ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹತ್ತು
ಅಧ್ಯಾಯ ಇಪ್ಪತ್ಮೂರು
ಅಂದು ನಾನೊಬ್ಬ ಅತ್ಯಂತ ‘ಅರ್ಹ ಬ್ರಹ್ಮಚಾರಿ.’ ಮದುವೆ ಮಾರುಕಟ್ಟೆಯಲ್ಲಿ ನನ್ನ ಬೆಲೆ ಏರಿತ್ತು! ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನ್ನಲ್ಲಿಗೆ ಬಂದ ಎಲ್ಲ ಸೂಚನೆಗಳಿಗೂ ನನ್ನ ಉತ್ತರ ಒಂದೇ: ವಯಸ್ಸು ೩೦ ತುಂಬಿದ ಬಳಿಕವೇ ವಿವಾಹದ ಯೋಚನೆ. ಮಡಿಕೇರಿಯ ತವರಿನಲ್ಲಿದ್ದ ನಾಲ್ವರು ಅಜ್ಜಿಯರದೂ ಒಂದೇ ಒತ್ತಾಯ, “ಸುಬ್ಬಯ್ಯನ ಮಗಳನ್ನು ಒಪ್ಪಿಕೊಳ್ಳೋ. ನಿನಗೆ ಇಷ್ಟವಾದ ತೆಂಗಿನಕಾಯಿಹುಳಿಯನ್ನೂ ಅಕ್ಕಿ ಪಾಯಸವನ್ನೂ ಚೆನ್ನಾಗಿ ತಯಾರಿಸುತ್ತಾಳೆ ಕಾಣೋ!”
ಈ ಸುಬ್ಬಯ್ಯ ಬೇರೆ ಯಾರೂ ಅಲ್ಲ, ನನ್ನ ತಾಯಿಯ ಅಣ್ಣ, ಮರಿಕೆಯ ದೊರೆ, ನನ್ನ ಸಾಹಿತ್ಯ-ಸಂಗೀತಾಸಕ್ತಿಗಳಿಗೆ ಸಮೃದ್ಧಪೋಷಣೆಯಿತ್ತ ಆದರ್ಶ ಪುರುಷ. ನಾನು ಎಷ್ಟು ಮಡಿಕೇರಿಯ ಶಿಶುವೋ ಅಷ್ಟೇ ಮರಿಕೆಯ ಶಿಶು ಕೂಡ. ಇನ್ನು ಈ ಮಾವನ ಹೆಂಡತಿ (ನನ್ನತ್ತೆ) ನನ್ನನ್ನು ಖುದ್ದು ತಮ್ಮ ಮಕ್ಕಳಿಗಿಂತಲೂ ಹೆಚ್ಚು ಅಕ್ಕರೆಯಿಂದ ಲಾಲಿಸಿ ಪಾಲಿಸಿ ಬೆಳೆಸಿದ ಮಹಾಮಾತೆ. ಇಂಥವರ ಮಗಳು ಲಕ್ಷ್ಮಿ, ನನ್ನ ಸೋದರತ್ತಿಗೆ, ನನಗಿಂತ ೪ ವರ್ಷ ಕಿರಿಯಳು, ತುಂಬ ಜಾಣೆ. ಎಲ್ಲವೂ ಸರಿ. ಆದರೆ ನಾನು ಋಷ್ಯಶೃಂಗ, ಅನ್ಯಸ್ತ್ರೀಯರನ್ನು, ಅಲ್ಲಿಯೂ ಕನ್ಯೆಯರನ್ನು, ಕಡೆಗಣ್ಣಿಂದಲೂ ನೋಡಿದವನಲ್ಲ. ಲಕ್ಷ್ಮಿ ಮಡಿಕೇರಿಯಲ್ಲಿಯ ನಮ್ಮ ಮನೆಯಲ್ಲಿಯೇ ಇದ್ದು ನನ್ನದೇ ಶಾಲೆಗೆ ಹೋಗಿ ಬರುತ್ತಿದ್ದಳಾದರೂ ನನ್ನ ಮಟ್ಟಿಗೆ ಅವಳ ಅಸ್ತಿತ್ವವೇ ಇರಲಿಲ್ಲವೆಂಬಂಥ ಅತಿರೇಕ ವರ್ತನೆ ನನ್ನದು. ಏಕೆ? ಒಂಟಿ ಹುಡುಗನಾಗಿ ‘ಗಂಡು ಮುತ್ತಿನ ಚಂಡು’ ಎಂಬ ಅತಿಶಯ ಮುದ್ದಿನ ಪರಿಸರದಲ್ಲಿ ಬೆಳೆದವ ನಾನು. ತೀರ ಎಳೆ ಪ್ರಾಯದಿಂದಲೇ ಮನೆಯ ಹಿರಿಯರು ಮತ್ತು ಹಿತೈಷಿಗಳು ಸದುದ್ದೇಶದಿಂದಲೇ ಹೇಳುತ್ತಿದ್ದ ಮಾತು, “ನಮ್ಮ ನಾರಾಯಣನಿಗೆ ಈ ಲಕ್ಷ್ಮಿ ಹೇಳಿ ಮಾಡಿಸಿದ ಹಾಗಿದ್ದಾಳೆ. ಈಗಲೇ ಮದುವೆಮಾಡಿಬಿಡೋಣ.” ಇದನ್ನು ಕೇಳಿಕೇಳಿ ಈ ಹುಡುಗಿ ಬಗ್ಗೆ ತಿರಸ್ಕಾರ ಜುಗುಪ್ಸೆಗಳು ನನ್ನಲ್ಲಿ ಮೊಳೆತು ಮರವಾದುವು. ಪ್ರಾಯ ಬಂದಂತೆ ಇವು ಒಂದು ರೀತಿಯ ಅಲರ್ಜಿಯೇ ಆಗಿಬಿಟ್ಟುವು!
ಅತ್ತ ಮಾವ ಸುಬ್ಬಯ್ಯ ತಮ್ಮ ಮಗಳಿಗೆ ಪ್ರಾಯ ೧೫-೧೬ ತುಂಬುವ ಮೊದಲೇ ವರಾನ್ವೇಷಣೆಗೆ ತೊಡಗಿದ್ದರು. ತಮಾಷೆ ಏನೆಂದರೆ ಇಂಥ ಮೂರು ವಧೂಪರೀಕ್ಷಾ ಸಂದರ್ಭಗಳಲ್ಲಿಯೂ ತೀರ ಅನಿರೀಕ್ಷಿತವಾಗಿ ನಾನು ಮರಿಕೆಯಲ್ಲಿ ಹಾಜರ್! ಭಾವೀ ಅಳಿಯನ ಶೀಲ ಹಾಗೂ ವಿದ್ಯಾರ್ಹತೆಗಳಿಗೆ ಮಾತ್ರ ಸ್ಪಂದಿಸುತ್ತಿದ್ದ ಮಾವ – ಶ್ರೀಮಂತಿಕೆಯ ಡೌಲು ಅಬ್ಬರಗಳಿಗೆ ಎಂದೂ ಅಲ್ಲ – ಯಾವ ಕನ್ಯಾರ್ಥಿಯನ್ನೂ ಒಪ್ಪಲಿಲ್ಲ. ಹುಡುಗಿಯ ಅಭಿಪ್ರಾಯವನ್ನು ಕೇಳಿ ಮುಂದುವರಿಯಬೇಕೆಂಬ ವ್ಯಾವಹಾರಿಕ ಪ್ರಜ್ಞೆ ಇನ್ನೂ ಮೂಡಿರದ ಕಾಲವದು. ಲಕ್ಷ್ಮಿಗೆ ವಯಸ್ಸು ೨೦ ದಾಟಿತು. ಹಿರಿಯರೆಂದರು ಹದಿನೆಂಟು ದಾಟಿದ ಕನ್ಯೆ ವಿಧವೆಯಂತೆ ಬಾಳಬೇಕು. ಆದರೆ ಮಾವ ಮಾತ್ರ ಅವಿಚಲಿತ. ಅವರ ಮನೋಧರ್ಮ ಕೆಎಸ್ನ ಹೇಳಿದಂತೆ –
ಶಾನುಭೋಗರ ಮಗಳು ರತ್ನದಂತಹ ಹುಡುಗಿ;
ಗಂಡು ಸಿಕ್ಕುವುದೊಂದು ಕಷ್ಟವಲ್ಲ;
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ,
ತಡವಾದರೇನಂತೆ? ನಷ್ಟವಿಲ್ಲ.
೧೯೫೧ರ ಆರಂಭ. ಮಾವನಿಂದ ನನಗೊಂದು ಪತ್ರ ಬಂತು. ಖುದ್ದು ನಾನೇ ಅವರ ಮಗಳ ಕೈಹಿಡಿವ ‘ಕೃಪೆ’ ಮಾಡಬೇಕೆಂಬ ಹೃದಯದ ಮೊರೆ ಅದರಲ್ಲಿ ಮಿಡಿಯುತ್ತಿತ್ತು. ನನ್ನ ಮಾವನಂಥ ಆದರ್ಶವ್ಯಕ್ತಿಗೆ ಈ ತೆರನಾದ ದೈನ್ಯ ಪರಿಸ್ಥಿತಿ ಬರಬಹುದೇ ಎಂದು ನನ್ನ ಮನ ಮರುಗಿತು, ಎದೆ ಕರಗಿತು, ಸಂಕಲ್ಪ ಸಡಿಲವಾಯಿತು. ಹಾಗಾದರೆ ಪ್ರತಿಜ್ಞೆ? ಇನ್ನೂ ೨೫ರಲ್ಲಿದ್ದೆ. ಆರ್ಥಿಕ ಸ್ಥಿತಿ ಸಂಸಾರ ಹೂಡಲು ಖಂಡಿತ ಅನುಕೂಲವಾಗಿರಲಿಲ್ಲ. ತಂದೆ, ಮಾವ, ನೆಂಟರಿಷ್ಟರು ಯಾರಿಂದಲೂ ಹಣ ಯಾಚಿಸತಕ್ಕದ್ದಲ್ಲ ಪಡೆಯತಕ್ಕದ್ದೂ ಅಲ್ಲ ಎಂಬ ದೃಢ ನಿಲವು.
ವಾರಾಂತ್ಯದಲ್ಲಿ ಮರಿಕೆಗೆ ಹೋದೆ. ಹುಡುಗಿ ಎಂದಿಗಿಂತಲೂ ಹೆಚ್ಚಾಗಿ ಅಡಗಿದಳು. ಆದರೂ ನನ್ನ ಕಣ್ಣಿಗೆ ಬಿದ್ದಳು. ಆಗಲೇ ಅವಳನ್ನು ನಾನು ಸರಿಯಾಗಿ ನೋಡಿದ್ದು. ಕೆಎಸ್ನ ನುಡಿಗಳಲ್ಲಿ –
ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು:
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು;
ತುಂಬು ಹರೆಯದ ಹುಡುಗಿ ನೀನೊಲುಮೆಗೀಡು;
ನಂಬಿ ನನ್ನನು ವರಿಸಿ ಸಂತಸದಿ ಬಾಳು.
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆ ಮದುವೆ!
ದಿನಾಂಕ ೯-೫-೧೯೫೧ರಂದು ಮರಿಕೆ ಮನೆಯಲ್ಲಿ ‘ಲಕ್ಷ್ಮೀನಾರಾಯಣರ ವಿವಾಹ’ವೆಂದು “ಗುರುರಿಯರಿದ್ದು” ಹುಡುಗಿಯ ಅಭಿಪ್ರಾಯ ಕೇಳದೇ ನಿರ್ಧರಿಸಿದರು! ಅದೇ ಹಿಂದಿನ ರಾತ್ರಿ ನಾನು ಒಂಟಿಯಾಗಿ ಮಂಗಳೂರಿನಿಂದ ಬಸ್ ಪ್ರಯಾಣ ಮಾಡಿ ಸಂಟ್ಯಾರಿನಲ್ಲಿ ಇಳಿದೆ. ಅಲ್ಲಿಂದ ಸುಮಾರು ೧ ಕಿಮೀ ದೂರ ಗಾಡಿ ರಸ್ತೆಯಲ್ಲಿ ನಡೆದರೆ ಮಾವನ ಮನೆ ಮರಿಕೆ ಸಿಕ್ಕುತ್ತದೆ. ಅಲ್ಲಿಯೇ ಹುಟ್ಟಿ ಆಡಿ ಓಡಿ ಬೆಳೆದಿದ್ದ ನನಗೆ ಈ ಕಾರ್ಗತ್ತಲೆಯ ಹಾದಿ ಆತ್ಮೀಯವಾಗಿತ್ತು. ಹೀಗೆ ತಾರೆಗಳಡಿಯಲ್ಲಿ ಮುನ್ನಡಿಯಿಡುತ್ತಿದ್ದಾಗ ಯಾರೋ ವೃದ್ಧರು ದೊಣ್ಣೆ ಊರುತ್ತ ಮುಂದೆ ಹೋಗುತ್ತಿದ್ದುದು ನನ್ನ ಅರಿವಿಗೆ ಬಂತು. ಅವರ ಜೊತೆ ಹರಟೆಗಿಳಿದೆ, “ಎತ್ತ ಕಡೆಗೆ ಪಯಣ ಅಜ್ಜಯ್ಯ?”
“ಇಲ್ಲೇ ಸುಬ್ಬಯ್ಯನವರ ಮನೆ ಮರಿಕೆಗೆ.”
“ಏನು ವಿಶೇಷ?”
“ಓಹೋ ನಿಮಗೆ ಗೊತ್ತಿಲ್ಲವೋ? ನಾಳೆ ಅವರಲ್ಲೊಂದು ಭರ್ಜರಿ ಮದುವೆ!”
“ಯಾರಿಗೋ?”
“ಅವರ ಹಿರಿಮಗಳಿಗೆ.”
“ಅದರಲ್ಲಿ ನಿಮ್ಮ ಪಾತ್ರವೇನು?”
“ನಾನೇ ಪ್ರಧಾನ ಪುರೋಹಿತ.”
“ಬಹಳ ಸಂತೋಷ. ವರ ಯಾರೋ?”
“ಅವರ ಸೋದರಳಿಯನಂತೆ. ಅದಿರಲಿ ನೀವು ಯಾರು? ಈ ಅರಿಯದ ನೆಲೆಗೆ ಇಂಥ ಅಪರಾತ್ರಿಯಲ್ಲೇಕೆ ಬಂದಿದ್ದೀರಿ?”
“ನಾನೂ ಅದೇ ಮದುವೆಗೆಂದು ದೂರದ ಮುಂಬಯಿಯಿಂದ ಬಂದಿದ್ದೇನೆ. ಅವರ ಭಾವೀ ಅಳಿಯ ನನ್ನ ಗಳಸ್ಯ ಕಂಠಸ್ಯ ಸ್ನೇಹಿತ. ಈಗ ನೋಡಿ ಸ್ವಾಮೀ! ನೀವು ಸಿಕ್ಕಿ ನನ್ನನ್ನು ಸರಿಯಾದ ಸ್ಥಳಕ್ಕೆ ಕರೆದೊಯ್ಯುತ್ತಿರುವುದೊಂದು ಭಾಗ್ಯ.”
ಇಷ್ಟಾಗುವಾಗ ಮರಿಕೆ ಅಂಗಳಕ್ಕೆ ಕಾಲಿಟ್ಟೆವು. ಆ ಝಗಝಗಿಸುವ ಗ್ಯಾಸ್ಲೈಟುಗಳ ಬೆಳಕಿನಲ್ಲಿ ಮನೆಯ ಮಕ್ಕಳೆಲ್ಲರೂ ಒಡನೆ ನನ್ನನ್ನು ಗುರುತಿಸಿ, “ನಾರಾಯಣ ಬಂದ!” ಎಂದು ಬೊಬ್ಬೆ ಹೊಡೆದಾಗ ನಮ್ಮ ಪುರೋಹಿತರು ಕಕ್ಕಾಬಿಕ್ಕಿ. ಅವರೇ ನಕ್ಕು ನುಡಿದರು, “ನನ್ನನ್ನು ಎಂಥ ಮಂಗಮಾಡಿದಿರಿ ಮಾರಾಯ್ರೇ!” ಮದುವೆ ಸಾಕಷ್ಟು ದೀರ್ಘವಾಗಿಯೇ ನೆರವೇರಿತು. ಅಂದು ಸಂಪ್ರದಾಯದ ಸಂಕೋಲೆ ಹಾಗಿತ್ತು. ಐದು ದಿನಗಳ ಮದುವೆ ಮಾಮೂಲು; ಆದರೆ ಧಾರೆಯ ಸಂಜೆಯೇ ‘ಪದುಮಳು ಒಳಗಿಲ್ಲ’ ಪ್ರಕರಣ (ಕೆಎಸ್ನ ‘ಮಾವನ ಮನೆಯಲ್ಲಿ’); ಶುದ್ಧಾನಂತರ ಮರಳಿದಾಗ ನಮ್ಮ ಕುಟುಂಬದಲ್ಲಿ ಯಾರೋ ವೃದ್ಧರು ಮಡಿದ ವಾರ್ತೆಯನ್ನು ಹೊತ್ತು ತಂದರು ಆಪ್ತ ಸಂಬಂಧಿಕರೊಬ್ಬರು; ಈ ಸೂತಕ ಮುಗಿದಾಗ ಬೇರೇನೋ ಅಶುಭ! ಅಂತೂ ಇಂತೂ ಸುಮಾರು ೨೭ ದಿನ ಪರ್ಯಂತ (ಚಂದ್ರನ ನಾಕ್ಷತ್ರಿಕ ಮಾಸ) ಈ ಸತಾವಣೆ (ತದ್ದೂರೇ ತದ್ವಂತಿಕೇ – [ನನ್ನ ಭಾರ್ಯೆ ನನಗೆ] ಅಷ್ಟು ಹತ್ತಿರವಿದ್ದೂ ಅಷ್ಟು ದೂರವಾಗಿರುವ ಸಂದಿಗ್ಧತೆ) ಸಾಗಿತು. ಸದ್ಯ ಆಗ ನನಗೆ ಬೇಸಗೆ ರಜೆ ಇದ್ದುದರಿಂದ ಬಚಾವ್.
ಅದೇ ಜೂನ್ ತಿಂಗಳಲ್ಲಿ ಕಾಲೇಜ್ ಶುರುವಾದಾಗ ಮತ್ತೆ ಹಾಸ್ಟೆಲ್ಲಿನ ಗಂಡು ಬಿಡಾರ. ಆಗ ವಿರಹ ತಾಪವೇನೆಂಬುದು ಅರಿವಿಗೆ ಬಂತು. ಮನೆ ಮಾಡದೆ ವಿಧಿ ಇಲ್ಲ, ಮರ್ಯಾದೆಯೂ ಇಲ್ಲ. ಆದರೆ ಕೈಗೆ ಬರುತ್ತಿದ್ದ ರೂ ೧೨೦ರಲ್ಲಿ ಇದು ಸಾಧ್ಯವೇ? ಹಿರಿಯ ಸಹೋದ್ಯೋಗಿ ಮಿತ್ರ ಬಿ.ವಿ.ಕೆದಿಲಾಯರೂ ನವ ಗೃಹಸ್ಥ ನಾನೂ ಸೇರಿ ಬಾಡಿಗೆ ಮನೆಯೊಂದನ್ನು ಹಿಡಿದೆವು: ಅರ್ಧ ಭಾಗದಲ್ಲಿ ಅವರು, ಅವರ ಹೆಂಡತಿ ಮತ್ತು ಆರರ ಹರೆಯದ ಮಗಳು, ಉಳಿದರ್ಧದಲ್ಲಿ ನಾವಿಬ್ಬರು; ಅಡುಗೆ, ವಾಸ ಬೇರೆ ಬೇರೆ.
ನನ್ನವಳು ನನ್ನೆಲ್ಲ ಕಲ್ಪನೆ ನಿರೀಕ್ಷೆಗಳನ್ನೂ ಮೀರಿದ ಸುಸಂಸ್ಕೃತೆ, ಅನುಕೂಲೆ ಎಂಬುದು ಅತಿ ಶೀಘ್ರದಲ್ಲೇ ಅರಿವಿಗೆ ಬಂತು. ವಿವಾಹಮಂಟಪದಲ್ಲಿ ಪುರೋಹಿತರು ಹೇಳುವ –
ಕಾರ್ಯೇಷು ಮಂತ್ರೀ ಕರಣೇಷು ದಾಸೀ
ಭೋಜ್ಯೇಷು ಮಾತಾ ಶಯನೇಷು ರಂಭಾ
ಧರ್ಮೇsನುಕೂಲಾ ಕ್ಷಮಯಾ ಧರಿತ್ರೀ
ಭಾರ್ಯಾ ಚ ಷಾಡ್ಗುಣ್ಯವತೀಹ ದುರ್ಲಭಾ
ಮಂತ್ರಕ್ಕೆ ಬರೆದ ಜೀವಂತ ಭಾಷ್ಯ ಅವಳಾಗಿದ್ದಳು. ತುಂಬು ಸಂಸಾರದ ಹೆಣ್ಣು ಅವಳು. ನಾನೋ ಒಂಟಿ ಸಲಗನಾಗಿ ಬೆಳೆಯುತ್ತ ಮನೆಯವರಿಂದಲೂ ಹೊರಗಿನವರಿಂದಲೂ ಜೈ ಜೈ ಎಂದು ಹೇಳಿಸಿಕೊಂಡು ಬೀಗುತ್ತಿದ್ದ ನಿರಂಕುಶ ಮನೋವೃತ್ತಿಯ ಗಂಡು. ಪಾಶ್ಚಾತ್ಯ ದೇಶಗಳಲ್ಲಾಗಿದ್ದರೆ ಮನೆ ಹೂಡಿದ ತರುಣದಲ್ಲೇ ಅವಳು ನನ್ನಿಂದ ವಿವಾಹವಿಚ್ಛೇದನ ಪಡೆದು ಸ್ವತಂತ್ರಳಾಗಿ ಬಿಡುತ್ತಿದ್ದಳು. ಆದರೆ ನನ್ನ ಹೆಂಡತಿ ಭಾರತೀಯ ಸ್ತ್ರೀ, “ಮನೆಮನೆಯಲಿ ನೀನಾಗಿಹೆ ಗೃಹಶ್ರೀ. ಪೆಸರಿಲ್ಲದ ಪೆಸರಿದೆ ನಿನಗದು ಗೃಹಸ್ತ್ರೀ.”
ಖಾಸಗಿಪಾಠದ ಉಸುಕಿಗೆ ಬಿದ್ದೆ
ಅಧ್ಯಾಯ ಇಪ್ಪತ್ನಾಲ್ಕು
ಮದ್ರಾಸು ವಿಶ್ವವಿದ್ಯಾಲಯ (ಆಡಳಿತಾತ್ಮಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸು ಆಧಿಪತ್ಯಕ್ಕೆ ಸೇರಿದ್ದುದರಿಂದ ನಮ್ಮ ಕಾಲೇಜು ಈ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿತ್ತು) ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ವಾಙ್ಮಯವನ್ನು ಪ್ರೋತ್ಸಾಹಿಸುವ ಸಲುವಾಗಿ ‘ಖಗೋಳವಿಜ್ಞಾನ’ ಕುರಿತಂತೆ ಗ್ರಂಥಹಸ್ತಪ್ರತಿಗಳನ್ನು ಆಹ್ವಾನಿಸಿತು. ನನಗೆ ತಂತಾನೇ ಒದಗಿದ ಸುವರ್ಣಾವಕಾಶವಿದೆಂದು ಭಾವಿಸಿ ಈ ಸವಾಲನ್ನು ಸ್ವೀಕರಿಸಿದೆ. ಖಗೋಳವಿಜ್ಞಾನದ ಹಸ್ತಪ್ರತಿಯನ್ನು (ಆ ೨೦೦ ಪುಟಗಳನ್ನು ಪ್ರತಿಯೊಂದನ್ನೂ ಹತ್ತಾರು ಬಾರಿ ಬರೆದು ಮರುಬರೆದು) ಯಥಾಕಾಲದಲ್ಲಿ ವಿಶ್ವವಿದ್ಯಾಲಯಕ್ಕೆ ರವಾನಿಸಿದೆ. ಇದಕ್ಕೆ ಬಹುಮಾನ ದೊರೆಯಲಿಲ್ಲ. “The style is too high and academic” ಎಂಬ ಟಿಪ್ಪಣಿ ಲಭಿಸಿದ್ದೇ ಲಾಭ. ಇನ್ನು ಪ್ರಶಸ್ತಿಪಾತ್ರವಾದ ಕೃತಿಯನ್ನು ಖರೀದಿಸಿ ಓದಿದೆ. ಅದೊಂದು ವಿಸ್ತೃತ ಪಾಠಪುಸ್ತಕ, ಹಳೆಯ ಹಳಸಲು ಮಾಹಿತಿಗಳ ಮೊತ್ತ! ಸ್ಪರ್ಧೆಗಳ ಬಗೆಗೇ ನನ್ನಲ್ಲಿ ಜುಗುಪ್ಸೆ ಮೂಡಿತು. ಮುಂದೆ ಎಂದೂ ನಾನು ಯಾವ ಸ್ಪರ್ಧೆಯಲ್ಲೂ ಭಾಗವಹಿಸಲಿಲ್ಲ. ನಿಜ,
ಆಸೆಯೆಂಬುದನರ್ಥಕಾರಿಯುಮೋಸಮಾರ್ಗಕೆ ತಳ್ವ ಆಮಿಷವೇಷಭೂಷಣ ನಡೆನುಡಿಗಳಲಿ ಕೃತಕತೆಗೆ ನಾಂದಿ!
ದ್ವೇಷಕಾರಕ ಗರಳವಿದು ಖರೆದೇಶಛಿದ್ರಕ ಪಟ್ಟಭದ್ರರಭ್ರಷ್ಟ ಕೂಪಕೆ ಕೆಡೆವ ಘಾತಕ ಮಾರ್ಗವಿದು ತಿಳಿಯೊ!
ಇತ್ತ ಪತ್ರಿಕೆಗಳಿಗೆ ವಿಜ್ಞಾನಲೇಖನಗಳನ್ನು ನಿಯತಕಾಲಿಕವಾಗಿ ಕಳಿಸುತ್ತಿದ್ದೆ. ಪರಿಣಾಮವಾಗಿ ನಾನೊಂದು ಪುಟ್ಟ ಗ್ರಂಥಾಲಯವನ್ನೇ ಕಟ್ಟುವುದು ಅನಿವಾರ್ಯವಾಯಿತು. ಆದರೆ ಕಾಸೆಲ್ಲಿ? ಸಾಲಮಾಡದೇ ಮರ್ಯಾದೆಯಿಂದ ಬಾಳಬೇಕು, ಹೆಂಡತಿಯ ಆಭರಣಾದಿಗಳನ್ನು ಮುಟ್ಟತಕ್ಕದ್ದಲ್ಲ, ಅಪ್ಪ ಮಾವ ಅಥವಾ ಸಂಬಂಧಿಕರತ್ತ ಕೈಚಾಚತಕ್ಕದ್ದಲ್ಲ. ಇತ್ತ ಗ್ರಂಥಾಲಯ ನನ್ನ ವಿಕಾಸಕ್ಕೆ ಅತ್ಯವಶ್ಯ ಪೋಷಕಧಾತು. ಹೇಗೆ ಹಣ ಹೊಂದಿಸಲಿ? ಹಿರಿಯ ಸಹೋದ್ಯೋಗಿಯೊಬ್ಬರು ಸಲಹೆ ನೀಡಿದರು, “ಗಣಿತದಲ್ಲಿ ಮನೆಪಾಠಕ್ಕೆ ಒಳ್ಳೆ ಬೇಡಿಕೆ ಇದೆ. ಒಬ್ಬನೋ ಇಬ್ಬರೋ ವಿದ್ಯಾರ್ಥಿಗಳಿಗೆ ಖಾಸಗಿಪಾಠ ಮಾಡಿ. ಗಂಟೆಗೆ ಕನಿಷ್ಠ ರೂ ೨ ಶುಲ್ಕವಿದೆ. ಸೀನಿಯರ್ ಲೆಕ್ಚರರ್ಗಳು ರೂ ೫ಕ್ಕಿಂತ ಕಡಿಮೆಗೆ ಒಪ್ಪುವುದಿಲ್ಲ.”
“ಆದರೆ ಅಂಥ ಸಂಪಾದನೆ ಅನೈತಿಕವಲ್ಲವೇ? ವರ್ಷಾಂತ್ಯದಲ್ಲಿ ನಾನು, ಅದೇ ಹಿಂದಿನ ವರ್ಷ ಯಾವುದೇ ಖಾಸಗಿಪಾಠ ಹೇಳಿಲ್ಲವೆಂಬ ಲಿಖಿತ ಮುಚ್ಚಳಿಕೆ ಕೊಡಬೇಕಲ್ಲವೇ?” “ಅಷ್ಟೊಂದು ನಿಷ್ಠುರ ನೈತಿಕತೆ ಖುದ್ದು ಸರ್ಕಾರದಲ್ಲೇ ಇಲ್ಲ. ಮುಚ್ಚಳಿಕೆ ಕೊಡಿ, ಇತ್ತ ಮನೆಪಾಠದಲ್ಲೂ ತೊಡಗಿ. ನಿಮ್ಮದು ವ್ಯಾವಹಾರಿಕವಲ್ಲದ ಆದರ್ಶ.” ಕ್ರಮೇಣ ನಾನು ಕಪ್ಪಕ್ಕೆ ಕೆಡೆದೆ?
ಅವನು ಬಂದ. ಅಲ್ಲ, ಅವನ ಶ್ರೀಮಂತ ಅಪ್ಪ ಈ ದಡ್ಡ ಮಗನನ್ನು ಕಾರ್ನಲ್ಲಿ ಕರೆದುಕೊಂಡು ಬಂದು ನಮ್ಮ ಮನೆಯಲ್ಲಿ ಬಿಟ್ಟು, “ಏ ಮಾಷ್ಟಾ! ನನ್ನ ಮಗ ಎಂಜಿನಿಯರ್ ಆಗತಕ್ಕದ್ದು. ಲೆಕ್ಕದಲ್ಲಿ ತುಸು ವೀಕ್ ಅಷ್ಟೆ. ಅದರಲ್ಲಿ ಇವನು ಸಾಕಷ್ಟು ಅಂಕ ಗಳಿಸುವಂತೆ ಮಾಡುವುದು ನಿನ್ನ ಹೊಣೆ. ದುಡ್ಡಿನ ಕೊರತೆ ಇಲ್ಲ” ಎಂದು ದರ್ಪದಿಂದ ಇಂಗ್ಲಿಷಿನಲ್ಲಿ ಆದೇಶಿಸಿ ಹೋದ. ‘ಮಾಷ್ಟ್ರು’ ಅಂದರೆ ಬಹುವಚನ, ಇದರ ಏಕವಚನ ‘ಮಾಷ್ಟ’ ಎಂಬುದು ಅಂದಿನ ಗರ್ವಿಷ್ಠರ ತರ್ಕ. ಅಲ್ಲದೇ ಎಲ್ಲಿಯೂ ಸಲ್ಲದಾತ ಮಾತ್ರ ಉಪಾಧ್ಯಾಯನಾಗುತ್ತಾನೆ ಎಂದು ಜನ ಭಾವಿಸುತ್ತಿದ್ದ ಕಾಲವದು. (ಇಂದು ಬದಲಾಗಿದೆಯೇ?) ಗಂಟೆಗೆ ರೂ ೨ ಶುಲ್ಕ. ತಿಂಗಳಿಗೆ ರೂ ೬೦, ಖುದ್ದು ನನ್ನ ಸಂಬಳದ ಅರ್ಧಾಂಶ! ಪಾಠ ಮಾಡಿದೆ, ಕೊಸರು ಸೇರಿಸಿ ಲೆಕ್ಕ ಹೇಳಿಕೊಟ್ಟೆ. ನಮಗೇ ಕಾಪಿ಼ಗೆ ತತ್ವಾರವಾಗಿದ್ದಾಗಲೂ ಅವನಿಗೆ ಒತ್ತಾಯಪೂರ್ವಕವಾಗಿ, ಹೆಂಡತಿಯ ಅಭ್ಯಂತರ ಲೆಕ್ಕಿಸದೇ, ಅದನ್ನು ಕುಡಿಸಿದೆ. ಒಂದು ಲೋಟ ಕಾಪಿ಼ಗೆ ಕೇವಲ ಅರ್ಧಾಣೆ (ರೂ ೧ = ೧೬ ಆಣೆಗಳು) ಬೆಲೆಯಿದ್ದ ಕಾಲವದು. ಆತ ಮಾತ್ರ ಶತ ಶುಂಠ. ೧ಕ್ಕೆ ೫ ಕೂಡಿಸಿದರೆ ೭ ಎನ್ನುತ್ತಿದ್ದ ಬೃಹಸ್ಪತಿ. ಬೀಜಗಣಿತದ ಅಕ್ಷರದೋಹದಲ್ಲಿ ಅಂತೆಯೇ ಜ್ಯಾಮಿತಿಯ ವಕ್ರರೇಖೆಗಳ ಗೋಜಲಿನಲ್ಲಿ ಅವನು ಸಿಕ್ಕಿಹಾಕಿಕೊಂಡು ತಾನೂ ತೊಳಲಿ ನನ್ನನ್ನೂ ಬಳಲಿಸುತ್ತಿದ್ದುದೇ ವಾಡಿಕೆ. ಆದರೂ ತಿಂಗಳ ಕೊನೆಯಲ್ಲಿ ಕಾದಿದೆ ರೂ ೬೦, ಹೆಂಡತಿಗೆ ಸೀರೆ, ನನಗೆ ಶೂಗಳು… ಮಂಡಿಗೆ ಮೆದ್ದದ್ದೇ ಮೆದ್ದದ್ದು.
ತಿಂಗಳು ತುಂಬಿತು. ದುಡ್ಡಿನ ಥೈಲಿ ಅಪ್ಪ ಮಗನ ಸಹಿತ ಕಾರ್ನಲ್ಲಿ ಬಂದಿಳಿದ, “ಏ ಮಾಷ್ಟಾ! ಇವನಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಬರುವಂತೆ ನೀನು ಪಾಠ ಮಾಡಿದರೆ ಸಾಕು. ಈಗಿನ ವ್ಯರ್ಥ ಬೋಳು ಹರಟೆ ನಿಲ್ಲಿಸು” ಎಂದು ಮತ್ತೆ ಇಂಗ್ಲಿಷಿನಲ್ಲಿ ಅಪ್ಪಣೆ ಮಾಡಿದ.’
ನನ್ನ ಆತ್ಮ ಪ್ರತ್ಯಯ ಸೆಟೆದೆದ್ದು ಬುಸುಗುಟ್ಟಿತು, “It’s I, and NOT you, who’ll decide on the mode of tutoring your blockhead son. Get out of my sight at once,” ಎಂದು ಗರ್ಜಿಸಿದೆ. ಆ ಶನಿಗಳು ತೊಲಗಿಯೇ ಹೋದುವು. ಹಾಗಾದರೆ ರೂ ೬೦? ಕುಡಿಸಿದ ಕಾಪಿಯ ಬೆಲೆ? ಕಂಠ ಮತ್ತು ಮಿದುಳು ಶೋಷಣೆಯ ಶುಲ್ಕ? ಎಲ್ಲವೂ ಮಂಗಮಾಯ. ಗೊತ್ತಿದ್ದ ಪಾಠ ಮತ್ತೊಮ್ಮೆ ದೃಢವಾಯಿತು: ವಾಮಮಾರ್ಗದಲ್ಲಿ ಹಣದ ಗಳಿಕೆ ಸಲ್ಲ ಸಲ್ಲ.
ಆದರೆ ಬದುಕು ತನ್ನದೇ ಅಜ್ಞಾತ ಕಾರಣಗಳಿಗಾಗಿ ಹೊಸ ಹಾದಿಗಳನ್ನು ಕಾಣಿಸುವುದು ವಿರಳವಲ್ಲ. ಹಿಂದೆ ಪ್ರಸ್ತಾವಿಸಿದ ಬೆಸೆಂಟ್ ಶಾಲೆಯ ಮಿತ್ರ ಶ್ರೀನಿವಾಸ ಉಡುಪರು ನನ್ನ ಒಂದು ಕಥಾಸಂಕಲನ ಪ್ರಕಾಶಿಸಲು ತಾವಾಗಿಯೇ ಮುಂಬಂದರು. ‘ವನಸುಮ’ ಪುಸ್ತಕ ಹೊರಬಂತು (೧೯೫೧), ಇದು ಪ್ರೌಢಶಾಲಾತರಗತಿಗಳಿಗೆ ಉಪಪಠ್ಯ ಪುಸ್ತಕವೂ ಆಗಿ ನನಗೆ ಹೇರಳ ಸಂಭಾವನೆ ದೊರೆಯಿತು. ಎರಡನೆಯ ಸಂಕಲನ ‘ಕೊಡಗಿನ ಕತೆಗಳು’ (೧೯೫೩) ಕೂಡ ಇದೇ ರೀತಿ ಜನಪ್ರಿಯತೆ ಗಳಿಸಿ ಇನ್ನಷ್ಟು ಗೌರವಧನ ತಂದುಕೊಟ್ಟಿತು – ತುಸು ಹೆದರಿಕೆಯೇ ಆಗುವಷ್ಟು. (‘ಕೊಡಗಿನ ಸುಮಗಳು’ ಎಂಬ ಒಂದೇ ಶೀರ್ಷಿಕೆಯಲ್ಲಿ ೨೦೦೬ರಲ್ಲೂ ಪ್ರಕಟವಾಗಿತ್ತು.) ಆದರೆ ಅಷ್ಟರಲ್ಲೇ ನಾನು ಸಣ್ಣಕತೆಗಳ ಬುರುಡೆ ನೆಲ ಬಿಟ್ಟು ಜನಪ್ರಿಯವಿಜ್ಞಾನ ಲೇಖನಗಳ ಅನಿಲಮಯ ಗಗನಕ್ಕೆ ನೆಗೆದಿದ್ದೆ.
೧೯೫೨ರ ಆರಂಭ. ನ್ಯಾಷನಲ್ ಕ್ಯಾಡೆಟ್ ಕೋರ್ (ಎನ್ಸಿಸಿ) ದಳವನ್ನು ಪ್ರಥಮ ಬಾರಿಗೆ ನಮ್ಮ ಕಾಲೇಜಿನಲ್ಲಿ ಆರಂಭಿಸಲು ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಮುಂಬಂದಿತು. ಇದನ್ನು ನಿರ್ವಹಿಸಲು ನಮ್ಮಲ್ಲಿಯ ಯುವ ಸುಟಿ ಸಮರ್ಥ ಉಪನ್ಯಾಸಕನೊಬ್ಬನನ್ನು ಆಯ್ದು ಸೇನಾಕೇಂದ್ರಕ್ಕೆ ಶಿಕ್ಷಣಾರ್ಥ ಕಳಿಸಿಕೊಡಬೇಕೆಂದು ಪ್ರಾಂಶುಪಾಲರನ್ನು ಕೋರಿತು. ನನ್ನಂಥ ಯುವ ಉಪನ್ಯಾಸಕರಿಂದ ಇವರು ಅರ್ಜಿಗಳನ್ನು ಆಹ್ವಾನಿಸಿದರು.
ಎನ್ಸಿಸಿ ಅಂದರೇನೆಂದು ನಮಗೆ ಯಾರಿಗೂ ಏನೂ ಗೊತ್ತಿರದ ದಿನಗಳವು. ಇನ್ನು ವೈಯಕ್ತಿಕವಾಗಿ ನಾನು ಎಲ್ಲ ಬಗೆಯ ಬಲಾತ್ಕಾರಗಳಿಗೂ ವಿರೋಧಿ. ಆದ್ದರಿಂದ ಈ ಮಿಲಿಟರಿ ಉಸಾಬರಿ ಅಪ್ಪಟ ಪುಳಿಚಾರಿ ಅಹಿಂಸಾವಾದಿಯಾಗಿದ್ದ ನನಗೆಂದೂ ಹೇಳಿದ್ದಲ್ಲ ಎಂದು ಅದರ ಬಗ್ಗೆ ಉದಾಸೀನನಾಗಿದ್ದೆ. ಆದರೆ ವಿಧಿ ಅನ್ನಿ, ಸನ್ನಿವೇಶಗಳ ಪಿತೂರಿ ಅನ್ನಿ, ಸಂದರ್ಭಗಳ ಆಕಸ್ಮಿಕತೆ ಎನ್ನಿ ಖುದ್ದು ನಾನೇ ಈ ಎನ್ಸಿಸಿ ಸೇರುವಂತಾದುದು, ಮತ್ತು ಅದರಲ್ಲಿ ಮುಂದಿನ ೧೭ ವರ್ಷ (೧೯೫೨-೬೯) ಕ್ರಿಯಾಶೀಲವಾಗಿ ಕಾರ್ಯನಿರತನಾಗುವಂತಾದುದು ಎಂದೂ ಬಗೆಹರಿಯದ ವಿಸ್ಮಯ.
ಮದ್ರಾಸು ರೆಜಿಮೆಂಟಲ್ ಸೆಂಟರ್, ವೆಲ್ಲಿಂಗ್ಟನ್ (ನೀಲಗಿರಿ) ಇಲ್ಲಿ ನಾನು ೧೯೫೨ ಮೇ ೧ರಿಂದ ಜುಲೈ ೩೧ರ ತನಕ ಸೇನಾಶಿಕ್ಷಣ ಪಡೆಯಲು ನಿಯೋಜಿತನಾದೆ. ಮರಿಕೆಯ ತವರಿನಲ್ಲಿ ಮಡದಿಯನ್ನು ಬಿಟ್ಟು ದೂರದ ಮತ್ತು ಅರಿಯದ ನೆಲೆಗೆ ಮೂರು ತಿಂಗಳ ಮಿಲಿಟರಿ ‘ಸೆರೆವಾಸ’ ಅನುಭವಿಸಲು ಹೊರಟು ನಿಂತಾಗ ಅವಳಿಗೇನೆನ್ನಿತೋ ವಿಚಾರಿಸುವ ಗೋಜಿಗೆ ನಾನು ಹೋಗಲಿಲ್ಲ. ಆದರೆ ಅವಳ ಆ ತುಂಬು ನೋಟದ ಮಿಂಚು ಖಂಡಿತ ನನಗೆ ಶುಭ ಹಾರೈಸಿತೆಂಬುದು ಒಳಮನಸ್ಸಿಗೆ ಅರ್ಥವಾಯಿತು. ಇನ್ನು ರಂಗೇರುತ್ತಿದ್ದ ಅವಳ ದೇಹರೇಖೆಗಳು ಭವಿಷ್ಯದ ಶುಭ ಸೂಚಕಗಳಾಗಿದ್ದುವು. ಅದೇ ಸೆಪ್ಟೆಂಬರಿನಲ್ಲಿ ನಮ್ಮ ಚೊಚ್ಚಲ ಶಿಶು ಅಶೋಕ ಹುಟ್ಟಿದ.
Second Lieutenant (NCC) ಎಂಬ ಕಮಿಶನ್ನನ್ನು ಉನ್ನತ ಸ್ಥಾನದಲ್ಲಿ ಗಳಿಸಿ ಆಗಸ್ಟ್ ೧ರಂದು ಮರಳಿದೆ ಮತ್ತು ಕಾಲೇಜಿನಲ್ಲಿ ಎನ್ಸಿಸಿ ದಳವನ್ನು ಪ್ರಾರಂಭಿಸಿದೆ. ಈ ಭಾಗಕಾಲೀನ ಹೊಣೆಗಾರಿಕೆಗೆ ಎನ್ಸಿಸಿ ಕಛೇರಿ ಪ್ರತಿ ತಿಂಗಳು ನನಗೆ ರೂ ೧೭.೫೦ ಗೌರವಧನ ಪಾವತಿಸುತ್ತಿತ್ತು. ಅಲ್ಲದೇ ವಾರ್ಷಿಕ ಶಿಬಿರಗಳಿಗೆ ಹೋದಾಗ ಸಕಲ ಸೌಕರ್ಯಗಳ ಜೊತೆಗೆ ಹಿರಿ ಸಂಭಾವನೆಯೂ ದೊರೆಯುತ್ತಿತ್ತು.
ಮುಂದಿನ ೧೭ ವರ್ಷ (೧೯೫೨-೬೯) ಪರ್ಯಂತ ನಾನು ಎನ್ಸಿಸಿಯಲ್ಲಿದ್ದೆ. ಅಲ್ಲಿ ಗಳಿಸಿದ ಅನುಭವಗಳನ್ನು ‘ಎನ್ಸಿಸಿ ದಿನಗಳು’ ಪ್ರಥಮಾವೃತ್ತಿ ೧೯೭೨, ದ್ವಿತೀಯಾವೃತ್ತಿ ೧೯೯೬, ಪುಟಗಳು ೪೭೬. ಲಭ್ಯವಿದೆ ಬೆಲೆ ರೂ ಐವತ್ತೈದು ವಿಳಾಸ ಸಹಿತ ಮನಿಯಾರ್ಡರ್ ಮಾಡಿದವರಿಗೆ ಉಚಿತ ಅಂಚೆ) ಪುಸ್ತಕದಲ್ಲಿ ಬರೆದಿದ್ದೇನೆ.
ಮಂಗಳೂರಿನಿಂದ ಮಡಿಕೇರಿಗೆ ಕಂಬಿ ಬದಲಾವಣೆ
ಅಧ್ಯಾಯ ಇಪ್ಪತ್ತೈದು
ಇಸವಿ ೧೯೫೨ ಕೊನೆಗೊಳ್ಳುವ ಮೊದಲೇ ಅಪ್ಪನಿಂದ (ಮಡಿಕೇರಿ) ಬುಲಾವ್, “ಮುಂದಿನ ಮೇ-ಜೂನ್ ಹೊತ್ತಿಗೆ ನಮ್ಮ ಮಡಿಕೇರಿ ಸರ್ಕಾರೀ ಪದವಿಪೂರ್ವ ಕಾಲೇಜ್ ಸ್ವಂತ ನೂತನ ಕಟ್ಟಡಕ್ಕೆ ಪ್ರಥಮ ದರ್ಜೆ ಪದವಿ ಕಾಲೇಜಾಗಿ ವರ್ಗಾವಣೆಗೊಳಲಿದೆ. ಜಾಹೀರಾತು ಪ್ರಕಟವಾದೊಡನೆ ಅರ್ಜಿ ಸಲ್ಲಿಸಲು ಸಿದ್ಧನಾಗಿರು.” ಅಂದಿನ ನಿಯಮಾವಳಿ ಪ್ರಕಾರ ನಾನು ೧೯೫೩ ಮಾರ್ಚ್ ೩೧ರಂದು ಸಂತ ಅಲೋಶಿಯಸ್ ಕಾಲೇಜಿಗೆ ಜೂನ್ ೩೦ಕ್ಕೆ ನನ್ನನ್ನು ಅವರಲ್ಲಿಯ ಸೇವೆಯಿಂದ ಬಿಡುಗಡೆ ಮಾಡಬೇಕೆಂಬ ಕೋರಿಕೆ ಸಲ್ಲಿಸಿದೆ, ಜೊತೆಗೆ ಎನ್ಸಿಸಿಗೂ ರಾಜಿನಾಮೆ ಪತ್ರ ಕಳಿಸಿದೆ. ಯಥಕಾಲ ಎರಡೂ ಮಂಜೂರಾದುವು. ಆದರೆ ಏಪ್ರಿಲ್ ಸಂದರೂ ಮಡಿಕೇರಿ ಕಾಲೇಜಿನಲ್ಲಿಯ ಹುದ್ದೆ ಕುರಿತ ಜಾಹಿರಾತು ಪ್ರಕಟವಾಗಲಿಲ್ಲ! ನಾನು ದುಡುಕಿದೆನೇ?
ಮೇಯಲ್ಲಿ ಅದೇನೋ ಹೊರಬಂತು. ಆದರೆ ಆ ಹಿರಿ ವೇತನಶ್ರೇಣಿ ನೋಡಿ (ಉಪನ್ಯಾಸಕರಿಗೆ ರೂ ೨೫೦-೭೦೦ + ರೂ ೬೫ ತುಟ್ಟಿಭತ್ಯೆ = ಆರಂಭದಲ್ಲೇ ರೂ ೩೧೫) ಬಾಯಿಯಲ್ಲಿ ನೀರೂಡಿತು, ಆದರೆ ಎದೆ ಧಸಕ್ಕೆಂದಿತು. ಅಂದು ದೇಶಾದ್ಯಂತ ಸಾಧಾರಣವಾಗಿ ಪ್ರಚಲಿತವಿದ್ದ ಶ್ರೇಣಿ ರೂ ೧೦೦-೨೫೦ ತುಟ್ಟಿಭತ್ಯೆ. ನನಗಾಗ ಕೇವಲ ೬ ವರ್ಷಗಳ ಬೋಧನಾನುಭವ, ಹೆಚ್ಚಿಗೆ ಎನ್ಸಿಸಿ ಶಿಕ್ಷಣವೂ ಸೇರಿತ್ತು. ನನಗಿಂತ ಎಷ್ಟೆಷ್ಟೋ ಅಧಿಕ ಅರ್ಹತೆ ಇರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸುವುದು ಖರೆ. ಮುಂದೇನು ದಾರಿ? ಎಲ್ಲೋ ಹುದುಗಿರಬಹುದಾದ ನಿಧಿಯ ಆಸೆಯಿಂದ ಕೈಯಲ್ಲಿದ್ದ ಪುಡಿಗಾಸುಗಳನ್ನು ಎಸೆದಿದ್ದೆನೇ? ಹಾಗಾದರೆ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?” (ಗೋಪಾಲಕೃಷ್ಣ ಅಡಿಗ)
ಮುಖ್ಯಮಂತ್ರಿ ಸಿ.ಎಂ.ಪೂಣಚ್ಚ ಮತ್ತು ಶಿಕ್ಷಣಮಂತ್ರಿ ಕೆ.ಮಲ್ಲಪ್ಪ ಇಬ್ಬರಿಗೂ ನನ್ನ ಬಗ್ಗೆ ಅಪಾರ ಭರವಸೆ: ನಮ್ಮ ಹುಡುಗ ಎಂಬ ಅಭಿಮಾನ. ಅದೇ ಜುಲೈ ತಿಂಗಳಿನಲ್ಲಿ ನಾನು ಹೊಸ ಹುರುಪಿನಿಂದ ನಮ್ಮೂರ ಹೊಸ ಹಸುರಿನಲ್ಲಿ ಹೊಸ ಹುದ್ದೆ ಹಿಡಿದು ಹೊಸಬನೇ ಆದೆ.
ವಾಸ ಬ್ರಾಹ್ಮಣಕೇರಿಯಲ್ಲಿಯ ನಮ್ಮ ಪಿತ್ರಾರ್ಜಿತ ಮನೆ. ಬಲು ಚಿಕ್ಕದು. ಸೌಕರ್ಯಗಳು ತೀರ ಕನಿಷ್ಠ. ಇನ್ನು ಜನ? ಅಪ್ಪ, ಅಮ್ಮ, ವಿದ್ಯಾರ್ಥಿಗಳಾಗಿದ್ದ ಒಬ್ಬಳು ತಂಗಿ ಮತ್ತು ಮೂರು ತಮ್ಮಂದಿರು, ಜೊತೆಗೆ ನಾವು ಮೂವರು. ಇನ್ನೂ ವರ್ಷ ತುಂಬದ ಅಶೋಕನಿಗೆ ಆಡಲು ಜಾಗವಿಲ್ಲ. ನನಗೆ ಅಭ್ಯಾಸಕ್ಕೆ ಏಕಾಂತವಿಲ್ಲ. ನನ್ನ ಹೆಂಡತಿ ಮಾಮೂಲಿನಂತೆ ಮನೆಕೆಲಸದ ಪೂರ್ತಿ ಹೊಣೆ ಹೊರಬೇಕಾಯಿತು. ಮಡಿಕೇರಿಯ ಆ ಚಳಿ ಮಳೆ ಗಾಳಿಗಳಲ್ಲಿ ಬಾಳೊಂದು ನರಕವಾಸ ಎನ್ನಿಸಿತು.
ಮನೆಯಿಂದ ಕಾಲೇಜಿಗೆ ಅಂದಾಜು ೫ ಕಿಮೀ ದೂರ. ಸಾರಿಗೆ ವ್ಯವಸ್ಥೆ ಇಲ್ಲ, ಸೈಕಲ್ ಏರಲು ಮಡಿಕೇರಿಯ ಮಳೆ ಗಾಳಿ ಮತ್ತು ಕೊರಕಲು ಹಾದಿ ಪ್ರಬಲ ಪ್ರತಿಬಂಧಕಗಳು. ಮುಂಜಾನೆ ಬೇಗ ತಿಂಡಿ ತಿಂದು ಮಧ್ಯಾಹ್ನದ ಊಟ ಕಟ್ಟಿಹೊತ್ತುಕೊಂಡು ಹೋಗಿ ಸಂಜೆ ತಡವಾಗಿ ಮರಳದೇ ವಿಧಿ ಇರಲಿಲ್ಲ. ಕಾಲೇಜಿನಲ್ಲಿ ವಾರಕ್ಕೆ ೧೨ರಿಂದ ೧೪ ಗಂಟೆ ಪಾಠ, ಪಾಠೇತರ ಚಟುವಟಿಕೆಗಳು ಇತ್ಯಾದಿ. ಕಾಲೇಜಿಗೆ ಆದಷ್ಟು ಹತ್ತಿರ ಮನೆ ಹಿಡಿಯುವುದೊಂದೇ ಪರಿಹಾರವೆಂಬ ತೀರ್ಮಾನಕ್ಕೆ ನಾನು ಬಂದೆ. ಅಪ್ಪ ಅಮ್ಮನಿಗೆ ಇದು ಇಷ್ಟವೇ ಇರಲಿಲ್ಲ. ಬೆಳೆದ ಮಕ್ಕಳು ಒಂದೇ ಊರಿನಲ್ಲಿ ಅವಿಭಕ್ತ ಕುಟುಂಬದಿಂದ ಹೊರಗೆ ಹೋಗಿ ಪ್ರತ್ಯೇಕ ಬಿಡಾರಹೂಡುವುದು ಮಾತಾಪಿತೃ ದ್ರೋಹವೆಂಬುದು ಅಂದಿನ ಸಂಪ್ರದಾಯ. ಆರ್ಥಿಕವಾಗಿ ನಾವು ಚೆನ್ನಾಗಿದ್ದರೂ ನನಗೇಕೆ ಈ ಶಿಕ್ಷೆ? ಅಪ್ಪನ ಜೊತೆ ವಾದಮಾಡುವ ಸಲಿಗೆ ಚಿಕ್ಕಂದಿನಿಂದಲೇ ಬೆಳೆದಿರಲಿಲ್ಲ. ಅವರದೊಂದು ಬಗೆಯ ನಿರಂಕುಶ (ಪಾಳೇಗಾರಿಕೆ) ಧೋರಣೆ. ಅಮ್ಮನಿಗೇನೂ ಮಾತಿಗೆ ಅವಕಾಶವಿರಲಿಲ್ಲ. “ಅವರ ಮನಸ್ಸಿಗೆ ನೋವು ಮಾಡಿ ನಾವೇಕೆ ಬೇರೆ ಹೋಗಬೇಕು. ಇಲ್ಲಿಯೇ ಸುಧಾರಿಸೋಣ” ಇದು ಹೆಂಡತಿಯ ಕಿವಿಮಾತು. ಆದರೆ ಅದೇ ಅಪ್ಪನ ಅದೇ ನಿರಂಕುಶ ಧೋರಣೆಯ ಸಾಕಾರ ರೂಪವಾಗಿದ್ದ ನಾನು ಮಾತ್ರ ಜಗ್ಗಲಿಲ್ಲ, Like poles repels, ಅಂದರೆ ಅಯಸ್ಕಾಂತದಲ್ಲಿ ಸದೃಶ ಧ್ರುವಗಳು ವಿಕರ್ಷಿಸುತ್ತವೆ, ನಿಜ. ಕಾಲೇಜ್ ಸಮೀಪ ಬಾಡಿಗೆ ಮನೆ ಹಿಡಿದು ಅಲ್ಲಿ ಹೊಸ ಬಿಡಾರ ಹೂಡಿಯೇಬಿಟ್ಟೆ. ಅಪ್ಪ ಮುನಿಸಿಕೊಂಡರು, ಅಮ್ಮ ಮಾತುಬಿಟ್ಟರು, ಸಂಬಂಧಿಕರು ವಿಚಿತ್ರದೃಷ್ಟಿ ಬೀರಿದರು. ಆದರೆ ಕ್ರಮೇಣ ಇವರೆಲ್ಲರೂ ಬದಲಾದ ಈ ಸನ್ನಿವೇಶಕ್ಕೆ ಹೊಂದಿಕೊಂಡರು. ಅಂತರಂಗ ನಿರ್ಮಲವಾಗಿದ್ದರೆ ಬಹಿರಂಗವೂ ಕ್ರಮೇಣ ನಿರ್ಮಲವಾಗುವುದಲ್ಲವೇ?
ನಮ್ಮ ಕಾಲೇಜ್ ಪ್ರಾಚೀನ ನಳಂದಾ ಪಾಟಲೀಪುತ್ರಗಳಂತೆ ಸರ್ವಾಂಗ ಸುಂದರ ವಿದ್ಯಾಕೇಂದ್ರವಾಗಬೇಕೆಂಬುದು ಸರ್ಕಾರದ ಆಶಯ. ಇದರ ನೆಲೆ ಊರ ಹೊರಗಿನ ಎತ್ತರದ ಗುಡ್ಡದ ಮೇಲೆ. ಸುತ್ತಲಿನ ಹಸುರೇ ಘನಿಸಿ ಈ ಭವ್ಯ ಸುಂದರ ಸೌಧ ಮೈದಳೆಯಿತೋ ಎಂಬಂತಿತ್ತು. ಕೆ.ಪಿ.ಅಚ್ಯುತನ್ ಪಿಳ್ಳೆ ಇಲ್ಲಿಯ ಪ್ರಾಂಶುಪಾಲ. ಇವರು ಇಂಗ್ಲಿಷ್ ಪ್ರಾಧ್ಯಾಪಕರು, ವಿದ್ವಾಂಸ, ಆದರ್ಶದೀಪ್ತರು ಮತ್ತು ಎಲ್ಲರೊಡನೆ ಸಮಾನಗೌರವದಿಂದ ವರ್ತಿಸುವ ಮಹಾನುಭಾವ. ಇವರು ಹೊತ್ತುತಂದಿದ್ದ ಅನೇಕ ಕನಸುಗಳ ಪೈಕಿ ಕಾಲೇಜಿಗೊಂದು ವಿದ್ಯಾರ್ಥಿ ಸಹಕಾರ ಸಂಘದ ಸ್ಥಾಪನೆ, ಆ ಹಿಂದೆಯೇ ಆರಂಭಿಸಿದ್ದ ವಿದ್ಯಾರ್ಥಿ ಸಮಾಜಸೇವಾ ಘಟಕದ ವಿಸ್ತರಣೆ, ಸ್ಕೌಟ್ ಮತ್ತು ಎನ್ಸಿಸಿ ದಳಗಳ ಪ್ರವರ್ತನೆ ಇತ್ಯಾದಿ. ಗ್ರಂಥಾಲಯ ಅದ್ಭುತವಾಗಿತ್ತು. ಪಾಠಪ್ರವಚನಗಳು ಅತ್ಯಂತ ದಕ್ಷತೆಯಿಂದ ನಡೆಯುತ್ತಿದ್ದುವು. ಇಂಥವೇ ಆದರ್ಶಗಳಿಂದ ಪ್ರೇರಿತನಾಗಿದ್ದ ನನಗೆ ಇದಕ್ಕಿಂತ ಉತ್ಕೃಷ್ಟ ಪರಿಸರ ಲಭಿಸೀತೇ? “ಇಲ್ಲಿಲ್ಲದುದುಳಿದುದೇ? ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೇ?” (ಮಂಜೇಶ್ವರ).
ನನ್ನನ್ನು ಕಾಲೇಜಿನ ಸಮಾಜ ಸೇವಾಘಟಕದ ಗೌರವ ಉಪಾಧ್ಯಕ್ಷನಾಗಿ ಪ್ರಾಂಶುಪಾಲರು (ಇವರೇ ಪದನಿಮಿತ್ತ ಅಧ್ಯಕ್ಷರು) ನಾಮಕರಿಸಿದರು. ಆಸಕ್ತ ಸ್ವಯಂಸೇವಕರ ದಂಡು ಕಟ್ಟಿ ಅವರಿಂದಲೇ ಸಲಹೆಗಳನ್ನು ಆಹ್ವಾನಿಸಿದೆ. ಅಂದು ಕೊಡಗು ಭಾರತ ಒಕ್ಕೂಟದಲ್ಲೊಂದು ಪಾರ್ಟ್ ಸಿ ರಾಜ್ಯವಾಗಿತ್ತು. ಚುನಾವಣೆ ಮೂಲಕ ತನ್ನದೇ ಪ್ರಜಾಪ್ರಭುತ್ವಾತ್ಮಕ ಸರ್ಕಾರವನ್ನು ಕೂಡ ಹೊಂದಿತ್ತು. ಚುನಾಯಿತ ಪ್ರಜಾಪ್ರತಿನಿಧಿಗಳೂ ಮಂತ್ರಿಗಳೂ ನಮ್ಮ ಪುಟ್ಟ ನಾಡನ್ನು ರಾಮರಾಜ್ಯವಾಗಿ ರೂಪಿಸಲು ಕಂಕಣಬದ್ಧರಾಗಿದ್ದರು. ಕಾಲೇಜ್ ಒಂದು ನೂತನ ಗುರುಕುಲ ವಿದ್ಯಾಲಯವಾಗಿ ಅರಳಬೇಕೆಂಬುದು ಇವರೆಲ್ಲರ ಪ್ರಾಮಾಣಿಕ ಆಶಯ. ಈ ದಿಶೆಯಲ್ಲಿ ನಾವು ಕೇಳಿದ ಸೌಕರ್ಯ ಸವಲತ್ತುಗಳನ್ನು ಮಂಜೂರಿಸಲು ಸಿದ್ಧರಾಗಿದ್ದರು.
ನಮ್ಮ ಸೇವಾಘಟಕದ ಪ್ರಥಮ ಯೋಜನೆ ಮಡಿಕೇರಿಯ ಹೊರ ಅಂಚಿನಲ್ಲಿ ತೀರ ಅಲಕ್ಷಿತವಾಗಿ ಪಾಳುಗರೆಯುತ್ತಿದ್ದ ಶಿಕಾರಿ ಉಕ್ಕಡದ ಸಮಗ್ರ ಅಭಿವೃದ್ಧಿ. ಅಲ್ಲಿಯ ನಿವಾಸಿಗಳೆಲ್ಲರೂ ದಲಿತರು (ಅಂದಿನ ಪರಿಭಾಷೆಯಲ್ಲಿ ಹರಿಜನರು). ಗಾಂಧೀಜಿ ಕೊಡಗಿಗೆ ಮೊದಲ ಸಲ ಭೇಟಿ ನೀಡಿದಾಗ (೧೯೩೦ರ ದಶಕ) ತಂಗಿದ್ದ ಪವಿತ್ರ ನೆಲವಿದು. ಆದರೂ ಸದ್ಯದ ಪರಿಸ್ಥಿತಿ ಮಾತ್ರ ಅತ್ಯಂತ ಶೋಚನೀಯ. ಈ ಉಕ್ಕಡವನ್ನು ನಮ್ಮ ಘಟಕ ದತ್ತು ತೆಗೆದುಕೊಂಡು ಇಲ್ಲಿಯ ಮಕ್ಕಳಿಗೆ ಶಿಕ್ಷಣಸೌಕರ್ಯ, ಶುಚಿತ್ವದ ಮಹತ್ತ್ವ, ಆರೋಗ್ಯ ರಕ್ಷಣೆ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲು ನಿರ್ಧರಿಸಿದೆವು. ವಯಸ್ಕ ನಿರಕ್ಷರಿಗಳಿಗೆ ಅಕ್ಷರಬೋಧನೆಯೂ ನಮ್ಮ ಯೋಜನೆಯ ಒಂದು ಅಂಗವಾಯಿತು. ಆ ಸುಮಾರು ೯ ತಿಂಗಳ ಪರ್ಯಂತ ಭಾನುವಾರದ ಹೊರತು ಉಳಿದೆಲ್ಲ ದಿನಗಳಂದು ನಮ್ಮ ಸ್ವಯಂಸೇವಕರು (ಸರಾಸರಿಯಲ್ಲಿ ೧೦ ಮಂದಿ) ಸಂಜೆವೇಳೆ ಉಕ್ಕಡಕ್ಕೆ ನಡೆದುಕೊಂಡು ಹೋಗಿ ಸುಮಾರು ೨ ತಾಸು ಪ್ರತ್ಯಕ್ಷ ಕಾರ್ಯನಿರತರಾಗುತ್ತಿದ್ದರು. ಕ್ರಮೇಣ ವಯಸ್ಕರಲ್ಲಿ ಅಕ್ಷರಜ್ಞಾನ ವರ್ಧಿಸಿತು, ಸಾಮಾಜಿಕ ಶುಚಿತ್ವಪ್ರಜ್ಞೆ ಜಾಗೃತವಾಯಿತು, ಮಕ್ಕಳ ಸಾಮೂಹಿಕ ಚಟುವಟಿಕೆಗಳು ಹೊಸ ಹುಮ್ಮಸ್ಸಿನಿಂದ ನಡೆಯತೊಡಗಿದುವು. ಅಲ್ಲಿಯ ಜೀವಸ್ಪಂದನದಿಂದ ಉತ್ತೇಜಿತರಾದ ನಾವು ನಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆವು. ಅವರ ಗುಡಿಸಲುಗಳಿಗೆ ಹಂಚು ಹೊದೆಸಲು ಮತ್ತು ವಿದ್ಯುತ್ಸಂಪರ್ಕವೀಯಲು ಸರ್ಕಾರಕ್ಕೆ ಮನವಿ ಸಲ್ಲಿಸಿದೆವು. ಕೂಡಲೇ ಅದು ಕಾರ್ಯಗತವಾಯಿತು.
ನನಗಂತೂ ಒಂದು ಸಂಗತಿ ಸ್ಪಷ್ಟವಾಯಿತು: ಬಡವರಲ್ಲಿರುವ ಔದಾರ್ಯ ಮತ್ತು ಕೃತಜ್ಞತೆ ಬಲು ದೊಡ್ಡ ಬಂಡವಾಳ, ಇದನ್ನು ಸಮರ್ಪಕವಾಗಿ ಸಂಘಟಿಸಿ ಸ್ವಾರ್ಥ ತೊರೆದು ಕರ್ತವ್ಯ ನಿರ್ವಹಿಸಿದ್ದಾದರೆ ಯಾವ ಮಹಾಸಾಧನೆಯೂ ನಮ್ಮ ಅಳವಿಗೆ ಮೀರಿದ್ದಲ್ಲ. ರಾಮಾಯಣದಲ್ಲಿಯ ಕಪಿಗಡಣ ಸಾಗರಕ್ಕೆ ಸೇತುವೆ ಕಟ್ಟಲು ಸಾಧ್ಯವಾದುದರ ಹಿನ್ನೆಲೆಯ ತತ್ತ್ವ ಇದೇ ಅಲ್ಲವೇ? ವರ್ಷಾಂತ್ಯದಲ್ಲಿ ಅಲ್ಲೊಂದು ದೀಕ್ಷಾಪ್ರದಾನ ಸಮಾರಂಭ ಏರ್ಪಡಿಸಿ ಮಂತ್ರಿ ಮಹೋದಯರನ್ನು ಆಹ್ವಾನಿಸಿದೆವು. ನಮ್ಮ ವಿದಾರ್ಥಿ ಸ್ವಯಂಸೇವಕರ ಮಾರ್ಗದರ್ಶನದಲ್ಲಿ ಸ್ಥಳೀಯ ಚೇತನಗಳು ಅದನ್ನು ನಿರ್ವಹಿಸಿದ ಪರಿ ಅನ್ಯಾದೃಶವಾಗಿತ್ತು. ಸರ್ಕಾರ ಈ ಉಕ್ಕಡದ, ಅಂತೆಯೇ ಇಂಥ ಇತರ ಉಕ್ಕಡಗಳ, ಸಮಗ್ರ ಅಬಿವೃದ್ಧಿಗೆಂದೇ ಅಧಿಕೃತ ಇಲಾಖೆಯೊಂದನ್ನು ಸ್ಥಾಪಿಸಿ ನಮ್ಮ ಚಟುವಟಿಕೆಗಳಿಗೆ ಸಾಂಸ್ಥಿಕ ರೂಪವನ್ನು ಕೊಟ್ಟಿತು.
ಅದೇ ವರ್ಷ ನಮ್ಮ ಸಮಾಜಸೇವಾಘಟಕ ಇನ್ನೂ ಒಂದು ರಚನಾತ್ಮಕ ಕೆಲಸ ಕೈಗೆತ್ತಿಕೊಂಡಿತು. ಅಂದಿನ ದಿನಗಳ ಮಡಿಕೇರಿಯಲ್ಲಿ ಬಸ್ ನಿಲ್ದಾಣದಿಂದ ಚೌಕಿವರೆಗಿನ ನೇರ ಮತ್ತು ಎತ್ತರ ಮಾರ್ಗದ ಇಕ್ಕೆಲಗಳಗಳಲ್ಲಿಯೂ ಗೊಸರು ಗದ್ದೆ ಎಡ್ಡತಿಡ್ಡ ಚಾಚಿಕೊಂಡಿತ್ತು. ಬಲಗಡೆಯ ಗೊಸರಿನಲ್ಲಿ ಕ್ರಮೇಣ ಗೌಸ್ ಅಕ್ಕಿ ಮಿಲ್ ಮತ್ತು ಕಾವೇರಿ ಸಿನೆಮಾ ಥಿಯೇಟರ್ ತಲೆಯೆತ್ತಿದುವು. ಎಡಗಡೆಯದರಲ್ಲಾದರೋ ಹಂದಿ, ಕತ್ತೆ, ಎಮ್ಮೆ, ನಾಯಿಗಳು ಯಥೇಚ್ಛವಾಗಿ ವಿಹರಿಸುತ್ತಿದ್ದುವು! ಇದರ ಕಟ್ಟ ಕೊನೆಯಲ್ಲಿ ಕೋಹಿನೂರ್ ಡೇರೆ ಸಿನೆಮ, ಗದಗ ಕಡೆಯಿಂದ ಬರುತ್ತಿದ್ದ ನಾಟಕ ಕಂಪನಿಗಳು, ಸರ್ಕಸ್ ತಂಡಗಳೆಲ್ಲ ಬಂದು ಬೇಸಗೆಯ ದಿನಗಳಂದು ಜಾಂಡಾ ಹೊಡೆಯುತ್ತಿದುವು. ಈ ಗೊಸರು ನೆಲಕ್ಕೆ ಕೋಹಿನೂರ್ ಮೈದಾನವೆಂಬ ಹೆಸರೇ ಶಾಶ್ವತವಾಯಿತು.
ನಿಲ್ದಾಣದಿಂದ ಕೋಹಿನೂರ್ ಡೇರೆಗೆ ಹೋಗಬಯಸುವವರು ಚೌಕಿಗಾಗಿ ಸುತ್ತಿ ಬಳಸಿ ನಡೆಯಬೇಕಾಗಿತ್ತು. ಇಲ್ಲೊಂದು ಒಳದಾರಿ ಕಡಿದರೆ ಜನರಿಗೆ ತುಂಬ ಅನುಕೂಲವಾಗುತ್ತದೆ ಎಂಬ ಭಾವನೆ ನಮ್ಮಲ್ಲಿ ಹಲವರಿಗೆ ಬಂತು. ಸರಿ, ಸರ್ಕಾರೀ ಎಂಜಿನಿಯರುಗಳ ಮಾರ್ಗದರ್ಶನದಲ್ಲಿ ನಮ್ಮ ಸ್ವಯಂಸೇವಕಪಡೆ ಶ್ರಮದಾನಗೈದು ಈ ಕೆಲಸವನ್ನು ಕೆಲವೇ ತಿಂಗಳುಗಳಲ್ಲಿ ಪೂರೈಸಿತು. ಈಗಿನ ಹೊಸ ಬಸ್ ನಿಲ್ದಾಣ, ಮಕ್ಕಳ ಕಲ್ಯಾಣ ಮಂದಿರ ಮುಂತಾದವು ಇದೇ ಹಾದಿಯ ನೇರ ಇವೆ.
ಇವೆಲ್ಲ ಪಾಠೇತರ ಚಟುವಟಿಕೆಗಳು. ಇನ್ನು ಪಾಠ, ಪ್ರವಚನ, ಉಪನ್ಯಾಸ, ಚರ್ಚೆ, ಪರೀಕ್ಷೆ ಮುಂತಾದ ಶೈಕ್ಷಣಿಕ ವಿಚಾರಗಳಲ್ಲಿ ನಮ್ಮ ಕಾಲೇಜು ಹೊಸ ಪರಂಪರೆಯನ್ನೇ ಸ್ಥಾಪಿಸಿತ್ತು. ಮುಖ್ಯವಾಗಿ ಕಡಿಮೆ ಅಂಕಗಳು ಪಡೆದಿದ್ದ ವಿದ್ಯಾರ್ಥಿಗಳ ಮೇಲ್ಮೆಗಾಗಿ ವಿಶೇಷ ಪಾಠಗಳು, ಟ್ಯೂಟೋರಿಯಲ್ ತರಗತಿಗಳು, ನಿಯತಕಾಲಿಕ ಪರೀಕ್ಷೆಗಳು ಮಂತಾದವನ್ನು ಮಾಡುತ್ತ ಅವರನ್ನೆಲ್ಲ ಮೇಲಕ್ಕೆತ್ತಲು ಪ್ರಯತ್ನಿಸುತ್ತಿದ್ದೆವು. ಇವೆಲ್ಲವುಗಳ ನೇತಾರರು ನಮ್ಮ ಅಚ್ಯುತನ್ ಪಿಳ್ಳೆಯವರು. ವಿದ್ಯಾರ್ಥಿಗಳಿಗೆ, ಅಂತೆಯೇ ನನ್ನಂಥ ಯುವ ಉಪನ್ಯಾಸಕರಿಗೆ, ಇವರೊಬ್ಬ ಆದರ್ಶ ಆಚಾರ್ಯ. ನಿಜ, ಪ್ರಾಚೀನ ಗುರುಕುಲಾಶ್ರಮಗಳಲ್ಲಿಯ ಅಂತಸ್ಸತ್ತ್ವ ಇಲ್ಲಿ ಮೈವಡೆದಿದೆಯೋ ಎಂಬ ಮಧುರ ಪರಿವೇಷ ನಮ್ಮ ಕಾಲೇಜಿನ ಸುತ್ತ ಮಿನುಗುತ್ತಿದ್ದ ದಿನಗಳವು:
ವಿಶ್ವಗರ್ಭಿತ ಸತ್ಯ ಕಂಡವನು ನೈಜ ಋಷಿ
ಋಷಿ ಕಂಡ ಸತ್ಯಕ್ಕೆ ವ್ಯಾಖ್ಯಾನ ಬರೆವಾತ ಆಚಾರ್ಯ
ಆಚಾರ್ಯಸೂಕ್ತಿಗಳ ಬೋಧಕನು ಶ್ರೇಷ್ಠ ಗುರು
ಗುರುಬೋಧನೆಗೆ ಪಾತ್ರನಾದವನು ಪ್ರಿಯ ಶಿಷ್ಯ
ಶಿಷ್ಯ ಋಷಿಯಾಗುವುದೆ ಋಜು ವಿದ್ಯೆ
ನಮ್ಮ ಕಾಲೇಜ್ನ ನೆಲೆ ಊರ ಹೊರಗಿನ ಒಂದು ಎತ್ತರದ ದಿಬ್ಬವೆಂದು ಹಿಂದೆ ಹೇಳಿದ್ದೇನೆ. ಅದೇ ಆವರಣದಲ್ಲಿದ್ದ ಹಾಸ್ಟೆಲ್ನಿವಾಸಿಗಳ ಹೊರತಾಗಿ ಉಳಿದೆಲ್ಲ ವಿದ್ಯಾರ್ಥಿಗಳೂ ದೂರದ ಪಟ್ಟಣದಿಂದ ನಡೆದೇ ಅಲ್ಲಿಗೆ ಬರಬೇಕಾಗಿತ್ತು. ಮಡಿಕೇರಿಯ ಮಳೆ, ಗಾಳಿ ಮತ್ತು ಚಳಿ ಇವನ್ನು ಅನುಭವಿಸಿದವರಿಗೇ ಗೊತ್ತು. ಇಂಥಲ್ಲಿ ವಿದ್ಯಾರ್ಥಿಗಳ ಆವಶ್ಯಕತೆಗಳನ್ನು – ಪಠ್ಯಪುಸ್ತಕಗಳು, ಸಾದಿಲ್ವಾರು, ಉಪಾಹಾರಮಂದಿರ ಇತ್ಯಾದಿ – ಪೂರೈಸಲು ಒಂದು ಸಹಕಾರ ಸಂಘವನ್ನೂ ಕ್ಯಾಂಟೀನನ್ನೂ ಪ್ರಾರಂಭಿಸಲು ಪ್ರಾಂಶುಪಾಲರು ನಿರ್ಧರಿಸಿದರು. ಈ ಸಂಘ ಹೇಗೆ ನನ್ನ ಗೌರವ ಕಾರ್ಯದರ್ಶಿತ್ವದಲ್ಲಿ ೧೯೫೪ರ ತರುಣದಲ್ಲಿ ಸ್ಥಾಪನೆಗೊಂಡು ಕ್ರಮೇಣ ಹೆಮ್ಮರವಾಗಿ ಬೆಳೆದು ಮಾದರಿ ಸಂಸ್ಥೆಯಾಯಿತು ಎಂದು ತುಸು ವಿಸ್ತರಿಸುತ್ತೇನೆ.
(ಮುಂದುವರಿಯುತ್ತದೆ)
ತುಂಬಾ ಉತ್ತಮವಾದ ಓದಿಸಿಕೊಂಡು ಹೋಗುವ ಬರೆವಣಿಗೆ. ಚೆನ್ನಾಗಿದೆ.
ಅವರ ನೆನಪಿನ ಹಸಿರು ಮಾಸದಂದದಿ ಬಾಳ್ವ /ನಿಮ್ಮ ಬದುಕಿನ ಸೊಗಡು ಹಾಯುತಿರಲು //ಅಲ್ಲೊಮ್ಮೆ, ಇಲ್ಲೊಮ್ಮೆ ನುಡಿಗೆ ಸಿಕ್ಕವರೆಲ್ಲ -ಅವರ ಗುಣಗಾನದಲಿ ಮೀಯುತಿರಲು –ನಮ್ಮ ಒಡನಾಟಗಳ ಬುತ್ತಿ ಕಟ್ಟನು ತೆರೆದು -ಮಗಮಗಿಪ ಮೊಸರನ್ನ ಮೆಲ್ಲುತಿಹೆವು.//
I do remember that day, when your father passed away, because just 3 days prior to that my father had passed away. And I did tell you that both of them must have met in heaven ( or hell 🙂 )) But I do remember both these people very much because of the contributions they made to society and the effect they had on a very large circle of people. I salute both K.Sadashiva.Rao and G.T.Narayana Rao.
ನಿಮ್ಮ ಪೂಜ್ಯ ತಂದೆಯವರಾದ ಜಿ.ಟಿ.ನಾರಯಣ ರಾವ ಇವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸನ್ನಿವೇಶವನ್ನು ಸುಂದರವಾಗಿ ಬಣ್ಣಿಸಿದ್ದಾರೆ. ದಿಂ. ಶ್ರಿ ಎ.ಪಿ.ಸುಬ್ಬಯ್ಯ ಮತ್ತು ಅತ್ತೆಯವರ ಚಿತ್ರ ನೋಡಿದಾಗ ಪುತ್ತೂರಿನ ಅವರ ನಿವಾಸದಲ್ಲಿ ೪೫ ವರುಷಗಳ ಹಿಂದೆ ಅವರು ನಾನು ಹದಿ ಹರೆಯದ ೧೬ ವರುಷದ ಹುಡುಗನಿದ್ದಾಗ ನನ್ನನ್ನು ಪ್ರೀತಿಯಿಂದ ಮಾತನಾಡಿಸಿದ ನೆನಪಾಯಿತು. ಬಾಲ್ಯದ ನೆನಪನ್ನು ಮರುಕಳಿಸಿದ್ದಕ್ಕೆ ಧನ್ಯವಾದಗಳು. ವಿಳಂಬವಾಗಿ ಪ್ರತಿಕ್ರಿಯೆ ನೀಡಿದ್ದಕ್ಕೆ ಕ್ಷಮೆ ಇರಲಿ.