ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹನ್ನೊಂದು
ಅಧ್ಯಾಯ ಇಪ್ಪತ್ತಾರು
ಮಡಿಕೇರಿಯ ಸರಕಾರೀ ಕಾಲೇಜು ಅಂದಿನ ಕೊಡಗು ಸರ್ಕಾರದ ವತಿಯಿಂದ ೧೯೪೯ರಲ್ಲಿ ಆರಂಭವಾಯಿತು. ಆಗ ಕೊಡಗು ಪ್ರಾಂತ ಕೇಂದ್ರ ಸರ್ಕಾರದ ಆಡಳಿತೆಗೆ ಒಳಪಟ್ಟಿದ್ದು ಸಿ ವಿಭಾಗದ ರಾಜ್ಯವಾಗಿತ್ತು. ಇದರ ಮುಖ್ಯ ಆಡಳಿತಾಧಿಕಾರಿ ಚೀಫ್ ಕಮಿಷನರ್ ಜನರ ಬಹು ವರ್ಷಗಳ ಬೇಡಿಕೆಗಳನ್ನು ಸಹಾನುಭೂತಿಯಿಂದ ಗ್ರಹಿಸಿ ಕಾಲೇಜಿನ ಸ್ಥಾಪನೆಯಲ್ಲಿ ಅಗ್ರಪಾತ್ರ ವಹಿಸಿದ್ದರು. ಜನರ ಸಹಕಾರ ಮಾತ್ತು ಸರ್ಕಾರದ ಬೆಂಬಲ ಎರಡೂ ವಿಪುಲವಾಗಿ ದೊರೆತ ಈ ಕಾಲೇಜು ‘ಶೀಲಂ ಸರ್ವಸ್ಯ ಭೂಷಣಂ’ ಎನ್ನುವ ಉನ್ನತಾದರ್ಶ ಧರಿಸಿ ಮೈದಳೆಯಿತು. ಇದರ ಪ್ರಧಾನ ನಿರ್ಮಾಣ ಘಟಕಗಳಾದ ಅಧ್ಯಾಪಕರನ್ನು ಆಯುವಲ್ಲಿ ಚೀಫ್ ಕಮಿಷನರ್ ತುಂಬ ಮುತುವರ್ಜಿ ವಹಿಸಿದ್ದರು. ವಿದ್ವತ್ತು, ಸಂವಹನ ಸಾಮರ್ಥ್ಯ ಹಾಗೂ ಶೀಲ ಹಿರಿಯ ಮಟ್ಟದಲ್ಲಿದ್ದ ಅನುಭವೀ ವ್ಯಕ್ತಿಗಳಿಗೆ ಆಕರ್ಷಕ ಆರ್ಥಿಕ ಸವಲತ್ತುಗಳನ್ನು ನೀಡಿ ಇಲ್ಲಿ ನೇಮಿಸಲಾಗಿತ್ತು. ಇವರಿಗೆ ಪೂರಕವಾಗಿ ಗ್ರಂಥ ಭಂಡಾರ, ಪ್ರಯೋಗ ಮಂದಿರ, ಆಟೋಟಗಳ ಸೌಲಭ್ಯ ಮೊದಲಾದವು ಇಲ್ಲಿದ್ದುವು. ಕೊಡಗಿನ ಬೇರೆ ಬೇರೆ ಮೂಲೆಗಳಿಂದ ಮತ್ತು ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಿಂದ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಕಾಲೇಜಿಗೆ ಬಂದು ಸೇರಿದರು. ಇವರೆಲ್ಲರೂ ಸಾಧಾರಣವಾಗಿ ಒಳ್ಳೆಯ ಆರ್ಥಿಕ ಸ್ಥಿತಿ ಸಂಪನ್ನರು, ಶಿಸ್ತುಗಾರರು. ಹೀಗೆ ೧೯೪೯ರ ಆ ಮಹಾ ವರ್ಷರ್ತುವಿನ ಮುಸಲಧಾರೆಗಳ ತೀವ್ರ ಪ್ರಹಾರ ಪ್ರಾರಂಭವಾದಾಗ ಮಡಿಕೇರಿಯ ಸರ್ಕಾರೀ ಇಂಟರ್ಮೀಡಿಯೇಟ್ ಕಾಲೇಜ್ ಮಹಾಬಾಜಣೆ (Big bang) ಸಮೇತ ಕಾರ್ಯಪ್ರವೃತ್ತವಾಯಿತು.
ಹೊಸ ಕಾಲೇಜು ಮಡಿಕೇರಿಯ ಮಾರುಕಟ್ಟೆಯ ಮೇಲೆ ಹೊಸ ಬೇಡಿಕೆಗಳನ್ನು ಹೇರಿತು: ಮುಖ್ಯವಾಗಿ ವಿದ್ಯಾರ್ಥಿಗಳ ಪಠ್ಯಪುಸ್ತಕಗಳು, ಸಾದಿಲ್ವಾರು ಮುಂತಾದವು ಮತ್ತು ಕಾಲೇಜ್ ಗ್ರಂಥ ಭಂಡಾರದ ಆವಶ್ಯಕತೆಗಳು. ಆ ತನಕ ಶಾಲೆಗಳಿಗೆ ಮಾತ್ರ ಪಠ್ಯ ಪುಸ್ತಕಗಳನ್ನು (ಇವುಗಳ ಬಿಡಿ ಬೆಲೆಗಳು ಹೇಗೂ ನಿಯಮಿತವಾದವು ಮತ್ತು ಬಲು ಅಗ್ಗದವು) ಪೂರೈಸುತ್ತಿದ್ದ ಒಂದೆರಡು ಅಂಗಡಿಗಳು ಈ ಹೊಸ ನೆಲದಲ್ಲಿ ಅತಿ ಲಾಭದ ಸದವಕಾಶಗಳನ್ನು ಸಹಜವಾಗಿ ಕಂಡುವು. ಕಾಲೇಜ್ ವಿದ್ಯಾರ್ಥಿಗಳ ಪಠ್ಯ ಮತ್ತು ಸಹಾಯಕ ಪುಸ್ತಕಗಳನ್ನು ಮುದ್ರಿತ ಬೆಲೆಗಳಿಗಿಂತ ಜಾಸ್ತಿ ಆಗಿಯೇ ಮಾರುವುದು ವಾಡಿಕೆ ಆಯಿತು.
“ಪುಸ್ತಕಗಳ ಮೇಲೆ ಮುದ್ರಿತವಾಗಿರುವುದು ಪ್ರಕಾಶಕರಿಗೆ ನಾವು ತೆರಬೇಕಾದ ಬೆಲೆ, ಇನ್ನು ನೋಡಿ, ಮದರಾಸು ಬೆಂಗಳೂರು ಮೊದಲಾದ ಕಡೆಗಳಿಂದ ಭಾಂಗಿಗಳನ್ನು ತರಿಸಲು ನಮಗೆ ಎಷ್ಟು ವೆಚ್ಚ ಶ್ರಮ ವ್ಯಯ ಆಗುವುದಿಲ್ಲ? ಮಾರಾಟವಾಗದ ಪುಸ್ತಕಗಳು ನಮಗೆ ಪೂರ್ಣ ನಷ್ಟದ ಬಾಬೇ” ಎಂಬ ಸೋಗಿನ ನಿಜ ಸಮಜಾಯಿಷಿಯನ್ನು ಅಂಗಡಿ ಮಾಲೀಕರು ಒಪ್ಪಿಸಿದಾಗ ೨ ರೂಪಾಯಿ ಬೆಲೆಯ ಪುಸ್ತಕಕ್ಕೆ ೨.೨೫ ರೂಪಾಯಿ ಪಾವತಿಸುವುದು ಖಂಡಿತ ಹೆಚ್ಚಲ್ಲ. ಬದಲು, ನಮಗೇ ಲಾಭದಾಯಕ ಎಂದು ಯಾವ ಗಣಿತ ಧೀಮಂತನಿಗೆ ಅನ್ನಿಸಿದ್ದರೂ ಅಚ್ಚರಿ ಏನೂ ಇರಲಿಲ್ಲ. ಇತರ ವಿಶೇಷ ಆವಶ್ಯಕತೆಗಳಿಗೆ – ಪ್ರಯೋಗ ಮಂದಿರದ ದಾಖಲೆ ಪುಸ್ತಕಗಳು, ವಿಶೇಷ ಡ್ರಾಯಿಂಗ್ ಹತ್ಯಾರುಗಳು, ಉಪಕರಣ ಪೆಟ್ಟಿಗೆಗಳು, ಇತ್ಯಾದಿ – ಅಂಗಡಿಕಾರರು ವಿಧಿಸಿದ ಬೆಲೆಗಳನ್ನು ಮರುಸೊಲ್ಲಿಲ್ಲದೆ ವಿದ್ಯಾರ್ಥಿಗಳು ತೆರುವುದು ಮಾಮೂಲಾಯಿತು. ನೆರೆಯ ಹಿರಿ ಪಟ್ಟಣಗಳಾದ ಮೈಸೂರು ಮಂಗಳೂರುಗಳ ಪೈಪೋಟಿ ಮಾರುಕಟ್ಟೆಗಳಲ್ಲಿ ಸಲ್ಲುತ್ತಿದ್ದ ಬೆಲೆಗಳಿಗೂ ಮಡಿಕೇರಿಯ ಏಕಸ್ವಾಮ್ಯ ಮಾರುಕಟ್ಟೆಯಲ್ಲಿ ಗಿರಾಕಿಗಳನ್ನು ಕೊಲ್ಲುತ್ತಿದ್ದ ಬೆಲೆಗಳಿಗೂ ನಡುವೆ ಯಾವುದೇ ವೈಜ್ಞಾನಿಕ ಹೊಂದಾಣಿಕೆ ಇರಲಿಲ್ಲ. ಅತಿ ಲಾಭಕೋರತನದ ದುರಾಸೆಯಲ್ಲಿ ಮುಳುಗಿರುವ ಮನಸ್ಸಿನ ಅಪರಿಮೇಯತೆಯನ್ನು ಯಾವ ಶಾಸ್ತ್ರವೂ ಎಂದೂ ಯಾವುದೇ ಚೌಕಟ್ಟಿನೊಳಗೂ ಹಿಡಿದಿಟ್ಟು ಅರ್ಥವಿಸುವುದು ಅಸಾಧ್ಯ.
ಕಾಲೇಜಿಗೆ ನಾಲ್ಕು ವರ್ಷಗಳಾಗುವಾಗ, ೧೯೫೩, ಮಳೆಗಾಲದ ಆರಂಭದಲ್ಲಿ ಅದನ್ನು ಪ್ರಥಮ ದರ್ಜೆಯ ಕಾಲೇಜಾಗಿ ಬಡ್ತಿ ನೀಡಿ ಊರ ಹೊರಗಿನ ಗಾಳೀಬೀಡಿನ ಹೊಸ ಕಟ್ಟಡಗಳಿಗೆ ಜರೂರು ವರ್ಗ ಮಾಡಲಾಯಿತು. ತೆಂಕಣ ಗಾಳಿ ಮಡಿಕೇರಿಯ ಬೋಗುಣಿಗೆ ಮಳೆ ಹೊತ್ತು ಸುಯ್ಯಲಿಡುತ್ತ ಭರದಿಂದ ನುಗ್ಗುವ ಹೆಬ್ಬಾಗಿಲೇ ಗಾಳಿಬೀಡು. ಆ ಗುಡ್ಡದ ಕೊಡಿಯ ಮೇಲಿನ ಕಾವಲುಗಾರನಾಗಿ ನಿಂತಿತ್ತು ಕಾಲೇಜು. ಇನ್ನು ಅಲ್ಲಿ ಮಳೆರಾಯನ ಪ್ರತಾಪ ಲೀಲೆ ಹೇಳಬೇಕೇ? “ಚೆಲ್ಲಿದರನಿತೂ ತೀರದ ನೀರಿನ ಜಡದೇಹದ ಕರ್ಮುಗಿಲೇನು?… ಮರಗಳ ಕೀಳುತ ಬಂಡೆಯ ಹೋಳುತ ಜಗಜಟ್ಟಿಯ ತೆರನಾಡುವುದು” (ಕಡೆಂಗೋಡ್ಲು). ಮಡಿಕೇರಿಯ ನಾಗರಿಕ ನೆಲೆಗಳಿಂದ ಕಾಲೇಜಿನ ದೂರ ಸುಮಾರು ಎರಡೂವರೆ ಮೈಲು. ಇಷ್ಟು ದೂರವೂ ಇರಿಚಲಿನ ಚುಚ್ಚು ಗೋಡೆಯನ್ನು ಒಡೆದುಕೊಂಡೇ ಕಾಲೇಜಿನ ಸಮಸ್ತರೂ ನಡೆಯಬೇಕಿತ್ತು. ಯಾವ ಸೂರ್ಯ ಛಾಪಿನ ಕೊಡೆಯೂ ಆ ಥಂಡಿಯನ್ನು ಹಿಂಗಿಸುತ್ತಿರಲಿಲ್ಲ. ಯಾವ ಜಿಂಕೆ ಮುದ್ರೆಯ ಛತ್ರಿಗೂ ಆ ಮಳೆ ಓಟ ಸೋಲುತ್ತಿರಲಿಲ್ಲ. ಇನ್ನು ಬಾತುಬೆನ್ನು ಮಳೆಕೋಟುಗಳಾಗಲಿ ಗಮ್ ಬೂಟುಗಳಾಗಲಿ ಒಳಗಿನ ನರಪೇತಲನಿಗೆ ಬರಿಸದ (ಮಳೆಯ) ಆಟೋಪದ ಎದುರು ಕಾಪು ಖಂಡಿತ ನೀಡುತ್ತಿರಲಿಲ್ಲ. ಕಾಲೇಜ್ ತಲಪುವ ವೇಳೆಗೆ ಮಜ್ಜೆ ತನಕ ಕೋಟಕೋಡದಿದ್ದರೆ ಅದು ಗಾಳೀಬೀಡೇ ಅಲ್ಲ ಅನ್ನುವ ಸ್ಥಿತಿ. ಆದರೆ ನಿಸರ್ಗದ ರುದ್ರಬಲಗಳೊಡನೆ ಸಹಜೀವನ ನಡೆಸುತ್ತ ಅವುಗಳಿಂದ ಶಿವಫಲಗಳನ್ನೇ ಪಡೆದು ಅಭಿವರ್ಧಿಸಿರುವ ಕೊಡಗಿನ ವಿದ್ಯಾರ್ಥಿವೃಂದಕ್ಕೆ ಇವು ಮಾಮೂಲು ಪ್ರಕೃತಿ ವ್ಯಾಪಾರಗಳಾಗಿದ್ದುವೇ ವಿನಾ ಅಸಹನೀಯ ಪ್ರತಿರೋಧಗಳಾಗಿರಲಿಲ್ಲ. ಅವರು ಅಂಜಿದ್ದು ಹಿಂಜರಿದದ್ದು ಮತ್ತು ಮುಲುಗುಟ್ಟಿದ್ದು ಮನುಷ್ಯ ವ್ಯಾಪಾರಗಳಿಗೆ, ಕೃತಕ ಪ್ರತಿರೋಧಗಳಿಗೆ, ಡೋಂಗಿ ಮಂದಿಯ ಕೋಡಂಗಿತನಕ್ಕೆ.
ನೀರಡಕೆ, ಬಾಯಾರಿಕೆ ಪದಗಳ ನಡುವೆ ಒಂದು ಸೂಕ್ಷ್ಮ ವ್ಯತ್ಯಾಸ ಉಂಟು: ಬಾಹ್ಯ ಪರಿಸರದ ಪ್ರಭಾವದಿಂದ ಮೊದಲನೆಯದು ಕಾಣಿಸಿಕೊಳ್ಳುತ್ತದೆ, ಎರಡನೆಯದಾದರೋ ಆಂತರಿಕ ಸ್ಥಿತಿಗತಿಗಳ ಪರಿಣಾಮವಾಗಿ ತಲೆದೋರುವುದು. ಬಿಸಿಲಲ್ಲಿ ಹಾದಿ ಸವೆಸಿದಾಗ ಬಳಲಿಸುವುದು ನೀರಡಕೆ, ಜ್ವರದ ಕಾವು ತಟ್ಟಿದಾಗ ತೊಳಲಿಸುವುದು ಬಾಯಾರಿಕೆ. ನೀರು ಕುಡಿದು ನೀರಡಕೆಯನ್ನು ತಣಿಸಬಹುದಾದರೆ, ಬೇನೆಗೆ ಚಿಕಿತ್ಸೆಯೊಂದೇ ಬಾಯರಿಕೆಯನ್ನು ತಂಪಿಸುವ ಹಾದಿ. ಮಡಿಕೇರಿಯ ಪಟ್ಟಭದ್ರರಿಗೆ ತೀವ್ರ ಬಾಯಾರಿಕೆ ಏರಿದ್ದು ಸಹಜವೇ – ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು, ಹೆಚ್ಚು ಬೆಲೆಯ ಪುಸ್ತಕಗಳಿಗೆ ತುಂಬ ಬೇಡಿಕೆ, ಪೈಪೋಟಿ ಇಲ್ಲದ ನಿರಾತಂಕ ಸನ್ನಿವೇಶ – ಕಿಚ್ಚು ಹಚ್ಚೆಂದ ಸ್ವರ್ಗಕ್ಕೆ! ಪುಸ್ತಕ ಬೇಡಿ ದುಡ್ಡು ನೀಡಿ ದೇಹಿ ಎಂದು ನಿಂತ ಜ್ಞಾನದಾಹಿಗಳಿಗೆ ದೊರೆತದ್ದು ಗರಿಷ್ಠ ಮೌಲ್ಯಕ್ಕೆ ಕನಿಷ್ಠ ಸರಕು (ಮತ್ತು ಋಣಾತ್ಮಕ ಸೇವೆ). ಅನೇಕ ವಿದ್ಯಾರ್ಥಿಗಳು ವ್ಯಾಪಾರ ಅಂದರೆ ಹೀಗೆಯೇ ಇರಬೇಕು ಎಂಬುದಾಗಿ ಪರಿಸ್ಥಿತಿಗೆ ಹೊಂದಿಕೊಂಡರು. ಮತ್ತೆ ಕೆಲವರು ಬೇರೆ ಏನೂ ವಿಧಿ ಇಲ್ಲದೆ ಈ ಲುಕ್ಸಾನನ್ನೂ ಕಟುಕರೋಹಿಣಿಯನ್ನೂ ನುಂಗಿಕೊಂಡರು. ಇನ್ನುಳಿದವರು ಇವೆಲ್ಲವೂ ವಿದ್ಯಾರ್ಜನೆ ಎಂಬ ತಪಸ್ಸಿನ ಒಂದು ಅಂಗ ಎಂಬ ನಿರ್ವಿಣ್ಣ ಭಾವದಿಂದ ಉದಾಸೀನರಾದರು. ಸುಲಭ ಶ್ರಮದಿಂದ ವಾಮ ಮಾರ್ಗದಲ್ಲಿ ಗಳಿಕೆ ಆದ ಲಾಭ ವ್ಯಾಪಾರಿಗಳ ರೋಗವನ್ನು ಉಲ್ಬಣಿಸಿ ಅವರ ಬಾಯಾರಿಕೆಯನ್ನು ಅತಿಶಯವಾಗಿ ವರ್ಧಿಸಿತು. ಮತ್ತಷ್ಟು ತನಿರಸವನ್ನು ಅದಕ್ಕೆ ಎರೆಯುವುದು ಅವರ ದೃಷ್ಟಿಯಿಂದ ಅನಿವಾರ್ಯವಾಯಿತು. ಮತ್ತಿನ ಲಕ್ಷಣವೇ ಇದು. ಆದರೆ ವಿದ್ಯಾರ್ಥಿಗಳ ದೃಷ್ಟಿಯಿಂದಲೋ? ವ್ಯಾಧಿ ನಿರ್ಮೂಲನವೊಂದೇ ಅದಕ್ಕಿದ್ದ ಮದ್ದು.
೧೯೫೩ರ ಕರಿಮುಗಿಲಿನ ಒನಕೆ ಮಳೆಯ ಕುಟ್ಟಣೆ ಮುಗಿದು ದಟ್ಟ ಹಸುರಿನ ಹಚ್ಚಡ ಇಡೀ ಮಡಿಕೇರಿಯ ಮೇಲೆ ಹಾಸಿದಂತಿತ್ತು. ಬತ್ತದ ಗದ್ದೆಗಳಲ್ಲಿ ಕದಿರೊಡೆಯುವ ಕಾಲ ಸನ್ನಿಹಿತವಾಗಿತ್ತು. ಪಚ್ಚೆ ಮಣಿಗಳನ್ನು ನಿಬಿಡವಾಗಿ ಧರಿಸಿ ಅವುಗಳ ಭಾರದಿಂದ ಇಡೀ ಕಾಫಿ ತೋಟದ ಹರವೇ ತೊನೆಯುತ್ತಿತ್ತು. ಏಲಕ್ಕಿಯ ನರುಗಂಪನ್ನು ಹೊತ್ತು ಎಲ್ಲೆಡೆಗೂ ಮೆಲುಬೀಸಿನಿಂದ ಪಸರಿಸುತ್ತಿದ್ದ ಪ್ರಾಣವಾಯು ಆ ನಡುಹಗಲ ಹೂಬಿಸಿಲ ಹಿತಲೇಪನದ ಮೇಲೆ ನಮ್ಮನ್ನು ಸ್ವಯಂಪ್ರಭೆಯ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ವಿದ್ಯಾರ್ಥಿಗಳ ಎಂದೂ ಬತ್ತದ ಹುರುಪಿಗೆ ಹೊಸ ಕಳೆ ಬಂದಿತ್ತು. ಹಿರಿಯ ಆದರ್ಶವನ್ನು ಇಟ್ಟುಕೊಂಡು ಕಾಲೇಜಿನ ಸರ್ವಾಂಗೀಣ ಅಭ್ಯುದಯಕ್ಕಾಗಿ ಅಹರ್ನಿಶೆ ದುಡಿಯುತ್ತಿದ್ದ ಪ್ರಾಂಶುಪಾಲ ಅಚ್ಯುತನ್ ಪಿಳ್ಳೆಯವರು ತಮ್ಮ ಬತ್ತಳಿಕೆಯಿಂದ ಇನ್ನೂ ಒಂದು ಹೊಸ ಅಸ್ತ್ರವನ್ನು ಹೊರತೆಗೆದರು.
ಅದೇ ಕಾಲೇಜ್ ವರ್ಷದ ಆರಂಭದಲ್ಲಿ (ಜುಲೈ ೧೯೫೩) ಹಲವಾರು ತರುಣ ಉಪನ್ಯಾಸಕಾರರನ್ನು ಕಾಲೇಜಿಗೆ ನೇಮಿಸಲಾಗಿತ್ತು. ಇವರಲ್ಲಿ ನಾನೂ ಒಬ್ಬ. ವಯಸ್ಸು ೨೭. ನಮ್ಮನ್ನೆಲ್ಲ ಪ್ರಾಂಶುಪಾಲರು ತಮ್ಮ ಕೊಠಡಿಗೆ ಕರೆಸಿ ಅವರ ಮನಸ್ಸಿನಲ್ಲಿದ್ದ ಹಲವಾರು ಯೋಜನೆ ಯೋಚನೆಗಳನ್ನು ವಿವರಿಸಿದರು. ಇವುಗಳ ಪೈಕಿ ಮುಖ್ಯವಾದ ಒಂದನ್ನು ಅವರು ತಮ್ಮ ಮಿದುಳುಕೂಸು, ತಮ್ಮ ಬಾಳಹಂಬಲ ಎಂಬ ಆತ್ಮೀಯತೆಯಿಂದ ನಮ್ಮ ಮುಂದೆ ಇಟ್ಟರು. “ಕಾಲೇಜಿನ ವಿದ್ಯಾರ್ಥಿಗಳಿಗೆ ಅವರ ಸಕಲಾವಶ್ಯಕತೆಗಳೂ ಇಲ್ಲಿಯೇ ದೊರೆಯುವಂತೆ ಒಂದು ಸಹಕಾರ ಸಂಘವನ್ನು ಒಡನೆ ಸ್ಥಾಪಿಸಬೇಕು. ಕ್ರಮೇಣ ಇದನ್ನು ವಿಸ್ತರಿಸಿ ಇದೊಂದು ಸರ್ವವಸ್ತು ಭಂಡಾರ ಆಗುವಂತೆ ಮಾಡಬೇಕು. ಕಾಲೇಜಿನ ಸುಪುಷ್ಟ ಅಭಿವರ್ಧನೆಗೆ ಪಾಠಪ್ರವಚನ, ಗ್ರಂಥಭಂಡಾರ ಮುಂತಾದವುಗಳಷ್ಟೇ ಅಗತ್ಯವಾದದ್ದು ಇಂಥ ಒಂದು ಸಾಮಾಜಿಕ ಕೇಂದ್ರವಾದ ಸಹಕಾರ ಸಂಘ.” ಇದಿಷ್ಟು ಅವರ ಮಾತಿನ ಸಾರ. ಅವರು ಮುಂದುವರಿದು ನಮ್ಮ (ಅಂದರೆ ತರುಣ ಅಧ್ಯಾಪಕರು) ಪೈಕಿ ಒಬ್ಬರು ಈ ಹೊಣೆ ಹೊರಲು ಮುಂಬರಬೇಕೆಂದು ಬಯಸಿದರು. ನೆರೆದಿದ್ದವರ ದೃಷ್ಟಿಬಿದ್ದದ್ದು ನನ್ನ ಮೇಲೆ. ನನಗೆ ಯಾವ ಭಾವನೆಯೂ ಇರಲಿಲ್ಲ. ಕಾರಣ ಸಹಕಾರ ನನಗೆ ಪರಕೀಯ ಕ್ಷೇತ್ರ. ಅಲ್ಲದೇ ನಾನಾಗ ಕಾಲೇಜಿನ ಸಮಾಜಸೇವಾ ಸಂಘದ ಗೌರವ ಕಾರ್ಯನಿರ್ವಾಹಕನಾಗಿ ತಲೆ ತುಂಬ ಯೋಜನೆಗಳನ್ನೂ ಕೈತುಂಬ ಕೆಲಸಗಳನ್ನೂ ಹಮ್ಮಿಕೊಂಡಿದ್ದೆ.
“ನಿಮ್ಮ ಅಭಿಪ್ರಾಯ ಏನು?” ಎಂಬುದಾಗಿ ಪ್ರಾಂಶುಪಾಲರು ನನ್ನನ್ನು ಕೇಳಿದಾಗ ಉಳಿದವರು ಅವರ ಇಂಗಿತವರಿತು, “ನೀವೇ ಈ ಮುಂದಾಳುತನ ವಹಿಸಲು ಸಮರ್ಥರು” ಎಂದು ಧ್ವನಿಗೂಡಿಸಿದರು. ನನ್ನಲ್ಲಿ ಸ್ವಭಾವಜನ್ಯ ದೌರ್ಬಲ್ಯವೊಂದುಂಟು: ನಾಲ್ಕು ಜನ ಸೇರಿ ವಿಶ್ವಾಸದಿಂದ “ಈ ಕೆಲಸ ನಿಮ್ಮಿಂದ ಆಗಬೇಕು” ಎಂದಾಗ ಹಿಂದೆ ಮುಂದೆ ನೋಡದೆ ದುಮುಕುವುದು. ಅದೂ ಆ ಎಳೆ ಹರೆಯದಲ್ಲಿ ಈ ದೌರ್ಬಲ್ಯ ತೀವ್ರವಾಗಿತ್ತು. ಆ ಗಳಿಗೆಯಲ್ಲಿ ನಾನು ತರ್ಕಾತೀತ ಭಾವಾವಿಷ್ಟನಾಗಿ, “ನಿಮ್ಮ ಇಚ್ಛೆಯಂತೆ ಆಗಲಿ. ಆದರೆ ಮಾರ್ಗದರ್ಶನಕ್ಕೆ ಹಿರಿಯ ಪ್ರಾಧ್ಯಾಪಕರು ಯಾರಾದರೊಬ್ಬರು ಮುಂದಿರಲಿ. ನಾನು ಹಿಂದೆ ನಿಂತು ಕೆಲಸ ಮಾಡುತ್ತೇನೆ” ಎಂದೆ.
“ಇಲ್ಲ, ಅಂಥ ಏರ್ಪಾಡು ಎಂದೂ ಸರಿ ಆಗದು. ನಿಮ್ಮ ದುಡಿಮೆ ನಿಮಗೂ ನಿಮ್ಮ ಕಾಲೇಜಿಗೂ ಹೆಸರು ತರಬೇಕು. ಮಾರ್ಗದರ್ಶನ ನೀವೇ ಮಾಡಿಕೊಂಡು ಹೊಸ ಜಾಡಿನಲ್ಲಿ ಸಾಗಿ. ನಾವೆಲ್ಲ ನಿಮ್ಮ ಬೆಂಬಲಕ್ಕೆ ಇದ್ದೇವೆ” ಎಂದು ಪ್ರಾಂಶುಪಾಲರು ಸಮಾರೋಪಿಸಿದರು. ಜಾಗ ನೋಡದೆ ಲಾಗ ಹೊಡೆವಾತನಿಗೆ ಒದಗುವ ಸಮಸ್ತ ಅನುಭವವೂ ಮುಂದೆ ನನ್ನದಾಯಿತು. ಸಹಕಾರ ಕ್ಷೇತ್ರ ಅಂದರೇನು? ಇದರಲ್ಲಿ ಸಂಘ ಸ್ಥಾಪನೆಯ ವಿಧಿ ಹೇಗೆ? ವ್ಯಾಪಾರದ ಹಿಕ್ಮತ್ತುಗಳು ಯಾವುವು? ಬಂಡವಾಳವನ್ನು ಎಲ್ಲಿಂದ ದೊರಕಿಸುವುದು? ಸಾಮಗ್ರಿಗಳ ಪೂರೈಕೆ ಎಂತು? ಗಲ್ಲಾದಲ್ಲಿ ಕುಳಿತು ವ್ಯಾಪಾರ ಮಾಡುವವರು ಯಾರು? ಲೆಕ್ಕ ಪುಸ್ತಕಗಳ ವಿಲೆವಾರಿ ಏನು? ನನ್ನ ಪಾಠಾಧ್ಯಯನಗಳ ಮತ್ತು ಸಂಘದ ವ್ಯವಹಾರಗಳ ನಡುವೆ ಹೊಂದಾಣಿಕೆ ಸಾಧಿಸುವುದು ಹೇಗೆ? ಇವೇ ಮೊದಲಾದ ನೂರಾರು ಪ್ರಶ್ನೆಗಳು ನನ್ನನ್ನು ಆ ಗಳಿಗೆಯಿಂದ ಕಾಡತೊಡಗಿದುವು. ಆವೇಶಭರದಲ್ಲಿ ಸ್ವಸಾಮರ್ಥ್ಯವನ್ನು ಗ್ರಹಿಸದೆ ನೀಡಿದ ಆಶ್ವಾಸನೆ ಸಿಂದಬಾದ ನಾವಿಕನ ಮುದುಕ ಮಿತ್ರನಂತೆ ನನ್ನ ಬೆನ್ನೇರಿ ತನ್ನ ಹೆಣಭಾರದಿಂದ ನನ್ನನ್ನು ಜಗ್ಗತೊಡಗಿತು. ಕಾಲೇಜಿನಲ್ಲಿ ಈ ವಿಚಾರಗಳನ್ನು ಚರ್ಚಿಸಬಲ್ಲ ಅನುಭವಿಗಳು ಯಾರೂ ಇರಲಿಲ್ಲ.
ಪ್ರಥಮ ಪ್ರಜಾಸರಕಾರ ಈ ವೇಳೆಗೆ ಕೊಡಗಿನಲ್ಲಿ ಅಸ್ತಿತ್ವಕ್ಕೆ ಬಂದು ಸಮರ್ಥವಾಗಿ, ಪ್ರಾಮಾಣಿಕವಾಗಿ ಮತ್ತು ಆತ್ಮೀಯವಾಗಿ ಕೆಲಸವೆಸಗುತ್ತಿತ್ತು. ಮಂತ್ರಿದ್ವಯರಿಗೂ ಕೊಡಗಿನ ಹೆಸರನ್ನು ಸರ್ವರಂಗಗಳಲ್ಲಿ ಮುಂದೆ ತರಬೇಕೆಂಬ ತೀವ್ರಾಸಕ್ತಿ ಇತ್ತು. ಸಾರ್ವಜನಿಕ ಜೀವನದಲ್ಲಿ ಲವಲವಿಕೆ ಮತ್ತು ಅರ್ಥಪೂರ್ಣತೆ ತುಂಬಿ ತುಳುಳುಕುತ್ತಿದ್ದುವು. ಆ ಮೊದಲೇ ಆಳವಾಗಿಯೂ ಅಗಲವಾಗಿಯೂ ಕೊಡಗಿನಲ್ಲಿ ನೆಲೆಸಿದ್ದ ಸಹಕಾರಾಂದೋಳನಕ್ಕೆ ಈ ಹೊಸ ಅನುಕೂಲ ಸನ್ನಿವೇಶ ಅಧಿಕ ಚೈತನ್ಯ ನೀಡಿತ್ತು. ಇತ್ತ ವೈಯಕ್ತಿಕವಾಗಿ ನನಗೆ ಒಂದು ವಿಶೇಷ ಸೌಕರ್ಯವೂ ಇತ್ತು: ನನ್ನ ತಂದೆ ಕೊಡಗಿನ ಸಹಕಾರ ರಂಗದಲ್ಲಿ ಹಿರಿಯ ಅಧಿಕಾರಿಗಳಾಗಿದ್ದರು. ಹೀಗಾಗಿ ಶಾಲಾದಿನಗಳಿಂದಲೇ ನನಗೆ ಗ್ರಾಮ ಸಹಕಾರ ಸಂಘಗಳ ನಡವಳಿಕೆಗಳನ್ನು ಹತ್ತಿರದಿಂದ ನೋಡುವ ಅವಕಾಶ ಲಭಿಸಿತ್ತು. ನಾನು ಪ್ರೌಢಶಾಲೆಯ ವಿದ್ಯಾರ್ಥಿ ಆಗಿದ್ದಾಗ ನನ್ನ ತಂದೆಯವರೇ ಅಧಿಕಾರ ನಿಮಿತ್ತ ಹಿರಿತನವಹಿಸಿ ಮಡಿಕೇರಿಯಲ್ಲಿ ಪ್ರಥಮವಾಗಿ ಸ್ಥಾಪಿಸಿದ ಗ್ರಾಹಕ ಸಹಕಾರ ಸಂಘದ ಕ್ಷಿಪ್ರಾಭಿವರ್ಧನೆಯನ್ನು ಕಂಡಿದ್ದೆ. ಸದ್ಯ ಅವರು ಕೊಡಗಿನ ಕೇಂದ್ರ ಸಹಕಾರ ಬ್ಯಾಂಕಿನ ಪ್ರಧಾನಾಧಿಕಾರಿಗಳಾಗಿದ್ದುದರಿಂದ ಅಂಗೈ ಅಗಲದ ಕೊಡಗಿನ ನೆಲದಲ್ಲಿ ಸಹಕಾರ ಇಲಾಖೆಯ ಸಕಲ ಅಧಿಕಾರಿಗಳೂ ನನಗೆ ಪರಿಚಿತರಾಗಿದ್ದರು. ಈ ರಕ್ತಸಂಬಂಧವನ್ನು ನಗದಿಸಲು ಮುಂದಾದೆ.
ಸಹಕಾರ ಸಂಘಗಳ ರಿಜಿಸ್ಟ್ರಾರ್ ವಿದ್ಯಾರ್ಥಿಗಳ ಗ್ರಾಹಕ ಸಹಕಾರ ಸಂಘದ ಸ್ಥಾಪನೆಗೆ ಬೇಕಾದ ಪೂರ್ತಿ ತಾಂತ್ರಿಕ ಮಾಹಿತಿಯನ್ನು ಒದಗಿಸಿದರು. ಆ ಪ್ರಕಾರ ಮೊದಲ ಹೆಜ್ಜೆಯಾಗಿ ನಾವು, ನಿಗದಿ ಪಾಲುಬಂಡವಾಳವನ್ನೂ ಪ್ರವರ್ತಕ ಸದಸ್ಯ ಸಂಖ್ಯೆಯನ್ನೂ ಕಲೆಹಾಕಬೇಕಾಗಿತ್ತು. ಪ್ರತಿ ಸದಸ್ಯ ಕೊಡಬೇಕಾಗಿದ್ದ ಕನಿಷ್ಠ ಮೊಬಲಗು ನಾಲ್ಕೂವರೆ ರೂಪಾಯಿಗಳು. ಆ ದಿನಗಳಲ್ಲಿ ವಿದ್ಯಾರ್ಥಿಗಳ ದೃಷ್ಟಿಯಿಂದ ಇದು ಕಡಿಮೆ ಮೊತ್ತವೇನೂ ಆಗಿರಲಿಲ್ಲ. ಹಣವಾಗಲಿ ಸದಸ್ಯ ಸಂಖ್ಯೆಯಾಗಲಿ ನಮ್ಮ ಉತ್ಸಾಹದ ದುಡಿಮೆಗೆ ಅನುಪಾತೀಯವಾಗಿ ಹರಿಯಲಿಲ್ಲ. ಈ ಸಾರ್ವಜನಿಕ ಭಿಕ್ಷಾಟಣೆಯಲ್ಲಿ ದೊರೆತ ಅನುಭವಗಳನ್ನು ಸಾರೀಕರಿಸಿ ಇಷ್ಟು ಹೇಳಬಹುದು:
ಯಾವುದೇ ಕಾರ್ಯ ಅಂತಿಮವಾಗಿ ತಮ್ಮ ಒಳಿತಿಗಾಗಿಯೇ ಇದೆ ಎಂದು ಜನರಿಗೆ ಖಾತ್ರಿ ಆದಾಗ್ಯೂ ಹಣ ಹರಿಯುವುದು ತುಂಬಾ ದಾಕ್ಷಿಣ್ಯದಿಂದ. ವಿಚಾರವಂತರು ಸಂಘಟಕರ ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆಗಳನ್ನು ಚೆನ್ನಾಗಿ ವಿಮರ್ಶಿಸಿ ಪರ್ಯಾಲೋಚಿಸಿ ಹಣ ನೀಡುವರು. ಇಂಥವರ ಸಂಖ್ಯೆ ಕಡಿಮೆ. ಉಳಿದವರು (ನಮ್ಮಲ್ಲಿ ವಿದ್ಯಾರ್ಥಿಗಳೇ ಬಹುತೇಕ ಕಚ್ಚಾ ಸಾಮಗ್ರಿ ಮತ್ತು ಬೇಡುವವ ಖುದ್ದು ಅವರ ಒಬ್ಬ ಅಧ್ಯಾಪಕ ಆಗಿದ್ದುದರಿಂದ) ನಾಲ್ಕು ಸಲ ಕಾಡುವಾಗ “ಪೀಡೆ ತೊಲಗಲಿ” ಎಂದು ಮನಸ್ಸಿನೊಳಗೆ ಶಪಿಸುತ್ತ ಸದಸ್ಯ ಶುಲ್ಕವನ್ನು ಪಾವತಿಸಿದರು. ವಾದ ಮಾಡಲು ಅರ್ಹತೆ ಇದ್ದಂಥ ಸಮಾನಸ್ಕಂಧರ ಪೈಕಿ ಒಳ್ಳೆಯ ಮಾತಾಡಿ ಹುರಿದುಂಬಿಸಿ ಆದರೆ ಸಾಕಷ್ಟು ಸತಾಯಿಸಿ ಮತ್ತೆ ಅನಿವಾರ್ಯವಾಗಿ ಮೊಬಲಗು ತೆತ್ತವರು ಹಲವರು. ಇನ್ನು ಕೆಲವರು “ಆಗ ಬಾ ಈಗ ಬಾ ಹೋಗಿಬಾ” ಎಂದು ಪರಿಪರಿ ವಿಧದಿಂದ ಸತಾಯಿಸಿ ಮತ್ತೆ ಈ ಕೆಲಸ ಹೇಗೆ ವಿಫಲವಾದೀತೆಂಬ ವಿಚಾರ ಉದ್ದುದ್ದ ಭಾಷಣ ಬಿಗಿದು ಕೊನೆಗೂ ಸದಸ್ಯರಾಗದೇ ನಾಲ್ಕೂವರೆ ರೂಪಾಯಿಗಳನ್ನು ದಕ್ಕಿಸಿಕೊಂಡರು. ಆದ್ದರಿಂದ ಇಲ್ಲೆಲ್ಲ ಕಲಿತ ಪಾಠ ಒಂದೇ: “ಸುಖದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ ತತೋಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ.” ಆದರೇನು ಮಾಡುವುದು? ಕೈ ಹಾಕಿದ ಕೆಲಸದಲ್ಲಿ ರಾಗಭಾವಗಳನ್ನು ತರದೇ ದುಡಿಯುವ ದಿವ್ಯ ನಿರ್ಲಕ್ಷ್ಯ ಭಾವವಾಗಲಿ ಬೋರ್ಗಲ್ಲತನವಾಗಲಿ ಈ ಜೀವದ (ನನ್ನ) ಪ್ರವೃತ್ತಿ ಅಲ್ಲ.
ರಿಜಿಸ್ಟ್ರಾರರು ವಿಧಿಸಿದ್ದ ಕನಿಷ್ಠ ಅಡಚಣೆಗಳನ್ನು, ಅಂತೂ ಇಂತೂ ನೋವು ಗಾಸಿ ಏನೂ ಇಲ್ಲದೆ, ದಾಟಿ ಎರಡನೆಯ ಸುತ್ತಿನ ಮಾತಿಗೆ ಅವರನ್ನು ಕಾಣಹೋದೆ. ಅವರು ಸೂಚಿಸಿದ್ದ ಮಾದರಿ ಉಪನಿಬಂಧನೆಗಳ ಪೈಕಿ ಬಹುತೇಕ ಎಲ್ಲವನ್ನೂ ಚಾಚೂ ತಪ್ಪದೆ ಒಪ್ಪಿಕೊಂಡಿದ್ದೆವು. (ಹೆಚ್ಚಿನವು ನಮಗೆ ಅರ್ಥವಾಗಿರಲಿಲ್ಲ). ಕಾರ್ಯನಿರ್ವಾಹಕ ಸಮಿತಿಯ ವಿಚಾರದಲ್ಲಿ ಮಾತ್ರ ನಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಕೆಲವು ಮುಖ್ಯ ಮಾರ್ಪಾಡುಗಳನ್ನು ಸೂಚಿಸಿದ್ದೆವು. ಗೌರವ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯನಿರ್ವಾಹಕನಾದ ಗೌರವ ಕಾರ್ಯದರ್ಶಿ ಇವರಿಬ್ಬರು ಮಾತ್ರ, ವಿದ್ಯಾರ್ಥಿಗಳೇ ಬಹುಸಂಖ್ಯೆಯಲ್ಲಿ ಇರುವಂಥ, ಮಹಾಸಭೆಯಿಂದ ಚುನಾಯಿತರಾಗತಕ್ಕದ್ದಲ್ಲ; ಬದಲು, ಕಾಲೇಜಿನ ಪ್ರಾಂಶುಪಾಲರೇ ಪದನಿಮಿತ್ತ ಗೌರವ ಕಾರ್ಯದರ್ಶಿಯಾಗಿ ನಾಮಕರಿಸತಕ್ಕದ್ದು. ಮತ್ತು ಇವರೇ ಅಧ್ಯಾಪಕ ಸದಸ್ಯರ ಪೈಕಿ ಒಬ್ಬನನ್ನು ಗೌರವ ಕಾರ್ಯದರ್ಶಿಯಾಗಿ ನಾಮಕರಿಸತಕ್ಕದ್ದು. ಕಾರ್ಯನಿರ್ವಾಹಕ ಮಂಡಳಿಯ ಅಧ್ಯಾಪಕಸದಸ್ಯನನ್ನು ಅಧ್ಯಾಪಕಸದಸ್ಯರು ಮಾತ್ರ ಚುನಾಯಿಸತಕ್ಕದ್ದು.
ರಿಜಿಸ್ಟ್ರಾರರು ಮೊದಲಿನ ಸೂಚನೆಯನ್ನು ಒಪ್ಪಿದರು. ಆದರೆ ಉಳಿದೆರಡನ್ನು ತಳ್ಳಿಹಾಕಿದರು. ಅವು ಸಹಕಾರ ತತ್ತ್ವಗಳಿಗೆ ಅನುಗುಣವಾಗಿಲ್ಲ, ಮಹಾಸಭೆಯ ಅಧಿಕಾರವ್ಯಾಪ್ತಿಗೆ ಸರ್ವಸದಸ್ಯರೂ ಒಳಪಟ್ಟಿರಬೇಕು ಎಂಬುದಾಗಿ ವಾದಿಸಿದರು. ಅಲ್ಲದೆ ನಾನು ಸರ್ವಾನುಮತದಿಂದ ಗೌರವ ಕಾರ್ಯದರ್ಶಿಯಾಗಿ ಚುನಾಯಿತನಾಗುವ ವಿಚಾರದಲ್ಲಿ ತಮಗೆ ಒಂದಿನಿತು ಸಂದೇಹವೂ ಇಲ್ಲ ಎಂಬುದಾಗಿ ನನ್ನ ಬೆನ್ನು ತಟ್ಟಿದರು. ನಾನು ಸ್ಪಷ್ಟವಾಗಿ ನಮ್ಮ ನಿಲವನ್ನು ವಿವರಿಸಿದೆ (ಸ್ವಲ್ಪ ಕಾವು ಕೂಡಾ ಬೆರೆತಿತ್ತು): “ಸಹಕಾರ ತತ್ತ್ವ ಅನ್ನುವುದು ನಮ್ಮ ಅಳವಿಗೆ ಮೀರಿದ ನಿಸರ್ಗ ನಿಯಮ ಏನೂ ಅಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಇದನ್ನು ಮಾರ್ಪಡಿಸದಿದ್ದರೆ ಅದು ದಫ್ತರಗಳಲ್ಲಿ ಕೀಟಾಹಾರವಾಗಿ ಉಳಿದೀತು, ಅಷ್ಟೆ. ಇದೀಗ ತಾನೇ ಹುಟ್ಟಲಿರುವ ನಮ್ಮ ಸಹಕಾರ ಸಂಘಕ್ಕೆ ಯಾರು ಗೌರವ ಕಾರ್ಯದರ್ಶಿ ಆಗುವರೆಂಬುದು ಮುಖ್ಯ ಅಲ್ಲ. ಆ ಅಧಿಕಾರ ಆ ವ್ಯಕ್ತಿಗೆ ಹೇಗೆ ಪ್ರಾಪ್ತವಾಗುವುದು ಎನ್ನುವುದು ಮುಖ್ಯ. ಇಲ್ಲಿ ವಿದ್ಯಾರ್ಥಿಸದಸ್ಯರ ಮಹಾಸಭೆಗೆ ಅಧ್ಯಾಪಕರಿಂದ ಇಬ್ಬರನ್ನು ಚುನಾಯಿಸುವ ಅಧಿಕಾರ ನೀಡುವುದು ಬೀದಿ ರಾಜಕೀಯವನ್ನು ದೇಗುಲದೊಳಕ್ಕೆ ಎಳೆದು ತಂದಂತೆ. ಕಾಲೇಜಿಗೆ ಸಹಕಾರ ಸಂಘವಿಲ್ಲದಿದ್ದರೂ ಅಡ್ಡಿ ಇಲ್ಲ. ಈ ಹೊಸ ಗೆದ್ದಲನ್ನು ಒಳಕರೆಯುವುದು ಬೇಡ.”
ಅವರೂ ದನಿ ಏರಿಸಿ ಹೇಳಿದರು, “ನಿಮ್ಮ ಷರತ್ತುಗಳಿಗೆ ಅನುಗುಣವಾಗಿ ಈ ಸಂಘವನ್ನು ನೋಂದಾಯಿಸಲು ಸಾಧ್ಯವಾಗುವುದಿಲ್ಲ.” “ಸಹಕಾರ ಸಂಘಗಳ ಸ್ಥಾಪನೆ ಪೋಷಣೆಗಳಿಗೆಂದೇ ಮೀಸಲಾಗಿರುವ ಈ ಇಲಾಖೆ ನಾವಾಗಿಯೇ ಒಂದು ಸಸಿಯನ್ನು ನಿಮ್ಮ ಯಾವ ನೆರವೂ ಇಲ್ಲದೆ ನೆಟ್ಟು ಬೆಳೆಸಿ ಮೇಲೆ ತರುವೆವೆಂದು ಕೋರಿ ಬಂದಿರುವಾಗ, ನಮ್ಮನ್ನು ತೆರೆದ ಮನದಿಂದ ಸ್ವಾಗತಿಸಿ ಪ್ರೋತ್ಸಾಹಿಸುವುದು ಬಿಟ್ಟು ಗಾಲಿಗಳ ಅರಗಳ ನಡುವೆ ಸಲಾಕಿ ತೂರುವುದು ಸರಿಯೇ? ನಿಮ್ಮ ‘ಸಹಕಾರ’ ವಿಶೇಷಣದ ಬೆಂಬಲ ಇಲ್ಲದೆಯೂ ನಾವು ಸಂಸ್ಥೆಯೊಂದನ್ನು ಕಟ್ಟಿ ವಿದ್ಯಾರ್ಥಿ ಸೇವೆಯನ್ನು ಮಾಡುವುದಂತೂ ಖರೆ. ನೋಡಿ ಬೇಕಾದರೆ” ಎಂಬುದಾಗಿ ಹೇಳಿ ನಾನು ಅಲ್ಲಿಂದ ಹೊರಟೆ, ವಿಶ್ವಾಮಿತ್ರನಂತೆ.
ಪ್ರಾಂಶುಪಾಲರಿಗೆ ಯಥಾವತ್ತು ವರದಿ ಒಪ್ಪಿಸಿ ಎರಡು ಅಂಶಗಳನ್ನು ಸ್ಪಷ್ಟಪಡಿಸಿದೆ. ಒಂದು, ರಿಜಿಸ್ಟ್ರಾರರ ಅಸಹಜ ಶರತ್ತುಗಳಿಗೆ ಮಣಿದು ಕಾಲೇಜು ಸಹಕಾರ ಸಂಘದ ಸ್ಥಾಪನೆ ಆಗಬೇಕೆಂದಾದರೆ ನನ್ನನ್ನು ಆ ಕ್ಷಣವೇ ಸಂಘದ ಹೊಣೆಗಾರಿಕೆಯಿಂದ ಬಿಡುಗಡೆ ಮಾಡಬೇಕು. ಎರಡು, ನಾನೇ ಇದ್ದು ಸಂಸ್ಥೆಯನ್ನು ಸಂಘಟಿಸಬೇಕು ಎಂದಾದರೆ ನಾವು ಸಹಕಾರ ಕ್ಷೇತ್ರವನ್ನು ಪ್ರವೇಶಿಸದೆ ಅಲಾಯಿದ ಮುಂದುವರಿಯಬೇಕು.
ಮುಂದಿನ ದಿನಗಳಲ್ಲಿ ಪ್ರಾಂಶುಪಾಲರು ರಿಜಿಸ್ಟ್ರಾರರನ್ನೂ ಸಹಕಾರ ಮಂತ್ರಿಗಳನ್ನೂ ಭೇಟಿ ಮಾಡಿ ನಮ್ಮ ಮೂಲ ಮಾರ್ಪಡಿಕೆಗಳನ್ನು ಇಲಾಖೆ ಒಪ್ಪುವಂತೆ ಮಾಡಿದರು. ೧೯೫೪ರ ಫೆಬ್ರುವರಿ ೬ರಂದು ‘ಕೂರ್ಗ್ ಗವರ್ನ್ಮೆಂಟ್ ಕಾಲೇಜ್ ಕೋ ಆಪರೇಟಿವ್ ಸ್ಟೋರ್ಸ್ ಲಿಮಿಟೆಡ್’ ಎಂಬ ನಾಮಧೇಯ ಧರಿಸಿ ನಮ್ಮ ಸಂಘ ಜನ್ಮ ತಳೆಯಿತು. ಇದರ ಗೌರವ ಕಾರ್ಯದರ್ಶಿಯಾಗಿ ಪ್ರಾಂಶುಪಾಲರು ನನ್ನನ್ನು ನಾಮಕರಿಸಿದರು. ಈಗ ನೊಗ ಪೂರ್ತಿ ನನ್ನ ಕತ್ತ ಮೇಲೆ ಬಿತ್ತು, ಮಾತ್ರವಲ್ಲ ಉರುಳೆಯನ್ನು ಅದಕ್ಕೆ ಬಲವಾಗಿಯೇ ಬಿಗಿದಿದ್ದರು ಕೂಡ. ಹೆಸರುಂಟು ಬಂಡವಾಳ ಇಲ್ಲ, ಸಾಗುವ ಹುಮ್ಮಸ್ಸುಂಟು ಹಾದಿ ತಿಳಿದಿಲ್ಲ. ವ್ಯವಸ್ಥಿತ ಕಾರ್ಯದ ಗಟ್ಟಿ ಅಡಿಪಾಯವಿಲ್ಲದ ಉತ್ಸಾಹದ ನೊರೆ ಎಷ್ಟು ಎತ್ತರ ಏರಿದರೇನು ಫಲ? ಅಂದು ನನ್ನ ಮನಃಸ್ಥಿತಿ ಹಾಗಿತ್ತು.
೧೯೫೪ರ ಜೂನ್ ಹೊತ್ತಿಗೆ ನಮ್ಮ ಸಂಘ ಸುಸಜ್ಜಿತವಾಗಿ ವ್ಯಾಪಾರಾರಂಭ ಮಾಡಬೇಕು ಎಂದು ನಿರ್ಧರಿಸಿದೆವು. ನಾಲ್ವರು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಮುಂಬಂದು ತೇರೆಳೆಯಲು ನನ್ನೊಡನೆ ಟೊಂಕ ಕಟ್ಟಿ ನಿಂತರು. ಆದರೆ ಹೇರಿಲ್ಲದ ತೇರಿದು. ಅಂದು ನನ್ನನ್ನು ಪೀಡಿಸಿದ ಮುಖ್ಯ ಸಮಸ್ಯೆ ಬೇರೆಯೇ: ಪಾಲು ಬಂಡವಾಳ, ಇತರ ಸಂಗ್ರಹ ಎಲ್ಲವೂ ಸೇರಿ ನಮ್ಮ ಮೂಲಧನ ಎರಡು ಸಾವಿರದ ಅಂಚನ್ನೂ ದಾಟಿರಲಿಲ್ಲ. ಹಾಗಿರುವಾಗ ಹಲವಾರು ಸಾವಿರ ರೂಪಾಯಿ ಬೆಲೆಯ ಮಾಲುಗಳನ್ನು ಒದಗಿಸಿಕೊಳ್ಳುವುದು ಹೇಗೆ? ಮಡಿಕೇರಿಯ ಪುಸ್ತಕ ವ್ಯಾಪಾರಿ ಒಬ್ಬರು ತುಂಬ ಅನುಕಂಪ ವಹಿಸಿ ನಯವಾಗಿ ಹೇಳಿದರು, “ಈ ತಾಪತ್ರಯ ನಿಮಗೆಂದೂ ನಿಭಾಯಿಸಲು ಸಾಧ್ಯವಾಗದು. ಇನ್ನು ನಿಮ್ಮ ಕಾಲೇಜಿಗೆ ಒಂದು ಸಂಘ ಬೇಕೇಬೇಕು ಎಂದಾದರೆ ನೋಡಿ, ನಾನಂತೂ ಪೂರ್ತಿ ಸಹಕಾರ ನೀಡಲು ತಯಾರಾಗಿದ್ದೇನೆ. ಜೂನ್ ಹೊತ್ತಿಗೆ ನಿಮಗೆ ಬೇಕಾದ್ದೆಲ್ಲವನ್ನೂ ಸಗಟು ದರದಲ್ಲಿ ಕೊಟ್ಟುಬಿಡುವೆವು. ಮಾರಾಟ ಆದಂತೆ ದುಡ್ಡು ಕೊಡುವಿರಂತೆ.” ಈ “ಬಾನೊಳವೆ ಬಾನೊಳವೆ ಬಾ ನನ್ನ ಮನೆಗೆ, ಬಾನೊಳಗೆ ಹಾರಿ ಬಲು ದಣಿವಾಯ್ತು ನಿನಗೆ” (ಪಂಜೆ) ಎನ್ನುವ ಜೇಡನ ಕರೆಗೆ ಓಗೊಡುವ ಹೆಡ್ಡ ನೊಣ ನಾನಾಗಿರಲಿಲ್ಲ.
ಮಂಗಳೂರು ನಗರದೊಡನೆ ನನಗೆ ವೈಯಕ್ತಿಕ ಸಂಪರ್ಕ ನಿಕಟವಾಗಿತ್ತು. ಅಲ್ಲಿ ಮೊದಲು ಎರಡು ವರ್ಷ ಕಾಲೇಜು ವ್ಯಾಸಂಗ ಮಾಡಿದ್ದೆ. ಮತ್ತೆ ಕೆಲವು ವರ್ಷಗಳ ತರುವಾಯ ಅದೇ ಊರಿನಲ್ಲಿ ನಾಲ್ಕು ವರ್ಷ ಕಾಲೇಜು ಅಧ್ಯಾಪಕ ಹುದ್ದೆಯಲ್ಲೂ ಇದ್ದುದು ಸರಿಯಷ್ಟೆ. ಹೀಗಾಗಿ ಆ ಪರಿಚಿತ ಹಿರಿ ಪಟ್ಟಣದ ಸಗಟು ವ್ಯಾಪಾರಿಗಳನ್ನು (ಇವರಲ್ಲಿ ಹಲವು ಮಂದಿ ನನ್ನ ಸ್ನೇಹಿತರೂ ಆಗಿದ್ದರು) ಕಂಡು ಮಾತಾಡಿ ಖುದ್ದು ಮಾಹಿತಿ ಪಡೆಯುವುದೊಂದೇ ಹಾದಿ ಎಂದು ನಿರ್ಧರಿಸಿ ಅಲ್ಲಿಗೇ ಹೋದೆ. ಸ್ಕೂಲ್ ಬುಕ್ ಕಂಪೆನಿ ಎಂಬ ಹೆಸರಿನ ಪ್ರಸಿದ್ಧ ಪುಸ್ತಕ ವ್ಯಾಪಾರಿಗಳು ತುಂಬ ತಾಳ್ಮೆಯಿಂದ ನನಗೆ ಈ ಹೊಸ ಪ್ರಪಂಚದ ಸಾಧ್ಯಾಸಾಧ್ಯತೆಗಳನ್ನು ವಿವರಿಸಿದರು. ಲೇಖನ ಸಾಮಗ್ರಿಗಳು ಸಮಸ್ತವನ್ನೂ ತಾವು ಸಾಲರೂಪವಾಗಿ ಜೂನ್ ವೇಳೆಗೆ ಒದಗಿಸುವ ಆಶ್ವಾಸನೆ ನೀಡಿದರು. ಅವರ ಸಗಟು ದರಗಳು ನಾನು ನಂಬಲಾರದಷ್ಟು ಕಡಿಮೆ ಇದ್ದುವು. “ನೀವು ಈ ಸಂಘದ ಗೌರವ ಕಾರ್ಯದರ್ಶಿ ಆಗಿರುವ ತನಕ ನಮ್ಮ ಪೂರ್ತಿ ಬೆಂಬಲ ನಿಮಗಿದೆ” – ಖಾಸಗಿ ಕ್ಷೇತ್ರ ಸಹಕಾರ ರಂಗಕ್ಕೆ ನೀಡಿದ ಈ ಆಶ್ವಾಸನೆ ನನಗೆ ಎಂಟಾನೆ ಬಲ ನೀಡಿತು. ಹಣವಿಲ್ಲವೆಂದು ಒದ್ದಾಡುತ್ತಿದ್ದವನಿಗೆ ಅಯಾಚಿತವಾಗಿ ಅದು ಈಗ ಸಾಕಷ್ಟು ಒದಗಿಬಂದಿತ್ತು. ಸ್ಕೂಲ್ ಬುಕ್ ಕಂಪೆನಿಯವರ ಸಲಹೆ ಮೇರೆಗೆ ನಮಗೆ ಬೇಕಾಗುವ ಲೇಖನ ಸಾಮಗ್ರಿಗಳ ಯಾದಿ ತಯಾರಿಸಿ ಅವನ್ನು ಪೂರೈಸಲು ಅವರಿಗೆ ಆದೇಶವಿತ್ತು ಹಿಂತಿರುಗಿದೆ. ಇತ್ತ ಪಠ್ಯಪುಸ್ತಕಗಳನ್ನು ಪ್ರಕಾಶಕರಿಂದಲೇ ನೇರವಾಗಿ ತರಿಸಲು ಪತ್ರ ವ್ಯವಹಾರ ತೊಡಗಿದೆವು. ಮ್ಯಾಕ್ಸ್ಮಿಲನ್, ಬ್ಲ್ಯಾಕೀ, ಆಕ್ಸ್ಫರ್ಡ್, ಓರಿಯೆಂಟಲ್ ಲಾಂಗ್ಮನ್ ಇವೇ ಮೊದಲಾದವು ಅಂದಿನ ಪ್ರಕಾಶನ ಸಂಸ್ಥೆಗಳು.
ಮೇ ತಿಂಗಳ ಕೊನೆಯಲ್ಲಿ ಮಳೆ ಎಂದಿನ ಬಿರುಸಿನಿಂದ ಜಡಿಯತೊಡಗಿತು. ಮಂಗಳೂರಿನಿಂದ ಲಾರಿ ಹೊರೆ ಲೇಖನ ಸಾಮಗ್ರಿ ಬಂದಿಳಿದಾಗ ಒಂದು ಸಲಕ್ಕೆ ಆ ಮುಗಿಲಾಗಸವೇ ನಮ್ಮ ತಲೆಯ ಮೇಲೆ ಕಳಚಿ ಬಿದ್ದಂತೆ ಅನ್ನಿಸಿತು. ಸುಮಾರು ಎಂಟು ಸಾವಿರ ರೂಪಾಯಿ ಮಾಲು. ಇಪ್ಪತ್ತು ಭಾರೀ ಪಿಂಡಿಗಳು. ಅವನ್ನು ಬಿಚ್ಚಿ ಸಾಮಗ್ರಿಗಳನ್ನು ವರ್ಗೀಕರಿಸಿ, ಇನ್ವಾಯ್ಸಿನ ತಪಶೀಲಿಯೊಡನೆ ತಾಳೆ ನೋಡಿ ಮತ್ತೆ ಅಟ್ಟಳಿಗೆಗಳಲ್ಲಿ ವ್ಯಾಪಾರನುಕೂಲ್ಯದ ದೃಷ್ಟಿಯಿಂದ ಅಳವಡಿಸಿ ಪೇರಿಟ್ಟಾಗ ಪುರಾಣೋಕ್ತ ರಾಜಸೂಯಾಧ್ವರ ಮಾಡಿ ಮುಗಿಸಿದ ಅನುಭವ ನಮ್ಮದಾಗಿತ್ತು. ಪಠ್ಯಪುಸ್ತಕಗಳೆಲ್ಲವೂ ಬ್ಯಾಂಕ್ ಮೂಲಕ ಬಂದುವು. ಅಂದರೆ ಅವನ್ನು ನಗದು ಹಣ ಪಾವತಿಸಿಕೊಳ್ಳಬೇಕಾಯಿತು. ಸಾರ್ವಜನಿಕ ಹಿತ ದೃಷ್ಟಿಯಿಂದ ಮತ್ತು ನಮ್ಮ ವ್ಯಾಪಾರ ಕುದುರಿ ಈ ಸಾಹಸ ಜಯಪ್ರದವಾಗಲೆಂಬ ಉದ್ದೇಶದಿಂದ ಸಾಕಷ್ಟು ಕರಪತ್ರಗಳನ್ನು ಮುದ್ರಿಸಿ (ಆ ದಿನಗಳಂದು ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ ದೈನಿಕ ಯಾವುದೂ ಇರಲಿಲ್ಲ) ನಮ್ಮ ವ್ಯಾಪಾರ ದರಗಳನ್ನೂ ನಿಯಮಗಳನ್ನೂ ವಿವರಿಸಿ ಊರಿಡೀ ಹಂಚಿದೆವು. ಮಾದರಿ ನೋಡಿ:
1. ಪ್ರತಿಯೊಂದು ಬರೆಯುವ ಪುಸ್ತಕದಲ್ಲಿಯೂ ರಟ್ಟಿನ ಮೇಲೆ ಮುದ್ರಿತವಾಗಿರುವಷ್ಟು ಪುಟಗಳು, ರಟ್ಟಿನ ಹೊರತಾಗಿ, ಇರುವುವು.
2. ಪುಟದ ವಿಸ್ತಾರ ಸ್ಥಳೀಯ ಮಾರುಕಟ್ಟೆಯ ಇತರ ಪುಸ್ತಕಗಳ ಪುಟ ವಿಸ್ತಾರಕ್ಕಿಂತಲು ದೊಡ್ಡದು.
3. ಅತ್ಯಂತ ಉತ್ಕೃಷ್ಟವಾದ ಕಾಡೆಮ್ಮೆ ಛಾಪಿನ ಕಾಗದದಿಂದ ಈ ಪುಸ್ತಕಗಳನ್ನು ತಯಾರಿಸಿದೆ.
4. ಹಾಗಿದ್ದರೂ ಇವುಗಳ ಮಾರಾಟ ಬೆಲೆ ಮಂಗಳೂರು ನಗರದ ಪೈಪೋಟಿ ಮಾರುಕಟ್ಟೆಯಲ್ಲಿ ಪ್ರಚಲಿತವಾಗಿರುವ ಬೆಲೆಯೇ ಆಗಿದೆ.
5. ಇತರ ಲೇಖನ ಸಾಮಗ್ರಿಗಳಿಗೂ ಈ ತತ್ತ್ವ ಅನ್ವಯವಾಗುತ್ತದೆ. ಮುದ್ರಿತ ಪುಸ್ತಕಗಳ ಬೆಲೆಗಳು ಅವುಗಳ ಮೇಲೆ ನಮೂದಿತವಾಗಿವೆ. ಆ ಬೆಲೆಗಳಿಗೇ ಮಾರುವೆವು.
ನಿಮ್ಮ ಕಷ್ಟಾರ್ಜಿತ ಹಣಕ್ಕೆ ಉತ್ಕೃಷ್ಟ ಮಾಲು ಮತ್ತು
ವಿನಯಪೂರ್ವಕ ಕ್ಷಿಪ್ರ ಸೇವೆ ದೊರೆಯಬೇಕಾದರೆ
ಬನ್ನಿ ಬನ್ನಿ ಬನ್ನಿ ಓ ಬನ್ನಿ
ಮಡಿಕೇರಿಯ ಗವರ್ನ್ಮೆಂಟ್ ಕಾಲೇಜ್
ಕೋ ಆಪರೇಟಿವ್ ಸ್ಟೋರ್ಸ್ ಲಿಮಿಟೆಡ್ ಸಂಸ್ಥೆಗೆ!
ಸಹಕಾರ ವ್ಯಾಪಾರೋದ್ಯಮದ ಮಹೋನ್ನತ ನಿದರ್ಶನಕ್ಕೆ!
ಸಂಘದ ಆರಂಭದಿಂದಲೂ ನಾವೊಂದು ಸ್ಪಷ್ಟ ನಿಲವನ್ನು ತಳೆದಿದ್ದೆವು: ನಮ್ಮ ಕೆಲಸದ ವಿಚಾರ ಸ್ಪಷ್ಟವಾಗಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಎಗೆ ನಿವೇದನೆ ಮಾಡಿಕೊಳ್ಳತಕ್ಕದ್ದು. ಯಾವ ಗಿರಾಕಿಯೂ ನಮಗೆ ಕಿರಿಯನಲ್ಲ, ಯಾವ ವ್ಯಾಪಾರವೂ ನಮ್ಮ ಅಳವಿಗೆ ಮೀರಿದ್ದಲ್ಲ. ಮಾರಾಟ ವಸ್ತು ಸೂಜಿ ಆಗಿರಲಿ ಉದ್ಗ್ರಂಥವೇ ಆಗಿರಲಿ, ಬಿಲ್ ಬರೆದೇ ಅದನ್ನು ವಿಕ್ರಯಿಸತಕ್ಕದ್ದು. ವ್ಯಾಪಾರ ಹಾಗೂ ಸೇವಾವಿಚಾರಗಳಲ್ಲಿ ಸದಾ ವಿವೃತ ಮನಸ್ಕರಾಗಿರತಕ್ಕದ್ದು (open minded). ಮಡಿಕೇರಿಯ ಮಾರುಕಟ್ಟೆಯ ವಿಚಾರ ಚಕಾರವನ್ನೂ ಎತ್ತತಕ್ಕದ್ದಲ್ಲ. ನಮ್ಮ ವ್ಯಾಪಾರದ ಸರ್ವೋತ್ಕೃಷ್ಟತೆ ಒಂದೇ ನಮಗೆ ಜಯದೆಡೆಗೆ ರಹದಾರಿ ಆಗತಕ್ಕದ್ದು.
ನಮ್ಮ ಕಾರ್ಯವಿಧಾನ, ಪ್ರಚಾರ ವೈಖರಿ (ಎಲ್ಲ ಅಧ್ಯಾಪಕರೂ ವಿದ್ಯಾರ್ಥಿಗಳೂ ನಮ್ಮ ರಾಯಭಾರಿಗಳಾಗಿದ್ದರಷ್ಟೆ) ಮೇಲಾಗಿ ಕಾಲೀಜಿನ ಹಿರಿ ಹೆಸರು ಇವು ನಮಗೆ ನಾವೆಂದೂ ನಿರೀಕ್ಷಿಸದಿದ್ದಂಥ ವ್ಯಾಪಾರವನ್ನು ತಂದುಕೊಟ್ಟವು. ಮೊದಲೇ ಮಡಿಕೇರಿಯದು ಒಂದು ಸಂವೃತ ಮಾರುಕಟ್ಟೆ (closed market). ಅಂಥಲ್ಲಿ ಈ ವಿವೃತ ವ್ಯವಹಾರ ಆ ದಿನಗಳಲ್ಲಿ ಪವಾಡವಾಗಿ ಕಂಡಿದ್ದರೆ ಆಶ್ಚರ್ಯ ಏನೂ ಇರಲಿಲ್ಲ. ಶಾಲೆಯ ಎಳೆ ಮಿಡಿಗಳು ಮತ್ತು ಅವರ ಪಾಲಕರು ಸಾಲು ಹಿಡಿದು ಮಳೆ ಹೊಡೆತ ಲೆಕ್ಕಿಸದೆ ಗಾಳಿಬೀಡಿನ ಗುಡ್ಡ ಏರಿಬಂದು ನಮ್ಮ ಅಂಗಡಿಗೆ ಮುತ್ತಿಗೆ ಹಾಕಿದರು. ಬೊಮ್ಮನಹಳ್ಳಿಯ ಕಿಂದರಿ ಜೋಗಿಯ ಬೆನ್ನು ಹಿಡಿದು ಸಾಗಿದ ಅಣುಗರ ಹೊನಲು ಪ್ರಾಯಶಃ ಹೀಗಿದ್ದಿರಬಹುದು. ಕಾಲೇಜಿನ ಬೇಸಗೆ ರಜೆ ಇನ್ನೂ ಮುಗಿದಿರಲಿಲ್ಲವಾಗಿ ನಾವು ಹಗಲಿಡೀ ಯಾವುದೇ ಬಗೆಯ ವಿಶ್ರಾಂತಿಗೆ ಅವಕಾಶ ಇರದಂತೆ ತಂಡಗಳಲ್ಲಿ ದುಡಿದು ಈ ಮಹಾಪೂರವನ್ನು ನಿಭಾಯಿಸಿದೆವು. ನಮಗಿದು ಹೊಸ ಸಾಹಸ, ಆಟ; ನಮ್ಮ ಹೊಟ್ಟೆಪಾಡಿಗೆ ಸುತರಾಂ ಅನ್ವಯವಾಗದ ವ್ಯವಹಾರ. ಆದರೆ ಪೇಟೆ ಅಂಗಡಿಗಳವರಿಗೋ? ಅವರ ಅಳಿವು ಉಳಿವುಗಳ ಪ್ರಶ್ನೆ ಇದಾಗಿತ್ತು. ಅವರು ಲೇಖನ ಸಾಮಗ್ರಿಗಳ ಬೆಲೆಗಳನ್ನು ಇಳಿಸಿದ್ದು ನಮ್ಮ ಅಸ್ತಿತ್ವವನ್ನು ಪರೋಕ್ಷವಾಗಿ ಒಪ್ಪಿಕೊಂಡದ್ದಕ್ಕೆ ಪ್ರತ್ಯಕ್ಷ ನಿದರ್ಶನ. ಆದರೆ ಕಾಲೇಜ್ ಸೊಸೈಟಿಯ (ಜನರ ಬಾಯಲ್ಲಿ ಬಂದದ್ದು ಮತ್ತು ಉಳಿದದ್ದು ಈ ಹೆಸರು) ಮಾಲುಗಳ ಗುಣಮಟ್ಟ ಇವುಗಳಿಗೆ ಇರಲಿಲ್ಲ. ಮೇಲಾಗಿ ನಮ್ಮ ಗ್ರಾಹಕ ಸೇವೆ ಜನರಿಗೆ ಒಂದು ನೂತನಾನುಭವೇ ಆಗಿತ್ತು. ಸರ್ವರಿಗೂ ಸದಾ ನಗುಮೊಗದ ಸೇವೆ, “ಗುಂಡು ಪಿನ್ನಿನಿಂದ ತೊಡಗಿ ಪರ್ವತದವರೆಗೆ ಯಾವುದಕ್ಕೂ ಎಲ್ಲದಕ್ಕೂ ಕೇಳಿ ಸದಾ ಕಾಲೇಜ್ ಸೊಸೈಟಿಯನ್ನು” ಎನ್ನುವ ಘೋಷಣೆ – ಇವುಗಳಿಂದ ನಮ್ಮೂರ ಮುಗ್ಧ ಜನತೆ ಆಕರ್ಷಿತವಾದದ್ದು ಸಹಜವೇ.
(ಸಹಕಾರಿ ಸಂಘದ ಅನುಭವ ಮುಂದುವರಿಯಲಿದೆ)
bahala hindhinidhu namage thilusith idire . namage gothilladhu vishaya. dhanyavadha
ಪ್ರಿಯರೆ,ವಂದೇಮಾತರಮ್. ಪರಕೀಯರ ನಿರಂಕುಶ ಸರಕಾರದಲ್ಲಿ ಕೂಡಾ ಸಹಕಾರ ಸಂಘಗಳು ಪ್ರಜಾಪ್ರಭುತ್ವದ ಸಿದ್ದಾಂತಗಳನ್ನು ಕಾರ್ಯಗತ ಗೊಳಿಸಿ, ಹೆಸರು ಗಳಿಸಿದ್ದುವು. ಸಹಕಾರಿ ಬ್ಯಾಂಕಗಳು, ಇದಕ್ಕೆ ಉದಾಹರಣೆಗಳು. ಇಂದು ದೇಶದಲ್ಲಿ ಪ್ರಜಾಪ್ರಭುತ್ವವಿರುವಾಗ ಸಹಕಾರಸಂಘಗಳು ಮುಚ್ಚುತ್ತಿವೆ. ಈ ನಿಟ್ಟಿನಲ್ಲಿ ಜಿ.ಟಿ.ನಾ. ಅವರ ಸೇವೆ ಸಾಹಸ್ ಶ್ಲಾಘನೀಯವಾದದ್ದು. ರಿಜಿಸ್ಟ್ರಾರರ ಕಾನೂನಿನ ಚೌಕಟ್ಟಿನ ನಡವಳಿಕೆ ಓದುವಾಗ ನನಗೆ ನಮ್ಮೊಬ್ಬ ಹಿರಿಯ ಮಂತ್ರಿಗಳ ಮಾತು ನೆನಪಿಗೆ ಬಂತು. “ಪುಸ್ತಕ ಓದಿ ಹೆಂಡತಿ ಹತ್ತಿರ ಹೋದರೆ, ನಾಯಿ ಮರಿ ಹುಟ್ಟುತ್ತದೆ.” ನನಗೆ ಈ ರಚನೆಯಲ್ಲಿ ನೆಚ್ಚುತ್ತಿರುವ ಒಂದು ಮುಖ್ಯವಾದ ಅಂಶ: ಸಾಂದರ್ಭಿಕವಾಗಿ ನುಡಿಕಾರಗಳ, ಗಾದೆಯ, ಸುಭಾಷಿತಗಳ, ನುಡಿಗಟ್ಟುಗಳ, ವಾಘ್ರೂಡಿಗಳ, ಪದ್ಯಗಳ, ಶ್ಲೋಕಗಳ ಪ್ರಯೋಗ. ಇಂತಹ ಇನ್ನೊಂದು ಬರಹ ತೆಲುಗಿನಲ್ಲಿ ಆಚಾರ್ಯ ತಿರುಮಲ ರಾಮಚಂದ್ರ ಅವರ ಆತ್ಮಕಥೆ/ಪ್ರವಾಸ ಕಥನ “ಹಂಪಿನುಂಚಿ ಹರಪ್ಪಾದಾಕ” (ಹಂಪಿಯಿಂದ ಹರಪ್ಪಾತನಕ>) 2002 ರಲ್ಲಿ ಈ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬಂದಿತ್ತು. ಇದರ ವಿಮರ್ಶೆ ನಾನು ಡೆಕ್ಕಾನ ಕ್ರೊನಿಕಲ್ ಪತ್ರಿಕೆಯಲ್ಲಿ ಬರೆದಿದ್ದೆ.
1961ರಲ್ಲಿ ಮೂಲ್ಕಿಯ್ ಮಕ್ಕಳನ್ನು ಕಟ್ಟಿಕೊಂಡು ಸ್ಟೋರಿಗೆ ನಾನೂ ಹೋಗಿದ್ದೆಖರೀದಿಸಿದ್ದು ಸ್ವೆಟರನ್ನು .ಎಕೆಬಿ
great …..very great….GT Sir
GTN's concern for the well- being of his fellow human beings was so simple that Madikeri honey as part of daily meals – earlier it was only a medicinal item in our house holds – became a routine in our homes. Any quantity of honey will be delivered by him with that transparent sincerity and love.Only GTN was capable of caring for our all round prosperity and health for so many years. Thus his memory is as sweet and delicious as that honey he made us to be addicted.
“ಹೆಸರುಂಟು ಬಂಡವಾಳ ಇಲ್ಲ, ಸಾಗುವ ಹುಮ್ಮಸ್ಸುಂಟು ಹಾದಿ ತಿಳಿದಿಲ್ಲ. ವ್ಯವಸ್ಥಿತ ಕಾರ್ಯದ ಗಟ್ಟಿ ಅಡಿಪಾಯವಿಲ್ಲದ ಉತ್ಸಾಹದ ನೊರೆ ಎಷ್ಟು ಎತ್ತರ ಏರಿದರೇನು ಫಲ?” ಎಂದು ವ್ಯಕ್ತ ಪಡಿಸಿದ ಜಿ.ಟಿ.ನಾರಾಯಣರ ಮನಃಸ್ಥಿತಿ ಸಮಂಜಸವಾಗಿದೆ. ಧನ್ಯವಾದಗಳು.