ಇದು ಬರಿ ಹೋಟೆಲಲ್ಲೋ ಅಣ್ಣಾ

“ಸ್ವಾಮೀ ಇಂಥದ್ದೊಂದು ಪುಸ್ತಕ ಕನ್ನಡದಲ್ಲಿ ಪ್ರಕಟಿಸುವುದಿದ್ದರೆ ಹೇಗೆ?” ಹ್ಯಾಮ್ಲಿನ್ ಪ್ರಕಾಶಕರ ಬಲುವರ್ಣದ, ಬಹುಚಂದದ ಮಕ್ಕಳ ವಿಜ್ಞಾನ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಆ ತರುಣ ಕೇಳಿದ. ಕೆಂಚು ಬಿಳಿಯಾಗಿ ಮೈತುಂಬಿಕೊಂಡು, ಈಗ ತಾನೇ ಅಮೆರಿಕಾದಿಂದ ಇಳಿದಂತಿದ್ದ ಈತನಿಗೇನು ಬೆಪ್ಪೇ ಅನಿಸಿತ್ತು. ಕನ್ನಡ ಮಾಧ್ಯಮ, ಕನ್ನಡ ಶಾಲೆ ಎನ್ನುವುದೇ ‘ಅಪರಾಧ’ವಾಗಿರುವ ಕಾಲವಿದು. ಆ ಪ್ರಶ್ನೆ ನನಗೆ ನಗೆ ತರಿಸಿತು, ಜೊತೆಗೆ ಒಂದೆರಡು ನೆನಪೂ.

ಸುಮಾರು ನಾಲ್ಕು ದಶಕಗಳ ಹಿಂದೆಯೇ ಐಬಿಯೆಚ್ ಪ್ರಕಾಶನ ವಿದೇಶೀ ಮೂಲದ, ಸುಂದರ ವರ್ಣಚಿತ್ರಗಳ, ಉತ್ತಮ ಗುಣಮಟ್ಟದ ಮಕ್ಕಳ ಪುಸ್ತಕ ಮಾಲಿಕೆಗಳೆರಡನ್ನು ಕನ್ನಡಕ್ಕಿಳಿಸತೊಡಗಿದ್ದರು. ಹಾಗೆ ಬಂದ ‘ಮೂಲವಿಜ್ಞಾನ ಪಾಠಮಾಲೆ’ ಮತ್ತು ‘ವಿಜ್ಞಾನಪ್ರಪಂಚ’ಗಳ ಪ್ರಧಾನ ಸಂಪಾದಕನ ಜವಾಬ್ದಾರಿ (ಬಹುತೇಕ ಅನುವಾದವೂ) ಹೊತ್ತವರು ನನ್ನ ತಂದೆ (ಜಿಟಿನಾ). ಅಂದು ಕನ್ನಡದ ಶಾಲೆಗಳಿಗೆ ಇಂದಿನ ಅನಾಥ ಸ್ಥಿತಿಯಿರಲಿಲ್ಲ. ಆ ಪುಸ್ತಕಗಳ ನೈಜ ಜನಪ್ರಿಯತೆಯ ಬೆಳಕಿನಲ್ಲಿ ಪ್ರಕಾಶಕರ ಉತ್ಸಾಹ ಹೆಚ್ಚಿ, ಸ್ವತಂತ್ರವಾಗಿಯೂ ಕನ್ನಡದಲ್ಲಿ ‘ವಿಜ್ಞಾನ ನೋಡುಕಲಿ’ ಎಂಬ ಹೆಸರಿನಲ್ಲಿ ಇನ್ನಷ್ಟು ಮಕ್ಕಳ ಪುಸ್ತಕಗಳನ್ನು ತರಲು ಮುಂದಾದರು. ಇದಕ್ಕೂ ತಂದೆಯದೇ ಸಾರಥ್ಯ. ರಥದಲ್ಲಿ ಅಡ್ಯನಡ್ಕ ಕೃಷ್ಣ ಭಟ್ಟ, ಕೆ.ಎಸ್ ನಿಸಾರ್ ಅಹಮದ್ ಮುಂತಾದವರು ಮೆರೆದದ್ದೂ ಆಯಿತು. ಆಕಾಶದ ಅದ್ಭುತಗಳು, ಮನುಷ್ಯನ ಕತೆ, ಶಿಲೆಗಳು ಖನಿಜಗಳು, ಹಕ್ಕಿಗಳು ಇತ್ಯಾದಿ ಪುಸ್ತಕಗಳು ಆ ಕಾಲಕ್ಕೆ ಅಪ್ಪಟ ದೇಶೀ ಚಿತ್ರ, ಕನ್ನಡ ಭಾಷೆಯಲ್ಲಿ (ಜನಪ್ರಿಯತೆ ಗಮನಿಸಿ, ಇಂಗ್ಲಿಷ್ ಅನುವಾದವೂ) ಕೈತೊಳೆದು ಮುಟ್ಟುವಷ್ಟು ಚಂದಕ್ಕೇ ಬರತೊಡಗಿದವು. ಆದರೆ ಈ ಕನ್ನಡ ಸಾಹಸಗಳನ್ನು ವಾಣಿಜ್ಯ ನೆಲೆಯಲ್ಲೂ ಯಶಸ್ವಿಗೊಳಿಸುವ ಪ್ರಕಾಶಕರ ಉತ್ಸಾಹದಲ್ಲಿ ಎಡವಟ್ಟಾಗಿ ಎಲ್ಲ ನಿಂತೇ ಹೋಯಿತು.

ಕೆಲವು ತಿಂಗಳ ಹಿಂದೆ ಮಂಗಳೂರಿಗೆ ಹಿರಿಯ ಶಿಕ್ಷಣತಜ್ಞ – ಡಾ| ಅನಿಲ್ ಸದ್ಗೋಪಾಲ್ (೮೦+ ಹರಯದವರು) ದಿಲ್ಲಿಯಿಂದ ಬಂದಿದ್ದರು. ಕರಾವಳಿ ಲೇಖಕಿ ವಾಚಕಿಯರ ಸಭಾಭವನದಲ್ಲಿ ಅವರು ಭಾರತೀಯ ಪ್ರಾಥಮಿಕ ಶಿಕ್ಷಣದ ಇತಿಹಾಸದ ಕುರಿತು ಮಾತಾಡಿದ್ದರು. ಪಂಜಾಬಿನಲ್ಲಿ ಪ್ರಾಥಮಿಕದಿಂದ ಕಾಲೇಜಿನವರೆಗೆ ಅವರ ಕಲಿಕೆಯ ಮಾಧ್ಯಮ ಹಿಂದಿ. ಮುಂದೆ ಆವಶ್ಯಕತೆಗೆ ತಕ್ಕಂತೆ ಇಂಗ್ಲಿಶ್ ಕಲಿತು, ಅಮೆರಿಕಾಕ್ಕೂ ಹೋಗಿ, ಪರಮಾಣು ವಿಜ್ಞಾನಿಯಾದರು. ಅನಂತರ ಭಾರತಕ್ಕೆ ಉನ್ನತ ವಿಜ್ಞಾನ ಸಂಸ್ಥೆಯೊಂದರಲ್ಲಿ ಸಂಶೋಧಕನಾಗಿಯೇ ಮರಳುವಾಗ ಬಾಲ್ಯದ ಕನಸೊಂದನ್ನು ನನಸುಗೊಳಿಸುವ ಸಣ್ಣ ಬಯಕೆ ಬಗಲಲ್ಲೇ ಕಟ್ಟಿಕೊಂಡಿದ್ದರು. ಅದು ತನಗೆ ಬಾಲ್ಯದಲ್ಲಿ ಹಿಂದಿಯಲ್ಲಿ ಒದಗದ ಸಮರ್ಥ ವಿಜ್ಞಾನ ಪುಸ್ತಕಗಳ ಕೊರತೆ. ಮೂಲ ಪ್ರಯೋಗಾಲಯಗಳಿಂದಲೇ ಇವರು ಸುಂದರ ಚಿತ್ರಗಳನ್ನೂ ಟಿಪ್ಪಣಿಗಳನ್ನೂ ಸಜ್ಜುಗೊಳಿಸಿಕೊಂಡಿದ್ದರು. ಆದರೆ ಸುಮಾರು ಎಂಟು ಹತ್ತು ವರ್ಷಗಳ ಅಂತರದಲ್ಲೇ ಪ್ರಾಥಮಿಕ ಶಿಕ್ಷಣಲೋಕದ ಕಂದರ ಅಗಾಧವಾಗಿತ್ತು. ಇವರು ಸಂಪರ್ಕಿಸಿದ ಖ್ಯಾತ ಪ್ರಕಾಶನ ವಲಯದಲ್ಲಿ ಹಿಂದಿ ಮಾಧ್ಯಮಕ್ಕೆ NO TAKERS! ಅನಂತರದ ಇಷ್ಟೂ ವರ್ಷ ಅವರು ವಿಜ್ಞಾನ ಬಿಟ್ಟು, ಮಕ್ಕಳ ನಿಜವಾದ ಶಿಕ್ಷಣ ಹಕ್ಕಿನ ಹೋರಾಟಗಾರನಾಗಿ ಭೋಪಾಲ್, ದಿಲ್ಲಿಗಳಲ್ಲಿ ದುಡಿಯುತ್ತಲೇ ಬಂದಿದ್ದಾರೆ. ಶಿಕ್ಷಣರಂಗದಲ್ಲಿ ಭಾರತದ ಹಿಮ್ಮುಖ ನಡಿಗೆಯನ್ನು ತಡೆಯಲಾಗದ ಸಂಕಟವನ್ನು ಹಂಚಿಕೊಳ್ಳುತ್ತಲೂ ಇದ್ದಾರೆ.

ಕನ್ನಡದಲ್ಲಿ ವಿಜ್ಞಾನದ ಸೊಲ್ಲನ್ನು ಹೊಸದಾಗಿ ಎತ್ತಿದ ತರುಣನ ಕತೆಯಾದರೂ ಇದೇ. ಸುಮಾರು ಹದಿನೈದು ವರ್ಷಗಳ ಹಿಂದೆ, ಕಾಸರಗೋಡಿನ ಕನ್ನಡ ಸರಕಾರೀ ಶಾಲೆಯಲ್ಲಿ ಮೂಲಶಿಕ್ಷಣ ಪಡೆದು, ಗಣಕ ತಂತ್ರಾಂಶ ಕಲಿಕೆ ಮತ್ತು ವೃತ್ತಿಪಾರಮ್ಯದಲ್ಲಿ ಅಮೆರಿಕಾದವರೆಗೂ ಬೆಳೆದು ನಿಂತ ಆ ತರುಣ – ಕೃಷ್ಣಶಾಸ್ತ್ರಿ. ಇವರ ಶಾಲೆಯ ಗ್ರಂಥಭಂಡಾರದಲ್ಲಿ ಮಕ್ಕಳಿಗಾಗಿ ಹಲವು ಸುಂದರ ಮತ್ತು ಉತ್ತಮ ಪುಸ್ತಕಗಳೇನೋ ಇದ್ದುವಂತೆ. ಆದರೆ ಅವಕ್ಕೆ ಮೊದಲನೆಯ ತಡೆಗೋಡೆ ಭಾಷೆಯದ್ದು, ಎಲ್ಲ ಇಂಗ್ಲಿಷ್. ಇನ್ನೂ ದೊಡ್ಡ ಹಿಂಸೆ, ಅವು ಮಕ್ಕಳ ಕೈಗೆ ಸಿಕ್ಕಿ ಹಾಳಾಗಬಾರದೆಂಬ ಮಾಷ್ಟ್ರ ಕಾಳಜಿ; ಅವು ಸದಾ ಬೀಗದ ಕಪಾಟಿನೊಳಗೇ ಬಂದಿ. ‘ಮಾಲೆಗಾರ ಸುಂದರ ಮಾಲೆ ಮಾಡಿದರೇನು – ಮುಡಿಯುವವರಿಲ್ಲದೆ’ ಗಾದೆ ವಿಸ್ತರಣೆ ಆ ಮಾಷ್ಟ್ರುಗಳಿಗೆ ಬಹುಶಃ ತಿಳಿದಿರಲಿಲ್ಲ. ವಿಚಾರ ಮತ್ತು ಬರವಣಿಗೆಗಳಲ್ಲಿ ಪ್ರೌಢನಾಗಿ, ಆರ್ಥಿಕವಾಗಿ ಸ್ವತಂತ್ರನಾದಾಗ ಶಾಸ್ತ್ರಿಗಳಿಗೆ ಆದ್ಯತೆಯಲ್ಲಿ ಹೊಳೆದ ವಿಚಾರ ಕನ್ನಡ ಮಕ್ಕಳಿಗೆ ಜ್ಞಾನಮುಕ್ತಿ. ಸ್ವಂತ ದುಡ್ಡು ಹಾಕಿ ವಿಷಯ ಮಾತ್ರವಲ್ಲ ಚಿತ್ರ, ಮುದ್ರಣಗಳಲ್ಲೂ ಶ್ರೀಮಂತ, ಬೆಲೆಯಲ್ಲಿ ಸುಲಭ ಕನ್ನಡ ಪುಸ್ತಕಗಳನ್ನು ತರುವ ಉಮೇದು! ನನ್ನ ತಂದೆಯ ಅನುಭವ ಹೇಳಿದೆ. ಕಳೆದ ಸುಮಾರು ಎರಡು ದಶಕಗಳಲ್ಲಿ ನನ್ನ ಕನ್ನಡ ವಿಜ್ಞಾನ ಪುಸ್ತಕ ಪ್ರಕಾಶನದ ಸೋಲನ್ನು ವಿವರಿಸಿದೆ. ಅದಕ್ಕೂ ಮಿಗಿಲಾಗಿ ಮೂರು ದಶಕಕ್ಕೂ ಮಿಕ್ಕ ಪ್ರಜ್ಞಾಪೂರ್ವಕ ಕನ್ನಡ ಪುಸ್ತಕ ಮಾರಾಟಗಾರನ ಅನುಭವದ ನೆಲೆಯಲ್ಲಿ ಪೂರ್ಣ ನಿರುತ್ತೇಜನವನ್ನೇ ಮಾಡಿದೆ! ಆದರೆ ಹೀಗೆ ತೊಡಗಿದ ಕೃಷ್ಣ ಶಾಸ್ತ್ರಿಗಳ ಪರಿಚಯ ನನಗೆ ಹೊಸತೊಂದೇ ಗೆಳೆಯನನ್ನು ಒದಗಿಸಿದ್ದು ನಿಜ.

ಕೃಷ್ಣಶಾಸ್ತ್ರಿಗಳ ಕುತೂಹಲ ಎಲ್ಲವನ್ನೂ ವ್ಯಾಪಿಸುವಂತದ್ದು. ಸಹಜವಾಗಿ ನನ್ನೊಡನೆ ಒಂದೆರಡು ಬಾರಿ ಕಾಡುಬೆಟ್ಟ ಅಲೆದಾಟಕ್ಕೂ ಬಂದಿದ್ದರು. ಇಲ್ಲಿ ಆಸಕ್ತಿಯ ಹರಹು ದೊಡ್ಡದು, ಮಾತೂ ತುಸು ಹೆಚ್ಚು ಎಂಬ ಭಾವ ಬಂದಿತ್ತು. ಪರಿಸರ, ಆರೋಗ್ಯ, ಮಾತೃ ಭಾಷೆ, ಬಳಕೆದಾರ, ಪಳೆಯುಳಿಕೆ ಇಂಧನ ಜಲ ವಿದ್ಯುಚ್ಛಕ್ತಿ ಮೊದಲಾದವುಗಳ ಮಿತವ್ಯಯ, ರಾಜಕೀಯ, ಸಾಂಸ್ಕೃತಿಕ ತುಲನೆಯೇ ಮೊದಲಾಗಿ ಚರ್ಚೆಗೆ ಬರುತ್ತಿದ್ದ ವಿಷಯಗಳಿಗೆಲ್ಲ ಶಾಸ್ತ್ರಿಗಳಲ್ಲಿ ಆಧುನಿಕ ಅರಿವಿನಿಂದ ರೂಪುಗೊಂಡ ಸಾಂಪ್ರದಾಯಿಕ ವಿಶ್ಲೇಷಣೆಗಳು ಧಾರಾಳ ಇರುತ್ತಿದ್ದುವು. ಇವರ ಜಾಲತಾಣ ಸದ್ಯ ಕಾಣುವಂತೆ ಅಲ್ಪಾಯುವಾದರೂ (೨೦೧೦ರಿಂದ ೧೨ರವರೆಗೆ ಮಾತ್ರ ನಡೆಸಿ ಸದ್ಯ ಬೇರೆಯೇ ಲೋಕದಲ್ಲಿದ್ದಾರೆ) ಬಹಳ ಚುರುಕಾಗಿಯೂ ಬೋಧಪ್ರದವಾಗಿಯೂ ಬರುತ್ತಿತ್ತು. ಇವರಪ್ಪನ ಖಾಸಗಿ ಆಸ್ಪತ್ರೆಯ ಕಸವಿಲೇವಾರಿ ಬಗ್ಗೆ ತಲೆ ಬಿಸಿಮಾಡಿಕೊಂಡರು. ಜಲಸಂರಕ್ಷಣೆಯ ಬಗ್ಗೆ ಸರಕಾರೀ ‘ಗುದಾಮಿಗೇ’ ನುಗ್ಗಿ ಸಾರ್ವಜನಿಕರ ಗಮನ ಸೆಳೆದರು. ಸಾಂಸ್ಕೃತಿಕ ವಿಪರೀತಗಳ ಬಗ್ಗೆ ಕತ್ತಿ ಝಳಪಿಸಿದರು. ವೊಲ್ವೋ ಬಸ್ಸಿನಲ್ಲಿ ಇವರ ಗಂಟುಮೂಟೆಯೇ ಕದ್ದು (ಕಳೆದು) ಹೋದಾಗಂತೂ ಪಕ್ಕಾ ಪತ್ತೇದಾರ ಪುರುಷೋತ್ತಮನ ಶೈಲಿಯಲ್ಲಿ ಆರೇಳು ಕಂತುಗಳಲ್ಲಿ ನಮ್ಮ ತಲೆಯನ್ನೇ ಹಾಳುಮಾಡಿದರು. ತಮ್ಮ ನಿಲುವನ್ನು ಖಚಿತವಾಗಿ ಸ್ಪಷ್ಟಪಡಿಸುತ್ತಿದ್ದರು. ಆದರೆ ಚರ್ಚೆಗೆ ಅಷ್ಟೇ ಪ್ರಾಂಜಲವಾಗಿ ತೆರೆದುಕೊಂಡೂ ಇರುತ್ತಿದ್ದರು. ಇವರ ಜಾಲತಾಣದ ಬರೆಹಗಳು ವಿಷಯಕ ನ್ಯಾಯದಷ್ಟೇ ಆದ್ಯತೆಯಲ್ಲಿ ಇವರ ಭಾಷಾಧೋರಣೆಯನ್ನೂ ಪ್ರತಿಬಿಂಬಿಸುತ್ತಿದ್ದುವು. (ಕೆಲವು ಲೇಖನಗಳನ್ನು ಇವರು ಇಂಗ್ಲಿಶ್, ಕನ್ನಡ ಮಾತ್ರವಲ್ಲದೆ ಕನ್ನಡ ಲಿಪಿಯ ಮೂಲಕ ಹವ್ಯಕದಲ್ಲೂ ಕೊಡುತ್ತಿದ್ದರು!) ತನ್ನೆಲ್ಲಾ ಕೃತಿಗಳಲ್ಲಿ ಸಾಧಿಸಲು ಹೆಣಗುತ್ತಿದ್ದ ಈ ಆಳ ಮತ್ತು ಹರಹುಗಳೆರಡನ್ನೂ ಕೃಷ್ಣಶಾಸ್ತ್ರಿ ಬರಿಯ ತೋರಿಕೆಗೆ ಮಾಡುತ್ತಿರಲಿಲ್ಲ ಎನ್ನುವುದಕ್ಕೆ ಈಗ ಬಲವಾದ ಸಾಕ್ಷಿ ಒದಗಿದೆ – ಅದುವೇ ‘ಕ್ಯಾರಟ್ಸ್ – ೧೦೦% ಸಸ್ಯಾಹಾರಿ’!

ಸಾಂಪ್ರದಾಯಿಕ ಹವ್ಯಕ ಹುಟ್ಟಿನ ಕೃಷ್ಣಶಾಸ್ತ್ರಿ ಅಮೆರಿಕಾಕ್ಕೆ ಹೋಗಿಯೂ ಸಸ್ಯಾಹಾರಿಯಾಗಿ ಉಳಿದಿದ್ದರು. ಇದನ್ನು ದೊಡ್ಡ ಸಾಧನೆ ಎನ್ನುವುದಿಲ್ಲ. ಆದರೆ ಅದರಿಂದಲೂ ಮೇಲೆ, ಅಂದರೆ ಶೇಕಡಾ ನೂರು ಸಸ್ಯಾಹಾರಿಯಾಗುತ್ತಾ ಬೆಳೆದದ್ದು ನಿಜಕ್ಕೂ ಆಶ್ಚರ್ಯಕರ. ಸಾಂಪ್ರದಾಯಿಕ ಚೌಕಟ್ಟಿನ ಸಸ್ಯಾಹಾರವನ್ನು ಮೀರಿ, ಪ್ರಾಣಿಜನ್ಯವಾದ್ದೆಲ್ಲವನ್ನೂ ವರ್ಜಿಸುವ ವಿಚಾರ, ಅಂದರೆ ವೀಗನಿಸಂ ಈಗ ಕೃಷ್ಣ ಶಾಸ್ತ್ರಿಯವರ ನೆಚ್ಚಿನ ಪಂಥ. ಕಡಲ ತರಕಾರಿ ಎನ್ನುವ ಮೀನು, ಫಲಿತವಾಗದ ಹೊರತು ಪ್ರಾಣಿಜೀವವೇ ಅಲ್ಲ ಎನ್ನುವ ಮೊಟ್ಟೆಗಳನ್ನೆಲ್ಲ ಸೀಮಿತ ಆಚಾರಗಳು ಒಪ್ಪಿಕೊಳ್ಳದೇ ‘ಮಾಂಸಾಹಾರ’ ಎಂದೇ ಬಿಟ್ಟದ್ದಾಗಿದೆ. ದನ ಎಮ್ಮೆಗಳು ಮನುಷ್ಯರಿಗೆ ಹಾಲು ಕೊಡುವುದಲ್ಲ, ಬದಲಿಗೆ ಮನುಷ್ಯರು ಕರುಗಳ ನೈಜ ಆಹಾರ ಕಸಿಯುವುದು. ನೊಣಗಳು ತಮ್ಮ ಮಳೆಗಾಲದ ಜೀವನಾಂಶವಾಗಿ ಜೇನು ಸಂಗ್ರಹಿಸುತ್ತವೆಯೇ ಹೊರತು ಮನುಷ್ಯನ ನಾಲಗೆ ಚಪಲಕ್ಕಲ್ಲ. ಹೀಗೆ ಯಾವುದೇ ಪ್ರಾಣಿಜನ್ಯ ಉತ್ಪನ್ನವನ್ನು ವರ್ಜ್ಯ ಎನ್ನುತ್ತಾರೆ ವೀಗನರು. ವೀಗನಿಸಂ ಕೇವಲ ಆಹಾರದ ಮಟ್ಟಕ್ಕೆ ನಿಲ್ಲದೆ, ಆಚಾರ ವಿಚಾರಗಳಿಗೂ ವ್ಯಾಪಿಸುತ್ತದೆ. ಪ್ರಾಣಿದಯೆಯೂ ವೀಗನತ್ವದಲ್ಲಿ ಒಂದು ಮುಖ್ಯ ವಿಷಯ. ಪ್ರಾಣಿಚರ್ಮಗಳ ಉಡುಪು ತೊಡವುಗಳೂ ರೇಶ್ಮೆ ಅಲಂಕಾರಗಳೂ ಸಾಬೂನು ಸೌಂದರ್ಯವರ್ಧಕಗಳೂ ಇವರಿಗಾಗದು. ಪ್ರಯೋಗಾಲಯಗಳಲ್ಲಿ ಎಷ್ಟೋ ಔಷಧಗಳನ್ನು ಸಾರ್ವಜನಿಕಕ್ಕೆ ಬಿಡುಗಡೆಗೊಳಿಸುವ ಮುನ್ನ ಕೆಲವು ಪ್ರಾಣಿಗಳ ಮೇಲೆ ಬಳಸುತ್ತಾರೆ. ಹೀಗೆ ಹಿಂಸೆಗೊಳಗಾಗುವ (ಸತ್ತೂ ಹೋಗುವ) ಇಲಿ, ಹಂದಿ, ಮೊಲ, ಮಂಗಗಳ ಮೇಲಿನ ಅನುತಾಪದಲ್ಲಿ ಆ (ಪ್ರಾಣಿಜನ್ಯವಲ್ಲದ) ಔಷಧಗಳನ್ನೂ ವೀಗನ್ನರು ತಿರಸ್ಕರಿಸುತ್ತಾರೆ. ಹೆಚ್ಚೇನು ಪ್ರಾಣಿಗಳನ್ನು ದಂಡಿಸುವ ಸರ್ಕಸ್, ಸ್ವಾತಂತ್ರ್ಯಹರಣ ಮಾಡಿದ ಪ್ರಾಣಿಸಂಗ್ರಹಾಲಯಗಳನ್ನೂ ವೀಗನ್ನರು ಬಹಿಷ್ಕರಿಸುತ್ತಾರೆ. ದೀರ್ಘ ಕಾಲೀನ ಪರಿಣಾಮಗಳಲ್ಲಿ ಇಂದು ಜೀವ ವಿರೋಧಿಗಳೆಂದೇ ಪ್ರಮಾಣಿತವಾಗುತ್ತಿರುವ ಕೃತಕ ಗೊಬ್ಬರ ಪೋಷಿತ ಸಸ್ಯಗಳನ್ನೂ ಈಗ ವೀಗನ್ನರು ತಮ್ಮ ಅಡುಗೆಕೋಣೆಯಿಂದ ಹೊರಗಿಡಲು ಸಜ್ಜುಗೊಂಡಿದ್ದಾರೆ. ಈ ಎಲ್ಲ ತತ್ತ್ವಗಳನ್ನು ಕೃಷ್ಣ ಶಾಸ್ತ್ರಿ ಮಾತಿನಲಂಕಾರಕ್ಕೆ ಸಾಧನವಾಗುಳಿಸಿಕೊಂಡಿಲ್ಲ. ಆಡಿದ್ದನ್ನು ಮಾಡಿತೋರಿಸುವ ಛಲದಲ್ಲಿ ಅವರೇ ಈಚೆಗೆ ಬೆಂಗಳೂರಿನಲ್ಲಿ ಸಜ್ಜುಗೊಳಿಸಿದ ನೆಲೆಯೇ ‘ಕ್ಯಾರಟ್ಸ್!’ (೬೦೭, ೮೦ ಅಡಿ ರಸ್ತೆ, ಕೋರಮಂಗಲ ೬ನೇ ವಿಭಾಗ, ಬೆಂ. ೫೬೦೦೯೫. ಸೋನೀ ವರ್ಲ್ಡ್ ಸಿಗ್ನಲ್ ಬಳಿ. ಚರವಾಣಿ: ೯೮೪೫೯೨೨೩೬೮. ಜಾಲತಾಣ https://www.carrots-india.com/

ಗೆಡ್ಡೆ ತರಕಾರಿ ಕ್ಯಾರಟ್ ಇಲ್ಲಿ ಬರಿಯ ಸಂಕೇತನಾಮ. ಜರ್ಮನ್ ಮೂಲದ ಸತ್ಯಸಾಯೀ ಭಕ್ತ, ಯೋಗಾಭ್ಯಾಸಿ – ಭಾರತೀಯ ಹೆಸರು ಕೃಷ್ಣ, ಓರ್ವ ಕಟ್ಟಾ ವೀಗನ್. ಈತ ಪುಟ್ಟಪರ್ತಿಯ ಬಳಿ ಸಾವಯವ ಕೃಷಿಯನ್ನು ಪ್ರಸರಿಸುತ್ತ, ಆರೋಗ್ಯಕರ ಮತ್ತು ಬಹುತೇಕ ವೀಗನ್ ಆಹಾರ ವಿಕ್ರಯ ಕೇಂದ್ರವನ್ನು (Swamy’s Kitchen pvt. Ltd.) ನಡೆಸುತ್ತ ಆರ್ಥಿಕ ಯಶಸ್ಸು ಕಂಡವರು. ಅವರ ಸಹಯೋಗ ಹಾಗೂ ಮಾರ್ಗದರ್ಶನದೊಡನೆ ಕೃಷ್ಣಶಾಸ್ತ್ರಿ ಈಗ ಬೆಂಗಳೂರಿನಲ್ಲಿ ಸಾರ್ವಜನಿಕಕ್ಕೆ ತೆರೆದಿರುವ (ಕ್ಷಮಿಸಿ, ಸರಳ ಶಬ್ದದಲ್ಲಿ ಹೇಳುತ್ತಿದ್ದೇನೆ) ಹೋಟೆಲ್ಲೇ ಕ್ಯಾರಟ್ಸ್. ಅಪ್ಪಟ ಸುಖಪುರುಷರ (ಪುರುಷಿಯರುಂ ಒಳವು!) ನೆಲೆವನೆ ಎನಿಸಿಕೊಂಡ ನಿಶ್ಚಿತ ಮತ್ತು ನಿಶ್ಚಿಂತ ಆದಾಯದ ಗಣಕಜ್ಞನ ಹುದ್ದೆಯನ್ನು (ಇನ್ಫೊಸಿಸ್ ಮೊದಲಾಗಿ ಕೆಲವು ಕಂಪೆನಿಗಳಲ್ಲಿ ಸುಮಾರು ಹತ್ತು ವರ್ಷಗಳು ದುಡಿದ) ಕೃಷ್ಣಶಾಸ್ತ್ರಿ ಇದಕ್ಕಾಗಿಯೇ ಕಳಚಿಕೊಂಡಿದ್ದಾರೆ. ಅನ್ಯ ವೃತ್ತಿ ನಿರತೆಯಾದ ಹೆಂಡತಿಯ ಸಹಮತವನ್ನು ಗಳಿಸಿದ್ದಾರೆ. ಸ್ಥಾನಗೌರವದ ಹುಸಿ ಗತ್ತುಗಳನ್ನು ಕಳಚಿ, ಸ್ವತಃ ತಿನಿಸು ಪಾನೀಯಗಳ ಪಟ್ಟಿ ಹಾಗೂ ಬಡಿಸು ತಟ್ಟೆ ಹಿಡಿದು ನಿಂತ ಕೃಷ್ಣಶಾಸ್ತ್ರಿಯನ್ನು ಈಗ ಯಾರೂ ಮಾತುಭಾರಿ ಎಂದು ತಳ್ಳಿಹಾಕುವಂತಿಲ್ಲ. ಎರಡು ಅಂತಸ್ತುಗಳ, ಸುಮಾರು ಒಂದೂಕಾಲು ಲಕ್ಷ ರೂಪಾಯಿಗಳ ಮಾಸಿಕ ಬಾಡಿಗೆಯ ಮಳಿಗೆ ಹಿಡಿದು, ಐದಾರು ಸಹಾಯಕರನ್ನು ಇಟ್ಟುಕೊಂಡು ಪೂರ್ಣಾವಧಿ ವೀಗನ್ ಪಾಕವಿಶೇಷಗಳನ್ನು ಬಡಿಸುತ್ತಿದ್ದಾರೆ. ಇದನ್ನು ತೊಡಗಿಸುವಲ್ಲಿ ಸಂಬಂಧಿಸಿದ ಇಲಾಖೆಗಳೊಡನೆ ತನ್ನ ಬಳಕೆದಾರ ಹೋರಾಟದ ಕಸುವು ಉಳಿಸಿಕೊಳ್ಳಲು ಹೆಣಗುತ್ತಲೂ ಇದ್ದಾರೆ (ಲಂಚ ರುಷುವತ್ತಿಲ್ಲದೆ!). ಪರಿಸರ ಹಾಗೂ ನೌಕರರನ್ನು ಎಲ್ಲಾ ಸಾಮಾಜಿಕ ಬದ್ಧತೆಗಳೊಡನೆ ತೊಡಗಿಸಿಕೊಂಡಿದ್ದಾರೆ. ಇವೆಲ್ಲ ಯಾರೋ ಹೋಗೆಂದಾಗ ಇಳಿದು, ಬಾಯೆಂದಾಗ ಕಳಚಿ ಚಪ್ಪಾಳೆ ಗಿಟ್ಟಿಸುವ ಒಂದು ದಿನದ ಪ್ರಯೋಗವಲ್ಲ. ಸಹಾಯಧನ, ಅನುದಾನ, ಆಪದ್ರಕ್ಷಣೆಯ ಆವರಣಗಳಿರುವ (ಯಾರದೋ ಹಣ ಮಾರಮ್ಮನ ಜಾತ್ರೆ), ಅಸಲಿಗಿಂತ ಪರೋಕ್ಷಲಾಭಗಳ ಸುರಿಮಳೆಯಾಗುವ ನಾಟಕವಂತು ಖಂಡಿತಾ ಅಲ್ಲ. ಶಾಸ್ತ್ರಿಗಳದೇ ಮಾತಿನಲ್ಲಿ “ಇದು ಸುಮಾರು ಐವತ್ತು-ಅರುವತ್ತು ಲಕ್ಷವನ್ನು ಪಣಕ್ಕಿಟ್ಟು ನಡೆಸುತ್ತಿರುವ ಒಂದು ಸಾಹಸ. ಹೆಚ್ಚುಕಡಿಮೆ ನಾನು ಕಳೆದ ಹತ್ತು ವರ್ಷದಲ್ಲಿ ಸಂಪಾದಿಸಿದ ಹಣದ ಬಹುಪಾಲು…” ತಾನು ನೆಚ್ಚಿದ ಸತ್ಯಕ್ಕೆ ಒಡ್ಡಿ ಪಥ ಶೋಧಿಸುವ ಪರಿ, ಬುದ್ಧಿಪೂರ್ವಕವಾಗಿ ಆಯ್ದುಕೊಂಡ ಜೀವನಕ್ರಮ. (ಆತ್ಮಕಥನಕ್ಕೆ ಕ್ಷಮೆಯಿರಲಿ, ನಾನು ಇಂಗ್ಲಿಷ್ ಎಂಎ ಮಾಡಿ ಅಂಗಡಿ ತೆರೆದಾಗ ಕೆಲವರು ಹಿಂದಿನಿಂದ ಅನುಕಂಪ ತೋರಿದ್ದುಂಟು “ಒಂದು ಲೆಕ್ಚರರ್ ಕೆಲಸ ಸಿಕ್ಕುತ್ತಿರಲಿಲ್ಲವೇ?” ಮುಂದುವರಿದು ನನ್ನ ತಂದೆಯ ಕುರಿತು ಆಡಿಕೊಂಡದ್ದೂ ಉಂಟು “ನಾರಾಯಣರಾಯ್ರಿಗೆ ಮಗನಿಗೊಂದು ಕೆಲ್ಸಾ ಮಾಡಿಸಿಕೊಡಲಾಗಲಿಲ್ಲವೇ?”) ಆದರೂ “ಒಂದು ಹೋಟೆಲ್” ಈ ಬುದ್ಧಿವಂತನಿಗೆ ಬೇಕಿತ್ತೇ ಎನ್ನುವವರ ಸಂಶಯಕ್ಕೆ ಮತ್ತು ಅದಕ್ಕೂ ಮಿಗಿಲಾಗಿ ನಮ್ಮದೇ ಸಮಾಧಾನಕ್ಕಾಗಿ…

ಈಚೆಗೆ ನಾವು ಬೆಂಗಳೂರಿನಲ್ಲಿದ್ದಾಗ ಒಂದು ಮಧ್ಯಾಹ್ನದ ‘ಊಟಕ್ಕೆ’ ‘ಕ್ಯಾರಟ್ಸ್’ ಆರಿಸಿಕೊಂಡೆವು. ದಾರಿ ವಿಚಾರಿಸಿ ಕರೆ ಮಾಡಿದ್ದಾಗ “ಬೆಳಿಗ್ಗೆ ಹನ್ನೊಂದರಿಂದ ಸುಮಾರು ರಾತ್ರಿ ಹತ್ತರವರೆಗೆ ನಮ್ಮ ಕೆಲಸದ ಅವಧಿ. ವಾರದ ರಜೆ ಇಲ್ಲ. ಸಾಧ್ಯವಾದರೆ ಮಧ್ಯಾಹ್ನ ಒಂದು ಗಂಟೆಯ ಮೊದಲು ಬನ್ನಿ. ನಮ್ಮ ಸಾವಯವ ತರಕಾರಿ ಖರೀದಿ ಕೇಂದ್ರವನ್ನು ನಿಮಗೆ ಬಿಡುವಿದ್ದರೆ ತೋರಿಸುತ್ತೇನೆ” ಎಂದೂ ಶಾಸ್ತ್ರಿ ಹೇಳಿದ್ದರು. ನಗರದ ಗೌಜು, ಗಾಜು ಹೊದಿಸಿದ ಕಟ್ಟಡ ವಿನ್ಯಾಸಗಳನ್ನು ನಿರಾಕರಿಸಲಾಗದ ವ್ಯಾವಹಾರಿಕ ಸತ್ಯಕ್ಕೆ ವಾತಾಯನದ ಕೃತಕವನ್ನು ಅಳವಡಿಸಿಕೊಂಡಿದ್ದಾರೆ. ಉಳಿದಂತೆ ಮಳಿಗೆಯ ಸರಳ ಒಳಾಲಂಕರಣ ಇವರ ತತ್ತ್ವಗಳಿಗೆ ಅಪ್ಯಾಯಮಾನವಾಗಿದೆ. ಪ್ರವೇಶಿಸುವಲ್ಲೇ ನಾಲ್ಕೈದು ತೆರೆದ ಕಪಾಟುಗಳನ್ನಿಟ್ಟು ಕೆಲವು ಸಾವಯವ ಉತ್ಪನ್ನಗಳು, ವಿಷಯ ಸಂಬಂಧೀ ಪುಸ್ತಕಗಳನ್ನೂ ಪ್ರದರ್ಶನ, ಮಾರಾಟಕ್ಕಿಟ್ಟಿದ್ದಾರೆ. ಕೆಳ ಅಂತಸ್ತು ಮುಖ್ಯ ಮಾರಾಟ ಮಳಿಗೆಯಾದರೆ ಮೇಲೆ ಎರಡು ವಿಭಾಗಗಳಿವೆ. ಅಲ್ಲಿ ಪ್ರವೇಶದ್ದು ಸದ್ಯ ಖಾಲಿಯೇ ಇದ್ದರೆ ಒಳಗಣದು ಅಡುಗೆ ಮತ್ತು ಸೀಮಿತ ನೌಕರ ವಸತಿಗೆ ಬಳಕೆಯಾಗುತ್ತಿದೆ. ಗಿರಾಕಿಯ ಅಗತ್ಯಗಳ ವಿಚಾರಣೆ, ಅಡುಗೆಮನೆಗೆ ವಿವರಣೆ, ಅಲ್ಲಿ ತಯಾರಾಗಿ ಕೆಳಗೆ ಬಂದದ್ದನ್ನು ಮೇಜುಗಳಿಗೆ ಪೂರೈಕೆ, ಕೊನೆಯಲ್ಲಿ ಪಾವತಿ ಸ್ವೀಕರಿಸಿ ಬೀಳ್ಕೊಡುವವರೆಗೂ ಹೆಚ್ಚುಕಡಿಮೆ ಏಕಾಂಗ ಜವಾಬ್ದಾರಿಯನ್ನು ಕೃಷ್ಣಶಾಸ್ತ್ರಿ ವಹಿಸಿಕೊಳ್ಳುತ್ತಾರೆ! ಒಮ್ಮೊಮ್ಮೆ ಶಾಸ್ತ್ರಿಗಳ ವಿದೇಶೀ ಪಾಲುದಾರ ಜೊತೆಗಿರುವುದುಂಟು. ನಾವು ಹೋದ ಸಮಯದಲ್ಲಿ ಬೆಂಗಳೂರಿನ ‘ಪ್ರಾಕೃತಿಕ ಶಿಕ್ಷಣ ಸಂಸ್ಥೆ’ – ಭೂಮಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಯೋಗಿಕ ತರಬೇತಿಯ ಅಂಗವಾಗಿ ಇವರ ಸಹಾಯಕ್ಕಿದ್ದದ್ದೂ ಕಂಡೆ. ಮತ್ತವರು ಸರದಿಯಲ್ಲಿ ತುಂಬಾ ಒದಗುವುದೂ ಉಂಟಂತೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರ ಇದು ಬರಿಯ ಹೋಟೆಲಲ್ಲ. ಆಹಾರ ಪಾನೀಯ ಮಾರುವುದು ನಿಜ, ಗಿರಾಕಿಗಳು ಹಣಕೊಟ್ಟು ಹೊಟ್ಟೆತುಂಬಿಸಿಕೊಳ್ಳುವುದೂ ನಿಜ. ಹಾಗೆಂದು ಇಲ್ಲಿನ ಸಂಬಂಧ ಶುದ್ಧ ವಾಣಿಜ್ಯ ಅಲ್ಲ ಎನ್ನುವುದಕ್ಕೇ ನಿರ್ವಹಣೆಗೆ ಕೃಷ್ಣಶಾಸ್ತ್ರಿಯಂಥವರು ನಿಲ್ಲಬೇಕು. ಇದು ಪ್ರಸಿದ್ಧ ಪಾಕಗಳ (ಇಡ್ಲಿ, ಒಡೆ, ದೋಸೆ, ಚಾ, ಕಾಫಿ, ಊಟ ಇತ್ಯಾದಿ) ಇನ್ನೊಂದು ಬಟವಾಡೆ ಕೇಂದ್ರವಲ್ಲ. ಸಿದ್ಧ ತತ್ತ್ವಗಳ ಅನುಸಂಧಾನ ರಂಗ.

ಔಪಚಾರಿಕತೆಗಳು (ಪೂರ್ವಪರಿಚಯದ ಕಾರಣ) ಮುಗಿದ ಮೇಲೆ ಮುದ್ರಿತ ಪಾಕಪಟ್ಟಿ ಕೊಟ್ಟು ನೀವೇನು ಬಯಸುತ್ತೀರಿ ಎನ್ನುವಂತೆ ಶಾಸ್ತ್ರಿ ನಮ್ಮ ಮುಖ ನೋಡಿದರು. ವಿವಿಧ ನಮೂನೆಯ ತಿಳಿಸಾರು (ಸೂಪುಗಳು), ಪಚ್ಚಡಿಗಳು (ಸಲಡ್ಸ್), ಪ್ರಾಥಮಿಕ ಪಾಕಗಳು (ಸ್ಟಾರ್ಟರ್ಸ್), ಮುಖ್ಯ ತಿನಿಸುಗಳು (ಮೇನ್ ಕೋರ್ಸಸ್), ಪಾನೀಯಗಳು (ಬಿವರೇಜಸ್), ವಿಶೇಷ ಭಕ್ಷ್ಯಗಳು (ಡೆಸರ್ಟ್ಸ್) ಎಂದೆಲ್ಲ ಶೀರ್ಷಿಕೆಗಳಿದ್ದುವು. ಮತ್ತವುಗಳ ಅಡಿಯಲ್ಲಿ ಕೆಲವು ಪರಿಚಿತ ಹೆಸರುಗಳೂ ಹಲವು ತಿಲಕಾಷ್ಠಮಹಿಷಬಂಧನಗಳೂ (ಬೆಲೆ ಸಹಿತ) ಪಟ್ಟಿಯಾಗಿದ್ದುವು. ನಮ್ಮ ಅಜ್ಞಾನದ ಬಗೆಗೇನೂ ನಾಚಿಕೆಪಟ್ಟುಕೊಳ್ಳದೆ “ಊಟಕ್ಕೆ ಕೊರತೆಯಾಗದಂತೆ ನಾವೇನು ತಿನ್ನಬಹುದು ಎಂದು ನೀವೇ ವಿವರಿಸಿ, ಕೊಡಿ” ಎಂದು ಶಾಸ್ತ್ರಿಗಳಿಗೇ ಬಿಟ್ಟೆವು.

ಮೊದಲೊಂದು ‘ಮಿಲ್ಕ್ ಶೇಕ್’ ಎಂದರು. ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಹೋಗಿ ಕಹಿಬೇವಿನ ಕಷಾಯಕ್ಕೆ ಸಿಹಿ ಕಡಿಮೆ ಎಂದ ಹೆಡ್ಡರಂತಾಗಬಾರದಲ್ಲಾ ಎಂದು “ಒಂದು ಲೋಟ ಕೊಡಿ. ಅರ್ಧರ್ಧ ಮಾಡಿಕೊಳ್ತೇವೆ” ಎಂದೆವು. ಪ್ರಾಣಿಜನ್ಯಕ್ಕೆ ನಿಷೇಧವೇ ಹೊರತು ‘ಹಾಲು’ ಎಂಬ ಶಬ್ದಕ್ಕಲ್ಲವಲ್ಲಾ. (ಇದರ ಮುಂದುವರಿಕೆಯಂತೇ ಮಜ್ಜಿಗೆ, ಬೆಣ್ಣೆ, ಚೀಸುಗಳೆಲ್ಲಾ ಇಲ್ಲಿ ಇದ್ದೂ ಇಲ್ಲವಾಗಿವೆ.) ಸೋಯಾ, ಗೇರುಬೀಜ ಮತ್ತು ಬಾದಾಮಿಗಳನ್ನು (ನೀರಿನಲ್ಲಿ) ಕಡೆದು ತೆಗೆದ ಹಾಲಿಗೆ, ನನ್ನ ಮಿತಿಯಲ್ಲಿ ನೆನಪಿಸಿಕೊಳ್ಳಲಾಗದ ಕೆಲವು ಸಸ್ಯ ರುಚಿಕಾರಕಗಳನ್ನು (ಸಕ್ಕರೆಯಿಲ್ಲ) ಸೇರಿಸಿ ಒಂದು ದೊಡ್ಡ ಲೋಟದಲ್ಲಿ ಕೊಟ್ಟರು. ಅತ್ತ ಪಾಯಸ ಅಲ್ಲ, ಇತ್ತ ರಸಾಯನ ಅಲ್ಲ. ಬಾಯಾರಿಕೆಗೂ ಹೌದು, ಗಟ್ಟಿ ಆಹಾರವೂ ಹೌದು. ಶಾಸ್ತ್ರಿಗಳ ಕಣ್ತಪ್ಪಿಸಿ ಪಟ್ಟಿಯಲ್ಲಿ ಅದರ ಬೆಲೆ ನೋಡಿದ ತಪ್ಪಿಗೆ “ಎರಡೇ ಹೇಳಬಹುದಿತ್ತು” ಎಂಬ ಮಾತು ತಪ್ಪಿ ಹೊರಬರದಂತೆ ಎಚ್ಚರವಹಿಸಿ ಉದ್ಗರಿಸಿದೆ, “ಇದು ರುಚಿ ಉಂಟು ಮಾರಾಯ್ರೇ.” ನಿತ್ಯಕ್ಕೆ ಆರೋಗ್ಯಕರವಾದದ್ದು ರುಚಿಕರವೂ ಆಗಿರಬೇಕು ಎನ್ನುವುದನ್ನು ಒಪ್ಪಿದ್ದಕ್ಕೇ ಇದು “ಅಡುಗೆಮನೆ, ಮದ್ದಿನಮನೆಯಲ್ಲ” ಎಂದಿತು ಶಾಸ್ತ್ರಿಗಳ ಕಿರುನಗೆ.

ಮುಖ್ಯ ತಿನಿಸಿಗೆ ಬಂದಾಗ ಶಾಸ್ತ್ರಿಗಳು ಅದೇನೋ ‘ಪಿಜ್ಜಾ’ ಮತ್ತು ‘ಆರೋಗ್ಯದ ಬಟ್ಟಲು’ ಎಂದು ಎರಡು ಹೆಸರು ಹೇಳಿ ನೂರೆಂಟು ವಿವರಿಸಿದರು. ಕ್ಯಾರಟ್ ೧೦೦% ಸಸ್ಯಾಹಾರದ ಜೊತೆಗೇ ಆರೋಗ್ಯಕರ ಆಹಾರವನ್ನೂ ಒತ್ತಿ ಹೇಳುತ್ತದೆ. ಹಾಗಾಗಿ ಇಲ್ಲಿನ ಪಾಕಗಳಲ್ಲಿ ತರಕಾರಿಗಳ (ಸೊಪ್ಪು, ಧಾನ್ಯ, ಗೆಡ್ಡೆಗಳ) ಜೀವಸತ್ತ್ವಗಳು ನಾಶವಾಗದ ಕಾಳಜಿಯಿದೆ. ಪ್ರಮಾಣಗಳು ರುಚಿಯೊಡನೆ ಪರಸ್ಪರ ಸಂತುಲಿತವಾಗುವ ಹದವೂ ಇದೆ. ಕ್ಯಾನ್ಸರ್‌ಕಾರಕ ಮೈದಾ ಇವರ ಖರೀದಿ ಪಟ್ಟಿಯಲ್ಲೇ ಇಲ್ಲ. ಬೇಯಿಸಿ ಮಡ್ಡಿಮಾಡುವ, ಬತ್ತಿಸಿ ಚರಟುಳಿಸುವ, ಕರಿದು ಜಿಡ್ಡಾಗಿಸುವ, ಹುರಿದುಹುಡಿ ಹಾರಿಸುವ, ಸುಟ್ಟು ಮಸಿಮಾಡುವ ಪಾಕಕ್ರಮ ಇವರದಲ್ಲ. “ಹಾಗಾದರೆ ಏನಿದು ಪಿಜ್ಜಾ? ಮತ್ತೆ ನಮ್ಮ ನಿತ್ಯದ ಅನ್ನದ ಬಟ್ಟಲು ಕಡಿಮೆ ಪೋಷಕವೇ?” – ಪ್ರಶ್ನೆಗಳು ಕಾಡದಿರಲಿಲ್ಲ. ಆದರೂ ‘ಹೆಸರಿನಲ್ಲೇನುಂಟು’ ಎಂದು ಮಹಾಕವಿಯ ಆಸರೆ ಪಡೆದೆ. ಬಳಕೆಯಿಲ್ಲದ ಹೆಸರಾದ್ದರಿಂದ ತಲೆಯೊಳಗೆ ಹುರಿದ ಹಸುವಿನ ಮಾಂಸ, ಗೋಬಿಮಂಚೂರಿಯ ಮಂದ ರಕ್ತವರ್ಣದ ರಸದ ಚಿತ್ರಗಳೆಲ್ಲ ಹರಿದಾಡಿದರೂ ಒಂದೊಂದು ಹೇಳಿಯೇಬಿಟ್ಟೆವು. ಶುದ್ಧ ಗೋಧಿಯಲ್ಲಿ ಮಾಡಿದ ‘ದಪ್ಪರೊಟ್ಟಿ’ಗೆ ಗೇರುಬೀಜದ ಚೀಸ್ ಹಾಕಿತ್ತು. ಮೇಲೆ ವರ್ಣಮಯ ಚಿತ್ತಾರದಂತೆ ಹದಗೊಳಿಸಿದ ಬಗೆಬಗೆಯ ತರಕಾರಿ ಸೀಳುಗಳು. ನಾಲ್ಕು ಪಾಲಿನಲ್ಲಿ ಇಬ್ಬರೂ ಹಂಚಿಕೊಂಡೆವು. ಮತ್ತೆ ‘ಕ್ಯಾರಟ್ಸ್ ಆರೋಗ್ಯದ ಬಟ್ಟಲಿ’ನಲ್ಲಿ ನಡುವೆ ದೊಡ್ಡ ಒಂದು ಇಡ್ಲಿ ಇದ್ದಂತಿತ್ತು. ಹಾಂ, ಹಾಂ, ಬೀಸಿ ಹುದುಗು ಬರಿಸಿದ ಉದ್ದಿನ ಹಿಟ್ಟಿನಲ್ಲಿ ಅಕ್ಕಿ ತರಿ ಎಲ್ಲಾ ಯೋಚಿಸಬೇಡಿ. ಕಡಿಮೆ ಬಳಕೆಯ ಕಿರುಧಾನ್ಯಗಳಲ್ಲಿ ಒಂದಾದ ನವಣೆಯ ಹಬೆಯಾಡಿಸಿದ ಪಾಕವಿದು. ಅದಕ್ಕೆ ಮೂರು ವಿಧದ ಚಟ್ನಿ, ನಂಚಿಕೊಳ್ಳಲು ಬಗೆತರದ ಹಸಿಬಿಸಿ ತರಕಾರಿ, ರುಚಿಗಷ್ಟೇ ಸೈಂಧವ ಲವಣ. ಎಲೆಕೋಸಿನ ಬಿಳಿ, ದೊಡ್ಡಮೆಣಸಿನ ಹಸಿರು, ಟೊಮೆಟೋದ ಕೆಂಪು, ಮತ್ತೊಂದರ ಬೂದು, ಮಗುದೊಂದರ ಕಂದುಗಳೆಲ್ಲಾ ಕಂದದ ಪಾಕ. ಬಂದದ್ದನ್ನು ಮತ್ತೆ ಇಬ್ಬರೂ ಅರ್ಧರ್ಧ ಮಾಡಿಕೊಂಡು ಸವಿದೆವು. ಎರಡೇ ಮುಷ್ಠಿ ಅಕ್ಕಿಯ ಪಾಕದಲ್ಲಿ (ಸಾರು, ಪಲ್ಯ, ಹುಳಿ, ಮಜ್ಜಿಗೆ ಸೇರಿ) ನಿತ್ಯ ಎರಡು ಹೊತ್ತಿಗೆ ಭರ್ತಿ ಭೋಜನ ಕಾಣುವ ನಮಗೆ ಕ್ಯಾರಟ್ಟಿನ ಒಂದೊಂದೇ ಪಿಜ್ಜಾ, ಆರೋಗ್ಯದ ಬಟ್ಟಲು ಧಾರಾಳವೇ ಆಯ್ತು. ಆದರೂ ‘ಭಟ್ಟ’ರ ಊಟದಲ್ಲಿ ಮಜ್ಜಿಗೆಯಿಲ್ಲದೆ ಮುಕ್ತಾಯವುಂಟೇ! ಶಾಸ್ತ್ರಿಗಳದೇ ಶಿಫಾರಸಿನ ಮೇಲೆ ಒಂದು ಲೋಟ (ನೆಲಗಡಲೆ) ಮಜ್ಜಿಗೆ ತರಿಸಿ ಬೈಟೂ ಮಾಡಿ ಚಪ್ಪರಿಸಿದೆವು. ಅವರ ಮಾರಾಟ ಮಳಿಗೆಯಿಂದ ಎರಡು ಬಗೆಯ ಸಿಹಿ ತಿನಿಸುಗಳನ್ನೂ (Cashew butter cake ಮತ್ತು Tahini butter cake) ಮನೆಯವರೊಡನೆ ತಡವಾಗಿ ಸವಿಯುವ ಕುಶಿಗಾಗಿ ಕಟ್ಟಿಸಿಕೊಂಡೆವು. ಇವುಗಳ ‘ಶಾಶ್ತ್ರೀ’ಯ ವಿಶ್ಲೇಷಣೆ ತುಂಬ ಸ್ವಾರಸ್ಯಕರವಾದುದು. “ಬೇಕಿಂಗ್ ಪೌಡರ್, ಈಸ್ಟ್, ಸಕ್ಕರೆ ಅಥವಾ ಬೆಲ್ಲವನ್ನೂ ಹಾಕದ ಇದನ್ನು ನಾವು ಬೇಯಿಸದ ಕೇಕ್ ಎಂದೇ ಎತ್ತಿ ಹಿಡಿಯುತ್ತೇವೆ. ಇದರಲ್ಲಿ ಒಣಹಣ್ಣುಗಳೇ ಪ್ರಧಾನ ಅಂಶ.”

ಕೃಷ್ಣಶಾಸ್ತ್ರಿಯವರ ದೇಹದ ‘ಪುಷ್ಟಿ’ ಇಂದು ಇಳಿದಿದೆ, ಲವಲವಿಕೆ ಹೆಚ್ಚಿದೆ. ಶಾಸ್ತ್ರಿ ಮಾಳಿಗೆಗೂ ನಮ್ಮನ್ನು ಕರೆದೊಯ್ದಿದ್ದರು. ದೊಡ್ಡ ಹಜಾರ ಖಾಲಿಯೇ ಇತ್ತು. ಅಲ್ಲಿ ನಿಯತವಾಗಿ ಪಾಕಪ್ರಯೋಗದ ಪಾಠ, ವಿಚಾರ ಸಂಕೀರ್ಣಗಳನ್ನು ಆಸಕ್ತ ಗುಂಪುಗಳೊಡನೆ ನಡೆಸುವ ಯೋಜನೆ ಇವರದು. (ಆಗಲೇ ಒಂದೆರಡು ನಡೆದಿರಬೇಕು.) ಧಾರಾಳ ಬೆಳಕು, ಗಾಳಿ ಆಡುವ ಇವರ ಅಡುಗೆಕೋಣೆ ಆಸ್ಪತ್ರೆಯ ಬಿಳಿಬಣ್ಣದಲ್ಲಿತ್ತು. ನನ್ನ ಆಶ್ಚರ್ಯಕ್ಕೆ ಶಾಸ್ತ್ರಿ ಪ್ರತಿಕ್ರಿಯಿಸುತ್ತ “ಜಿಡ್ಡು, ಮಸಿಗಳ ಉತ್ಪನ್ನಗಳೇ ನಮ್ಮಲ್ಲಿಲ್ಲವೆನ್ನುವುದಕ್ಕೆ ನಿದರ್ಶನವಾಗಿ ಗೋಡೆಯ ಬಿಳುಪು ಉಳಿಸಿಕೊಳ್ಳುವ ಛಲ ನನ್ನದು” ಎಂದರು. ಅವರ ಸಹಾಯಕರು (ಮೂರು ಮಂದಿಯಿದ್ದರು) ಸಾಂಪ್ರದಾಯಿಕ ಪಾಕ ಪ್ರವೀಣರು. ಆದರೆ ಇಲ್ಲಿ ಅವರು ಸ್ಪಷ್ಟ ಸೂಚನೆಗಳಂತೆ ಭಿನ್ನಪಾಕ ಮಾಡುತ್ತಾರೆ. ಮತ್ತೆ ಶಾಸ್ತ್ರಿ ಸೇರಿದಂತೆ ಎಲ್ಲರೂ ಸ್ವಂತಕ್ಕೂ ಬಳಸುತ್ತಾರೆ (ಮಾಡಿದ್ದುಣ್ಣೋ ಮಹರಾಯಾ). ಹಸಿವೆಯ ಚೀಲಕ್ಕೆ ಏನಾದರೂ ತುಂಬುವುದಲ್ಲ. ಆಹಾರ, ಆರೋಗ್ಯಕ್ಕೆ ಪರ್ಯಾಯಪದ ಎನ್ನುವುದು ಈಗ ನೌಕರರಿಗೂ ಅನುಭವಗಮ್ಯ ಸತ್ಯವಾಗಿದೆ. ಕೊನೆಯದಾಗಿ ಬರುವ ಗಿರಾಕಿಗಳು. ಯಾವುದೇ ಹೊಸ ವಿಚಾರಲಹರಿಗಳಿಗೆ ಒಮ್ಮೆ ಒಲಿದಂತೆ ಕಾಣುವವರು ಬಹಳ. ಆದರೆ ದೀರ್ಘಕಾಲಿಕವಾಗಿ ಅದಕ್ಕೆ ನಿಷ್ಠೆಯನ್ನು ಉಳಿಸಿಕೊಳ್ಳುವವರು ವಿರಳ. ಹಾಗೆ ಕಟ್ಟಾ ಅನುಯಾಯಿಗಳಾದರೂ ಒಂದು ವಾಣಿಜ್ಯಿಕ ಸಂಸ್ಥೆಯನ್ನು ಅವಲಂಬಿಸುವುದಕ್ಕಿಂತ ಸ್ವಂತ ಅಡುಗೆಮನೆಯನ್ನೇ ಆಶ್ರಯಿಸಿಯಾರು. ಕ್ಯಾರಟ್ಸಿನ ವಾಣಿಜ್ಯ ಯಶಸ್ಸೇನಿದ್ದರೂ ಸಮಾಜದ ಬಹುದೊಡ್ಡ ಭಾಗವಾದ ಶ್ರೀಸಾಮಾನ್ಯರನ್ನು ಆಕರ್ಷಿಸುವುದರಲ್ಲೇ ದಕ್ಕಬೇಕು. ಇವರು ತಿಂದು ಮಝಾ ಮಾಡಲು ಬರ್ಗರ್ ಗಡ್ಬಡ್ಡು, ಸಮತೋಲನಕ್ಕೆ ಬುಲ್ ಶಿಟ್ ಗಂಜಳ, ಮಾನಸಿಕಕ್ಕೆ ಡಬ್ಬಲ್ ಶ್ರೀ, ದೈಹಿಕಕ್ಕೆ ಮುದ್ರಾಶ್ರೀ, ಮನರಂಜನೆಗೆ ಮಾಲಾಶ್ರೀ, ಪಾರಮಾರ್ಥಿಕಕ್ಕೆ ಅನರ್ಥಶ್ರೀ ಎಂದಿತ್ಯಾದಿ ಓಲಾಡುವುದು ಹೆಚ್ಚು. ಧ್ಯಾನ, ಯೋಗ, ರೇಕಿ, ಮುದ್ರೆ, ಮಣಿ, ತೈಲ, ಇತ್ಯಾದಿ ಯಾವುದು ಪ್ರಚಾರದ ಉತ್ತುಂಗದಲ್ಲಿದ್ದರೂ ಅಲ್ಲಿ ಇವರಿರಲೇಬೇಕು. ಅವರನ್ನು ಆಕರ್ಷಿಸುವಲ್ಲಿ, ಉಳಿಸಿಕೊಳ್ಳುವಲ್ಲಿ, ಇನ್ನೂ ಮುಖ್ಯವಾಗಿ ಬೆಳೆಸುವಲ್ಲಿ ಸಂಪರ್ಕ, ಸಂವಹನ ತುಂಬಾ ಮುಖ್ಯ ಅಂಶ. ಆ ಲೆಕ್ಕದಲ್ಲಿ ಕ್ಯಾರಟ್ಸ್ ೧೦೦% ಸಸ್ಯಾಹಾರದ ಪ್ರಧಾನ ಅಗತ್ಯವೂ ಸಮರ್ಥ ನಿರ್ವಾಹಕನಾಗಿಯೂ ಕೃಷ್ಣಶಾಸ್ತ್ರಿ ಎದ್ದು ಕಾಣುತ್ತಾರೆ. (ನೆನಪಿರಲಿ: ಅಂತಿಮ ಬಿಲ್ಲನ್ನು ಸಾಮಾನ್ಯ ಹೋಟೆಲಿನ ಬಿಲ್ಲಿಗೆ ಹೋಲಿಸುವ ತಪ್ಪು ಮಾಡಬಾರದು.)

ಪ್ರಾದೇಶಿಕತೆ, ಋತುಮಾನ, ದೇಹಪ್ರಕೃತಿಗಳನ್ನವಲಂಬಿಸಿ ನಮ್ಮ ಸೇವ್ಯಗಳು ರೂಪುಗೊಳ್ಳಬೇಕು ಎನ್ನುವುದನ್ನು ವಾಣಿಜ್ಯ ನೆಲೆಯಲ್ಲಿ ಯಶಸ್ವಿಗೊಳಿಸುವ ಗುರುತರ ಪ್ರಯೋಗ ಕ್ಯಾರಟ್ಸ್. ಹಾಗಾಗಿ ಇಲ್ಲಿನ ಪರಿಕರ ಖರೀದಿ ‘ಮಾಮೂಲೀ ಹೊಡೆಯುವವರ’ ಮೂಲಕ (ಪಟ್ಟಿ ಕೊಟ್ಟರೆ ಬಾಗಿಲಿಗೆ ತಂದೊಪ್ಪಿಸುವವರು) ಸಾಗುವುದಿಲ್ಲ. ಲಾಲ್ ಭಾಗ್ ಬಳಿಯ ಸಾವಯವ ಸಸ್ಯೋತ್ಪನ್ನಗಳ ಮಳಿಗೆ – ಜೈವಿಕ್ ಮಾಲ್, ಸದ್ಯಕ್ಕೆ ಇವರಿಗಿರುವ ದೊಡ್ಡ ಆಧಾರ. (ಶಾಸ್ತ್ರಿ ಅಂದು ಅಪರಾಹ್ನ ಅಲ್ಲಿಗೆ ಮಾಮೂಲೀ ಖರೀದಿಗೆ ಹೋಗುವರಿದ್ದರು. ಹಾಗಾಗಿ ನಮಗೆ ಬಿಡುವಿದ್ದಿದ್ದರೆ ನಮ್ಮನ್ನೂ ಒಯ್ಯುವ ಅಂದಾಜು ಮಾಡಿದ್ದರು.) ಅಲ್ಲಿ ಬರುವವುಗಳಲ್ಲಿ ಇವರು ಆಯ್ದುಕೊಳ್ಳಬೇಕು. ಮುಂದುವರಿದು ಅವುಗಳನ್ನು ವಿಶಿಷ್ಟ ತತ್ತ್ವಗಳ ಆಧಾರದಲ್ಲಿ ಅಡುಗೆಯ ರುಚಿಗೆ ಒಗ್ಗಿಸುವಲ್ಲಿ, ತಟ್ಟೆಯ ಸೌಂದರ್ಯಕ್ಕೆ ಇಳಿಸುವಲ್ಲಿ, ನೌಕರರಿಗೆ ಸ್ಪಷ್ಟ ನಿರ್ದೇಶನ ಕೊಡಬೇಕು. ಕೊನೆಯದಾಗಿ ಬಯಸಿ, ನಾಲಗೆಗಳ ಮೂಲಕ ಬುದ್ಧಿಗೆ ತಂದುಕೊಳ್ಳಬೇಕೆಂಬವರಿಗೆ ಸಲಹೆಗಾರನೂ ಆಗಬೇಕು. ಕ್ಯಾರಟ್ಸಿನ ಒಳಗೆ (ನಾವಿದ್ದಾಗ ಬೇರೆ ಎರಡು ಮೂರು ಮೇಜುಗಳಲ್ಲಿ ಗಿರಾಕಿಗಳಿದ್ದರು) ಎಲ್ಲ ಸವಾಲು ಅಥವಾ ಸಮಸ್ಯೆಗಳಿಗೆ ಒಂದು ಹೆಸರಿನ ಉತ್ತರವಾಗಿ ಕಾಣಿಸಿದರು ಕೃಷ್ಣಶಾಸ್ತ್ರಿ. ಇದು ‘ಹೋಟೆಲ್ ಮಾಣಿ’ಗೆ ಅತೀತವೂ ಗಲ್ಲಾದ ಹಿಂದೆ ಕೂರುವ ‘ಯಜಮಾನ’ರಿಗೆ ಸಣ್ಣದಾಗಿಯೂ ಕಾಣಬಹುದಾದ ಸ್ಥಿತಿ. ಇಂದು ಘನತೆವೆತ್ತ ವನಧಾಮಗಳಲ್ಲಿ ನಿಮಗೆ ನಾಲ್ಕಾಣೆ ಭಕ್ಷೀಸಿನ ‘ಮಾರ್ಗದರ್ಶಿ’ ಸಿಗುವುದಿಲ್ಲ. ತಿಳಿಯ ಹೇಳುವ ಜೀವಶಾಸ್ತ್ರಜ್ಞರೇ ಇರುತ್ತಾರೆ. ಅಂಥದ್ದೇ ಆರೋಗ್ಯಧಾಮದ ಮೂರ್ತಸಾಕ್ಷಿಗೆ ಅವಶ್ಯ ಭೇಟಿ ನೀಡಿ ಕ್ಯಾರಟ್ಸ್ ಮತ್ತು ಕೃಷ್ಣಶಾಸ್ತ್ರಿ. ಇದು ಬರಿ ಹೋಟೆಲಲ್ಲೋ ಅಣ್ಣಾ!