“ನಮ್ಮಯ ಕಾಲೇಜೂ ಮಹರಜ ಕಾಲೇಜೂ
ಕುವೆಂಪು ಶ್ರೀಗಳಂಥಾ ಕವಿಗಳಿದ್ದ ಕಾಲೇಜೂಊಊಊ …” (ಮಹಾರಾಜ ನೆನಪು ಮೊದಲ ಭಾಗ)
ಎಡಗಿವಿಯ ಮೇಲೆ ಕೈ ಇಟ್ಟು, ಬಲಗೈಯಲ್ಲಿ ಆಕಾಶ ತಿವಿದು, ಅರವತ್ತು-ಎಪ್ಪತ್ತರ ದಶಕದ ಸಿನಿಮಾಗಳ ಭಕ್ತಿಗಾನದ ಶೈಲಿಯಲ್ಲಿ (“ಶಿವಪ್ಪಾಆಆ ಕಾಯೋತಂದೇ” ಇಷ್ಟೈಲ್ ಅನ್ನಿ ಬೇಕಾದರೆ) ಮಾದೂ ನಾಭಿಯಿಂದಲೂ ಆಚಿನಿಂದ ರಾಗ ಎಳೆಯುತ್ತಿದ್ದರೆ ತರ್ಕಾತೀತವಾಗಿ ಮೊದ ಮೊದಲು ಸಹಪಾಠಿಗಳಾದ ನಮಗೆ (ವಿದ್ಯಾರ್ಥಿಗಳಿಗೆ) ರೋಮಾಂಚನವಾಗುತ್ತಿತ್ತು. ಅದೇನೋ (ಮೈಸೂರು) ಮಹಾರಾಜಾ ಕಾಲೇಜಿನ ಅಘೋಷಿತ ರಾಷ್ಠ್ರಗೀತೆಯಂತೆ ಯಾವುದೇ ಮಹತ್ತಿನ ಕಾರ್ಯಕ್ರಮಗಳಲ್ಲಿ ಮರುಕಳಿಸುತ್ತಲೇ ಇತ್ತು. ಭಾವಗೀತ ಸ್ಪರ್ಧೆಗಳಲ್ಲಿ, ಸಮೂಹಗಾನ ಸ್ಪರ್ಧೆಗಳಲ್ಲಿ ನಾನಿದ್ದ ಆ ಮೂರೂ ವರ್ಷಗಳಲ್ಲಿ (೧೯೬೯-೭೨) ಮತ್ತೆ ಮತ್ತೆ ಅನುರಣಿಸುತ್ತಿತ್ತು. ಆ ಸಾಹಿತ್ಯ-ರಾಗಗಳ ಅಧಿಕ ಪ್ರಾಶನದಿಂದ ಮುಂದೆ ಕಾಲೇಜಿನಲ್ಲಿ ಸಣ್ಣಪುಟ್ಟ ಗೊಂದಲಗಳಿಗೆ ದೀರ್ಘ ಗಂಟಾನಾದವಾದಾಗ ನಮ್ಮ ಅಣಕವಾಡಿನಲ್ಲೂ ‘ಮಹಾ ರಜ ಕಾಲೇಜೂ’ ನರಳಾಡುತ್ತಿತ್ತು! ಆದರೆ ಅನುಭವ ಮಾಗಿದಂತೆ, ಯಾವುದೇ ಸಂಸ್ಥೆಯ ಮಹತ್ತು ಕಟ್ಟಡ, ಸವಲತ್ತು, ಹೆಚ್ಚೇಕೆ ಇತಿಹಾಸದಿಂದಲೂ ವರ್ಧಿಸುವುದಿಲ್ಲ. ಅಂದಂದಿನ ಉಪಯುಕ್ತತೆ, ಅದಕ್ಕೊದಗುವ ವ್ಯಕ್ತಿ ಮತ್ತು ಚಟುವಟಿಕೆಗಳಲ್ಲಿ ಮಾತ್ರ ಇದೆ ಎಂದು ಸ್ಪಷ್ಟವಾಗುತ್ತ ಹೋಯಿತು. ಹಾಗಾಗಿ ಕಳೆದ ಸುಮಾರು ನಾಲ್ಕು ದಶಕಗಳ ಕಾಲ ನನ್ನ ಕೌಟುಂಬಿಕ ಅಗತ್ಯಗಳಿಗಾಗಿ ನಾನು ಎಷ್ಟೂ ಮೈಸೂರು ಕಂಡಿರಬಹುದಾದರೂ ಕಾಲೇಜಿನ ಪೌಳಿಯ ಹೊರಗಿನ ದಾರಿಗಳಲ್ಲಿ ಎಷ್ಟೂ ಓಡಾಡಿರಬಹುದಾದರೂ ಒಳಗೆ ನುಗ್ಗಿ ನೋಡುವ ಬಯಕೆ ಬಂದದ್ದೇ ಇಲ್ಲ. ವೃತ್ತಿರಂಗದಿಂದ ನಿವೃತ್ತಿಯೊಡನೆ ಮೊನ್ನೆ ಮೈಸೂರಿನಲ್ಲಿದ್ದಾಗ, ತುಸು ಬಿಡುವೂ ಸಿಕ್ಕಾಗ, ‘ಪೂರ್ವಾಶ್ರಮ’ದ ಕ್ಷೇತ್ರವನ್ನು ಸುಮ್ಮನೆ ‘ವಾಕಿಂಗಿನ’ ಅಂಗವಾಗಿ ಸುತ್ತು ಹಾಕಿದೆ.
ನಾಲ್ಕು ದಶಕಗಳ ನೆನಪಿನ ಕೋಠಿಗಳಳೊಗೆ ದೂಳು ಹೊಡೆಯುತ್ತಲಿದ್ದಾಗ ಅಲ್ಲಿ ಮತ್ತದೇ ಹಾಡು – ಮಹರಜ ಕಾಲೇಜೂ, ಅನೈಚ್ಛಿಕವಾಗಿ ಕೇಳುತ್ತಲೇ ಇದ್ದೆ! ಆಗ ದಕ್ಕಿದ ಕೆಲವು ಬಿಡಿಚಿತ್ರಗಳನ್ನು ನಿಮ್ಮ ಮುಂದೆ ಹರಡುತ್ತೇನೆ. ತಂದೆಯ ವೃತ್ತಿ ಅನುಸರಿಸಿಕೊಂಡೇ ನಮ್ಮ (ಅತ್ರಿಗಳ, ಅಂದರೆ ಮೂವರು ಸೋದರರ) ವಿದ್ಯಾಭ್ಯಾಸ ಮನೆಯಿಂದಲೇ ನಡೆದಿತ್ತು. ತಂದೆ ಮಡಿಕೇರಿ ಸರಕಾರೀ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ನನಗೆ ಕೋಟೆ ಬಳಿಯ ಯಾವುದೋ ಕ್ರಿಸ್ತ ಶಾಲೆಯೇ ಶಿಶುವಿಹಾರ. ಅದರ ವ್ಯವಸ್ಥಾಪಕ ಉದ್ದ ಗೌನು ಹಾಕಿಕೊಂಡಿದ್ದ ಪಾದ್ರಿಯಂತೆ. ಆತ ಗೌನಿನ ಒಳಗೇನಾದರೂ ಧರಿಸಿರಬಹುದೇ ಎಂಬ ಸಂದೇಹ ನನ್ನ ಬಾಲಮನಸ್ಸನ್ನು ಕಾಡಿತ್ತಂತೆ. ಹಾಗಾಗಿ ಆತ ಅಲ್ಲಿ ಇಲ್ಲಿ ಆಡುತ್ತಿದ್ದ ಮಕ್ಕಳ ನಡುವೆ ಸುತ್ತಾಡುತ್ತ ನನ್ನ ಬಳಿ ಬಂದಾಗ ಆಟದ ನೆಪದಲ್ಲೇ ನಾನು ನೆಲದಲ್ಲಿ ಮೈಚಾಚಿ ಇಣುಕಿದ್ದೆನಂತೆ!
ಒಂದರಿಂದ ನಾಲ್ಕನೇ ತರಗತಿವರೆಗೆ ಕಾಲೇಜಿಗೆ ಸಮೀಪವಾದ ಜೋಸೆಫ್ಸ್ (?) ಕಾನ್ವೆಂಟ್. ಅಲ್ಲಿ ನಮ್ಮ ಮನೆಗೆಲಸದ ರುಕ್ಮಿಣಿಯ ಸೋದರಳಿಯ ಕಡ್ಲೆವಾಸು (ಬಸ್ ನಿಲ್ದಾಣದಲ್ಲಿ ಕಡ್ಲೆ ಮಾರುವವನ ಮಗ) ನನಗೆ ಪ್ರಿಯ ಗೆಳೆಯ. ಆದರೆ ಕೋಪ ಬಂದಾಗ ಪರಸ್ಪರ “ವಾಸು ಗೀಸು, ಕಡ್ಲೆ ಹೂಸು”, “ಭಟ್ಟ ಭಟ್ಟ ಹೂಸು ಬಿಟ್ಟ, ಊರಿಗೆಲ್ಲಾ ನಾತ ಕೊಟ್ಟ” ವಿನಿಮಯಿಸಿಕೊಳ್ಳುವುದೂ ಇತ್ತು. ಕಾನ್ವೆಂಟಿನಲ್ಲಿ (ನಾಲ್ಕರಿಂದ ಮುಂದೆ) ‘ಉನ್ನತ ಶಿಕ್ಷಣ’ ಹುಡುಗಿಯರಿಗೆ ಮಾತ್ರ. ಐದನೇ ತರಗತಿಯನ್ನು ದೂರದ ಸರಕಾರೀ ಪ್ರೌಢಶಾಲೆಗೆ (ನನಗಿಂತ ಐದು ವರ್ಷ ಹಿರಿಯ) ಚಿಕ್ಕಪ್ಪ ದಿವಾಕರನೊಡನೆ ನಡೆದು ಹೋಗಿ ಪೂರೈಸಿದ್ದೆ. (ಆಗ ದಿವಾಕರನ ಸಹಪಾಠಿ ಹಸನ್ ಎಂಬಾತ ನನ್ನ ಲೆಕ್ಕಕ್ಕೆ ಅಪಾಪೋಲಿ. ಆತ ರಫ್ ಪುಸ್ತಕದಲ್ಲಿ ಕಮಲ, ಲಂಗ ಮತ್ತು ಎತ್ತಿನ ಚಿತ್ರ ಕ್ರಮವಾಗಿ ಬರೆದು, ಸೇರಿಸಿ ಓದಲು ಹೇಳುತ್ತಿದ್ದನಂತೆ!)
ತಂದೆ ಪೂರ್ಣಾವಧಿ ಎನ್ಸಿಸಿ ಅಧಿಕಾರಿಯಾಗಿ ಬಳ್ಳಾರಿಗೆ ಹೋದಾಗ ಆರು ಮತ್ತು ಏಳನೇ ತರಗತಿ ಅಲ್ಲಿನ ಕೋಟೆಯಲ್ಲಿದ್ದ ಸೈಂಟ್ ಜಾನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದೆ. (ಇಲ್ಲಿನ ‘ಸಾಹಸಗಳು’ ಅನೇಕವಿವೆ, ಮುಂದೆಂದಾದರೂ ವಿಸ್ತರಿಸುತ್ತೇನೆ!) ತಂದೆ ಮತ್ತೆ ಸರಕಾರೀ ಕಾಲೇಜಿನ (ಅಂದಿನ ಗ್ಯಾಸ್ ಕಾಲೇಜು) ಅಧ್ಯಾಪಕನಾಗಿ ಬೆಂಗಳೂರಿಗೆ ಬಂದಾಗ ಪ್ರೌಢಶಾಲೆಯ ಮೂರು ವರ್ಷಗಳನ್ನು ಬಸವನಗುಡಿಯ ಬೆಂಗಳೂರು ಹೈಸ್ಕೂಲ್ ಮತ್ತು ಪದವಿಪೂರ್ವ ಓದನ್ನು ತಂದೆಯ ಕಾಲೇಜಿನಲ್ಲೇ ಮಾಡಿದ್ದೆ. ನಾಲ್ಕನೇ ತರಗತಿಯವರೆಗಿನ ಪರೀಕ್ಷಾ ಫಲಿತಾಂಶಗಳು ನನ್ನನ್ನು ಲೆಕ್ಕದಲ್ಲಿ ಸ್ಟ್ರಾಂಗ್ ಎಂದಿತ್ತು; ಸದಾ ನೂರಕ್ಕೆ ನೂರು. ಗೊತ್ತಿಲ್ಲದವರು ‘ಲೆಕ್ಕದ ಮಾಸ್ಟ್ರ ಮಗ ಅಲ್ವಾ’ ಅಂದರು. (ತಮಾಷೆ ಎಂದರೆ ತಂದೆ ಮೊದಲೂ ಆಮೇಲೂ ನನ್ನ ಯಾವುದೇ ಪಾಠಪ್ರವಚನಗಳಲ್ಲಿ ತಲೆ ಹಾಕಿದ್ದಿಲ್ಲ!) ಅನಂತರ ಯಾಕೋ ನಾನು ‘ಲೆಕ್ಕ’ದಿಂದ ಭೀತನಾದೆ. ಒಂಬತ್ತನೇ ತರಗತಿಯಲ್ಲಿ ಐಚ್ಛಿಕಗಳನ್ನು ಆಯ್ದುಕೊಳ್ಳುವ ಕಾಲಕ್ಕೆ ಗಣಿತವನ್ನೇ ದೂರವಿಡುವ ಪ್ರಯತ್ನದಲ್ಲಿ ನನ್ನದು ಪೀಸೀಬಿ (ಭೌತ, ರಸಾಯನ ಮತ್ತು ಜೀವ ಶಾಸ್ತ್ರಗಳು). ಭೌತದೊಳಗಣ ಭೂತವಾಗಿ ಗಣಿತ ಕಾಡಿದ್ದಕ್ಕೆ ಜೀವನಾಂಶ ಪಡೆದು ಮೇಲೆ ಬಿದ್ದೆ. ಸಹಜವಾಗಿ ಪದವಿಪೂರ್ವದಲ್ಲಿ ಸೀಬೀಜೆಡ್ಡಿಗಿಳಿದೆ (ರಸಾಯನ, ಸಸ್ಯ ಮತ್ತು ಪ್ರಾಣಿಶಾಸ್ತ್ರ). ಅಲ್ಲಿ ರಸಾಯನದೊಳಗಿನ ಕಲ್ಲು (ಸೂತ್ರಗಳು, ಲೆಕ್ಕಗಳು) ನನ್ನ ಒಂದು ವರ್ಷವನ್ನೇ ತಡೆಹಿಡಿದಿತ್ತು (‘ಡುಮ್ಕಿಹೊಡೆದೆ’ ಎನ್ನುವ ಪದ ಆತ್ಮಗೌರವಕ್ಕೆ ಕುಂದಾಗುತ್ತದೆ)! ತಂದೆ ವಿಶ್ವವಿದ್ಯಾನಿಲಯದ ವಿಶ್ವಕೋಶ ಯೋಜನೆಗೊಪ್ಪಿ ಮೈಸೂರಿಗೆ ಬಂದಾಗ ನಾನು ವಿಜ್ಞಾನ ಕಾಲೇಜೆಂದೇ ಖ್ಯಾತವಾದ ಯುವರಾಜಾದತ್ತ ತಲೆಯೇ ಹಾಕಲಿಲ್ಲ. ಕಲಾ ಹಾಗೂ ವಾಣಿಜ್ಯ ಸ್ನಾತಕಪೂರ್ವ ಅಧ್ಯಾಪನಕ್ಕೆ ಹೆಸರಾಂತ ‘ಕುವೆಂಪು ಶ್ರೀಗಳಂಥಾ ಕವಿಗಳಿದ್ದ ಕಾಲೇಜೂ’ ರಾಗಕ್ಕೆ ಒಂದು ಧ್ವನಿಯಾಗಿ ಸೇರಿಬಿಟ್ಟಿದ್ದೆ.
ಅಗ್ನಿಶಾಮಕ ದಳದ ಎದುರಿನ ದಾರಿಯಲ್ಲಿ ಹೋಗುವಾಗಲೇ ಎಡಕ್ಕೆ ವಿಸ್ತಾರ ಕಾಲೇಜು ಮೈದಾನ. ಆ ಕೊನೆಯ ವೃತ್ತದ ಬಲಮೂಲೆ ವಿದ್ಯಾರ್ಥಿ ನಿಲಯದ್ದು, ಎಡಮೂಲೆ ಕಾಲೇಜಿನದ್ದು. ಈ ಹುಡುಗರ ಹಾಸ್ಟೆಲ್ ನನಗೆ ಯಾವತ್ತೂ ‘ಮಾಯಾಮಂದಿರ’ದ್ದೇ ನೆನಪು! ದಕ ಜಿಲ್ಲೆಯ ಮೂಲೆಯೆಲ್ಲಿಂದಲೋ ಬಂದ ಇಬ್ಬರು ಅಷ್ಟೇನೂ ಅನುಕೂಲಸ್ಥರಲ್ಲದ ತರುಣರು – ಶಂಕರ್ ಮತ್ತು ಮೂರ್ತಿ ಅಲ್ಲಿದ್ದರು. ನನಗೆ ನೆನಪಿದ್ದಂತೆ ಅವರು ಮೂರೂ ವರ್ಷ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ತುಂಬಿದ ಗೃಹಗಳ ಇಂದ್ರಜಾಲ ಪ್ರದರ್ಶನ ಕೊಟ್ಟು ಬೆರಗು ತುಂಬಿಬಿಟ್ಟಿದ್ದರು. ಆಗ ನಾನು ಹಿಂದೆ ಬಿಟ್ಟು ಅವರನ್ನು ಗೆಳೆಯರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದೆ. ಆದರೆ ಅವರೆದುರು ಹಾಗೆ ತೋರಿಸಿಕೊಳ್ಳುವಷ್ಟು ಒಡನಾಟವೇನೂ ಇರಲಿಲ್ಲ. ಇವರ ನೆಪದಲ್ಲಿ ನಾನು ಮಾನಸ ಗಂಗೋತ್ರಿಯ ಗ್ರಂಥ ಭಂಡಾರದಲ್ಲಿ ಹುಡುಕಿ ಪಿ.ಸಿ ಸರ್ಕಾರ್ ಮತ್ತು ಇನ್ನೂ ಯಾರೋ ಬರೆದ ಇಂದ್ರಜಾಲದ ಬಗೆಗಿನ ಪುಸ್ತಕಗಳನ್ನು ಗುರುತಿಸಿ, ರಾಜರಹಸ್ಯ ಕಂಡುಹಿಡಿದ ಭ್ರಮೆಯಲ್ಲಿದ್ದೆ. ಮ್ಯಾಜಿಕ್ ಬರಿಯ ಕಣ್ಕಟ್ಟು ಎಂದು ಸ್ಪಷ್ಟ ಗೊತ್ತಿದ್ದರೂ ಆ ಪುಸ್ತಕದ ಇರವಿನ ಬಗ್ಗೆ ಶಂಕರ್ಗೆ ತಿಳಿಸಲು ನನಗೇನೋ ಅಳುಕು. ‘ವ್ಯಾಪಾರೀ ಗುಟ್ಟು’ ಬಯಲಾದೀತೆಂಬ ಭಯದಲ್ಲಿ ಆತ ಕೋಪಿಸಿಕೊಳ್ಳಬಹುದು, ಪುಸ್ತಕವನ್ನೇ ಮಾಯ ಮಾಡಬಹುದು ಎಂದೆಲ್ಲಾ ಯೋಚಿಸಿದ್ದೆ.
ಆದರೆ ವೃತ್ತಿಯಾಗಿ ಇಂದ್ರಜಾಲ ಮತ್ತು ಕಳ್ಳತನಗಳ ನಡುವಣ ವ್ಯತ್ಯಾಸ ಶಂಕರ್ಗೆ ಚೆನ್ನಾಗಿ ಗೊತ್ತಿತ್ತು. ನಾನು ಆ ಪುಸ್ತಕದ ಬಗ್ಗೆ ಅವರಿಗೆ ತಿಳಿಸಿದಾಗ ನಿರ್ಮಲ ನಗೆ ಮಾತ್ರ ಕೊಟ್ಟಿದ್ದರು. ಮುಂದೆ ನಾನೇ ಪುಸ್ತಕದಂಗಡಿ ಇಟ್ಟು, ಇಂದ್ರಜಾಲ ಪುಸ್ತಕಗಳ ಒಂದು ಖಾಯಂ ಅಂಕಣವನ್ನೇ ಇಟ್ಟು ಚೆನ್ನಾಗಿಯೇ ವ್ಯಾಪಾರ ನಡೆಸಿದಾಗ ಶಂಕರ್ ನಗೆಯ ಅರ್ಥ ಹೊಳೆದಿತ್ತು – ಅಡುಗೆ ಪುಸ್ತಕ ಇಟ್ಟುಕೊಂಡವರೆಲ್ಲ ನಳ ವಲಲರೇನೂ ಆಗುವುದಿಲ್ಲ! (ಮುಂದೆ ಶಂಕರ್, ಮೂರ್ತಿ ವೃತ್ತಿಪರ ಐಂದ್ರಜಾಲಿಕರಾಗಿ ಸಿಂಡಿಕೇಟ್ ಬ್ಯಾಂಕ್ ಸೇರಿದ್ದು, ಸ್ವಯಂನಿವೃತ್ತಿ ಪಡೆದದ್ದು, ನಿಃಸಂಖ್ಯಾ ಇಂದ್ರಜಾಲ ಪ್ರದರ್ಶನಗಳನ್ನು ನೀಡುತ್ತ ದೇಶವಿದೇಶ ಸುತ್ತಿದ್ದು, ಎಲ್ಲವನ್ನೂ ಮೀರಿ ಇಂದ್ರಜಾಲದ ಬಹು ದೊಡ್ಡ ಕುಟುಂಬವನ್ನೇ ಕಟ್ಟಿಕೊಂಡದ್ದೆಲ್ಲಾ ನೀವು ಕಂಡಂತೇ ಇದೆ. ಪ್ರೊ| ಶಂಕರ್, ದೇರಾಜೆ ಕೃಷ್ಣಮೂರ್ತಿ ಅಂದು ನನ್ನ ಸಹಪಾಠಿಗಳು ಎನ್ನುವುದು ಆಕಸ್ಮಿಕ. ಇಂದು ಅವರು ಮಕ್ಕಳು ಮೊಮ್ಮಕ್ಕಳ ಸಹಿತ ನನ್ನ ಆತ್ಮೀಯ ಗೆಳೆಯರು ಎನ್ನುವುದು ವಾಸ್ತವ.)
ಬನ್ನಿ, ಎಡದ ಗೇಟಿನಲ್ಲಿ ಒಳಗೆ ಹೋಗೋಣ. ಅರಮನೆಗೆ ಅಥವಾ ಚಾಮುಂಡಿ ಬೆಟ್ಟಕ್ಕೆ ಮುಖ ಹಾಕಿದಂತೆ ಇರುವ ಮಹಾರಾಜ ಕಾಲೇಜು ವಠಾರಕ್ಕೆ ಎರಡೆರಡು ಭವ್ಯ ಪ್ರವೇಶ ಝಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆಯಿಂದೇನೋ (ಚಪ್ಪೆಯಾಗಿ ಜೆ.ಎಲ್ ರೋಡ್ ಎಂದೀರಾ ಮತ್ತೆ!) ಇದೆ. ಆದರೆ ಸರಸ್ವತೀಪುರಂ ವಲಯದವರಿಗೂ (ಆಗ ಅದರಿಂದಾಚೆಗೆ ನಗರ ಬೆಳೆದಿರಲಿಲ್ಲ) ವಿದ್ಯಾರ್ಥಿ ನಿಲಯದವರಿಗೂ ಒದಗುತ್ತಿದ್ದದ್ದು ಪ್ರಸ್ತುತ ಎಡದಾರಿ. ವಿದ್ಯಾರ್ಥಿ ನಿಲಯ ವಿಶೇಷ ‘ರುಚಿ’ಯಿಲ್ಲದ ಒಂದು ಕಟ್ಟಡ. ಆದರೆ ಕಾಲೇಜು ವಠಾರದೊಳಗಿನ ಬಹುತೇಕ ರಚನೆಗಳು ಮೈಸೂರರಸರ ಭವ್ಯತೆಗನುಗುಣವಾಗಿಯೇ ಶೋಭಿಸುತ್ತವೆ. ಅಗತ್ಯಗಳಿಗನುಗುಣವಾಗಿ ಒಳಾಲಂಕಾರ, ಅಲ್ಲ ದೊಡ್ಡ ಶಬ್ದವಾಯಿತು – ಅಡ್ಡ ತಡಿಕೆ, ವಯರ್ ಎಳೆದಾಟ, ಕಪ್ಪಿಟ್ಟ ಟ್ಯೂಬ್, ಕಸ, ಬಲೆ ಇತ್ಯಾದಿ ವ್ಯವಸ್ಥೆಗಳು ಮಾತ್ರ ಆಧುನಿಕ!
ಮೊದಲ ಕಟ್ಟಡ ಸ್ನಾತಕ ವಿದ್ಯಾರ್ಥಿಗಳ ಗ್ರಂಥಾಲಯ. ಬಿಗಿದು ತುಂಬಿದ ಕಪಾಟು, ಲೆಕ್ಕಾಚಾರದ ವಹಿವಾಟುಗಳಿದ್ದ ಇದರ ಬಳಕೆ ನಾನು ಪಡೆದುಕೊಂಡದ್ದು ತುಂಬಾ ಕಡಿಮೆ. ಬದಲಿಗೆ ಮಾನಸ ಗಂಗೋತ್ರಿಯಲ್ಲಿದ್ದ ಹೆಚ್ಚು ಆಧುನಿಕ ಮತ್ತು ಸುವಿಸ್ತಾರ ಸ್ನಾತಕೋತ್ತರ ಗ್ರಂಥಾಲಯ ನನಗೆ ಅಚ್ಚುಮೆಚ್ಚಿನದಾಗಿತ್ತು. ಕಾಲೇಜಿನದ್ದರಂತೆ ಪುಸ್ತಕ ಎರವಲು ಪಡೆಯುವ ಅವಕಾಶವಿಲ್ಲದಿದ್ದರೂ ಅಲ್ಲಿನ ಪರಿಸರ ನನಗೆ ಹೆಚ್ಚು ಪ್ರಿಯವಾಗುತ್ತಿತ್ತು. ಅಲ್ಲಿನ ನಿಯತಕಾಲಿಕಗಳ ವಿಭಾಗ, ವಿಸ್ತಾರ ಕನ್ನಡ ವಿಭಾಗ, ಹಳೇ ಪತ್ರಿಕೆಗಳನ್ನು ಪರಿಶೀಲಿಸುವ ಸೌಲಭ್ಯ, ಹಲವು ಅಂತಸ್ತುಗಳಲ್ಲಿ, ಕಪಾಟುಗಳಲ್ಲಿ ವಿಷಯವಾರು ಕಳೆದು ಹೋಗಿ ಇಂಗ್ಲಿಷ್ ಪುಸ್ತಕಗಳನ್ನು ಆಸ್ವಾದಿಸುವ ಸಂತೋಷ, ಬೇಕಾದವನ್ನು ಎಳೆದು ತಂದು ವಿಶಾಲ ಓದು ಕೊಠಡಿಗಳ ಮೇಜು ಕುರ್ಚಿಗಳಲ್ಲಿ ಕುಳಿತು ಒಳಕ್ಕಿಳಿಯುವ ಆನಂದ ನನಗೆ ಹೆಚ್ಚು ಪ್ರಿಯವಾಗುತ್ತಿತ್ತು. ಓ ಏನೋ ತೋರಿಸಿ ಏನೋ ಹೇಳಿದೆ, ಬಿಡಿ, ಮುಂದಿನ ಕಟ್ಟಡಕ್ಕೆ ಹೋಗೋಣ.
ಬೆಂಗಳೂರಿನಲ್ಲಿ ಗಣಿತಾಧ್ಯಾಪಕರಾಗಿದ್ದ ನನ್ನ ತಂದೆಯನ್ನು ವಿಶ್ವಕೋಶದ ನೆಪದಲ್ಲಿ ಪೂರ್ಣ ಕನ್ನಡಕ್ಕೂ ಮೈಸೂರಿಗೂ ಎಳೆದವರು ಕುಲಪತಿ ದೇಜಗೌ. ಅವರ ಪ್ರತಿನಿಧಿಯಾಗಿ ನಮಗೆ ಮನೆ ಇತ್ಯಾದಿ ಸೌಕರ್ಯ ಒದಗಿಸಲು ಸಮರ್ಥ ಮಧ್ಯವರ್ತಿಯಾಗಿಯೂ ರೈಲ್ವೇ ನಿಲ್ದಾಣದಲ್ಲಿ ಕಾದು ನಿಂತು ಟಾಂಗಾ ಮಾಡಿ ಕೊಟ್ಟು ಮನೆಸೇರಿಸುವವರೆಗೂ ಕೈಂಕರ್ಯಕ್ಕೆ ನಿಂತವರು, ಪರಮ ಸಜ್ಜನ ಮತ್ತು ಅಪ್ಪಟ ಪ್ರೇಮಮಯಿ ವ್ಯಕ್ತಿ ಕೆ. ಆರ್. ರಾಘವೇಂದ್ರ ರಾವ್. ಅಂದು ಪೈಜಾಮ, ರೇಶಿಮೆ ಜುಬ್ಬಾ ಹಾಕಿ ಪೂರ್ವ ಪರಿಚಯ, ಸ್ನೇಹಾಚಾರವೇನೂ ಇಲ್ಲದಿದ್ದರೂ ಚಿನ್ನದ ಕಟ್ಟಿನ ಕನ್ನಡಕದ ಶೋಭೆಯ ಮುಖವೆಲ್ಲಾ ಪ್ರಾಮಾಣಿಕ ನಗೆ ತುಂಬಿ, ನಡೆಯುವುದಕ್ಕಿಂತ ಹೆಚ್ಚಿಗೆ ಪುಟಿಯುತ್ತಿದ್ದ ಇವರು ಮಹಾರಾಜಾ ಕಾಲೇಜಿನಲ್ಲಿ ಗೌರವಾನ್ವಿತ ಕನ್ನಡ ಅಧ್ಯಾಪಕರು. ರಾಘವೇಂದ್ರ ರಾಯರ ಒಳ್ಳೇತನ ಮತ್ತು ಕನ್ನಡ ಪ್ರೀತಿ ನಾನು ಕನ್ನಡ ಐಚ್ಛಿಕ ತೆಗೆದುಕೊಂಡ ಒಂದೇ ಕಾರಣಕ್ಕೆ ನನ್ನನ್ನೂ ಆವರಿಸಿಬಿಟ್ಟಿತ್ತು. ಕನ್ನಡ ವಿಭಾಗದೊಳಗೆ ನನ್ನ ತಂದೆಯ ಕೀರ್ತಿಯನ್ನೆಲ್ಲಾ ನನಗೆ ಆರೋಪಿಸಿಬಿಟ್ಟಿತ್ತು!! ಸಹಜವಾಗಿ ವಿಭಾಗ ಮುಖ್ಯಸ್ಥ ಪ್ರೊ| ಎಸ್. ನಾರಾಯಣ ಶೆಟ್ಟರಿಗೆ (ಸುಜನಾ) ನಾನು ಪ್ರಥಮ ದರ್ಶನದಿಂದಲೇ ‘ಪ್ರೀತಿಯ ರಾಜ!’
ಕಾಲೇಜ್ ವಠಾರದೊಳಗಿನ ಎರಡನೇ ಕಟ್ಟಡ ನನ್ನ ಮೊದಲ ವರ್ಷದ ಕನ್ನಡ ಐಚ್ಛಿಕ ತರಗತಿಗೆ ಒದಗುತ್ತಿತ್ತು. ಅಲ್ಲಿ ಸುಜನಾ ನಮಗೆ ಕುವೆಂಪು ವಿರಚಿತ ಚಿತ್ರಾಂಗದಾ ಪಾಠ ಶುರು ಮಾಡಿದ್ದರು. ಸುಜನಾ ಕುವೆಂಪು ಅವರ ಆರಾಧಕ ಶಿಷ್ಯರಲ್ಲೊಬ್ಬರು, ಕವಿ, ಭಾವಜೀವಿ. ನನ್ನ ತಂದೆಯೂ ಕುವೆಂಪು ಅಭಿಮಾನಿ ಎಂದು ತಿಳಿದದ್ದಕ್ಕೇ ನನಗೆ ‘ರಾಜಾ’ಗಿರಿಯೂ ಒಂದೆರಡು ಸಂದರ್ಭಗಳಲ್ಲಿ ನನಗೆ ಅತೀವ ಮುಜುಗರವಾಗುವಂತೆ ಅವರು ಬಿಸಿ ಅಪ್ಪುಗೆ ಕೊಟ್ಟದ್ದೂ ಇತ್ತು. ಅದೆಲ್ಲಾ ಏನೇ ಇದ್ದರೂ…
ನಾರಾಯಣ ಶೆಟ್ಟರಿಗೆ ಸಮಯದ ಶಿಸ್ತು ಇರಲಿಲ್ಲ. ಹೆಚ್ಚಿನ ತರಗತಿಗಳಿಗೆ ತಡವಾಗಿ ಬರುತ್ತಿದ್ದರು. ಅದೆಷ್ಟೆಂದರೆ ವಿದ್ಯಾರ್ಥಿಗಳು ಕಾದೂ ಕಾದೂ ಇನ್ನಿವರು ಬರುವುದಿಲ್ಲವೆಂದು ಅಂದಾಜಿಸಿ, ಎಲ್ಲೆಲ್ಲೋ ಚದುರಿದ್ದಾಗ, ಅಂದರೆ ಸಮಯದ ಮುಕ್ಕಾಲು ಮೂರುವೀಸಾ ಪಾಲು ಮುಗಿಯಿತೆನ್ನುವಾಗ ಅದೆಲ್ಲಿಂದಲೋ ನೇರ ಸ್ಕೂಟರಿನಲ್ಲಿ ತರಗತಿ ಬಾಗಿಲಿಗೆ ಬಂದಿಳಿಯುತ್ತಿದ್ದರು. ತರಗತಿಯಲ್ಲೇ ಉಳಿದು ಲೊಟ್ಟೆಲಸ್ಕಿನಲ್ಲಿ ಸಮಯ ಕಳೆಯುತ್ತಿದ್ದ ಹತ್ತೆಂಟು ವಿದ್ಯಾರ್ಥಿಗಳಲ್ಲಿ ಯಾರಿಂದಲೋ ಹಾಜರಿ ಪುಸ್ತಕ ತರಿಸಿ, ಇನ್ಯಾರಿಂದಲೋ ಪಠ್ಯ ಪುಸ್ತಕ ಎರವಲು ಪಡೆದು ನೇರ ಪಾಠಕ್ಕಿಳಿಯುತ್ತಿದ್ದರು. ಅವರ ಕುವೆಂಪು ಒಡನಾಟ, ವಿಸ್ತಾರ ಓದುವಣಿಗೆ, ಕವಿ ಹೃದಯ ಎಲ್ಲಾ ಸೇರಿ ಪಾಠವೇನೋ ಒಂದು ಮಹಾ ಪ್ರವಾಹದಂತೆ ಭೋರ್ಗರೆಯುತ್ತಿತ್ತು. ಆದರೆ ಸಾಹಿತ್ಯ ಭಾಷೆಯ ಪ್ರವೇಶವೇ ಸರಿಯಾಗಿ ಆಗದ ನಮ್ಮ ಎಳಸು ಮನಗಳಿಗೆ ಪುಣ್ಯಸ್ನಾನ ಬಯಸಿ (ಕೇದಾರಕ್ಕೆ) ನಿಂತವರಿಗೆ ಸುನಾಮಿ ಹೊಡೆತ ಕಂಡಾಗಿನ ಬೆರಗನ್ನಷ್ಟೇ ಉಳಿಸುತ್ತಿತ್ತು. ಪ್ರತಿಬಾರಿಯೂ ತರಗತಿ ಮುಗಿದ ಮೇಲೆ ನಾವು ಇನ್ನೂ ಮೊದಲ ನಾಲ್ಕು ಪುಟವನ್ನೇ ದಾಟಿಲ್ಲ, ಪರೀಕ್ಷೆಗೆ ಬರೆಯುವುದೇನು ಎನ್ನುವ ಭೀತಿ ಕಾಡುತ್ತಲೇ ಇತ್ತು. (ಆದರ್ಶದ ಮಾತುಗಳನ್ನು ಬಿಡಿ, ಇಂದು ಎಂಎ, ಪೀಎಚ್ಡಿಗಳೂ ಅವಧಿ ಮುಗಿದಾಗಿನ ಫಲಿತಾಂಶ ಕೇಂದ್ರಿತವಾಗಿಯೇ ನಡೆದಿವೆ! ‘ಅಂದ ಕಾಲತ್ತಿಲೇ’ ಗೆಳೆಯ ಪಂಡಿತಾರಾಧ್ಯರು “ಮಾಸ್ಟರ್ಸ್ ಡಿಗ್ರಿನಲ್ಲೇ ಇವ್ರು ಕಾವ್ಯಗಳನ್ನು ಮೂಲದಲ್ಲಿ ಓದಿ ಅರ್ಥ ಮಾಡಿಕೊಳ್ಳಲ್ಲಾಂದ್ರೆ ಇನ್ಯಾವಾಗ ಓದ್ತಾರೆ” ಎಂದು ಎಷ್ಟೋ ಬಾರಿ ಹತಾಶೆಯಲ್ಲಿ ನುಡಿಯುವುದು ಕೇಳಿದ್ದೆ.)
ವರ್ಷದ ಕೊನೆ ಹತ್ತಿರ ಬರುತ್ತಿದ್ದಂತೆ ಚಿತ್ರಾಂಗದಾ ಐವತ್ತು ಸಾಲಿನಿಂದ ಮುಂದೆ ಪಾಠ ಬೆಳೆದಿರಲಿಲ್ಲ. ನನ್ನಲ್ಲಿ ಅಸಹನೆ ಕುದಿದು ಸುಜನಾರ ವಿರುದ್ಧ ಕಾಲೇಜು ಪ್ರಾಂಶುಪಾಲರಿಗೆ ಒಂದು ಮೂಗರ್ಜಿ ಬರೆದೆ. ಸಮಯದ ಅಶಿಸ್ತು, ವರ್ಷ ಮುಗಿಯುತ್ತಾ ಬರುತ್ತಿದ್ದರೂ ಮುಂದುವರಿಯದ ಪಾಠ ಎಂಬೆರಡು ನಮ್ಮ ಆತಂಕಗಳಿಗೆ ಮಾತ್ರ ಮಾತು ಕೊಟ್ಟಿದ್ದೆ. ಆದರೂ ನನ್ನೆರಡು ಆಪ್ತಮಿತ್ರರು – ಕೃಷ್ಣಮ್ಮಾಚಾರ್ ಮತ್ತು ಗೋವಿಂದನ್ಗೆ ಅದನ್ನು ತೋರಿಸಿ ಅನುಮೋದನೆ ಪಡೆದೆ. ಮತ್ತೆ ಯಾರ ಗಮನಕ್ಕೂ ಬಾರದಂತೆ ಪ್ರಾಂಶುಪಾಲರ ಪತ್ರ ಪೆಟ್ಟಿಗೆಗೆ ತುರುಕಿಬಿಟ್ಟೆ.
ಎರಡೋ ಮೂರೋ ದಿನ ಕಳೆದು ಸುಜನಾ ತರಗತಿ ಇತ್ತು. ಆಶ್ಚರ್ಯಕರವಾಗಿ ಅವರು ವಿಭಾಗದಲ್ಲೇ ಇದ್ದರು ಮತ್ತು ನಮ್ಮ ತರಗತಿಯ ವಿದ್ಯಾರ್ಥಿ ಮುಖ್ಯಸ್ಥನನ್ನು ಕರೆಸಿಕೊಂಡರು. ಐದೇ ಮಿನಿಟಿನಲ್ಲಿ ಕೆಂಪೇರಿದ್ದ ‘ನಾಯಕ’ ಬಂದವನೇ ‘ಖನ್ನಡ ಇತ ರಕ್ಸಣಾ ಸಂತಿ’ಯವನ ಹಾಗೆ ಗುಟುರು ಹಾಕಿದ “ಮೇಷ್ಟ್ರ ವಿರುದ್ಧ ಯಾವ್ನೋ ಪ್ರಿಂಸಿಪಾಲ್ರಿಗೆ ಅನಾಮ್ದೇಯ ಕಾಗ್ದಾ ಬರ್ದವ್ನಂತೆ. ಅವ್ನು ಕ್ಸಮೇ ಕೇಳ್ದೇ ಮೇಷ್ಟ್ರು ಕ್ಲಾಸ್ಗೇ ಬರಲ್ವಂತೆ. ನಿಜಾ ಹೇಳಿ ಯಾರು?” ನಮ್ಮನ್ನೂ ಸೇರಿಸಿದಂತೆ ತರಗತಿ ಮೌನವಾಗಿತ್ತು. ನಾಯಿ-ಕತ್ವದ ಗುಣ ರೂಢಿಸಿಕೊಳ್ಳುತ್ತಿದ್ದ ಆತ ಮುಂದುವರಿಸಿದ “ನಾನು ಮೇಷ್ಟ್ರ್ ಕೈಯಿಂದ ಕಾಗ್ದಾ ಇಸ್ಕಂಡ್ ಬಂದು ಹ್ಯಾಂಡ್ ರೈಟಿಂಗ್ ನೋಡ್ತೀನಿ. ನೀ ಎಂಗೇ ಇರು ಬೋಳೀ ಮಗ್ನೇ ನಾ ಪತ್ತೆಮಾಡ್ತೀನಲೇ…” ನಾಲಿಗೆ ಸಂಸ್ಕಾರ ಹೇಳಿತು ಎಂದು ನಾವು ಸುಮ್ಮನೇ ಇದ್ದೆವು. ಸುಜನಾ ಇವನಿಗೆ ಸಿಗಲಿಲ್ಲವೋ ಪತ್ರ ಕೊಡಲಿಲ್ಲವೋ ಅಂತೂ ಅಂದು ತರಗತಿಯಲ್ಲಿ ಬೇರೇನೂ ಘಟಿಸಲಿಲ್ಲ. ನನಗೆ ‘ಕನ್ನಡಾಂದ್ರೆ ಬೊಂಬಡಾ’ ಎನ್ನುವ ಸಹಪಾಠಿಯ ಕುರಿತು ತುಸು ಆತಂಕವಾಗಿತ್ತು. ಆದರೆ ನನ್ನ ನಿಲವಿನ ಬಗ್ಗೆ ವಿಷಾದವೇನೂ ಇಲ್ಲದ್ದಕ್ಕೆ, ಪ್ರಾಂಶುಪಾಲರಿಗೆ ಇನ್ನೊಂದೇ ಅನಾಮಧೇಯ ಪತ್ರ ಬರೆದೆ. ಮೇಷ್ಟ್ರ ಹಠ ಮತ್ತು ಸಹಪಾಠಿಗಳ ಹುಂಬತನ ನನಗೆ ತಂದ ಆತಂಕವನ್ನು ನಿವೇದಿಸಿಕೊಂಡೆ. ಮತ್ತೊಂದೋ ಎರಡೋ ಸುಜನಾ ತರಗತಿ ಖಾಲೀ ಹೋಗಿರಬೇಕು. ನಾಯಕ ಶಿಖಾಮಣಿಯ ಆರ್ಭಟೆ, ಆವುಟ ಚುನಾವಣಾ ಕಾಲದ ಆಶ್ವಾಸನೆಗಳಂತೇ ಠುಸ್ಸಾಗಿತ್ತು. ತೆರೆಮರೆಯ ವ್ಯವಸ್ಥೆಗಳೇನಾದವೋ ನನಗೆ ತಿಳಿದಿಲ್ಲ. ಆದರೆ ಮೂರು ನಾಲ್ಕು ದಿನ ಕಳೆದು ಸುಜನಾ ತಣ್ಣಗೆ ತರಗತಿಗೆ ಬಂದು ಪಾಠ ಮುಂದುವರಿಸಿದರು. ಹೋಗುವ ಮುನ್ನ ‘ಅನಾಮಧೇಯ ಪಾಪಿಗೆ ಶಾಪ’ ಹಾಕುವುದನ್ನು ಮಾತ್ರ ಮರೆಯಲಿಲ್ಲ.
ಮುಂದಿನ ದಿನಗಳಲ್ಲೂ (ಒಟ್ಟು ಮೂರು ವರ್ಷ) ಸುಜನಾ ನನ್ನನ್ನು ಎಂದಿನಂತೇ ಆತ್ಮೀಯವಾಗಿಯೇ ಕಾಣುತ್ತಲಿದ್ದರು. ನಾನು ಪುಸ್ತಕ ವ್ಯಾಪಾರಿಯಾದ ಮೇಲೆ ಅವರ ಕಾವ್ಯ ಪ್ರಕಟವಾದಾಗ ಪತ್ರ ವ್ಯವಹಾರ ಮಾಡಿದ್ದೆ. ಪ್ರಕಾಶಕ ಡಿವಿಕೆಯವರಿಂದ ಪ್ರತಿಗಳನ್ನು ತರಿಸಿ ಮಾರಿದ್ದೆ. ನನ್ನ ತಂದೆ ತೀರಿಹೋದ ದಿನ ಸುಜನಾ ಪ್ರಾಯ ಸಹಜವಾದ ಅತೀವ ಬಳಲಿಕೆಯೊಡನೆಯೂ ‘ಅಂತಿಮ ದರ್ಶನ’ಕ್ಕೆ ಬಂದು ಹೋಗಿದ್ದರು. ಮುಂದೆ ತೀರಿಯೂ ಹೋದರು. ನನ್ನ ಅನಾಮಧೇಯ ಪತ್ರದ ಬಗ್ಗೆ ನನಗೆಂದೂ ಪಶ್ಚಾತ್ತಾಪ ಆಗಿಲ್ಲ. ಆದರೆ ಆ ಉದ್ದಕ್ಕೂ ಅವರು ನನ್ನ ಮೇಲಿಟ್ಟ ನಿಷ್ಕಾರಣ ಪ್ರೀತಿಗೆ ನನ್ನ ‘ಅಪರಾಧ’ವನ್ನಷ್ಟು ಒಪ್ಪಿಸಿಬಿಡಬೇಕು ಎಂದು ಪ್ರಯತ್ನ ನಡೆಸಿಯೇ ಇದ್ದೆ. ಆದರೆ ಯೋಚಿಸಿದಷ್ಟೂ ಸಲ ಮಾತು ಸಿಗದೇ ಹೋಯ್ತು, ವಿಷಾದ ಉಳಿದೇ ಹೋಯಿತು.
ಕನ್ನಡ ತರಗತಿಯ ಈಚೆಗೆ ಕಾಲೇಜ್ ಕ್ಯಾಂಟೀನ್. ಎನ್ಸಿಸಿಯ ಉಪಾಹಾರದ ಚೀಟಿಯಿಲ್ಲದೆ ನಾನು ಅದನ್ನು ಬಳಸಿದ್ದು ಇಲ್ಲವೇ ಇಲ್ಲ. ಆದರೆ ಅದರ ಹಿತ್ತಿಲಿನ ಈ ದೊಡ್ಡ ಮರ ಇದೆ ನೋಡಿ, ಅಂದು ಬರಿಯ ಮರವೇ ಆಗಿತ್ತು. (ಆದರೀಗ ಯಾವುದೇ ಸೌಂದರ್ಯ ಪ್ರಜ್ಞೆಯಿಲ್ಲದೆ ಕೊಳಕಾಗಿ ಏನೋ ಸೋಮಾರಿಕಟ್ಟೆ, ‘ದನದ ಕೊಟ್ಟಿಗೆ’ ಕಟ್ಟಿಟ್ಟಿದ್ದಾರೆ!) ಇಂದು ಆ ಮರ ನೆನಪಿನ ಕೊಂಡಿಯೊಂದನ್ನು ಎಳೆಯುತ್ತಿದೆ… ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಹೌದು ಹಿಂದಿನ ಮೈಸೂರರಸರ ಮಗ, ನನ್ನ ಸಹಪಾಠಿ. ಆ ಕಾಲದಲ್ಲಿ ಪ್ರಥಮ ಬೀಯೆ ಒಂದರಲ್ಲೇ ಐದೋ ಆರೋ ವಿಭಾಗಗಳಿದ್ದವು. ಅಕಾರಾದಿ ಬಲದಲ್ಲಿ ನಾನು ಎ ವಿಭಾಗದಲ್ಲಿ, ಶ್ರೀಕಂಠ ಕೊನೆಯಲ್ಲೆಲ್ಲೋ. ಆದರೆ ಇಪ್ಪತ್ತೋ ಮೂವತ್ತೋ ಮಂದಿಯಷ್ಟೇ ಇದ್ದ ಐಚ್ಛಿಕ ವಿಷಯ ಇಂಗ್ಲಿಷಿನಲ್ಲಿ ಮಾತ್ರ ನಾವು ಒಂದೇ ತರಗತಿಯಲ್ಲಿ ಸೇರುತ್ತಿದ್ದೆವು. ಶಾಸನದನ್ವಯ ‘ಶ್ರೀಕಂಠ. . . ಯರ್’ ಒಂದು ವಿದ್ಯಾರ್ಥಿ ಹೆಸರು ಮಾತ್ರ. ಆದರೆ ಆತನ ಕೌಟುಂಬಿಕ ಮತ್ತು ಸಾಂಪ್ರದಾಯಿಕ ಮೈಸೂರಿನ ವಾತಾವರಣಕ್ಕೆ ‘ಹಿಸ್ ಹೈನೆಸ್ ಪ್ರಿನ್ಸ್…’ ಎಂಬಿತ್ಯಾದಿ ಗೌರವ ಕಳಚಿ ನೋಡುವುದಾಗಲೀ ಈತ ನಡೆದುಕೊಳ್ಳುವುದಾಗಲೀ ಸಾಧ್ಯವೇ ಇರಲಿಲ್ಲ! ಇದರ ಅರಿವು ನನಗೆ ಸ್ವಲ್ಪವೂ ಇರಲಿಲ್ಲ. ಮೊದಲ ತರಗತಿಯಲ್ಲಿ ಈತ ಎಲ್ಲರಂತೆ ಎಲ್ಲೋ ಸಾಮಾನ್ಯ ಬೆಂಚಿನ ಮೇಲೇ ಯಾರ್ಯಾರೋ ಹುಡುಗರ ಜತೆಯೇ ಕುಳಿತಿದ್ದ. ಪಾಠಕ್ಕೆ ಬಂದ ಹಿರಿಯ ಅಧ್ಯಾಪಕ ಹಾಜರಿ ಕರೆಯುತ್ತಾ ಶ್ರೀ… ಬರುವಾಗ ಒಮ್ಮೆಗೇ ಈತನನ್ನು ಗುರುತಿಸಿದರು. ಕೂಡಲೇ ಬಲು ವಿನೀತವಾಗಿ ಆ ಹಿರಿಯ ಪ್ರೊಫೆಸರ್ “ತಮ್ಮನ್ನು ನಾನು ಏನೆಂದು ಸಂಬೋಧಿಸಬೇಕು” ಎಂದು ಕೇಳಿದಾಗ ನಾನು ನಿಜಕ್ಕೂ ಗಾಬರಿಗೆಟ್ಟಿದ್ದೆ. (ನಾಟಕ, ಸಿನಿಮಾಗಳಲ್ಲಷ್ಟೇ ಇಂಥಾ ಮಾತುಗಳೆಂದು ನಾನು ಭಾವಿಸಿದ್ದಿರಬೇಕು! ಆದರೆ ಇಂದೂ ಮಠ, ಸನ್ಯಾಸಿಗಳ ಎದುರು ಇಂಥಾ ನಾಟಕಗಳು ಉಳಿದಿರುವುದು ನೋಡುವಾಗ ಹುಳಿ ನಗೆ ಮಾತ್ರ ಬರುತ್ತದೆ.) ಅಂತಪ್ಪ ‘ರಾಜಕುಮಾರ’ ಕಾಲೇಜಿಗೆ ನಿತ್ಯ ದೊಡ್ಡ ವಿದೇಶೀ ಕಾರಿನಲ್ಲಿ ಬರುತ್ತಿದ್ದ. ಅರಮನೆಯ ಸಮವಸ್ತ್ರಧಾರಿಯಾದ ಚಾಲಕ ಮತ್ತು ಕಂಠಮುಚ್ಚಿದ ಕೋಟು ಹಾಕಿದ ಒಬ್ಬ ಹಿರಿಯ ಸಹಾಯಕ ತರಗತಿ ನಡೆಯುವ ಉದ್ದಕ್ಕೂ ಈತನನ್ನು ಕಾದು ನಿಲ್ಲುತ್ತಿದ್ದುದು ಇದೇ ಮರದಡಿಯಲ್ಲಿ.
ಕಾಲೇಜು ಎದುರಿಗೆ ಎತ್ತರಿಸಿದ ಉದ್ದ ಜಗುಲಿ ಇದೆ ನೋಡಿ. ಅದಕ್ಕೊಂದು ಸಣ್ಣ ಕತೆ. ನನ್ನ ತಂದೆ ಅಧ್ಯಾಪಕ ವೃತ್ತಿಯನ್ನು ಬಲು ಪ್ರೀತಿಸಿದ್ದರು. ಆದರೆ ದೇಜಗೌ ಅವರನ್ನು ಮೈಸೂರಿಗೆ ಕರೆಸಿಕೊಂಡದ್ದು ವಿಶ್ವಕೋಶದ ಸಂಪಾದಕತ್ವಕ್ಕೆ. ಆಗ ತಂದೆಯದೊಂದು ಕರಾರು – ವಾರಕ್ಕೆ ಕನಿಷ್ಠ ಮೂರ್ನಾಲ್ಕು ಗಂಟೆಯಾದರೂ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡುವ ಅವಕಾಶ ಕಲ್ಪಿಸಬೇಕು. ದೇಜಗೌ ಒಪ್ಪಿ ಪಕ್ಕದ ಯುವರಾಜಾ (ವಿಜ್ಞಾನ) ಕಾಲೇಜಿನಲ್ಲಿ ಕೆಲವು ತರಗತಿಗಳನ್ನು ಕೊಡಿಸಿದ್ದರು. ತಂದೆ ಆಗೆಲ್ಲಾ ತರಗತಿಯ ಅವಧಿಗೆ ಹತ್ತು ಮಿನಿಟು ಮೊದಲು ಮಾನಸಗಂಗೋತ್ರಿಯ ತನ್ನ ಕಛೇರಿಯಿಂದ ಸೈಕಲ್ಲೇರಿ ಬಂದು ಇದೇ ನಮ್ಮ ಕಾಲೇಜಿನ ಜಗುಲಿಯ ಮೇಲಿಟ್ಟು ಹೋಗುತ್ತಿದ್ದರು. ಯುವರಾಜಾದಲ್ಲೇ ಯಾಕೆ ಇಡುತ್ತಿರಲಿಲ್ಲ ಎಂದು ನನಗೆ ನೆನಪಿಲ್ಲ. ಇಂದು ಆ ಜಗುಲಿ ಬಿಟ್ಟು ಇಡೀ ವಠಾರದೊಳಗೆ ನನಗೆ ಒಂದು ಸೈಕಲ್ಲೂ ಕಾಣಿಸಲಿಲ್ಲ!!
ಜಗುಲಿಯ ಒಳಮಗ್ಗುಲಿನಲ್ಲೇ ಮೊದಲು ಇಂಗ್ಲಿಷ್ ವಿಭಾಗದ ಕೊಠಡಿ ಇತ್ತು. ಅಲ್ಲಿ ನನ್ನ ಎಮ್ಮೆ (ನೀವು ಹೊಸದಾಗೇನೂ ನಗಾಡಬೇಕಿಲ್ಲ! ವಿವಿನಿಲಯವೇನೋ ನನಗೆ ಇಂಗ್ಲಿಷ್ ಎಂಎ ಉದಾರವಾಗಿ ಕೊಟ್ಟದ್ದಿರಬಹುದು. ಆದರೆ ನಾನದನ್ನು ಎಂದೂ ಬಳಸಿಕೊಳ್ಳಲಿಲ್ಲ. ಅದರಿಂದಲೇ ನನ್ನನ್ನು ಗುರುತಿಸಿದವರಿಗೆ “ಹೂಂ ಎಮ್ಮೆ, ಗೊಡ್ಡೆಮ್ಮೆ” ಎಂದೇ ಹೇಳಿಕೊಂಡು ಬಂದಿದ್ದೇನೆ!) ಸಹಪಾಠಿ ಲತಾಬಿಡ್ಡಪ್ಪ ಅಧ್ಯಾಪಕಿಯಾಗಿರುವುದು, ವಿಭಾಗ ಮುಖ್ಯಸ್ಥೆಯಾಗಿ ಬೆಳೆದದ್ದು ಎಲ್ಲಾ ಕೇಳಿದ್ದೆ. ವಿದ್ಯಾರ್ಥಿ ದೆಸೆಯಲ್ಲಿ ನಾನು ಆಕೆಯನ್ನೇನು, ಯಾವುದೇ ಹುಡುಗಿಯೊಡನೆ ವಿಶೇಷ ಮಾತಾಡಿದವನೇ ಅಲ್ಲ! ಆದರೆ ಈಗ ಪ್ರಾಯ ನನ್ನ ಮುಖಹೇಡಿತನವನ್ನು ಕಡಿಮೆ ಮಾಡಿದೆ. ಹಾಗಾಗಿ ಸಾಧ್ಯವಾದರೆ ಲತಾ ಭೇಟಿ ಮಾಡಬೇಕು ಎಂದು ಕೊಂಡೇ ಹೋಗಿದ್ದೆ. ಸ್ನಾತಕೋತ್ತರ ತರಗತಿಯಲ್ಲಿ ಅಧ್ಯಾಪಕ ಪೋಲಂಕಿ ರಾಮಮೂರ್ತಿ ಏನಾದರೂ ಗಹನವಾದ ಅಭಿಪ್ರಾಯ ಕೊಟ್ಟ ಮೇಲೆ, ತುಂಟ ದೃಷ್ಟಿಯಲ್ಲಿ ಹೀಗೆ ಹುಡುಕಿದಂತೆ ಮಾಡಿ, ಚರ್ಚೆಗೆ ಒಡ್ಡಿಕೊಳ್ಳುವ ವಿದ್ಯಾರ್ಥಿಯೊಬ್ಬನ/ಳನ್ನು ಹೆಸರಿಸಿ, ಸಣ್ಣದಾಗಿ ಕೆಣಕುವ ಭಂಗಿಯಲ್ಲಿ ನಿಲ್ಲುವುದಿತ್ತು. ಅಂಥಾ ಸಂದರ್ಭದಲ್ಲಿನ ಅವರ ವಿಶಿಷ್ಟ ಉಚ್ಚಾರಣೆ, “ಲ್-ಲಥಃ ಬಿಡ್ಡಪ್ಪ್-ಅ”ವನ್ನು ಅನುಕರಿಸಿ, ಆಕೆಯನ್ನು ಆಶ್ಚರ್ಯಪಡಿಸಬೇಕಾಗಿಯೂ ಲೆಕ್ಕ ಹಾಕಿಕೊಂಡಿದ್ದೆ. ಆದರೆ ವಿಭಾಗದ ಕೊಠಡಿಯನ್ನು ಪಕ್ಕದ ಓಣಿಯ ಕೊನೆಗೆಲ್ಲೋ ಹಾಕಿದ್ದರು ಮತ್ತು ಅಲ್ಲೂ ಬಾಗಿಲಿಗೆ ಬೀಗವಿತ್ತು. ಅವರಿವರನ್ನು ವಿಚಾರಿಸಿದಾಗ ಲತಾ ನಿವೃತ್ತರಾಗಿರುವುದೂ ತಿಳಿಯಿತು.
ಕಾಲೇಜಿನ ಒಳಜಗುಲಿಯ ಬಲಪಕ್ಕದ ತರಗತಿಗಳಲ್ಲಿ ಹೆಚ್ಚಾಗಿ ಸಾಮಾನ್ಯ ಭಾಷಾ ತರಗತಿಗಳು ನಡೆಯುತ್ತಿದ್ದುವು. ಅದರಲ್ಲಿ ಜಿ.ಎಸ್. ಮೈಲಾರಿ ರಾವ್ ಅವರ ತರಗತಿಯನ್ನು ನೆನೆದರೆ ಇಂದಿಗೂ ಮೈ ಪುಲಕಿತವಾಗುತ್ತದೆ. ಅದನ್ನು ಸೂಕ್ಷ್ಮದಲ್ಲಾದರೂ ಹೇಳದೆ ಮುಂದುವರಿಯುವುದು ನನಗಸಾಧ್ಯ. ಆಗಲೇ ನಿವೃತ್ತಿ ಸಮೀಪಿಸಿದ್ದರೂ ಜಿಯೆಸ್ಸೆಮ್ ಎರಡು ಟೈಮ್ ಟೇಬಲ್ ಇಟ್ಟುಕೊಂಡಿರುತ್ತಿದ್ದರೆಂದೇ ಖ್ಯಾತರು; ಒಂದು ಮನೆಪಾಠಕ್ಕೆ ಮತ್ತೊಂದು ಕಾಲೇಜಿಗೆ! ಆದರೆ ಪಾಠ ಎಲ್ಲೇ ಇರಲಿ ಸಮಯ ಮತ್ತು ಕಲಿಕೆಯ ನಿಷ್ಠೆಯಲ್ಲಿ ಅವರದು ಇನಿತೂ ವಂಚನೆಯಿಲ್ಲ. ಜಿಯೆಸ್ಸೆಮ್ ತರಗತಿ ಬದಲಾವಣೆಯ ಗಂಟೆಯಾಗುತ್ತಿದ್ದಂತೆ ಅವರು ಸ್ಕೂಟರಿನಲ್ಲಿ ಬಂದಿಳಿಯುವುದು ಕಾಣಬಹುದಿತ್ತು. ಬೇರೆ ಬೇರೆ ತರಗತಿಗಳಿಂದ ಹುಡುಗರು ಚದುರಿ ಇವರ ತರಗತಿ ತುಂಬುವುದರೊಳಗೆ ಹಾಜರಿ ಪುಸ್ತಕ, ಪಠ್ಯ, ಸೀಮೆಸುಣ್ಣ ಹಿಡಿದು ಅವರೂ ತರಗತಿಯಲ್ಲಿ ಹಾಜರ್.
ನಮ್ಮ ಕಾಲದಲ್ಲಿ ತರಗತಿಗಳ ತಗ್ಗು ಕಿಟಕಿಗಳಿಗೆ ಪಡಿ ಮಾತ್ರ ಇತ್ತು (ಅಡ್ಡ ಸರಳುಗಳಿರಲಿಲ್ಲ). ಈಗ ದಪ್ಪದ ತಂತಿ ಬಲೆ ಹಾಕಿದ್ದು ನೋಡುವಾಗ ಮತ್ತೆ ಮೈಲಾರಿ ರಾಯರ ಘಟನೆಯೊಂದು ಒತ್ತಿ ಬರುತ್ತದೆ. ಇವರ ಪಾಠದ ಮೋಡಿಗೊಳಗಾಗಿ ಅನ್ಯ ತರಗತಿಯ ಹುಡುಗರು ಕದ್ದು ಒಳಸೇರುವುದಿತ್ತು. ಆದರೆ ಇವರ ಗೃಧ್ರದೃಷ್ಟಿ ಸಿಕ್ಕಿದರೆ, ಆತ್ಮೀಯ ಏಕವಚನದಲ್ಲಿ ಹೊರಗೆ ತಳ್ಳಿಬಿಡುತ್ತಿದ್ದರು. ಆದರೆ ಇರಲೇಬೇಕಾದವರು ಕೈಕೊಟ್ಟರೆ? ನನ್ನ ಸಹಪಾಠಿಗಳಲ್ಲೊಬ್ಬ ಭಾರೀ ತಂಟೆಕೋರ ಅನ್ವರ್ ಮಣಿಪ್ಪಾಡಿ. ಮೈಲಾರಿರಾಯರಿಗೆ ಗುಂಡ್ಲುಪೇಟೆ ಬಳಿಯ ಮಾನಂದವಾಡಿ ಹೆಚ್ಚು ಪರಿಚಿತ, ಈ ಕೇರಳದ ಹಳ್ಳಿ ಹೆಸರು ‘ಮಣಿಪ್ಪಾಡಿ’ ಅಲ್ಲ. ಇವರು ಹಾಜರಿ ಕೂಗುವಾಗ ‘ಮಾನಂದವಾಡಿ’ ಎನ್ನುವುದೂ ಆತ ತಮಾಷೆಗೆ ಅಳುಮೋರೆ ಮಾಡಿಕೊಂಡು ತಿದ್ದುವುದು ನಡೆದೇ ಇತ್ತು. ಈ ಅನ್ವರ್ಗೆ ಯಾವುದೇ ತರಗತಿ ತಪ್ಪಿಸಬೇಕೆಂಬ ಲಹರಿ ಬಂದಾಗ ಹಿಂದಿನ ಕಿಟಕಿ ಬಳಿ ಕೂರುತ್ತಿದ್ದ. ಹಾಜರಿ ಒಪ್ಪಿಸಿ, ಮೇಷ್ಟ್ರು ಇನ್ನೊಂದು ಹೆಸರು ಓದಲು ತಲೆತಗ್ಗಿಸಿದ್ದೇ ಕಿಟಕಿ ಹಾರಿ ಓಡಿಬಿಡುತ್ತಿದ್ದ. ಆತನ ಹೂಟದ ಅರಿವಾದ ಒಂದು ದಿನ ಜಿಯೆಸ್ಸೆಮ್ ಸಜ್ಜಾಗಿದ್ದರು. ಎಂದಿನಂತೇ ಎದುರು ಮೇಜಿನ ಬಳಿ ನಿಂತು ಹಾಜರಿಯಲ್ಲಿ ಅನ್ವರನನ್ನು ಕರೆದರು. ಆತ ಆಗಲೇ ಒಂದು ಕಾಲು ಕಿಟಕಿಯಿಂದ ಹೊರಗಿಟ್ಟವ “ಎಸ್ಸಾರ್” ಎಂದರಚಿ ಜಗುಲಿಗೆ ಜಿಗಿದ. ಮೈಲಾರಿ ರಾಯರು ಅವನಿಗೇನೂ ಬಿಟ್ಟಿಲ್ಲದ ಚುರುಕಿನಲ್ಲಿ “ಲೇಯ್ ಮಾನಂದವಾಡೀ” ಎಂದು ಹುಯ್ಯಲೆಬ್ಬಿಸುತ್ತ, ಹಾಜರಿ ಪುಸ್ತಕ ಹಿಡಿದುಕೊಂಡೇ ಎದುರು ಬಾಗಿಲಿನಿಂದ ಹೊರಗೆ ಧಾವಿಸಿ ಕಳ್ಳ ಬೆಕ್ಕನ್ನು ಹಿಡಿದಿದ್ದರು. ಆದರೆ ಗೆಳೆಯನನ್ನು ಅನುನಯಿಸುವಂತೆ ಭುಜದ ಮೇಲೆ ಕೈಚಾಚಿ ಹಿಡಿದುಕೊಂಡು ಒಳತಂದು ಕೂರಿಸಿಬಿಟ್ಟಿದ್ದರು!
ಮೈಲಾರಿ ರಾಯರು ಹುಡುಗರನ್ನು ಪಾಠದೊಳಕ್ಕೆ ಒಯ್ಯುತ್ತಿದ್ದ ಶೈಲಿಯಂತೂ ಅನನ್ಯ. “ವಿಲಿಯಮ್ ಬ್ಲೇಕ್ ಇಸ್ ಅ ಮಿಸ್ಟಿಕ್ ಪೊಯೆಟ್. ಕಳೆದ ವರ್ಷ ಒಬ್ಬ ಬಡ್ಡೀಮಗಾ ಆನ್ಸರ್ ಶೀಟಿನಲ್ಲಿ ಬರ್ದಾ – ವಿಲಿಯಂ ಬ್ಲ್ಯಾಕ್ ಇಸ್ ಅ ಮಿಸ್ಟೇಕ್” ತರಗತಿಯೊಳಗೆ ನಗುವಿನ ಸ್ಫೋಟಕ್ಕಿಂತ ಸಣ್ಣದೇನಾಗಲು ಸಾಧ್ಯ! ಇವರು ಬಹುತೇಕ ಸನ್ನಿವೇಶಗಳನ್ನು ಆಹಾರ್ಯವಿಲ್ಲದೇ (ನಾಟಕಗಳಲ್ಲಿ ಬಳಸುವ ಸಲಕರಣೆಗಳು), ಕಿಕ್ಕಿರಿದು ತುಂಬಿದ ವಿದ್ಯಾರ್ಥಿಗಳೆರಡು ಸಾಲುಗಳ ನಡುವೆ ಓಡಾಡಿಕೊಂಡು, ಏಕಪಾತ್ರಾಭಿನಯದಲ್ಲಿ ಎಂಥಾ ಹೆಡ್ಡುಮಂಡೆಗೂ ಅರ್ಥೈಸಿಬಿಡುತ್ತಿದ್ದರು. ಒಮ್ಮೆ ‘ಯಾರ ಮರಣದ ಗಂಟೆ’ (For whom the bell tolls) ಎಂಬ ಗಹನವಾದ ಪದ್ಯವನ್ನು ಸಾಭಿನಯ ವಿವರಿಸುತ್ತಿದ್ದರು. ಹಾಗೆ ಎದುರು ಬೆಂಚಿನಲ್ಲಿ ಕುಳಿತಿದ್ದ (ಊನಾಂಗನಾದ) ಬಶೀರ್ ಖಾನಿನ ಊರೆಗೋಲನ್ನು ಹಗುರಕ್ಕೆ ಎತ್ತಿಕೊಂಡರು. ರಾಯರು ತಲೆ ಓರೆ ಮಾಡಿ, ದೃಷ್ಟಿ ಶೂನ್ಯದಲ್ಲಿಟ್ಟು ದೂರದ ಇಗರ್ಜಿಯ ಗಂಟಾನಾದವನ್ನು ಒಂದೊಂದಾಗಿಯೇ ಆಲಿಸುತ್ತ ಎಣಿಸುತ್ತ ವಿದ್ಯಾರ್ಥಿ ಸಾಲಿನ ನಡುವೆ ನಿಧಾನಕ್ಕೆ ನಡೆದಿದ್ದಾರೆ. ನಾಲ್ಕೋ ಐದನೇ ಸಾಲಿನಾಚೆ, ನಡುವೆ ಕುಳಿತು ಕಣ್ಣುತೂಗುತ್ತಿದ್ದ ಗೋಪಾಲಯ್ಯನ ತಲೆಗೆ ಬಶೀರನ ಕೋಲಿನಲ್ಲಿ ಮೊಟಕುವಾಗ ಬಾಯಲ್ಲಿ “ಢಂಯ್” ಎಂದಿದ್ದರು! ಹೀಗೆ ಕಾವ್ಯದ ವಿಷಾದದ ಎಳೆಗೆ ಜಿಎಸ್ಸೆಮ್ ವಿನೋದದ ಜರಿ ಹುರಿಗೊಂಡ ಪಾಠಗಳನ್ನು ಎಂದೂ ಮರೆಯಲಸಾಧ್ಯ. ಇನ್ನೋರ್ವ ಇಂಗ್ಲಿಷ್ ಅಧ್ಯಾಪಕ ಸಿಡಿ ಗೋವಿಂದರಾವ್ – ಪ್ರಕಾಂಡ ಪಂಡಿತ, ಅವರದೇ ಶೈಲಿಯಲ್ಲಿ ಉತ್ತಮ ಅಧ್ಯಾಪಕ, ಆದರೆ ಹೆಸರೇ ಹೇಳುವಂತೆ ಸದಾ ಸಿಡಿಮಿಡಿ. ಒಮ್ಮೆ ಅವರ ಪಾಠ ನಮಗೆ ನಡೆದಿತ್ತು, ಪಕ್ಕದ ಕೊಠಡಿಯಲ್ಲಿ ಜಿಯೆಸ್ಸೆಮ್ ಶೇಕ್ಸ್ಪಿಯರಿನ ಹ್ಯಾಮ್ಲೆಟ್ ನಡೆಸಿದ್ದರು. ನಮ್ಮಲ್ಲಿ ಸೂಜಿ ಬಿದ್ದರೆ ಕೇಳುವ ಮೌನ, ಪಕ್ಕದಲ್ಲಿ ಮಿನಿಟು ಐದಕ್ಕೊಮ್ಮೆ ನಗೆಬಾಂಬು ಹೊಟ್ಟುತ್ತಲೇ ಇತ್ತು. ಕೊನೆಗೂ ಒಮ್ಮೆ ಗೋವಿಂದರಾಯರಿಗೆ ಸಹಿಸಲಿಲ್ಲ. ಗಂಟುಮೋರೆಯಲ್ಲೂ ನಸುನಗೆ ಮಿಂಚಿತು, “ಶೇಕ್ಸ್ ಪಿಯರ್ ಅದನ್ನು ದುರಂತ ನಾಟಕವೆಂದೇ ಬರೆದ. ಈ ಮನುಷ್ಯ ಅದನ್ನು ಹಾಸ್ಯನಾಟಕ…” ಎನ್ನುವಾಗಲೇ ನಮ್ಮ ತರಗತಿಯಲ್ಲೂ ಪ್ರತಿ ಬಾಂಬು ಸ್ಫೋಟಿಸಿತ್ತು.
ಅಯ್ಯೋ ಎಷ್ಟು ಹೇಳಿದರೂ ಮುಗಿಯದು ‘ಮೈಲಾರಿ ಮಹಾತ್ಮ್ಯೆ.’ ಅವರ ಇನ್ನಷ್ಟು ಕಥನಗಳನ್ನು ಇದರ ಓದುಗರಲ್ಲಿರುವ ಇನ್ನಷ್ಟು ಸಮರ್ಥ ಶಿಷ್ಯರುಗಳಿಗೆ (ಉದಾಹರಣೆಗೆ ಪ್ರೊ| ಸಿಎನ್ ರಾಮಚಂದ್ರನ್, ಸಹಪಾಠಿ ಗೆಳೆಯರಾದ ನಾಗಾನಾಥ್, ಶಂಕರಲಿಂಗೇ ಗೌಡ…) ವಿಸ್ತರಿಸಲು ಬಿಡುತ್ತೇನೆ. ಈಗ ಕಾಲೇಜಿನ ಮುಖಮಂಟಪವನ್ನು ತುಸು ನೋಡೋಣ. ಕೆಳಗೆ ದೊಡ್ಡವರಿಗೆ ಕಾರು ಇಳಿಯುವ ಓಣಿ, ಮೇಲೊಂದು ಕೊಠಡಿ. ಆ ಮೇಲ್ಕೋಣೆಗೆ ಕೆಳಗಿನಿಂದ ಮೇಲೇರಿ ಹಬ್ಬಿದ ಬಳ್ಳಿಮಾಡದ ಚೆಲುವು, ಮೂರೂ ದಿಕ್ಕುಗಳಲ್ಲಿ ಭಾರೀ ಕಿಟಕಿ, ಪುಟ್ಟ ಬಾಲ್ಕನಿ. ಅಲ್ಲಿ ನಮ್ಮ ಬಹುತೇಕ ಇಂಗ್ಲಿಷ್ ಐಚ್ಛಿಕ ತರಗತಿಗಳು ನಡೆಯುತ್ತಿದ್ದುವು. ಅದರ ಕಿಟಕಿಯ ಸೆಜ್ಜಗಳಲ್ಲಿ ಹೆಜ್ಜೇನಿನ ಹಿಂಡು ಒಂದೆರಡಾದರೂ ನೇಲುತ್ತಿದ್ದುವು. ಬೇಸಗೆಯ ದಿನಗಳಲ್ಲಿ, ಭಾರೀ ಗಾಳಿಯ ಹೊಡೆತಕ್ಕೆ ಬಳ್ಳಿ ವಿಪರೀತ ಅಲುಗಿದರೆ ಕೆಲವೊಮ್ಮೆ ಹಿಂಡು ಗದ್ದಲ ಮಾಡತೊಡಗಿ ನಮ್ಮ ತರಗತಿ ರದ್ದಾದದ್ದೂ ಇತ್ತು. ಆದರೂ ತರಗತಿ ಇಲ್ಲದ ಬಿಡುವಿನ ವೇಳೆಯಲ್ಲಿ ನನಗೆ ಮತ್ತು (ನನಗಿದ್ದ ಏಕೈಕ ಆಪ್ತಮಿತ್ರ) ಸಹಪಾಠಿ ಶಂಕರಲಿಂಗೇಗೌಡನಿಗೆ ಅಲ್ಲಿ ಕುಳಿತು ಸಮಯ ಕಳೆಯುವುದು ಪ್ರಿಯ ಹಾಗೂ ರೋಮಾಂಚಕಾರಿ ಹವ್ಯಾಸವೇ ಆಗಿತ್ತು. ನಮ್ಮೊಳಗೆ ಮಾತೇನೂ ಭಾರೀ ನಡೆಯುತ್ತಿರಲಿಲ್ಲ. ಆದರೆ ಇತರರು ನೊಣಕ್ಕೆ ಹೆದರಿ ಕಿಟಕಿಯತ್ತ ನೋಡುವುದಕ್ಕೂ ಹಿಂಜರಿಯುವಲ್ಲಿ ನಮಗೆ ವೇಳೆಗಳೆಯುವುದೇನೋ ಸಾಧನೆಯ ತೃಪ್ತಿ ಕೊಡುತ್ತಿದ್ದಿರಬೇಕು! ನಾವು ಹುಶಾರಾಗಿ ಬಳ್ಳಿ ಒತ್ತಿನಲ್ಲೋ ಬಾಲ್ಕನಿಯಲ್ಲೋ ಕುಳಿತು, ಹಸಿರು ಪರಿಮಳದ ಗಾಳಿಗೆ ಮೈಯೊಡ್ಡಿ, ಹೆಜ್ಜೇನು ಹಿಂಡಿನ ಗುಂಜನಕ್ಕೆ ನಮ್ಮ ಶಿಳ್ಳೆ ಶ್ರುತಿ ಹೊಂದಿಸಿ ಹಳಗಾಲದ ಸಿನಿ-ಹಾಡುಗಳನ್ನು ‘ಉದ್ಧಾರ’ ಮಾಡುತ್ತಿದ್ದೆವು. ಹಾಗೆಂದು ಕಾಲೇಜು ಸ್ಪರ್ಧೆಗಳು, ಬಹಿರಂಗ ವೇದಿಕೆ ಬಿಡಿ, ನಾಲ್ಕು ಜನ ಸೇರಿ “ಏ ನೀನು ಚೆನ್ನಾಗಿ ಬಾರಿಸ್ತಿಯಾ. ಅದು ಹೇಳು, ಇದು ಹೇಳು” ಎಂದರೆ ಮುಗಿದುಹೋಯ್ತು. ಗಂಟಲು ಕಟ್ಟುತ್ತಿತ್ತು, ತುಟಿ ಅದುರುತ್ತಿತ್ತು ಕೊನೆಯಲ್ಲಿ ಗೊತ್ತಲ್ಲಾ ನಾನಲ್ಲ, ಸಭೆಯೇ ಕಂಪಿಸುತ್ತಿತ್ತು! ಕಾಲೇಜಿಗೆ ಮಹದೇವೂ ಬಳಗ ಇದ್ದರೆ, ನಮ್ಮ ಇಂಗ್ಲಿಶ್ ಐಚ್ಛಿಕ ತರಗತಿಯಲ್ಲಿ ಹಾಡಿಕೆಗೆಲ್ಲ ಒಬ್ಬಳಿದ್ದಳು ಮುಗ್ಧೆ (ಬಹುಶಃ ಹೆಸರು ಗಾಯತ್ರಿ). ಕರ್ನಾಟಕ ಸಂಗೀತದ ಪಾಠವಾಗಿದ್ದ ಆಕೆ ಪ್ರತಿ ಬಾರಿಯೂ ಬೇರೆಯವರ ಒತ್ತಾಯಕ್ಕೆ ನಿಂತು, ಸಂಕೋಚದಲ್ಲೇ ಗುನುಗುತ್ತಿದ್ದಳು. ಮತ್ತು ಪ್ರತಿಬಾರಿಯೂ ನಮಗೆ ಮೊದಲೆರಡು ಪದಗಳ – ರಂಜನಿ ನಿರಂಜನೀ, ಆಚೆಗೆ ಸಾಹಿತ್ಯ ಸ್ಪಷ್ಟವಾಗದೇ, ನಾದಸುಖ ದಕ್ಕದೇ ಹೋಗುತ್ತಿತ್ತು. ಆದರೂ ಮುಕ್ತಾಯವನ್ನು ಮಾತ್ರ ಗಟ್ಟಿ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದೆವು!
ಕಾಲೇಜಿನ ಒಳಾಂಗಳ ಮತ್ತು ಆ ಕೊನೆಯ ವೇದಿಕೆ ನನ್ನ ಕಾಲದಲ್ಲಿ ತುಂಬಾ ಕಡಿಮೆ ಬಳಕೆಯಾಗುತ್ತಿತ್ತು. ಕ್ಯಾಂಟೀನಿನಾಚೆಗೆ ಕಾಲೇಜಿನ ಶತಮಾನೋತ್ಸವಕ್ಕೊಂದು ಸುಸಜ್ಜಿತ ಸಭಾಂಗಣ (ಸೆಂಟಿನೆರಿ ಹಾಲ್ ಎಂದೇ ಪ್ರಸಿದ್ಧ) ಬಂದ ಮೇಲೆ ಈ ಸ್ಥಿತಿ ಬಂದದ್ದಿರಬೇಕು. ಸದ್ಯಕ್ಕೆ ಈ ಒಳಾಂಗಳದ ವೇದಿಕೆಯೇ ನನಗುಂಟು ಮಾಡಿದ ಒಂದು ಮುಜುಗರದ ಪ್ರಸಂಗವನ್ನು ನೆನೆಸಿ ವಿರಮಿಸುತ್ತೇನೆ.
ನಾನು ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ವಾರಾಂತ್ಯ ಚಟುವಟಿಕೆಗಳಲ್ಲಿ ತರಬೇತುಗೊಂಡು ಗೌರವ ಶಿಕ್ಷಕನ ಮಟ್ಟಕ್ಕೇರಿದ್ದೆ. ದಸರಾ ಸಂದರ್ಭಗಳಲ್ಲಿ ವಸ್ತುಪ್ರದರ್ಶನಾಲಯದ ಗೋಡೆಯನ್ನೇ ಲಂಬವಾಗಿ ನಿಂತ ಬಂಡೆಯಂತೆ ಪರಿಗಣಿಸಿ, ಶಿಲಾವರೋಹಣದ ಪ್ರದರ್ಶನಗಳನ್ನು ನೀಡುವಲ್ಲಿ ನಮ್ಮ ಸಂಸ್ಥೆ ತುಂಬಾ ಪಳಗಿತ್ತು. ಸಹಜವಾಗಿ ನನಗೆ ಮಹಾರಾಜಾ ಕಾಲೇಜಿನಲ್ಲೂ ಒಂದು ಪ್ರದರ್ಶನ ಕೊಡಬೇಕೆಂದು ಆಸೆಮೂಡಿತು. ಇಲ್ಲಿ ಪ್ರದರ್ಶನಕ್ಕೆ ಲಭ್ಯ ಗೋಡೆ ಕೇವಲ ಎರಡೇ ಮಾಳಿಗೆಗಳೆತ್ತರದ್ದು. ಹಾಗಿರುವಾಗ ನಮ್ಮ ಪ್ರದರ್ಶನ ತಂಡದಲ್ಲಿ ಸುಲಭವಾಗಿ ಇನ್ನೊಂದೆರಡು ಸಹಪಾಠಿಗಳನ್ನು ತಂಡದಲ್ಲಿ ಸೇರಿಸಿಕೊಂಡು ಕಾಲೇಜಿನವರಿಗೆ ಹೆಚ್ಚು ‘ನಮ್ಮದು’ ಅನ್ನಿಸುವಂತೆ ಮಾಡಬೇಕೆಂದೂ ಹಂಚಿಕೆ ಹಾಕಿದ್ದೆ. ಸಹಪಾಠಿ ಮಿತ್ರರಾದ ಮಿತ್ತೂರಿನ ಗೋವಿಂದ ಭಟ್ ಮತ್ತು ಸಾಗರದ ಅಶೋಕರನ್ನು ಎರಡು ಮೂರು ವಾರ ಮೊದಲೇ ಬೆಟ್ಟಕ್ಕೆ ಒಯ್ದು ಸಜ್ಜುಗೊಳಿಸಿದ್ದೆ. (ಉಳಿದಂತೆ ಪ್ರದರ್ಶನ ಕಳೆಗಟ್ಟಲು ನನ್ನ ಖಾಯಂ ಪರ್ವತಾರೋಹಿ ಗೆಳೆಯರಿದ್ದರು.) ಪ್ರಾಂಶುಪಾಲರ ಅನುಮತಿ, ಹೆಚ್ಚಿನ ಹುಡುಗರ ಉಪಸ್ಥಿತಿಗೆ ಅನುಕೂಲವಾದ ದಿನ ಎಲ್ಲ ಆರಿಸಿಕೊಂಡಿದ್ದೆ. ಕಾಲೇಜಿನ ಒಳಾಂಗಳಕ್ಕೆ ತೋರುವಂತೆ ಗಡಿಯಾರ ಹೊತ್ತ ಕಟ್ಟಡದ ಬಿಸಿಲ ಮಾಳಿಗೆಗೆ ಏರಿ, ಅಲ್ಲಿನ ಯಾವುದೋ ಗಟ್ಟಿ ಆಧಾರಕ್ಕೆ ನಮ್ಮ ಉದ್ದದ ಹಗ್ಗ ಬಿಗಿದು, ಕೆಳಗೆ ಬಿಟ್ಟದ್ದೂ ಆಯ್ತು. ಆಗ ಹಾಜರಾಯ್ತು ನಮ್ಮ ಕೀಟಲೆ ಮಿತ್ರದ್ವಯರಾದ ಅನ್ವರ್ ಮಣಿಪ್ಪಾಡಿ ಮತ್ತು ನರಸಿಂಹಮೂರ್ತಿಯ ಬಳಗ. ಮೊದಲು ಅವರೂ ತಾರಸಿಗೆ ಬಂದು ನಮ್ಮಿಂದ ತುಸು ದೂರದಲ್ಲಿ ಗೋಡೆಯಂಚಿನಲ್ಲಿ ನಿಂತು ನನ್ನ ಪರ್ವತಾರೋಹಣ ವಿವರಣೆಗಳ ಅಣಕ ನಡೆಸತೊಡಗಿದರು. ನಾನು ಪ್ರಾರ್ಥಿಸಿ, ಧಿಕ್ಕರಿಸಿ ಪ್ರದರ್ಶನದೊಡನೆ ಮುಂದುವರಿದಾಗ ಕೀಟಲೆ ಬಳಗ ತಾರಸಿ ಇಳಿದು, ವೇದಿಕೆ ಹತ್ತಿ ಬೊಬ್ಬೆ, ನಲಿಕೆ ನಡೆಸಿದರು. ಮುಂದೆ ನಾನು ಮಂಗಳೂರಿನಲ್ಲಿ ನೆಲೆಸಿದಾಗ ಇದೇ ಅನ್ವರ್ ತನ್ನದೆ ಜಾಹೀರಾತು ಸಂಸ್ಥೆಯೊಡನೆ ವೃತ್ತಿರಂಗದಲ್ಲಿ ನೆಲೆನಿಂತ ಮೇಲೆ ನನ್ನನ್ನು ಗೆಳೆಯನಂತೆಯೇ ಕಾಣತೊಡಗಿದ. ಆದರೆ ಅಂದು ವಿನಾಕಾರಣ ನಮ್ಮ ಪ್ರದರ್ಶನವನ್ನು ಹಗುರಮಾಡಿದ ಅವರ ಚಟುವಟಿಕೆಗೆ ಇದೇ ವೇದಿಕೆಯಾಗಿತ್ತಲ್ಲಾಂತ ನೆನಪು ಕೆದರದಿರುವುದು ಹೇಗೆ?
[ನೆನಪುಗಳ ಸರಮಾಲೆಯನ್ನು ನಿಮ್ಮ ಪ್ರತಿಕ್ರಿಯೆ ನೋಡಿಕೊಂಡು ಮುಂದೆಂದಾದರೂ ಇನ್ನಷ್ಟು ಬಿಚ್ಚುತ್ತೇನೆ (ಅಥವಾ ಕೈ ಬಿಡುತ್ತೇನೆ). ಇಷ್ಟೂ ಹೆಚ್ಚಾಯ್ತು ಎಂದು ನಿಮಗನ್ನಿಸಿದರೆ, ನಿಮಗಷ್ಟು ತಿಳಿಸಲಿದೆಯೆಂದು ಅನ್ನಿಸಿದರೆ ದಯವಿಟ್ಟು ಸವಿವರ ಬರೆದು ನಡೆಸಬೇಕಾಗಿ ಕೇಳಿಕೊಳ್ಳುತ್ತೇನೆ. “ಸದ್ಯ ವಿರಮಿಸುವ ಮುನ್ನ ಮಂಗಳ ಗೀತೆ, ಮಾದೂ ಬಳಗದಿಂದ: “ನಮ್ಮಯ ಕಾಲೇZoo ಮಹರಜ ಕಾಲೇZoo… :-)”]
ಮಾಲಿಕೆ ಮುಂದುವರಿಯಲಿ. ನನ್ನ ವಿದ್ಯಾರ್ಥಿದೆಸೆಯ ‘ಸಾಹಸ’ಗಳನ್ನು ಮೆಲುಕು ಹಾಕಲು ಪ್ರೇರೇಪಿಸುವುದರಿಂದ.
ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು. ಮುಂದುವರಿಯಲಿ. ಓದಲು ತಯಾರಿದ್ದೇವೆ.
It is a very intimate and lively writing. Pl write more.
ಅಲ್ಲ ಮಾರಾಯ್ರೆ ನೀವು ೬೦ಕ್ಕೆ ನಿವೃತ್ತಿ ಘೋಷಿಸಿ ಲತಾ ಬಿಡ್ಡಪ್ಪ ಅವರನ್ನು ಕಾಲೇಜಿನಲ್ಲಿ ಅರಸಿದರೆ ಹೇಗೆ? ಅವರಿಗೂ ೬೦ ನಿವೃತ್ತಿ ತಾನೆ!
ಸಹಪಾಠಿಗಳೆಲ್ಲಾ ಸಮವಯಸ್ಕರೇ ಇರಬೇಕೆನ್ನುವ ನಿಯಮವಿಲ್ಲ. ಸರಕಾರೀ ಕಾನೂನು, ವಿವಿನಿಲಯದ ಕಾನೂನು, ಸ್ಥಾನ ಅಥವಾ ಯಾವುದಾದರೂ ಯೋಜನೆಗಳ ಹೊಂದಾಣಿಕೆಯಲ್ಲೆಲ್ಲಾ ಲತಾ ಹುದ್ದೆಯಲ್ಲಿ ಉಳಿದಿರುವ ಸಾಧ್ಯತೆಯನ್ನು ನಾನೇಕೆ ನಿರಾಕರಿಸಬೇಕು 🙂
ನಮ್ಮ ಪ್ರೀತಿಯ ಮಹಾ ರಜಾ ಕಾಲೇಜನ್ನು ಮಹರಜ ಎಂದು ಏಕೆ ಹ್ರಸ್ವಗೊಳಿಸಿದಿರಿ? (ಮಾಜಿ)ಮಹಾರಾಜರ ಮಗ ಅಲ್ಲಿದ್ದ ಎಂಬ ಕಾರಣವೆ?
ಎಲ್ಲ ಬಗೆಯ ಸ್ವತಂತ್ರ ಆಲೋಚನೆಗಳನ್ನು ಬಿತ್ತಿ ಬೆಳೆಸಿದ ಕಾಲೇಜು ಈಗಲೂ ನೆನೆದಾಗ ಸದಾ ಬೆಚ್ಚನೆಯ ಮುದವನ್ನು ನೀಡುತ್ತದೆ. ಮಾನಸಗಂಗೋತ್ರಿಯಲ್ಲಿ ಓದಿ ಅಧ್ಯಾಪಕನಾಗಿದ್ದರೂ ನಮ್ಮ ಕಾಲೇಜಿನ ಬಗೆಗಿನ ವಿಶೇಷ ಭಾವನೆ ಕಡಿಮೆಯಾಗುವುದಿಲ್ಲ. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ‘ಹುಚ್ಚು ಮುಂಡೆದೇ’ ಎಂದು ಕರೆಯುತ್ತಾ ಷೇಕ್ಸ್ ಪಿಯರನನ್ನು ಅಭಿನಯಪೂರ್ವಕವಾಗಿ ಕನ್ನಡದಲ್ಲಿಯೇ ಪಾಠಮಾಡಿ ಅರ್ಥಮಾಡಿಸುತ್ತಿದ್ದ ಇಂಗ್ಲಿಷಿನ ಮೈಲಾರಿರಾಯರು, ಸೇತೂ ಸಾವಿತ್ರಿ ಮೇಡಂ ಮನಃಶಾಸ್ತ್ರದ ಸರೋಜಾಬಾಯಿ,ನಾರಾಯಣರಾವ್ ಪವಾರ್ ವಸಂತರಾಜಯ್ಯ ವಿದ್ಯಾರ್ಥಿಗಳು ಹುಲ್ಲಿನ ಮೇಲೆ ನಿಂತರೆ ಸಹಿಸದೆ ಶಾಂತವಾಗಿ ತಮ್ಮ ರೂಮಿನಲ್ಲಿರದೆ ಎದ್ದು ಬಂದು ಗದರುತ್ತಿದ್ದ ಪ್ರಿನ್ಸಿಪಾಲ್ ಶಾಂತವೀರಪ್ಪನವರು, ಹೆಸರೇ ತೋಟಪ್ಪ ಆದರೂ ಹಾಗೆನೂ ಮಾಡದ ತೋಟಪ್ಪನವರು! ನೆನಪುಗಳು ಉಕ್ಕಿಬರುತ್ತವೆ!ಕನ್ನಡ ವಿಭಾಗದಲ್ಲಿ ಗಂಗೋತ್ರಿಯಲ್ಲಿದ್ದ ಎಲ್ಲರೂ ಇಲ್ಲಿಗೂ ಬಂದು ಪಾಠಮಾಡುತ್ತಿದ್ದುದು… ಎಲ್ಲ ನೆನಪಾಗುತ್ತವೆ.
ಈ ಲೇಖನ ಬರೆಯುವಾಗ ಅಶೋಕರಿಗೆ…….ಕಾಲೇಜಿಗೆ ಹೆಚ್ಚಾಗಿ “ರಜ” ಹಾಕುತ್ತಿದ್ದ ನನ್ನ ನೆನಪು ಆಗಿರಬೇಕು…… – ಮೂರ್ತಿ ದೇರಾಜೆ
ಮಹಾರಾಜ ಕಾಲೇಜಿನ ನೆನಪನ್ನು ಹಸಿರುಗೊಳಿಸಿದ್ದಕ್ಕೆ ಧನ್ಯವಾದ. ಕಾಲೇಜು ನಡುವಣ ಅಂಗಣದಲ್ಲಿ ನಿಮ್ಮ ‘ಪರ್ವತಾವರೋಹಣ’ ನನಗೆ ಚೆನ್ನಾಗಿ ನೆನಪಿದೆ. ನಿಮ್ಮ ಸೋದರನೂ ಜೊತೆಗಿದ್ದರೋ ಏನೋ..ನೀವು ನನಗಿಂತ ಎರಡು ವರ್ಷ ಸೀನಿಯರ್ ಎಂದೆಣಿಸಿದ್ದೆ. ಶಂಕರ್, ಕೃಷ್ಣಮಾಚಾರ್ಯ, ಗೋವಿಂದ, ಶ್ರೀಕಂಠದತ್ತ ಇವರೆಲ್ಲ ಒಂದು ವರ್ಷ ಸೀನಿಯರ್ ಆದ್ದರಿಂದ ನಿಮ್ಮನ್ನೂ ಆ ಲೆಕ್ಕಕ್ಕೇ ಸೇರಿಸಿಕೊಳ್ಳುತ್ತೇನೆ. ದೇವನೂರು, ಉಮ್ಮರಬ್ಬ ಇವರಿಂದಾಗಿ ನನಗೆ ಯುವರಾಜದಿಂದ ಮಹಾರಾಜಕ್ಕೆ ಬದಲಾವಣೆ ಸಿಕ್ಕುವುದು ಸಾಧ್ಯವಾಯಿತು. ಕನ್ನಡ ಅಧ್ಯಾಪಕ ಕೆ. ರಾಘವೇಂದ್ರರಾವ್; ಕೆ.ಆರ್. ಅಲ್ಲ. ಸುಜನಾ ನಮ್ಮ ತರಗತಿಗೆ ಬರುತ್ತಿದ್ದುದೂ ಹಾಗೆಯೇ. ಮೈಲಾರಿರಾವ್ ಪಾಠದಿಂದ ಬಹುಪಾಲುವಂಚಿತನಾದದ್ದು (ನಮ್ಮ ಸೆಕ್ಷನ್ ಗೆ ಅವರು ಕ್ಲಾಸ್ ತೆಗೆದುಕೊಳ್ಳುತ್ತಿರಲಿಲ್ಲ) ದೊಡ್ಡ ದೌರ್ಭಾಗ್ಯ. ಸಿಡಿಜಿ, ಅನಂತ ನಾರಾಯಣ, ಪುಟ್ಟಮಾದಪ್ಪ, (ಇಂಗ್ಲೀಷ್), ರಾಘವೇಂದ್ರರಾವ್, ಆಲನಹಳ್ಳಿ, ನಂಜುಂಡಯ್ಯ, ಸುಜನಾ, ಜಿ.ಹೆಚ್. ನಾಯಕ (ಕನ್ನಡ),ವಸಂತರಾಜ್, ಶ್ರೀನಿವಾಸ ರಾಘವಾಚಾರ್,(ಸಂಸ್ಕೃತ) ಇವರನ್ನೆಲ್ಲ ಮರೆಯುವ ಹಾಗೇ ಇಲ್ಲ.ಎಲೆಕ್ಷನ್ ಟೈಮಲ್ಲಿ ಕಾಲೇಜು ಹಾಸ್ಟೆಲ್-ಕಬ್ಬಳ್ಳಿಗಳ ನಡುವಣ ಸಂಘರ್ಷ ಹೆಚ್ಚುವರಿ ಮನರಂಜನೆ..
ತಿದ್ದುಪಡಿಗೆ ಕೃತಜ್ಞ. ಈಗ ಜಿಯೆಸ್ಸೆಮ್, ಸಿಡಿಜಿ, ವೀಯಂಪಿ ಇದ್ದ ಹಾಗೇ ಕೆ.ಆರ್ ಎನ್ದುನುವುದು ರಾಘವೇಂದ್ರ ರಾಯರ ಹೃಸ್ವರೂಪ ಎನ್ನುವುದು ನೆನಪಾಯ್ತು. ಅನಂತ ನಾರಾಯಣರು ಯುವರಾಜಾದಲ್ಲಿದ್ದರು. ಆದರೆ ನನಗೆ, ಚದುರಂಗರ ಮಗ (ನನಗಿಂತ ಒಂದು ತರಗತಿ ಹಿರಿಯ)ವಿಕ್ರಂಗೆಲ್ಲ ಪ್ರೀತಿಯಿಂದ (ಹಣಕ್ಕಲ್ಲ) ಮನೆಪಾಠ ಕೊಡುತ್ತಿದ್ದರು. ಜೀಎಚ್ ನಾಯಕರ ಸಂಬಂಧ ನನಗೆ ಈಗಲೂ ಆರಾಧ್ಯರ ಮೂಲಕ, ನನ್ನ ತಮ್ಮನ ಮೂಲಕ ಆಗುತ್ತಲೇ ಇರುತ್ತದೆ(ಸಿನಾನಿಮ್ಸ್ ನಂಜುಂಡಯ್ಯ) ಅಯ್ಯೋ ಮುಂದಿನ ಕಂತಿನ ಕತೆಯೆಲ್ಲಾ ಇಲ್ಲೆ ಬಂದು ಬಿಡುತ್ತದೆ. 🙂
ನಾವು ೭೦ರ ದಶಕದಲ್ಲಿ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ (ನೀವು ಕಲಿಯುತ್ತಿದ್ದದ್ದು…ನಾನು ಟೈಮ್ ಪಾಸ್…!!) ನಿಮ್ಮ “ಆರೋಹಣ”ದ ಪ್ರಾತ್ಯಕ್ಷಿಕೆ ಕಾಲೇಜಿನ ಎದುರುಬದಿ ಇತ್ತು ನೋಡಿ…..ಅಲ್ಲಿ ನಾನು ನೋಡಿಯೇ ಬಾಕಿ….!! “ಆರೋಹಣ” ಕ್ಕಿಂತಲೂ “ಅವರೋಹಣ” ನೋಡಿ ನಾನು ಕಂಗಾಲು….ಗೋಡೆಗೆ ಕಾಲು ಕೊಟ್ಟು…ನೆಲಕ್ಕೆ ಮುಖ…ಆಕಾಶಕ್ಕೆ ಬೆನ್ನು ಮಾಡಿ…ಸ್ಪೈಡರ್ ಮ್ಯಾನ್ ನ ಹಾಗೆ(ಆಗ ಪ್ರಾಯಷಃ ಅವ ಇರಲಿಲ್ಲ….) ಇಳಿದದ್ದು… ನೆನಪಿದೆ…….. ಪ್ರಾಯಷಃ ಭಾರೀ ಖುಶಿಯಾದರೂ…ಆಗಲೂ ನಾನು ನಿಮ್ಮಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ…..”ಒಳ್ಳೆದಾಗಿದೆ…ಭಾರೀ ಥ್ರಿಲ್ ಆಯ್ತು”…. ಅಂತ ಹೇಳಿದರೆ…….ನೀವು ಎಲ್ಲಿಯಾದರೂ… “ಬನ್ನಿ” ಅಂತ ನನ್ನನ್ನೂ ಎಳಕೊಂಡು ಬಿಟ್ಟರೆ….!!! ಎನ್ನುವ ಅಳುಕು ಅಷ್ಟೇ…..ಹೆದರಿಕೆ ಅಲ್ಲ…!! ಈಗ ತೊಂದರೆ ಇಲ್ಲ…ಮೆಚ್ಚುಗೆ ವ್ಯಕ್ತ ಪಡಿಸಿದರೂ….ನೀವು ಕರಿಲಿಕ್ಕಿಲ್ಲ ಎನ್ನುವ ದೈರ್ಯ….!! ಮತ್ತೆ…. ಮಿತ್ತೂರು ಗೋವಿಂದ ಮಾತ್ರ ನಿಮ್ಮಜಾಲಕ್ಕೆ ಸಿಕ್ಕಿ ನಾಕು ದಿನ ಒದ್ದಾಡಿದ್ದ ಅಲ್ಲವೇ….!! – (ಇದು ಹಿಂದೊಮ್ಮೆ ಕಳಿಸಿದ ಪ್ರತಿಕ್ರಿಯೆಯೆ….) -ಮೂರ್ತಿ ದೇರಾಜೆ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com
Very very interesting.Please continue butchering your favourite teachers.It is the birth right of the students.Looking forward for your next instalment.
ನಮ್ಮ ನೆನಪಿನ ದೋಣಿಯೂ, ನಿಮ್ಮ ದೋಣಿಯೊಡನೆ ತೆಲತೊಡಗಿತು. ಕಾಲೇಜಿನ ಹಲವು ಪ್ರಸಂಗಗಳು ಕಣ್ಣ ಮುಂದೆ ಹಾಡು ಹೋದುವು. ಬಹಳ ಚೆನ್ನಾಗಿತ್ತು . ಧನ್ಯವಾದಗಳು …. ಪಿ ಕೆ ಪೈ
ಪ್ರಿಯ ಅಶೋಕರೆ, ವಂದೇಮಾತರಮ್.
“ಮಹರಜ ಕಾಲೇಜೂ” ಕಥನ ಮುಂದುವರಿಸಿ.
ಶಾಲಾ ಕಾಲೇಜುಗಳಲ್ಲಿ ಸಹಪಾಠಿಗಳೊಂದಿಗಿನ ತಾತ್ಕಾಲಿಕ ಮಸಸ್ತಾಪ, ಅವರಿಗೂ ಅಧ್ಯಾಪಕರಿಗೂ ಅಡ್ಡ ಹೆಸರಿಡುವುದು ಸರ್ವೆ ಸಾಮಾನ್ಯ. ನಮ್ಮ ಕರ್ನೂಲಿನ ಒಸ್ಮಾನಿಯಾ ಕಾಲೇಜಿನ ವಿದ್ಯಾರ್ಥಿಗಳು “Onions are we; we are Osmanians” ಎಂದು ಕೊಳ್ಳುತ್ತಿದ್ದೆವು.
ನಿಮಗೆ ಮಹಾರಾಜರ ಮಗ ಶ್ರೀಕಂಠದತ್ತ ಸಹಪಾಠಿಯಾದರೆ ನಮಗೆ ನಮ್ಮ ನ್ಯಾಷನಲ್ ಹ್ಹೈಸ್ಕೂಲ್, ಬಾರ್ಕೂರಿನಲ್ಲಿ,(ಈಗ ಉಡುಪಿ ಕಿಲ್ಲೆ, 1954-’57) ನಮ್ಮ ಮುಖ್ಯೋಪಾಧ್ಯಯರ ಮಗಳು ಸುನಂದ ಹುಡುಗರ ಸಾಲಿನ ನನ್ನ ಪಕ್ಕದ ಹುಡುಗಿಯರ ಸಾಲಿನ ಮೊದಲ ಬೆಂಚಿನಲ್ಲಿ ಕೂರುತ್ತಿದ್ದಳು. ನಮ್ಮ ಮುಖ್ಹೋಪಾಧ್ಯಾಯ ಪಿ.ಎನ್. ಭೋಜ ರಾಯರು ಮಹಾಶಿಸ್ತಿನ ಮನುಷ್ಯ. ಅವರು ಆ ಉನ್ನತ ಶಾಲೆಗೆ 27 ವರ್ಷಗಳ ಕಾಲ ಸತತವಾಗಿ ಮುಖ್ಯೋಪಾಧ್ಯರು. ಅವರನ್ನು ’ಕುಳ್ಳ ಭೋಜ’ ಎಂದು ಹಿಂದಿನಿಂದ ಕರೆಯುತ್ತಿದ್ದೆವು. ಶಾಲೆ ಬಿಟ್ಟು ಹಲವು ವರ್ಷಗಳ ನಂತರವೂ ಅವರು ಕಾಣಿಸಿದರೆ ಅವರ ಮುಂದೆ ಕೂತು ಮಾತನಾಡುವ ಧೈರ್ಯ ಯಾವ ವಿದ್ಯಾರ್ಥಿಗೂ ಇರಲಿಲ್ಲ. ಇತ್ತೀಚೆಗೆ ಅವರ ಶತಮಾನೋತ್ಸವ ನಡೆಯಿತು. ನನಗೆ ಹೋಗಲು ಅನಾನುಕೂಲವಾಯಿತು. ಇತ್ತೀಚೆಗೆ ಆ ಸುನಂದ ಬೆಂಗಳೂರಿನಲ್ಲಿ ಇದ್ದಾಳೆ ಎಂತ ತಿಳಿದು ಅವಳ ಮನೆಗೆ ಹೋದೆ. ನೀನು ನಿನ್ನಪ್ಪನ ಹಾಗೆ ಮತ್ತೆ ಬೆಳೆಯಲೇ ಇಲ್ಲ, ಕುಳ್ಳಾಗಿಯೇ ಇದ್ದಿ ಎಂತ ತಮಾಷೆ ಮಾಡಿದೆ, 90 ನಿಮಿಷಗಳ ಕಾಲ ಹೋದದ್ದೇ ಗೊತ್ತಾಗಲಿಲ್ಲ. ಆಗಾಗ ಸಹಪಾಠಿಗಳು ಸಿಕ್ಕಾಗ ಅಂದಿನ ಸುದಿನಗಳ ಬಗ್ಗೆ ಸಂಭಾಷಣೆ ನಡೆಸಿದಾಗ ಪ್ರಾಯ ಸಣ್ಣಕ್ಕಾದ ಹುರುಪು ಬರುತ್ತದೆ ಅಲ್ಲವೇ! ನಮ್ಮ ಭೋಜರಾಯರ “Teaching of English” ಎಂಬ ಬರವಣೆಗೆಗೆ 1965 ಕೇಂದ್ರ ಸರಕಾರ ಬಹುಮಾನ ಕೊಟ್ಟಿತ್ತು.ಕೆಲವೊಮ್ಮೆ ನನಗೆ ಕೆಲವರು ನನ್ನ ಇಂಗ್ಲೀಷನ್ನು ಮೆಚ್ಚಿಕೊಳ್ಳುತ್ತಾರೆ. ಆಗ ನಾನು ಅಂತರ್ಜಾಲ ತೆರೆದು (Barkur/P.N.Bohja Rao/Teching of English)ಈ ಲೇಖನ ತೋರಿಸುತ್ತೇನೆ. ಭೋಜ ರಾಯರ ಜ್ನಾಪಕ ಶಕ್ತಿ ಅಗಾಧವಾದದ್ದು. ನಾನು 1957 ರಲ್ಲಿ ಎಸ್.ಎಸ್,ಎಲ್.ಸಿ, ಉತ್ತೀರ್ಣನಾಗಿ 1966 ರ ಜನವರಿಯಲ್ಲಿ ಅವರನ್ನು ನೋಡಲು ಹೋದೆ. “ಬಾರಯ್ಯ ಚನ್ನ…, ಅಲ್ಲ ಚಂದ್ರಶೆಖರ ಕಲ್ಕೂರ” ಎಂದು ಕರೆದರು. ಒಂದು ಗಂಟೆ ಕಳೆದೆ. ಅವರ ವಿದ್ಯಾರ್ಥಿಗಳ ಸರಮಾಲೆ ಹೇಳಿದರು. ಎಚ್.ಬಿ.ಎನ್.ಶೆಟ್ಟಿ, ಮದ್ರಾಸ ಸರಕಾರದ ಐ.ಏ,ಎಸ್, ಅಧಿಕಾರಿ; ನನ್ನ ತಮ್ಮ ಮಹಾಬಲೇಶ್ವರ ಕಲ್ಕೂರ, ಅಭಿವೃದ್ಧಿ ಪರ ಕೃಷಿಕ, ನಮ್ಮ ಹೈಸ್ಕೂಲು ಇದಿರಿನ ಬೀಡ ಅಂಗಡಿ ರಾಮ ಎಲ್ಲರೂ ಅವರ ದೃಷ್ಟಿಯಲ್ಲಿ ಸಮಾನರು. ಇದು ಹಿಂದಿನ ಕಾಲದ ಅಧ್ಯಾಪಕರ ದೃಷ್ಟಿಯಲ್ಲಿದ್ದ ಸಾಮಾಜಿಕ ನ್ಯಾಯ.
ಅಶೋಕ ವರ್ಧನ ಚಕ್ರವರ್ತಿಗಳೇ! ತಾವು ಓದಿ ಮುಗಿಸಿದ ಕಾಲೇಜು ಇನ್ನೂ ಭದ್ರವಾಗಿ ನಿಂತಿರುವುದು ಬಹು ಸಂತೋಷದ ಸಂಗತಿ. ಕಾಲೇಜು ಪುರಾಣ ಮುಂದುವರೆಸಿರಿ.
ಪ್ರೀತಿಯಿಂದ
ಪೆಜತ್ತಾಯ ಎಸ್. ಎಮ್.
ಕಾಲೇಜು ಭದ್ರವಾಗಿ ನಿಂತಿಲ್ಲದೇ ಏನಾಗಿದೆ….. ಅಲ್ಲಿ ನಾವಿಲ್ವಲ್ಲಾ…..
Preethiya Ashok
Nimma college dinagala nenepugalu bahala ishtavaythu.Naanu odiddu St Philomena’s College ,Mysore nalli. Aa dinagalu gnapakakke banthu.
Nimma ee prayathna vannu munduvarisiri.Bahala chennagidhe.
ಚೆನ್ನಾಗಿದೆ, ಮುಂದಿನ ಕಂತಿಗಾಗಿ ಕುತೂಹಲ.. ೧೯೯೦ ರಲ್ಲಿ ಯುವರಾಜ ಕಾಲೇಜ್ ನಲ್ಲಿ ನಡೆದ ವ್ಯಾಲ್ಲ್ಯುಯೇಶನ್ ಕ್ಯಾಂಪ್ ನಲ್ಲಿ ಲತಾ ಬಿದ್ದಪ್ಪ ನವರನ್ನು ನೋಡಿದ್ದೇ . ಆಮೇಲೆ ನಮ್ಮದು ಕುವೆಂಪು ವಿವಿ ಆಯಿತಲ್ಲ. ಆದರೆ ಈಗಲೂ ಮೈಸೂರಿನಲ್ಲಿ ರಜಾ ಕ್ಕಾಗಿ ಹೋದಾಗ ಆ ಪರಿಸರದಲ್ಲಿ ಹೋದರೆ ನಾನು ಮಾನಸಗಮ್ಗೊತ್ರಿಯಲ್ಲಿದ್ದ ದಿನಗಳು ನೆನಪಾಗುತ್ತವೆ. ನಮ್ಮ ಲೇಡೀಸ್ ಹಾಸ್ಟೆಲ್ ಡೇ ಕಾರ್ಯಕ್ರಮವನ್ನು ಒಂದುಸಲ ಸೆಂಟಿನರಿ ಹಾಲ್ ನಲ್ಲಿ ಮಾಡಿದ್ದೆವು ..
ಬಹಳ ಇಷ್ಟವಾಯಿತು, ನಿಮ್ಮ ನೆನಪಿನ ಲಹರಿ. ದಯವಿಟ್ಟು ಮುಂದುವರಿಸಿ.
ಮಹಾರಾಜಾ ಕಾಲೇಜಿನ ನೆನಪು ಬರೆಯಲು ಹೊರಟು …ಅದೀಗ ಹನುಮಂತನ ಬಾಲದಂತೆ ಬೆಳಿತಾ ಇದೆ ….
ಆದರೆ ಈ “ನೆಟ್” ಮಾತ್ರಾ ಜೀವ ತಿಂತಾ ಇದೆ. ಇವತ್ತು ಗೂಗ್ಲ್ ಮದ್ಯಾಹ್ನದಿಂದಲೇ ಕೈ ಕೊಟ್ಟಿದೆ. ಬ್ಲಾಗ್ ಗಳು ಓಪನ್ ಆಗ್ತಾ ಇವೆ …. ನಾನಂತೂ ದೊಡ್ಡ ಅಜ್ಞಾನಿ ……
ಏನೇ ಆದರೂ …. ನೆನಪಿನ ಸುರುಳಿಯನ್ನು ಬಿಚ್ಚಲು …. ನೆನಪು ಮಾಡಿಕೊಟ್ಟದ್ದಕ್ಕೆ ….ಅಶೋಕ್…
ನಿಮಗೆ ದೊಡ್ಡ Thanks..
———- ಮೂರ್ತಿ ದೇರಾಜೆ
ನೋಡಿ …ಗೂಗ್ಲ್ ಮೂಲಕ ಪಬ್ಲಿಷ್ ಮಾಡ್ಲಿಕ್ಕೆ ಸಾದ್ಯ ಆಗ್ಲಿಲ್ಲ….. Anonymous ಆಗಿ ಸಾದ್ಯ ಆಯ್ತು … ಏನಿದು…???
—- ಮೂರ್ತಿ
ಮೂರ್ತಿ ಆಯ್ಕೆಗಳಲ್ಲಿ Name/URl ಆರಿಸಿಕೊಂಡು ಬರುವ ಅಂಕಣದಲ್ಲಿ ನಿಮ್ಮ ಹೆಸರು ನಮೂದಿಸಿದರೆ ತಕರಾರಿಲ್ಲದೆ ಒಪ್ಪಿಕೊಳ್ಳುತ್ತದೆ. ಅನಾಮಧೇಯತ್ವಕ್ಕಿಂತ ಒಂದು ಹಂತ ಮೇಲೆ 🙂
ಜಾಲದ ಹೋರಾಟ ನೀವು ಇಲಾಖೆಯೊಡನೇ ಮಾಡಬೇಕು. ನಾನೇನ್ಮಾಡ್ಲೀ 🙁
In fact very recently, myself and my son, we sent a list of 50 illustrious names of Maharaja’s College alumni to their website which bounced back..!!! They have not bothered to keep it alive. It was Dr C.D.G who quoted Steele “It is the mind which makes heaven out of hell and hell out of heaven”. I strongly endorse Dr.Panditaradhya’s views. I fondly remember a non-descript classmate like Devanur Mahadeva sitting with us in Kannada class in junior B.A. hall who later on became “Nadoja”. I also lovingly remember “The Prince” for us Srikant (only) playing Cricket and Table Tennis with us. The unassuming democratic prince even attended a NCC camp as an ordinary cadet. How can we forget “The Prince”travelling by third class with the University Cricket Team to play a match in Madras, where his father was Governor. He stayed with the other students in an ordinary hostel. Maharaja’s also gave me an opportunity to see and listen to Gokak, Shivaram Karanth, Bendre, Kuvempu, Umashankar Joshi (Jnanapith Award Winner), Vikram Sarabhai and musicians like Mysore Violinist T. Chowdaiah etc. Thank God ! How my own perceptions and experiences and conclusions are so different from A…Shoka…Vardhana…..?
ಅಯ್ಯೋ ಎಷ್ಟು ಚೆನ್ನಾಗಿದೆ ”ಊರೆಲ್ಲ ನಕ್ಕ ಮೇಲೆ ನಮ್ಮ ಮನೆಯ ಕೆಪ್ಪ ನಕ್ಕ ” ಅನ್ನುವಂತೆ ನಿಮ್ಮ ಲೇಖನವನ್ನು ನಾನು ಈಗ ಆಸ್ವಾದಿಸಿದೆ. ನೆನಪು ಯಾವಾಗಲೂ ಮಧುರ.
ನೆನಪುಗಳನ್ನು ಇಷ್ಟು ಹಸಿರಾಗಿ ಇಟ್ಟಿರಬೇಕಾದರೆ ಆ ವಾತಾವರಣ ಹಾಗಿದ್ದಿರಲೇಬೇಕು! ಯಾವುದೇ ಸಂಸ್ಥೆಯ ಇತಿಹಾಸ, ವೈಭವ ಇತ್ಯಾದಿ ಅದಕ್ಕೊಂದು ಮೌಲ್ಯ ತಂದುಕೊಡಬಹುದಾದರೂ ಅಂದಂದಿನ ವ್ಯಕ್ತಿಗಳು, ಅದರ ಉಪಯುಕ್ತತೆಯನ್ನು ನಿರ್ಧರಿಸುತ್ತವೆ ಎನ್ನುವುದು ನೂರಕ್ಕೆ ನೂರು ನಿಜ! ನಿಮ್ಮ ನೆನಪಿನ ಸರಮಾಲೆ ಓದಿ ಖುಷಿ ಪಟ್ಟೆ. ಮುಂದುವರೆಸಿ.