ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಎಂಟು
ಅಧ್ಯಾಯ ಹದಿನೆಂಟು
ಅಂದಿನ ಬಿಎ (ಆನರ್ಸ್) ಪದವಿ ಎಂಎ ಪದವಿಗೆ ಸಮವೆಂದು ವಿಶ್ವವಿದ್ಯಾಲಯ ಅಂಗೀಕರಿಸಿತ್ತು. ಪ್ರಾಯಶಃ ಇಡೀ ಕೊಡಗಿನಲ್ಲಿ ಇಂಥ ಹಿರಿ ಡಿಗ್ರಿ ಪಡೆದವರು ಅಂದು ಬೆರಳೆಣಿಕೆಯವರು. ಆದರೆ ಈ ಪದವಿಗೊಪ್ಪುವ ವೃತ್ತಿ ಕೊಡಗಿನಲ್ಲೆಲ್ಲಿದೆ? ಇನ್ನು ಯಾವುದೇ ತಾಂತ್ರಿಕ ಪದವಿ ಅಥವಾ ಅನುಭವ ಇಲ್ಲದ, ಕೇವಲ ೨೧ರ ಹರೆಯದ, ಹುಡುಗನಿಗೆ ಸರಿಯಾದ ಹುದ್ದೆ ಯಾವುದು? ಯಾವ ಸ್ವತಂತ್ರ ಕಸಬನ್ನು ಹಿಡಿಯಬಹುದು? ಬಂಡವಾಳ?
೧೯೪೭ರ ಶೈಕ್ಷಣಿಕ ವರ್ಷಾರಂಭ. ಕೊಡಗಿನ ಶಿಕ್ಷಣಪ್ರೇಮಿಗಳು ನಾಪೋಕ್ಲು, ಸೋಮವಾರಪೇಟೆ, ಪೊನ್ನಂಪೇಟೆ ಮುಂತಾದ ವಿಸ್ತೃತ ಹಳ್ಳಿಗಳಲ್ಲಿ ಹೊಸ ಪ್ರೌಢಶಾಲೆಗಳನ್ನು ಸ್ಥಾಪಿಸಲು ನವೋತ್ಸಾಹಭರಿತರಾಗಿ ಕಳಕ್ಕೆ ದುಮುಕಿದರು. ಇವೆಲ್ಲ ಖಾಸಗಿ ಪ್ರಯತ್ನಗಳು. ಆಕರ್ಷಕ ಸಂಬಳ. ನೂತನ ಅವಕಾಶ. ನನ್ನ ಅನೇಕ ಹಿತೈಷಿಗಳು ಇಂಥ ಒಂದು ಶಾಲೆಗೆ ನಾನು ಗಣಿತಾಧ್ಯಾಪಕನಾಗಿ ಸೇರಬೇಕೆಂದು ಸೂಚಿಸಿದರು. ತಂದೆಗೂ ಇದು ಒಪ್ಪಿಗೆ ವಿಷಯ. ಆದರೆ ತಾಯಿ ಮಾತ್ರ ಖಡಾಖಂಡಿತವಾಗಿ ಹೇಳಿದರು, “ನೀನು ಸಮುದ್ರದಲ್ಲಿ ಈಸಿ ಜೈಸಬೇಕಾದ ಸ್ವತಂತ್ರ ತಿಮಿಂಗಿಲ, ಕೆರೆ ಕುಂಟೆಗಳಲ್ಲಿ ಅಡಗಿ ಹೆದರಿ ಬಾಳಬೇಕಾದ ಕಿರಿ ಮೀನಲ್ಲ.”
ಮದ್ರಾಸಿನ ರುಚಿವೈವಿಧ್ಯವನ್ನು — ಜ್ಞಾನ, ವಿಜ್ಞಾನ, ಸಂಗೀತ, ಸಾಹಿತ್ಯ ಇತ್ಯಾದಿ — ಯಥೇಚ್ಛವಾಗಿ ಉಂಡು ಸುಪುಷ್ಟನಾಗಿದ್ದ ನಾನು ಆ ಮಹಾನಗರಕ್ಕೇ ಹೋಗಿ ಪ್ರಯತ್ನಿಸುವುದೆಂದು ತೀರ್ಮಾನಿಸಿದೆ. ಅಪ್ಪನ ಸಹಪಾಠಿ ಕೆ.ಎಂ.ನಂಜಪ್ಪ (ಇವರು ಸ್ವತಂತ್ರ ಭಾರತದ ಪ್ರಥಮ ಮಹಾದಂಡನಾಯಕ ಜನರಲ್ ಕೆ.ಎಂ.ಕಾರ್ಯಪ್ಪನವರ ಅನುಜ) ಅಂದು Imperial Bank of Indiaದ (ಮುಂದೆ ಸ್ವತಂತ್ರ ಭಾರತದಲ್ಲಿದರ ಹೆಸರು State Bank of India) ಮದ್ರಾಸು ವಿಭಾಗದಲ್ಲಿ ಒಬ್ಬ ವರಿಷ್ಠ ಅಧಿಕಾರಿ. ಬ್ರಿಟಿಷ್ ಪ್ರಭುತ್ವದ ಉಕ್ಕಿನ ಶಿಸ್ತಿನಲ್ಲಿ ಈ ಹಿರಿ ಬ್ಯಾಂಕಿನ ಉನ್ನತ ಅಧಿಕಾರಿಯೊಬ್ಬನನ್ನು ನನ್ನಂಥ ಅನಾಮಧೇಯ ಯುವಕ ಭೇಟಿಯಾಗುವುದು ಅಸಾಧ್ಯ. ಆದರೆ ಕೊಡಗಿನ ಸಹಪಾಠಿಯಿಂದ ತಂದಿದ್ದ ಪರಿಚಯಪತ್ರವಿದ್ದುದರಿಂದ ನನಗೆಲ್ಲೂ ಮುಖಭಂಗವಾಗಲಿಲ್ಲ. ದ್ರುಪದನ ಆಸ್ಥಾನಕ್ಕೆ ಹೋದ ದ್ರೋಣನನ್ನೂ ಶ್ರೀಕೃಷ್ಣನ ಅರಮನೆಯನ್ನು ಪ್ರವೇಶಿಸಿದ ಸುದಾಮನನ್ನೂ ನೆನಪಿಸಿಕೊಂಡೆ.
ಮಹಾನುಭಾವ ನಂಜಪ್ಪ ನನ್ನನ್ನು ಆತ್ಮಿಯವಾಗಿ ಸ್ವಾಗತಿಸಿ ನುಡಿದರು, “ನೋಡು ತಿಮ್ಪಯ್ಯನ ಮಗ! ಇದು ಕೊಡಗಲ್ಲ. ಇಲ್ಲಿ ಬ್ರಾಹ್ಮಣರಿಗೆ ಸರ್ಕಾರೀ ಸಂಸ್ಥೆಗಳಲ್ಲಿ ಉದ್ಯೋಗಾವಕಾಶವಿಲ್ಲ. ಆದ್ದರಿಂದ ಖುದ್ದು ನಾನೇ ನಿನಗೆ ಈ ಬ್ಯಾಂಕಿನಲ್ಲಿ ಒಬ್ಬ ಗುಮಾಸ್ತನ ಕೆಲಸವನ್ನು ಕೂಡ ಕೊಡಿಸಲಾರೆ. ಚಿಂತೆ ಇಲ್ಲ. ನೀನು Indian Overseas Bank Ltdನ ಜನರಲ್ ಮ್ಯಾನೇಜರ್ನನ್ನು ನನ್ನ ಈ ಕಾಗದ ಸಹಿತ ಭೇಟಿಮಾಡು. ಅಲ್ಲಿ ನಿನಗೆ ಕೆಲಸವೇನೋ ಸಿಕ್ಕುತ್ತದೆ. ಆದರೆ ಎಲ್ಲಿಯೂ ಎಂದೂ ನಿನ್ನ ಯಾವುದೇ ಮಾತು ನಡವಳಿಕೆಗಳಿಂದ ಬ್ರಾಹ್ಮಣತ್ವ ಪ್ರಕಟವಾಗದಂತೆ ಕಡು ಎಚ್ಚರಿಕೆಯಿಂದ ವರ್ತಿಸು. ನನ್ನ ಶಿಫಾರಸನ್ನು ಅವರು ಮನ್ನಿಸುತ್ತಾರೆ. ಆದರೆ ಮೊದಲ ಅವಕಾಶದಲ್ಲೇ ನಿನ್ನನ್ನು ವಜಾಮಾಡಿಬಿಡಬಹುದು. ಎಚ್ಚರ, ಎಚ್ಚರ, ಎಚ್ಚರ” ಎಂದು ಹರಸಿ ಬೀಳ್ಕೊಟ್ಟರು.
ನಾನು ಹುಟ್ಟಿ ಬೆಳೆದ ಪರಿಸರದಲ್ಲೆಲ್ಲೂ ಜಾತಿಕಾರಣವಾಗಿ ಯಾರನ್ನಾದರೂ ದ್ವೇಷಿಸಿದ್ದಾಗಲೀ ತಿರಸ್ಕರಿಸಿದ್ದಾಗಲೀ ಅರಿವಿಗೆ ಬಂದಿರಲಿಲ್ಲ. ಎಂದೇ ನನ್ನ ನಡೆ ನುಡಿ ಬಗೆಗಳಲ್ಲಿ ಕೋಮುಭಾವನೆ ಎಂದೂ ಎಲ್ಲಿಯೂ ನುಸುಳುತ್ತಿರಲಿಲ್ಲ. ನಂಜಪ್ಪನವರಿತ್ತ ವಿಭೀಷಣಪತ್ರ ಸಹಿತ ಓವರ್ಸೀಸ್ ಬ್ಯಾಂಕಿಗೆ ಹೋದೆ. ಜನರಲ್ ಮ್ಯಾನೇಜರ್ ನನ್ನನ್ನು ಚೀಫ಼್ ಅಕೌಂಟೆಂಟ್ ಬಳಿ ಕಳಿಸಿದರು.
Chief Accountant, “You are a Mathematics MA?”
“Yes sir.”
“Then work out the following problem. It has been dodging us since this morning: Rs 93,457-5-7 X 19/20.”
ರೂಪಾಯಿ-ಆಣೆ-ಪೈ ಬಳಕೆಯಲ್ಲಿದ್ದ ದಿನಗಳವು. Ready reckoner, ಕಿಸೆಗಣಕ ಮುಂತಾದ ಧಿಡೀರ್ ಉತ್ತರ ಕೆಡೆಯುವ ಸ್ಯಮಂತಕಮಣಿ ರಂಗಪ್ರವೇಶಿಸಿರಲ್ಲ. ಮಗ್ಗಿಕೋಷ್ಟಕ, ಕಾಗದ, ಪೆನ್ಸಿಲ್ ಮತ್ತು ಗಣಿತಪ್ರಜ್ಞೆ ಮಾತ್ರ ನನ್ನ ಆಸ್ತಿ. ಕೇವಲ ೨ ಮಿನಿಟುಗಳಲ್ಲೇ ಉತ್ತರ ಬರೆದು ಅವರಿಗಿತ್ತೆ. ಅವರಿನ್ನೂ ಮೊದಲ ಹೆಜ್ಜೆಯಲ್ಲೇ ತೊಳಲಾಡುತ್ತಿದ್ದರು.
ಅವರಿಗೆ ನಂಬಲಾಗಲಿಲ್ಲ, “How did you do it?”
ಆ ಹೆಜ್ಜೆಗಳನ್ನು ವಿವರಿಸಿದೆ, “19/20 is equal to (1 – 1/20). So you divide the given amount by 20 and subtract the quotient from the original figure. It is just elementary.”
“I won’t accept it. We in the Bank do not recognize any shortcuts. Do it in the right royal way, which is the safest. First multiply by 19 and then divide the product by 20. Do you get me?”
ನನಗೆ ಇಂಗ್ಲಿಷ್ ವಿದ್ವಾಂಸ ಸ್ಯಾಮ್ಯುಯೆಲ್ ಜಾನ್ಸನ್ ಒಮ್ಮೆ ಸಿಡಿಸಿದ್ದ ನುಡಿಕಿಡಿ ನೆನಪಿಗೆ ಬಂತು, “An Athenian blockhead is the worst of all blockheads.” (ಸಕಲ ಮುಠ್ಠಾಳರ ಪೈಕಿ ಪಾಟಲೀಪುತ್ರದ ಮುಠ್ಠಾಳ ಪರಮ ನಿಕೃಷ್ಟ!) ನಿಜ, ಅಜ್ಞಾನಿಗಳ ಕೂಡೆ ಅಧಿಕ ಪ್ರಸಂಗ ಸಲ್ಲಲ್ಲದೆಂದು ನಾನು ಮೌನಕ್ಕೆ ಶರಣಾದೆ. ಈ “ಪ್ರಥಮ ಚುಂಬನಂ ದಂತ ಭಗ್ನಂ” ನನಗೊಂದು ಪಾಠ ಕಲಿಸಿತು: ನನ್ನ ಯಾವುದೇ ಬೌದ್ಧಿಕ ಕಸರತ್ತು ಅಥವಾ ಸಾಹಿತ್ಯಕ ಚಮತ್ಕಾರ ಇಲ್ಲಿ ಸಲ್ಲದು — ಕೋಣನ ಮುಂದೆ ಕಿನ್ನರಿ ಬಾರಿಸತಕ್ಕದ್ದಲ್ಲ.
ನನ್ನನ್ನು ಉಣ್ಣಿಕೃಷ್ಣನ್ ಎಂಬ ಅನುಭವೀ ಗುಮಾಸ್ತನ ಜೊತೆ ಅಭ್ಯಾಸಾರ್ಥ ಬಿಟ್ಟರು. ಗ್ರಾಹಕರು ಕೊಡುವ ಚೆಕ್ಕನ್ನು ಅವರ ಖಾತೆಯೊಂದಿಗೆ ತುಲನೆ ಮಾಡಿ ಅದರಲ್ಲಿ ಸಾಕಷ್ಟು ಠೇವಣಿ ಇದ್ದರೆ ಮಂಜೂರು ಮಾಡುವ ಯಾಂತ್ರಿಕ ಕೆಲಸವಿದು. ಎರಡನೆಯ ಹಂತದಲ್ಲಿ ವಾರಾಂತ್ಯದ ಖಾತಾಪುಸ್ತಕ ಸಂತುಲನವೆಂಬ (balancing the ledgers) ಮಹಾಯಜ್ಞ ನಿರ್ವಹಣೆಗೆ ನಿಯೋಜಿಸಿದರು. ಸಹೋದ್ಯೋಗಿಗಳ ದೃಷ್ಟಿಯಲ್ಲಿ ಇದೊಂದು ಯಮಶಿಕ್ಷೆ: ಸುಮಾರು ೧೦೦೦ ಬಿಡಿ ಖಾತೆಗಳಲ್ಲಿಯ ಶಿಲ್ಕುಗಳ ಮೊತ್ತವನ್ನು ಶುಕ್ರವಾರ ಕೆಲಸಸದ ವೇಳೆ ಮುಗಿದ ಬಳಿಕ ತೊಡಗಿ ಶನಿವಾರ ಮುಂಜಾನೆ ಕೆಲಸ ಆರಂಭವಾಗುವ ಮೊದಲು ಸರಿದೂಗಿಸಲೇಬೇಕಾಗಿತ್ತು. ಈ ರೂಪಾಯಿ-ಆಣೆ-ಪೈಗಳ ಸಂಕಲನವನ್ನು ಅವರು ಸಕಾಲದಲ್ಲಿ ಮುಗಿಸಲಾಗದೇ ಆದಿತ್ಯವಾರ ಕೂಡ ಕಛೇರಿಗೆ ಬಂದು ದುಡಿಯುತ್ತಿದ್ದರು.
ಆದರೆ ನನಗದು ಲೀಲಾಜಾಲವಾಗಿತ್ತು. ಒಮ್ಮೆ ಆ ಅಂಕೆಸಂಖ್ಯೆಗಳ ಸಾಲಿನ ಮೇಲೆ ಕಣ್ಣಾಡಿಸಿದರೆ ಇಡೀ ಮೊತ್ತ ಹೊಳೆಯುತ್ತಿತ್ತು. ಒಟ್ಟು ೪೦ ಪುಟಗಳಲ್ಲಿ ಆ ಬಿಡಿ ಖಾತೆಗಳು ಹಂಚಿಹೋಗಿದ್ದರೆ ಅಷ್ಟೇ ಮಿನಿಟುಗಳಲ್ಲಿ ಸಮಗ್ರ ಮೊತ್ತವನ್ನು ಬರೆದುಬಿಡುತ್ತಿದ್ದೆ. ಬೇರೆ ಯಾವುದೋ ಮೂಲದಿಂದ ಮುಂದಾಗಿಯೇ ಬರುತ್ತಿದ್ದ ಸಂಖ್ಯೆ ಜೊತೆ ಸಾಧಾರಣವಾಗಿ ಇದು ಸರಿದೂಗುತ್ತಲೂ ಇತ್ತು. ಹೀಗಾಗದಾಗ ಉಭಯ ಸಂಖ್ಯೆಗಳ ಪುನಃಪರಿಶೀಲನೆ ವಿಶೇಷ ಕಾಲಾವಕಾಶ ಬೇಡುತ್ತಿರಲಿಲ್ಲ. ಹೀಗೆ ಖಾತಾಯಜ್ಞ ಆಯಾ ಶುಕ್ರವಾರ ಸಂಜೆಯೇ ಪೂರ್ತಿಗೊಂಡು ನಮಗೆಲ್ಲ ಬಿಡುವು ಒದಗುತ್ತಿತ್ತು. ಈ ‘ಪವಾಡ’ದ ರಹಸ್ಯವೇನೆಂದು ಪತ್ತೆಮಾಡಲು ವರಿಷ್ಠರ ಒಂದು ತಂಡ ನನ್ನ ವಿಧಾನವನ್ನು ತಪಾಸಿಸಲು ಬಂತು. ಅದರ ಸದಸ್ಯರೆದುರೇ ನಾನು ‘ರಹಸ್ಯ’ವನ್ನು ಬಯಲುಮಾಡಿ ಗೆದ್ದೆನೆಂಬ ಕ್ಷಮ್ಯ ಜಂಬದಿಂದ ಬೀಗಿದೆ? ತಂಡವಿತ್ತ ತೀರ್ಮಾನ ಕುಠಾರಾಘತವಾಗಿ ನನಗೆ ಬಡಿಯಿತು: “ಇಂಥ ಒಳದಾರಿಗಳು ಇಲ್ಲಿ ವರ್ಜ್ಯ. ನೋಡಿ ನೀವು ರಾಜಮಾರ್ಗದಲ್ಲೇ, ಅಂದರೆ ೩+೪=೭, ೭+೯=೧೬ ಮುಂತಾಗಿ, ಎಣಿಕೆಹಾಕಿ ಅಲ್ಲಲ್ಲೇ ಹಂತಗಳನ್ನು ದಾಖಲಿಸಿ ಮುಂದುವರಿಯಬೇಕು. ಗೊತ್ತಾಯಿತೇ?”
ಅಂದು ಬ್ಯಾಂಕ್ ನೌಕರರಿಗೆ ನಿಗದಿಯಾದ ಕೆಲಸದ ವೇಳೆ, ರಜಾಸವಲತ್ತು, ವೈದ್ಯಕೀಯ ನೆರವು ಮುಂತಾದ ಯಾವುದೇ ಸೌಕರ್ಯವಿರಲಿಲ್ಲ. ಇನ್ನು ಸಂಬಳ? ಎರಡು ದಶಕಗಳ ಅನುಭವವಿದ್ದ ಮುಖ್ಯ ಗುಮಾಸ್ತನಿಗೂ ಒಟ್ಟು ರೂ ೧೦೦ ಮಾಸಿಕ ತಲಬು ದೊರೆಯುತ್ತಿರಲಿಲ್ಲ. ನನ್ನ ಸಂಬಳ ಕೇವಲ ರೂ ೫೫. ಹೊಟ್ಟೆ ಕಟ್ಟಿ ಕಷ್ಟ ಪಟ್ಟು ಆ ಸುಖವಿಲ್ಲದ ದಿನ ತಳ್ಳಿದೆ. ಅಪ್ಪನನ್ನು ಬೇಡತಕ್ಕದ್ದಲ್ಲ, ನನ್ನ ಶಿಕ್ಷಣಕ್ಕಾಗಿ ಮಾಡಿದ್ದ ಸಾಲವನ್ನು ನಾನೇ ತೀರಿಸತಕ್ಕದ್ದು ಮುಂತಾದವು ನನ್ನ ಖಚಿತ ನಿಲವುಗಳು.
ಈ ಕುಂಭೀಪಾಕವಾಸ ಮುಂದುವರಿಯುತ್ತಿದ್ದಂತೆಯೇ ದೇಶಕ್ಕೆ ಸ್ವಾತಂತ್ರ್ಯ ಬಂತು, ೧೫-೮-೧೯೪೭. ರಾಷ್ಟ್ರಾದ್ಯಂತ ಸಂಭ್ರಮ, ಸಂತೋಷ ಮತ್ತು ಬಿಡುವು. ಆದರೆ ನನಗೆ? ಅಧಿಕ ಕೆಲಸ ಬ್ಯಾಂಕಿನೊಳಗೆ. ಇನ್ನೂ ಮೂರು ತಿಂಗಳು ಮುಗಿಯುವ ಮೊದಲೇ ನನಗೊಂದು ಹುಕುಂ ಬಂದಿತು: ನನ್ನ ದಕ್ಷತೆಯನ್ನು ಗಮನಿಸಿ ನನ್ನನ್ನು ಬ್ಯಾಂಕಿನ ಕುವಲಯಾಲಂಪುರ (ಮಲೇಶಿಯ) ಶಾಖೆಗೆ ವರ್ಗಮಾಡಿದ್ದರು, ಕೇವಲ ೧೦ ದಿನಗಳಲ್ಲಿ ನಾನು ಗಂಟು ಮೂಟೆ ಕಟ್ಟಿ ಹಡಗುಯಾನಕ್ಕೆ ಸಿದ್ಧನಾಗಬೇಕಿತ್ತು. ಆಗ ನಾನು ದರ್ಜೆಯಲ್ಲಿ ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳ ಕೋರಿ ಮೇಲಧಿಕಾರಿಗಳಿಗೊಂದು ಲಿಖಿತ ಮನವಿ ಸಲ್ಲಿಸಿದೆ. ಇದಕ್ಕೆ ಬಂದ ಜವಾಬು ನನ್ನ ಜಂಘಾಬಲವನ್ನೇ ನಡುಗಿಸಿಬಿಟ್ಟಿತು: ನನ್ನ ವರ್ತನೆ ಶಿಸ್ತಿನ ತೀವ್ರ ಉಲ್ಲಂಘನೆಯಾದ ಕಾರಣ ನನ್ನನ್ನು ಆ ಕ್ಷಣವೇ ಒಂದು ತಿಂಗಳ ಮುಂಗಡ ಸಂಬಳ ಪಾವತಿ ಸಹಿತ ಕೆಲಸದಿಂದ ವಜಾ ಮಾಡಿದ್ದರು. ಹೀಗೆ ನಾನೊಬ್ಬ dismissed Bank clerk!
ವಿನಾ ಕಾರಣ ನನ್ನ ಅಸ್ಮಿತೆಗೆ ಹೊಡೆತ ಬಿದ್ದಿತ್ತು. ನೇರ ನಂಜಪ್ಪನವರಲ್ಲಿಗೆ ಹೋಗಿ ವಿಷಯ ಅರುಹಿದೆ. ಅವರೆಂದರು, “ತಿಮ್ಪಯ್ಯನ ಮಗ! ನೀನು ಆ ಆದೇಶವನ್ನು ಒಪ್ಪಿ ಹೋಗಬೇಕಾಗಿತ್ತು. ಅವರಿಗೆ ತಮ್ಮ ನಡುವೆ ಒಬ್ಬ ಬ್ರಾಹ್ಮಣ ಇರುವುದು ಸಹ್ಯವಾಗಿರಲಿಲ್ಲ. ಅದಕ್ಕೆ ಇದು ನೆಪ ಮಾತ್ರ. ಈಗ ನಾನೇನೂ ಮಾಡುವಂತಿಲ್ಲ.”
ಅಧ್ಯಾಯ ಹತ್ತೊಂಬತ್ತು
ಕ್ರಿಶ್ಚಿಯನ್ ಕಾಲೇಜಿನ ಕನ್ನಡ ಗೆಳೆಯರು
ಬಾಗಲೋಡಿ ದೇವರಾಂiರ ಪ್ರಸ್ತಾವನೆ ಹಿಂದೆ ಬಂದಿದೆ. ಅವರು ಆ ವರ್ಷ (೧೯೪೭) ಇಂಗ್ಲಿಷ್ ಆನರ್ಸ್ ಅಂತಿಮ ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಪ್ರಥಮ ದರ್ಜೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಉತ್ತೀರ್ಣರಾಗಿದ್ದರು ಮತ್ತು ಅದೇ ಕಾಲೇಜಿನಲ್ಲಿ ಇಂಗ್ಲಿಷ್ ಟ್ಯೂಟರ್ ಆಗಿ ನೇಮನಗೊಂಡಿದ್ದರು. ಬ್ಯಾಂಕಿನಿಂದ ಉಚ್ಚಾಟಿತನಾದ ನಾನು ಅವರನ್ನು ನೋಡುವ ಸಲುವಾಗಿ ಅವರಲ್ಲಿಗೆ (ಕ್ರಿಶ್ಚಿಯನ್ ಕಾಲೇಜ್, ತಾಂಬರಮ್) ಹೋದೆ. ನನ್ನನ್ನು ಕಂಡು ಅವರಿಗೆ ಪರಮಾಶ್ಚರ್ಯ ಮತ್ತು ಸಂತೋಷ. ಅವರೆಂದರು, “ನಿಮಗೆ ತುರ್ತು ಕಾಗದ ಬರೆಯಲು ತೊಡಗಿದ್ದೆ. ನೀವೇ ಪ್ರತ್ಯಕ್ಷರಾಗಿಬಿಟ್ಟಿರಿ! ಇಲ್ಲೊಂದು ಗಣಿತ ಟ್ಯೂಟರ್ ಹುದ್ದೆ ಖಾಲಿ ಇದೆ. ಒಡನೆ ಸೇರಬಲ್ಲಿರಾ? ಈ ಕಾಲೇಜಿನ ಹಳೇ ವಿದ್ಯಾರ್ಥಿಗಳಿಗೆ ಆದ್ಯತೆ. ನೀವು ಹೇಗೂ ಒಂದು ವರ್ಷ ಇಲ್ಲಿ ಇದ್ದುದು ಹೌದಷ್ಟೆ.”
“ಈ ಗಳಿಗೆಯೇ ಸಿದ್ಧ.”
“ಹಾಗಾದರೆ ಬನ್ನಿ, ಪ್ರಾಂಶುಪಾಲರಲ್ಲಿಗೆ ಹೋಗೋಣ.”
ಹೋದೆವು. ಪ್ರಾಂಶುಪಾಲ ಬಾಯ್ಡ್ರಿಗೆ ನನ್ನ ಹೆಸರು ಕೂಡ ನೆನಪಿನಲ್ಲಿತ್ತು. ಒಡನೆ ನನ್ನನ್ನು ಆ ಹುದ್ದೆಗೆ ನೇಮಿಸಿ ಹಾಸ್ಟೆಲ್ನಲ್ಲಿ ಕೊಠಡಿಯನ್ನೂ ಕೊಟ್ಟರು. ನನ್ನ ಹೊಣೆ: ಹಾಸ್ಟೆಲ್ನಲ್ಲಿ ಶಿಸ್ತು ಕಾಪಾಡಲು ವಾರ್ಡನ್ರಿಗೆ ನೆರವಾಗುವುದು, ವಾರದಲ್ಲಿ ೬ ಗಂಟೆ ಇಂಟರ್ಮೀಡಿಯೆಟ್ ಮತ್ತು ಪದವಿ ತರಗತಿಗಳಿಗೆ ಗಣಿತ ಕಲಿಸುವುದು ಮತ್ತು ಹಿರಿಯ ಪ್ರಾಧ್ಯಾಪಕರು ಕೊಡುವ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳ ಮೌಲ್ಯ ಮಾಡುವುದು. ಸಂಬಳ ತಿಂಗಳಿಗೆ ರೂ ೮೦. ಕೊಠಡಿಗೆ ಬಾಡಿಗೆ ಇಲ್ಲ. ಇನ್ನೇನು ಬೇಕು ೨೧ರ ಜವ್ವನಿಗನಿಗೆ? ಸ್ವರ್ಗಕ್ಕೆ ಮೂರೇ ಗೇಣು. ಹೀಗೆ ಅನಿರೀಕ್ಷಿತವಾಗಿ ಎರಡನೆಯ ಸಲ ದೇವರಾಯರ ಅಭಯಪ್ರದಾನ ನನ್ನೆದುರು ಹೊಸ ಹರವನ್ನು ಕಾಣಿಸಿತು:
ಫಲಿತಾಂಶದಾಕಸ್ಮಿಕತೆ ನಿಜಕು ಮನುಜಮತಿ-
ಗಳವಡದ ಋತುಲೀಲೆ — ನಡೆವುದು ತಪಶ್ಚರ್ಯೆ
ಜಲಧರದ ಸಂಗ್ರಹಕೆ, ತಂಪಿಸಲು ಕೆಡೆಯುವುದು
ಮಳೆ! ತಿಳಿಯೊ ಕಾರ್ಯ-ಕಾರಣ ಬಂಧ ಅತ್ರಿಸೂನು
ಆ ವೇಳೆಗೆ ನಮ್ಮ ಕಾಲೇಜನ್ನು ವಿದ್ಯಾರ್ಥಿಗಳಾಗಿ ಸೇರಿದ್ದವರು ಕು.ಶಿ.ಹರಿದಾಸ ಭಟ್ಟ, ಸೇವ ನಮಿರಾಜ ಮಲ್ಲ, ಪಿ.ರಂಗನಾಥ ಶೆಣೈ ಮತ್ತು ಎಮ್.ಜನಾರ್ದನ. ಬೇಂದ್ರೆ ಹಾಡಿರುವಂತೆ —
ಯುಗ ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?
ಅಂದರೆ ಅಂದು (೧೯೪೭ರ ಉತ್ತರಾರ್ಧ) ಕ್ರಿಶ್ಚಿಯನ್ ಕಾಲೇಜಿನ ಪ್ರಶಾಂತ ಪರಿಸರದಲ್ಲಿ ಕನ್ನಡದ ಆರು ಯುವಚೇತನಗಳು ಸಂಗಮಿಸಿ ಜ್ಞಾನದ ವಿಯದ್ವಿಸ್ತೀರ್ಣವನ್ನು ಅನುಶೀಲಿಸಿ ಮಾಪಿಸಲು ಉತ್ಸುಕವಾಗಿದ್ದುವು —
ಬಾಗಲೋಡಿ: ಸರ್ವಂಕಷ ವೈದುಷ್ಯ, ಇದಕ್ಕೊಪ್ಪುವ ಸಹಜ ವಿನಯ, ಕನ್ನಡ-ಹಿಂದಿ-ಇಂಗ್ಲಿಷ್-ಫ಼್ರೆಂಚ್-ಜರ್ಮನ್ ಪಂಚಭಾಷಾ ಪ್ರಾವೀಣ್ಯ, ಪಾದರಸಬುದ್ಧಿ, ವಿದ್ವತ್ಸಮೂಹದಲ್ಲಿ ಎದ್ದುಕಾಣುವ ಪ್ರಖರ ವ್ಯಕ್ತಿತ್ವ ಮತ್ತು ಮೈವೆತ್ತ ಅನುಕಂಪ. (ನೋಡಿ: ಇದೇ ಲೇಖಕ ಸಂಪಾದಿಸಿರುವ ‘ದೇವಸ್ಮರಣೆ — ಬಾಗಲೋಡಿ ದೇವರಾಯ ಸ್ಮರಣ ಸಂಪುಟ’)
ಕುಶಿ: “ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ವಿಧಿ ಕಷ್ಟಗಳ ಮಳೆಯ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ” — ಈ ತತ್ತ್ವದ ಮಾನುಷರೂಪ, ವೈದುಷ್ಯ ಮತ್ತು ಕುತೂಹಲ ಕುರಿತಂತೆ ಬಾಗಲೋಡಿಸಮಾನರು ಮತ್ತು ಸಂಘಜೀವಿ.
ಮಲ್ಲ: ದಿನಕ್ಕೊಂದರಂತೆ ಕಥೆ ಉದುರಿಸುತ್ತಿದ್ದ ಸ್ಯಮಂತಕಮಣಿ, ದೈತ್ಯ ಲೇಖಕ, ಜನವಿದೂರ, ಅಂತರ್ಮುಖಿ ಮತ್ತು ಸಹೃದಯ ಸನ್ಮಿತ್ರ.
ಶೆಣೈ: ಶಿಶು ಆಂಜನೇಯ ಜನಿಸಿದೊಡನೆ ಬಾನಿನಲ್ಲಿಯ ಹಣ್ಣು (ಉದಯಸೂರ್ಯ) ಬಯಸಿ ಅತ್ತ ನೆಗೆದನಂತೆ! ಆ ಗೋತ್ರಜರಿವರು. ಉದಾರ ಹೃದಯಿ, ಉಪಕಾರಿ ಮತ್ತು ಸದಾ ಕಾರ್ಯಪ್ರವೃತ್ತ.
ಜನಾರ್ದನ: ತತ್ತ್ವಶಾಸ್ತ್ರದ ನೈಷ್ಠಿಕ ವಿದ್ಯಾರ್ಥಿ, ಅತಿ ಮುಗ್ಧ ಮತ್ತು ಹೃದಯವಂತ. ವ್ಯವಹಾರದಲ್ಲಿ ಮೋಸಹೋದರೂ ಅದನ್ನು ತಲೆಗೆ ಹಚ್ಚಿಕೊಳ್ಳದ ಋಜುವೇದಾಂತಿ.
ಜಿಟಿ: “ಮಾಡಿದ ಅಡುಗೆಗೆ ಊಟವೆ ಸಾಕ್ಷಿ” ಎಂಬ ದಾಸವಾಣಿಯಂತೆ ಪ್ರಸ್ತುತ ಪುಸ್ತಕವೇ ನಿದರ್ಶನ. ಮೊದಲ ಐವರದೂ ಇಂದು (೨೦೦೬) ನೆನಪು ಮಾತ್ರ. ಅದು ಹೇಗಿದೆ? ವಿಸೀಯವರ ಅಮರವಾಣಿಯಲ್ಲಿ –
ಸತ್ತಮೇಲೆ ಉಳಿವುದೇನು?
ಪುಸ್ತಕವೆ? ವಿದ್ವತ್ತೆ? ನೆನಪೆ? ಗೈಮೆಯೆ?
ಹತ್ತು ಜನಕಿತ್ತ ನೆರವೆ? ನಟ್ಟು
ನಡೆಸಿದ ಸುವ್ಯವಸ್ಥೆಗಳೆ? ಗುಣವೆ?
ಹೊರ ಪ್ರಪಂಚಕೆ ಹಿರಿಯವಿವು ಸರಿಯೆ,
ಅದಕಿಂತ ಚೆಲುವಾದ್ದು ನರನ ಪಾಲಿಗೆ
ಇದೆಯೆ ಎಂದೀರಿ; – ಇದೆ …
ಕಂಡವರಿಗೆ, ಬಳಿಗೆ ಬಂದವರಿಗೆ
ಯಾವ ತೆರನ ಮನುಜನಿವನೆಂಬ ಇಂಪು,
ಅವನು ಕಾಣಿಸಿದಾ ಆದರ, ಜೀವನೋತ್ಸಾಹ,
ತುಂಬು ನೆಮ್ಮದಿ; ಚಿತ್ತ ಚಾಂಚಲ್ಯವಿಲ್ಲದ್ದು…
ಲೋಕದ ಕೆಳೆ, ವಿಶ್ವಾಸಗಳಿಗಿಂತ ಬೇರೆ
ಏನಿದೆ?
ನಮ್ಮೊಳಗಿನ ಪರಸ್ಪರ ಸಂಬಂಧಗಳು ಮೈತ್ರಿಯ ಭದ್ರ ತಳಪಾಯದ ಮೇಲೆ ಅರಳಿದ ಗೌರವ, ಜೀವನಾಸಕ್ತಿ ಮತ್ತು ಅನ್ವೇಷಣಕುತೂಹಲ. ದೇವರಾಯರು ಮಿದುಳು, ಕುಶಿ ಹೃದಯ, ಉಳಿದ ನಾವು ನಾಲ್ವರು ಅಂಗೋಪಾಂಗಗಳು. ಹೀಗೆ ಕ್ರಿಶ್ಚಿಯನ್ ಕಾಲೇಜಿನ ತಮಿಳು-ಇಂಗ್ಲಿಷ್ ದ್ವೀಪದೊಳಗೆ “ಹಚ್ಚೇವು ಕನ್ನಡದ ದೀಪ.” ನಮ್ಮ ಮಂತ್ರ “ಬಾರಿಸು ಕನ್ನಡ ಡಿಂಡಿಮವ ಹೇ ಕರ್ನಾಟಕ ಹೃದಯಶಿವ” ಮತ್ತು ತಂತ್ರ —
ಜ್ಞಾನಸಂಜೀವಿನೀ ಶೋಧನೆಗೆ ಹನುಮಂತ,
ಧ್ಯಾನಮಗ್ನತೆಯಲ್ಲಿ ನಚಿಕೇತನಾಗೆಲೋ
ವೈನತೇಯನ ದೃಷ್ಟಿ ಭೀಮಸೇನನ ಶಕ್ತಿ
ನೀನಾಗಿ ಮೈದಳೆವೆ ನಡೆಮುಂದೆ ಅತ್ರಿಸೂನು
ಇಂಗ್ಲಿಷ್ ಸಾಹಿತ್ಯವನ್ನು ದೇವರಾಯರ ಬೆಳಕಿನಲ್ಲಿ ಆಳವಾಗಿ ಅಭ್ಯಸಿಸಿದೆವು, ಕನ್ನಡ ವಾಙ್ಮಯ ಕುರಿತು ಸಂಯುಕ್ತವಾಗಿ ವಿಮರ್ಶಿಸಿದೆವು ಮತ್ತು ತಮಿಳು ಭಾಷೆಯಲ್ಲಿ ವ್ಯವಹರಿಸಿದೆವು. ಸ್ವಾತಂತ್ರ್ಯ ಅದಾಗ ತಾನೇ ಉದಯಿಸಿ ಸರ್ವತ್ರ ನವಚೈತನ್ಯ ಮತ್ತು ಅಮಿತ ಕ್ರತುಶಕ್ತಿ ಹೊಮ್ಮುತ್ತಿದ್ದು ನಮ್ಮ ಅಸ್ಮಿತೆಗೆ ಕೋಡು ಮೂಡಿತ್ತು. ಸಹಜವಾಗಿ “ಓ ಭರತ ಮಾತೆಯ ವರಪುತ್ರ! ಪರರ ಕಣ್ಣ ಕನ್ನಡಕದಲ್ಲಿ ಜಗದಿರವ ನೋಡುವುದ ತೊರೆ, ಶ್ರೀಹೃದಯ ಶಾರದೆಯ ಭಜಿಸಿ ಪಡೆದವಳ ಕರದ ಪುಸ್ತಕವ ತೆರೆ” (ಸೇಡಿಯಾಪು) ದೀಕ್ಷೆಯಾಯಿತು.
ಟ್ಯೂಟರುಗಳಾಗಿದ್ದ ನಮಗೆ ಕಾಲೇಜ್ ಕೆಲಸ ವಿಶೇಷವೇನೂ ಇರಲಿಲ್ಲ. ಹೀಗಾಗಿ ಬಿಡು ವೇಳೆ ಪೂರ್ತಿ ಅಧ್ಯಯನ, ಚಿಂತನ, ವಿಚಾರಮಂಥನ, ಸ್ವಂತ ಸಾಹಿತ್ಯ ರಚನೆ ಮತ್ತು ಗುಡ್ಡ ಕಾಡು ಪರ್ಯಟನೆಗಳಲ್ಲಿ ಮಗ್ನರಾಗಿರುತ್ತಿದ್ದೆವು. ಕಾಲೇಜಿನ ಎಲ್ಲ ಪಾಠೇತರ ಚಟುವಟಿಕೆಗಳಲ್ಲಿಯೂ ನಮ್ಮ ‘ಕನ್ನಡ ಕೂಟ’ ಸಕ್ರಿಯವಾಗಿ ಪಾತ್ರವಹಿಸುತ್ತ ಸಕಲರ ಗೌರವಾದರಗಳಿಗೆ ಭಾಜನವಾಗಿತ್ತು. ನನಗಂತೂ ವಾರಾಂತ್ಯದಲ್ಲಿ ಕರ್ನಾಟಕ ಸಂಗೀತ ಬೈಠಕ್ಕಿನಲ್ಲಿ ಹಾಜರಾಗುವುದು ಕಡ್ಡಾಯ. ನನ್ನ ಸಂಗೀತ ಹುಚ್ಚು ಮತ್ತು ವರ್ಣನೆಗಳಿಗೆ ಮನಸೋತ ಬಾಗಲೋಡಿ ಮತ್ತು ಕುಶಿ ಆಗ ಈಗ ನನ್ನ ಜೊತೆ ಜಿಎನ್ಬಿ, ಮಧುರೆ ಮಣಿ, ಎಂಎಸ್, ಮಾಲಿ, ದ್ವಾರಂ, ಚೆಂಬೈ ಮೊದಲಾದ ಸಂಗೀತ ದಿಗ್ಗಜರ ಕಛೇರಿಗಳಿಗೆ ಬರುತ್ತಿದ್ದರು. ಕ್ರಮೇಣ ಅವರಿಗೂ ಈ ಗೀಳು ಅಂಟಿತು. ಅಂದು ಕುಶಿ ಮನದಲ್ಲಿ ಬಿತ್ತಿದ ಈ ಬೀಜ ಮುಂದೆ ಅವರ ತವರು ಮತ್ತು ಕಾರ್ಯಕ್ಷೇತ್ರ ಉಡುಪಿಯನ್ನು ಶಾಸ್ತ್ರೀಯ ಸಂಗೀತದ ಒಂದು ಪ್ರಮುಖ ಆಡುಂಬೊಲವಾಗಿ ಅರಳಿಸುವುದರಲ್ಲಿ ಹೇಗೆ ಯಶಸ್ವಿಯಾಯಿತೆಂಬುದು ಈಗ ಇತಿಹಾಸ (ನೋಡಿ: ಇದೇ ಲೇಖಕನ ‘ಸಂಗೀತ ರಸನಿಮಿಷಗಳು’):
ಬಿತ್ತುವುದು ಪರಿಶುದ್ಧ ಬೀಜವನು ಫಲವಂತ
ಹಿತ್ತಲಲಿ ನಿನ್ನ ಹೊಣೆ, ಹಿಂತಿರುಗಿ ನೋಡದಿರು –
ಚಿತ್ತದಲಿ ಮೂಡೀತಹಂಕಾರ, ಜಗಕೆ ಬಿಡು
ಉತ್ತಮ ಫಲ, ನಿಮಿತ್ತ ನೀನೆಲೋ! ಅತ್ರಿಸೂನು
ಸೋಮವಾರದಿಂದ ಶುಕ್ರವಾರದ ತನಕ ಆ ಎರಡೂ ವರ್ಷ (೧೯೪೭-೪೯) ದೇವರಾಯರು ದೂರದ ಮದ್ರಾಸು ವಿಶ್ವವಿದ್ಯಾಲಯಕ್ಕೆ ಹೋಗಿ ಫ಼್ರೆಂಚ್, ಜರ್ಮನ್ ಮತ್ತು ರಶ್ಯನ್ ಭಾಷೆಗಳನ್ನು ಕಲಿತು ಡಿಪ್ಲೊಮಾ ಪದವೀಧರರಾದರು. ಸ್ವತಂತ್ರ ಭಾರತದ ಕೇಂದ್ರೀಯ ಸೇವಾವ್ಯವಸ್ಥೆ (Indian Foreign Service or Indian Administrative Service) ಸೇರಬೇಕೆಂಬುದು ಅವರ ಆಸೆ. ಆ ಪ್ರಖರ ಧೀಶಕ್ತಿ ಇರದಿದ್ದ ನಾನು ಆರಂಭಶೂರತ್ವ ಪ್ರದರ್ಶಿಸಿ ಸ್ಟ್ಸ್ಯಾಟಿಸ್ಟಿಕ್ಸ್ ಡಿಪ್ಲೊಮಾ ತರಗತಿಗೆ ದಾಖಲಾದೆ. ಆದರೆ ನನ್ನ ಬೊಗಸೆ ಚಿಕ್ಕದು. ನಡುವಿನಲ್ಲೇ ಕೈಚೆಲ್ಲಿದೆ. “ಕಡಲೇಳಂ ಮಗುಚಿಟ್ಟೊಡಂ, ಕಲಿಯೆ ನಾನಾ ಹೃದ್ಯ ವಿದ್ಯಂಗಳಂ, ಪಡೆದಷ್ಟಲ್ಲದೆ ಬರ್ಪುದೇ ಹರಹರಾ ಶ್ರೀಚೆನ್ನಸೋಮೇಶ್ವರಾ?”
ಆ ದಿನಗಳಂದು ನಾವೆಲ್ಲ ಕನ್ನಡದಲ್ಲಿ ಸಣ್ಣ ಕತೆಗಳನ್ನು ಬರೆದು ಅಂದಿನ ಪ್ರಸಿದ್ಧ ಮಾಸಪತ್ರಿಕೆಗಳಾದ ‘ಜೀವನ,’ ‘ಜಯಂತಿ,’ ‘ಜಯಕರ್ನಾಟಕ,’ ‘ಸುಬೋಧ’ ಮುಂತಾದವುಗಳಿಗೆ ಕಳಿಸುತ್ತಿದ್ದೆವು. ಎಲ್ಲವೂ ಯಥಾಕಾಲ ಪ್ರಕಟವೂ ಆಗುತ್ತಿದ್ದುವು. ನಮ್ಮ ಪೈಕಿ ದೇವರಾಯರ ಕತೆಗಳನ್ನು ‘ಕನ್ನಡದಲ್ಲಿ ಸಣ್ಣ ಕತೆಗಳ ಒಬ್ಬ ಜನಕ’ ಎಂಬ ಅರ್ಥಪೂರ್ಣ ಬಿರುದಾಂಕಿತರಾಗಿದ್ದ ಮಾಸ್ತಿಯವರೇ ಮೆಚ್ಚಿ ತಮ್ಮ ‘ಜೀವನ’ ಮಾಸಿಕದಲ್ಲಿ ಪ್ರಕಟುಸುತ್ತಿದ್ದರು. ಉತ್ಸಾಹ, ಉಲ್ಲಾಸ, ದೈಹಿಕ-ಬೌದ್ಧಿಕ ಸಾಹಸಪ್ರದರ್ಶನ, ಜ್ಞಾನದ ನವಪ್ರಾಂತಾನ್ವೇಷಣೆ ಮುಂತಾದವು ಅಂದು ನಮ್ಮ ಬದುಕಿಗೆ ಹೊಸ ಉದ್ದೇಶ ಮತ್ತು ಅರ್ಥ ನೀಡಿದ ಧಾತುಗಳು. ಹೇಗೂ ಇರಲಿ. ೧೯೪೯ರ ಶೈಕ್ಷಣಿಕ ವರ್ಷ ಅದೇ ಏಪ್ರಿಲ್ ಕೊನೆಗೆ ಮುಗಿಯಿತು. ಮುಂದೆ ಟ್ಯೂಟರ್ ಆಗಿ ಅಲ್ಲಿ ಮುಂದುವರಿಯುವಂತಿಲ್ಲ. ಉಪನ್ಯಾಸ ಪದವಿ ಖಾಲಿ ಇರಲಿಲ್ಲ. ಮುಂದೇನು?
ಅಧ್ಯಾಯ ಇಪ್ಪತ್ತು
ಉಪನ್ಯಾಸಗಿರಿಗೆ ಬಡ್ತಿ
೧೯೪೯ ಶೈಕ್ಷಣಿಕ ವರ್ಷಾರಂಭ. ಕೊಡಗು ಸರ್ಕಾರ ಮಡಿಕೇರಿಯಲ್ಲಿ ಹೊಸ ಕಾಲೇಜು ಸ್ಥಾಪಿಸಲು ಮುಂದಾಯಿತು: ಆರಂಭದಲ್ಲಿ ಮದ್ರಾಸು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾದ ಸರ್ಕಾರೀ ಇಂಟರ್ಮೀಡಿಯೆಟ್ ಕಾಲೇಜ್. ತತ್ಸಂಬಂಧವಾದ ಜಾಹೀರಾತು ರಾಷ್ಟ್ರದ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಯಿತು: ಕೇಂದ್ರ ಸರ್ಕಾರದ ವೇತನಶ್ರೇಣಿ ಮತ್ತು ಸೇವಾಸೌಲಭ್ಯ. ಆಗ ನೆರೆರಾಜ್ಯಗಳಲ್ಲಿ (ಮೈಸೂರು ಸಂಸ್ಥಾನ ಮತ್ತು ಮದ್ರಾಸು ಪ್ರಾಂತ) ಉಪನ್ಯಾಸಕರ ಸಂಬಳ ತಿಂಗಳಿಗೆ ರೂ ೧೦೦-೨೫೦ ಶ್ರೇಣಿಯಲ್ಲಿತ್ತು. ಕೊಡಗಿನಲ್ಲಾದರೋ ಇದು ರೂ ೨೫೦-೪೦೦! ಸಹಜವಾಗಿ ಇಡೀ ರಾಷ್ಟ್ರದಿಂದ ಅಸಂಖ್ಯ ಅನುಭವಿಗಳು ಹೊಸ ಕಾಲೇಜಿಗೆ ಅರ್ಜಿ ಲಗ್ಗೆಹಾಕಿದರು. ಕೇವಲ ೨ ವರ್ಷ ಅನುಭವವಿದ್ದ, ಆದರೆ ಸ್ಥಳೀಯನೇ ಆಗಿದ್ದು ಅಲ್ಲಿಯ ಸರ್ಕಾರ ನೀಡಿದ ವಿದಾರ್ಥಿವೇತನದಿಂದ ಓದಿದ್ದ, ನಾನೂ ಅರ್ಜಿ ಗುಜರಾಯಿಸಿದೆ.
ಕೊಡಗು ರಾಜ್ಯದ ಚೀಫ಼್ ಕಮಿಷನರ್ ಮತ್ತು ಅವರ ಆಪ್ತ ಸಹಾಯಕರು ಗುಣಪಕ್ಷಪಾತಿಗಳಾಗಿದ್ದುದೊಂದು ಅದೃಷ್ಟ. ನನ್ನನ್ನೂ ಆಯ್ಕೆ ಭೇಟಿಗೆ ಕರೆದಿದ್ದರು. ಆ ಎಲ್ಲ ಅಧಿಕಾರಿಗಳೂ ನನಗೆ ಪರಿಚಿತರೇ. ಖಾಸಗಿಯಾಗಿ ಅವರೆಂದರು, “ನೀನಿನ್ನೂ ಅನನುಭವಿ. ಮುಂದೆ ಕಾಲೇಜಿನಲ್ಲಿ ಪದವಿ ತರಗತಿಗಳನ್ನು ಆರಂಭಿಸುವಾಗ ನಿನ್ನ ಅರ್ಜಿಯನ್ನು ಪರಿಶೀಲಿಸೋಣ.” ಅಲ್ಲಿಯ ಗಣಿತೋಪನ್ಯಾಸಕರ ಹುದ್ದೆಗೆ ಸಂತ ಅಲೋಶಿಯಸ್ ಕಾಲೇಜಿನ ವಿ.ವೆಂಕಟರಮಣರಾವ್ ಎಂಬ ಹಿರಿಯರು ಆಯ್ಕೆಯಾದರು. ನನ್ನ ಈ ಮಾತೃಸಂಸ್ಥೆಯಿಂದ ಬಂದಿದ್ದ ಇವರ ಪರಿಚಯಮಾಡಿಕೊಂಡೆ. ಆ ವಿನಯದ ಸಾಕಾರಮೂರ್ತಿ ನುಡಿದರು, “ಇಲ್ಲಿ ನಾನೇನಾದರೂ ಆಯ್ಕೆಗೊಂಡರೆ ಒಡನೆ ಅಲ್ಲಿಯ ಕೆಲಸಕ್ಕೆ ರಾಜಿನಾಮೆಯಿತ್ತು ಬರಲು ಒಪ್ಪಿದ್ದೇನೆ. ಅಲ್ಲಿರುವ ನಿಮ್ಮ ಮಾಜಿ ಗುರುಗಳಾದ ಕೆ.ಎ.ಕೃಷ್ಣಮೂರ್ತಿ ಮತ್ತು ಬಿ.ಭುಜಂಗರಾಯರ ಬಳಿ ನಿಮ್ಮ ಬಗ್ಗೆ ಪ್ರಸ್ತಾವಿಸುತ್ತೇನೆ.” ಮುಂದಿನ ಎರಡೇ ದಿನಗಳಲ್ಲಿ ಭುಜಂಗರಾಯರಿಂದ ನನಗೆ ತಂತಿ ಸಂದೇಶವೇ ಬಂತು: “ತತ್ಕ್ಷಣ ಹೊರಟುಬಂದು ಇಲ್ಲಿಯ ಉಪನ್ಯಾಸಕ ಹುದ್ದೆಗೆ ದಾಖಲಾಗು!”
ಅದೇ ಜುಲೈ ಆರಂಭದಲ್ಲಿ “ತೆಂಕಣ ಗಾಳಿಯು ಕೊಂಕಣ ಸೀಮೆಗೆ” ಬಡಿದು ಮಳೆ ಜಡಿದು ಉತ್ಪಾತವೆಸಗುತ್ತಿದ್ದಾಗ ಘಟ್ಟದ ಮೇಲಿನ ನಾನು ಅಲ್ಲಿ ಲೆಕ್ಚರರ್-ಇನ್-ಮ್ಯಾತ್ಮೆಟಿಕ್ಸ್ ಆಗಿ ನೇಮನಗೊಂಡೆ. ತಿಂಗಳಿಗೆ ಸಂಬಳ ರೂ ೧೦೦ + ರೂ ೧೨.೫೦ ತುಟ್ಟಿಭತ್ಯ. ನಾನು ಇಂಟರ್ಮೀಡಿಯೆಟ್ ಓದಿದ ಕಾಲೇಜ್, ನನ್ನ ಗುರುಗಳ ಕಿರಿಯ ಸಹೋದ್ಯೋಗಿ, ಅದ್ಭುತ ಪ್ರತಿಭೆಯ ವಿದ್ಯಾರ್ಥಿಗಳು, ಪಾತಾಳ ಮಟ್ಟದಿಂದ ನಾಲ್ಕನೆಯ ಅಂತರಿಕ್ಷ ಉನ್ನತಿಗೆ ಚಾಚಿದ್ದ ಮಹಾಸೌಧ — ಈ ಭವ್ಯ ಪರಿಸರದಲ್ಲಿ ನಾನೊಬ್ಬ ಗಣ್ಯ! “ನೀನೇರಬಲ್ಲೆಯಾ ನಾನೇರುವೆತ್ತರಕೆ” ಎಂದು ಇಡೀ ಪರಿಸರ ನನ್ನನ್ನು ಕುತೂಹಲದಿಂದ ಪರೀಕ್ಷಿಸುತ್ತಿದ್ದ ಸನ್ನಿವೇಶ.
ವಾಸ ಮತ್ತು ಆಹಾರ ಕಾಲೇಜ್ ಆವರಣದಲ್ಲಿಯ ಸ್ಟಾಫ಼್ ಕ್ವಾರ್ಟರ್ಸ್ನಲ್ಲಿ, ಎರಡು ಹೆಜ್ಜೆ ನಡೆದರೆ ಕಾಲೇಜ್ ಸೌಧಗಳು, ಪಶ್ಚಿಮಕ್ಕೆ ದೃಷ್ಟಿ ಹರಿಸಿದರೆ “ಪಡುವಣ ಕಡಲಿನ ತೆಂಗಿನ ಮಡಲಿನ ಮರೆಯಲಿ” ಅಡಗಿಹ ಮಂಗಳೂರು, ಇದರ ಅಂಚಿಗೆ ವಿಸ್ತಾರವಾದ ಅರೇಬಿಯನ್ ಸಮುದ್ರ. ಅಧ್ಯಯನ ಮತ್ತು ಅಧ್ಯಾಪನಗಳಿಗೆ ಇದಕ್ಕಿಂತ ಹೆಚ್ಚಿನ ಅವಕಾಶ ಮತ್ತು ಸನ್ನಿವೇಶ ಲಭಿಸೀತೇ? ತತ್ಪೂರ್ವ ಅದೇ ಕಾಲೇಜಿನಲ್ಲಿ ನನ್ನ ಗಣಿತ ಗುರುಗಳಾಗಿದ್ದ ಕೃಷ್ಣಮೂರ್ತಿಯವರನ್ನೂ ಭುಜಂಗರಾಯರನ್ನೂ ಭೌತವಿಜ್ಞಾನ ಗುರುವಾಗಿದ್ದ ಎಸ್.ನಾರಾಯಣಹೊಳ್ಳರನ್ನೂ ಆತ್ಮೀಯವಾಗಿ ಭೇಟಿಮಾಡಿ ಮಾರ್ಗದರ್ಶನ ಕೋರಿದೆ. ಅವರೆಲ್ಲರ ಹಿತೋಕ್ತಿಗಳ ಸಾರವಿಷ್ಟೇ: “ನಿಮಗೆ ನಿಮ್ಮ ಉತ್ಕೃಷ್ಟ ಗುರು ಏನಾಗಿದ್ದರೋ ಹಾಗೆ ನೀವು ನಿಮ್ಮ ವಿದ್ಯಾರ್ಥಿಗಳಿಗೆ ಆಗಬೇಕು. ವಿಷಯ ಕುರಿತು ಪೂರ್ವಸಿದ್ಧತೆ ಇಲ್ಲದೇ ಎಂದೂ ತರಗತಿಗೆ ಹೋಗಬಾರದು. ಉಪನ್ಯಾಸದ ಪೂರ್ಣಪಾಠವನ್ನು ಮೊದಲೇ ಬರೆದು, ಕನ್ನಡಿ ಮುಂದೆ ನಿಂತು ಗಟ್ಟಿಯಾಗಿ ಓದಿ, ಅದು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ವಿವರಿಸುವ ಕಲೆ ಸಾಧಿಸಿಕೊಳ್ಳಬೇಕು, ನೂತನ ಪರಿಕಲ್ಪನೆಯೊಂದನ್ನು ಪ್ರವೇಶಗೊಳಿಸುವ ಮೊದಲು ಅದರ ಇತಿಹಾಸದ ಬಗ್ಗೆ ಪ್ರಸ್ತಾವಿಸಿ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಉದ್ದೀಪಿಸಬೇಕು, ತರಗತಿಯಲ್ಲಿಯ ಕನಿಷ್ಠ ಬೌದ್ಧಿಕ ಮಟ್ಟದ ವಿದ್ಯಾರ್ಥಿಗೂ ನಿಮ್ಮ ವಿವರಣೆ ಅರ್ಥವಾಗುವಂತೆ ಸತತ ಪ್ರಯತ್ನಶೀಲರಾಗಿರಬೇಕು, ಮತ್ತು ಕು-ವಿದ್ಯಾರ್ಥಿ ಜನಿಸಲೇ ಇಲ್ಲ ಎಂಬ ಧನಾತ್ಮಕ ಧೋರಣೆಯನ್ನು ಸದಾ ತಳೆದು ತದನುಸಾರ ವರ್ತಿಸಬೇಕು.” ಹೌದು, ಅವರೆಲ್ಲರೂ ಇಂಥ ಆದರ್ಶದೀಪ್ತರಾಗಿದ್ದರೆಂಬುದು ನನ್ನ ಪ್ರತ್ಯಕ್ಷ ಅನುಭವ.
ಆಗ ನನ್ನ ಪ್ರಾಯ ಕೇವಲ ೨೩ ಇಂಟರ್ಮೀಡಿಯೆಟ್ ವಿದ್ಯಾರ್ಥಿಗಳ ಸರಾಸರಿ ವಯಸ್ಸು ೧೭, ಇನ್ನು ಪದವಿ ತರಗತಿಗಳಲ್ಲಿ ಇದು ೧೯ನ್ನು ಮೀರಿರಲಿಲ್ಲ. ಅಂದಿನ ಅವಿಭಕ್ತ ದಕ್ಷಿಣ ಕನ್ನಡ ಜಿಲ್ಲೆ ಇಡೀ ಮದ್ರಾಸು ಪ್ರಾಂತದಲ್ಲಿ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿತ್ತು. ಇಲ್ಲಿಯ ಒಬ್ಬೊಬ್ಬ ವಿದ್ಯಾರ್ಥಿಯೂ ಬೃಹಸ್ಪತಿಯೇ – ಶಾಲೆಯಲ್ಲಿ ಉತ್ತಮ ಬೋಧನೆ, ಮನೆಯಲ್ಲಿ ಸಮರ್ಥ ಪ್ರೋತ್ಸಾಹ, ಸಮಾಜದಲ್ಲಿ ಉನ್ನತ ಗೌರವ ಎಲ್ಲವೂ ಸಂಗಳಿಸಿ ವಿದ್ಯಾರ್ಜನೆ ಅಲ್ಲೊಂದು ತಪಶ್ಚರ್ಯೆಯೇ ಆಗಿತ್ತು. ಮನೋವೈಜ್ಞಾನಿಕವಾಗಿ ಹೇಳುವುದಾದರೆ ನಾನೂ ವಿದ್ಯಾರ್ಥಿಗಳೂ ಹೆಚ್ಚುಕಡಿಮೆ ಒಂದೇ ಮಟ್ಟದಲ್ಲಿದ್ದೆವು. ಆದರೂ ನಾನವರ ಬೌದ್ಧಿಕ ನಾಯಕ! ಇಂಥ ಪೈಪೋಟಿಯ ಕಳದಲ್ಲಿ ನನ್ನ ಅಸ್ತಿತ್ವ ಛಾಪಿಸಲು ನನಗಿದ್ದ ಹಾದಿ ಒಂದೇ: ಒಳಗೂ ಹೊರಗೂ ಭರ್ಜರಿ ಪೋಷಾಕುಧಾರಿಯಾಗಿ ತರಗತಿಯನ್ನು ಪ್ರವೇಶಿಸುವುದು.
ಅಂದು ನಾನು ಸೂಟು-ಬೂಟು-ಟೈಗಳಿಂದ ಪೂರ್ಣಾಲಂಕೃತನಾಗಿ ಅತಿ ತ್ವರಿತ ಗತಿಯಲ್ಲಿ ನಡೆದಾ(ದೋ)ಡುತ್ತಿದ್ದೆ. ಮಾತು ನಡವಳಿಕೆ ಕೂಡ ಹಾಗೆಯೇ ಬಲು ಚುರುಕು., ಸದಾ ಟಾಪ್ ಗಿಯರಿನಲ್ಲೇ ತರಗತಿಯಲ್ಲಿ ಪಾಠ ಪ್ರವಚನಗಳನ್ನು ಚೆನ್ನಾಗಿ ಮಾಡುತ್ತಿರುವೆನೆಂದು ವಿದ್ಯಾರ್ಥಿಗಳಿಂದ ಸಕಾರಣ ಪ್ರಶಂಸೆ ಗಳಿಸಿದೆ ನಿಜ. ಆದರೆ ನನ್ನ ತೀವ್ರ ದ್ರುತ ನಡೆ, ನುಡಿ ಮತ್ತು ಪ್ರತಿಕ್ರಿಯೆ ಅನೇಕ ರಸಸನ್ನಿವೇಶಗಳಿಗೆ ಎಡೆಕೊಟ್ಟುವು. ಕೆಲವು ಉದಾಹರಣೆಗಳು: ಎಂದಿನಂತೆ ತರಗತಿಯನ್ನು ತುರ್ತಾಗಿ ಪ್ರವೇಶಿಸಿ ವೇದಿಕೆಯಲ್ಲಿ ನಿಂತಾಗ ಕರಿಹಲಗೆ ಮೇಲೆ ಕಂಡದ್ದೇನು? Grand Trunk Nonstop Railway! ನನ್ನ ಹೆಸರಿನ ಪ್ರಥಮಾಕ್ಷರಗಳನ್ನು ವಿದ್ಯಾರ್ಥಿಗಳು ಹೀಗೆ (ಅಪ-)ವ್ಯಾಖ್ಯಾನಿಸಿದ್ದರು. ಅಂದಹಾಗೆ ಅಂದು ಈ Grand Trunk train ಮದ್ರಾಸು-ದೆಹಲಿ ನಡುವೆ ಅತಿ ತ್ವರಿತ ವೇಗದಿಂದ ಧಾವಿಸುತ್ತಿದ್ದ ಟ್ರೈನ್.
೧೨೦ ಮಂದಿಯ ಆ ತರಗತಿಯಲ್ಲಿ ಹಿಂದಿನ ಸಾಲಿನ ಒಬ್ಬ ಹುಡುಗ ದೊಡ್ಡದಾಗಿ ಬಾಯಿಕಳೆದು ಸಶಬ್ದವಾಗಿ ಆಕಳಿಸಿದ. ಅತ್ತ ಚಿಮ್ಮಿದೆ ಬಾಣದಂತೆ, “ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದ” ಎಂಬ ಪುರಂದರದಾಸರ “ಜಗದೋದ್ಧಾರನ ಆಡಿಸಿದಳು ಯಶೋದಾ” ಹಾಡನ್ನು ಉಲ್ಲೇಖಿಸಿ ಹೇಳಿದೆ, “ತಮ್ಮಾ! ನೀನು ಹೀಗೆ ಕಿಸುಬಾಯಿಯನ್ನು ಸಾರ್ವಜನಿಕವಾಗಿ ತೆರೆದು ತೋರಿಸಿದರೆ ಅದರೊಳಗೆ ಜಗ ಕಾಣಲು ನಾನು ಗೋಪಿ ಅಲ್ಲ, ನೀನು ಕೃಷ್ಣನೂ ಅಲ್ಲ!” ಮರುಮುಂಜಾನೆ ಕರಿಹಲಗೆ ಮೇಲೆ ನಾನು ಕಂಡದ್ದೇನು? ಹುಡುಗನ ಮೊಸಳೆಬಾಯಿ ತೆರೆದಿದೆ, ಅದರೊಳಗೆ ಭೂಮಂಡಲ, ಹೊರಗೆ ಗಾಬರಿಯಿಂದ ನೋಡುತ್ತಿದ್ದೇನೆ ಮರಿಗೆಟೊಪ್ಪಿ-ಬೂಟುಧಾರಿ ದೊರೆಯಾದ ನಾನು!
ಅಲ್ಲಿಯ ಬಿಸಿಲ ಧಗೆಯಲ್ಲಿ ಗಣಿತದ ಸಹಜ ಕಾಠಿಣ್ಯ ತೀವ್ರಗೊಂಡಾಗ ಅನೇಕ ಹುಡುಗರು ಗಣಿತಪಾಠ ಆಲಿಸುವುದರಲ್ಲಿ ನಿರಾಸಕ್ತರಾಗುತ್ತಿದ್ದುದು ನನ್ನ ಲಕ್ಷ್ಯಕ್ಕೆ ಬಂದಿತು. ಆಗ ರಾಮಕೃಷ್ಣ ಪರಮಹಂಸರು ಹೇಳಿದ ಒಂದು ಕತೆಯನ್ನು ಉಲ್ಲೇಖಿಸಿದೆ. ಪುರದ ರಾಜನೊಂದು ದಿವಸ ತನ್ನ ಮೆಚ್ಚಿನರಸಿಯೊಡನೆ ಮಾತನಾಡುತಿದ್ದ ವೇಳೆ ಕಳ್ಳನೊಬ್ಬ ಕದ್ದು ಕೇಳಿ ಹೊಸತು ಹಂಚಿಕೆಯನು ಹೂಡಿದ! ಸಭ್ಯನಂತೆ ನಟನೆ ಮಾಡಿದ!
ಅರಸ ತನ್ನ ಪತ್ನಿಗೆ ಹೇಳಿದ, “ನಮ್ಮ ಮುದ್ದಿನ ಮಗಳಿಗೆ ಯೋಗ್ಯ ವರ ಇನ್ನೂ ಪತ್ತೆ ಆಗಿಲ್ಲ. ನಾಳೆ ಮುಂಜಾನೆ ನಾನು ಮಂತ್ರಿಪರಿವಾರ ಸಹಿತ ಗಂಗಾತಟಕ್ಕೆ ಹೋಗಿ ಅಲ್ಲಿ ತಪಸ್ಸ್ವಾಧ್ಯಾಯನಿರತರಾಗಿರುವ ಋಷಿಪುಂಗವರಲ್ಲಿ ಒಬ್ಬನನ್ನು ಅಳಿಯನನ್ನಾಗಿ ಬರಲು ಒಪ್ಪಿಸುತ್ತೇನೆ.” ಯಥಾಕಾಲ ರಾಜ ಅಲ್ಲಿ ಹಾಜರಾಗಿ ಒಬ್ಬೊಬ್ಬನೇ ಋಷಿ ಹತ್ತಿರ ಹೋಗಿ ತನ್ನ ಕೋರಿಕೆಯನ್ನು ನಿವೇದಿಸತೊಡಗಿದ. ಆದರೆ ಒಬ್ಬನೂ ಕಣ್ಣು ತೆರೆದು ಕೂಡ ನೋಡಲಿಲ್ಲ. ಮುನಿವೇಷ ತೊಟ್ಟು ಕೊನೆಯಲ್ಲಿ ಕುಳಿತಿದ್ದ ಕಳ್ಳನ ಬಳಿಗೂ ಹೋಗಿ ನಿಲ್ಲುವ ಮೊದಲೇ ಈತನ ಮನದೊಳಗೆ ತುಮುಲ ಜಿಜ್ಞಾಸೆ ಮಥಿಸತೊಡಗಿದ್ದುವು: ಸಾಕ್ಷಾತ್ ರಾಜಪುತ್ರಿಯ ಕೈಹಿಡಿವ ಯೋಗ ಕದತಟ್ಟಿ ಎದುರು ನಿಂತಾಗಲೂ ತಮ್ಮ ಧ್ಯಾನದಿಂದ ಈ ಋಷಿಗಳು ವಿಚಲಿತರಾಗದಿರಬೇಕಾದರೆ ಇವರ ಆಕರ್ಷಣೆ ಅದೆಂಥ ದಿವ್ಯ ವಸ್ತುವಾಗಿರಬೇಡ! ಇಂಥವರ ವೇಷ ಹಾಕಿಕೊಂಡ ಮಾತ್ರಕ್ಕೇ ನನ್ನೆದುರು ಇಹಲೋಕದ ಸಕಲ ಸುಖಸಂತೋಷಗಳೂ ಬಂದು ನಿಲ್ಲಬೇಕಾದರೆ ಆ ಪರಲೋಕ ಅದೆಷ್ಟು ಅದ್ಭುತವಾಗಿರಬೇಡ! ಕಳ್ಳನೂ ಅರಸನ ಆಮಿಷ ನಿರಾಕರಿಸಿ ತಾಪಸಿಯೇ ಆಗಿಬಿಟ್ಟ. “ಆದ್ದರಿಂದ ನನ್ನ ಪ್ರಿಯ ವಿದ್ಯಾರ್ಥಿಗಳೇ! ಸದ್ಯ ಗಣಿತ ನಿಮಗೆ ಕಠಿಣವನಿಸಿದರೂ ಅದರಲ್ಲಿ ಆಸಕ್ತಿ ತಳೆವ ನಟನೆಮಾಡಿ. ಕ್ರಮೇಣ ನೀವು ಗಣಿತಾಧ್ವರ್ಯುಗಳಾಗುವಿರಿ.”
ಗಣಿತೀಯ ಖಗೋಳವಿಜ್ಞಾನವನ್ನು (mathematical astronomy) ಅಂತಿಮ ಬಿಎ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾಗಿತ್ತು. ಆಕಾಶದ ಎತ್ತರ ಬಿತ್ತರಗಳನ್ನು ಕರಿಹಲಗೆಯ ಕೃಪಣತೆಯಲ್ಲಿ ಚಿತ್ರಿಸಿ ಗಣಿತ ಸಮೀಕರಣ ಸೂತ್ರಗಳನ್ನು ಅವುಗಳಿಗೆ ಯಾಂತ್ರಿಕವಾಗಿ ಅನ್ವಯಿಸಿ ಪೂರ್ವಸಿದ್ಧ ಉತ್ತರವನ್ನು ಪಡೆಯುವ ಹಿಕಮತ್ತು ಈ ವಿಜ್ಞಾನವಿಭಾಗ. ಹಿಂದೆ ಲಯೊಲಾದಲ್ಲಿ ಓದುತ್ತಿದ್ದಾಗ ನಾನು ಈ ದೊಂಬರಾಟದಲ್ಲಿ ಪರಿಣತನೆನಿಸಿಕೊಂಡಿದ್ದೆ, ಉತ್ತಮ ಅಂಕಗಳನ್ನೂ ಗಳಿಸಿದ್ದೆ. “ವಿಜ್ಞಾನಗಳ ಮಾತೃ ಖಗೋಳವಿಜ್ಞಾನ, ರಾಜ್ಞಿ ಗಣಿತ” (Astronomy is the mother, and mathematics the queen of sciences) ಎಂದು ಉಪನ್ಯಾಸಕರು ವರ್ಣಿಸುತ್ತಿದ್ದಾಗ ನಮ್ಮ ಹಿರಿಮೆ ಗರಿಮೆಗಳ ಬಗ್ಗೆ ನಾವು ವಿಶೇಷ ಅಭಿಮಾನ ತಳೆಯುತ್ತಿದ್ದೆವು.
ಬಿಎ ತರಗತಿಯಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ೨೦ನ್ನು ದಾಟಿರಲಿಲ್ಲ. ಒಮ್ಮೆ ಒಬ್ಬ ಸುಟಿ ವಿದ್ಯಾರ್ಥಿ ಪ್ರಾಮಾಣಿಕ ಸಂದೇಹವೊಂದನ್ನ್ನು ಎತ್ತಿದ, “ನಿಮ್ಮ ಪಾಠಪ್ರವಚನ ತುಂಬ ಸೊಗಸಾಗಿದೆ. ಇವೆಲ್ಲ ಗಗನಕಾಯಗಳನ್ನೂ ಪ್ರತ್ಯಕ್ಷವಾಗಿ ಆಕಾಶದಲ್ಲಿ ದರ್ಶಿಸಬೇಕೆಂಬ ಚಡಪಡಿಕೆ ನಮ್ಮದು. ಈ ಸಂಜೆ ತೋರಿಸುತ್ತೀರಾ?” ಐನ್ಸ್ಟೈನರ ಸುಪ್ರಸಿದ್ಧ ಹೇಳಿಕೆ ಮನದೊಳಗೆ ಛಳಕಿತು, “How wretchedly inadequate is the theoretical physicist as he stands before Nature – and before his students!” ವಸ್ತುಸ್ಥಿತಿ ಏನೆಂದರೆ ಖುದ್ದು ನಾನೇ ಅವನ್ನು ನೋಡಿರಲಿಲ್ಲ! ಯಾರ ಮುಂದೆಯೂ, ಅದೂ ವಿದ್ಯಾರ್ಥಿಗಳೆದುರು ಎಂದೂ, ಗಫ಼ಾ ಹೊಡೆಯತಕ್ಕದ್ದಲ್ಲ ಎಂಬ ಅರಿವು ನನಗಿತ್ತು. “ಒಂದು ತಿಂಗಳ ಕಾಲಾವಕಾಶ ಕೊಡಿ. ಖಂಡಿತ ಬಾನಿನಡಿ ನಿಂತು ಆಕಾಶಕಾಯಗಳನ್ನು ಪರಿಚಯಿಸಿಕೊಳ್ಳೋಣ” ಎಂದೆ. ನಿಜಕ್ಕೂ ಇಂಥ ಅನಾಮಧೇಯ ಅಜ್ಞಾತ ಶಿಷ್ಯರೇ ನನ್ನ ಋಜು ಗುರುಗಳು. ಕಿಪ್ಲಿಂಗ್ ಕವಿ ಹೇಳಿದ್ದುಂಟು:
ಆರು ಸೇವಕರಿಹರು ನನಗೆ, ನಾ ತಿಳಿದಿರುವು-
ದೆಲ್ಲವನು ಕಲಿಸಿದವರವರೇ! ಪೆಸರ್ ಬೇಕೆ? —
ಎಂದು, ಎಲ್ಲಿ, ಹೇಗೆ, ಏಕೆ, ಯಾರು, ಯಾವುದು?
ಗ್ರಂಥಾಲಯಕ್ಕೆ ಹೋಗಿ, ನಕ್ಷತ್ರವೀಕ್ಷಣೆ ಕೈಪಿಡಿ ಎರವಲು ಪಡೆದು, ಮುಂದಿನ ಹಲವಾರು ರಾತ್ರಿ ಕದ್ರಿಗುಡ್ಡೆಯಲ್ಲಿ ನಕ್ಷತ್ರ ಸಾಮ್ರಾಜ್ಯದಡಿ ಲಂಗರುಹೂಡಿದೆ. ಧ್ರುವ ನಕ್ಷತ್ರ, ನಕ್ಷತ್ರಪುಂಜಗಳು, ರಾಶಿಗಳು, ಪ್ರಸಿದ್ಧ ತಾರೆಗಳು, ಗ್ರಹಗಳು, ಚಂದ್ರನ ಚಲನೆ ಮುಂತಾದವುಗಳ ಬಗೆಗಿನ ಸ್ಫುಟ ಚಿತ್ರ ರೂಪಿಸಿಕೊಂಡೆ. ತತ್ಸಂಬಂಧವಾದ ಪೌರಾಣಿಕ ಹಾಗೂ ಜಾನಪದ ವಾಙ್ಮಯಗಳನ್ನು ಓದಿ ನಮ್ಮ ಹಿರಿಯರ ಅಂತರ್ದೃಷ್ಟಿಗೆ ನಮೋ ಎಂದೆ. ಮುಂದೆ ಸರ್ವಸನ್ನದ್ಧನಾಗಿ ವಿದ್ಯಾರ್ಥಿಗಳ ಜೊತೆ ನಕ್ಷತ್ರವೀಕ್ಷಣೆ ತೊಡಗಿದಾಗ ನಮಗೆಲ್ಲ ಹೊಸತೊಂದು ರಸಲೋಕ ಸವಿದ ಅಪೂರ್ವ ಅನುಭವ. ನಿಜ, ಬೇಂದ್ರೆ ಹಾಡಿರುವಂತೆ —
ಸಪ್ತ ಋಷಿಗಳೇಳೆತ್ತು ತಿರುಗುತಿವೆ ಹಾಕಿ ಧ್ರುವದ ಗಾಣಾ
ಮೇರುದಂಡದಾ ಇಕ್ಷು ರಸವು ಹಿಂಡುತ್ತಲಿಹುದೊ ಜಾಣಾ
ವಿವಿಧವಾಗಿ ಸಂಚರಿಸಿ ಠಾಯಿಯಲಿ ಬ್ರಹ್ಮದೇಕ ತಾನಾ
ಕರೆಯುತಿಹುದು ಸ್ವರಮೇಳಕಾಗಿ ಗ್ರಹಗೋಲ ವಿಶ್ವಗಾನಾ
ನಿಜ, ಮೊದಲು ವಸ್ತುಕ, ಬಳಿಕ ಮಸ್ತಕ, ಮತ್ತೆ ಹಸ್ತಕ, ಕೊನೆಗೆ ಪುಸ್ತಕ! ಇದು ಋಜು ಜ್ಞಾನಮೂಲಶೋಧನೆಯ ಸಹಜ ಮಾರ್ಗ. ಆದರೆ ಇಂದಿನ ಶಿಕ್ಷಣಕ್ರಮ ಹೇಗಿದೆ? ಮೊದಲಿನಿಂದ ಕೊನೆಯ ತನಕ ಪುಸ್ತಕ-ಮಸ್ತಕ-ಪುಸ್ತಕ-ಮಸ್ತಕ ಉರುಹೊಡೆತ!
Maanaveeyateye jaathi mattu dharma annutta idda Gurugala nenapu ukki bantu. Dear Ashoka Vardhana, Thank you! – Pejathaya S M
ಜಿ.ಟಿ.ನಾ ಅವರ ಆತ್ಮೀಯ ಪರಿಚಯ ಒದಗಿಸುವ ಈ ಅಧ್ಯಾಯಗಳನ್ನು ಒದಗಿಸಿದ್ದಕ್ಕಾಗಿ ಹೃತ್ಪೂರ್ವಕ ವಂದನೆ. ಆ ಮಹಾಚೇತನಕ್ಕೆ ನಮನ. 'ಎನ್.ಸಿ.ಸಿ.ದಿನಗಳು' ಕೃತಿಯನ್ನು ಮತ್ತೆ ಮತ್ತೆ ಓದಿ ಸಂತೋಷಪಟ್ಟಿದ್ದೆ. 'ಮುಗಿಯದ ಪಯಣ' ಕೃತಿ ಲಭ್ಯವಿದೆಯೇ?ನಮಸ್ಕಾರಗಳೊಂದಿಗೆ.
ಕಾರಣ ಯಾವುದೇ ಇರಲಿ… ಜಿಟಿನಾ ಗೆ ಬ್ಯಾಂಕ್ ನೌಕರಿ ತಪ್ಪಿ ಹೋದದ್ದು ಕನ್ನಡ ವಿಜ್ಞಾನ, ಶೈಕ್ಷಣಿಕ ಹಾಗೂ ಸಾರಸ್ವತ ಲೋಕಕ್ಕೆ ಸುಯೋಗ್ಯ ವ್ಯಕ್ತಿಯೋರ್ವ ಸಿಗುವಂತೆ ಮಾಡಿತು. ಒಳ್ಳೆಯದೇ ಆಯಿತಲ್ಲವೇ..?ಗಿರೀಶ್, ಬಜಪೆ
ನಾನು ವಿವೇಕಾನಂದ ಕಾಲೇಜಿನಲ್ಲಿ ಪಿ ಯು ಸಿ ಒದುತ್ತಿದ್ದಾಗ ವಿಜ್ನಾನ ಸಂಘದವರು ಒಮ್ಮೆ ಜಿ ಟಿ ನಾರಾಯಣ ರಾಯರ ಆಕಾಶ ಕಾಯಗಳ ಪ್ರಾತ್ಯಕ್ಷಿಕೆಯ ಉಪನ್ಯಾಸವನ್ನು ಇಟ್ಟಿದ್ದರು(೧೯೮೬-೮೭). ಅವರ ಪ್ರಾತ್ಯಕ್ಷಿಕೆ ಎಷ್ಟು ಮನ ಮುಟ್ಟುವಂತಿತ್ತೆಂದರೆ ಆಮೇಲೆ ನಾನೂ ಕೂಡ ಅತ್ರಿ ಬುಕ್ ಸೆಂಟರ್ ನಿಂದ ಪ್ರಾತ್ಯಕ್ಷಿಕೆಗಳ ಪುಸ್ತಕಗಳನ್ನು ತಂದು(ತಂದೆಯವರೊಂದಿಗೆ ದುಡ್ಡಿಗೆ ಹಠ ಮಾಡಿ) ರಾತ್ರಿ ಅಕಾಶಕಾಯಗಳ ವೀಕ್ಷಣೆ ಮಾಡುತ್ತಿದ್ದೆ( ಬೆಂಗಳೂರಿನಿಂದ ಊರಿಗೆ ಬಂದಾಗಲೆಲ್ಲ)-ರಾತ್ರಿ ೧೨ ಘಂಟೆಗೆ ಕೆಲವು ಸಾರಿ, ಕೆಲವುಸಾರಿ ರಾತ್ರಿ ೨-೩ ಘಂಟೆಗೆ ಎದ್ದು……………. . ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಲೈಟ್ ಗಳ ಪ್ರಭಾವದಿಂದ ಆಕಾಶಕಾಯಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ.
ಜಿ.ಟಿ.ನಾರಯಣರಾಯರು ನಿಜಕ್ಕೂ ಸಮುದ್ರದಲ್ಲಿ ಈಸಿ ಜೈಸಬೇಕಾದ ಸ್ವತಂತ್ರ ತಿಮಿಂಗಿಲ, ಕೆರೆ ಕುಂಟೆಗಳಲ್ಲಿ ಅಡಗಿ ಹೆದರಿ ಬಾಳಬೇಕಾದ ಕಿರಿ ಮೀನಲ್ಲ ಎಂಬ ಅವರ ಅಮ್ಮನವರ ಮಾತು ಜಿ.ಟಿ.ನಾ ರಿಗೆ ಯುಕ್ತವಾಗಿದೆ. ತಾವು ಹುಟ್ಟಿ ಬೆಳೆದ ಪರಿಸರದಲ್ಲೆಲ್ಲೂ ಜಾತಿಕಾರಣವಾಗಿ ಯಾರನ್ನಾದರೂ ದ್ವೇಷಿಸಿದ್ದಾಗಲೀ ತಿರಸ್ಕರಿಸಿದ್ದಾಗಲೀ ಅರಿವಿಗೆ ಬಂದಿರಲಿಲ್ಲವಾದ್ದರಿಂದ ತಮ್ಮ ನಡೆ ನುಡಿ ಬಗೆಗಳಲ್ಲಿ ಕೋಮುಭಾವನೆ ಎಂದೂ ಎಲ್ಲಿಯೂ ನುಸುಳುತ್ತಿರಲಿಲ್ಲ ಎಂಬ ಜಿ.ಟಿ.ನಾರಾಯಣರ ಮಾತು ಅವರ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ.ಮೊದಲು ವಸ್ತುಕ, ಬಳಿಕ ಮಸ್ತಕ, ಮತ್ತೆ ಹಸ್ತಕ, ಕೊನೆಗೆ ಪುಸ್ತಕ! ಆದರೆ ಇಂದಿನ ಶಿಕ್ಷಣಕ್ರಮದ ಪ್ರಕಾರ ಮೊದಲಿನಿಂದ ಕೊನೆಯ ತನಕ ಪುಸ್ತಕ-ಮಸ್ತಕ-ಪುಸ್ತಕ-ಮಸ್ತಕ ಉರುಹೊಡೆತ! ಎಂಬ ಜಿ.ಟಿ.ನಾರಾಯಣರ ಹೇಳಿಕೆ ಯುಕ್ತವಾಗಿದೆ. ಜಿ.ಟಿ.ನಾರಾಯಣರ ಅತ್ಮೀಯ ಪರಿಚಯ ನೀಡಿದ್ದಕ್ಕೆ ಧನ್ಯವಾದಗಳು.
ಪ್ರಿಯರೇ, ವಂದೇಮಾತರಮ್. ತೆಲುಗಿನಲ್ಲಿ ಓಂದು ಗಾದೆ ಇದೆ. “ತೀಸಿ ತನ್ನುತೆ ಗಾರೆ ಬುಟ್ಟಿಲೊ ಪಡ್ಡಾಡು.” (ತೆಗೆದು ತುಳಿದರೆ ವಡ ಬುಟ್ಟಿಯಲ್ಲಿ ಬಿದ್ದ.) ಬೆಂಕಿನ ನೌಕರಿಯಲ್ಲಿ ಜಿ.ಟಿ.ನಾ, ಮುಂದುವರಿದಿದ್ದರೆ, ದೊಡ್ಡ ಅಧಿಕಾರಿಯಾಗಿ ನಿವೃತ್ತರಾಗುತ್ತಿದ್ದರು. ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು. ದೊಡ್ದ ವಿಲಾಸವಂತಾದ ಮನೆಗಳಲ್ಲಿ ವಾಸವಾಗುತ್ತಿದ್ದರು. ಆದರೆ ಸಹಸ್ರಾರು ವಿದ್ಯಾರ್ಥಿಗಳ ಅಭಿಮಾನ, ಆಪ್ಯಾಯತೆ, ವಿಧೆಯತೆ, ಪ್ರೀತಿ, ವಿಶ್ವಾಸ, ಇದಕ್ಕೆಲ್ಲಾ ಅದು ಸಮಾನವೇ? “ನನ್ನ ಅಪ್ಪನ ಮರ್ಯಾದೆ ಕಾಪಾಡಲು ನಾನು ಸೈಕಲಿನಲ್ಲಿ ತಿರುಗುತ್ತೇನೆ. ನನ್ನ ಗೌರವ ಉಳಿಸಲು ನನ್ನ ಮಗ ಕಾರಿನಲ್ಲಿ ಪಯಣಿಸುತ್ತಾನೆ>” ಜಿ.ಟಿ.ನಾ. ಅವರ ಚಲೋಕ್ತಿ.