ಚಿತ್ರ, ಲೇಖನ ಡಾ|| ರತ್ನಾಕರ್, ಮಂಟಪ ಕ್ಲಿನಿಕ್, ಶಿವಮೊಗ್ಗ.

ಪ್ರಿಯರೇ,

ನಮ್ಮ ಕಮ್ಮಟ, ಕೆವಿಜಿ ಒಡನಾಟದ ಕತೆ ಕೇಳಿಯೇ ಸಂತೋಷ ತಡೆಯಲಾಗದೆ ಗೆಳೆಯ, ರತ್ನಾಕರ ಉಪಾಧ್ಯರು ಪ್ರತಿಕ್ರಿಯೆಯಾಗಿ ಅವರದೊಂದು ೨೦೧೦ರ ಅನುಭವ ಕಥನವನ್ನು ಕಳಿಸಿದ್ದಾರೆ. ಅದಕ್ಕೆ ಸ್ವತಂತ್ರ ಲೇಖನದ ಯೋಗವೇ ಇರುವುದರಿಂದ ಇಲ್ಲಿ ಯಥಾವತ್ತು ನಿಮ್ಮೆದುರು ಪ್ರಸ್ತುತಪಡಿಸುತ್ತಿದ್ದೇನೆ. “ಮುಂದೆ ಮಂಟಪ ಇಲ್ಲ, ಹಿಂದೆ ಉಪಾಧ್ಯ” ಇಲ್ಲದ, ಆದರೆ ಪೂರ್ಣ ಸ್ವಯಾರ್ಜಿತದ ‘ಡಾಕ್ಟರ್’ ರತ್ನಾಕರ್ ಬಗ್ಗೆ ಇಲ್ಲೇ ಹಿಂದೆ ನನ್ನ ತೀರ್ಥಯಾತ್ರೆ ಹಾಗೂ ದಾಂಡೇಲಿಯ ದಂಡಯಾತ್ರೆಗಳಲ್ಲಿ ಸಾಕಷ್ಟು ಹೇಳಿರುವುದರಿಂದ ಇನ್ನು ಪೀಠಿಕೆ ಹೊಡೆಯದೆ ಅವರ ಲೇಖನಕ್ಕೆ. -ಅಶೋಕವರ್ಧನ

ಭಾಗ-೧

ಡಿಸ್ಕವರಿ ಚಾನಲ್‌ನ ‘ಲೈಫ್’ ಕಾರ್ಯಕ್ರಮದ ಬಗ್ಗೆ ಮಾಹಿತಿಯ ಲೇಖನ ಬರೆದು ಮರೆತಿದ್ದ ನನಗೆ ಕೆಲವು ಕಿರು ಸಂದೇಶಗಳು, ನೋಡುವಂತೆ ಪ್ರೇರೇಪಿಸಿದ್ದಕ್ಕೆ, ಭೇಟಿ ಆದಾಗ ಕೃತಜ್ಞತೆಗಳೂ ಬಂದವು. ಏನ್ರೀ ದೊಡ್ಡ ಬರವಣಿಗೆಗಾರರಾಗಿದ್ದೀರಿ ಎಂಬ ಪ್ರಶ್ನಾರ್ಥಕವೋ, ಕುಹಕವೋ ಕೇಳಲು ಸಿಕ್ಕಿತು. ಬರವಣಿಗೆ ಪ್ರಾರಂಭಿಸಿದ್ದರಿಂದ ಒಂದು ಲಾಭವಂತೂ ಹೌದು. ನನ್ನ ಕನ್ನಡ ವ್ಯಾಕರಣ, ಶಬ್ಧಗಳ ಬಳಕೆಯಲ್ಲಿ, ಆಯ್ಕೆಯ ಅನಿವಾರ್ಯತೆ ಆಗಿದೆ. ಆದರೂ ಶುದ್ಧ ಮಡಿವಂತಿಕೆಯ ಕನ್ನಡ ನನ್ನಿಂದ ಸಾಧ್ಯವಿಲ್ಲ ಎಂದು ತೀರ್ಮಾನಿಸಿದ ಮೇಲೆ ಮನಸ್ಸಿಗೆ ಬಂದ ಶಬ್ಧಗಳನ್ನು ಆಡುಭಾಷೆಯಲ್ಲೇ ಉಪಯೋಗಿಸಲು ಪ್ರಾರಂಭಿಸಿದಾಗ ಅದೊಂದು ನನ್ನದೇ ಶೈಲಿ ಎಂದ ಸ್ನೇಹಿತರೂ ಇದ್ದಾರೆ. ಇರಲಿ, ನನಗಂತೂ ‘ಲೇಖಕ’ ಎನ್ನುವ ಹಣೆಪಟ್ಟಿಯನ್ನು ಮೆಟ್ಟಿ ನಿಲ್ಲುವ ಇರಾದೆ. ಗುಂಪುಗಾರಿಕೆ, ಪ್ರತ್ಯೇಕತೆ ಎರಡರಲ್ಲೂ ಉದಾಸೀನವೇ. ಹಾಗಾಗಿಯೇ ವೃತ್ತಿಬಾಂಧವರೊಡನೆ ಎಷ್ಟು ಸಂಪರ್ಕ, ಸಂಸರ್ಗ ಮಾಡುತ್ತೇವೋ, ಅಷ್ಟೇ ಬೇರೆ ಉದ್ಯೋಗದಲ್ಲಿರುವವರೊಡನೆಯೂ ಬೆರೆಯ ಬೇಕೆನ್ನುವ ವಾದ ನನ್ನದು. ನಮ್ಮ ವೃತ್ತಿಕ್ಷೇತ್ರದ ಅನುಭವಗಳಲ್ಲಿ, ನಮ್ಮ ನಮ್ಮ ಅನುಭವಗಳ ವಿಸ್ತಾರದಲ್ಲಿ ಬಹಳ ಸಾಮಾನ್ಯ ಜನರಿಂದ ಹಿಡಿದು ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿಗಳ ಪ್ರಭಾವವಿರುತ್ತದೆ. ವ್ಯಕ್ತಿ ವಿಕಸನ ಗುರುಗಳು ಹೇಳುವಂತೆ ‘ನಮ್ಮ ಆಲೋಚನೆ, ಕ್ರಿಯೆಗಳ ಗುಣಮಟ್ಟ ನಮ್ಮ ಸಂಪರ್ಕವಿರಿಸಿಕೊಂಡ ವ್ಯಕ್ತಿತ್ವಗಳಿಂದ ಪ್ರಭಾವಿತವಾಗಿರುತ್ತದೆ’.

ಉದ್ಯೋಗಕ್ಷೇತ್ರದ ಆಚೆಯ ಅನುಭವಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ತುಂಬಾ ಅವಶ್ಯಕ ಎಂದು ಮನವರಿಕೆಯಾದವರು ಬೇರೆ ಬೇರೆ ಔದ್ಯೋಗಿಕ, ಸಾಮಾಜಿಕ ಕ್ಷೇತ್ರಗಳ ಸ್ನೇಹಿತರ ಗುಂಪನ್ನು ಬಳಸಿ ಉಳಿಸಿಕೊಳ್ಳುತ್ತಾರೆ. ಹಣ್ಣು ಹಾಲು ತರಕಾರಿ ಮಾರುವವರಿಂದ ಹಿಡಿದು ಶಿಕ್ಷಕ, ಇಂಜಿನಿಯರ್, ವ್ಯಾಪಾರಸ್ಥ, ರೈತ, ವಿಜ್ಞಾನಿ, ಕಲಾವಿದ ಹೀಗೆ ಉದ್ದ ಪಟ್ಟಿಯೇ ಬೆಳೆಯಬಹುದು. ನಮ್ಮ ಜೀವನಾನುಭವದ ಪಾಠಗಳಲ್ಲಿ ಇವರೆಲ್ಲರ ಪಾಲೂ ಇದೆ, ಇರಬೇಕು. ಇಲ್ಲದಿದ್ದರೆ ನಾವು ‘ಸೋಶಿಯಲ್ ಎನಿಮಲ್’ ಎಂದು ಕರೆಯಿಸಿಕೊಳ್ಳಲು ಅನರ್ಹರು. ಅವೆಲ್ಲಾ ನಮಗ್ಯಾಕೆ ನಾವಾಯ್ತು, ನಮ್ಮ ಕೆಲಸವಾಯ್ತು ಎನ್ನುವವರು ನಮ್ಮ ಗುಂಪಿನಲ್ಲಿದ್ದಾರೆ. ಅವರನ್ನೂ ಸಹ ಏನನ್ನೂ ಉಪದೇಶ ಮಾಡದೇ ನಮ್ಮ ವ್ಯವಹಾರ, ಚಟುವಟಿಕೆಗಳ ಮೂಲಕ ನಮ್ಮ ಗುಂಪಿಗೆ ಸೇರುವಂತೆ ಮಾಡುವುದು ನಮ್ಮ ಕರ್ತವ್ಯ. ಇದೂ ಸಹಾ ಸಾಮಾಜಿಕ ಆರೋಗ್ಯದ ಒಂದು ಕುರುಹೂ ಹೌದು. ಎಲ್ಲಿಯೂ ಸಲ್ಲದವರ ಕಿರಿಕಿರಿಯೇ ಅವರ ಸಾಮಾಜಿಕ ಅನಾರೋಗ್ಯದ ಸೂಚನೆ!

ಇದೆಲ್ಲಾ ಕಳೆದ ಶನಿವಾರ ನಾಡು ಬಿಟ್ಟು ಕಾಡಿಗೆ ಹೋದ ಪ್ರಕರಣಕ್ಕೆ ಪೀಠಿಕೆ. ಮನುಷ್ಯರ ವೈದ್ಯ ಕಪ್ಪೆಯ ವೈದ್ಯರೊಡನೆ ಏನು ಮಾಡಿದ ಎಂಬ ಕುತೂಹಲವೇ? ಪ್ರಪಂಚದ ಅತ್ಯಂತ ಬೆಲೆಬಾಳುವ ಅತೀ ಅವಶ್ಯಕ ಸಂಪತ್ತುಗಳಲ್ಲಿ ಪಶ್ಚಿಮಘಟ್ಟ ಪ್ರದೇಶ ಮೊದಲ ಇಪ್ಪತ್ತೈದು ಸ್ಥಾನಗಳಲ್ಲಿ ಸೇರ್ಪಡೆಯಾಗಿದ್ದು ಯಾವ ಶಿಫಾರಸ್ಸು, ವಸೂಲಿಬಾಜಿಯಿಂದಲ್ಲ ಎಂದು ನಮಗೆ ಹೆಮ್ಮೆಯೇನೋ ಇದೆ. ಆದರೆ ಅದನ್ನು ಉಳಿಸಲು ಎಷ್ಟೆಲ್ಲಾ ರೀತಿಯ ಆಂದೋಲನಗಳು ತೊಡಗಿದರೂ ಇಂದು ಅವೆಲ್ಲಾ ನಿಧಾನವಾಗಿ ದಾರಿ ತಪ್ಪಿವೆ ಅಥವಾ ಬಲಹೀನವಾಗಿವೆ ಎಂದೆನಿಸಲು ಪ್ರಾರಂಭವಾಗಿದೆ. ಉಳಿಸಿರಿ ಅನ್ನುವವರಿಗಿಂತ ಅಳಿಸಿರಿ ಎನ್ನುವವರ ಶಕ್ತಿ ಮೇಲಾದಾಗ ಇನ್ನೇನು ಆಗಲು ಸಾಧ್ಯ? ಇನ್ನು ಮುಂದಿನ ದಶಕದಲ್ಲಿ ಅಪರೂಪದ ಸಸ್ಯಭೇದಗಳನ್ನು, ಮೃಗಾಲಯದ ಪ್ರಾಣಿಗಳಂತೆ ಪಂಜರದ ರಕ್ಷಣೆಯಲ್ಲಿ ನೋಡಬೇಕಾದ ಪರಿಸ್ಥಿತಿ ಬರಬಹುದು. ನನ್ನ ಕಥಾನಾಯಕ ಶಿವಮೊಗ್ಗದವರೇ. ಕಳೆದ ಹತ್ತು ವರ್ಷಗಳಿಂದ ಪರಿಚಯ, ಅತ್ಮೀಯತೆ, ಸ್ನೇಹ. ಎಮ್.ಎಸ್‌ಸಿ. ಸ್ನಾತಕೋತ್ತರ ಪದವಿ ನಂತರ ಪಕ್ಷಿಗಳ ಕ್ಷೇತ್ರದಲ್ಲಿ ಸಂಶೋಧನೆಗೆ ಕರೆಬಂದಾಗ ತಿರಸ್ಕರಿಸಿ ಕಪ್ಪೆಗಳ ಬಗ್ಗೆ ಅತ್ಯಂತ ಆಸಕ್ತಿ ಹೊಂದಿದರು. ವಿದ್ಯಾರ್ಥಿ ಜೀವನದಲ್ಲಿ ಆರ್ಥಿಕ ಸಂಕಷ್ಟವನ್ನು ಅನುಭವಿಸಿದವರಿಗೆ ನಿರ್ಧಿಷ್ಟ ಹಂಬಲ, ಗುರಿ, ತಂದೆತಾಯಿಗಳ ಉತ್ಕೃಷ್ಟ ಸಂಸ್ಕೃತಿಯ ಆಶಿರ್ವಾದಗಳೇ ಗಟ್ಟಿ ಆಸ್ತಿ ಎನ್ನುವುದು ಇವರಿಗೂ ಅನ್ವಯ. ಈಗ ಸದ್ಯಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪರಿಸರ ವಿಜ್ಞಾನ ವಿಭಾಗದ ಉದ್ಯೋಗಿ ಮತ್ತು ಸಂಶೋಧಕ – ಡಾ| ಕೆ.ವಿ. ಗುರುರಾಜ.

ಎಷ್ಟೋ ಮಂದಿ ಪಿ.ಹೆಚ್‌ಡಿ. ಮುಗಿಸಿದ ನಂತರ ತಮ್ಮ ಪ್ರಬಂಧ, ಕ್ಷೇತ್ರವನ್ನೂ ಮರೆತು ಜೀವನ ಹೋರಾಟದ ಹಣದ ದಾರಿಯ ಕಡೆ ನಡೆದರೆ ಗುರುರಾಜ (ಕಪ್ಪೆ ಮೇಲೆ ಸಂಶೋಧನ ಪ್ರಬಂಧ ಬರೆದವರಾದ್ದರಿಂದ ಕಪ್ಪೆ ಡಾಕ್ಟರ್!) ಅದಕ್ಕೆ ಅಪವಾದ. ಉದ್ಯೋಗದಲ್ಲೂ ಅದೇ ಸಂಶೋಧನೆ ಮುಂದುವರೆಸಿ ಅದೆಷ್ಟು ಬಾರಿ ಕಪ್ಪೆಗಳ ಬೆನ್ನುಹತ್ತಿರಬಹುದೆಂದರೆ ಪಶ್ಚಿಮಘಟ್ಟ ಪ್ರದೇಶಕ್ಕೆ ನೂರಕ್ಕೂ ಹೆಚ್ಚು ಸಲ ಹೋಗಿದ್ದಾರೆ. ಇದೊಂದು ಅವರ ಮನಸ್ಸಿನಲ್ಲಿ ಮಾತ್ರ ಉಳಿದ ದಾಖಲೆ. ಕೆದಕಿ ಕೇಳಿದ್ದಕ್ಕೆ ನನಗೆ ಹೇಳಿದ್ದು! ಅದಲ್ಲದೇ ಒಮ್ಮೆಯೂ ನನ್ನಂತೆ ಶೋಕಿಗಾಗಿ ಕಾಡಿಗೆ ಹೋಗಿದ್ದಿಲ್ಲ. ನಾನು ಬಹಳ ವರ್ಷಗಳ ಹಿಂದೆ ಒಮ್ಮೆ ನನ್ನನ್ನೂ ಕರೆದುಕೊಂಡು ಹೋಗಿ ಎಂದು ಕೇಳಿದಾಗ ’ನೀವು ನಿಮ್ಮ ಮಂಟಪದಿಂದ ಮೊದಲು ಈಚೆ ಬರಲು ನಿರ್ಧರಿಸಿ, ಖಂಡಿತ ಕರೆದೊಯ್ಯುತ್ತೇನೆ’ ಎಂದಿದ್ದರು. ಇತ್ತೀಚೆಗೆ ಪರಿಚಯವಾದ ಶಿರಸಿ ಡಿ.ಎಫ್.ಒ. ಶ್ರೀ ಮನೋಜ್ ಕುಮಾರ್‌ರವರನ್ನು ಭೇಟಿಯಾದ ಸಂದರ್ಭದಲ್ಲಿ ಈ ವಿಷಯವನ್ನು ಅವರ ಬಳಿಯೂ ಪ್ರಸ್ತಾಪಿಸಿದಾಗ ಅವರು ಸೂಚಿಸಿದ್ದು ಕತ್ತಲೆ ಕಾನು. ಮಾತಿನ ಮಧ್ಯೆ ಈ ಕಪ್ಪೆ ಡಾಕ್ಟರ್ ವಿಷಯ ಹೇಳುತ್ತಿದ್ದಾಗ ಅವರೂ ಈ ವಿಜ್ಞಾನಿಯಿಂದ ಆಕರ್ಷಿತರಾಗಿದ್ದಾರೆಂದು ತಿಳಿಯಿತು. ಸರಿ ಕಿರುಸಂದೇಶಗಳ ಹರಿದಾಟದ ನಂತರ, ವಾರಾಂತ್ಯ ರಜೆಯಲ್ಲಿ ಹೋಗುವುದೆಂಬ ನಿರ್ಧಾರ ನಿಮಿಷಾರ್ಧದಲ್ಲಾಯ್ತು! ಕಾಡಿಗೆ ಹೋಗಲು ತಯಾರಿ ಬಹಳ ಬೇಕಿಲ್ಲದಿದ್ದರೂ, ಎಚ್ಚರಿಕೆ ಬಹಳ ಬೇಕು. ತಿಂದು, ಕುಡಿದು, ಕುಣಿದು, ಕುಪ್ಪಳಿಸಿ ಮಾಡುವ ಮೋಜಿನ ಉದ್ದೇಶವೇ ಇಲ್ಲದ ನಮಗೆ ಲಗೇಜ್ ಎಂದರೆ ಬ್ಯಾಗ್‌ನಲ್ಲಿ ತುಂಬಿಕೊಂಡ ನೀರಿನ ಬಾಟ್ಲಿ, ಕ್ಯಾಮೆರಾ, ಬ್ರೆಡ್, ಬಿಸ್ಕತ್ ಅಷ್ಟೇ. ಹೆಂಡತಿ ಮಕ್ಕಳಿಗೆ ನಾವೇನೂ ಸಾಹಸಕ್ಕೆ ಇಳಿಯಲ್ಲ ಎಂದು ಭಾಷೆಕೊಟ್ಟು ಬೆಳಿಗ್ಗೆ ಐದೂವರೆಗೇ ಶಿವಮೊಗ್ಗ ಬಿಟ್ಟು, ಸಾಗರದಲ್ಲಿ ತಿಂಡಿ ತಿಂದು, ಮಾವಿನಗುಂಡಿ ಅರಣ್ಯ ತನಿಖಾ ಗೇಟ್ ತಲುಪಿದಾಗ ಬೆಳಿಗ್ಗೆ ಎಂಟು ಗಂಟೆ. ಇದರಲ್ಲಾಗಲೇ ಒಂದು ಗಂಟೆ ದಾರಿ ಮಧ್ಯೆ ಯಾವುದೋ ಸುಂದರಕೀಟದ ಕ್ಲೋಸ್‌ಅಪ್ ಫೋಟೋಗಳಿಗೆ ಕಳೆದುಹೋಗಿತ್ತು. ಇಲಾಖೆಯ ಒಬ್ಬ ಅರಣ್ಯರಕ್ಷಕರನ್ನು ಜೊತೆಮಾಡಿಕೊಂಡು ಮಾವಿನಗುಂಡಿಯಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರುವ ಕತ್ತಲೆ ಕಾನಿನ ಪ್ರವೇಶಕ್ಕೆ ತಯಾರಾದೆವು.

ಈ ಕಪ್ಪೆ ವೈದ್ಯರಿಗೆ ಯಾವ ಮಾರ್ಗಸೂಚಿಯೂ ಬೇಕಿಲ್ಲ! ಅದೆಷ್ಟು ಸಲ ಈ ಪ್ರದೇಶಗಳನ್ನು ಜಾಲಾಡಿದ್ದಾರೋ!! ಚಾರಣದ ಸಮಯ ಉಪಯೋಗವಾಗಲು ಅವರ ಕಪ್ಪೆ ಸಂಶೋಧನೆಯ ವಿಚಾರಗಳನ್ನೆಲ್ಲಾ ಕೇಳಿಯೇ ಸುಸ್ತಾದೆ, ಚಾರಣದ ಸುಸ್ತು ಏನೂ ಇಲ್ಲ! ಇವರ ಕಾರ್ಯಚಟುವಟಿಕೆ ರಾತ್ರಿಯೇ ಆಗಬೇಕು. ಮುಂಗಾರು ಪ್ರಾರಂಭದ ನಂತರವೇ ಕಪ್ಪೆಗಳ ಕುಲಸಂತತಿಯ ಅಭಿವೃದ್ಧಿಯಾಗುವುದರಿಂದ ಜಡಿಮಳೆ, ಕುಟುಕುಟು ಚಳಿ, ರಕ್ತಹೀರುವ ಇಂಬಳಗಳ ದಾಳಿ, ದಿಢೀರ್ ನೀರಿನ ಮಟ್ಟ ಏರಿಕೆ, ಕಿವಿಕೆಪ್ಪಾಗುವಂತಹ ಕಪ್ಪೆಗಳ, ಕೀಟಗಳ ಕೂಗಾಟದ ಶಬ್ಧ ಇವೆಲ್ಲವನ್ನೂ ಸಹಿಸಿ, ಕಾರ್ಗತ್ತಲಿಗೆ ಟಾರ್ಚ್ ಲೈಟ್ ಒಂದನ್ನೇ ಆಸರೆಯಾಗಿಟ್ಟುಕೊಂಡು ಸೂರ್ಯಾಸ್ತಮಾನದಿಂದ ಬೆಳಗಿನ ಜಾವದವರೆಗೆ ಇವರ ಸಂಶೋಧನೆ ನಡೆಯಬೇಕು. ವೃತ್ತಿಪರತೆಗೆ ಇನ್ನೇನು ಪಾಠ ನನಗೆ ನಿಮಗೆ ಬೇಕು ಹೇಳಿ! ಈ ವ್ಯವಸ್ಥೆಯಲ್ಲೇ ಮಳೆ ಸುರಿಯುತ್ತಿದ್ದರೂ ಮೊಣಕಾಲು ಗಂಟಿನವರೆಗೆ ನೀರಿನಲ್ಲಿ ನಿಂತು ಕಪ್ಪೆಯ ಚಟುವಟಿಕೆಗಳು, ನಡವಳಿಕೆಗಳು, ಜಾತಿ-ವೈಶಿಷ್ಟ್ಯಗಳು, ಮಿಲನದ ವೈಖರಿ, ಮೊಟ್ಟೆ ಇಡುವುದು, ಅವುಗಳ ಬೆಳವಣಿಗೆ, ಗೊದಮೊಟ್ಟೆ ಹೊರಬರುವುದು ಇವುಗಳೆಲ್ಲದರ ಛಾಯಾಚಿತ್ರ, ವಿಡಿಯೋಗ್ರಹಣ, ಅಂಕಿಅಂಶಗಳ ಸಂಗ್ರಹಣೆ ಬರೀ ಕೊಡೆಯ ಅಡಿಯಲ್ಲಿದ್ದು ಮಾಡಬೇಕು! ಕಪ್ಪೆಗಳ ಜೀವನ ಚರಿತ್ರೆ ತಿಳಿದು ನಮಗೇನಾಗಬೇಕು ಎನ್ನುವವರಿಗೆ ಇದೊಂದು ಹುಚ್ಚು ಸಾಹಸ ಎನ್ನಿಸಿದರೆ ತಪ್ಪೇನಿಲ್ಲ. ಇವರು ಕಪ್ಪೆಗಳ ತರೇವಾರಿ ಕೂಗುಗಳನ್ನು ಅಣಕಿಸಬಲ್ಲರು. ಅವರು ಕೂಗಿದಾಗ ಕಪ್ಪೆ ಪ್ರತಿಕ್ರಿಯಿಸುವುದನ್ನು ನೋಡಿದೆ, ಕೇಳಿದೆ. ಇವರ ಸಂಶೋಧನಾ ಕ್ಷೇತ್ರದ ಹೆಗ್ಗಳಿಕೆ ಎಂದರೆ ಇಡೀ ಪ್ರಪಂಚದ ಕಪ್ಪೆಗಳ ಪ್ರಭೇದಗಳಲ್ಲಿ ಇವರಿಂದಲೇ ಗುರುತಿಸಲ್ಪಟ್ಟ ಕಪ್ಪೆಯ ಹೊಸ ಜಾತಿಯೊಂದು ಇವರಿಂದಲೇ ಹೆಸರಿಸಲ್ಪಟ್ಟಿದೆ. ಅದೆಷ್ಟೋ ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಬಂಧಗಳನ್ನು ಮಂಡಿಸಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ಕಪ್ಪೆಗಳ ಬಗ್ಗೆ ಅರಿವು, ಕುತೂಹಲ ಮೂಡಿಸುವ ಕಾರ್ಯಕ್ರಮಗಳಲ್ಲಿ ತುಂಬಾ ಆಸಕ್ತಿ. ಹೀಗೆ ಇವರ ವಿಷಯ ತಿಳಿದುಕೊಳ್ಳುತ್ತಾ ಚಾರಣ ಮುಂದುವರಿಯುವಾಗಲೇ ಅಪರೂಪದ ಸಸ್ಯರಾಶಿ, ವಿರಳವಾಗಿರುವ ಕತ್ತಲೆ ಕಾನಿನ ಹೆಸರನ್ನೇ ಹೊತ್ತ ಮರಗಳನ್ನೂ ತೋರಿಸಿದಾಗ ಈ ಮರ ಈಗ ಎಲ್ಲೂ ಇಲ್ಲ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಇದೆ ಎಂದು ತಿಳಿದು ಬಂತು. ಇದೊಂದು ನಮ್ಮ ಪಶ್ಚಿಮಘಟ್ಟದ ಅಪರೂಪದ ಸಂಪನ್ಮೂಲದ ಸ್ಯಾಂಪಲ್ ಅಷ್ಟೆ. ಮಾತಿನ ಮಧ್ಯೆ, ಕಾಡಿನಲ್ಲಿ ದಾರಿಯಿಲ್ಲದೆ ಸಂದಿಯಲ್ಲೇ ತೂರಿ ಮುಂದೆ ಹೋಗುವಾಗ ಅಪರೂಪದ ಚಿಟ್ಟೆ, ಕೀಟ, ಪತಂಗ, ಕಪ್ಪೆ, ಜೇಡಗಳನ್ನು ತೋರಿಸಿ ಅವುಗಳ ಕ್ಲೋಸ್‌ಅಪ್ ಛಾಯಾಚಿತ್ರದ ಕಲೆಯನ್ನೂ ಕಲಿಸಿದರು. ನನ್ನಲ್ಲಿದ್ದ ಡಬ್ಬಾ ಡಿಜಿಟಲ್ ಕ್ಯಾಮೆರಾದ ನಿಜವಾದ ತಾಕತ್ತು ನನಗೆ ಗೊತ್ತಾಗಿದ್ದು ಅರು ವರ್ಷಗಳ ನಂತರ ಆ ದಿನ ಆ ಜಾಗದಲ್ಲಿ!

ಭಾಗ-೨

‘ಜೀವ ಇದ್ದರೆ ಬೆಲ್ಲಬೇಡಿ ತಿಂದು ಬದುಕುವಾ’ ಎನ್ನುವ ಜಾತಿಯಲ್ಲಿ ನಾನೂ ಒಬ್ಬ. ಅನಾವಶ್ಯಕ ಸಾಹಸಗಳಿಗೆ ಮೈಮನಸ್ಸುಗಳನ್ನು ಒಡ್ಡಲು ಆಲೋಚಿಸದ ನಾನು, ಹೊರಟಾಗಲೇ ಕೇಳಿದ್ದೆ “ಹಾವು, ಕಾಳಿಂಗಸರ್ಪ ಇದೆಯಾ?” “ಡಾಕ್ಟ್ರೇ ಅವೆಲ್ಲಾ ಇದ್ದೇ ಇರುತ್ತವೆ, ನೀವು ಸುಮ್ಮನೆ ಬನ್ನಿ, ನಾನು ಮುಂದೆ ಹೋಗುವವನು, ನೀವ್ಯಾಕೆ ಹೆದರುತ್ತೀರಿ” ಎಂದಿದ್ದರು. ಕನ್ನಡಿ ಹಾವು, ಕೊಳಕುಮಂಡಲ, ನಾಗರಾಜ, ಕಾಳಿಂಗಗಳು, ಕಪ್ಪೆಗಳು ಇರುವ ಜಾಗದಲ್ಲಿ ಇದ್ದೇ ಇರುತ್ತವೆಂಬ ಸಾಮಾನ್ಯ ಜ್ಞಾನವೂ ನನಗೆ ಬರಲಿಲ್ಲ! ಡ್ರೆಸ್ ಕೋಡ್ ಕೇಳಿದಾಗ ಜೀನ್ಸ್ ಪ್ಯಾಂಟ್ ಒಳ್ಳೇದು, ಉದ್ದನೆಯ ಕಾಲುಚೀಲ, ಟ್ರಕ್ಕಿಂಗ್ ಶೂ ಹಾಕಿ ಎಂದಿದ್ದು ಈ ‘ಬುಸ್ಸಪ್ಪ’ಗಳಿಂದ ರಕ್ಷಣೆಗೆ ಎಂದು ಆಮೇಲೆ ಗೊತ್ತಾಯ್ತು.

ಇಂತಹ ಜಾಗದಲ್ಲಿ ರಾತ್ರಿ ಟಾರ್ಚ್‌ಲೈಟ್‌ನಲ್ಲಿ ಗಂಟೆಗಟ್ಟಲೆ, ದಿನಗಟ್ಟಲೆ ಬಹಳ ವರ್ಷ ಸುತ್ತಿದ ಇವರಿಗೆ ಪ್ರಾಣಾಂತಿಕ ಸಂದರ್ಭಗಳೂ ಬಂದಿದ್ದವು. ಒಮ್ಮೆ ದಾಂಡೇಲಿ ಅರಣ್ಯಪ್ರದೇಶದಲ್ಲಿ ಐದೇ ಮೀಟರ್ ದೂರದಲ್ಲಿ ಹುಲಿಯ ಭೇಟಿ. ಇನ್ನೊಮ್ಮೆ ಹೆಡೆ ಎತ್ತಿದ ಕಾಳಿಂಗ ದರ್ಶನ ಇವರ ನೆನಪಿನಲ್ಲಿದೆ. ಇವರು ಯಾವುದೇ ಉದ್ವೇಗವಿಲ್ಲದೇ ತಣ್ಣನೆ ಹೇಳಿದ್ದು ನಮ್ಮ ಮೈರೋಮ ನಿಲ್ಲಿಸಿತು. ನಾನು ಕೈ ಹಾಕುವುದು ಕಪ್ಪೆಗೆ, ಹಾವು ಬಾಯಿ ಹಾಕುವುದೂ ಕಪ್ಪೆಗೆ, ಯಾರು ಯಾರಿಗೆ ಕಚ್ಚಿದ್ದು ಎಂದು ಗೊತ್ತಾಗೋದೆ ಕಚ್ಚಿದ ಮೇಲೆ ಎಂದರು. ಇಷ್ಟೆಲ್ಲಾ ಆದ ಮೇಲೆ “ಇತ್ತೀಚೆಗಷ್ಟೇ ಮದುವೆ ಆಗಿರುವ ನಿಮಗೆ ಅರ್ಧಾಂಗಿ ಏನೂ ಹೇಳಲಿಲ್ಲವಾ” ಎಂದು ಕೇಳಿದ್ದೆ. ಬುದ್ಧಿವಂತರು, ಹೆಂಡತಿಗೂ ಕಾಡಿನ, ಕಪ್ಪೆಗಳ ಹುಚ್ಚು ಹತ್ತಿಸಿದ್ದಲ್ಲದೇ, ಸ್ಕೂಟರ್‌ನಲ್ಲಿ ದಾಂಡೇಲಿಗೆ ಮಧುಚಂದ್ರಕ್ಕೆ ಕರೆದೊಯ್ದು ಅವರನ್ನೂ ತನ್ನ ದಾರಿಗೆ ತಂದುಕೊಂಡಿದ್ದಾರೆ!

ಸುಮಾರು ಎರಡು ಗಂಟೆಗಳ ಚಾರಣದ ನಂತರ ನಾವು ಮುಟ್ಟಿದ್ದು ಕತ್ತಲೆ ಕಾನಿನ ಕೊನೆಯ ಭಾಗವಾದ ಶರಾವತಿ ಕಣಿವೆಯ ಅಂಚಿಗೆ. ಒಂದುಸಾವಿರ ಅಡಿ ಎತ್ತರದಲ್ಲಿದ್ದ ನಮ್ಮನ್ನು ಬಂಡೆಗಳ ಅಂಚು ಹೊತ್ತಿತ್ತು. ಕಣಿವೆಯ ಸೌಂದರ್ಯ ನೋಡಿದವರೆಲ್ಲರಿಗೂ ಇದರ ಅರಿವು ನೆನಪಾಗಬಹುದು. ಒಂದು ಗಂಟೆ ಕಾಲ ವಿರಮಿಸಿ ಅಲ್ಲಿಯೇ ಬಿಸ್ಕತ್ ತಿಂದು ಝರಿ ನೀರು ಕುಡಿದು ಮತ್ತೆ ಲ್ಯಾಂಡ್‌ಸ್ಕೇಪ್ ಛಾಯಾಚಿತ್ರಗಳನ್ನು ಸೆರೆಹಿಡಿದದ್ದಾಯ್ತು. ಮಧ್ಯೆ ಎರಡು ಸಲ ಪ್ಯಾಂಟ್ ಏರಿಸಿ ಶೂ, ಕಾಲು ಚೀಲ ಬಿಚ್ಚಿ ರಕ್ತಪಿಪಾಸು ಇಂಬಳಗಳನ್ನು ಕಿತ್ತೊಗೆಯಬೇಕಾಯ್ತು. ವಾಪಾಸು ಬರುವಾಗ ಬರೇ ಒಂದೂವರೆ ಗಂಟೆಗಳಲ್ಲಿ ರಸ್ತೆಗೆ ಬಂದು ಮಾವಿನಗುಂಡಿಯಲ್ಲಿ ಚಹಾ ವಿರಾಮಕ್ಕೆ ನಿಲ್ಲಿಸಿದ್ದಾಯ್ತು. ನಮ್ಮ ಬ್ಯಾಟರಿ ಡೌನ್ ಆಗದಿದ್ದರೂ ಕ್ಯಾಮೆರಾಗಳ ಬ್ಯಾಟರಿಗಳಂತೂ ಖಾಲಿ. ಸೂರ್ಯಾಸ್ತಮಾನದ ನಂತರ ಮತ್ತೆ ಕತ್ತಲೆ ಕಾನಿನ ಕಪ್ಪೆಗಳ ದರ್ಶನ ಮಾಡಿಸುವ ಆಸಕ್ತಿ ಅವರಿಗೆ. ನಾನು ಇನ್ನಷ್ಟು ವೈದ್ಯಮಿತ್ರರೊಡನೆ ಮರು ಭೇಟಿ ಮಾಡಲು ಆಗಲೇ ನಿರ್ಧರಿಸಿದ್ದರಿಂದ ಬೇಡ ಎಂದು ಒಪ್ಪಿಸಿ ಅಲ್ಲಿಂದ ‘ಮುಪ್ಪಾನೆ’ ಹಿನ್ನೀರ ಪ್ರದೇಶಕ್ಕೆ ಹೋದೆವು. ಲಿಂಗನಮಕ್ಕಿ, ಎ.ಬಿ.ಸೈಟ್ ಯೋಜನೆಗಳಿಂದ ಮುಳುಗಡೆಯಾದ ಸಸ್ಯ ಸಂಪತ್ತುಗಳ ಸತ್ತ ಕುರುಹುಗಳನ್ನು ನೋಡಿ ಬೇಸರವಾಯ್ತು ಎನ್ನುವುದು ಉತ್ಪ್ರೇಕ್ಷೆಯಲ್ಲ. ಕಳೆದ ಕೆಲವು ದಶಕಗಳಿಂದ ಮುಳುಗಿದ್ದ ಸತ್ತ ಮರಗಳ ಬುಡ ಬೇರು, ಕಾಂಡಗಳ ಭಾಗ ಈಗ ನೀರಿನ ಹಿನ್ನೆಡೆಯಾದಾಗ ಗೋಚರಿಸಿದ್ದು ಪಳೆಯುಳಿಕೆಗಳಂತೆ. ಅವು ನನ್ನ ಊಹೆಗಳಿಂದ ಯಾವ್ಯಾವುದೋ ಆಕಾರಕ್ಕೆ ಹೋಲುತ್ತಿದ್ದರಿಂದ ಛಾಯಾಚಿತ್ರಗಳನ್ನು ಹಿಡಿದರೆ ಅವರು ನಿರಾಕರಿಸಿದರು. ‘ಈಗಲೂ ನನ್ನನ್ನು ಉಳಿಸಿ ಎಂದು ಅವುಗಳು ಕರೆಯುವಂತೆ ಅನ್ನಿಸುತ್ತದೆ’ ಎಂದು ಹೇಳಿದಾಗ ಎಲ್ಲದರಲ್ಲೂ ಜೀವಾಂಶ ನೋಡುವ ಅವರಲ್ಲೆಷ್ಟು ಲೈಫ್ ಇದೆ ಎನ್ನಿಸದೇ ಇರಲಿಲ್ಲ.

ಸೂರ್ಯಾಸ್ತಮಾನದ ಒಳಗೆ ಶರಾವತಿ ಕಣಿವೆಯ ಸೌಂದರ್ಯವನ್ನು ಗೇರುಸೊಪ್ಪೆ ರಸ್ತೆಯ ವ್ಯೂ ಪಾಯಿಂಟ್‌ನಲ್ಲಿ ನಿಸರ್ಗವನ್ನು ಮತ್ತೆ ಕ್ಯಾಮೆರಾದಲ್ಲಿ ಹಿಡಿದು ಶಿವಮೊಗ್ಗಕ್ಕೆ ವಾಪಾಸು ಹೊರಟಾಗಲೇ ಇನ್ನೆರೆಡು ತಿಂಗಳಲ್ಲಿ ಇನ್ನೂ ಕೆಲವು ಜಾಗಗಳಿಗೆ ಹತ್ತು ಹಲವು ಸ್ನೇಹಿತರೊಡನೆ ಹೋಗುವ ಒಡಂಬಡಿಕೆಯಾಯ್ತು. ಮಳೆ, ಚಳಿ, ಇಂಬಳಗಳನ್ನು ತಡೆದುಕೊಳ್ಳುವ, ಎದೆ ಹೊಯ್ಲ ಇದ್ದವರನ್ನು ಕರೆಯಿರಿ ಎಂದಿದ್ದಾರೆ. ಹವಾನಿಯಂತ್ರಿತ ಸಲಹಾ ಕೊಠಡಿಯಲ್ಲಿ ಲೋಕವನ್ನು ಕಾಣುವ ನನ್ನಂತಹವನಿಗೆ ಕಷ್ಟವಾಗಬಹುದೆಂದು ನಾ ಹೇಳುವ ಮುನ್ನವೇ, ಒಂದೇ ಮಾತಿನಲ್ಲಿ ‘ಮನಸ್ಸಿಗೆ ದಣಿವು, ದಾಹವಿಲ್ಲದಿದ್ದರೆ ದೇಹ ಎಲ್ಲಿಗಾದರೂ ಹೋಗುತ್ತದೆ’ ಎಂದರು!.

ಹೀಗೆ ಕತ್ತಲೆ ಕಾನನ್ನಷ್ಟೇ ನೋಡಲು ಹಂಬಲಿಸಿದ ನನಗೆ ಸಿಕ್ಕಿದ್ದು ಎಕ್ಸ್ಟ್ರಾ ಬೋನಸ್! ನನ್ನ ಉದ್ಯೋಗದಾಚೆಯ ಕ್ಷೇತ್ರದ ವಿಜ್ಞಾನಿಯ ಸಾಂಗತ್ಯ, ಐವತ್ತರ ವಯಸ್ಸಿನ ಗಡಿ ದಾಟಿದ ನನ್ನ ದೇಹದ ತಾಕತ್ತಿನ ಅರಿವು, ಕಪ್ಪೆಗಳಿಗೂ ನಮ್ಮ ಪರಿಸರಕ್ಕೂ ಇರುವ ಅಪೂರ್ವ, ಅವಶ್ಯ ಸಂಬಂಧಗಳು, ಕಾಣಲು, ಕೇಳಲು ಸಿಕ್ಕಿದ್ದಲ್ಲದೇ ಪ್ರಪಂಚದ ಎಲ್ಲಾ ಜೀವಿ, ಜೀವಗಳ ಮಧ್ಯೆ ಇರುವ ಸೂಕ್ಷ್ಮ ಸಂಬಂಧಗಳ ಅರಿವೂ ಆಯ್ತು. ಹಾಂ ಮರೆತೆ, ಮನಸ್ಸು ಬೇರೆಯೇ ಲೋಕದಲ್ಲಿದ್ದ ನಮಗೆ ಊಟವೂ ಮರೆತಿತ್ತು, ಅನ್ನ ನೋಡಿದ್ದು ರಾತ್ರಿ ಮನೆಗೆ ಬಂದ ಮೇಲೆಯೇ. ಕುತೂಹಲವಿದ್ದವರು ಇಂಟರ್‌ನೆಟ್‌ನಲ್ಲಿ gururajakv.net ಮತ್ತು gururajakv.blogspot.com ಸಂದರ್ಶಿಸಿ. ನಾನು ಇಲ್ಲಿ ಬರೆಯದೇ ಇರುವ ವಿಶೇಷಗಳನ್ನು ನೀವು ಕಾಣಬಹುದು. ಹುಷಾರ್, ಯಾರೂ ಅವರೆದುರು ಯಾರನ್ನೂ, ಬಾವಿಯೊಳಗಿನ ಕಪ್ಪೆ, ಕೂಪಮಂಡೂಕ ಎಂದು ಬಯ್ಯಬೇಡಿ. ಬಾವಿಯೊಳಗಿನ ಕಪ್ಪೆ ಹೊರಲೋಕ ನೋಡದಿದ್ದರೂ ತನ್ನ ಬದುಕನ್ನು ಯಾರಿಗೂ ತೊಂದರೆಯಾಗದಂತೆ ನಿರ್ವಹಿಸುವಷ್ಟು ಜ್ಞಾನ ಪಡೆದಿರುತ್ತದೆ ಎಂದಾರು ಕಪ್ಪೆ ವೈದ್ಯ – ಡಾ| ಕೆ.ವಿ ಗುರುರಾಜ!