ಅಭಯನಿಗೀಗ ಕತೆ ಹೇಳುವ ವೃತ್ತಿ. ನಟರಾಜನಿಂದ ತೊಡಗಿ, ಝಣ ಝಣ ಲಕ್ಷ್ಮೀಪುತ್ರನಿಗೆ, ಕಟಿಪಿಟಿ ನಟೀಮಣಿಗೆ, ಕಾವ್ಯಶ್ರೀಗೆ, ವಿಶ್ವಕರ್ಮನಿಗೆ, ಕಂಠಶ್ರೀಗೆ ಮುಂತಾದವರಿಗೆ ಹೊಸಹೊಸದಾಗಿ ಬರೆದು ಓದುತ್ತಿರುತ್ತಾನೆ. ಕೆಲವೊಮ್ಮೆ ಇವರನ್ನೆಲ್ಲ ಸೇರಿಸಿ ಸಮೂಹ ಘೋಷದಲ್ಲಿ ಸಾರ್ವಜನಿಕಕ್ಕೂ ಇವನು ಹೇಳುವುದು ಕಥೆಯನ್ನೇ. (ಹಾಗೆ ಬಂದವುಗಳೆ ಗುಬ್ಬಚ್ಚಿಗಳು, ಶಿಕಾರಿ ಮತ್ತು ಇನ್ನೇನು ಬರಲಿರುವ ಸಕ್ಕರೆ.) ಅವನ ಮೊದಲ ಪಟ್ಟಿಯಲ್ಲೇನೂ ಬಾರದ ನಮಗೂ ಅವನು ಕತೆಗಳನ್ನು ಕೇಳಿಸುವುದು ಇದೆ. ಆವನ ಬಾಲ್ಯದಲ್ಲಿ ನಾವು ಅವನಿಗೆ ಹೇಳಿರಬಹುದಾದ ಕತೆಗಳ ಸಾಲ ತೀರುವಳಿಯೋ, ಸೇಡು ತೀರುವಳಿಯೋ ನಾವು ಲೆಕ್ಕವಿಟ್ಟವರಲ್ಲ. ಅವನಿಗೋ ಕತೆ ಮೊಳೆಯುವ ಕಾಲದಲ್ಲೇ ಬೆಳೆಯ ಸಿರಿ ಅಂದಾಜಿಸುವ ತವಕ. ಹಾಗೇ ಮೊನ್ನೆ ದಿಢೀರ್ ಅವನ ದೂರವಾಣಿ ಕರೆ “ಅಪ್ಪಾ, ಮಿಂಚಂಚೆಯಲ್ಲಿ ಒಂದು ಕತೆ ಕಳಿಸಿದ್ದೇನೆ. ಕೂಡಲೇ ನೀವಿಬ್ಬರೂ ಓದಿ ವಿಮರ್ಶೆ ತಿಳಿಸ್ತೀರಾ?” ನಾನು ಕತೆ, ಕಾದಂಬರಿಗಳಿಗೆ ದೂರ. ಅದಕ್ಕೂ ಹೆಚ್ಚಿಗೆ ಕತೆಯನ್ನು ಒಂದು ದೃಶ್ಯ ನಿರೂಪಣೆಯ ವಸ್ತುವಾಗಿ ಗ್ರಹಿಸುವಲ್ಲಿ ದೇವಕಿಗಿಂತ ತುಂಬಾ ಹಿಂದುಳಿದವ. ಆದರೆ ದೇವಕಿ ಹಾಗಲ್ಲ. ಅವಳಿಗೆ ಕಾದಂಬರಿ ತೆರೆದರೆ ಊಟ ನಿದ್ರೆಗಳ ಪರಿವೆಯೂ ಇರದ ಕಾಲವಿತ್ತು. ಕಾಲಧರ್ಮಾನುಸಾರ ಈಗ ಆಯ್ದ ಟೀವಿ ಸರಣಿ ತೆರೆದರೂ ಹಾಗೇ. ನಾನು ಆ ಕತೆಯ ಪ್ರೇರಣೆಗಳ ಬಗ್ಗೆ ತುಸು ಯೋಚನೆ ಹರಿಸಿದರೆ, ದೇವಕಿ ಪಾತ್ರಧಾರಿಗಳ ಆಯ್ಕೆಯ ಮಟ್ಟದಲ್ಲೂ ಸಲಹೆಗಳನ್ನಿಟ್ಟಳು.
ಅಭಯ ಆ ಕತೆಯನ್ನು ಅವನ ಇನ್ನೂ ಕೆಲವು ಆತ್ಮೀಯರೊಳಗೆ ಹಂಚಿಕೊಂಡ. ಅದರಲ್ಲಿ ಕತೆಗೆ ಪ್ರಧಾನ ಪ್ರೇರಣೆಯೂ ಆದ ಶತಾವಧಾನಿ ಗಣೇಶರಿಂದ ಭಾರೀ ಪ್ರೋತ್ಸಾಹಕರ ನುಡಿಗಳು ಬಂದವು. ಸಾಲದ್ದಕ್ಕೆ ವಿಪುಲ ಪೂರಕ ವಿವರಗಳನ್ನೂ ಉಚಿತ ಚರ್ಚೆಯನ್ನೂ ನಡೆಸಿಕೊಡುವ ಪ್ರಸ್ತಾವವೂ ಬಂತು. ಅಂದರೆ ಎರಡೇ ದಿನ ಕಳೆಯುವುದರೊಳಗೆ ಮತ್ತೆ ಅಭಯನ ಕರೆ “ಗಣೇಶರು ತುಂಬಾ ಒಳ್ಳೆಯ ಮಾರ್ಗದರ್ಶನವನ್ನು ಕೊಟ್ಟಿದ್ದಾರೆ. ಈಗ ಮಂಟಪ ಉಪಾಧ್ಯರೂ ಸೇರಿಕೊಂಡಿದ್ದಾರೆ. ಗಣೇಶರ ಯೋಜನೆ ಮತ್ತು ನಿರ್ದೇಶನಗಳ ಬಲದಲ್ಲಿ ಮಂಟಪರ ಪಾತ್ರಧಾರಿತ್ವದಲ್ಲಿ ನಡೆದ ‘ಭಾಮಿನಿ’ಯನ್ನು (ಯಕ್ಷಗಾನ ಏಕವ್ಯಕ್ತಿ ಪ್ರಯೋಗ) ನನ್ನ ಕತೆಯ ಓದಿನ ಮುನ್ನೆಲೆಯಲ್ಲಿ, ಸಮಾನಾಸಕ್ತರೊಡನೆ ನೋಡಿ, ಸಿನಿಮಾ ಸಾಧ್ಯತೆಯನ್ನು ಶೋಧಿಸುವಂತೆ ಚರ್ಚೆ ನಡೆಸಲೂ ಮುಂದಾಗಿದ್ದಾರೆ. ಮಂಟಪರು ಹಿಮ್ಮೇಳ, ದೀಪ, ಧ್ವನಿವರ್ಧಕಗಳೊಡನೆ ಉಚಿತ ಪ್ರದರ್ಶನವನ್ನೇ ಕೊಡುವವರಿದ್ದಾರೆ. ‘ಆರೋಹೀ’ ಬಳಗ ಸಭಾಂಗಣದ ವ್ಯವಸ್ಥೆ ನೋಡಿಕೊಳ್ಳುತ್ತಿದೆ. ಸುಮಾರು ೨೫-೩೦ ಜನರ ಪ್ರೇಕ್ಷಕರ ತಂಡದಲ್ಲಿ ನೀವಿಬ್ಬರೂ…” ಅವನ ಮಾತು ಮುಗಿಯುವುದರೊಳಗೆ ನಾವು ಬೆಂಗಳೂರಿಗೆ ಹೊರಟಾಗಿತ್ತು!
ನನಗೊಂದಿಬ್ಬರು ಗೆಳೆಯರಿದ್ದಾರೆ. ವೃತ್ತಿ, ಆರ್ಥಿಕತೆ ಚೆನ್ನಾಗಿಯೇ ಇದ್ದಾಗಲೂ ಅವರಿಗೆ ವರ್ಷದಲ್ಲಿ ಕೆಲವು ಕಾಲ ತಮ್ಮ ಸಾಮಾಜಿಕ ಸ್ಥಾನಮಾನದ ಅಗತ್ಯಗಳನ್ನು ತಿರಸ್ಕರಿಸಿ, ಅಜ್ಞಾತರಾಗಿ, ಕನಿಷ್ಠ ಸಾರ್ವಜನಿಕ ಸವಲತ್ತುಗಳನ್ನೇ ನಂಬಿ, ಅಂದರೆ ಸಮಯದ ಕಟ್ಟುಪಾಡು ಇಲ್ಲದೆ, ಕನಿಷ್ಠ ವೆಚ್ಚ ಮತ್ತು ಹೊರೆಗಳೊಡನೆ ಭಾರತದ ಮೂಲೆ ಮೂಲೆಗಳನ್ನು ಗಂಭೀರವಾಗಿ ಸುತ್ತಿ ಬರುವ ಹವ್ಯಾಸ; ನಿಜ ಅರ್ಥದ ಜೋಗಿ, ಜಂಗಮರಂತೆ! (ಕ್ಷಮಿಸಿ, ನಾನು ಅವರ ಹೆಸರನ್ನು ಸಾರ್ವಜನಿಕಗೊಳಿಸಿ, ಅವರ ಖಾಸಗಿತನವನ್ನು ಹಾಳುಮಾಡಲು ಇಚ್ಛಿಸುವುದಿಲ್ಲ.) ನಾನು ಅವರಷ್ಟು ಧೈರ್ಯವಂತನಲ್ಲ. ಈ ಸಲವಾದರೂ ಎಂದಿನಂತೆ ವಾಲ್ವೊ ಅಥವ ರಾಜಹಂಸದಲ್ಲಿ ಸೀಟು ಕಾಯ್ದಿರಿಸಿ, ನಿಗದಿತ ವೇಳೆಗೆ ನಮ್ಮೆಲ್ಲಾ ಕಲಾಪಗಳನ್ನು ನೇರ್ಪುಗೊಳಿಸಿಕೊಳ್ಳುವ ಪ್ರಯತ್ನವನ್ನಷ್ಟೇ ನಿರಾಕರಿಸಿ, ಮಂಗಳವಾರ ಬೆಳಿಗ್ಗೆ ಆರಾಮವಾಗಿಯೇ ಹೊರಟೆವು. ಹಿಂದಿನ ದಿನವೇ ಶಿರಾಡಿ ಮಾರ್ಗಕ್ರಮಣದ ಚಂದಕ್ಕಾಗಿ ಹಗಲು ರೈಲೇನೋ ನೆನಪಾಗಿತ್ತು. ಆದರೆ…
ಮಂಗಳೂರು ರೈಲ್ವೇ ವಿಭಾಗ ಕ್ರಮದಲ್ಲಿ ಮಲಬಾರ್ ವಲಯದ ಒಂದು ಕೊನೆ. ಅದನ್ನು ವಿಷದೀಕರಿಸುವಂತೆ ಇಲ್ಲಿನ ನಿಲ್ದಾಣವೂ ಸುತ್ತ ಭೂಬಂಧನಕ್ಕೊಳಗಾಗಿರುವುದನ್ನೇ ಕಾಣುತ್ತೇವೆ. ಕನ್ನಡ ಇಲ್ಲಿ ಔಪಚಾರಿಕ ಅಗತ್ಯಕ್ಕೆ ಮಾತ್ರ ಬೋರ್ಡುಗಳಲ್ಲಿ ಕಂಗೊಳಿಸುತ್ತದೆ. ಉಳಿದೆಲ್ಲಾ ಕಲಾಪಗಳು ಮಲಯಾಳಿ, ಒತ್ತಾಯಿಸಿದರೆ ‘ಇಂಗ್ಳೀಷ್.’ ಬಲು ಹಾರೈಕೆಯ ಕರುನಾಡ ರಾಜಧಾನಿಯ ಸಂಪರ್ಕಕ್ಕೆ ಕಂಬಿ ಸಾಲೇನೋ ಹಾಸನ ಬಿಟ್ಟಿಳಿಯಿತು. ಆದರೆ ಅದರ ಪ್ರಗತಿಯಲ್ಲೂ ಬ್ರಾಡ್‌ಗೇಜ್ ವಿಸ್ತರಣದಲ್ಲೂ ನಿಧಾನ ದ್ರೋಹಕ್ಕೆ ಸಿಕ್ಕಿ, ಸಾರ್ವಜನಿಕಕ್ಕೆ ಮುಡಿಯ ಮಲ್ಲಿಗೆ ಮಾತ್ರ ಆಯ್ತು, ಫಲಿಸುವ ಬಾಳೆ, ಮಾವಾಗಲಿಲ್ಲ. (ಇಲ್ಲಿ ಬರಿಯ ಮಲಯಾಳಿಗಳನ್ನು ದೂಷಿಸಬಾರದು. ಕರಾವಳಿ ವಲಯದ ಲಾಭಕೋರ ಬಸ್ ದಂಧೆ, ನರಸತ್ತ ಜನಪ್ರತಿನಿಧಿಗಳ ಪಾತ್ರವನ್ನು ಮರೆಯಬಾರದು) ಹೊಸದಿಕ್ಕು ತೋರುವ ಕೆಲಸ ನಡೆದದ್ದು ಸಾಹಸಿ ಜಾರ್ಜ್ ಫರ್ನಾಂಡೀಸರ ಕೊಂಕಣ ರೈಲಿನಿಂದ. ಮಂಗಳೂರಿಗೆ ಮೂರು ದಿಕ್ಕಿನ ಸಂಪರ್ಕವೇನೋ ಬಂತು. ನಿಲ್ದಾಣದ ಉನ್ನತೀಕರಣ, ರಾಜ್ಯದೊಳಗಿನ ಸಂಪರ್ಕಕ್ಕೆ ಶಕ್ತ ರೈಲ್ವೇ ಜಾಲ ಎಂದೆಲ್ಲಾ ಕೇಳಿದ್ದೇ ಬಂತು. ಆದರೆ ಹೊಸ ಮಾರ್ಗ ಮಂಗಳೂರಿಗೆ ಅಕ್ಷರಶಃ ‘ಕೊಂಕಣ ಸುತ್ತಿ…’ದ ಅನುಭವ. ಎಲ್ಲೂ ಅಲ್ಲದ ಪಡೀಲಿನಾಚೆ ಕಂಬಿ ಎಳೆದು, ‘ಕಂಕನಾಡಿ-ಮಂಗಳೂರು’ ಎಂದು ತ್ರಿಶಂಕು ಸ್ವರ್ಗ ಸೃಷ್ಟಿ ಆಯ್ತು. ಇಕ್ಕಟ್ಟಿನ ಗಲ್ಲಿ ದಾರಿ, ಬಸ್ಸು ಸಂಪರ್ಕ ನಾಸ್ತಿ, ಸಾಮಾನ್ಯ ಅಗತ್ಯಗಳಿಗೆ ಒಂದು ಕೂಲಿ, ರಿಕ್ಷ, ಕಾರೂ ಸಿಗದ ಹೊಸದೇ ನಿಲ್ದಾಣ. ಹೆಸರಿನ ಗೌರವವಷ್ಟೇ ದಕ್ಕಿದ ‘ಕಂಕನಾಡಿ-ಮಂಗಳೂರು’ ಒಂದು ಬೀದಿಬದಿಯಂಥ ಸ್ಥಳ. ಇಲ್ಲಿ ಮುಂಬೈ-ತಿರುವನಂತಪುರದ ಮಹಾ ಓಟದ ಗಾಡಿಗಳು ಐದು ಮಿನಿಟು ಮಾತ್ರ ವಿರಮಿಸಿ ಓಡುತ್ತವಂತೆ.
ಕಂಕನಾಡಿಗೇ ದೂರವಾಣಿಸಿ ಬೆಂಗಳೂರಿಗೆ ಹಗಲು ರೈಲು ವಿಚಾರಿಸಿದ್ದೆ. ಬೆಂಗಳೂರಿಗೆ ವಾರದಲ್ಲಿ ಮೂರು ಹಗಲು (ಮಂಗಳ, ಗುರು ಮತ್ತು ಶನಿವಾರ) ರೈಲು ಇರುವುದೇನೋ ನಿಜ, ಆದರದು ನಮ್ಮದಲ್ಲ ಮತ್ತು ನಮ್ಮ ಸಮಯಾನುಕೂಲಕ್ಕೂ ಇಲ್ಲ. ಹನ್ನೊಂದು ಗಂಟೆಯ ಸುಮಾರಿಗೆ ಕೇರಳದಿಂದ ಬರಬಹುದು. ಅತ್ತ ಅಪರಾತ್ರಿಯಲ್ಲಿ ಬೆಂಗಳೂರು ನಗರದ ಹೊರವಲಯದ ಯಶವಂತಪುರವೇ ಕೊನೆಯ ನಿಲ್ದಾಣವಂತೆ. (ರಾತ್ರಿ ರೈಲು ಹೊರಡುವುದು ಮುಖ್ಯ ನಿಲ್ದಾಣದಿಂದಲೇ ಆದರೂ ಹೊರಡುವ ಸಮಯ ಬೇಗ. ಅತ್ತ ತಲಪುವ ಸಮಯ ಅತಿ ವಿಲಂಬಿತ್; ಇವನ್ನು ನೆಚ್ಚಿ ಮುಹೂರ್ತ ನಿಗದಿಸಿದರೆ ಸೋಲು ಖಂಡಿತ.) ನಾವು ರೈಲು ಮರೆತು ಬಸ್ ನಿಲ್ದಾಣವನ್ನೇ ಗಟ್ಟಿ ಮಾಡಿಕೊಂಡಿದ್ದೆವು.
ಊರೂರಿನ ನಡುವೆ ಭೂಪಟವೇನೋ ಹಾಸನ ಮಾರ್ಗವೇ ಸಮೀಪ ಎನ್ನುತ್ತದೆ. ಆದರೆ ಆ ಬಸ್ಸು ನಮಗೆ (ಅಭಯನ ಮನೆ ಬೆಂಗಳೂರು ಹೊರವಲಯದ ಮೈಸೂರು ದಾರಿಯಲ್ಲೇ ಇದೆ) ವಿರುದ್ಧ ದಿಕ್ಕಿನಿಂದ ನಗರ ಪ್ರವೇಶಿಸುವಾಗ ಕೇಂದ್ರ ಬಸ್ ನಿಲ್ದಾಣ ತಲಪುವಲ್ಲೇ ಸಾಕಷ್ಟು ಸಮಯ ಹಾಳು. ಮತ್ತೂ ಕಷ್ಟ ಅಲ್ಲಿಂದ ಬಿಡಿಸಿಕೊಂಡು, ಹೊಸದೇ ಖರ್ಚಿನಲ್ಲಿ ಮನೆ ಸೇರುವ ಶ್ರಮ! ಸಹಜವಾಗಿ ನಾವು ಮೈಸೂರು ಮಾರ್ಗದ ಬೆಂಗಳೂರು ಬಸ್ಸು ಇಷ್ಟಪಟ್ಟರೂ ಆ ಕಾಲಕ್ಕೆ ಲಭ್ಯ ಮೈಸೂರು ಎಕ್ಸ್‌ಪ್ರೆಸ್‌ಗೇ ತೃಪ್ತಿಪಟ್ಟುಕೊಂಡೆವು. ಜೋಡುಮಾರ್ಗ, ಬಂಟ್ವಾಳದ ಬಸ್ ನಿಲ್ದಾಣಕ್ಕೆ ಮೇಲ್ಸೇತುವೆಯ ಹೆರಿಗೆ ಸಂಕಟ ನಿರಂತರ. ಪುತ್ತೂರಿನಲ್ಲಿ ಬಸ್ ನಿಲ್ದಾಣವೇ ಇಲ್ಲ. ಮುಂದೆ ಸಂಪಾಜೆಯವರೆಗೆ ನಾನೇನೂ ಹೊಸದು ಹೇಳುವುದುಳಿದಿಲ್ಲ (ಹಳೆಕಥನಕ್ಕೆ ಇಲ್ಲಿ ಚಿಟಿಕೆ ಹೊಡೆಯಿರಿ). ಊಟಕ್ಕೆ ಮೈಸೂರು ಹೋಟೆಲ್. ಮತ್ತೆ ತಡೆರಹಿತ ಬಸ್ ಹಿಡಿದು ಸಂಜೆಗೆ ಬೆಂಗಳೂರು. ಸರಳವಾಗಿಯೇ ಯೋಜಿಸಿ ಪಯಣಿಸಿದ್ದರೆ ಎಂಟೊಂಬತ್ತು ಗಂಟೆಯಲ್ಲಿ ಬೆಂಗಳೂರು ತಲಪಬಹುದಾದವರು ಹನ್ನೆರಡೇ ಗಂಟೆ ಪಯಣಿಸಿದ್ದಕ್ಕೆ ‘ನಮ್ಮ ಇಚ್ಛಾನುಸಾರ’ ಎಂಬ ಶಬ್ದದಲ್ಲಿ ಸಾಂತ್ವನ ಪಡೆದುಕೊಂಡೆವು!
ಅಭಯನ ಯೋಜಿತ ಕಾರ್ಯಕ್ರಮವಿದ್ದದ್ದು ಸಂಜೆ ಏಳಕ್ಕೆ. ಹಗಲನ್ನು ಸದುಪಯೋಗಪಡಿಸಲು ನಾವಿಬ್ಬರು ಅವನ ಬೈಕ್ ಹಿಡಿದು ನಂದಿಬೆಟ್ಟಕ್ಕೆ ಹೊರಟೆವು. ಬೆಂಗಳೂರು ಇಂದು ಸುಮಾರು ಎರಡು ದಶಕಗಳಿಗೂ ಮುನ್ನವಿದ್ದ ಸಾಂಪ್ರದಾಯಿಕ ರಸ್ತೆಗಳನ್ನು ಮತ್ತು ಚಹರೆಗಳನ್ನು ಬಹಳ ತುರ್ತಿನಲ್ಲಿ ಕಳೆದುಕೊಳ್ಳುತ್ತಲೇ ಇದೆ. ಹಸುರು ಕೆಂದೀಪಗಳ ಸರಣಿ, ಮೇಲ್ಸೇತುವೆ, ಕೆಳಸೇತುವೆ, ಏಕಮುಖ ಸಂಚಾರ, ಎಲ್ಲವನ್ನೂ ಮೇರೆವರಿಯುವಂತೆ ಅಸಂಖ್ಯ ಮತ್ತು ವೈವಿಧ್ಯಮಯ ವಾಹನ ಸಂಚಾರವೇ ಸಾಕು. ಸಾಲದೆನ್ನುವಂತೆ ‘ಕೆಲಸ ನಡೆಯುತ್ತಿದೆ’ ಎನ್ನುವ ಅಸಂಖ್ಯ ನಾಮಫಲಕ ಹೊತ್ತ ಇನ್ನಷ್ಟು ಮಾರ್ಗ ಹಾಗೂ ಮೆಟ್ರೋ ರೈಲಿನ ಭಾರೀ ಕುಂದಗಳ ನಿರ್ಮಾಣ ಅವ್ಯವಸ್ಥೆ ದೂಳು, ಹೊಗೆ, ಶಬ್ದ ಎಂಥವರನ್ನೂ ಹೈರಾಣಗೊಳಿಸುತ್ತದೆ. ಆದರೆ ನನ್ನ ಅನುಭವ ಸಣ್ಣದೇ? ಕಾಲ ಎಷ್ಟೇ ಹಿಂದಿರಲಿ, ದಕ್ಷಿಣ ಭಾರತ ಹತ್ತು ದಿನಗಳಲ್ಲಿ ಯೆಜ್ದಿ ಬೈಕೇರಿ ಸುತ್ತಿದ್ದು (ಇಲ್ಲೇ ಚಕ್ರವರ್ತಿಗಳು ಧಾರಾವಾಹಿಯಲ್ಲಿ ಮುಂದೆ ಮರುಮುದ್ರಣಗೊಳ್ಳಲಿದೆ) ಸುಳ್ಳಲ್ಲವಲ್ಲ. ಮತ್ತೆರಡು ಬಾರಿ ಅಖಿಲ ಭಾರತವನ್ನೇ ಹೀರೋಹೊಂಡಾ ಬೆನ್ನೇರಿ ‘ಆಕ್ರಮಿಸಿದ್ದು’ ಕಲ್ಪನಾಲಹರಿಯಲ್ಲವಲ್ಲ. ಪಶ್ಚಿಮ ಘಟ್ಟದ ಮೂಲೆ ಮೊಡಕುಗಳನ್ನೂ ನನ್ನ ಚಕ್ರಾಕ್ರಾಂತಗೊಳಿಸಿದ ‘ಬಿರುದಂತೆಂಬರ ಗಂಡ’ ನನಗೆ ಇದು ಯಾವ ಮಹಾ ಎನ್ನುವುದು ಧೋರಣೆ! (ಇರಬೇಕಾದ್ದೇ) ಆದರೆ ಮಾರ್ಗದರ್ಶನವೂ ಕಾಲಕ್ಕೆ ಸರಿಯಾದ್ದೇ ಬೇಕಲ್ಲಾ ಎನ್ನುವುದು ಗರ್ವವನ್ನು ಪೋಷಿಸುವ ಎಚ್ಚರ. ಇದಕ್ಕೆ ಒದಗಿದ್ದು ಅಂತರ್ಜಾಲದ ಮಾಯಾಸಾಧನ ಗೂಗಲ್ ನಕ್ಷೆ.
ಅಂತರಿಕ್ಷದ ಬಿಡುಗಣ್ಣ ಕೃತಕ ಉಪಗ್ರಹಗಳು ನಿಗದಿತ ಮಿನಿಟುಗಳ ಅಂತರದಲ್ಲಿ ಮರ್ತ್ಯ ಚಟುವಟಿಕೆಗಳನ್ನೆಲ್ಲ ಗ್ರಹಿಸಿ ಚಿತ್ರ, ನಕ್ಷೆ ರವಾನಿಸುತ್ತಲೇ ಇರುತ್ತವೆ. ಇವು ಕೊಡುವ ಸ್ಫುಟನೋಟದಲ್ಲಿ ಭೂಗೋಳದ ಇನ್ನೊಂದೇ ಮಗ್ಗುಲಿನಲ್ಲಿರುವ (ಅಮೆರಿಕಾದ ಒರೆಗಾಂ) ನನ್ನ ತಮ್ಮ – ಆನಂದವರ್ಧನನ ಕಾರು ಅವನ ಮನೆಯಂಗಳದಲ್ಲಿದೆಯೇ ಇಲ್ಲವೇ ಎಂದೂ ನಾನು ಕಣ್ಣಾರೆ ಕಂಡದ್ದಿದೆ. ಭೂ ಮೇಲ್ಮೈಯ್ಯ ಚರಾಚರಗಳನ್ನೆಲ್ಲ ತೋರುವುದಕ್ಕೇ ಮುಗಿಯಲಿಲ್ಲ ಇದರ ಪ್ರತಾಪ. ಸೂಕ್ತ ಅಂತರ್ಜಾಲ ಸಂಪರ್ಕಗಳನ್ನು ಅದರೊಡನೆ ಬೆಸೆದುಕೊಂಡದ್ದೇ ಆದರೆ ನಮ್ಮ ವೈಯಕ್ತಿಕ ಮಾರ್ಗಾನ್ವೇಷಣೆಯನ್ನೂ ಅದರ ‘ಮಿದುಳಿ’ಗೆ ಕೊಟ್ಟು ನಾವು ನಿಶ್ಚಿಂತವಾಗಿ ಅನುಯಾ(/ನಾ)ಯಿಗಳೇ ಆಗಲೂಬಹುದು. ಆ ಮುಂದುವರಿದ ತಂತ್ರಜ್ಞಾನ (ಬೈಕಿನಲ್ಲಿ ಅಥವಾ ನನ್ನ ಚರವಾಣಿಯಲ್ಲಿ ಅಂತರ್ಜಾಲ ಸಂಪರ್ಕ) ವೈಯಕ್ತಿಕವಾಗಿ ನಮ್ಮಲ್ಲಿರಲಿಲ್ಲ. ಅಭಯ ಒಂದು ಹಾಳೆಯಲ್ಲಿ ನಕ್ಷೆಯನ್ನೂ ನಾಲ್ಕು ಪುಟಗಳುದ್ದಕ್ಕೆ ಹೆಚ್ಚಿನ ವಿವರಗಳ ಸೂಚನಾ ಪಟ್ಟಿಯನ್ನೂ ಅಂತರ್ಜಾಲದಿಂದ ಇಳಿಸಿ, ಮುದ್ರಿಸಿ ಕೊಟ್ಟ. ಅದು ನಮ್ಮ ಮನೆಯಿಂದ ಹೊರಟು, ಲಕ್ಷ್ಯವನ್ನು ಸೇರುವವರೆಗೆ ಕರಾರುವಾಕ್ಕು ಮೀಟರ್‌ಗಳ ಲೆಕ್ಕದಲ್ಲಿ ಪ್ರತಿ ಕವಲು ದಾರಿಯನ್ನೂ ನಾವನುಸರಿಸಬೇಕಾದ ದಿಕ್ಕನ್ನೂ ಸ್ಪಷ್ಟ ಸಂಕೇತಗಳಲ್ಲಿ ತೋರಿಸುತ್ತಿತ್ತು. (ಅವನ್ನೇ ಪ್ರೇಷಕದಲ್ಲಿ ಹಿಡಿದು ಕೇಳುವ ಅನುಕೂಲ ನಾವು ಹೊಂದಿಸಿಕೊಂಡರೆ ಇನ್ನಷ್ಟು ಸುಲಭವಂತೆ. ಗೂಗಲ್ ನಕ್ಷೆ ಮೋಟಾರ್ ರ‍್ಯಾಲಿಯ ಟುಲಿಪ್ಪಿನಂತಿದ್ದರೆ, ಗೂಗಲ್ ಉಲಿ ಸ್ವತಃ ಮಾರ್ಗದರ್ಶೀ ಸಹವಾರನೊಬ್ಬ ನಿಖರ ಸೂಚನೆ ಕೊಟ್ಟಂತಿರುತ್ತದಂತೆ!)
ನಾವು ನಕ್ಷೆ, ಸೂಚನೆಗಳ ಪುಟಗಳನ್ನೆಲ್ಲ ಚೀಲದಲ್ಲಿಟ್ಟುಕೊಂಡರೂ ನಮ್ಮದೇ ನೆನಪು ಮತ್ತು (ಸಾಂಪ್ರದಾಯಿಕವಾಗಿ?) ದಾರಿಹೋಕರ ಸೂಚನೆಗಳನ್ನೇ ನಂಬಿ ಮುಂದುವರಿದೆವು. ‘ನಮ್ಮೂರು’ – ಮೈಸೂರು ದಾರಿಯನ್ನು ನಾಯಂಡಹಳ್ಳಿಯಲ್ಲಿ ಬಿಟ್ಟವರಿಗೆ ಅಸಂಖ್ಯ ‘ನವನಾಗರಿಕತೆ’ (ಮೇಲ್ಸೇತುವೆ, ಕೆಳಸೇತುವೆ ಇತ್ಯಾದಿ) ಸಿಕ್ಕುತ್ತಲೇ ಇದ್ದರೂ ವಿಸ್ತಾರ ದಾರಿ, ಹೋಲಿಕೆಯಲ್ಲಿ ವಿರಳ ವಾಹನಸಂಚಾರ, ಮುಂದುವರಿದಂತೆ ಹೊಸ ವಿಮಾನನಿಲ್ದಾಣ – ದೇವನಹಳ್ಳಿಯನ್ನೇ ಗುರಿಮಾಡಿ ಓಡುವಂತಹ ಬಾಡಿಗೆ ಕಾರುಗಳ ಒಯ್ಲಿನಲ್ಲಿ ನಮ್ಮದೊಂದು ಹರಿಗೋಲೆಂಬಂತೆ ತೇಲಿಹೋದೆವು. ದೇವನಹಳ್ಳಿ ಸಮೀಪಿಸುತ್ತಿದ್ದಂತೆ ನಗರದ ಗಗನಚುಂಬಿ ಕಟ್ಟಡಗಳು ವಿರಳವಾದುದರೊಡನೆ ನಮ್ಮ ನೋಟ ವಿಸ್ತರಿಸಿ ಸಾಕ್ಷಾತ್ ನಂದಿಬೆಟ್ಟವೇ ನಿಂತು ಸ್ವಾಗತಿಸಿತು. ಹೈದರಾಬಾದ್ ರಸ್ತೆಯನ್ನು ಉತ್ತರಕ್ಕೆ ಹರಿಯಬಿಟ್ಟು ನಾವು ಪಶ್ಚಿಮಕ್ಕೆ ಕವಲಾದೆವು. ಮುಂದೆ ಬಲಕ್ಕೆ ಚಿಕ್ಕಬಳ್ಳಾಪುರದತ್ತ ಸಾಗುವ ಮಾರ್ಗವನ್ನು ನಿರಾಕರಿಸಿ ಮತ್ತೈದೇ ಕಿಮೀಯಲ್ಲಿ ಎಡಕ್ಕೆ ದೊಡ್ಡಬಳ್ಳಾಪುರದತ್ತಸಾಗುವ ದಾರಿಯನ್ನೂ ನಿರಾಕರಿಸಿ ನೇರ ನಂದಿ ಬೆಟ್ಟವೇರುವ ದಾರಿಯನ್ನೇ ನಿಶ್ಚಿಂತೆಯಲ್ಲೇ ಕಂಡಿದ್ದೆವು.
ಸಮುದ್ರ ಮಟ್ಟದಿಂದ ೧೪೭೯ ಮೀಟರ್, ಬುಡದಿಂದ ಸುಮಾರು ೫೨೦ ಮೀ ಇದರ ಔನ್ನತ್ಯ. ಮಲಗಿದ ನಂದಿಯಂಥ ರೂಪ, ಕೆಲವು ನದಿಗಳ ಉಗಮಸ್ಥಾನ, ಕೋಡುಗಲ್ಲ ಸ್ವರೂಪ ಸಹಜವಾಗಿ ಸುತ್ತಣ ಬಯಲುಸೀಮೆಗೆ ಹೊರತಾಗಿ ವಿಕಸಿಸಿದ ಜೀವವೈವಿಧ್ಯಗಳಿಂದ ಗಿರಿಧಾಮದ, ಆರೋಗ್ಯಧಾಮದ ಖ್ಯಾತಿ ಗಳಿಸಿದ್ದೇನೋ ನಿಜ. ಆದರೆ ಬಹುತೇಕ (ಮುಕ್ಕಾಲಂಶ ಎನ್ನುತ್ತದೆ ಐತಿಹಾಸಿಕ ಮೂಲಗಳು) ಗೋಡೆಯಂಥ ಬಂಡೆಮೈಯನ್ನೇ ಕಾಣಿಸುವ ಬೆಟ್ಟದ ‘ದುರ್ಗ’ಮತೆ ಹೆಚ್ಚಿಸಿದ ಟಿಪ್ಪುವಿನ ಕೋಟೆಯಿಂದ ತೊಡಗಿ ಪ್ರಾಕೃತಿಕ ಸೌಲಭ್ಯಗಳಿಗೆ ಕಾಲಕಾಲಕ್ಕೆ ಸಿಕ್ಕ ಮನುಷ್ಯ ಕಲಾಪಗಳಲ್ಲಿ ದಾರಿ, ಯೋಗನಂದೀಶ್ವರನ ದೇವಾಲಯ, ಕೋಟೆಯ ಆವಶ್ಯಕತೆಗಳನ್ನು ಅದಕ್ಕೂ ಮಿಗಿಲಾಗಿ ಪಾರಿಸರಿಕ ಮಿತಿಯನ್ನೂ ಮೀರಿದ ಕಟ್ಟಡಗಳೆಲ್ಲಾ ಸೇರುತ್ತಿರುವ ಪರಿ ನೋಡಿದರೆ ಇದು ನಂದಿಯೇ ಹೋದರೆ ಆಶ್ಚರ್ಯವಿಲ್ಲ. ಬಂಡೆಶಿಖರದ ಸುತ್ತಣ ಬಯಲೆಲ್ಲಾ ‘ಬೆಳೆದಿದೆ ನೋಡಾ ಬೆಂಗಳೂರು ನಗರಾ’ ವೈಭವದಲ್ಲಿ ವಿವಿಧ ಬಗೆಯ ವಸತಿ ಸಮೂಹ, ಔದ್ಯಮಿಕ ಕನಸುಗಳನ್ನು ಬಿತ್ತಿ ಬೆಳೆಯುತ್ತಿವೆ. ಬೆಟ್ಟದ ಮೇಲೇನಾಗಿದೆ ಎನ್ನುವುದಕ್ಕೆ ಬನ್ನಿ, ನಮ್ಮೊಡನೆ ಒಂದು ಸುತ್ತು ಹಾಕಿಬಿಡಿ.
ಹೆದ್ದಾರಿಯಿಂದ ಸಮೀಪಿಸುತ್ತಿದ್ದಂತೆ ಕಾಣುವಂತೆ ಇದು ಎರಡು ಕೊಡಿಗಳ ಬಂಡೆ ಬೆಟ್ಟ. ದಾರಿ ಸ್ಪಷ್ಟವಾಗಿ ದಕ್ಷಿಣೋತ್ತರವಾಗಿ ಇದನ್ನು ಸಮೀಪಿಸುವಾಗ ಎದುರಾಗುವ ಅಖಂಡ ಬಂಡೆ (ಪ್ರವಾಸಿ ದೃಷ್ಟಿಯಲ್ಲಿ) ಅಮುಖ್ಯ ಕೊಡಿಗೆ ಸಂಬಂಧಪಟ್ಟದ್ದು. ಇದರ ಪಶ್ಚಿಮ ಭುಜ ಪುಡಿಕಲ್ಲು ಮಣ್ಣಿನ ರಾಶಿಯಂತೆ ಇಳಿಜಾರಾಗಿ ಲಂಬಿಸಿರುವುದನ್ನೇ ಬಳಸಿಕೊಂಡು ದಾರಿ ಮಾಡಿದ್ದಾರೆ. ಈ ಶ್ರೇಣಿ ಉತ್ತರಕ್ಕೆ ತಿರುವು ತೆಗೆದುಕೊಂಡು ಹರಡಿರುವ ಭಾಗ ಮುಖ್ಯ ಕೊಡಿ ಮತ್ತು ಅದು ಬಹುತೇಕ ಸುತ್ತಲೂ ಬಲು ಕಡಿದಾದ ಮೈಯನ್ನೇ ಹೊಂದಿದೆ. ಇಂದು ದೂರದಿಂದಲೇ ಮುಖ್ಯ ಕೊಡಿಯನ್ನು ಸುಲಭವಾಗಿ ಗುರುತಿಸುವಂತೆ ಮೈಕ್ರೋವೇವ್ ಟವರ್ ಸೇರಿದಂತೆ ಹಲವು ಮನುಷ್ಯ ರಚನೆಗಳು ಕಾಣುತ್ತವೆ. ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಅಂದರೆ, ಸಮಾಜ/ಪರಿಸರ ವಿರೋಧಿಯಾದ ‘ಉದ್ಯಮ’ಗಳನ್ನೇ ನೆಚ್ಚುವ ಎಲ್ಲ ಸರಕಾರೀ ಯೋಜನೆಗಳು ಮೇಲೆ ಕಾರ್ಯರೂಪಕ್ಕೆ ಬಂದರೆ ಬಂಡೆಯ ಮೈಯುದ್ದಕ್ಕೂ ಹೊಸದೇ ‘ರಂಗು’, ‘ಪರಿಮಳ’ ವ್ಯಾಪಿಸುವುದರಲ್ಲಿ ಏನೂ ಸಂದೇಹವಿಲ್ಲ.
ಏಳೆಂಟು ಕಿಮೀ ಉದ್ದದ ಘಾಟಿ ರಸ್ತೆಯುದ್ದಕ್ಕೂ ಕುರುಚಲು ಪೊದರುಗಳೂ ನೀಲಗಿರಿ ತೋಪೂ ವ್ಯಾಪಿಸಿವೆ. ನೆತ್ತಿಯಲ್ಲಂತೂ ಅಲಂಕಾರಿಕ ಗಿಡ ಮರಗಳನ್ನು ಧಾರಾಳವಾಗಿಯೇ ರೂಢಿಸಲು ತೋಟಗಾರಿಕಾ ಇಲಾಖೆ ಇದ್ದೇ ಇದೆ. ಆ ಪರಿಸರಕ್ಕೆ (ಲಭ್ಯ ನೀರು, ಶೀತ, ಬಿಸಿಲು, ಮಣ್ಣು ಇತ್ಯಾದಿ) ಸಹಜವಾಗಿ ಬರುವವು, ಉಳಿಯುವವುಗಳನ್ನೇ ರೂಢಿಸಿದರೆ ಇಲಾಖೆಯ ಅಸ್ತಿತ್ವಕ್ಕೇ ಅರ್ಥವಿಲ್ಲವಾಗುತ್ತದೆ. (ಈ ದಿನಗಳಲ್ಲಿ ಸರಕಾರಗಳು ಪರಿಹಾರವನ್ನು ಲಕ್ಷಿಸುವುದಿಲ್ಲ, ಸಮಸ್ಯೆಗಳನ್ನು ಊರ್ಜಿತದಲ್ಲಿಡುತ್ತವೆ.) ಈ ಎಲ್ಲ ತಟವಟದಲ್ಲಿ ಇಲ್ಲಿಂದು ಹೆಚ್ಚು ಪ್ರಕಟವಾಗುವ ವನ್ಯ ಜೀವಿ – ಮಂಗಗಳಿಗೆ, ಸಹಜ ಆಹಾರ ನೆಚ್ಚಿದರೆ ಉಪವಾಸವೇ ಗತಿ. ರಜಾದಿನಗಳಲ್ಲಿ ನೆರೆಯುವ ಸಂತೆಯಲ್ಲಿ ಇವು ಪಾಲು ಕಿತ್ತುಕೊಳ್ಳುವುದು ಇರಬಹುದು. ಆದರೆ ಉಳಿದ ದಿನಗಳು, ಮಳೆಗಾಲದ ವಿಪರೀತಗಳು? ನಾವಿದ್ದಂತೆ ಯಾರೋ ಪ್ರಾಣಿದಯಾಪರರು ಟೊಮಾಟೋ, ಕ್ಯಾರಟ್, ಮುಳ್ಳುಸೌತೆಗಳನ್ನು ಬೇರೆ ಬೇರೆ ಜಾಗಗಳಲ್ಲಿ ಸುರುವಿದ್ದು ಕಂಡೆವು. (ಅಸಂಖ್ಯ ಪೋಲಿ ನಾಯಿಗಳಿಗೆ ಇದು ದಕ್ಕುತ್ತಿರಲಿಲ್ಲ. ಆದರೆ ಕೂಲಿ ಕೆಲಸದ ಕೆಲವರು ಜನರ ಕಣ್ತಪ್ಪಿಸಿ, ಬಿಟ್ಟಿ ತರಕಾರಿ ಸಂಗ್ರಹ ನಡೆಸಿದ್ದು ಕಂಡೆ)
ರಾಜರ ಕಾಲದ ಅಮೃತ ಸರೋವರ, ಶಿಖರದಲ್ಲಿರುವ ದೇವಾಲಯದೊಳಗಣ ಕೆರೆ ಒಂದು ಮಿತಿಯ ನೀರಿನ ಅಗತ್ಯಗಳನ್ನು ಪೂರೈಸುವುದು ನಿಜ. ಆದರೆ ಆಡಳಿತ ಪ್ರಾಕೃತಿಕವಾಗಿ ನೆತ್ತಿಯ ಮಣ್ಣು ಸಂಚಯಿಸಿ ಕೊಡುತ್ತಿದ್ದ ಎರಡೂ ಜಲನಿಧಿಗಳನ್ನು ಸೊರಗಿಸಿರುವುದು, ಮುಂದುವರಿದು ಅವಹೇಳನ ಮಾಡಿರುವುದು ತೀರಾ ಅನ್ಯಾಯ.
ತಮಿಳು ನಾಡಿನ ಪಾಲಾರ್ ನದಿಗೆ ಸೇರಲಿರುವ ಕ್ಷೀರಹೊಳೆ ಮತ್ತು ಬೆಂಗಳೂರಿಗೇ ನೀರೂಡಬಹುದಾಗಿದ್ದ ಅರ್ಕಾವತಿ ನದಿಯ ಮೂಲಗಳನ್ನು ಐತಿಹಾಸಿಕ ಕಾಲದಲ್ಲೇ ಗುರುತಿಸಿ, ಗೌರವಿಸಿದ್ದು ಇಂದು ಭಾವುಕ ಅಗತ್ಯಗಳಿಗಷ್ಟೇ ಉಳಿದುಕೊಂಡಿವೆ. ಎರಡರಲ್ಲೂ ನೀರಪಸೆಯಿರಲಿಲ್ಲ, ನಿರೀಕ್ಷಿಸಿದಂತೆ ಪ್ಲ್ಯಾಸ್ಟಿಕ್ ಕಸ ಧಾರಾಳ ಇತ್ತು. ಸ್ಪಂಜಿನಂತೆ ಮಳೆನೀರನ್ನು ಹಿಡಿದು ವರ್ಷಪೂರ್ತಿ ಒರತೆಯಂತೆ ಕೊಡಬಹುದಾದ ನೆತ್ತಿಯ ಮಣ್ಣಿನ ಭಾಗಗಳಿಗೆ ವಂಚನೆ ನಡೆದಿದೆ.
ಕಾಂಕ್ರೀಟ್ ಕಟ್ಟಡಗಳು, ಓಡಾಟದ ಜಾಡುಗಳಲ್ಲೆಲ್ಲ ಕೆಸರು ಕಸ ಬರದಂತೆ ಡಾಮರು, ಕಲ್ಲಚಪ್ಪಡಿ, ಇಂಟರ್ಲಾಕ್, ಕಾಂಕ್ರಿಟ್ ಹಾಸುಗಳು ವಿಸ್ತರಿಸುತ್ತಲೇ ಇದ್ದರೆ ಮಳೆರಾಯ ಸುಂದರ ಚರಂಡಿ ವ್ಯವಸ್ಥೆಯಲ್ಲಿ ಸುಳಿದು, ಕೊಳ್ಳ ಹಾರಿಕೊಳ್ಳುವುದಷ್ಟೇ ಉಳಿಯಿತು. ಇನ್ನೂ ಅಪಾಯದ ಸಂಗತಿ – ಈ ಜಲನಿಧಿಗಳು ತೋರಿಕೆಯ ಮಣ್ಣಟೊಪ್ಪಿಯ ಕೆಳಗಣ ಪ್ರಾಕೃತಿಕ ಇಳಿಜಾರನ್ನೂ ತೋರಿಸುತ್ತವೆ.
ಅದನ್ನೇ ಬಳಸಿಕೊಂಡು ಪ್ರವಾಸೋದ್ಯಮ ಇಲಾಖೆ ಎಲ್ಲಾ ವಸತಿಗಳ ಕೊಳಚೆ ನೀರಿನ ಜಾಲವನ್ನು ವ್ಯವಸ್ಥಿತವಾಗಿ ಕ್ಷೀರಹೊಳೆಯ ಒತ್ತಿನಲ್ಲೇ ತಂದು ‘ಟಿಪ್ಪುಡ್ರಾಪ್’ ಕೊಟ್ಟಿರುವುದು ನಿಜಕ್ಕೂ ಆಘಾತಕರ. ಒಣ ನಾಗರಿಕ ಕಸವನ್ನು (ಮುಖ್ಯವಾಗಿ ವೈವಿಧ್ಯಮಯ ಪ್ಲ್ಯಾಸ್ಟಿಕ್) ಇನ್ನೊಂದು ಮೈಯಲ್ಲಿ ಇಲಾಖೆಯದೇ ಹೊಟೆಲ್ (ಮಯೂರಾ ಪೈನ್ ಟಾಪ್) ನಿರ್ಲಜ್ಜವಾಗಿ ಕೊಳ್ಳಕ್ಕೆ ತಳ್ಳಿರುವುದನ್ನೂ ನಾವು ಕಾಣಬಹುದು. (ಇಂಥವುಗಳೇ ನಾನು ಮೊದಲಲ್ಲಿ ಹೇಳಿದಂತೆ ಬಂಡೆಯ ಕಡಿದಾದ ಮೈಗೆ ‘ರಂಗೂ’ ‘ಪರಿಮಳ’ವನ್ನೂ ತರುತ್ತವೆ!)
ಕೋಟೆಯ ಮೊದಲ ದ್ವಾರವನ್ನು ಪ್ರವೇಶಿಸಿದ್ದೇ ಎಡಬದಿಗೆ ಇಲಾಖೆಗಳ ಅತಿಥಿಗೃಹಗಳು ಶೋಭಿಸುತ್ತವೆ. ಬಲದ ವಿಸ್ತಾರ ತಟ್ಟಿನಲ್ಲಿ ಧಾರಾಳ ಕಟ್ಟಿ ಎಸೆದ ಸ್ವಾಗತ ಕಛೇರಿ (ಖಾಲಿ ಖಾಲಿ), ಟಿಕೆಟ್ ವ್ಯವಸ್ಥೆ. ಎದುರು ಅಂಗಳ ದೊಡ್ಡ ವಾಹನಗಳ ಸುತ್ತಾಟಕ್ಕೆ ಬಸ್ ತಂಗುದಾಣಕ್ಕೆ ಸಜ್ಜು. ಹಿತ್ತಿಲಿನಲ್ಲಿ ದ್ವಿಚಕ್ರ ವಾಹನಗಳ ತಂಗುದಾಣ. ಮತ್ತೂ ವಿಸ್ತಾರಕ್ಕಿನ್ನೇನೋ ಕಾಮಗಾರಿಗೆ ಕಬ್ಬಿಣದ ಸರಳುಗಳನ್ನು ಕಟ್ಟಿಟ್ಟದ್ದು ತುಕ್ಕು ಹಿಡಿಯುತ್ತಾ ಬಿದ್ದಿದೆ. ನೆನಪಿರಲಿ, ನಂದಿಬೆಟ್ಟಕ್ಕೆ ಬರುವ ಅಸಂಖ್ಯ ಜನ ವಾಹನಗಳು ‘ಕೊಳಕು’ ಮೆಟ್ಟದಂತೆ ಇಡೀ ವಠಾರದಲ್ಲಿ ಸಣ್ಣ ಅಲಂಕಾರಿಕ ಪೊದರುಗಳ ಬುಡ ಬಿಟ್ಟರೆ ಎಲ್ಲಾ ಚೊಕ್ಕವಾಗಿ ಸಿಮೆಂಟ್ ಸಾರಿಸಿದ್ದಾರೆ.
ನಾಲ್ಕು ಚಕ್ರದ ಪುಟ್ಟ ವಾಹನಗಳು ವಿಶೇಷ ಪ್ರವೇಶ ಶುಲ್ಕ ಕಟ್ಟಿ ಎರಡನೇ ದ್ವಾರ ದಾಟಿಯೂ ಮುಂದುವರಿಯಲು ಅವಕಾಶವೇನೋ ಚೆನ್ನಾಗಿಯೇ ಇದೆ. ಇದು ದ್ವಿಚಕ್ರಿಗಳಿಗೆ ಯಾಕಿಲ್ಲವೋ ತಿಳಿದಿಲ್ಲ. ಮುಂದೆ ನೀಲಗಿರಿ ತೋಪಿನ ನಡುವೆ, ತೆರೆದ ಬಂಡೆ ದಿಬ್ಬದ ಮೇಲೆಲ್ಲಾ ವಿಚಿತ್ರ ರೂಪಗಳ ಬಿಸಿಲ ಮರೆಗಳನ್ನು ನಿರ್ಮಿಸಿದ್ದಾರೆ. ಅವಲ್ಲದೆ ಹೊಟೆಲಿನ ಪಕ್ಕದಲ್ಲೇ ಭಾರೀ ಪ್ರೇಕ್ಷಾಂಗಣದಂಥ ಎತ್ತರಿಸಿದ ಉಕ್ಕಿನ ಸರಳುಗಳದ್ದೇ ಅಟ್ಟಳಿಗೆ ರಚಿಸಿದ್ದಾರೆ.
ನಂದಿ ಸಹಜವಾಗಿಯೇ ಸುಮಾರು ಸಾವಿರ ಅಡಿಗೂ ಮಿಕ್ಕು ಎತ್ತರದ ನೋಟ ಕೊಡುವಾಗ ಮತ್ತೂ ನಾಕೆಂಟಡಿ ಎತ್ತರಿಸುವ ಈ ರಚನೆಗಳು ಬೇಕೇ? (ಸರಕಾರೀ ಇಲಾಖೆಗಳ ಅಭಿವೃದ್ಧಿಯ ಬತ್ತಳಿಕೆಯಲ್ಲಿ ಸದಾ ಇಂಥ ಹುಸಿ ಮಂತ್ರಾಸ್ತ್ರಗಳೇ ಇರುತ್ತವೆ. ಕೆಲವು ಉದಾಹರಣೆಗಳಿಗೆ ಇಲ್ಲೇ ಬಿಸಿಲೆ, ಗಂಗಡಿಕಲ್ಲು, ವಾಲಿಕುಂಜ, ಆಗುಂಬೆ, ದಾಂಡೇಲಿ ಮುಂತಾದ ನನ್ನ ಹಳೇ ಲೇಖನಗಳನ್ನು ನೋಡಿಕೊಳ್ಳಿ) ಮೂಲ ಕೋಟೆ ಗೋಡೆ ಶಿಥಿಲವಾದದ್ದಕ್ಕೆ ಕೆಲವು ಕಡೆ ಹರಕು ಮುರುಕು ತೇಪೆಯೇನೋ ಹಾಕಿದ್ದರು. ಆದರೆ ಮತ್ತೆ ಹೊಸದೇ ಬಲವಾದ ಉಕ್ಕಿನ ಬೇಲಿ ಹಾಕಿದ್ದು ಉಪಯುಕ್ತತೆ, ಸೌಂದರ್ಯವರ್ಧನೆಗಿಂತ ಹೆಚ್ಚಿಗೆ ಇಲಾಖೆಗಳ ‘ಬಿಲ್ವಿದ್ಯಾ’ ಪಾರಮ್ಯವನ್ನು ತೋರಿಸುತ್ತಿತ್ತು!
ಪ್ರಾಕೃತಿಕ ಸತ್ಯ, ಹಿಂದಿನವರ ಅನಿವಾರ್ಯತೆಗಳು ಮೂಡಿಸಿದ ರಚನೆಗಳ ಐತಿಹಾಸಿಕ ಸತ್ಯಗಳನ್ನು ಅರ್ಥೈಸಿಕೊಂಡು ಮೌಲ್ಯವರ್ಧನೆ ಮಾಡುವ ಪ್ರಯತ್ನ ಇಲ್ಲಿ ಒಂದೂ ಆಗಿಲ್ಲ ಎನ್ನುವುದನ್ನು ತೀರಾ ವಿಷಾದದಿಂದಲೇ ಹೇಳಬೇಕಾಗುತ್ತದೆ. ಅಲ್ಲಲ್ಲಿ ಶಿಥಿಲಗೊಂಡ ಕೋಟೆ ಗೋಡೆಯನ್ನು ನಿರ್ಲಕ್ಷಿಸಿದ್ದೇ ಹೆಚ್ಚು, ಪುನಾರಚನೆ ಮಾಡಿದಲ್ಲೂ ತಿಪ್ಪೆ ಸಾರಿಸಿದ್ದೇ ಎದ್ದು ಕಾಣುತ್ತದೆ. ಮೇಲೆ ಹೇಳಿದ ನದಿ ಮೂಲಗಳು, ಕೋಟೆಯ ಹಿತ್ತಿಲಿನಲ್ಲಿ (ಕ್ಷೀರ ನದಿ ಮೂಲದ ಬಳಿ) ಬೆಟ್ಟವನ್ನು ನಡೆದೇರುವವರ ಸೌಕರ್ಯಕ್ಕಾಗಿ ಎಂಬಂತೆ ಇರುವ ಸಣ್ಣ ದ್ವಾರ, ಅದರಾಚಿನ ಜಾಡು (ಮೆಟ್ಟಿಲಸಾಲು?), (ಕು)ಖ್ಯಾತ ಟಿಪ್ಪು ಡ್ರಾಪ್ ಎನ್ನುವ ತಾಣ, ಬ್ರಹ್ಮಾಶ್ರಮ, ನೆಲ್ಲಿಕಾಯಿ ನಂದಿ, ನಂದಿಯ ದೊಡ್ಡ ದೇವಳ ಬೇರೊಂದೆರಡು ಪುಟ್ಟ ಆರಾಧನಾ ನೆಲೆ, ನೀರಮೂಲಗಳೆಲ್ಲ ಸ್ಟಾರ್ ಹೋಟೆಲುಗಳಲ್ಲಿ ದುಡಿಯುವ ಜನಪದ ಕಲಾವಿದರಂತೆ ‘ಶೋಭಿಸುತ್ತಿವೆ.’ (ಹೆಚ್ಚಿನ ವಿವರಗಳಿಗೆ ನನ್ನದೇ ಲಕ್ಷದ್ವೀಪದ ಕಥನ ನೋಡಿ) ಆಡಳಿತದ ಅಂದಾದುಂಧಿಗೆ ‘ಐತಿಹಾಸಿಕ ಸಮರ್ಥನೆ’ ಒದಗಿಸಲು ಮಾತ್ರ ಇವು ಉಳಿದುಕೊಂಡಿವೆ.
ಶಿಖರ ಪ್ರದೇಶದ ಹಿತ್ತಿಲ ಗೋಡೆಯ ಉದ್ದಕ್ಕೆ ಪ್ರವಾಸಿಗಳನ್ನೇ ಉದ್ದೇಶಿಸಿ ಕಿರು ಮನೆಗಳ (ಡಾರ್ಮಿಟರಿ) ಸಾಲೇ ಏಳುತ್ತಿದೆ. ಇವು ನೀರಿಗೆ ಬೆಟ್ಟದ ತಪ್ಪಲಿನ ಜಲಾಶಯಗಳನ್ನೇ ನಂಬಿವೆ. ಮುಂದೆ ದಿನಕ್ಕೆ ಸಾವಿರದ (ಲಕ್ಷ?) ಲೆಕ್ಕದಲ್ಲಿ ಬಾಡಿಗೆ ಎಸೆದು ಇಲ್ಲಿ ವಾಸ್ತವ್ಯ ಹೂಡುವವರ ಡ್ರಿಂಕ್, ವಾಶ್, ಕಮ್ಮೋಡ್ (ಒಕ್ಕುಡ್ತೆ ಉಚ್ಚೆಯ ಶುದ್ಧಕ್ಕೆ ಒಂದು ಬಟನ್ ಒತ್ತಿದರೆ ಬಕೆಟ್ ನೀರು ಝಳ್ಳೆಂದು ಉಕ್ಕಿ ಗುಳುಗುಳಾಯಿಸಿ ಹೋಗುವ ಚಂದಕ್ಕೆ), ಶವರ್ ಇತ್ಯಾದಿ ಒಂದು ಮುಖ. ಮತ್ತೆ ಗಾರ್ಡನ್, ಲಾನ್, ಕಾರ್ ವಾಶ್ ಇತ್ಯಾದಿಗಳು ಸೇರುವಾಗ ಬರಿಯ ತಪ್ಪಲಿನ ಜಲಾಶಯಗಳನ್ನು ನಂಬಿದರೆ ಸಾಕಾಗದು. ಬಹುಶಃ ಅಷ್ಟರಲ್ಲಿ ಮುಸುಡು ವಾರೆಯಾದ ನೇತ್ರಾವತಿಯ ಪಕ್ಕದಲ್ಲೇ ಅರಬೀ ಸಮುದ್ರಕ್ಕೆ ಹಚ್ಚಿದ ಕೊಳವೆ ಸಾಲು ಸುಧಾರಿಸಬಹುದು!
ಇಂದು ಹೋಟೆಲಿನಲ್ಲಿ ತೊಳೆಯುವ ನಲ್ಲಿಗಳು ಬಂದಾಗಿ ಬಕೆಟ್ ಮಗ್ ಕಂಡೆವು. ನೀರಿನ ಕೊರತೆಯಿಂದಾಗಿ ‘ಗಿರಾಕಿ ದೇವೋಭವ’ ಎನ್ನಬೇಕಾದ ಇಲಾಖೆ “ಸಾರಿ ಸಾರ್. ವಾಟರ್ ಶಾರ್ಟೆಜಿಂದಾಗಿ ಟಾಯ್ಲೆಟ್ಟು ಅನ್ಯೂಸಬಲ್ ಆಗಿದೆ. ಹೊರಗೆ ಪಬ್ಲಿಕ್ ಟಾಯ್ಲೆಟ್ ಇದೆ ನೋಡಿ” ಎಂದಿತು. ಅಂಗಳದ ವಿಸ್ತಾರ ಲಾನ್ ಕಂದಿತ್ತು, ಗಿಡಗಳು ಅಧೋಮುಖಿಗಳಾಗಿದ್ದುವು. ‘ಪಬ್ಲಿಕ್ ಟಾಯ್ಲೆಟ್’ನ್ನು ಆಧುನಿಕವೇ ಆದರೂ ಪುರಾತನ ಕಳೆಗಟ್ಟಿದ ಕಟ್ಟಡ ಒಂದರಲ್ಲಿ ವ್ಯವಸ್ಥೆ ಮಾಡಿದ್ದರು. ಆದರೆ ಅದು ಬೋರ್ಡಿಲ್ಲದೆಯೂ ತನ್ನಿರವನ್ನು ಜಾಹೀರು ಪಡಿಸುವಷ್ಟು ‘ಸ್ಟ್ರಾಂಗಿ’ದ್ದುದರಿಂದ ನಾವು ಮೂರು ರೂಪಾಯಿ ದಂಡ ಕೊಡುವ ತಪ್ಪು ಮಾಡಲಿಲ್ಲ. ಅರ್ಕಾವತಿ ಜಲಾನಯನ ಪ್ರದೇಶದಲ್ಲಿ ಯತ್-ಕಿಂಚಿತ್ ಜಲಪೂರಣ ಮಾಡಿ ಬಂದೆವು!
ಸುಮಾರು ಮೂವತ್ತಕ್ಕೂ ಮಿಕ್ಕು ದ್ವಿಚಕ್ರ ವಾಹನಗಳೂ ಲೆಕ್ಕಕ್ಕೆ ಸಿಗದಂತೆ ಹಲವು ಕಾರುಗಳೂ ಶಿಖರವಲಯದಲ್ಲಿದ್ದುವು. ನಮ್ಮ ‘ದಾರಿ ತಪ್ಪಿದ’ ನಡೆಯಲ್ಲಿ (ತಪ್ಪು ತಿಳಿಯಬೇಡಿ, ನಾವು ಕಾರಿನವರ ಸುತ್ತುಬಳಸಿನ ದಾರಿಗಳಲ್ಲಿ, ಅವು ವಿರಮಿಸುವ ಬಯಲುಗಳಲ್ಲಿ, ಜನ ವಿಹರಿಸುವ ಲತಾಕುಂಜ ಮತ್ತು ಮೆಟ್ಟಿಲಸಾಲುಗಳಲ್ಲಿ ಹೆಚ್ಚು ಸುತ್ತಲಿಲ್ಲ. ಅಂಚುಗಟ್ಟಿದ ಗೋಡೆಯ ಒತ್ತಿನ ಅನೌಪಚಾರಿಕ ಸವಕಲು ಜಾಡೇ ನಮಗೆ ಹೆಚ್ಚು ಪ್ರಿಯವಾಯ್ತು) ಹಲವು ಯುವಜೋಡಿಗಳನ್ನು ಅನಪೇಕ್ಷಿತವಾಗಿ ಆಪ್ತ ಭಂಗಿಗಳಲ್ಲಿ ಕಂಡೆವು. ನಾವಿಬ್ಬರು ಗಟ್ಟಿಯಾಗಿ ಮಾತಾಡಿಕೊಂಡೇ ಓಡಾಡಿ ಇನ್ನೂ ಹೆಚ್ಚಿನ ದೃಶ್ಯಗಳನ್ನು ಕಾಣುವ ಮುಜುಗರ ತಪ್ಪಿಸಿಕೊಂಡೆವು! ನೆನಪಿರಲಿ, ಅದು ವಾರಾಂತ್ಯ ಅಥವಾ ಯಾವುದೇ ಸಾರ್ವಜನಿಕ ರಜಾದಿನವಾಗಿರಲಿಲ್ಲ. ಅಂತರ್ಜಾಲದಲ್ಲಿ ಟೀವೀ ೯ರ ಸಮೀಕ್ಷೆ ಹೇಳುವಂತೆ ಈ ದಿನಗಳಲ್ಲಿ ಅನೈತಿಕ ಸಂಬಂಧಗಳು ಬೆಸೆಯುವುದೂ ಅವನ್ನು ‘ನಗದು’ ಮಾಡುವವರ ಪುಂಡಾಟಿಕೆಗಳೂ ಧಾರಾಳ ನಡೆಯುತ್ತದಂತೆ. ಅಪರೂಪಕ್ಕೆ ಜೀವನಾಸಕ್ತಿ ಕಳೆದುಕೊಂಡವರೂ (ಕೊಳ್ಳ ಹಾರಿಕೊಳ್ಳಲು!) ಇಲ್ಲಿಗೆ ಬರುವುದುಂಟಂತೆ. ಸಹಜವಾಗಿ ಇದು ತತ್ಕಾಲೀನ ಪೊಲೀಸ್ ಉಪಸ್ಥಿತಿಯನ್ನು ಪೂರ್ಣಕಾಲಿಕವಾಗಿಸುವ ಬೆಳವಣಿಗೆ. ಅದಕ್ಕೂ ಮಿಗಿಲಾಗಿ ಈಗಾಗಲೇ ಇಲ್ಲಿರುವ ಇಲಾಖೆಗಳ (ತೋಟಗಾರಿಕೆ, ಅರಣ್ಯ, ದೇವಾಲಯ, ವಿದ್ಯುಚ್ಛಕ್ತಿ, ಪ್ರವಾಸೋದ್ಯಮ, ನಿಸ್ತಂತು ಸಂಪರ್ಕ ಇತ್ಯಾದಿ) ಸಮ್ಮರ್ದಕ್ಕೆ ಇನ್ನೊಂದೇ ಹೊರೆ ನಂದಿಗೆ ಬೀಳುತ್ತದಲ್ಲಾಂತ ನನಗೆ ತಲೆಬಿಸಿಯಾಗಿದೆ. ಸ್ಥಳದ ವ್ಯಾಪ್ತಿಯನ್ನರಿತು, ದ್ವಾರದಲ್ಲಿ ಟಿಕೆಟ್ ಹರಿದು ಒಳಗಿನ ಪ್ರವೇಶವನ್ನು ನಿಶ್ಚಯಿಸುವ ಒಂದೇ ಇಲಾಖೆಗೆ ಸಮಗ್ರ ದೃಷ್ಟಿಕೋನ (ಸಿಬ್ಬಂದಿ ಸಹಿತ) ಬೆಳೆಸಿದರೆ ಸಾಲದಿತ್ತೇ ಎನ್ನುವ ನನ್ನ ಯೋಚನೆ ಬಹುಶಃ ಅಪ್ರಜಾಸತ್ತಾತ್ಮಕ ಎಂದೇ ಕಾಣುತ್ತದೋ ಏನೋ ಎಂಬ ವಿಷಾದದಲ್ಲೇ ನಾವು ಮರಳಿ ಬೆಂಗಳೂರ ದಾರಿ ಹಿಡಿದೆವು.
(ಮುಂದುವರಿಯಲಿದೆ)
ಮುಂದೆ ನಮ್ಮ ಅಡ್ನಾಡೀ ಕನಸು ನಮ್ಮನ್ನು ಸಿಕ್ಕಿಸಿ ಹಾಕಿದ ಪರಿಯನ್ನು ಈ ಸರಣಿಯ ಎರಡನೇ ಮತ್ತು ಕೊನೆಯ ಕಂತಿನಲ್ಲಿ ಮುಂದಿನ ಬಾರಿ ಕೊಡುತ್ತೇನೆ – ಬೋರೇ ಗೌಡ ಬೆಂಗಳೂರಿಗ್ಬಂದ!
ನಂದಿಯ ಬಗ್ಗೆ ನಮ್ಮ ಕುತೂಹಲ ನಂದದಂತೆ ನಿರೂಪಿಸುತ್ತಿದ್ದೀರಿ. ಮುಂದಿನ ಕಂತಿಗೆ ಕಾಯುವೆ!
ನೀವು ಅಲ್ಲಿಗೆ ಹೋಗಿ ನೋಡಿ ಇದನ್ನು ಬರೆದಿದ್ದು ತುಂಬ ಒಳ್ಳೆಯದಾಯಿತು. ಲೇಖನದ ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ. ಈ ಬೆಟ್ಟಸಾಲುಗಳಲ್ಲಿ ಹುಟ್ಟಿ ಹರಿಯುವ (ಹರಿಯುತ್ತಿದ್ದ) ನದಿಗಳಿಗೂ, ಪರಮಶಿವಯ್ಯನವರ ನೇತ್ರಾವತಿ ನದಿ ಸಾವು ಯೋಜನೆಗೂ ನೇರ ಸಂಬಂಧವಿದೆ.
ನಂದಿ ಬೆಟ್ಟದ ದುಸ್ಥಿತಿಯನ್ನು ಕುರಿತು ನೀವು ಬರೆದಿರುವುದನ್ನು ಓದಿ ಬೇಸರವಾಯಿತು. ಈ ಲೇಖನವನ್ನು ಸಂಬಂಧಪಟ್ಟ ಇಲಾಖೆಯವರು ಓದಬೇಕು.
ಬರಹ ತುಂಬಾ ಚಂದವಾಗಿದೆ. ಖೇದವೂ ಆಗುತ್ತಿದೆ. ಮುಂದೆ?ಅಕ್ಷರಗಳು ಸ್ವಲ್ಪ ದೊಡ್ಡದಾಗಿ ಓದುವುದು ಸ್ವಲ್ಪ ತ್ರಾಸ.