ಕೂಸಿಗಿಂತ ದೊಡ್ಡ ಕುಲಾವಿ ಅರ್ಥಾತ್ ಪೀಠಿಕೆ: ಅಭಯಸಿಂಹ (ಮಗ) ‘ಸಕ್ಕರೆ’ ಹಿಡಿದುಕೊಂಡು (ಅವನ ನಿರ್ದೇಶನದ ಹೊಸ ಚಿತ್ರ) ಮಡಿಕೇರಿ ಚಿತ್ರೀಕರಣದ ಮೊಕ್ಕಾಂ ಮುಗಿಸಿ ಬೆಂಗಳೂರಿಗೆ ಮರಳಿದ್ದ. ಅವನ ನೇರ ಭಾಗವಹಿಸುವಿಕೆಯ ಕಲಾಪಗಳ ಒತ್ತಡ ಕಡಿಮೆಯಾಗಿ, ಹಾಡಿನ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಇತ್ತ ಉದಯ ಟೀವಿಯಲ್ಲಿನ ‘ಸೌಜನ್ಯ’, ಕ್ಷಮಿಸಿ – ನಮ್ಮ ಸೊಸೆ ರಶ್ಮಿ, ತನ್ನ ‘ಅಳಗುಳಿಮನೆ’ ಧಾರಾವಾಹಿಯ ಚಿತ್ರೀಕರಣದ ದಿನಾಂಕಗಳೂ ವಿರಳವಾಗಿ ಬರುತ್ತಿದ್ದುದರಿಂದ ಬಿಡುವಾಗಿದ್ದಳು. ನಾವಿಬ್ಬರು (ಹೆಂಡತಿ ದೇವಕಿಯೊಡನೆ) ಎರಡು ಮೂರು ದಿನಗಳ ಮಟ್ಟಿಗೆ ಬೆಂಗಳೂರಿಗೆ ಹೋಗಲು ಅಂದಾಜಿಸಿದೆವು.

ಸ್ವಂತ ವಾಹನ – ಬೈಕ್ ಅಥವಾ ಕಾರು ಅನಾವಶ್ಯಕ. (ಗೆಳೆಯ ಗೋವಿಂದ ತನ್ನ ಈಚಿನ ಜಾಲಲೇಖನದಲ್ಲಿ ಒಟ್ಟು ಖಾಸಗಿ ಸ್ವಯಂಚಲಿ ವಾಹನಗಳನ್ನೇ ನಿರಾಕರಿಸುವ ಒಳ್ಳೆ ಬರಹ ಕೊಟ್ಟಿದ್ದಾನೆ) ಮೊದಲೆಲ್ಲಾ ಸ್ವಂತ ಚಾಲನೆಯ ಅವಕಾಶವಿಲ್ಲದಲ್ಲಿ ಪ್ರಯಾಣಾವಧಿಯನ್ನು ಉಳಿಸಲು ರಾತ್ರಿ ಪ್ರಯಾಣ ನೆಚ್ಚುತ್ತಿದ್ದೆವು. ನನಗೆ ಸಾಮಾನ್ಯವಾಗಿ ಪ್ರಯಾಣದಲ್ಲಿ ನಿದ್ರೆ ಬರುವುದಿಲ್ಲ. ಹಾಗಾಗಿ ಹಿಂಬಾಲಿಸಿದ ಹಗಲಿನ ವೃತ್ತಿ ಕಲಾಪಗಳಲ್ಲೆಲ್ಲ ನಿದ್ದೆಗೇಡಿತನದ ಹೊರೆ ಹೊತ್ತು ಬಳಲುವುದೂ ಅನಿವಾರ್ಯವಾಗಿತ್ತು. ಈಗಲಾದರೋ ಪ್ರವೃತ್ತಿಯ ದಿನಗಳು! ಪ್ರಯಾಣದಲ್ಲಿ ದೃಶ್ಯ ವೀಕ್ಷಣೆಯನ್ನೂ ಬಯಸಿ ಹಗಲು ಹೊರಟುಕೊಂಡೆವು. ನಾಗರಿಕ ದೃಶ್ಯಕ್ಕಿಂತ ಪ್ರಾಕೃತಿಕ ವೈಭವ ಹೆಚ್ಚಿರುವ ರೈಲು ನಮಗೆ ಪ್ರಥಮ ಆದ್ಯತೆಯದ್ದೇ. ಆದರೆ ಇಲಾಖೆಯೊಳಗಿನ ಪ್ರಾದೇಶಿಕತೆಯ ರಾಜಕೀಯದಲ್ಲಿ ಹಗಲಿನ ರೈಲುಗಳೆಲ್ಲಾ ಕೇರಳದ ಕೃಪೆಯಲ್ಲಿವೆ. ಕೇರಳದ ಎಲ್ಲಿಂದಲೋ ಹೊರಟು, ಕಂಕನಾಡಿ ನಿಲ್ದಾಣವನ್ನು ಅದರದೇ ವೇಳೆಯಲ್ಲಿ ಹಾದುಹೋಗುತ್ತವೆ. ಅಲ್ಲದೆ ರೈಲುಗಳ ಸಮಯದ ಶಿಸ್ತೂ ನಂಬಿಕೆಗೆ ಯೋಗ್ಯವೂ ಅಲ್ಲ. ಹೀಗಾಗಲು ಮಾರ್ಗದ ಅನಿವಾರ್ಯತೆಗಿಂತ, ಮಂಗಳೂರು-ಬೆಂಗಳೂರು ನಡುವೆ ರಾತ್ರಿ ಸಂಚರಿಸುವ ಖಾಸಗಿ ಬಸ್ಸುಗಳ ಫಿತೂರಿ ಎನ್ನುವ ವದಂತಿ ಮರೆಯುವಂತಿಲ್ಲ. ಕೊನೆಯದಾಗಿ ಪುತ್ತೂರು – ಸಂಪಾಜೆ ನಡುವಣ ರಸ್ತೆಯ ಅಗಲೀಕರಣದ ಅವ್ಯವಸ್ಥೆಗಳ ನೆಪದಲ್ಲಿ ಉಳಿದದ್ದು ಒಂದೇ – ಐರಾವತ, ಸರಕಾರೀ ವಾಲ್ವೋ ಬಸ್ಸು.

ದಾರಿ ಖರ್ಚಿಗೆಂದು ಪ್ರಜಾವಾಣಿ ದೀಪಾವಳಿ ಸಂಚಿಕೆ ಇಟ್ಟುಕೊಂಡಿದ್ದೆ. ಅದರಲ್ಲಿ ಹಿರಿಯ ಬರಹಗಾರ ಕೆ.ವಿ.ತಿರುಮಲೇಶರು ಬರೆದ ಎರಡು ಮಕ್ಕಳ ಕತೆಗಳನ್ನು ಓದಿ ಕುಶಿಪಟ್ಟೆ. ಅದಕ್ಕೆ ಒಂದು ತರದಲ್ಲಿ ಪೀಠಿಕೆಯಾಗಿ ಹಿಂದಿನ ದಿನವಷ್ಟೇ ಪ್ರಜಾವಾಣಿ ದೈನಿಕದಲ್ಲಿ, ಮಕ್ಕಳ ದಿನದ ವಿಶೇಷವಾಗಿ ಅವರೇ ಬರೆದ ಲೇಖನವನ್ನೂ ಓದಿದ್ದು ನೆನಪಾಯ್ತು. ಅದರಲ್ಲವರು ಮಕ್ಕಳನ್ನು ಕಾಡಿಸುತ್ತಿದ್ದ ಎಂದೂ ಮುಗಿಯದ ಕತೆಗಳನ್ನು ಉಲ್ಲೇಖಿಸಿದ್ದರು. ನನ್ನ ನೆನಪಿನಲ್ಲಿ ಅಂಥ ಎರಡು ಕಥೆಗಳೂ ಇತ್ತು. ಇವುಗಳಲ್ಲಿ ಕೇಳುಗರನ್ನು ಪ್ರತಿಕ್ರಿಯೆಗೆ ಬದ್ಧರನ್ನಾಗಿಸಿ (ಕನಿಷ್ಠ ಹೂಂಗುಟ್ಟಲೇ ಬೇಕು) ಕತೆಗಾರರು ತೊಡಗುತ್ತಿದ್ದರು. ಅದರಲ್ಲಿ ಮೊದಲನೇದು: ಒಂದು ರಾಜ್ಯ. ಅಲ್ಲಿಗೆ ಬರಲಿರುವ ಭೀಕರ ಬರಗಾಲ. ರಾಜ ಮುನ್ನೆಚ್ಚರಿಕೆಯಾಗಿ ಭಾರೀ ಕಣಜ ಕಟ್ಟಿ, ಧಾನ್ಯ ದಾಸ್ತಾನು ಮಾಡುವುದು. ಅದಕ್ಕೆ ಶೀತ ಬಂದಾಗ ಬಿಸಿಲು ಬೀಳಲೆಂದು ಕೆಲವು ಹಂಚು ತೆಗೆಸುವುದುವರೆಗಿನ ವಿವರಗಳನ್ನು ರಂಗಾಗಿ ಹೇಳಬೇಕು. ಕೇಳುಗರು ತನ್ಮಯತೆ ಗಟ್ಟಿಯಾದ ಮೇಲೆ ನಿರೂಪಕ ಧಾಟಿ ಬದಲಿಸದೆ “ಆಗ ಒಂದು ಗುಬ್ಬಿ ಬಂತು, ಒಂದು ಅಕ್ಕಿ ಕಾಳು ತೆಗೊಂಡು ಹೋಯ್ತು” ಎನ್ನುವ ಮಾತಿಗೆ ಇಳಿದುಬಿಡುತ್ತಾನೆ. ಮತ್ತೆ ಕಣಜ ಮುಗಿಯುವವರೆಗೂ ಗುಬ್ಬಿಗಳು ಒಂದೊಂದೇ ಅಕ್ಕಿಕಾಳು ಒಯ್ದದ್ದನ್ನು ಹೇಳಲೇ ಬೇಕಲ್ಲಾ! ಕೇಳುವ ಮಕ್ಕಳು ಹೆಚ್ಚಾಗಿ ಹಾಗೇ ನಿದ್ರೆಗೆ ಜಾರುತ್ತಾರೆ. ಇನ್ನೊಂದು ಕತೆ ಕೇಳುಗರನ್ನು ಗೋಳುಗುಟ್ಟಿಸುತ್ತದೆ: ಒಂದು ಅಜ್ಜಿ. ಹಳೇ ಸೀರೆ ತೇಪೆ ಹಚ್ಚಲು ಹೊರಡುತ್ತಾಳೆ. ಮನೆ ಒಳಗೆ ಸೂಜಿಗೆ ನೂಲು ಹಾಕಲು ಸೋತು ಬಾವಿ ಕಟ್ಟೆಯಲ್ಲಿ ಕೂರುತ್ತಾಳೆ. ಇಲ್ಲಿವರೆಗೆ ಸ್ಪಷ್ಟವಾಗಿ ಹೂಂಗುಟ್ಟುವ ಕೇಳುಗರನ್ನು ನಿರೂಪಕ ಮುಂದೆ ಪ್ರಶ್ನಾ ಸರಣಿಗೆ ಸಿಲುಕಿಸುತ್ತಾನೆ.

“ಸೂಜಿ ಕೈತಪ್ಪಿ ಬಾವಿ ಸೇರುತ್ತದೆ.”
“ಹೂಂ”
“ಹೂಂ ಅಂದ್ರೆ ಸೂಜಿ ಸಿಕ್ತದಾ?”
“ಇಲ್ಲ.”
“ಇಲ್ಲ ಅಂದ್ರೆ ಸಿಕ್ತದಾ?”
“ಏ ಕತೆ ಹೇಳೂ”
“ಏ ಕತೆ ಹೇಳೂ ಅಂದ್ರೆ ಸಿಕ್ತದಾ?…”

ಅದು ನಮ್ಮೆಲ್ಲ ದಾರಿಗಳ ಎಂದೂ ಮುಗಿಯದ ಅಭಿವೃದ್ಧಿಗೆ ಸಂವಾದಿಯಾಗಿಯೂ ಕಾಣಿಸಿತು. ಆಗ ಹೊಳೆದದ್ದು ಕತೆಯೋ ತುಸು ಜಾಣ್ಮೆಯ ನುಡಿಯೋ ಅಬದ್ಧ ಕವನವೋ ಅಂತೂ ಚರವಾಣಿಯಲ್ಲಿ ಕುಟ್ಟುತ್ತ ಹೋದೆ. ಅತ್ತ ಬೆಂಗಳೂರಿನಲ್ಲಿ ಮನೆಯಲ್ಲಿ ಬಿಡುವಾಗಿದ್ದಿರಬಹುದಾದ ರಶ್ಮಿಗಿದನ್ನು ರವಾನಿಸುತ್ತಲೂ ಇದ್ದೆ. ಅದನ್ನೇ ತುಸು ಪರಿಷ್ಕರಿಸಿ ಈಗ ನಿಮ್ಮೆದುರು ಇಡುತ್ತಿದ್ದೇನೆ.

ಚರವಾಣಿ ಕತೆಗಳು

ವಾಸ್ತವ: ‘ಆನೆಗುಂಡಿ’ ಇಂದು ಸ್ಥಳ ನಾಮ. ವಾಸ್ತವದಲ್ಲಿ ಈ ಜಾಗ ಹಿಂದೆ ಆನೆ ಹಿಡಿಯಲು ಗುಂಡಿ ಮಾಡಿಡುತ್ತಿದ್ದ ಜಾಗವಂತೆ. ಇಲ್ಲಿನ ತೀವ್ರ ಚಡಾವನ್ನು ಮೂರು ಸಾಲು ಚಕ್ರದ, ಭಾರೀ ಹೇರುಹೊತ್ತ, ಲಾರಿಯೊಂದು ಆನೆಗುಂಡಿಯ ಚಡಾವು ಏರತೊಡಗಿತ್ತು. ರಸ್ತೆ ಅಗಲೀಕರಣವೋ ಚತುಷ್ಪಥೀಕರಣವೋ ಆಶ್ವಾಸನೆಗಳ ಜಡಿಮಳೆಗಷ್ಟೇ ಸಿಕ್ಕು, ಕನಿಷ್ಠ ವಾರ್ಷಿಕ ತೇಪೆಕಾರ್ಯವನ್ನೂ ಕಾಣದೆ ನಿಜಕ್ಕೂ ಆನೆ ಹಿಡಿಯಲು ಸಜ್ಜುಗೊಂಡಂತೇ ಇತ್ತು. ಲಾರಿ ಅನಿವಾರ್ಯವಾಗಿ ತನ್ನುದ್ದ, ಭಾರಗಳೊಡನೆ ಹೊಂಡ ಮತ್ತು ತೀವ್ರ ತಿರುವೇರುಗಳನ್ನು ನಿಧಾನಕ್ಕೆ ನಿಭಾಯಿಸುತ್ತಿತ್ತು. ಅದುವರೆಗೆ ಭರದಿಂದ ಬಂದ ನಮ್ಮ ಬಸ್ಸು ಅಪಾರ ಸಹನೆಯಿಂದ ಹಿಂಬಾಲಿಸುವುದೊಂದೇ ಉಳಿಯಿತು. ಆಗ ಹುಟ್ಟಿತು. .

ಮೊದಲ ಹನಿ ಕತೆ: ಐರಾವತ ಸುಳ್ಯ ದಾರಿಯಲ್ಲಿತ್ತು. ಆನೆಗುಂಡಿಯಲ್ಲಿ ಸಿಕ್ಕಿಬಿತ್ತು. ರಶ್ಮಿಗೆ ಕೇವಲ ಚರವಾಣಿ ಕತೆ, ಹನಿಗತೆ ಎಂದಷ್ಟೇ ನನ್ನ ಸೂಚನೆ ಸಾಕಾಗಲಿಲ್ಲ. ಮರುಕ್ಷಣದಲ್ಲಿ “ಅಯ್ಯೋ ಸಿಕ್ಕಿಬಿದ್ರಾ” ಮಿಂಚಿಸಿದಳು. “ಇಲ್ಲ ದಾರಿ ಅವಸ್ಥೆಯ ಕಥನ ಮಾತ್ರ. ಐರಾವತ ಅಂದ್ರೆ ಆನೆಯೇ ಅಲ್ವಾ” ಎಂದು ನಾನು ಮರುಮಿಂಚಿದಾಗ, ಒಟ್ಟು ಕಥನದ ಲಹರಿಗೆ ಜಾಗೃತಳಾದಳು.

ಕತೆ ಎರಡು: ನಾನು ಕೇಳಿದೆ “ಲಾರಿ ಮೇಲೆ ಸವಾರಿನಾ?” “ಇಲ್ಲ ನಾ ಮಾಡಿದ ದಾರಿಯ ಸುಖ ಅನುಭವಿಸ್ತಾ ಇದ್ದೇನೆ” ಅಂದಿತು ಗದ್ದಕ್ಕೆ ಕೈಕೊಟ್ಟು ಕೂತಿದ್ದ ಹಿತಾಚಿ!

ಕತೆ ಮೂರು: ಶೀನಪ್ಪಣ್ಣ ದೂಳು ಬೇಡಾಂತ ವಾಲ್ವೋ ಏರಿದ. ಒಳಗೆ ಚಳಿ ಬೇಡಾಂತ ಮುಗ್ಗುಲು ರಗ್ಗು ಸೇರಿದ, ಶೀನಪ್ಪ!

ಕತೆ ನಾಲ್ಕು: ಉದ್ದಕ್ಕೆ ದಾರಿಯ ಗುದ್ದಾಟಕ್ಕೆ ನರಳಿದವ, ಪೇಟೆ ಕಂಡು “ಮುಗೀತೂ” ಸಂಭ್ರಮಿಸಿದ. ಕಂಡಕ್ಟರ್ ಇಳಿಸುವಂತೆ ಬಾಗಿಲು ತೆರೆಯುತ್ತಾ “ಸುಳ್ಳು-ಯಾ” ಎಂದ.

ಕತೆ ಐದು: ಬಸ್ಸಿನೊಳಗಿನ ಚಳಿ, ಕುಲುಕಾಟದ ಪರಿಣಾಮದಲ್ಲಿ ಇಳಿದವರೆಲ್ಲ ಮೂತ್ರದೊಡ್ಡಿಯತ್ತ ಧಾವಿಸಿದರು. ಮೀಶೆ ಹೊತ್ತ ಚಿತ್ರದ ಗೇಟಲ್ಲಿ ಬೋರ್ಡು ನೇತುಹಾಕಿದ್ದರು ‘ಗಂಡಸರಿಗೆ ಮೂತ್ರ ವಿಸರ್ಜನೆ ಉಚಿತ.’ ಅದೇ ಜಡೆ ನೇತು ಬಿಟ್ಟ ಚಿತ್ರದ ಗೇಟಿನ ಬೋರ್ಡು ಸರಳವಾಗಿ ಮುಗಿಸಿತ್ತು ‘ಹೆಂಗಸರಿಗೆ ರೂ ಎರಡು.’ ದ್ವಾರ ಪಾಲಕರು, ಒಳಗೆ ಹೋಗಿ ಬಾಗಿಲು ಹಾಕಿಕೊಳ್ಳುವವರಲ್ಲಿ benefit of doubt ತಮ್ಮದಾಗುವಂತೆ ಮಾಡಿಕೊಂಡಿದ್ದರು!

ಕತೆ ಆರು: ಪೂಮಲೆಯಲ್ಲಿ ಕಾಡು ಮಲ್ಲಿಗೆ ಕೆಂಪಾಗಿತ್ತು. ಗರ್ವದಲ್ಲಿ ದುಂಬಿ “ನಾಚಿಕೆನಾ”ಂತ ಕೇಳಿತು. ಮೈಕೊಡವಿದ ಕೆಂಪೆಲೆ ಕಿಡಿಕಿಡಿಸಿತು, “ಅಭಿವೃದ್ಧಿ ಸಾರ್.”

ಕತೆ ಏಳು: ಮೂರು ತಿಂಗಳ ಆಶ್ವಾಸನೆ ಕೊಟ್ಟು ನಿದ್ರಿಸಿದ್ದ ದಾರಿ, ವರ್ಷವಾದರೂ ಎದ್ದಿರಲಿಲ್ಲ. ಸಾರ್ವಜನಿಕರು ಕೆರಳಿದ್ದರು. ಹೊಸದೇ ಕಾರಣಗಳು ಯಾಕೆ ಬರಲಿಲ್ಲಾಂತೀರಾ? ದಾರಿ ಉದ್ದಕ್ಕೂ ಖಾಲಿ ಗ್ಯಾಸ್ ಅಂಡೆಗಳು ಹೊರಬೀಳುತ್ತಲೇ ಇದ್ದವು! (ವಿವರಣೆ – ಸುಳ್ಯ ವಲಯದಲ್ಲಿ ಅಡುಗೆ ಗ್ಯಾಸಿನ ಅಭಾವ ತೀವ್ರವಿದೆ. ಪೂರೈಕೆ ಲಾರಿ ‘ಇಂದು ನಮ್ಮ ದಾರಿ’ ಎಂದು ತಿಳಿದ ಕೂಡಲೇ ವಲಯದವರೆಲ್ಲ ತಮ್ಮ ಖಾಲಿ ಅಂಡೆಗಳನ್ನು ದಾರಿ ಬದಿಗೇ ಇಟ್ಟು ಕಾದಿರ್ತಾರೆ.)

ಕತೆ ಎಂಟು: ಅರಂ-ತೋಡಿಗೆ ಬಿದ್ದವರು ಕಲ್ಲ ಗುಂಡಿಯಿಂದ ಎದ್ದಾಗ ಮಾರ್ಗ ಸರಾಗ. (ಅರಂತೋಡು – ಕಲ್ಲುಗುಂಡಿ ನಡುವೆ ದಾರಿ ವಿಪರೀತ ಹಾಳು. ಮುಂದೆ ಮಾರ್ಗ ಪರಿಷ್ಕರಣೆ ಅದ್ಭುತವಾಗಿ ಮುಗಿದಿದೆ)

ಕತೆ ಒಂಬತ್ತು: ಎಡಕ್ಕೆ ನಿಶಾನಿಮೊಟ್ಟೆ, ಬಲಕ್ಕೆ ಈಶ್ವರ ಕಲ್ಲು, ದಾರಿಗೆ ಮಾತ್ರ ಜೋಡುಪಾಲ!

ಕತೆ ಅಸಂಗತವೆನ್ನಿಸಿ ನನ್ನ ವಾಚಕಿ ಮರು-ಮಿಂಚಿದಳು “ನಿದ್ರೆಯಲ್ಲಿ ಸಂದೇಶ ಕಳಿಸಿದ್ರೆ ಹೀಗೇ. ಹೋಗಲಿ, ಊಟ ಆಯ್ತಾ?” ನನಗೋ ಸಂವಾದ ಪ್ರಕಾರಕ್ಕೆ ಇಳಿಯಬಾರದೆಂಬ ಸೆಡವು. ಆದರೂ ವಿವರಣೆಯೊಡನೆ ಮುಂದಿನ ಕತೆಯನ್ನೂ ಕಳಿಸಿದೆ: ನಿಶಾನಿಮೊಟ್ಟೆ ಅಂದ್ರೆ ಹೋಗುವ ದಾರಿಯಲ್ಲಿ ಎಡಕ್ಕೆ ಕಾಣುವ, ಪಶ್ಚಿಮ ಘಟ್ಟದ ಒಂದು ಪ್ರಮುಖ ಶಿಖರ. ಈಶ್ವರ ಕಲ್ಲು – ಬಲದ ಬೆಟ್ಟದ ಮೇಲೆ ಕಾಣುವ ಅಗಾಧ ಬಂಡೆ. ಜೋಡುಪಾಲ – ಕೇವಲ ಮಾರ್ಗಕ್ಕೆ ಕಲ್ಪಿಸಿರುವ ಜೋಡು ಸೇತುವೆಯಿಂದ ಬಂದ ಅನ್ವರ್ಥ ಸ್ಥಳನಾಮ.

ಕತೆ ಹತ್ತು: ಸುಳ್ಯದ ತೇಗು ಬಿಟ್ಟಾಗ ‘ಮುಂಡಾಸು ಮೂವತ್ತು ಮೊಳಾ’ಂತಲೇ ಮೊಳಗಿತ್ತು.

ಕತೆ ಹನ್ನೊಂದು: ‘ಮಡಿಕೇರೀಲಿ ಮಂಜೂ’ ಅಂದ್ರಂತೆ ಜಿಪಿ ರಾಜರತ್ನಂ. ಶಿಕಾರಿಯಲ್ಲಿ ಸುಸ್ತಾದೋನು ‘Be (it) ಸುರೇಶಾ’ ಎಂದ್ನಂತೆ. (ವಿವರಣೆ: ಅಭಯನ ಹಿಂದಿನ ಸಿನಿಮಾ – ಶಿಕಾರಿ, ನಿರ್ಮಾಪಕ (ಕೆ.) ಮಂಜು. ಮೊನ್ನೆ ತಾನೇ ಮಡಿಕೇರಿ ಚಿತ್ರೀಕರಣ ಮುಗಿಸಿಕೊಂಡ ಚಿತ್ರದ (ಸಕ್ಕರೆ) ನಿರ್ಮಾಪಕ ಬಿ. ಸುರೇಶ.)

ಕತೆ ಹನ್ನೆರಡು: ಮೋದೂರಿನ ಕಾಡಾನೆ ಓಡಿಸಲು ದಸರಾ ಆನೆಗಳು ಬಂದಿದ್ದವಂತೆ. ಆದ್ರೆ ಮೆರವಣಿಗೆಯಲ್ಲಿ ಕುರುಡು, ಕೆಪ್ಪಾದ ಅವು ಗುಟ್ಟಾಗಿ ಕಾಡಿನ ಸೋದರರಿಗೆ ಹೇಳಿದವಂತೆ “ಸುಖವಿಲ್ಲಾ!” (ವಿವರಣೆ: ಮೋದೂರು – ಮಡಿಕೇರಿ ಹೊರವಲಯದಲ್ಲಿರುವ ನನ್ನಜ್ಜನ ತೋಟ, ಮನೆ. ಅಲ್ಲಿನ ಸದ್ಯದ ಯಜಮಾನ, ಚಿಕ್ಕಪ್ಪ – ದಿವಾಕರ, ಕೃಷಿಕರ ಮುಗಿಯದ ಬವಣೆ ಧ್ವನಿಸುವಂತೆ ತಮ್ಮ ಮನೆಯ ಹೆಸರನ್ನು ಸದಾ ವ್ಯಂಗ್ಯವಾಗಿ ಹೆಸರಿಸುವುದು – ಸುಖ-ವಿಲ್ಲಾ! ಅಲ್ಲಿಂದ ಇಲಾಖೆ ಓಡಿಸಿದ ಕಾಡಾನೆಗಳು ಹೀಗೆ ಹೋಗಿ, ಹಾಗೆ ಮರಳಿವೆ.)

ರಶ್ಮಿ ಮಿಂಚಿದಳು “ಅಯ್ಯೋ ಏನಿದು, ಜೋಕ್ ಫಾಲ್ಸ್ ” ನಾನು ಮರು-ಮಿಂಚಿದೆ “ಅಲ್ಲ ಕುಶಾಲು ಸಾಗರ ;-)” ಆದರೆ ಮಂಗಳೂರು ಬಿಟ್ಟಲ್ಲಿಂದ ಕುಶಾಲನಗರದವರೆಗೂ ಅವಳ ಏಕಾಗ್ರತೆ ಹಾಳು ಮಾಡುತ್ತಲೇ ಇದ್ದದ್ದಕ್ಕೆ ದೇವಕಿಯಿಂದ ಬರುತ್ತಿದ್ದ ಗೊಣಗಿಗಿಂತ ಬಲವಾಗಿ ಚರವಾಣಿಯ ಅಸಹನೆ ಹೆಚ್ಚಾದ್ದಕ್ಕೆ ಕೊನೇ ಕತೆ ಕುಟ್ಟಿದೆ.

ಕೊನೆ ಕತೆ: ದಾರಿ ಉದ್ದಕ್ಕೂ ಕತೆಗಳು ಹಾಸಿವೆ. ಬ್ಯಾಟರಿ ಮಾತ್ರ ಮೈಸೂರೆಗೊಂಡಿದೆ.

ಎರಡನೇ ಕಥಾ ಸರಣಿ
ನಿಜವಾದ ದಾನ
(ಖ್ಯಾತ ಬಾಲ ಸಾಹಿತಿ ವಾಸುದೇವ ವರ್ಣರ ಸಂಗ್ರಹದ ಒಂದು ಕತೆ ಜುಲೈ ೧೯೯೨ರಂದು ಮಂಗಳೂರು ಮಿತ್ರದಲ್ಲಿ ಹೀಗೆ ಪ್ರಕಟವಾಯ್ತು.)

ಒಮ್ಮೆ ಒಬ್ಬ ಮಹಾತ್ಮನಲ್ಲಿಗೆ ಒಬ್ಬ ಭಿಕ್ಷುಕ ಬಂದು ಕೈಯೊಡ್ಡಿ ಭಿಕ್ಷೆ ಬೇಡಿದ. ಅವನು ಯುವಕನೂ ದೃಢ ಕಾಯನೂ ಆಗಿದ್ದನು. ಮಹಾತ್ಮರು ಅವನನ್ನು ನೋಡಿ “ಸಹೋದರ, ನಿನ್ನ ಬಳಿ ಏನಿದೆ, ಏನಿಲ್ಲ ಎಂಬುದನ್ನು ಮರೆಮಾಚದೆ ಹೇಳು” ಎಂದರು. ಭಿಕ್ಷುಕನು ಅವರೊಡನೆ “ಸ್ವಾಮೀ ನನ್ನೊಡನೆ ಎರಡು ಭಿಕ್ಷಾಪಾತ್ರಗಳು ಮಾತ್ರ ಇವೆ. ಬೇರೇನೂ ಇಲ್ಲ” ಎಂದನು.

ಮಹಾತ್ಮರು ಆವನೊಡನೆ “ನಿನಗೆ ಸಹಾಯ ಮಾಡುವೆನೆಂದು,” ಅವನನ್ನು ಪೇಟೆಗೆ ಕರೆದುಕೊಂಡು ಹೋಗಿ, ಎರಡೂ ಪಾತ್ರೆಗಳನು ಮಾರಿ, ಬಂದ ಹಣದಿಂದ ಒಂದು ಕೊಡಲಿ ಮತ್ತು ಒಂದಷ್ಟು ಹಿಟ್ಟನ್ನು ಖರೀದಿಸಿದರು. ಅವನಿಗೆ ಅವನ್ನು ಕೊಟ್ಟು “ಈ ಹಿಟ್ಟಿನಿಂದ ಇವತ್ತಿನ ರೊಟ್ಟಿಯನ್ನು ತಯಾರಿಸು. ನಾಳೆಯಿಂದ ಈ ಕೊಡಲಿಯ ಸಹಾಯದಿಂದ ಕಾಡಿಗೆ ಹೋಗಿ ಕಟ್ಟಿಗೆ ಕಡಿದು, ಪೇಟೆಯಲ್ಲಿ ಮಾರಿ, ಪರಿಶ್ರಮದ ಹಣದಿಂದ ಜೀವನ ಸಾಗಿಸು” ಎಂದು ಹೇಳಿ ಹೊರಟು ಹೋದರು. ಮಹಾತ್ಮರ ಜ್ಞಾನದಾನವು ಆ ಭಿಕ್ಷುಕನಿಗೊಂದು ವರದಾನವಾಯಿತು. ಅಂದಿನಿಂದ ಅವನು ಭಿಕ್ಷೆ ಬೇಡುವುದನ್ನು ನಿಲ್ಲಿಸಿ, ದುಡಿತದಿಂದ ಜೀವನ ಸಾಗಿಸಿದ.

ಕತೆ ಮುಗಿದುದು.

(ನಾನದನ್ನು ಮುಂದುವರಿಸಿದ್ದು ಮಂಗಳೂರು ಮಿತ್ರದಲ್ಲಿ ೩-೭-೯೨ ರಂದು.)
ಮುಂದುವರಿದ ನಿಜವಾದ ದಾನ (೨)

ಮಹಾತ್ಮರ ಮಾರ್ಗದರ್ಶನದಂತೆ ತರುಣ ಹಿಟ್ಟಿನ ರೊಟ್ಟಿ ತಿಂದು, ಮರುದಿನ ಕೊಡಲಿ ಹಿಡಿದು ಕಾಡಿಗೆ ನಡೆದ. ಅಲ್ಲಿ ನಿರಾಸೆ ಕಾದಿತ್ತು. ಮರ ಒಂದೂ ಉಳಿದಿರಲಿಲ್ಲ. ಬೇಸರದಲ್ಲಿ ಊರಿಗೆ ಧಾವಿಸುತ್ತಿದವನು ಅರಿಯದೇ ಮತ್ತೆ ಅದೇ ಸ್ವಾಮಿಗಳಿಗೆ ಢಿಕ್ಕಿಯನ್ನೇ ಹೊಡೆದ. ಮಹಾತ್ಮರು ಆತನನ್ನು ನೋಡಿ “ಸಹೋದರ ನಾನು ಹೇಳಿದ್ದು ಏನು? ನೀನು ಮಾಡುತ್ತಿರುವುದು ಏನು? ಎಲ್ಲ ಮರೆಮಾಚದೆ ಹೇಳು” ಎಂದರು. ತರುಣ ಅವರೊಡನೆ “ಸ್ವಾಮೀ ಕಾಡಿನಲ್ಲಿ ಮರ ಒಂದೂ ಇಲ್ಲ” ಎಂದನು. ಮಹಾತ್ಮರು ಮತ್ತೆ ಅವನೊಡನೆ “ಮತ್ತೆ ನಿನಗೆ ಸಹಾಯ ಮಾಡುವೆ” ಎಂದು ಪೇಟೆಗೆ ಕರೆದುಕೊಂಡು ಹೋದರು. ಆ ದೊಡ್ಡ ಕೊಡಲಿಯನ್ನು ಮಾರಿ, ಬಂದ ಹಣದಿಂದ ಸಣ್ಣ ಗುದ್ದಲಿ ಮತ್ತು ಒಂದಿಷ್ಟು ಹಿಟ್ಟನ್ನು ಖರೀದಿಸಿಕೊಟ್ಟರು. “ ಈ ಹಿಟ್ಟಿನಿಂದ ಇವತ್ತಿನ ರೊಟ್ಟಿ ತಯಾರಿಸು. ನಾಳೆಯಿಂದ ಬಯಲಿಗೆ ಹೋಗಿ, ಈ ಗುದ್ದಲಿ ಸಹಾಯದಿಂದ ಮರವಾಗುವ ಗಿಡಗಳನ್ನು ನೆಟ್ಟು ಕೂಲಿ ಗಳಿಸು, ಸಮಾಜಕ್ಕೆ ಉಪಕಾರಿಯಾಗಿ ಜೀವನ ಸಾಗಿಸು” ಎಂದು ಹೇಳಿ ಹೊರಟು ಹೋದರು. ಮಹಾತ್ಮರ ಪರಿಷ್ಕೃತ ಜಾನದಾನ ತರುಣನಿಗೆ ನಿಜಕ್ಕೂ ವರದಾನವಾಯಿತು. ಅಂದಿನಿಂದ ಅವನು ನಿಜಕ್ಕೂ ಸುಖಿಯಾಗಿದ್ದನು.

ಮುಗಿದುದು

(ಮತ್ತೂ ಒಂದು ದಿನ ಬಿಟ್ಟು)
ಮತ್ತೂ ಮುಂದುವರಿದ ನಿಜವಾದ ದಾನ (೩)

ಮಹಾತ್ಮರು ಹೇಳಿದ ಹೊಸ ಹಾದಿಯಲ್ಲಿ ತರುಣ ತೊಡಗಿದ. ಹಿಟ್ಟಿನ ರೊಟ್ಟಿ ತಿಂದ. ಮರುದಿನ ಗುದ್ದಲಿ ಹಿಡಿದುಕೊಂಡು ಬಯಲಿಗೆ ಹೋದ. ಆದರೆ ಅಲ್ಲಿ ಇಮ್ಮಡಿ ನಿರಾಶೆ ಕಾದಿತ್ತು. ಬಯಲಲ್ಲಿ ತುಂಬಿದ್ದ ವಿದ್ಯಾರ್ಥಿಗಳು, ಸ್ವಯಂ ಸೇವಾಸಂಸ್ಥೆಗಳು, ಪುಡಾರಿಗಳು ಗಿಡ ನೆಡುವ ಮೇಲಾಟ ನಡೆಸಿದ್ದರು. ಅದರ ಗೊಂದಲದಲ್ಲಿ ತರುಣ ಗುದ್ದಲಿ ಕಳೆದುಕೊಂಡ, ಹೊರ ತಳ್ಳಿಸಿಕೊಂಡ. ಅವನು ಮತ್ತಷ್ಟೂ ಬೇಸರದಲ್ಲಿ ಹಿಂದೆ ನಡೆದ. ದೂರದಿಂದಲೇ ಮಹಾತ್ಮರನ್ನು ಮತ್ತೆ ಕಂಡು ಮುಖ ತಪ್ಪಿಸಲು ಪ್ರಯತ್ನಿಸಿದ. ಮಹಾತ್ಮರೇ ಅವನನ್ನು ಬೆನ್ನಟ್ಟಿ ಹಿಡಿದು “ಸಹೋದರ ಯಾಕೆ ಹೀಗೆ? ಆದದ್ದು ಏನು? ಎಲ್ಲ ಮರೆಮಾಚದೆ ಹೇಳು” ಎಂದರು. ತರುಣ ಅವರೊಡನೆ “ಸ್ವಾಮೀ ಬಯಲಿನಲ್ಲಿ ದುಡಿಯಲು ಚೂರೂ ಜಾಗ ಇಲ್ಲ, ಇದ್ದ ಗುದ್ದಲಿಯೂ ಕೈ ತಪ್ಪಿದೆ” ಎಂದನು.

ಮಹಾತ್ಮರು ಅವನನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ವೈಯಕ್ತಿಕ ಜಾಮೀನಿನಲ್ಲಿ ಸಾಲ ಕೊಡಿಸಿದರು. ಬಂದ ಹಣದಲ್ಲಿ ಒಂದಂಶದಲ್ಲಿ ಹಿಟ್ಟು ಖರೀದಿಸಿ ಕೊಟ್ಟು “ಇವತ್ತಿನ ರೊಟ್ಟಿ ತಯಾರಿಸಿಕೋ. ಉಳಿದ ಹಣವನ್ನು ವ್ಯಾಪಾರದಲ್ಲಿ ತೊಡಗಿಸಿ ಆತ್ಮಸಮ್ಮಾನದಲ್ಲಿ ಜೀವನ ಸಾಗಿಸು” ಎಂದು ಹೇಳಿ ಹೊರಟುಹೋದರು. ಆಧುನಿಕ ಜ್ಞಾನದಾನ ತರುಣನಿಗೆ ಆತ್ಯಂತಿಕ ವರದಾನವಾಯಿತು. ಅಂದಿನಿಂದ ಅವನು ಕೈಯಲ್ಲಿದ್ದ ಹಣವನ್ನು ಖರ್ಚು ಮಾಡದೆ, ಹೊಸ ಜಾಮೀನುದಾರರನ್ನು ಒಲಿಸುತ್ತ, ಹೊಸ ಸಾಲ ಮಾಡುತ್ತ ಪರಮ ಸುಖದಿಂದಿದ್ದ.

ಮುಗಿದುದು

(ಪ್ರಕೃತ ಸಾಮಾಜಿಕ ಸ್ಥಿತಿಯನ್ನು ಗಮನಿಸಿ ಇಂದು ನಾನಿನ್ನೊಂದು ಹೆಜ್ಜೆ ಮುಂದುವರಿದಿದ್ದೇನೆ.)
ಮತ್ಮತ್ತೂ ಮುಂದುವರಿದ ನಿಜವಾದ ದಾನ (೪)

ಮಹಾತ್ಮರು ತೋರಿಕೊಟ್ಟ ಹೊಸ ಹಾದಿಯಲ್ಲಿ ತರುಣ ಕೆಲವು ದಿನ ಚೆನ್ನಾಗಿಯೇ ನಡೆದ. ಆದರೆ ಹೊಸ ಜಾಮೀನುದಾರರು ಸಿಗದಾದಾಗ ತಳಮಳಗೊಂಡ. ಹಳೇ ಸಾಲಿಗರು ವಿಳಾಸ ಹಿಡಿದು ಕದ ತಟ್ಟುವಾಗ, ಹಿಂಬಾಗಿಲಿನಿಂದ ಹೊರಬಿದ್ದ.

ಮಹಾತ್ಮರು ತರಾತುರಿಯಲ್ಲಿದ್ದರೂ ತರುಣನನ್ನು ನೋಡದೇ ಬಿಡಲಿಲ್ಲ. ಗಿಂಡಿಮಾಣಿಯನ್ನು ವಿಚಾರಣೆಗೆ ಕಳಿಸಿ ತಾವು ಉದ್ದೇಶಿತ ಲಕ್ಷ್ಯದತ್ತ ಧಾವಿಸಿದರು. “ಸಹೋದರ ಯಾಕೆ ಹೀಗೆ? ಆದದ್ದು ಏನು? ಎಲ್ಲ ಮರೆಮಾಚದೆ ಹೇಳು” ಗಿಂಡಿಮಾಣಿ ಕೇಳಿದ. “ಹೊಸಾ ಜಾಮೀನುದಾರರು ಸಿಗುತ್ತಿಲ್ಲ, ಹಳೇ ಮಹಾತ್ಮರನ್ನಾದರೂ ಹಿಡಿಯೋಣವೆಂದರೆ….” ನಿರಾಶೆಯ ನೋಟದಲ್ಲಿ ನಿಟ್ಟಿಸಿದನು. ಗಿಂಡಿಮಾಣಿ ಆತನ ಕೈಹಿಡಿದು ಮಹಾತ್ಮರ ದಾರಿ ತುಳಿಸಿದನು. ರಾಜ್ಯ ಕೇಂದ್ರ ಬಂಧೀಖಾನೆಯೊಳಗೆ ಸಚಿವ ಸಂಪುಟದ ಸಭೆ ನಡೆಯುವುದಿತ್ತು. ಹೊರಗೆ ಬಯಲಿನಲ್ಲಿ ಅಭಿಮಾನಿಗಳ ಬಳಗ ಸುಂದರ ಚಪ್ಪರ ಹಾಕಿ, ಸಕಲ ದೋಷಮುಕ್ತಿ ಮಹಾಯಾಗ ನಡೆಸಿತ್ತು. ಮಹಾತ್ಮರು ಪಾದುಕೆಗಳನ್ನು ಸಂಪುಟದ ಶುಭಕ್ಕಾಗಿ ಒಳಗೆ ರವಾನಿಸಿ, ಯಾಗದ ಪೌರೋಹಿತ್ಯಕ್ಕೆ ನಿಂತರು. ತರುಣನಿಗೆ ಪ್ರಸಾದರೂಪೀ ಮಹಾಭೋಜನವನ್ನು ಕೊಟ್ಟು, ಬರಲಿರುವ ಯಾಗಸರಣಿಗಳ ಪಟ್ಟಿಯನ್ನೂ ಕೊಟ್ಟು “ನಿತ್ಯ ನಿರಂಕುಶವಾಗಿ ಇರಲು” ಹರಸಿದರು. ಅಂದಿನಿಂದ ಅವನು ಚಪ್ಪರದಿಂದ ಚಪ್ಪರಕ್ಕೆ ಹೋಗುತ್ತಾ ಸುಖವಾಗಿದ್ದನು.

ಮುಗಿದಿರಬಹುದೇ?