ತಲೆಗೆರಡು ತಟ್ಟಿ ಗುಂಡಿ ಅದುಮಿದಾಗ, ನನ್ನ ಹತ್ತು ವರ್ಷ ಹಳೆಯ ಮರುಪೂರಣ ತಾಕತ್ತಿನ ಟಾರ್ಚ್ ಮಿಣಕು ಬೆಳಕೇನೋ ಕೊಟ್ಟಿತು. ಅದರ ಅವನತ ಪ್ರಕಾಶ ಶೂನ್ಯ ಮುಟ್ಟುವ ಮೊದಲು ನಮ್ಮ ಕಾಡ್ಮನೆಯ ಅಡುಗೆಮನೆ ಮೂಲೆಯಲ್ಲಿ ಮಂಕಳಂತೆ ಕೂತ ಬುಡ್ಡೀದೀಪ ಗುರುತಿಸಿಕೊಂಡೆ. (ಪದಮೂಲ ಹುಡುಕುವವರು ಇದು ಬೆಡ್ ಲ್ಯಾಂಪಿನ ತದ್ಭವ ಎನ್ನಬಹುದೋ ಏನೋ. ಆದರೆ ವಿಕಾಸಪಥದಲ್ಲಿ ಇಂದು ದೀಪಗಳ ನಿಂತಿರುವ ಎತ್ತರ ನೋಡುವಾಗ ಇದು ನಿಜಕ್ಕೂ ಮುದಿ/ಅಜ್ಜೀ ದೀಪವೇ ಸರಿ) ಕಾಡ್ಮನೆಗೆ ನಾವು ವಿದ್ಯುತ್ ಸಂಪರ್ಕ ಪಡೆದಿಲ್ಲ ಎನ್ನುವುದು ನಿಮಗೆ ಗೊತ್ತೇ ಇದೆ. ಹೀಗೆ ದೀಪ ಗುರುತಿಸಿಕೊಳ್ಳದೇ ಹಿಂದೊಮ್ಮೆ ನೆನಪಿನ ಬಲದಲ್ಲಿ ಕತ್ತಲಮೂಲೆಗೆ ನಾನು ಕೈಚಾಚಿದ್ದಿತ್ತು. ಆದರೆ ಕತ್ತಲೆಯಲ್ಲಿ ಆಳ, ಎತ್ತರದ ಹದ ಗುರುತಿಸುವಲ್ಲಿ ನಾವು ವಿಕಲಾಂಗರು. ತಪ್ಪಿದ ನನ್ನ ಕೈತಟ್ಟಿ ದೀಪ ಮಗುಚಿ ಎಣ್ಣೆ ಚೆಲ್ಲಿತ್ತು, ಚಿಮಣಿ ಚಿಪ್ಪಾ ಚೂರಾಗಿತ್ತು. ಮತ್ತಾ ಕುಪ್ಪಿ ಚೂರು ಶುದ್ಧಪಡಿಸುವ ರಾಮಾಯಣ ಯಾರಿಗೆ ಬೇಕು.
ಈ ಬಾರಿ, ಕುಪ್ಪೀ ಬುಡ್ಡಿಗೆ ಎಡಗೈ ಕೊಟ್ಟೆ. ಗುಜರಿ ಡಬ್ಬಿ ಕತ್ತರಿಸಿ, ಕುಟ್ಟಿ, ಒರಟು ತಿರುಪುಧಾರೆ ಕೊಟ್ಟು ಕೂರಿಸಿದ್ದ ದೀಪದ ತಲೆ ಸೇರಿದಂತೆ ಗಾಜಿನ ಚಿಮಣಿಯನ್ನೇ ಬಲಗೈಯಲ್ಲಿ ಆಧರಿಸಿದೆ.ಸಾಮಾನ್ಯವಾಗಿ ಬುಡ್ಡೀ ದೀಪಗಳು ಹಗುರವೇ ಇರುತ್ತವೆ. ಮತ್ತು ಒಂದು ಕೈಯಲ್ಲಿ ಎತ್ತುವುದೇನೂ ಸಮಸ್ಯೆಯಲ್ಲ. ಆದರೆ ಹಿಂದೊಮ್ಮೆ ನಾನು ಇಂಥದ್ದೆ ದೀಪವನ್ನು ಒಂದೇ ಕೈಯಲ್ಲಿ ಎತ್ತಿದ್ದಿತ್ತು. ಅದರ ಕಥೆ ಕೇಳಿ. ಬುಡ್ಡೀ ದೀಪವನ್ನು ಎತ್ತಿ ಓಡಾಡಿಸಲು ಅನುಕೂಲವಾಗುವಂತೆ ಒಂದು ಲಂಬ ತಗಡಿನ ಪಟ್ಟಿಯನ್ನು ಹಿಡಿಕೆಯಾಗಿ ಜೋಡಿಸಿರುತ್ತಾರೆ. (ಅದರ ಮೇಲಿನ ತುದಿಯಲ್ಲಿರುವ ಉಲ್ಟಾ ಚಾವೀ ತೂತ ಅದನ್ನು ಗೋಡೆಯ ಮೊಳೆಗೆ ತಗುಲಿಸಲು ಸಹಕಾರಿ.) ದೀಪದ ಎಣ್ಣೆ ತುಂಬಿದ ಗಾಜಿನ ಬುಂಡೆಯ ಸೊಂಟಕ್ಕೊಂದು ತಗಡಿನ ಪಟ್ಟಿ ಬಿಗಿದು, ಲಂಬ ಪಟ್ಟಿಯನ್ನು ಅದಕ್ಕೆ ಎರಡೋ ಮೂರೋ ಕೀಲಾಣಿಯಲ್ಲಿ ಜೋಡಿಸಿರುತ್ತಾರೆ. ಅಂದು ನಾನು ಯಾವುದೋ ಕೆಲಸದ ಬೀಸಿನಲ್ಲಿ, ಲಂಬ ಪಟ್ಟಿಯನ್ನೇ ಹಿಡಿದು ದೀಪವನ್ನು ಸರಕ್ಕನೆ ಮೇಲೆತ್ತಿದ್ದೆ. ಆದರೆ ಚಿಮಣಿಯ ತುಯ್ತಕ್ಕೆ ಬಡಕಲು ಪಟ್ಟಿ ಬಳುಕಿ, ಚಿಮಣಿ ಕಳಚಿ ಬಿದ್ದಿತ್ತು. ಬೇತಾಳನಿಗೆ ತಿಳಿದೂ ಉತ್ತರಿಸದ ತ್ರಿವಿಕ್ರಮನ ತಲೆಯ ಹಾಗೆ ಸಾವಿರದೊಂದು ಗೋಳಾಗಿ ಹೋಯ್ತು ಚಿಮಣಿ. ಮತ್ತಾ ಕುಪ್ಪಿ ಚೂರು ಶುದ್ಧಪಡಿಸುವಾ ರಾಮಾಯಣಾ…
ಬುಡ್ಡೀ ದೀಪವನ್ನು ಅಡುಗೆ ಕಟ್ಟೆಯಲ್ಲಿ ಮುಂದಕ್ಕಿಟ್ಟುಕೊಂಡೆ. ಕಳೆದ ಬಾರಿ ಅದರ ಎಣ್ಣೇ ಮುಗಿದದ್ದು ನೆನಪಿತ್ತು. ಆದರೂ ಮೊದಲು ಚಿಮಣಿಯನ್ನು ಪುಷ್ಪ ಪಾತ್ರೆಯಂತಹ ಅರಳಿನೊಳಗಿಂದ ಕಳಚಿದೆ. ಇಲ್ಲಿ ಹೇಳಲೇ ಬೇಕಾಗುತ್ತದೆ, ಇನ್ನೊಂದು ವ್ಯಥೆ. ಹಿಂದೊಮ್ಮೆ ಎಣ್ಣೆ ಹಾಕುವ ಆತುರದಲ್ಲಿ, ಮೊದಲು ತಿರುಪು ಧಾರೆಯನ್ನೇ ಕಳಚಲು ಹೋಗಿದ್ದೆ. ಆಗ ಅನಿರೀಕ್ಷಿತವಾಗಿ ಚಿಮಣಿ ಆತ್ಮಹತ್ಯೆ ಮಾಡಿಕೊಂಡ ಹಾಗಾಯ್ತು; ಒಮ್ಮೆಲೆ ಕಳಚಿಕೊಂಡು ಬಿದ್ದು, ಪುಡಿಪುಡಿಯಾಗಿತ್ತು. ಛೆ, ಬರಗಾಲ, ಸಾಲ, ಜೀವನದಲ್ಲಿ ಜಿಗುಪ್ಸೆ, ಪರೀಕ್ಷೆಯ ವೈಫಲ್ಯಗಳೇ ಮೊದಲಾದ ಮನುಷ್ಯರನ್ನು ಕಾಡುವ ಸಮಸ್ಯೆಗಳು ಬುಡ್ಡೀದೀಪಕ್ಕೆ ಎಲ್ಲಾದರೂ ಬರುವುದುಂಟೇ! ಚಿಕಿತ್ಸಕವಾಗಿ ನೋಡಿದೆ. ಚಿಮಣಿ ಭಾರಕ್ಕೆ ಅದನ್ನು ಹಿಡಿದುಕೊಳ್ಳುವ ಪುಷ್ಪಪಾತ್ರೆಯಂಥ ತಗಡಿನ ಅರಳು ದುರ್ಬಲವೂ ಕಾಲಹತಿಯಲ್ಲಿ ತುಸು ಲಡ್ಡೂ ಆಗಿತ್ತು. ಮತ್ತಾ ಕುಪ್ಪೀ ಚೂರು ಶುದ್ಧಪಡಿಸುವಾ…
ಕಳಚಿದ ಚಿಮಣಿಯನ್ನು ಅಲ್ಲಿಗೆ ಮರೆತೆನೇ? ಇಲ್ಲ. ಇದಕ್ಕೂ ಒಂದು ಘಟನೆ ಹೇಳದುಳಿಯುವುದು ಹೇಗೆ? ಹಿಂದೊಮ್ಮೆ ಚಿಮಣಿಯನ್ನು ಹೀಗೇ ಪಕ್ಕದಲ್ಲಿ ನೆಟ್ಟಗೆ ನಿಲ್ಲಿಸಿ ಬುಡ್ಡಿಗೆ ಎಣ್ಣೆ ತುಂಬುವ, ಬತ್ತಿ ಮೇಲೆಳೆಯುವ ಕೆಲಸಕ್ಕಿಳಿದಿದ್ದೆ. ತ್ರೇತಾಯುಗದಲ್ಲಿ ಸೀತಾದೇವಿಯನ್ನು ಹೊನ್ನ ಜಿಂಕೆಯಾಗಿ ಕಾಡಿದ್ದ ಮಾರೀಚ, ಕಲಿಯುಗದಲ್ಲಿ ಸೊಳ್ಳೆ ರೂಪಧಾರಿಯಾಗಿ ನನ್ನೆದುರು ಹಾರಾಡಿದ. ನನ್ನೊಳಗಿನ ಮಲೇರಿಯಾ ಚಿಕನ್ ಗುನ್ಯಾ ಭಯಗಳು ಕಾಡಿದವು “ಹಿಡಿದು ತಾ, ಹೊಡೆದಾದರೂ ಹಾಕು.” ನಾನೇನೂ ಕಡಿಮೆಯವನಲ್ಲ ಎಂಬಂತೆ ಸಟ್ಟನೆ ಎರಡೂ ಕೈ ಬೀಸಿ ಬಡಿದೆ. ವಾಸ್ತವದಲ್ಲಿ ‘ಹಾ ಲಕ್ಷ್ಮಣಾ’ ಸನ್ನಿವೇಶ; ಸೊಳ್ಳೆ ಚಟ್ನಿಯಾಗಿರಬೇಕು. ಬದಲು ನನ್ನದೇ ಪಶ್ಚಾತ್ತಾಪದ ಉದ್ಗಾರ ‘ಅಯ್ಯೋ ಚಿಮಣೀ.’ ಸೊಳ್ಳೆ ಎಲ್ಲಿ ಹಾಳಾಯ್ತೋ ಗೊತ್ತಿಲ್ಲ, ನನ್ನ ದಗಳೆ ಅಂಗಿಯ ಕೈ ಸೋಕಿ, ಚಿಮಣಿ ಅಡ್ಡಬಿದ್ದು, ದೊಡ್ಡ ಗಂಟೂ ಕೊಟ್ಟು ಜಾಮೀನು ದೊರಕದ ಗಣಿಧಣಿಯ ಎದೆಯಂತೆ ಬಿರಿದುಕೊಂಡಿತ್ತು! ಮತ್ತಾ ಕುಪ್ಪೀ ಚೂರೂ…
ಚಿಮಣಿಯನ್ನು ಹುಶಾರಾಗಿ ಗೋಡೆ ಅಂಚಿನಲ್ಲಿ ಅಡ್ಡ ಮಲಗಿಸಿಟ್ಟೆ. ಆದರೆ ಅಷ್ಟೇ ಸಾಕಾಗದು. ಇದೂ ಕತೆಯಲ್ಲ ಸ್ವಾಮೀ, ಸತ್ಯ. ಹಿಂದೊಮ್ಮೆ ಮಳೆಗಾಲದ ಭರದಲ್ಲಿ ಹೀಗೇ ಚಿಮಣಿ ಮಲಗಿಸಿಟ್ಟು ಎಣ್ಣೆ ಡಬ್ಬಿ ತರಲು ಒಳಗೆ ಹೋಗಿದ್ದೆ. ಆಗ ಗಾಳಿಯ ಸುಳಿಯನಾಂತು ಬಂದ ದುರ್ವಿಧಿ, ಗಾಜಿನ ಬುರುಡೆಯನ್ನು ಉರುಳಿಸಿ, ಕಟ್ಟೆಯಿಂದ ಕೆಳಗೆ ಕೆಡೆದಿತ್ತಕಟಾ. ನನಗುಳಿದದ್ದು ಮತ್ತಾ ಕುಪ್ಪೀ…
ಗೋಡೆಯಂಚಿನಲ್ಲಿಟ್ಟ ಚಿಮಣಿಗೆ ಅಲ್ಲೇ ಇದ್ದ ಅಡುಗೆ ಚಿಮ್ಮಟವನ್ನು ಕಟ್ಟೆಯಾಗಿ ಇಟ್ಟೆ. ದೀಪದ ತಲೆ ಕಳಚಿ ದೀಪೋಜ್ವಲನದ ನಿಜ ಮೂಲಕ್ರಿಯೆಗೆ ರಂಗ ಸಜ್ಜುಗೊಳಿಸಿದೆ. ಆರೆಂಟು ದಿನಗಳ ಹಿಂದೆ ಅಲ್ಲಿಂದ ಹೋಗುವಾಗ ತೊಳೆದು ಕಟ್ಟೆಯಂಚಿನಲ್ಲಿ ಹರಡಿದ್ದ ಮಸಿಯರಿವೆ ಒಣಗಿ ಬತ್ತಿಗಟ್ಟಿತ್ತು. ಅದನ್ನು ಮೃದು ಮಾಡಿ, ಚಿಮಣಿಯ ಒಳ ಹೊರಗೆ ಹುಶಾರಲ್ಲಿ ಉಜ್ಜಿ, ತೂರಿಸಿ, ಮಸಿ ಕಳೆದೆ. ಬುಡ್ಡಿಯ ಮೇಲುದುರಿದ ತೆಳು ದೂಳು, ಕೆಲವು ಸುಟ್ಟಾತ್ಮ (ಹೂತಾತ್ಮನಂತೆ) ಕೀಟಾವಶೇಷಗಳನ್ನು ಒರೆಸಿ ತೆಗೆದೆ. ಬುಡ್ಡಿಗೆ ಬುದ್ಧಿವಂತ (= ಫನೆಲ್, ಪನ್ನಾಲಿ, ಚೂಲಿ) ಇಟ್ಟು ಹದವಾಗಿ ಸೀಮೆಣ್ಣೆ ತುಂಬಿದೆ. ಬತ್ತಿಯ ಮೋಟು ಬಾಲ ಎಣ್ಣೆಗೆ ಮುಳುಗಿಸಿ, ತಲೆ ತಿರುಪು ಬಿಗಿ ಮಾಡಿದ್ದೂ ಆಯ್ತು. ಪ್ಲ್ಯಾಸ್ಟಿಕ್ ಲಕೋಟೆಯೊಳಗೆ ಬೆಚ್ಚಗೆ ಕುಳಿತ ಬೆಂಕಿಪೆಟ್ಟಿಗೆ ತೆಗೆದು, ಕಡ್ಡಿ ಎಳೆದು, ಗೀರಿ, ಬತ್ತಿ ಸೀಳಿನ ಬಳಿ ಹಿಡಿದು, ಬತ್ತಿ ತಿರುಪು ತಿರುಟಿದೆ. ಪುರ್ಕ್ ಸದ್ದು ಮಾಡಿತು, ಬತ್ತಿ ಮೇಲೆ ಬರಲಿಲ್ಲ. ಕೆಳಗೆ, ಮೇಲೆ, ಹಗುರಕ್ಕೆ, ಜೋರಾಗಿ ಎಲ್ಲಾ ಮಾಡಿದರೂ ಬತ್ತಿ ಮೇಲೇಳಲೇ ಇಲ್ಲ. ಬದಲು ಮೇಲೇರಿದ ಕಡ್ಡಿಯ ಜ್ವಾಲೆ ಬೆರಳಿಗೆ ಚುರುಕು ಮುಟ್ಟಿಸಿತು. ಆಗ ನೆನಪಾಯ್ತು, ಕಳೆದ ಸಲ ದೀಪ ಎಣ್ಣೆ ಮುಗಿದೇ ನಂದಿತ್ತು. ಅಂದರೆ ಬತ್ತಿ ಸೀಳಿನ ಒಳಗೂ ಸ್ವಲ್ಪ ಕೆಳಮಟ್ಟಕ್ಕೂ ಕರಟಿದ್ದಿರಬೇಕು. ತಿರುಪಿನ ಕಚ್ಚುಗಾಲಿ ಸೀಳಿನೊಳಗಿನ ಕರಟಲು ಬತ್ತಿಯಲ್ಲಿ ತೂತು ಮಾಡಿತ್ತೇ ವಿನಾ ಅದನ್ನು ಮೇಲಕ್ಕೆ ನೂಕಿರಲಿಲ್ಲ. ತಾಳ್ಮೆ ಕಳೆಯದೆ ಹಿಂದಿನ ಶಿಸ್ತಿನಲ್ಲೇ ಚಿಮಣಿ, ತಲೆ ಬೇರ್ಪಡಿಸಿ, ಬತ್ತಿಯ ಮೋಟುಬಾಲದ ಎಣ್ಣೆ ಸೀಟಿಕೊಂಡೆ. ಮತ್ತೆಎಷ್ಟು ಜಾಣ್ಮೆಯಲ್ಲಿ ನೂಕಿ ಎಳೆದು ಮಾಡಿದರೂ ಬತ್ತಿ ಅರ್ಧಕ್ಕರ್ಧ ಪುಡಿಯಾಗಿ, ಸೀಳಿನ ಮೇಲೆ ತಲೆ ಎತ್ತುವಾಗ ಎಣ್ಣೆ ಹೀರಲು ಬಾಲವಿಲ್ಲದ ಸ್ಥಿತಿಗೆ ಬಂತು. ಬದಲಿ ಬತ್ತಿಯಿಲ್ಲದ ಸಂಕಟಕ್ಕೆ ಆ ರಾತ್ರಿಯನ್ನೇನೋ ಮಿಣುಕು ಟಾರ್ಚಿನಲ್ಲೇ ಸುಧಾರಿಸಿದೆವು. ಮತ್ತು ಮಂಗಳೂರು ತಲಪಿದಂದು ಮೊದಲ ಕೆಲಸವೇ ಬತ್ತಿ ಖರೀದಿ ಎಂದು ನಿಶ್ಚೈಸಿಕೊಂಡೆವು.
ಮನೆಗೆ ಆಗೀಗ ಬೆಂಕಿಪೊಟ್ಟಣ, ಮೊಂಬತ್ತಿ ಕೊಳ್ಳುವ ಅಂಗಡಿಯಲ್ಲಿ ಕೇಳಿದೆವು “ಬತ್ತಿ ಇದೆಯೇ, ದೀಪದ ಬತ್ತಿ?” “ಅಯ್ಯೋ ಕಾರ್ ಸ್ಟ್ರೀಟಿಗೆ ಹೋಗಿ, ಎಷ್ಟೂ ಸಿಕ್ತದೆ.” ಹೋಯ್ತು, ಕಿಟಕಿ ದರ್ಶನದಲ್ಲಿ ಪ್ರಶಸ್ತವೆಂದನ್ನಿಸಿದ ಅಂಗಡಿಯನ್ನೇ ಆಯ್ದು ಕೇಳಿದೆವು “ಬತ್ತಿ ಇದೆಯೇ, ದೀಪದ ಬತ್ತಿ?” ಆತ ಕೂಡಲೇ ಆರತಿ ಬತ್ತಿ, ಹೂಬತ್ತಿಗಳ ಪುಟ್ಟ ಕಟ್ಟು ಮುಂದೆ ಮಾಡಿದ. “ಹೋ ಅದಲ್ಲ, ಚಿಮಣಿಯೆಣ್ಣೇ ದೀಪದ್ದು” ಎಂದಾಗ ಅಂಗಡಿಯಾತನ ಮುಖದಲ್ಲಿ ಕನಿಕರ(ಸ) ಜಿನುಗಿತು. “ಈಗ ನಮ್ಮ ಜನರೇಟರಿಗೇ ಕೆರೊಸಿನ್ ಇಲ್ಲ. ಇನ್ನು ಅದರ ದೀಪ ಮತ್ತೆ ಬತ್ತಿ! ಎಲ್ಲಾದರೂ ಮಾರ್ಕೆಟ್ ರೋಡಿನಲ್ಲಿ, ಬಂದರದಲ್ಲಿ ಕೇಳಿ ನೋಡಿ.” ಆಗ ನನ್ನ ತಲೆಯಲ್ಲಿ ಭಿನ್ನ ನೆನಪೊಂದು ಕೆದರಿ ನಿಂತಿತು.
ಅತ್ರಿ ಬುಕ್ ಸೆಂಟರಿನಲ್ಲಿ ವಿದ್ಯುಚ್ಛಕ್ತಿ ವೈಫಲ್ಯದ ಪ್ರಾಥಮಿಕ ರಕ್ಷಣೆಗೆ, ನಾನು ಸಣ್ಣ ತಂತಾನೆ ಹತ್ತುವ ಬ್ಯಾಟರಿ ದೀಪ ಇಟ್ಟುಕೊಂಡಿದ್ದೆ. ಅನಂತರ ಕೆಲವೇ ಮಿನಿಟುಗಳ ಅಂತರದಲ್ಲಿ “ಶಾಂತ್ರಾಮಾ ಜನರೇಟರ್ರ್” ಎಂದು ನಾನು ಹೊಡ್ಕೊಳ್ಳುವಷ್ಟು ವಿದ್ಯುಜ್ಜನಕ ಮತ್ತು ಸ್ಪಷ್ಟ ಬೆಳಕು ಪುಸ್ತಕ ಅಂಗಡಿಗೆ ಅನಿವಾರ್ಯ. ನಾನು ಬಹುತೇಕ ಮಳಿಗೆಯವರಂತೆ ವಿದ್ಯುಜ್ಜನಕವನ್ನು ದಾರಿ ಬದಿಗಿಟ್ಟವನಲ್ಲ. ನೇರ ನನ್ನ ಮತ್ತು ನಡೆದಾಡುವವರಿಗೆ ಹೊಗೆ ತಿನ್ನಿಸಬಾರದೆಂದೇ ಮೊದಲಿನಿಂದಲೂ ಶ್ರಮಿಸಿದವನು. ಅಂಗಡಿಯ ಹಿತ್ತಿಲಿಗೆ ಹೊಗೆ ಬಿಡುವಂತೆ ಅಟ್ಟದ ಮೂಲೆಯಲ್ಲಿ ಸಜ್ಜುಗೊಳಿಸಿದ್ದೆ. ಅದು ‘ಸ್ಟಾರ್ಟಿಂಗ್ ಪೆಟ್ರೋಲ್, ರನ್ನಿಂಗ್ ಕೆರೋಸಿನ್’ ಜಾತಿ. ವಿದ್ಯುತ್, ದೂರವಾಣಿ, ನಲ್ಲಿನೀರು, ಬಸ್ಸು, ರೈಲು ಇತ್ಯಾದಿ ಯಾವುದೇ ಸಾರ್ವಜನಿಕ ವ್ಯವಸ್ಥೆಯಲ್ಲಿನ ವೈಫಲ್ಯದ ಕಥೆಗಳು ನಮಗೆ ಸಾಕಷ್ಟು ರೂಢಿಸಿವೆ. ಮುಖ್ಯವಾಗಿ ವಿದ್ಯುತ್ ಸರಬರಾಜಿನಲ್ಲಿ ಅದನ್ನು ಮೀರಿದ ‘ಮೇಂಟೆನೆನ್ಸ್’ ಎಂಬ ಇನ್ನೊಂದು ಮಾಯಾಜಾಲವಿದೆ. ದಿನ ಒಂದೋ ಎರಡೋ ಮೊದಲು ಪತ್ರಿಕೆಗಳಲ್ಲಿ (ಸಾರ್ವಜನಿಕ ಹೇಳಿಕೆ ಮೂಲಕ) ಸುದ್ದಿ ಮಾಡಿ, ಸರಬರಾಜು ನಿಲ್ಲಿಸುವ ವ್ಯವಸ್ಥೆ. ಹೆಚ್ಚಾಗಿ ಬೆಳಿಗ್ಗೆ ಹತ್ತರಿಂದ ಸಂಜೆ ಆರರವರೆಗೆ ಎನ್ನುವುದು ಕ್ರಮ. ಹತ್ತಕ್ಕೇನೋ ಗೀಟೆಳೆದಂತೆ ಪೂರೈಕೆ ತಪ್ಪಿಸುತ್ತಾರೆ. ಆದರೆ ಸಂಜೆ ಒಂದರ್ಧ ಗಂಟೆ ತಡವಾಗಿಯಾದರೂ ಕೊಟ್ಟರೆ ಪುಣ್ಯ. ಅದರ ಮೇಲೂ ಕಾಲರ್ಧ ಗಂಟೆ ಬಿಟ್ಟು ಮತ್ತೊಮ್ಮೆ ಇಪ್ಪತ್ತು ಮೂವತ್ತು ಮಿನಿಟು ತೆಗೆಯುವ ತುರ್ತು ಹೇಳಿ ಮುಗಿಯದ ಅವಸ್ಥೆ. ಇನ್ನು ಅವರ ಮೇಂಟೆನೆನ್ಸ್ ಕೆಲಸ ನೋಡಿದರೆ ದೇವರಿಗೇ ಪ್ರೀತಿ. ಯಾರೋ ಒಬ್ಬ ಯಾವುದೋ ಕಂಬದ ಮೇಲೆ ಹತ್ತಿ ಏನಾದರೂ ಮಾಡುತ್ತಿದ್ದರೆ ಅಥವಾ ಒಂದು ಕೋಲುಗತ್ತಿ ಹಿಡಿದವನು ತಂತಿಗೆ ಚಾಚಿದ ಗೆಲ್ಲುಗಳನ್ನು ಕತ್ತರಿಸುತ್ತಾ ನಡೆದಿದ್ದರೆ ಇಲಾಖೆ ಲೆಕ್ಕದಲ್ಲಿ ನಾಲ್ಕೈದು ಮಂದಿ ವೀಕ್ಷಕರು ಜೊತೆಗೆ ಇರುತ್ತಾರೆ! ಮತ್ತೆ ಇವರು ಬೀಳಿಸಿದ ಗೆಲ್ಲು, ಕಸ ಎಲ್ಲಾ ನಗರಸಭೆಯ ಸೊತ್ತಾದ್ದರಿಂದ, ಕನಿಷ್ಠ ಕರೆಗೆ ಎಳೆದು ಹಾಕುವ ದುರಭ್ಯಾಸವನ್ನೂ ವಿದ್ಯುತ್ ಇಲಾಖೆಯವರು ಮಾಡುವುದಿಲ್ಲ. ಅದಿರಲಿ, ಆಕಸ್ಮಿಕ ಮತ್ತು ಮೇಂಟೆನೆನ್ಸ್ – ಈ ಎರಡನ್ನೂ ಮೀರಿದ್ದು ಹೊರೆ ಇಳಿಕೆ (ಲೋಡ್ ಶೆಡ್ಡಿಂಗ್) ಅಥವಾ ಇನ್ನೂ ಸರಳವಾಗಿ ಹೇಳುವಂತೆ ಸರಬರಾಜು ಸ್ಥಗಿತ (ಪವರ್ ಕಟ್). ಅದರ ವಿವರಗಳಿಗಿಳಿದು ಪ್ರಸಂಗ ಬೆಳೆಸಲು ನಾನೇನೂ ಹರಿಕಥೆ ದಾಸನೇ. ಎಲ್ಲಿದ್ದೇ…?! ಒಟ್ಟಾರೆ ವಿದ್ಯುತ್ ಸರಬರಾಜು ಸೋಲುವಾಗ ಇರಲೇಬೇಕಾದ ವಿದ್ಯುಜ್ಜನಕ.
ಸೀಮೆ ಎಣ್ಣೇ ವಿದ್ಯುಜ್ಜನಕ ಇಂದು ಎಲ್ಲಾ ಕಛೇರಿ, ವಾಣಿಜ್ಯ ಸಂಸ್ಥೆ ಮಾತ್ರವಲ್ಲ ಎಷ್ಟೋ ಮನೆಗಳಲ್ಲೂ ಕಡ್ಡಾಯ ಇಟ್ಟು ಕೊಂಡಿದ್ದಾರೆ! ಆದರೆ ಸೀಮೆ ಎಣ್ಣೆ ಮಾತ್ರ ಎಲ್ಲೂ ಅಧಿಕೃತವಾಗಿ ಸಾರ್ವಜನಿಕರಿಗೆ ಸಿಗುವ ವ್ಯವಸ್ಥೆಯೇ ಇಲ್ಲ. ರೇಶನ್ ಅಂಗಡಿಗಳಲ್ಲಿ ಸೀಮಿತ ಕಾರ್ಡುದಾರರಿಗೆ ಮತ್ತೆ ಮೀನು ಹಿಡಿಯುವ ದೋಣಿಯವರಿಗೆಲ್ಲಾ ಅಧಿಕೃತ ಸೀಮೆ ಎಣ್ಣೆ (ತುಂಬಾ ಕಡಿಮೆ ಬೆಲೆಯಲ್ಲಿ) ಒದಗಣೆ ಉಂಟು. ಅಂದರೆ ಉಳಿದವರೆಲ್ಲಾ ಕಳ್ಳ ಮಾರುಕಟ್ಟೆಯೊಂದನ್ನೇ ನಂಬಬೇಕಾಗಿದೆ. ನನಗೆ ಕೆಲವೊಂದು ರೇಶನ್ ಅಂಗಡಿಗಳಲ್ಲಿ ‘ವಿಶೇಷ’ ದರಗಳಲ್ಲಿ, ಆದರೆ ಬಿಲ್ಲಿಲ್ಲದೇ ಸಿಗುತ್ತಿದ್ದವು. ಬಂದರಿನಲ್ಲಿ ‘ಬಾವಿಯ ಸಿಹಿ ನೀರು ದೊರೆಯುತ್ತದೆ’ ಬೋರ್ಡು ಹಾಕಿದವನೊಬ್ಬ ಅವನ ಮಾತು ನಂಬಿದರೆ ಪರೋಪಕಾರಿ ಪಾಪಣ್ಣ! ಮೀನುಗಾರರೊಡನೆ ಒಳ ವ್ಯಾಪಾರ ಮಾಡಿ, ನಮಗಾಗಿ ಅವನೇ ರಿಕ್ಷಾ ಚಾರ್ಜೂ ಕೊಟ್ಟು ಅಸಲು ಬೆಲೆಗೇ (ರೇಶನ್ ಅಂಗಡಿಯ ವಿಶೇಷ ದರದಷ್ಟೇ!) ಕೊಡುತ್ತಿದ್ದ. ಹಾಗೇ ಸೆಂಟ್ರಲ್ ಮಾರ್ಕೆಟ್ ಪಕ್ಕದ ಪೋಲಿಸ್ ಔಟ್ ಪೋಸ್ಟಿನ ಮರೆಯಲ್ಲೇ ನಿಂತುಕೊಂಡು ಇನ್ನೊಬ್ಬ ಪರೋಪಕಾರಿಯಿದ್ದ. ಆತ ಎಷ್ಟು ಹೊತ್ತಿಗೂ ಕೇವಲ ಹತ್ತು ಲೀಟರ್ ಕ್ಯಾನು ಹಿಡಿದು ಸೀಮೆಣ್ಣೆಯನ್ನು ಮಾತ್ರ ಅಕ್ಷಯವಾಗಿ ಕೊಡುತ್ತಲೇ ಇರುತ್ತಿದ್ದ. ಕೊನೆ ಇಬ್ಬರ ಮೇಲೆ ಆಗೀಗ ‘ನ್ಯಾಯ ಪರಿಪಾಲನೆಯ ದಾಳಿ’ ನಡೆಯುವುದಿತ್ತು. ಇವೆಲ್ಲ ನೋಡಿ ಒಮ್ಮೆ ನನಗೆ ತಲೆ ಹಾಳಾಗಿ, ಜಿಲ್ಲಾಧಿಕಾರಿಯವರಿಗೇ ಪತ್ರ ಹಾಕಿದ್ದೆ.
‘ಸ್ವಾಮೀ ಎಲ್ಲಾ ವಾಣಿಜ್ಯ ಸಂಸ್ಥೆಗಳಲ್ಲೂ ಸೀಮೆಣ್ಣೆ ವಿದ್ಯುಜ್ಜನಕ ಅಧಿಕೃತವಾಗಿಯೇ ನಡೆಯುತ್ತಿದೆ. ಆದರೆ ಸೀಮೆಣ್ಣೆ ಎಲ್ಲೂ ಅಧಿಕೃತವಾಗಿ ಸಾರ್ವಜನಿಕ ಉಪಯೋಗಕ್ಕೆ ಸಿಗುತ್ತಿಲ್ಲ. ಈ ಪವಾಡ ಹೇಗೆ ಸಾಧ್ಯ? ನಮಗೆ ಮರ್ಯಾದೆಯ ದಾರಿ ತೋರಿಸಿ.’ ಪತ್ರದಲ್ಲಿ ನನ್ನ ಹೆಸರು, ವಿಳಾಸ ಸರಿಯಾಗಿಯೇ ಇತ್ತು. ಆದರೆ ಕಾರ್ಡಿಗೆ ಕಬು ದಾರಿತೋರಿರಬೇಕು, ಏನೂ ಆಗಲಿಲ್ಲ. ಅನಂತರದ ದಿನಗಳಲ್ಲಿ ನಮಗೆ ಸೀಮೆಣ್ಣೆ ಬೇಕಾದಾಗ ಖಾಲೀ ಕ್ಯಾನನ್ನು ಅಂಗಡಿ ಎದುರು ಇಟ್ಟರೆ ಸಾಕು. ಶೂನ್ಯದಿಂದ ಓರ್ವ ಬಂದು ಕ್ಯಾನು ಒಯ್ದು ಅರ್ಧ – ಒಂದು ಗಂಟೆಯೊಳಗೆ ತುಂಬಿಸಿ ತರುತ್ತಾನೆ. ಆತ ಕೇಳಿದಷ್ಟು ಹಣ ಕೊಟ್ಟರೆ ಮುಗಿಯಿತು – ನಿಶ್ಚಿಂತೆ. ಇದು ಈಗಲೂ ನಡೆದಿದೆ. ಹೀಗೆ ವಿದ್ಯುಜ್ಜನಕದಿಂದಾಗಿ ಅನಿವಾರ್ಯವಾದ ಸೀಮೆ ಎಣ್ಣೆಗೇ ಇಷ್ಟೊಂದು ಪಡಿಪಾಟಲಿರುವಾಗ ಯಾಕೂ ಬೇಡದ ದೀಪ, ಬತ್ತಿ ಯಾರಾದರೂ ಯೋಚಿಸುವುದುಂಟೇ?
“ಬತ್ತಿ ಇದೆಯೇ ಬತ್ತಿ? ಸೀಮೆಣ್ಣೆ ದೀಪದ ಬತ್ತಿ?” ನಮ್ಮ ಪಲ್ಲವಿ ಮಾರುಕಟ್ಟೆ ರಸ್ತೆಯಲ್ಲಿ ಎರಡು ಮೂರು ಅಂಗಡಿಗಳಲ್ಲಿ ಹಾಡುತ್ತಾ ‘ಮುಂದೋಗಯ್ಯಾ’ ಕೇಳುತ್ತಾ ಹೋದೆವು. “ಪಟ್ಟವಿಳಿಯುವ ಮಂತ್ರಿ ಬರುವವನಿಗೆ ಇಟ್ಟ ಬತ್ತಿ ಅಲ್ಲ, ಗಂಟು ಕೊಟ್ಟವ ಪಡೆದವಗೆ ಇಟ್ಟ ಬತ್ತಿ ಬೇಡ, ಬರಗಾಲಕ್ಕೆ ಬಿದ್ದ ಬಾವಿಯ ಕತೆಯಿದಲ್ಲ, ಕೇವಲ ಸೀಮೆಣ್ಣೆ ದೀಪದ ಬತ್ತಿ. ಗಾಜಿನ ಬುರುಡೆಯೊಳಗೆ ತಣ್ಣಗೆ ವ್ಯಾಪಿಸಿ, ಶಿಖೆಯಲ್ಲಿ ಮಾತ್ರ ನಿರ್ಮಲ ಬೆಳಕಿನ ಕುಡಿ ಕಾಣಿಸುವ ಬತ್ತಿ. ಬತ್ತಿ ಇದೆಯೇ…?” ಚರಣಗಳ ಮೇಲೆ ಚರಣ ಉರುಳಿಸುವಾಗ ನಮಗೆ ಖರೀದಿದಾರನ ಹಮ್ಮು ಕಳೆದು ಬಿಕ್ಷಾ ವೃತ್ತಿಯ ದೈನ್ಯ ಮೂಡಿತ್ತು. ಗೌತಮನ ಯಃಕಶ್ಚಿತ್ ಬೇಡಿಕೆ ಒಂದು ಮುಷ್ಠಿ ಸಾಸಿವೆ, ಸಾವು ಕಾಣದ ಮನೆಯ ಸಾಸಿವೆ. ಈಗಲೇ ತಂದು ಅಕಾಲ ಮರಣಿಸಿದ ತನ್ನ ವಂಶದ ಕುಡಿಯನ್ನು ಬೆಳಗುವ ಬಯಕೆ ತಾಯಿ ಗೌತಮಿಯದು. ನಮ್ಮ ಸ್ಥಿತಿ ವಿಭಿನ್ನವಲ್ಲ! ಕೇವಲ ಆರಿಂಚುದ್ದದ ಬತ್ತಿ, ಕಾಡ್ಮನೆಯ ಅಂಧಕಾರವನ್ನು ಕಳೆಯುವ ದಪ್ಪ ಬಟ್ಟೆಯ ಲಾಡಿ – ಬತ್ತಿ, ಸಿಗದೇ ವಿಹ್ವಲರಾಗುವ ಹಂತದಲ್ಲಿ ಹಳಗಾಲದ ಸ್ಟವ್ ಮಾರುವ ಅಂಗಡಿಯೊಂದು ನಮ್ಮಲ್ಲಿ ಆಶಾಕಿಡಿ ಮೂಡಿಸಿತು. “ನಾವು ಕೊಡುತ್ತೇವೆ” ಎಂಥಾ ಯುಗ ಪ್ರವರ್ತಕ ನುಡಿ! “ಉರುಟು ಬತ್ತಿ. ಸುತ್ತ ಆರೆಂಟು ಪುಟ್ಟ ಕೊಳವೆಗಳಲ್ಲಿ ತೂರಿ ಎದ್ದು ಬರ್ನರ್ ಝಗ್ಗೆನಿಸುವ ಸ್ಟವ್ ಬತ್ತಿ.” ನಮ್ಮ ನಿರೀಕ್ಷೆ ಬೆಳಕಿನದು, ದಕ್ಕಿದ್ದು ಉರಿಯದ್ದು.
ನಿರಾಶೆಯಲ್ಲೇ ಮನೆಗೆ ಮರಳಿದೆವು. ದೇವಕಿ ಹಳೆ ಬಟ್ಟೆ ಗಂಟು ಬಿಚ್ಚಿದಳು. ಶೆಟ್ಟರಂಗಡಿಯಿಂದ ತಂದು ಮೂಲೆ ಸೇರಿದ್ದ ದಟ್ಟಿಯ ಅಂಚನ್ನು ಒಂದು ಎಳೆ ಮಾಡಿ, ತುದಿ ಕಾಣಿಸುವಂತಿಟ್ಟಳು. ಮತ್ತೆ ಇತ್ತ ಈಶ್ವರನ (ನನ್ನ ಚಿಕ್ಕಪ್ಪನ ಹೆಸರು) ಪಂಚೆ ಹರಕು, ಅತ್ತ ನನ್ನದೇ (ಅಶೋಕ) ಶರಟಿನ ಹರಕು ಸೇರಿಸಿ ಗಾತ್ರ ಸಿಗುವಂತೆ ಮಾಡಿದ್ದೂ ಆಯ್ತು. ಇದ್ದ ಕುಂಬು ನೂಲಿನಲ್ಲೇ ಹತ್ತಿಂಚು ಉದ್ದದ ಬತ್ತಿ ಹೊಲಿದೇ ಬಿಟ್ಟಳು. ಕಾಡು ಬಿದ್ದ ಮನೆಯಲ್ಲಿ, ಮಡ್ಡಿ ಬೆರೆತ ಎಣ್ಣೆ ಸೀಪುತ್ತ ಈಗ ಹತ್ತಿಂಚುದ್ದದ ಬತ್ತಿ ಚಿಟಪಟಗುಟ್ಟುತ್ತಾ ಕೊಟ್ಟದ್ದೇ ಬೆಳಕು.
ರಾತ್ರಿ ಕಳೆದೀತೇ ಬತ್ತಿ ಉಳಿದೀತೇ ಪ್ರತಿ ಸನ್ನಿವೇಶದಲ್ಲಿ ಏಳುವ ಪ್ರಶ್ನೆಗೆ ಉತ್ತರ ನಿಮಗೆ ಗೊತ್ತಿದ್ದರೆ ಹೇಳಿ.
ಪ್ರೀತಿಯ ಅಶೋಕ ವರ್ಧನ ನಾನು ಒಳದಾರಿ ಕಂಡು ಕೊಂಡಿದ್ದೇನೆ. ಅಡುಗೆ ಎಣ್ಣೆಯನ್ನು ತುಂಬಿಸಿ ಬತ್ತಿ ಹಾಕಿದ ಹಣತೆ. ಅದರ ಬೆಳಕು ಗಾಳಿಗೆ ನಂದದಂತೆ ಗ್ಯಾಸ್ಸ್ ಲೈಟಿನ ಗಾಜು! ಗ್ಯಾಸ್ ಲೈಟಿನ ಗಾಜಿನೊಳಗೆ ಹಣತೆ ಅಥವಾ ತುಳಸಿಗೆ ದೀಪ ಇರಿಸುವ ನೀಲಾಂಜನ ಬಳಸುತ್ತೇನೆ. ಎಂಥಹಾ ಬಿರುಗಾಳಿ ಬಂದರೂ ದೀಪ ಆರುವುದಿಲ್ಲ. ಬೆಳಗಿನ ವರೆಗೆ ಉರಿಯುವ ನಿಖರವಾದ ಬೆಳಕು! ಪ್ರಯೋಗ ಮಾಡಿನೋಡಿ. ನನಗೆ ಈಗ ಸೀಮೆ ಎಣ್ಣೆಯ ಹಂಗಿಲ್ಲ.ಪ್ರೀತಿಯಿಂದ ಪೆಜತ್ತಾಯ ಎಸ್. ಎಮ್.
Dear Sri Ashokavardhana,It is really a very touching note on the current political economy of our energy sector! Only renewable energy sources (in production front), rational management (in distribution front) and prudence use by us (like you in consumption front) could save us in future! Thanks for this effective essay. Wish it is read by our energy policy makers too.- Keshava H. Korse
ರಾಜಕೀಯದ ಅಂಧಕಾರದಲ್ಲಿ ನಿಮ್ಮ ಬುಡ್ಡೀ ದೀಪದ ಹಣತೆಯ ಹುಡುಕಾಟ, ಸೀಮೆಣ್ಣೆಯ ಶೂನ್ಯದಿಂದ ಸೃಷ್ಟಿಯಾಗುವ ಬಗೆ ಕೊನೆಗೆ do it yourself ಹಣತೆಯೊಂದಿಗೆ ಪರಿಹಾರಕೊಡುವ ಈ ಕತ್ತಲಿನಲ್ಲಿ ಬೆಳಕಿನ ಹುಡುಕಾಟದ ಕಥೆ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.
ಬತ್ತಿ ಅರಸುತ್ತ ಸೀದಾ ಇಲ್ಲಿಗೆ ಬಂದಿದ್ದರೆ ಒಂದೇನು ಹತ್ತು ಬತ್ತಿ ಕೊಡಬಹುದಿತ್ತು ಮಾಲಾ
'ಏನಿದ್ದರೇನಯ್ಯ ಮಹಾಲಿಂಗ ಪ್ರಭುವೆ, ದಾರಿ ಸುಖವಿಲ್ಲ' ಎಂಬ ಆನುಭಾವವದ ಹಾಡಿನಂತೆ ಏನಿದ್ದರೇನಯ್ಯ… ಬತ್ತಿ ಸರಾಗವಲ್ಲ. ಇನ್ನು ಬತ್ತೀಸ ರಾಗವ ಹಾಡದೆ ಬೇರೆ ದಾರಿ ಎಲ್ಲಿದೆ? ನಿಮ್ಮ ಅನುಭವ ಕಥನ ಓದುವಾಗ ನಾವು ಬಂಡೆ ಹತ್ತುವುದಕ್ಕೆ ಹಗ್ಗ ತರಲು ರಥಬೀದಿಯ ಅಂಗಡಿಗೆ ಹೋಗಿದ್ದಾಗ, ನಾನು ಹಾಸ್ಯಕ್ಕೆ, 'ಇಬ್ಬರನ್ನು ಒಟ್ಟಿಗೇ ನೇಣು ಹಾಕಿದರೂ ತಡೆದುಕೊಳ್ಳುವಷ್ಟು ಬಲವಾಗಿರಬೇಕು' ಎಂದುದಕ್ಕೆ ಅಂಗಡಿಯವರು ನಮ್ಮಿಬ್ಬರನ್ನೂ ಅನುಮಾನದಿಂದ ನೋಡಿದ್ದು ನೆನಪಾಯಿತು!
Priya Ashoka Vardhana, naanu fan illade iralarenadaru, chimni deepavendare hale nenapugala mohaka preethiye sari.Balyadalli ajjimaneyalli uriyuttidda lantern, vidh vidha cimnideepagalu, avibhaktha kutumbada nammashtu sadasyara utada tattegalige nammajji , rathrigalalli chimni deepa ethi hididu melogara badisuttidda aa priya drishya, navu chinnarella godeyalli deepada belakalli mudisuttidda angaiya neralinata, ellavu nenapaythu. Nimma buddideepada hudukatakke krithajne.
ನನಗೆ ತಿಳಿದ ಮಟ್ಟಿಗೆ 60 ದಶಕದ ಅಂತ್ಯದ ವರೆಗೂ ಕೊಡಗಿನಲ್ಲಿ ಮಡಿಕೇರಿಯನ್ನು ಹೊರತು ಪಡಿಸಿದರೆ ಎಲ್ಲ ಮನೆಗಳಲ್ಲೂ ಅವರವರ ಆರ್ಥಿಕ ಸ್ಥಿತಿಗತಿಗೆ ತಕ್ಕುದಾದ ಸೀಮೆಎಣ್ಣೆಯ ದೀಪಗಳದ್ದೇ ಕಾರುಬಾರು. ಸಂಜೆ 5 ಗಂಟೆಯ ನಂತರ ಈ ದೀಪಗಳ ಗಾಜು ಸ್ವಚ್ಛಗೊಳಿಸಿ, ಬತ್ತಿ ಸರಿಪಡಿಸಿ ದೀಪ ಬೆಳಗಿಸಲು ಸಿದ್ಧಪಡಿಸುವ ಕಾಯಕ ಇರುತ್ತಿತ್ತು. ಎಲ್ಲ ನಮೂನೆಯ ದೀಪಗಳಿಗೆ ಅಗತ್ಯವಿದ್ದ ವೈವಿದ್ಯಮಯ ಬತ್ತಿಗಳು ದೊರೆಯುತ್ತಿದ್ದವು. 21ನೆಯ ಶತಮಾನದಲ್ಲಿ ಈ ದೀಪದ ಬತ್ತಿಗಳನ್ನು ಅಂಗಡಿಗಳಲ್ಲಿ ಹುಡುಕಲು ಹೊರಟ ನೀವು ಯಶಸ್ವಿಯಾಗಿದ್ದಿದ್ದರೆ ಅದು ಕೊಲಂಬಸ್ ನ ಆವಿಷ್ಕಾರಕ್ಕೆ ಸಮನಾದ ಆವಿಷ್ಕಾರವಾಗುತ್ತಿತ್ತು.
ಸುಮಾರು ಹತ್ತನೇ ತರಗತಿಯ ವರೆಗೂ ಇದೇ ಕುಪ್ಪಿ ದೀಪದಲ್ಲಿ ಓದಿದ ಮತ್ತು ಗಾಳಿಗೊಡ್ಡಿದ ಸೊಡಿರಿನ ತಾಪತ್ರಯಗಳ ಮಧ್ಯೆ ನಿದ್ರಾ ದೇವಿ ಆವರಿಸಿ ತಲೆ ಕೂದಲು ಕರಕಲಾದಾಗ ಎಚ್ಚರಾದ ನೆನಪು ಮತ್ತೊಮ್ಮೆ ಆಯಿತು. ಚನ್ನಾಗಿದೆ.ನಾರಾಯಣ ಯಾಜಿ
ನಾನೂ ಈಗ ವಾಸಿಸುತ್ತಿರುವ ಹಳ್ಳಿಮನೆಯಲ್ಲಿ ಬುಡ್ಡಿದೀಪ, ಲಾಟೀನು ಎಲ್ಲಾ ಬಳಸಿ ಪರದಾಟ ಅನುಭವಿಸಿದ್ದುಂಟು. ಆದರೆ ಅಷ್ಟು ರಸವತ್ತಾಗಿ ಬಣ್ಣಿಸಲು ಬರಬೇಕಲ್ಲ. 'ದುಡ್ಡು ಸುರಿದರೂ ಜಾಮೀನು ಸಿಕ್ಕದ ರೆಡ್ಡಿಯಂತೆ ಬುಡ್ಡಿ ದೀಪದ ಮಸಿ ಹತ್ತಿಸಿಕೊಂಡೂ ತಮಾಷೆಯೆಂಬಂತೆ ಬರೆಯುವುದೂ ಒಂದು ಕಲೆ. ಆ ಕಲೆಯನ್ನು ಅಳಿಸಿ ಹಾಕಲು ಪೆಟ್ರೋಲಿನಿಂದಲೂ ಸಾಧ್ಯವಿಲ್ಲ. ಅಂದಹಾಗೆ ಈ ಬ್ಲಾಗಿನಲ್ಲಿ ಅಷ್ಟೆಲ್ಲ ಚಿತ್ರಗಳನ್ನು ಹಾಕಬಾರದಿತ್ತೇನೊ. ಕ್ಯಾಮರಾ ಫ್ಲ್ಯಾಶ್ ನಲ್ಲಿ ಅಷ್ಟೊಂದು ಡಿಟೇಲಾಗಿ ಬುಡ್ಡಿದೀಪ ಕಾಣುತ್ತಿದ್ದಾಗ, ಅದನ್ನು ತಡವಿ ಬೀಳಿಸಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಲೇಖಕರ ಪರದಾಟವನ್ನು ಚಾಲಿ೯ ಚಾಪ್ಲಿನ್ ಶೈಲಿಯಲ್ಲಿ ಚಿತ್ರೀಕರಿಸಲು ಕತ್ತಲಲ್ಲಿ ಸಾಧ್ಯವೊ ಎಂದು ಅಭಯ ಸಿಂಹರನ್ನು ಕೇಳಬೇಕಿದೆ.ನಾಗೇಶ ಹೆಗಡೆ
nimma kalpaanegalu tumba majavagive.Odi kushi patte..
ಹಣತೆ, ಸೂರ್ಯನಿಗೆ ಹೇಳಿತಂತೆ….”ನಿನ್ನಂತೆ ಆ ದೊಡ್ಡ ಜಗತ್ತನ್ನು ಬೆಳಗಿಸಲು ನಾನು ಅಶಕ್ತ ನಿಜ….ಆದರೆ ನಿನ್ನ ಗೈರು ಹಾಜರಿಯಲ್ಲಿ ನನ್ನ ಈ ಪುಟ್ಟ ಜಗತ್ತನ್ನು ನಾನು ತಕ್ಕಮಟ್ಟಿಗೆ ಬೆಳಗಬಲ್ಲೆ….” ಅಂತ
ಬುಡ್ಡೀದೀಪ,ಚಿಮಣಿದೀಪ ಅನ್ನುವುದನ್ನು ಓದಿ,ಚಿತ್ರಗಳನ್ನು ನೋಡಿ ವಿಪರೀತ ಖುಷಿಯಾಯಿತು.ಪೆಜತ್ತಾಯರ ಕಮೆಂಟಿಗೆ 1000 likes ನಂದು.ನಿನ್ನೆಯ ಪೇಪರ್ ನಲ್ಲಿ African teens create pee powered generator ಅನ್ನುವ ಸುದ್ದಿ ಓದಿದೆ,ಒಂದು ಲೀಟರ್ ನಷ್ಟು pee ಸಿಕ್ಕರೆ 6 ಘಂಟೆಗಳಿಗೆ ಸಾಲುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತದಂತೆ;)