ಪೀಠಿಕೆ: ಮೊನ್ನೆ ಬೆಂಗಳೂರಿನಲ್ಲಿ ‘ಸಕ್ಕರೆ ತಿಂದು, ನೀರು ಕುಡಿದ’ ಮೇಲೆ ನಾನು ದೇವಕಿ ಬೈಕೇರಿ ಮೈಸೂರಿಗೆ ಬಂದೆವು. ನನ್ನ ಮೂಲಮನೆ ‘ಅತ್ರಿ’ಯಲ್ಲಿ ತಾಯಿಯನ್ನು ಕಂಡು, ಎರಡು ದಿನ ವಿರಾಮದಲ್ಲಿದ್ದು ಮಂಗಳೂರಿಸುವ ಯೋಜನೆ ನಮ್ಮದು. ನೆಲವಿರುವುದೇ ನಗರ ವಿಸ್ತರಣೆಗೆಂಬಂತೆ ಬಿಡದಿ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣಾದಿ ಊರುಗಳು ಮೈಚಾಚುತ್ತಿವೆಯೋ ಅಥವಾ ಅವೆಲ್ಲ ಬೆಂಗಳೂರು ಮೈಸೂರುಗಳ ವಿಸ್ತರಣೆಗಳೇ ಆಗಿಹೋಗುತ್ತಿವೆಯೋ ಅರ್ಥವಾಗುವುದಿಲ್ಲ! ಮತ್ತಲ್ಲಿನ ‘ವಾಹನಶಿಸ್ತು’ಗಳನ್ನು ಹಾದು ಹೋಗುವುದು ಒಂದು ಯಜ್ಞ. ಮಾರ್ಗ ಚತುಷ್ಪಥ ಮಾಡಿದರೂ ವೇಗತಡೆಯ ದಿಬ್ಬ ನೂರೆಂಟು; ವೈಜ್ಞಾನಿಕ ರೂಪ, ಗಾತ್ರ, ಬಣ್ಣ ಒಂದಕ್ಕೂ ಇಲ್ಲದ ಕೀಲುಕಂಟಕಗಳು, ಅಸ್ಥಿತಜ್ಞರ ಮಿತ್ರರು! ಮಿನಿಟಿಗೆ ಸಾವಿರದೆಂಟು ಸಾಗುವ ವಾಹನ ಭರಾಟೆಯಲ್ಲಿ ನಾವು ಸಾವಿರದೊಂಬತ್ತನೆಯವರಾಗಿ ಮೈಸೂರು ಮತ್ತು ಸರಸ್ವತೀಪುರವನ್ನೂ ಪ್ರಾಣ, ಅಂಗಹೀನರಾಗದೆ ತಲಪುವಲ್ಲಿ ಯಶಸ್ವಿಯಾದೆವು. ಆದರೂ… ಈ ಕೊನೆಯಲ್ಲಿ ಮಹೀಶೂರಪುರದ ಆಧುನಿಕ ಒಡೆಯರುಗಳು ನಮ್ಮನ್ನು ಮನೆಯಂಗಳ ಸೇರದಂತೆ ಸೋಲಿಸಿಬಿಟ್ಟರು! ಮೈಸೂರು ದಸರಾ ನೆಪದ ಭಯೋತ್ಪಾದನೆಯ ಹೆಚ್ಚಳದಲ್ಲಿ ಮನೆಮನೆಗೆ ಕೋಟೆಯಲ್ಲದಿದ್ದರೂ ಕಂದಕ ಕೊಡುವ ಪಣ ಸ್ಥಳೀಯಾಡಳಿತ ತೊಟ್ಟಂತಿತ್ತು. ನಮ್ಮನೆಗೆ ಮೂರೂ ದಿಕ್ಕುಗಳಿಂದ ‘ಮಿತ್ರಪಕ್ಷ’ದವರದೇ ಪೌಳಿ ಮತ್ತು ಮನೆಯ ರಕ್ಷಣೆಯಿತ್ತು. ಉಳಿದ ಒಂದೇ ಭಾಗಕ್ಕೆ ಆಚೀಚೆ ಮನೆಯಂಚಿನಿಂದ ತೊಡಗಿದಂತೆ ಮೂರಡಿ ಅಗಲದ ಸುಮಾರು ಐದಡಿ ಆಳದ ಕಂದಕವನ್ನೇ ನಗರ ಸಭೆ ಮೂರು ದಿನಗಳ ಹಿಂದೆಯೇ ತೋಡಿ ಹಾಕಿದ್ದರು. ಅದರ ಎರಡೂ ಅಂಚುಗಳಲ್ಲಿ ಗುಡ್ಡೆ ಬಿದ್ದ ಹಾಳುಮೂಳು ಸೇರಿದ ಮಣ್ಣು ಬೆಳಗ್ಗಿನ ಜಾವ ಹೊಡೆದ ಮಳೆಗೆ ಕೆಸರಾಗಿ ಬೈಕ್ ಇರಲಿ, ಸಾಮಾನ್ಯ ನಡೆಯುವವರಿಗೂ ದಾಟಲಸಾಧ್ಯವೆನ್ನುವಂತಿತ್ತು. ಬೈಕನ್ನು ದಾರಿ ಬದಿಯಲ್ಲೇ ಬಿಟ್ಟು, ಕೆಳವಠಾರದವರ ಗೇಟಂಚಿನಿಂದ ಮಳೆನೀರ ಗಟಾರದ ಸಪುರ ದಂಡೆಗೆ ಇಳಿದು ಹೇಗೋ ಮನೆ ಸೇರಿಕೊಂಡೆವು!

ಅನೂಹ್ಯ ಆತಂಕ: ಭೂಗತ ಕೊಳಚೆ ಕೊಳವೆ ಶುದ್ಧೀಕರಣ ತಂಡ ಶುಕ್ರವಾರ ಬೆಳಗ್ಗೆ ಅಗೆಯಲು ತೊಡಗುವ ಮೊದಲು “ಸದ್ಯಕ್ಕೆ ನಿಮ್ಮ ಅಗತ್ಯದ ವಾಹನಗಳನ್ನೆಲ್ಲ ಹೊರೆಗೆಲ್ಲಾದರೂ ಇಟ್ಟುಕೊಳ್ಳಿ, ಸಂಜೆಗೆ ಪೂರೈಸಿ ಕೊಡುತ್ತೇವೆ” ಎಂದೇನೋ ಆಶ್ವಾಸನೆ ಕೊಟ್ಟಿದ್ದರು. ಮನೆಯವರು ಕಾರು, ಸ್ಕೂಟರಾದಿಯನ್ನು ಅಕ್ಕಪಕ್ಕದ ಮನೆಯಂಗಳದಲ್ಲಿಟ್ಟದ್ದೂ ಆಯ್ತು. ಆದರೆ ಒಂದೇ ದಿನದಲ್ಲಿ ಕೆಲಸ ಪೂರೈಸದಾಗ (ನಾವು ಅಲ್ಲಿಗೆ ಹೋಗುವ ಮೊದಲೇ) ನನ್ನ ತಾಯಿಗೆ (೮೨ರ ಪ್ರಾಯ, ವೃದ್ಧಾಪ್ಯದ ಸಂಕಟಗಳಲ್ಲಿ ತೀವ್ರ ಬಳಲುತ್ತಲೇ ಇದ್ದಾರೆ) ‘ಆತಂಕ’ – ತನಗೆ ನಿತ್ರಾಣ ಹೆಚ್ಚುತ್ತಿದೆಯಾದರೂ ವೈದ್ಯಕೀಯ ಸಹಾಯಕ್ಕೆ ಮನೆ ಬಿಟ್ಟು ಹೋಗುವಂತಿಲ್ಲ ಎಂಬ ಭಯ, ಏರತೊಡಗಿತು. ಮನೆಯವರು (ತಮ್ಮ ಅನಂತ, ಹೆಂಡತಿ ರುಕ್ಮಿಣಿ, ಮಗಳು ಅಕ್ಷರಿ) ಎಲ್ಲಿಂದಲೋ ಹಲಿಗೆ ಸಂಪಾದಿಸಿ ತಂದು, ಮಣ್ಣ ದಿಬ್ಬ ಒತ್ತರಿಸಿ, ಚರಂಡಿಗೆ ಅಡ್ಡ ಹಾಕಿ, ತಾಯಿಯನ್ನು ಅಡ್ಡ ಹಾಯಿಸಿ ಕಾರಿಗೇರಿಸಿ ವೈದ್ಯರ ಬಳಿಗೆ ಧಾವಿಸಬೇಕಾಯ್ತು. ಕುಟುಂಬ ವೈದ್ಯರಿಗೆ ಇದು ಹೊಸತೇನೂ ಅಲ್ಲ. ತತ್ಕಾಲೀನ ಉಪಶಮನ (ಮುಖ್ಯವಾಗಿ ಮನಸ್ಸಿಗೆ) ಕೊಟ್ಟು ಸುಧಾರಿಸಿ ಕಳಿಸಿದರು.

(ಮಂಗಳೂರಿನ ಬೋಳೂರಿನ ಈ ಮನೆಯವರ ಎದುರು ಜಗುಲಿಯಂಚಿಗೇ ಕೊಳಚೆ ಮಂಡಳಿ ಒಂದು ವಾರ ಕಾಲ ಈ ಗಂಡಿ ತೆರೆದು ಬಿಟ್ಟಿತ್ತು. ಸ್ಥಳೀಯರು ಟೀವಿ, ಪತ್ರಿಕಾವರದಿಗಾರರನ್ನೆಲ್ಲ ಕರೆತರಿಸಿ ದೊಡ್ಡ ಸುದ್ದಿ ಮಾಡಿದ ಮೇಲೆ ಇಲಾಖೆ ಕಣ್ದೆರೆಯಿತು!) ಇದನ್ನು ಪರೋಕ್ಷ ಪರಿಣಾಮಗಳ ಕಿರುಪರಿಚಯಕ್ಕೆ ಮಾತ್ರ ಇಲ್ಲಿ ಹೇಳಿದ್ದೇನೆ. ಹಾಗೆ ಇನ್ನೊಂದೇ ಸಣ್ಣ ವಿಚಾರದ ವಿಸ್ತರಣೆ ಮಾಡಿ ಮುಂದುವರಿಯುತ್ತೇನೆ:

ಕೆಲವು ಮನೆಯವರು ದಾರಿಯಿಂದ ಮನೆಯಂಗಳಕ್ಕೆ ಸಂಪರ್ಕವನ್ನು ಬಹಳ ಮುತುವರ್ಜಿಯಿಂದ ಓರಣಗೊಳಿಸುತ್ತಾರೆ. ಗೇಟಿನಗಲದಲ್ಲಿ ಭದ್ರ ಕಾಂಕ್ರೀಟೋ, ಅಲಂಕಾರಿಕ ತುಂಡಿಟ್ಟಿಗೆಗಳ ಹಾಸೋ ಬಿಗಿದು, ಉಳಿದಂತೆ ಪುಟ್ಟಪಥ-ಮೋರಿಗಳ ನಡುವಣ ಮಣ್ಣಿನಲ್ಲಿ ಪುಟ್ಟ ಉದ್ಯಾನವನವನ್ನೇ ನಿರ್ಮಿಸಿರುತ್ತಾರೆ. ನಗರಸಭೆ ಜಾಗದ ಸ್ವಾಮಿತ್ವವನ್ನು ತಾವು ಪೂರ್ಣ ಉಳಿಸಿಕೊಂಡರೂ ಇಂಥ ಸುಂದರೀಕರಣವನ್ನು ಸದಾ ಬಹಿರಂಗವಾಗಿಯೇ ಉತ್ತೇಜಿಸುವುದೂ ತಿಳಿದೇ ಇದೆ. ಮೈಸೂರಿನಲ್ಲಂತೂ ದಸರಾ ಸಂದರ್ಭದಲ್ಲಿ ಮನೆ ಮನೆ ಉದ್ಯಾನವನಕ್ಕೆ ಬಹುಮಾನ ಕೊಡುವ ಸಂದರ್ಭದಲ್ಲಿ ಪೌಳಿಯ ಹೊರಗಿನ ಪರಿಸರ ನಿರ್ಮಾಣಕ್ಕೂ ಮಹತ್ತ್ವದ ಅಂಕಗಳಿವೆ. ಅವೆಲ್ಲಾ ಪ್ರತಿ ‘ರಿಪೇರಿ ಅಲೆ’ ಹೊಡೆದು ಹೋಗುವಾಗ ಉಧ್ವಸ್ಥ ಯುದ್ಧಭೂಮಿಯೇ ಆಗುತ್ತದೆ. (ನೇರ ಸಂತ್ರಸ್ತರ ಇನ್ನೊಂದು ಕಥನಕ್ಕೆ ರುಕ್ಮಿಣಿಮಾಲಾಳ ಜಾಲತಾಣ ನೋಡಿ) ಕಲ್ಲು ಕಸ ಎಲ್ಲ ಮಳೆನೀರ ಮೋರಿಗೆ ಬಿದ್ದು, ಪುಟ್ಟಪಥದ ಕಲ್ಲೋ ಇಟ್ಟಿಗೆಗಳೋ ದಿಕ್ಕಾಪಾಲಾಗಿ, ಮಳೆ ಕಾಲಾಂತರದಲ್ಲಿ ಚರಂಡಿ ಮುಚ್ಚಿದ ಮಣ್ಣು ಜಗ್ಗಿ ಹೊಂಡ ದಿಬ್ಬಗಳಾಗಿ (ಚಂದ್ರಮುಖಿಯಾಗಿ) ಕಾಡುವಾಗ ಯಾರೂ ಕೊಳಚೆ ಮಂಡಳಿಯನ್ನು ಪ್ರಶ್ನಿಸಿದ್ದಿಲ್ಲ! ಇಲಾಖೆಗಳು ಯಾವುದೇ ಇರಲಿ, ತಾವು ತೊಡಗಿದ ಕೆಲಸಗಳನ್ನಷ್ಟೇ ಪೂರೈಸುವುದಲ್ಲ. ಕಾಮಗಾರಿಯ ಯಶಸ್ಸಿನಷ್ಟೇ ಅದರಿಂದ ಉತ್ಪನ್ನವಾದ ಕಸ ನಿರ್ವಹಣೆಗೆ, ಕನಿಷ್ಠ ಆ ನೆಲವನ್ನು ಸಮ ಸ್ಥಿತಿಗೆ ತಂದಿಡುವುದು ಜವಾಬ್ದಾರಿಯೇ ಆಗಬೇಕು. ವಿದ್ಯುತ್ ಇಲಾಖೆ ತಂತಿ ನಿರ್ವಹಣೆಗೆ ಗೆಲ್ಲುಗಳನ್ನು ಕಡಿದರೆ ಕಸ ಹೆಕ್ಕುವ ಕ್ರಮವಿಲ್ಲ. ಜಲನಿಗಮ ಕೊಳವೆ ಹಾಯಿಸಲು ದಾರಿ ಒಡೆದರೆ ಮರುಡಾಮರು ಕಾಣಿಸುವ ವ್ಯವಸ್ಥೆಯೇ ಇಲ್ಲ. ಕೊಳಚೆ ನೀರಿನ ಆಳುಗುಂಡಿಗಳ ಮುಚ್ಚಳ ಹಾಕಿದ ಬಾಯಿ (ಬಹುತೇಕ) ದಾರಿಯಿಂದ ಒಂದೋ ಆರಿಂಚು ಮೇಲೆ ಇಲ್ಲವೇ ಕೆಳಗೆ. (ಹಿಂದೆ) ಅವೂ ಬೀಡು ಕಬ್ಬಿಣದ ಮುಚ್ಚಳ ಹೊಂದಿದ್ದಾಗಂತೂ ರಾತೋರಾತ್ರಿ ಕದ್ದು ಹೋದರೆ ಅಮಾಯಕರಿಗೆ ‘ಸಜೀವ ಸಮಾಧಿಗುಂಡಿ’ಯಾಗುವುದು ಇನ್ನೊಂದು ಕೇಡು!

ನಗರಾಭಿವೃದ್ಧಿಯಲ್ಲಿ ಹಸುರಿನ ಕೇಡು: ಸುಮಾರು ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ, ನಗರ ಹಸುರೀಕರಣದಲ್ಲಿ ಪುರಪಾಲಕರು ಆ ಬೀದಿಯುದ್ದಕ್ಕೆ ಮರವಾಗುವ ಸಸಿಗಳನ್ನು ಸಕಲ ವೈಭವ ಮತ್ತು ಅಲಂಕಾರ ಸಹಿತ ನೆಟ್ಟಾಗ, ‘ಅತ್ರಿ’ ಎದುರೂ ಒಂದು ಬಂದಿತ್ತು. ಅನಂತರದ ದಿನಗಳಲ್ಲಿ ಹಲವು ಯೋಜನೆಗಳ (ಅಂದರೆ ಅನುದಾನಗಳ!) ಮಜಲಿನಲ್ಲಿ ಆ ಗಿಡಗಳನ್ನು ಬೀಡಾಡಿ ಜಾನುವಾರುಗಳಿಂದ ಕಾಪಾಡಲು ಬೇಲಿ, ಇಟ್ಟಿಗೆ ಗೂಡು, ಕಬ್ಬಿಣದ ಪಂಜರ ಮುಂತಾದವೂ ದಾನಿಗಳನ್ನು ಮತ್ತು ಉದಾತ್ತ ಆಶಯಗಳನ್ನು ಆಚಂದ್ರಾರ್ಕ ಕೀರ್ತಿಸುವ ಅಸಂಖ್ಯ ಫಲಕಗಳೂ ಬಂದಿರಬೇಕು; ಸದ್ಯ ಏನೂ ಉಳಿದಿಲ್ಲ. ವಾಸ್ತವದಲ್ಲಿ ಇಂದು ಧಡಿಯರಂತೆ ನಿಂತಿರುವ ಮರಗಳು ಎಷ್ಟನೆಯ ನಾಟಿಯ ಪುಣ್ಯಫಲವೇ ಇರಲಿ, ಅದರ ನಿಜ ರಕ್ಷಣೆ, ಪೋಷಣೆಯಲ್ಲಿ ಒತ್ತಿನ ಮನೆಯವರು ಪಟ್ಟ ಶ್ರಮ ಗಮನಿಸಲೇ ಬೇಕಾದ ಸಂಗತಿ. ಎಳೆ ಕೊಂಬೆ, ಚಿಗುರುಗಳು ಪೋಲಿದನಗಳ ಮೇವಾಗದಂತೆ ಇವರು ಎಲ್ಲಿಂದಲೋ ಸಂಪಾದಿಸಿ ಕಟ್ಟಿದ ಮುಳ್ಳ ಅಡರು, ಬೀರಿದ ಕಲ್ಲು, ಕನಿಷ್ಠ ಹೊಡೆದ ಬೊಬ್ಬೆ ಮರೆಯುವಂತವಲ್ಲ. ಬೇಲಿಯಲ್ಲಿ ಸೌದೆ, ಗುಜರಿ ಕಾಣುವ ಬೀಡಾಡಿಗಳು, ಅಗತ್ಯ ಮೀರಿ ಕೈ ಕಡಿಯುವ ವಿದ್ಯುತ್ ಇಲಾಖೆ, ಜಾಹೀರಾತು ಪ್ರಪಂಚದ ಉರುಳುಗಳೆಲ್ಲಕ್ಕೂ ಮನೆಯವರು ನೈತಿಕ ಪೋಲಿಸ್ಗಿರಿ ನಡೆಸಲೇಬೇಕಾಗುತ್ತದೆ. ಬೇಸಗೆಯ ಬಿರುದಿನಗಳಲ್ಲಿ ಕೊಟ್ಟ ನೀರು, ಕಳೆದ ಕಸಕೊಳೆ (ಹೌದು, ಎಷ್ಟೋ ಜಾಣ ನಾಗರಿಕರಿಗೆ ಮರರಕ್ಷಣಾ ಆವರಣ ತಮ್ಮಗತ್ಯದ ಕಸತೊಟ್ಟಿಯಂತೇ ಕಾಣುವುದಿದೆ!), ಸುಧಾರಿಸಿಕೊಂಡ ಅನಾನುಕೂಲಗಳು (ಅದರ ನೆರಳು ಅಂಗಳದ ಗಿಡಗಳಿಗಾಗದು, ದಿನೆದಿನೇ ಹಬ್ಬುವ ಮತ್ತು ಉಬ್ಬುವ ಬೇರು ಮನೆ ಪ್ರವೇಶದ ಜಾಡನ್ನು ಅಸಮಗೊಳಿಸುತ್ತದೆ ಮತ್ತು ಪೌಳಿಯನ್ನು ಅಸ್ಥಿರಗೊಳಿಸುತ್ತದೆ) ಇತ್ಯಾದಿ ಲೆಕ್ಕ ಇಡುವುದು ಕಷ್ಟ. ಗಿಡಗಳು ಒಂದು ಹಂತದಲ್ಲಿ “ಇನ್ನು ಬಂಧನ ಬೇಡ”ವೆಂಬಂತೆ ಹೆಮ್ಮರವೇ ಆದಾಗ ಕಾಳಜಿ ಭಯಗಳು ಅದರ ‘ಕುರಿತಾಗಿ’ ಬದಲಿ ‘ಅದರಿಂದಲೇ’ ಶುರುವಾಗಿದೆ! ಬಿರುಗಾಳಿ, ಮಳೆಗಳ ಅಬ್ಬರದಲ್ಲಿ ವಿದ್ಯುತ್ ಸಂಪರ್ಕಕ್ಕೆ ಉಂಟುಮಾಡುವ ವ್ಯತ್ಯಯದೊಡನೆ ಮರವೇ ಮಗುಚಿ ಆಗಬಹುದಾದ ಹೆಚ್ಚಿನ ಅಪಾಯಗಳು ಅಲ್ಲಿಲ್ಲಿ ಕಣ್ಣಿಗೆ ಬಿದ್ದು ಕಾಡುತ್ತಿರುತ್ತದೆ. ಇದೀಗ ‘ನಿಗೂಢ ಕಾರ್ಯಾಚರಣೆ’ಯಂತೆ ಬೇರಜಾಲದ ಮಹಿಮೆ ಕೊಳಚೆನೀರೆಂತೋ ಶುದ್ಧ ನೀರನ್ನೂ ಎಲ್ಲ ಭೂಗತ ಸಂಪರ್ಕಗಳನ್ನೂ ಕಾಡಬಹುದು ಎಂಬ ತಿಳುವಳಿಕೆ ಹಸುರಿನ ಕುರಿತು ಹೆಚ್ಚಿನ ಹೆದರಿಕೆಗೆ ಕಾರಣವಾಗಿದೆ! ನಗರ ಎನ್ನುವ ಸಂಕೀರ್ಣ ಮನುಷ್ಯಕೃತ (ಕೃತಕ) ವ್ಯವಸ್ಥೆಗೆ ನಮ್ಮ ಪ್ರಾಕೃತಿಕ ಪರಿಸರದ ಬಗೆಗಿನ ಮಾನದಂಡಗಳೇ ಬದಲಾಗಬೇಕು.

ಕಾರ್ಯಕ್ಷಮತೆಯ ಹೆಚ್ಚಳಕ್ಕಾಗಿ ಸರಕಾರ ಎನ್ನುವ ‘ಏಕದೇವ’ ವಿವಿಧ ಇಲಾಖೆಗಳಲ್ಲಿ ‘ಪುಡಿಶಕ್ತಿ’ಯಾಗಿ ‘ಭಜಕರ’ ಇಷ್ಟಾರ್ಥವನ್ನು (ಹೌದು, ಈ ದೇವತೆಗಳೂ ಸ್ತುತಿ, ನೈವೇದ್ಯ ಕೊಟ್ಟು ಒಲಿಸಿಕೊಳ್ಳಬೇಕು) ಈಡೇರಿಸುವುದು ನಮಗೆಲ್ಲರಿಗೆ ತಿಳಿದದ್ದೇ ಇದೆ. ಆದರೆ ಈ ‘ಪುಡಿಶಕ್ತಿ’ಗಳು ಪರಸ್ಪರ ಸಹಕಾರ ಮರೆತು, ಏಕಲಕ್ಷ್ಯವನ್ನು (ಉತ್ತಮ ಆಡಳಿತ) ವಿಫಲಗೊಳಿಸುವುದು ಪ್ರಜಾಸತ್ತೆಯ ದುರಂತ. ದಾರಿ, ಪುಟ್ಟಪಥ, ಮಳೆನೀರ ಗಂಡಿಯೇ ಮೊದಲಾದ ಸ್ಪಷ್ಟ ಭೂ ವ್ಯವಸ್ಥೆಗೆ ನಗರಾಡಳಿತದ ಉಪ ಇಲಾಖೆಗಳು ಜವಾಬ್ದಾರ. ಆದರೆ ಅದೇ ಭೂ ವ್ಯವಸ್ಥೆಯೊಳಗೆ ತಮ್ಮ ನೆಲೆಯನ್ನೂ ಕಂಡುಕೊಳ್ಳಬೇಕಾದ ವಿದ್ಯುತ್ (ಮೊದಲೆಲ್ಲ ಬರಿಯ ಪಾದ ಊರುವ ನೆಲೆ ಸಾಕಿತ್ತು. ಈಗ ಇವಕ್ಕೂ ನೆಲದುದ್ದಕ್ಕೆ ಹರಿದಾಡುವ ಕಾಲ), ನೀರು ಸರಬರಾಜು, ಕೊಳಚೆ ನೀರು, ತರಹೇವಾರಿ ದೂರಸಂಪರ್ಕದ ಕೇಬಲ್ಲುಗಳು (ಸಾಲದೆಂದು ಸದ್ಯದಲ್ಲೇ ಅನಿಲ ವಿತರಣಾ ಕೊಳವೆ ಜಾಲಗಳೂ ಬರಲಿವೆ). ಒಂದು ಕಾಲದಲ್ಲಿ ದಾರಿ ಬದಿಯ ಸಾಲು ಮರಗಳನ್ನು ಪಥಿಕರ ಆಶ್ರಯಕ್ಕೆಂದು ಹೇಳಲಾಗುತ್ತಿತ್ತು. ಈಗಿನ ಮಾರ್ಗರಚನೆಯ ತಂತ್ರಜ್ಞಾನ ಮರಗಳು ರಸ್ತೆಯ ಅಸ್ಥಿರತೆಗೆ (ಹನಿಬಿದ್ದು ಹೊಂಡವಾಗುವುದು ಮತ್ತು ಬೇರುಬ್ಬಿ ನೆಲ ಬಿರಿಯುವುದು) ಕಾರಣ ಮತ್ತು ವೇಗಚಾಲನೆಯಲ್ಲಿ ದೃಷ್ಟಿ ನಿರ್ಬಂಧಿಸುತ್ತದೆಂದು ನಿಷೇಧವನ್ನೇ ಸಾರುತ್ತದೆ; ತಪ್ಪಲ್ಲ. ಇದೇ ತರ್ಕ ಸರಣಿಯ ಇನ್ನೂ ಮುಂದುವರಿದ ಅಧ್ಯಾಯ ಮೈಸೂರಿನ ನಮ್ಮ ಮನೆಯೆದುರು ಆಗಿತ್ತು. ಮರದ ಬೇರು ಕೊಳಚೆ ಕೊಳವೆಯ ಸಂದಿನಲ್ಲಿ ವಾಮನನಂತೆ ನುಸಿದು ಒಳಗೆ ತ್ರಿವಿಕ್ರಮನಂತೆ ಹಿಗ್ಗಿತ್ತು.

ಈ ತೆರನ ನೂರೊಂದು ಉದಾಹರಣೆ ಮುಂದೆ ಮಾಡಿ ದಾರಿ, ಪುಟ್ಟಪಥ ಹಾಗೂ ಚರಂಡಿ ನೋಡಿಕೊಳ್ಳುವ ಇಲಾಖೆಯಂತೇ ಜಲ ಹಾಗೂ ಕೊಳಚೆ ಮಂಡಳಿಯೂ (ತಮ್ಮ ವಲಯಗಳಲ್ಲಿ) ಹಸಿರು ವಿರೋಧೀ ನೀತಿ ತಳೆದರೆ ಖಂಡಿತಾ ತಪ್ಪಿಲ್ಲ!

ಮೈಸೂರಿನ ಕೊಳಚೆ ಕೊಳಾಯಿ ಕತೆ: ಇಲ್ಲಿನ ಸಾಲು ಮರಗಳ ದಾರಿಯುದ್ದಕ್ಕೂ ಈಚಿನ ದಿನಗಳಲ್ಲಿ ಆಗಿಂದಾಗ್ಗೆ ಆಳು-ಗುಂಡಿ (ಮ್ಯಾನ್ ಹೋಲ್) ಉಕ್ಕುವುದು, ಇಲಾಖೆಯವರು (ನಿಧಾನಿಸಿದರೂ) ಬಂದು ಸುಧಾರಿಸಿಕೊಡುವುದು ನಡೆದೇ ಇತ್ತು. ತೋಟಿಗಳು ಆಳು ಗುಂಡಿಗಳ ಮುಚ್ಚಳ ಎಬ್ಬಿಸಿ, ಉದ್ದುದ್ದ ಬಿದಿರ ಸಲಿಕೆ ಮಾಲೆಯನ್ನು ಕೊಳವೆಗಳ ಉದ್ದಕ್ಕೆ ತಳ್ಳಿ ಮಥನ ಮಾಡುತ್ತಿದ್ದರು. ಒಳಗೆಲ್ಲೋ ತಡೆಯೊಡ್ಡಿದ್ದ ಅಗೋಚರ ‘ಗಂಟು’ ಪುಡಿಯಾದದ್ದು ಇವರಿಗೆ ಕೇವಲ ಸಲಿಕೆ ಮಾಲೆಯ ಮಿಡಿತದಲ್ಲಿ ಅನುಭವಕ್ಕೆ ಬರುತ್ತಿತ್ತು. ಅನಂತರ ಉಕ್ಕು ನಿಧಾನಕ್ಕೆ ಇಳಿದು ಕೊಳಚೆ ಹರಿದು ಹೋಗುವುದರೊಡನೆ ಸಮಸ್ಯೆ ಸಮಾಪ್ತಿ ಕಾಣುತ್ತಿತ್ತು. ಆದರೆ ಈಚಿನ ದಿನಗಳಲ್ಲಿ ಸಮಸ್ಯೆ ಆಗಿಂದಾಗ ಆಗುತ್ತಿತ್ತು ಮತ್ತು ಸಲಿಕೆಯ ನಾಡಿಯಲ್ಲಿ ‘ಗಂಟು’ ನುಸುಲಾಗುವುದು ಮಾತ್ರ ಭಾಸವಾಗುತ್ತಿತ್ತು, ಪೂರ್ಣ ನಿವಾರಣೆಯಲ್ಲ. ಕೊಳವೆಯೊಳಗೆ ಮರಗಳ ಬೇರಜಾಲ ಹೊಕ್ಕಿರುವುದು ಸ್ಪಷ್ಟವಿತ್ತು. ಸಹಜವಾಗಿ ಕೊಳವೆ ಸಾಲನ್ನೇ ಅಗೆದು ಹೊರ ತೆಗೆದು ಶುದ್ಧ ಮಾಡುವ ಅನಿವಾರ್ಯತೆ ಬಂದಿತ್ತು.

ಬಹುಶಃ ಹೊಸದನ್ನು ಅಳವಡಿಸುವಲ್ಲಿನ ಶುಚಿತ್ವದ ಸೌಕರ್ಯ ಮತ್ತೂ ಮುಖ್ಯವಾಗಿ ಹಣಕಾಸಿನ ವ್ಯವಸ್ಥೆ ಇಂಥ ದುರಸ್ತಿ ಕೆಲಸಗಳಿಗೆ ದಕ್ಕುವುದಿಲ್ಲ. ಸಹಜವಾಗಿ ನಗರಾಡಳಿತ ಹಳೆ ಕೊಳವೆಗಳನ್ನು ಅಗೆದು, ತೆಗೆದು, ಶುಚಿಗೊಳಿಸಿ, ಮತ್ತೆ ಹುಗಿಯುವ ಕೆಲಸವನ್ನು ನಾಲ್ಕೈದು ಜನರ ಪುಟ್ಟ ತಂಡಕ್ಕೆ ಚಿಲ್ರೆ ಗುತ್ತಿಗೆ ಕೊಟ್ಟು ಮುಗಿಸಿದ್ದರು. ತಂಡ ಶುಕ್ರವಾರ ಸುಮಾರು ನೂರಡಿ ಉದ್ದಕ್ಕೆ ಅಗೆದು ಕೊಳವೆಗಳನ್ನು ತಲಪುವಲ್ಲಿಗೆ ಕತ್ತಲಾಗಿತ್ತು. ಶನಿವಾರ ಏನೋ ಅನಿವಾರ್ಯತೆಯಂತೆ, ಆದಿತ್ಯವಾರ ಮಾಮೂಲಿನಂತೆ ರಜೆ; ಏನು ಕೆಲಸವೂ ನಡೆಯಲಿಲ್ಲ ಮತ್ತು ಗಂಡಿ ತೆರೆದಂತೆಯೇ ಇತ್ತು. ಸೋಮವಾರ ನಾನು ಕಂಡ ಕೂಲಿಗಳಲ್ಲಿ ಇಲಾಖೆ ಕೊಟ್ಟಂತೆ ಇದ್ದ ಸಲಕರಣೆಗಳು ಒಂದು ಕೊಡ್ಲಿ, ಎರಡೆರಡು ಸಬ್ಬಲ್, ಸನಿಕೆ, ಬಾಂಡ್ಲಿ ಮತ್ತು ಕೊಳಚೆಯಿಂದ ರಕ್ಷಣೆಗೆ ಎರಡು ಜೊತೆ ಗಂಬೂಟ್ ಮಾತ್ರ. ಮರದ ಬೇರು ಒಂದೆಡೆ ಸ್ಪಷ್ಟವಾಗಿ ಕೊಳವೆಗಳ ಸಂಧಿಸ್ಥಾನವನ್ನು ಬಲವಾಗಿ ಆವರಿಸಿಕೊಂಡಿತ್ತು. ಚರಂಡಿ ತೋಡುವಲ್ಲೂ ಇವರು ಜಟಿಲ ಬೇರ ಜಾಲವನ್ನೇ ಇವರು ಕಡಿದೇ ಕೆಳಗಿಳಿದದ್ದಕ್ಕೆ ಸಾಕಷ್ಟು ಸಾಕ್ಷಿಗಳು ತೋಡಿ ಹಾಕಿದ ಮಣ್ಣ ರಾಶಿಯ ಒತ್ತಿಗೇ ಇತ್ತು. ಓರ್ವ ಗಂಬೂಟ್ ಧಾರಿ ಚರಂಡಿಗಿಳಿದು ಬಹು ಎಚ್ಚರದಿಂದ ಸಬ್ಬಲ್ ಬಳಸಿ ಬೇರುಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ, ತುಂಡರಿಸುತ್ತ ತೆಗೆದ. ಆದರೂ ಕೊಳವೆಗಳ ಬೆಸುಗೆ ಬಿಡಿಸಿ ಒಂದನ್ನು ಎತ್ತುವಲ್ಲಿ ಇನ್ನೊಂದು ಕೊಳವೆ ಅರ್ಧಕ್ಕೆ ಒಡೆಯುವುದು ಅನಿವಾರ್ಯವಾಗಿತ್ತು. ಈ ಕೊಳವೆಗಳೆಲ್ಲ ಸುಟ್ಟ ಮಣ್ಣಿನವು. ಆದರೆ ಸವಕಳಿ, ಒತ್ತಡಗಳೊಡನೆ ಹಳತಾಗಿರುವುವನ್ನು ಕಳಚಿ ಮರುಜೋಡಿಸುವ ಕಾರ್ಯದಲ್ಲಿ ಒಡೆಯದಂತೆ ಉಳಿಸಿಕೊಳ್ಳುವುದೂ ಈ ಕೂಲಿಕಾರರಿಗೆ ಅನಿವಾರ್ಯ. ಕಾರಣ – ಆಕಸ್ಮಿಕಗಳನ್ನು ಪರಿಗಣಿಸಿ ಇವರಿಗೆ ಒದಗುವ ಬದಲಿ ಕೊಳವೆಗಳು ತುಂಬ ಸಣ್ಣ ಸಂಖ್ಯೆಯವಂತೆ.

ಒಂದು ಕೊಳವೆ ಕಳಚಿದ್ದೇ ಕೊಳಚೆ ನೀರು ಚರಂಡಿಯುದ್ದಕ್ಕೆ ಹರಿಯತೊಡಗಿತು. ಗಂಬೂಟುಧಾರಿಗಳಿಬ್ಬರು ಸ್ಥಿತಪ್ರಜ್ಞರಂತೆ ಕೊಳವೆಗಳನ್ನು ಬೆಸೆದ ತೆಳು ಸಿಮೆಂಟ್ ಲೇಪವನ್ನು ಸಬ್ಬಲ್ಲಿನಲ್ಲಿ ಬಹಳ ಜಾಗ್ರತೆಯಿಂದ ಕೀಳುತ್ತ, ಕಳಚಿ ಬಂದ ಪ್ರತಿ ಕೊಳವೆಯನ್ನೂ ಕೊಳಚೆನೀರು ಸುರಿಯುತ್ತಿದ್ದಂತೆ ಬರಿಗೈಯಲ್ಲಿ ಎತ್ತಿ ಮೇಲೆ ಕೊಡುತ್ತ ಹೋದರು. ಆ ಸಾಲಿನ ಎಲ್ಲ ಕೊಳವೆಗಳು ಮೇಲೆ ಹೋದ ಮೇಲೆ ಮತ್ತಷ್ಟು ಬೇರಗಂಟುಗಳನ್ನು ಕೊಡಲಿಯಲ್ಲಿ ಕೊಚ್ಚಿ, ಕೆಸರುಕೊಚ್ಚೆಯ ನಡುವೆ ಮಣ್ಣ ಚರಂಡಿಯ ತಳವನ್ನು ಕೊಳವೆಗಳ ಪುನಃಸ್ಥಾಪನೆಗೆ ಹಸನುಗೊಳಿಸುತ್ತಾ ಹೋದರು. ಮೂರನೆಯವನೊಬ್ಬ ಆ ಸಾಲಿನ ಮೇಲ್ಕೊನೆಯಲ್ಲಿದ್ದ ಆಳುಗುಂಡಿಯ ಮುಚ್ಚಳ ತೆರೆದು, ಬರಿಗಾಲಿನಲ್ಲಿ ಅದರಾಳಕ್ಕಿಳಿದ. ಒಳಗೆ ನೆಲದಲ್ಲಿ ಸಂಗ್ರಹವಾದ ಕೆಸರನ್ನು ನಿಧಾನಕ್ಕೆ ಹತ್ತೆಂಟು ಸನಿಕೆ ತುಂಬಾ ಮೇಲೆ ಕಳಿಸಿಕೊಟ್ಟ. ಮೇಲುಳಿದ ಇತರ ಕೂಲಿಗಳು ಆ ಈ ಸಹಾಯಕ್ಕೊದಗುತ್ತ, ಉಳಿದಂತೆ ಬರಿಗೈಯಲ್ಲೇ ಸಿಕ್ಕ ಕಬ್ಬಿಣ, ಕೋಲು ಹಿಡಿದು ಪ್ರತಿ ಕೊಳವೆಯ ಒಳಸುತ್ತಿನಲ್ಲಿ ನಿಗಿದ ಕಪ್ಪು ಮಡ್ಡಿಯನ್ನು ಕೆದಕಿ ಶುದ್ಧ ಮಾಡುತ್ತಿದ್ದರು.

ಹೀಗೆ ಕೊಳವೆಸಾಲಿನ ಮರುಜೋಡಣೆಗೆ ಸಿದ್ಧತೆಗಳು ನಡೆಯುತ್ತಿದ್ದಂತೆ ಗುತ್ತಿಗೆದಾರನಿಂದ ಇಲಾಖೆಯ ಅಧಿಕಾರಿಯೋರ್ವನಿಗೆ ಬುಲಾವ್ ಹೋಯಿತು. ಆತ ಬಂದು, ಕೊಳವೆ ತೆಗೆದು ಶುದ್ಧಪಡಿಸಿದ್ದನ್ನು ಖಾತ್ರಿಪಡಿಸಿಕೊಂಡದ್ದನ್ನು ದಾಖಲಿಸಿಕೊಳ್ಳುವುದೂ ನಡೆಯಿತು. ಸಾರ್ವಜನಿಕ ಕಾಮಗಾರಿಯಲ್ಲಿ ವಂಚನೆ ತಡೆಗೆ ಇಂಥ ಕ್ರಮ ಸರಿಯೇ ಇರಬಹುದು. ಆದರೆ ಅಂದೇ ಪತ್ರಿಕಾ ವರದಿ ನೋಡಿದಾಗ, ಎಲ್ಲೋ ಸಾವಿರಾರು ಶೌಚಾಲಯಗಳು ಭೂಮಿಗಿಳಿಯದೆ, ಕೇವಲ ಬಿಲ್ಲು ಮತ್ತದರ ಪಾವತಿ ಮಟ್ಟದಲ್ಲೇ ಯಶಸ್ವಿಯಾಗಿ ಆಡಳಿತದಾರರ (ಅಧಿಕಾರಿ-ಪುಡಾರಿಗಳ ದಿವ್ಯ ಸಂಗಮದಲ್ಲಿ) ಜಠರಾಗ್ನಿ ತಣಿಸಿದ್ದು ಕಂಡು ದಿಕ್ಕೆಟ್ಟು ಹೋದೆ. ಬಹುಶಃ ಇಂಥಲ್ಲೇ ವೇದಕ್ಕೂ ಮೇಲಿನ ಗಾದೆ ಹುಟ್ಟಿದ್ದು – ತಾನು ಕಳ್ಳ, ಪರರ ನಂಬ.

ಬೆಳಗ್ಗೆ ತುಂಡರಿಸಲ್ಪಟ್ಟ ಈ ಕೊಳವೆ ಸಾಲು ಮತ್ತೆ ಬೆಸುಗೆಗೊಳ್ಳುವಾಗ ಸಂಜೆಯಾಗಿತ್ತು. ಈ ಉದ್ದಕ್ಕೂ ಕೊಳಚೆ ನೀರಿನ ಹರಿವು ಎಲ್ಲೂ ಯಾರೂ ತಡೆದದ್ದಿಲ್ಲ. ಹಾಗೆಂದು ಮಣ್ಣ ಚರಂಡಿ ಕೆಳವಲಯದಲ್ಲಿ ತುಂಬಿಹೋಗದಂತೆ ಕೂಲಿಗಳು ಒಂದು ಜಾಣತನ ಮಾಡಿದ್ದರು. ಕೆಲಸದ ವಲಯದಿಂದ ಹೊರಹೋಗುವ ಕೊಳವೆ ಬಾಯಿಯ ಕೆಳ ಅರ್ಧಕ್ಕೊಂದು ತುಂಡು ಇಟ್ಟಿಗೆಯ ಮರೆ ಇಟ್ಟಿದ್ದರು. ಹರಿದು ಬರುತ್ತಿದ್ದ ನೀರಿನ ಬಹ್ವಂಶವನ್ನು ಮಣ್ಣ ಚರಂಡಿಯೇ ಹೀರಿಕೊಳ್ಳುತ್ತಿತ್ತು. ಹಾಗೂ ಉಳಿದ ನೀರು ಕೆಳ ತುದಿ ಮುಟ್ಟಿ, ಇಟ್ಟಿಗೆಯ ಎತ್ತರಕ್ಕೇರಬೇಕಿತ್ತು. ಆಗ ಘನ ಕೊಳಚೆಯೆಲ್ಲ ಕೆಳಗೆ ತಂಗಿ, ಹಣಿಯಾದ ನೀರು ಮಾತ್ರ ಮತ್ತೆ ಕೊಳವೆ ಸೇರಿ ಮುಂದುವರಿಯುತ್ತದೆ ಎನ್ನುವುದು ಅವರ ತರ್ಕ. ನೀರು ಹೋದದ್ದಂತೂ ನಿಜ. ಆದರೆ ಆ ಕೆಸರ ಚರಂಡಿಯ ಉದ್ದಕ್ಕೆ ದಿನವಿಡೀ ನಡೆದ ಚಟುವಟಿಕೆಯಲ್ಲಿ ಸಾಕಷ್ಟು ಮಣ್ಣೂ ಇಟ್ಟಿಗೆ ಮೀರಿ ಹೋಗಿರದೇ? ಶುದ್ಧಪಡಿಸಿದ ಕೊಳವೆಗಳನ್ನು ಕೆಸರ ನಡುವೆ ಮರುಜೋಡಿಸುವ ಹಂತದಲ್ಲೂ ಕೊಳವೆ ಜಾಲದೊಳಗೆ ಹೊಸದಾಗಿ ಮಣ್ಣು ಸೇರಿಕೊಳ್ಳದೇ? ಬಹುಶಃ ಕಾಮಗಾರಿಯ ಆದೇಶವನ್ನು – ಹಳೆ ಕೆಸರನ್ನು ಹೊರತಳ್ಳುವುದಷ್ಟಕ್ಕೆ ಸೀಮಿತಗೊಳಿಸುವುದು ಅನಿವಾರ್ಯವಿರಬಹುದು!

ಕೊಳವೆ ಮರುಜೋಡಣೆ ಇನ್ನೊಂದೇ ದುರಂತ. ಸುಮಾರು ನೂರಡಿ ಉದ್ದದ ಸಾಲಿನ ಅಂದರೆ ಇಪ್ಪತ್ತೈದು-ಮೂವತ್ತು ಕೊಳವೆಗಳ ಬೆಸುಗೆಗೆ ಕಂತ್ರಾಟುದಾರ ಆ ಕ್ಷಣಕ್ಕೆ ಎಲ್ಲಿಂದಲೋ ಸುಮಾರು ನಾಲ್ಕೈದು ಕಿಲೋಗ್ರಾಮಿನಷ್ಟು ಸಿಮೆಂಟ್ ತಂದು ಕೊಟ್ಟ. ಕೂಲಿಯಾಳುಗಳು ಅಲ್ಲಿ ಇಲ್ಲಿ ಮಳೆನೀರ ಹರಿವಿನಂಚಿನಲ್ಲಿ ತುಸು ಮರಳಿನಂತೆ ತೋರುತ್ತಿದ್ದ ಮಣ್ಣನ್ನೇ ನಾಲ್ಕೈದು ಬಾಂಡ್ಲಿ ಸಂಗ್ರಹಿಕೊಂಡರು. ಮತ್ತೆ ಕಣ್ಣಂದಾಜಿನ ಕಸವನ್ನು ಬೇರ್ಪಡಿಸುತ್ತ ಸಿಮೆಂಟ್ ಕಲಸಿಯೇ ಬಿಟ್ಟರು. ಕೊಳವೆಗಳಲ್ಲಿ ಸಣ್ಣಪುಟ್ಟ ಒಡಕು, ಹೋಳು ಹೋದವನ್ನೆಲ್ಲ ಬಲು ಜಾಣತನದಿಂದ ಮರುಬಳಸಿದರು! ಕೊಳವೆಗಳ ಸಾಲು ಜೋಡಿಸಿ, ಹಗ್ಗ ಕಟ್ಟಿ ಸಾಲಿನ ಡೊಂಕುಗಳನ್ನು ಸರಿಪಡಿಸಿ, ಸಂದುಗಳಿಗೆಲ್ಲ ಸಿಮೆಂಟ್ ಬೆಸುಗೆಗಿಳಿದರು. ಮುಷ್ಠಿಯಲ್ಲಿ ಸಿಮೆಂಟ್ ಪಾಕ ಹಿಡಿದು, ಕೊಳಚೆ ನೀರಿನಿಂದ ಮೇಲೆ ಕಾಣುವಷ್ಟು ಅಂಶಕ್ಕೆ ಬೆರಳುಗಳಲ್ಲೇ ಕಲಾತ್ಮಕವಾಗಿ ತುಂಬುತ್ತಿದ್ದ. ನೀರಿನಲ್ಲಿ ಮುಳುಗಿದ್ದಷ್ಟೂ ಭಾಗಕ್ಕೆ ಬೆಸುಗೆಯ ಭಾಗ್ಯ ಇಲ್ಲ. ಹೀಗೆ ಬೆಸುಗೆಯ (ಸಿಮೆಂಟ್ ಟೊಪ್ಪಿ) ಶಾಸ್ತ್ರ ಮುಗಿಯುತ್ತಿದ್ದಂತೆ ಎರಡು ಬದಿಯಲ್ಲಿ ರಾಶಿ ಬಿದ್ದಿದ್ದ ಹಳೆಯ ಮಣ್ಣು (ಕಲ್ಲು, ಕಸ ಹೊಸದಾಗಿ ಸೇರಿದ್ದ ಕೊಳಚೆಯ ಗಸಿ ಸಮೇತ) ಎಳೆದು ಚರಂಡಿ ತುಂಬಿಯೇ ಬಿಟ್ಟರು. ಇಂದಿನ ಕಾಮಗಾರಿ ನಿಸ್ಸಂದೇಹವಾಗಿ ನಾಳೆಯದಕ್ಕೆ ಅಥವಾ ಇನ್ನೂ ಹೆಚ್ಚಿನದಕ್ಕೆ ಪೀಠಿಕೆ! ಇವೆಲ್ಲ ಏನೇ ಹಾಳಾಗಲಿ, ಅದನ್ನು ನಡೆಸುವ ತೋಟಿಗಳ ಇಂದಿನ ಜೀವನ?

ತೋಟಿಗಳು ಮನುಷ್ಯರೇ!: ಕೂಲಿಯಾಳುಗಳು ಸ್ವಂತ ಖರ್ಚಿನಲ್ಲಿ ಧಾರಾಳ ಸೇದುತ್ತಿದ್ದ ಬೀಡಿ ಬಹುಶಃ ಅವರಿಗೆ ಸುವಾಸಿತ ಸಾಂಬ್ರಾಣಿ ಮತ್ತು ಕ್ರಿಮಿನಾಶಕವಿರಬೇಕು. ಇನ್ನೂ ತುಸು ಮುಂದುವರಿದು ಹೇಳುವುದೇ ಆದರೆ ಅಕ್ಷರಶಃ ಊರಿನ ಹೇಲುಗುಂಡಿಯಲ್ಲಿ ಹೊರಳುವ ಅವರ ‘ಸ್ಥಿತಪ್ರಜ್ಞೆ’ಗೆ ಮತ್ತೆ ಸ್ವಂತ ಖರ್ಚಿನಲ್ಲೇ ಅವರು ಸೇವಿಸಿರಬಹುದಾದ ಮದ್ಯವೂ ಕಾರಣವಿರಬಹುದು. ನಿತ್ಯ ಆ ಕಲ್ಲು, ಮಣ್ಣು, ಕಸರಾಶಿಯೆಡೆ ಕೆಲಸದಲ್ಲಿ ಓಡಾಡುವ ಇವರಿಗೆ ಕನಿಷ್ಠ ಪಾದರಕ್ಷೆಗಳೂ ಇರಲಿಲ್ಲ. ಸಣ್ಣ ಪುಟ್ಟ ತರಚುಗಳು ಏನಲ್ಲದಿದ್ದರೂ ಕೊಳವೆ ಕೆದಕುವ ಭರದಲ್ಲಿ ಕೈಯಲ್ಲಿ ಹಿಡಿದ ಒರಟು ಹತ್ಯಾರೇ ಇವರಿಗೆ ಉಂಟುಮಾಡಬಹುದಾದ ಗೀರುಗಾಯಗಳ ಲೆಕ್ಕ ಇಟ್ಟವರೇ ಇಲ್ಲ. ಇವರಿಗೆ ಕೈಯ್ಯ ಕೊಳೆ ಅಸಹ್ಯವಾದಾಗ ಪಕ್ಕದ ಹುಡಿ ಮಣ್ಣೇ ‘ಟವೆಲ್’. ಇನ್ನು ಆಗೀಗ ಇವರದೇ ಮೈಯ ಹಳೇ ಕಜ್ಜಿಯೋ ಸೊಳ್ಳೆ ಕಡಿತವೋ ನವೆಯಾದರೆ ತುರಿಸಿಕೊಳ್ಳುವುದು, ದುರ್ನಾತದ ಬದಲಿಗಾಗಿ ಬೀಡಿ ಕಚ್ಚುವುದು ಯಾವುದೇ ಅಡುಗೆ ಭಟ್ಟರಷ್ಟೇ ಸಹಜವಾಗಿ ಇವರು ಮಾಡಿಕೊಳ್ಳುತ್ತಿದ್ದರು. ಭಟ್ಟರ ಕೊಳಕು ದಿವ್ಯವಾಗಿಯೂ ಭವ್ಯವಾಗಿಯೂ ಸಾರ್ವಜನಿಕಕ್ಕೆ ಖಾದ್ಯವೆನ್ನಿಸುತ್ತದೆ. ಆದರೆ ತೋಟಿಗಳ ಕೊಳಕು (ಸಾಮಾಜಿಕ ಅಸ್ಪೃಶ್ಯತೆ ಬಿಡಿ, ಅದು ಇನ್ನೊಂದೇ ಭೀಕರ ಮುಖ) ಇವರದೇ ಆರೋಗ್ಯ, ಜೀವನವನ್ನು ಇನ್ನಷ್ಟು ಕೆಳಕ್ಕೆ ತಳ್ಳುತ್ತದೆ. ನಾವು ಮನೆಯವರು, ಬಹುತೇಕ ದಾರಿಹೋಕರು ಅವರು ನಮ್ಮೆಲ್ಲರ ಹೊಲಸನ್ನು ಶುದ್ಧಪಡಿಸುವುದನ್ನು ಒಂದು ತೆರನ ಅಪರಾಧೀ ಭಾವದಿಂದಲೇ ನೋಡುತ್ತಿದ್ದೆವು. (ಎಲ್ಲೋ ಕೆಲವರು ಮಾತ್ರ ಮೂಗಿಗೆ ಕರವಸ್ತ್ರ ಹಿಡಿದು, ಮುಖ ಓರೆ ಮಾಡಿ ಹಾದುಹೋಗುವ ಕ್ರಮದಲ್ಲಿ ಈ ವಾಸನೆ, ಹೇಸಿಗೆಗೆಲ್ಲ ಆ ಕೂಲಿಗಳೇ ಕಾರಣರೋ ಎಂಬ ಭಾವ ಕಾಣುತ್ತಿತ್ತು!) ಎಲ್ಲೋ ಒಮ್ಮೆ ಆ ಮಡ್ಡಿಯೆಡೆಯಲ್ಲಿ ಹರಿತವಾದ ಶೇವಿಂಗ್ ಬ್ಲೇಡೊಂದು ಕಾಣಿಸಿದಾಗ ಕೂಲಿಗಳ ಬಗೆಗಿನ ಅನುಕಂಪದಲ್ಲಿ ನಾನು “ಓಹ್!” ಎಂದು ಉದ್ಗರಿಸಿಬಿಟ್ಟೆ. ಚರಂಡಿಯೊಳಗಿದ್ದವ ಸೊಂಟ ನೇರ ಮಾಡಿ ನಿಂತು, ಕೈಯ್ಯ ಕೆಸರನ್ನು ಅತ್ತಿತ್ತ ಹುಡಿ ಮಣ್ಣಿಗೆ ಒರೆಸಿ, ಚಡ್ಡಿ ಜೇಬಿಗೆ ಕೈಯಿಳಿಸಿ ಬೀಡಿ, ಬೆಂಕಿಪೊಟ್ಟಣ ತೆಗೆಯುತ್ತ ಹೇಳಿದ. “ಅಯ್ಯೋ ಇದೆಲ್ಲ ತುಂಬಾ ಕ್ಲೀನ್ ಬಿಡಿ ಸಾರ್, ಮಸಿಯಾಗೈತೆ! ಕೆಲವು ಕಡೆ ಟಯರು, ಬಾಟ್ಳು, ಪ್ಲ್ಯಾಸ್ಟಿಕ್, ಹಳೇಬಟ್ಟೆನೆಲ್ಲಾ ತುರುಕಿ, ಕೋಲಾಕಿ ಜ್ಯಾಂ ಮಾಡಿರ್ತಾರೆ ಸಾರ್. ನಾವು ಬಿಡುಸಕ್ಕೋದ್ರೆ ನಮ್ಮುಖ ಮೈಗೆಲ್ಲಾ ಹಸಿ ಹಸಿ ಉಕ್ಕಿಬರುತ್ತೆ ಸಾರ್…”

ಇವೆಲ್ಲ ‘ಗಣ್ಯ ಸಮಾಜ’ಕ್ಕೆ ಕಾಣುವ ಮುಖ. ಹೋಗಲಿ, ಅಷ್ಟೆಲ್ಲಾ ಮಾಡಿದವರಿಗೆ ಅನಂತರ (ಕೆಲಸದ ಸ್ಥಳದಲ್ಲಿ ಬಿಡಿ, ಸುಸ್ಥಿರ ಮನೆ ಎಂಬುದಿದ್ದರೆ) ಮನೆಯಲ್ಲಾದರೂ ಆರೋಗ್ಯಪೂರ್ಣ ಶುಚಿತ್ವಕ್ಕೆ, ಕನಿಷ್ಠ ಸ್ವಸ್ಥ ಒಂದು ಸ್ನಾನಕ್ಕಾದರೂ ಸರಿಯಾದ ಅವಕಾಶ ಇರಬಹುದು ಎಂದು ನಾನು ನಂಬುವುದಿಲ್ಲ.

ಅದಿರಲಿ, ಕಾರ್ಯಕ್ಷೇತ್ರವನ್ನೇ ಹೆಚ್ಚು ಆರೋಗ್ಯಪೂರ್ಣ ಮಾಡುವತ್ತ ಯೋಚಿಸಿ. ಮಂಗಳೂರಿನಲ್ಲಿ ಈ ಕೊಳಚೆ ನೀರನ್ನೇ ಮೋಟಾರಿಟ್ಟು ಹೀರಿ ತುಂಬಿ ಒಯ್ಯುವ ಟ್ಯಾಂಕರ್ಗಳನ್ನು ನೋಡಿದ್ದೇನೆ. ದಾರಿ ಕಾಂಕ್ರೀಟ್ ಮಾಡುವ ಕಾಲದಲ್ಲಿ ಹಳೆಯ ಕೊಳವೆಸಾಲುಗಳನ್ನು ಮರುಜೋಡಿಸುವ, ಆಳುಗುಂಡಿಗಳನ್ನು ಮರುರೂಪಿಸುವಲ್ಲೆಲ್ಲ ಯಂತ್ರಗಳನ್ನೇ ಉಪಯೋಗಿಸುವುದೂ ಕಂಡಿದ್ದೇನೆ. ಆದರೂ ಮುಂದೊಂದು ದಿನ ನನ್ನಂಗಡಿಯ ಎದುರಿನ ಆಳುಗುಂಡಿಯ ಸಮಸ್ಯೆಗೆ ಅಂಥವೆಲ್ಲಾ ಇದ್ದೂ ಪರಿಹಾರ ಆಗಲಿಲ್ಲ ಎಂದಾಗ ತೋಟಿಯೊಬ್ಬ ಬರಿಯ ಚಡ್ಡಿ ಹಾಕಿ, ಸುಮಾರು ಹೊಟ್ಟೆಮಟ್ಟದ ಆ ಕೊಳಚೆಯೊಳಗೇ ಇಳಿದು ನಿಂತು ಕೆಲಸ ನಡೆಸಿದ ನೋಟ ನಾನೆಂದೂ ಮರೆಯಲಾರೆ. ನಮ್ಮ ಬಹುತೇಕ ಆಡಳಿತಗಳು ಘೋಷಿಸುವ ಉದಾತ್ತ ಧ್ಯೇಯಗಳು (ಮಲ ಹೊರುವುದು, ಕೊಳಚೆಯ ಕೈಯಾರೆ ನಿರ್ವಹಣೆಯ ಕುರಿತ ನಿಷೇಧ – ಸಣ್ಣ ಉದಾಹರಣೆ) ಮತ್ತು ಖರೀದಿಸುವ ಬಹುತೇಕ ಆಧುನಿಕತೆಗಳು ಮಾನವೀಯ ಗೌರವದಿಂದ ಖಂಡಿತವಾಗಿಯೂ ಉದ್ದೀಪ್ತವಾಗಿರುವುದಿಲ್ಲ. ಇನ್ನೂ ಕೆಟ್ಟ ಚಾಳಿಯೆಂದರೆ ಖರೀದಿಸಿದವುಗಳ ಸಮರ್ಪಕ ಬಳಕೆ ಮತ್ತು ನಿರ್ವಹಣೆ ಮಾಡುವುದೇ ಇಲ್ಲ. (೧೦-೧೧-೨೦೧೩ರ ವಿಜಯಕರ್ನಾಟಕದ ಒಂದು ವರದಿ ಲಗತ್ತು: ನೋಡಿ)

ಮೈಸೂರಿನಲ್ಲಿ ಕೊಳಚೆ ನೀರು ಹೀರುವ, ನೆಲ ಅಗೆದು ಕೊಳವೆ ಎತ್ತುವ ಯಂತ್ರಗಳು ಇಲ್ಲವೇ? ಇದ್ದುದೇ ಆಗಿದ್ದರೆ ನಾ ಕಂಡ ಕಾಮಗಾರಿಯಲ್ಲಿ ಅವು ಯಾಕೆ ಬಳಕೆಗೆ ಬರಲಿಲ್ಲ? ಮೇಲಿನೊಂದು ಆಳುಗುಂಡಿಯ ಬಳಿ ಕೊಳಚೆ ಹೀರುವ ಲಾರಿ ನಿಂತು ಕೆಲಸದ ಪರಿಸರವನ್ನು ನಿರ್ದ್ರವವಾಗುಳಿಸಬಹುದಿತ್ತು. ಯುಕ್ತ ಕೈಯುಳ್ಳ ಜೆಸಿಬಿ ಬಿಟ್ಟು ಕ್ಷಣಾರ್ಧದಲ್ಲಿ ಚರಂಡಿ ತೋಡುವುದೂ ಹಳೆ ಕೊಳವೆಗಳನ್ನು ಎತ್ತುವುದೂ ಹೊಸತನ್ನು ಕೂರಿಸುವುದೂ ಧಾರಾಳ ಮಾಡಬಹುದಿತ್ತು. ಅವೆಲ್ಲ ಬಿಟ್ಟು ಅಲ್ಲಿ ದುಡಿದವರನ್ನೇ ಎಣಿಸಿ ಹೇಳುವುದಿದ್ದರೂ ಆರು ಜೊತೆ ಗಂಬೂಟ್ ಅಷ್ಟೇ ಕೈಗವುಸು, ಕೈಕೆಲಸಕ್ಕಾದರೂ ಯುಕ್ತ ಹತ್ಯಾರು, ಧಾರಾಳ ಬದಲಿ ಕೊಳವೆಗಳು, ಧಾರಾಳ ಮರಳು, ಸಿಮೆಂಟ್ ಇತ್ಯಾದಿ ಒದಗಿಸಲಿಲ್ಲ ಯಾಕೆ? ಇಲ್ಲಿ ಬಡತನ ಆಡಳಿತದ್ದೇ ಅಲ್ಲಿನ ಬಾಬು ಮತ್ತು ‘ಜನಪ್ರತಿನಿಧಿ’ಗಳ ಬುದ್ಧಿಯದ್ದೇ?

ಮಂಗಳೂರಿನ ಎಕ್ಕೂರು ಬಳಿಯ ಕೊಳಚೆ ಶುದ್ಧೀಕರಣಾಗರದಲ್ಲಿ ನನ್ನೋರ್ವ ಗೆಳೆಯ ಹಿಂದೆ ದುಡಿಯುತ್ತಿದ್ದರು. ಆಗ ಅವರು “ಈಚಿನ ದಿನಗಳಲ್ಲಿ ನಮ್ಮಲ್ಲಿಗೆ ಬರುವ ನೀರು ಸಂಪೂರ್ಣ ರೋಗಮುಕ್ತ! ಅಂದರೆ ಯಾವುದೇ ಕಾಯಿಲೆಯುಂಟು ಮಾಡುವ ಸೂಕ್ಷ್ಮಾಣೂ ಅದರಲ್ಲಿ ಬದುಕಿರುವುದು ಸಾಧ್ಯವೇ ಇಲ್ಲ. ಕಾರಣ ತುಂಬ ಸರಳ – ಅವು ಹಾದು ಬರುವ ದಾರಿಯಲ್ಲಿನ ಆಸ್ಪತ್ರೆ, ಜಾಗೃತ ನಾಗರಿಕರು ತಮ್ಮ ತಮ್ಮ ವಲಯದಲ್ಲಿ ಬಳಸುವ ಫಿನಾಯಿಲ್ ಮುಂತಾದ ಕೀಟನಾಶಕಗಳು. ತಮಾಷೆ ಎಂದರೆ ಕುಡಿಯುವ ನೀರಿನ ಪ್ರಾಥಮಿಕ ಪರೀಕ್ಷೆಯಲ್ಲಿ ರೋಗಾಣುಮುಕ್ತಿಯನ್ನೇ ಬಯಸುವವರ ಮಟ್ಟಿಗೆ ಇದನ್ನು ಕುಡಿಯುವ ನೀರಿನ ಕೊಳಾಯಿಗೆ ಜೋಡಿಸಬಹುದು! ಆದರೆ ಇದನ್ನು ಸೇವಿಸಿ ಸಾಯುವವರ ಬಗ್ಗೆ ವೈದ್ಯಕೀಯ ವರದಿ ಹೆಚ್ಚೆಂದರೆ – “ವಿಷಪ್ರಯೋಗ” ಎಂದಷ್ಟೇ ಬಂದೀತು! (ಎಂಡೋ ಸಲ್ಫಾನ್ ಪ್ರಭಾವದಿಂದ ಸತ್ತವರ ವರದಿಗಳಲ್ಲೆಲ್ಲ ಹೆಚ್ಚಿನ ವೈದ್ಯಕೀಯ ವರದಿಗಳು ಸ್ಪಷ್ಟವಾಗಿ ಮರಣ ಕಾರಣವನ್ನು ಹೃದಯಸ್ತಂಭನ, ಕ್ಯಾನ್ಸರ್, ನರದೌರ್ಬಲ್ಯ ಎಂದಿತ್ಯಾದಿ ಹೇಳುತ್ತವಂತೆ. ಕಾರಕವನ್ನು ಶೋಧಿಸುವ, ಹೆಸರಿಸುವ ಬಗ್ಗೆ ಮೌನ ತಾಳುತ್ತವೆ; ರಾಜರಹಸ್ಯ!) ಬಹುಶಃ ನಾ ಕಂಡ ಮೈಸೂರಿನ ತೋಟಿಗಳು ಕೆಲಸ ಮಾಡುವಷ್ಟಾದರೂ ನೀರೋಗಿಗಳಾಗಿ ಬದುಕಿರುವ ಗುಟ್ಟೂ ಅದೇ ಇರಬೇಕು – ಅವರು ಆ ನೀರನ್ನು ಎಲ್ಲಾ ರೀತಿಯಲ್ಲೂ ಸಂಪರ್ಕಿಸುತ್ತಾರೆ; (ತೀರಾ ವಿಷಾದದಲ್ಲಿ ಹೇಳುತ್ತೇನೆ -) ಕುಡಿಯುವುದಿಲ್ಲ. ವೃತ್ತಿ ಭದ್ರತೆ, ಕನಿಷ್ಠ ಜೀವನಾವಶ್ಯಕತೆಗಳ ಕೊರಗಿನಲ್ಲಿ ಪ್ರತಿಭಟನೆಯಾಗಿ ಈ ನೌಕರರು ಎಲ್ಲೆಲ್ಲೋ ಸಾರ್ವಜನಿಕದಲ್ಲಿ ‘ಮಲಸ್ನಾನ’ ಮಾಡಿದ್ದರ ವರದಿಗಳನ್ನು ನೋಡಿದ್ದುಂಟು.

ದೌರ್ಭಾಗ್ಯದ ಉತ್ತುಂಗದಲ್ಲಿ ಅದನ್ನೇ ತಿಂದು, ಕುಡಿಯುವ ಸ್ಥಿತಿಯೂ ಬರುವಂತಾಗಬಾರದು, ಆಗಬಾರದು.