ಪುತ್ತೂರಿನ ಕೃಷಿ ಯಂತ್ರಮೇಳ ನನ್ನ ಲೆಕ್ಕಕ್ಕೆ ಪೂರ್ಣ ಹಳಿ ತಪ್ಪಿದೆ. ಆಶಯ (ಆರ್ಥಿಕ ಯಶಸ್ಸು), ಆಸಕ್ತಿಗಳ (ಪರಿಸರ ಪ್ರೇಮ) ಸಮನ್ವಯಕ್ಕೆ ಯಂತ್ರ ಮೇಳ ತಪ್ಪು ಆದರ್ಶಗಳನ್ನು ತೋರಿಸುವಂತೇ ನನಗೆ ಅನಿಸಿತು. ತನ್ನ ನೆಲವೊಂದುಳಿದು ಜಗತ್ತಿನೆಲ್ಲಾ ಪೆಟ್ರೋ ನಿಕ್ಷೇಪಗಳು ತನ್ನ ದಾಸ್ತಾನು ಕೋಠಿ, ತನ್ನ ಸೌಕರ್ಯಕ್ಕೊದಗುವ ಮಾಲಿನ್ಯಕಾರಕ ಉದ್ದಿಮೆಗಳಿಗೆಲ್ಲಾ ಅನ್ಯ ದೇಶಗಳೇ ಗಟ್ಟಿನೆಲೆ ಎಂದಿತ್ಯಾದಿ ಭಾವಿಸುವ ದೇಶಗಳ ಜೀವನ ಶೈಲಿಯಲ್ಲಿ ನಾವು ಮುಂದುವರಿಯುವುದು ಅಸಾಧ್ಯ. ಪೆಟ್ರೋ ಮೂಲ (ಪೆಟ್ರೋಲ್, ಡೀಸೆಲ್, ಸೀಮೆಣ್ಣೆ, ಗ್ಯಾಸ್ ಇತ್ಯಾದಿ) ಮತ್ತು ಅಂಥದ್ದೇ ಮರುಹುಟ್ಟು ಇಲ್ಲದ ಇಂಧನಗಳನ್ನೋ (ಕಲ್ಲಿದ್ದಲು, ಪರಮಾಣು) ಬೃಹತ್ ವ್ಯವಸ್ಥೆಯ ಉತ್ಪನ್ನವೇ ಆದ ವಿದ್ಯುಚ್ಛಕ್ತಿಯನ್ನೋ ನಂಬಿಕೊಂಡು ಬರುವ ಯಂತ್ರಗಳಿಗೆ ಭವಿಷ್ಯ ಕರಾಳವಾಗಿದೆ. ಮನುಷ್ಯ ಶಕ್ತಿಗೆ ಮತ್ತು ಕೌಶಲ್ಯಕ್ಕೆ ಪೂರಕವಾಗುವ, ಪ್ರಾಕೃತಿಕ ಶಿಸ್ತನ್ನು ಕೆಡಿಸದ ಶಕ್ತಿಮೂಲಗಳ (ಸೂರ್ಯ, ಬೀಸುಗಾಳಿ, ಸುರಿಮಳೆ, ಹರಿನೀರು ಇತ್ಯಾದಿ) ಕಡೆಗೆ ಮುಖ ಒಡ್ಡಿದವರನ್ನು ಗೊಂದಲಕ್ಕೆ ಬೀಳಿಸುವಂತೆ ಮೇಳದ ಪ್ರದರ್ಶಿಕೆಗಳು ಮೆರೆದಿದ್ದವು.

ಜೀವಾಧಾರವೇ ಆದ ಶುದ್ಧ ನೀರು, ನೆಲ, ಬೀಜ ಮುಂತಾದವುಗಳ ಸ್ವಯಂಪೂರ್ಣತೆಯ ಹೋರಾಟ ಒಂದು ಕಡೆ. ಯೋಗ್ಯ ಫಸಲು ಎರಡನೆಯ ಲಕ್ಷ್ಯ. ಸುಯೋಗ್ಯ ಸಂಗ್ರಹ (ಅಗತ್ಯವಿದ್ದಲ್ಲಿ ಸಂಸ್ಕರಣೆ ಸೇರಿ), ಸಾಗಣೆ, ಬೆಲೆ, ಬಳಕೆ ಚರಮ ಗುರಿ. ಇವಕ್ಕೆಲ್ಲ ಒದಗುವ ಯಂತ್ರ ಎನ್ನುವುದಕ್ಕಿಂತ ಸಲಕರಣೆಗಳ ಪ್ರಸರಣೆಗೆ, ಒಟ್ಟು ತತ್ತ್ವಗಳ ಮುಖಾಮುಖಿಗೆ ಈ ಮೇಳ ಒದಗುತ್ತದೆ ಎನ್ನುವುದು ನನ್ನ ನಿರೀಕ್ಷೆಯಲ್ಲಿತ್ತು. ಬದಲು, ಟ್ರ್ಯಾಕ್ಟರ್ ಜೆಸಿಬಿಗಳಿಂದ ತೊಡಗಿ, ವಿದ್ಯುಚ್ಛಕ್ತಿಯಿಂದ ಸರದಿಯಲ್ಲಿ ಒಮ್ಮೆಗೆ ಒಂದೇ ತೆಂಗಿನಕಾಯಿ ಸಿಪ್ಪೆ ಸುಲಿಯಲು ಬರುವ ಭಾರೀ ಮಾದರಿಯವರೆಗೂ (ಒಂದು ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳ ತಯಾರಿ) ಹೆಚ್ಚಿವನೆಲ್ಲಾ ಮನುಷ್ಯ ಶಕ್ತಿ ಮತ್ತು ಕೌಶಲ್ಯವನ್ನು ನಿರಾಕರಿಸಿ ವಿಕಸಿಸಿದ್ದವು. ಹೆಚ್ಚು ಕಡಿಮೆ ಅಡಿಕೆ ಪತ್ರಿಕೆಯಲ್ಲೀಗಾಗಲೇ ಸಾಕಷ್ಟು ಜಾಹೀರಾತುಗಳಲ್ಲಿ ಬೆರಗು ಹುಟ್ಟಿಸಿದ ಅಷ್ಟೂ ಯಂತ್ರಗಳು ಒಂದೇ ಜಾಗದಲ್ಲಿ ಪ್ರದರ್ಶನ ಮಾರಾಟಕ್ಕೆ ಬಂದಂತಿತ್ತು. ಮಾರುತಿಯೋ ಮತ್ತೊಂದೋ ಕಾರಿನ ಮಾದರಿಯೂ ಕೃಷಿಮೇಳದಲ್ಲಿ ಪ್ರದರ್ಶನ ಮಳಿಗೆ ಹಿಡಿದು ನಿಂತದ್ದಂತೂ ದೊಡ್ಡ ತಮಾಷೆಯೇ ಸರಿ. (ನಾಳೆ ಮಣಪ್ಪುರಂ, ಆಲುಕ್ಕಾಸ್ ಕೂಡಾ ಇಂಥಲ್ಲಿ ಮಳಿಗೆ ಕೇಳಬಹುದು!) ಕೃಷಿಕನ ಕೈಗೆ ಲೇಖನಿ ಹಿಡಿಸಿ, ಬಲುದೊಡ್ಡ ನಾಯಕತ್ವ ಕೊಟ್ಟ ಅಡಿಕೆ ಪತ್ರಿಕೆ ಮುಂದಿನ ದಿನಗಳಲ್ಲಾದರೂ ಈ ಮೇಳದ ದಿಕ್ಚ್ಯುತಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಾನು ಆಶಿಸುತ್ತೇನೆ.

[ಮರೆತು ಹೋಗುವ ಮುನ್ನ, ಶುದ್ಧ ನೀರಿನ ಬಗ್ಗೆ ಹೇಳಿದಂತೆ ಗಾಳಿಯ ಬಗ್ಗೆಯೂ ಇಲ್ಲೇ ಎರಡು ಮಾತು ಪೋಣಿಸಿಬಿಡುತ್ತೇನೆ. ಹಸುರಿನ ಆವರಣದಲ್ಲಿರುವ ಬಹುಸಂಖ್ಯಾತ ಕೃಷಿಕರು ಇದನ್ನು ಉಪೇಕ್ಷಿಸಿದಂತಿದೆ! “ಹಂಪನಕಟ್ಟೆಯ ಟ್ರಾಫಿಕ್ ಪೊಲೂಶನ್ನಲ್ಲಿ ಮೂಗು ಬಿಡ್ಲಿಕ್ಕಾಗಲಿಲ್ಲ ಮಾರಾಯ್ತೀ” ಎಂದು ಹೆಂಡತಿಯಲ್ಲಿ ದೂರಿಕೊಳ್ಳುವ ಹಳ್ಳಿ ಮೂಲೆಯ ರೈತ, ಸೀಮೆಣ್ಣೆ ಹೊಗೆ ಕಾರುವ ರಿಕ್ಷಾವನ್ನು ತನ್ನ ತೋಟದ ಅಂತರ್ ಸಾಗಾಟಕ್ಕೆ ಬಳಸುವಾಗ ಮರೆತ ಮಾತೊಂದಿದೆ. ವಾಮಂಜೂರಿನ ಬೃಹತ್ ಕಸದ ಬೆಟ್ಟ ಆಕಸ್ಮಿಕದ ಬೆಂಕಿಗೇ ಆದರೂ ಭೀಕರ ಹೊಗೆ ಕಾರುವಾಗ, ಪಿಲಿಕುಳಕ್ಕೆ ಹಳ್ಳೀ ಹೈಕಳನ್ನು ಒಯ್ಯುವ ವಿಜ್ಞಾನ ಮೇಷ್ಟ್ರು (ಹೆಚ್ಚಾಗಿ ಕೃಷಿಕ ಕೂಡಾ) “ಗ್ರೀನ್ ಹೌಸ್ ಇಫೆಕ್ಟೂ ಗ್ಲೋಬಲ್ ವಾರ್ಮಿಂಗೂ” ಬೊಬ್ಬೆ ಹಾಕಿ, ತನ್ನ ಮನೆಯ ಬಚ್ಚಲೊಲೆಗೆ ಮೋರ್, ಮಾಲ್‌ಗಳ ‘ಕಸ’ ತುಂಬುವಾಗ ಮರೆತ ಮಾತೂ ಅದೇ. ವಾಯುಮಾಲಿನ್ಯ ಪೇಟೆಯಲ್ಲಾಗಲೀ ಹಳ್ಳಿಮೂಲೆಯಲ್ಲಾಗಲೀ ದಟ್ಟ ದೃಶ್ಯದಲ್ಲಾಗಲೀ ವಿಕೇಂದ್ರಿತ ನೆಲೆಗಳಲ್ಲಾಗಲೀ ನಮಗೆ ಇರುವುದೊಂದೇ ವಾಯುಮಂಡಲ]

ಕಾಲ ಒಂದಿತ್ತು, ಕೃಷಿಕನಿಗೆ ಅಪಾರ ಜನ ಜಾನುವಾರು ಶಕ್ತಿ, ಅನಿವಾರ್ಯತೆ (ಬೇರೆ ಗೊತ್ತಿಲ್ಲ), ವೃತ್ತಿ ಪ್ರೀತಿ (ಬೇರೆ ಬೇಕಿಲ್ಲ), ಕೌಶಲ್ಯ ಮುಂತಾದವು ಅರಿವಿಲ್ಲದೇ ಆಸ್ತಿಗಳಾಗಿದ್ದವು. ಇಂದಿನ ಕೃಷಿರಂಗ ಇವುಗಳಿಂದ ಪರೋಕ್ಷ ಉಪೇಕ್ಷಿತವೂ ಆಗಿ, ಪ್ರತ್ಯಕ್ಷ ತೀರಾ ಅವಹೇಳನಕ್ಕೂ ಒಳಗಾಗಿ ಬಳಲುತ್ತಿದೆ. ಇಲ್ಲಿ (ಹೆಚ್ಚಿನವು) ನಾವು ಬೆಳೆದದ್ದೆಲ್ಲ ನೇರ ನಮ್ಮ ಉಪಯೋಗಕ್ಕಿರುವವಲ್ಲ ಅಥವಾ ಉಪಯೋಗಕ್ಕಿರುವವನ್ನೇ ಬೆಳೆಸಿದರೂ ಹಸನಾದ ಜೀವನಕ್ಕೆ ಬಳಸಿಕೊಳ್ಳುವುದು ಗೊತ್ತಿಲ್ಲ. ಈ ದಾರಿಯಲ್ಲಿ ನಾವು ಹೆಚ್ಚು ಕಡಿಮೆ ಕುರುಡು ಕೊನೆ (ಡೆಡ್ಡೆಂಡ್!) ಮುಟ್ಟುತ್ತಿದ್ದೇವೆ. ಅಡಿಕೆ, ತೆಂಗು, ಕೊಕ್ಕೋ, ವೆನಿಲ್ಲಾ ಎಂದೆಲ್ಲಾ ಸುತ್ತಾಡಿ ರಬ್ಬರಿಗೆ ಢಿಕ್ಕಿ ಹೊಡೆಯುತ್ತಿದ್ದೇವೆ. (‘ಚಾ ಒಂದೇ ಬೆಳೆ’ ಎನ್ನುವ ಮೂನಾರಿನಲ್ಲಿ ಕಂಡ ನೆನಪು – ಅಂಗಳದ ಗುಲಾಬಿ, ಕರಿಬೇವೂ ಕಳಚಿ ಚಾ ಪೊದರು ಬೆಳೆಸಿದ್ದರು. ತದ್ವಿರುದ್ಧವಾಗಿ, ಎಡೆಂಬಳೆಯ ನನ್ನ ಚಿಕ್ಕಮ್ಮನ ಮಗ (ತಮ್ಮ) – ಸತ್ಯನಾರಾಯಣ, ವರ್ಷದ ಹಿಂದೆ ಹೂ ಬಿಟ್ಟ ಬಿದಿರನ್ನು ಏನೂ ಮಾಡದೆ ಜೀವವೈವಿಧ್ಯಕ್ಕೆ ಕೊಡುಗೆಯಾಗಿ, ನೆಲದ ಫಲವಂತಿಕೆಗೆಂದು ಬಿಟ್ಟಿದ್ದ. ವರ್ಷ ಕಳೆಯುವುದರೊಳಗೆ ಅದು ಬುಡ ಕುಂಬಾಗಿ ಮಗುಚಿಬಿತ್ತು.

ಅದರ ತೆಕ್ಕೆಗೆ ಸಿಕ್ಕಿ ಒತ್ತಿನ ಅಡಿಕೆ, ಹಲಸು ಮರಗಳು ನಷ್ಟವಾದವು. ಈಗ ಅವನು ಅನಿವಾರ್ಯತೆಯಲ್ಲಿ ಬಿದಿರು ಕಂತ್ರಾಟು ಕೊಟ್ಟಿದ್ದಾನೆ. ನಷ್ಟವನ್ನೇ ಎತ್ತಿ ಹಿಡಿದು, ಈಗವನಿಗೆ ಬಿಟ್ಟೀ ಸಲಹೆಗಳು ಧಾರಾಳ ಬರುತ್ತಿವೆ – ಇನ್ನಾದರೂ ಬಿದಿರು ಹಿಂಡಲಿನ ವ್ಯರ್ಥ ಜಾಗದಲ್ಲಿ ನಾಲ್ಕು ರಬ್ಬರ್ ಗಿಡ ಹಾಕು.)

ಯಂತ್ರಮೇಳದಲ್ಲಿ ನನ್ನನು ಕಂಡ ಗೆಳೆಯ ಶ್ರೀಪಡ್ರೆ ತಮಾಶೆಗೆ ಉದ್ಗರಿಸಿದ್ದರು “ಆರೋಹಣದವರಿಗೆ ಕೃಷಿಮೇಳದಲ್ಲೇನು ಕೆಲಸ!” ಹೇಳಿಕೊಳ್ಳಲು ನಾನು ಎಂದೂ ಕೃಷಿಕನಲ್ಲ. ಆದರೆ (ಕಳೆದ ನಾಲ್ಕೈದು ವರ್ಷಗಳಿಂದ ಅಡಿಕೆ ಪತ್ರಿಕೆಯ ಚಂದಾದಾರ) ಕೌಟುಂಬಿಕವಾಗಿ ಸದಾ ಕೃಷಿಕ ಪರಿವೇಷ್ಟಿತನಾಗಿ, ಕೃಷಿ ಎಂದರೆ ಪ್ರಕೃತಿ ಅನುಸಂಧಾನದ ಪ್ರಧಾನಮುಖ ಎಂದೇ ನಂಬಿ ಬೆಳೆದವನು. ನನ್ನ ಎರಡೂ ಅಜ್ಜಂದಿರ ಮನೆಯ ನೆಲೆ ಕೃಷಿಯೇ ಆದ್ದರಿಂದ ನನಗೆ ಬಾಲ್ಯದಿಂದಲೂ ಸಹಜವಾಗಿ ಇದರೆಲ್ಲಾ ಚಟುವಟಿಕೆಗಳು ಆಪ್ತ. ಮಡಿಕೇರಿ ಕಾಲೇಜು ಸಮೀಪದ ನಮ್ಮ ಮನೆಯ ಅಂಗಳದಲ್ಲಿ (ನಾಲ್ಕು ಐದನೇ ತರಗತಿಯಲ್ಲಿದ್ದವನು) ಚಿಕ್ಕಪ್ಪಂದಿರಾದ ರಾಘವೇಂದ್ರ, ದಿವಾಕರರಿಗೆ (ಇಬ್ಬರೂ ಇಂದು ವೃತ್ತಿ ಕೃಷಿಕರಾಗಿದ್ದು, ನಿವೃತ್ತರು) ಕಡಿಮೆಯಿಲ್ಲ ಎಂದು ಸಾರುವಂತೆ (ಎರಡೋ ನಾಲ್ಕೋ) ವಿಲಾಯಿತಿ ಚೆಟ್ಟು (=ಬೀನ್ಸ್) ಬೆಳೆಸಿದ್ದೆ, ಟೆಲಿಫೋನ್ ತಂತಿಗೆ ಹಬ್ಬಿದ್ದ ಸೀಮೆ ಬದನೆ ಕೊಯ್ದಿದ್ದೆ. (ಅಜ್ಜನಮನೆ) ಮೋದೂರಿನಲ್ಲಿ ರಜಾದಿನದಂದು ನೇಗಿಲು ಹಿಡಿದು ಮುಗ್ಗರಿಸಿದ್ದು, ಅರಸಿನಮಕ್ಕಿಯ ವಿಸ್ತಾರ ಹರಹಿನ ಗದ್ದೆಯ ನೀರ ತೂಬಿನ ಅಂಚಿನ ಪುಟ್ಟಕಳದ ‘ಪೂರ್ತಿ’ (ಆರೆಂಟು ಬುಡವಿದ್ದಿರಬೇಕು) ನಾನೇ ನೇಜಿ ನೆಟ್ಟು ಭತ್ತ ಬೆಳೆದದ್ದು ಚಿರಂಜೀವಿ ನೆನಪು. ಬೆಂಗಳೂರಿನಲ್ಲಿ ನಮ್ಮದು ಒಂದನೇ ಮಾಳಿಗೆಯಲ್ಲಿದ್ದ ಬಾಡಿಗೆ ಮನೆ. ಅದರ ಖಾಲಿ ತಾರಸಿಯ ಮೇಲಕ್ಕೆ, ಯಾವುದೋ ಖಾಲೀ ನಿವೇಶನದಿಂದ ಬುಟ್ಟಿಯಲ್ಲಿ ಮಣ್ಣು ತುಂಬಿ ತಂದು, ಟೊಮೆಟೋ ಮೂಲಂಗಿಯೇ ಮೊದಲಾದವು ಬೆಳೆಯುವಲ್ಲಿ ಅಮ್ಮನಿಗೆ ಬಲಗೈ ನಾನೇ. ಮೈಸೂರಿನಲ್ಲಿ ಹೊಸ ಬಾಡಿಗೆ ಮನೆ ಸೇರಿದಾಗ, ಸ್ವಲ್ಪವೇ ಕಾಲದಲ್ಲಿ ಕಾಮಾಕ್ಷೀ ಆಸ್ಪತ್ರೆಯ ಸ್ವಂತ ಮನೆಗೆ ಹೋದಾಗ ಅಂಗಳದ ಮೂಲ ವ್ಯವಸ್ಥೆಯಿಡೀ ನನ್ನದೇ ಆಗಿತ್ತು. (ಈಗದಕ್ಕೆ ಲ್ಯಾಂಡ್ ಸ್ಕೇಪಿಂಗ್ ಎಂಬ ಭರ್ಜರಿ ಹೆಸರಿದೆ; ಭರ್ಜರಿ ಸಂಪಾದನೆಯೂ ಇರುವ ಕೌಶಲ್ಯ!) ನನ್ನ ಇಂದಿನ ವನ್ಯಾವೇಶ ಏನಿದ್ದರೂ ಇವೆಲ್ಲದರ ಮುಂದುವರಿಕೆ; ಎಂದೂ ಕೃಷಿ ವಿರೋಧಿಯಲ್ಲ. (ಇಷ್ಟು ಹೇಳಿದ್ದು ಖಂಡಿತಕ್ಕೂ ಪಡ್ರೆಯವರ ಸಮಾಧಾನಕ್ಕಲ್ಲ, ವನ್ಯಪ್ರೇಮಿಗಳು ಕೃಷಿವೈರಿಗಳು ಎಂಬ ಭ್ರಮೆಯವರಿಗಾಗಿ) “ಬಾಳೇ ತೋಟದ ಪಕ್ಕದ ಕಾಡೊಳು ವಾಸಿಸುತ್ತಿದ್ದ ಮಂಗಗಳು” ಎಂದಂತೇ ನಾನು “ಮಂಗಗಳಿದ್ದ ಕಾಡಿನ ಪಕ್ಕದಿ ಪಸರಿಸುತ್ತಿದ್ದ ಕದಳಿವನ”ದ ಕಲಾಪಗಳಲ್ಲಿ ಆಸಕ್ತನೇ.

ದಾರಿ ತಪ್ಪಿದ ಶಿಕ್ಷಣ ಮತ್ತು ಮೌಲ್ಯರಹಿತ ಸಾಮಾಜಿಕ ಭದ್ರತೆಗಳು ರೂಢಿಸಿಹೋಗಿ ಇಂದು ನಾವು ಯಾವುದೇ ವೃತ್ತಿರಂಗಕ್ಕೆ ಹೋದರೂ ಪ್ರಾಥಮಿಕ ಹಂತದಿಂದ ಕಲಿಯಬೇಕಾಗಿದೆ. ಈ ಕಾರಣಕ್ಕೆ ಕೃಷಿ ಹಿನ್ನೆಲೆಯಿಂದಲೇ ಬಂದವರೂ ಇಂದು ಕೃಷಿಯಲ್ಲಿ ಮುಂದುವರಿಯುವುದಾದರೆ ಅಸಾಮಾನ್ಯ ಕೊರತೆಗಳು, ಆತಂಕಗಳು ಕಾಡುತ್ತವೆ. ಅವನ್ನು ಗ್ರಹಿಸಿ, ಚರ್ಚಿಸಿ, ರೂಪಿಸಿ, ರೂಢಿಸಿಕೊಡುವಂಥ ಯಂತ್ರ ಪರಿಣತರು ಮೇಳಕ್ಕೆ ಬರಬೇಕಿತ್ತು. ಆದರೆ ಸಿದ್ಧ ಮಾದರಿಗಳನ್ನು ಪ್ರದರ್ಶಿಸಿ, ಗಿರಾಕಿ ಹುಡುಕುವ ವ್ಯಾಪಾರಿಗಳನ್ನು ಧಾರಾಳ ಕಂಡೆ. (ಗೆಳೆಯ ಗೋವಿಂದ ಕೊಟ್ಟ ಈ ಸೇತುವಿನಲ್ಲಿ ಸಿದ್ಧ ಮಾದರಿಯಾದ ಒಂದು ವೀಡ್ ಕಟ್ಟರ್ ಮತ್ತು ಸಾಂಪ್ರದಾಯಿಕ ಹುಲ್ಲು ಹೆರೆ ಕತ್ತಿಯ ನಡುವಣ ಸ್ಪರ್ಧೆಯ ವೀಡಿಯೋ ಚಿತ್ರ ತುಂಬ ಕುತೂಹಲಕರ)

ಅಡಿಕೆ ಪತ್ರಿಕೆಯ ಯಾವ ಸಂಚಿಕೆ ತೆಗೆದರೂ ಅದ್ದೂರಿಯ ಜಾಹೀರಾತುಗಳಲ್ಲಿ ಕಾಣುವ ಮಾಲುಗಳೇನೋ ಪ್ರತ್ಯಕ್ಷವಾಗಿದ್ದವು. ಆದರೆ ಅದೇ ಪತ್ರಿಕೆಯ ಲೇಖನಗಳಲ್ಲಿ ಹಾಸುಹೊಕ್ಕಾದ ಪ್ರತಿಭೆಗಳು ಇಲ್ಲಿ ಬಹುತೇಕ ಬರಲೇ ಇಲ್ಲ. ಬಂದರೂ ಹೆಚ್ಚು ‘ಕಾಣಲೇ’ ಇಲ್ಲ. ಇದಕ್ಕೆ ಉದಾಹರಣೆಯಾಗಿ ನನ್ನದೇ ಮಿತ್ರ ಬಳಗದ ಇಬ್ಬರು ಭಾಗಿಗಳನ್ನು ನನ್ನ ಅನುಭವಕ್ಕೆ ನಿಲುಕಿದಂತೆ ಸ್ವಲ್ಪ ವಿಸ್ತರಿಸುತ್ತೇನೆ. ನೆನಪಿರಲಿ, ಇಲ್ಲಿನ ಅಭಿಪ್ರಾಯಗಳು ನೇರ ಅವರವಲ್ಲ. “ಚಿಕ್ಕು ಕೊಯ್ಯುವ ಕೊಕ್ಕೆ-ಬಲೆಗೆ ಬೆಲೆ ಜಾಸ್ತಿಯಾಯ್ತು” ಏರು ಧ್ವನಿಯಲ್ಲಿ ಕೇಳಿತು. ಕಿನ್ಯದ ಸಮೀರ ರಾವ್ ಸೌಮ್ಯವಾಗಿ “ಕೊಳ್ಳಬೇಡಿ, ಉಚಿತ ಸಲಹೆ ಕೊಡುತ್ತೇನೆ, ಮಾಡಿಸಿಕೊಳ್ಳಿ. . .” ವಾದ ನಡೆಸಿದ್ದ ಪ್ರೊಫೆಸರ್ ಸಾಹೇಬರು “ಮಾಸ್ ಪ್ರೊಡಕ್ಷನ್ನಿನಲ್ಲಿ ನೀವು ಕಡಿಮೆ ಬೆಲೆಗೆ ಕೊಡಬಹುದು. . .” ಮಾತಿನ ಕೊಕ್ಕೆ ಹಾಕಿದರು. ಸಮೀರರದು ಸಣ್ಣ ನಗೆ ಮಾತ್ರ. ಮುಜುಗರ ತಪ್ಪಿಸಿಕೊಳ್ಳುವಂತೆ, “ಹೋಗಲಿ, ನಿಮ್ಮ ವಿಸಿಟಿಂಗ್ ಕಾರ್ಡ್..?” ಸಮೀರ ತನ್ನ ಚರವಾಣಿ ಸಂಖ್ಯೆಯನ್ನು ಬರೆದು ಪ್ರದರ್ಶಿಸಿದ್ದನ್ನೇ ತೋರಿದರು.

“ಓಹ್! ಕರಪತ್ರ ಏನೂ ಇಲ್ವಾ? ಅದೂ ನಾವೇ ಬರೆದುಕೊಳ್ಳಬೇಕಾ?” (ಕುಡ್ತಡ್ಕದ ಕುಮಾರ ಹೆಂಡತಿ ಕಡೆಯಿಂದ ನನಗೆ ತಮ್ಮನಾಗುತ್ತಾರೆ. ಅವರ ಮಗ – ಸುಮಂತ, ಮೇಳದನಂತರ ದೂರವಾಣಿಗೆ ಸಿಕ್ಕಾಗ, “ಅಪ್ಪ ಎಂತಾರೂ ತಂದವಾ” ದೇವಕಿ ಪ್ರಶ್ನಿಸಿದ್ದಳು. “ಹಾಂ, ಒಂದಷ್ಟು ಬಣ್ಣಬಣ್ಣದ ಪಾಂಪ್ಲೆಟ್ಟು, ಬುಕ್ಲೆಟ್ಟು.”) ಸಮೀರರಿಗೆ ಈಗಾಗಲೇ ಪ್ರಚುರಿಸಿದ ಇತರ ಅಸಂಖ್ಯ ಸಲಕರಣೆಗಳನ್ನು ಮೇಳದಲ್ಲಿ ಮಾರಾಟಕ್ಕಿರಲಿ, ಪ್ರದರ್ಶನಕ್ಕೂ ಸಜ್ಜುಗೊಳಿಸುವುದಕ್ಕೆ ಬಿಡುವಾಗಲಿಲ್ಲವಂತೆ. ಆದರೂ ತಾಳ್ಮೆಯ ಕೇಳುಗರಿಗೆ, ಮುಕ್ತ ಸಲಹೆಗೆ ಈತ ಲಭ್ಯ ಎನ್ನುವುದು ಮೇಳಕ್ಕೆ ಬಂದ ಜನಕ್ಕೆ ತಿಳಿಯುವ ಕುತೂಹಲವೇ ಉಳಿದಿರಲಿಲ್ಲ! ಇಡಿಯ ಮಳಿಗೆಯಲ್ಲಿ ಅಂಗೈ ಅಗಲದ ಚಿಕ್ಕು ಕೊಕ್ಕೆ ಮಾತ್ರ ಇಟ್ಟುಕೊಂಡು ಕುಳಿತಿದ್ದ ಸಮೀರ ನನಗೆ ಅನಾಥನಂತೇ ಕಾಣಿಸಿದ.

ಪುಸ್ತಕದ ಬದನೇ ಕಾಯಿಯನ್ನು ನೆಲದಲ್ಲೂ ಕಂಡುಕೊಂಡ ಕೃಷಿ-ಪಂಡಿತ ಇ. ವಿಠಲ ರಾವ್. “ಈಚಿನ ಸುಮಾರು ಐವತ್ತು ವರ್ಷಗಳಲ್ಲಿ ನಮ್ಮ ಸಾಂಪ್ರದಾಯಿಕ ಮಣ್ಣಿನ ಸಂಬಂಧವಿರುವವರು ರೈತರಲ್ಲ, ಉದ್ದಿಮೆಗಳ ಕಚ್ಚಾ ಮಾಲು ತಯಾರಕರು” ಎಂದು ಕಟು ಸತ್ಯ ಹೇಳಿದವರು ಈ ವಿಠಲರಾಯರು. ಅವರ ಮಗ ಸಮೀರ (ಮತ್ತೆ ತಮ್ಮ ಶೌರಿಯೂ) ನನಗೆ ಪರ್ವತಾರೋಹಣ ಸಂಬಂಧಿ. (ಕುಮಾರಧಾರೆಯ ವೀರಪ್ಪನ್ ಲೇಖನ ನೋಡಿ.) ಸಮೀರ ಕೌಟುಂಬಿಕ ನೆಲೆ ಕಳಚಿಕೊಳ್ಳದೇ ಕಲಿತದ್ದು ಪಾಲಿಟೆಕ್ನಿಕ್. ಅನಂತರ ಕಲಿಕೆಯ ಯೋಗ್ಯತೆಯನ್ನು ಒರೆಗೆ ಹಚ್ಚಲು ಕೆಲವು ವರ್ಷ ಬೆಂಗಳೂರಿನ ಬೃಹತ್ ಉದ್ದಿಮೆಯಲ್ಲಿ ದುಡಿದರು. ಅದರ ಮೇಲೆ ತಾಬೇದಾರಿ ತ್ಯಜಿಸಿ, ಬಯಸಿ ಮಣ್ಣಿಗೆ ಮರಳಿದ್ದರು. ಇಲ್ಲಿ ತಂದೆಯ ಆಶಯ, ತನ್ನ ಅಗತ್ಯಗಳೆರಡರನ್ನೂ ಮುಂದುವರಿಸಿ ಈತ ಕೃಷಿ ಹೇಗೋ ಅದಕ್ಕೊದಗುವ ಸಲಕರಣೆಗಳಲ್ಲೂ ಚಿಂತನೆ, ಪ್ರಯೋಗಕ್ಕಿಳಿದರು. ಮಾಹಿತಿ ಎಲ್ಲೆಲ್ಲಿಂದಲೋ ಸಂಗ್ರಹಿಸಿ, ನೆಲ ಬೆಳೆಗೆ ಸರಿಯಾಗಿ ಪರಿಷ್ಕರಿಸಿ, ಮಾಡಿ, ಮಾಡಿಸಿ ತನ್ನಂಥ ಕೆಲವರ ಅಗತ್ಯಕ್ಕಾಗಿ ಸಣ್ಣದಾಗಿ ಮಾರುತ್ತಲೂ ಇದ್ದರು. ಸುಮಾರು ಹದಿನೈದು ವರ್ಷಗಳ ಹಿಂದೆ ಈತನಿಂದ ಖರೀದಿಸಿದ ತೆಂಗಿನ ಮರ ಹತ್ತುವ ಸಲಕರಣೆ (ಏಜೆನ್ಸಿ) ಇಂದಿಗೂ ನನ್ನ ಮನೆ ಮತ್ತು ಅಭಯಾರಣ್ಯದ ಹತ್ತೆಂಟು ತೆಂಗಿನಮರಗಳ ಲೆಕ್ಕದಲ್ಲಿ ನನ್ನನ್ನು ಸ್ವಾವಲಂಬಿಯಾಗಿಯೇ ಉಳಿಸಿದೆ. ನಮ್ಮ ‘ಅಭಯಾರಣ್ಯ’ ಪ್ರಯೋಗದ ಮೊದಲ ವರ್ಷಗಳಲ್ಲಿ ಸಿದ್ಧ ಮಾರುಕಟ್ಟೆಯಿಂದ ನಾನು ಎರಡು ಚಕ್ರದ ನೂಕು ಗಾಡಿ ಕೊಂಡಿದ್ದೆ. ಅದರಲ್ಲಿ ಕಲ್ಲೋ ಮಣ್ಣೋ ಹೇರಿಕೊಂಡು ನಾನೂ ದೇವಕಿಯೂ ಪಟ್ಟ ಪಾಡು ಹೇಳಿ ಸುಖವಿಲ್ಲ. ಆದರೆ ಸುಮಾರು ಆರೇಳು ವರ್ಷದ ಹಿಂದೆ ಸಮೀರ ಸ್ವತಃ ತಯಾರಿಸಿ ಕೊಟ್ಟ ಒಂಟಿ ಚಕ್ರದ ನೂಕುಗಾಡಿ ಬಂದ ಮೇಲೆ ಹೊರೆ ಸಾಗಣೆಯ ಕೆಲಸ ನಮಗೆ ಆಟ. ಮೊನ್ನೆ ಮಳೆಗೂ ಮೊದಲು ಮೂರು ಲಾರಿ ಲೋಡು ಮಣ್ಣನ್ನು ನಮ್ಮ ಕಾಡಿನೊಳಗೆ ಸಾಗಿಸಿ ಹರಡುವಲ್ಲಿ ಈ ಗಾಡಿಯಿಂದೊದಗಿದ ಸೌಕರ್ಯ ಹೇಳಿ ಮುಗಿಯದು. (ಈ ಗಾಡಿಯನ್ನು ಇಂದು ದೊಡ್ಡ ಸಂಖ್ಯೆಯಲ್ಲಿ ತಯಾರಿಸಿ, ಮಾರುವ ಕೆಲಸವನ್ನು ವಾರಣಾಸಿ ಕೃಷ್ಣಮೂರ್ತಿಯವರು ವಹಿಸಿಕೊಂಡಿದ್ದಾರೆ) ಮಾವಿಗೆ ಬೇರೆ, ಚಿಕ್ಕಿಗೆ ಬೇರೆ ಎಂದೆಲ್ಲ ಕೊಕ್ಕೆ ಬಲೆಗಳನ್ನು ನಾವು ಸಮೀರನಿಂದ ಕೊಂಡದ್ದುಂಟು.

ನನ್ನ ಉಪಯೋಗ ಮತ್ತು ಗ್ರಹಿಕೆಗೂ ಮೀರಿದ ಅನೇಕ ಸಲಕರಣೆ, ಮಾಹಿತಿ ಮತ್ತು ವಿಚಾರಗಳ ಸಂಪನ್ಮೂಲ ಸಮೀರ ‘ಬೃಹತ್’ ಯಂತ್ರ ಮೇಳದಲ್ಲಿ ಕೇವಲ ಕೊಕ್ಕೆಬಲೆಯನ್ನು ಮಾರುವವನಾಗಿ ಸೋತಿದ್ದ, ಅದಕ್ಕೂ ಹೆಚ್ಚಿಗೆ ವ್ಯರ್ಥವಾಗಿದ್ದ.

ಮೇಳದಬ್ಬರದಲ್ಲಿ “ಹ್ವಾಯ್! ಉಪಾಯ್ದರು” ಎನ್ನುವವರೇ ಈ ಮಳಿಗೆಗೆ ಭೇಟಿ ಕೊಟ್ಟದ್ದು ಹೆಚ್ಚು. ಚಂದದ ಪುಟ್ಟ ಆಟಿಕೆಯಂತಿದ್ದ ಹೆರೆಮಣೆ, ತರಕಾರಿ ಹೆಚ್ಚಲು ಬೇಕಾದರೆ ಬದಲಿಸಬಹುದಾದ ಕತ್ತಿ, ಮೂರನೆಯದೊಂದು ಆರಿಂಚು ಉದ್ದದ ಕೊಳವೆ – ಬೊಂಡ ತೂತಿಗ, ಮುಖ್ಯ ಪ್ರದರ್ಶನಕ್ಕಿಡದಿದ್ದರೂ ಹಿಂದೆ ಒತ್ತರಿಸಿಟ್ಟ ಎಂಟು ಹತ್ತು ಕ್ಯಾಟರ್ ಬಿಲ್ (ಕವಣೆಗೆ ರಬ್ಬರ್ ಪಟ್ಟಿ ಕಟ್ಟಿ ಕಲ್ಲು ತೂರುವ ಸಾಧನ) ಇಷ್ಟೇ ಇಲ್ಲಿನ ಸಂಪತ್ತು. ಕೃಷಿ ಯಂತ್ರಮೇಳದ ನಡುವೆ ಇವರದು ಇನ್ನೊಂದು ಕುಚೇಲ ಕುಟೀರ. “ನಾನು ಒಯ್ದಿದ್ದ ಹೆಚ್ಚು ಕಮ್ಮಿ ಅಷ್ಟೂ ಮಾಲು ಖಾಲಿಯಾಯ್ತು. ಆದರೆ ಹೆಚ್ಚಿನವರು ನನ್ನ ಸಲಕರಣೆಗಳ (ಉಪಯುಕ್ತತೆ ಅನುಭವಿಸಿ ಮೆಚ್ಚಿದ್ದ) ಹಳೆಯ ಗಿರಾಕಿಗಳೇ. ಅಪರೂಪಕ್ಕೆ ಕೊಂಡವರೂ ಅದರ ತೋರಿಕೆಯ ಚಂದಕ್ಕೇ ಹೆಚ್ಚು ಮಾರುಹೋದಂತಿತ್ತು. ಎಲ್ಲೋ ಕೆಲವರು ಎರಡು-ಮೂರನೇ ದಿನ ‘ಪರವಾಗಿಲ್ಲ ಮಾರಾಯ್ರೇ’ ಎನ್ನುತ್ತ ಮತ್ತೆ ಹೆಚ್ಚುವರಿ ಕೊಂಡದ್ದೂ ಇದೆ” ಎನ್ನುತ್ತಾರೆ ಸಾಲಿಗ್ರಾಮದ ಗೆಳೆಯ – ವೆಂಕಟ್ರಮಣ ಉಪಾಧ್ಯ. ಆ ಮಣೆಯ ಜನ್ಮ ಕಾರಣದ ಮೇಲೆ ಮೊದಲು ಕಣ್ಣು ಹಾಯಿಸಿ. ಸುಮಾರು ಮೂರಡಿ ಉದ್ದ, ಎಂಟಿಂಚು ಅಗಲ ಮತ್ತಷ್ಟೇ ಎತ್ತರದ ಬಲವಾದ ಮರದ ಕೊರಡು ನಮ್ಮ ಸಾಂಪ್ರದಾಯಿಕ ‘ಮಣೆ’.

ಇದರ ಹೊಟ್ಟೆ ಸ್ವಲ್ಪ ಕೆತ್ತಿ ಉಳಿಸಿದ ಎರಡು ಬಲವಾದ ಚಡಿಗಳೇ ಕಾಲು. ಎದುರು ಸ್ವಲ್ಪ ಮೊಂಡು ಮೂಗು ಮಾಡಿ, ಕಮ್ಮಾರ ಕುಟ್ಟಿದ ಯಾವುದೋ ಕಬ್ಬಿಣದ ಕತ್ತರಿಕತ್ತರಿ ಬಾಚಿಯೋ ಕತ್ತಿಯೋ ಸಿಕ್ಕಿಸಿದರೆ ಮುಗೀತು – ಸಾಂಪ್ರದಾಯಿಕ ಹೆರೆಮಣೆ ಅಥವಾ ಮೆಟ್ಟುಕತ್ತಿ. ನಗರ ಸಂಸ್ಕೃತಿಯ ಸಂಕುಚಿತೆಯಲ್ಲಿ ಈ ಎರಡು ಒರಟು, ಆದರೆ ಅನಿವಾರ್ಯ ಅಡುಗೆಮನೆ ಸಂಗಾತಿಗಳು ಉಳಿದೇ ಬಂದಿದ್ದವು! ಪ್ಲ್ಯಾಟ್ ಫಾರಂ ಅಡುಗೆ, ಡೈನಿಂಗ್ ಟೇಬಲ್ಲುಗಳೇ ಮುಂತಾದ ತೋರಿಕೆಯ ಸೌಲಭ್ಯಗಳು ಬೆಳೆದು ಸೊಂಟ ಬಗ್ಗಿಸಲಾರದ, ಈ ಮಣೆಗಳ ಮೇಲೆ ಅಂಡೂರಲಾಗದ ಮಂದಿಯ ಕೊರಗು ಒಟ್ಟುಗೂಡಿ, ನಮ್ಮ ಉಪಾಧ್ಯರನ್ನು ಪ್ರೇರಿಸಿದವು.

ಪುಟ್ಟದಾಗಿರಬೇಕು, ಮೇಜೋ ಕಟ್ಟೆಯದೋ ಎತ್ತರದಲ್ಲಿ ಕೆಲಸಕ್ಕೆ ಒಪ್ಪವಾಗಿ ಒದಗಬೇಕು, ಮುಗಿದಾಗ ಅಷ್ಟೇ ಚಂದಕ್ಕೆ ಮರೆಯಲ್ಲಿಡುವಂತಿರಬೇಕು, ಕಾರ್ಯಕ್ಷಮತೆಯಲ್ಲಿ ಸಾಂಪ್ರದಾಯಿಕವನ್ನು ಮೀರಿಸುವಂತಿರಬೇಕು – ಉಪಾಧ್ಯರ ಕೆಲವು ಮಾರ್ಗಸೂಚೀ ಸೂತ್ರಗಳು. ವಿಕಾಸ ಪಥದಲ್ಲಿ ಅಕೇಶಿಯಾ ಮರದ ಕೊರಡನ್ನು ಕೆತ್ತುವುದರಿಂದ ತೊಡಗಿತು ‘ಮಣೆ’. ಅಕೇಶಿಯಾ ಇವರಿಗುಂಟು ಮಾಡಿದ ಅಲರ್ಜಿ, ಉಕ್ಕಿನ ಮಾದರಿಗೆ ಬದಲಿಸಿತು. ಮುಂದುವರಿದು ‘ಪರಿಸರ ಸ್ನೇಹೀ’ ಎಂದೇ ಗುರುತಿಸಲ್ಪಟ್ಟ ಉಪಾಧ್ಯರು ಇಂದು ಪ್ಲ್ಯಾಸ್ಟಿಕ್ ಮಣೆಯಲ್ಲಿ ನಿಂತಿರುವವರೆಗಿನ ಕತೆ ಬಿಡಿಸಿಟ್ಟರೆ ಒಂದು ದೊಡ್ಡ ಅಧ್ಯಾಯ. ಹಿಂಗಾಲು ಹೇಗೆ? ಮುಂಗಾಲು ಎಷ್ಟು? ಹೆರೆ ಹಲ್ಲಿನ ಇನ್ನೊಂದು ಕೊನೆಯಲ್ಲಿ ಒತ್ತಡ ತಿನ್ನುವ ಕೀಲು ಹೇಗೆ? ಅಲ್ಲೇ ಸ್ಥಿರತೆ ಕೊಡುವ ಕೀಲು ಯಾವುದು? ಒಟ್ಟು ಮಣೆಯ ಪ್ರತಿಯೊಂದೂ ಚಡಿ, ತಿರುವು, ಉದ್ದ, ದಪ್ಪ ಇತ್ಯಾದಿ ಪ್ರಶ್ನೆಗಳೊಡನೆ ಸೌಂದರ್ಯವನ್ನೂ ಮೇಳೈಸಿ ಮಾಡಿದ ಪ್ರಯೋಗಗಳ ಸಿದ್ಧಿ ಇಂದಿನ ರೂಪ ಎನ್ನುವುದು ಇನ್ನೊಂದೇ ಅಧ್ಯಾಯ. ಹೆರೆಬಾಯಿಗೆ ಸುಮ್ಮನೆ ಅರೆಗೋಲಾಕಾರದಲ್ಲಿ ಹದಿನೈದೋ ಇಪ್ಪತ್ತೋ ಚೂಪು ಕೊಟ್ಟರೆ ಕಾಯಿಕಡಿಯೊಳಗೆ ಬರಿಯ ಗೀರು ಗಾಯಗಳಾಗುತ್ತವೆ. ಹೆರೆಯುವವರು ಅಂಗೈ ಒತ್ತಡ ಹೆಚ್ಚಿಸಿದರೆ ಹೋಳುಗಳು ಸಿಕ್ಕೀತು, ಸಟ್ಟೂ (ಕರಟ ಬಿಟ್ಟೇಳುವ ಮಾಂಸಲ ಭಾಗ) ಎಳಕಬಹುದು. ಅರಿವಿಲ್ಲದೇ ನಾಲ್ಕು ಸಲ ಅಡ್ಡಾದಿಡ್ಡೀ ಕಡಿ ಆಡಿಸಿದ್ದಕ್ಕೆ ಸ್ವಲ್ಪ ತುರಿ ಬೀಳುವುದು ಇರಬಹುದು. ಆದರೆ ಗಮನಿಸಿ, ಉಪಾಧ್ಯರ ಹಲ್ಲಿನಲ್ಲಿ ಪ್ರತಿ ಹೆರೆತಕ್ಕೂ ಸ್ಪಷ್ಟವಾಗಿ ಕಾಯಿ ಸುಳಿಯೇ ಬರುತ್ತದೆ! ಹೌದು, ಇವುಗಳ ಹಲ್ಲನ್ನು ಸೂಕ್ಷ್ಮವಾಗಿ ನೋಡಿದರಷ್ಟೇ ತಿಳಿದೀತು ಅಲ್ಲೂ ನಡೆದ ಪ್ರಯೋಗ, ಸಿದ್ಧಿ. ಮಣೆಯಂತೇ ಇವುಗಳ ಲೋಹ ಸೂಕ್ಷ್ಮ, ಕತ್ತಿಯ ರೂಪಣೆ, ಒಂದೇ ಮಣೆಯಲ್ಲಿ ಪರ್ಯಾಯವಾಗಿ ಎರಡನ್ನೂ ಬಳಸುವ ಸೌಲಭ್ಯ ಇತ್ಯಾದಿ ಕತೆ ಉಪಾಧ್ಯರ ಕುಂದಗನ್ನಡದಲ್ಲೇ ನೀವು ಕೇಳಬೇಕು. ಇನ್ನಾದರೂ ಮುಗಿತಾ ಅಂದರೆ ಇವತ್ತು ಬೇರೇ ಕತೆ ಶುರು ಮಾಡಿದರು. ಈಗ ನೀವು ಕಾಯಿ ಹೆರೀಬೇಕು. ಹೆರೆಮಣೆಯ ಮುಂದಿನ ಕಾಲು ಮೇಜಿನ ಮೇಲೆ ಕಾಯಿಸುಳಿ ಬೀಳಬೇಕಾದ ತಟ್ಟೆಯೊಳಗೆ ಇಡ್ತೀರಿ. ಅದರ ಹಿಂಗಾಲನ್ನು ಮೇಜಿನ ಕರೆಗೆ ಕೊಟ್ಟು, ತೊಡೆಯಲ್ಲಿ ಹಗುರಕ್ಕೆ ಒತ್ತಿಕೊಳ್ತೀರಿಯಲ್ವಾ. ಆದ್ರೂ ನೀವು ಹೆರೆಯುವಾಗ ಸ್ವಲ್ಪ ಕಾಯಿಸುಳಿ ಮಣೆಯಲ್ಲೇ ಜಾರಿ ನಿಮ್ಮ ತೊಡೆಗೆ ಬರುತ್ತದೆ. ಮತ್ತೆ ತುರಿಯುವ ಕ್ರಿಯೆಯಲ್ಲಿ ಕೆಲವು ಸಲ ಮಣೆಯ ಮುಂಗಾಲು ಅತ್ತಿತ್ತ ತೊನೆಯುವುದುಂಟು. “ಹಂಗ್ ಆಪ್ಕಾಗಾ” ಪ್ರಯೋಗ ನಡೆಸಿದ್ದಾರೆ!

ವೆಂಕಟ್ರಮಣ ಉಪಾಧ್ಯರಿಗೆ ಅಣ್ಣ ಮಂಜುನಾಥ ಉಪಾಧ್ಯರೊಡನೆ ಸಾಲಿಗ್ರಾಮದಲ್ಲಿ ‘ಉಪಾಧ್ಯ ಬ್ರದರ್ಸ್’ – ಸಾಂಪ್ರದಾಯಿಕ ಸರ್ವ ಸರಕಿನ ಮಳಿಗೆ ನಡೆಸುವುದೇ ಪ್ರಧಾನ ವೃತ್ತಿ. ಬಿಡು ಸಮಯದಲ್ಲಿ, (ಇಲ್ಲೇ ನನ್ನ ಹಿಂದಿನ ಹಲವು ಸಾಹಸಯಾನಗಳಲ್ಲಿ ಉಲ್ಲೇಖಿಸಿರುವಂತೆ) ಭೂಮಿಯ ಮೇಲಿನ ಎಲ್ಲಾ. . ಅಲ್ಲ, ವಿಶ್ವದ ಎಲ್ಲಾ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವ ಮಟ್ಟದ ಆಸಕ್ತಿ ಇದೆ ಇವರಿಗಿದೆ ಎಂದರೆ ತಪ್ಪಾಗದು. ಹಾಗೆ ತೊಡಗಿಕೊಂಡವುಗಳನ್ನು ತಮ್ಮ ಮಿತಿಯ ತಾರ್ಕಿಕ ಕೊನೆಗೆ ಮುಟ್ಟಿಸುತ್ತಾರಾದರೂ ‘ತನ್ನದು’ ಎಂಬ ಮೋಹ ಎಂದೂ ಬೆಳೆಸಿಕೊಂಡಿಲ್ಲ. ಯಾವುದೇ ತನ್ನ ಶೋಧಗಳನ್ನು ಯಾರೂ ನಿರ್ಭಯವಾಗಿ ನಕಲಿಸಬಹುದು, ಉತ್ತಮಿಸಬಹುದು ಎನ್ನುತ್ತಾರೆ. ಹಾಗೇ ತನ್ನ ಮಿತಿಯಲ್ಲಿ ಇವುಗಳ ಪ್ರದರ್ಶನ, ಮಾರಾಟ, ಮುಕ್ತಚರ್ಚೆಗೆ ಒಡ್ಡಿಕೊಳ್ಳಲು ಅವಕಾಶವನ್ನು ಇವರು ಬಳಸಿಕೊಳ್ಳುತ್ತಿರುತ್ತಾರೆ. ಹಿಂದೆ ಬ್ರಹ್ಮಾವರ ಮತ್ತೊಮ್ಮೆ ಪೆರಡಾಲದಲ್ಲೂ ಇಂಥವೇ ಕೃಷಿಕರು ಸೇರುವ ಮೇಳಗಳಲ್ಲಿ ಭಾಗವಹಿಸಿದ ಕುಶಿಯಲ್ಲೇ ಉಪಾಧ್ಯರು ಪುತ್ತೂರನ್ನು ಬಯಸಿ ಬಂದಿದ್ದರು. ಆದರೆ ಹೋಗಿಬರುವ ಖರ್ಚು, ಮಳಿಗೆ ಬಾಡಿಗೆ, ಊಟ ವಸತಿ ಹೇಗೋ ಎಂದು ಸಂದೇಹಿಸಿದ್ದರು. ಆದರೆ ಮೇಳ ಸಂಘಟಕರು ಇವರನ್ನು (ಮತ್ತೆ ತಿಳಿದಂತೆ ಸಮೀರನ್ನೂ ಸೇರಿಸಿ ಇಂಥಾ ಸುಮಾರು ಹತ್ತು ಮಂದಿ ಸೇರಿದಂತೆ) ಅನು-ಶೋಧಕ ಎಂದು ವರ್ಗೀರ್ಕರಿಸಿದ್ದರು. ಇವರಿಗೆ ಉಚಿತ ಮಳಿಗೆ, ಊಟ, ವಸತಿ ಕೊಟ್ಟದ್ದಲ್ಲದೆ ಕೊನೆಯಲ್ಲಿ, ಅಯಾಚಿತ ಪ್ರವಾಸ ಭತ್ತೆಯನ್ನೂ ಕೈಗಿಟ್ಟು ಕಳಿಸಿದರಂತೆ! ಉಪಾಧ್ಯ, ಸಮೀರರಿಬ್ಬರೂ ಇದನ್ನು ನಿರೀಕ್ಷಿಸಿರಲಿಲ್ಲ ಮತ್ತು ಬರುವ ದಿನಗಳಲ್ಲಿ ಇಂಥ ಸವಲತ್ತು ಅಪಾತ್ರ ದಾನವಾಗುವ, ಪೂರ್ತಿ ದುರ್ಬಳಕೆಯಾಗುವ ಅಪಾಯವನ್ನೂ ಒತ್ತಿ ಹೇಳಿದ್ದಾರೆ. [ಅಂದ ಕಾಲತ್ತಿಲೆ, ಕನ್ನಡ ಪುಸ್ತಕ ಪ್ರಾಧಿಕಾರ ಮಂಗಳೂರು ಪುಸ್ತಕ ಮೇಳ ನಡೆಸಿದಾಗ ಮಳಿಗೆ, ವಿದ್ಯುತ್, ಕೆಲವು ಬೆಂಚುಮೇಜೂ ಉಚಿತ ಕೊಟ್ಟದ್ದಲ್ಲದೆ, ಮಳಿಗೆಗೆ ಇಷ್ಟೆಂದು ಭತ್ತೆ ನಿಗದಿಸಿದ್ದಿತ್ತು. ಆಗ ಉದ್ದಿಮೆಯ ಕೆಲವು ‘ಕ್ಷುದ್ರಜೀವಿಗಳು’ ಇದ್ದ ಪುಸ್ತಕಗಳನ್ನೇ ನಾಲ್ಕು ಮಳಿಗೆಗಳಿಗೆ ವಿಸ್ತರಿಸಿ, ಹೆಚ್ಚು ಭತ್ತೆ ಗಿಟ್ಟಿಸಿದ ಕತೆ ನಾನಿಲ್ಲಿ ವಿವರಿಸುವುದಿಲ್ಲ.]

ಉಪಾಧ್ಯರು ಹಿಂದೆ ಬೊಂಡ ತೂತು ತೆಗೆಯಲು ಒಂದು ಸಲಕರಣೆ ಮಾಡಿದ್ದರು. ಅದು ಕಾಣಲು ಸರಳವೇ ಆದರೂ ವಿಕಾಸ ಪಥದಲ್ಲಿ ಎದುರಿಸಿ, ಗೆದ್ದ ವಿವರಗಳನ್ನು ನಾನಿಲ್ಲಿ ವಿವರಿಸುವುದಿಲ್ಲ. ಅದು ಹೇಗೇಗೋ ಕೊಯಮತ್ತೂರಿನ ಉದ್ದಿಮೆದಾರನೊಬ್ಬನನ್ನು ಆಕರ್ಷಿಸಿದಾಗ ಉಪಾಧ್ಯರು ಅದರ ಸಮಗ್ರ ತಂತ್ರಜ್ಞಾನವನ್ನು (ಅಚ್ಚು ಸಹಿತ) ಉಚಿತವಾಗಿಯೇ ಆತನಿಗೆ ಕೊಟ್ಟಿದ್ದರು. ಈ ಮೇಳಕ್ಕಾಗಿ ಉಪಾಧ್ಯರು ಅವನ್ನೂ ಒಂದಷ್ಟು ಕೊಯಮತ್ತೂರಿನಿಂದಲೇ ತರಿಸಿ, ಇಟ್ಟು ಮಾರಿದ್ದರು. ಈ ಚಿಲ್ಲರೆ ಲಾಭಕ್ಕಿಂತ ಹೆಚ್ಚಿಗೇನಾದರೂ ನೀವು ಪಡೀಬಹುದಿತ್ತಲ್ಲಾಂತ ಹಲವರು ಉಪಾಧ್ಯರಿಗೆ ಹೇಳಿದ್ದಿದೆ. ಅವರು ನಿರುಮ್ಮಳವಾಗಿ “ಅಯ್ಯೋ! ನನಗೆ ಈ ಕೆರ್ಮಣೆಯಂಥಾ (ಕುಂದಾಪ್ರಿಯಲ್ಲಿ ಹೆರೆಮಣೆ) ಇನ್ನೂ ಹಲವು ಯೋಚನೆ ಬೆಳೆಸಲು ಬಿಡುವು ಸಿಕ್ಕಿದ್ದು ಸಣ್ಣಾದಾ” ಎಂದು ಬಿಡುತ್ತಾರೆ. ಇಂಥಾ ಕನಿಷ್ಠ ನೂರು ಜನರ, ಸಾವಿರ ಪ್ರಯೋಗಗಳಿಗೆ, ಯೋಚನೆಗಳಿಗೆ ಆಶ್ರಯವಾಗಬೇಕಿದ್ದ ಮೇಳ ‘ಯಾಂತ್ರಿಕ’ವಾಗಿ ನಡೆದದ್ದನ್ನು ಹೇಳಬಹುದೇ “ದೊಡ್ಡದೂ”ತ?! ಮೇಳದ ಮಹಾದ್ವಾರದಲ್ಲಿ ತಲೆಲೆಕ್ಕ ಹಾಕಿ ಯಶಸ್ಸು ಸಾರುವುದೇ ಆದರೆ, ‘ಬಹುಮತ’ ಸಾಧಿಸಿದಲ್ಲೆಲ್ಲಾ ಗುಣವೇ ವಿಜಯಿಯಾಗುವುದಿದ್ದರೆ ನಮ್ಮ ಸರಕಾರಗಳ (ದೇಶಾದ್ಯಂತ) ವೈಫಲ್ಯಕ್ಕೆ ನಾವು ಕಾರಣ ಎಲ್ಲಿ ಹುಡುಕೋಣ?