ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತು
ಅಧ್ಯಾಯ ಅರವತ್ತ ನಾಲ್ಕು [ಮೂಲದಲ್ಲಿ ೩೬]

ಗಣಿತಮೇರು ಸಿಎನ್‌ಎಸ್ ಅವರ ಮಾರ್ಗದರ್ಶನ ನನಗೆ ಒದಗಿದ ಮಧುರ-ರಸ-ಸರಸ ಸನ್ನಿವೇಶವನ್ನು ಹಿಂದೆ ವಿವರಿಸಿದ್ದೇನೆ [ನೋಡಿ: ಅಧ್ಯಾಯ ೫೯] ಇದರ ಪರಿಣಾಮವಾಗಿ ‘ಕನ್ನಡ ವಾಲ್ಮೀಕಿ ರಾಮಾಯಣ’ ಪ್ರಕಟವಾಯಿತು. ಈ ಮಹತ್ಕಾರ್ಯವನ್ನು ಸಿ.ಎನ್.ಎಸ್ ನುಡಿಗಳಲ್ಲಿ ಶ್ರೀರಾಮ ನನ್ನಿಂದ ಹೇಗೆ ಮಾಡಿಸಿದ ಎಂಬ ಸಂಗತಿಯನ್ನು ‘ಫರ್ಮಾ ಯಕ್ಷ ಪ್ರಶ್ನೆ ಮತ್ತು ಇತರ ವಿಜ್ಞಾನ ಲೇಖನಗಳು’ ಪುಸ್ತಕದಲ್ಲಿ [ಮೊದಲ ಮುದ್ರಣದಲ್ಲಿ ‘ಗಣಿತ ಗಗನ ಗಮನ’ ಎಂದಿದ್ದದ್ದು ಈಗ ಹೆಚ್ಚುವರಿ ಲೇಖನ ಹಾಗೂ ಪರಿಷ್ಕರಣ ಕಂಡು, ರೂ ಅರವತ್ತಕ್ಕೆ ಲಭ್ಯ] ಬರೆದಿದ್ದೇನೆ. ಅದರ ಪೂರ್ಣ ಪಾಠ:

ನಮ್ಮ ಕತೆ ೧೯ನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಆರಂಭವಾಗುತ್ತದೆ. ಅಂದು ಮೈಸೂರು ಸಂಸ್ಥಾನದ ಗುಂಡ್ಲುಪೇಟೆ ತೆರಕಣಾಂಬಿ ಪ್ರದೇಶದಲ್ಲಿ ನಾರಣೈಂಗಾರ್ ಎಂಬ ಯುವಕರೊಬ್ಬರಿದ್ದರು. ಇವರ ಹಿರಿಯರಿಗೆ ಹೇಳಿಕೊಳ್ಳುವ ಆಸ್ತಿಯಾಗಲಿ ವೃತ್ತಿಯಾಗಲಿ ಇರಲಿಲ್ಲ. ಬಡತನದ ಪರಿಸರದಲ್ಲಿ ಬೆಳೆದರು. ವಂಶಪಾರಂಪರ್ಯವಾಗಿ ಬಂದಿದ್ದ ದೈವಭಕ್ತಿ ಮತ್ತು ಕರ್ತವ್ಯಶ್ರದ್ಧೆ ಮಾತ್ರ ಇವರ ಬಂಡವಾಳ. ನಾರಣೈಂಗಾರ್ಯರ ಬದುಕಿನ ಬಳ್ಳಿ ಹೊಸ ಬೆಳಕನ್ನು ಅರಸಿ ಅದರ ಕಡೆಗೆ ಹಬ್ಬಬೇಕೆಂದು ತವಕಿಸುತ್ತಿದ್ದುದು ಸಹಜವೇ. ಅದೇ ವೇಳೆ ತಲೆದೋರಿದ ನಿಸರ್ಗದ ಮುನಿಸು, ಊರಿನಿಂದ ಇವರ ನಿರ್ಗಮನವನ್ನು ತ್ವರೆಗೊಳಿಸಿತು. ಆ ವಲಯದಲ್ಲೆಲ್ಲ ಭೀಕರ ಕ್ಷಾಮ. ಹುಟ್ಟುನಾಡನ್ನು ಬಿಟ್ಟ ಇವರು ಹಲವಾರು ತೀರ್ಥಕ್ಷೇತ್ರಗಳಲ್ಲಿ ಅಲೆದರು. ಶಿಲ್ಪಕಲೆಯ ತವರುಮನೆಯೂ ಚೆನ್ನಕೇಶವ ದೇವರ ಪವಿತ್ರ ಸ್ಥಾನವೂ ಆದ ಬೇಲೂರಿನ ಅಯಸ್ಕಾಂತತ್ವ ಆಸ್ತಿಕ ನಾರಣೈಂಗಾರ್ಯರಿಗೆ ಬಲುಪ್ರಿಯವೆನಿಸಿತು. ಇವರು ಅಲ್ಲೇ ನೆಲಸಿದರು.

ಕೃಷಿ ಮತ್ತು ಪೌರೋಹಿತ್ಯಗಳಿಂದ ಜೀವನರಥವನ್ನು ನಡೆಸತೊಡಗಿದರು. ಯುಕ್ತ ಕಾಲದಲ್ಲಿ ಯೋಗ್ಯ ಕನ್ಯೆಯನ್ನು ಅರಸಿ ಮದುವೆ ಆಗಿ ಗೃಹಸ್ಥರೂ ಆದರು. ಕೈಯಲ್ಲಿ ನಾಲ್ಕು ಕಾಸು ಕೂಡಿಬಂದುದರಿಂದ ಕೃಷಿಯ ಸ್ವತಂತ್ರ ವೃತ್ತಿಯನ್ನು ಅವಲಂಬಿಸಬೇಕೆಂದು ಬಯಸಿದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಳೂಕಿನ ಕನ್ನೇಹಳ್ಳಿಯಲ್ಲಿ ಸುಮಾರು ೪೦ ಎಕ್ರೆ ಕಾಫಿತೋಟ ಖರೀದಿಸಿ ಅಲ್ಲೇ ತಮ್ಮ ಪತ್ನೀ ಸಮೇತ ಬಿಡಾರ ಹೂಡಿದರು.

ನಾರಣೈಂಗಾರ್ ದಂಪತಿಗಳ ಮೊದಲ ಕೂಸೇ ಮುಂದೆ ಮಹಾಗಣಿತ ವಿದ್ವಾಂಸ, ಪ್ರಾಧ್ಯಾಪಕೋತ್ತಮ, ಆಸ್ತಿಕ ಶಿರೋಮಣಿ, ಕನ್ನಡ ವಾಲ್ಮೀಕಿ ಎಂದು ಖ್ಯಾತನಾಮರಾದ ಡಾಕ್ಟರ್ ಸಿ.ಎನ್. ಶ್ರೀನಿವಾಸ ಅಯ್ಯಂಗಾರ್ಯರು. (೧೯೦೧-೭೨) ಬಾಲಕ ಶ್ರೀನಿವಾಸನ ಜನನವಾದದ್ದು ೧೯೦೧ ಫೆಬ್ರುವರಿ ೨೧ರಂದು (ಶಾರ್ವರಿ ಸಂವತ್ಸರ, ಫಾಲ್ಗುಣ ಶುದ್ಧ ತದಿಗೆ). ಕನ್ನೇಹಳ್ಳಿಯ ಹಚ್ಚಹಸುರಿನ ಹುಚ್ಚು ಕಡಲಿನ ನಡುವೆ ಹುಟ್ಟಿದ ಈ ಅಣುಗ ಸ್ವಪ್ರಯತ್ನದಿಂದಲೂ ನಿಷ್ಠೆಯಿಂದಲೂ ಎಲ್ಲಕ್ಕೂ ಮಿಗಿಲಾಗಿ (ಅವರೇ ಬೇರೆ ಒಂದು ಸಂದರ್ಭದಲ್ಲಿ ಹೇಳಿರುವಂತೆ) ಭಗವತ್ಕೃಪೆಯಿಂದಲೂ ಸಾಧನೆ ಸಿದ್ಧಿಗಳ ನಿಚ್ಚಣಿಕೆಯ ಪಾವಟಿಗೆಗಳನ್ನು ಏರುತ್ತ ಸಾಗಿ ಮರೆಯಾದ ಸಾಹಸಗಾಥೆ ಒಂದು ಮಹಾಕಾವ್ಯ.

ಶ್ರೀನಿವಾಸ ಅಯ್ಯಂಗಾರ್ಯರ ತಾಯಿ ಇನ್ನಿಬ್ಬರು ಮಕ್ಕಳನ್ನು ಹಡೆದು ಕೊನೆಯ ಹೆರಿಗೆಯಲ್ಲಿ ತೀರಿಕೊಂಡರು. ಇತ್ತ ಕೊನೆಯ ಕೂಸಾದರೂ (ಗಂಡು) ಹೆಚ್ಚು ಕಾಲ ಉಳಿಯಲಿಲ್ಲ. ನಾರಣೈಂಗಾರ್ಯರ ತಲೆಯ ಮೇಲೆ ಬಾನೇ ಕಳಚಿ ಬಿದ್ದಂತಾಯಿತು. ಮಲೆನಾಡಿನ ಪ್ರತಿಕೂಲ ಹವೆಯೂ ಮನೆಯೊಳಗಿನ ಕ್ಲೇಶಪರಂಪರೆಯೂ ಒಟ್ಟಾಗಿ ಇವರ ಆರೋಗ್ಯವನ್ನು ಹದಗೆಡಿಸಿದುವು. ಮಕ್ಕಳ ಲಾಲನೆ ಪಾಲನೆಗೋಸ್ಕರವಾದರೂ ತಾನು ಬದುಕಿರಬೇಕಾದದ್ದು ಅತ್ಯಗತ್ಯ ಎಂದು ಇವರಿಗೆ ಸ್ಪಷ್ಟವಾಯಿತು. ಹೀಗಾಗಿ ಕನ್ನೇಹಳ್ಳಿಯ ತಮ್ಮ ಆಸ್ತಿಯನ್ನು, ದೊರೆತ ಅಲ್ಪ ಬೆಲೆಗೆ ಮಾರಿ, ಎರಡು ಹಸುಗೂಸುಗಳ ಸಮೇತ ಚಿಕ್ಕಮಗಳೂರಿಗೆ ನಿರ್ಗಮಿಸಿದರು. ಅಲ್ಲೊಂದು ಮನೆ ಮಾಡಿ, ಈ ಮಕ್ಕಳಿಗೆ ತಂದೆಯೂ ತಾಯಿಯೂ ತಾನೇ ಆಗಿ, ಸಬ್ಬಲ್ಲು ಮುರಿದ ತಮ್ಮ ಬಾಳಬಂಡಿಯನ್ನು ಮತ್ತೆ ಹಾದಿಗೆ ಹೂಡಿದರು. ಮುಂದೆ ಕೆಲವೇ ದಿವಸಗಳಲ್ಲಿ ಇನ್ನೊಂದು ಮಗು (ಹೆಣ್ಣು) ಮಾರಿ ಬೇನೆಗೆ ಬಲಿ ಆಯಿತು. ಈಗ ಮನೆಯಲ್ಲಿ ಉಳಿದವರು ಇಬ್ಬರೇ – ಕಾಯಿಲೆ ಸಂಕಟಗಳಿಂದ ನರಳುತ್ತಿದ್ದ ತಂದೆ, ಇನ್ನೂ ಕಣ್ಣು ತೆರೆಯುತ್ತಿದ್ದ ಮಗ ಶ್ರೀನಿವಾಸ.

ತಾಯಿ ಎಂಬ ವಸ್ತುವನ್ನು ಈ ಬಾಲಕ ತಿಳಿದವನಲ್ಲ. ತಂದೆಯಾದರೋ ತನ್ನ ಜಂಜಡಗಳ ನಡುವೆ ಅಡುಗೆ ಮಾಡಿ ಬಡಿಸಿದ್ದೇ ಈ ಮಗುವಿಗೆ ಪಂಚಭಕ್ಷ್ಯ ಪರಮಾನ್ನ. ಪ್ರತಿಭೆಯ ತಿರಿ ಮುರುಟಲು ಇದಕ್ಕಿಂತ ಹೆಚ್ಚಿನ ಹೊಡೆತ ಇನ್ನೇನು ಬೇಕು? ಆದರೆ ನಾರಣೈಂಗಾರ್ಯರು ತಮ್ಮ ಕಂದನಿಗೆ ಯಾವುದಕ್ಕೂ ಕೊರತೆ ಮಾಡಲಿಲ್ಲ. ಕಡು ಬಡವ ತನ್ನ ನಿಧಿಯನ್ನು ಕಾಪಾಡುವ ಜತನದಿಂದ ತಮ್ಮ ವಂಶದ ಈ ಏಕಮಾತ್ರ ಕಂದನನ್ನು ಇವರು ಪೋಷಿಸತೊಡಗಿದರು.

ಚಿಕ್ಕಮಗಳೂರು (ಸಿ) ನಾರಣೈಂಗಾರ್ (ಎನ್) ಶ್ರೀನಿವಾಸ ಅಯ್ಯಂಗಾರ್ (ಎಸ್) – ಇದು ಅವರ ಪೂರ್ಣ ಹೆಸರು; ಸಂಕ್ಷೇಪವಾಗಿ ಸಿಎನೆಸ್. ಪ್ರಾಪ್ತ ವಯಸ್ಸಿನಲ್ಲಿ ತಂದೆ ಇವರನ್ನು ಶಾಲೆಯ ಮೆಟ್ಟಿಲು ಹತ್ತಿಸಿದರು. ಮನೆಯಲ್ಲಿ ವೈದಿಕ ಸಂಪ್ರದಾಯ, ಶಾಲೆಯಲ್ಲಿ ಸಾಂಪ್ರದಾಯಿಕ ವಿದ್ಯಾಭ್ಯಾಸ – ಹೀಗೆ ಸಿಎನೆಸ್ ಅವರ ಬೆಳೆವಣಿಗೆ ಮುಂದುವರಿಯಿತು. ಇವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ, ಇತರ ಮಕ್ಕಳಂತೆಯೇ ಲೋವರ್ ಸೆಕೆಂಡರಿ ತರಗತಿಗೆ (ಅಂದರೆ ಇಂದಿನ ಏಳನೆಯ ದರ್ಜೆ) ಉತ್ತೀರ್ಣರಾದರು.

ಆಗಿನ ಪದ್ಧತಿಯಂತೆ ಈ ತರಗತಿಯಲ್ಲಿ ವಿದ್ಯಾರ್ಥಿಗಳು ಒಂದೋ ಸಂಸ್ಕೃತವನ್ನು ಇಲ್ಲವೇ ಆರೋಗ್ಯಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಕಲಿಯಬೇಕಾಗಿತ್ತು. ನಾರಣೈಂಗಾರ್ಯರು ತಮ್ಮ ಮಗನಿಗೆ ಸಂಸ್ಕೃತವನ್ನು ಆಯ್ದುಕೊಳ್ಳಲು ಸಲಹೆ ನೀಡಿದರು. ಬಾಲಕನಿಗೆ ತಂದೆ ಹೇಳಿದ್ದೇ ಪರಮವಾಕ್ಯ. ಆದರೆ ೧೯೧೨ರ ದಿನಗಳಲ್ಲಿ ಚಿಕ್ಕಮಗಳೂರಿನ ಲೋವರ್ ಸೆಕೆಂಡರಿ ತರಗತಿಯಲ್ಲಿ ಸಂಸ್ಕೃತ ಭಾಷೆಗೆ ಏನು ಪ್ರೋತ್ಸಾಹವಿದ್ದಿರಬಹುದು? ಮುರುಕು ಕೋಣೆ, ಮುದುಕ ಮಾಷ್ಟ (ಮಾಷ್ಟ್ರು ಪದದ ಹೀನಾಯ ರೂಪ, ಅಧ್ಯಾಯ ೨೪ ನೋಡಿ), ಹರಕು ಪುಸ್ತಕ, ತಿರುಕ ವಿದ್ಯಾರ್ಥಿ! ಈ ಪುಸ್ತಕವಾದರೂ ರಾಜಧಾನಿಯಿಂದ ಚಿಕ್ಕಮಗಳೂರಿಗೆ ಐತರಲು ಅವೆಷ್ಟೋ ತಿಂಗಳುಗಳ ವಿಳಂಬ. ಇನ್ನು ತರಗತಿಯಲ್ಲಿ ಸಂಸ್ಕೃತವನ್ನು ಆಯ್ದ ವಿದ್ಯಾರ್ಥಿಗಳು ಎಷ್ಟು ಮಂದಿ? ಒಬ್ಬನೇ ಒಬ್ಬ, ನಮ್ಮ ಶ್ರೀನಿವಾಸ ಮಾತ್ರ.

ಸಂಸ್ಕೃತ ಪಂಡಿತರು ತಡವಾಗಿ ತರಗತಿಗೆ ಬಂದು, ಸಾಕಷ್ಟು ಕಾಲ ಕುರ್ಚಿಶಾಯಿಗಳಾಗಿ ಗೊರೆದು, ತಿಳಿದೆದ್ದ ಬಳಿಕ ಒಂದಿಷ್ಟು ವ್ಯಾಕರಣ ಮತ್ತು ಭಾಷಾಂತರವನ್ನು ಗೋಗರೆದು ಕ್ಷಿಪ್ರವಾಗಿ ನಿಷ್ಕ್ರಮಿಸುತ್ತಿದ್ದರು. ಈ ರೀತಿಯಲ್ಲಿ ಮೊದಲ ಮೂರು ತಿಂಗಳುಗಳೂ ಸಂದುಹೋದುವು. ಆ ವೇಳೆಗೆ ಚಿಕ್ಕಮಗಳೂರಿಗೆ ಬೆಂಗಳೂರಿನಿಂದ ವರ್ಗವಾಗಿ ಬಂದ ಪೊಲಿಸ್ ಅಧಿಕಾರಿಯೊಬ್ಬರ ಮಗ ಇದೇ ತರಗತಿಗೆ ಪ್ರವೇಶ ಪಡೆದ. ಈಗ ಶ್ರೀನಿವಾಸನಿಗೆ ಒಬ್ಬ ಸಹಪಾಠಿ ದೊರೆತಂತಾಯಿತು. ಈತ ಬೆಂಗಳೂರಿನಿಂದ ಬರುವಾಗಲೇ ತನ್ನೊಡನೆ ತರಗತಿಗೆ ಬೇಕಾದ ಪಠ್ಯಪುಸ್ತಕ ತಂದಿದ್ದ. ಈ ವಿದ್ಯಾರ್ಥಿಗಳು ಪಂಡಿತರಿಗೆ ಇನ್ನು ಮುಂದಾದರೂ ಪಾಠ ಮಾಡಬೇಕೆಂದು ಮನವಿ ಮಾಡಿಕೊಂಡರು. ಪಠ್ಯಪುಸ್ತಕ ದೊರೆತದ್ದು ಮುಖ್ಯ ಕಾರಣವೋ ಪೊಲಿಸ್ ಅಧಿಕಾರಿಯ ಮಗ ವಿದ್ಯಾರ್ಥಿಯಾಗಿ ಬಂದದ್ದು ಮುಖ್ಯ ಕಾರಣವೋ ಅಂತೂ ಅಂದಿನಿಂದ ಸಂಸ್ಕೃತ ಸಾಹಿತ್ಯದ ಕ್ರಮಬದ್ಧ ಪಾಠಪ್ರವಚನ ಪ್ರಾರಂಭವಾದುವು.

ಇವರು ಕಲಿಯಬೇಕಾಗಿದ್ದ ಪದ್ಯ ವಿಭಾಗದಲ್ಲಿ ವಾಲ್ಮೀಕಿ ರಾಮಾಯಣದ ಸುಂದರ ಕಾಂಡದ ನಾಲ್ಕು ಸರ್ಗಗಳಿದ್ದುವು: ೫೦ ರಿಂದ ೫೩ರವರೆಗಿನವು. ಎಂಥವರಿಗೂ, ಅದೂ ವಿಶೇಷವಾಗಿ ಎಳೆಯ ಮನಸ್ಸುಗಳಿಗೆ, ಬಲು ಸ್ವಾರಸ್ಯಕರವಾಗುವ ಸರ್ಗಗಳಿವು. ಲಂಕೆಯಲ್ಲಿ ಸೀತೆಯನ್ನು ಪತ್ತೆ ಹಚ್ಚಿದ ಬಳಿಕ ಚೈತ್ಯಾಲಯವನ್ನು ಹಾಳುಗೆಡವಿ ಅನೇಕ ರಾಕ್ಷಸರನ್ನು ಕೊಂದ ಹನುಮಂತನನ್ನು ಬ್ರಹ್ಮಾಸ್ತ್ರದಿಂದ ಕಟ್ಟಿ ಸೆರೆ ಹಿಡಿದು ರಾವಣನ ಮುಂದೆ ನಿಲ್ಲಿಸಿದ್ದಾರೆ. ಅಲ್ಲಿ ನಡೆದ ರಾವಣ – ಹನುಮಂತರ ವಾಗ್ವಾದದಿಂದ ತೊಡಗಿ ಮುಂದೆ ರಾಕ್ಷಸರು ಹನುಮಂತನ ಬಾಲಕ್ಕೆ ಬೆಂಕಿ ಇಟ್ಟು ಮೆರವಣಿಗೆ ಮಾಡುವವರೆಗಿನ ಕತೆ ಈ ಸರ್ಗಗಳಲ್ಲಿವೆ. ಶ್ರೀನಿವಾಸನ ಹಚ್ಚ ಮನಸ್ಸಿನ ಮೇಲೆ ಈ ದೃಶ್ಯ ಶಾಶ್ವತ ಮತ್ತು ಹೊಚ್ಚ ಹೊಸ ಅಚ್ಚು ಒತ್ತಿತ್ತು; ಮತ್ತು ರಾಮಾಯಣದ ವಿಚಾರ ತೀವ್ರ ಆಸಕ್ತಿ ಮೊಳೆಯುವಂತೆ ಮಾಡಿತು. ಮನೆಯಲ್ಲಿ ಮೂಲರಾಮಾಯಣದ ಆರು ಕಾಂಡಗಳನ್ನೂ ಒಳಗೊಂಡಿದ್ದ ತೆಲುಗು ಲಿಪಿಯ ಗ್ರಂಥವಿತ್ತು. ಶ್ರೀನಿವಾಸ ಇದನ್ನೇ ಆತುರದಿಂದ ಸೆಳೆದುಕೊಂದು ಪಠಿಸತೊಡಗಿದ. ಬಾಲಕಾಂಡದಿಂದಲೇ ಪ್ರಾರಂಭ.

ನಾರಣೈಂಗಾರ್ಯರು ಮಗನ ಈ ಗೀಳನ್ನು ಗಮನಿಸಿದರು, “ಅದೇನಪ್ಪಾ! ನೀನು ಅಷ್ಟೊಂದು ಏಕಾಗ್ರತೆಯಿಂದ ಓದುತ್ತಿರುವುದು?” “ಶಾಲೆಯಲ್ಲಿ ಸುಂದರಕಾಂಡದ ಒಂದು ಭಾಗ ಬೋಧಿಸುತ್ತಿದ್ದಾರೆ. ಇಡೀ ರಾಮಾಯಣವನ್ನು ಮೊದಲಿನಿಂದ ಓದಬೇಕು ಎಂಬ ಆಸೆ ಹುಟ್ಟಿತು. ಹೀಗಾಗಿ ಬಾಲಕಾಂಡದಿಂದಲೇ ಆರಂಭಿಸಿದ್ದೇನೆ.” “ಪವಿತ್ರವಾದ ರಾಮಾಯಣವನ್ನು ಹಾಗೆಲ್ಲ ಓದಬಾರದು, ಮಗೂ! ನಿನಗೆ ಆಸಕ್ತಿ ಇದ್ದರೆ ನಾಳೆ ಬೆಳಗ್ಗೆ ಆಹ್ನಿಕಾನಂತರ ಅದರ ಪಾರಾಯಣದ ವಿಧಿ ಹೇಳಿಕೊಡುತ್ತೇನೆ. ಅಲ್ಲಿಂದ ಮುಂದಕ್ಕೆ ನಿತ್ಯವೂ ಅದೇ ರೀತಿ ಓದುತ್ತಾ ಮುಂದುವರಿಸು.” ಮರುಮುಂಜಾನೆ ತಂದೆ ಶಾಸ್ತ್ರೋಕ್ತವಾಗಿ ರಾಮಾಯಣ ಪಾರಾಯಣ ವಿಧಿಯನ್ನು ಮಗನಿಗೆ ಬೋಧಿಸಿದರು. ಈತನಾದರೂ ಅದೆಂಥ ಸತ್ಪಾತ್ರ! ಅದೇ ತನ್ನ ಜೀವನದ ಏಕೈಕ ಉದ್ದೇಶವೋ ಎಂಬಂತೆ ಅಂದಿನಿಂದ ಎಡೆಬಿಡದೆ ಪ್ರತಿ ದಿನವೂ ರಾಮಾಯಣ ವಾಚನ ಮಾಡುತ್ತ ಸಾಗಿದ. ಎರಡು ವರ್ಷ ಪರ್ಯಂತ ಈ ಅಧ್ಯಯನ ಮುಂದುವರಿಯಿತು. ಇವನಿಗಾಗ ವಯಸ್ಸು ಹದಿಮೂರು ವರ್ಷ.

ರಾಮಾಯಣ ಪಾರಾಯಣ ಒಂದೊಂದು ಸಲ ಮುಗಿದ ಬಳಿಕವೂ ಶ್ರೀರಾಮ ಪಟ್ಟಾಭಿಷೇಕವನ್ನು ವಿಧ್ಯುಕ್ತವಾಗಿ ನೆರವೇರಿಸುವುದು ಸಂಪ್ರದಾಯ. ಅದೂ ಈ ಬಾಲಕ ಮೊದಲ ಸಲ ಪಾರಾಯಣವನ್ನು ಮುಗಿಸಿರುವಾಗ ಅದರ ಸಂಭ್ರಮ ಕೇಳಬೇಕೇ? ಶ್ರೀರಾಮ ದೇವಸ್ಥಾನದಲ್ಲಿಯೇ ಈ ಮಹಾಕಾರ್ಯ ನಡೆಯಬೇಕೆಂದು ಹಿರಿಯರು ಅಪೇಕ್ಷಿಸಿದರು. ಚಿಕ್ಕಮಗಳೂರಿಗೆ ಎರಡು ಮೈಲು ದೂರದಲ್ಲಿರುವ ಹಿರೇಮಗಳೂರಿನ ಶ್ರೀರಾಮದೇವರ ಸನ್ನಿಧಿಯಲ್ಲಿ ಬಾಲಕ ಶ್ರಿನಿವಾಸನಿಂದ ಮೊದಲ ಶ್ರೀರಾಮ ಪಟ್ಟಾಭಿಷೇಕ ಸಮಾರಂಭ ಜರಗಿತು. ಅದಕ್ಕೆ ಆಹ್ವಾನಿತರಾಗಿ ಆತನ ಶಾಲೆಯ ಉಪಾಧ್ಯಾಯರೆಲ್ಲರೂ ಬಂದಿದ್ದರು. ಮಹಾಮಂಗಳಾರತಿಯ ಮೊದಲು ಪಾರಾಯಣಕಾರ ಇಡಿ ಕತೆಯನ್ನು ಹೇಳುವುದು ಕ್ರಮ. ಇದನ್ನೇ ಶ್ರೀನಿವಾಸ ಕೂಡ ಮಾಡಬೇಕೆಂದು ಅವರೆಲ್ಲರೂ ಅಪೇಕ್ಷಿಸಿದರು. ಹೀಗಾಗಿ ೧೩ ವಯಸ್ಸಿನ ಈ ತರುಣ ಆಶುಭಾಷಣ ಮಾಡಿ ರಾಮಾಯಣದ ಕತೆ ಹೇಳಬೇಕಾಯಿತು.

ಶ್ರೀನಿವಾಸ ಅಯ್ಯಂಗಾರ್ಯರ ಜೀವನನದಿಗೆ ರಾಮಾಯಣದ ಕೊಡುಗೆಯೂ ರಾಮಾಯಣಕ್ಕೆ ಇವರ ಕೊಡುಗೆಯೂ ಮಹತ್ತರವಾದವು:

ರಾಮಾಯಣವಿವರನು ಕಡೆಯಿತೋ ಮುಂದದಿಂದ
ರಾಮಾಯಣವನಿವರೆ ಮರುಬರೆದರೋ ಒಗಟ
ರಾಮಚಂದ್ರನೆ ಪರಿಹರಿಸಬೇಕು – ಪರಿಕಿಸಲು
ರಾಮಚೇತನವಿವರ ಪ್ರೇರಣೆಯೊ ಅತ್ರಿಸೂನು

ಸಿಎನೆಸ್ ಓದಿನಲ್ಲಿ ಬಲು ಜಾಣರು. ಇವರು ಶಾಲೆಯ ಪ್ರತಿಯೊಂದು ಕೆಲಸವನ್ನೂ ಬಲು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಪಾಠದ ಎಲ್ಲ ವಿಷಯಗಳೂ ಇವರಿಗೆ ಕುತೂಹಲಭರಿತವಾಗಿದ್ದುವು. ಆದರೆ ಇವರ ಹೆಚ್ಚಿನ ಒಲವು ಗಣಿತದೆಡೆಗಿತ್ತು. ಇಂಥ ಒಬ್ಬ ನಿಷ್ಠಾವಂತ ವಿದ್ಯಾರ್ಥಿ ಪ್ರತಿಯೊಂದು ತರಗತಿಯಲ್ಲಿಯೂ ಮುಂದಿನ ಸಾಲಿನಲ್ಲಿಯೇ ಇರುತ್ತಿದ್ದುದು ಆಶ್ಚರ್ಯವಲ್ಲ. ೧೯೧೬ರಲ್ಲಿ ಇವರು ಮೈಸೂರು ಸಂಸ್ಥಾನದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ, ಇಡೀ ಸಂಸ್ಥಾನಕ್ಕೆ ಮೂರನೆಯ ಸ್ಥಾನ ಪಡೆದು, ಉತ್ತೀರ್ಣರಾದರು. ಅಲ್ಲಿಗೆ ಚಿಕ್ಕಮಗಳೂರಿನ ವಿದ್ಯಾಭ್ಯಾಸ ಮುಗಿಯಿತು. ಮುಂದೆ ಕಾಲೇಜು ವ್ಯಾಸಂಗ ಮಾಡಲು ಬೆಂಗಳೂರು ಅಥವಾ ಮೈಸೂರು ನಗರ ಆಶ್ರಯಿಸಬೇಕಾಗಿತ್ತು. ತಂದೆ ತಮ್ಮ ಉಳಿದ ಚಿಕ್ಕಪುಟ್ಟ ಜಮೀನುಗಳನ್ನೆಲ್ಲ ಮಾರಿ ಮಗನೊಡನೆ ಬೆಂಗಳೂರು ನಗರ ಸೇರಿದರು.

ಬೆಂಗಳೂರಿನ ಗವರ್ನಮೆಂಟ್ ಕಾಲೇಜಿಯೇಟ್ ಹೈಸ್ಕೂಲಿನಲ್ಲಿ (ಮುಂದೆ ಇದನ್ನು ೧೯೨೫ರ ಅಂದಾಜಿಗೆ ಗವರ್ನಮೆಂಟ್ ಆರ್ಟ್ಸ್ ಕಾಲೇಜ್ ಮತ್ತು ಗವರ್ನಮೆಂಟ್ ಸೈನ್ಸ್ ಕಾಲೇಜ್ ಎಂಬ ಎರಡು ಕಾಲೇಜುಗಳಾಗಿ ವಿಭಾಗಿಸಿದರು) ಎಂಟ್ರನ್ಸ್ ಕ್ಲಾಸನ್ನು ಸೇರಿದರು. ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಸ್ಥಾನ ಪಡೆದಿದ್ದುದರಿಂಡ ಇವರಿಗೆ ರೂಪಾಯಿ ೧೮ರ ಮಾಸಿಕ ವಿದ್ಯಾರ್ಥಿ ವೇತನ ಸುಲಭವಾಗಿ ಲಭಿಸಿತು. ೧೯೧೭ರಲ್ಲಿ ಇವರು ಪ್ರವೇಶ ಪರೀಕ್ಷೆ ಮುಗಿಸಿ ಸ್ನಾತಕ ವ್ಯಾಸಂಗಕ್ಕಾಗಿ ಸೆಂಟ್ರಲ್ ಕಾಲೇಜನ್ನು ಪ್ರವೇಶಿಸಿದರು.

ಶ್ರೀನಿವಾಸ ಅಯ್ಯಂಗಾರ್ಯರನ್ನು ಇಲ್ಲಿಯ ತನಕವೂ ರಕ್ಷಿಸಿಕೊಂಡು ಬಂದಿದ್ದ ಅವರ ತಂದೆಯವರ ಭದ್ರ ಕವಚ ಈಗ ಸಡಿಲವಾಗತೊಡಗಿತ್ತು. ನಾರಣೈಂಗಾರ್ಯರ ಜೀವನದ ಘನೋದ್ದೇಶ ಪರಿಪೂರ್ಣವಾಗುವ ಘಟ್ಟ ಸನ್ನಿಹಿತವಾಗುತ್ತಿತ್ತು. ತಮ್ಮ ಮಗನ ಅಭಿವೃದ್ಧಿಯನ್ನು ಕಾಣುವುದರಲ್ಲೇ ಜೀವ ಹಿಡಿದುಕೊಂಡಿದ್ದ ಅವರು ೧೯೧೮ರ ಇನ್‌ಫ್ಲುಯೆಂಜಾ ಪಿಡುಗಿಗೆ ಬಲಿಯಾಗಿ ಅಸುನೀಗಿದರು. ಹದಿನೇಳು ವಯಸ್ಸಿನ ಸಿಎನೆಸ್ ತಬ್ಬಲಿ ಆದರು, ವಿಶಾಲ ಜಗತ್ತಿನಲ್ಲಿ ತನ್ನವರು ಎಂದು ಹೇಳಿಕೊಳ್ಳಬಹುದಾದಂಥ ಯಾರೂ ಇಲ್ಲದ ಅನಾಥರಾದರು. ಆದರೆ ಇವರು ಧೃತಿಗೆಡಲಿಲ್ಲ. “ಅನಂತರ ಶ್ರೀರಾಮನೇ ನಾನಾ ವ್ಯಕ್ತಿಗಳ ಮೂಲಕ ನನಗೆ ಸಹಾಯವನ್ನು ಒದಗಿಸುತ್ತ ನನ್ನ ಬೆನ್ನ ಹಿಂದೆ ನಿಂತು ಕಾಪಾಡಿದನು; ಈಗಲೂ ಹಾಗೆಯೇ ಕಾಪಾಡುತ್ತಿರುವನು” ಎಂದು ಇವರು ತಮ್ಮ ಜೀವನದ ಕೊನೆಯ ವರ್ಷದಲ್ಲಿ ಕೃತಾರ್ಥತೆಯ ಶಿಖರವನ್ನು ಏರಿದ್ದಾಗ, ಹೇಳಿದ್ದುಂಟು.

೧೯೧೭ರಿಂದ ೧೯೨೦ರ ತನಕ ಸೆಂಟ್ರಲ್ ಕಾಲೇಜಿನಲ್ಲಿ ಇವರ ವ್ಯಾಸಂಗ ಸಾಗಿತು. ಆಗ ಸಿಎನೆಸ್ ಅವರಿಗೆ ಪ್ರೊ| ಎ. ಆರ್. ಕೃಷ್ಣಶಾಸ್ತ್ರಿಗಳು (೧೮೯೦-೧೯೬೮), ಮತ್ತು ಪ್ರೊ. ಬೆಳ್ಳಾವೆ ವೆಂಕಟನಾರಣಪ್ಪನವರು (೧೮೭೨-೧೯೪೩) ಗುರುಗಳಾಗಿದ್ದರೆನ್ನುವುದನ್ನು ಇಲ್ಲಿ ಸ್ಮರಿಸಬೇಕು. ಸ್ನಾತಕ ಪರೀಕ್ಷೆಯಲ್ಲಿ ಶ್ರೀನಿವಾಸ ಅಯ್ಯಂಗಾರ್ಯರಿಗೆ ಉತ್ತಮ ಅಂಕಗಳು ದೊರೆತದ್ದರಿಂದ ಅಂದಿನ ನಿಯಮಾನುಸಾರ ವಿಶ್ವವಿದ್ಯಾಲಯ ಇವರಿಗೆ ಬಿಎಸ್ಸಿ (ಅಂದಿನ ಆನರ್ಸ್) ಪ್ರಥಮ ದರ್ಜೆಯ ಪದವಿ ನೀಡಿತು. ಇವರ ಅಧ್ಯಯನದ ಪ್ರಧಾನ ವಿಷಯ ಗಣಿತ. ಇದನ್ನೇ ಇನ್ನಷ್ಟು ವಿಶಿಷ್ಟವಾಗಿ ವ್ಯಾಸಂಗಿಸಿ ಉನ್ನತ ಹಂತ ಏರಬೇಕೆಂಬುದು ಇವರ ಆಸೆ. ಆದರೆ ಅಂದು ಮೈಸೂರು ಸಂಸ್ಥಾನದಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಅವಕಾಶವಿರಲಿಲ್ಲ. ನೆರೆಯ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಮೈಸೂರಿನ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯುವುದು ಬಲು ಅಸಂಭವನೀಯವಾಗಿತ್ತು. ಹೀಗಾಗಿ ಸಿಎನೆಸ್ ದೂರದ (ಅಂದಿಗಂತೂ ಬಲು ದೂರದ) ಕೊಲ್ಕಟ ನಗರಕ್ಕೆ ಎಂಎಸ್ಸಿ ವ್ಯಾಸಂಗ ಮಾಡಲು ತೆರಳಿದರು (೧೯೨೦). ಈ ಪ್ರತಿಭಾನ್ವಿತ ವಿದ್ಯಾರ್ಥಿಗೆ ಮೈಸೂರು ಸರ್ಕಾರ ರೂಪಾಯಿ ಐವತ್ತರ ಮಾಸಿಕ ವಿದ್ಯಾರ್ಥಿ ವೇತನ ಮಂಜೂರು ಮಾಡಿದ್ದರಿಂದ ಆ ಮಹಾ ನಗರದ ವಾಸ್ತವ್ಯ ತಕ್ಕಮಟ್ಟಿನ ನೆಮ್ಮದಿ ಒದಗಿಸಿತ್ತು. ಅಂದು ಕೊಲ್ಕಟ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು ಸುಪ್ರಸಿದ್ಧ ವಿದ್ಯಾಕಾರಣಿ ಆಶುತೋಷ ಮುಖರ್ಜಿ. ಅಧ್ಯಾಪಕ ವೃಂದದಲ್ಲಿಯೂ ವಿದ್ಯಾರ್ಥಿವೃಂದದಲ್ಲಿಯೂ ಸಾಕಷ್ಟು ಸಂಖ್ಯೆಯ ಮೇಧಾವಿಗಳು ಅಲ್ಲಿ ಆಗ ಒಂದುಗೂಡಿದ್ದುದರಿಂದ ಆ ವಿಶ್ವವಿದ್ಯಾಲಯವೊಂದು ಉನ್ನತ ಬೌದ್ಧಿಕ ಕೇಂದ್ರವೇ ಆಗಿತ್ತು. ಇಂಥ ಮಹಾವಿದ್ಯಾಕೇಂದ್ರದಲ್ಲಿ ತನಗೆ ಅಧ್ಯಯನಾವಕಾಶ ದೊರೆತದ್ದು ಪರಮ ಸೌಭಾಗ್ಯವೆಂದು ಸಿಎನೆಸ್ ಭಾವಿಸಿದ್ದರು. ನಿಜಸಂಗತಿ ಏನೆಂದರೆ ಆ ವಿಶ್ವವಿದ್ಯಾಲಯಕ್ಕೆ ಇಂಥ ಒಬ್ಬ ಸೃಜನಶೀಲ ಚಿಂತನಕಾರ ಲಭಿಸಿದ್ದು ಕೂಡ ಒಂದು ಸುಯೋಗವೇ ಆಗಿತ್ತು.

ಎಂಎಸ್ಸಿ ವ್ಯಾಸಂಗವೇನೋ ಚೆನ್ನಾಗಿ ಮುಂದುವರಿಯಿತು. ೧೯೨೨ರ ನವಂಬರಿನಲ್ಲಿ ಇನ್ನೇನು ಕೊನೆಯ ಪರೀಕ್ಷೆ ಬರೆಯಬೇಕು, ಆ ವೇಳೆಗೆ ಸಿಎನೆಸ್ ಅವರ ಆರೋಗ್ಯ ಹಠಾತ್ತನೆ ಕೆಟ್ಟು ಹೋಯಿತು. ಮೊದಲ ದಿನದ ಪರೀಕ್ಷೆ ಬರೆದು ಮರಳುತ್ತಿದ್ದಂತೆ ಕಾಲಿನ ಸ್ನಾಯುಗಳ ಒಳಗೆ ತೀವ್ರ ವೇದನೆ ಪ್ರಾರಂಭವಾಯ್ತು. ಮರುದಿನ ಈ ನೋವು ಹೆಚ್ಚಾಯಿತೇ ವಿನಾ ಕಡಿಮೆ ಆಗಲಿಲ್ಲ. ಸಮೀಪದ ಒಬ್ಬ ವೈದ್ಯರಿಂದ ಒಂದಿಷ್ಟು ಔಷಧಿ ಪಡೆದು ಸೇವಿಸಿ ಬಲು ಪ್ರಯಾಸದಿಂದ ಪರೀಕ್ಷಾಮಂದಿರಕ್ಕೆ ನಡೆದು ಅಂದಿನ ಪತ್ರಿಕೆ ಬರೆದು ಮರಳಿದರು. ಈಗ ನಡೆಯಲೂ ಆಗದಷ್ಟು ಉಲ್ಬಣಸ್ಥಿತಿಗೆ ವ್ಯಾಧಿ ವಿಷಮಿಸಿತ್ತು. ಕೈಬೆರಳುಗಳಿಂದ ಲೇಖನಿ ಹಿಡಿಯುವುದೂ ಇವರಿಗೆ ಸಾಧ್ಯವಾಗುತ್ತಿರಲಿಲ್ಲ. ಇನ್ನು ಪರೀಕ್ಷೆ ಬರೆಯುವುದು ಹೇಗೆ? ಇವರ ಅಂಗೋಪಾಂಗಗಳೆಲ್ಲವೂ ವಾತ ರೋಗಗ್ರಸ್ತವಾಗಿದ್ದುವು. ಪುಣ್ಯವಶಾತ್, ಅಂದು ಸಂಜೆ ಮೈಸೂರಿನ ವೈದ್ಯಕೀಯ ಮಿತ್ರರೊಬ್ಬರು ಸಿಎನೆಸ್‌ರನ್ನು ನೋಡಲು ಇವರ ಕೊಠಡಿಗೆ ಬಂದರು. ತಮ್ಮ ಮಿತ್ರರ ಈ ದುಸ್ಥಿತಿಯನ್ನು ಅವರಿಗೆ ನೋಡಲಾಗಲಿಲ್ಲ. ಒಡನೆಯೇ ರೋಗಿಯನ್ನು ಅವರು ತಮ್ಮ ಪ್ರಾಧ್ಯಾಪಕ ವೈದ್ಯರ ದವಾಖಾನೆಗೆ ಸಾಗಿಸಿದರು. ಆ ವೈದ್ಯ ಇವರ ಕೈಕಾಲುಗಳಿಗೂ ದೇಹದ ಇತರ ಭಾಗಗಳಿಗೂ ಹದವಾಗಿ ವಿದ್ಯುತ್ ಶಾಖ ಕೊಟ್ಟು ನೋವನ್ನು ಹತೋಟಿಗೆ ತಂದರು. ಮರುದಿನ ಮುಂಜಾನೆಯೂ ಇದೇ ಶುಶ್ರೂಷೆ ನೀಡಲಾಯಿತು. ಇದರಿಂದ ತಾತ್ಕಾಲಿಕ ಉಪಶಮನ ದೊರೆತು ಆ ದಿನ ಪರೀಕ್ಷೆ ಮಾತ್ರ ಹೇಗೋ ಬರೆಯುವುದು ಸಾಧ್ಯವಾಯಿತು, ಅಷ್ಟೆ. ಈ ರೀತಿ ಪ್ರತಿದಿನವೂ ಎರಡಾವರ್ತಿ ಬೆಳಗ್ಗೆ ಮತ್ತು ಸಾಯಂಕಾಲ ವಿದ್ಯುತ್ ಶಾಖ ಪಡೆದು ನೋವನ್ನು ಕಡಿಮೆ ಮಾಡಿಕೊಳ್ಳುವುದು, ಮತ್ತು ಆಯಾ ದಿವಸದ ಪರೀಕ್ಷೆ ಉತ್ತರಿಸುವುದು – ಹೀಗೆ ಆ ದಿವಸಗಳೆಲ್ಲವೂ ಸಾಗಿದುವು. ಇನ್ನು ಪರೀಕ್ಷಾ ಕೇಂದ್ರವಿದ್ದುದು ವಿಶ್ವವಿದ್ಯಾಲಯ ಸೌಧದ ಆರನೆಯ ಮಹಡಿಯಲ್ಲಿ. ವಿಶ್ವವಿದ್ಯಾಲಯದ ನೌಕರರು ಬಲು ಅಕ್ಕರೆಯಿಂದ ಈ ವಾತಪೀಡಿತ ತರುಣನನ್ನು ವಿದ್ಯುತ್ ಎತ್ತುಗಕ್ಕೆ ಒಯ್ದು ನಿಲ್ಲಿಸಿ ಆರನೆಯ ಮಹಡಿಗೆ ಸಾಗಿಸಿ ಪರೀಕ್ಷಾಂಗಣದವರೆಗೆ ಎತ್ತಿಕೊಂಡೇ ಹೋಗಿ ಕೂರಿಸಿ ಬರೆಯಲು ಅಣಿ ಮಾಡಿಕೊಡುತ್ತಿದ್ದರು. ಪರೀಕ್ಷೆ ಮುಗಿದ ಬಳಿಕ ಇವರನ್ನು ಕೊಠಡಿಗೆ ಕಳಿಸಲು ಕೂಡ ಇದೇ ರೀತಿ ನೆರವಾಗುತ್ತಿದ್ದರು. ಒಂದು ದಿವಸ ಎತ್ತುಗ ಕೆಟ್ಟು ಹೋಗಿದ್ದಾಗ ನೌಕರರು ತಮ್ಮ ಈ ‘ದೇವರಿ’ಗೆ ಅಕ್ಷರಶಃ ಪಲ್ಲಕಿ ಸೇವೆಯನ್ನೇ ಸಲ್ಲಿಸಿದರು. ಕುರ್ಚಿಯಲ್ಲಿ ಕೂರಿಸಿ ಆ ಆರು ಮಹಡಿಗಳ ಎತ್ತರಕ್ಕೂ ಹೊತ್ತುಕೊಂಡೇ ಹೋಗಿದ್ದರು! ಹೀಗೆ ಆ ದುರ್ದಿನಗಳು, ಆ ಪರೀಕ್ಷಾದಿನಗಳು, ಸಂಪೂರ್ಣ ಪರಾಧೀನತೆಯಲ್ಲೇ ಕಳೆದು ಹೋದುವು.

“ಪರೀಕ್ಷೆಯೂ ವ್ಯಾಧಿಯೂ ನನಗೆ ನಿರಂತರವಾಗಿ ಆ ಹತ್ತು ದಿವಸ ಪರ್ಯಂತ ಸಂಗಾತಿಗಳಾಗಿದ್ದುವು. ಹನ್ನೊಂದನೆಯ ದಿವಸ ಪರೀಕ್ಷೆ ಮುಗಿದಿತ್ತು; ವ್ಯಾಧಿ ಮಾಯವಾಗಿತ್ತು! ಕೊಲ್ಕಟದ ರಸ್ತೆಗಳಲ್ಲಿ ಎಂದಿನಂತೆ ತಿರುಗಾಡುತ್ತಿದ್ದೆ!” ಎಂಬುದಾಗಿ ಸಿಎನೆಸ್ ಹಲವಾರು ದಶಕಗಳ ತರುವಾಯ ಬರೆದಿದ್ದಾರೆ. ಎಂಎಸ್ಸಿ ಪರೀಕ್ಷೆಯ ಫಲಿತಾಂಶ ಬಂತು: ಅವರು ಪ್ರಥಮ ದರ್ಜೆ ಪ್ರಥಮ ಸ್ಥಾನ ಪಡೆದಿದ್ದರು; ಜೊತೆಗೆ ಕೊಲ್ಕಟ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಗರಿಷ್ಠ ಅಂಕಗಳನ್ನು (ಗಣಿತ ವಿಭಾಗದಲ್ಲಿ) ಕೂಡ ಗಳಿಸಿ ದಾಖಲೆ ಸ್ಥಾಪಿಸಿದ್ದರು! ಇಲ್ಲಿಗೆ ಅವರ ಜೀವನದಲ್ಲಿ ಒಂದು ಮುಖ್ಯ ಘಟ್ಟ ಮುಗಿಯುತ್ತದೆ (೧೯೨೨). ಇಂಥ ಹಿರಿಮೆ ಮತ್ತು ಪದವಿ ಗಳಿಸಿದವರು ಆ ದಿವಸಗಳಲ್ಲಿ ಸಮಗ್ರ ಭಾರತದಲ್ಲಿಯೂ ಬಲು ಮಂದಿ ಇರಲಿಲ್ಲ. ಆದರೆ ಇದರ ಅರಿವು ಕೂಡ ಈ ಮಹಾಶಯರಿಗೆ ಇತ್ತೋ ಏನೋ ಸಂಶಯವೇ. ಆ ದಿವಸಗಳನ್ನು ಕುರಿತು ಅವರೇ ಒಮ್ಮೆ ಹೇಳಿದ ಮಾತು, “ಅನಂತ ಜ್ಞಾನದ ನಿರಂತರಾನ್ವೇಷಣೆಯಲ್ಲಿ ನಾನು ಆಗ ಒಂದನೆಯ ಹೆಜ್ಜೆಯನ್ನು ಸರಿಯಾದ ಹಾದಿಯಲ್ಲಿ ಇರಿಸಿದ್ದೆನೆಂಬ ಆಶ್ವಾಸನೆ ಮಾತ್ರ ಈ ಫಲಿತಾಂಶ.”

೧೯೨೩ ಅನಾವರಣಗೊಂಡಾಗ ನಾವು ತರುಣ ಲೆಕ್ಚರರ್ ಶ್ರೀನಿವಾಸ ಅಯ್ಯಂಗಾರ್ಯರನ್ನು ನೋಡುತ್ತೇವೆ. ಸ್ಥಳ ಮೈಸೂರಿನ ಮಹಾರಾಜ ಕಾಲೇಜು. ಮಧ್ಯಮಗಾತ್ರದ ನಿಲವು. ಕೃಶವಾದರೂ ಸದೃಢಕಾಯ. ಎಣ್ಣೆಗಪ್ಪು ಮೈಬಣ್ಣ, ತುಂಬು ಮುಖ, ದಪ್ಪ ಮಸೂರಗಳ ಕನ್ನಡಕದ ಮೂಲಕ ಬರುವ ದೃಷ್ಟಿ ಬಲು ನೇರ. ಅದರಲ್ಲಿ ಕಾಂತಿಯ ಜೊತೆಗೆ ವಿನವಂತಿಕೆ ಮತ್ತು ಶಾಂತಿಯ ಸುರಿಮಳೆ, ಮಾತು ಮುತ್ತು, ಗಂಭೀರ. ಉನ್ನತ ಮಟ್ಟದ ಮತ್ತು ಯಾರನ್ನೂ ನೋಯಿಸದ ತಮ್ಮದೇ ಧಾಟಿಯಲ್ಲಿ ಹರಿಸುವ ನಿಷ್ಣಾತ ಸಂಭಾಷಣಕಾರ. ಒನಪು ಒಯ್ಯಾರಗಳಿಗಾಗಲೀ ಕೊಂಕು ಕುಹಕಗಳಿಗಾಗಲೀ ಅವರ ವರ್ತನೆಯಲ್ಲಿ ಎಂದೂ ಅವಕಾಶವಿಲ್ಲ. ಮಂದ್ರ ಶ್ರುತಿಯಲ್ಲಿ ಸ್ಪಷ್ಟ ಉಚ್ಚಾರಣೆಯಿಂದ ಅವರು ನುಡಿದರೆಂದರೆ ಅದು ಗಣಿತ ಪ್ರಮೇಯಗಳಂತೆ ಸಿದ್ಧವಾಕ್ಯಗಳೇ. ನಡಿಗೆ ಬಲು ಚುರುಕು. ಅದರಲ್ಲಿಯೂ ಸರಳತೆಯೇ ಪ್ರಧಾನ ಲಕ್ಷಣ. ನಡೆನುಡಿಗಳು ಹೇಗೋ ಹಾಗೆ ಬಗೆಯೂ. ಇಂಥ ಒಬ್ಬ ತರುಣ ಅಧ್ಯಾಪಕ ಆಸಕ್ತ ವಿದ್ಯಾರ್ಥಿಗಳ ಆದರ್ಶ ಮತ್ತು ಆರಾಧ್ಯ ವ್ಯಕ್ತಿಯಾದದ್ದರಲ್ಲಿ ಏನೂ ಆಶ್ಚರವಿಲ್ಲ. ನಿಷ್ಠಾವಂತ ಉಪಾಧ್ಯಾಯ, ಶಿಷ್ಯರ ವಿಚಾರದಲ್ಲಿ ಅಪಾರ ಸಹನೆ ಆಸಕ್ತಿ ವಹಿಸಿ ಬೋಧಿಸುವ ಮಾರ್ಗದರ್ಶಿ ಇವರೆಂಬ ಹಿರಿಮೆ ಸಹಜವಾಗಿ ಇವರಿಗೆ ಲಭಿಸಿತು. ಮರುವರ್ಷ (೧೯೨೪) ಇವರು ಗಣಿತದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಬಡ್ತಿ ಪಡೆದರು. ಜೊತೆಯಲ್ಲೇ ಇವರಿಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವೂ ಆಯಿತು. ಅಂದಿನಿಂದ ಮುಂದಕ್ಕೆ ಸಿಎನೆಸ್ ಕಾರ್ಯಕ್ಷೇತ್ರ (೧೯೫೮-೧೯೬೫ ಅವಧಿಯ ಧಾರವಾಡ ವಾಸ್ತವ್ಯವನ್ನು ಬಿಟ್ಟರೆ) ಬೆಂಗಳೂರು ನಗರವೇ.

೧೯೨೬ರ ತರುಣದಲ್ಲಿ ಸಿಎನೆಸ್ ಮದುವೆ ಆಗಿ ಗೃಹಸ್ಥರಾದರು. ಈ ಹಿರಿಯರಿಗೆ ಜೀವನದಲ್ಲಿ ಅಧಿಕಾರದ ಆಸೆ ಆಕಾಂಕ್ಷೆಗಳಿರಲಿಲ್ಲವೇ? ಪ್ರಾಧ್ಯಾಪಕ ವೃತ್ತಿಗೆ ಅಂದು ಇದ್ದುದೇನಿದ್ದರೂ ಗೌರವ ಮಾತ್ರ. ಹಣಕಾಸಿನ ಸೌಲಭ್ಯ ಕಡಿಮೆ. ಅಧಿಕಾರವೋ ಶೂನ್ಯ. ಮೇಧಾವಿ ತರುಣನಿಗೆ, ಉನ್ನತ ಪದವೀಧರನಿಗೆ ಬರೀ ಗೌರವದಿಂದ ಜೀವನದಲ್ಲಿ ಆರ್ಥಿಕ ಸಮತೋಲ ಒದಗುವುದು ಸಾಧ್ಯವಿಲ್ಲವಷ್ಟೇ?

ಅಂದು ಯುವ ಪದವೀಧರರ ಪ್ರಥಮಾಕರ್ಷಣೆ ಇಂಡಿಯನ್ ಆಡಿಟ್ಸ್ ಅಂಡ್ ಅಕೌಂಟ್ಸ್ ಪರೀಕ್ಷೆ. ಇದಕ್ಕೆ ಭಾರತದಲ್ಲಿಯೇ ಪರೀಕ್ಷಾ ಕೇಂದ್ರವನ್ನು ಆಯುವ ಸೌಕರ್ಯವಿತ್ತು. ಸಿಎನೆಸ್ ಈ ಪರೀಕ್ಷೆಗೆ ಕೂರಲು ನಿಶ್ಚಯಿಸಿದರು. ಅಭ್ಯರ್ಥನ ಪತ್ರದಲ್ಲಿ ತಮ್ಮ ಒಲವು ಯಾವ ವಿಭಾಗಕ್ಕೆ – ಸೈನ್ಸ್ ವಿಭಾಗಕ್ಕೋ ನಾಗರಿಕ ವಿಭಾಗಕ್ಕೋ ಅಥವಾ ಇವೆರಡಕ್ಕೋ – ಎಂಬುದನ್ನು (ಪರೀಕ್ಷೆಗೆ ಮೊದಲೇ) ಸೂಚಿಸಬೇಕಿತ್ತು. ಬಹುಶಃ ಸೈನ್ಯವಿಭಾಗ ತಮ್ಮ ಪ್ರವೃತ್ತಿಗೆ ಸರಿಹೊಂದಲಾರದು ಎಂದು ಭಾವಿಸಿ ನಾಗರಿಕ ವಿಭಾಗಕ್ಕೆ ಮಾತ್ರ ಇವರು ತಮ್ಮ ಒಲವನ್ನು ಸೂಚಿಸಿದ್ದರು. ಪರೀಕ್ಷೆ ಬರೆದುದಾಯಿತು (೧೯೨೩). ಫಲಿತಾಂಶವೂ ಬಂತು – ಸಿಎನೆಸ್ ಎರಡನೆಯ ಸ್ಥಾನ ಪಡೆದಿದ್ದರು. ಆ ವರ್ಷ ಖಾಲಿ ಇದ್ದ ಹುದ್ದೆಗಳು ಮೂರು, ನಾಗರಿಕ ವಿಭಾಗದಲ್ಲಿ ಒಂದು, ಅದಾದ ಮೇಲೆ, ಸೈನ್ಯ ವಿಭಾಗದಲ್ಲಿ ಎರಡು. ಎಂದೇ ಇವರಿಗೆ ನಾಗರಿಕ ಹುದ್ದೆ ದೊರೆಯಲಿಲ್ಲ. ಸೈನ್ಯದ ಹುದ್ದೆ ದಕ್ಕಲಿಲ್ಲ. “ಹೀಗಾಗಿ ನನಗೆ ಕಾಲೇಜಿನ ಕೆಲಸವೇ ಗಟ್ಟಿಯಾಗಿ ಉಳಿಯಿತು. ಆಗ ನಾನು ಆ ತಪ್ಪು ಮಾಡಿದ್ದರೆ ಕೈ ತುಂಬ ರೊಕ್ಕ ಬಂದಿರುತ್ತಿತ್ತು. ಆದರೆ ನನ್ನ ಜೀವನಪಥ ಏನಾಗುತ್ತಿತ್ತೋ ಹೇಳಬಲ್ಲವರಾರು” ಎಂಬುದಾಗಿ ಸಿಎನೆಸ್ ಬರೆದಿದ್ದಾರೆ. ಇವರು ಹುಟ್ಟಿನಿಂದಲೇ ಸಂಶೋಧಕರು, ಅಧ್ಯಾಪಕರು, ಸೌಜನ್ಯವಂತರು. ಇಂಥವರು ಆಡಿಟ್ ವಿಭಾಗದ ನೀರಸ ಅಂಕೆ ಅಂಶಗಳ ಅಂಕುಡೊಂಕುಗಳಲ್ಲಿ ಅಡಗಿಹೋಗದಿದ್ದುದು ರಾಮಾನುಜನ್ ನಾಡಿನ ಸೌಭಾಗ್ಯ.

ಮುಂದೆ ೧೯೨೮ರ ಸುಮಾರಿಗೆ ಸೆಂಟ್ರಲ್ ಕಾಲೇಜಿನಲ್ಲಿ ಗಣಿತ ಎಂಎಸ್ಸಿ ಪ್ರಾರಂಭವಾದಾಗ ಆ ತರಗತಿಗಳಿಗೆ ಪಾಠ ಮಾಡುವ ಸುಯೋಗ ಇವರಿಗೆ ಸಹಜವಾಗಿ ಲಭಿಸಿತು. ಇದರಿಂದ ಇವರ ಗಣಿತಾಸಕ್ತಿಗೆ ಸಾಣೆ ಹಿಡಿದಂತಾಯಿತು. ತಾವು ಗಣಿತದಲ್ಲಿ ಉನ್ನತ ಸಂಶೋಧನೆ ಮಾಡಿ ತಮ್ಮ ಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕೆಂದು ಬಯಸಿದರು. ಇಂಥ ಕಾರ್ಯಕ್ಕೆ ಎರಡು ಮುಖ್ಯ ಅನುಕೂಲತೆಗಳು ಬೇಕು: ತಜ್ಞ ವಿದ್ವಾಂಸನೊಬ್ಬನಿಂದ ಸಮರ್ಥ ಮಾರ್ಗದರ್ಶನ; ಮತ್ತು ಆಧುನಿಕ ಗ್ರಂಥಭಂಡಾರಕ್ಕೆ ಮುಕ್ತ ಪ್ರವೇಶ. ಆದರೆ ಅಂದಿನ ಸೆಂಟ್ರಲ್ ಕಾಲೇಜಿನಲ್ಲಿ ಇವೆರಡೂ ಅಲಭ್ಯವಾಗಿದ್ದುವು. ಅಲ್ಲದೇ ಸಂಶೋಧನ ಪ್ರಬಂಧಗಳನ್ನು ಸ್ವೀಕರಿಸಿ ಪರಿಶೀಲಿಸಿ ಡಾಕ್ಟೊರೇಟ್ ಪದವಿ ನೀಡಲು ಬೇಕಾದ ಏರ್ಪಾಡು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾಗಿರಲಿಲ್ಲ. ಜ್ಞಾನಪಿಪಾಸುಗಳಾದ ಸಿಎನೆಸರ ಧೃತಿ ಈ ಯಾವ ಬಾಹ್ಯ ಕೊರತೆಗಳಿಂದಲೂ ಕುಂದಲಿಲ್ಲ. ತಾವೇ ತಮ್ಮ ಸಂಶೋಧನ ಮಾರ್ಗ ರೂಪಿಸಿಕೊಂಡು ಪ್ರಾಧ್ಯಾಪಕತ್ವದ ಸಮಸ್ತ ಹೊಣೆಗಳ ನಡುವೆ, ಸಂಶೋಧನೆಯನ್ನೂ ಮುಂದುವರಿಸಿದರು.

ಸಂಶೋಧನೆ ಎಂದರೇನು? ಸಂಶೋಧಕನಾಗಬಯಸುವಾತ ಆ ತನಕ ತನ್ನ ಶಾಸ್ತ್ರ ವಿಭಾಗದಲ್ಲಿ ಸಂಗ್ರಹವಾಗಿರುವ ಜ್ಞಾನವನ್ನು ಮೊದಲು ಅರಿತುಕೊಳ್ಳಬೇಕು. ಇದರಿಂದ ಆತನಿಗೆ ಜ್ಞಾನದ ವರ್ತಮಾನ ಮಟ್ಟ ಏನೆಂದು ಗೊತ್ತಾಗುವುದು. ಆಗ ಸಹಜವಾಗಿ ಈ ಜ್ಞಾನದಲ್ಲಿಯ ಅರೆಕೊರೆಗಳು ಮತ್ತು ಇನ್ನೂ ಪರಿಹರಿಸಲಾಗಿಲ್ಲದ ಸಮಸ್ಯೆಗಳು ವೇದ್ಯವಾಗುತ್ತವೆ. ಇವುಗಳ ಪೈಕಿ ತನಗೆ ಕುತೂಹಲಕಾರಿಯಾದ ಒಂದು ಸಮಸ್ಯೆಯನ್ನು ಆಯ್ದು ಅದರ ಒಡಪನ್ನು ಅರಸುವ ಹಾದಿಯಲ್ಲಿ ಆತ ನಿರಂತರವಾಗಿ ಪಯಣಿಸಬೇಕು. ಇದೇ ಸಂಶೋಧನೆ. ಇದರಲ್ಲಿ ಪರಿಹಾರ ದೊರೆತೇ ದೊರೆಯುವುದೆಂದೇನೂ ಭರವಸೆ ಇಲ್ಲ; ತಿಳಿಯದ ಎತ್ತರ ಏರಲು ಬಯಸುವ ಪರ್ವತಾರೋಹಿಯ ನಡೆಯಂತೆ. ಈ ಪ್ರಯತ್ನದಲ್ಲಿ ಆತ ದಾರಿ ತಪ್ಪಬಹುದು. ಆತನಿಗೆ ಹೊಸ ಗುರಿ ಎದುರಾಗಬಹುದು, ಕುರುಡುಕೊನೆ ತಲಪಿ ಇಡಿ ಪ್ರಯತ್ನವೇ ವಿಫಲವಾಗಬಹುದು. ಅನಿರೀಕ್ಷಿತ ಮೂಲೆಯಿಂದ ಹಠಾತ್ತನೆ ಬೆಳಕು ಬರಲೂಬಹುದು. ಇಂಥ ಮಾರ್ಗಕ್ಕೆ ಇಳಿದ ಅನ್ವೇಷಕ ತಪಸ್ವಿ ಆಗಿರಬೇಕು, ತನ್ನ ಉದ್ದೇಶ ಸಾಧನೆಯ ವಿಚಾರದಲ್ಲಿ ‘ಹುಚ್ಚ’ನೇ ಆಗಿರಬೇಕು, ವಲ್ಮೀಕವಾಸಿಯೇ ಆಗತಕ್ಕದ್ದು.

ಶ್ರೀನಿವಾಸ ಅಯ್ಯಂಗಾರ್ಯರ ಪ್ರತಿಭೆಗೆ ಸಂಶೋಧನೆಯ ಮಾರ್ಗ ಹಿಡಿಯದೇ ಇರುವುದು ಸಾಧ್ಯವಾಗುತ್ತಿರಲಿಲ್ಲ. ಸ್ವಪ್ರಯತ್ನದಿಂದಲೇ ಇವರ ಸಂಶೋಧನಪ್ರಬಂಧ ಸಿದ್ಧವಾಯಿತು. ಇದನ್ನೇ ತಮ್ಮ ಮಾತೃ ವಿಶ್ವವಿದ್ಯಾಲಯಕ್ಕೆ (ಕೊಲ್ಕಟ) ಪರಾಮರ್ಶೆಗೋಸ್ಕರ ಅರ್ಪಿಸಿದರು. ವಾಡಿಕೆಯಂತೆ ವಿಶ್ವವಿದ್ಯಾಲಯ ಇದನ್ನು ಮೂವರು ಜಗದ್ವಿಖ್ಯಾತ ಗಣಿತ ವಿದ್ವಾಂಸರಿಗೆ ಮೌಲ್ಯಮಾಪನೆಗಾಗಿ ಕಳಿಸಿಕೊಟ್ಟಿತು: ಉನ್ನತ ಗಣಿತ ಪ್ರಪಂಚದಲ್ಲಿ ಹಿರಿಹೆಸರುಗಳಾಗಿದ್ದ ಎ.ಆರ್ ಫೋರ್ಸೈತ್, ಡಿ.ಇ ಲಿಟ್ಲ್‌ವುಡ್ ಮತ್ತು ಇ.ಟಿ ವ್ಹಿಟೇಕರ್. ಇವರು ಸಿಎನೆಸ್‌ರ ಪ್ರಬಂಧವನ್ನು ಬಲುವಾಗಿ ಮೆಚ್ಚಿ ಇದರ ಕರ್ತೃವಿಗೆ ಪಿಎಚ್‌ಡಿಗಿಂತಲೂ (ಡಾಕ್ಟರ್ ಆಫ್ ಫಿಲಾಸಫಿ) ಉನ್ನತ ಮಟ್ಟದ ಡಿಎಸ್ಸಿ (ಡಾಕ್ಟರ್ ಆಫ್ ಸೈನ್ಸ್) ಪದವಿಯನ್ನೇ ನೀಡಬೇಕೆಂದು ಶಿಫಾರಸು ಮಾಡಿದರು. ಇದರ ಮೇರೆಗೆ ಕೊಲ್ಕಟ ವಿಶ್ವವಿದ್ಯಾಲಯ ೧೯೩೨ರಲ್ಲಿ ಸಿಎನೆಸ್‌ರಿಗೆ ಡಿಎಸ್ಸಿ ಪದವಿ ಪ್ರದಾನಿಸಿತು. ಇವರ ನಿರಂತರ ಜ್ಞಾನಾನ್ವೇಷಣೆಯ ಪ್ರಯಾಣದಲ್ಲಿ ಈ ಪದವಿ ಒಂದು ಮಜಲು, ಮುಂದೆ ಸಾಗಲಿರುವ ಬಹುದೂರವನ್ನು ತೋರಿಸಲು ಎತ್ತಿ ಹಿಡಿದ ಕೈಮರ.

ಈ ಪ್ರೋತ್ಸಾಹದಿಂದ ಉದ್ದೀಪಿತರಾದ ಸಿಎನೆಸ್ ತಮ್ಮ ಸುತ್ತ ಸಮರ್ಥ ಶಿಷ್ಯರ ಒಂದು ತಂಡವನ್ನೇ ಆಕರ್ಷಿಸುವಲ್ಲಿ ಯಶಸ್ವಿಗಳಾದರು. ಯಾವ ಸಂಶೋಧನೆಯೂ ನಿರ್ವಾತದಲ್ಲಿ ವಿಶೇಷ ಪ್ರಗತಿ ಸಾಧಿಸಲಾರದು. ಸಮಾನ ಆಸಕ್ತಿ ತಳೆದಿರುವ ಹಲವಾರು ಬುದ್ಧಿಗಳ ಮಿಳನ ಅದಕ್ಕೆ ಅತ್ಯಾವಶ್ಯಕ. ಆಗ ಮಾತ್ರ ಅಭಿಪ್ರಾಯಗಳ ಸತತ ವಿನಿಮಯ, ನಿರ್ಭೀತ ಚರ್ಚೆ ಹಾಗೂ ಮಂಥನ ಮತ್ತು ಫಲಿತಾಂಶಗಳ ಜೇನು ಪ್ರವಹಿಸಿದ್ದು, ತರುಣ ಸಂಶೋಧಕರ ಪೀಳಿಗೆಯೇ ಮೈದಳೆದದ್ದು – ಇವೆಲ್ಲವೂ ಅವರ ವ್ಯಕ್ತಿತ್ವಕ್ಕೂ ಪ್ರವೃತ್ತಿಗೂ ಅನುಗುಣವಾಗಿಯೇ ಇದ್ದುವು. ಅಖಿಲ ಭಾರತ ಗಣಿತ ನಕಾಶೆಯಲ್ಲಿ ಬೆಂಗಳೂರಿಗೆ ಆ ದಿನಗಳಲ್ಲಿ (೧೯೩೦-೬೦) ಒಂದು ಹಿರಿಯ ಸ್ಥಾನವಿತ್ತು. ಇದನ್ನು ದೊರಕಿಸಿ ಕೊಡುವಲ್ಲಿ ಶ್ರೀನಿವಾಸ ಅಯ್ಯಂಗಾರ್ಯರ ಮತ್ತು ಅವರ ಅನುಯಾಯಿಗಳ ಪಾತ್ರ ಬಲು ದೊಡ್ಡದು. ಸ್ವತಃ ಸಿಎನೆಸ್‌ರ ಹಲವಾರು ಸಂಶೋಧನ ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗಣ್ಯ ಗಣಿತ ನಿಯತಕಾಲಿಕೆಗಳಲ್ಲಿ ಆಗಾಗ ಪ್ರಕಟವಾಗಿ ಬೆಂಗಳೂರಿಗೆ ಅಪಾರ ಕೀರ್ತಿ ತಂದಿವೆ:

ಹಳೆಯದನು ತೊರೆದು ಹೊಸಬೆಳಕನರಸುವವ ಋಷಿ
ಋಷಿ ಕಂಡ ಬೆಳಕನ್ನು ಬೀರುವವನಾಚಾರ್ಯ
ಆಚಾರ್ಯ ಕಾಣಿಸಿದ ಪಥದಿ ನಡೆವವ ಶಿಷ್ಯ
ಶಿಷ್ಯ ಋಶಿಯಾಗುವುದೆ ಋಜುವಿದ್ಯೆ ಅತ್ರಿಸೂನು

ಸಿಎನೆಸ್‌ರ ಆಸಕ್ತಿ ಕೇವಲ ಆಧುನಿಕ ಗಣಿತವೊಂದಕ್ಕೆ ಸೀಮಿತವಾಗಿರಲಿಲ್ಲ. ಭಾರತದ ಭವ್ಯ ಗಣಿತ ಪರಂಪರೆಯನ್ನು ಶಾಸ್ತ್ರೀಯವಾಗಿ ಅಭ್ಯಸಿಸಬೇಕೆಂದು ಅವರು ಬಯಸಿದರು. ಆದರೆ ಕಾಲಾನುಗುಣ್ಯ ರಚಿತವಾದ ಒಂದೇ ಒಂದು ಜ್ಞೇಯನಿಷ್ಠ ಗ್ರಂಥವೂ ಅವರಿಗೆ ದೊರೆಯಲಿಲ್ಲ. “ಭಾರತದ ಪ್ರಾಚೀನ ಗಣಿತ, ಖಗೋಳ ವಿಜ್ಞಾನಗಳು ಉನ್ನತ ಮಟ್ಟಕ್ಕೆ ಏರಿದ್ದುವು. ಪ್ರಪಂಚ ಕತ್ತಲಿನಲ್ಲಿ ತೊಳಲುತ್ತಿದ್ದಾಗ ಭಾರತ ಬೆಳಕನ್ನು ಬೀರಿತು” ಎಂದು ಮುಂತಾದ ಭಾವಪ್ರಧಾನ ನಿರೂಪಣೆಗಳೇ ಅಧಿಕ. ಇಂತಹವುಗಳಿಂದ ನಿರಪೇಕ್ಷ ಮೌಲ್ಯ ಆಯ್ದು ನಿರೂಪಿಸಲು ಅತ್ಯಧಿಕ ಶ್ರಮ ಹಾಗೂ ಚಿಕಿತ್ಸಕ ಒಳನೋಟ ಬೇಕಾಗುತ್ತವೆ. ಈ ಕಾರ್ಯವನ್ನು ನೆರವೇರಿಸಲು ಸಿಎನೆಸ್ ಟೊಂಕ ಕಟ್ಟಿದರು. ಹರಿದು ಹಂಚಿ ಹೋಗಿದ್ದ, ಅನೇಕ ವೇಳೆ ನಶಿಸಿ ಹೋಗಿದ್ದ, ಹಲವಾರು ಆಕರ ಸಾಮಗ್ರಿಗಳನ್ನು ಶೋಧಿಸಿ ಮೊದಲು ತಾವು ವಿಷಯವನ್ನು ಸರಿಯಾಗಿ ತಿಳಿದುಕೊಂಡು ಬಳಿಕ ಶಾಸ್ತ್ರೀಯವಾದ ಒಂದು ಚೌಕಟ್ಟಿನ ಒಳಗೆ ಅದನ್ನು ಪುನಃ ಸ್ಥಾಪಿಸಲು ಭಗೀರಥ ಸಾಹಸ ಮಾಡಿದರು ಮತ್ತು ನಚಿಕೇತ ಪ್ರಯತ್ನ ಹೂಡಿದರು (ಮೊದಲನೆಯದು ಭೌತ ಎರಡನೆಯದು ಬೌದ್ಧಿಕ). ಇದರ ಫಲವಾಗಿ ೧೯೪೫ರ ವೇಳೆಗೆ ಇವರು ‘ಗಣಿತ ಶಾಸ್ತ್ರದ ಚರಿತ್ರೆ’ ಎಂಬ ಹಸ್ತಪ್ರತಿಯನ್ನು ಕನ್ನಡದಲ್ಲಿ ತಯಾರಿಸಿದರು. ಇದನ್ನು ೧೯೫೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿತು. ಈ ಗ್ರಂಥದ ಮೊದಲ ಅರ್ಧದಲ್ಲಿ ಗಣಿತದ ಸಮಗ್ರ ಇತಿಹಾಸದ ಸಂಕ್ಷೇಪ ವರದಿ ಉಂಟು. ಎರಡನೆಯದರಲ್ಲಿ ಭಾರತ ಕುರಿತಂತೆ ಇದೇ ಇತಿಹಾಸದ ವಿವರಣೆ ಇದೆ. ಇವೇ ಮೂಲ ಸಾಮಗ್ರಿಗಳನ್ನು ಆಧರಿಸಿ ಇಂಗ್ಲಿಷಿನಲ್ಲಿ ಒಂದು ಗ್ರಂಥ ಬರೆದು ಪ್ರಕಟಿಸಿದರು (೧೯೬೭). ಅದರ ಹೆಸರು Ancient Indian Mathematics. ಭಾರತೀಯ ಗಣಿತದ ನಿಷ್ಕೃಷ್ಟ ಇತಿಹಾಸ ತಿಳಿಯಲು ಬಯಸುವ ಪ್ರತಿಯೊಬ್ಬ ಜಿಜ್ಞಾಸುವಿಗೂ ಈ ಗ್ರಂಥಗಳು ಅತ್ಯುಪಯುಕ್ತ ಒಡನಾಡಿಗಳು.

ಪ್ರಾಚೀನ ಭಾರತೀಯ ಗಣಿತದ ಮೌಲ್ಯಮಾಪನೆಯನ್ನು ಇವರು ಅದೆಷ್ಟು ಜ್ಞೇಯನಿಷ್ಠವಾಗಿ ಮಾಡಿರುವರು ಎನ್ನುವುದನ್ನು ಈ ಮುಂದೆ ಉದ್ಧರಿಸಿರುವ ಒಂದು ಪರಿಚ್ಛೇದದಿಂದ ತಿಳಿಯಬಹುದು: “ಅಂಕಗಣಿತದ ಸಂಖ್ಯಾಕ್ರಮ ಬಹಳ ಹಿಂದೆ ಭಾರತದಲ್ಲಿ ಹುಟ್ಟಿ ಪಾಶ್ಚಾತ್ಯ ದೇಶಗಳಿಗೆ ನಿಧಾನವಾಗಿ ಹೇಗೆ ಹರಡಿತು ಎಂದು ವಿವರಿಸಿದ್ದೇವೆ. ಇಂದು ಸಾರ್ವತ್ರಿಕವಾಗಿರುವ ಸಂಖ್ಯಾಕ್ರಮವೂ ಅಂಕಗಣಿತದ ಮುಖ್ಯ ವಿಧಾನಗಳೆಲ್ಲವೂ (ದಶಮಾಂಶಗಳ ಹೊರತಾಗಿ) ಭಾರತೀಯರಿಂದ ಬಂದವು ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಇಂದಿನ ಗಣಿತದಲ್ಲಿ ಭಾರತೀಯರ ಹೆಸರು ನಿಂತಿರುವುದು ಮುಖ್ಯವಾಗಿ ಇವುಗಳಲ್ಲಿ ಮಾತ್ರ. ಬೀಜಗಣಿತದ ಚಿಹ್ನಾಕ್ರಮವೂ ಮೂಲಭಾವನೆಗಳೂ ಅಂಕುರಿಸಿದುದು ಭಾರತದಲ್ಲಿಯೇ. ಬಹಳ ಕಾಲದವರೆಗೆ ಪಾಶ್ಚಾತ್ಯರ ಬೀಜಗಣಿತವು ಭಾರತೀಯ ಬೀಜಗಣಿತದ ಮಟ್ಟಕ್ಕೆ ಬರಲಿಲ್ಲ. . . ಗಣಿತದ ಬಾಲ್ಯಸ್ಥಿತಿಯಲ್ಲಿ ಹೊಸ ಭಾವನೆಗಳೂ ಅವಶ್ಯಕವಾಗಿದ್ದುವು. ನಿಖರವಾದ ತರ್ಕವೂ ಬೇಕಾಗಿದ್ದಿತು. ಭಾರತೀಯರಲ್ಲಿ ಭಾವನೆಗಳು ಅದ್ಭುತವಾಗಿ ಹುಟ್ಟಿದುವು: ಋಣ ಸಂಖ್ಯೆಗಳು, ಅನಂತ, ತಾತ್ಕಾಲಿಕ. ಇವು ಸಂಕೀರ್ಣ ಭಾವನೆಗಳು. ರೇಖಾ ಗಣಿತಕ್ಕೆ ಬೀಜಗಣಿತವನ್ನು ಸಹಾಯಕವಾಗಿ ಉಪಯೋಗಿಸಿದರು. ಕೆಲವು ಬೀಜಗಣಿತದ ಲೆಕ್ಕಗಳನ್ನು ರೇಖಾಗಣಿತದಿಂದ ಮಾಡಿದುದು ಇವು ಶ್ಲಾಘನೀಯವು. ಯೂರೋಪಿನಲ್ಲಿ ಹೀಗೆ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ಸಹಾಯವಾಗುವಂತೆ ಸಂಬಂಧವೇರ್ಪಡಿಸಿದುದು ಬಹಳ ಕಾಲದ ತರುವಾಯ. ಇಷ್ಟು ಶ್ಲಾಘನೀಯವಾದ ಭಾವನೆಗಳೂ ವಿಧಾನಗಳೂ ಇದ್ದರೂ ಉತ್ತಮವಾದ ತಾರ್ಕಿಕ ಭಾವವಿಲ್ಲದುದೇ ಭಾರತೀಯ ಗಣಿತದ ಪ್ರಗತಿಯು ನಿಂತು ಹೋಗಿರುವುದಕ್ಕೆ ಮುಖ್ಯ ಕಾರಣವೆನ್ನಬಹುದು.”

ಐತಿಹಾಸಿಕ ಕಾರಣಗಳಿಂದಾಗಿ ಈ ಶತಮಾನದ ನಮ್ಮ ವಿದ್ಯಾರ್ಥಿಗಳಿಗೆ ಭಾರತೀಯ ವಿಜ್ಞಾನ ಪರಂಪರೆಯೊಡನೆ ಸಂಪರ್ಕ ಕಡಿದುಹೋಯಿತು. ಇತ್ತ ಪಾಶ್ಚಾತ್ಯ ವಿಜ್ಞಾನ ಮತ್ತು ಅದರ ವಿಧಾನಗಳು ಸಾರ್ವತ್ರಿಕವಾಗಿ ಬಳಕೆಗೆ ಬಂದುವು. ಇಂಗ್ಲಿಷ್ ಸರ್ವತ್ರ ಶಿಕ್ಷಣ ಮಾಧ್ಯಮವಾಯಿತು. ಇದು ಎಂಥ ಪ್ರಕೋಪ ಸ್ಥಿತಿಗೆ ಮುಟ್ಟಿತೆಂದರೆ ವಿಶ್ವವಿದ್ಯಾಲಯಗಳ ಪದವಿ ಪಡೆದ ಸಾಮಾನ್ಯ ಎಲ್ಲ ಜನರೂ, ಇಂಗ್ಲಿಷ್ ಒಂದೇ ಜ್ಞಾನದೇವಾಲಯದ ಬೀಗ ತೆರೆಯಬಲ್ಲ ಕೀಲಿ, ದೇಶೀಯ ಭಾಷೆ ಯಾವುದಕ್ಕೂ ಈ ಸಾಮರ್ಥ್ಯ ಇಲ್ಲ ಎಂದು ಪ್ರಾಮಾಣಿಕವಾಗಿ ನಂಬಿದರು. ಇದು ೧೯೩೦-೪೦ರಲ್ಲಿದ್ದ ಪರಿಸ್ಥಿತಿ. ಪಾಶ್ಚಾತ್ಯ ವಿಜ್ಞಾನ ಶಿಕ್ಷಣವನ್ನು ಪಡೆದಿದ್ದವರ ಸಂಖ್ಯೆ ಆಗ ಬಲು ಕಡಿಮೆ. ಹೀಗಾಗಿ ಸಮಗ್ರ ರಾಷ್ಟ್ರದ ಬೌದ್ಧಿಕ ಜೀವನದಲ್ಲಿ ಕೃತಕವೂ ಅನಾರೋಗ್ಯಕರವೂ ಆದ ಒಂದು ಏರುಪೇರು ತಲೆದೋರಿತ್ತು. ಬೌದ್ಧಿಕ ಜೀವನದ (ಆದ್ದರಿಂದ ರಾಷ್ಟ್ರ ನಾಯಕತ್ವದ) ಹಿರಿತನ ಕೆಲವರಲ್ಲೇ ಕೇಂದ್ರೀಕೃತಕವಾಗಿ ಬಹುಸಂಖ್ಯಾತ ಪ್ರಜೆಗಳು ತಮಗೆ ಇಂಗ್ಲಿಷ್ ಬರದಿದ್ದುದರ, ಇಲ್ಲವೇ ಅದಕ್ಕೆ ಪ್ರವೇಶ ದೊರೆಯದಿದ್ದುದರ, ಏಕೈಕ ಕಾರಣದಿಂದ ಒಂದು ವಿಧವಾದ ಕತ್ತಲೆಯಲ್ಲೇ ದಿನ ತಳ್ಳಬೇಕಾಗಿದ್ದ ವಿಷಮ ಪರಿಸ್ಥಿತಿ ಅಂದಿನದು. ಆ ವೇಳೆಗೆ ಮೈಸೂರು ವಿಶ್ವವಿದ್ಯಾನಿಲಯ ಜ್ಞಾನ ಪ್ರಸಾರದ ಅಂಗವಾಗಿ ಹೊಸ ಒಂದು ಉದಾರ ನೀತಿ ತಳೆಯಿತು; ಇದರ ಪ್ರಕಾರ ಆಧುನಿಕ ವಿಜ್ಞಾನವನ್ನು ಹಳ್ಳಿಹಳ್ಳಿಗೆ ಕೂಡ ಕೊಂಡೊಯ್ಯಬೇಕು, ಇದು ತೀರ ಸಹಜವಾಗಿ ಕನ್ನಡದ ಮೂಲಕ ಆಗಬೇಕು. ಸಮರ್ಥ ಪ್ರಾಧ್ಯಾಪಕರು ಹಾಗೂ ಇತರ ವಿದ್ವಾಂಸರು ಭಾಷಣ ನೀಡುವುದರ ಮೂಲಕ, ಮತ್ತು ಅದೇ ವಿಷಯಗಳ ಮೇಲೆ ಹೊತ್ತಗೆಗಳನ್ನು ಬರೆದು ಕೊಡುವುದರ ಮೂಲಕ ಈ ಜ್ಞಾನಯಜ್ಞದಲ್ಲಿ ಭಾಗವಹಿಸಬೇಕು. ವಿಶ್ವವಿದ್ಯಾನಿಲಯ ಈ ಹೊತ್ತಗೆಗಳನ್ನು ಪ್ರಕಟಿಸಿ ಜನತೆಗೆ ಸುಲಭ ಬೆಲೆಗೆ ಒದಗಿಸಬೇಕು.

ಶ್ರೀನಿವಾಸ ಅಯ್ಯಂಗಾರ್ಯರು ಈ ಪ್ರಯೋಗದಲ್ಲಿ ತುಂಬ ಉತ್ಸಾಹದಿಂದ ಭಾಗವಹಿಸಿದರು. ಅವರು ೧೯೩೯ರಲ್ಲಿ ‘ಖಗೋಲಶಾಸ್ತ್ರ’ ಕುರಿತು ಕನ್ನಡದಲ್ಲಿ ಉಪನ್ಯಾಸ ನೀಡಿದ್ದು ಮಾತ್ರವಲ್ಲ ಅದೇ ವಿಷಯದ ಮೇಲೆ ಹೊತ್ತಗೆಯನ್ನು ಬರೆದು ಕೊಟ್ಟರು ಕೂಡ. ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರ ಪುಸ್ತಕ ಮಾಲೆಯ ಮೊದಲನೆಯ ಪುಷ್ಪವೇ ಇದು: ‘ಖಗೋಲಶಾಸ್ತ್ರ ಪ್ರವೇಶ’. ಇದರಲ್ಲಿ ಸಿಎನೆಸ್ ಅದೆಷ್ಟು ಸ್ಪಷ್ಟವಾಗಿ ನೂತನ ಗಹನ ವಿಷಯವನ್ನು ಪ್ರಾರಂಬಿಸಿದ್ದಾರೆ ಎನ್ನುವುದನ್ನು ಮುಂದಿನ ಪರಿಚ್ಛೇದದಲ್ಲಿ ಉದ್ಧರಿಸಿರುವ ವಾಕ್ಯಗಳು ಶ್ರುತಪಡಿಸುತ್ತವೆ:

“ಮೋಡವಿಲ್ಲದ ಒಂದು ರಾತ್ರಿ ಆಕಾಶವನ್ನು ನೋಡಿದರೆ ನೂರಾರು ನಕ್ಷತ್ರಗಳು ಬೇರೆ ಬೇರೆ ಬಣ್ಣಗಳನ್ನೊಳಗೊಂಡು ಮಿನುಗುಟ್ಟುತ್ತ ಮಿರುಗುವ ದೃಶ್ಯದಿಂದ ಯಾರಿಗೆ ತಾನೇ ಆಶ್ಚರ್ಯವೂ ಆನಂದವೂ ಆಗಲಾರದು! ಇದನ್ನು ವರ್ಣಿಸುವ ಕವಿಗಳೆಷ್ಟೊಂದು ಮಂದಿ! ಆದರೆ ಯಾವ ಕವಿ ತಾನೇ ತನ್ನ ವರ್ಣನೆಯಿಂದ ತೃಪ್ತಿಗೊಳ್ಳಬಲ್ಲನು! ನಮಗೆ ಈಗ ಕವಿತಾವರ್ಣನೆ ಬೇಡ, ವಿಷಯಸಂಗ್ರಹಕ್ಕಾಗಿ ನೋಡೋಣ. ನಕ್ಷತ್ರಗಳನ್ನೆಲ್ಲ ಭೂಮಿಯ ಮೇಲೆ ಕವಿಚಿರುವ ಆಕಾಶವೆಂಬ ನೀಲಿ ಬಣ್ಣದ ಒಂದು ದೊಡ್ಡ ಟೋಪಿಯ ಮೇಲೆ ಅಲ್ಲಲ್ಲೇ ಪೋಣಿಸಿದ್ದಾರೆಂಬ ಭಾವ ಬರುತ್ತದೆಯಲ್ಲವೇ? ಆದರೆ ವಾಸ್ತವವಾಗಿ ಆಕಾಶವೆಂದರೇನು? ಭೂಮಿಯ ಮೇಲೆ ಸಾವಿರಾರು ಮೈಲಿಗಳವರೆಗೂ ವ್ಯಾಪಿಸಿರತಕ್ಕ ಅಂತರಿಕ್ಷವೆಂಬ ವಾಯುಮಂಡಲವಿದೆ. ಇದರ ಹೊರಗೆ, ಗ್ರಹಗಳು, ನಕ್ಷತ್ರಗಳು ಮುಂತಾದವನ್ನು ಬಿಟ್ಟರೆ ಇನ್ನು ಬೇರೆ ಏನೂ ಇಲ್ಲ ಎಂದು ಸದ್ಯಕ್ಕೆ ಭಾವಿಸಬಹುದು. ಎಂದರೆ ಭೂಮಿಯ ಅಂತರಿಕ್ಷವನ್ನು ದಾಟಿ ಹೋದಮೇಲೆ ಭೂಮಿಗೂ ಯಾವುದೇ ಒಂದು ನಕ್ಷತ್ರಕ್ಕೂ ನಡುವೆ ಯಾವುದೊಂದು ಪದಾರ್ಥವೂ ಇಲ್ಲ ಎಂದು ಸದ್ಯಕ್ಕೆ ಭಾವಿಸೋಣ. ಆದ್ದರಿಂದ ಭೂಮಿಯ ಮೇಲೆ ಯಾವ ಟೋಪಿಯೂ ಇಲ್ಲ. ನಕ್ಷತ್ರಗಳನ್ನೆಲ್ಲ ಯಾವುದಕ್ಕೂ ಅಂಟಿಸಿಲ್ಲ. ನಮ್ಮ ಬುದ್ಧಿಯಿಂದ ಮಾತ್ರವೇ ಗ್ರಹಿಸಲು ಸಾಧ್ಯವಾದ ಮೂಲಭಾವಗಳಲ್ಲಿ ದೇಶ (space) ಮತ್ತು ಕಾಲ (time) ಎಂಬವು ಮುಖ್ಯವಾದವು. ನಮ್ಮ ಇಂದ್ರಿಯಗಳಿಗೆ ಗೋಚರಿಸುವ ಮತ್ತು ನಮಗೆ ಗೋಚರಿಸದೆ ಊಹಾಶಕ್ತಿಯಿಂದ ತಿಳಿಯಬಹುದಾದ ದೇಶವನ್ನೆಲ್ಲ ಒಟ್ಟುಗೂಡಿ ವಿಶ್ವವೆಂದು (universe) ಕರೆಯುತ್ತೇವೆ. ಈ ವಿಶ್ವದ ಪರಿಮಾಣಗಳನ್ನಾಗಲಿ ವಿಶ್ವದಲ್ಲಿರತಕ್ಕ ವಸ್ತುಗಳ ಸಂಖ್ಯೆಯನ್ನಾಗಲಿ ನಮ್ಮಿಂದ ಊಹಿಸಲು ಸಾಧ್ಯವಿಲ್ಲ. ಇಂಥ ಅಗಾಧವಾದ ವಿಶ್ವದಲ್ಲಿ ಭೂಮಿಯೆಂಬ ಒಂದು ಸಣ್ಣ ವಸ್ತುವಿನ ಮೇಲೆ ನಾವು ಹುಳುಗಳೋಪಾದಿಯಲ್ಲಿ ಹರಿದಾಡುತ್ತಿದ್ದೇವೆ. ವಿಶ್ವದಲ್ಲಿ ಅಲ್ಲಲ್ಲೇ ದೂರ ದೂರದಲ್ಲಿ ಇರತಕ್ಕ ಪದಾರ್ಥಗಳ ಪೈಕಿ ಎಲ್ಲೋ ಕೆಲವು ನಕ್ಷತ್ರಗಳು ಮಾತ್ರ ನಮ್ಮ ಕಣ್ಣಿಗೆ ಕಾಣುತ್ತವೆ.”

ಸಿಎನೆಸ್‌ರ ವಿಷಯ ಪ್ರತಿಪಾದನೆ ಹಾಗೂ ಶೈಲಿಗಳಿಗೆ ಇನ್ನೂ ಒಂದು ಉದಾಹರಣೆಯನ್ನು ಉಲ್ಲೇಖಿಸಬಹುದು: “ಗಣಿತಶಾಸ್ತ್ರದ ಬೆಳೆವಣಿಗೆಯಲ್ಲೂ ಅಭ್ಯಾಸದಲ್ಲೂ ಮುಖ್ಯವಾಗಿ ಗಮನ ಕೊಡತಕ್ಕ ವಿಷಯಗಳು ಎರಡು – ತರ್ಕಪೂರಿತವಾದ ವಾದ ಮತ್ತು ನಿಖರತ್ವವನ್ನು ಸಾಧಿಸಬೇಕೆಂಬ ಉದ್ದೇಶ. ಗಣಿತಶಾಸ್ತ್ರವನ್ನು ಅಭ್ಯಾಸ ಮಾಡುವುದರಿಂದ ಸಾಮಾನ್ಯ ಜನಗಳಿಗೆ ಮುಖ್ಯವಾಗಿ ಆಗುವ ಪ್ರಯೋಜನಗಳು ಇವುಗಳೇ. ಇತರ ವಿಜ್ಞಾನ ಶಾಸ್ತ್ರಗಳಲ್ಲಿ ವಿಚಾರ ಮಾಡಲ್ಪಡುವ ವಿಷಯಗಳಿಗೆ ಸಮಗ್ರವಾದ ತರ್ಕವನ್ನೂ ಸಾಧ್ಯವಾದಷ್ಟು ನಿಖರತ್ವವನ್ನೂ ಒದಗಿಸಿಕೊಡುವುದೇ ಆ ಶಾಸ್ತ್ರಗಳಿಗೆ ಗಣಿತವು ಮಾಡುವಂಥ ಸೇವೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗರ್ಭ ಶಾಸ್ತ್ರ, ಮನಶ್ಶಾಸ್ತ್ರ ಮುಂತಾದ ಸಾಮಾಜಿಕ ಶಾಸ್ತ್ರಗಳಲ್ಲೂ ಕೂಡ ಗಣಿತದ ಈ ಸೇವೆಯನ್ನು ನೋಡಬಹುದು. ಒಂದೊಂದು ವೇಳೆ ಇತರ ಶಾಸ್ತ್ರಗಳ ಆವಶ್ಯಕತೆಗಳು ಗಣಿತಕ್ಕೆ ಹೊಸ ಭಾವನೆಗಳನ್ನು ಕೊಟ್ಟು ಗಣಿತದ ಶಾಖೆಗಳು ಬೆಳೆದಿವೆ. ಗಣಿತಶಾಸ್ತ್ರಜ್ಞನು ಹೊಸ ಹೊಸ ಮೂಲ ಭಾವನೆಗಳನ್ನು ಅವನಿಗೆ ಸಹಜವಾಗಿ ತೋರುವ ರೀತಿಯಲ್ಲಿ ಕಲ್ಪಿಸುತ್ತ ತರ್ಕದ ಮೇಲೆ ಗಮನವಿಟ್ಟು ಗಣಿತವನ್ನು ಬೆಳೆಸುವನು. ಮೂಲಭಾವನೆಗಳು ಜಟಿಲವಾದಷ್ಟೂ ಅವುಗಳಿಂದ ಉತ್ಪನ್ನವಾಗುವ ಗಣಿತವೂ ಕಟುವಾಗುವುದು. ಈ ರೀತಿಯಾಗಿ ಗಣಿತವು ಅನಂತವಾಗಿ ಬೆಳೆಯುತ್ತ ಹೋಗಬಹುದು. ಇಂಥ ಗಣಿತ ಶೋಧನೆಗಳೆಲ್ಲ ಇತರ ಶಾಸ್ತ್ರಗಳಿಗೆ ಉಪಯುಕ್ತವಾಗಬೇಕಾದ ಆವಶ್ಯಕತೆ ಇಲ್ಲ. ಆದರೆ, ವಿಜ್ಞಾನಶಾಸ್ತ್ರಗಳು ಬೆಳೆಯುತ್ತ ಹೋಗುವಾಗ ಯಾವ ಸಂದರ್ಭಗಳಲ್ಲಿಯೂ ಅದುವರೆಗೆ ಉಪಯೋಗವಾಗದೇ ಇದ್ದ ಗಣಿತ ಅಭಿಪ್ರಾಯಗಳೂ ಸಂಶೋಧನೆಗಳೂ ಉಪಯೋಗಕ್ಕೆ ಬರಬಹುದು. ಆದರೆ ಇಂಥ ಸಾಂದರ್ಭಗಳು ಗಣಿತದ ಎಲ್ಲ ವಿಷಯಗಳಿಗೂ ಬರಲಾರವು. ಈ ವಿಧವಾದ ಉಪಯುಕ್ತತೆಯನ್ನು ಗಣಿತಶಾಸ್ತ್ರಜ್ಞನು ಗುರಿಯಾಗಿಟ್ಟುಕೊಂಡಿರುವುದೂ ಇಲ್ಲ.”

ಆಧುನಿಕ ವಿಜ್ಞಾನದ ಗಹನ ಪರಿಕಲ್ಪನೆಗಳನ್ನು ಕನ್ನಡ ಭಾಷೆಯಲ್ಲಿ ನಿರೂಪಿಸುವುದು ಸಾಧ್ಯವೇ ಎಂಬ ಸಂಶಯಾತ್ಮರಿಗೆ ಸಿಎನೆಸ್ ಪ್ರತ್ಯಕ್ಷ ಪ್ರಯೋಗದಿಂದ ಭ್ರಮನಿರಸನ ಮಾಡಿದ್ದಾರೆ. ವಿಷಯ ಬಲ್ಲವನಿಗೆ ಮತ್ತು ಅದನ್ನು ಇತರರಿಗೆ ತಿಳಿಸಿ ಸಂತೋಷಿಸಬೇಕೆಂಬ ಆಸೆ ಇರುವಾತನಿಗೆ ಭಾಷಾ ಮಾಧ್ಯಮ ಖಂಡಿತವಾಗಿಯೂ ಅಡ್ಡ ಬರುವುದಿಲ್ಲ. ಕನ್ನಡದಲ್ಲಿ ಶಾಸ್ತ್ರೀಯ ಹಾಗೂ ಜನಪ್ರಿಯ ವಿಜ್ಞಾನ ವಾಙ್ಮಯವನ್ನು ರಚಿಸುವ ದಿಶೆಯಲ್ಲಿ ಕೆಲಸ ಮಾಡಿದ ಮೊದಲಿಗರಲ್ಲಿ ಶ್ರೀನಿವಾಸ ಅಯ್ಯಂಗಾರ್ಯರಿಗೆ ಹಿರಿಯ ಸ್ಥಾನ ಉಂಟು:

ವಿಷಯಬಲ್ಲಾತಂಗೆ ಸಂವಹನವತಿ ಸುಲಭ
ಭಾಷೆಯಲಿ ಭಾವನೆಯನರುಹುವೀ ಯಜ್ಞದಲಿ
ದೇಶ ಕಾಲಾತೀತ ಜ್ಞಾನ ಪ್ರವಹಿಸಿ ಸಂ-
ದೇಶ ಬೀರುವುದು: ಅರಿವೊಂದೇ ಗುರು ಅತ್ರಿಸೂನು

ಭಾರತೀಯ ಗಣಿತಶಾಸ್ತ್ರಕ್ಕೆ, ವಿಶೇಷವಾಗಿ ಖಗೋಳ ವಿಜ್ಞಾನಕ್ಕೆ, ಶ್ರೀನಿವಾಸ ಅಯ್ಯಂಗಾರ್ಯರು ಸಲ್ಲಿಸಿದ ಸೇವೆ ದ್ವಾರಕಾ ಶಂಕರಾಚಾರ್ಯರ ಲಕ್ಷ್ಯವನ್ನು ಇವರತ್ತ ಸೆಳೆಯಿತು. ಇದರ ಫಲವಾಗಿ ಸಿಎನೆಸ್‌ರಿಗೆ ಅಖಿಲ ಕರ್ನಾಟಕ ಜ್ಯೋತಿಷಿಕ ಸಂಘದ ತೃತೀಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಲಭಿಸಿತು (೧೯೪೭). ಇದೇ ಸಮ್ಮೇಳನದಲ್ಲಿ ಶಂಕರಾಚಾರ್ಯರು ಅಯ್ಯಂಗಾರ್ಯರಿಗೆ ‘ಗಣಿತ ಕಳಾನಿಧಿ’ ಎನ್ನುವ ಬಿರುದನ್ನು ಅನುಗ್ರಹಿಸಿದರು.

ಭಾರತದಲ್ಲಿ ಒಬ್ಬ ಗಣಿತ ವಿದ್ವಾಂಸನಿಗೆ ದೊರೆಯಬಹುದಾದ ಪರಮ ಗೌರವಗಳಲ್ಲಿ ಒಂದು ಭಾರತೀಯ ಗಣಿತಸಂಘದ (Indian Mathematical Society) ವಾರ್ಷಿಕ ಸಮ್ಮೇಳನದ ಅಧ್ಯಕ್ಷ ಪದವಿ. ಆಂಧ್ರ ಪ್ರದೇಶದ ವಾಲ್ಟೇರಿನಲ್ಲಿ ನಡೆದ ಈ ಸಂಘದ ೨೮ನೆಯ ವಾರ್ಷಿಕ ಸಮ್ಮೇಳನಾಧ್ಯಕ್ಷತೆಗೆ ಶ್ರೀನಿವಾಸ ಅಯ್ಯಂಗಾರ್ಯರನ್ನು ಆಹ್ವಾನಿಸಿ ಗೌರವ ಸಲ್ಲಿಸಲಾಯಿತು (೧೯೬೨). ಕನ್ನಡ ಸಾಹಿತ್ಯ ಪರಿಷತ್ತು ತನ್ನ ಚಿನ್ನದ ಹಬ್ಬವನ್ನು ೧೯೭೦ರಲ್ಲಿ ಆಚರಿಸಿತು. ಆ ವೇಳೆ, ಸಿಎನೆಸ್ ಕನ್ನಡ ವಿಜ್ಞಾನ ವಾಙ್ಮಯ ನಿರ್ಮಾಣಕ್ಕೆ ಸಲ್ಲಿಸಿದ ಕೊಡುಗೆಯನ್ನು ಮೆಚ್ಚಿ, ಪರಿಷತ್ತು ಸಾರ್ವಜನಿಕವಾಗಿ ಅವರನ್ನು ಗೌರವಿಸಿತು.

‘ಕನ್ನಡ ವಾಲ್ಮೀಕಿ ರಾಮಾಯಣ’ದ ಕರ್ತೃವಾದ ಶ್ರೀನಿವಾಸ ಅಯ್ಯಂಗಾರ್ಯರನ್ನು ಕನ್ನಡ ಜನ ಬಗೆ ಬಗೆಯಾಗಿ ಪ್ರಶಂಸಿಸಿ ಗೌರವಿಸಿದೆ. ಕನ್ನಡ ವಾಲ್ಮೀಕಿ ಎಂದೇ ಇವರನ್ನು ಅರ್ಥಪೂರ್ಣವಾಗಿ ಕರೆದಿದೆ. ಬೌದ್ಧಿಕ ರಂಗದಲ್ಲಿ ಸಿಎನೆಸ್ ಸಲ್ಲಿಸಿದ ಸೇವೆ ಬಹುಮುಖವಾದದ್ದು, ಬಹುಕಾಲ ಉಳಿಯುತ್ತದೆ. ಪ್ರಾಧ್ಯಾಪಕರಾಗಿ ಅವರು ಪ್ರಾಚೀನ ಋಷಿಸದೃಶ ಗುರುಗಳು, ಉನ್ನತ ಸಂಶೋಧನ ಮಾರ್ಗದರ್ಶಿಗಳು, ಪ್ರೀತಿಯ ‘ನಮ್ಮೇಷ್ಟ್ರು’ ಎಂದು ಶಿಷ್ಯಪ್ರಿಯರಾದವರು. ಅವರ ಸೇವಾವಧಿ ೧೯೨೩ರಿಂದ ೧೯೫೫ರವರೆಗೂ, ಅಂದರೆ ೩೨ ವರ್ಷಗಳಷ್ಟು ದೀರ್ಘಕಾಲ ವಿಸ್ತರಿಸಿತ್ತು. ವ್ಯಕ್ತಿಶಃ ಇವರು ಬಲು ನಿಷ್ಠಾವಂತ ಮತ್ತು ಪ್ರಾಮಾಣಿಕ ಕ್ರಿಯಾಶೀಲರಾಗಿದ್ದರು. ಆದರೆ ಇವರಿಗೆ ತಮ್ಮ ವೃತ್ತಿಯಲ್ಲಿ ಅನುಗುಣವಾದ ಬಡ್ತಿಯಾಗಲೀ ಪ್ರೋತ್ಸಾಹವಾಗಲೀ ದೊರೆಯಲಿಲ್ಲ. ಲೌಕಿಕ ಯಶಸ್ಸು ಕುರಿತಂತೆ ಇವರು ಪೂರ್ಣ ನಿರ್ಮೋಹಿಗಳು, ನಿಶ್ಚಲ ತತ್ತ್ವಾನ್ವೇಷಣೆಯೊಂದೇ ಲಕ್ಷ್ಯ. ೧೯೫೫ರಲ್ಲಿ ಸೆಂಟ್ರಲ್ ಕಾಲೇಜಿನ ಪ್ರಿನ್ಸಿಪಾಲರಾಗಿ (ಕೇವಲ ೨೦ ದಿವಸಗಳ ಅವಧಿ) ನಿವೃತ್ತರಾದರು. ಮುಂದಿನ ಮೂರು ವರ್ಷ (೧೯೫೫-೫೮) ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಗೌರವ ಪ್ರೊಫೆಸರ್ ಆಗಿದ್ದರು. ಆ ವೇಳೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಕರೆ ಬಂದು ಅಲ್ಲಿಯ ಸ್ನಾತಕೋತ್ತರ ಗಣಿತ ವಿಭಾಗ ಪ್ರಾರಂಭಿಸಲೋಸ್ಕರ ಧಾರವಾಡಕ್ಕೆ ತೆರಳಿದರು. ೧೯೬೩ರ ತನಕ ಅಲ್ಲಿದ್ದು ಸಾಕಷ್ಟು ಸಂಖ್ಯೆಯಲ್ಲಿ ಸಂಶೋಧನ ಶಿಷ್ಯರನ್ನು ತರಬೇತುಗೊಳಿಸಿ ಗಣಿತವಿಭಾಗಕ್ಕೆ ಅಂತಸ್ತನ್ನೂ ವ್ಯಾಪ್ತಿಯನ್ನೂ ತಂದುಕೊಟ್ಟು ನಿವೃತ್ತರಾದರು. ಮುಂದಿನ ಎರಡು ವರ್ಷ (೧೯೬೩-೬೫) ಅಲ್ಲಿಯೇ ವಿಶ್ವವಿದ್ಯಾಲಯ ಧನಾಯೋಗ ನಿಯೋಜಿತ (University Grants Commission, ಸಂಕ್ಷೇಪವಾಗಿ ಯುಜಿಸಿ) ಪ್ರಾಧ್ಯಾಪಕರಾಗಿದ್ದರು. ೧೯೬೫-೬೬ರಲ್ಲಿ ನಿವೃತ್ತರಾಗಿ ಬೆಂಗಳೂರಿನ ಸ್ವಗೃಹದಲ್ಲಿದ್ದಾಗ ಪುನಃ ಯುಜಿಸಿ ಪ್ರಾಧ್ಯಾಪಕತ್ವದ ಆಹ್ವಾನ ಇವರಿಗೆ ಬಂದಿತು. ಈ ಸಲ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಸೆಂಟ್ರಲ್ ಕಾಲೇಜ್) ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು (೧೯೬೬-೬೭). ೧೯೬೭ರಲ್ಲಿ ಪೂರ್ಣವಾಗಿ ನಿವೃತ್ತರಾದರೂ ಆಸಕ್ತ ಸಂಶೋಧಕರಿಗೆ ಯುಕ್ತ ಮಾರ್ಗದರ್ಶನವನ್ನು ತಮ್ಮ ಕೊನೆ ಉಸಿರಿನ ತನಕವೂ ಮುಕ್ತ ಮನಸ್ಸಿನಿಂದ ನೀಡುತ್ತಿದ್ದರು.

‘ಕನ್ನಡ ವಿಶ್ವಕೋಶ ಯೋಜನೆ’ ಪ್ರಾರಂಭವಾದಂದಿನಿಂದಲೂ (೧೯೫೬) ಅದರ ಗಣಿತ ಉಪಸಮಿತಿಯ ಅಧ್ಯಕ್ಷರಾಗಿ ಶ್ರೀನಿವಾಸ ಅಯ್ಯಂಗಾರ್ಯರು ವಿಷಯಗಳ ಹಾಗೂ ಲೇಖಕರ ಆಯ್ಕೆಯಲ್ಲಿ ಉನ್ನತ ಮಾರ್ಗದರ್ಶನವಿತ್ತಿದ್ದಾರೆ, ಶಿಷ್ಟ ಮಾನಗಳನ್ನು ರೂಪಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪಠ್ಯಪುಸ್ತಕ ಸಮಿತಿಯ ಗಣಿತ ವಿಭಾಗದ ಸದಸ್ಯರಾಗಿ (೧೯೬೭-೭೨) ಸಿಎನೆಸ್ ಶ್ರೇಷ್ಠ ಮಟ್ಟದ ಗಣಿತ ಗ್ರಂಥಗಳ ಪ್ರಕಟಣೆಗೆ ನೆರವಾದರು. ಸ್ವತಃ ತಾವೇ ಆಧುನಿಕ ಬೀಜಗಣಿತದ ಮೇಲೆ ಉತ್ತಮವಾದ ಒಂದು ಆಕರ ಗ್ರಂಥವನ್ನು ಕೂಡ ಬರೆದು ಕೊಟ್ಟಿದ್ದಾರೆ.

ಈ ದ್ರಷ್ಟಾರರ ಸಮಸ್ತ ಚಟುವಟಿಕೆಗಳಲ್ಲಿಯೂ ನಾವು ಗುರುತಿಸುವುದು ಎರಡು ಮುಖ್ಯ ಲಕ್ಷಣಗಳನ್ನು: ಸಿಎನೆಸ್‌ರ ಶ್ರದ್ಧಾಪೂರ್ವಕ ನಿರಂತರ ಕಾರ್ಯಶೀಲತೆ; ನಿಷ್ಠಾವಂತ ತರುಣ ಕ್ರಿಯಾಶೀಲರ ತಂಡ ರಚಿಸುವಲ್ಲಿಯ ಅವರ ದೂರದೃಷ್ಟಿ ಹಾಗೂ ಔದಾರ್ಯ. ತಮ್ಮ ತರುಣ ಸಹೋದ್ಯೋಗಿಗಳ ಲೇಖನಗಳು ನಿರೀಕ್ಷಿತ ಗುಣಮಟ್ಟ ಮುಟ್ಟದಿದ್ದ ಸಂದರ್ಭಗಳಲ್ಲಿ ಸ್ವತಃ ತಾವೇ ಆ ಲೇಖನಗಳನ್ನು ತಿದ್ದಿ ಪರಿಷ್ಕರಿಸಿ ಹಿಂದಕ್ಕೆ ಕೊಡುತ್ತಿದ್ದುದು ಇವರ ಕ್ರಮ, ಹಿರಿಮೆ. ಔದಾರ್ಯಕ್ಕೆ ಪರ್ಯಾಯ ನಾಮ ಸಿಎನೆಸ್.

ಈ ಹಿಂದೆ ಹೇಳಿದಂತೆ ಇಸವಿ ೧೯೬೭ರಲ್ಲಿ ಬೆಂಗಳೂರಿನ ಸರಕಾರೀ ಕಾಲೇಜಿನಲ್ಲಿ ನಾನು ಗಣಿತ ಉಪನ್ಯಾಸಕನಾಗಿದ್ದೆ. ಮಾರ್ಚ್ ತಿಂಗಳ ಒಂದು ದಿವಸ ಬೆಂಗಳೂರು ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥರಿಂದ ನನಗೆ ಕರೆಬಂತು: ಪದವಿಪೂರ್ವ ತರಗತಿಗೆ ನೂತನ ಪಠ್ಯಪಟ್ಟಿ ಅನುಸಾರ ಇಂಗ್ಲಿಷ್-ಕನ್ನಡ ಎರಡು ಭಾಷೆಗಳಲ್ಲಿಯೂ ಗಣಿತ ಪಠ್ಯಪುಸ್ತಕವನ್ನು ಬರೆದು ಪ್ರಕಟಿಸಲು ತಮ್ಮ ವಿಭಾಗ ನಿರ್ಧರಿಸಿದೆ ಎಂದು ತಿಳಿಸಿ, ಇದಕ್ಕಾಗಿ ನೇಮಿತವಾಗಿರುವ ಸಮಿತಿಯಲ್ಲಿ ನಾನೊಬ್ಬ ಸದಸ್ಯನಾಗಿರಬೇಕೆಂದು ಅವರು ಕೋರಿದರು. ಅಲ್ಲದೇ ನನ್ನ ಹೆಸರನ್ನು ಸಿಎನೆಸ್ ಅವರೇ ಸೂಚಿಸಿದ್ದರೆಂದೂ ತಿಳಿಸಿದರು. ಸಿಎನೆಸ್ ಶಿಷ್ಯ, ಸಹೋದ್ಯೋಗಿ, ಕೊನೆಗೆ ಪರಿಚಿತನೂ ಅಲ್ಲದಿದ್ದ ನನ್ನ ಹೆಸರನ್ನು ಸೂಚಿಸುವಲ್ಲಿ ಅವರು ತಮ್ಮ ಸಹಜ ಔದಾರ್ಯ ಪ್ರದರ್ಶಿಸಿದ್ದರಷ್ಟೆ. ಸಮಿತಿಯ ಮೊದಲ ಸಭೆಯಲ್ಲೇ ನಮ್ಮ ಪರಸ್ಪರ ಪರಿಚಯವಾದದ್ದು. ಆ ಗಳಿಗೆಯಲ್ಲೇ ಸಿಎನೆಸ್ ನನ್ನ ಬಗ್ಗೆ ಅಪಾರ ವಾತ್ಸಲ್ಯ ತಳೆದರು. ಅಂದಿನಿಂದ ಮುಂದೆ ಪ್ರತಿ ಮಂಗಳ ವಾರದ ಅಪರಾಹ್ಣ ಅವರನ್ನು ‘ಹುಲಿಗಾದ್ರಿ ಸೇವಾ’ದಲ್ಲಿ (ಬೆಂಗಳೂರಿನ ಮಲ್ಲೇಶ್ವರ ಬಡಾವಣೆಯಲ್ಲಿರುವ ಅವರ ನಿವಾಸ) ನಾನು ಭೇಟಿ ಮಾಡುವುದು ವಾಡಿಕೆಯಾಯಿತು. ಅವರ ಸಾನ್ನಿಧ್ಯದಲ್ಲಿ ಹೆಚ್ಚಿನ ನಿರ್ದುಷ್ಟತೆ ಪಡೆದೆ. ಸಾಮಾನ್ಯ ಲೋಹವನ್ನು ಚಿನ್ನವಾಗಿ ದ್ರವ್ಯಾಂತರಿಸಬಲ್ಲ ಸಿಎನೆಸ್‌ರ ಪರುಷಸ್ಪರ್ಶ ಒಂದು ವಿಶೇಷ ರಸಾನುಭವ.

೧೯೬೯ ಜನವರಿಯ ಒಂದು ಮಂಗಳ ವಾರದ ಬೈಠಕ್ಕಿನಲ್ಲಿ ಸಿಎನೆಸ್ ತಮ್ಮ ಸಹಜ ಮತ್ತು ನೇರ ಶೈಲಿಯಲ್ಲಿ ಮಾತು ಪ್ರಾರಂಭಿಸಿದರು, “ನಿಮ್ಮೊಡನೆ ಒಂದು ಮಹತ್ತ್ವದ ವಿಷಯ ಮಾತಾಡಬೇಕಾಗಿದೆ.” ನಾನು ಕೇಳಲು ಉತ್ಸುಕನಾಗಿ ಕಣ್ಣು ಅರಳಿಸಿದೆ. ಅವರು ಮುಂದುವರಿಸಿದರು, “ಶ್ರೀಮದ್ವಾಲ್ಮೀಕಿ ರಾಮಾಯಣವನ್ನು ಕನ್ನಡ ಗದ್ಯಕ್ಕೆ ಪದಶಃ ಅನುವಾದಿಸಬೇಕೆಂಬ ಪ್ರೇರಣೆ ಶ್ರೀರಾಮನಿಂದ ಬಂತು. ಹದಿನಾಲ್ಕು ವರ್ಷಗಳ ಹಿಂದೆ ತೊಡಗಿದ ಈ ಕಾರ್ಯ ಈಗ ಮುಗಿಯುವ ಘಟ್ಟ ತಲಪಿದೆ. ಇದು ಮುದ್ರಣಗೊಂಡು ಜನತೆಗೆ ಆದಷ್ಟು ಸುಲಭ ಬೆಲೆಗೆ ದೊರೆಯುವಂತಾದರೆ ನಾನು ಧನ್ಯ. ಬೇರೆ ಯಾವ ಲಾಭವೂ ನನಗೆ ಬೇಡ. ಸಾವಿರಾರು ರೂಪಾಯಿಗಳ ಮೂಲಧನ ಹೂಡಿ ಮುಂದುವರಿಸಬೇಕಾದ ಈ ಪ್ರಕಟಣ ಕಾರ್ಯ ಆರ್ಥಿಕವಾಗಿ ನನ್ನ ಶಕ್ತಿಗೆ ಮೀರಿದ್ದು.” ಹೀಗೆ ಹೇಳಿ ಅನುವಾದದ ಹಸ್ತಪ್ರತಿಗಳ ಬೆಟ್ಟವನ್ನೇ ನನ್ನೆದುರು ತಂದಿಟ್ಟರು.

“ನಾನೇನು ಮಾಡಬೇಕೆಂಬುದು ತಮ್ಮ ಅಪೇಕ್ಷೆ?” “ಇದರ ಮುದ್ರಣದ ಹೊಣೆ ನಿಮ್ಮದು. ದೇವರು ಇದನ್ನು ನಿಮ್ಮಿಂದ ಮಾಡಿಸುತ್ತಾನೆ. ನಿಮ್ಮಲ್ಲಿ ಈ ಸಾಮರ್ಥ್ಯವಿದೆ.” “ನನಗೆ ದೇವರಲ್ಲಿ ನಂಬಿಕೆ ಇಲ್ಲ! ನಾನೊಬ್ಬ ನಾಸ್ತಿಕ.” “ನಿಮ್ಮ ವ್ಯಕ್ತಿತ್ವವನ್ನು ನಾನು ಕಂಡಿರುವಂತೆ ನೀವೊಬ್ಬ ಆಸ್ತಿಕ ಶ್ರೇಷ್ಠ. ಆದರೆ ಆ ವಿಚಾರ ಈಗಬೇಡ. ನನ್ನಲ್ಲಿ ನಿಮಗೆ ನಂಬಿಕೆ ಇದೆಯಷ್ಟೆ?” “ಧಾರಾಳವಾಗಿ!” “ಹಾಗಾದರೆ ಈ ಮುದ್ರಣ ಸೇವೆ ನಡೆಯಲಿ!” “ಪ್ರಯತ್ನ ಮಾಡೋಣ.” ನನ್ನ ಸಾಮರ್ಥ್ಯದ ಅರಿವಿನಿಂದ ಈ ಉದ್ಗಾರ ಹೊರಟದ್ದಲ್ಲ. ಆ ಹಿರಿಯ ಚೇತನ ಅಷ್ಟೊಂದು ವಾತ್ಸಲ್ಯವನ್ನು ನನ್ನ ಮೇಲೆ ಹರಿಸಿ ಹರಸುವಾಗ ಬೇರೆ ಏನು ತಾನೇ ಹೇಳಲು ಸಾಧ್ಯ?

ಆದಿಕಾವ್ಯ, ಶ್ರೇಷ್ಠ ಧರ್ಮಗ್ರಂಥ, ಉನ್ನತ ಆದರ್ಶಗಳ ವಾಸ್ತವಿಕ ಚಿತ್ರಣ, ಭಾರತೀಯ ಸಂಸ್ಕೃತಿಯ ಭಂಡಾರ ಎಂದು ಮುಂತಾಗಿ ಪ್ರಸಿದ್ಧವಾಗಿರುವ ವಾಲ್ಮೀಕಿ ರಾಮಾಯಣ ಹೇಗೆ ಬಾಲಕ ಶ್ರಿನಿವಾಸನನ್ನು ಆಕರ್ಷಿಸಿತು ಎಂಬ ವಿಷಯ ಹಿಂದೆ ಪ್ರಸ್ತಾವಿಸಿದೆ. ಮೊದಲ ಪಾರಾಯಣ ಮುಗಿದು ಪಟ್ಟಾಭಿಷೇಕ ಮಾಡಿದಾಗ ಈ ತರುಣನ ಪ್ರಾಯ ಕೇವಲ ೧೩ ವರ್ಷ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆಗ ಮೂಡಿದ ಆಸಕ್ತಿ ಶ್ರೀನಿವಾಸ ಅಯ್ಯಂಗಾರ್ಯರ ಜೀವನದ ಉದ್ದಕ್ಕೂ ಸದಾ ವರ್ಧಿಸುತ್ತಲೇ ಇದ್ದು ಅವರ ಸಮಗ್ರ ಜೀವನವನ್ನೂ ಪ್ರಭಾವಿಸಿತು.

ಬಹಳ ವರ್ಷಗಳ ತರುವಾಯ (೧೯೫೦ರ ಸುಮಾರಿಗೆ) ಸಿಎನೆಸ್ ಬೆಂಗಳೂರಿನ ಮಲ್ಲೇಶ್ವರ ನಿವಾಸಿಗಳಾಗಿದ್ದಾಗ ಒಂದು ಘಟನೆ ಸಂಭವಿಸಿತು. ಅಲ್ಲಿಯ ಶ್ರೀರಾಮ ಮಂದಿರದಲ್ಲಿ ಆಗ ಏರ್ಪಡಿಸಿದ್ದ ರಾಮಾಯಣದ ಮೇಲಿನ ಕೆಲವು ವಿಶೇಷೋಪನ್ಯಾಸಗಳನ್ನು ಇವರು ಆಲಿಸಿದರು. ಆಗ ಇವರಲ್ಲಿ ಹೊಸತೊಂದು ಆಸೆ ಅಂಕುರಿಸಿತು; ತಾನೂ ರಾಮಾಯಣವನ್ನು ವಿಮರ್ಶಾತ್ಮಕವಾಗಿ ಅಧ್ಯಯಿಸಿ ವಿಶೇಷೋಪನ್ಯಾಸಗಳನ್ನು ನೀಡಬೇಕೆಂಬ ಬಯಕೆ. ಇದರ ಫಲವಾಗಿ ಇವರು ಮುಂದೆ ಕೆಲವೇ ತಿಂಗಳುಗಳ ತರುವಾಯ ೨೪ ಉಪನ್ಯಾಸಗಳ ಒಂದು ಮಾಲಿಕೆಯನ್ನೇ ನೀಡಿ ಪಟ್ಟಾಭಿಷೇಕ ಮಾಡಿದರು (ಮಾರ್ಚ್ ೭, ೧೯೫೩). ಕನ್ನಡದಲ್ಲಿ ವಾಲ್ಮೀಕಿ ರಾಮಾಯಣದ ಪದಶಃ ಗದ್ಯಾನುವಾದ ಗ್ರಂಥ ದೊರೆಯದಿರುವುದರ ಕೊರತೆ ಆಗ ಇವರಿಗೆ ಚೆನ್ನಾಗಿ ಮನವರಿಕೆ ಆಯಿತು. ಇದನ್ನು ಪರಿಹರಿಸಲು ಸಾಧ್ಯವಾಗುವಷ್ಟು ಪ್ರಯತ್ನ ತಾವು ಮಾಡಲೇಬೇಕೆಂದು ಇವರು ಸಂಕಲ್ಪಿಸಿದರು. ಆದರೆ ಕಾಲೇಜಿನ ಹೊಣೆಗಾರಿಕೆ ಮತ್ತು ಕಣ್ಣುಗಳ ದೌರ್ಬಲ್ಯ ಇವುಗಳಿಂದಾಗಿ ಈ ಕೆಲಸವನ್ನು ಒಡನೆ ಆರಂಭಿಸಲು ಸಾಧ್ಯವಾಗಲಿಲ್ಲ. ಅಂತೂ ಇಂತೂ ಬರವಣಿಗೆಯ ಆರಂಭ ಆದದ್ದು ೧೯೫೫ನೆಯ ಇಸವಿ ಗಾಯತ್ರಿ ಹಬ್ಬದಂದು. ಆದರೆ ಇದು ನಿರಾತಂಕವಾಗಿ ಏನೂ ಮುಂದೆ ಸಾಗಲಿಲ್ಲ. ಶ್ರೀರಾಮನ ವನವಾಸ ಅವಧಿಯಷ್ಟೇ ಕಾಲ, ಒಮ್ಮೆ ವೇಗವಾಗಿ ಒಮ್ಮೆ ನಿಧಾನವಾಗಿ ಒಮ್ಮೆ ಸ್ಥಗಿತವಾಗಿ, ಈ ಯಜ್ಞ ಮುಂದುವರಿಯಿತು. ಇದು ಮುಗಿದದ್ದು ೧೯೬೯ರಲ್ಲಿ.

ಇದರ ಮುದ್ರಣ ವಿಚಾರ ಇವರ ಮನಸ್ಸಿಗೆ ಒಮ್ಮೊಮ್ಮೆ ಬಂದದ್ದುಂಟು. ಆದರೆ ಆಗೆಲ್ಲ ಅವರು, “ಬರೆಯುವುದು ನನ್ನ ಕೆಲಸ. ಅದನ್ನು ಹೊರಗೆಡಹಲು ಶ್ರೀರಾಮನೇ ಹೇಗೋ ದಾರಿ ತೋರಿಸುತ್ತಾನೆ” ಎಂಬ ದೃಢನಂಬಿಕೆಯಿಂದ ಮುದ್ರಣದ ಪ್ರಶ್ನೆಯನ್ನು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳದೆಯೇ ಬರೆದು ಮುಗಿಸಿದರು. ಸಿಎನೆಸ್‌ರಿಗೆ ಪ್ರಕಟಣೆಯ ವಿಚಾರವಾಗಿ ನಾನು ನೀಡಿದ ಧಿಡೀರ್ ಆಶ್ವಾಸನೆ ಒಂದು ಪವಾಡದ ರೀತಿಯಲ್ಲಿ ಕಾರ್ಯರೂಪಕ್ಕೆ ಇಳಿದು ಬಂದಿತು. ಅವರ ಶಿಷ್ಯರೂ ಅಭಿಮಾನಿಗಳೂ ಸೇರಿ ಕರ್ನಾಟಕದ ಸುಪ್ರಸಿದ್ಧ ಪ್ರಕಾಶಕರಾದ ಡಿವಿಕೆ ಮೂರ್ತಿಯವರ ನೇತೃತ್ವದಲ್ಲಿ ೧೬೦೦ ಪುಟಗಳ ಈ ಮಹಾಗ್ರಂಥವನ್ನು ಅಭೂತಪೂರ್ವವಾಗಿ ಮುದ್ರಿಸಿ ಪ್ರಕಟಿಸುವುದು ಸಾಧ್ಯವಾಯಿತು. (ಇದು ಸದ್ಯ ೨೦೧೧ರ ಎಂಟನೇ ಮುದ್ರಣದಲ್ಲಿ, ಕೇವಲ ರೂ ಎಂಟ್ನೂರಕ್ಕೆ ಮಾರುಕಟ್ಟೆಯಲ್ಲಿ ಲಭ್ಯ. ಡಿವಿಕೆ ಮೂರ್ತಿಯವರು ಕೀರ್ತಿಶೇಷರಾದರೂ ಅವರ ಪ್ರಕಾಶನವೇ ಇದನ್ನು ಮುಂದುವರಿಸಿದೆ.)

ಮೂಲ ವಾಲ್ಮೀಕಿ ರಾಮಾಯಣದಲ್ಲಿ ಬರುವ ನಿರೂಪಣೆ, ವರ್ಣನೆ ಹಾಗೂ ಧಾಟಿಗಳಿಗೆ ಒಂದಿಷ್ಟೂ ಊನಬರದಂತೆ ನಿಖರವಾಗಿ ಮಾಡಿರುವ ಪದಶಃ ಅನುವಾದವಿದು. ಅಂದರೆ ಮೂಲದ ಒಂದೊಂದು ಶ್ಲೋಕದ ಸಮಸ್ತ ಭಾವಭಾವನೆಗಳೂ ಸಾಧ್ಯವಾದಲ್ಲಿ ಪದಗಳೂ ಕನ್ನಡ ಗದ್ಯದ ಮರ್ಯಾದೆಗೆ ಹೊಂದುವಂತೆ ಬಟ್ಟಿ ಇಳಿದಿರುವ ಸಾರವೇ ‘ಕನ್ನಡ ವಾಲ್ಮೀಕಿ ರಾಮಾಯಣ.’ ಸುಂದರಕಾಂಡದಿಂದ ಆಯ್ದ ಒಂದು ಉದಾಹರಣೆಯನ್ನು ಪರಿಶೀಲಿಸಬಹುದು (ಸರ್ಗ ೬೫, ಶ್ಲೋಕ ೨೧-೨೭).

ವಿಜ್ಞಾಪ್ಯಶ್ಚ ನರವ್ಯಾಘ್ರೋ ರಾಮೋ ವಾಯುಸುತ ತ್ವಯಾ
ಅಖಿಲೇನೇಹ ಯದೃಷ್ಟಮಿತಿ ಮಾಮಾಹ ಜಾನಕಿ || ೨೧ ||
ಅಯಂ ಚಾಸ್ಮೈ ಪ್ರದಾತವ್ಯೋ ಯತ್ನಾತ್ಸುಪರಿರಕ್ಷತ:
ಬ್ರುವತಾ ವಚನಾನ್ಯೇವಂ ಸುಗ್ರೀವಸ್ಯೋಪಶೃಣ್ವತಃ || ೨೨ ||
ಏಷ ಚೂಡಾಮಣಿಃ ಶ್ರೀಮಾನ್ಮಯಾ ಸತೇ ಯತ್ನರಕ್ಷಿತಃ
ಮನಃ ಶಿಲಾಯಾಸ್ತಿಲಕೋ ಗಂಡಪಾರ್ಶ್ವೇ ನಿವೇಶಿತಃ
ತ್ವಯಾ ಪ್ರಣಷ್ಟೇ ತಿಲಕೇ ತಂ ಕಿಲ ಸ್ಮರ್ತುಮರ್ಹಸಿ || ೨೩ ||
ವಿಷ ನಿರ್ಯಾತಿತಃ ಶ್ರೀಮಾನ್ಮಾಯಾತೇ ವಾರಿಸಂಭವಃ
ಏತಂ ದೃಷ್ಟ್ವಾ ಪ್ರಮೋದಿಷ್ಯೇ ವ್ಯಸನೇ ತ್ವಾಮಿವಾನಘ || ೨೪ ||
ಜೀವಿತಂ ಧಾರಾಯಿಷ್ಯಾಮಿ ಮಾಸಂ ದಶರಥಾತ್ಮಜ
ಊರ್ಧ್ವಂ ಮಾಸಾನ್ನ ಜೀವೇಯಂ ರಕ್ಷಸಾಂ ವಶಮಾಗತಾ || ೨೫ ||
ಇತಿ ಮಾಮಬ್ರವೀತ್ ಸೀತಾ ಕೃಶಾಂಗೀ ಧರ್ಮಚಾರಿಣೀ
ರಾವಣಾಂತಃಪುರೇ ರುದ್ಧಾ ಮೃಗೀವೋತ್ಪುಲ್ಲಲೋಚನಾ || ೨೬ ||
ಏತದೇವ ಮಯಾಖ್ಯಾತಂ ಸರ್ವಂ ರಾಘವ ಯದ್ಯಥಾ
ಸರ್ವಥಾ ಸಾಗರಜಲೇ ಸಂತಾರಃ ಪ್ರವಿಧೀಯತಾಮ್|| || ೨೭ ||

“ಎಲೈ ವಾಯುಪುತ್ರನೇ, ಇಲ್ಲಿ ನೋಡಿದ್ದನ್ನು ನೀನು ಸಂಪೂರ್ಣವಾಗಿ ನರಶ್ರೇಷ್ಠನಾದ ರಾಮನಿಗೆ ವಿಜ್ಞಾಪಿಸತಕ್ಕದ್ದು’ ಎಂಬುದಾಗಿಯೂ ನನಗೆ ಸೀತೆ ಹೇಳಿದಳು.” ಸುಗ್ರೀವನಿಗೆ ಕೇಳಿಬರುವಂತೆ ಈ ಮಾತುಗಳನ್ನು ಹೇಳುತ್ತಾ, “ಯತ್ನದಿಂದ ಬಹಳ ಜಾಗ್ರತೆಯಾಗಿ ಕಾಪಾಡಿದ್ದ ಇದನ್ನೂ ಅಭಿಜ್ಞಾನ ಸೂಚಕವಾಗಿ ಆತನಿಗೆ ಕೊಡತಕ್ಕದ್ದು, ಸಂಪತ್ಕರವಾದ ಈ ಚೂಡಾಮಣಿಯನ್ನು ನಾನು ಬಹಳ ಜಾಗರೂಕತೆಯಿಂದ ಕಾಪಾಡಿರುವೆನು. ಒಂದು ದಿನ ನಿನ್ನಿಂದ (ನನ್ನ) ತಿಲಕವು ಅಳಿಸಿಹೋದಾಗ ಮಣಿಶಿಲೆಯ ತಿಲಕವನ್ನು ನೀನು ನನ್ನ ಕೆನ್ನೆಯ ಮೇಲೆ ಇಟ್ಟೆ. ಅದನ್ನು ಜ್ಞಾಪಕಕ್ಕೆ ತಂದುಕೊ. ನೀರಿನಲ್ಲಿ ಹುಟ್ಟಿದ ಕಾಂತಿಯುಕ್ತವಾದ ಈ ಮಣಿಯನ್ನು ನಿನಗೆ ಕಳಿಸಿಕೊಟ್ಟಿರುವೆನು. ಎಲೈ ನಿರ್ದೋಷಿಯೇ, ನೀನು ಗುರುತಾಗಿ ಕಳಿಸಿರುವ ಆಭರಣವನ್ನು ನೋಡುತ್ತ ನನ್ನ ವ್ಯಸನದಲ್ಲಿ ನಿನ್ನನ್ನು ಕಂಡಂತೆ ಆನಂದಿಸುತ್ತಿರುವೆನು. ದಶರಥಪುತ್ರನೇ, ಇನ್ನೂ ಒಂದು ತಿಂಗಳು ಪ್ರಾಣವನ್ನು ರಕ್ಷಿಸಿಕೊಂಡಿರುವೆನು. ರಾಕ್ಷಸಿಯರ ವಶಕ್ಕೆ ಸಿಕ್ಕಿರುವ ನಾನು ತಿಂಗಳನಂತರ ಬದುಕಿರಲಾರೆನು’ ಎಂದಳು. ಈ ಪ್ರಕಾರ ಕೃಶಳಾದ ದೇಹವುಳ್ಳವಳೂ ಧರ್ಮವನ್ನು ಅನುಷ್ಠಿಸುತ್ತಿರುವವಳೂ ಹರಿಣಿಯಂತೆ ಅರಳಿದ ಕಣ್ಣುಗಳುಳ್ಳವಳೂ ಆದ ಸೀತೆಯು ರಾವಣನ ಅಂತಃಪುರದಲ್ಲಿ ಬಂಧಿತಳಾಗಿ ನನಗೆ ಹೇಳಿದಳು. ಎಲೈ ರಾಮನೇ, ಇದೆಲ್ಲವನ್ನೂ ಆಕೆ ಹೇಳಿರುವಂತೆಯೇ ಹೇಳಿರುವೆನು. ಸರ್ವಥಾ ಸಮುದ್ರದ ನೀರನ್ನು ದಾಟುವುದಕ್ಕಾಗಿ ಏರ್ಪಾಡನ್ನು ಮಾಡುವವನಾಗು.”

‘ಕನ್ನಡ ವಾಲ್ಮೀಕಿ ರಾಮಾಯಣ’ ಮೂಲ ವಾಲ್ಮೀಕಿ ರಾಮಾಯಣದ ಪದಶಃ ಸರಳ ಕನ್ನಡ ಗದ್ಯಾನುವಾದವಾಗಿ ಎಂಥ ಸಾರ್ಥಕ ಕೃತಿ ಆಗಿದೆ ಎನ್ನುವುದನ್ನು ಮೇಲಿನ ಉದಾಹರಣೆಯಿಂದ ತಿಳಿಯಬಹುದು. ಸಂಸ್ಕೃತ ಬಲ್ಲವರಿಗೆ ಈ ಗ್ರಂಥ ಮೂಲವನ್ನು ಇನ್ನಷ್ಟು ವಿಶದವಾಗಿ ಬಿಂಬಿಸುವ ಕೈಗನ್ನಡಿ. ಸಂಸ್ಕೃತ ಅರಿಯದ ಕನ್ನಡಿಗರಿಗಾದರೋ ಆದಿಕವಿಯ ರಸವಂತಿಕೆಯನ್ನೂ ಆತ ಹದವರಿತು ಮಾಡಿರುವ ಪದಪ್ರಯೋಗಗಳನ್ನೂ ಸವಿಯಲು ಇದು ನೇರ ಹಾದಿ. ಮೂಲ ಶ್ಲೋಕಗಳನ್ನು ಹತ್ತಿರ ಇಟ್ಟುಕೊಂಡು ಅಧ್ಯಯನ ಮಾಡಿದ್ದೇ ಆದರೆ ಸಂಸ್ಕೃತ ಭಾಷೆಯ ಸೊಗಸು ಸೊಬಗು ಸೊಗಡುಗಳನ್ನು ಕನ್ನಡದ ಮೂಲಕ ಸವಿಯಬಹುದು. ಈ ಮಹಾಗ್ರಂಥದ ಉದ್ದಕ್ಕೂ ಸಿಎನೆಸ್ ನೀಡಿರುವ ವಿಚಾರಪೂರ್ಣ ಟಿಪ್ಪಣಿಗಳು ಆದಿ ಕವಿಯ ದಿವ್ಯಜ್ಞಾನ ದೃಷ್ಟಿಯನ್ನು ಆಧುನಿಕ ವಿಜ್ಞಾನ ದೃಷ್ಟಿ ಹೇಗೆ ಅರಸಿ ಅರ್ಥವಿಸಿದೆ ಎನ್ನುವುದಕ್ಕೆ ಉತ್ಕೃಷ್ಟ ನಿದರ್ಶನಗಳು.

ಪ್ರಪಂಚ ಇರುವವರೆಗೂ ಕನ್ನಡ ಭಾಷೆ ಉಳಿದಿರುತ್ತದೆ. ಕನ್ನಡ ಭಾಷೆ ಇರುವವರೆಗೂ ಸಿಎನೆಸರ ಈ ಧ್ರುವ ಕೃತಿ ಉಳಿದಿರುತ್ತದೆ. ಕನ್ನಡ ವಾಲ್ಮೀಕಿ ರಾಮಾಯಣ ಇರುವವರೆಗೂ ಶ್ರೀನಿವಾಸ ಅಯ್ಯಂಗಾರ್ಯರ ಹೆಸರು ಉಳಿದಿರುತ್ತದೆ. ಕನ್ನಡ ವಾಲ್ಮೀಕಿ ರಾಮಾಯಣ ಅನಾವರಣ ಮಹೋತ್ಸವ ಮುಗಿದಿದೆ (೧೯೭೨). ಕೃತಾರ್ಥ ಸಿಎನೆಸ್ ನನ್ನ ಬಳಿಸಾರಿ, “ಈಗಲಾದರೂ ದೇವರನ್ನು ನಂಬುತ್ತೀರೋ?” ಎಂದು ಆತ್ಮೀಯವಾಗಿ ಕುಟುಕಿದರು! “ಈಗ ಕೂಡ ನಾನು ನಂಬುವುದು ನಿಮ್ಮನ್ನೇ, ನೀವು ಪ್ರತಿನಿಧಿಸುತ್ತಿರುವ ಜೀವನ ಮೌಲ್ಯವನ್ನು, ಅಂತೆಯೇ ಈ ಮೇರುಕೃತಿ ಗರ್ಭಿಸಿಕೊಂಡಿರುವ ಜೀವನ ಸೌಂದರ್ಯೋಲ್ಲಾಸಗಳನ್ನೇ! ಮೂರ್ತರೂಪದ, ನಾಮರೂಪದ ಅಥವಾ ವೈಯಕ್ತಿಕ ವೈಶಿಷ್ಟ್ಯದ ಯಾವ ದೇವರನ್ನೂ ಅಲ್ಲ.”

ಹುಲಿಗಾದ್ರಿ ಸೇವಾದ ಸಂತ ಶ್ರೀನಿವಾಸ ಅಯ್ಯಂಗಾರ್ಯರು ಧಾರ್ಮಿಕ ಪ್ರವೃತ್ತಿಯವರು, ಆಸ್ತಿಕ ಶಿರೋಮಣಿಗಳು. ಅವರು ಎಂದೂ ತಮ್ಮ ಅಭಿಪ್ರಾಯಗಳನ್ನು ಇತರರ ಮೇಲೆ ಹೇರಲು ಪ್ರಯತ್ನಿಸಿದವರಲ್ಲ. ದೇವರನ್ನು ನಂಬದವರೊಡನೆ ನಂಬಿಕೆಯ ಮಹಿಮೆಯನ್ನು ಕುರಿತು ವಾದಜಾಲ ಬೀಸಿದವರಲ್ಲ. “ನಿಮ್ಮ ಆಸ್ತಿಕ ದೃಷ್ಟಿಯನ್ನೂ ವೈಜ್ಞಾನಿಕ ದೃಷ್ಟಿಯನ್ನೂ ಹೇಗೆ ಸಮನ್ವಯಗೊಳಿಸುತ್ತೀರಿ” ಎಂದು ಅವರನ್ನು ಪ್ರಶ್ನಿಸಿದ್ದೆ. “ಏನೋ ಒಂದು ತಪ್ಪು ಕಲ್ಪನೆಯಿಂದ ಈ ಪ್ರಶ್ನೆ ಕೇಳುತ್ತಿದ್ದೀರಿ. ಇವೆರಡು ದೃಷ್ಟಿಗಳು ಪರಸ್ಪರ ಸಂಬಂಧ ಇಲ್ಲದವು ಅಥವಾ ವಿರುದ್ಧವಾದವು ಎಂದು ನೀವು ತಿಳಿದಿರುವ ಹಾಗಿದೆ. ವಾಸ್ತವವಾಗಿ ಇವು ಒಂದೇ ನಾಣ್ಯದ ಎರಡು ಮುಖಗಳಂತೆ, ಒಂದಕ್ಕೊಂದು ಪೂರಕ. ಒಂದಿಲ್ಲದೇ ಇನ್ನೊಂದಿಲ್ಲ. ಒಂದಿದ್ದಾಗ ಇನ್ನೊಂದು ಇದ್ದೇ ಇರುತ್ತದೆ.” “ತಪ್ಪು ತಿಳಿಯಬೇಡಿ. ಸೂರ್ಯಗ್ರಹಣದ ದಿವಸ ನೀವು ತರ್ಪಣ ಬಿಡುತ್ತೀರಿ. ಆದರೆ ಅದೇ ಸೂರ್ಯಗ್ರಹಣ ಕೇವಲ ಒಂದು ಖಗೋಳೀಯ ಘಟನೆ ಎಂದು ಕೂಡ ನೀವೇ ಬೋಧಿಸುತ್ತೀರಿ. ಇವೆರಡು ನಿಲವುಗಳ ನಡುವೆ ಸಾಮರಸ್ಯ ಹೇಗೆ ತರುತ್ತೀರಿ?” “ನನ್ನ ವ್ರತಾಚರಣೆ ಕೇವಲ ವೈಯಕ್ತಿಕ. ಅದು ಪರಂಪರೆಯಲ್ಲಿ ನನಗಿರುವ ಶ್ರದ್ಧೆಯಿಂದ ಬಂದದ್ದು. ಅದರಿಂದ ನನಗೆ ನೆಮ್ಮದಿ ದೊರೆಯುವುದು ಮಾತ್ರವಲ್ಲ, ನನ್ನ ವೈಜ್ಞಾನಿಕ ಚಿಂತನೆಗೆ ಹೆಚ್ಚಿನ ಬೆಂಬಲವೂ ದೊರೆಯುತ್ತದೆ. ಅಲ್ಲದೇ ಅದನ್ನು ಇತರರ ಮೇಲೆ ನಾನು ಹೇರುವುದಿಲ್ಲ.” ನಿಜ, ಸಮಾಜಕ್ಕೆ ಪೀಡಕವಲ್ಲದ, ಬದಲು ಸ್ವಂತ ವ್ಯಕ್ತಿತ್ವವನ್ನು ಉತ್ತಾರಿಸಬಲ್ಲ ವೈಯಕ್ತಿಕ ನಂಬಿಕೆಯ ಬಗ್ಗೆ ಗೌರವ ತಳೆಯುವುದು ಶ್ರೇಯಸ್ಕರವೆಂದು ಅವರಿಂದ ಕಲಿತೆ.

ಫೆಬ್ರುವರಿ ೧೯, ೧೯೭೨ರಂದು ಕನ್ನಡ ವಾಲ್ಮೀಕಿ ರಾಮಾಯಣದ ಅನಾವರಣ ಸಮಾರಂಭ ಜರಗಿತು. ಇದಾದ ಬಳಿಕ ಪದೇ ಪದೇ ಸಿಎನೆಸ್ “ನನ್ನ ಜೀವನದ ಉದ್ದೇಶವನ್ನು ಶ್ರೀರಾಮ ಸಫಲಗೊಳಿಸಿದ್ದಾನೆ. ಇನ್ನು ಬದುಕಿ ನಾನು ಸಾಧಿಸಬೇಕಾದದ್ದು ಏನೂ ಇಲ್ಲ. ಶ್ರೀರಾಮಪಾದವನ್ನು ಸುಲಭವಾಗಿ ಸೇರುವುದೊಂದೇ ಈಗ ನನಗೆ ಉಳಿದಿರುವ ಆಸೆ” ಎನ್ನುತ್ತಿದ್ದರು. “ಇಲ್ಲ, ನಿಮಗಿನ್ನೂ ೭೧ ವರ್ಷ ವಯಸ್ಸು. ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಚಟುವಟಿಕೆಗಳು ಉತ್ಕೃಷ್ಟ ಮಟ್ಟದಲ್ಲಿವೆ. ಶಿಷ್ಯರಿಗೆ ಮಾರ್ಗದರ್ಶನ ಮಾಡುತ್ತ ಅವರ ಉತ್ಕರ್ಷವನ್ನು ನೋಡಿ ಹಿಗ್ಗುತ್ತ ನೀವು ನೂರ್ಕಾಲ ಮೀರಿ ಬದುಕಬೇಕು” ಎಂಬುದಾಗಿ ನಾವು ಯಾರಾದರೂ ಹೇಳಿದಾಗ ಅವರು ಮೂಕರಾಗಿಬಿಡುತ್ತಿದ್ದರು. ಮಾತನ್ನು ಮತ್ತೂ ನಾವು ಮುಂದುವರಿಸಿದರೆ “ಶ್ರೀರಾಮನ ಇಚ್ಛೆ” ಎಂದು ಅದನ್ನು ಮೊಟಕು ಮಾಡುತ್ತಿದ್ದರು.

ಪ್ರಾಸ್ಟೇಟ್ ಗ್ರಂಥಿಯ ವ್ಯಾಧಿ ಸಿಎನೆಸ್‌ರನ್ನು ಇಳಿವಯಸ್ಸಿನಲ್ಲಿ ಬಾಧಿಸತೊಡಗಿತ್ತು. ಯುಕ್ತ ವೇಳೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವುದೇ ಇದಕ್ಕೆ ಯೋಗ್ಯ ಮತ್ತು ಪರಿಣಾಮಕಾರೀ ಚಿಕಿತ್ಸೆ. ಆದರೆ ಸಿಎನೆಸ್ ಈ ವ್ಯಾಧಿಯ ವಿಚಾರ ತಮ್ಮ ಮಡದಿ ಮಕ್ಕಳೊಡನೆ ಕೂಡ ಪ್ರಸ್ತಾವಿಸಿರಲಿಲ್ಲ. ಕ್ರಮಬದ್ಧ ಆಹಾರ, ವ್ಯಾಯಾಮ ಮುಂತಾದ ವಿಧಿನಿಯಮಗಳಿಂದ ವ್ಯಾಧಿಯನ್ನು ಹಿಡಿತದಲ್ಲಿರಿಸಿಕೊಂಡಿದ್ದರು. ೧೯೭೨ ಮಳೆಗಾಲದಲ್ಲಿ ಇವರಿಗೆ ತೀವ್ರವಾದ ಶೀತಜ್ವರ ಬಂದು ದೇಹ ಸಾಮರ್ಥ್ಯ ಬಲುವಾಗಿ ಉಡುಗಿಹೋಯಿತು. ಅದೇ ವೇಳೆಗೆ ಪ್ರಾಸ್ಟೇಟ್ ಗ್ರಂಥಿಯ ವ್ಯಾಧಿ ಉಲ್ಬಣಿಸಿತು ಕೂಡ. ವೈದ್ಯರು ಬಂದರು. ಔಷಧಿ ಕೊಟ್ಟರು. ರೋಗ ಹತೋಟಿಗೆ ಬಂದು ದೇಹಾರೋಗ್ಯ ಸುಧಾರಿಸಿದ ಬಳಿಕ ಶಸ್ತ್ರ ಚಿಕಿತ್ಸೆ ಆಗಲೇಬೇಕು ಎಂದರು. ಸಿಎನೆಸ್ ಗುಣಮುಖರಾಗುತ್ತಿದ್ದಂತೆ ತೋರಿತು. ಮುಖದ ಮೇಲೆ ಪ್ರಸನ್ನ ಭಾವ ಮೂಡಿತು. ಮನೆ ಮಂದಿಯನ್ನೂ ಬಂಧುಬಳಗದವರನ್ನೂ ನೋಡಿ ಮಾತಾಡಿದರು, ಮೃದುಹಾಸ ಸೂಸಿದರು.

ಸೆಪ್ಟೆಂಬರ್ ೨೧ರಂದು (೧೯೭೨) ಮಧ್ಯಾಹ್ನದ ಊಟ ಮಾಡುತ್ತಿದ್ದಾಗ ತೀವ್ರವಾಗಿ ಹೃದಯಾಘಾತವಾಯಿತು. ನೇಸರು ಆಗಲೇ ಹುಲಿಗಾದ್ರಿ ಸೇವಾದ ಈ ಬೆಳಕನ್ನು ತನ್ನಡೆಗೆ ಸೆಳೆದು ಪಡುವಲಿಗೆ ಹೊರಳಿತ್ತು.

ತರಣಿಯ ಹೊಂಗದಿರೀ ಜಗವನು ಬಿಡಿಸುವ ಹೊತ್ತಿನೊಳು
ಮರಣದ ಮಾತೇಕೆಲೆ, ಮನವೆ ನುಡಿ ನುಡಿ ಬೇರೆಯದ
ಭುವನವನೆತ್ತಿದೆ ಗಿರಿಧರನೊಲು ಕರಣಗಳಂಚೊಳು ಜೀವ
ಭವಲೀಲಾಕೌತುಕಿ ವಿಶ್ವಂಭರನುತ್ಸವ ಸುಹೃದ.
ಸಾವೇ ಕೊನೆ ಮಾತಲ್ಲವೊ, ಮರುಳೆ ಜೀವವು ಅಲ್ಲ
ನೋವಲ್ಲವು ನಲವಲ್ಲವು ಬಂಧನ ಬಿಡುಗಡೆಯಲ್ಲ
ಒಂದಿಲ್ಲದೆ ಮತ್ತೊಂದಿಲ್ಲದ ಪರಿ ಹೊಂದಿರುವಿವಕೂ
ಹಿಂದಿರುವಾನಂದದ ಹನಿಯುರುಳಿತು ಮೂಡಲೊಳಿದೆಕೋ!

-ಪುತಿನ

(ಮುಂದುವರಿಯಲಿದೆ)