ಚಕ್ರವರ್ತಿಗಳು ಐದನೇ ಸುತ್ತು
“ಪಾಣೇರು ಸಂಕ ಬ್ರಿಟಿಷರು ಕಟ್ಟಿಸಿದ್ದು. ನೂರಕ್ಕೂ ಮಿಕ್ಕು ವರ್ಷ ಹಳ್ತು. ಅದರ ಉಕ್ಕಿನ ತೊಲೆಗಳೇನು, ರಚನೆಯ ಕಥೆಗಳೆಷ್ಟು, ಅದು ಕಂಡ ಪ್ರವಾಹಗಳು ಎಂಥವು, ಅಪಘಾತಗಳ ವೈವಿಧ್ಯ, ವಾಹನ ಸಾಂದ್ರತೆ, ಜಗಳಗಳ ವಿವರ…” ತಡಿ.. ತಡೀರಿ! ಈ ಪುರಾಣ ಎಷ್ಟೋ ಓದಿದ್ದೇನೆ, ಕೊರತೆಯಾದರೆ ಎಲ್ಲಾದರೂ ಕೇಳಿಕೊಳ್ತೇನೆ. ಆದರೆ ಅದರದೇ ಅಕ್ಕಪಕ್ಕದ ಸ್ತಂಭದಿಂದ ಸ್ತಂಭಕ್ಕೆ ಕರ್ಣರೇಖೆಯನ್ನೆಳೆದಂತೆ, ಆದರೆ ಮೂಲೆಗಳಲ್ಲಿ ಚೂಪು ಬಾರದಂತೆ ತೀವ್ರ ವಕ್ರ ತಿರುವುಕೊಡುತ್ತಾ ನೀವು ದೀರ್ಘ ರೇಖೆ ಎಳೆಯಬಲ್ಲಿರಾ? ಅದೂ ಕಣ್ಣು ಮುಚ್ಚಿ, ಸರಾಸರಿ ಅರವತ್ತು ಕಿಮೀ ವೇಗದಲ್ಲಿ ಧಾವಿಸುವ ಬೈಕಿನಲ್ಲಿ ಕುಳಿತು? ಅದೃಷ್ಟವಶಾತ್ ಈ ಸಾಧನೆ ನನ್ನದೆಂದು ಹೇಳಿಕೊಳ್ಳಲು ನಾನು ಬದುಕುಳಿದಿದ್ದೇನೆ. ಹೌದು, ಬಹುಶಃ ಎರಡೋ ಮೂರೋ ಕಾಲ್ಪನಿಕ ಕರ್ಣರೇಖೆಯೆಳೆದು, ಹಾಗೂ ಹೀಗೂ ವಾಸ್ತವವನ್ನು ಮನಗಂಡು, ಬ್ರೇಕ್ ತುಳಿದು ಬೈಕ್ ನಿಲ್ಲಿಸುವುದರೊಳಗೆ ಹೆದರಿ, ಬೆವೆತು ಚಂಡಿಯಾಗಿದ್ದೆ.
ಇದು ನಿನ್ನೆ ಮೊನ್ನೆಯಲ್ಲ, ಸುಮಾರು ಮೂವತ್ತು ವರ್ಷಗಳ ಹಿಂದಿನ ಕಥೆ (೧೭,೧೮-೩-೧೯೮೫). ಆಗ ನನ್ನ ಹಿಂದೆ ಕುಳಿತಿದ್ದ ಬಾಲಣ್ಣನಿಗೆ ಜೀವನ ನಾಟಕದ ಹೀಗೊಂದು ಕೊನೆಯ ದೃಶ್ಯದ ಪೂರ್ಣ ಅರ್ಥಗ್ರಹಿಸಲು ಆಗದಿದ್ದರೂ ಬೊಬ್ಬೆ ಹೊಡೆದಾಗಿತ್ತು. ಹೀಗೂ ಹಾಗೂ ಜೋಲಿ ಹೊಡೆದ ಬೈಕ್ ಜಾರದೇ ತೊಲೆಗಳನ್ನು ಘಟ್ಟಿಸದೇ ನಮ್ಮ ಕೂದಲೂ ಕೊಂಕದೆ ನಿಂತಾಗ ನಿಜಕ್ಕೂ ನಾವು ಬದುಕಿರುವುದನ್ನು ಗ್ರಹಿಸಲು ಒಂದು ಮಿನಿಟು ಬೇಕಾಯ್ತು. ಹೆಚ್ಚು ಕಡಿಮೆ ಇಪ್ಪತ್ನಾಲ್ಕು ಗಂಟೆಯ ಸತತ ಸವಾರಿ, ಅದೂ ದಾರಿಯೇ ಅಲ್ಲದಲ್ಲಿ ನುಗ್ಗಿ ನೂರಿ ಬಂದ ಸಾಹಸಕ್ಕೊಂದು ಮುಕ್ತಾಯ ಹಾಡಲು ಇನ್ನೇನು ಅರ್ಧ ಗಂಟೆ ದಾರಿ (ಮಂಗಳೂರಿಗೆ) ಎನ್ನುವ ಪ್ರಶಾಂತ ಹೊತ್ತಿನಲ್ಲಿ ಈ ಹೊಯ್ದಾಟ. ಶ್ರಮ, ನಿದ್ದೆಗೇಡಿತನ, ದೀರ್ಘ ಓಟದ ಯಾಂತ್ರಿಕತೆಯಲ್ಲಿ ಬರಿಯ ಹೆದ್ದೀಪದ ಬೆಳಕಿನ ವರ್ತುಲವಷ್ಟೇ ಲಕ್ಷ್ಯ ಎಂದುಕೊಂಡಿದ್ದ ನನಗೆ ಒಮ್ಮೆಲೇ ಎರಡೂ ಪಕ್ಕದಲ್ಲಿ ಸಂಕದ ತೊಲೆಗಳ ಮರುಕಳಿಸುವ ಏಕರೂಪ ಬಂದು ಕನಸಿನಲ್ಲಿ ತೇಲಿಹೋಗಿದ್ದಿರಬೇಕು! ಅಪರಾತ್ರಿ ಮೂರೂವರೆ ನಾಲ್ಕು ಗಂಟೆಯ ಸಮಯ. ಸೇತುವೆಯ ಕೊನೆಯಲ್ಲಿ ತಲೆ ಒಡೆದು, ನರದಲ್ಲಿ ನೇತುಬಿದ್ದ ಒಂಟಿ ಕಣ್ಣಿನಂತಿದ್ದ ಬೀದಿದೀಪ ಮಂಕು ಬೆಳಕು ಚೆಲ್ಲುತ್ತ, ಮಂಜಿನ ಹನಿ ಉದುರಿಸುತ್ತಿದ್ದದ್ದು ಬಿಟ್ಟರೆ ದಾರಿ, ಸಂಕದಲ್ಲೆಲ್ಲೂ ವಾಹನ ಸಂಚಾರವಿಲ್ಲ, ಜೀವಸ್ಪಂದನವೇ ಇಲ್ಲ. ಬೈಕನ್ನು ಕರೆಗೆ ನೂಕಿ, ನೀರಂಡೆ ತೆಗೆದು ಎರಡೆರಡು ಬಾರಿ ಕಣ್ಣಿಗೆ ನೀರು ಹೊಡೆದು, ಮುಖ ತೊಳೆದು, ಒಂದಷ್ಟು ಕುಡಿದ ಮೇಲೆ ಬುದ್ಧಿ ಸ್ತಿಮಿತಕ್ಕೆ ಬಂತು. ನಿಧಾನಕ್ಕೆ ಸವಾರಿ ಮುಂದೆ ಹೋಗಿ, ಕಿಮೀ ಆಚೆ ಯಾವುದೋ ಮರದ ಕೆಳಗೆ ಕಾದು ನಿಂತಿದ್ದ ಇತರರನ್ನು ಕೂಡಿಕೊಂಡೆವು. ತಂಡದ ಮುಂಚೂಣಿಯಲ್ಲಿದ್ದ ಚಾರ್ಲ್ಸ್-ಶರತ್ ಜೋಡಿಯೂ ತುಸು ಹಿಂದೆ ಅನುಸರಿಸಿದ್ದ ನಾರಾಯಣ್-ಇಲ್ಯಾಸ್ ಜೋಡಿಯೂ ನಿದ್ದೆದೂಗುವ ಕಣ್ಣುಗಳನ್ನು ಬಲವಂತದಿಂದ ಬಿಡಿಸಿ ಹಿಡಿದು ನಿಂತಿದ್ದರು. ಬಳಲಿ ಬೆಂಡಾದ ಸೊಂಟಕ್ಕೆ ಕೈಕೊಟ್ಟು, ಆಕಳಿಸಲೂ ಶಕ್ತಿಯುಳಿಯದೆ ದುರ್ಬಲ ಸದ್ದು ಮಾಡಿ ನಿಂತಿದ್ದರು. ತಂಡದ ಬೆಂಗಾವಲಿನಂತೆ ಬರಬೇಕಿದ್ದ ನಮ್ಮ ನಿಧಾನವನ್ನು ತುಸು ಆತಂಕದಲ್ಲೇ ಕಾದು ನಿಂತಿದ್ದರು. ನಾನು ಸಣ್ಣದರಲ್ಲಿ ಕತೆ ಹೇಳಿದೆ. ಮತ್ತೆ ಅನಿವಾರ್ಯತೆ ಮನಗಂಡು ಎಲ್ಲರೂ ಅಲ್ಲೇ ದಾರಿ ಬದಿಯಲ್ಲಿ ಅನಾಥ ಪ್ರೇತಗಳಂತೆ ಕಾಲರ್ಧ ಗಂಟೆ ಮೈಚಾಚಿದೆವು; ಆಕಾಶವೇ ಚಪ್ಪರ, ಭೂತಾಯೆ ಮಂಚ! ಆದರೇನು ಮನದ ವ್ಯಾಪಾರದಲ್ಲಿ ಚಕ್ರ ಜೋಡಿಗಳು ಓಡುತ್ತಲೇ ಇದ್ದವು. ಬರಿಯ ಮೂರಲ್ಲ…
ಆರು ದ್ವಿಚಕ್ರಿಗಳು, ಹನ್ನೊಂದು ಮಂದಿಯ ತಂಡ. ಏಕೈಕ ಬಜಾಜ್ ಸ್ಕೂಟರ್ – ಸವಾರಿಯಲ್ಲಿ ನಿಮಗೆ ಹಿಂದಿನ ಕಥನದಲ್ಲೇ ಪರಿಚಿತನಾದ ಮಹಾರಥಿ – ರಾಮಮೋಹನ್ ಉರುಫ್ ರಾಂಪಣ್ಣ [ಈತ ಒಂದೆರಡು ವರ್ಷಗಳ ಹಿಂದೆ ಕಾಲವಶರಾದರು], ಬೆನ್ನಿಗೆ ಇಲ್ಯಾಸ್. ನನ್ನ ಯೆಜ್ದಿಗೆ ಸಹವಾರ ಬಾಲಣ್ಣ. ಅರವಿಂದರದು ಯೆಜ್ದಿಯಲ್ಲೂ ಹಳೆ ತಲೆಮಾರು – ಜಾವಾ. ಅವರಿಗೋ ಆ ಹಳತರ ಮೇಲೆ ವಿಪರೀತ ಮೋಹ. “ಜಾವಾ ಪೋವಾ”ಂತ ಕೆಣಕಿದವರಿಗೆ “junkoos ಇಂಡಿಯಾ ಪ್ರೈವೇಟ್ ಲಿಮಿಟೆಡ್” ಎಂದು ತನ್ನನ್ನೇ ತಮಾಷೆ ಮಾಡಿಕೊಂಡು, ಯಾವುದೇ ಸವಾಲನ್ನು ಉತ್ತರಿಸಿ ತೋರಿಸಿದ ಕಲಿ. ಇವರಿಗೆ ಗ್ರೆಗರಿ ಜೋಡಿ. ಉಳಿದ ಮೂರು ರಾಜದೂತ್ ಬೈಕ್ಗಳಲ್ಲಿ ಐದು ಜನ. ಕೆಲವೇ ಸಮಯದ ಹಿಂದಷ್ಟೇ ಪ್ರಜಾವಾಣಿಯ ಮಂಗಳೂರು ಪ್ರತಿನಿಧಿಯಾಗಿ ಬಂದಿದ್ದ ಜಿ.ಪಿ ಬಸವರಾಜು ಬಯಲು ಸೀಮೆಯವರು, ಮಲೆನಾಡಿಗಿನ್ನೂ ಪೂರ್ಣ ಕಣ್ಣು ತೆರೆಯದವರು. ನನ್ನ ಮಾತಿಗೆ ಮರುಳಾದರೋ ಅವರದೇ ಮೂರ್ಖತನಕ್ಕೆ ಬಲಿಯಾದರೋ ತಿಳಿದಿಲ್ಲ. ತನ್ನಷ್ಟೂ ಪರಿಸ್ಥಿತಿಯ ತಿಳಿವಿರದ ಪತ್ನಿ ಶಾಂತಾರನ್ನು ಬೆನ್ನಿಗೇರಿಸಿಕೊಂಡು ಬಂದಿದ್ದರು. ಚಾರ್ಲ್ಸ್, ಶರತ್ ಬೈಕ್ ಮೈತ್ರಿ ಕೂಟ ಒಂದರ ಮೇಲಿದ್ದರೆ, ನಾರಾಯಣ ಭಟ್ ಮಾತ್ರ ಒಂಟಿ.
ಹತ್ತು ವರ್ಷಗಳ ಹಿಂದೊಮ್ಮೆ ನಾನು ಸುಬ್ರಹ್ಮಣ್ಯ ವಲಯದಲ್ಲಿ ಇನ್ನೊಂದೇ ತಂಡ ಕಟ್ಟಿ ಮಡಿಕೇರಿಯಿಂದ ಚಾರಣಕ್ಕಿಳಿದದ್ದು ನಿಮಗೆ ತಿಳಿದೇ ಇದೆ. [ಇಲ್ಲವಾದವರು ಇಲ್ಲೇ ಚಿಟಿಕೆ ಹೊಡೆದು – ಗಡಿಬಿಡಿಯಲ್ಲಿ ಕುಮಾರಮುಡಿಗೆ] ಆಗ ಸುಬ್ರಹ್ಮಣ್ಯದ ದಿಕ್ಕಿನ ಅಂದಾಜು ಮಾತ್ರ ಇಟ್ಟುಕೊಂಡು ಹೊರಟಿದ್ದೆ. ಮಡಿಕೇರಿಯ ಎತ್ತರದಿಂದ ಸುಬ್ರಹ್ಮಣ್ಯದ ತಗ್ಗಿಗೆ ಇಳಿದಿದ್ದೆ. ಈಗ ಸರ್ವೇಕ್ಷಣ ಇಲಾಖೆಯ ನಕ್ಷೆ ಇತ್ತು. ಆ ವಲಯದಲ್ಲೇ ಮಸಕು ಜಾಡಾಗಿ ಉಲ್ಲೇಖಗೊಂಡ ‘ತಲೆನೂರ್ಮಲೆ ಘಾಟಿ’ ಸ್ಪಷ್ಟ ಚಿತ್ರವೂ ಇತ್ತು. ಈ ಬಾರಿ ಆ ಘಟ್ಟ ಭಾಗವನ್ನು ಬೈಕ್ ನುಗ್ಗಿಸಿ ಏರುವ ಸಾಹಸೀ ಯೋಜನೆ ನಮ್ಮದು.
ಬೆಳಗ್ಗೆ ಐದಕ್ಕೆ ಮಂಗಳೂರು ಬಿಟ್ಟು ಪುತ್ತೂರು, ಕುಂಬ್ರಕ್ಕಾಗಿ ಬೆಳ್ಳಾರೆ – ಸುಬ್ರಹ್ಮಣ್ಯ ದಾರಿ ಹಿಡಿದೆವು. ಬೆಳ್ಳಾರೆಗೂ ಒಂದು ಕಿಮೀ ಮೊದಲು ಎಡದ ಕವಲು ದಾರಿ ಹಿಡಿದು ನನ್ನ ಚಿಕ್ಕಮ್ಮನ ಮನೆ – ಮಠತಡ್ಕಕ್ಕೆ ನಮ್ಮ ಯೋಜಿತ ದಾಳಿ ನಡೆಯಿತು. ಚಿಕ್ಕಪ್ಪ ಕೇಶವ ಭಟ್ಟರಿಗೆ (ಇಂದು ಅವರು ನಮ್ಮನ್ನಗಲಿ ಎರಡು ವರ್ಷಗಳೇ ಸಂದಿವೆ) ಎಲ್ಲಾ ಒಳ್ಳೆಯದರಲ್ಲೂ ಉತ್ಸಾಹ ಜಾಸ್ತಿ. ಆದರ, ಅತಿಥಿ ಸತ್ಕಾರಗಳಲ್ಲಿ ಚಿಕ್ಕಮ್ಮ – ಸೀತೆಯೂ ಹಿಂದೆ ಬಿದ್ದದ್ದಿಲ್ಲ. ನನಗೆ ನಿತ್ಯದಲ್ಲಿ ‘ಸೌಹಾರ್ದಯುತ ಭೇಟಿ’ ಎಂಬ ರೀತಿಯಲ್ಲಿ ಯಾರಲ್ಲಿಗೆ ಹೋಗುವುದೂ ಅಷ್ಟಾಗಿ ಹಿಡಿಸುವುದಿಲ್ಲ. ಮತ್ತೆ ಅಲ್ಲೆಲ್ಲಾ ಸಾಂಪ್ರದಾಯಿಕವಾಗಿ ನಡೆಯುವ ಮುಂಜಿ, ಮದುವೆ, ಪೂಜೆ, ಶ್ರಾದ್ಧಗಳಲ್ಲಿ ನನಗೇನೂ ವಿಶ್ವಾಸವಿಲ್ಲದಿದ್ದರೂ ಅನುಕೂಲವಾದಾಗ ಸ್ನೇಹ ಸಂಗಮ ಎನ್ನುವ ನೆಲೆಯಲ್ಲಿ ಭಾಗಿಯಾಗುವುದು ಉಂಟು. ಆದರೆ ನಾನೋ ನನ್ನ ಯಾವುದೇ ತಂಡವೋ ಅನ್ಯ ಯೋಜನೆಯ ಅಂಗವಾಗಿ ಆ ಸಂಬಂಧಿಗಳ ನೆಲೆಯ ಸಮೀಪದಲ್ಲಿ ಹಾದು ಹೋಗುವ ಸಂದರ್ಭ ಬಂದಾಗ, ದೇವಕಿ ಹೇಳುವಂತೆ ‘ಐಲು ಕೆದರಿಕೊಳ್ಳುತ್ತದೆ.’ ನನ್ನ ಬಾಲ್ಯವನ್ನು ಸಮೃದ್ಧಗೊಳಿಸಿದ ಜನ ಮತ್ತು ಜಾಗಗಳನ್ನು ಜೊತೆಗಾರರಿಗೆ ತೋರಿಸುವಲ್ಲಿ ನನಗೆಲ್ಲಿಲ್ಲದ ಸಂಭ್ರಮ. ನಮಗೆ ಚಾ ನೀರು, ನಾಲ್ಕು ಬಾಳೆ ಹಣ್ಣು ಸಿಕ್ಕಿದರೂ ಸಾಕು, ಆ ಸ್ಥಳವಂದಿಗರಿಗೆ ಅನಾನುಕೂಲವಾಗಬಾರದು ಎಂಬ ಎಚ್ಚರ ನಾನೆಂದೂ ಕಳೆದುಕೊಂಡಿಲ್ಲ. ಹಾಗೇ ಯೋಜನಾ ಹಂತದಲ್ಲೇ ನಾವು ಬೆಳ್ಳಾರೆ ದಾಟಬೇಕೆನ್ನುವಾಗ ಚಿಕ್ಕಮ್ಮನನ್ನು ಸಂಪರ್ಕಿಸಿದ್ದೆ. ಸೀತೆ ತೀರಾ ಸಹಜವಾಗಿ “ಎಲ್ಲ ಬೆಳಿಗ್ಗೆ ತಿಂಡಿಗೇ ಇಲ್ಲಿಗೆ ಬನ್ನಿ. ಹೆಚ್ಚೇನೂ ಮಾಡುವುದಿಲ್ಲಪ್ಪಾ, ಖಂಡಿತಾ ಬನ್ನಿ” ಎಂದೇ ಹೇಳಿಸಿಕೊಂಡದ್ದೂ ಆಗಿತ್ತು.
ಹೂವಿನಂಥ ಇಡ್ಲಿ, ಜೊತೆಗೆ ಸಮಗಾತ್ರದ ಬೆಣ್ಣೆ, ಹರಳುಗಟ್ಟಿದ ಮನೆಜೇನು, ಹಸಿ ತೆಂಗಿನ ಚಟ್ನಿ ಒಂದು ಸುತ್ತು. ಶುದ್ಧ ತುಪ್ಪದಲ್ಲೇ ಮೂಡಿ ಬಂದ ಕೇಸರಿ ಬಾತ್, ಕಳಿತ ಕದಳೀಫಲ, ಕೆನೆತೆಗೆಯದ ಹಾಲಿನ ಅಪ್ಪಟ ಕಾಫಿ. ಸಾಲದ್ದಕ್ಕೆ ಎರಡು ತಿನ್ನುವಲ್ಲಿ ನಾಲ್ಕು ಹಿಡಿಸುವ ಉಪಚಾರಕ್ಕೆ ಮನಸೋತು ಕೆಲವರಿಗಾದರೂ ಅಲ್ಲೇ ಮಧ್ಯಾಹ್ನದ ಊಟಕ್ಕೂ ಉಳಿದುಬಿಡಬೇಕೆಂಬ ಬಯಕೆ ಮೂಡಿದ್ದರೆ ಆಶ್ಚರ್ಯವಿಲ್ಲ. [ಕಜೆಕಾರು ನೇಮಿರಾಜ ಕೊಂಡೆ ಎಂಬುವವರು ನನ್ನ ಪುಸ್ತಕದ ಯಥಾ ನಕಲು ಮಾಡಿದ ಘಟನೆಯನ್ನು ಈ ಹಿಂದೆ ಹೇಳಿದ್ದೇನೆ. ಅದರಲ್ಲಿ ಈ ಆತಿಥ್ಯವನ್ನು ಯಥಾವತ್ತು ಅವರು ಬೆಳ್ತಂಗಡಿಯ ಅವರ ಸಂಬಂಧಿಕರಲ್ಲಿ ಅನುಭವಿಸಿದಂತೆ ನಕಲು ಮಾಡಿದ್ದರು!]
ಮುಂದೆ ಪಂಜ ಗುತ್ತಿಗಾರಿಗಾಗಿ ಹರಿಹರ ಪಳ್ಳತ್ತಡ್ಕ ತಲಪಿದಲ್ಲಿಗೆ ಡಾಮರು ದಾರಿ ಮುಗಿದು ರಂಗ ಪ್ರವೇಶಿಸಿದಂತಾಯ್ತು. ಸ್ವಲ್ಪ ದೂರ ಜಲ್ಲಿ ಹಾಸಿದ ಮಣ್ಣುದಾರಿ. ಸೇತುವೆಯಿಲ್ಲದ ಪರ್ಚೆ ಹೊಳೆಗೆ ಇಳಿದು ದಾಟಿದೆವು. ಆ ಮೇಲೆ ಜಲ್ಲಿಯನ್ನೂ ಕಾಣದ ದಾರಿ ಸವೆಸಿ, ಸಿರಕಲ್ನ ‘ಕಡಮಕಲ್ಲು ರಬ್ಬರ್ ಎಸ್ಟೇಟ್’ ಗೇಟು ಮುಟ್ಟಿದಾಗ ದಾರಿಯೇ ಮುಗಿದಿತ್ತು! ಗೇಟು ತೆರೆಸಿ, ಮುಂದಿನ ದಾರಿ ತೋರಲು ತೋಟದ ಮ್ಯಾನೇಜರರನ್ನು ಕಂಡೆವು. ಅವರು ಅಲ್ಲೇ ಮಡಿಕೇರಿಗೆ ದಾರಿಯಿಲ್ಲ ಎಂದರು. ಮರುವಿಚಾರಣೆಯಲ್ಲಿ ತೋಟದೊಳಗೆ ಕಾಲ್ದಾರಿ ಮಾತ್ರ ಇದೆ ಎಂದರು. ಮತ್ತೂ ಪಟ್ಟು ಬಿಡದಾಗ ತೋಟದ ದಾರಿ ಮತ್ತು ಕಾಡುದಾರಿಯ ನಡುವಣ ಸಂಪರ್ಕ ಕಡಿದಿದೆ ಎಂದರು. ಕೊನೆಗೆ ಕಾಡುದಾರಿ ತೀರಾ ದುಃಸ್ಥಿತಿಯಲ್ಲಿದೆ. ಹಾಗೂ ಹೋಗುವುದೇ ಆದರೆ ಮಧ್ಯಾಹ್ನದೊಳಗೆ ಸೋತು ಮರಳುವುದು ಖಾತ್ರಿ ಎಂದರು. ಅಷ್ಟಾಗಿಯೂ ನಮ್ಮ ಛಲ ಕಂಡು ಅವರ ತೋಟದೊಳಗೆ ಹಾದು ಹೋಗಲು ಅನುಮತಿ, ಕಾಡುದಾರಿ ಮುಟ್ಟಿಸಲು ಮಾರ್ಗದರ್ಶಿ ಮತ್ತು ತುಂಬಾ ಶುಭಾಶಯ ಕೊಟ್ಟು ಬೀಳ್ಕೊಂಡರು.
[ಈ ಎಲ್ಲಾ ನಿರಾಕರಣ ಮತ್ತು ಆ ವಲಯದ ಸಾಮಾಜಿಕ ಹಿಂದುಳಿಯುವಿಕೆಯಲ್ಲಿ ಆ ಭಾರೀ ತೋಟದ ಯಜಮಾನರುಗಳ ನಿಗೂಢ ಯೋಜನೆಯಿದೆ ಎಂದು ನನಗೆ ಹಿಂದೆ ಬಂದ ಮೇಲೆ ತಿಳಿಯಿತು. ತೋಟದ ಆಡಳಿತ ಕೇಂದ್ರ ಮತ್ತು ಮಾರ್ಗ ಸಂಪರ್ಕ ದಕ ಜಿಲ್ಲೆಗೆ ತಗುಲಿದಂತಿದ್ದರೂ ಆಡಳಿತಾತ್ಮಕವಾಗಿ ಅದು ಕೊಡಗು ಜಿಲ್ಲೆಗೆ ಸೇರಿದ್ದಂತೆ. (ಯಳನೀರು ಎಂಬೊಂದು ಬೆಳ್ತಂಗಡಿ ತಾಲೂಕಿಗೆ ಸೇರಿದ ಕುಗ್ರಾಮದ್ದು ಇದೇ ಕಥೆ, ಸ್ವಲ್ಪ ಉಲ್ಟಾ. ಘಟ್ಟ ಶ್ರೇಣಿಯ ಉನ್ನತಿಯಲ್ಲಿರುವ ಈ ಹಳ್ಳಿಯ ಆಡಳಿತ ದಕ ಜಿಲ್ಲೆಯದ್ದು, ಸಂಪರ್ಕಾನುಕೂಲ ಚಿಕ್ಕಮಗಳೂರು ಜಿಲ್ಲೆಯದ್ದು) ಕಣಿವೆಯ ನಿತ್ಯದ ಅಂಚೆಯೂ ಸೇರಿದಂತೆ ಎಲ್ಲಾ ಆಡಳಿತಾತ್ಮಕ ಸಂಬಂಧಗಳನ್ನು ಅದು ತೀರಾ ಅನಾನುಕೂಲವಾದರೂ ಕೊಡಗಿನೊಡನೆ ಉಳಿಸಿಕೊಂಡು, ಅಭಿವೃದ್ಧಿಗೆ ಕೋರದಿರುವುದರ ಹಿಂದೆಯೂ ಅದೇ ನಿಗೂಢ ಯೋಜನೆ ಕೆಲಸ ಮಾಡುತ್ತಿದ್ದಿರಬೇಕು. ಕೆದಕಿ ಕೇಳಿದಾಗ ತಿಳಿಯಿತು, ನಾಗರಿಕ ಸವಲತ್ತುಗಳು ಹೆಚ್ಚಿದರೆ ಕೂಲಿಯಾಳುಗಳು ‘ಕಲ್ತು ಬಿಡ್ತಾರೆ.’ ಮೊನ್ನೆ ಮೊನ್ನೆ ದಿಲ್ಲಿಯ ದೂರದಿಂದ ಮಂಗಳೂರಿಗೆ ಬಂದು, ಭಾರತದ ಇಂದಿನ ಶಿಕ್ಷಣ ವ್ಯವಸ್ಥೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಅದ್ಭುತವಾಗಿ ಒಂದೂವರೆ ಗಂಟೆಯ ಮಾತಾಡಿದ ಡಾ| ಅನಿಲ್ ಸದ್ಗೋಪಾಲ್ ಸಖೇದ ದಾಖಲಿಸಿದ ಮಾತೂ ಇಂಥದ್ದೇ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾರತದ ಎಲ್ಲಾ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಲಭಿಸುವ ಮಾತು ಬರೆದರು. ಆದರೆ ತಮ್ಮ ಔದ್ಯೋಗಿಕ ಸಾಮ್ರಾಜ್ಯಕ್ಕೆ ವಿನೀತ ಕೂಲಿಗಳ ಕೊರತೆಯಾಗುವ ಅಪಾಯ ಕಂಡು ಅಂದೇ ಅಘೋಷಿತ ಟಾಟಾ-ಬಿರ್ಲಾ ಯೋಜನೆ ಗುಪ್ತ ಗಾಮಿನಿಯಾಗಿ ಜ್ಯಾರಿಗೆ ಬಂತು. ಸ್ವಾತಂತ್ರ್ಯ ಬಂದು ಒಂದು ದಶಕ ಬಿಡಿ, ಆರು ದಶಕಗಳೇ ಕಳೆದ ಮೇಲೂ ನಾವು ಅಂಬೇಡ್ಕರ್ ವಿಗ್ರಹಾರಾಧನೆಯಿಂದ ಮುಂದೆ ಹೋಗಿಯೇ ಇಲ್ಲ! ಇನ್ನೂ ಚಂದವೆಂದರೆ (ಅನಿಲ್ ಅವರದೇ ಮಾತು) ಕೇಂದ್ರ ಸರಕಾರದಲ್ಲಿ ಇಂದು ವಿದ್ಯಾ ಇಲಾಖೆಯೇ ಇಲ್ಲ. ಇರುವುದು ಮಾನವಸಂಪನ್ಮೂಲ ಇಲಾಖೆ. ಹಿಂದೆ ಪಾರತಂತ್ರ್ಯದಲ್ಲಿ ಗುಮಾಸ್ತರ ಸೈನ್ಯ ಕಟ್ಟಲು ಮೆಕಾಲೆ ಒಂದು ಶಿಕ್ಷಣ ಸೂತ್ರ ಕೊಟ್ಟ. ಇಂದು ಸ್ವಾತಂತ್ರ್ಯದ ಉತ್ತುಂಗದಲ್ಲಿ ನಿಂತ ನಾವು ಅದನ್ನೇ ವ್ಯಕ್ತಿತ್ವವನ್ನು ಪರಭಾರೆ ಮಾಡುವ ಸೂತ್ರಕ್ಕೇ ಹೊಂದಿಸಿಕೊಂಡಿದ್ದೇವೆ! ಇಲ್ಲಿರುವುದು ಸುಮ್ಮನೆ, ಅಮೆರಿಕದಲ್ಲಿದೆ ನಮ್ಮನೆ! ಹಾಗಿರುವಾಗ ಮೂವತ್ತು ವರ್ಷದ ಹಿಂದಿನ ಒಂದು ಪುಟ್ಕೋಸೀ ಎಸ್ಟೇಟಿನ ಕುರಿತು ಹೇಳಲು ನಾನು ಯಾರು! ಪ್ಯಾರ್ ಸೆ ಲಬೋ ಜೋರ್ ಸೆ ಲಬೋ ಭಾರತ್ ಮಾತಾ ಕೀ ಜೈ]
ನಾರಾಯಣ ಭಟ್ಟರು ಅತ್ಯುತ್ಸಾಹದಲ್ಲಿ ಮಾರ್ಗದರ್ಶಿಯನ್ನು ಬೆನ್ನಿಗೇರಿಸಿಕೊಂಡು ಹೊರಟೇಬಿಟ್ಟರು. ಬಂಗ್ಲೆ ಅಂಗಳದಿಂದ ರ್ಯಾಲೀ ಸ್ಪಿರಿಟ್ಟಿನಲ್ಲಿ ಬೈಕ್ ಎಬ್ಬಿಸಿದರು ರ್ರೊಂಯ. ಹಾಗೇ ದರೆ ಏರುವ ಕಾಫೀ ಗಿಡಗಳ ಒತ್ತಿನ ಕಾಲುದಾರಿಗೆ ನುಗ್ಗುತ್ತಾ ಎರಡನೇ ಗಿಯರಿನಲ್ಲಿ ಪೂರ್ಣ ಶಕ್ತಿ ಕೊಟ್ಟಿದ್ದರು. ಆದರೆ ಸಡಿಲ ಮಣ್ಣು, ತರಗೆಲೆ ರಾಶಿ ಮತ್ತು ಏರಿನ ತೀವ್ರತೆ ಅಂದಾಜಿಸಿದ ತಪ್ಪುಗಳೆಲ್ಲ ಸೇರಿಕೊಂಡಿತು. ಇಪ್ಪತ್ತಡಿ ಏರುವಲ್ಲೇ ಬೈಕ್ ಸೋತು, ದಮ್ಮುಗಟ್ಟಿ ಊಹುಂ ಊಹುಂ ಹೇಳುವಾಗ ಗಡಿಬಿಡಿಯಲ್ಲಿ ಇಂಜಿನ್ನನ್ನು ಮೊದಲ ಗಿಯರಿಗೆ ಇಳಿಸಬೇಕಾದವರು ತಟಸ್ಥ ಸ್ಥಿತಿಗೆ ನೂಕಿ ಬಿಟ್ಟರು. ಮತ್ತೆ…
ರಾಜದೂತ ೧ ನಾಣ ಭಟ್ಟ ೨ ಅಂದು ಬಂದದ್ದೊಂಟಿ (೧ = ಬೈಕ್, ೨ = ನಾರಾಯಣ ಭಟ್), ರಾಜದೂತ ೩ ಬೆನ್ನಿಗಂಟೆ ದೌಡು ಕಿತ್ತರ್ಜಂಟಿ (೩ = ಮಾರ್ಗದರ್ಶಿ), ಬೆಟ್ಟದೋರೆ ದಿಟ್ಟ ಜಾಡು ಮರೆಯುವಂಥದ್ದಲ್ಲ . ಸಟ್ಟನೇರಿ ಜರ್ರ ಜಾರಿ ಹಿಂದೆ ಬಿದ್ದರೆಲ್ಲ ಮತ್ತೆ ಗೊತ್ತಲ್ಲ, ಪಟ್ಟಿ ದಾರಿಯಲ್ಲಿ ಚಾರ್ಲ್ಸ್ ಕಥೆ – ತದ್ವತ್ತು. ಬೈಕ್ ಏರಿದ್ದು ಹತ್ತು ಮಾರಾದರೆ ಹಿಂದೆ ಜಾರಿದ್ದು ಇಪ್ಪತ್ತು. ಮುಂದಿನ ಬಿರಿ ಒತ್ತಿದ್ದಕ್ಕೆ ಆ ಚಕ್ರ ಅಡ್ಡಾದಿಡ್ಡಿ ಎಳೆಯಿತು. ಕಾಲಗಲಿಸಿ ಕೊಡುವುದಕ್ಕೆ ಗಟ್ಟಿ ನೆಲವೇ ಸಿಕ್ಕಲಿಲ್ಲ. ಅತ್ತ ಭಟ್ಟ, ಇತ್ತ ದೂತ, ನಡುವಿನಲ್ಲಿ ರಾಜದೂತ (ಬೈಕ್)! ಎದ್ದ ದೂಳು, ಹೊಗೆ ಶಾಂತವಾದಾಗ ಲೆಕ್ಕ ತೆಗೆದೆವು, ಮ್ಯಾನೇಜರನ ಶುಭಾಶಯದ ಪೂರ್ಣಫಲ ಪ್ರಾಪ್ತಿಯಾಗಿತ್ತು. ಯಾರಿಗೇನೂ ಆಗಿರಲಿಲ್ಲ.
ಮಹಾರಥಿ ರಾಂಪಣ್ಣ ಇಲ್ಯಾಸನನ್ನು ಭಟ್ಟರಿಗೆ ಉಳಿಸಿ, ಗಾಬರಿಗೆಟ್ಟಿದ್ದ ಮಾರ್ಗದರ್ಶಿಯನ್ನು ತನ್ನ ಬೆನ್ನಿಗೇರಿಸಿಕೊಂಡರು. ಇವರ ಭಾರಕ್ಕೆ ಜಾರುವ ಮಣ್ಣು ಚರಂಡಿಯಾಯ್ತು, ತಡೆಯುವ ಕೋಲು ಹುಡಿಯಾಯ್ತು. ಏರು ಏನೂ ಅಲ್ಲವೆಂಬಂತೆ ಸ್ಕೂಟರ್ ಮುಂದಿನ ಹಿಮ್ಮುರಿ ತಿರುವಿನಲ್ಲಿ ಮೇಲಿನ ಮಜಲಿಗೇರಿ ಕಣ್ಮರೆಯಾಯ್ತು. ಇಲ್ಯಾಸ್ ತನ್ನ ಅದೃಷ್ಟವನ್ನು ಹಳಿದುಕೊಂಡು, ಭಟ್ಟರ ಬೈಕ್ ನೂಕುತ್ತಾ ಮೇಲೆ ದಾಟಿದರು. ಉಳಿದ ಬೈಕುಗಳು ಹಿಂಬಾಲಿಸಿದವು. ಕಾಲ್ದಾರಿಯ ಕಲ್ಲು, ಕೋಲುಗಳ ಮೇಲೆ ಅನನುಭವದ ತೊನೆದಾಟ ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ. ಹೆಚ್ಚು ಕಡಿಮೆ ಎಲ್ಲರೂ ಸಹವಾರಿ ಎಂಬ ಹೊರೆಯನ್ನು ಸ್ವಲ್ಪ ಹಿಂದೆಮುಂದೆ ಇಳಿಸಿ, ಆಗೀಗ ಅವರ ನೂಕುಬಲವನ್ನೂ ಬಳಸಿ, ನಾಲ್ಕೆಂಟು ಹಿಮ್ಮುರಿ ತಿರುವುಗಳಲ್ಲಿ ತೋಟದ ಮೇಲಂಚನ್ನು ಸೇರಿದೆವು.
ತೋಟದ ಕಾಲ್ದಾರಿಗೂ ಕಾಡಿನ ಸವಕಲು ಜಾಡಿಗೂ ನಡುವೆ ಎರಡು ಮೀ ಎತ್ತರದ ದರೆ. ಅತ್ತಿತ್ತ ಹುಡುಕಿ ಕಾಡುಕಲ್ಲು ಒಟ್ಟಿ ದರೆಯ ನೆತ್ತಿಗೊಂದು ಸೇತುವೆ ಮಾಡಿದೆವು (ಕರಿಕೆ ಮಾರ್ಗದಲ್ಲಿ ಸಿದ್ಧಿಸಿದ್ದ ಓವರ್ ಬ್ರಿಜ್ ತಂತ್ರ). ಒಂದೊಂದೇ ವಾಹನವನ್ನು ನೂಕಿ, ಎತ್ತಿ ಮೇಲೆ ಸಾಗಿಸಿದೆವು. ಮುಂದೆ ಜಾಡು ಸವಾರಿಗೆ ತೀರಾ ದುಸ್ಸಾಧ್ಯವಿತ್ತಾದರೂ ಹೆಚ್ಚು ಉದ್ದವಿರಲಿಲ್ಲ. ಸುಮಾರು ಅರ್ಧ ಕಿಮೀ ಸಾಗುವಷ್ಟರಲ್ಲೆ ನಾನು ಭೂಪಟದಲ್ಲಿ ಕಂಡುಕೊಂಡಿದ್ದ ಕಾಡುದಾರಿ ಸ್ವಾಗತಿಸಿತು. ಅದೂ ಹೇಗೆ! ಮಳೆಗಾಲದ ಫಿತೂರಿಯಲ್ಲೋ ಸುಳಿಗಾಳಿಯ ಸಂಚಿನಲ್ಲೋ ಹಿಂದೆಂದೋ ಅಲ್ಲಿ ದೊಡ್ಡ ಮರವೊಂದು ಮಗುಚಿ ಬಿದ್ದಿತ್ತು. ಸಣ್ಣವರಾಗಿರುವ ಅನುಕೂಲದ ಮಾತುಗಳೊಡನೆ ಆ ಮರಕ್ಕೆ ಆಸರೆ ಕೊಡುವಂತೆ ಹುಲ್ಲು ಬಲ್ಲೆ ಒತ್ತಾಗಿ ಆವರಿಸಿತ್ತು. ಮಳೆ ನೀರಾರಿ ಆವರಣ ಹಸುರುಡುಗೆ ಕಳಚಿದ್ದ ದಿನಗಳು. ಯಾರೋ ಕೇಡಿಗಳು ಈ ಕೂಟದ ಬೇಧಕ್ಕೆ ನಡಿಗೆಯ ಜಾಡೂ ಅಳಿಸಿಹೋಯ್ತೆಂದು ಕಿಡಿ (ಇಂತೆಂದು ಕಿಡಿಗೇಡಿ?) ತಾಗಿಸಿದ್ದರು. ಹುಲ್ಲು ಪೊದರುಗಳೆಲ್ಲ ಬೂದಿ, ಮಸಿಗಳಾಗಿ ಉದುರುತ್ತಿದ್ದಾಗ ಬೊಡ್ಡೆ ಕೋಪದಲ್ಲಿ ಕೆಂಡವಾದರೂ ಅಸಹಾಯಕತೆಯಲ್ಲಿ ವಿಷಾದದ ಹೊಗೆಯಾಡುತ್ತಿತ್ತು. ನಾವು ಅದನ್ನು ಬರಲಿರುವ ಸವಾಲಿನ ಪರಂಪರೆಗೆ ಪೀಠಿಕೆ ಎಂಬಂತೇ ಗ್ರಹಿಸಿದೆವು. ಸೇರಿಕೊಂಡ ಕೊಳ್ಳಿಗಳನ್ನು ದೂರ ಮಾಡಿ, ಕೆಂಡವನ್ನು ಮಣ್ಣೆರಚಿಯೋ ಬೂಟುಗಾಲಿನಲ್ಲಿ ಮೆಟ್ಟಿಯೋ ತೀವ್ರತೆ ಇಳಿಸಿ, ಜಾಡು ಬಿಡಿಸಿಕೊಂಡೆವು. ನಮ್ಮ ಕುಡಿಯುವ ಅಗತ್ಯಕ್ಕೆ ಮಾತ್ರ ಒಯ್ದ ನೀರನ್ನು ಕಳೆದುಕೊಳ್ಳದ ಜಾಣ್ಮೆ ಉಳಿಸಿಕೊಂಡೆವು. ಮುಂದೆ ಹೇಗೂ ಸರಿ ಎಂದು ನಿರ್ಧರಿಸಿ, ಮಾರ್ಗದರ್ಶಿಯನ್ನು ಹಿಂದೆ ಕಳಿಸಿದೆವು. ತಲೆನೂರ್ಮಲೆ ಘಾಟಿಗೆ ತಲೆ ಘಟ್ಟಿಸಲು ಸಜ್ಜಾದೆವು.
ಕನಿಷ್ಠ ಎರಡು ಮೂರು ದಶಕಗಳ ಹಿಂದಿನಿಂದಲೂ ಈ ವಲಯದಲ್ಲಿ ಕಾಡುಕಟುಕರು ಒಳ್ಳೊಳ್ಳೆ ಜಾತಿ ಮತ್ತು ಗಾತ್ರದ ಮೋಪು ಬೇಟೆಯಾಡುತ್ತಿದ್ದಿರಬೇಕು. ಇದು ಅನೈಚ್ಛಿಕವಾಗಿ ಘಟ್ಟದ ಮೇಲಿನ ಮಡಿಕೇರಿಗೂ ಕೆಳಗಿನ ಸುಬ್ರಹ್ಮಣ್ಯಕ್ಕೂ ಮಾರ್ಗ ಸಂಪರ್ಕ ಕಲ್ಪಿಸಿದಂತೆಯೇ ಆಗಿತ್ತು. ಹತ್ತು ವರ್ಷಗಳ ಹಿಂದೆ ಕೊಡಗಿನ ಗಾಳಿಬೀಡಿನಿಂದ ನಾನು ಸುಬ್ರಹ್ಮಣ್ಯಕ್ಕೆ ಇಳಿಯಲು ಹೊರಟಾಗ ಇದೇ ಯಾವುದೋ ಎಳೆ ನಮಗೆ ಸಿಕ್ಕಿತ್ತು. ಆ ದಾರಿಗಳಿಗೆ ಯಾವುದೇ ಶಿಷ್ಟ ಗುರುತುಗಳಿರಲಿಲ್ಲವಾದ್ದರಿಂದ ನಾವು ಹೊಸದಾಗಿಯೇ ಅನಾವರಣಗೊಳಿಸಬೇಕಿತ್ತು. ಈಚಿನ ಎಂಟು ಹತ್ತುವರ್ಷಗಳಲ್ಲಿ ಅಲ್ಲಿ ಕಾಡು ಸಾಗಣೆ ಸ್ಥಗಿತಗೊಂಡಂತಿತ್ತು. ಸಹಜವಾಗಿ ಪ್ರಾಕೃತಿಕ ಶಕ್ತಿಗಳು ದಾರಿಯನ್ನು ಮತ್ತೆ ತಮ್ಮಲ್ಲಿ ಒಂದಾಗಿಸಿಕೊಳ್ಳುತ್ತಿದ್ದವು. ಈಗಲೂ ಇಲ್ಲಿ ದಿನಕ್ಕೊಮ್ಮೆ ನಡೆದೇ ಸಾಗುವ ಅಂಚೆಯಣ್ಣನಿಂದ (ಕಡಮಕಲ್ ರಬ್ಬರ್ ಎಸ್ಟೇಟ್ ಮೇಲಿನ ಅಂಚೆ ವಲಯಕ್ಕೆ ಸೇರಿದ ವಿಪರ್ಯಾಸಕ್ಕೆ ಈತ ಬಲಿ!), ವರ್ಷಕ್ಕೊಮ್ಮೆಯಾದರೂ ಕುಕ್ಕೆ ಸುಬ್ರಹ್ಮಣ್ಯನ ದರ್ಶನಕ್ಕಾಗಿ ಘಟ್ಟವಿಳಿದು ನಡೆದೇ ಬರುವ ಬಡ ಭಕ್ತರಿಂದ ಕಾಲ್ದಾರಿಯಷ್ಟು ಅಂಶ ಮಾತ್ರ ತೆರವಾಗುಳಿದಿದೆ.
[ಕುಮಾರ ಪರ್ವತವನ್ನು ಸಂಕೇತವಾಗಿಟ್ಟುಕೊಂಡು ಪುಷ್ಪಗಿರಿ ವನಧಾಮ ಘೋಷಿತವಾದ ಮೇಲೆ ಇಲ್ಲಿ ಸ್ಥಾಪಿತ ಹಿತಾಸಕ್ತಿಗಳು ‘ಜನಪ್ರಿಯ ಆಂದೋಲನ’ದ ಮುಸುಕಿನಲ್ಲಿ ಮಡಿಕೇರಿ ಸಂಪರ್ಕ ದಾರಿಯನ್ನು ಜೀರ್ಣೋದ್ಧಾರ ಮಾಡಬೇಕೆಂದು ಪ್ರಯತ್ನಗಳನ್ನು ಮಾಡಿದವು. ಸ್ವಯಂಸೇವೆಯ ಹೆಸರಿನಲ್ಲಿ, ಆದರೆ ಅಕ್ರಮವಾಗಿ ಒಂದು ತೆರನ ಮಾರ್ಗಮುಕ್ತಿಯನ್ನೂ ನಡೆಸಿದ್ದವು. ಆ ಹೊಸದರಲ್ಲಿ ನಾನು ಇನ್ನೊಂದೇ ತಂಡ ಕಟ್ಟಿ ಅದನ್ನು ಅನುಸರಿಸಿದ್ದಿತ್ತು. ಕಾಲಧರ್ಮದಲ್ಲಿ ನಮ್ಮಲ್ಲೆಲ್ಲ ಹೆಚ್ಚು ಸಾಮರ್ಥ್ಯವಂತ ವಾಹನಗಳಿದ್ದುದರಿಂದ ಹೆಚ್ಚು ಶ್ರಮವಿಲ್ಲದೆ, ಅರ್ಧ ದಿನದಲ್ಲೇ ಮಡಿಕೇರಿ ತಲಪಿ ಬಂದಿದ್ದೆವು. ಅದೇನಿದ್ದರೂ ಒಂದು ಬೇಸಗೆಯಷ್ಟೇ ತಡೆದುಕೊಳ್ಳಬಲ್ಲ ತೇಪೇ ಕೆಲಸ. ಮತ್ತೂ ಮುಖ್ಯವಾಗಿ ಆ ದಾರಿಯ ಕುರಿತು ನೈಜ ಆಸಕ್ತಿ ಸಾಮಾನ್ಯರಿಗ್ಯಾರಿಗೂ ಇರಲಿಲ್ಲವಾದ್ದರಿಂದ, ಮಳೆಗಾಲದಲ್ಲಿ ಮುಚ್ಚಿಹೋದದ್ದು ಮತ್ತೆ ತೆರೆದಂತಿಲ್ಲ. ಅನಂತರದ ದಿನಗಳಲ್ಲಿ ಹೀಗೇ ಇತ್ತ ಹೆಗಡೆಮನೆಯಿಂದ, ಅಂದರೆ ಸೋಮವಾರಪೇಟೆಯ ಕಡೆಯಿಂದಲೂ ಇನ್ನೊಂದೇ ಅಕ್ರಮ ದಾರಿಯ ‘ಸ್ವಯಂ ಸೇವಾ ಕಾರ್ಯ’ ನಡೆದಿತ್ತು. ಸದ್ಯ ಅದೂ ಸ್ಥಗಿತಗೊಂಡಿದೆ.]
ಘಟ್ಟಗಳಲ್ಲಿ ಸವಕಲು ಜಾಡು ಮಳೆಗಾಲದ ತೋಡೂ ಹೌದು. ಸಾಲದ್ದಕ್ಕೆ ಆ ದಾರಿಗಳು ಚತುಷ್ಚಕ್ರ ಚಾಲನಶಕ್ತಿಯ ಲಾರಿಗಳ ಓಡಾಟಕ್ಕೇ ಮಾಡಿದ್ದದ್ದರಿಂದ ಏರೂ ತೀವ್ರವಿತ್ತು. ಸಹಜವಾಗಿ ಆ ಜಾಡು ಘಟ್ಟದ ನೆತ್ತಿ ಸೇರುವವರೆಗೂ ನಮ್ಮ ಸಹವಾರಿಗಳು ಸಣ್ಣಪುಟ್ಟ ಸವಾರಿಯ ಯೋಚನೆಯೂ ಮಾಡುವಂತಿರಲಿಲ್ಲ. ಸವಾರರಾದರೋ ಸೀಟಿನ ಎದುರಂಚಿನಲ್ಲಿ ಮುಂದೆ ಬಾಗಿ ಕುಳಿತು ಚಡಿಗಳಿಗೆ ಕುಟ್ಟುವ, ಕಲ್ಲು ಗುಂಡುಗಳೊಡನೆ ಉರುಡುವ, ತಗ್ಗುಗಳಲ್ಲಿ ಮುಗ್ಗರಿಸುವ, ತರಗೆಲೆ ಮತ್ತು ಹಾಸುಪಾದೆಗಳ ಮೆಲೆ ಜಾರುವ ಪ್ರಸಂಗಗಳನ್ನು ನಿರ್ಮೋಹದಿಂದ ಸ್ವೀಕರಿಸುತ್ತ ಸತತ ಮೊದಲ ಗಿಯರಿನಲ್ಲಿ ಆಕ್ಸಿಲರೇಶನ್ ಇಳಿಸದೆ ಸಾಗಬೇಕಿತ್ತು. ಕಲ್ಲ ಇರುಕಿನಿಂದಲೋ ತಗ್ಗಿನಾಳದಿಂದಲೋ ಚಕ್ರ ಏಳದೇ ತಡವರಿಸುವಲ್ಲಿ ಕೂತ ಅದೇ ಭಂಗಿಯಲ್ಲಿ ಕಾಲುಗಳನ್ನು ನೆಲಕ್ಕೆ ಕೊಟ್ಟು ನೂಕುತ್ತ, ತೀರಾ ಅಗತ್ಯ ಬಂದರೆ ಕ್ಲಚ್ ನಿಯಂತ್ರಣದಲ್ಲಿ ಚಿಮ್ಮು ಶಕ್ತಿಯನ್ನು ಊಡುತ್ತಾ ಮುಂದುವರಿದದ್ದುಂಟು. ಅಷ್ಟಕ್ಕೂ ಜಗ್ಗದಾಗ ಅಡ್ಡ ಮಲಗಿದ್ದಕ್ಕೆ ಲೆಕ್ಕ ಇಟ್ಟವರಿಲ್ಲ! ಇಲ್ಲೆಲ್ಲ ಸವಾರರಿಗೆ, ವಾಹನಕ್ಕೆ ತರಚುಗಾಯವೂ ಆದದ್ದಿಲ್ಲ ಎನ್ನುವುದು ಗಮನಾರ್ಯ. ಇದು ಏರುದಾರಿಯನ್ನು ಆರಿಸಿದ್ದರ ಒಳ್ಳೇ ಫಲವೂ ಹೌದು. ಬಿದ್ದ ಬೈಕಿಗೆ ಅವರಿವರು ಕೈಕೊಟ್ಟು ಎತ್ತಿ, ಸವಾರ ಮತ್ತೆ ಕುಳಿತು, ಸ್ವಲ್ಪ ಜಾಡು ಬದಲಿಸಿದಾಗ ಅಥವಾ ಸ್ವಲ್ಪ ದೂರ ಹಿಂದಿನಿಂದ ಇತರರು ನೂಕಿ ಕೊಟ್ಟಾಗ ಖಂಡಿತ ಮುಂದಿನ ಬೀಳಿನವರೆಗೆ ಚೆನ್ನಾಗಿಯೇ ಹೋಗುತ್ತಿದ್ದ.
ದೊಡ್ಡ ಮರಗಳು ಅಡ್ಡ ಬಿದ್ದಿದ್ದರೆ ನಮ್ಮಲ್ಲಿ ಹೇಗೂ ಓವರ್ ಬ್ರಿಜ್ ತಂತ್ರ ಸಿದ್ಧಿಸಿದ್ದೇ ಇತ್ತು. ಸಣ್ಣ ಮರ, ಕೊಂಬೆ ಕಡಿಯಲು ಕತ್ತಿ, ಕಟ್ಟಿ ಕರೆಗೆ ಎಳೆದು ಹಾಕಲು ಹಗ್ಗ ಸಜ್ಜಿತರು ನಾವು. ಕೆಲವೆಡೆ ಕಿರುಕೊಂಬೆ ಕಡಿದು, ಹಿರಿ ಕಾಂಡಗಳಿಗೆ ಸನ್ನೆಗೋಲು ಮಾಡಿ ದಾರಿ ಬಿಡಿಸಿದೆವು. ಅದು ಆಗದಾಗ ಪಕ್ಕದ ಪೊದರು ನುಗ್ಗಿಸಿ, ಹೊಸಾ ಜಾಡು ಮಾಡಿದ್ದೂ ಇತ್ತು. ಅದೂ ಆಗದಲ್ಲಿ ಒಂದು ಕೊನೆ ದರೆಯೇರಿ ಕೂತ ಬೊಡ್ಡೆಯ ತಳದ ಸಂದಿನಲ್ಲಿ (ಬಿಸಿಲೆಯಲ್ಲಿ ಜೀಪು ನುಗ್ಗಿಸಿದಂತೆ), ಅಲ್ಲೂ ಕೆಲವೊಮ್ಮೆ ಸವಾರನಿಲ್ಲದೆ ಆಚೀಚೆ ಜನ ನಿಂತು ಕೈಯಾಸರೆಯಲ್ಲೇ ತೂರಿಸಿ ಪಾರುಗಂಡದ್ದೂ ಉಂಟು. ಮರ ಬಂಡೆಗಳೊಡನೆ ಗುಡ್ಡೆಯೇ ಜಾರಿ ಬಂದು ದಾರಿ ಮುಚ್ಚಿದಲ್ಲಿ, ಅಗಲದ ತೋಡಿಗೆ ಒಂಟಿಯೋ ದುರ್ಬಲವಾದ್ದೋ ಪಾಲ ಬಂದಲ್ಲೂ ಎಂಜಿನ್ ಚಲಾಯಿಸದೆ ಇಬ್ಬರು ಮೂವರ ಕೈಬಲದಲ್ಲೇ ಬೈಕ್ಗಳನ್ನು ದಾಟಿಸಿದ್ದೂ ಇದೆ. ಇವೆಲ್ಲ ಮುಖ್ಯವಾಗಿ ಬೈಕ್ ಗಳದ್ದೇ ಕತೆಯಾಯ್ತು. ಮನುಷ್ಯ ಯಂತ್ರ ಸಹಕಾರವನ್ನು ಗರಿಷ್ಠ ಪರೀಕ್ಷೆಗೊಡ್ಡಿದ ಈ ಜಾಡಿನಲ್ಲಿ ಸ್ಕೂಟರಿನದ್ದೇ ಒಂದು ಪ್ರತ್ಯೇಕ ಪುರಾಣವಿದೆ. ಅದರ ನಿವೇದನೆಯೊಂದಿಗೆ ಮುಂದಿನ ಘಟನಾಪರಂಪರೆಯನ್ನು ವಿಸ್ತರಿಸುತ್ತೇನೆ.
ಆರಂಭದ ತೋಟದ ಜಾಡಿನಲ್ಲಿ ಭಟ್ಟರು ಸೋತಾಗ ರಾಮಮೋಹನ್ ನಿರಾಯಾಸವಾಗಿ ಎಂಬಂತೆ ಮುನ್ನುಗ್ಗಿದ್ದು ಸರಿಯಷ್ಟೆ. ಆದರೆ ವಾಸ್ತವದಲ್ಲಿ ಬೈಕಿನವರು ಅನಿವಾರ್ಯವಾಗಿ ಅದೂ ಅಪರೂಪಕ್ಕೆ ಮಾಡುತ್ತಿದ್ದ ಕ್ಲಚ್ ಒತ್ತೊತ್ತಿ ಕೊಡುತ್ತಿದ್ದ ವಿಶೇಷ ಪ್ರಚೋದನೆ (ಎಳೆಯಲಾರದ ಬಡಕಲು ಎತ್ತಿಗೆ ಬಾಲವನ್ನು ತಿರುಚಿ ಗಂಟು ಮಾಡಿದಂತೆ) ರಾಂಪಣ್ಣ ಸ್ಕೂಟರ್ ನಿಧಾನಿಸಿದಲ್ಲೆಲ್ಲಾ ಮಾಡಿದ್ದರು. ಸಾಲದ್ದಕ್ಕೆ ಎಲ್ಲ ವಾಹನಗಳು ಸಾಲಿನಲ್ಲಿ ಹಿಂದೆ ಮುಂದೆ ಆಗುತ್ತಿದ್ದುದರಿಂದ ಕೆಲವು ಬಾರಿ ಅಗತ್ಯ ಇಲ್ಲದಲ್ಲೂ ಎದುರಿನವನ ಅಧೈರ್ಯದ ನಿಧಾನಕ್ಕೆ ಸ್ಕೂಟರ್ ತಡವರಿಸುವುದು ಇದ್ದೇ ಇತ್ತು. ಹೀಗೆ ಅದರ ಏಕ ನೂಕುಬಲಕ್ಕೆ ಆಘಾತಗಳು ಹೆಚ್ಚಾಗುತ್ತಿದ್ದಂತೆ ಇಂಜಿನ್ ಅಪಸ್ವರ ತೆಗೆಯತೊಡಗಿತು. ಮೊದಲ ವಿಶ್ರಾಂತಿ ಮುಗಿಸಿ ಹೊರಡುವಲ್ಲೇ ಸ್ಕೂಟರಿನ ಕಿಕ್ ಸ್ಟಾರ್ಟರ್ ನಿಷ್ಕ್ರಿಯವಾಗಿತ್ತು. ಸವಾರ ಅರ್ಥಮಾಡಿಕೊಳ್ಳದೆ ತುಸು ಸ್ಪಷ್ಟ ಜಾಡುಗಳಲ್ಲಿ ನೂಕಿಯೇ ಇಂಜಿನ್ ಚಾಲೂ ಮಾಡಿ (ಜಟ್ಕಾ ಸ್ಟಾರ್ಟ್!) ಹಳೆಯ ದುರಭ್ಯಾಸ ಮುಂದುವರಿಸಿದ. ಸಹಜವಾಗಿ ಮತ್ತೊಂದು ಹಂತಕ್ಕಾಗುವಾಗ ಅದರ ಗಿಯರುಗಳೂ ಕ್ರಿಯಾಹೀನವಾಗುತ್ತ ಹೋಯ್ತು. ಕೊನೆಯಲ್ಲಿ ನಮ್ಮ ಮಿತಿಯಲ್ಲಿ ಅದೂ ಇದೂ ನೆಪ ಹುಡುಕಿದೆವಾದರೂ ಕ್ಲಚ್ ಪ್ಲೇಟ್ ಕಚ್ಚಿ, ಇಂಜಿನ್ನನ್ನು ಪೂರ್ಣ ನಿಷ್ಕ್ರಿಯಗೊಳಿಸಿತ್ತು. (ಮಡಿಕೇರಿಗೆ ತಲಪಿದ ಮೇಲೆ ತಿಳಿಯಿತು, ಕ್ಲಚ್ ಪ್ಲೇಟ್ ಸುಟ್ಟೇಹೋಗಿತ್ತು.) ಹಿಂದಿನಂತಲ್ಲದೆ ನಮ್ಮಲ್ಲಿ ಸಣ್ಣಪುಟ್ಟ ರಿಪೇರಿಗೆ ಹತ್ಯಾರುಗಳೇನೋ ಇದ್ದವು. ಏನೋ ಬಿಚ್ಚಿ, ಇನ್ನೇನೋ ಕಳಚಿ ಚಕ್ರವನ್ನೇನೋ ಮುಕ್ತಗೊಳಿಸಿದೆವು. ಆದರೆ ಮುಂದೆ ಎಂದೂ ಸ್ಕೂಟರನ್ನು ಕೇವಲ ಮನುಷ್ಯ ಬಲದಲ್ಲಿ ನೂಕಿಯೇ ಸಾಗಿಸಬೇಕೆನ್ನುವ ಹೊಸ ಸಮಸ್ಯೆ ತಂಡದ ಮೇಲೆ ಕವುಚಿಬಿದ್ದಿತ್ತು.
ಸ್ಕೂಟರಿಗೆ ಹಗ್ಗ ಕಟ್ಟಿ ಎದುರಿಬ್ಬರು ಭುಜ ಕೊಟ್ಟು ಎಳೆದರು. ಸಂದರ್ಭ ನೋಡಿಕೊಂಡು ಸ್ಕೂಟರ್ ಹಿಂದಿರುವ ಹೆಚ್ಚುವರಿ ಚಕ್ರಕ್ಕೊಂದು ದಪ್ಪದ ಗೋಣಿಯನ್ನೇನೋ ಹೊದೆಸಿ, ತಲೆಕೊಟ್ಟು ನೂಕಿದ್ದೂ ಉಂಟು. ಸ್ಕೂಟರ್ನ ಪುಟ್ಟ ಚಕ್ರಗಳು ತಡವರಿಸಿದಂತೆಲ್ಲ ಹಗ್ಗ ಜಗ್ಗುವವರು ಫಕ್ಕನೆ ಖಾಲಿಯೋ ಇನ್ನೊಮ್ಮೆ ಮುಗ್ಗರಿಸಿದಂತೆಯೋ ಅತ್ತಿತ್ತ ತೂರಾಡಿ ಹೋಗುವುದಿತ್ತು. ನೂಕುವವರ ಪಾಡು ಇನ್ನೊಂದೇ ಇತ್ತು. ತಲೆಗೆ ಮೂಕಪೆಟ್ಟು, ದೂಳು ತಿನ್ನುತ್ತ ತೇಕುವುದಂತೂ ಇದ್ದದ್ದೇ. ಕಾಲಬುಡ ನೋಡಲಿಲ್ಲ, ಚಲಿಸುವ ದಿಕ್ಕೂ ಸ್ಥಿರವಿಲ್ಲ. ಕಾಲಡಿಗೆ ಸಿಕ್ಕ ಕಲ್ಲೋ ಕೋಲೋ ಜಾರಿದಾಗ ಇವರು ಸ್ಕೂಟರ್ ಆಧಾರ ತಪ್ಪಿಹೋಗಿ ಉದ್ದಂಡ ಬೀಳುವುದಿತ್ತು. ಅವೆರಡನ್ನೂ ಮೀರಿದ ಕಷ್ಟದ ಕೆಲಸ, ಸ್ಕೂಟರ್ ಪಕ್ಕದಲ್ಲೇ ಒಬ್ಬ ಅದರ ಹ್ಯಾಂಡಲ್ ಹಿಡಿದು ನಿಭಾಯಿಸುವುದು. ಸ್ಕೂಟರಿನ ತಗ್ಗಿಗೆ ಬಾಗುವುದರೊಡನೆ ಅದರ ಅನಿಯತ ಓಲಾಟದಲ್ಲೂ ಅದನ್ನು ನೆಟ್ಟಗೆ ಉಳಿಸಿಕೊಳ್ಳುವುದು ಈತನ ಜವಾಬ್ದಾರಿ. ಜಾಡುಗಳೇ ಇಲ್ಲದಲ್ಲೂ ಅದರ ಚಕ್ರದ ಹರಿವಿಗೆ ಪ್ರಶಸ್ತ ನೆಲ ಅರಸುತ್ತ ಹೋಗುವುದರೊಡನೆ, ನೂಕಿ ಎಳೆವವರ ವೇಗಕ್ಕೆ ಸರಿಯಾಗಿ ಒತ್ತಿನಲ್ಲಿ ತನ್ನ ಹೆಜ್ಜೆಯನ್ನೂ ಸಾವರಿಸಿಕೊಳ್ಳಬೇಕಿತ್ತು. ತಗ್ಗುದಿಣ್ಣೆಗಳಲ್ಲಿ ಸ್ಕೂಟರ್ ಮುಸುಡು ಅಡ್ಡತಿಡ್ಡ ತಿರುಗಿ ಹೋಗದಂತೆ ಹಿಡಿಯುವಲ್ಲಿ ತೋಳ್ಬಲ ಎಷ್ಟಿದ್ದರೂ ನಿಮಿಷಾರ್ಧದಲ್ಲಿ ಕರಗಿಹೋಗುತ್ತಿತ್ತು. ಸೊಂಟದ ನೋವು, ಪಾದದ ತಿರುಚು ಶಿವನೇ ಬಲ್ಲ. ಪ್ರತೀ ಹತ್ತು ಹದಿನೈದು ಮಿನಿಟಿಗೆ ಎಲ್ಲ ಅದಲಿ ಬದಲಿಯಾಗಿ ಸುಧಾರಿಸಿಕೊಳ್ಳುತ್ತ ಸಾಹಸಯಾನ ಮುಂದುವರಿಯಿತು. [“ಅದು ಸಾಹಸವಲ್ಲ, ಹುಚ್ಚು” ಎಂದು ತಂಡದಲ್ಲೇ ಕೆಲವರು ಹಿಂದೆ ಬಿಟ್ಟು ಹೇಳಿದ್ದಿದೆ. ಈ ಕುರಿತು ನಾನು ತಾತ್ತ್ವಿಕ ಜಿಜ್ಞಾಸೆ ನಡೆಸಿದ್ದನ್ನು ಓದಲು ದಯವಿಟ್ಟು ಇಲ್ಲಿ ಚಿಟಿಕೆ ಹೊಡೆಯಿರಿ.]
ವನಸಿರಿಯ ತಣ್ಣೆಳಲಿನಲ್ಲಿ ಸುಖಸವಾರಿ ಅಲ್ಲದಿದ್ದರೂ ತುಸು ಚಾರಣಕ್ಕಿಂತ ಹೆಚ್ಚಿನದೇನೂ ನಿರೀಕ್ಷಿಸದ ಹೆಚ್ಚು ಕಡಿಮೆ ಎಲ್ಲ ಸವಾರ, ಸಹವಾರರು ಕಡು-ಕೂಲಿ ಕೆಲಸ ಮಾಡುವಂತಾಗಿತ್ತು. ಎರಡು ಮೂರು ಬೈಕಿನ ಸವಾರರು ಕನಿಷ್ಠ ಒಂಟಿ ಸವಾರಿಯನ್ನಾದರೂ ಅನ್ಯರ ಸಹಾಯವಿಲ್ಲದೇ ನಿಭಾಯಿಸುತ್ತಿದ್ದರು. ಮೊದಲ ಆಘಾತದಿಂದ ಮಾನಸಿಕವಾಗಿ ಅಲ್ಲಾಡಿಹೋದ ನಾರಾಯಣ ಭಟ್ ಕಷ್ಟದಿಂದ ಸುಧಾರಿಸಿಕೊಳ್ಳುತ್ತಿದ್ದರು. ಆದರೆ ಜಿ.ಪಿ ಬಸವರಾಜು ಕಂಗಾಲು. ಅವರ ಸಹವಾರಿ – ಪತ್ನಿ ಶಾಂತಾ, ತೀರಾ ಸಣ್ಣ ಜೀವ; ಬಸವರಾಜ್ಗೆ ಸಹಾಯ ಮಾಡುವುದಿರಲಿ, ಸ್ವತಂತ್ರವಾಗಿ ನಡೆದರೆ ಸಾಕು ಎನ್ನುವಂತಿದ್ದರು. ನನ್ನ ಮಟ್ಟಿಗೆ ಬಾಲಣ್ಣ ಒಂದೆರಡು ಕಡೆ ನೂಕುಬಲ ಕೊಟ್ಟದ್ದು ಮಾತ್ರ. ಉಳಿದಂತೆ ಆತ ಇತರ ಸಹವಾರಿಗಳೊಡನೆ ಸರದಿಯ ಮೇಲೆ ಸ್ಕೂಟರ್ ಕೈಂಕರ್ಯದಲ್ಲೂ ಉಳಿದ ಬೈಕಿನವರ ಕರಸೇವೆಯಲ್ಲೂ ತೊಡಗಿಸಿಕೊಂಡರು. ರಾಂಪ ತನ್ನ ಮಹಾಕಾಯದೊಡನೆಯೂ ಕೆಲವು ದೂರ ಸ್ಕೂಟರ್ ಹ್ಯಾಂಡಲ್ ಹಿಡಿಯುವಲ್ಲಿ ಹೆಣಗಿದರು. ಆದರೆ ಶೀಘ್ರದಲ್ಲೇ ಆತನಿಗೆ ತೀವ್ರ ಸ್ನಾಯುಸೆಳೆತ ಸುರುವಾದ ಮೇಲೆ ಎಲ್ಲರೂ ಒಕ್ಕೊರಲಿನಲ್ಲಿ “ಪುಣ್ಯಾತ್ಮ ಸ್ಕೂಟರ್ ಬಿಡು, ನೀನೊಬ್ಬನಾದರೂ ಸಾಬೀತಿನಲ್ಲಿ ಮೇಲೆ ತಲುಪಿದರೆ ಸಾಕು. ನಿನ್ನನ್ನೂ ನಾವು ಹೊರುವ ಹಾಗಾಗದಿರಲಿ.”
ತಲೆ ಕೊಟ್ಟು ನೂಕುವಲ್ಲಿ ಬಾಲಣ್ಣ ಮತ್ತು ಗ್ರೆಗರಿ ಅಪ್ರತಿಮ ವೀರರು. ಹಗ್ಗ ಕಟ್ಟಿ ಎಳೆಯುವಲ್ಲಿ ಮತ್ತು ಹ್ಯಾಂಡಲ್ ನಿಭಾಯಿಸುವಲ್ಲಿ ಇಲ್ಯಾಸ್ ಶಕ್ತಿಮೀರಿ ದುಡಿದರು. ಒಂದೆರಡು ಕಡೆಗಳಲ್ಲಂತೂ ಆತನನ್ನು ನಾವು ಒತ್ತಾಯದಲ್ಲಿ ಹತ್ತತ್ತು ಮಿನಿಟು ಕಡ್ಡಾಯ ಮಲಗಿ ವಿಶ್ರಾಂತಿ ಪಡೆಯುವಂತೆ ಮಾಡಿರದಿದ್ದಲ್ಲಿ ಹೊತ್ತು ಸಾಗಿಸಲೂ ಒಂದು ಜನ ಸಿಗುತ್ತಿದ್ದದ್ದು ಖಂಡಿತ! ಸ್ವತಂತ್ರವಾಗಿ ಬೈಕೋಡಿಸುತ್ತಿದ್ದ ನಾವಾದರೋ ಒಮ್ಮೆಗೆ ಐವತ್ತು ನೂರು ಮೀಟರಿಗಷ್ಟೇ ಹೋಗಿ ನಿಲ್ಲಲೇ ಬೇಕಾಗುತ್ತಿತ್ತು. ಇಂಜಿನ್ನುಗಳು ಕಾದು, ಸ್ವಿಚ್ ತೆಗೆದರೂ ಒಂಡೆರಡು ಸ್ವತಂತ್ರ ಗುಟುರು ಹಾಕಿಯೇ ಆರುತ್ತಿತ್ತು. ಮತ್ತೆ ಒಂದು ಹದಕ್ಕೆ ಅದನ್ನು ತಣಿಯಲು ಬಿಟ್ಟು, ನಾವೂ ಹಿಂದೆ ಹೋಗಿ, ಉಳಿದವರ ಶ್ರಮದಾನಕ್ಕೆ ಕಿಂಚಿತ್ ದೇಣಿಗೆ ನೀಡುತ್ತಿದ್ದೆವು. ಪರಿಸ್ಥಿತಿಯ ಒತ್ತಡದಲ್ಲಿ ಒಮ್ಮೆ ಅರವಿಂದರ ಅಸಹನೆ ಕಟ್ಟೆಯೊಡೆಯಿತು. ಸ್ಕೂಟರ್ ಹಗ್ಗವನ್ನು ತನ್ನ ಬೈಕಿಗೇ ಕಟ್ಟಿ ಎಳೆದೊಯ್ಯುವುದಾಗಿ ಏನೋ ಉರುಡಿದರು. ಆದರೆ ಮಾನಸಿಕ ದಾರ್ಢ್ಯವನ್ನು ಯಾಂತ್ರಿಕ ಶಕ್ತಿಗೆ ಬಸಿಯಲಾಗುವುದಿಲ್ಲ. ಅವರ ಬೈಕೇ ಸೋಲುವ ಲಕ್ಷಣಗಳು ಕಾಣಿಸಿತು. ಅರವಿಂದರ ಯಂತ್ರ ಜ್ಞಾನ ರಾಂಪಣ್ಣನದ್ದಕ್ಕಿಂತ ಉತ್ತಮವಿದ್ದುದರಿಂದ, ಸಕಾಲಕ್ಕೆ ಹಳೆಯ ಕ್ರಮವನ್ನೇ ಮುಂದುವರಿಸಿದ್ದರಿಂದ ಹೆಚ್ಚಿನ ಸಮಸ್ಯೆ ಸೇರಲಿಲ್ಲ. ಪ್ರಗತಿ ಆಮೆ ಪಥದಲ್ಲಿತ್ತು.
ಒಂಬತ್ತೂಕಾಲಕ್ಕೆ ಕಡಮಕಲ್ ರಬ್ಬರ್ ತೋಟದಿಂದ (ಸಮುದ್ರ ಮಟ್ಟದಿಂದ ಸುಮಾರು ೨೧೬ ಮೀ ಎತ್ತರ) ತೊಡಗಿದ ನಾವು ಸುಮಾರು ಐದು ಕಿಮೀ ಅಂತರದ ತಲೆನೂರ್ಮಲೆ ಘಾಟಿ ದಾಟಿ ಶ್ರೇಣಿಯ ನೆತ್ತಿ, ಅಂದರೆ ಕಾಳೂರು ಏಲಕ್ಕಿ ಮಲೆ (ಸಮ ೧೦೬೧ ಮೀ) ತಲಪುವಾಗ ನೇಸರ ಕಂತಿದ್ದ. ಹಗಲಿನ ಬಿಸಿಲಿನ ಝಳ, ಏರು ದಾರಿ, ಅಪರಿಮಿತ ದೇಹದಂಡನೆಯಿಂದ ಒಯ್ದ ಲೀಟರು ಗಟ್ಟಳೆ ಕುಡಿಯುವ ನೀರು ಕಾದ ಹಂಚಿಗೆ ಬಿದ್ದ ಹನಿಯಾಗಿತ್ತು. ಜನ ಸಂಚಾರವೇ ಇರದ ಕಾಡಿನ ನಡುವೆ ಕೆರೆ ಕಟ್ಟೇ ಕಟ್ಟಿಸಿದವರುಂಟೇ. ತೊರೆ ಒರತೆಗಳನ್ನು ಅರಸಿದೆವು. ಒಂದೆಡೆ ಹೆಂಡದ ಖಾಲಿ ಬುಂಡೆ, ಇನ್ನೊಂದೆಡೆ ಒರತೆ ಇಂಗಿದ ಕೆಸರ ಹೊಂಡ. ಚಾರ್ಲ್ಸ್ ಸ್ವಲ್ಪ ಮೇಲಕ್ಕೆ ಹುಡುಕು ನಾದಿಗೆ ನಡೆಸಿದ ಮೇಲೆ ಕಡೆಗೂ ಸಿಕ್ಕಿತು ತೆಳು ಒರತೆಯ, ಪುಳಿನ ಪಾತ್ರೆಯ ಜಲಮೂಲ. ಮರಳು ತೋಡಿ, ನೀರನ್ನು ಹಣಿಗೊಳಿಸಿ ಸಂಗ್ರಹಿಸಿದೆವು; ಮೊದಲು ದೇಹದಲ್ಲಿ ಮತ್ತೆ ಕ್ಯಾನುಗಳಲ್ಲಿ! ಮುಂದೆ ನೀರು ಕಂಡೇವೇ ಎಂಬ ಹೆದರಿಕೆಯಲ್ಲೇ ಅಲ್ಲಿ ಬುತ್ತಿಯೂಟವನ್ನೂ ಮುಗಿಸಿದ್ದೆವು.
ಕಾಳೂರಿನ ಏಲಕ್ಕಿ ಮಲೆಯಲ್ಲಿ ಪುಟ್ಟ ಒಕ್ಕಲು ಮನೆಯೇನೋ ಇತ್ತು. ಆದರೆ ಕೃಷಿ ಉನ್ನತ ಮಟ್ಟದ್ದೇನೂ ಇರಲಿಲ್ಲವಾದ್ದರಿಂದ ಅವರದ್ದೇನಿದ್ದರೂ ಒಳದಾರಿ ಮತ್ತು ಮೆಟ್ಟಿಲ ಜಾಡು. ಕಾಡುಕಟುಕರ ದಾರಿ ತೋಟದ ಕೆಳ ಅಂಚಿನಿಂದ ಮೇಲಂಚಿನವರೆಗೆ ಬಳಸಿ ಹರಿದಿದ್ದರೂ ಪೂರ್ಣ ಅನೂರ್ಜಿತ ಸ್ಥಿತಿಯಲ್ಲಿತ್ತು. ಕೃಷಿಯ ನೆಪದಲ್ಲಿ ವನಚಪ್ಪರವೂ ಅಲ್ಲಿ ಹರಿದಿದ್ದುದರಿಂದ ದಾರಿ ಉಳಿದೆಡೆಗಿಂತ ಹೆಚ್ಚಿಗೆ ಹುಲ್ಲು ಬಲ್ಲೆ ಬೆಳೆದು ಮುಚ್ಚಿಹೋಗಿತ್ತು. ಕತ್ತಿ ಬಡಿಗೆ ಹಿಡಿದು, ಹಳೆ ದಾರಿಯ ಅಂಚು, ಹರಿವು ಗುರುತಿಸಿ, ಹುಲ್ಲು ಒತ್ತಿ, ಬಲ್ಲೆ ಮುರಿದೋ ಕಡಿದೋ ಕಳೆದೆವು. ನಮಗೆ ಹೊಸ ದಾರಿ ಮಾಡಿದಷ್ಟೇ ಶ್ರಮ.
ಕಾಳೂರಿನಿಂದ ಮುಂದೆ ತೀವ್ರ ಏರಿನ ಬಳಲಿಸುವ ದಾರಿಯಿರಲಿಲ್ಲವಾದರೂ ಸ್ಪಷ್ಟ ಜೋಡಿ ಸವಾರಿಗೆ ಮತ್ತೂ ನಾಲ್ಕು ಕಿಮೀ ಸವೆಸಬೇಕಾಯ್ತು. ಆ ಜಾಗಕ್ಕೆ ಸ್ಕೂಟರ್ ಸೇವೆಯ ತಂಡವೂ ತಲಪಿದಾಗ ಗಾಢಾಂಧಕಾರದ ರಾತ್ರಿ ಏಳು ಗಂಟೆ. ಸರಕಾರ ಮಡಿಕೇರಿ – ಸುಬ್ರಹ್ಮಣ್ಯ ದಾರಿಯನ್ನು ಸುಧಾರಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ಘಟ್ಟದ ಮೇಲಿನಿಂದ ತೊಡಗಿದಂತಿತ್ತು. ಅದರ ಕೊನೆಯಂಚನ್ನು ನಾವು ತಲಪಿದ್ದೆವು! ಒಳ್ಳೇ ದಾರಿ ಎಂದು ಭಾವಿಸಿ ಮತ್ತೆ ಸ್ಕೂಟರನ್ನು ಬೈಕಿಗೆ ಕಟ್ಟಿ ಸ್ವಲ್ಪ ದೂರ ಎಳೆಸಿದೆವು. ಅಲ್ಪ ಸ್ವಲ್ಪ ಏರು ಸಿಕ್ಕರೂ ಹುಡಿಮಣ್ಣಿನ ದಾರಿಯಲ್ಲಿ ಎರಡು + ಒಂದು ಜನ ಮತ್ತು ಸ್ಕೂಟರಿನ ಭಾರ ಎಳೆಯುವ ಕೆಲಸ ಬೈಕಿಗೆ ವಿಪರೀತವಾಗುತ್ತಿತ್ತು. ಮಟ್ಟಸ ದಾರಿಯಲ್ಲಿ ಮೊದಮೊದಲು ಸ್ಕೂಟರ್, ಬೈಕ್ ಪರಸ್ಪರ ವಿರುದ್ಧ ಬದಿಗಳಿಗೆ ತುಯ್ಯುತ್ತಿದ್ದವು. ಅದನ್ನು ಬಹಳ ಜಾಗ್ರತೆಯಿಂದ ಸಂಭಾಳಿಸಿಕೊಂಡು ಮುಂದುವರಿದರೂ ವೇಗ ಏರಿಸಿದರೆ ತೊನೆದಾಟ ಅಪಾಯಕಾರಿಯಾಗುವಂತೇ ತೋರಿತು. ಎಳೆಯುವ ಬೈಕ್ ಸ್ವಯಂ ಪ್ರಭೆಯಿಂದ (ಪುರಾಣಲೋಕಕ್ಕೆ ಹೋಗಬೇಡಿ – ಹೆಡ್ ಲೈಟಿನಿಂದ) ಕತ್ತಲನ್ನು ಸೀಳಿ, ಏರು ತಿರುವುಗಳನ್ನು ಗುರುತಿಸಿಕೊಳ್ಳುತ್ತಿತ್ತು. ಇಂಜಿನ್ ಕೆಟ್ಟಾ ಅನುನಾಯಿ(ಸ್ಕೂಟರ್)ಗೆ ಆ ಯೋಗವೂ ಇಲ್ಲ. ದೂಳಿನ ಸ್ನಾನ, ಗುಂಡಿಗುಳುಪಿನ ಸಂಕಟಗಳೇನಿದ್ದರೂ ನುಂಗಿಕೊಳ್ಳುತ್ತ ಇತರ ಬೈಕ್ಗಳು ತುಸು ಹಿಂದೆ, ಕೆಲವೊಮ್ಮೆ ಅಕ್ಕಪಕ್ಕಗಳಲ್ಲಿ ಸುಳಿದಾಡುತ್ತಾ ಸ್ಕೂಟರಿನ ದಾರಿಗೆ ಯಥಾನುಶಕ್ತಿ ಬೆಳಕಿನ ಸೇವೆ ನಡೆಸಿದ್ದವು. ಪುಟ್ಟ ಚಕ್ರಗಳಲ್ಲಿ, ಆಘಾತ ತಡೆಯುವ ಕಡಿಮೆ ಸಾಮರ್ಥಯದಲ್ಲು ಅಡ್ಡ ಮಗುಚದೇ ಸುಧಾರಿಸಿದ್ದು ಬದಲಿ ಚಾಲಕ ಶರತ್ತನ ಜಾಣ್ಮೆಯಿಂದ ಎನ್ನುವುದು ನಿಸ್ಸಂದೇಹ. ಇಲ್ಲೂ ದಾರಿ ತೀರಾ ಹಾಳೆನಿಸಿದಾಗ ಮತ್ತೆ ಒಂದೆರಡು ಕಿಮೀ ನೂಕಿ ನಡೆದು ಡಾಮರ್ ದಾರಿ ಸೇರಿಕೊಂಡೆವು. ಇಷ್ಟರಲ್ಲಿ ಹಗ್ಗ ಕಟ್ಟುವಲ್ಲೂ ಅಂತರ ಉದ್ದ ಇಡುವುದು ಅನಾನುಕೂಲವೆಂದು ಕಂಡುಕೊಂಡಿದ್ದೆವು. ವಾಸ್ತವದಲ್ಲಿ ಹಗ್ಗದ ಉದ್ದ ಜಾಸ್ತಿಯಾದಷ್ಟೂ ಅದರ ಹಿಗ್ಗು ಕುಗ್ಗುಗಳು ಸ್ಕೂಟರನ್ನು ಸತಾಯಿಸುತ್ತಿತ್ತು. ಹಾಗಾಗಿ ಕೊನೆಯ ಹಂತದ ನಮ್ಮ ‘ಮೆರವಣಿಗೆ’ ತುಂಬಾ ಯಶಸ್ವಿಯೇ ಆಗಿ ಮಡಿಕೇರಿಯಲ್ಲಿ ಮುಗಿದಿತ್ತು.
ಮಂಜಿನ ಮುಸುಕೆಳೆದ ಮಡಿಕೇರಿಯ ತೆರೆದೊಂದೇ ಹೋಟೆಲನ್ನು ಹಸಿದ ಹನ್ನೊಂದು ಬಾಯಿ ಸೇರುವಾಗ ಗಂಟೆಯೂ ಹನ್ನೊಂದು! ಅಲ್ಲಿ ಸಿಕ್ಕಿದ್ದನ್ನೆಲ್ಲಾ ಮುಕ್ಕಿದೆವು ಎಂದರೆ ಅತಿಶಯೋಕ್ತಿ ಏನೂ ಇಲ್ಲ. ರಾಂಪಣ್ಣ ಸ್ಕೂಟರ್ ಅನಿವಾರ್ಯತೆಯಲ್ಲಿ ಅಲ್ಲಿ ಹೊಟೆಲ್ ರೂಂ ಮಾಡಿ ನಿಂತರು. ಅವರಿಗೆ ಧೈರ್ಯಕ್ಕೂ ಜೊತೆಗೊಡಲೂ ಅರವಿಂದ ಗ್ರೆಗರಿಯೊಡನೆ ಉಳಿದುಕೊಂಡರು. ಬಸವರಾಜ್ ಶಾಂತರ ಜೋಡಿ, ಸುಸ್ತು ಪರಿಹಾರಕ್ಕಾಗಿಯೇ ಇನ್ನೊಂದು ಕೋಣೆ ಮಾಡಿ ಹಿಂದುಳಿದರು. ಉಳಿದ ಮೂರು ಬೈಕ್ ಮತ್ತು ಆರು ಮಂದಿ ರಾಜಮಾರ್ಗದಲ್ಲೇ ಮತ್ತೆ ಮಂಗಳೂರು ಮುಖಿಗಳಾಗುವಾಗ ದಿನ ಮಗುಚಲು ಕಾಲೇ ಗಂಟೆ ಉಳಿದಿತ್ತು.
ಕನ್ನಡಿಗನಾದ ಅರ್ಥಾತ್ ಕನ್ನಡಕ ಹಾಕಿದವನಾದ ನನಗೆ ಹೆದ್ದೀಪದ ಬೆಳಕಿನಲ್ಲಿ ರಾತ್ರಿ ಸವಾರಿಗಳು ಯಾವತ್ತೂ ಸಂತೋಷದಾಯಕವಲ್ಲ. ಮುಖ್ಯವಾಗಿ ಹೆದ್ದಾರಿಗಳಲ್ಲಿ ಎದುರಾಗುವ ನಿಶಾಚರಿ ಬಸ್ಸುಗಳು, ಅತಿಭಾರದ ಲಾರಿಗಳು ಹಾಗೂ ಎಷ್ಟೋ ಇತರ ಎದುರು ವಾಹನಗಳು ತಮ್ಮ ದೀಪ ತಗ್ಗಿಸುವ ಶಿಸ್ತು ಪಾಲಿಸದಾಗ ಎಷ್ಟೊ ಬಾರಿ ನಾನು ಅಕ್ಷರಶಃ ಕುರುಡಾಗುವುದುಂಟು. ಅಂಥಲ್ಲೆಲ್ಲ ಅದೃಷ್ಟ ನಂಬಿ ನುಗ್ಗುವ ಭಂಡತನ ನನ್ನದಲ್ಲ. ಆ ಕಾಲದಲ್ಲಂತೂ ಕತ್ತಲಾದದ್ದೇ ರಸ್ತೆಯ ಬಿಸುಪನ್ನು ಇಷ್ಟಪಟ್ಟು ಮಧ್ಯದಲ್ಲೇ ಮಲಗುವ ಬೀಡಾಡಿ ಜಾನುವಾರು, ಕೆಲವೊಮ್ಮೆ ಇನ್ಯಾವುದೋ ವಾಹನಕ್ಕೆ ಸಿಕ್ಕು ಸತ್ತು ಬಿದ್ದ ನಾಯಿಗಳನ್ನು ನಾವು ನಿರೀಕ್ಷಿಸುತ್ತಲೇ ಇರಬೇಕಾಗುತ್ತಿತ್ತು. ಹೊಂಡ, ದಾರಿಬದಿಯ ಹರುಕು, ಸೂಚನೆಯಿಲ್ಲದ ಮತ್ತು ಆಯ ಅಳತೆಗೊಂದು ವೈಜ್ಞಾನಿಕತೆಯಿಲ್ಲದ ರಸ್ತೆ ಡುಬ್ಬಗಳು ಎಲ್ಲಾ ನನ್ನನ್ನೇ ಹೊಂಚುತ್ತಿರುತ್ತವೆ! ಹಾಗಾಗಿ ಪ್ರಾಯದಲ್ಲಿ ನನಗಿಂತಲೂ ಸಣ್ಣವರೂ ಸವಾರಿಯಲ್ಲಿ ಹೆಚ್ಚಿನ ಚುರುಕಿನವರೂ ಆದ ಚಾರ್ಲ್ಸ್, ಶರತ್ ಜೋಡಿಯನ್ನು ಮುಂದೆ ಬಿಟ್ಟೆ. ಅಧೈರ್ಯದ ನಾರಾಯಣ ಭಟ್ ಇಲ್ಯಾಸ್ ಜೋಡಿ ನಡುವೆ. ನಿಧಾನವಾದರೂ ಖಚಿತವಾಗಿ ಹಿಂದಿನ ಕಾವಲುಗಾರನಾಗಿ ನನ್ನ ಸವಾರಿ ಮಂಗಳೂರ ದಾರಿ ಹಿಡಿಯಿತು.
ಮಾರ್ಚ್ ತಿಂಗಳ ಸೆಕೆಯ ಪ್ರಭಾವ ಸಂಪಾಜೆಗೆ ಬರುವಾಗ ಅನುಭವಕ್ಕೆ ಬಂತು. ಆದರೆ ಅಲ್ಲಲ್ಲಿ ಮುಖಕ್ಕೆ ನೀರು ತಳಿದು, ಸುಳ್ಯದಲ್ಲೊಂದು ಚಾ ಹಾಕಿ, ಇಡೀ ರಾತ್ರಿ ನಮ್ಮದು ಎನ್ನುವ ಸಮಾಧಾನದಲ್ಲೇ ಓಡಿಸುತ್ತ ಬಂದಿದ್ದೆವು. ಒಮ್ಮೊಮ್ಮೆ ಈ ಸಮಾಧಾನವೇ ನಿಷ್ಕ್ರಿಯೆಗೆ ಕಾರಣವಾಗುತ್ತದೋ ಏನೋ. ಅದರ ಫಲವಾಗಿ ಭೀಕರ ಪ್ರಪಾತದಂಚಿನಲ್ಲಿ ಇಣುಕಿ ಬಂದ ಅನುಭವ ನಮ್ಮದು. ತಲೆನೂರ್ಮಳೆ ಘಾಟಿಯಲ್ಲಿ ಕಾಡು ನುಗ್ಗಿದಾಗ, ಏರಿನಲ್ಲಿ ದಮ್ಮು ಸಿಕ್ಕಾಗ, ಬೈಕ್ ಅಡ್ಡ ಬಿದ್ದಾಗ, ಗಂಟಲೊಣಗಿ ತಹತಹಿಸಿದಾಗಲೂ ಮೂಡದ ಭಾವ, ಪಾಣೆಮಂಗಳೂರು ಸೇತುವೆಯಲ್ಲಿ ಬಂದಿತ್ತು. ನಮ್ಮ ಜೋಡಿ ಪವಾಡ ಸದೃಶವಾಗಿ ಬದುಕುಳಿದಿತ್ತು. ಮತ್ತೆ ಅರ್ಧವೇ ಗಂಟೆಯ ನಿದ್ರೆ. ಚೇತರಿಸಿಕೊಂಡು ಸುಕ್ಷೇಮವಾಗಿ ಮಂಗಳೂರು ತಲಪಿದೆವು. ಹಿಂದುಳಿದವರು ಮಾರಣೇ ದಿನ ಹಗಲಿನಲ್ಲಿ ಎಲ್ಲ ಸರಿಪಡಿಸಿಕೊಂಡು ನಿಧಾನವಾಗಿ ಮರಳಿದರು.
ಮೂರು ದಾರಿಗಳು ನೂರು ಸಂಭಾವ್ಯತೆಗಳನ್ನು ತೋರಿದ್ದವು. ಪಶ್ಚಿಮ ಘಟ್ಟ ತುಂಬ ಹರಿದಿರುವ, ಯಾವ ನಕ್ಷೆಗೂ ಸಿಲುಕದ ಇನ್ನಷ್ಟು ಜಾಡುಗಳು, ಸವಾಲುಗಳು ಸಾಹಸಕ್ಕೊಲಿಯಲು ಕಾದಿವೆ; ಪ್ರಕೃತಿ – ಸಾಹಸಿಗೆ! (ಉದಯವಾಣಿ ೨೯-೧೨-೧೯೮೫)
[ಕ್ಷಮಿಸಿ, ಭರತ ವಾಕ್ಯ ನನ್ನ ಅಂದಿನ ಧೋರಣೆ. ಇಂದು? ಪ್ರಕೃತಿ ಸಂರಕ್ಷಣೆಯೇ ಸಾಹಸ!]
ಹೌದು! ಇಂದು ಪ್ರಕೃತಿ ಸಂರಕ್ಷಣೆಯೇ ಸಾಹಸ. ಮನುಷ್ಯನ ಬೀಡು ಕಾಣದ ತಾಣಗಳೇ ಕಡಿಮೆ!- ಪೆಜತ್ತಾಯ ಎಸ್. ಎಮ್.
ಸಂಪಾಜೆಯ ಹತ್ತಿರದ ಯಾವೂದೋ ಊರಿನಲ್ಲಿ ತಾಳಮದ್ದಳೆಗೆ ಹೋಗಿ ಬರುವಾಗ ನಮ್ಮ ಓಮ್ನಿಯ ಟೈರ್ ಕಿತ್ತು(ರಟ್ಟಿದ್ದು)ಪುಣ್ಯಕ್ಕೆ ನಮಗೆಲ್ಲಾ ಏನೂ ಆಗದೇ, (ಬಹುಶ: ನಾನು ರಾಮನ ಪಾತ್ರವಹಿಸಿದ್ದಿರಬೇಕು! “ಜೇಠಮಲಾನಿ ಗಮನಿಸುವದು ಒಳ್ಳೆಯದು”) ಮತ್ತೆ ಏನೆಲ್ಲಾ ಸಾಹಸ ಮಾಡಿ ವಾಪಾಸು ಬಂದ ನೆನಪಾಯಿತು. ಇಂತಹ ಬರಹಗಳು ನಮಗೆ ನಮ್ಮತನವನ್ನು ಅರಿವು ಮಾಡಿಕೊಳ್ಲುವಲ್ಲಿ ಸಫಲವಗುತ್ತವೆ ಧನ್ಯವಾದಗಳು.
ರಥದ ಚಕ್ರ ಕೀಲು ಕಳೆದು ರಟ್ಟುವ ಸ್ಥಿತಿ ಬಂದದ್ದು, ಪತ್ನಿ ಕಿರು ಬೆರಳು ಕೊಟ್ಟದ್ದು ರಾಮಾಯಣಕ್ಕೆ (ಚೊರೆ ಹಿಡಿದವರಿಗೆ “ನಿನ್ನ ರಾಮಾಯಣ ಮುಗೀಲಿಲ್ವಾ” ಎನ್ನುವ ಅರ್ಥದಲ್ಲಿ) ಕಾರಣವಾದ್ದರಿಂದಿರಬೇಕು ನಿಮ್ಮ ರಥದ (ಓಮ್ನಿ) ಚಕ್ರ ರಟ್ಟುವುದು ಅನಿವಾರ್ಯವಾಗಿರಬಹುದಲ್ಲವೇ ಶ್ರೀಮನ್ನಾರಾಯಣಾ? ಆದರೆ ಅನಂತರವೂ ನೀವು `ಏನೆಲ್ಲಾ' ಎನ್ನುವಲ್ಲೊಂದು ಸ್ವತಂತ್ರ ರಾಮಾಯಣ ಇದೆ ಎಂಬ ಸುಳುಹು ಕೊಟ್ಟಿದ್ದೀರಿ, ವಿಸ್ತರಿಸಬೇಕಿತ್ತು, ನಿಮ್ಮಂಥಾ ನಿಷ್ಠಾವಂತ ಓದುಗರ ಸಂಪತ್ತು ವೃದ್ಧಿಸುತ್ತಿತ್ತು.ಆಕ್ರೋಶವರ್ಜನ
ಇಡೀ ಭಾರತ ದೇಶದಲ್ಲಿ ಬ್ರಿಟಿಷರು ದೊಡ್ಡ ಸಣ್ಣ ಸಾವಿರಾರು ಉಕ್ಕಿನ ಸೇತುವೆಗಳನ್ನು ಕಟ್ಟಿಸಿದರು. ಅವು ಇಂದಿಗೂ ಕೆಲಸ ಮಾಡುತ್ತಿದ್ದ್ದಾವೆ. ಆದರೆ ಅವೆಲ್ಲಾ ಎತ್ತಿನ ಗಾಡಿ , ಇದ್ದಲು ಬಸ್ಸುಗಳ ಯುಗದಲ್ಲಿ ಕಟ್ಟಿಸಿದವುಗಳು. ಆದುದರಿಂದ ಇಂದು ನಿರುಪಯೋಗವಾಗಿವೆ. ಆಚಾರ್ಯ ಇನಾಂದಾರರ ಒಂದು ಮಾತು ಸ್ತುತ್ಯಾರ್ಹ: Our engineers are such that the dams/bridges they build need repair, even before they are completed.Jai Hind,K C Kalkura B.A, B.LAdvocate