ಶ್ರೀ ಮಹಾಲಿಂಗೇಶ್ವರ ಪ್ರಸನ್ನ ಎಂದ ಕೂಡಲೇ ನನ್ನ ತಲೆಯಲ್ಲಿ ಸ್ಪಷ್ಟ ಎರಡು ಚಿತ್ರಗಳು ಬರುತ್ತವೆ. ಮೊದಲನೇದು ನನ್ನ ಬಾಲ್ಯದ್ದು, ಅಜ್ಜೀ ಮನೆಯದ್ದು, ಪುತ್ತೂರಿನ ಅಧಿದೈವ ಮಹಾಲಿಂಗೇಶ್ವರನದ್ದು. ೧೯೫೦-೬೦ರ ದಶಕಗಳ ನನ್ನ ಶಾಲಾ ರಜಾದಿನಗಳಲ್ಲಿ ಪುತ್ತೂರಿಗೆ ಹೋದಾಗ ಆಗೀಗ ಅಜ್ಜಿ (ಶ್ರೀಮತಿ ಎ.ಪಿ. ಸುಬ್ಬಯ್ಯ – ಪಾರ್ವತಿ) ನನ್ನನ್ನಲ್ಲಿಗೆ ಕರೆದೊಯ್ಯುವುದಿತ್ತು. ಪೋಲೀಸ್ ಲೈನಿನಲ್ಲಿದ್ದ ಮನೆಯಿಂದ ಕೇವಲ ಕೂಗಳತೆ ದೂರ, ನಡೆದೇ ಹೋಗುತ್ತಿದ್ದೆವು. ಊರಿನ ಹೆಚ್ಚಿನೆಲ್ಲಾ ಜನರು ಹೋಗುವಂತೆ ಪೋಲೀಸ್ ಸ್ಟೇಶನ್ ಕಡೆಯ ಮುಖ್ಯ ದಾರಿ, ಮಹಾಕೆರೆಯ ದಂಡೆ, ಭಾರೀ ಅರಳೀ ಮರದ ನೆರಳು, ದೇವಾಲಯದ ಕಛೇರಿಯ ದೃಷ್ಟಿ ತೆಗೆದರೆ ಸಿಗುತ್ತಿತ್ತು ಆಲಯದ ಹಿಂಬಾಗಿಲು. ಒಳಗಿನ ನಡೆಯಲ್ಲಿ ಎಡ ಬದಿಯ ಪುಟ್ಟ ಪುಟ್ಟ ಗುಡಿಗಳ ಎದುರು ನಿಂತು ಅಜ್ಜಿ ಕೈಮುಗಿಯುವುದು, ಕುಂಕುಮವೋ ಗಂಧವೋ ಹಚ್ಚಿಕೊಳ್ಳುವುದು, ಹುಂಡಿಗೆ ಕಾಸು ಹಾಕುವುದು ಮಾಡುತ್ತಿದ್ದರು. ಆದರೆ ನನಗೋ ಬಾಲಸಹಜವಾಗಿ ಅಲ್ಲೆಲ್ಲಾ ನೇತು ಹಾಕಿದ್ದ ಗಂಟಾವಾದನದಲ್ಲಿ ಮಾತ್ರ ಭಾರೀ ಉಮೇದು. ದೇವಳದ ಒಳ ಸುತ್ತಿನ ಗೋಡೆಯಲ್ಲಿ ಬರೆದ, ಬರೆಯುತ್ತಿದ್ದ ಪೌರಾಣಿಕ ವರ್ಣಚಿತ್ರಗಳು ನನ್ನ ಎಷ್ಟೋ ಕನಸುಗಳಿಗೆ ಜೀವ ಬಂದಂತಿದ್ದವು. ಗರ್ಭಗುಡಿಯ ದ್ವಾರದಲ್ಲಿ ಸಿಗುತ್ತಿದ್ದ ಆರತಿ ತೀರ್ಥ ಗಂಧಗಳೋ ನನಗೆ ಆಸಕ್ತಿ, ಪ್ರೀತಿ ತಂದದ್ದಿಲ್ಲ. ಅಂದು ದೇವರ ದರ್ಶನ, ಭಕ್ತಿ, ಪ್ರಾರ್ಥನೆ ಇತ್ಯಾದಿಗಳ ಬಗ್ಗೆ ನನಗೆ ಯಾರೂ ಒತ್ತಾಯಿಸಿದವರಿಲ್ಲ, (ಇಂದಿನ ಮನೋಸ್ಥಿತಿಯಲ್ಲಿ ಹೇಳುತ್ತೇನೆ) ಆದರೆ ಖಂಡಿತಾ ತಿರಸ್ಕಾರವೂ ಇರಲಿಲ್ಲ.

ನಾನು ಬೆಳೆದಂತೆಲ್ಲ ಮಹಾಲಿಂಗೇಶ್ವರನ ವಠಾರದಲ್ಲಿ ನಾನು (ಅಜ್ಜಿಯ ಅಥವಾ ಹಿರಿಯರ) ಅಂಕಿಯಿಲ್ಲದ ಮಂಕಿ (Monkey)! ಅಲ್ಲಿನ ಜಾತ್ರೆ ಕೊಡುತ್ತಿದ್ದ ಸಂಭ್ರಮವಂತೂ ಇಂದು ಯಾವ ಸೂಪರ್ ಮಾಲ್‌ಗೆ ಹೋದರೂ ಸಿಗಲಾರದು. ಕಾಲದ ಸವಕಳಿಯಲ್ಲಿ ಮೌಲ್ಯಗಳ ಸ್ಥಳಾಂತರದಲ್ಲಿ ಇಂದು ಜಾತ್ರೆ ಅಂದರೆ ಗೊಂದಲ. ಆದರೆ ಆ ‘ಒಂದಾನೊಂದು ಕಾಲದಲ್ಲಿ’ ನನ್ನ ಲೆಕ್ಕಕ್ಕಂತೂ ಅದು ಸಾಂಸ್ಕೃತಿಕ ಮಹಾಕೂಟ. ನಾನಿಲ್ಲಿ ಜೋಳಿಗೆ ಬಿಚ್ಚುವುದಿಲ್ಲ, ನೆನಪಿನ ಗಾಳ ಕಚ್ಚಿದ ನಾಲ್ಕೈದು ಎರೆಗಳನ್ನಷ್ಟೇ ಕಾಣಿಸುತ್ತೇನೆ.

ಕಾಯಿ, ತರಕಾರಿ ಸುತ್ತಿ ಅಲಂಕರಿಸಿದ ಗರುಡಗಂಬವೋ ಕಂಬದ ಕೊಡಿಗೇರಿದ ಗರುಡನೋ ನನಗೇನೂ ಅನಿಸುತ್ತಿರಲಿಲ್ಲ. ಉತ್ಸವಮೂರ್ತಿ ಎದುರು ಧ್ವಜ, ಪತಾಕೆಗಳನ್ನು ಹಿಡಿದುಕೊಂಡು, ಒಂದು ತರಾ ಆಟವಾಡಿಕೊಂಡು ಹೋಗುತ್ತಿದ್ದ ಹುಡುಗರ ಬಗ್ಗೆ ತುಸು ಅಸೂಯೆಯಾಗುತ್ತಿತ್ತು. ದೇವರ ಒಳಾಂಗಣದಲ್ಲಿ ಬಲಿ ಬರುವಾಗ ‘ತೊಂಬಟ್ಟ ಥೋಂ’ ಬಾರಿಸುತ್ತಿದ್ದ ಒಬ್ಬ ಅಜ್ಜ (ಹೆಸರು, ಸಂಬಂಧ ಏನೂ ನನ್ನಲ್ಲಿಲ್ಲ), ನನ್ನಜ್ಜನ ಹಾಗೇ ಇದ್ದುದರಿಂದ ಈಗಲೂ ನನ್ನ ನೆನಪಿನಲ್ಲಿ ಗಟ್ಟಿಯಿದ್ದಾರೆ. ಜಾತ್ರೆಯ ಕೊನೆಯ ದಿನಗಳಲ್ಲಿ ‘ಉಳ್ಳಾಲ್ತಿ’ ಬರುವ ದಿನ ಸ್ವಲ್ಪ ಬೆರಗು. ಮಾಮೂಲೀ ದಿನಗಳಲ್ಲಿ ಹೆಂಡತಿ ಮಕ್ಕಳನ್ನು ಭಿಕ್ಷೆಗೆ ತಳ್ಳಿ, ಸ್ವತಃ ಕಂಠಮಟ್ಟ ಕುಡಿದು ತೂರಾಡುತ್ತಿದ್ದ ‘ನರಪೇತಲ ಭಟ್ಟರು’ ಎಲ್ಲರಿಂದಲೂ ತಿರಸ್ಕೃತ ವ್ಯಕ್ತಿ. ಆದರೆ ಬಲ್ನಾಡಿನಿಂದ ಭಂಡಾರ ತರುವಾಗ ಮಾತ್ರ ಅವರೇ ಎಲ್ಲರ ಗೌರವಕ್ಕೆ ಪಾತ್ರವಾಗುವ ಮತ್ತು ಹಲವರ ಅಂಕೆಗೆ ಸಿಗದ ‘ದರ್ಶನ’ ಬರಬೇಕಾದರೆ ‘ಉಳ್ಳಾಲ್ತಿ ಭೂತ’ ಎಂಥ ಶಕ್ತಿಶಾಲಿ! ದೇವರ ಬಲಿ ಹೊರ ಸುತ್ತಿಗೆ ಬಂದಾಗ ಮಂಗಳವಾದ್ಯ, ತೊಂಬಟ್ಟ ಥೋಂ, ಬ್ಯಾಂಡು ಸೆಟ್ಟು ಮುಂತಾದ ಸುತ್ತುಗಳಲ್ಲಿ ನಾನು ಬೇತಾಳನ (ತಟ್ಟೀರಾಯ) ಸಂಗಾತಿ. ಅದರ ಮೇಲೆ ನೆಟ್ಟ ನನ್ನ ಕಣ್ಣು ಬದಲಬೇಕಾದರೆ ಚಂಡೆಸುತ್ತು ಬರಬೇಕು. ಚಂಡೆ ಗೋಪಣ್ಣನ ಬಳಗದ ಸುತ್ತು ನನಗಂತೂ ಬಲು ದೊಡ್ಡ ರೋಮಾಂಚನ! ನಾಲ್ಕೋ ಐದೋ ಚಂಡೆ, ಡೋಲು, ಚಕ್ರ ತಾಳ ಸಹಿತ ಒಂದೇ ನಡೆಯಲ್ಲಿ, ನಿಧಾನಕ್ಕೆ ದೇವಾಲಯದ ಒಂದು ಸುತ್ತು ಬರುವಾಗ ಮಾತ್ರ ಚಂಡೆಯ ಕೋಲುರುಳಿಕೆ ತೀವ್ರವಾದಂತೆಲ್ಲಾ ಬಡಿವವನು ನಾನೇ ಎಂಬಷ್ಟು ಉತ್ತೇಜನಗೊಳ್ಳುತ್ತಿದ್ದೆ!

ಜಾತ್ರೆಯ ಗದ್ದೆಯಲ್ಲಿ ಹಗಲು ಕನಿಷ್ಠ ಎರಡಾದರೂ ಯಕ್ಷಗಾನ ಮೇಳಗಳು ಉದಾಸೀನದಲ್ಲಿ ಗುಡಾರ ಬಿಚ್ಚುತ್ತಿದ್ದವು. ಹಿಂದಿನ ರಾತ್ರಿಯ (ಆಟ ನೋಡಿ) ಜಾಗರಣೆ ಬಾಕಿ ಮನೆಯಲ್ಲಿ ಮುಗಿಸಿ, ಗದ್ದೆಗೆ ಮತ್ತೆ ಬಂದು ಹತ್ತು ಪೈಸೆಗೆ ಹತ್ತು ಸುತ್ತು ಡೊಂಬರ ತೊಟ್ಟಿಲಲ್ಲಿ ಕೂತ ನನಗೆ ಆತಂಕ. ಇವತ್ತು ರಾತ್ರಿ ಮಳೆ ಬಂದು ಆಟ ಹಾಳಾದೀತೇ? ಕೆಲವು ಬಾರಿ ಜಾತ್ರೆಯ ಅಷ್ಟೂ ದಿನಗಳು (ಒಂಬತ್ತು?) ಒಂದಲ್ಲ ಒಂದು ಮೇಳದ ಆಟವಿರುತ್ತಿತ್ತು ಮತ್ತವಕ್ಕೆ ಐವತ್ತು ಪೈಸೆಯ ನೆಲದ ಮೇಲಿನ ಒಂದು ಗಿರಾಕಿ ನನ್ನಲ್ಲಿ ಗಟ್ಟಿಯಿರುತ್ತಿದ್ದ! ಯಾವುದೋ ಒಂದೆರಡು ವರ್ಷ ಜಾತ್ರೆಯ ಅವಧಿಯಲ್ಲೇ ಹಿರಣ್ಣಯ್ಯ ಮಿತ್ರ ಮಂಡಳಿ (ಈಗ ಅಂಚೆಕಛೇರಿ ಇರುವ ಜಾಗದಲ್ಲಿ) ಹೆಚ್ಚು ಸಜ್ಜಿತ ಗುಡಾರ ಹಾಕಿತ್ತು. ಲಂಚಾವತಾರ, ಭ್ರಷ್ಟಾಚಾರ, ಅನಾಚಾರ, ಮಕ್ಮಲ್ ಟೋಪಿ ಎಂದಿತ್ಯಾದಿ ಅವರೆಲ್ಲಾ ನಾಟಕಗಳು ನೋಡಿದ್ದೇನೆ. ಇಂದು ನನಗೇನೂ ನೆನಪಿನಲ್ಲಿಲ್ಲ. ಆದರೆ ನನ್ನ ನಾಟಕ ಪ್ರೀತಿಯ ವ್ಯಕ್ತಿತ್ವ ರೂಪಿಸುವಲ್ಲಿ ಅವು ಕೊಟ್ಟ ಚಾಣದ ಪೆಟ್ಟುಗಳಂತೂ ಅಪಾರ!

ಪುತ್ತೂರಿನ ನನ್ನ ಅಜ್ಜನ ಮನೆ (ಬಿಡಾರ) ಮುಚ್ಚಿ, ಹಳ್ಳಿ (ಮರಿಕೆ) ಸೇರಿದ ಮೇಲೆ, ಅಂದರೆ ಕಳೆದ ಸುಮಾರು ಮೂವತ್ತು ವರ್ಷ ನನಗೆ ಮಹಾಲಿಂಗೇಶ್ವರ ಕೇವಲ ಪತ್ರಿಕಾ ಸುದ್ದಿಗಳು, ಅಪರೂಪಕ್ಕೆ ಅದರ ಗದ್ದೆಯಲ್ಲಿ ಬಂದಿರುವ ಅವ್ಯವಸ್ಥಿತ ಸಭಾಭವನದ ಕೆಲವು ಕಲಾಪಗಳು (ಸಭೆ, ಆಟ, ಮದುವೆ ಇತ್ಯಾದಿ). ಆದರೆ ಒಂದೆರಡು ತಿಂಗಳ ಕೆಳಗೆ ದೇವಾಲಯ ಪೂರ್ಣ ಬಿಚ್ಚುತ್ತಾರಂತೆ, ನವೀಕರಿಸುತ್ತಾರಂತೆ ಎಂದು ಕೇಳಿದ ಮೇಲೆ ಸ್ವಲ್ಪ ಹೆಚ್ಚೇ ಸುದ್ದಿ ಮಾಡತೊಡಗಿತ್ತು. ಪತ್ರಿಕೆಗಳಿರಲಿ, ದೇವಕಿಯ ಅಕ್ಕ (ಮುನಿಯಂಗಳ ಸರಸ್ವತಿ) “ದಿನ ದಿನ ದೇವಾಲಯದ ಪುನಾರಚನೆಯಲ್ಲಿನ ಸ್ವಯಂ ಸೇವಕರ ಕೆಲಸ ನಿಜಕ್ಕೂ ನೋಡಿಯೇ ಅನುಭವಿಸಬೇಕು” ಎಂದಾಗ ಹೆಚ್ಚು ಜಾಗೃತನಾಗಿದ್ದೆ. ಹಾಗಾಗಿ ಮೊನ್ನೆ ಮರಿಕೆಗೆ ಹೋಗಿ ಮರಳುವಾಗ ಬಸ್ಸಿಗೆ ಬಿಡಲು ಬಂದಿದ್ದ ಮಾವನ (ಎ.ಪಿ. ರಾಮನಾಥ ರಾವ್) ಮಗ ಡಾ| ಎ.ಪಿ ಸತೀಶ “ದೇವಸ್ಥಾನದ ಕೆಲಸ ಒಮ್ಮೆ ತೋರಿಸ್ಲಾ” ಎಂದು ಸೂಚಿಸಿದಾಗ, ವಿಮರ್ಶೆ ಮಾಡದೇ ಒಪ್ಪಿಕೊಂಡೆ.

ಜಾತ್ರೆ ಗದ್ದೆಯಲ್ಲಿ ಎಡ ಬದಿಯ ಭಾರೀ ಚಪ್ಪರದಡಿ ಮತ್ತು ಹೊರಗೂ ಕಗ್ಗಲ್ಲಿನ ತುಣುಕುಗಳು ಬೆಣ್ಣೆಯಾಗಿ ವಿಧವಿಧದ ಕಂಡಿ, ಕಂಬಗಳಾಗಿ ರೂಪು ತಳೆಯುತ್ತಿದ್ದದ್ದನ್ನು ಕಂಡೆ. ಅದೇ ಬಲ ಬದಿಗೆ ಹಳೆಯ ಇನ್ನೊಂದೇ ದೊಡ್ಡ ಮತ್ತು ಹೆಚ್ಚು ಭದ್ರವಾದ ಚಪ್ಪರ. ಹೊರಗೆಲ್ಲಾ ಕಾಲದ ಕರಿ ಹಿಡಿಸಿಕೊಂಡು ರಾಶಿ ಬಿದ್ದಿತ್ತು – ಬಿಚ್ಚಿದ್ದ ಹಳೆಗಾಲದ ಮರದ ರಚನೆಗಳು. ಜೀರ್ಣೋದ್ಧಾರಕ್ಕೆ ಹಲವು ಬರುವಂತಿದ್ದರೂ ಒಟ್ಟಂದಕ್ಕೆ ಹೊಂದುವುದು ಕಷ್ಟವೆಂದು ಉಪೇಕ್ಷಿಸಿದಂತಿತ್ತು. ಒಳಗೆ ಭಾರೀ ಭಾರೀ ತೊಲೆಗಳೂ ಹಲಿಗೆಗಳೂ ಮಹಾಲಿಂಗೇಶ್ವರನ ಸನ್ನಿಧಿಗೆ ವೈಭವ ತರಲು ಹೊಸದಾಗಿ ರೂಪುವಡೆಯುತ್ತಿದ್ದವು. (ಅಲ್ಲಿ ಮಾತ್ರ ಯಾಕೋ ಚಿತ್ರಗ್ರಹಣ ನಿಷೇಧ ಹಾಕಿದ್ದರಿಂದ ನಾನೇನೂ ತೆಗೆಯಲಿಲ್ಲ) ದೇವಾಲಯದ ಹೊರ ಪ್ರಾಕಾರದ ಮೇಲೆ ಕುಳಿತ ಹಳೆಯ ಸಿಮೆಂಟ್ ಶಿವಮೂರ್ತಿಯ ಹಿನ್ನೆಲೆಯಲ್ಲಿ ಎಂದೂ ಕಣ್ಣು ತುಂಬುತ್ತಿದ್ದ ದೇವಾಲಯ ಖಾಲಿಯೋ ಖಾಲಿ! ಅಲ್ಲೊಂದು ಇಲ್ಲೊಂದು ಕಲ್ಲ ತುಂಡು, ಕುಂಬು ಪಕಾಸು ಬಿಟ್ಟರೆ ಎಲ್ಲಾ ಉಧ್ವಸ್ಥ ನೆಲ. ಹರಕು ಮುರುಕು ಮಳೆಯ ಮರೆ, ಅನಾಥವಾಗಿ ನಿಂತಂಥ ಬಾವಿಕಟ್ಟೆ, ಇನ್ನೂ ನೆಲದಿಂದ ಆರಿಂಚು ಎತ್ತರಕ್ಕೇಳದ ಪುಟ್ಟ ಪುಟ್ಟ ಗುಡಿಗಳು. ಕಲ್ಲಿನ ಕುಶಲ ಕರ್ಮಿಗಳು ಕೆಲಸ ನಡೆಸಿದ್ದರು. ಎಲ್ಲಕ್ಕೂ ಕೇಂದ್ರದಲ್ಲಿ ಹಿಂದೆ ಗರ್ಭ ಗುಡಿಯಿದ್ದ ಜಾಗ, ಪ್ಲಾಸ್ಟಿಕ್ ಶೀಟುಗಳು ಮುಚ್ಚಿದಂತಿತ್ತು. ಇವೆಲ್ಲವನ್ನೂ ಮೀರಿದ ಚಟುವಟಿಕೆ ಮತ್ತು ಇಡಿಯ ಪರಿಸರವನ್ನು ಆವರಿಸಿದ ಗದ್ದಲ, ವಾಸನೆ ಅಲ್ಲಿ ಅಂಗಳಕ್ಕೆ ಕಾಂಕ್ರೀಟ್ ಹಾಕುವವರಿಂದ ನಡೆದಿತ್ತು.

ಗಮನವಿಟ್ಟು ನೋಡಿದರೆ ಅದೊಂದು ವಿಚಿತ್ರ ದೃಶ್ಯ. ಐವತ್ತಡಿ ಆಚೆ ಗೊಡಗೊಡ ಕಾಂಕ್ರೀಟ್ ಮಿಕ್ಸರ್ ಹೊಗೆ ಕಾರುತ್ತ ನಡೆದಿತ್ತು. ಆಚೆಯಿಂದ ಇಬ್ಬಿಬ್ಬರು ಕೈಕೊಟ್ಟು ಬುಟ್ಟಿಗಳಲ್ಲಿ ಮರಳು, ಜಲ್ಲಿ, ಸಿಮೆಂಟ್, ನೀರು ಹಾಕುವುದು ನಡೆದಿತ್ತು. ಇತ್ತ ಸುರಿದ ಮಿಶ್ರಣ ರಬ್ಬರ್ ಬಾಂಡ್ಲಿಗಳಲ್ಲಿ ತುಂಬಿ, ಸಾಲುಗಟ್ಟಿ ನಿಂತವರ ಕೈ-ಸರಪಳಿಯಲ್ಲಿ ಸೂಚಿತ ಸ್ಥಾನಕ್ಕೆ ರವಾನೆಯಾಗುವುದು, ಖಾಲಿ ಮರಳುವುದು ಸಾಗಿತ್ತು. ಬಿದ್ದ ಮಿಶ್ರಣವನ್ನು ಒಕ್ಕಿ ಒಕ್ಕಿ ಬಿಗಿಮಾಡು, ಸಣ್ಣ ದಮ್ಮಾಸ್ ಹಾಕು, ಮಟ್ಟ ಸರಿ ಮಾಡು ಎಲ್ಲಾ ಪಕ್ಕಾ ವೃತ್ತಿ ಶಿಸ್ತಿನಲ್ಲೇ ಮಾಮೂಲಿನಂತೇ ನಡೆದಿತ್ತು. ಆದರೂ ಅಲ್ಲೊಂದು ವಿಚಿತ್ರ – ಕೆಲಸ ಮಾಡುತ್ತಿದ್ದ ಯಾರ ಅಂಗ ಸೌಷ್ಟವವೂ ಆ ವೃತ್ತಿ ರೂಪಿಸಿದಂತೆ ಕಾಣುತ್ತಿರಲಿಲ್ಲ. ಎಲ್ಲರೂ ಗಂಡಸರೇ ಮತ್ತು (ಮೂಲದಲ್ಲಿ) ಶುಭ್ರ ಪಂಚೆ ಉಟ್ಟು, ಮೇಲೆತ್ತಿ ಕಟ್ಟಿದವರು. ಹೆಚ್ಚಿನವರು ಬರಿ ಮೈ. ತೀರ ಕೆಲವರು ಶಾಲು ಸುತ್ತಿಕೊಂಡೂ ಬಹುತೇಕರು ಜನಿವಾರಧಾರಿಗಳೂ ಆಗಿದ್ದರು. ದೇವಳದ ಒಳವಠಾರವಾದ್ದರಿಂದ ಬರಿಗಾಲು ಕಡ್ಡಾಯ. ಯಾರನ್ನೂ ಅವಮಾನಿಸಲು ಹೇಳುವ ಮಾತಲ್ಲದಿದ್ದರೂ ಡೊಳ್ಳು ಹೊಟ್ಟೆಯವರು, ಬಿಗಿಯಿಲ್ಲದ ರಟ್ಟೆಯವರು, ಸಣಕಲರು, ನುಣುಪಿನವರು, ಸುಂದರಾಂಗರು ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ನಿತ್ಯ ದೈಹಿಕ ಶ್ರಮದ ಕೆಲಸ ಮಾಡದವರೆಲ್ಲಾ ಅಲ್ಲಿ ಅಂದು ಕೇವಲ ಸಂಬಳವಿಲ್ಲದ ಕೂಲಿಗಳು! ಇಂಜಿನಿಯರ್, ವಕೀಲ, ವೈದ್ಯ, ಶಿಕ್ಷಕ, ದೊಡ್ಡ ಮಳಿಗೆಯ ದನಿ, ಎಕ್ರೆಗಟ್ಟಳೆ ತೋಟದ ಒಡೆಯ ಎಂದಿತ್ಯಾದಿ ಜಾತಕ ತೆಗೆದರೆ ಎಲ್ಲರೂ ಮಾಡುತ್ತಿದ್ದ ಕೆಲಸಕ್ಕೆ ಯೋಗ್ಯರೇ ಅಲ್ಲ; ಒಂದು ಲೆಕ್ಕದಲ್ಲಿ ಅಧಿ-ಯೋಗ್ಯರು!

ದೇವಸ್ಥಾನ ಸಮಾಜದ್ದು, ಇಲ್ಲಿ ದುಡ್ಡು ಕೊಟ್ಟು (ದಾನ) ಮಾಡಿಸುವ ಕೆಲಸದ ಜೊತೆಗೆ ಪ್ರೀತಿಯಿಟ್ಟು ಮಾಡುವ ಕೈಂಕರ್ಯದ (ಕಾರ್ ಸೇವಾ/ ಕರಸೇವೆ) ಮಹತ್ವವನ್ನು ಜನ ಹೊಸದಾಗಿ ಕಂಡುಕೊಂಡಿದ್ದರು. ಹಳ್ಳಿ ಮದುವೆ ಮುಂತಾದ ಕೌಟುಂಬಿಕ ಸಮಾರಂಭಗಳಲ್ಲಿ ಮನೆಯವರಲ್ಲದೆ ಆತ್ಮೀಯರೂ ಎಲ್ಲಾ ಕೆಲಸಕ್ಕೆ ಸೇರಿಕೊಳ್ಳುವುದು ಕಂಡಿದ್ದೇವೆ. ಹಿಂದಿನ ರಾತ್ರಿ ತರಕಾರಿ ಹೆಚ್ಚುವುದರಿಂದ ತೊಡಗಿ, ಸಮಾರಂಭದಂದು ಎರಡು ಮೂರು ಪಂಕ್ತಿಗಳವರೆಗೂ ಬಡಿಸಿ, ಬಳಿದು ಸುಧಾರಿಸುವ ಕ್ರಮ ಇಲ್ಲಿ ಮುಂದುವರಿದಂತಿತ್ತು. ಇನ್ನೂ ಪೂರ್ತಿ ಕಳೆದು ಹೋಗದ ಈ ನಿಜ ಸಮಾಜಶಕ್ತಿ ಇಲ್ಲಿ ವಿಸ್ತೃತ ನೆಲೆಯಲ್ಲಿ ಕೆಲಸ ನಡೆಸಿತ್ತು. ತತ್ಕಾಲೀನ ಸೊಂಟ ನೋವು, ಭುಜ ಬಿದ್ದದ್ದು, ಕಾಲಿನುಳುಕು, ಪ್ರಾಯದ ಬಳಲಿಕೆ, ಎಳತರ ಹುಮ್ಮಸ್ಸು (ಎರಡನೇ ತರಗತಿಯ ಪೋರನೊಬ್ಬ ಬುಟ್ಟಿಗಳಿಗೆ ಮರಳು ತುಂಬುತ್ತಿದ್ದ – ಅಳಿಲಸೇವೆ!)

ಎಲ್ಲಾ ಕೆಲಸದ ಆಯ್ಕೆಯಲ್ಲಿ ಸುಧಾರಿಸಿಕೊಂಡು ಕೆಲಸ ಭರದಿಂದ ಸಾಗಿತ್ತು. ಕೇವಲ ದೇಹದಂಡನೆಯ ಉರುಳುಸೇವೆಗೆ ಪರ್ಯಾಯ ದೇವಸೇವೆ ಎನ್ನುವ ಮನೋಭಾವ ಹೊಡೆದು ಕಾಣುತ್ತಿತ್ತು. ಶಿರಾಡಿ ಘಾಟೀ ರೈಲ್ವೇ ಮಾರ್ಗದುದ್ದಕ್ಕೆ ಹಿಂದೆ ನಡೆದು ನೋಡಿದವನೂ ಕೇವಲ ಎಸಿ ಭೋಗಿಯ ಟಿಕೆಟ್ ಹಿಡಿದವನೂ ಒಟ್ಟಿಗೆ ಪಯಣಿಸುವಾಗ ಧನ್ಯತೆಯ ಅಂತರವನ್ನು ಶಬ್ದಗಳಲ್ಲಿ ಹೇಳಲಾದೀತೇ? ಆ ಈ ಸಂಘಗಳೂ ಸಂಸ್ಥೆಗಳೂ ವಿಶೇಷ ಸಂದರ್ಭಗಳಲ್ಲಿ ದಾರಿ ಗುಡಿಸು, ಕಳೆ/ಮಾಲಿನ್ಯ ನಿರ್ಮೂಲನ, ಗಿಡ ನೆಡು ಎಂದೇನೇನೋ ಉದಾತ್ತ ವಿಚಾರಗಳಲ್ಲಿ ಸ್ವಯಂಸೇವೆ ನಡೆಸುವುದನ್ನು ಪತ್ರಿಕೆಗಳಲ್ಲಿ ಕಾಣುತ್ತಲೇ ಇರುತ್ತೇವೆ. ಆದರೆ ಬಹುತೇಕ ಕಲಾಪಗಳು ಭರ್ಜರಿ ಟೊಪ್ಪಿ ಬನಿಯನ್ನು, ಪ್ಲಕಾರ್ಡು ಸ್ಲೋಗನ್ನುಗಳಲ್ಲೇ ಮುಳುಗುತ್ತವೆ. ಮಾಧ್ಯಮಗಳ ಬೆಳಕು, ಕ್ಯಾಮರಾಗಳ ಎದುರು ಪ್ರದರ್ಶಿಸುವಲ್ಲಿ, ಉದ್ಘಾಟನೆಯ ಅಬ್ಬರದಲ್ಲಿ, ಕಾಫಿ ತಿಂಡಿಗಳ ಸಮಾರಾಧನೆಯಲ್ಲಿ ಕೃತಕೃತ್ಯವೂ ಆಗುತ್ತವೆ. ಆದರಿಲ್ಲಿ ಕೆಲಸ ತೊಡಗಿದಾಗಿನಿಂದ ನಿತ್ಯವೂ ಸ್ವಯಂ ಸೇವಕರ ತಂಡಗಳು ಬರುತ್ತಲೇ ಇವೆಯಂತೆ. ಶಾಲಾ ಮಕ್ಕಳಿಂದ ಹಿಡಿದು ವೃದ್ಧರ ಸಂಘದವರೆಗೂ ಲಿಂಗ, ಜಾತಿ ಬೇಧವಿಲ್ಲದೆ (ನಾನು ಕಂಡಂದು ಜನಿವಾರದವರೇ ಹೆಚ್ಚಿದ್ದದ್ದು ಆಕಸ್ಮಿಕ) ದಿನಕ್ಕೆ ಸರಾಸರಿಯಲ್ಲಿ ಇನ್ನೂರು ಮಂದಿ ದುಡಿಯುತ್ತಲೇ ಇದ್ದಾರಂತೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಎರಡೋ ಮೂರೋ ವಾರದವರೆಗೂ ಸೇವೆಗೆ ಮುಂಗಡವಾಗಿ ದಿನ ಕಾಯ್ದಿರಿಸಿಕೊಂಡ ತಂಡಗಳಿವೆಯಂತೆ.

ವೈಯಕ್ತಿಕವಾಗಿ ನನಗೆ ಮಠ, ಮಂದಿರಗಳಲ್ಲಿ ವಿಶ್ವಾಸವಿಲ್ಲ. ಹಾಗೆಂದು ಅನ್ಯ ಉದ್ದೇಶಗಳಲ್ಲಿ ಊರು ತಿರುಗುವಾಗ, ಅವಕಾಶವಿದ್ದರೆ ಯಾವುದೇ ಪುಣ್ಯ ಕ್ಷೇತ್ರಗಳನ್ನು ನಾನು ಒಮ್ಮೆ ನೋಡದೇ ಬಂದದ್ದೂ ಇಲ್ಲ. ಆಗೆಲ್ಲಾ ಒಳಗಿದ್ದವರಿಗೆ ಮುಜುಗರವಾಗದಂತೆ, ನನ್ನ ವೈಯಕ್ತಿಕ ನಂಬಿಕೆಗಳನ್ನು ಕೆಡಿಸಿಕೊಳ್ಳದೆ ಆಚಾರಗಳಲ್ಲಿ ಸಾಮಾನ್ಯನಂತೆ ತೋರಿಸಿಕೊಳ್ಳುವುದರಲ್ಲೂ ತಪ್ಪಿದ್ದಿಲ್ಲ. ಒಳ್ಳೆಯ ಮನಸ್ಸಿನಿಂದ ಸಮಾಜವನ್ನು ಒಟ್ಟುಗೂಡಿಸಲು ದೇವಸ್ಥಾನವೂ ಕ್ಷೇತ್ರ ಆಗಬಹುದು ಎಂದು ನಾನು ಇನ್ನೊಂದೇ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಕಾಣುತ್ತಲೇ ಇರುವ ಸತ್ಯವನ್ನು ಇಲ್ಲಿಯೂ ಕಂಡೆ. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರನಿಗೆ ಜಯವಾಗಲಿ.

ಮೈಸೂರಿನ ನನ್ನ ತಮ್ಮ – ಅನಂತವರ್ಧನ (ವೃತ್ತಿಯಲ್ಲಿ ಲೆಕ್ಕ ಪರಿಶೋಧಕ ಅರ್ಥಾತ್ ಚಾರ್ಟರ್ಡ್ ಅಕೌಂಟೆಂಟ್) ಮೈಸೂರಿನಿಂದಾಚೆ ಸುಮಾರು ಹನ್ನೆರಡು ಕಿಮೀ ದೂರದ ಹಳ್ಳಿ ಕೊಂಪೆಯಲ್ಲೆಲ್ಲೋ ಒಂದು ತುಂಡು ಕೃಷಿಭೂಮಿ ಕೊಂಡ. ಅಲ್ಲಿ ಇವನ ಕೂಲಿನಾಲಿಗೆ ಒದಗಿದ ನಂಜುಂಡ ನಿಧಾನಕ್ಕೆ ಇವನ ಬಲಗೈ ಬಂಟನೇ ಆಗಿದ್ದ. ಅದೊಂದು ದಿನ ‘ತ್ವಾಟಕ್ಕೆ ಸೊಪ್ಪ್ ಹೊಡ್ಯಾಣಾಂ’ತ ನಂಜುಂಡ ಜಮೀನಿನ ಪಕ್ಕದಲ್ಲಿದ್ದ ಸರಕಾರೀ ಭೂಮಿಯಲ್ಲಿ ನುಗ್ಗಿದ್ದನಂತೆ. ಪೊದರು, ಮುಳ್ಳು ನಿವಾರಿಸಿ ನಿತ್ಯ ಕಂಡದ್ದಕ್ಕಿಂತ ಒಳಗೆ ಹೋಗುವಾಗ ಅನಿರೀಕ್ಷಿತವಾಗಿ ತುಂಬಾ ಹಳೆಯ ಶಿಥಿಲ ದೇಗುಲ ರಚನೆಗಳು ಸಿಕ್ಕವಂತೆ. ಅನಂತ ಸ್ಥಳದ ಸರಕಾರೀ ದಾಖಲೆ, ಲಭ್ಯ ಶಾಸನ ಮತ್ತು ಇತಿಹಾಸಗಳೆಲ್ಲವನ್ನೂ ಸಮರ್ಥರಿಂದ ಪರಿಶೀಲಿಸುವಾಗ ಅನಾವರಣಗೊಂಡದ್ದೇ ಇನ್ನೊಂದು ಮಹಾಲಿಂಗೇಶ್ವರ ದೇವಸ್ಥಾನ.

ವೈಯಕ್ತಿಕವಾಗಿ ಅನಂತ ಯಾವುದೇ ಪೂಜೆಪುನಸ್ಕಾರಗಳು, ವ್ರತ ನೇಮಗಳು ಇಲ್ಲದವ. ಆದರೆ ಅನ್ಯಮತ ದೂಷಣೆಯಿಲ್ಲದೆ ಸಮಾಜಮುಖಿಯಾದ ಯಾವುದೇ ಕೂಟಕ್ಕೆ ಪದವಿ, ಕೀರ್ತಿಗಳ ಹಂಬಲವಿಲ್ಲದೆ ತನು, ಮನ, ಧನ ತೊಡಗಿಸಬಲ್ಲ ಉತ್ಸಾಹಿ. ಸುಮಾರು ಹದಿನೇಳನೇ ಶತಮಾನಕ್ಕೆ ಸೇರಿದ್ದರೂ ಸಂಪೂರ್ಣ ಹಾಳುಬಿದ್ದು, ಮರವೆಗೂ ಸಂದ ಮಹಾಲಿಂಗೇಶ್ವರ ದೇವಸ್ಥಾನದ ಪುನರುತ್ಥಾನದಲ್ಲಿ ಅನಂತನಿಗೆ ಸುತ್ತಣ ಹತ್ತು ಹಳ್ಳಿಗಳ ಸಾಮಾಜಿಕ ಸ್ಥಿತಿಯನ್ನು ಉತ್ತಮೀಕರಿಸುವ ಅವಕಾಶಗಳು ನಿಚ್ಚಳವಾದವು. ಅವನ ಉದ್ದೇಶಕ್ಕೆ ಬೆಂಬಲವಾಗಿ ಧರ್ಮಸ್ಥಳದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಸಂಸ್ಥೆ – ದೇವಾಲಯ ಪುನರುತ್ಥಾನ ಟ್ರಸ್ಟ್ ಮತ್ತು ಅದರ ಪರಿಣತರು ನಿಂತು ಇಂದು ಕೆ. ಹೆಮ್ಮನಹಳ್ಳಿಯ ಮಹಾಲಿಂಗೇಶ್ವರ ಕ್ಷೇತ್ರ ನಿಜಕ್ಕೂ ಸುತ್ತಲಿನ ಹತ್ತು ಹಳ್ಳಿಗಳ ಹಲವು ಸಾಮಾಜಿಕ ಅಗತ್ಯಗಳಿಗೆ ಒದಗುವ, ಮಾನಸಿಕ ಬಲ ಕೊಡುವ ನೆಲೆಯಾಗಿ ಬೆಳೆದಿದೆ. ದೇವಾಲಯ ಪುನರುತ್ಥಾನ ಟ್ರಸ್ಟಿನ ಪರಿಣತರು ಮೂಲ ರಚನೆಯ ಪ್ರಾಚೀನತೆ ಮತ್ತು ಶೈಲಿಯನ್ನು ಖಚಿತಪಡಿಸಿಕೊಳ್ಳುತ್ತದೆ. ಅನಂತರ ಅದನ್ನು ಅದೇ ಪುರಾತನ ಶೈಲಿಯಲ್ಲೇ ಪುನಾರಚಿಸಿ ಮುಂದುವರಿಸಲು ಸ್ಥಳೀಯ ಸಮಿತಿಯ ವಿಶ್ವಾಸಾರ್ಹತೆ ನೋಡುತ್ತದೆ. (ಕೊಡುವವರಿದ್ದಾರೆಂದು ಇದ್ದಷ್ಟೂ ನೆಲ ತುಂಬಿ, ಆಕಾಶ ಆವರಿಸುವಂತೆ ಯದ್ವಾತದ್ವಾ ಅಮೃತ ಶಿಲೆ, ಬಣ್ಣ, ಗಾಜು, ಮೂರ್ತಿಗಳು ತುಂಬುವ ಹುಚ್ಚಿಗಿವರ ಇಂಬಿಲ್ಲ) ಸ್ಥಳೀಯ ಸಮಿತಿ ಒಟ್ಟು ಖರ್ಚಿನ ಅರ್ಧಾಂಶ ವೆಚ್ಚವನ್ನು ಭರಿಸಿ ರಚನೆಗಿಳಿದರೆ ಟ್ರಸ್ಟ್ ಉಳಿದರ್ಧ ಕೊಟ್ಟು ಬೆಂಬಲಿಸುತ್ತದೆ. ಅನಂತ ಅವನ ವೃತ್ತಿಯ ಕೌಶಲ್ಯದಲ್ಲಿ ಕೆ.ಹೆಮ್ಮನಳ್ಳಿಯ ಮುಖ್ಯಸ್ಥರನ್ನೇ (ಮೊಗಣ್ಣೇ ಗೌಡ) ಮುಂದಿಟ್ಟುಕೊಂಡು ಹಲವು ಹಳ್ಳಿಗರನ್ನೂ ಜೋಡಿಸಿ ಸಮಿತಿ ಕಟ್ಟಿದ. ನಮ್ಮ ತಂದೆ (ಜಿಟಿನಾ) ಮೈಸೂರಿನಲ್ಲಿ ಗಾನಭಾರತಿಯಂಥ ಸಾರ್ವಜನಿಕ ಸಂಸ್ಥೆ ಕಟ್ಟುವಾಗ ನಿಸ್ಸಂಕೋಚವಾಗಿ ಹೇಳಿಕೊಳ್ಳುತ್ತಿದ್ದಂತೇ ‘ಸಾರ್ವಜನಿಕ ಭಿಕ್ಷಾಟನೆ’ಗೆ ಇಳಿದ. ಮುಂದುವರಿದು ತಂದೆಯಿಂದ ಬಂದ ಪ್ರಾಮಾಣಿಕತೆ, ಪಾರದರ್ಶಕತೆ, ನಿಸ್ಪೃಹತೆ, ಅವಿರತ ದುಡಿಮೆಯೇ ಮೊದಲಾದ ಗುಣೈಕ ಮಾರ್ಗದಲ್ಲಿ ಮಹಾಲಿಂಗೇಶ್ವರ ದೇವಾಲಯವನ್ನು ಮೂರ್ತಗೊಳಿಸಿದ.

ಬಡತನ, ಸೋಮಾರಿತನ, ಅವಿದ್ಯೆ, ಅಮಲುಕೋರತನ, ಮೌಢ್ಯಗಳೂ ಸೇರಿ ಬಳಲುತ್ತಿದ್ದ ಆಸುಪಾಸಿನ ಜನತೆಗೆ ಸುಲಭದಲ್ಲಿ ಅರ್ಥವಾಗುವ ಭಾಷೆ ದೇವರ ಭಯ. ಆದರೆ ಕೆ.ಹೆಮ್ಮನಹಳ್ಳಿಯಲ್ಲಿ ಪುನರುತ್ಥಾನಗೊಂಡ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ದೇವರು ಎಲ್ಲರಿಗೂ ಭಯನಾಶಕ ಮತ್ತು ಬಲು ಮುಖ್ಯವಾಗಿ ಸ್ಪೃಶ್ಯ. ವೈದಿಕ ಕ್ರಿಯೆಗಳು ಇಲ್ಲಿ ಸಲ್ಲುತ್ತವೆ ಆದರೆ ಮೌಢ್ಯಕಾರಕ ಮೌಲ್ಯಗಳಿಗೆ ಬೆಲೆ ಇಲ್ಲ; ಮಡಿ, ಮೈಲಿಗೆ ಕೇವಲ ಶುಚಿತ್ವದಲ್ಲಿ ಮಾತ್ರ. ಇಲ್ಲಿ ಶುಭಕಾರ್ಯಗಳಿಗೆ ಎಲ್ಲ ದಿನಗಳೂ ಶುಭ ಲಗ್ನಗಳೇ. ಇಲ್ಲಿ ನಾಮಕಾವಸ್ಥೆ ಶುಲ್ಕಗಳಿಗೆ ಹಳ್ಳಿಗರ ಯಾವುದೇ ಸಾತ್ತ್ವಿಕ ಕ್ರಿಯೆಗಳಿಗೆ ಮುಕ್ತ ಅವಕಾಶವಿದೆ. (ಅಮಲುಕೋರತನ ಮತ್ತು ಮಾಂಸಾಹಾರ ಮಾತ್ರ ನಿಷಿದ್ದ. ಸಾರ್ವಜನಿಕ ಶುಚಿತ್ವವನ್ನು ಮನಗಾಣಿಸುವ ಕ್ರಿಯೆಗಳು ಇಲ್ಲಿ ಶಾಸನಗಳಾಗಿ ಬರುವುದಿಲ್ಲ, ಪ್ರಿಯ-ಸಂವಾದದಂತೆ ಒಲಿಸುತ್ತವೆ) ಅಷ್ಟಕ್ಕೂ ಗತಿಯಿಲ್ಲದವರಿಗೆ ವರ್ಷಕ್ಕೊಮ್ಮೆ ಉಚಿತ ವಿವಾಹದ ವ್ಯವಸ್ಥೆಯನ್ನೂ ದೇವಾಲಯ ಸಮಿತಿ ಕ್ರಮವತ್ತಾಗಿ ನಡೆಸುತ್ತ ಬಂದಿದೆ. ಇಲ್ಲಿನ ಪುರೋಹಿತ ಆ ಶಬ್ದಾರ್ಥಕ್ಕೆ ಪ್ರಾಮಾಣಿಕ. ಈಚೆಗೆ ನಾನೇ ಕಂಡಂತೆ ದಿನದ ಎಲ್ಲಾ ಹೊತ್ತಿನಲ್ಲೂ ಒಬ್ಬರಲ್ಲ ಒಬ್ಬರು ಅವರಲ್ಲಿ ಬಂದು ಏನೇನೋ ಮಾನಸಿಕ ಕ್ಷೋಭೆಗಳನ್ನು ತೋಡಿಕೊಳ್ಳುತ್ತಿರುತ್ತಾರೆ. ಇವರಾದರೋ ಯಾವುದೇ ಆರ್ಥಿಕ ಹೊರೆ ಶುಲ್ಕ ರೂಪದಲ್ಲೋ ಅರ್ಥಹೀನ ಕ್ರಿಯೆಗಳ ರೂಪದಲ್ಲೋ ಬಂದವರಿಗಾಗದಂತೆ, ನುರಿತ ಮಾನಸಿಕ ಸಲಹೆಗಾರನಂತೆ ನಡೆಸಿಕೊಳ್ಳುತ್ತಾರೆ.

ಅನ್ನ ದೇವರ ಮುಂದೆ ಮಂಕಾಗುತ್ತ ನಡೆದಿದ್ದ ಸ್ಥಳೀಯರ ಆರೋಗ್ಯಪೂರ್ಣ ಅನ್ಯಾಸಕ್ತಿಗಳನ್ನು ಜಾಗೃತಗೊಳಿಸುವ ಕ್ರಿಯೆಯೂ ಮಹಾಲಿಂಗಕ್ಷೇತ್ರದಲ್ಲಿ ಧಾರಾಳ ನಡೆಯುತ್ತಿದೆ. ಪ್ರಕೃತಿ ಸಂಬಂಧಿಯಾದ, ಆರ್ಥಿಕ, ದೈಹಿಕ ಮತ್ತು ಮಾನಸಿಕ ಕ್ರಿಯೆಗಳನ್ನು ಪ್ರಚೋದಿಸಿ ಮೌಲ್ಯಗಳನ್ನು ಪೋಷಿಸುವ ಕೆಲಸವನ್ನೂ ಇಲ್ಲಿ ದೇವಕಾರ್ಯವೆಂಬಂತೆ ಮಾಡುತ್ತಲೇ ಬಂದಿದ್ದಾರೆ. ಭೂಮಿಯ ಫಲವಂತಿಕೆಗೆ ಸಂಬಂಧಿಸಿದ ಕೊಂತಿಪೂಜೆಯ ಪುನರುತ್ಥಾನ ಇಲ್ಲಿ ಪರಿಣಾಮಕಾರಿಯಾಗಿ ನಡೆದಿದೆ. ಕೃಷಿಕರ ಸಣ್ಣ ಪುಟ್ಟ ಉತ್ಪನ್ನಗಳು ನಗರದ ದಳ್ಳಾಳಿಗಳ ಮೇಲಾಟದಲ್ಲಿ ನ್ಯಾಯಬೆಲೆಯಿಂದ ಶೋಷಿತವಾಗುವುದನ್ನು ತಡೆಯಲು ಕೆಲಸಮಯ ವಾರದ ಸಂತೆಯನ್ನು ದೇವಳದ ಎದುರಿನಲ್ಲಿ ವ್ಯವಸ್ಥೆ ಮಾಡಿದ್ದೂ ಆಗಿತ್ತು. ಮೈಸೂರಿನ ಜನತೆಯ ಪ್ರೋತ್ಸಾಹ ಹಾಗೂ ಹಳ್ಳಿಗರ ಉತ್ಸಾಹ ಏರುತ್ತಿದ್ದಂತೆ ನಗರದ ದೊಡ್ಡ ವ್ಯವಸ್ಥೆಗಳು ಇದನ್ನು ಸಹಿಸದೇ ಸೋಲಿಸಿಬಿಟ್ಟವು. ನಿರಾಶರಾಗದೇ ಸಮಿತಿಯವರು ಸ್ಥಳೀಯ ಮಲ್ಲಯುದ್ಧವನ್ನು ಪುನರುಜ್ಜೀವಿಸಿದ್ದಾರೆ.

ಈಗ ಅದು ನಗರದ ಜೂಜುಕೋರರ ಅಣಕು ಕುಸ್ತಿಗಳಿಗೆ ಸವಾಲಾಗಿ ಬೆಳೆಯುತ್ತಿದೆ. ಸ್ಥಳೀಯ ದಾನಿಗಳು ಇದರ ಜನಪ್ರಿಯತೆಯನ್ನು ಗಮನಿಸಿ ವ್ಯವಸ್ಥಿತ ಗರಡಿಮನೆಗೆ ಕಟ್ಟಡ, ವೀಕ್ಷಣೆಗೆ ತೆರೆದ ಬಯಲುಮಂದಿರಕ್ಕೆ ನೆಲವನ್ನೂ ದಾನ ನೀಡಿರುವುದು ಸಣ್ಣ ಸಂಗತಿಯಲ್ಲ. ಮತ್ತೆ ವರ್ಷಾವಧಿಯ ಹಲವು ಹಬ್ಬಗಳು, ವಿಶೇಷಪಟ್ಟ ಚೌತಿ ಶಿವರಾತ್ರಿಗಳು, ನಡೆಯುವ ದೀರ್ಘ ನಾಟಕ, ಯಕ್ಷಗಾನಾದಿ ಪ್ರದರ್ಶನಗಳು, ವಿವಿಧ ಶಿಬಿರಗಳು ಸೇರಿ ಇಂದು ಈ ಕ್ಷೇತ್ರ ಒಂದು ಅಘೋಷಿತ ಸಾರ್ವಜನಿಕ ಶಿಕ್ಷಣರಂಗ! ಕೆ.ಹೆಮ್ಮನಹಳ್ಳಿಯ ಮಹಾಲಿಂಗೇಶ್ವರನಿಗೂ ಒಕ್ಕೊರಲಿನಿಂದ ಹೇಳೀ ಜೈ!