ಮೊನ್ನೆ ಮಾರ್ಚ್ ತಿಂಗಳಲ್ಲಿ ನಾವು (ದೇವಕಿ ಸಹಿತ) ಅನ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಬೇಕಿದ್ದವರು ಎರಡು ದಿನ ಮುಂಚಿತವಾಗಿಯೇ ಹೋದದ್ದು – ಪ್ರೊ| ಸಿ.ಎನ್. ರಾಮಚಂದ್ರನ್ ಅವರ ಆತ್ಮಕಥೆ – ‘ನೆರಳುಗಳ ಬೆನ್ನು ಹತ್ತಿ’ ಮತ್ತು ಪ್ರೊ| ಬಿ.ಎ. ವಿವೇಕ ರೈ ಸಂಪಾದಕತ್ವದಲ್ಲಿ ಸಿಎನ್ನಾರ್ ಅವರಿಗೆ ಕೊಡಲಿದ್ದ ಅರ್ಥಪೂರ್ಣ ಸಂಭಾವನಾ ಗ್ರಂಥ – ‘ರೂಪಾಂತರ’ಗಳ ಲೋಕಾರ್ಪಣದಲ್ಲಿ ಹಾಜರಿರುವ ಸಂತೋಷಕ್ಕಾಗಿ. (ಸಿಎನ್ನಾರ್ ಕುರಿತಂತೆ ನಾನು ಹೊಸತೇನೂ ಹೇಳಬೇಕಿಲ್ಲ. ಪ್ರಾಸಂಗಿಕವಾಗಿ ಎರಡು ವರ್ಷಗಳ ಹಿಂದೆಯೇ ಹೇಳಿದ್ದನ್ನು ಓದಲು ಇಲ್ಲಿ ಚಿಟಿಕೆ ಹೊಡೆಯಿರಿ). ಅಲ್ಲಿ ಅಂದಿನ ಅತಿ ಗಣ್ಯ ವ್ಯಕ್ತಿ ಸಿಎನ್ನಾರ್ ಸಪತ್ನೀಕರಾಗಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನ ಅಂಗಳದಲ್ಲಿ ನಿಂತುಕೊಂಡು ಬಂದವರೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಿದ್ದ ಪರಿ ನಮ್ಮ ಸಂತೋಷವನ್ನು ಇಮ್ಮಡಿಸಿತು. ಸೀಎನ್ನಾರ್ ಪುಸ್ತಕದ ಮುನ್ನುಡಿಯಲ್ಲಿ “ಇದು ಕೇವಲ ನನ್ನೊಬ್ಬನ ಕಥೆಯಾಗಲು ಸಾಧ್ಯವಿಲ್ಲ” ಎಂದಿರುವುದು ಮಾತಿನ ಅಲಂಕಾರಕ್ಕಾಗಿ ಅಲ್ಲ ಎನ್ನುವಂತೆಯೇ ಇತ್ತು ಅವರ ನಡೆ. ಸಭೆಯಲ್ಲಿ ಆತ್ಮೀಯ ಗೆಳೆಯನಾಗಿ ವಿವೇಕ ರೈ, ಅಭಿಮಾನಿಯಾಗಿ ಚಂದ್ರಶೇಖರ ಕಂಬಾರ ಮತ್ತು ಕುಂ. ವೀರಭದ್ರಪ್ಪ, ಅಭಿನಂದನಕಾರರಾಗಿ ಟಿ.ಪಿ. ಅಶೋಕ ಮತ್ತು ಪುರುಷೋತ್ತಮ ಬಿಳಿಮಲೆ, ಶಿಷ್ಯನಾಗಿ ರವಿ ಭಟ್, ಪ್ರಕಾಶಕನಾಗಿ ‘ಅಂಕಿತ’ದ ಪ್ರಕಾಶ ಕಂಬತ್ತಳ್ಳಿ ಪ್ರತ್ಯೇಕ ಪ್ರತ್ಯೇಕವಾಗಿ ಸೀಎನ್ನಾರ್ ಕುರಿತಂತೆ ಹಾರ್ದಿಕವಾಗಿಯೇ ಮಾತಾಡಿದರು. ಪೂರ್ವರಂಗದಲ್ಲಿ ಸಿಎನ್ನಾರ್ ಅವರ ಓರ್ವ ಮೊಮ್ಮಗಳು ಹಾಡಿದರೆ, ಇನ್ನೋರ್ವಳು ಮೃದಂಗ ಪಕ್ಕವಾದ್ಯ ಕೊಟ್ಟದ್ದೂ ಭಾವಪೂರ್ಣವಾಗಿತ್ತು. ಕೊನೆಯಲ್ಲಿ ಕೃತಜ್ಞತಾಭಾರದಲ್ಲಿ ಬಾಗಿದ ಸೀಎನ್ನಾರ್ ಅವರ ಹೃದಯ ತುಂಬಿದ ಮಾತುಗಳಿಗೆ ನಾನು ದುರ್ಬಲ ಅರ್ಥ ಕಟ್ಟುವುದಕ್ಕಿಂತ ನೀವೇ ಕಂಡು, ಕೇಳಿನೋಡಿ.

ಆತ್ಮಕಥೆಯಲ್ಲಿ ಸೀಎನ್ನಾರ್ ತಮ್ಮ ಮಹಾರಾಜಾ ಕಾಲೇಜಿನ ವಿದ್ಯಾರ್ಥಿ ದಿನಗಳನ್ನು ತುಂಬ ಸ್ಮರಣೀಯವಾಗಿಯೇ ಚಿತ್ರಿಸಿದ್ದಾರೆ. ಸಹಜವಾಗಿ ಕಳೆದ ಎರಡು ವಾರಗಳಲ್ಲಿ ನಾನಿಲ್ಲಿ ಅದೇ ಕಾಲೇಜಿನ ಬಗ್ಗೆ ನನ್ನ ನೆನಪುಗಳನ್ನು ಬಿತ್ತರಿಸುವಾಗ ಹಿನ್ನೆಲೆಯಲ್ಲಿ ದಟ್ಟವಾಗಿದ್ದ ಎರಡು ಉಲ್ಲೇಖಗಳಲ್ಲಿ ನೆರಳುಗಳ ಬೆನ್ನು ಹತ್ತಿ ಮುಖ್ಯವಾದುದು. (ಇನ್ನೊಂದು – ಅಭಿನವ ಪ್ರಕಾಶನ ಕೆಲವು ವರ್ಷಗಳ ಹಿಂದೆ ಮಹಾರಾಜಾ ಕಾಲೇಜಿನ ಬಗ್ಗೆಯೇ ಒಂದು ವಿಸ್ತೃತ ಸ್ಮರಣ ಲೇಖನಗಳ ಸಂಕಲನ ತಂದಿದೆ. ಅದರ ಓದಿನ ನನ್ನ ನೆನಪು ಮಸಕಾಗಿದೆ) ಹಾಗಾಗಿ ನಾನು ಅಲ್ಲೇ ಒಂದೆಡೆ ಸ್ಪಷ್ಟವಾಗಿಯೇ ಹೇಳಿಕೊಂಡಿದ್ದೇನೆ: “…ಇನ್ನಷ್ಟು ಕಥನಗಳನ್ನು ಇದರ ಓದುಗರಲ್ಲಿರುವ ಇನ್ನಷ್ಟು ಸಮರ್ಥ ಶಿಷ್ಯರುಗಳಿಗೆ (ಉದಾಹರಣೆಗೆ ಪ್ರೊ| ಸಿಎನ್ ರಾಮಚಂದ್ರನ್, ಸಹಪಾಠಿ ಗೆಳೆಯರಾದ ನಾಗಾನಾಥ್, ಶಂಕರಲಿಂಗೇ ಗೌಡ…) ವಿಸ್ತರಿಸಲು ಬಿಡುತ್ತೇನೆ.” ಅದಕ್ಕೆ ಸ್ಪಂದಿಸುತ್ತ ಗೆಳೆಯ ದೇರಾಜೆ ಮೂರ್ತಿ, ನಾಗಾನಾಥ್, ಪಂಡಿತಾರಾಧ್ಯ, ನನಗೆ ಪೂರ್ವಪರಿಚಿತರೇ ಆದರೂ ‘ಮಹಾರಾಜ-ಸಂಬಂಧ’ದಲ್ಲಿ ಅಪರಿಚಿತರಾಗಿದ್ದ ಟಿ.ಎಸ್. ಗೋಪಾಲ್ ಈಗಾಗಲೇ ಟಿಪ್ಪಣಿಗಳನ್ನು ಹಾಕಿ ಜಾಲತಾಣವನ್ನು ಸಮೃದ್ಧಗೊಳಿಸಿದ್ದಾರೆ (ಇನ್ನಷ್ಟು ಬರಲಿವೆ!). ‘ಇನ್ನೂ ಯಾಕ ಬರಲಿಲ್ಲಾ ಚಿಲಕುಂದ…’ ಎಂಬ ತುಡಿತ ಹೆಚ್ಚಾದಾಗ ಸೀಎನ್ನಾರ್ ಅವರನ್ನು ಪ್ರತ್ಯೇಕವಾಗಿ ಮಿಂಚಂಚೆಯಲ್ಲಿ ಮಿಡಿದು ನೋಡಿದೆ. ಠಪ್ಪಂತ ಬಂತು ಅವರ ಪತ್ರ, ಎಂದಿನ ಅಸಾಧಾರಣ ಮತ್ತು ಅಪಾರ ಪ್ರೀತಿ ಹಾಗೂ ವಿನಯದೊಡನೆ:

ಪ್ರಿಯ ಅಶೋಕವರ್ಧನ ಅವರಿಗೆ:

ನಮಸ್ಕಾರ. ನಿಮ್ಮ ಎರಡು ಕಂತುಗಳನ್ನು ಓದಿ, ನನ್ನ ನೆನಪುಗಳನ್ನು ಹಂಚಿಕೊಳ್ಳುವ ಒತ್ತಡವನ್ನು ತಡೆಯಲಾರದೆ, ನನ್ನ ಆತ್ಮಕಥನದಿಂದ ಕೆಲವು ಭಾಗಗಳನ್ನು ‘ಕಟ್ ಅಂಡ್ ಪೇಸ್ಟ್’ ಮಾಡಿ ನಿಮಗೆ ಕಳಿಸುತ್ತಿದ್ದೇನೆ. ಇದನ್ನೂ ನಿಮ್ಮ ಅನುಭವಗಳ ಮಾಲಿಕೆಯಲ್ಲಿ ಸೇರಿಸಿದರೆ ಸಂತೋಷವಾಗುತ್ತದೆ. ಆದರೆ, ಹಾಗೆ ಮಾಡುವಾಗ, ಯಾವ ಭಾಗವನ್ನೂ/ಪ್ಯಾರಾವನ್ನೂ/ವಾಕ್ಯವನ್ನೂ ಬಿಡುವ/ತಿದ್ದುವ ಸ್ವಾತಂತ್ರ್ಯ ನಿಮಗಿದೆ.

ನಿಮ್ಮ,
ಸಿ.ಎನ್. ರಾಮಚಂದ್ರನ್

ನನಗೆ ಥಟ್ಟಂತ ಹೊಳೆದದ್ದು ಒಂದೇ – ಕಬ್ಬಿಣದ ಕೊಡಲಿ ನಿರೀಕ್ಷೆಯಲ್ಲಿದ್ದವನಿಗೆ ಚಿನ್ನದ ಕೊಡಲಿ ಸಿಕ್ಕಿದ ಹಾಗಾಗಿದೆ. ಅವರ ಬರಹದಲ್ಲಿ ಒಂದು ಚುಕ್ಕಿ ವ್ಯತ್ಯಾಸವಾಗದಂತೆ ಈಗ ಇದೋ ನಿಮಗೆ:

ಮಹಾರಾಜಾ ಕಾಲೇಜು, ಮೈಸೂರು, ಇತ್ಯಾದಿ. (ಮಹಾರಾಜ ನೆನಪು ಭಾಗ ಮೂರು)
ಪ್ರೊ| ಸಿ.ಎನ್.ರಾಮಚಂದ್ರನ್

ಕಳೆದ ಶತಮಾನದ ಐವತ್ತನೆಯ ದಶಕವನ್ನು ಮಹಾರಾಜಾ ಕಾಲೇಜಿನ ಇಂಗ್ಲೀಷ್ ವಿಭಾಗದ ಸ್ವರ್ಣಯುಗ ಎಂದು ಕರೆಯಬಹುದು. ನಾನು ಇಂಗ್ಲೀಷ್ ಆನರ್ಸ್ ವಿದ್ಯಾರ್ಥಿಯಾಗಿ ಮಹಾರಾಜಾ ಕಾಲೇಜ್ ಸೇರಿದ್ದು ಜೂನ್ ೧೯೫೪. ಅಲ್ಲಿಯವರೆಗೆ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ರಂಗಣ್ಣನವರು ಆಗತಾನೆ (ಎಂದರೆ ೫೩ರಲ್ಲಿ) ರಿಟೈರ್ ಆಗಿ ಪ್ರೊ. ಸಿ. ಡಿ. ಎನ್. ( ಪ್ರೊ. ಸಿ. ಡಿ. ನರಸಿಂಹಯ್ಯ) ಆ ವರ್ಷವೇ ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದು ಮತ್ತು ಸುಪ್ರಸಿದ್ಧ ವಿಮರ್ಶಕ ಎಫ್. ಆರ್. ಲೀವಿಸ್‌ನ ಪಟ್ಟಶಿಷ್ಯರಾಗಿ, ಮಹಾರಾಜ ಕಾಲೇಜಿಗೆ ಹಿಂತಿರುಗಿ, ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರಾಗಿದ್ದರು. ವಿಭಾಗದ ಮತ್ತೊಬ್ಬ ಪ್ರೊಫೆಸರ್ ಎಂದರೆ ಭರತರಾಜ ಸಿಂಗ್; ಅವರೂ ಆಗತಾನೆ ಕೇಂಬ್ರಿಜ್‌ನಿಂದ ಹಿಂತಿರುಗಿದ್ದರು. ವಿಭಾಗದಲ್ಲಿದ್ದ ಇತರರೆಂದರೆ ಶ್ರೀ ಪಾರ್ಥಸಾರಥಿ (ಪಾಚು), ಎಂ. ಎನ್. ಪಾರ್ಥಸಾರಥಿ (ಇವರು ಎನ್. ಸಿ. ಸಿ. ಆಫೀಸರ್ ಕೂಡಾ ಆಗಿದ್ದರು), ಸಿ. ಡಿ. ಗೋವಿಂದರಾವ್, ಶಾಂತವೀರಪ್ಪ, ನಾವು ಎರಡನೆಯ ಆನರ್ಸ್‌ನಲ್ಲಿದ್ದಾಗ ಬಂದ ರಾಮರಾವ್, ಬಾಲಸುಬ್ರಹ್ಮಣ್ಯ, ಅಣ್ಣಯ್ಯಗೌಡ, ಮುಂತಾದವರು.

ಸಿ. ಡಿ. ನರಸಿಂಹಯ್ಯನವರ ಬದುಕು ಯಾವುದೇ ರೋಚಕ ಕಥೆ-ಕಾದಂಬರಿಗಳಿಗೆ ವಸ್ತುವಾಗಬಲ್ಲದು. ಕ್ಲೋಸ್‌ಪೇಟೆ ಎಂಬ ಒಂದು ಕಿರು ಗ್ರಾಮದ ಬಡ, ಕೆಳವರ್ಗದ ಹುಡುಗನೊಬ್ಬ ಅಪಾರ ಎಡರು-ತೊಡರುಗಳನ್ನೆದುರಿಸಿ (ಕಾಲೇಜಿನಲ್ಲಿ ಅವರು ಸಂಸ್ಕೃತ ಕಲಿಯಲು ಇಷ್ಟಪಟ್ಟಾಗ ‘ನಿನಗೇಕೆ ಸಂಸ್ಕೃತ? ಕನ್ನಡ ಕಲಿ’ ಎಂದು ಬ್ರಾಹ್ಮಣ ಶಿಕ್ಷಕರೊಬ್ಬರು ಹೇಳಿದುದನ್ನು ಅವರು ಎಂದೂ ಮರೆಯಲಿಲ್ಲ), ತನ್ನ ಶಿಕ್ಷಣವನ್ನು ಛಲದಿಂದ ಮುಂದುವರೆಸಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ. ಪದವಿ ಪಡೆದು, ಅನಂತರ ಪ್ರಸಿದ್ಧ ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದು, ಮೈಸೂರು ವಿ.ವಿ.ಯ ಇಂಗ್ಲೀಷ್ ವಿಭಾಗದಲ್ಲಿ ಮೂರು ದಶಕಗಳ ಕಾಲ ಪ್ರಾಧ್ಯಾಪಕ-ಮುಖ್ಯಸ್ಥರಾಗಿ (೧೯೫೦-೭೯), ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾಗಿ (೧೯೫೭-೬೨), ನಿವೃತ್ತಿಯ ನಂತರ ’ಧ್ವನ್ಯಾಲೋಕ’ದಂತಹ ಮಾದರಿ ಸಂಶೋಧನಾ ಕೇಂದ್ರವನ್ನು ಕಟ್ಟಿ, ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದುದು ಒಂದು ದಂತಕಥೆಯೇ ಸರಿ. ಕೇಂಬ್ರಿಜ್‌ನಲ್ಲಿ ಖ್ಯಾತ ವಿಮರ್ಶಕ ಎಫ಼್. ಆರ್. ಲೀವಿಸ್‌ನ ಪಟ್ಟ ಶಿಷ್ಯರಾಗಿದ್ದ ಸಿಡಿಎನ್ ಮೈಸೂರು ವಿ. ವಿ.ಯ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದನಂತರ ಪಠ್ಯಾವಳಿ, ಬೋಧನಕ್ರಮ, ಪರೀಕ್ಷಾ ಪದ್ಧತಿ, ಇವೆಲ್ಲವುಗಳಲ್ಲಿಯೂ ಆಮೂಲಾಗ್ರ ಬದಲಾವಣೆಗಳನ್ನು ಮಾಡಿ, ಮೈಸೂರು ವಿ. ವಿ.ಯ ಇಂಗ್ಲೀಷ್ ವಿಭಾಗ ಇಡೀ ಭಾರತದಲ್ಲಿಯೇ ಪ್ರಸಿದ್ಧವಾಗುವಂತೆ ಮಾಡಿದರು. ಅಷ್ಟೇ ಅಲ್ಲದೆ, ಬಿ. ಎ. ತರಗತಿಗಳಿಗಿದ್ದ ‘ಕಡ್ಡಾಯ ಇಂಗ್ಲಿಷ್’ ಪೇಪರ್ ಗಳ ಪಠ್ಯಾವಳಿಯನ್ನು ಸಂಪೂರ್ಣ ಬದಲಾಯಿಸಿ, ೧೨ ಪಠ್ಯಗಳನ್ನು ಸೇರಿಸಿದುದು ಅಂದು ಕ್ರಾಂತಿಕಾರಿಯಾಗಿತ್ತು; ಅಷ್ಟೇ ಚರ್ಚಾಸ್ಪದವಾಗಿತ್ತು. (ನನ್ನ ಕಿರಿಯ ಸೋದರಮಾವ ಆಗ ಬಿ. ಎ. ಓದುತ್ತಿದ್ದುದರಿಂದ, ನನಗೆ ಆ ಪಠ್ಯಗಳು ವಿದ್ಯಾರ್ಥಿಗಳಲ್ಲಿ ಹಾಗೂ ಅಧ್ಯಾಪಕರಲ್ಲಿ ಹುಟ್ಟಿಸಿದ ಗೊಂದಲ ನೆನಪಿದೆ; ಆಗಲೇ, ಆ ಪಠ್ಯಗಳಲ್ಲಿ ಸೇರಿದ್ದ ವಾಲ್ಟೇರ್ ನ Candide ಕಾದಂಬರಿಯನ್ನು ಓದಿದ್ದು.) ಒಂದೆರಡು ವರ್ಷಗಳನಂತರ ಸಿಂಡಿಕೇಟ್ ಸಿಡಿಎನ್ ಅವರ ವಿರೋಧವನ್ನು ಲಕ್ಷಿಸದೆ ಅವುಗಳ ಜಾಗದಲ್ಲಿ ಮತ್ತೆ ಮೊದಲಿನಂತೆ ಮೂರು ಪಠ್ಯಗಳನ್ನು ನಿಗದಿ ಮಾಡಿತು. ( ಆ ಕಾಲಘಟ್ಟದಲ್ಲಿ, ೧೯೫೪-೫೮ರ ಅವಧಿಯಲ್ಲಿ, ನಾನು ಆ ವಿಭಾಗದ ವಿದ್ಯಾರ್ಥಿಯಾಗಿದ್ದುದು ನನ್ನ ಅದೃಷ್ಟ.) ಮುಖ್ಯವಾಗಿ, ಅಂದಿದ್ದ ಆನರ್ಸ್-ಎಂ.ಎ. ಪದವಿಗಳ ಪಠ್ಯಾವಳಿಗಳನ್ನು ಆಮೂಲಾಗ್ರವಾಗಿ ಬದಲಾಯಿಸಿ, ಪರಂಪರಾಗತವಾಗಿದ್ದ ‘ಮಿಡ್ಲ್ ಇಂಗ್ಲೀಷ್ ಮತ್ತು ಛಾಸರ್,’ ‘ಪ್ರೊಸೊಡಿ’ (ಛಂದಃಶಾಸ್ತ್ರ), ‘ಇಂಗ್ಲೀಷ್ ಭಾಷೆಯ ಚರಿತ್ರೆ,’ ‘ಇಂಗ್ಲೀಷ್ ಸಾಹಿತ್ಯ ಚರಿತ್ರೆ,’ ಇತ್ಯಾದಿಗಳನ್ನು ಕೈಬಿಟ್ಟು, ಅವುಗಳ ಬದಲಿಗೆ ಆಧುನಿಕ ಪಠ್ಯಗಳನ್ನು ಸೇರಿಸಿದರು; ಹಾಪ್‌ಕಿನ್ಸ್, ಎಲಿಯಟ್, ಯೇಟ್ಸ್, ಮುಂತಾದವರ ’ಆಧುನಿಕ ಕಾವ್ಯ’ಕ್ಕೆ, ಹಾಗೂ ರಿಚರ್ಡ್ಸ್, ಎಲಿಯಟ್, ಲೀವಿಸ್ ಮುಂತಾದವರ ನವ್ಯ ವಿಮರ್ಶೆಗೆ ಆದ್ಯತೆ ಕೊಟ್ಟರು. ಪ್ರತಿ ಬುಧವಾರವೂ ಸೇರುತ್ತಿದ್ದ ’ಲಿಟರರಿ ಕ್ಲಬ್’ ಸಭೆಗಳಲ್ಲಿ ನಡೆಯುತ್ತಿದ್ದ ಗಂಭೀರ ವಿಚಾರ-ಚರ್ಚೆಗಳಲ್ಲಿ ವಿದ್ಯಾರ್ಥಿಗಳೂ ನೇರವಾಗಿ (ಮತ್ತು ಕಡ್ಡಾಯವಾಗಿ) ಭಾಗವಹಿಸುವಂತೆ ಮಾಡಿದರು. ತರಗತಿಗಳಲ್ಲಿ ಒಂದು ಪಠ್ಯವು ಮುಗಿದನಂತರ, ಅದರ ವಿವಿಧ ಆಯಾಮಗಳನ್ನು ಕುರಿತು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ವಿಮರ್ಶಾ ಪ್ರಬಂಧವನ್ನು ಬರೆದು, ತರಗತಿಯಲ್ಲಿ ಅದನ್ನು ಮಂಡಿಸಿ, ಇತರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಅನಂತರ ಅವೆಲ್ಲವನ್ನೂ ಸಿಡಿಎನ್ ಓದಿ, ಆ ತರಗತಿಯ ಬಗ್ಗೆ ತಮ್ಮದೇ ಆದ ಮೌಲ್ಯಮಾಪನ ಮಾಡುತ್ತಿದ್ದರು. (ಇಂತಹ ಮೌಲ್ಯಮಾಪನದಲ್ಲಿ ನನ್ನ ಬ್ಯಾಚ್ ಅತ್ಯಂತ ಕೆಳಗಿದ್ದು, ಅಧ್ಯಾಪಕರೆಲ್ಲರಿಗೂ ಅದೊಂದು ಜೋಕ್ ಆಗಿತ್ತು.) ಕೇಂಬ್ರಿಜ್ ಮಾದರಿಯಲ್ಲಿ ಇಡೀ ಕಾಲೇಜಿನಲ್ಲಿ ‘ಹೌಸ್ ಸಿಸ್ಟಿಮ್’ ಜಾರಿಗೆ ತಂದರು. (ಪ್ರತಿಯೊಬ್ಬ ಅಧ್ಯಾಪಕನಿಗೂ ಕೆಲವು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ವಹಿಸಿ, ಅವರ ಹಿತಾಸಕ್ತಿಗಳನ್ನು ಕಾಪಾಡುವಂತೆ ಮಾಡುವ ಪದ್ಧತಿ; ಮುಖ್ಯವಾಗಿ, ಸ್ಕಾಲರ್ಷಿಪ್, ಫ್ರೀಷಿಪ್, ಇತ್ಯಾದಿಗಳಿಗೆ ಸಂಬಂಧಿಸಿದ ‘ಹೌಸ್’ನ ರೆಕಮೆಂಡೇಷನ್ ಬೇಕಿತ್ತು.) ಒಟ್ಟಿನಲ್ಲಿ, ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆಗಳನ್ನು ಪ್ರತಿಯೊಬ್ಬರೂ ಗಂಭೀರವಾಗಿ, ಜವಾಬ್ದಾರಿಯುತವಾಗಿ ಪರಿಗಣಿಸುವಂತಹ ವಾತಾವರಣವನ್ನು ಸಿಡಿಎನ್ ನಿರ್ಮಿಸಿದರು. ಕನ್ನಡದ ನವ್ಯ ಸಾಹಿತ್ಯದ ಚಳುವಳಿಯ ಮುಂಚೂಣಿಯಲ್ಲಿದ್ದ ಬಹುತೇಕ ಲೇಖಕರು ( ಭೋಗಿಶಯನ, ಎಂಜಿಕೆ, ರಾಜೀವ ತಾರಾನಾಥ್, ಅನಂತಮೂರ್ತಿ, ಶ್ರೀನಿವಾಸ ರಾವ್, ಮಿರ್ಲೆ ವಿಶ್ವನಾಥ್, ಡಿ. ಎ. ಶಂಕರ್, ಇತ್ಯಾದಿ) ಆ ಕಾಲಘಟ್ಟದಲ್ಲಿ ಸಿಡಿಎನ್ ಅವರ ಪ್ರಿಯ ಶಿಷ್ಯರಾಗಿದ್ದುದು ಆಕಸ್ಮಿಕವೇನಲ್ಲ. ಕನ್ನಡ ನವ್ಯ ಚಳುವಳಿಗೆ ಸಿಡಿಎನ್ ಅವರ ಪರೋಕ್ಷ ಪ್ರಭಾವ-ಪ್ರೇರಣೆಗಳು ಗಮನೀಯ.

ನಾನು ೧೯೫೪ರಲ್ಲಿ ಇಂಗ್ಲೀಷ್ ಆನರ್ಸ್ ವಿಭಾಗಕ್ಕೆ ಸೇರಿದಾಗ ಸಿಡಿಎನ್ ಅವರೇ ‘ಆಧುನಿಕ ಬ್ರಿಟಿಷ್ ಕಾವ್ಯ’ ಮತ್ತು ‘ ಪ್ರಾಯೋಗಿಕ ವಿಮರ್ಶೆ’ ಈ ಎರಡೂ ಪೇಪರ್ ಗಳನ್ನು ಕಲಿಸುತ್ತಿದ್ದರು. ಒಮ್ಮೆ, ತರಗತಿಯೊಂದರಲ್ಲಿ ಅಂದು ಕಲಿಸಬೇಕಿದ್ದ ರಾಬರ್ಟ್ ಬ್ರಿಜಸ್ ಎಂಬ ಬ್ರಿಟಿಷ್ ಕವಿಯ (ಆ ಕಾಲದಲ್ಲಿ ’ಮಹಾಕೃತಿ’ಯೆಂದು ಪರಿಗಣಿಸಲ್ಪಟ್ಟಿದ್ದ) ಟೆಸ್ಟಮೆಂಟ್ ಆಫ಼್ ಬ್ಯೂಟಿ ಎಂಬ ಕೃತಿಯ ನಾಲ್ಕು ಸಾಲುಗಳನ್ನು ಓದಿ, ” ಏನ್ರೀ — ಇದನ್ನೂ ಕಾವ್ಯ ಅಂತಾರಲ್ರೀ — ಛೇ!” ಎಂದು ಉದ್ಗರಿಸಿ, ಧೊಪ್ಪನೆ ಆ ಕೃತಿಯನ್ನು ನೆಲಕ್ಕೆಸೆದು, ಗಾಢ ವಿಷಾದದಿಂದ ಬಾಗಿಲ ಬಳಿ ನಡೆದು ಅಲ್ಲಿ ನಿಂತರು. (ತಮ್ಮ ಉತ್ಕಟ ಭಾವನೆಗಳನ್ನು -ಮುಖ್ಯವಾಗಿ ವಿಷಾದವನ್ನು –ಪ್ರಕಟಿಸಬೇಕಾದರೆ ಅವರು ಕನ್ನಡ ಉಪಯೋಗಿಸುತ್ತಿದ್ದರು.)

ಮತ್ತೊಂದು ತರಗತಿಯಲ್ಲಿ, ಹಾಪ್‌ಕಿನ್ಸ್ ಕವಿಯ “I caught this morning, morning’s minion …dapple-dawn-drawn -falcon” ಎಂಬ ಸಾಲುಗಳನ್ನು ಭಾವಪೂರಿತವಾಗಿ ಓದುತ್ತಾ, ಬೆರಳೆತ್ತಿ ಆಕಾಶದಲ್ಲಿ ಬಹುವರ್ಣದ ಅರುಣೋದಯವನ್ನು ತನ್ನ ಹಿಂದೆಯೇ ಒಯ್ಯುತ್ತಿದ್ದ ಹಕ್ಕಿಯನ್ನು ’ಅಗೋ, ಅಲ್ಲಿ’ ಎಂದು ನಮಗೆ ತೋರಿಸಿ, ಒಂದು ನಿಮಿಷ ಧ್ಯಾನಮಗ್ನರಾದರು. ಈ ಘಟನೆಗಳು ಒಂದು ‘ನಾಟಕ’ವೆಂದು, ಪ್ರತಿ ವರ್ಷವೂ ಅವರು ಇದೇ ರೀತಿ ಮಾಡುತ್ತಿದ್ದರೆಂದು ಕೆಲವು ವರ್ಷಗಳ ನಂತರ ನಮಗೆ ತಿಳಿದರೂ, ಆ ‘ನಟನೆ’ಯ ಹಿಂದಿದ್ದ ತೀವ್ರತೆ ಹಾಗೂ ಪರಿಣಾಮ ಕಮ್ಮಿಯೇನೂ ಆಗಲಿಲ್ಲ.

ಎಲ್ಲಾ ಆನರ್ಸ್ ವಿಭಾಗಗಳ ವಿದ್ಯಾರ್ಥಿಗಳಿಗೂ ಒಟ್ಟಿಗೆ ‘ಕಡ್ಡಾಯ ಇಂಗ್ಲೀಷ್’ ಪಾಠಗಳು ಜೂನಿಯರ್/ಸೀನಿಯರ್ ಬಿ.ಎ. ಹಾಲ್‌ಗಳಲ್ಲಿ ನಡೆಯುತ್ತಿದ್ದುವು. ಸುಮಾರು ೭೦-೮೦ ವಿದ್ಯಾರ್ಥಿಗಳು ಆ ವಿಶಾಲ ಹಾಗೂ ಎತ್ತರಕ್ಕೆ ಹೋಗುತ್ತಿದ್ದ ಮೆಟ್ಟಿಲುಗಳಿದ್ದ ಆ ಹಾಲುಗಳಲ್ಲಿ ಸೇರುತ್ತಿದ್ದರು. ಅವರಿಗೆ ಇಂಗ್ಲೀಷ್ ಪಠ್ಯಗಳನ್ನು ಬೋಧಿಸುವುದು ಒಂದು ಸವಾಲೇ ಆಗಿತ್ತು. ಆಗ ತಾನೇ ಎಂ. ಎ. ಮುಗಿಸಿ, ಇಂಗ್ಲೀಷ್ ವಿಭಾಗದಲ್ಲಿಯೇ ಕೆಲಸಕ್ಕೆ ಸೇರಿದ್ದ ಸೇತೂ ಸಾವಿತ್ರಿ ಎಂಬ ಪ್ರತಿಭಾವಂತ ಹಾಗೂ ಸಭ್ಯ ಮಹಿಳೆ ನಮಗೆ ಹಾರ್ಡಿಯ “ಟೂ ಆನ್ ಅ ಟವರ್” ಕಾದಂಬರಿಯನ್ನು ಕಲಿಸಲು ಪ್ರಯತ್ನಿಸುತ್ತಿದ್ದರು; ಅಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸಲಾಗದೆ ಅರ್ಧಕ್ಕೇ ಕೆಲವು ಸಲ ಕ್ಲಾಸ್ ಮುಗಿಸಿ, ತಮ್ಮ ಸ್ಟಾಫ್ ರೂಮಿಗೆ ಅಳುತ್ತಾ ಹೊಗಿದ್ದುದು ನನಗೆ ನೆನಪಿದೆ. ಪಾಚೂ ಅವರಂತೂ ಅರ್ಧ ಘಂಟೆ ಕನ್ನಡ-ಇಂಗ್ಲೀಷ್ ಬೆರೆಸುತ್ತಾ ಪಾಠ ಮಾಡಿ, ಯಾರಾದರೂ ‘ಸಾರ್ ಇಂಗ್ಲೀಷ್ ಕ್ಲಾಸ್’ ಎಂದು ಕೆಣಕಿದರೆ ‘ ಕನ್ನಡದಲ್ಲಿ ಮೊದಲು ಅರ್ಥ ಮಾಡಿಕೊಳ್ಳಿ, ಸಾಕು; ಆಮೇಲೆ ಇಂಗ್ಲೀಷ್’ ಎಂದು ಹೇಳಿ, ಕ್ಲಾಸ್ ಮುಗಿಸುತ್ತಿದ್ದರು.

ಅಂತಹ ದೊಡ್ಡ ತರಗತಿಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದವರೆಂದರೆ ಸಿ. ಡಿ. ಗೋವಿಂದರಾವ್ ಮತ್ತು ವೆಸ್ಲಿ. ಸಿಡಿಜಿ ನೋಡುವುದಕ್ಕೆ ತುಂಬಾ ಬಲಹೀನರಾಗಿ, ಸೆಣಕಲಾಗಿ ಕಂಡರೂ ಅದು ಹೇಗೆ ತಮ್ಮ ತರಲೆಗಳಿಗೆ ಪ್ರಸಿದ್ಧರಾಗಿದ್ದ ವಿದ್ಯಾರ್ಥಿಗಳನ್ನು ನಿಯಂತ್ರಿಸುತ್ತಿದ್ದರು ಎಂಬುದು ಗೊತ್ತಿಲ್ಲ; ಪ್ರಾಯಃ ಅವರ ಆತ್ಮವಿಶ್ವಾಸ ಮತ್ತು ಎಲ್ಲರನ್ನೂ ಗಮನಿಸುತ್ತಿದ್ದ ಕಣ್ಣು. ಹಿಂದೆ, ಅತಿ ಎತ್ತರದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳನ್ನೂ ಅವರು ‘ಯು-ಗೆಟ್ ಔಟ್’ ಎಂದರೆ ಆ ವಿದ್ಯಾರ್ಥಿ, ನಿಧಾನವಾಗಿ, ಒಂದೊಂದೆ ಮೆಟ್ಟಿಲನ್ನ್ನು ಇಳಿಯುತ್ತಾ, ಹೊರಗೆ ಹೋಗುತ್ತಿದ್ದ. ವೆಸ್ಲಿ ಅವರದು ವಾಗ್ಝರಿ; ಮತ್ತು ಹಸನ್ಮುಖ. ಅವರು ವರ್ಷದ ಕೊನೆಯಲ್ಲಿ ಆ ವರ್ಷ ತರಗತಿಯಲ್ಲಿ ಬೋಧಿಸಿದ ಶೇಕ್ಸ್‌ಪಿಯರ್ ನಾಟಕಗಳ ಬಗ್ಗೆ (ನಾನಿದ್ದ ವರ್ಷ “ಕಿಂಗ್ ಲಿಯರ್” ನಾಟಕವಿತ್ತು) ಪ್ರತಿ ಭಾನುವಾರವೂ ವಿಶೇಷ ಉಪನ್ಯಾಸಗಳನ್ನು ಮಾಡುತ್ತಿದ್ದರು; ಅವುಗಳನ್ನು ಕೇಳಲು ಮಹಾರಾಜಾ ಕಾಲೇಜಿನ ವಿದ್ಯಾರ್ಥಿಗಳೇ ಅಲ್ಲದೆ ಶಾರದಾವಿಲಾಸ್, ಸೇಂಟ್ ಫಿಲೋಮಿನಾ ಕಾಲೇಜುಗಳ ವಿದ್ಯಾರ್ಥಿಗಳೂ ಬರುತ್ತಿದ್ದರು; ಸೀನಿಯರ್ ಬಿಎ ಹಾಲ್ ತುಂಬಿ, ಮೆಟ್ಟಿಲುಗಳ ಮೇಲೆ, ಕಿಟಕಿ-ಬಾಗಿಲುಗಳ ಹತ್ತಿರ ಕುಳಿತು, ನಿಂತು, ಅವರ ಉಪನ್ಯಾಸಗಳನ್ನು ಶಾಂತವಾಗಿ ಕೇಳುತ್ತಿದ್ದರು. (ಅಂದಿನ ಕಾಲದಲ್ಲಿ ಹೆಸರುವಾಸಿಯಾಗಿದ್ದ ಅಧ್ಯಾಪಕರ ‘ಸ್ಪೆಷಲ್ ಲೆಕ್ಚರ್ಸ್’ ಕೇಳಲು ಯಾರು ಬೇಕಾದರೂ ಬರಬಹುದಿತ್ತು. ನಾನು ಇಂಟರ‍್ಮೀಡಿಯಟ್ ಕ್ಲಾಸಿನಲ್ಲಿದ್ದಾಗ, ನನ್ನ ಕೆಲವು ಸ್ನೇಹಿತರೊಡನೆ ಆಗ ಫಸ್ಟ್‌ಗ್ರೇಡ್ ಕಾಲೇಜಿನಲ್ಲಿದ್ದ ಪ್ರೊ. ಎಸ್. ಅನಂತನಾರಾಯಣ ಅವರ ‘ವಾಲಂಟರಿ ಪಾವರ್ಟಿ’ (ಗಾಂಧಿಜಿ ಅವರ ಲೇಖನ) ಎಂಬ ಪಾಠವನ್ನು ಕುರಿತ ವಿಶೇಷ ಉಪನ್ಯಾಸವನ್ನು ಕೇಳಲು ಹೋಗಿದ್ದೆ.) ಅಷ್ಟೇ ಜನಪ್ರಿಯರಾಗಿದ್ದ ಮತ್ತೊಬ್ಬರೆಂದರೆ ಆಗ ಫಸ್ಟ್‌ಗ್ರೇಡ್ ಕಾಲೇಜಿನಲ್ಲಿದ್ದ ಪ್ರೊ. ಮೈಲಾರಿ ರಾವ್. ಅವರು ಉಪನ್ಯಾಸ ಮಾಡುತ್ತಿರಲಿಲ್ಲ; ಶೇಕ್ಸ್‌ಪಿಯರಿನ ನಾಟಕಗಳನ್ನು ‘ಅಭಿನಯಿಸುತ್ತಿದ್ದರು.’ ಒಮ್ಮೆ, ಅವರು “ಹ್ಯಾಮ್‌ಲಿಟ್” ಕಲಿಸುವಾಗ, ‘Woman – get thee to a nunnery’ ಎಂಬ ಸಾಲನ್ನು ಕನ್ನಡದಲ್ಲಿ ಅನುವಾದಿಸುತ್ತಾ ‘ಹೋಗೇಏಏ ಹುಚ್ಚುಮುಂಡೆ’ ಎಂದು ಆವೇಶದಿಂದ ತಮ್ಮ ಮುಷ್ಟಿಯಿಂದ ಟೇಬಲ್ ಕುಟ್ಟಿ, ಬೆರಳುಗಳಿಗೆ ಪೆಟ್ಟಾದುದು ಒಂದು ಮರೆಯಲಾಗದ ಸಂಗತಿ.

ಆಗ ಆನರ್ಸ್ ಮತ್ತು ಎಂ. ಎ. ವಿಭಾಗದಲ್ಲಿದ್ದ ವಿದ್ಯಾರ್ಥಿಗಳೂ ಅತ್ಯಂತ ಪ್ರತಿಭಾಶಾಲಿಗಳು, ಮುಂದೆ ಸರಿ ಸುಮಾರು ಎಲ್ಲರೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿ ಹೆಸರುಗಳಿಸಿದವರು-ಯು. ಆರ್. ಅನಂತಮೂರ್ತಿ (ನಾನು ಮೊದಲ ಆನರ್ಸ್‌ನಲ್ಲಿದ್ದಾಗ ಅವರು ಮೂರನೆಯ ಆನರ್ಸ್‌ನಲ್ಲಿದ್ದರು), ಪೋಲಂಕಿ ರಾಮಮೂರ್ತಿ, ಪಿ. ಶ್ರೀನಿವಾಸರಾವ್, ಮಿರ್ಲೆ ವಿಶ್ವನಾಥ್, ಮೀನಾ ಬೆಳ್ಳಿಯಪ್ಪ, ಸೈಯದ್ ಅಮಾನುದ್ದೀನ್, ಪದ್ಮಾ (ರಾಮಚಂದ್ರ ಶರ್ಮ), ಇತ್ಯಾದಿ. ಶ್ರೀನಿವಾಸರಾವ್, ಮಿರ್ಲೆ, ಮತ್ತು ನನಗಿಂತ ಒಂದು ವರ್ಷ ಕೆಳಗಿದ್ದ ವರ್ಮ, ಮುಂತಾದವರು ಕಟ್ಟಿದ್ದ ‘ಮಿತ್ರಮೇಳ’ ಎಂಬ ನಾಟಕ ಸಂಸ್ಥೆ ಆಗ ತುಂಬಾ ಹೆಸರು ಗಳಿಸಿತ್ತು. ನಾನು ಸೇರಿದ ವರ್ಷವೇ ವರ್ಷಾಂತ್ಯದಲ್ಲಿ ಮಿತ್ರಮೇಳದವರು ಪರ್ವತವಾಣಿಯವರ “ಉಂಡಾಡಿ ಗುಂಡ” ನಾಟಕವಾಡಿದರು; ಅದರಲ್ಲಿ ಗುಂಡನ ಪಾತ್ರ ವಹಿಸಿದ್ದ ಶ್ರೀನಿವಾಸರಾವ್ ‘ಎಲ್ಲರೂ ನಮ್ಮನ್ನ ಉಂಡಾಡಿಗಳು ಅಂತ ಯಾಕೋ ಕರೀತಾರೆ?’ ಎಂದು ಕೇಳುತ್ತಲೇ ಮಿರ್ಲೆಯೊಡನೆ ರಂಗಕ್ಕೆ ಪ್ರವೇಶಿಸುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ; ಅದೇನು ಸಹಜ ಚಲನೆ, ಅಗಾಧ ಆತ್ಮವಿಶ್ವಾಸ! ರಂಗದಲ್ಲಿ ಹೇಗೋ ಹಾಗೆ ಕಾಲೇಜಿನಲ್ಲೂ, ಅಷ್ಟೇ ಲೀಲಾಜಾಲವಾಗಿ ಅವರು ಹುಡುಗಿಯರ ದಂಡಿನೊಡನೆ ಮಾತನಾಡುತ್ತಾ ಕಾರಿಡಾರ್ ನಲ್ಲಿ ಹೋಗುತ್ತಿದ್ದರೆ, ನನ್ನಂಥವರಿಗೆ ಇನ್ನಿಲ್ಲದಷ್ಟು ಅಸೂಯೆಯುಂಟಾಗಿ, ‘ಈಗ ಇವರು ಜಾರಿ ಬೀಳಬಾರದೆ?’ ಎಂದು ಅನಿಸುತ್ತಿತ್ತು. ಮಲಗುವಾಗಲೂ ಇಸ್ತ್ರೀ ಮಾಡಿದ ಬಟ್ಟೆಯನ್ನೇ ಹಾಕಿಕೊಂಡು ಮಲಗುತ್ತಾರೆ ಎಂದು ಎಲ್ಲರೂ ಕುಹಕವಾಡುತ್ತಿದ್ದಂತೆ ಸುಂದರವಾಗಿ ಡ್ರೆಸ್ ಮಾಡಿಕೊಂಡು, ಆರಾಮವಾಗಿ ಸಿಡಿಎನ್ ಅವರೊಡನೆಯೂ ಮಾತನಾಡುತ್ತಿದ್ದ ವ್ಯಕ್ತಿ ಶ್ರೀನಿವಾಸರಾವ್.

(ನಾನು ಎಂ. ಎ. ಆದನಂತರ ಬಿಜಾಪುರದ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದಾಗ, ೧೯೫೯ರಲ್ಲಿ, ಇತರರಿಂದ ನಾನು ಕೇಳಿದ ವದಂತಿ: ‘ಮಿತ್ರಮೇಳ’ ದಲ್ಲಿ ಅನೈತಿಕ ಸಂಗತಿಗಳು ನಡೆಯುತ್ತಿವೆ ಮತ್ತು ಇವಕ್ಕೆ ಸಿಡಿಎನ್ ಅವರ ಪರೋಕ್ಷ ಬೆಂಬಲವಿದೆ ಎಂದು ಯಾರೋ ದೂರು ಕೊಟ್ಟು, ಆ ವಿಷಯವನ್ನು ಕುರಿತು ‘ಸತ್ಯಶೋಧನೆ’ಗಾಗಿ ಅಂದಿನ ಸಿಂಡಿಕೇಟ್ ಒಂದು ಸಮಿತಿಯನ್ನು ರಚಿಸಿತಂತೆ. ಆ ಸಮಿತಿಯ ಮುಂದೆ, ತಮ್ಮನ್ನು ಸಾಕ್ಷಿಯನ್ನಾಗಿ ಕರೆಯದಿದ್ದರೂ ‘I want to go on record about this issue; you have to hear me’ ಎಂದು ಅನಂತಮೂರ್ತಿಯವರು ಸಮಿತಿಯ ಮುಂದೆ ಹೋಗಿ, ವಿಷದವಾಗಿ ಮಿತ್ರಮೇಳದ ಬಗ್ಗೆ ಮತ್ತು ಪರೋಕ್ಷವಾಗಿ ಸಿಡಿಎನ್ ಬಗ್ಗೆ ಬಂದಿರುವ ದೂರಿನಲ್ಲಿ ಏನೂ ಸತ್ಯವಿಲ್ಲವೆಂದು ಸುಮಾರು ಅರ್ಧ ಘಂಟೆಯವರೆಗೆ ವಾದಿಸಿದರೆಂದು, ಮತ್ತು ಮುಖ್ಯವಾಗಿ ಅವರ ವಾದದಿಂದ ಪ್ರಭಾವಿತರಾಗಿ ಆ ಸಮಿತಿಯ ಸದಸ್ಯರು ಆ ವಿಚಾರಣೆಯನ್ನು ಕೈಬಿಟ್ಟಿತೆಂದು ಗೊತ್ತಾಯಿತು.)

ಸಿಡಿಎನ್ ಅವರ ಎರಡನೆಯ ಮಗ ಸಂಜಯ್ ಹುಟ್ಟುಹಬ್ಬದ ನಿಮಿತ್ತ, ೫೪/೫೫ರಲ್ಲಿ ತಮ್ಮ ಕ್ವಾರ್ಟರ್ಸ್‌ನಲ್ಲಿಯೇ ಮುಂದುಗಡೆ ಇದ್ದ ಹುಲ್ಲುಹಾಸಿನಲ್ಲಿ ಎಲ್ಲರಿಗೂ ಔತಣ ಏರ್ಪಡಿಸಿದ್ದರು; ಆಗ, ಬರುವ ಅತಿಥಿಗಳನ್ನು ಸ್ವಾಗತಿಸಲು ಬಾಗಿಲಲ್ಲಿಯೇ ನಿಂತಿದ್ದವರು ಶ್ರೀನಿವಾಸರಾವ್ ಮತ್ತು ಮಿರ್ಲೆ -ಕಣ್ಣು ಕುಕ್ಕುವ ಸೂಟ್ ಹಾಕಿಕೊಂಡು ‘ಬೋ’ ಕಟ್ಟಿಕೊಂಡು ಮೋಹನಾಂಗರಾಗಿದ್ದವರು. ಅನಂತರ, ಎಲ್ಲರೂ ಬಂದು ಕೂಟ ಪ್ರಾರಂಭವಾದನಂತರ, ಇವರಿಬ್ಬರೂ (ಇನ್ನು ಕೆಲವರೂ ಹಿಮ್ಮೇಳದಲ್ಲಿದ್ದಿರಬಹುದು) “ಹುಟ್ಟು ಬಂಜೆ ಹೊನ್ನಮ್ಮ/ ಹುಟ್ಟಬಹುದೆ ಬುವಿಯಾಗ!” ಎಂದು ಪ್ರಾರಂಭವಾಗುವ ಜನಪದ ಗೀತೆಯನ್ನು ರಂಜನೀಯವಾಗಿ ಹಾಡಿದ್ದರು. ಪೋಲಂಕಿಯವರೂ ಸೂಟ್ ಹಾಕಿಕೊಂಡೇ ಹೆಚ್ಚಿನ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಇವರೆಲ್ಲರಿಗಿಂತ ಸ್ವಲ್ಪ ಬೇರೆಯಾಗಿರುತ್ತಿದ್ದರು; ಅಷ್ಟೇನೂ ಬೇರೆಯವರೊಡನೆ ಬೆರೆಯುತ್ತಿರಲಿಲ್ಲ. ಇಂತಹ ಪ್ರತಿಭಾಶಾಲಿಗಳ ನಡುವೆ ‘ವೆರಿ ಬ್ರೈಟ್’ ಎಂದು ಹೆಸರು ಪಡೆದಿದ್ದವರು ಕೊಡವರಾದ ಮೀನಾ ಬೆಳ್ಳಿಯಪ್ಪ; ಸಿ ಡಿ ಎನ್ ಕೂಡಾ ಅವರೊಡನೆ ತುಂಬಾ ಗಂಭೀರವಾಗಿಯೇ ಮಾತನಾಡುತ್ತಿದ್ದರೆಂದು ನೆನಪು.

ನನ್ನನ್ನು ಆ ದಿನಗಳಲ್ಲಿ ತುಂಬಾ ಪ್ರಭಾವಿಸಿದವರು ಅನಂತಮೂರ್ತಿ. ಆಗಲೇ (ಎಂದರೆ ೫೪-೫೫ರಲ್ಲಿಯೇ) ಅವರ ಬಗ್ಗೆ ಅನೇಕ ದಂತಕಥೆಗಳು ರೊಚಕವಾಗಿ ನಮ್ಮನ್ನು ತಲಪುತ್ತಿದ್ದುವು -ಅವರು ಗೋಪಾಲಗೌಡರ ಮಿತ್ರರಾಗಿದ್ದುದು, ಅದ್ಭುತ ಮಾತುಗಾರರಾಗಿದ್ದುದು, ಅಡಿಗರ ಜೊತೆ ಅವರಿಗೆ ಸ್ನೇಹವಿದ್ದುದು, ಅವರು ಹೊಸ ಅಲೆಯ ಕಥೆಗಳನ್ನು ಬರೆಯುತ್ತಿದ್ದುದು, ಇತ್ಯಾದಿ. ಅವರು ಬರೆದ “ಖೋಜರಾಜ” ಕಥೆಯನ್ನು ಹಾಸ್ಟಲ್ಲಿನ ವಾರ್ಡನ್ ಉ. ಕಾ. ಸುಬ್ಬರಾಯಾಚಾರ್ಯರು ಅದರಲ್ಲಿ ಬರುವ ಕೆಲವು ಲೈಂಗಿಕ ವಿವರಗಳನ್ನು ತೆಗೆದ ಹೊರತು ಅದನ್ನು ಹಾಸ್ಟಲ್ಲಿನ ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟಿಸುವುದಿಲ್ಲವೆಂದು ಹೇಳಿದುದು, ‘ಅದರಲ್ಲಿನ ಒಂದು ಪದವನ್ನೂ ನಾನು ತೆಗೆಯುವುದಿಲ್ಲ’ ಎಂದು ಅನಂತಮೂರ್ತಿಯವರು ಘೋಷಿಸಿದುದು, ಕೊನೆಗೆ ಇತರ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು ತುಂಬಾ ಸಂಕಟದಿಂದ ಅಪ್ಪಟ ಗಾಂಧಿವಾದಿ ಉ.ಕಾ.ಸು. ಅದನ್ನು ಪ್ರಕಟಿಸಿದುದೂ -ಎಲ್ಲವೂ ನಮಗೆ ರೋಚಕ ಕಥೆಗಳೇ. ಆ ಒಂದು ಕಥೆಗಾಗಿ ಆ ವಾರ್ಷಿಕಾಂಕವನ್ನು ಹೇಗೋ ಸಂಪಾದಿಸಿ, ನಾನು ಮತ್ತು ನನ್ನ ಇಬ್ಬರು ಮಿತ್ರರು ನನ್ನ ರೂಮಿನಲ್ಲಿ ಕುಳಿತು ಅದನ್ನು ಘಟ್ಟಿಯಾಗಿ ಓದಿದಾಗ, ನಮಗೆ ಮೂವರಿಗೂ ‘ಅದರಲ್ಲಿರುವ ಯಾವ ವಿವರ ಲೈಂಗಿಕ’ ಎಂದು ಗೊತ್ತಾಗದೆ ಒದ್ದಾಡಿದ್ದೆವು. ಕೊನೆಗೆ ‘ಹಾವನ್ನು ಸೀಳಿ’ ಎಂದು ಬರುವ – ನಮಗೆ ಅರ್ಥವಾಗದ – ವಾಕ್ಯವೇ ಲೈಂಗಿಕ ಪ್ರತಿಮೆಯಾಗಿರಬಹುದೆಂದು ತೀರ್ಮಾನಿಸಿದೆವು. ಅವರ ಮತ್ತೊಂದು ಕಥೆ ಇಂಗ್ಲೀಷ್‌ಗೆ ಅನುವಾದವಾಗಿ ರಾಘವನ್ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ವಾರ್ಸಿಟಿ ಟೈಮ್ಸ್’ನಲ್ಲಿ ಪ್ರಕಟವಾಯಿತು. ಇವೆಲ್ಲವೂ ೫೬ರಲ್ಲಿ ಎಂದೆಂದೂ ಮುಗಿಯದ ಕಥೆ ಸಂಕಲನದಲ್ಲಿ ಸೇರಿದುವು.

ಅನಂತಮೂರ್ತಿಯವರನ್ನು ಮೊದಲ ಬಾರಿಗೆ ನಾನು ನೋಡಿದುದು ನಾನು ಆನರ್ಸ್‌ಗೆ ಸೇರಿ ನಾಲ್ಕೈದು ತಿಂಗಳುಗಳ ನಂತರ -ಒಂದು ಕನ್ನಡ ಕಾರ್ಯಕ್ರಮದಲ್ಲಿ. ಅದನ್ನು ಯಾರು ಏರ್ಪಡಿಸಿದ್ದರೋ ಗೊತ್ತಿಲ್ಲ; ನಮ್ಮ ವಿಭಾಗದ ಕೋಣೆಯೊಂದರಲ್ಲಿಯೇ ಆ ಕಾರ್ಯಕ್ರಮವಿತ್ತು -ಅಡಿಗರ ‘ಭೂಮಿಗೀತ’ ಕವನದ ಓದು ಮತ್ತು ವ್ಯಾಖ್ಯಾನ, ಅನಂತಮೂರ್ತಿಯವರಿಂದ. ಹಾಲ್ ಇನ್ನೂ ತುಂಬಿರಲಿಲ್ಲ; ಆಗ ‘ಬರುವವರು ಬರಲಿ, ನಾವು ಶುರು ಮಾಡಿಬಿಡೋಣ’ ಎಂದು ಅನಂತಮೂರ್ತಿಯವರು ಸಮಯಕ್ಕೆ ಸರಿಯಾಗಿ ಸ್ಟೇಜಿನ ಬಳಿ ಹೋಗಿ, ಭಾವ ಪೂರ್ಣವಾಗಿ “ಉರುಳುರುಳು – ಮೂರೇ ಉರುಳು – ನೋಡಿ, ಈ ಎರಡು ಪದಗಳೇ ಸಮುದ್ರ ಎಷ್ಟು ಹತ್ತಿರದಲ್ಲಿದೆ -ಮೂರೇ ಉರುಳು-ಅನ್ನೋದನ್ನ ತೋರಿಸುತ್ತೆ, ಅಲ್ವಾ?” ಎಂದು ಇಡೀ ಕವನವನ್ನು ಸುಮಾರು ಒಂದು ಘಂಟೆಯ ಅವಧಿಯಲ್ಲಿ ಓದಿ, ಅಭಿನಯಿಸಿ, ವ್ಯಾಖ್ಯಾನಿಸಿದರು. ಅವರು ತಮ್ಮ ಉಪನ್ಯಾಸವನ್ನು ಮುಗಿಸುವ ವೇಳೆಗೆ ಹಾಲ್ ತುಂಬಿ ತುಳುಕುತ್ತಿದ್ದುದು ಅವರ ಚಪ್ಪಾಳೆಯಿಂದ ಗೊತ್ತಾಯಿತು.

ಆಫ್ ಪಿರಿಯಡ್ ಇದ್ದಾಗಲೆಲ್ಲಾ ಹೆಲ್ತ್‌ಕಿಚನ್ ಎಂಬ ಕ್ಯಾಂಟೀನಿಗೆ ನಮ್ಮನ್ನು ಕರೆದುಕೊಂಡು ಹೋಗಿ, ಹೇಗೆ ಅನಕೃ ಅವರಿಗಿಂತ ಕಾರಂತರು ಶ್ರೇಷ್ಠ ಕಾದಂಬರಿಕಾರರು, ಹೆನ್ರಿ ಜೇಮ್ಸ್ ಓದುವುದು ಹೇಗೆ, ವಿವೇಕಾನಂದರಿಗೆ ಏಕೆ ತುಂಬಾ ಸಿಹಿ ತಿನ್ನುವ ಅಭ್ಯಾಸವಿತ್ತು, ಲಾರೆನ್ಸ್ ಏಕೆ ಲೈಂಗಿಕತೆಗೆ ಇನ್ನಿಲ್ಲದ ಮಹತ್ವ ಕೊಡುತ್ತಾನೆ, ಇತ್ಯಾದಿಗಳ ಬಗ್ಗೆ ನಮಗೆ ಪಾಠಮಾಡುತ್ತಿದ್ದರು -ಸಿಗರೇಟ್ ಸೇದುತ್ತಾ, ಎಲ್ಲರನ್ನೂ ಗಮನಿಸುತ್ತಾ. ಮುಖ್ಯವಾಗಿ, ಅಂದು ಅವರ ‘ವಿಗ್ರಹಭಂಜನೆ’ಯೇ ನಮ್ಮೆಲ್ಲರನ್ನೂ ಅವರತ್ತ ಆಕರ್ಷಿಸುತ್ತಿತ್ತು ಎಂದು ಕಾಣುತ್ತದೆ.

ಪ್ರತಿ ಬುಧವಾರ ಸಾಯಂಕಾಲ ನಡೆಯುತ್ತಿದ್ದ ಲಿಟರರಿ ಕ್ಲಬ್‌ನಲ್ಲಿ ಅನಂತಮೂರ್ತಿ ಮತ್ತು ಪೋಲಂಕಿ ಇವರಿಬ್ಬರೇ ಪ್ರಮುಖರು; ಅಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಅವರು ಏನು ಹೇಳುತ್ತಾರೆ ಎಂಬುದನ್ನು ನಾವಿರಲಿ, ಅಧ್ಯಾಪಕರೂ ಗಂಭೀರವಾಗಿ ಗಮನಿಸುತ್ತಿದ್ದರು. ಲಿಟರರಿ ಕ್ಲಬ್ಬಿನ ಕಾರ್ಯಕ್ರಮವೊಂದರಲ್ಲಿಯೇ ನಾನು ಮೊದಲ ಬಾರಿಗೆ ಅಡಿಗರ ಭಾಷಣವನ್ನು ಕೇಳಿದ್ದು. ಅವರು ಪ್ರಾರಂಭಿಸಿದ್ದೇ ಹೀಗೆ (ಇಂಗ್ಲೀಷಿನಲ್ಲಿ): ‘ನಾನು ಕನ್ನಡದ ಕವಿ; ಕಾವ್ಯದ ಬಗ್ಗೆ ನನಗೆ ಕನ್ನಡದಲ್ಲಿ ಮಾತನಾಡಲು ಹೇಳಿದ್ದರೆ ಚೆನ್ನಾಗಿರುತ್ತಿತ್ತು.’ ಆದರೆ, ಕ್ಲಬ್ ಕಾರ್ಯಕ್ರಮದಲ್ಲಿ ಎಲ್ಲರೂ ಇಂಗ್ಲೀಷ್‌ನಲ್ಲಿಯೇ ಮಾತನಾಡಬೇಕಿತ್ತು. ಮುಂದೊಂದು ಸಲ, ಸ್ವಲ್ಪ ಮುಕ್ತವಾಗಿ ನಮ್ಮೊಡನೆ ಸಿಡಿಎನ್ ಮಾತನಾಡುತ್ತಿದ್ದಾಗ, ‘ಅಡಿಗರನ್ನು ಕನ್ನಡದಲ್ಲಿ ಯಾಕೆ ಮಾತನಾಡಲು ಹೇಳಲಿಲ್ಲ?’ ಎಂದು ಅವರನ್ನು ಕೇಳಿದೆ. ಅದಕ್ಕೆ ಅವರು ‘ಓ ನೋ! ದೆನ್ ಹಿ ವುಡ್ ನೆವರ್ ಸ್ಟಾಪ್’ ಎಂದರು. ಸಿಡಿಎನ್‌ಗೆ ಇತರ ಕವಿ-ಲೇಖಕರ ದೀರ್ಘ ಉದ್ಧರಣಗಳೆಂದರೆ ತಿರಸ್ಕಾರ; ಹೇಳುವುದನ್ನು ನೇರವಾಗಿ, ಸ್ಪಷ್ಟವಾಗಿ, ನಮ್ಮ ಮಾತಿನಲ್ಲಿಯೇ ಹೇಳಬೇಕು; ‘I don’t want you to become quote-masters’ ಎನ್ನುತ್ತಿದ್ದರು. ಪ್ರಾಯಃ, ಪರಂಪರಾಗತ ಉಪನ್ಯಾಸ, ಬೋಧನೆ, ಪಠ್ಯಾವಳಿ, ಪರೀಕ್ಷಾ ಪದ್ಧತಿ, ಇವೆಲ್ಲವುಗಳ ಸ್ವರೂಪವನ್ನು ಸಂಪೂರ್ಣವಾಗಿ (ಮತ್ತು ಬಹು ಬೇಗ) ಬದಲಾಯಿಸುವ ಅವರ ತೀವ್ರ ಮಹದಾಕಾಂಕ್ಷೆ ಈ ಬಗೆಯ ನಿಲುವಿಗೆ ಕಾರಣವೆಂದು ತೋರುತ್ತದೆ.

ಲಿಟರರಿ ಕ್ಲಬ್ಬಿನ ಕಾರ್ಯಕ್ರಮಗಳು ವೈವಿಧ್ಯಪೂರ್ಣವಾಗಿರುತ್ತಿದ್ದುವು; ಮತ್ತು ವಾರ್ಷಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳು ಕವನ, ಪ್ರಬಂಧ, ನಾಟಕ ಇತ್ಯಾದಿಗಳ ಮೂಲಕ ವಿಭಾಗದ ಬಗ್ಗೆ ಹಾಗೂ ಅಧ್ಯಾಪಕರ ಬಗ್ಗೆ ತಮ್ಮ ಅನುಭವ-ವಿಚಾರಗಳನ್ನು ಅಭಿವ್ಯಕ್ತಿಗೊಳಿಸಬಹುದಿತ್ತು. ಅಂತಹ ಒಂದು ಕಾರ್ಯಕ್ರಮದಲ್ಲಿ ಪೋಲಂಕಿಯವರು (ಡ್ರೈಡನ್-ಪೋಪ್ ಅನುಕರಣೆಯಲ್ಲಿ) ಒಂದು ಸಾಕಷ್ಟು ದೀರ್ಘವಾದ ‘ಕಪ್ಲೆಟ್’ಗಳ ಕವನವನ್ನು ಬರೆದು ಓದಿದ್ದರು. ಅದರಲ್ಲಿ ಒಂದು ಕಪ್ಲೆಟ್‌ನ ಭಾಗ ಈಗಲೂ ನೆನಪಿದೆ: ‘…he goes on in the same strain, like Nanjanagud train’ ಎಂದಿತ್ತು. ಇದು ಬಾಲಸುಬ್ರಹ್ಮಣ್ಯಂ ಅವರನ್ನು ಕುರಿತಾಗಿತ್ತು ಎಂದು ಸುಲಭವಾಗಿ ಗೊತ್ತಾಗುತ್ತಿತ್ತು: ಬಾಲಸುಬ್ರಹ್ಮಣ್ಯಂ ನಂಜನಗೂಡಿನಿಂದ ಪ್ರತಿದಿನವೂ ಬಂದು ಹೋಗುತ್ತಿದ್ದರು ಮತ್ತು ಅವರು ಎರಡು-ಮೂರು ವಾಕ್ಯಗಳಿಗೊಮ್ಮೆ ‘ಹಿ ಗೋಸ್ ಆನ್ ಇನ್ ದ ಸೇಮ್ ಸ್ಟ್ರೈನ್’ ಎಂದು ಹೇಳುತ್ತಿದ್ದರು. ಹೀಗೆ, ಅಧ್ಯಾಪಕರ ಹೆಸರುಗಳನ್ನು ಹೇಳದಿದ್ದರೂ (‘ಓಲ್ಡ್ ಮಂಕ್’ ಎಂದರೆ ಪ್ರೊ. ರಂಗಣ್ಣನವರು, ಇತ್ಯಾದಿ) ವಿವರಗಳು ಮತ್ತು ಶೈಲಿ ಗುರಿ ಯಾರು ಎಂಬುದನ್ನು ಸ್ಪಷ್ಟಪಡಿಸುತ್ತಿದ್ದುವು. ಪೋಲಂಕಿಯವರ ಲೇಖನಿ ಅಂದೂ ತುಂಬಾ ಹರಿತವಾಗಿತ್ತು ಎಂಬುದು ನಿಸ್ಸಂಶಯ.

ಕ್ಲಬ್ಬಿನ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದು ‘ಮಿಲ್ಟನ್ ವಿಚಾರಣೆ’ (‘Trial of Milton’); ಎಂದರೆ ಟಿ. ಎಸ್. ಎಲಿಯಟ್ ಹೇಳಿದಂತೆ ‘ಮಿಲ್ಟನ್ ತನ್ನ ಕಾವ್ಯದಿಂದ ಮುಂದಿನ ಇಂಗ್ಲೀಷ್ ಕಾವ್ಯ ತಪ್ಪು ದಾರಿ ಹಿಡಿಯುವಂತೆ ಪ್ರಭಾವಿಸಿದ’ ಎಂಬ ತೀರ್ಮಾನವನ್ನು ಕುರಿತ ಚರ್ಚೆ. ನಾನು ಸೇರಿದ ವರ್ಷವೇ, ಪ್ರಾಯಃ ನವೆಂಬರ್‌ನಲ್ಲಿ, ನಡೆದ ಈ ‘ಮಿಲ್ಟನ್ ವಿಚಾರಣೆ’ ಕಾರ್ಯಕ್ರಮ ಸ್ವಲ್ಪ ಬೇರೆ ದಾರಿಯನ್ನು ಹಿಡಿಯಿತು. ಎಲಿಯಟ್‌ನ ಹೇಳಿಕೆಯನ್ನು ವಿರೋಧಿಸಿ (ಮಿಲ್ಟನ್ ಕಾವ್ಯವನ್ನು ಸಮರ್ಥಿಸುತ್ತಾ) ರಾಮರಾವ್, ಪಾಚ್ಚು (ಪಾರ್ಥಸಾರಥಿ), ಬಾಲಸುಬ್ರಹ್ಮಣ್ಯ, ಮತ್ತಿತರರು ಮಾತನಾಡಿದರೆ, ಆ ತೀರ್ಮಾನವನ್ನು ಸಮರ್ಥಿಸಿ, ಸಿಡಿಎನ್, ಅನಂತಮೂರ್ತಿ, ಪೋಲಂಕಿ ರಾಮಮೂರ್ತಿ ಮುಂತಾದವರು ಮಾತನಾಡಿದರು.

ಏಕೋ, ಏನು ಕಾರಣವೋ, ಪೂರಾ ಶುಷ್ಕ, ಅಕಡೆಮಿಕ್ ಕಾರ್ಯಕ್ರಮವಾಗಬೇಕಿದ್ದ ಅಂದಿನ (೫೪-೫೫) ಚರ್ಚೆ ಉದ್ದಕ್ಕೂ ತುಂಬಾ ಕಾವೇರಿದ ವಾಗ್ವಾದವಾಯಿತು. ಮೊದಲಿಗೆ ರಾಮರಾವ್ ಮಾತನಾಡಿ, ‘ಪ್ಯಾರಡೈಜ಼್ ಲಾಸ್ಟ್’ ಕಾವ್ಯ ಹೇಗೆ ಅದ್ಭುತವಾದ ಮಹಾಕಾವ್ಯ ಎಂಬುದನ್ನು ಅನೇಕ ವಿಮರ್ಶಕರನ್ನು ದೀರ್ಘವಾಗಿ ಉದಹರಿಸುತ್ತಾ, ಪ್ರಬಲವಾಗಿ ತಮ್ಮ ವಾದವನ್ನು ಮಂಡಿಸಿದರು. ಕೂಡಲೇ ‘ದೀರ್ಘ ಕೊಟೇಶನ್‌ಗಳಿಂದ ಯಾವ ವಾದವೂ ನಿಲ್ಲುವುದಿಲ್ಲ; ಅದಕ್ಕೆ ಕಾವ್ಯವನ್ನು ಗ್ರಹಿಸುವ ಸೆನ್ಸಿಬಿಲಿಟಿ ಮತ್ತು ಇಂಗ್ಲೀಷ್ ಕಾವ್ಯ-ಪರಂಪರೆಯ ಅರಿವು ಇರಬೇಕು’ ಎಂದು ಸಿಡಿಎನ್ ಸ್ವಲ್ಪ ಮೊನಚಾಗಿಯೇ ಮಾತನಾಡಿದರು. ಕೊನೆಯಲ್ಲಿ ಮಾತನಾಡಿದ ಅನಂತಮೂರ್ತಿ, ಮಿಲ್ಟನ್‌ನ ಲ್ಯಾಟಿನ್ ಪ್ರೇಮ, ಅವನು ತನ್ನನ್ನು ‘ಮಹಾಕಾವ್ಯವನ್ನು ರಚಿಸಲೆಂದೇ ಜನ್ಮ ಎತ್ತಿರುವ ಮಹಾಕವಿ ’ ಎಂದು ಗ್ರಹಿಸಿದ ಬಗ್ಗೆ, ಇತ್ಯಾದಿ ಅಂಶಗಳ ಬಗ್ಗೆ ತುಂಬಾ ರೋಚಕವಾಗಿ ಮಾತನಾಡಿ, ಕೊನೆಗೆ ಮಿಲ್ಟನ್‌ನ “ಆನ್ ಹಿಸ್ ಬ್ಲೈಂಡ್‌ನಿಸ್” ಸಾನೆಟ್‌ನ ‘They also serve who only stand and wait,’ ಸಾಲನ್ನು ಉದಹರಿಸಿ, ಒಂದು ಕ್ಷಣ ಮೌನವಾಗಿದ್ದು, ಅನಂತರ, ನಿಧಾನವಾಗಿ, ಎಲ್ಲರನ್ನೂ ನೋಡುತ್ತಾ ‘but he did not stand …and he could not wait’ ಎಂದು ಹೇಳಿ ಕುಳಿತರು. ಸಭೆ ನಿಶ್ಶಬ್ದವಾಗಿತ್ತು. (ಆ ವಾಗ್ವಾದದ ಪ್ರಭಾವ ನಮ್ಮ ಮೇಲೆ ಎಷ್ಟಾಗಿತ್ತೆಂದರೆ, ಕ್ಲಬ್ ಮುಗಿದಕೂಡಲೇ ಹೊರಗಡೆ ನಿಂತುಕೊಂಡು ನನ್ನ ಸಹಪಾಠಿ ಇ. ಪಿ. ಕಮಲಾ ಮತ್ತು ನಾನು ಉದ್ವೇಗದಿಂದ ‘ಮುಂದೆ ಮಿಲ್ಟನ್ ಕವಿಯನ್ನೇ ವಿಶೇಷವಾಗಿ ಅಧ್ಯಯನ ಮಾಡಿ, ಇಂದು ಅವನ ವಿರುದ್ಧ ಮಾಡಿದ ಆಪಾದನೆಗಳಿಗೆಲ್ಲಾ ಸೂಕ್ತ ಉತ್ತರ ಕೊಡಬೇಕು’ ಎಂದು ನಿರ್ಧರಿಸಿದೆವು. ಆದರೆ, ಅನೇಕ ವರ್ಷಗಳ ನಂತರ ನಾನು ಮಯಾಮಿ ವಿ.ವಿ.ಯಲ್ಲಿ ‘ಮಿಲ್ಟನ್ ಮತ್ತು ರೆಫ಼ರ್ಮೇಷನ್’ ಎಂಬ ವಿಶೇಷ ಕೋರ್ಸ್ ತೆಗೆದುಕೊಂಡು ಇಡೀ “ಪ್ಯಾರಡೈಸ್ ಲಾಸ್ಟ್” ಮತ್ತು ಮಿಲ್ಟನ್‌ನ ಇತರ ವಾಙ್ಮಯವನ್ನು ಓದಿದ ಬಳಿಕ, ಮಿಲ್ಟನ್ ಅಷ್ಟೇನೂ ಶ್ರೇಷ್ಠ ವಿಶ್ವಕವಿ ಎಂದು ಪರಿಗಣಿಸಬೇಕಾಗಿಲ್ಲ ಎಂದು ಗೊತ್ತಾಯಿತು.) ಆ ಸಭೆಯ ನಂತರ ಒಂದೆರಡು ತಿಂಗಳುಗಳವರೆಗೂ ಅದು ಪ್ರಚೋದಿಸಿದ ಭಾವನೆಗಳು ಅಧ್ಯಾಪಕರಲ್ಲಿ ಉಳಿದಿದ್ದುವು ಎಂದು ನೆನಪು.

ನಾನು ಎಂ.ಎ. ವಿದ್ಯಾರ್ಥಿಯಾಗಿದ್ದಾಗ (ಪದ್ಮಾ ರಾಮಚಂದ್ರಶರ್ಮ ಆಗ ನನ್ನ ಸಹಪಾಠಿಯಾಗಿದ್ದರು) ಸಿ. ಡಿ. ಗೋವಿಂದರಾವ್ ನಮಗೆ ‘ಆಧುನಿಕ ಇಂಗ್ಲೀಷ್ ಕಾದಂಬರಿ’ ಎಂಬ ಪೇಪರ್ ಕಲಿಸುತ್ತಿದ್ದರು; ಆದರೆ, ಹೆಚ್ಚಿನ ವೇಳೆ ಬೇರೆಯೇ ವಿಷಯಗಳ ಚರ್ಚೆಯಲ್ಲಿ ಕಳೆಯುತ್ತಿತ್ತು. ಒಂದು ಸಲ ಅವರು, ತುಂಬಾ ಗಂಭೀರವಾಗಿ, ‘ಎಂ ಎ ಆದಮೇಲೆ ನೀವು ಕರ್ನಾಟಕದಲ್ಲಿ ಏನಾದರೂ ಇರಬೇಡಿ; ಎಲ್ಲಿಗಾದರೂ -ಅಂಡಮಾನ್‌ಗಾದರೂ ಹೋಗಿ’ ಎಂದರು. ಏಕೆ? ಏನು ಕಾರಣ? ಎಂದೇನೂ ಅವರು ವಿವರಿಸಲಿಲ್ಲ. ಆದರೆ, ಆ ತರಗತಿಯಾದನಂತರ, ಸ್ವಲ್ಪ ವಿ.ವಿ. ವ್ಯವಹಾರಗಳು ತಿಳಿದಿರುವ ನನ್ನ ಸಹಪಾಠಿಯೊಬ್ಬರು ಸಿಡಿಜಿ ಅವರ ಪಿ. ಎಚ್ ಡಿ. ಸಂಪ್ರಬಂಧಕ್ಕೆ (‘English Novelists on Education’) ಡಿಗ್ರೀ ಕೊಡಬಾರದೆಂದು ಸಿಂಡಿಕೇಟ್ ಸಭೆಯಲ್ಲಿ ಸಿಡಿಎನ್ ತುಂಬಾ ವಾದಿಸಿದರೆಂದು, ಆ ಕಾರಣದಿಂದ ಅವರಿಗೆ ಡಿಗ್ರೀ ದೊರಕಿದರೂ ಮನಸ್ಸಿಗೆ ತುಂಬಾ ನೋವಾಗಿತ್ತೆಂದೂ ಹೇಳಿದರು. ಪಿ.ಎಚ್ ಡಿ. ಬಗ್ಗೆ ಅಂದಿನ ಕಾಲಘಟ್ಟದಲ್ಲಿ ತುಂಬಾ ಕೇಳಿಬರುತ್ತಿದ್ದ ಮತ್ತೊಂದು ಗಾಸಿಪ್ ಎಂದರೆ ಎಸ್. ಅನಂತನಾರಾಯಣ ಅವರದು; ಅವರು “ಆಧುನಿಕ ಕನ್ನಡ ಕಾವ್ಯದ ಮೇಲೆ ಇಂಗ್ಲೀಷ್ ಕಾವ್ಯದ ಪ್ರಭಾವ” ಎಂಬ ತಮ್ಮ ಸಂಪ್ರಬಂಧದಲ್ಲಿ ಕುವೆಂಪು ಅವರ ಮಹಾಕಾವ್ಯವನ್ನು ತುಂಬಾ ಟೀಕಿಸಿದ್ದಾರೆಂದು ಅವರಿಗೆ ಪಿ. ಎಚ್.ಡಿ. ಕೊಡಲಿಲ್ಲ ಎಂಬ ಸಂಗತಿ. ಇದು ಎಷ್ಟು ನಿಜ ಎಂಬುದು ಅಂದು ವಿದ್ಯಾರ್ಥಿಗಳಾಗಿದ್ದ ನಮಗೆ ಗೊತ್ತಾಗುತ್ತಿರಲಿಲ್ಲ; ಆದರೆ, ಅಂದಿನಿಂದ ಅನಂತನಾರಾಯಣ ತುಂಬಾ ವಿಕ್ಷಿಪ್ತ ವ್ಯಕ್ತಿಯಾದರು ಎಂಬುದು ವಾಸ್ತವ.

ಇಷ್ಟೇ ಸಾಲದು ಎಂಬಂತೆ, ಆಗ ಇಂಗ್ಲೀಷ್ ವಿಭಾಗದಲ್ಲಿ (ಮತ್ತು, ಪ್ರಾಯಃ, ಇತರ ಎಲ್ಲಾ ವಿಭಾಗಗಳಲ್ಲಿ) ಪ್ರತ್ಯೇಕ ಕೊಠಡಿಗಳು ಕೇವಲ ಪ್ರಾಧ್ಯಾಪಕರಿಗೆ ಮಾತ್ರ (ಸಿಡಿಎನ್ ಮತ್ತು ಭರತ್‌ರಾಜ್ ಸಿಂಗ್ ಅವರಿಗೆ) ಇದ್ದುವು; ಇತರರು ತಮ್ಮ ಕ್ಲಾಸ್ ತೆಗೆದುಕೊಳ್ಳಲು ಖಾಲಿ ಕೊಠಡಿಯನ್ನು ಹುಡುಕಿಕೊಂಡು ಹೋಗಬೇಕಿತ್ತು. ಒಮ್ಮೆ, ಸೇತೂ ಸಾವಿತ್ರಿ ಅವರು ಕ್ಲಾಸ್ ತೆಗೆದುಕೊಳ್ಳಲು ಖಾಲಿ ಕೊಠಡಿಯನ್ನು ಹುಡುಕುತ್ತಾ, ಇಡೀ ಕಾಲೇಜಿನ ಕೆಳ ಅಂತಸ್ತಿನ ಕೊಠಡಿಗಳನ್ನು ಪರೀಕ್ಷಿಸಿ, ಕೊನೆಗೆ ‘ಇಂದು ನಿಮಗೆ ಕೊಠಡಿಯೂ ಇಲ್ಲ, ಕ್ಲಾಸೂ ಇಲ್ಲ’ ಎಂದು ಹೇಳಿದ್ದು ನೆನಪಿದೆ.

****************************

೧೯೫೪-೫೮ ಈ ಅವಧಿಯಲ್ಲಿ ನಾನಿದ್ದ ಎಸ್ ವಿ ಎಸ್ ಹಾಸ್ಟಲ್ಲಿನಲ್ಲಿ ಎಲ್ಲ ವಿಷಯಗಳ ಆನರ್ಸ್ ವಿದ್ಯಾರ್ಥಿಗಳಿದ್ದರು: ಹಿಸ್ಟರಿ ಆನರ್ಸ್‌ನಲ್ಲಿದ್ದ ಶ್ರೀಪತಿ ಶಾಸ್ತ್ರಿ (ಇವರು ಅರ್ ಎಸ್ ಎಸ್‌ಗೆ ತಮ್ಮ ಬದುಕನ್ನು ಮುಡಿಪಾಗಿಟ್ಟು, ಮುಂದೆ ಸಂಘದ ‘ಆಲ್ ಇಂಡಿಯಾ ಎಕ್ಸೆಕ್ಯುಟಿವ್ ಸಮಿತಿ’ಯ ಸದಸ್ಯರಾದರು; ನಾನು ಮಂಗಳೂರಿನಲ್ಲಿದ್ದಾಗ ಒಮ್ಮೆ ನನ್ನನ್ನು ನೋಡಲು ವಿಭಾಗಕ್ಕೆ ಬಂದಿದ್ದರು); ಸೋಷಿಯಾಲಜಿ ಆನರ್ಸ್ ಸೇರಿದ್ದ ನಾಗಭೂಷಣ ರಾವ್ (ಇವರು ಬಹು ಬೇಗ ಅಮೆರಿಕಾಕ್ಕೆ ಹೋಗಿ, ಅಲ್ಲಿಯ ವಿ.ವಿ.ಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆದರು); ಇಂಡಾಲಜಿ ಆನರ್ಸ್ ಸೇರಿದ್ದ ನಾಗರಾಜ ರಾವ್ (ಮುಂದೆ ಇವರು ಆರ್ಕಿಯಾಲಜಿ ವಿಭಾಗವನ್ನು ಸೇರಿದರು ಎಂದು ನೆನಪು); ಕನ್ನಡ ಆನರ್ಸ್ ಸೇರಿದ್ದ ಮಿರ್ಲೆ ಶ್ರೀನಿವಾಸ ಮೂರ್ತಿ (ಇವರು ತಿಪಟೂರು ಕಲ್ಪತರು ಕಾಲೇಜಿನಲ್ಲಿಯೇ ಬಹುಕಾಲವಿದ್ದು ನಿವೃತ್ತರಾದರು; ಇವರನ್ನು ನೋಡಲು ಆಗಾಗ್ಗೆ ಇವರ ಸಹಪಾಠಿಗಳಾಗಿದ್ದ ಅ.ರಾ.ಮಿತ್ರ, ಲಕ್ಷ್ಮೀನಾರಾಯಣ ಭಟ್ಟ, ಮುಂತಾದವರು ಹಾಸ್ಟಲ್ಲಿಗೆ ಬರುತ್ತಿದ್ದರು); ಹೀಗೆಯೇ ಫಿಲಾಸಫಿ, ಸ್ಟಟಿಸ್ಟಿಕ್ಸ್, ಮುಂತಾದ ವಿಭಾಗಗಳಿಗೆ ಸೇರಿದವರು ಮತ್ತು ಮೆಡಿಕಲ್-ಎಂಜಿನಿಯರಿಂಗ್ ವಿದ್ಯಾರ್ಥಿಗಳೂ ಇರುತ್ತಿದ್ದರು. ಈ ಕಾರಣದಿಂದ, ಇಂಗ್ಲೀಷ್ ಅಲ್ಲದೆ ಇತರ ವಿಷಯಗಳ ಬಗ್ಗೆಯೂ ಚರ್ಚೆಗಳ ಮೂಲಕ ಸ್ವಲ್ಪ ಸ್ವಲ್ಪವಾದರೂ ನನಗೆ ಗೊತ್ತಾಗಲು ಸಾಧ್ಯವಾಯಿತು.

ನಾವೆಲ್ಲರೂ ಒಟ್ಟಾಗಿ ಹಾಸ್ಟಲ್ಲಿನಿಂದ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದೆವು; ಆಗ ಬಾಗಿಲಿನಲ್ಲಿಯೆ ಅತ್ಯಂತ ಆಕರ್ಷಕವಾಗಿದ್ದ ಸರಸ್ವತಿಯ ದೊಡ್ಡ ಮೃಣ್ಮಯ ಮೂರ್ತಿ ಇತ್ತೆಂದು ನೆನಪು. ಒಳಗೆ ಕಾಲಿಡುತ್ತಲೇ ಚಪ್ಪಲಿ ಬಿಟ್ಟು, ಸರಸ್ವತಿಗೆ ನಮಿಸಿ (ತುಂಬಾ ಸಮಯವಿದ್ದರೆ ಶಂಕರಾಚಾರ್ಯರ ‘ಶ್ಯಾಮಲಾ ದಂಡಕ’ವನ್ನು ಹೇಳಿ), ಅನಂತರ ನಮ್ಮ ತರಗತಿಗಳಿಗೆ ಹೋಗುತ್ತಿದ್ದೆವು. (ಈಗ, ಮೂರು ವರ್ಷಗಳ ಕೆಳಗೆ ಆ ಮೂರ್ತಿಯನ್ನು ನೋಡಲು ಹೋದಾಗ ಅದಿರಲಿಲ್ಲ; ಅಲ್ಲಿದ್ದ ಕೆಲವು ವಿದ್ಯಾರ್ಥಿಗಳನ್ನು ಕೇಳಿದಾಗ, ಒಂದು ಮೂಲೆಯಲ್ಲಿಟ್ಟಿದ್ದ ಚಿಕ್ಕ ಕಲ್ಲಿನ ಮೂರ್ತಿಯನ್ನು ತೋರಿಸಿದರು. ನಾನು ಓದುತ್ತಿದ್ದಾಗ ಬಾಗಿಲಿನಲ್ಲಿಯೇ ದೊಡ್ಡ ಮೂರ್ತಿ ಅಲ್ಲಿತ್ತೆಂದು ನಂಬಿರುವುದು ನನ್ನ ಭ್ರಮೆಯೋ, ನಿಜವಾಗಿ ಅದಿತ್ತೋ ಗೊತ್ತಿಲ್ಲ.)

ಅಂದಿನ ದಿನಗಳಲ್ಲಿ ಮಹಾರಾಜ ಕಾಲೇಜಿನಲ್ಲಿ ಕನ್ನಡ ಕಾರ್ಯಕ್ರಮಗಳು ತುಂಬಾ ನಡೆಯುತ್ತಿದ್ದುವು; ಅಂತಹ ಒಂದು ಕಾರ್ಯಕ್ರಮದಲ್ಲಿಯೇ (೧೯೫೪-೫೫) ನಾನು ಎಚ್. ಆರ್. ಲೀಲಾವತಿ ಅವರು ಹಾಡಿದ ಕನ್ನಡ ಭಾವಗೀತೆಗಳನ್ನು (ಅದರಲ್ಲೂ ಕುವೆಂಪು ಅವರ “ಬಾಗಿಲೊಳು ಕೈಮುಗಿದು” ಗೀತೆಯನ್ನು) ಕೇಳಿದ್ದ ನೆನಪು. ಭಾವಗೀತೆಗಳನ್ನು ಹಾಡುವುದರಲ್ಲಿ ಪ್ರಸಿದ್ಧರಾದ ಮತ್ತೊಬ್ಬರೆಂದರೆ ಫಣಿಯಾಡಿ: ಅವರು, ಅಡಿಗರ “ಕಟ್ಟುವೆವು ನಾವು” ಗೀತೆಯನ್ನು ಎಷ್ಟು ಭಾವಪೂರ್ಣವಾಗಿ ಮತ್ತು ಎತ್ತರದ ದನಿಯಲ್ಲಿ ಹಾಡುತ್ತಿದ್ದರೆಂದರೆ ಅರ್ಧ ಹಾಡಿನ ಬಳಿಕ ಸೇರಿದ ವಿದ್ಯಾರ್ಥಿಗಳು ಎಲ್ಲರೂ ಅವರೊಡನೆ ಧ್ವನಿಗೂಡಿಸುತ್ತಿದ್ದರು ಮತ್ತು ಮುಗಿದ ಕೂಡಲೇ ‘ವನ್ಸ್ ಮೋರ್’ ಎಂದು ಕೂಗುತ್ತಿದ್ದರು. (ನನ್ನ ನೆನಪು ಸರಿಯಿದ್ದರೆ, ಅಂದಿನ ಕಾಲದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೂ ಗೊತ್ತಿದ್ದ ಮತ್ತೊಬ್ಬ ಪ್ರತಿಭಾಶಾಲಿಯೆಂದರೆ ಮುಂದೆ ಪ್ರಸಿದ್ಧ ಕಾದಂಬರಿಕಾರ್ತಿಯಾದ ಆರ್ಯಾಂಬಾ ಪಟ್ಟಾಭಿ. ಇವರನ್ನು ‘ಬ್ಯೂಟಿ ಕ್ವೀನ್’ ಎಂದೂ ಹುಡುಗರು ಗುರುತಿಸುತ್ತಿದ್ದರು. ಆರ್ಯಾಂಬಾ ಅವರ ಅಕ್ಕ, ಪ್ರಸಿದ್ಧ ಕಾದಂಬರಿಕಾರ್ತಿ ತ್ರಿವೇಣಿ, ನಾನು ಸೇರುವ ವರ್ಷವೇ ಬಿ. ಎ. ಮುಗಿಸಿದ್ದರು. ಲೀಲಾವತಿ ಮತ್ತು ಆರ್ಯಾಂಬಾ ಇಬ್ಬರೂ ೫೫ರಲ್ಲಿ ಬಿ. ಎ. ಮುಗಿಸಿದರು ಎಂದು ನೆನಪು).

ಅಂತಹ ಕಾರ್ಯಕ್ರಮಗಳಲ್ಲಿಯೇ ನಾನು ಅನಕೃ, ಬೀಚಿ, ತರಾಸು ಮುಂತಾದವರ ಭಾಷಣಗಳನ್ನು ಕೇಳಿದ್ದು. ಒಂದು ಕಾರ್ಯಕ್ರಮಕ್ಕೆ ಅನಕೃ ಮತ್ತು ಬೀಚಿ ಇಬ್ಬರೂ ಬರುತ್ತಾರೆಂಬ ಸುದ್ದಿಯಿತ್ತು; ನಿರೀಕ್ಷೆಯಂತೆಯೇ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಸೇರಿದ್ದರು. ಅರ್ಧ ಘಂಟೆ ತಡವಾಗಿ ಆ ಕಾರ್ಯಕ್ರಮ ಪ್ರಾರಂಭವಾದಾಗ ಏನೋ ಕಾರಣದಿಂದ ಅನಕೃ ಬಂದಿಲ್ಲವೆಂದು ಗೊತ್ತಾಗಿ ಸೇರಿದ್ದ ಎಲ್ಲರಿಗೂ ನಿರಾಸೆಯಾಯಿತು; ಅನಕೃ ಅವರ ಮೋಡಿ ಮಾಡುವ ಮಾತುಗಾರಿಕೆ ಅಷ್ಟು ಪ್ರಸಿದ್ಧವಾಗಿತ್ತು. ಕಾರ್ಯಕ್ರಮ ಪ್ರಾರಂಭವಾದಾಗ, ಬೀಚಿಯವರು ಹೀಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು: “ನೋಡಿ, ಎಕ್ಸ್‌ಪ್ರೆಸ್ ಟ್ರೇನ್‌ಗಳು ಅನೇಕ ಕಾರಣಗಳಿಂದ ಅಲ್ಲಲ್ಲಿ ನಿಂತು ಬಿಡುತ್ತವೆ. ಆದರೆ, ಛುಕು ಛುಕು ಪ್ಯಾಸೆಂಜರ್ ಮಾತ್ರ ಬಂದೇ ಬರುತ್ತದೆ. ಅನಕೃ ಬಂದಿಲ್ಲ, ನಾನು ಬಂದಿದೀನಿ.” ಅನಂತರ ಸುಮಾರು ೪೦ ನಿಮಿಷ ಮಾತನಾಡಿ ಎಲ್ಲರನ್ನೂ ಹಾಸ್ಯದ ಕಡಲಿನಲ್ಲಿ ಮೀಯಿಸಿದರು.

ಸೀನಿಯರ್ ಬಿ. ಎ. ಹಾಲಿನಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ, ಮೊದಲಿಗೆ ಪ್ರಭುಶಂಕರ್ ಅವರು ಆಗತಾನೆ ಪ್ರಕಟವಾಗಿದ್ದ ಜಿ ಎಸ್ ಎಸ್ ಅವರ ‘ಜಡೆ’ ಎಂಬ ಕವನವನ್ನು ಭಾವಪೂರ್ಣವಾಗಿ ಓದಿದರು. ಅನಂತರ, ತರಾಸು ‘ಇಂದಿನ ಕನ್ನಡ ಕಾದಂಬರಿ’ ವಿಷಯದ ಬಗ್ಗೆ ಮಾತನಾಡುತ್ತಾ, ಅನಕೃ, ಚದುರಂಗ, ಪುರಾಣೀಕ, ಮುಂತಾದವರನ್ನು ಹೆಸರಿಸಿ, ‘ಇನ್ನು ಯಾರಿದ್ದಾರೆ ಕನ್ನಡದಲ್ಲಿ, ಗಮನಿಸಬೇಕಾದ ಕಾದಂಬರಿಕಾರರು?’ ಎಂದು ವಿಷಾದಿಸಿದರು. ಅವರ ನಿರೀಕ್ಷೆಗನುಗುಣವಾಗಿ, ಸಭೆಯಲ್ಲಿದ್ದ ಅನೇಕರು ‘ತರಾಸು -ತರಾಸು’ ಎಂದು ಕೂಗಿದ್ದನ್ನು ಕೇಳಿ, ತೃಪ್ತಿಯಿಂದ ತಮ್ಮ ಮಾತನ್ನು ಮುಂದುವರೆಸಿದ್ದರು.

ನನ್ನ ಮನಸ್ಸಿನಲ್ಲಿ ಹಸಿರಾಗಿರುವ ಮತ್ತೊಂದು ಕಾರ್ಯಕ್ರಮವೆಂದರೆ ಕುವೆಂಪು ಅವರ ಅಭಿನಂದನಾ ಸಮಾರಂಭ; ಅಭಿನಂದನಾ ಭಾಷಣ ಹಾಮಾನಾ ಅವರಿಂದ. ಹಾಮಾನಾ ಅವರು ನನಗಿಂತ ಮೂರು ವರ್ಷ ಹಿರಿಯರು; ನಾನು ಮಹಾರಾಜ ಕಾಲೇಜಿಗೆ ಸೇರಿದಾಗ ಅವರು ಎಂ. ಎ. ಮಾಡುತ್ತಿದ್ದರೆಂದು ಕಾಣುತ್ತದೆ. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ ೧೯೫೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ, ಅವರನ್ನು ಅಭಿನಂದಿಸಲು ಮಹಾರಾಜ ಕಾಲೇಜಿನ ಒಳಾಂಗಣದಲ್ಲಿ ಬೃಹತ್ ಸಭೆಯೊಂದನ್ನು ಆಯೋಜಿಸಿದ್ದರು. ಆ ಸಭೆಯಲ್ಲಿ ಬೇರೆ ಯಾರು ಯಾರು ಮಾತನಾಡಿದರು ಎಂಬುದು ಮರೆತು ಹೋಗಿದೆ; ಆದರೆ ನಾಯಕರ ಭಾಷಣ ಮಾತ್ರ ಪೂರಾ ನೆನಪಿದೆ. ಅಂದು ಅವರು ಮಾತನಾಡಿದುದರ ಸಾರಾಂಶ ಹೀಗಿದೆ: ಪ್ರಶಸ್ತಿಯ ಸುದ್ದಿ ತಿಳಿದೊಡನೆ, ಕುವೆಂಪು ಅವರನ್ನು ಅಭಿನಂದಿಸಲು ಹಾಮಾನಾ ಮತ್ತಿತರರು ಯಾದವಗಿರಿಯ ಅವರ ಮನೆಗೆ ಹೋದರಂತೆ; ಆಗ, ಗೇಟಿನ ಬಳಿಯೇ ನಿಂತಿದ್ದ ಕುವೆಂಪು ಇವರನ್ನು ಸ್ವಾಗತಿಸುತ್ತಾ, ‘ನಿಮಗೆಲ್ಲರಿಗೂ ಹಾರ್ದಿಕ ಅಭಿನಂದನೆಗಳು’ ಎಂದರಂತೆ; ಚಕಿತರಾದ ಹಾಮಾನಾ ‘ಸರ್, ನಿಮ್ಮನ್ನು ಅಭಿನಂದಿಸಲು ನಾವು ಬಂದಿದ್ದೇವೆ; ಮತ್ತೆ…’ ಎಂದರಂತೆ; ಆಗ, ಕುವೆಂಪು ‘ನನಗಲ್ಲ-ಈ ಪ್ರಶಸ್ತಿ ಬಂದಿರುವುದು ಕನ್ನಡಕ್ಕೆ, ಕನ್ನಡಿಗರಿಗೆಲ್ಲರಿಗೂ. ಆದುದರಿಂದ ನಿಮಗೆಲ್ಲರಿಗೂ ಅಭಿನಂದನೆಗಳು’ ಎಂದರಂತೆ. ಈ ಸಂಭಾಷಣೆಯನ್ನು ನಾಟಕೀಯವಾಗಿ ಉಲ್ಲೇಖಿಸಿ, ನಾಯಕರು ಕುವೆಂಪು ಅವರನ್ನು ಕುರಿತು, ಅವರ ಮಹಾಕಾವ್ಯವನ್ನು ಕುರಿತು, ನಿರರ್ಗಳವಾಗಿ, ಸಮರ್ಥವಾಗಿ, ಅಗಾಧ ಆತ್ಮವಿಶ್ವಾಸದಿಂದ ಮಾತನಾಡಿದರು. ಅವರ ವಾಗ್ಝರಿ, ಕನ್ನಡದ ಬಗ್ಗೆ ಅವರಿಗಿದ್ದ ಗಾಢ ಅಭಿಮಾನ, ಇವೆಲ್ಲವೂ ನನಗೆ ಹಾಮಾನಾ ಬಗ್ಗೆ ಅಪಾರ ಗೌರವವನ್ನುಂಟುಮಾಡಿದುವು – ಅಸೂಯೆಯನ್ನೂ ಕೂಡಾ. ಎಂದಾದರೂ ಹಾಮಾನಾ ಅವರಂತೆ, ಅನಂತಮೂರ್ತಿಯವರಂತೆ, ಮಾತನಾಡಬೇಕು; ಆ ಬಗೆಯ ಮಾತುಗಾರಿಕೆಯನ್ನು ಕಲಿಯಬೇಕು ಎಂಬ ಆಸೆ ತೀವ್ರವಾಗಿ ಕಾಡಿತು. ಆದರೆ, ಮಾತುಗಾರಿಕೆಯನ್ನು ಕಲಿಯುವುದು ಹೇಗೆ?

ಇಂಗ್ಲೀಷ್ ಆನರ್ಸ್ ವಿದ್ಯಾರ್ಥಿಗಳಿಗೆ ಎರಡು ಮೈನರ್ ವಿಷಯಗಳನ್ನು ಮೊದಲ ಎರಡು ವರ್ಷ ತೆಗೆದುಕೊಳ್ಳಬೇಕಾಗಿತ್ತು; ಅದರಲ್ಲಿ ಒಂದು -ಹಿಸ್ಟ್ರಿ ಆಫ್ ಇಂಗ್ಲೀಷ್ ಲ್ಯಾಂಗ್ವಿಜ್ – ಕಡ್ಡಾಯವಾಗಿತ್ತು. ಎರಡನೆಯ ಮೈನರ್ ವಿಷಯಕ್ಕಾಗಿ ನಾನು ಮತ್ತಿಬ್ಬರು ಕನ್ನಡವನ್ನು ತೆಗೆದುಕೊಂಡೆವು. ಮೊದಲಿಗೆ, ನಮಗೆ ಗೊತ್ತಿಲ್ಲದ ಯಾರೋ ಕನ್ನಡ ಅಧ್ಯಾಪಕರು ಬಂದುದರಿಂದ ಅವರು ನಮಗೆ ಬೇಡವೆಂದು ತರಗತಿಗೆ ಹೋಗಲಿಲ್ಲ. ಆಗ, ಈ ಸಂಗತಿಗಳನ್ನುನೋಡಿಕೊಳ್ಳುತ್ತಿದ್ದ (ಮತ್ತು ನಮಗೆಲ್ಲರಿಗೂ ಗೊತ್ತಿದ್ದ) ಪರಮೇಶ್ವರ ಭಟ್ಟರು ಕೋಪದಿಂದ ತರಗತಿಯ ಹೊರಗೆ ನಿಂತಿದ್ದ ನಮ್ಮ ಬಳಿ ಬಂದು ‘ನಿಮಗೆ ಇಂಗ್ಲೀಷ್ ಆನರ್ಸ್ ವಿದ್ಯಾರ್ಥಿಗಳೆಂದು ಕೊಬ್ಬು; ಏನು ಬೇಕು ನಿಮಗೆ?’ ಎಂದು ಕೇಳಿದರು. ನಾನು ‘ನೀವು, ಸರ್’ ಎಂದೆವು. ಒಂದು ನಿಮಿಷ ಅವಾಕ್ಕಾಗಿ ನಿಂತ ಅವರು ‘ಸರಿ ಸರಿ, ಹೋಗಿ; ಮುಂದಿನ ವಾರದಿಂದ ನಾನೇ ತೆಗೆದುಕೊಳ್ಳುತ್ತೇನೆ. ಧಿಮಾಕಿನ ಹುಡುಗರು!’ ಎನ್ನುತ್ತಾ ಹೊರಟುಹೋದರು. ಅನಂತರ, ಮೊದಲ ಎರಡು ವರ್ಷವೂ ಅವರು ಮೂರು ಜನರಿದ್ದ ನಮ್ಮ ತರಗತಿಗೆ ಪಾಠ ಮಾಡಿದರು.

ಪರಮೇಶ್ವರ ಭಟ್ಟರ ಸಾಹಿತ್ಯದ ಬಗ್ಗೆ ಆಗ ನಮಗೆ -ಅಥವಾ ನನಗೆ-ಏನೂ ಗೊತ್ತಿರಲಿಲ್ಲ; ಆದರೆ, ಬಿಡುವಿದ್ದಾಗ ಅವರ ‘ಜನರಲ್ ಕನ್ನಡ’ ಕ್ಲಾಸುಗಳಿಗೆ ಹೋಗುತ್ತಿದ್ದೆ; ಆಗ, ಮೊದಲಿನಿಂದ ಕೊನೆಯವರೆಗೂ ಅವರು ಮಾಡುತ್ತಿದ್ದ ಜೋಕುಗಳು, ಪಠ್ಯವನ್ನು ಅವರು ವಿವರಿಸುತ್ತಿದ್ದ ರೀತಿ, ಹುಡುಗರೊಡನೆ ಅವರು ಸಮಾನಸ್ಕಂದರಂತೆ ನಡೆದುಕೊಳ್ಳುತ್ತಿದ್ದ ಬಗೆ -ಇವೆಲ್ಲವೂ ಅಂದು ವಿದ್ಯಾರ್ಥಿಗಳಿಗೆ ತುಂಬಾ ಆಕರ್ಷಕವಾಗಿದ್ದುವು. (ಅವರ ಹಾಸ್ಯ ಪ್ರವೃತ್ತಿಯ ಹಿಂದಿದ್ದ ದಾರುಣ ವೈಯಕ್ತಿಕ ಸಂಗತಿಗಳು ನನಗೆ ಮಂಗಳೂರು ವಿ.ವಿ.ಗೆ ಸೇರಿದಾಗಲೇ ಗೊತ್ತಾದದ್ದು.) ಅವರು ನಮಗೆ ಮೊದಲ ವರ್ಷ ಹರಿಹರನ ‘ನಂಬಿಯಣ್ಣನ ರಗಳೆ’ ಮತ್ತು ಎರಡನೆಯ ವರ್ಷ ರನ್ನನ ‘ಗದಾಯುದ್ಧ’ದ ಆಯ್ದ ಭಾಗಗಳನ್ನು ಪಾಠ ಮಾಡಿದರೆಂದು ನೆನಪು. ‘ನಂಬಿಯಣ್ಣನ ರಗಳೆ’ಯಲ್ಲಿ ಒಂದು ಸಂದರ್ಭದಲ್ಲಿ ‘ಪಿಂತೆಲ್ಲಮುಂ ನಿತಂಬಂ’ ಎಂಬ ಸ್ತ್ರೀವರ್ಣನೆ ಬರುತ್ತದೆ. ಅದನ್ನು ಓದಿ, ಅವರು ನಿಲ್ಲಿಸಿದರು. ‘ಯಾಕೆ ಸರ್’ ಎಂದು ಕೇಳಿದಾಗ, ‘ಅಲ್ಲಪ್ಪ, ‘ಪಿಂತೆಲ್ಲಮುಂ ನಿತಂಬಂ’ ಸರಿ; ಮುಂದೆಲ್ಲಮುಂ ಏನು? ಹೇಳಿಲ್ಲವಲ್ಲ!’ ಎಂದರು. ‘ಏನಿರಬೇಕು ಸರ್’ ಎಂದು ಸ್ವಲ್ಪ ಉದ್ವೇಗದಿಂದ ಕೇಳಿದೆವು. ‘ಇನ್ನೇನಿರುತ್ತೆ? ‘ಮುಂತೆಲ್ಲಮುಂ… ಸರಿ ಸರಿ; ನಿಮಗೇ ಗೊತ್ತಾಗುತ್ತೆ. ಬಿಡಿ’ ಎಂದು ಹೇಳಿ ಪಾಠವನ್ನು ಮುಂದುವರೆಸಿದರು. ಎಂದೂ ತಪ್ಪಿಸಿಕೊಳ್ಳದ ಕ್ಲಾಸೆಂದರೆ ಅವರದೆ.

ನನಗೆ ತುಂಬಾ ಇಷ್ಟವಾಗಿದ್ದ ಮತ್ತೊಂದು ತರಗತಿಯೆಂದರೆ ಎರಡನೆಯ ಭಾಷೆ ಸಂಸ್ಕೃತದ ತರಗತಿ. ಈ ತರಗತಿಯನ್ನು ಆಗ ತಾನೇ ಎಂ. ಎ. ಮುಗಿಸಿ ಲೆಕ್ಚರರ್ ಆಗಿದ್ದ ತುಂಬಾ ಉತ್ಸಾಹದ ತರುಣ ಗೋಪಾಲನ್ ಎನ್ನುವವರು ತೆಗೆದುಕೊಳ್ಳುತ್ತಿದ್ದರು; ಆಗ ನಮ್ಮ ಪಠ್ಯವಾಗಿದ್ದ ಬಾಣಭಟ್ಟನ “ಕಾದಂಬರಿಯ” ಆಯ್ದ ಭಾಗ ‘ಅಚ್ಛೋದ ಸರೋವರ ವರ್ಣನೆ.’ ಅವರಿಗೆ ಸಂಸ್ಕೃತ ಭಾಷೆ – ಸಾಹಿತ್ಯಗಳ ಮೇಲೆ ತುಂಬಾ ಅಭಿಮಾನ ಮತ್ತು ಜ್ಞಾನ ಎರಡೂ ಇದ್ದುವು. ಬಾಣನ ಕಲ್ಪನಾಲೋಕದಲ್ಲಿ ನಮ್ಮನ್ನು ಬಹು ಪ್ರೀತಿಯಿಂದ ಅವರು ಕರೆದುಕೊಂಡು ಹೋಗಿ, ಅಲ್ಲಿ ವಿಹರಿಸುವಂತೆ ಮಾಡುತ್ತಿದ್ದರು. (ಯಾವ ಕಾರಣಕ್ಕೋ, ನನಗೆ ಶಾಬ್ದಿಕ ಮೋಹ ಅಗಾಧವಾಗಿದೆಯೆಂದು ತೋರುತ್ತದೆ; ಇಲ್ಲದಿದ್ದರೆ ಬಾಣ-ಲಕ್ಷ್ಮೀಷ ಮುಂತಾದವರು ನನಗೇಕೆ ಅಷ್ಟು ಪ್ರಿಯವಾಗುತ್ತಿದ್ದರು?) ಉಳಿದಂತೆ, ಕನ್ನಡದಿಂದ ಇಂಗ್ಲೀಷಿಗೆ ಅನುವಾದ, ಶಬ್ದಗಳ-ಧಾತುಗಳ ನಡೆ, ಇತ್ಯಾದಿಗಳನ್ನು ಸಮಯಕ್ಕೆ ಸರಿಯಾಗಿ ಜೋಡಿಸಿ, ನಮ್ಮ ಆಸಕ್ತಿಯನ್ನು ಉಳಿಸಿಕೊಳ್ಳುತ್ತಿದ್ದರು.

ನಾನು ಸೇರಿದಾಗ ಕಾಲೇಜಿನ ಪ್ರಿನ್ಸಿಪಲ್ ಆಗಿದ್ದವರು ಡಾ. ಪುರುಷೋತ್ತಮ್; ಅವರು ತಮ್ಮ ಆಫೀಸಿನ ಮುಂದೆ ಇದ್ದ ದೊಡ್ಡ ಕಪ್ಪು ಹಲಗೆಯ ಮೇಲೆ ಪ್ರತಿದಿನ ಇಂಗ್ಲೀಷ್‌ನಲ್ಲಿ ಒಂದು ಸುಭಾಷಿತವನ್ನು ಬರೆಯುತ್ತಿದ್ದರು ಮತ್ತು ಅದರ ಕೆಳಗಡೆ TAP ಎಂದು ಬರೆಯುತ್ತಿದ್ದರು. ವಾರಕ್ಕೆ ಒಂದು ಬಾರಿಯಾದರೂ ಡಾ. ರಾಧಾಕೃಷ್ಣನ್ ಅವರ ಒಂದಲ್ಲಾ ಒಂದು ಪ್ರಸಿದ್ಧ ವಾಕ್ಯವಿರುತ್ತಿತ್ತು. ಅವರನಂತರ ಕುವೆಂಪು ಅವರು ಪ್ರಿನ್ಸಿಪಲ್ ಆದರು; ಅವರು ಕುಲಪತಿಗಳಾದಾಗ ಸಿಡಿಎನ್ ಪ್ರಿನ್ಸಿಪಲ್ ಆದರು. ಅವರಿಗೆ ಮಹಾರಾಜಾ ಕಾಲೇಜಿನ ಬಗ್ಗೆ ಅದೆಷ್ಟು ಗಾಢ ಪ್ರೀತಿಯಿತ್ತೆಂದರೆ, ಕಾಲೇಜಿನ ಕೆಳಭಾಗದಲ್ಲಿದ್ದ quadrangle ನಲ್ಲಿ ಒಂದೇ ಮಟ್ಟದಲ್ಲಿ ಹಸಿರು ಹುಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಪ್ರತಿ ದಿನವೂ ಅಷ್ಟೇನೂ ಜವಾಬ್ದಾರಿಯಿಲ್ಲದ ಹುಡುಗ-ಹುಡುಗಿಯರು ದೂರವನ್ನು ಉಳಿಸಲು ಒಂದು ತುದಿಯಿಂದ ಇನ್ನೊಂದು ತುದಿಗೆ ಅದರ ಮೇಲೇ ನಡೆದುಹೋಗುತ್ತಿದ್ದರು. ಇದನ್ನು ತಪ್ಪಿಸಲು ಸಿಡಿಎನ್ ಆ ಚಚ್ಚೌಕದ ನಾಲ್ಕೂ ಕಡೆ ಚಿಕ್ಕ ಬೋರ್ಡ್‌ಗಳನ್ನು ನಿಲ್ಲಿಸಿ, ‘If you want to walk on grass, EAT IT’ ಎಂದು ಬರೆಸಿದ್ದರು.

ಕಾಲೇಜಿನ ಮುಂಭಾಗದಲ್ಲಿ ಎರಡು ಟೆನಿಸ್ ಕೋರ್ಟ್‌ಗಳು ಇದ್ದುವು; ಅವುಗಳಲ್ಲಿ ಪ್ರತಿದಿನವೂ ಸಿಡಿಎನ್, ಪಾಚು, ಬಾಲಸುಬ್ರಹ್ಮಣ್ಯ, ಮುಂತಾದವರು ಟೆನಿಸ್ ಆಡುತ್ತಿದ್ದರು. ಆಗ, ಆ ಆಟವನ್ನು ನೋಡುವುದೇ ಒಂದು ಸಂಭ್ರಮ ನನಗೆ. (ಪ್ರಾಯಃ, ಆ ಸಂಭ್ರಮದ ಕಾರಣದಿಂದಾಗಿಯೇ ಮುಂದೆ ನಾನು ಟೆನಿಸ್ ಕಲಿತು ಸುಮಾರು ೨೦-೨೫ ವರ್ಷಗಳ ಕಾಲ ಟೆನಿಸ್ ಆಡಿದೆ.) ಸಿಡಿಎನ್ ಅಲ್ಲಿಂದ ಕಾಣುವ ಕಾಲೇಜಿನ ಮುಂಭಾಗಕ್ಕೆ ಅಲ್ಲಲ್ಲಿ ಗಿಡ-ಮರಗಳ ಮಧ್ಯೆ ಬಣ್ಣದ ದೀಪಗಳನ್ನು ಹಾಕಿಸಿದ್ದರು. ಒಮ್ಮೆ, ನಾನು ಎಂ. ಎ. ಓದುವಾಗ, ಸಾಯಂಕಾಲ ಟೆನಿಸ್ ಆಟವನ್ನು ನೋಡುತ್ತಿದ್ದಂತೆ ಆ ದೀಪಗಳು ಬೆಳಗಿದುವು. ಆ ದೃಶ್ಯವನ್ನುನೋಡುತ್ತಾ, ಸಿಡಿಎನ್ ಆಟ ಮುಗಿಸಿ ಮೇಲೆ ಬಂದಾಗ, ‘Now the college has a poetic look, sir,’ ಎಂದೆ. ಈ ಮಾತಿನಿಂದ ತುಂಬಾ ಸಂತೋಷಪಟ್ಟು ಸಿಡಿಎನ್ ‘Do you think so? Thank you’ ಎಂದು ತೃಪ್ತಿಯಿಂದ ಉತ್ತರಿಸಿ, ಒಂದರಗಳಿಗೆ ಅವರೂ ಕಾಲೇಜಿನ ಮುಂಭಾಗವನ್ನು ನೋಡುತ್ತಾ ನಿಂತರು.

ಅಂದು, ಎಂದರೆ ೫೦ರ ದಶಕದ ಪ್ರಾರಂಭದಲ್ಲಿ, ಮೈಸೂರು ಅಷ್ಟೇನೂ ಬೆಳೆದಿರಲಿಲ್ಲ; ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ನಡೆದೇ ಹೋಗಬಹುದಿತ್ತು; ಸಿಟಿ ಬಸ್‌ಗಳಲ್ಲಿ ನಾವೂ ಹೋಗಬಹುದು ಎಂಬುದೇ ನನಗೆ ಆಗ ಹೊಳೆಯುತ್ತಿರಲಿಲ್ಲ; ಎಲ್ಲಿಗೆ ಹೋಗಬೇಕಾದರೂ ನಡೆದುಕೊಂಡೇ ಹೋಗುತ್ತಿದ್ದೆ. ಆಗ, ಮೈಸೂರಿನಲ್ಲಿ ಒಂದಲ್ಲಾ ಒಂದು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವಾಗಲೂ ನಡೆಯುತ್ತಿದ್ದುವು: ನನ್ನ ಹಾಸ್ಟಲ್ಲಿನ ಮುಂದೆಯೇ ಇದ್ದ ದೇವೇಂದ್ರಪ್ಪನವರ ಮನೆಯಲ್ಲಿ ಪ್ರತಿ ವರ್ಷವೂ ಹತ್ತು ದಿನಗಳ ಕಾಲ ನಡೆಯುತ್ತಿದ್ದ ರಾಮನವಮಿ ಉತ್ಸವದ ಸಂಗೀತ-ಭಾಷಣ ಕಾರ್ಯಕ್ರಮಗಳು, ಬಿಡಾರಂ ಕೃಷ್ಣಪ್ಪನವರ ರಾಮಮಂದಿರದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳು, ಅಂತರ್ ವಿದ್ಯಾರ್ಥಿನಿಲಯಗಳ ಚರ್ಚಾಸ್ಪರ್ಧೆಗಳು, ಮತ್ತು ಆಗತಾನೆ ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ತಯಾರಿಸಲ್ಪಡುತ್ತಿದ್ದ ಅಪರೂಪದ ಕನ್ನಡ ಚಲನಚಿತ್ರಗಳು, ಇತ್ಯಾದಿ. ದೇವೇಂದ್ರಪ್ಪನವರ ಮನೆಯಲ್ಲಾಗುತ್ತಿದ್ದ ಕಾರ್ಯಕ್ರಮಗಳಲ್ಲಿಯೇ ನಾನು ಮೊದಲಬಾರಿಗೆ (ಅಂದು ನಮ್ಮ ವಯಸ್ಸಿನವರಿಗೆ ದಂತಕಥೆಯಾಗಿದ್ದ) ಅನಕೃ ಅವರ ಭಾಷಣವನ್ನು ಕೇಳಿ ರೋಮಾಂಚನಗೊಂಡಿದ್ದು; ಕನ್ನಡಿಗರಿಗೆ ಇಲ್ಲದ ಅಭಿಮಾನವನ್ನು ಕುರಿತ ಅವರ ಆವೇಶದ ಮಾತುಗಳನ್ನು ಕೇಳಿ ಮರುಗಿದ್ದು (‘ನಮ್ಮವರಿಗೆ ನಮ್ಮ ಕಲಾವಿದರು ಬೇಕಿಲ್ಲ; ದೂರದ ವಸಂತಕೋಗಿಲೆಯೋ ವಸಂತಕಾಕವೋ ಬೇಕು’ ಇತ್ಯಾದಿ). ಹಾಗೆಯೇ, ಅಲ್ಲಿಯ ಕಾರ್ಯಕ್ರಮವೊಂದರಲ್ಲಿಯೇ ಮಹಾಲಿಂಗಂ ಅವರ ಅದ್ಭುತ ಕೊಳಲುವಾದನವನ್ನು ಕೇಳಿ ರಾತ್ರಿಯೆಲ್ಲಾ ಆ ಗುಂಗಿನಲ್ಲಿಯೇ ಇದ್ದೆ.

ಆ ಕಾಲಘಟ್ಟದಲ್ಲಿ, ಪ್ರತಿ ವರ್ಷವೂ ಅಂತರ್ ವಿದ್ಯಾರ್ಥಿನಿಲಯ ಚರ್ಚಾಸ್ಪರ್ಧೆಗಳು ನಡೆಯುತ್ತಿದ್ದುವು ; ನಮ್ಮ ಹಾಸ್ಟಲ್‌ನಲ್ಲಿ ಅಂತಹ ಚರ್ಚಾಸ್ಪರ್ಧೆಗಳಿಗೆ ತುಂಬಾ ಮಹತ್ವವನ್ನು ಕೊಡುತ್ತಿದ್ದರು. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಯಾರಾದರೂ ಪ್ರಸಿದ್ಧ ವಿದ್ವಾಂಸರಿಂದ ‘ಭಾಷಣ ಕಲೆ’ಯ ಬಗ್ಗೆ ಉಪನ್ಯಾಸವಿರುತ್ತಿತ್ತು. ಅನಂತರ, ಹಾಸ್ಟಲ್ಲಿನ ಹುಡುಗರ ನಡುವೆಯೇ ಚರ್ಚಾಸ್ಪರ್ಧೆಯನ್ನು ಏರ್ಪಡಿಸಿ, ಹಾಸ್ಟಲ್ಲನ್ನು ಪ್ರತಿನಿಧಿಸಲು ಇಬ್ಬರಿರುವ ಎರಡು ತಂಡಗಳನ್ನು ಆಯ್ಕೆ ಮಾಡುತ್ತಿದ್ದರು; ಸಂದರ್ಭಕ್ಕನುಸಾರವಾಗಿ ಮೊದಲನೆಯ ಅಥವಾ ಎರಡನೆಯ ತಂಡ ಭಾಗವಹಿಸುತ್ತಿತ್ತು. ಅನಾಥಾಲಯ, ಸಾರ್ವಜನಿಕ ಹಾಸ್ಟಲ್, ಮುಸ್ಲಿಂ ಹಾಸ್ಟಲ್, ನಾನಿದ್ದ ಶೇಷಣ್ಣ ಹಾಸ್ಟಲ್, ಇತ್ಯಾದಿ ಕನಿಷ್ಠ ಪಕ್ಷ ಮೈಸೂರಿನಲ್ಲಿಯೇ ಎಂಟು-ಹತ್ತು ಹಾಸ್ಟಲ್ಲುಗಳು ಇದ್ದುವು; ಪ್ರತಿಯೊಂದೂ ಸರದಿಯ ಪ್ರಕಾರ ಚರ್ಚಾಸ್ಪರ್ಧೆಗಳನ್ನು ಆಯೋಜಿಸುತ್ತಿದ್ದುವು. ಮುಸ್ಲಿಂ ಹಾಸ್ಟಲ್‌ನಿಂದ ಬರುತ್ತಿದ್ದ ಒಬ್ಬ ವಿದ್ಯಾರ್ಥಿ (ಹೆಸರು ಮರೆತಿದೆ) ಪ್ರತಿ ಸ್ಪರ್ಧೆಯ ಪ್ರಾರಂಭದಲ್ಲಿಯೂ ‘ನನ್ನ ಮನೆಮಾತು ಕನ್ನಡವಲ್ಲ; ಆದರೂ ಕನ್ನಡಾಭಿಮಾನವಿದೆ; ಏನಾದರೂ ತಪ್ಪಾದರೆ ದಯವಿಟ್ಟು ಕ್ಷಮಿಸಿ’ ಎಂದೇ ಪ್ರಾರಂಭಿಸುತ್ತಿದ್ದ; ಮತ್ತು ಇದು ಜಜ್‌ಗಳ ಮೇಲೆ ತುಂಬಾ ಪ್ರಭಾವವನ್ನುಂಟುಮಾಡುತ್ತಿತ್ತು. ಆದರೆ, ಒಂದೆರಡು ಸ್ಪರ್ಧೆಗಳನಂತರ ‘ಇದೂ ಒಂದು ಬಗೆಯ ಸಭೆಯನ್ನು ಪ್ರಭಾವಿಸುವ ತಂತ್ರ’ ಎಂದು ಸಭಿಕರಿಗೂ ಮತ್ತು ಜಜ್‌ಗಳಿಗೂ ಗೊತ್ತಾಯಿತು. ಮೂರ್ನಾಲ್ಕು ವರ್ಷಗಳ ನಂತರ ನಾನೂ ಅಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ; ಕೆಲವಲ್ಲಿ ಬಹುಮಾನವನ್ನು ಪಡೆದೆ. ಒಂದು ಸಂದರ್ಭದಲ್ಲಿ, ಅನಾಥಾಲಯವು ಆಯೋಜಿಸಿದ್ದ ಚರ್ಚಾಸ್ಪರ್ಧೆಯಲ್ಲಿ ಅದೇ ನಿಲಯದಲ್ಲಿ ಇದ್ದು ಓದುತ್ತಿದ್ದ ಭೈರಪ್ಪನವರು ಮತ್ತು ನಾನು ಭಾಗವಹಿಸಿದ್ದೆವು; ಅದರಲ್ಲಿ ಭೈರಪ್ಪನವರಿಗೆ ಮೊದಲ ಮತ್ತು ನನಗೆ ಮೂರನೆಯ ಬಹುಮಾನಗಳು ಬಂದಿದ್ದುವು.

ರಾಮನವಮಿಯ ಸಂದರ್ಭದಲ್ಲಾಗುವ ಸಂಗೀತ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ, ಇಡೀ ವರ್ಷ ಶ್ರೇಷ್ಠ ಸಂಗೀತ ಕಾರ್ಯಕ್ರಮಗಳಾಗುತ್ತಿದ್ದದ್ದು ಪ್ರತಿ ಶನಿವಾರವೂ ರಾತ್ರಿ ೯.೩೦ಇಂದ ೧೧.೦೦ರ ವರೆಗೆ ನಡೆಯುತ್ತಿದ್ದ ‘ನ್ಯಾಶನಲ್ ಪ್ರೋಗ್ರ್ಯಾಮ್’ನಲ್ಲಿ. ಮೈಸೂರಿನ ಟೌನ್‌ಹಾಲಿನ ಮೈದಾನದಲ್ಲಿ ಧ್ವನಿವರ್ಧಕಗಳ ಮೂಲಕ ಈ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದರು. ನಮ್ಮ ಹಾಸ್ಟಲ್ಲಿನಿಂದ ನಾವು ನಾಲ್ಕೈದು ಜನ ಟೌನ್‌ಹಾಲಿಗೆ ಹೋಗಿ, ಅಲ್ಲಿ ಹುಲ್ಲಿನ ಮೇಲೆ ಕುಳಿತು, ಕಡ್ಲೆಕಾಯಿ ತಿನ್ನುತ್ತಾ, ಅಪೂರ್ವ ಸಂಗೀತ ಕಾರ್ಯಕ್ರಮಗಳನ್ನು ಕೇಳುತ್ತಿದ್ದೆವು. ಕೆಲವು ವರ್ಷಗಳ ನಂತರ ಆ ಕಾರ್ಯಕ್ರಮವು ನಿಂತುಹೋಯಿತೆಂದು ಕಾಣುತ್ತದೆ.

ಪ್ರಭಾ ಥಿಯೇಟರಿಗೆ ಬರುತ್ತಿದ್ದ ರಾಜ್‌ಕಪೂರ್-ನರ್ಗಿಸ್ ಚಿತ್ರಗಳು, ಚಾಮುಂಡೇಶ್ವರಿ ಥಿಯೇಟರಿಗೆ ಬರುತ್ತಿದ್ದ ತಮಿಳು-ತೆಲುಗು ಚಿತ್ರಗಳು, ಮತ್ತು ಅಪರೂಪವಾಗಿ ರಾಜ್‌ಕಮಲ್ ಥಿಯೇಟರಿನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ‘ಕೃಷ್ಣಲೀಲಾ,’ ‘ಜಗನ್ಮೋಹಿನಿ’ ಇತ್ಯಾದಿ ಕನ್ನಡ ಚಿತ್ರಗಳು ಅಂದು ವಿದ್ಯಾರ್ಥಿವೃಂದದಲ್ಲಿ ತುಂಬಾ ಜನಪ್ರಿಯವಾಗಿದ್ದುವು. ಕನ್ನಡ ಚಿತ್ರಗಳು ಅಂದು ಮೈಸೂರಿನಲ್ಲಿಯೇ ಇದ್ದ ನವಜ್ಯೋತಿ ಸ್ಟುಡಿಯೋದಲ್ಲಿ ತಯಾರಾಗುತ್ತಿದ್ದುವು; ‘ಕೃಷ್ಣಲೀಲಾ’ ಚಿತ್ರದ ಕಾಳಿಂಗಮರ್ದನದ ಚಿತ್ರೀಕರಣ ಕುಕ್ಕನಹಳ್ಳಿ ಕೆರೆಯಲ್ಲಿ ಆಗಿತ್ತು. ಮುಂದೆ, ‘ಶ್ರೀ ವೆಂಕಟೇಶ್ವರ ಮಹಾತ್ಮೆ’ ರಾಜಕಮಲ್ ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗ, ಅದರ ಪ್ರವೇಶದ್ವಾರದಲ್ಲಿ ವೆಂಕಟೇಶ್ವರನ ಬೃಹತ್ ಪುತ್ಥಳಿಯನ್ನಿತ್ತು, ಅದಕ್ಕೆ ದಿನವೂ ಸಾಯಂಕಾಲ ಮಂಗಳಾರತಿ ಮಾಡಿ, ಸಿನಿಮಾ ನೋಡಲು ಬಂದವರಿಗೆಲ್ಲಾ ತೀರ್ಥವನ್ನು ಕೊಡುತ್ತಿದ್ದರು.

ಗಾಯತ್ರಿ ಟಾಕೀಸಿನಲ್ಲಿ ನೋಡಿದ “ಸ್ಯಾಮ್ಸನ್ ಅಂಡ್ ಡಿಲೈಲ,” ಚಾಮುಂಡೇಶ್ವರಿ ಥಿಯೇಟರಿನಲ್ಲಿ ನೋಡಿದ “ಏಳೈ ಪಡುಂ ಪಾಡು” (ಇದು ಮೂಲ ಫ್ರೆಂಚ್ ಭಾಷೆಯ ‘ಲ ಮಿಜ಼ರಾಬಲ್’ ಕಾದಂಬರಿಯ ಚಿತ್ರರೂಪ), ರಾಜ್‌ಕಮಲ್‌ನಲ್ಲಿ ನೋಡಿದ “ಜಗನ್ಮೋಹಿನಿ,” ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೇಳುತ್ತಿದ್ದ ಕಾಳಿಂಗರಾವ್ ಮತ್ತು ಅನಂತಸ್ವಾಮಿ ಇವರ ಜನಪದ ಗೀತೆಗಳು ಮತ್ತು ಕೆ ಎಸ್ ನ ಅವರ ಭಾವಗೀತೆಗಳು, ತರಾಸು ಅವರ “ತಿರುಗುಬಾಣ” ಕಾದಂಬರಿಗಾಗಿ ಅದು ಬಿಡುಗಡೆಯಾಗುವ ದಿನ ಚೇತನ ಬುಕ್‌ಸ್ಟಾಲ್ ಮುಂದೆ ಹತ್ತು ಘಂಟೆಗೇ ಹೋಗಿ ಕ್ಯೂ ನಿಂತುದು…

ಆ ಕಾಲಘಟ್ಟದ ಮೈಸೂರು ಮತ್ತು ಮಹಾರಾಜಾ ಕಾಲೇಜು ಮುಗಿಯದ ನೆನಪುಗಳ ಖನಿ. ವಿದ್ವತ್ತಿನ, ಸೌಂದರ್ಯದ, ಸಂಗೀತ-ಸಾಹಿತ್ಯಗಳ ಒಂದು ಮಾಯಾಲೋಕ — ಸದಾ ಅಂಚಿನಲ್ಲಿಯೇ ನನ್ನನ್ನು ಉಳಿಸಿದ, ಬೆಳೆಸಿದ, ಕುಗ್ಗಿಸಿದ ಅದ್ಭುತ ಮಾಯಾಲೋಕ.