ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಆರು
ಅಧ್ಯಾಯ ಹನ್ನೆರಡು

ನಮ್ಮ ಗಣಿತಗುರುಗಳು ಕೆ.ಎ.ಕೃಷ್ಣಮೂರ್ತಿ ಮತ್ತು ಬಿ.ಭುಜಂಗರಾವ್; ಭೌತವಿಜ್ಞಾನಗುರು ಎಸ್.ನಾರಾಯಣಹೊಳ್ಳ. ಇವರುಗಳ ಸಾನ್ನಿಧ್ಯದಲ್ಲಿ ನಾವು ಆಯಾ ವಿಷಯಗಳಲ್ಲಿ ಪ್ರಾವೀಣ್ಯ ಗಳಿಸಿದುದರ ಜೊತೆಗೆ ಜೀವನಧರ್ಮವನ್ನೂ ಬೋಧನಮರ್ಮವನ್ನೂ ಕಲಿತೆವು. ಜೀವನಧರ್ಮ: ಇತರರಿಗೆ ಸಂತಸವೀವುದೇ ಪರಮಪುರುಷಾರ್ಥ. ಬೋಧನಮರ್ಮ: ವಿಷಯದ ಕಾಠಿಣ್ಯ ನಿವಾರಣೆಗಿರುವ ಉಪಾಯ ಒಂದೇ – ಕಥಾರೂಪದಲ್ಲಿ ಉದಾಹರಣೆಗಳ ಸಹಿತ ಪರಿಕಲ್ಪನೆಗಳ ಸ್ಪಷ್ಟೀಕರಣ. ಎರಡು ಪ್ರಾತಿನಿಧಿಕ ಉದಾಹರಣೆಗಳು. ಕಲನಶಾಸ್ತ್ರ (calculus) ಪ್ರವೇಶಗೊಳಿಸುವ ಮೊದಲು ನಮ್ಮ ಗುರುಗಳು ಬೀಜಗಣಿತದಲ್ಲಿ ಒಂದು ಸರಳ ಸಮೀಕರಣ ಬರೆದು ನಮ್ಮಿಂದಲೇ ಅದರ ಪರಿಹಾರವನ್ನು ತರಿಸಿದರು:

೧=೨=…. !ಸಾಧನೆ: a=b ಆಗಿರಲಿ.∴ a X a = ab
a೨ – b ೨ = ab – b ೨(a-b) (a+b) = b (a-b) ಉಭಯ ಪಾರ್ಶ್ವಗಳಿಂದಲೂ (a-b)ಯನ್ನು ರದ್ದು ಮಾಡಿ. ∴ a+b=b ಆದರೆ a=b ಎಂದು ಅಂಗೀಕರಿಸಿದ್ದೇವೆ.∴ b+b=b
೨b=b
೨=೧, ಎಂದೇ ೧=೨=೩=೪=…

ಇಡೀ ಸಂಖ್ಯಾಸೌಧವೇ ನೆಲಕಚ್ಚಿದೆ! ಈ ಅನರ್ಥದ ಅರ್ಥವೇನು? ಅವರು ವಿವರಿಸಿದರು, “ಹುಲುಮನುಜಾ! ತಿಳಿದೋ ತಿಳಿಯದೆಯೋ ನೀನೇ ವಿಧಿಸಿಕೊಂಡ ಕೆಲವು ಕಟ್ಟುಪಾಡುಗಳನ್ನು ನೀನು ಅಹಂಕಾರದಲ್ಲಿ ಉಲ್ಲಂಘಿಸಿದ್ದಾದರೆ ನಿಸರ್ಗ ನಿನಗೆ ಒದ್ದು ಹೇಳುತ್ತದೆ ‘ನಿನ್ನ ನಡೆ ತಪ್ಪು’ ಎಂದು! ವ್ಯಾಘಾತ ಅಥವಾ ವೈರುಧ್ಯಗಳು (contradictions) ನೀಡುವ ಸಂದೇಶವಿದು. ಇಂಥ ಸಂದರ್ಭಗಳಲ್ಲಿ ಇಡೀ ಸಮಸ್ಯೆಯ ಪುನಃಪರೀಕ್ಷೆಯೊಂದೇ ಶರಣು. ಸಮೀಕರಣದ ಉಭಯ ಪಾರ್ಶ್ವಗಳನ್ನೂ ನಾವು a-bಯಿಂದ ಭಾಗಿಸಿರುವುದು ಸರಿಯಷ್ಟೆ. ಆದರೆ ನಮ್ಮ ಮೂಲ ಅಭಿಗೃಹೀತದ ಪ್ರಕಾರ a-b=0. ಅಂದರೆ ಈ ಸರಳ ಭಾಗಾಹಾರ ಕ್ರಿಯೆಯಲ್ಲಿ ನಾವು ಉಭಯ ಪಾರ್ಶ್ವಗಳನ್ನೂ 0ಯಿಂದ ಭಾಗಿಸಿದ್ದೇವೆ. ಇದು ಸಲ್ಲದು. Thou shalt not divide by zero (ನೀನು 0ಯಿಂದ ಭಾಗಿಸತಕ್ಕದ್ದಲ್ಲ) ಎಂಬ ಅಂಕಗಣಿತದ ಮೂಲನಿಯಮವನ್ನು ಉಲ್ಲಂಘಿಸಿದುದರ (ದುಷ್)ಫಲ ಈ ವ್ಯಾಘಾತ. ಜೀವನದಲ್ಲಿಯೂ ಈ ನಿಯಮ ಸಾಧು. ಹಾಗಾದರೆ ಮುಂದಿನ ಹೆಜ್ಜೆ ಏನು? ಮಾನವನ ಅದಮ್ಯ ಸೃಜನಶೀಲತೆ ಇಂಥ ಸನ್ನಿವೇಶಗಳಲ್ಲಿ ಹೊಸಹಾದಿ ಮತ್ತು ಹೊಸಹೊಳಹು ಹುಡುಕುತ್ತ ಹೊಸತೇ ಆಗುತ್ತದೆ: ಕಲನಶಾಸ್ತ್ರದ ಒರತೆ ಬುಳುಬುಳಿಸುವುದು ಇಲ್ಲೇ.”

ಇನ್ನೊಂದು ನಿದರ್ಶನ. ಗುರುತ್ವಾಕರ್ಷಣೆಯ (gravitation) ಮೊದಲ ಪಾಠವನ್ನು ನಮ್ಮ ಉತ್ಸಾಹೀ ಗುರುಗಳು ಆರಂಭಿಸಿದ ಕ್ರಮ ಹೀಗೆ: ಮಾಮೂಲಿನಂತೆ ಒಂದು ಪುಟ್ಟ ಕಥೆ. ಹಲವು ನೂರು ವರ್ಷಗಳ ಹಿಂದಿನ ಮಂಗಳೂರಿನಲ್ಲಿ ಬೊಗ್ಗು ಎಂಬೊಬ್ಬ ಹದಿಹರೆಯದ ಯುವಕನಿದ್ದ. ಮೀಸೆ ಮೊಳೆಯುವಾಗ ದೇಶ ಕಾಣದ ಹರೆಯ, ಯಾರೂ ಮಾಡದ ಏನಾದರೂ ಸಾಹಸ ಪ್ರದರ್ಶಿಸಿ ತಾನು ಸಮಾಜದ ಕಣ್ಮಣಿಯಾಗಬೇಕೆಂಬ ತವಕ. ಒಂದು ಮುಂಜಾನೆ ಬೊಗ್ಗು ಕಾಣದಾದ. ಮುಂಬಯಿಗೆ ನಡೆದು ತೆರಳಿದ್ದಾನೆಂಬ ಅಸ್ಪಷ್ಟ ಸುದ್ದಿ ಪಸರಿಸಿತು. ಅದು ಎಲ್ಲಿದೆ? ಪ್ರಾಯಶಃ ಚತುರ್ದಶಭುವನಗಳ ಪೈಕಿ ಭೂಲೋಕದ ಹೊರತಾಗಿ ಬೇರೆಲ್ಲೋ ಇರಬೇಕೆಂದು ಜನ ಭಾವಿಸಿ ಆಶ್ಚರ್ಯಚಕಿತರಾದರು. ಕಾಲ ಸಂದಿತು. ಜನರ ನೆನಪಿನಿಂದ ಬೊಗ್ಗು ಕ್ರಮೇಣ ಮರೆಯಾದ?

ಇಲ್ಲ! ಒಂದು ಮುಂಜಾನೆ ಆತ ಮರಳಿದ, ಪುನರಾಯಾನ್ ಮಹಾಕಪಿಃ! ಗಡ್ಡ ಮೀಸೆ ಹುಲುಸಾಗಿ ಬೆಳೆದು ಅವನ ತಾರುಣ್ಯಕ್ಕೆ ಹೊಸ ಪರಿವೇಷ ಹೊದೆಸಿದ್ದುವು. ಹುಡುಗ ಹುಡುಗಿಯರು ಅವನನ್ನು ಸುತ್ತುವರಿದು ಮುಂಬಯಿ ಅನುಭವಗಳನ್ನು ಹೇಳಬೇಕೆಂದು ಒತ್ತಾಯ ಹೇರಿದರು. ಆಗ ಅವನು ಚಳಿಗಾಲದ ಮುಂಬಯಿ ವರ್ಣನೆ ತೊಡಗಿದ, “ಮಕ್ಕಳೇ! ಅಲ್ಲಿಯ ಚಳಿಗಾಲ ಮಂಗಳೂರಿನ ನಿಮಗೆಂದೂ ಅರ್ಥವಾಗದು. ಮುಂಜಾನೆಯ ಕೊರೆವ ಕುಳಿರಿನಲ್ಲಿ ಅಲ್ಲಿಯ ಆಗಸ ಪೂರ್ತಿ ಹಕ್ಕಿಗಳ ಶವಗಳು ತೇಲುತ್ತಿದ್ದುದು ಮಾಮೂಲು ದೃಶ್ಯ.”

“ಅದು ಹೇಗೆ ಸಾಧ್ಯ?”
“ಬೆಚ್ಚಗಿನ ಗೂಡಿನಿಂದ ಎಂದಿನಂತೆ ಹೊರಹಾರಿದ ಹಕ್ಕಿಗಳು ಅಲ್ಲಿಯ ಶೈತ್ಯದಿಂದ ಆ ಕ್ಷಣ ಮರಗಟ್ಟಿ ಆಕಾಶವಿಡೀ ಅವುಗಳ ಶವಗಳೇ ಶವಗಳು!”
ಆ ಹುಡುಗರ ಸಾಲಿನಲ್ಲಿ ಒಬ್ಬ ಗುರುತ್ವಾಕರ್ಷಣೆ ಬಗ್ಗೆ ಒಂದಿಷ್ಟು ತಿಳಿದುಕೊಂಡವನಿದ್ದ. ಈತ ಒಂದು ಸಂದೇಹವೆತ್ತಿದ, “ಹಾಗಾದರೆ ಗುರುತ್ವಾಕರ್ಷಣೆ? ಇದು ಎಲ್ಲವನ್ನೂ ನೆಲಕ್ಕೆ ಬೀಳಿಸಲೇಬೇಕಷ್ಟೆ?”
“Gravitation? Even that was frozen in the Bombay cold! (ಗುರುತ್ವಾಕರ್ಷಣೆ? ಅದು ಕೂಡ ಮುಂಬಯಿಯ ಶೈತ್ಯದಲ್ಲಿ ಹೆಪ್ಪುಗಟ್ಟಿಹೋಗಿತ್ತು!)”
ಇಡೀ ತರಗತಿಯಲ್ಲಿ ನಗುಹೊನಲು ಕಟ್ಟೆಯೊಡೆದು ಹರಿಯಿತು. ಆ ಕ್ಷಣದಲ್ಲಿ ಗುರುಗಳು ಭರತನಾಟ್ಯದಲ್ಲಿಯಂತೆ ಒಂದು ಆವರ್ತ ತಿರುಗಿ ವಿವರಿಸಿದರು, “ಮಕ್ಕಳೇ! ಈಗ ನಾವು ತಿಳಿಯೋಣ ಹವಾವೈಪರೀತ್ಯಗಳು ಗುರುತ್ವಾಕರ್ಷಣಬಲದ ಮೇಲೆ ಏನೂ ಪ್ರಭಾವ ಬೀರವು. ಬೊಗ್ಗು ಗಫ಼ಾ ಹೊಡೆದಿದ್ದನಷ್ಟೆ, ಹೆಂಗಳೆಯರ ಸಾಮ್ರಾಜ್ಯದಲ್ಲಿ ಸುಖಾಸೀನನಾಗಿದ್ದ ಉತ್ತರಕುಮಾರನಂತೆ.”

ಹೀಗೆ ನಾವು ಗಣಿತ ಮತ್ತು ಭೌತವಿಜ್ಞಾನಗಳನ್ನು ಒಂದು ಪತ್ತೇದಾರಿ ಕಾದಂಬರಿಯ ರೀತಿ ಕಲಿತು ಪ್ರತ್ಯೇಕವಾಗಿ ಜನಪ್ರಿಯ ಪುಸ್ತಗಳನ್ನು ಓದಿ ವಿಷಯ ಪ್ರಾವೀಣ್ಯ ಮತ್ತು ನಿರೂಪಣ ಕೌಶಲ ಗಳಿಸಿದೆವು. ಮುಂದೊಂದು ದಿನ ನಾನೇ ಒಬ್ಬ ಗಣಿತೋಪನ್ಯಾಸಕನಾದಾಗ (೧೯೪೭) Evolution of Physics by Einstein and Infeld ಎಂಬ ಅದ್ಭುತ ಗ್ರಂಥ ಓದಿದೆ. ಅದರ ಆರಂಭದ ಪರಿಚ್ಛೇದವಿದು: “ಕಲ್ಪನಾಲೋಕದಲ್ಲೊಂದು ನಿಗೂಢ ಕಥೆ ಅಡಗಿದೆ. ಇದು ನಮಗೆ ಅಗತ್ಯವಾಗುವ ಎಲ್ಲ ಸುಳುಹುಗಳನ್ನೂ ಒದಗಿಸಿ ಸದ್ಯದ ಪರಿಸ್ಥಿತಿ ಕುರಿತಂತೆ ನಮ್ಮದೇ ಸಿದ್ಧಾಂತ ರೂಪಿಸುವಂತೆ ನಮ್ಮನ್ನು ಒತ್ತಾಯಿಸುತ್ತದೆ. ಈ ಕಥೆಯ ವಸ್ತುವನ್ನು ನಾವು ಎಚ್ಚರಿಕೆಯಿಂದ ಅನುಸರಿಸಿದ್ದಾದರೆ ಲೇಖಕ ಪುಸ್ತಕದ ಕೊನೆಯಲ್ಲಿ ಇದರ ಪೂರ್ಣ ಪರಿಹಾರವನ್ನು ಅನಾವರಣಿಸುವ ಅದೇ ಮೊದಲು ನಾವೇ ಅದನ್ನು ಕಂಡುಕೊಂಡಿರುತ್ತೇವೆ. ಇನ್ನು ಈ ಪರಿಹಾರವಾದರೋ ಅಗ್ಗದ ನಿಗೂಢಗಳಿಗೊದಗುವ ಪರಿಹಾರಗಳಂತಲ್ಲ. ಇದು ನಮ್ಮನ್ನು ಹತಾಶೆಗೊಳಿಸದು, ಅಲ್ಲದೇ ಇದನ್ನು ನಾವು ಯಾವ ಕ್ಷಣದಲ್ಲಿ ನಿರೀಕ್ಷಿಸುತ್ತೇವೋ ಆ ಕ್ಷಣದಲ್ಲೇ ಇದು ಪ್ರತ್ಯಕ್ಷವೂ ಆಗುವುದು. ಇಂಥ ಪುಸ್ತಕದ ಒಬ್ಬ ವಾಚಕನನ್ನು ನಾವು ನಿಸರ್ಗ ಗ್ರಂಥದ ನಿಗೂಢಗಳಿಗೆ ಪರಿಹಾರ ಶೋಧಿಸಲು ತಮ್ಮ ಉತ್ತರೋತ್ತರ ಪೀಳಿಗೆಗಳಲ್ಲಿ ಶ್ರಮಿಸುತ್ತಿರುವ ವಿಜ್ಞಾನಿಗಳ ಜೊತೆ ಹೋಲಿಸಬಹುದೇ?”

ಆದ್ದರಿಂದ ನಿಸರ್ಗಾನ್ವೇಷಣೆಯೇ ವಿಜ್ಞಾನಕಾರ್ಯದ ಪ್ರೇರಕಬಲ ಮತ್ತು ಪೋಷಕ ಇಂಧನ. ಈ ತೆರನಾಗಿ ಮತ್ತು ಇದೇ ಧಾಟಿಯಲ್ಲಿ ನಮ್ಮ ಗುರುಗಳು (ಗಣಿತಕ್ಕೆ ಕೆ.ಎ.ಕೃಷ್ಣಮೂರ್ತಿ ಹಾಗೂ ಬಿ.ಭುಜಂಗರಾವ್, ಭೌತವಿಜ್ಞಾನಕ್ಕೆ ಎಸ್.ನಾರಾಯಣ ಹೊಳ್ಳ) ನಮ್ಮನ್ನು “ಸರಿದಾರಿ ತಪ್ಪದಂತೆ ಕೈಹಿಡಿದು ನಡೆ”ಸಿದರು. ಇನ್ನು ಕನ್ನಡ ತರಗತಿಗಳಲ್ಲಿ ದೊರೆತ ರಸದೌತಣದ ರುಚಿ ಬೇರೆಯೇ: ವಿಜ್ಞಾನದ ಸುಭದ್ರ ಬುನಾದಿ ಮೇಲೆ ರಚಿಸಿದ ಸಾಹಿತ್ಯ ಸೌಧವದು. ಸಂಶೋಧನೆ, ಗ್ರಂಥರಚನೆ, ಬೋಧನೆ, ತಪಾಸಣೆ ಮತ್ತು ನಿವೇದನೆಗಳ ಮಧುರ ಪಂಚಾಮೃತ ಪಾನಾನುಭವ. ಮುಳಿಯ ತಿಮ್ಮಪ್ಪಯ್ಯನವರ ಕನ್ನಡ ಪಾಠಗಳು ನಮಗೆ ಹಳೆ, ನಡು ಮತ್ತು ಹೊಸ ಕನ್ನಡಗಳ ಸಮಗ್ರ ಪರಿಚಯ ಒದಗಿಸಿದುದರ ಜೊತೆಗೆ ಸ್ವತಃ ನಾವೇ ಆ ರಾಜಮಾರ್ಗದಲ್ಲಿ ಮುನ್ನಡೆಯಲು ದಾರಿದೀವಿಗೆಯೂ ಆದುವು.

ಬೆನ್ನಿಗೆ ಬಿತ್ತು ಲಾಠೀ ಪೆಟ್ಟು
ಅಧ್ಯಾಯ ಹದಿಮೂರು

೧೯೪೨ ಆಗಸ್ಟ್ ಆರಂಭ. ರಾಷ್ಟ್ರದ ರಾಜಕೀಯ ತಾಪ ಗಳಿಗೆ ಗಳಿಗೆಗೆ ಏರುತ್ತಿತ್ತು. ಒಂದೆಡೆ ಜಪಾನಿನಿಂದ ಆಕ್ರಮಣ ಭೀತಿ. ಇನ್ನೊಂದೆಡೆ ಸ್ವಾತಂತ್ರ್ಯ ಸಮರದ ಉಲ್ಬಣತೆ. ಯೂರೊಪ್ ಮತ್ತು ರಶ್ಯಾ ದೇಶಗಳಿಂದ ಬರುತ್ತಿದ್ದ ಸಮರವಾರ್ತೆಗಳಂತೂ ಪ್ರಪಂಚದ ಅಂತ್ಯವನ್ನೇ ಸಾರುವಂತಿದ್ದುವು. ಸಾಂದ್ರ ತಮಸ್ಸು ಸುತ್ತಲಿಂದಲೂ ಕವಿಯುತ್ತಿದ್ದಂಥ ಅವ್ಯಕ್ತ ಮೌನ. ಅಂದು ನಮ್ಮ ಸುದ್ದಿ-ನೀರಡಕೆಗೆ ಶಮನ ಸಿಕ್ಕುತ್ತಿದ್ದುದು ಕೇವಲ ಎರಡು ವಿಶ್ವಾಸಾರ್ಹ ಮೂಲಗಳಿಂದ: ಮದ್ರಾಸಿನ The Hindu ದೈನಿಕ ಮತ್ತು ಸೆಂಟ್ರಲ್ ಮೈದಾನದ ನಡುವಿನಲ್ಲಿ ಪುರಸಭೆ ಒದಗಿಸಿದ್ದ ರೇಡಿಯೋ ಗೋಪುರ. ಪತ್ರಿಕೆ ಖರೀದಿಸಿ ಓದಲು ಹಣವಿಲ್ಲ, ಸ್ವಂತ ರೇಡಿಯೋವಂತೂ ಗಗನಕುಸುಮ. ಹೀಗಾಗಿ ಪ್ರತಿ ಸಂಜೆ ೬ ಗಂಟೆಗೆ ಮೊದಲೇ ನಾವು ನೂರಾರು ಮಂದಿ ವಾರ್ತಾದಾಹಿಗಳು ಗೋಪುರದ ಸುತ್ತ ಹಾಜರು.

ಆಗಸ್ಟ್ ೮, ೧೯೪೨. ಕಾಂಗ್ರೆಸ್ ಪಕ್ಷ Quit India “ಭಾರತದಿಂದ ತೊಲಗಿ” ಠರಾವನ್ನು ಅಂಗೀಕರಿಸಿತು ಮತ್ತು ಸ್ವಾತಂತ್ರ್ಯ ಸಮರಕ್ಕೆ ಹೊಸ ಆಯಾಮವಿತ್ತಿತು. Do or Die “ಮಾಡು ಇಲ್ಲವೇ ಮಡಿ” ಎಂಬ ಮಂತ್ರ ದೇಶಾದ್ಯಂತ ಅನುರಣಿಸಿತು. ಹುಣ್ಣಮೆ ಇರುಳಿನ ಕಡಲಿನಂತೆ ಜನಕ್ಷೆಭೆ ನಾಡನ್ನು ಆಕ್ರಮಿಸಿತು. ಆಳುತ್ತಿದ್ದ ಬ್ರಿಟಿಷ್ ಸರ್ಕಾರ ಒಡನೆ ರಾಷ್ಟ್ರೀಯ ಧುರೀಣರನ್ನು ಕೈದುಮಾಡಿ ಸೆರೆಯಲ್ಲಿಟ್ಟಿತು.

ಆಗಸ್ಟ್ ೯. ತಂತಾನೇ ಭುಗಿಲೆದ್ದ ಸಾರ್ವಜನಿಕ ಮುಷ್ಕರ (ಹರತಾಳ) ರಾಷ್ಟ್ರರಥದ ಚಲನೆಯನ್ನು ಹಠಾತ್ತನೆ ಸ್ಥಗಿತಗೊಳಿಸಿದಂಥ ಪರಿಸ್ಥಿತಿ. ಮಂಗಳೂರಿನ ಮೂಲೆ ಮೂಲೆಗಳಿಂದ ಜನರೆಲ್ಲ ವ್ಯವಸ್ಥಿತವಾಗಿ ಸಾಲುಗಳಲ್ಲಿ ನಡೆದು ಬಂದು ಮಧ್ಯಾಹ್ನದ ಹೊತ್ತಿಗೆ ಮೈದಾನದಲ್ಲಿ ಜಮಾಯಿಸಿದರು — ಬೆಟ್ಟದ ವಿವಿಧ ಮಗ್ಗುಲುಗಳಿಂದ ಜಿನುಗುವ ನೀರ ಪಸೆಗಳು ಕಿರುತೊರೆಗಳಾಗಿ, ಮುಂದೆ ಹೊಳೆಗಳಾಗಿ ಕ್ರಮೇಣ ಮಹಾನದಿಯಾಗಿ ಸಮುದ್ರದಲ್ಲಿ ಒಂದಾಗುವಂತೆ. ಪ್ರಾಯಶಃ ಒಂದು ಲಕ್ಷದಷ್ಟು ಮಂದಿ ಅಲ್ಲಿ ಸೇರಿರಬಹುದು. ಮಡಿಕೇರಿಯಲ್ಲಿ ಕೂಡ ಇಂಥ ಮೆರವಣಿಗೆ ಮತ್ತು ಜನಸೇರುವೆಗಳನ್ನು ನೋಡಿದ್ದೆ. ಆದರೆ ಮಂಗಳೂರಿನ ಈ ದೃಶ್ಯ ಅಭೂತಪೂರ್ವ. ಅದು ಕೆರೆ, ಇದು ಸಮುದ್ರ.

ಇಷ್ಟಾದರೂ ಆ ಜನಜಂಗುಳಿಯಲ್ಲಿಯ ಸಾಮೂಹಿಕ ಶಿಸ್ತು, ಅವರಲ್ಲಿ ಸ್ವಯಂಪ್ರೇರಣೆಯಿಂದ ಪ್ರಕಟವಾಗುತ್ತಿದ್ದ ಸಭ್ಯತೆ ಅನನ್ಯವಾಗಿದ್ದವು. ಏನೋ ಗಹನವಾದುದರ ಆಗಮನವನ್ನು ನಿರೀಕ್ಷಿಸುವಂತೆ ನಾವೆಲ್ಲ ವೇದಿಕೆಯ ಸುತ್ತ ನೆಲದ ಮೇಲೆ ವರ್ತುಳೀಯವಾಗಿ ಕುಳಿತೆವು. ಚಿಕ್ಕವರಾಗಿದ್ದ ನನ್ನಂಥವರಿಗೆ ಮುಂದಿನ ಸಾಲು. ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರು ತ್ರಿವರ್ಣ ಧ್ವಜವನ್ನು ಹಾರಿಸಿದರು, “ಜಂಡಾವೂಂಚಾ ರಹೇಹಮಾರಾ,” “ವಂದೇ ಮಾತರಂ” ಮುಂತಾದ ರಾಷ್ಟ್ರಗೀತೆಗಳು ಮೊಳಗಿದುವು, ಭಾಷಣಗಳು ಪುಂಖಾನುಪುಂಖವಾಗಿ ಪ್ರವಹಿಸಿದುವು.

ಸಾರವಿಷ್ಟು, “ನಾವು ಮೂವತ್ತಮೂರು ಕೋಟಿ ಭಾರತೀಯರು ಒಮ್ಮೆಗೇ ಒಂದೊಂದು ಉದ್ಧರಣೆ ನೀರನ್ನು ಬ್ರಿಟನ್ ಮೇಲೆ ಪ್ರೋಕ್ಷಿಸಿದರೂ ಸಾಕು, ಆ ದೇಶವೇ ಕೊಚ್ಚಿ ಹೋದೀತು! ಇಂಥ ಅನಾಮಿಕ ಅನಾಗರಿಕ ಮತ್ತು ಅಲ್ಪ ರಾಜ್ಯಕ್ಕೆ ಭಾರತದಂಥ ವಿಶಾಲ ಮತ್ತು ಪ್ರಾಚೀನ ರಾಷ್ಟ್ರ ಏಕೆ ಅಡಿಯಾಳಾಗಿರಬೇಕು?” ಸಭೆ ತಲೆದೂಗಿತು, ಚಪ್ಪಾಳೆ ತಟ್ಟಿತು, ಜಯಘೋಷ ಗರ್ಜಿಸಿತು. ಒಂದು ಬಗೆಯ ಸಾಮೂಹಿಕ ಕ್ರಿಯಾಶಕ್ತಿ ನಮ್ಮನ್ನೆಲ್ಲ ವಶೀಕರಿಸಿಕೊಂಡಿತು. ಹಸನಬ್ಬ ಒಡೆಯರ್, ಅಧಿಕಾರಿ, ನಾರಾಯಣ ಕಿಲ್ಲೆ ಮೊದಲಾದ ನಾಯಕರ ಉಪನ್ಯಾಸಗಳಲ್ಲಿ ನಾವು ತೇಲುತ್ತಿದ್ದಾಗ, ನಾಳೆ ಉದಯಿಸಲಿದ್ದ ಸ್ವಾತಂತ್ರ್ಯ ರವಿಯನ್ನು ನಿರೀಕ್ಷಿಸುತ್ತಿದ್ದಾಗ ಮತ್ತು ದಾಸ್ಯಮುಕ್ತ ಭಾರತದ ರಮ್ಯ ಸ್ವಪ್ನವನ್ನು ಕಾಣುತ್ತಿದ್ದಾಗ ಮೈದಾನದ ತೀರ ಹೊರ ಅಂಚಿನಲ್ಲಿ, ಜನಸ್ತೋಮದಿಂದ ಸಾಕಷ್ಟು ದೂರದಲ್ಲಿ ಕಾರ್ಮೋಡ ಸಂಚಯಿಸುತ್ತಿದ್ದುದು ಕಂಡಿತು: ಖಾಕಿ ಸಮವಸ್ತ್ರಧಾರೀ ಲಾಠೀಸಜ್ಜಿತ ಪೊಲೀಸರ ದಂಡು.

ಅಷ್ಟರಲ್ಲೇ ಅವರು ನಮ್ಮ ಸುತ್ತಲೂ ವ್ಯವಸ್ಥಿತವಾಗಿ ವಿತರಣೆಗೊಂಡು ಇದ್ದಕ್ಕಿದ್ದಂತೆ ಹುಚ್ಚಾಬಟ್ಟೆ ಲಾಠೀಹೊಡೆತ ಶುರುಮಾಡಿಯೇಬಿಟ್ಟರು. ವೇದಿಕೆಯತ್ತ ಮಿಂಚಿನ ವೇಗದಲ್ಲಿ ಧಾವಿಸಿ ಆ ಅಹಿಂಸಾವಾದಿ ನಾಯಕರಿಗೆ ಮೈಮೋರೆ ನೋಡದೆ ಬಡಿದರು, ಬಿದ್ದವರನ್ನು ಪುಳಿಮೂಟೆಗಳಂತೆ ಹೊತ್ತುಕೊಂಡು ಅಥವಾ ದರದರನೆ ಎಳೆದುಕೊಂಡು ಹೋಗಿ ಪೊಲೀಸ್ ವ್ಯಾನುಗಳಿಗೆ ತುಂಬಿದರು — ಕೋಳಿಗಳನ್ನು ತುರುಕುವಂತೆ.

ಇಂಥ ಕ್ರೂರ ಘಟನೆಗಳ ಬಗ್ಗೆ ಮಡಿಕೇರಿಯ ಹುಂಬನಾದ ನನಗೆ ಏನೂ ಕಲ್ಪನೆ ಇರಲಿಲ್ಲ. ಈ ಆಘಾತದಿಂದ ದಿಙ್ಮೂಢನಾಗಿದ್ದಾಗ ಎಲ್ಲರೂ ಅರಚುತ್ತಿದ್ದ “ಓಡು, ಓಡು, ಪೆಟ್ಟು ತಪ್ಪಿಸಿಕೊ” ಎಂಬ ಕಿರುಚಾಟ ಮರಣಭಯ ಹುಟ್ಟಿಸಿತು. ಮುಂದಿನ ಸಾಲಿನಲ್ಲಿ ಸುಖಾಸೀನರಾಗಿದ್ದ ನಾವು ಏಳಲು ಪ್ರಯತ್ನಿಸುತ್ತಿದ್ದಾಗಲೇ ಧಡಿಯರ ಒಂದು ಗುಂಪು ನಮ್ಮನ್ನು ಜಿಗಿದು ಹಾರುತ್ತ ಕುಪ್ಪಳಿಸುತ್ತ ಎತ್ತಲೋ ಓಡಿತು. ನಾವು ಎಲ್ಲರೂ ಅಂಗಾತ (ಎದೆ ಮೇಲಾಗಿ) ಅಥವಾ ಬೋರಲು (ಬೆನ್ನು ಮೇಲಾಗಿ) ಬಿದ್ದೆವು. ಅಷ್ಟರಲ್ಲೇ ನನ್ನ ಬೆನ್ನ ಮೇಲೆ ಹೆಗ್ಗಣಕ್ಕೆ ಬಡಿಯುವಂತೆ ಲಾಠೀ ಪೆಟ್ಟುಗಳ ಕುಟ್ಟಣೆ ಬಿತ್ತು. ಯೋಚನೆ ಮಾಡುವ ಮೊದಲೇ ಇದು ನಡೆದುಹೋಗಿತ್ತು. ಎದ್ದೆ, ಮೈದಾನದಂಚಿನತ್ತ ಜಿಗಿದೋಡಿದೆ, ಅಗಲವೂ ಆಳವೂ ಆಗಿದ್ದ ಚರಂಡಿ ಎದುರಾಯಿತು. ಹನುಮಂತನನ್ನು ಸ್ಮರಿಸಿ ನೆಗೆದೇಬಿಟ್ಟೆ. ಅದೃಷ್ಟ, ಕೊಳಚೆ ನೀರಿಗೆ ಕೆಡೆಯಲಿಲ್ಲ, ಎದುರು ಅಂಚಿನ ಮೇಲೆ ಬಿದ್ದೆ. ಅಲ್ಲೂ ಪೊಲೀಸರ ದಾಳಿ ಸಾಗಿತ್ತು. ಹೇಗೋ ಸಂದಿಗೊಂದಿಗಳಲ್ಲಿ ಅಡ್ಡಹಾಯ್ದು ಹಾಸ್ಟೆಲ್ ಕೊಠಡಿ ತಲಪಿದೆ.

ರಾತ್ರಿಯಾಗಿತ್ತು. ಮಂಗಳೂರು ಅಳುತ್ತಿತ್ತು. ಹಸಿವು ತೀವ್ರವಾಗಿತ್ತು. ಬೆನ್ನಿನಲ್ಲಿಯ ಬಾಸುಂಡೆಗಳು ಬೆಂಕಿ ಉಗುಳುತ್ತಿದ್ದುವು. ಅಂಗಡಿ ಹೊಟೇಲ್ ಎಲ್ಲ ಬಂದ್. ಹಾಸ್ಟೆಲ್ಲಿಗೂ ಪೊಲೀಸರು ಬಂದು ಕೋಣೆ ಕೋಣೆ ತಪಾಸಣೆ ಮಾಡಿ ಇದ್ದವರನ್ನು ಸದೆಬಡಿದು ಕೈದುಮಾಡಿ ವ್ಯಾನುಗಳಿಗೆ ಒಯ್ಯುತ್ತಿದ್ದರು. ಇನ್ನು ಇಲ್ಲಿದ್ದರೆ ಉಳಿಗಾಲವಿಲ್ಲ. ಅಕ್ಕಮಹಾದೇವಿಯ ವಚನ ನೆನಪಿಗೆ ಬಂತು, “ಹಸಿವಾದರೆ ಊರೊಳಗೆ ಭಿಕ್ಷಾನ್ನಂಗಳುಂಟು, ತೃಷೆಯಾದರೆ ಕೆರೆ ಭಾವಿ ಹಳ್ಳಂಗಳುಂಟು, ಶಯನಕ್ಕೆ ಹಾಳು ದೇಗುಲವುಂಟು, ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು.” ಮನದಲ್ಲೇ ಭಾರತ್‌ಮಾತಾಕೀ ಜೈ ಎನ್ನುತ್ತ ಆ ಕರಾಳ ಕತ್ತಲಲ್ಲಿ ಕರಗಿಹೋದೆ — ಸೋದರಮಾವನ ಮರಿಕೆ ಮನೆಯತ್ತ.

ಮಂಗಳೂರಿನಿಂದ ಮರಿಕೆಗೆ ಬಸ್ ದಾರಿ ದೂರ ೩೫ ಮೈಲುಗಳು. ಆದರೆ ಆ ದಿನಗಳಲ್ಲಿ ಯಾವ ವಾಹನವೂ ಓಡುತ್ತಿರಲಿಲ್ಲ. ರಸ್ತೆ ಮೇಲೆ ನಡೆಯುವುದೇ ಅಪಾಯಕ್ಕೆ ಆಹ್ವಾನವಾಗಿತ್ತು. ಕಾಡು, ಗುಡ್ಡೆ, ಗದ್ದೆ, ಹೊಳೆ ಮಾರ್ಗವಾಗಿ ರಾತ್ರಿಯಿಡೀ ನಡೆದೆ, ಹಾದಿಯಲ್ಲಿ ಸಿಕ್ಕಿದ ಸೊಪ್ಪು ಸದೆ ತಿಂದೆ, ಗುಡಿಸಲುಗಳಿಗೆ ಹೋಗಿ ನೀರು ಬೇಡಿ ಕುಡಿದೆ, ಅಂತೂ ಇಂತೂ ಮರುಮುಂಜಾನೆ ಮರಿಕೆಯ ತಣ್ಪನ್ನು, ಮಿಗಿಲಾಗಿ ಪ್ರೀತಿಯ ಆರೈಕೆಯ ತೊಟ್ಟಿಲನ್ನು, ತಲಪಿದೆ. ಅಜ್ಜಿ ನನ್ನ ಬೆನ್ನಿಗೆ ಹಸುರು ಲೇಪ ಹಚ್ಚಿ ನೋವನ್ನು ಶಮನಿಸಿದರು. ಮಾವನ ಮನೆಯಲ್ಲಿ ಒದಗಿದ ರಕ್ಷಣೆ ಮತ್ತು ಉಪಚಾರಗಳು ಕುಸಿದಿದ್ದ ನನ್ನ ಧೃತಿಗೆ ಸಂಜೀವಿನೀಸ್ಪರ್ಶ ನೀಡಿದುವು. ಸುಮಾರು ಒಂದು ತಿಂಗಳನಂತರ ಕಾಲೇಜ್ ಪ್ರಾರಂಭವಾಯಿತು. ಆಗ ತಿಳಿದುಬಂದ ಸಂಗತಿ ಆಘಾತಕಾರಿಯಾಗಿತ್ತು: ನನ್ನ ತರಗತಿಯಲ್ಲಿದ್ದ ಅಂದಾಜು ೨೫ ಮಂದಿಯನ್ನು ಪೊಲೀಸರು ಸೆರೆಮನೆಗೆ ದೂಡಿದ್ದರಂತೆ, ಇವರ ಪೈಕಿ ಹಾಸ್ಟೆಲ್ಲಿಗರೂ ಸೇರಿದ್ದರು. ಆ ವರ್ಷ ಅವರ ಶಿಕ್ಷಣ ಕೈದಾಯಿತು. ಮುಂದೇನಾಯಿತೋ ಬಲ್ಲವರಾರು?

ಮಂಗಳೂರಿನ ಗೆಳೆಯರು
ಅಧ್ಯಾಯ ಹದಿನಾಲ್ಕು

ಇಂಗ್ಲಿಷ್ ತರಗತಿಯಲ್ಲಿ ಎಲ್ಲ ಸಂಯೋಜನೆಗಳ ವಿದ್ಯಾರ್ಥಿಗಳೂ ಜಮಾಯಿಸುತ್ತಿದ್ದೆವು — ಅಂದಾಜು ೨೦೦ ಮಂದಿ. ಧ್ವನಿವರ್ಧಕದ ನೆರವಿಲ್ಲದೇ ಪಾದ್ರಿ ಗುರುಗಳು ಉಪನ್ಯಾಸವೀಯುತ್ತಿದ್ದರು. ವಿಷಯ ಪ್ರಾವೀಣ್ಯ, ನಿರೂಪಣೋಲ್ಲಾಸ ಮತ್ತು ಕಂಠಸೌಖ್ಯ ಅವರ ಆಸ್ತಿ. ನಮ್ಮದೋ? ಜ್ಞಾನದಾಹ, ಶ್ರವಣ ಸೂಕ್ಷ್ಮತೆ ಮತ್ತು ಮೌನ ಏಕಾಗ್ರತೆ. ಒಮ್ಮೆ ನಮ್ಮ ಈ ಗುರುಗಳು ನಮಗೊಂದು ವಿಷಯ ಸೂಚಿಸಿ ಅದರ ಬಗ್ಗೆ ಪ್ರಬಂಧ ಬರೆದು ತರಬೇಕೆಂದು ತಾಕೀತು ಮಾಡಿದರು. ಯಥಾವೇಳೆ ನಮ್ಮ ಬರೆಹಗಳು ಅವರ ಕೈಸೇರಿದುವು.

ಸುಮಾರು ೧೦ ದಿನಗಳು ಸಂದುವು. ಅದೇ ತರಗತಿ. ಗುರುಗಳ ಹಿಂದೆ ದೂತ ನಮ್ಮ ಬರೆಹಗಳ ಇಡೀ ಕಟ್ಟನ್ನು ತಂದಿಟ್ಟ. ಸಹಜವಾಗಿ ನಮಗೆಲ್ಲ ಆತಂಕ, ಆವೇಗ. ಎಲ್ಲಕ್ಕೂ ಮೇಲಿದ್ದ ಪ್ರಬಂಧವನ್ನು ಅವರು ಕೈಗೆತ್ತಿಕೊಂಡು ಗಟ್ಟಿಯಾಗಿ ಓದಿದರು ಮಾತ್ರವಲ್ಲ, ಮೆಚ್ಚಿ ವಿವರಿಸಿದರು ಕೂಡ, “ಈ ಸುಂದರ ಲೇಖನ ಬರೆದಾತ ಇದೇ ತರಗತಿಯ ಒಬ್ಬ ಪ್ರಚಂಡ ಪ್ರತಿಭೆ ಎಂಬ ಸಂಗತಿ ನನಗೆ ಅಭಿಮಾನವನ್ನೂ ಆಶ್ಚರ್ಯವನ್ನೂ ತರುತ್ತದೆ. ಆತನ ಹೆಸರು ಬಾಗಲೋಡಿ ದೇವರಾವ್. Deva Rao! Will you please stand up?”

ಯಾರೀತ? ಕತ್ತು ಉದ್ದ ಎತ್ತಿ ತರಗತಿ ಸುತ್ತ ಸಂಪಾತಿ ದೃಷ್ಟಿ ಹರಿಸಿದ್ದಾಯಿತು. ಎಲ್ಲರೂ ಷೋಡಶರೇ, ದೇವದೂತರೇ! ಇವರ ನಡುವೆ “ದೇವ ಬಂದ, ನಮ್ಮ ಸ್ವಾಮಿ ಬಂದನೋ, ದೇವರ ದೇವ ಶಿಖಾಮಣಿ ಬಂದನೋ” (ಪುರಂದರದಾಸ)! ಅವನನ್ನೆಲ್ಲಿ ಕಾಣೋಣ? ಮುಂದಿನ ಸಾಲಿನಲ್ಲಿ ಒಬ್ಬ ಎದ್ದಂತೆ ಭಾಸವಾಯಿತು. ಏಕೆಂದರೆ ಆತ ಕುಳಿತರೂ ನಿಂತರೂ ಒಂದೇ ಎತ್ತರ — ವಾಮನರೂಪ. ಬೆಳುಕರಿಸಿದ ಮತ್ತು ಕುರುಚಲು ಗಡ್ಡ ಬೆಳೆದ ಮುಖ, ಕೆದರಿದ ಕೂದಲು, ಖಾದಿ ಅಡ್ಡ ಬೈರಾಸು, ಮೇಲೊಂದು ಕುಡ್ತ.

ಗುರುಗಳ ಸಹಜ ಪ್ರಶ್ನೆ (ವಿಸ್ಮಯಮಿಶ್ರಿತವಾಗಿ), “Deva Rao! Is it your own?” “Of course! What doubt is there, Father?” ಈ ಆತ್ಮವಿಶ್ವಾಸದ ಖಚಿತವಾಣಿ ಮತ್ತು ತನ್ನ ಆರ್ಜವವನ್ನು ಸಂಶಯಿಸಿದ್ದಕ್ಕಾಗಿ ತಂತಾನೇ ಪುಟಿದೆದ್ದ ಆತ್ಮಪ್ರತ್ಯಯದ ಗುಡುಗು ಇಂದಿಗೂ (೨೦೦೬) ನನ್ನ ನೆನಪಿನಲ್ಲಿ ಅನುರಣಿಸುತ್ತಿವೆ. ನಮ್ಮ ಪ್ರಬಂಧಗಳೆಲ್ಲವನ್ನೂ ಹಿಂತಿರುಗಿಸಿದರು. ಶೇಕಡಾ ೩೫ಕ್ಕಿಂತ ಕಡಿಮೆ ಅಂಕ ಪಡೆದವರ ಹಿರಿದಂಡಿನಲ್ಲಿ ನಾನಿರಲಿಲ್ಲ ಎಂಬುದೊಂದೇ ಸಮಾಧಾನ. ಅಳುಕು ಕೀಳರಿಮೆಗಳ ಕಾರಣವಾಗಿ ಆ ಎರಡು ವರ್ಷವೂ (೧೯೪೨-೪೪) ದೇವರಾಯರನ್ನು ನಾನು ಮಾತಾಡಿಸಲಿಲ್ಲ. ಅವರೋ? ಸದಾ ಏಕಾಕಿ ಮತ್ತು ಏಕಾಂಗಿ (lonely – ಏಕಾಕಿ, ಭೌತವಾಗಿ ಒಂಟಿ, alone – ಏಕಾಂಗಿ, ಅಂತರ್ಮುಖಿ).

ಗಣಿತ ತರಗತಿಯಲ್ಲಿ ಪಿ.ಸೇತುಮಾಧವರಾಯರೂ ನಾನೂ ಹಿಂದಿನ ಸಾಲಿನಲ್ಲಿ ಒಟ್ಟಿಗೆ ಕುಳಿತಿರುತ್ತಿದ್ದೆವು — back-benchers. ಇದು ಕೇವಲ ಆಕಸ್ಮಿಕ. ರಾಯರು ತುಸು ತಡವಾಗಿ ಕಾಲೇಜ್ ಸೇರಿದವರು. ಇನ್ನು ಸಾಹಿತ್ಯ ಮತ್ತು ಜನಜೀವನ ಕುರಿತಂತೆ ಪ್ರಚಂಡ ಬುದ್ಧಿವಂತರು. ಇಂಗ್ಲಿಷಿನಲ್ಲಿ ನಿಷ್ಣಾತರು. ಮಾತುಭಾರಿ, ಸ್ನೇಹಶೀಲ. ಹೀಗಾಗಿ ನನ್ನ ಸಹಜ ಕೀಳರಿಮೆಗೆ ಇವರಲ್ಲಿ ಒಳ್ಳೆಯ ಅವಲಂಬನ ದೊರೆಯಿತು. ಕ್ರಮೇಣ ಈ ಸಲಿಗೆ ಮತ್ತು ಬಳಕೆ ಗಾಢ ಮೈತ್ರಿಯಾಗಿ ನನ್ನ ಆಸಕ್ತಿ ಮತ್ತು ಜೀವನ ದೃಷ್ಟಿಯನ್ನು ಪ್ರಭಾವಿಸಿದುವು. ಆದರೆ ಸ್ಥೂಲಕಾಯರಾಗಿದ್ದ ಇವರೆಂದೂ ನನ್ನ ಜೊತೆ ಸಂಜೆಯ ವಾಯುವಿಹಾರಕ್ಕೆ ಬಂದುದೇ ಇಲ್ಲ.

ಮಡಿಕೇರಿದಿನಗಳಿಂದಲೇ ನನ್ನ ಸಹಪಾಠಿಯಾಗಿದ್ದ ಆರ್.ಎಚ್.ನಾರಾಯಣಶೆಣೈ (ಈತ ನಮ್ಮ ಗುರು ಆರ್.ಹರಿಶೆಣೈಗಳ ಸುಪುತ್ರ) ಭೌತವಿಜ್ಞಾನ ತರಗತಿಯಲ್ಲಿ ನನ್ನೊಟ್ಟಿಗೆ ಕುಳಿತಿರುತ್ತಿದ್ದ. ಸಂಜೆ ವೇಳೆ ಮಾರುತಿ ವ್ಯಾಯಾಮ ಶಾಲೆಗೆ ಹೋಗಿ ಸಾಮೂ ಕಲಿತು ಗಟ್ಟಿ ಕುಸ್ತಿಪಟುವಾದ. ಇಂಥ ಯಾವ ‘ದುಸ್ಸಾಹಸ’ಕ್ಕೂ ನಾನು ಎಂದೂ ದುಮುಕಲಿಲ್ಲ. ಕಾರಣ? ಆಹಾರದ ಸಮಸ್ಯೆ ನನ್ನನ್ನು ತೀವ್ರವಾಗಿ ಬಾಧಿಸುತ್ತಿತ್ತು. ಆರೋಗ್ಯ ಕೆಟ್ಟಿತು. ಮೈತುಂಬ ಕಜ್ಜಿ, ಕೆರೆತ. ವೈದ್ಯರ ಬಳಿ ಹೋದೆ.

“ಏನಾದರೂ ಕೆಟ್ಟ ಕೆಲಸ ಮಾಡಿರುವೆಯಾ? ಗುಹ್ಯ ರೋಗದ ಲಕ್ಷಣವಿದು” ಎಂದರವರು. ಹೆಣ್ಣಿನ ಕಡೆ ನೋಡಲು ಕೂಡ ಅಂಜಿಕೆ ನನಗೆ. ಗುಹ್ಯರೋಗವೆಂದರೇನೆಂದೇ ಗೊತ್ತಿರಲಿಲ್ಲ. ಕಡು ಬ್ರಹ್ಮಚರ್ಯವೇ ವ್ರತವೆಂದು ಅಂಗೀಕರಿಸಿ ಮನಸ್ಸನ್ನು ಸದಾ ಹತೋಟಿಯಲ್ಲಿಡಲು ಪ್ರಯತ್ನಶೀಲನಾಗಿದ್ದೆ. ಉಪನಿಷತ್ತು ಮತ್ತು ಭಗವದ್ಗೀತೆ ನಿತ್ಯ ಪಾರಾಯಣ ಗ್ರಂಥಗಳಾಗಿದ್ದುವು. ಇಂಥ ಋಷ್ಯಶೃಂಗನಿಗೆ ಗುಹ್ಯ ರೋಗ? ಮಡಿಕೇರಿಗೆ ಹೋದೆ, ಚಿಕ್ಕಪ್ಪನವರ ಜೊತೆ ಮನಬಿಚ್ಚಿ ಮಾತಾಡಿದೆ, ಅವರಿತ್ತ ಹೋಮಿಯೋಪತಿ ಮದ್ದು ಸೇವಿಸಿದೆ, ನಳನಿಗಂಟಿದ್ದ ಕಾರ್ಕೋಟಕದಂಶನದಿಂದ ಮುಕ್ತನಾದೆ.

ಲೈಂಗಿಕ ವಿಷಯಗಳು ಗೂಢಾದ್ಗೂಢತರವಾಗಿದ್ದ ಆ ದಿನಗಳಂದು ಹದಿಹರೆಯದ ಮತ್ತು ಲೋಕಜ್ಞಾನವಿಲ್ಲದ ನನ್ನಂಥವರ ಪಾಡು ಏನಾಗಿತ್ತೆಂಬುದನ್ನು ನಿದರ್ಶಿಸಲು ಈ ಅನುಭವವನ್ನು ಉಲ್ಲೇಖಿಸಿದ್ದೇನೆ. ಹಾಸ್ಟೆಲಿನಲ್ಲಿ ಹೆಚ್ಚಾಗಿ ಇದ್ದವರು ಮಲೆಯಾಳಿಗಳು. ಇವರೆಲ್ಲರೂ ನನಗಿಂತ ಹಿರಿಯರು, ಬಲಶಾಲಿಗಳು ಕೂಡ. ಬಾಯಿಯಲ್ಲಿ ಯಾವಾಗಲೂ ಹುಡುಗಿಯರ ವಿಚಾರವೇ, ಅದೂ ಅಶ್ಲೀಲ ಸಂಗತಿಗಳೇ. ರಾತ್ರಿ ತಡವಾಗಿ ಬಂದು ತಮ್ಮ ‘ಸಾಹಸ’ಗಳನ್ನು ರಂಗುರಂಗಾಗಿ ಬಣ್ಣಿಸುತ್ತಿದ್ದರು. ಈ ‘ಸಾಹಸ’ ಕುರಿತು ತೀರ ಮುಗ್ಧನಾಗಿದ್ದ ನಾನು ಪ್ರಾಯ ಸಹಜ ಕುತೂಹಲದಿಂದ ಅದೇನೆಂದು ಅವರ ಪೈಕಿ ಒಬ್ಬನನ್ನು ಪ್ರಶ್ನಿಸಿದೆ.

“ಎಂಟಾಣೆ ನಾಣ್ಯ ಇಟ್ಟುಕೊ. ಇಂದು ರಾತ್ರಿ ನನ್ನ ಜೊತೆ ಬಾ. ನಿನ್ನ ಎಲ್ಲ ಸಂಶಯಗಳೂ ಪರಿಹಾರವಾಗುತ್ತವೆ.” ರಥಬೀದಿಯ ಹೊರಗಿದ್ದ ಯಾವುದೋ ಗಲ್ಲಿಗೆ ಆತ ನನ್ನನ್ನು ಕರೆದೊಯ್ದ. ಒಂದು ನಿಗೂಢ ಗುಡಿಸಲಿನ ಕದ ತಟ್ಟಿದ. ಲಾಂದ್ರದ ಮಂದ ಬೆಳಕಿನಲ್ಲಿ ಪ್ರತ್ಯಕ್ಷವಾದ ಶಾಕಿನಿ ಡಾಕಿನಿಯರನ್ನು ಕಂಡದ್ದೇ ನಾನಲ್ಲಿಂದ ಹೆದರಿ ಪದರಾಡು! ನನ್ನ ಮನದೊಳಗಿನ ಸ್ತ್ರೀಭಯ ತೀವ್ರವಾಗಲು ಈ ಘಟನೆಯೂ ಒಂದು ಕಾರಣ. ನನ್ನನ್ನು ಅಂದು, ೧೭-೧೮ರ ಹರೆಯದಲ್ಲಿ, ಆ ಪಾಪಕೂಪದಿಂದ ಕಾಪಾಡಿದ್ದು ಯಾವ ಶಕ್ತಿ ಎಂದು ಈಗ ವಿಶ್ಲೇಷಿಸಿದರೆ ನನಗೆ ದೊರೆಯುವ ಉತ್ತರ ಒಂದೇ: ಗೃಹಸಂಸ್ಕಾರ, ಸಂಸ್ಕೃತಿ ಮತ್ತು ರಾಮಾಯಣ ಮಹಾಭಾರತಾದಿ ಉದ್ಗ್ರಂಥವಾಚನದಿಂದ ಪಡೆದಿದ್ದ ರುಚಿಶುಚಿತ್ವ.

ಒಟ್ಟಾರೆ ಹೇಳುವುದಾದರೆ ಮಂಗಳೂರಿನಲ್ಲಿಯ ವಿದ್ಯಾರ್ಥಿಜೀವನ ಅಸಹನೀಯವಾಗಿತ್ತು: ಆಹಾರದ ಸಮಸ್ಯೆ, ರಸಾಯನವಿಜ್ಞಾನದ ಶವಭಾರ ಮತ್ತು ಸ್ನೇಹಿತರ ಅಭಾವ. ತರಗತಿಯಲ್ಲಿಯ ಪಾಠ ಮುಗಿದ ಬಳಿಕ ಹಗಲೂ ಇರುಳೂ ರಸಾಯನವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳನ್ನು ಆದ್ಯತೆ ಮೇರೆಗೆ ಓದಿ, ಬರೆದು, ಉರುಹೊಡೆದೆ. ಉಳಿದ ವಿಷಯಗಳೆಲ್ಲವೂ ನನಗೆ ಸುಲಭವಾಗಿದ್ದುವು.

ಇಂಟರ್ಮೀಡಿಯೆಟ್ ಅಂತಿಮ ಪರೀಕ್ಷೆ ದಿನಾಂಕ ೪-೪-೪೪ರಂದು ಮುಗಿದಾಗ ಹೊಸೆದ ಸಾಲುಗಳು:

ನಾಕು ನಾಕುಗಳು ನಾಜೂಕಾಗಿ ಸೇರ್ದಂದು
ಸಾಕುಬೇಕಾಗಿದ್ದ ಜೀವಕ್ಕೆ ನರಕದಿಂ
ನಾಕಲೋಕಕ್ಕೆ ಉತ್ತಾರಣೆಯೊ ಕಾವ್ಯಜ್ಞ!

(ಮುಂದುವರಿಯಲಿದೆ)