಿಲೆ ದಾರಿಯ ಕೊನೆಯ ಹಿಮ್ಮುರಿ ತಿರುವಿನ ಬಳಿ ಬೈಕಿಳಿದದ್ದೂ ಆಯ್ತು. ಬಂಡೆ ನೋಡುತ್ತಿದ್ದಂತೇ ಶಿಲಾರೋಹಣದ ಬಗ್ಗೆ ನನ್ನಿಂದಲೇ ಕೇಳಿದ್ದ ಉಮೇದು-ಭಾರಿಗಳು (over enthusiastics?) ಹುರಿಗೊಂಡರು! ಅವರ ಅಂದಾಜಿನಲ್ಲಿ ಶಿಲಾರೋಹಣ ಏನೋ ಮಂತ್ರಸಿದ್ಧಿ, ಅಮಾನುಷ! ಮಾಡುವವರು ಜೇಡಮನುಷ್ಯನ ಸಂಬಂಧಿಗಳು. ವಾಸ್ತವದಲ್ಲಿ ಬಂಡೆಯ ಪ್ರಾಕೃತಿಕ ಒರಟು, ಸೀಳು, ರಚನೆಗಳನ್ನು ಪೂರ್ವಾಭ್ಯಾಸದಿಂದ ಹೊಂದಿಸಿಕೊಳ್ಳುವುದೇ ಶಿಲಾರೋಹಣ. ಆತ್ಮರಕ್ಷಣಾ ಕ್ರಮ, ಕನಿಷ್ಠ ಒಂದಾದರೂ ಜತೆಗಾರ ಕಡ್ಡಾಯ. ಇಂದು ಶಿಲಾರೋಹಣಕ್ಕೆ ಪೂರಕವಾಗಿ ಅನೇಕಾನೇಕ ಸಲಕರಣೆಗಳು, ತಂತ್ರಗಳು ಬಂದಿವೆ. ಆರೋಹಣಾಭ್ಯಾಸಕ್ಕೆ ಪೂರ್ವನಿರ್ಧರಿತ ಚಡಿ, ಬಿರುಕುಗಳ ಕೃತಕ ಗೋಡೆಗಳಿಂದ ತೊಡಗಿ, ಬಹುಮಹಡಿ ಕಟ್ಟಡಗಳೂ ಬಳಕೆಯಾಗುತ್ತವೆ. ‘ಶಿಲಾರೋಹಣ’ ವ್ಯಾಪಕಾರ್ಥದಲ್ಲಿ ‘ಏರಿದವ ಇಳಿಯಲೇಬೇಕು’ ಎನ್ನುವುದನ್ನು ಸೇರಿಸಿಕೊಂಡೇ ಬೆಳೆದಿದೆ. ಸಹಜವಾಗಿ ಇಂದು ಇದು ನಗರಾರಣ್ಯಗಳಲ್ಲಿ ಹಲವು ಮುಖಗಳಲ್ಲಿ ಬೆಳೆದೂ ಇದೆ. (ಅಗ್ನಿಶಾಮಕ ದಳದವರು ಇದರ ರಕ್ಷಣಾಕ್ರಮವನ್ನು ಉಡಾಫೆ ಮಾಡಿದ್ದಕ್ಕೇ ಮೊನ್ನೆ ಮೊನ್ನೆ ‘ಪ್ರದರ್ಶನ’ ಕೊಡಲು ಹೋಗಿ ಒಂದು ಉತ್ಸಾಹೀ ಜೀವಕ್ಕೆ ದುರಂತ ತಂದದ್ದು ಮರೆಯುವಂತಿಲ್ಲ.)

ಕನ್ನಡಿಕಲ್ಲಿನಲ್ಲಿ ನೇರ ಸೀಳೊಂದು ಸುಲಭ ಸಾಧ್ಯತೆಯನ್ನು ತೋರಿಸುತ್ತಿತ್ತು. ಅದರುದ್ದಕ್ಕೆ ಹುಲ್ಲು, ಒಂದೆರಡು ಕಡೆ ಪುಟ್ಟ ಹಸಿರು ಗಿಡಗಳೂ ಇದ್ದವು. ಆದರೆ ಶುದ್ಧ ಶಿಲಾರೋಹಣ ನಮ್ಮ ಅಂದಿನ ಗುರಿಯೂ ಆಗಿರಲಿಲ್ಲ, ತಂಡ ಮತ್ತು ಸಲಕರಣೆಗಳು ಅದಕ್ಕೆ ಹೇಳಿದವೂ ಇರಲಿಲ್ಲ. ಕನ್ನಡಿಕಲ್ಲಿನ ಶಿಖರಕ್ಕೆ ದಾರಿಗೆ ಸ್ಪಷ್ಟ ಎದುರಾಗುವ ದಕ್ಷಿಣ ಮುಖ ತೀರಾ ಕಡಿದಾಗಿಯೇ ಇದ್ದರೂ ಮಣ್ಣು, ಹುಲ್ಲು, ಪೊದರು ಯಥಾಸಾಧ್ಯ ಮುಚ್ಚಿವೆ. ಬಂಡೆಮುಖ ನಿವಾರಿಸಿ, ಈ ದಕ್ಷಿಣ ಮೈ ಹಿಡಿದು, ಹೆಕ್ಕತ್ತಿನ ಮೂಲಕ ಕೊಡಿ ತಲಪುವ ಲಕ್ಷ್ಯ ನಮ್ಮದು. ದಾರಿ ಬದಿಯ ಪೊದರ ಸಂದಿನ ಪ್ರಾಣಿಜಾಡು ಅನುಸರಿಸಿದೆವು. ಪುಡಿ ಕಲ್ಲು, ಸಡಿಲ ಮಣ್ಣು, ಹೆಜ್ಜೆ ಮರೆಸುವ ಹುಲ್ಲು, ಅಡ್ಡಗಟ್ಟುವ ಮುಳ್ಳಪೊದರುಗಳನ್ನು ನಿಧಾನವಾಗಿ ನಿಭಾಯಿಸುತ್ತಾ ಏರಿದೆವು. ಏರಿಕೆ ಓರೆಯಲ್ಲೇ ಇದ್ದುದರಿಂದ ಮುಂದಿನವರು ನೆಲೆ ತಪ್ಪಿಸಿ, ಆಕಸ್ಮಿಕವಾಗಿ ಉರುಳಿಸುತ್ತಿದ್ದ ಕಲ್ಲುಗಳಿಂದ ಹಿಂಬಾಲಕರು ನಿರಪಾಯರಾಗುಳಿದರು. ಶಿಖರ ಪ್ರದೇಶದಲ್ಲಿ ದಟ್ಟವಾಗಿದ್ದ ಮರ, ಬೀಳಲುಗಳ ನಡುವೆ ಸಣ್ಣದಾಗಿ ಹುಡುಕಿ ಜಾಡು ಕಂಡುಕೊಂಡೆವು. ಯಾವುದೇ ಪರ್ವತಾಗ್ರದಂತೆ ಕನ್ನಡಿಕಲ್ಲಿನ ಕೊಡಿಯ ಆನಂದವೂ ಅನನ್ಯ. ಅಂದು ಲೇಖನ, ಟಿಪ್ಪಣಿಗಳನ್ನೇನೂ ಬರೆಯದ ಕಾರಣ ಪೂರಕ ವಿವರಗಳನ್ನು ಕೊಡಲಾರೆ. ಆದರೆ, ಭಾಗಿಗಳಲ್ಲಿ ಒಬ್ಬರಾದ ಗೆಳೆಯ ಅರವಿಂದ ರಾವ್, ಹಳೆಯ ಜಾವಾ ಸವಾರಿಯಲ್ಲಿ ಸ್ಟೈಲಾಗಿ ಹೊಸಾ (ರೇಬಾನ್?) ಕೂಲಿಂಗ್ ಗ್ಲಾಸ್ ಏರಿಸಿ ಬಂದಿದ್ದರು. ಶಿಖರವಿಳಿದು ಮತ್ತೆ ಬೈಕೇರುವಾಗ ತಿಳಿಯಿತು, ಇವರು ಅಂಗಿಗೆ ಸಿಕ್ಕಿಸಿಕೊಂಡಿದ್ದ ಕೂಲಿಂಗ್ ಗ್ಲಾಸ್ ಗುರುತು ಸಿಗದಂತೆ ಉದುರಿಹೋಗಿತ್ತು. ಕನ್ನಡಿ ಕಲ್ಲಿಗೆ ಕನ್ನಡಿ ಮುಡಿಪಾಗಿತ್ತು!

ಕರಿಯಣ್ಣ

ಬಿಸಿಲೆಗೇಟಿನ ಹೋಟೆಲ್ ತುಳಸಿಯ ಮಾಲಿಕನ ನಿಜ ನಾಮಧೇಯ ದೇವೇಗೌಡ. ಆದರೆ ಹೆಸರಿನ ಮರೆಯಲ್ಲಿ ಅಲ್ಲೇ ಸಮೀಪದ ಹೊಳೇನರಸಿಪುರದವರ ರಾಜಕೀಯ ವಾಸನೆ ‘ಹೆಚ್ಚ್ ಹೊಡ್ದ್ಬಿಟ್ಟಾತೂಂತ’ ಈತ ಕರಿಯಣ್ಣನಾಗಿಯೇ ಹೆಚ್ಚು ಜನಪ್ರಿಯ. ಬಿಸಿಲೆ ಗೇಟಿನ ಒತ್ತಿನ ಏರುದಂಡೆಯ ಮನೆ-ಹೋಟ್ಲು ತುಳಸಿ. ಅದರಲ್ಲಿ ಎಡಪಕ್ಕದಲ್ಲಿ ಎದುರು ಕಾಣಿಸುವ ಎಂಟು ಗುಣಿಸು ಎಂಟು ಅಡಿಯದ್ದೊಂದು (ಆ ವಲಯದ ಅಗತ್ಯಗಳಿಗನುಗುಣವಾಗಿ ಎಂದು ಬೇಕಾದರೆ ಸೇರಿಸಿಕೊಳ್ಳೀ) ಸರ್ವಸರಕಿನ ಮಳಿಗೆ. ಅದರ ಒತ್ತಿನ ಕೋಣೆಯ ಒಂದು ಮೇಜೇ ಹೋಟೆಲ್. ಅಗತ್ಯ, ಜನ ನೋಡಿಕೊಂಡು ಎದುರು ಕಟ್ಟಿದ ಪ್ಲ್ಯಾಸ್ಟಿಕ್ ಹಾಳೆಯ ಮಾಡಿನಿಂದ ಒಳಗೆ ಅಡಿಗೆಯ ಮನೆಯವರೆಗೂ ಹೋಟೆಲ್-ಮನೆ ಅದಲು ಬದಲಾಗುವುದಿದೆ. ಅಂಗಡಿಯ ನಿರ್ವಹಣೆ, ಹೋಟೆಲಿನ ರುಚಿ, ಶುಚಿಗಳ ನೌಕರಾನಿಯೂ ಮಾಲೀಕಳೂ ಶ್ರೀಮತಿ ಕರಿಯಣ್ಣನವರದು. ಆದರೆ ಹೊರಗಿಂದ ಹೊರಗೆ ಬಿಸಿಲೆಯ ಸಕಲ ಸವಲತ್ತು-ಒದಗಣೆದಾರ ಕರಿಯಣ್ಣ. ಕಾಳಿಂಗನ ನೆಪ ಹಿಡಿದು, ಕೇರೇ ಬಾಲಕ್ಕೆ ರೇಡಿಯೋ ಕಟ್ಟಿ ಇಲ್ಲೇ ಠಿಕಾಣಿ ಹೊಡೆದಿದ್ದ ಶರತ್‌ನ ಕಾಲದ ಪರಿಚಿತನೇ ಈತ. ‘ಅಶೋಕವನ’ ಪಕ್ಕಾ ಆದಮೇಲೆ ನಮಗೂ ಸಮೀಪದವನಾಗಿದ್ದ. ಆಗೊಮ್ಮೆ, ನಮ್ಮ ಕೆಲಸಗಳೆಲ್ಲಾ ಸಾಂಗವಾಗಿ ಮುಗಿಯುವ ಹಂತಕ್ಕೆ ಬಂದರೂ ಊಟಕ್ಕೆ ‘ಟೇಮಾಗಿರಲಿಲ್ಲ’. ಅಲ್ಲೇ ಅಂಗಳದಲ್ಲಿ ನಿಂತು ದಿಟ್ಟಿಯಟ್ಟಿದವರಿಗೆ ಅನತಿ ದೂರದಲ್ಲಿ ಮರಗಳ ಮರೆಯಲ್ಲೇನೋ ಮಹತ್ತು ಅಡಗಿದಂತೇ ಕಾಣಿಸಿತು. ಆಚೀಚೆ ನುಗ್ಗಿ, ದಾರಿಯಂಚಿನ ಪೊದರಾಚೆ ಇಣುಕಿ ನೇರ ಏರಿನ ಪುಟ್ಟ ಶಿಖರವೊಂದನ್ನು ಕಂಡೆವು. ವಿಚಾರಣೆ ಆಯ್ತು. ಕರಿಯಣ್ಣ “ಏ ಅದೇನಿಲ್ಲಾ, ಕಲ್ಲುಗುಡ್ಡೆ” ಅಂದ. ನೋಡಬೇಕಲ್ಲಾಂದ್ರೆ “ಬರೀ ಜಿಗ್ಗೂ” ಎಂದು ಮೊದಲು ನಮ್ಮನ್ನು ಒರೆಗೆ ಹಚ್ಚಿದ ಕರಿಯಣ್ಣ. ನಾವು ಯಾವುದಕ್ಕೂ ಸೈ ಎಂದಮೇಲೆ, ಕತ್ತಿ ಹಿಡಿದು ಹತ್ತೇ ಮಿನಿಟಿನ ನಡಿಗೆಯಲ್ಲಿ ತೋರಿಸಿದ್ದ, ಸುಂದರ ಪ್ರಾಕೃತಿಕ ವೀಕ್ಷಣಾ ತಾಣ – ಕಲ್ಲುಗುಡ್ಡೆ.

ಕಲ್ಲುಗುಡ್ಡೆ

ಅಶೋಕವನಕ್ಕೆ ಜಾಗಕೊಟ್ಟ ಸಣ್ಣೇಗೌಡರ ಕುಟುಂಬದ್ದೇ ಒಂದು ಪಾಲು ಬಿಸಿಲೆ ಗೇಟಿನ ಒತ್ತಿಗೇ ಇದೆ. ಅಲ್ಲೊಂದು ಸಣ್ಣ ಬಿಡಾರ. ಅಪರೂಪಕ್ಕೆ ಜನವಾಸ, ಕೆಲವೊಮ್ಮೆ ನಾಲ್ಕು ಸಸಿಮಡಿಯ ಕೆಲಸ ನಡೆಯುವುದೂ ಉಂಟು. ಆ ವಠಾರದ ಹಿತ್ತಲಿಗೆ ಭಾರೀ ಮರಗಳು, ಬುಡಮುಚ್ಚಿದ ದಟ್ಟ ಪೊದರಿನ ಕಾಡು. ಅದನ್ನುತ್ತರಿಸಿ ಸಾಗುತ್ತಿತ್ತು ಕಲ್ಲುಗುಡ್ಡೆಗೆ ಸವಕಲು ಜಾಡು. ಮೊದಲ ಐವತ್ತು, ನೂರು ಹೆಜ್ಜೆಗೆ ಅಂಥಾ ಏನೂ ನೋಡಿಕೊಳ್ಳದ ಏಲಕ್ಕಿ ಬುಡಗಳು ಸ್ವಲ್ಪ ಇವೆ. ಮುಂದೆ ದಟ್ಟ ಹಸುರಿನ ಕಿರುಮರಗಳ ಕಾಡು. ಬೆತ್ತ ಬೀಳಲುಗಳು ಆವರಿಸಿಕೊಂಡು ಒಂದು ತರದ ಗುಹಾದಾರಿ. ಉಸಿರು ಕಟ್ಟಿದ ನಡಿಗೆಯಲ್ಲಿ ಎಲ್ಲ ಹತ್ತೇ ಮಿನಿಟಿಗೆ ಬಯಲು, ಕಲ್ಲುಗುಡ್ಡೆಯ ಶಿಖರ. ಪಶ್ಚಿಮಕ್ಕೆ ಇಳಿಜಾರಿನ ಬಂಡೆಮೈ. ಹಾಗೇ ಇಳಿದು ಸಾಗಿದರೆ ಮತ್ತೆ ಹತ್ತೇ ಮಿನಿಟಿಗೆ ನಮ್ಮ ‘ಅಶೋಕವನ’. ಉತ್ತರದ ಮಕ್ಕಿಬೆಟ್ಟದಿಂದ ಹಿಡಿದು ಪಶ್ಚಿಮಕ್ಕಾಗಿ ದೃಷ್ಟಿ ಸುತ್ತಿದರೆ ಇತ್ತ ಏಣಿಕಾಲ್ ಬೆಟ್ಟದವರೆಗೆ, ಹೆಚ್ಚು ಕಡಿಮೆ ೨೬೦ ಡಿಗ್ರಿವರೆಗೂ ನಾವು ಬಲು ವಿಸ್ತಾರದ ದೃಶ್ಯ ಸಾಮ್ರಾಜ್ಯಾಧಿಪತಿಗಳು! (ವಿಡಿಯೋ ತುಣುಕು ನೋಡಿ) ಒಳಸುತ್ತಿನ ಲೆಕ್ಕ ತೆಗೆದರೆ ಮೊದಲು ಕಾಣುವುದೇ ನಮಗೆ ಗುರುತರಿಯದ ಕನ್ನಡಿಕಲ್ಲಿನ ಬೆನ್ನು (ಮೊದಲು ಕರಿಯಣ್ಣ ಹೇಳಿದ್ದು). ಮತ್ತೆ ಅಲ್ಲಲ್ಲಿ ಹಸಿರು ಹರಿದಲ್ಲಿ ಕಾಣುವ ಬಿಸಿಲೆ ದಾರಿಯ ತುಣುಕುಗಳು. ಹೀಗೆ ಹೆಕ್ಕುತ್ತಾ ಹರಿವ ದೃಷ್ಟಿ ಹೆಚ್ಚುಕಡಿಮೆ ಕರಿಯಣ್ಣನ ತುಳಸಿ ಹೋಟೆಲಿನವರೆಗೂ ಪರಿಚಯ ಹೇಳುತ್ತದೆ. ಹೊರಸುತ್ತಿಗಿಳಿದರೆ ಹವಾಮಾನ ಅನುಕೂಲವಿದ್ದಾಗ ಅರಬೀ ಸಮುದ್ರದಲ್ಲಿ ಕಣ್ಣುತೊಳೆಯಬಹುದು. ಸುಬ್ರಹ್ಮಣ್ಯ ಪೇಟೆ ಸುತ್ತಿ, ಕುಮಾರಪರ್ವತ ಶಿಖರಾಗ್ರಕ್ಕೊಂದು ನೋಟ ಕುತ್ತಿ, ಅನತಿ ದೂರದ ಪಾಟ್ಲಬೆಟ್ಟದಿಂದಲೂ ಕಪ್ಪ ಕೇಳಬಹುದು!

ಪ್ರಕೃತಿನಿಧಿ

ಉರಿಬಿಸಿಲಿರಲಿ, ಬಿರುಮಳೆಯೇ ಸುರಿಯಲಿ ನಾವು ಕಲ್ಲುಗುಡ್ಡೆಗೆ ಹೋದದ್ದಕ್ಕೆ ಲೆಕ್ಕವಿಲ್ಲ. ಮೊದಲ ಆ ಒಂದು ದಿನ ಕರಿಯಣ್ಣನ ಸವಾರಿಯನ್ನು ಕನ್ನಡಿಕಲ್ಲಿಗೆ ಹೊಡೆಸಿದೆವು. ವಾಸ್ತವದಲ್ಲಿ ಕನ್ನಡಿಕಲ್ಲಿನ ಬೆನ್ನು, ಅಂದರೆ ನೇರ ಪೂರ್ವ ಮೈ ಶ್ರೇಣಿಯ ಉತ್ತುಂಗಕ್ಕೆ ಸಹಜವಾದ ಸಣ್ಣ ಪುಟ್ಟ ಏರಿಳಿತಗಳೊಡನೆ ಬಿಸಿಲೆ ಹಳ್ಳಿಗೆ ಸಮಸ್ಕಂದಿ. (ಬಿಸಿಲೆ ಸಮುದ್ರ ಮಟ್ಟದಿಂದ ೮೩೦ ಮೀಟರ್) ಗುಡ್ಡೆಯ ಓರೆಯಲ್ಲಿ ಹೆಚ್ಚುಕಡಿಮೆ ಮಟ್ಟಸ ನಡಿಗೆಯಲ್ಲೇ ಸುಲಭ ಸಾಧ್ಯ. ಆದರೇನು, ಅಲ್ಲಿನ ಜನಪದ ನಂಬಿಕೆ ಅದನ್ನು ಹಳ್ಳಿಗರಿಗೆ ಮಾಮೂಲೀ ದಿನಗಳಲ್ಲಿ ನಿಷೇಧಿತ ಪ್ರದೇಶವಾಗಿಸಿದೆ! ಪುರಾಣಕಾಲದಲ್ಲಿ ಅದೇನೋ ತಾಮ್ರದ ಹಂಡೆಯಲ್ಲಿ ಬಡವರ ಆಪದ್ಧನವಾಗಿ ಅಲ್ಲಿ ನಿಧಿಯಿತ್ತಂತೆ. ಅದನ್ನು ಯಾರೋ ದುರ್ವ್ಯಯ ಮಾಡಿದ್ದಕ್ಕೆ ಈಗ ನಿಧಿ ಉಳಿದಿಲ್ಲ; ಪ್ರಾಯಶ್ಚಿತ ಮಾತ್ರ. ವಾರ್ಷಿಕ ಒಂದು ವಿಶೇಷ ದಿನದಲ್ಲಿ, ಅದೂ ರಾತ್ರಿ ಕಾಲದಲ್ಲಿ ಆಯ್ದ ‘ಮಹಿಮಾನ್ವಿತ ಗಂಡಸರು’ ಮಾತ್ರ ಅಲ್ಲಿಗೆ ಹೋಗಿ ಏನೋ ಪೂಜೆ ಗೀಜೆ ಮಾಡುತ್ತಾರೆ. ಉಳಿದಂತೆ ಹೋದರೆ ಭಾರೀ ಜೇನ್ನೊಣಗಳು ಮರಣಾಂತಿಕ ಮುತ್ತಿಗೆ ಹಾಕುತ್ತವಂತೆ. ಕರಿಯಣ್ಣ ನಮ್ಮನ್ನು ಶಿಖರದ ಹೆಕ್ಕತ್ತಿನವರೆಗೆ ಒಯ್ದು ಬಿಟ್ಟ. ಜವಾಬ್ದಾರಿ ನಮ್ಮದೇ ಎಂದರೂ ಕನಿಷ್ಠ ಪಾದರಕ್ಷೆಗಳನ್ನು ಕಳಚಬೇಕೆಂದು ಕೇಳಿಕೊಳ್ಳಲು ಮರೆಯಲಿಲ್ಲ. ಕೊಡಂಜೆ ಕಲ್ಲಿನ ಮಧುಚುಂಬನದ ಅನುಭವದನಂತರ ಶಾಪಾಶಾಪಗಳ ಲೆಕ್ಕಹಿಡಿಯದೆ ನಾವು ಎಲ್ಲಾ ಪ್ರಾಕೃತಿಕ ವೈಶಿಷ್ಟ್ಯಗಳನ್ನು ಶಿಸ್ತಿನಿಂದಲೇ ನೋಡುತ್ತೇವೆ. ಮತ್ತೆ ಶಿಲಾರೋಹಣದಲ್ಲಿ ಹಲವು ಆರಂಭಿಕರು ಬರಿಗಾಲನ್ನೇ ಹೆಚ್ಚುನೆಚ್ಚುವುದುಂಟು. ಹಾಗೂ ನಮ್ಮಲ್ಲಿ ದೈವೀಭಾವವಿರುವವರು ಅಂದೂ ಮುಂದೂ ಕನ್ನಡಿಕಲ್ಲನ್ನು ಬರಿಗಾಲಲ್ಲೇ ಮೆಟ್ಟಿದ್ದಾರೆ. ಪ್ರಾಕೃತಿಕ ನಿಧಿಯೆದುರು ನಾವು ಅನ್ಯ (ಧನಕನಕ) ಆಶಯಗಳಿಟ್ಟವರಲ್ಲವಾದ್ದರಿಂದ ಏನೂ ಅಪಾಯ ಬಂದದ್ದಿಲ್ಲ. ಅದರ ಪ್ರಪಾತದಂಚಿನಲ್ಲಿ ಉದ್ದಕ್ಕೆ ಮೈಚಾಚಿ ಇಣುಕುವುದು ನಿಜಕ್ಕೂ ರೋಮಾಂಚಕಾರಿ.

ಅದೊಂದು ಉರಿಬೇಸಗೆಯಲ್ಲಿ ಬುತ್ತಿ ಕಟ್ಟಿಕೊಂಡು ಹೊನ್ನಾಟ್ಲು (ಒಂದು ಮನೆಯ ಹಳ್ಳಿಮೂಲೆ) ಕಡೆಯಿಂದ ಸುತ್ತು ಹಾಕಿಕೊಂಡು ಕೊನೆಯಲ್ಲಿ ಕನ್ನಡಿಕಲ್ಲು ನೋಡಿದ್ದಾಗಿತ್ತು. ನಾವು ಒಯ್ದ ಕುಡಿನೀರ ಅಂಡೆಗಳು ತಳ ತಲಪಿದ್ದವು. “ಊಟಕ್ಕೊಂದು ಝರಿ ಕಾಣಿಸೋ ಕರಿಯಣ್ಣ” ಎಂದದ್ದೇ ತುಸು ದಕ್ಷಿಣಕ್ಕೆ ಜಾರಿದಂತಾ ಜಾಡು ಹಿಡಿಸಿದ. ಒಂದೇ ಏಣು ಹಾಯ್ದು, ನಾಲ್ಕೇ ಮರಸಾಲಿನ ಕಣಿವೆಗಿಳಿದಲ್ಲೇ ನಿರ್ಮಲ ಜಲ ಪ್ರತ್ಯಕ್ಷ. ಇಂಥಾ ತೊರೆಗಳ ಸಮಾಗಮವೇ ನದಿ. ಆದರೆ ಭಾವನಾತ್ಮಕವಾಗಿ ಯಾವುದೇ (ಹೆಚ್ಚಿನವುಗಳು, ‘ಪವಿತ್ರ’ ಎಂಬ ವಿಶೇಷಣದೊಡನೇ ಇರುತ್ತವೆ. ಹಾಗಾಗಿ) ನದಿಯ ಉಗಮವನ್ನು ಪ್ರಾಕೃತಿಕವಾಗಿಯೋ ಐತಿಹಾಸಿಕವಾಗಿಯೋ ಪ್ರಮುಖವಾದ ಒಂದು ಜಾಗಕ್ಕೇ ಲಗತ್ತಿಸಿ ಹೇಳುತ್ತಾರೆ (ತಪ್ಪಲ್ಲ). ವಿಚಾರವಂತರು ಮಾತ್ರ ಜಲಾನಯನ ಪ್ರದೇಶಕ್ಕೇ ಈ ಪಾವಿತ್ರ್ಯವನ್ನು ವಿಸ್ತರಿಸಿಕೊಳ್ಳುತ್ತಾರೆ. ದುರಂತವೆಂದರೆ ದಿನೇ ದಿನೇ ಆಡಳಿತ ವರ್ಗದಲ್ಲಿ ವಿಚಾರವಂತಿಕೆಗೆ ಎರವಾದವರೇ ಹೆಚ್ಚುತ್ತಿದ್ದಾರೆ. ಪ್ರಾಕೃತಿಕ ಅಥವಾ ಭೌಗೋಳಿಕ ತಜ್ಞರನ್ನು ಉಪೇಕ್ಷಿಸಿ, ಭಾವನೆಗಳನ್ನಷ್ಟೇ ಪುರಸ್ಕರಿಸುವ ಸರಕಾರಗಳು ಅದೆಷ್ಟು ಜನಾದೇಶವನ್ನು ‘ಗಳಿಸಿದ್ದರೂ’ ಅಯೋಗ್ಯರು, ಜನದ್ರೋಹಿಗಳು ಎಂದೇ ಹೇಳಬೇಕಾಗುತ್ತದೆ.

ಖ್ಯಾತ ತೀರ್ಥಗಳ (ಉದಾಹರಣೆಗೆ ಕಾವೇರಿ, ಗಂಗೆ) ‘ಉಗಮಸ್ಥಾನ’ದ ‘ಅಭಿವೃದ್ಧಿ ಕಾರ್ಯಗಳಿಗೆ’ ಬಹು ಸಹಕಾರವನ್ನು ಕೊಟ್ಟು, ಅವುಗಳದೇ ಜಲಾನಯನ ಪ್ರದೇಶ ಮತ್ತು ಹರಿವಿನುದ್ದಕ್ಕೂ ಪ್ರಕೃತಿವಿರೋಧೀ ಕೆಲಸವನ್ನು ಮಾಡುತ್ತಿರುವುದನ್ನು ನಾವು ಇನ್ನಿಲ್ಲದ ವಿಷಾದದಲ್ಲಿ ಅನುಭವಿಸುತ್ತಿದ್ದೇವೆ. ಹೊಸಪೇಟೆಯಲ್ಲೋ (ತುಂಗಭದ್ರಾ) ಕೃಷ್ಣಾರಾಜಸಾಗದಲ್ಲೋ (ಕಾವೇರಿ) ತುಂಬೆಯಲ್ಲೋ (ನೇತ್ರಾವತಿ) ಅಣೆಕಟ್ಟುಗಳು ಯಾವ ಮನುಷ್ಯ ಪ್ರಯತ್ನವೂ ಇಲ್ಲದೇ ಭರ್ತಿಯಾದಾಗ ಬಾಗಿನ ಅರ್ಪಿಸಲು ಧಾವಿಸುವ ಪುಡಾರಿಗಳು ಧಾರ್ಮಿಕ ಶೋಷಕರು. ಭದ್ರಾ ನದಿಗೆ ಅಸಾಧ್ಯ ಹೂಳು ತುಂಬುವ ಕುದುರೆಮುಖ ಗಣಿಗಾರಿಕೆಯನ್ನು ಅತ್ಯುಚ್ಛ ನ್ಯಾಯಾಲಯ ಸ್ಪಷ್ಟ ತೀರ್ಪಿನಿಂದ “ಕಿತ್ತಾಕಿ” ಎಂದ ಮೇಲೂ ‘ಪರಿಸರ ಸ್ನೇಹಿ’ ಎಂದು ‘ಅನುಕೂಲದ ವರದಿ’ ಹುಡುಕಿ, ಮರಳಿ ತರಲು ಒಳದಾರಿ ಹುಡುಕುತ್ತಿರುವ ಗೂಟದ ಕಾರಿನವರು ನಿಜ ಸಮಾಜದ್ರೋಹಿಗಳು. ತಲಕಾವೇರಿಯ ಕುಂಡಿಗೆಗೆ ಇನ್ನಿಲ್ಲದ ವೈಭವ ಹೇರುತ್ತಾ ಕಾವೇರಿ ಜಲಾನಯನ ಪ್ರದೇಶವನ್ನು ವಿಷಕಾರೀ ಕೃಷಿಭೂಮಿಯಾಗಿ ಉಳಿಸಿ, ಬೆಳೆಸಲು ಎರಡೆಳೆ ನಾಲಗೆಯವರು ಪರಿವರ್ತಿಸಲು ಇನ್ನಿಲ್ಲದ ಸಾಹಸ ನಡೆಸುತ್ತಿದ್ದಾರೆ. ನೇತ್ರಾವತಿಯನ್ನಂತೂ ಬರಪೀಡಿತ ಪ್ರದೇಶಗಳಿಗೆ ತಿರುಗಿಸುವ, ಕಣಿವೆಕಣಿವೆಯಲ್ಲಿ ವಿದ್ಯುಚ್ಚಕ್ತಿಯಾಗಿ ಹಿಂಡುವ, ಭಾರೀ ಉದ್ದಿಮೆಗಳ ಒಡಲಿಗೆ ಉದಾರವಾಗಿ ಹರಿಸುವ ಯೋಜನೆಗಳನ್ನೂ ಎಷ್ಟೋ ಕಡೆ ಆರಂಭಿಕ ಕೆಲಸಗಳನ್ನೂ ಮಾಡಿರುವುದು ಕಾಣುತ್ತೇವೆ. ಕುಮಾರಧಾರೆ ಇದಕ್ಕೆ ಹೊರತಾಗಿಲ್ಲ. ಕುಮಾರಧಾರೆಯ ಉತ್ತರ ಮೈಯ ಹೆಚ್ಚುಕಡಿಮೆ ಪೂರ್ಣ ನಿರ್ಜನ ಪ್ರದೇಶವನ್ನು, ಅಂದರೆ ಈ ಲೇಖನಮಾಲೆ ಹೇಳುವ ಬಿಸಿಲೆ ವಲಯದ ಶುದ್ಧ ವನ್ಯಪ್ರದೇಶವನ್ನು ಪುಷ್ಪಗಿರಿ ವನಧಾಮದಿಂದ ಹೊರಗಿಟ್ಟಿದ್ದಾರೆ. ಕೇವಲ ಕಾಯ್ದಿರಿಸಿದ ಅರಣ್ಯವೆಂದೇ ಮುಂದುವರಿಸಿಕೊಂಡು ಕಳ್ಳ ಮೋಪಿಗೆ, ಕಳ್ಳ ಬೇಟೆಗೆ, ಅಕ್ರಮ ಸಕ್ರಮದ ದುಷ್ಟಯೋಚನೆಯಲ್ಲಿ ಕೃಷಿಗೆ, ಪ್ರವಾಸೋದ್ಯಮಕ್ಕೆ ತೆರೆಯುತ್ತಲೇ ಇದ್ದಾರೆ. ಪ್ರಾಕೃತಿಕ ಸಂಪನ್ಮೂಲವನ್ನು ತಿಳಿದುಕೊಳ್ಳುವ, ಉಳಿಸಿ ಬೆಳೆಸುವ ಬದಲು ಹೊಸಹೊಸ ಶೋಷಣಾ ಮಾರ್ಗಗಳನ್ನೇ ಹುಡುಕುತ್ತಿದೆ. ಈ ಯೋಜನೆಗಳೂ ಘೋಷಿತ ಆಶಯಗಳಿಗೆ ವ್ಯತಿರಿಕ್ತವಾಗಿ ಸಾರ್ವಜನಿಕ ಹಣದ ಅಪಾರ ದುರ್ವಿನಿಯೋಗಕ್ಕೆ, ಪ್ರಾಕೃತಿಕ ಅವಹೇಳನಕ್ಕೆ ಸಲಕರಣೆಯಾಗುತ್ತಿರುವುದು ಇನ್ನೂ ದೊಡ್ಡ ದುರಂತ!

ಕಡೆಯ ಮರ ಬೀಳಿಸಿದ ಮೇಲೆ
ಕೊನೆಯ ನದಿ ವಿಷಮಾಡಿದ ಮೇಲೆ
ಉಳಿದೊಂದೇ ಮೀನು ಹಿಡಿದ ಮೇಲೆ
ಉದಿಸೀತು ಜ್ಞಾನ, ತಿನ್ನಲುಳಿದಿಲ್ಲ ಏನೂ ಹಣದಿಂದ ಮೇಲೆ

ಕೆನಡಾದ ಕ್ರೀ ಭವಿಷ್ಯವಾಣಿ (ಕೃಪೆ: ವಿಶ್ವಯಾನಿ ಗೋವಿಂದ ಭಟ್)