ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೊಂಬತ್ತು
ಅಧ್ಯಾಯ ೮೭ (ಮೂಲದಲ್ಲಿ ೫೯)

ನಮ್ಮ ಎರಡನೆಯ ಮಗ ಆನಂದ. ಇವನ ಮಡದಿ ಜಯಶ್ರೀ, ಮಗಳಂದಿರು ಅನರ್ಘ್ಯ ಮತ್ತು ಐಶ್ವರ್ಯ. ಈತ ಗಣಕ ವಿಜ್ಞಾನಿ, ಜಯಶ್ರೀ ಗೃಹಿಣಿ. ಈ ಕುಟುಂಬ ೧೯೯೦ರ ವೇಳೆಗೆ ಹೊಸ ಹಸುರು ಅರಸಿ ಪಡುವಲಿಗೆ ಪಯಣಿಸಿ ಅಮೆರಿಕದ ಪೋರ್ಟ್ ಲ್ಯಾಂಡಿನಲ್ಲಿ (ಓರೆಗಾನ್) ನೆಲಸಿತು. ಪ್ರತಿಷ್ಠಿತ ಇಂಟೆಲ್ ಕಂಪೆನಿಯಲ್ಲಿ ಇವನೊಬ್ಬ ತಂತ್ರಾಂಶ ಎಂಜಿನಿಯರ್. ಮಕ್ಕಳ ಶಿಕ್ಷಣ ಅಲ್ಲೇ. ಇವರ ಮನೋಧರ್ಮ ಹೇಗಿತ್ತು, ಮತ್ತು ಇದೆ? ಅಶನ ವಸನ ವಸತಿ ಅಲ್ಲಿ (ಅಮೆರಿಕ), ಆದರೆ ಉಸಿರು ಮಾತ್ರ ಇಲ್ಲಿ (ಭಾರತ). ಮನೆಯಲ್ಲಿ ಸಂಪೂರ್ಣ ಭಾರತೀಯ ಸಂಸ್ಕೃತಿ, ಕನ್ನಡದ ಕಂಪು, ಅಲ್ಲಿಯ ಕನ್ನಡ ಮತ್ತು ಕಲಾಸಂಘಗಳಲ್ಲಿ ಸಕ್ರಿಯ ಪಾತ್ರ ಮುಂತಾದವು ಇವರ ಜೀವನ ಶೈಲಿ, ಹಕ್ಕಿನ ರಜಾದಿನಗಳಲ್ಲಿ ಭಾರತಕ್ಕೆ ಮರಳಿ ಇಲ್ಲಿಯ ಆತ್ಮೀಯ ಸಾಂಸ್ಕೃತಿಕ ಹವೆಯಲ್ಲಿ ಯಥೇಚ್ಛವಾಗಿ ಮಿಂದು ಪುನೀತರಾಗಿ ನವೋತ್ಸಾಹದೀಪ್ತರಾಗಿ ಮರಳುವುದು ವಾಡಿಕೆ.

ಸಹಜವಾಗಿ ಇವರ ಒಂದು ಉತ್ಕಟ ಅಪೇಕ್ಷೆ ನಮ್ಮಿಬ್ಬರನ್ನೂ ಅಂತೆಯೇ ಜಯಶ್ರೀಯ ತಾಯಿ ತಂದೆಯರನ್ನೂ ಅಮೆರಿಕಕ್ಕೆ ಕರೆಸಿಕೊಂಡು ತಮ್ಮ ಹೊಸಗೂಡಿನ ನವಗಾನದ ಸೊಗಸನ್ನು ಉಣಿಸುವುದು. ಇಂಥ ಎಲ್ಲ ಪ್ರೀತಿಯ ಆಹ್ವಾನಗಳಿಗೂ ನನ್ನ ಸಿದ್ಧ ದೃಢ ಉತ್ತರ ಒಂದೇ, “God is my enemy number one, and travel enemy number two. I keep away from both.” ಅವರ ಒತ್ತಾಯ ತೀರ ಜಾಸ್ತಿ ಆದಾಗ ನಾನೊಂದು ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದೆ, “ಮಕ್ಕಳೇ! ನಮ್ಮ ಮೇಲೆ ನೀವು ವೆಚ್ಚ ಮಾಡಬೇಕೆಂದಿರುವ ಈ ಹಿರಿ ಮೊಬಲಗನ್ನು ನಿಮಗೆ ಪ್ರಿಯವಾದ ಯಾವುದೇ ಭಾರತೀಯ ಸಂಸ್ಥೆಗೆ ದಾನಮಾಡಿಬಿಡಿ. ಇಂಥ ಸೇವೆ ಶಾಶ್ವತ, ನಮ್ಮ ಪ್ರಯಾಣದಿಂದ ನಿಮಗೆಲ್ಲ ದೊರೆಯುವ ಸಂತೋಷವಾದರೋ ಕೇವಲ ಕ್ಷಣಿಕ.”

ಈ ಪ್ರೇಮಕಲಹ ಮುಂದುವರಿಯುತ್ತಿದ್ದಂತೆ ಆನಂದ ಇನ್ನೊಂದು ನಿರಾಕರಿಸಲಾಗದ ಮತ್ತು ಆಗ ನಾನು ಪೂರ್ತಿ ಅಸಂಭವನೀಯವೆಂದು ಭಾವಿಸಿದ್ದ ಯೋಜನೆಯನ್ನು ನನ್ನ ಮುಂದಿಟ್ಟ, “ನೀವೀಗ ನೊಬೆಲ್ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಅವರ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಬರೆಯುತ್ತಿದ್ದೀರಿ. ಆ ಮಹಾ ವಿಜ್ಞಾನಿಯ ಸಾಧನೆ ಸಿದ್ಧಿಗಳನ್ನು ಅವರ ಕಾರ್ಯಕ್ಷೇತ್ರದಲ್ಲೇ ನೋಡಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾದರೂ ಇಲ್ಲಿಗೆ ಬನ್ನಿ.”

ಆಮಿಷ ಅನಿರಾಕರಣೀಯವೆನಿಸುವಷ್ಟು ಆಕರ್ಷಕವಾಗಿತ್ತು. ಆದರೆ ನನ್ನ ನಿರ್ಧಾರ ಅಷ್ಟೇ ದೃಢವಾಗಿ ವಿಕರ್ಷಕವೂ ಆಗಿತ್ತು. ಈ ಇಕ್ಕಟ್ಟಿನಿಂದ ಪಾರಾಗಲು ಅವನಿಗೊಂದು ಅನೂಹ್ಯ ಮತ್ತು ಅಸಾಧ್ಯ ಷರತ್ತು ಹಾಕಿದೆ, “ನೋಡು, ನಾನೀಗ ಚಂದ್ರಶೇಖರ್‌ರಿಗೆ ನನ್ನ ಆಸಕ್ತಿ ಬಗ್ಗೆ ಒಂದು ಸುದೀರ್ಘ ಪತ್ರ ಬರೆದಿದ್ದೇನೆ. ಅವರ ವೈಜ್ಞಾನಿಕ ವ್ಯಕ್ತಿತ್ವ ಬೆಳೆದು ಅಭಿವರ್ಧಿಸಿರುವ ಪರಿ ಕುರಿತ ವಿವರಗಳನ್ನು ಕಳಿಸುವ ಕೃಪೆ ಮಾಡಬೇಕೆಂದು ಕೋರಿದ್ದೇನೆ. ಅಲ್ಲದೇ ನನ್ನ ಪುಸ್ತಕಕ್ಕೊಂದು ಸ್ವಹಸ್ತಲಿಖಿತ ಸಂದೇಶ ದಯಪಾಲಿಸಬೇಕೆಂದೂ ಪ್ರಾರ್ಥಿಸಿದ್ದೇನೆ. ಅವರಿಂದ ಬಂದ ಮಾರೋಲೆ ಮಾತ್ರ ನಿರಾಶಾದಾಯಕವಾಗಿದೆ. ನೀನೇನಾದರೂ ನನಗೆ ಅವರ ಜೊತೆ ಒಂದು ಭೇಟಿ ಏರ್ಪಡಿಸಬಲ್ಲೆಯಾದರೆ ನಮ್ಮ ಅಮೆರಿಕ ಯಾನ ಅರ್ಥಪೂರ್ಣವಾಗುತ್ತದೆ.”

ಎಂದೂ ಕೈಗೂಡದ ಬಯಕೆ ಇದು, ಆದ್ದರಿಂದ ನಾವಿನ್ನು ಅಮೆರಿಕ ಬಾಧೆಯಿಂದ ಶಾಶ್ವತವಾಗಿ ಮುಕ್ತಿಪಡೆದು ನಿಶ್ಚಿಂತರಾಗಿರಬಹುದೆಂದು ಬಗೆದು ಚಂದ್ರಶೇಖರ್ – ಜೀವನ ಚರಿತ್ರೆ ಬರೆಯುವ ಪ್ರೀತಿಯ ಕೆಲಸದಲ್ಲಿ ಮಗ್ನನಾದೆ. ಇಷ್ಟಾಗುವಾಗ ೧೯೯೪ರ ಅಂತಿಮ ಪಾದ ನಡೆಯುತ್ತಿತ್ತು. ಆ ಒಂದು ಮುಂಜಾನೆ ಆನಂದನಿಂದ ಬಂದ ದೂರವಾಣಿ ನಿರ್ಣಾಯಕವಾಗಿತ್ತು, “ಶಿಕಾಗೋ ನಿವಾಸಿ ಚಂದ್ರಶೇಖರ್‌ರಿಗೆ ದೂರವಾಣಿಸಿ ಮಾತಾಡಿದೆ: ಅಮೆರಿಕಕ್ಕೆ ನೀವು ಬಂದಾಗ ನಿಮ್ಮನ್ನು ಭೇಟಿಯಾಗಲು ಅವರು ಒಪ್ಪಿದ್ದಾರೆ! ನಾಗೆದ್ದೆ!”

ಅಂದ ಮೇಲೆ ನಾನು ಸೋಲಲೇಬೇಕಷ್ಟೆ! ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ ಶೀರ್ಷಿಕೆಯ ಪುಸ್ತಕದ ಮುದ್ರಣವನ್ನು ತ್ವರೆಗೊಳಿಸಿ ನಾವಿಬ್ಬರೂ ಅಮೆರಿಕಯಾನಕ್ಕೆ ಸಿದ್ಧರಾದೆವು. ಮುಂದೊಂದು ದಿನ ಆ ಹೊಸ ನೆಲ, ಹೊಸ ಹವೆ ಮತ್ತು ಹೊಸ ಹಸುರಿನಲ್ಲಿ ಸಂಗಮಿಸಿ ಹೊಸಬರೇ ಆದೆವು.

ಜೂನ್ ೨೨ ೧೯೯೫ ಮತ್ತು ಅದರ ಮರುದಿನ ನಾನು ಆನಂದನೊಡಗೂಡಿ ಚಂದ್ರಶೇಖರರನ್ನು ಅವರ ಕಛೇರಿಯಲ್ಲಿಯೂ ಮನೆಯಲ್ಲಿಯೂ ಸಂದರ್ಶಿಸಿ ಕೃತಾರ್ಥರಾದೆವು. ಮೊದಲನೆಯ ದಿನ ಅವರ ಅತಿಥಿಯಾಗಿ ಮಧ್ಯಾಹ್ನದ ಭೋಜನಕ್ಕೆ ನಡೆದು ಹೋಗುತ್ತಿದ್ದಾಗ ನಾನೊಂದು ಮಾತು ನುಡಿದೆ, “On the longest day I am walking with the tallest man in the farthest place from our country!” ಜೂನ್ ೨೨ ರಂದು ಹಗಲು ಗರಿಷ್ಠ ಎಂಬ ಖಗೋಳ ವೈಜ್ಞಾನಿಕ ಸತ್ಯವನ್ನೂ ಅವರ ವ್ಯಕ್ತಿತ್ವದ ಹಿರಿಮೆಯನ್ನೂ ಬೆಸೆದ ನುಡಿನಮನವಿದು. ಆದರೆ ಆ ಮರ್ಯಾದಾಪುರುಷೋತ್ತಮನ ಪ್ರತಿಕ್ರಿಯೆ ಅವರ ಸ್ವಭಾವಕ್ಕನುಗುಣವಾಗಿ ಅತ್ಯಂತ ವಿನಯಪೂರ್ವಕವಾಗಿ ಈ ಉತ್ಪ್ರೇಕ್ಷೆಯನ್ನು ನಿರಾಕರಿಸಿತ್ತು, “That is how we mortals in our exaggerated ego about our small and insignificant achievements think of us. But the vast ocean of truth lies completely unexplored in front of us!”

ಜಗದ್ಭವ್ಯ ನ್ಯೂಟನ್‌ನ ಸುಪ್ರಸಿದ್ಧ ಉಕ್ತಿಯನ್ನು ಚಂದ್ರ ತಮ್ಮದೇ ಧಾಟಿಯಲ್ಲಿ ವ್ಯಾಖ್ಯಾನಿಸಿದ ಈ ಧಾಟಿ ಮಾರ್ಮಿಕವಾಗಿತ್ತು. ಇದೊಂದು ‘ಋಷಿವಾಕ್ಯ’ – ‘ಋಷಿವಾಕ್ಯ ವಿಜ್ಞಾನಕಲೆ ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ’ ನೆನಪಿಗೆ ಬಂತು. ನ್ಯೂಟನ್ ತನ್ನ ಸಾಧನೆಗಳ ಶಿಖರದಲ್ಲಿದ್ದಾಗ ಬರೆದ ಮಾತು, “ಇಲ್ಲಿ ನಾನೊಬ್ಬ ಕಡಲ ಕಿನಾರೆಯಲ್ಲಿ ಆಟವಾಡುತ್ತ ಕೈಗೆ ಸಿಕ್ಕಿದ ದುಂಡು ಕಲ್ಲು, ಕಪ್ಪೆಚಿಪ್ಪು ಮುಂತಾದ ವಿರಳ ಪದಾರ್ಥಗಳನ್ನು ಆಗ ಈಗ ಹೆಕ್ಕುತ್ತಿರುವ ಕಿರಿ ಹೈದ. ಆದರೆ ನನ್ನಿಯ ಹೆಗ್ಗಡಲಿಡೀ ನನ್ನೆದುರು ಅನನ್ವೇಷಿತವಾಗಿ ಮೈಚೆಲ್ಲಿಕೊಂಡಿದೆ.”

ಆ ಪರ್ವದಿನದಂದೂ (೨೨-೩-೧೯೯೫) ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ ಕೃತಿಯನ್ನು ಅವರಿಗೆ ಖುದ್ದಾಗಿ ಒಪ್ಪಿಸುವ ಭಾಗ್ಯ ನನ್ನದಾಗಿತ್ತು. ಮೈಸೂರಿಗೆ ಮರಳಿದ ಬಳಿಕ ಯಾನಾನುಭವ, ಅನ್ಯ ಸಂಸ್ಕೃತಿಯ ಕಿಂಚಿದ್ದರ್ಶನ ನಮ್ಮ ಮೇಲೆ ಮಾಡಿದ ಪರಿಣಾಮ ಮತ್ತು ಕಳಶಪ್ರಾಯವಾಗಿ ಚಂದ್ರದರ್ಶನ – ಸಂದರ್ಶನ ಕುರಿತ ಸಚಿತ್ರ ಗ್ರಂಥವನ್ನೂ ಬರೆದೆ: ‘ಸಪ್ತಸಾಗರದಾಚೆಯೆಲ್ಲೋ…” [ಪ್ರಕಾಶಕನ ಅಡಿ ಟಿಪ್ಪಣಿ: ಹೀಗೆ ಕನ್ನಡದ ಮೂಲ ಸತ್ತ್ವವನ್ನೇ ಮೈಗೂಡಿಸಿಕೊಂಡು, ಕಾರಣಿಕವಾಗಿಯೂ ಬಂದ ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ ೩೦೦ ಪುಟ ಬೆಲೆ ರೂ ಐವತ್ತೈದು ಮಾತ್ರ, ಅನಂತರದ ಸಪ್ತಸಾಗರದಾಚೆಯೆಲ್ಲೋ ೨೬೦ ಪುಟ ಬೆಲೆ ರೂ ಅರವತ್ತು ಮಾತ್ರ ಮತ್ತು ಇದೇ ಅನುಭವದ ಸಂಗ್ರಹಿತ ಸ್ವತಂತ್ರ ಇಂಗ್ಲಿಷ್ ಅವತರಣಿಕೆ (ಅನುವಾದ ಅಲ್ಲ) ಕ್ರಾಸಿಂಗ ದ ಡೇಟ್ಲೈನ್ ಪುಟ ೧೫೦ ಬೆಲೆ ರೂ ನಲ್ವತ್ತು ಮಾತ್ರ ಇಪ್ಪತ್ತು ವರ್ಷಗಳ ಅವಧಿ ದಾಟಿದರೂ ಮಾರಿಮುಗಿಯದ (ತಲಾ ಒಂದೊಂದು ಸಾವಿರ ಪ್ರತಿಗಳನ್ನಷ್ಟೇ ಮುದ್ರಿಸಿದ್ದೆ) ದುರ್ದಶೆ ಕನ್ನಡದ್ದು, ನಮ್ಮ ವಿದ್ಯಾವಂತಿಕೆಯದು. ಕೊಳ್ಳುವ ಜನಗಳ ಕೈಗೆ ಭಾರವಾಗಬಾರದು, ಓದುಗರನ್ನು ನಿರ್ಲಕ್ಷಿಸಿ ಪುಸ್ತಕವನ್ನು ‘ಮಾಲು’ ಮಾಡುವ ಯಾವುದೇ ಸಗಟು ಖರೀದಿಗಳಿಗೆ ‘ಗಿಟ್ಟ’ಬಾರದು, ಲೇಖಕನಿಗೆ (ತಂದೆಯೇ ಆದ್ದರಿಂದ) ಗೌರವಧನವಿಲ್ಲ ಪ್ರಕಾಶಕನಿಗೆ (ನಾನೇ) ಎಲ್ಲ ಮಾರಿಹೋದರೆ ಬಡ್ಡಿರಹಿತವಾಗಿ ತೊಡಗಿಸಿದ ಹಣವಷ್ಟೇ ಮರಳಿ ದಕ್ಕುವಂತೆ ಮುದ್ರಣ ಬೆಲೆ ಹಾಕಿದ್ದೇನೆ. ಸಹಜವಾಗಿ ಸರಳ ಸುಂದರ ಮುದ್ರಣವೇ ಆದರೂ ಕಾಗದದ ಗುಣಮಟ್ಟವನ್ನು ಸೀಮಿತಗೊಳಿಸಿದ್ದರಿಂದ ಅವೆಲ್ಲ ಇಂದು ತುಸು ಬಣ್ಣಗುಂದಿದ್ದರೂ ಬಾಳಿಕೆ ಹಾಗೂ ಓದಿಕೆಗೆ ಯಾವ ಕೊರತೆಯೂ ಬಾರದಂತೆ ಇನ್ನೂ ಕೆಲವೇ ಪ್ರತಿಗಳು ಉಳಿದಿವೆ. ಆಸಕ್ತರು ಕೂಡಲೇ ಪುಸ್ತಕದ ಬೆಲೆಯನ್ನಷ್ಟೇ ಮುಂಗಡವಾಗಿ ಕಳಿಸಿದರೆ (ವಿಳಾಸ ಇಲ್ಲೆ ಪುಸ್ತಕ ವಿಭಾಗದ ಕೊನೆಯಲ್ಲಿದೆ ಗಮನಿಸಿ) ಮರು ಟಪಾಲಿಗೆ ಸಾದಾ ಅಂಚೆಯಲ್ಲಿ ಕಳಿಸುವ ವೆಚ್ಚ ನನ್ನದು – ಅವ]

ಯಮಸದನ ನೋಡಿ ಬಂದೆ!
ಅಧ್ಯಾಯ ೮೮ (ಮೂಲದಲ್ಲಿ ೬೦)

ಇಪ್ಪತ್ತನೆಯ ಶತಮಾನ ಚಿರನೇಪಥ್ಯಕ್ಕೆ ಸರಿಯುತ್ತಿದ ದಿನಗಳು, ನನ್ನ ಪ್ರಾಯ ೭೦ನ್ನು ದಾಟಿ “ಅಯ್ಯಾ! ಇನ್ನು ನಿನ್ನ ಏರಾಟ ಹಾರಾಟ ಚೀರಾಟ ಮತ್ತು ಅಟಾಟೋಪಗಳಿಗೆ ಸ್ವಲ್ಪ ಬಿರಿ ಹಾಕು” ಎಂಬ ಎಚ್ಚರಿಗೆ ನುಡಿಗಳನ್ನು ಕಾಲು, ಕೀಲು ಮತ್ತು ಮುಖ್ಯವಾಗಿ ಶ್ವಾಸಕೋಶಗಳು ಒರಲಿ ಎಚ್ಚರಿಸುತ್ತಿದ್ದ ಜೀವನಸಂಧ್ಯಾಕಾಲ. ಆದರೆ ಮಾನವನ ಅಹಂಕಾರ, ಚಿರಂಜೀವಿತ್ವದ ಕನಸು, ಸಾಧನೆಯ ಅಮಲು ಮುಂತಾದವು ಆತನನ್ನು ಇಂಥ ನೈಜ ಸನ್ನಿವೇಶವನ್ನು ಸ್ವೀಕರಿಸದೇ ಮುನ್ನಡೆಯಲು ಕುಮ್ಮಕ್ಕು ನೀಡುವುದೇ ವಾಡಿಕೆ. “ನೋಡಿ ಈ ಎಪ್ಪತ್ತರಲ್ಲೂ ನಾನು ಸೈಕಲ್ಲಿನಲ್ಲೇ ನಗರವಿಡೀ ಸಂಚರಿಸುತ್ತಿದ್ದೇನೆ” ಎಂದು ಸ್ಕೂಟರ್-ಕಾರ್-ದಾಸ-ನರಪೇತಲರ ಮುಂದೆ ಸ್ವಪ್ರತಾಪ ಪ್ರದರ್ಶಿಸುವುದರಲ್ಲಿ ನನಗೊಂದು ಬಗೆಯ ಅಹಂ-ತೃಪ್ತಿ (ವಿಕೃತಾನಂದ?) ಲಭಿಸುತ್ತಿತ್ತು.

ಆದರೆ ಬಂಡಿ (ದೇಹ) ಈಗ ಚಾಲಕನ (ಮನಸ್ಸು) ಹಿಡಿತದಿಂದ ಹೊರಸರಿಯುತ್ತಿದೆಯೋ ಎಂಬ ಹತಾಶಭಾವ ಆಗೀಗ ಅಣಕಿಸುತ್ತಲೂ ಇತ್ತು. ವಾಸ್ತವ ಪರಿಸ್ಥಿತಿ ಹೀಗಿದ್ದರೂ ಲಕ್ಷಿಸದೆ “ಬಂದದ್ದೆಲ್ಲ ಬರಲಿ, ಗೋವಿಂದನ ದಯೆ ನನಗಿರಲಿ” ಎಂಬ ದಾಸವಾಣಿಯ ಮೌಲ್ಯಕ್ಕೆ ಶರಣಾಗಿ ನನ್ನ ಚಟುವಟಿಕೆಗಳನ್ನು ಮೂರೂ ರಂಗಗಳಲ್ಲಿ ಏಕಕಾಲಿಕವಾಗಿ ನಿರ್ವಹಿಸುತ್ತಿದ್ದೆ: ಸಂಗೀತ ಪ್ರಚಾರ, ಸಾಹಿತ್ಯ ಸಂಚಾರ ಮತ್ತು ವಿಜ್ಞಾನ ವಿಹಾರ. ಇತ್ತ “ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ” ದನಿ ಒಳಗೊಳಗೆ ಮಂದ್ರದಲ್ಲಿ ಮಿಡಿಯುತ್ತಿತ್ತು: ಎಚ್ಚರೆಚ್ಚರ!

ನೆಗಡಿ ನನಗೆ ಜನ್ಮತಃ ಅಂಟಿದ್ದ ಬೇನೆ. ಸಿಗರೆಟ್, ನಸ್ಯ, ಶರಾಬು, ತಿಂಡಿ ತೀರ್ಥಗಳ ಅತಿಮೋಹ ಮುಂತಾದ ಎಲ್ಲ ಆಧುನಿಕ ದುಶ್ಚಟಗಳಿಂದ ಸದಾ ದೂರವಾಗಿದ್ದು ಯುಕ್ತಾಹಾರ ಯುಕ್ತವಿಹಾರ ನಿರತನಾಗಿದ್ದು (ಅಕಾಲದಲ್ಲಿ ಅಮೃತವೂ ವಿಷ, ಸಕಾಲದಲ್ಲಿ ಮಿತಸಾತ್ತ್ವಿಕಾಹಾರ ಸೇವನೆ ಮತ್ತು ಸದಾಕಾಲ ಕರ್ತವ್ಯ ಮಗ್ನತೆ – ಇದು ನನ್ನ ಜೀವನ ಮಂತ್ರ ಮತ್ತು ತಂತ್ರ) ಸಂತೃಪ್ತ ಜೀವನ ನಡೆಸುತ್ತಿದ್ದರೂ ನೆಗಡಿ ಮಾತ್ರ ಕ್ರಮೇಣ ತನ್ನ ಗಿಯರನ್ನು ಏರಿಸತೊಡಗಿತು. ೧೯೯೦ರ ದಶಕದಲ್ಲಿ ಅದು ತೀವ್ರವಾಗಿ ಉಲ್ಬಣಿಸಿತು: ಶೀತ, ಕೆಮ್ಮಲು, ಉಬ್ಬಸ, ನಿರ್ನಿದ್ರೆ, ಮುಂತಾದವು ನನ್ನ ನಿತ್ಯ ಸಂಗಾತಿಗಳಾದುವು. ಯೋಗ, ಅತೀತ ಧ್ಯಾನ (transcendental meditation), ಪ್ರಾಣಾಯಾಮ, ರೇಖೀ ಮುಂತಾದ ನೈಸರ್ಗಿಕ ಚಿಕಿತ್ಸಾವಿಧಾನಗಳಾಗಲೀ ಹೋಮಿಯೋಪಥಿ, ಆಯುರ್ವೇದ, ಎಲ್ಲೋಪತಿ ಮುಂತಾದ ವೈದ್ಯಕೀಯ ಶುಶ್ರೂಷೆಗಳಾಗಲೀ ಪ್ರಕೋಪಿಸುತ್ತಿದ್ದ ನನ್ನ ಪಿಡುಗನ್ನು ಶಮನಿಸಲು ಶಕ್ತವಾಗಲಿಲ್ಲ. ನಿರಂತರ ಕೆಮ್ಮಲಿನ ಪ್ರಸಾದವಾಗಿ ಅಂಡವಾಯು (ಹರ್ನಿಯ) ಬೇನೆ ತಲೆದೋರಿತು. ಶಸ್ತ್ರಕ್ರಿಯೆ ಮಾಡಿಸಿಕೊಂಡೆ. ಆದರೆ ಗೂರಲು (ನೇವಸ) ಬಾಧಿಸತೊಡಗಿತು. ಇದನ್ನು ಔಷಧಿ ಸೇವನೆಯಿಂದ ಹತೋಟಿಗೆ ತಂದಾಗ ಒಳಜ್ವರ ಶುರು. ಇವೆಲ್ಲ ರಕ್ಕಸರ ಉಪಟಳಗಳು ರಾತ್ರಿ ವೇಳೆ ಸತತವಾಗಿ ಪೀಡಿಸಿ ನನ್ನ ಆಸಕ್ತ ಚಟುವಟಿಕೆಗಳಿಗೆ ಭಂಗ ತರುತ್ತಿದ್ದುವು.

ನನ್ನ ಪೂರ್ಣ ವಿಶ್ವಾಸಕ್ಕೆ ಪಾತ್ರರಾಗಿದ್ದ ಕುಟುಂಬ ವೈದ್ಯರು ಪ್ರತಿ ವಾರವೂ ನನ್ನನ್ನು ಪರೀಕ್ಷಿಸಿ ಭರವಸೆ ಕೊಡುತ್ತಿದರು. ಆಗ ಈಗ ಇಸಿಜಿ ತಪಾಸಣೆ (ಎಲೆಕ್ಟ್ರೊಕಾರ್ಡಿಯೊಗ್ರಾಮ್ – ವೈದ್ಯುತ ಹೃಲ್ಲೇಖ) ಕೂಡ ಮಾಡಿ “ಮೂವತ್ತರ ಯುವಕನ ಗುಂಡಿಗೆಯ ತ್ರಾಣವಿದೆ” ಎಂದು ಹುರಿದುಂಬಿಸುತ್ತಿದ್ದರು. ಇವರು ಅತ್ಯಂತ ಸಜ್ಜನ, ಎಂದೂ ಧನದಾಹಿ ಆಗಿರಲಿಲ್ಲ. ಇತ್ತ ನಾನಾದರೂ ಮಳೆ ಬಿಸಿಲು ಚಳಿ ಸೆಕೆ ಎನ್ನದೆ ಊರೂರು ಅಲೆಯುತ್ತ ವಿಜ್ಞಾನಪ್ರಸಾರ ಕಾರ್ಯದಲ್ಲಿ ನಿರತನಾಗಿದ್ದೆ: ಕಾರ್ಯಮಗ್ನತೆಯೇ ಬದುಕು, ಸೋಮಾರಿತನ ಸಾವು ಎಂಬ ಮಂತ್ರವನ್ನು ಸದಾ ಅನುಷ್ಠಾನಿಸುತ್ತಿದ್ದೆ. ಆದರೆ ಗಳಿಗೆ ಬಟ್ಟಲು ತುಂಬುತ್ತ ಬರುತ್ತಿತ್ತು.

ಇಸವಿ ೨೦೦೩ರ ಸೆಪ್ಟೆಂಬರ್ ರಾತ್ರಿ, ಮೈಸೂರು ಸನಿಹದ ಒಂದು ಹಳ್ಳಿಯಲ್ಲಿ ಸಂತ ಭದ್ರಗಿರಿ ಅಚ್ಯುತದಾಸರ ಹರಿಕಥೆ ಇತ್ತು. ಸಂತರ ಹರಿಕಥೆ ನಾಲ್ಕು ಆರೋಹೀ ಹಂತಗಳಲ್ಲಿ ನನಗೆ ಪ್ರಿಯ: ಮನೋರಂಜನೆ, ಕಥಾನಿರೂಪಣೆ, ಮೌಲ್ಯವರ್ಧನೆ ಮತ್ತು ಅಧ್ಯಾತ್ಮಿಕ ಉತ್ತಾರಣೆ. ಸೈಕಲ್ ತುಳಿದು ಅಲ್ಲಿಗೆ ಹೋದೆ. ಅಲ್ಲಿಯ ಪರಿಸರ ತೀರ ಅಸಹ್ಯವಾಗಿತ್ತು. ಉಸಿರು ಕಟ್ಟುವಂಥ ಕೊಳಕು, ದುರ್ವಾಸನೆ. ಹರಿಕಥೆ ಮುಗಿಯುವಾಗ ರಾತ್ರಿ ೧೧ ಗಂಟೆ ದಾಟಿತ್ತು. ಮಳೆ ಸುರಿಯುತ್ತಿತ್ತು. ಇನ್ನು ಉಣ್ಣೆ ರೇಷ್ಮೆ ಮುಂತಾದ ಬೆಚ್ಚಗಿನ ಉಡುಪು ನನಗೆ ಸದಾ ಅಲರ್ಜಿ, ವರ್ಜ್ಯ. ಏಕೆ? ನಾನು ಕೊಡಗಿನವೆಂಬ ಜಂಬ! ಮಳೆಯಲ್ಲಿ ತೋಯ್ದು ಕತ್ತಲಲ್ಲಿ ಸೈಕಲ್ ತುಳಿದು ಪೂರ್ಣ ಬಸವಳಿದು ಅಪರಾತ್ರಿಯಲ್ಲಿ ಮನೆಗೆ ಬಂದೆ, ಅಕಾಲದಲ್ಲಿ ಅಶನ ತಿಂದೆ, ಮಲಗಿದೆ. ನಿದ್ರೆ ಬರಲಿಲ್ಲ, ನೇವಸ ಉಲ್ಬಣಿಸಿ ಉಸಿರು ಕಟ್ಟಿತು, ವಾಂತಿ ಆಯಿತು. ಬಹುಶಃ ಸ್ಮೃತಿ ತಪ್ಪಿತು. ಕಣ್ಣು ತೆರೆದಾಗ ಅದೇ ಕುಟುಂಬ ವೈದ್ಯರ ರುಗ್ಣಾಲಯದಲ್ಲಿ (ನರ್ಸಿಂಗ್ ಹೋಮ್) ಮಲಗಿದ್ದೆ.

ಹೆಂಡತಿಗೆ (ಲಕ್ಷ್ಮಿ) ಶಿಕ್ಷೆ, ಸೊಸೆಗೆ (ರುಕ್ಮಿಣಿ) ಚಡಪಡಿಕೆ, ಮಗನಿಗೆ (ಅನಂತ) ಕಠಿಣ ಪರೀಕ್ಷೆ, ಮೊಮ್ಮಗಳಿಗೆ (ಅಕ್ಷರಿ) ಉದ್ವೇಗ, ಅಸಂಖ್ಯ ಬಂಧುಗಳಿಗೂ ಅಭಿಮಾನಿಗಳಿಗೂ ಚಿಂತೆ, ಚಿಂತೆ, ಚಿಂತೆ. ನನಗೋ? ಸ್ವಯಂಕೃತಾಪರಾಧ. ಆಗ ನನ್ನ ಬಾಯಿಯಿಂದ ಹೊಮ್ಮುತ್ತಿತ್ತಂದು ಒಂದು ಹಾಡು: “ಅನುಗಾಲವು ಚಿಂತೆ ಜೀವಕೆ… ಪೊಡವಿಯೊಳು ಸಿರಿ ಪುರಂದರವಿಠಲನ ಬಿಡದೆ ಚಿಂತಿಸಿದರೆ ಚಿಂತೆ ನಿಶ್ಚಿಂತೆ!”

ನನ್ನ ಆಯುಷ್ಯ ಕೊನೆ ಘಟ್ಟ ತಲಪಿದೆ ಎಂದು ನೋಡಿದವರೆಲ್ಲರೂ ಮರುಗಿದರು. ಅಶೋಕ ಮಂಗಳೂರಿನಿಂದ ಬಂದ, ಆನಂದ ಅಮೆರಿಕದಿಂದಲೇ ಹಾರಿ ಬಂದ. ಎಲ್ಲರೂ ಪರ್ಯಾಲೋಚಿಸಿ ನನ್ನನ್ನು ಇನ್ನೊಂದು ಹೈಟೆಕ್ ದವಾಖಾನೆಗೆ ಸಾಗಿಸಿದರು. ಅಲ್ಲಿ ೪೫ ದಿವಸ ತುರ್ತು ನಿಗಾಘಟಕವೆಂಬ (intensive care ward) ಬಂದೀಖಾನೆಯಲ್ಲಿ ಬಂಧನ. ಅನಿವಾರ್ಯವಾಗಿ ಪತ್ನಿಗೂ ಸೆರೆವಾಸ. ಉನ್ನತ ವೈದ್ಯಕೀಯ ತಪಾಸಣೆ ಅರುಹಿದ ಕಠೋರ ಸತ್ಯ ವೈಯಕ್ತಿಕವಾಗಿ ನನಗೂ ನಮ್ಮ ಕುಟುಂಬಕ್ಕೂ ಆತಂಕಕಾರಿಯಾಗಿದ್ದುದರ ಜೊತೆಗೆ ನಮ್ಮ ಸಾರ್ವಜನಿಕ ಆರೋಗ್ಯ ಸೇವಾಕ್ಷೇತ್ರಕ್ಕೆ ಬಡಿದಿರುವ ಪಿಡುಗಿಗೂ ಎತ್ತಿಹಿಡಿದ ಕೈಮರವಾಗಿತ್ತು: “Wrong diagnosis, wrong medication, and wrong treatment as a result of which common cold gradually degenerated into pleurisy, pneumonia culminating in tuberculosis. An example of misuse of steroid.” ಈ ಭರತ ವಾಕ್ಯ ಆಲಿಸಿದಾಗ ನಾನೊಂದು ಚಟಾಕಿ ಹಾರಿಸಿದೆ “yes, an engineer’s mistake is a standing monument, a doctor’s mistake is buried in 6 feet deep and a teacher’s mistake is generations spoiled.”

ಆದರೂ ಸಾಯಲಿಲ್ಲ! ತೀವ್ರ ಜರ್ಝರಿತದೇಹಿಯಾಗಿ ಮನೆಗೆ ಮರಳಿದೆ: ಸಾವಿತ್ರಿ ಇದ್ದಳೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಸಾವಿತ್ರಿ (ಲಕ್ಷ್ಮಿ) ಹಗಲಿರುಳು ಎಚ್ಚತ್ತಿದ್ದು ಮಾಡಿದ ಶುಶ್ರೂಷೆ ಮತ್ತು ಮಗ-ಸೊಸೆ-ಮೊಮ್ಮಗಳು ಮತ್ತು ಬಂಧುಗಳು ವಹಿಸಿದ ಕಾಳಜಿ ನೆನೆಯುವಾಗ ಸಾವಿತ್ರಿತ್ವ ಕೇವಲ ಪೌರಾಣಿಕ ಕಲ್ಪನೆ ಅಲ್ಲ, ಭಾರತೀಯ ಕುಟುಂಬದ ಜೀವನಪ್ರೀತಿಯ ದರ್ಪಣ ಎಂಬುದು ನನಗೆ ಸ್ಪಷ್ಟವಾಗಿದೆ. ನನ್ನನ್ನು ದಂಡೆ ಹಾಯಿಸಿದ ಕ್ಷಯರೋಗತಜ್ಞ ಜಿ.ಎಮ್ ಕುದರಿಯವರ ಪ್ರಕಾರ ನನ್ನ ವೈಯಕ್ತಿಕ ಶಿಸ್ತು, ಹೆಂಡತಿಯ ಆರೈಕೆ ಹಾಗೂ ಕುಟುಂಬದ ಸೇವೆ ಇಲ್ಲವಾಗಿದ್ದರೆ ನಾನೆಂದೋ ಮರಣಿಸಿರುತ್ತಿದ್ದೆ.

ಹಿಂದೆ ಬಂದೆ. ಎರಡು ಸಂಗತಿಗಳು ಸ್ಪಷ್ಟವಾದುವು: ದೇಹ ದುರ್ಬಲವಾಗಿದೆ, ಆದರೆ ಮನಸ್ಸು ಮಸಳಿಲ್ಲ! ಅರ್ಥಾತ್, ಯಂತ್ರಾಂಶ ಶಿಥಿಲವಾದರೂ ತಂತ್ರಾಂಶ ಬಲಿಷ್ಠವಾಗಿಯೇ ಇದೆ – hardware weak but software strong. ಇವೆಲ್ಲ ಒತ್ತಡ ಹೊಡೆತ ಬಡಿತಗಳು ಚಕ್ರಬಡ್ಡಿ ಸಹಿತ ನನ್ನ ಹೆಂಡತಿಯ ದೃಢ ಆರೋಗ್ಯದ ಮೇಲೆ ಶಾಶ್ವತ ದುಷ್ಪರಿಣಾಮ ಘಾತಿಸಿವೆ. ಆಕೆಯ ಬಹುಮುಖ ಚಟುವಟಿಕೆಗಳೀಗ ಸ್ಥಗಿತವಾಗಿವೆ; ಯಂತ್ರಾಂಶ ನನಗಿಂತ ಹೆಚ್ಚು ಸೋತಿದೆ. ಅದೃಷ್ಟವಶಾತ್ ತಂತ್ರಾಂಶ ಆಕೆಯದೂ ಪ್ರಬಲವಾಗಿದೆ. ಆದ್ದರಿಂದ ಈಗ ೮೧ರಲ್ಲಿರುವ ನನ್ನ ಮತ್ತು ೭೭ರಲ್ಲಿರುವ ಅವಳ ಬಾಳು ‘ತರಕಾರಿ ಬಾಳು’ (vegetable existence) ಆಗಿಲ್ಲವೆಂದು ಸಮಾಧಾನ ತಳೆಯಬಹುದು.

ವಿಶ್ವಕೋಶದಲ್ಲಿ ಮರುವುಟ್ಟು
ಅಧ್ಯಾಯ ೮೯ (ಮೂಲದಲ್ಲಿ ೬೧)

ಇಸವಿ ೨೦೦೪ ಬಂದೇ ಬಂತು. ಕುವೆಂಪು ಜನ್ಮ ಶತಮಾನೋತ್ಸವ ವರ್ಷವದು. ಆ ಯುಗಚೇತನದ ಒಂದು ಕನಸು ಕನ್ನಡ ವಿಶ್ವಕೋಶ. ೧೪ ಸಂಪುಟಗಳ ಈ ಯೋಜನೆಯಲ್ಲಿ ಅಲ್ಲಿಯ ತನಕ ೧೩ ಸಂಪುಟಗಳು ಪೂರ್ಣಗೊಂಡಿದ್ದುವು. ಕೊನೆಯದರ ಅವಸ್ಥೆ ಏನು? ಈ ಸಂದರ್ಭದಲ್ಲಿ ಹಲವಾರು ಪೂರಕ ಬಲಗಳು ಸಂಗಮಿಸಿದ್ದೊಂದು ಯೋಗಾಯೋಗ, ಕನ್ನಡದ ಭಾಗ್ಯ: ೮೭ರ ಜ್ಞಾನವಯೋವೃದ್ಧ ಮತ್ತು ವಿಶ್ವಕೋಶದ ಕ್ರತುಶಕ್ತಿ ದೇಜಗೌ ಅವರ ತೀವ್ರ ಆಸಕ್ತಿ, ಇವರ ಸುಪುತ್ರ ಜೆ. ಶಶಿಧರಪ್ರಸಾದ್ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮನಗೊಂಡುದು, ಕಾರ್ಯಧುರಂಧರ ಅರವಿಂದ ಮಾಲಗತ್ತಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡುದು, ಮತ್ತು ವಿಶ್ವಕೋಶದ ಗರಡಿಯಲ್ಲಿಯೇ ಪಳಗಿ ಅನುಭವ ಗಳಿಸಿದ ಹಾ.ತಿ. ಕೃಷ್ಣೇಗೌಡ ಕಾರ್ಯನಿರ್ವಾಹಕ ಸಂಪಾದಕರಾದುದು, ಹಣದ ಅಭಾವವಿಲ್ಲ, ಸಂಕಲ್ಪದ ಕೊರತೆಯಿಲ್ಲ. ಸರಿ, ಆದರೆ ಕನ್ನಡ ವಿಶ್ವಕೋಶಕ್ಕಾಗಿ ದುಡಿಯುವ ಅನುಭವೀ ಚೇತನಗಳನ್ನೆಲ್ಲಿಂದ ತರೋಣ?

ನಿವೃತ್ತರನ್ನು ಮತ್ತೆ ಕಾಲಬಂಧಿತ ಒಪ್ಪಂದದ ಪ್ರಕಾರ ನೇಮಿಸಿ ೧೪ನೆಯ ಸಂಪುಟವನ್ನು ೨೦೦೪ರಲ್ಲಿಯೇ ಪೂರೈಸುವುದೆಂದು ಆಡಳಿತ ವಿಭಾಗ ತೀರ್ಮಾನಿಸಿ ಕಳಕ್ಕೆ ದುಮುಕಿತು. ವಿಜ್ಞಾನ ವಿಭಾಗದ ಪೂರ್ಣ ಹೊಣೆಯನ್ನು ನಾನು, ನನ್ನ ಷರತ್ತಿನ ಅನುಸಾರ, ವಹಿಸಿಕೊಂಡು ಈ ಕನ್ನಡ ಕೈಂಕರ್ಯವನ್ನು ೨೦೦೪ರಲ್ಲಿಯೇ ಪೂರ್ತಿಗೊಳಿಸಿಕೊಡಬೇಕೆಂದು ದೇಜಗೌರಿಂದ ತೊಡಗಿ ಸಂಬಂಧಿಸಿದ ಸಕಲರೂ ನನಗೆ ದುಂಬಾಲುಬಿದ್ದರು. ನನಗಿಂತ ಎಷ್ಟೋ ಹಿರಿಯರಾದ ಎಚ್ಚೆಸ್ಕೆಯವರು ಆ ಮೊದಲೇ ನವಯುವಕನ ಹುಮ್ಮಸ್ಸಿನಿಂದ ಮಾನವಿಕ ವಿಭಾಗದ ಉಸ್ತುವಾರಿ ಹೊತ್ತಿದ್ದರು.

ಸವಾಲನ್ನು ಸಂತೋಷದಿಂದ ಸ್ವೀಕರಿಸಿದೆ. ನನ್ನ ಮಾಜಿ ಶಿಷ್ಯ ಮತ್ತು ಕನ್ನಡದ ಹಿರಿಯ ವಿಜ್ಞಾನ ಬೋಧಕ-ಲೇಖಕ ಎ.ವಿ. ಗೋವಿಂದರಾಯರ ನೆರವನ್ನು ಒದಗಿಸಬೇಕೆಂದು ನಿರ್ದೇಶಕರಿಗೆ ಹೇಳಿ ಪಡೆದೆ. ಸೇತುಬಂಧನ ಭರದಿಂದ ಸಾಗಿತು. ಕಲ್ಲುಗಳು ತೇಲಿದುವು, ಕ್ಲುಪ್ತ ಮುಹೂರ್ತದಲ್ಲಿ ಆಚೆ ದಡ ಸೇರಿದೆವು. ೧೪ನೆಯ ಸಂಪುಟ ೨೯-೧೨-೨೦೦೪ರಂದು ಲೋಕಾರ್ಪಣಗೊಂಡಾಗ ಮಗುದೊಮ್ಮೆ ನಮ್ಮೆಲ್ಲರನ್ನು ಕೃತಾರ್ಥಭಾವ ಉದ್ದೀಪಿಸಿತು. ಕವಿವಾಣಿ ಸತ್ಯ, “ಕನ್ನಡಕ್ಕಾಗಿ ಕೈಯೆತ್ತು ಕಲ್ಪವೃಕ್ಷವಾಗುತ್ತದೆ!” ಇತ್ತ ನನ್ನ ಆರೋಗ್ಯ ಸುಧಾರಿಸಿ ಆಯುಷ್ಯವೂ ವೃದ್ಧಿಸಿತು. ಆದ್ದರಿಂದ “ಕನ್ನಡಕ್ಕಾಗಿ ದುಡಿ ಚಿರಂಜೀವಿ ಆಗುವೆ!” ಎಂಬ ಷರಾವನ್ನೂ ಜೋಡಿಸಬಹುದು.

ಅನಿರೀಕ್ಷಿತ ಪುರಸ್ಕಾರಗಳು
ಅಧ್ಯಾಯ ೯೦ (ಮೂಲದಲ್ಲಿ ೬೨)

ತಾನು ಮೆಚ್ಚಿದ ಆದರ್ಶ ಸಾಧನೆಗಾಗಿ ಸದಾ ಕಾರ್ಯಮಗ್ನನಾಗಿರುವಾತನಿಗೆ ಅನಿರೀಕ್ಷಿತವಾಗಿ ಹಲವಾರು ಪುರಸ್ಕಾರ ಪ್ರಶಸ್ತಿ ಪ್ರೋತ್ಸಾಹಗಳು ಲಭಿಸುವುದು ವಿರಳವಲ್ಲ. ಇಂಥವು ಆತನಿಗೆ ಅಕಸ್ಮಾತ್ತಾಗಿ ಬಂದಾಗ ಆತನ ಮನೋಭಾವ ಹೇಗಿರುತ್ತದೆ? “ಅಯ್ಯಾ! ನೀನುನಡೆಯುತ್ತಿರುವ ಹಾದಿ ತಪ್ಪಾಗಿಲ್ಲ. ಸಮಾಜ ಇದನ್ನು ಗಮನಿಸಿದೆ. ಇದೇ ಜಾಡಿನಲ್ಲಿ ಮುನ್ನಡೆಯುತ್ತಿರು” ಎಂಬ ಸಂದೇಶ ಅಪ್ರಾರ್ಥಿತವಾಗಿ ಅಪರಿಚಿತ ನೆಲೆಗಳಿಂದ ಬಂದಂತಲ್ಲವೇ? ಸಾಗರೋತ್ತರಣ ನಿರತ ಆಂಜನೇಯನಿಗೆ ಕಡಲ ನಡುವೆ ಮೈನಾಕ ಪರ್ವತ ಸ್ವಾಗತಕೋರಿದ್ದು ಇಂಥ ಒಂದು ನಿದರ್ಶನ.
ನನಗೆ ಲಭಿಸಿರುವ ಇಂಥ ಅನೇಕ ಪ್ರಶಸ್ತಿ ಪುರಸ್ಕಾರಗಳ ಪೈಕಿ ಪ್ರಾತಿನಿಧಿಕವಾಗಿ ಕೆಲವನ್ನು ಇಲ್ಲಿ ಉಲ್ಲೇಖಿಸಿದ್ದೇನೆ.

ವಿಶ್ವಮಾನವ ಪ್ರಶಸ್ತಿ
ಶ್ರೀ ಕುವೆಂಪು ವಿದ್ಯಾಪರಿಷತ್ತು ೧೯೯೧ರಲ್ಲಿ ಪ್ರದಾನಿಸಿದ ಈ ಪ್ರಶಸ್ತಿಯಲ್ಲಿರುವ ಸ್ವಸ್ತಿವಾಕ್ಯ: ವಿಜ್ಞಾನ ಸಾಹಿತ್ಯ ರಚನೆಯಲ್ಲಿ ಸಿದ್ಧಹಸ್ತರಾಗಿ, ಆ ಕ್ಷೇತ್ರಕ್ಕೆ ಅನುಪಮ ಅಮೂಲ್ಯ ಕೊಡುಗೆಗಳನ್ನು ನೀಡುವ ಮೂಲಕ ನಾಡು ನುಡಿಗಳಿಗೆ ಅಪಾರ ಸೇವೆ ಸಲ್ಲಿಸಿರುವ ಶ್ರೀ ಜಿ.ಟಿ. ನಾರಾಯಣರಾಯರಿಗೆ ೧೯೯೧ನೆಯ ಸಂವತ್ಸರದ ವಿಶ್ವಮಾನವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಮೈಸೂರು ೨೬-೮-೧೯೯೧:: ಸಾವಿತ್ರಮ್ಮ ದೇಜಗೌ, ಅಧ್ಯಕ್ಷಿಣಿ

ಶ್ರೀ ಕೆ.ವಿ ಶಂಕರಗೌಡ ಸ್ಮಾರಕೋಪನ್ಯಾಸ ಮಾಲೆ
ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಆಶ್ರಯದಲ್ಲಿ ೧೯೯೯ರ ಸಾಲಿನ, ಅಂದರೆ ೨೦ನೆಯ ಶತಮಾನದ ಅಂತೆಯೇ ೨ನೆಯ ಸಹಸ್ರಮಾನದ ಕೊನೆಯ ವರ್ಷದ ಶ್ರೀ ಕೆ.ವಿ. ಶಂಕರ ಗೌಡ ಸ್ಮಾರಕೋಪನ್ಯಾಸ ನೀಡುವ ಸುಯೋಗ ನನ್ನದಾಗಿತ್ತು. ಆಗ ನಾನು ಟ್ರಸ್ಟಿಗೆ ಒಪ್ಪಿಸಿದ ‘ವಿಶ್ವದ ಕಥೆ’ ಎಂಬ ಹಸ್ತ ಪ್ರತಿಯನ್ನು ಅದು ಯಥಾಕಾಲದಲ್ಲಿ ಪ್ರಕಟಿಸಿತು ಕೂಡ. ಇದಕ್ಕೆ ದೇಜಗೌ ಅವರು ಬರೆದಿರುವ ಮುನ್ನುಡಿಯನ್ನು ಇಲ್ಲಿ ಉದ್ಧರಿಸಿದೆ:
ಪ್ರಸ್ತುತ ಕಾಲದ ಮಹತ್ವದ ವಿಜ್ಞಾನ ವಾಙ್ಮಯ ಸೃಷ್ಟಿಕಾರರಲ್ಲಿ ಅಗ್ರಪೂಜೆಗೆ ಅರ್ಹರಾದವರು ಶ್ರೀ ಜಿ.ಟಿ. ನಾರಾಯಣರಾಯರು. ವಿದ್ವತ್ತಿಗೆ, ಶಿಸ್ತಿಗೆ, ಸಾಹಸಕ್ಕೆ, ನಿಯತ್ತಿಗೆ, ರುಚಿಶುಚಿ ಶುದ್ಧಿಗೆ, ಜೀವನೋತ್ಸಾಹಕ್ಕೆ, ಸತ್ಕಾರ್ಯ ಸಾಧನಾಛಲಕ್ಕೆ, ವೈಜ್ಞಾನಿಕ ಮನೋಧರ್ಮಕ್ಕೆ, ವಿಜ್ಞಾನ ಪ್ರಸಾರ ಸಮರ್ಪಣ ಮನೋಧರ್ಮಕ್ಕೆ ಸರಳ ಸಜ್ಜನಿಕೆಗೆ ಮತ್ತೊಂದು ಹೆಸರು ಜಿಟಿಎನ್.

ಹಲವು ವರ್ಷ ಗಣಿತ ಮತ್ತು ಖಗೋಳವಿಜ್ಞಾನಗಳ ಪ್ರಾಧ್ಯಾಪಕರಾಗಿ, ಎನ್ಸಿಸಿಯಲ್ಲಿ ಮೇಜರ್ ಸ್ಥಾನಾಲಂಕೃತರಾಗಿದ್ದು, ಕನ್ನಡ ವಿಶ್ವಕೋಶದ ವಿಜ್ಞಾನ ವಿಭಾಗದ ಸಂಪಾದಕರಾಗಿದ್ದು, ಆ ಮೂಲಕ ಶೈಕ್ಷಣಿಕ ಹಾಗೂ ವಿಜ್ಞಾನ ಕ್ಷೇತ್ರಗಳಿಗೆ ಅವರು ಸಲ್ಲಿಸಿದ ಸೇವೆ ಅಗಣ್ಯ, ಅನುಪಮ, ಅಸಾಧಾರಣ. ಅವರು ಮತ್ತು ಎಚ್ಚೆಸ್ಕೆ ಇಬ್ಬರೂ ವಿಶ್ವಕೋಶದಿಂದ ನಿರ್ಗಮಿಸಿದನಂತರ ಅದು ತಬ್ಬಲಿಯಾಯಿತು, ಸುರುಟಿಹೋಯಿತು, ಕುಟುಕು ಜೀವದಿಂದಿರಬೇಕಾಯಿತೆಂಬುದೇ ಅವರ ಪ್ರತಿಭಾ ಸಾಮರ್ಥ್ಯಕ್ಕೊಡ್ಡಿದ ಕನ್ನಡಿಯಾಗಿದೆ. ಪ್ರಾಯಶಃ ಆ ಕ್ಷೇತ್ರದಲ್ಲಿ ಅವರೆತ್ತರಕ್ಕೇರಬಲ್ಲ ವಿದ್ವಾಂಸರು ವಿರಳರೆಂದೇ ಹೇಳಬೇಕು. ಅವರ ವಿದ್ವತ್ತನ್ನು ಗುರುತಿಸಲಾರದ, ಬಳಸಿಕೊಳ್ಳಲಾರದ ಸಮಾಜ, ಸರ್ಕಾರ ಮತ್ತು ವಿಶ್ವವಿದ್ಯಾನಿಲಯಗಳಿಗೆ ಅಂಧತ್ವ ಕವಿದಿದೆ ಎಂದೇ ಹೇಳಬೇಕಾಗಿದೆ. ಲಾಬಿ, ಅಂಗಲಾಚಿಕೆ, ಹಲ್ಲುಗಿಂಜಿಕೆ, ಪಾದಗ್ರಹಣಾದಿ ಶುಶ್ರೂಷೋಪಚಾರಗಳಿಗೆ ಮಾತ್ರ ದಕ್ಕುವ ಪದವಿ ಪ್ರಶಸ್ತಿಗಳಿಗಾಶಿಸದೆ, ವಿಜ್ಞಾನಕೈಂಕರ್ಯ ಸಂಕಲ್ಪವೊಂದೇ ತಮ್ಮ ಜೀವನದ ಉಸಿರಾಗಿರುವಾಗ ಯಾವ ಆಶೆ ಆಮಿಷಗಳಿಗೂ ಮಣಿಯದೆ, ಅಸಾಧ್ಯವನ್ನು ಸಾಧಿಸುತ್ತಿದ್ದಾರೆಂಬುದು ಕನ್ನಡದ ಪುಣ್ಯ.

ಜಿಟಿಎನ್‌ರ ಹವ್ಯಾಸಗಳ ಕಡೆಗೆ ಗಮನಹರಿಸಿದಾಗಲೇ ಅವರು ಅಸಾಧಾರಣರೆಂಬುದು, ಬಹುಮುಖ ಪ್ರತಿಭೆಯ ಸೃಜನಶೀಲ ಅಗ್ಗಳೆಯರೆಂಬುದು ಮನದಟ್ಟಾಗುತ್ತದೆ. ಅವರ ‘ಎನ್ಸಿಸಿ ದಿನಗಳು’ ಮತ್ತು ‘ಕುದುರೆಮುಖದೆಡೆಗೆ’ ಎಂಬ ಗ್ರಂಥಗಳನ್ನೋದಿದರೆ ಸಾಕು, ಅವರಿಗೆ ಎಂಥ ಕೆಲಸವನ್ನು ವಹಿಸಿದರೂ ಸೃಷ್ಟಿಪೂಜೆಯೆಂದೇ ನಂಬಿ, ಅದನ್ನು ಸಮರ್ಥ ಸಾರ್ಥಕ ಶಿಕ್ಷಣ ಮಾಧ್ಯಮವನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆಂಬುದು ವಿದಿತವಾಗುತ್ತದೆ. ಜಗತ್ತಿನ ಗಡಿಯಾರ ಅಥವಾ ಋತುಮಾನವೆಷ್ಟು ಕ್ರಮಬದ್ಧವೋ ಅವರ ಜೀವನ ಕ್ರಮವೂ ಅಷ್ಟೇ ವ್ಯವಸ್ಥಿತವಾದದ್ದು. ಪ್ರಾತರ್ವಿಧಿ, ವ್ಯಾಸಂಗ, ಲೇಖನ ಕರ್ಮ ಅವರ ಪ್ರತಿನಿತ್ಯದ ಪರಿಪಾಟ. ಮುದ್ರಣಾಲಯಕ್ಕೆ ಕರಡು ಕೊಡೊಯ್ಯುವವರೂ ಅವರೆ. ನಗರದ ಯಾವ ಮೂಲೆಯಲ್ಲಿ ಸಂಗೀತ ಕಛೇರಿಯಿದ್ದರೂ ಹಾಜರಿ ಹಾಕಲೇಬೇಕು. ದೇವರ ಮಂಡೆಯ ಹೂ ಹಾಕುವುದು ತಪ್ಪಿದರೂ ಸಂಗೀತ ಕಚೇರಿಯನ್ನು ತಪ್ಪಿಸಿಕೊಳ್ಳುವಂತಿಲ್ಲ. ಸಂಗೀತ ಶಾಸ್ತ್ರವನ್ನು ಬಲ್ಲ ಸದಭಿರುಚಿಯ ವಿಮರ್ಶಕರವರು. ಅವರ ಸಮತೋಲನ ಪ್ರಜ್ಞೆಗೆ, ಭಾವಸಂಸ್ಕಾರಕ್ಕೆ ಸಂಗೀತ ಜ್ಞಾನವೇ ಕಾರಣವೆಂದು ತೋರುತ್ತದೆ. ಮೈಸೂರಿನ ‘ವೀಣೆ ಶೇಷಣ್ಣ ಭವನ’ವನ್ನು ನಿರ್ಮಿಸುವಲ್ಲಿ ಸಂಗೀತ ಪ್ರಸಾರ ವಿಕಾಸಗಳ ಬಗೆಗಿನ ಅವರ ಕಾಳಜಿ, ಅವರ ಸಂಘಟನ ಸಾಮರ್ಥ್ಯ ಹಾಗೂ ಅವರ ಸ್ನೇಹಾರ್ಜನಾ ಕೌಶಲ ವ್ಯಕ್ತಗೊಳ್ಳುತ್ತವೆ.

ಏಕಕಾಲಕ್ಕೆ ವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಗಳಿಗೆ ನೀಡಿರುವ ಮೌಲ್ಯಾತ್ಮಕ ಕಾಣಿಕೆಯಾಗಿ, ಸಲ್ಲಿಸುತ್ತಿರುವ ವಿಶಿಷ್ಟ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಡೆಮಿ, ಕರ್ನಾಟಕ ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಶ್ವಮಾನವ, ಕರ್ನಾಟಕ ಗಾನಕಲಾ ಪರಿಷತ್ತು, ಮಣಿಪಾಲ್ ಜನರ್ಲ್ ಎಜ್ಯುಕೇಶನ್ ಅಕಾಡೆಮಿ ಮೊದಲಾದ ಹಲವು ಸಂಸ್ಥೆಗಳು ಅವರಿಗೆ ಸಲ್ಲಿಸಿರುವ ಬಹುಮಾನ ಪ್ರಶಸ್ತಿಗಳಿಗೆ ಅವರು ಸರ್ವಾರ್ಹರೆಂಬುದರಲ್ಲಿ ಸಂದೇಹವಿಲ್ಲ.

ಪ್ರಶಸ್ತಿಗಳು ಬರಲಿ, ಬರದಿರಲಿ, ವಿಜ್ಞಾನ ಸಾಹಿತ್ಯ ನಿರ್ಮಾಣ ಮತ್ತು ಕನ್ನಡ ಭಾಷಾ ಸೇವೆ ತಮ್ಮ ಜೀವನ ಧರ್ಮವೆಂದು ತಿಳಿದು, ಅದೇ ಕಾಯಕ ಸತ್ಯ ಮುಕ್ತಿ ಎಲ್ಲವೂ ಎಂದು ಭಾವಿಸಿ ಅನಿವೃತ್ತರಂತೆ ಏಕೋಭಾವದಿಂದ ಶ್ರದ್ಧಾನಿಷ್ಠೆಗಳಿಂದ ದುಡಿಯುತ್ತಿದ್ದಾರೆ. ಆದ್ದರಿಂದಲೇ ಅವರು ಈಗಾಗಲೇ ಸುಮಾರು ೬೮ ಗ್ರಂಥಗಳನ್ನು ರಚಿಸಿ, ಕನ್ನಡವು ವಿಜ್ಞಾನದ ಸಶಕ್ತ ಮಾಧ್ಯಮವೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಆಕಾಶದ ಅದ್ಭುತಗಳು, ಧೂಮ ದೈತ್ಯ, ಕಾಲ, ನಕ್ಷತ್ರ ಜಾಲ, ಭವಿಷ್ಯ ವಿಜ್ಞಾನ, ಗಣಿತ ಗಗನ ಗಮನ, ಗ್ರಹಣಗಳು, ಕೃಷ್ಣವಿವರಗಳು, ವೈಜ್ಞಾನಿಕ ಮನೋಧರ್ಮ – ಇವು ಅವರ ಕೆಲವು ಗ್ರಂಥಗಳು ಮಾತ್ರ. ಇವುಗಳ ಹೆಸರುಗಳನ್ನು ಓದಿದಾಗಲೇ, ಅವರ ವೈವಿಧ್ಯಮಯ ವೈದುಷ್ಯದ ಆಳ ಅಗಲ ವಿಸ್ತಾರಗಳು ಪರಿಚಯವಾಗುತ್ತವೆ. ಕೊಪರ್ನಿಕಸ್, ಐನ್ಸ್‌ಟೈನ್, ಶ್ರೀನಿವಾಸ ರಾಮಾನುಜನ್, ಸುಬ್ರಹ್ಮಣ್ಯನ್ ಚಂದ್ರಶೇಖರ್, ವಿಜ್ಞಾನ ನಿರ್ಮಾಪಕರು ಮೊದಲಾದ ಜೀವನ ಚರಿತ್ರೆ – ಚಿತ್ರಗಳು ಕನ್ನಡಿಗರಿಗೆ ದಾರಿದೀಪವಲ್ಲದೆ ಧೈರ್ಯ ನಚಿಕೇತಗಳಾಗಿರುವುದಲ್ಲದೆ, ಆ ಸಾಹಿತ್ಯ ಪ್ರಕಾರಕ್ಕೆ ಮಾದರಿಗಳಾಗಿ ವಿಜೃಂಭಿಸುತ್ತವಲ್ಲದೆ, ಜೀವನ ಚರಿತ್ರೆಯ ಕ್ಷೇತ್ರವನ್ನು ವಿಶಿಷ್ಟ ರೀತಿಯಲ್ಲಿ ಸಮೃದ್ಧಗೊಳಿಸಿವೆ. ಈ ವಿಜ್ಞಾನ ಲೇಖಕರು ಸಣ್ಣ ಕತೆಗಳಲ್ಲಿಯೂ ಕೈಯಾಡಿಸಿದ್ದಾರೆಂಬುದು ಗಮನಾರ್ಹವಾದ ಸಂಗತಿ. ಅವರ ದೈತ್ಯಶಕ್ತಿಗೆ ಸಾಕು ಇಷ್ಟೇ ನಿದರ್ಶನ.

ಅವರ ಈ ಶಕ್ತಿಯನ್ನು ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಗುರುತಿಸುವ ಅವಕಾಶ ನನಗೆ ದೊರೆಯಿತೆಂಬುದು ಸಂತೋಷದ ಹಾಗೂ ಹೆಮ್ಮೆಯ ಸಂಗತಿ. ಗುರುತಿಸಲು ನೆರವಾದವರು ಪ್ರೊ. ಕು.ಶಿ. ಹರಿದಾಸಭಟ್ಟರೆಂಬುದನ್ನು ನಾನು ಮರೆಯುವಂತಿಲ್ಲ. ನಾನಾಗ ಕನ್ನಡ ವಿಶ್ವಕೋಶದ ವಿಜ್ಞಾನದ ವಿಭಾಗಕ್ಕೆ ಸಂಪಾದಕರೊಬ್ಬರನ್ನು ಹುಡುಕುವ ಯತ್ನದಲ್ಲಿದ್ದೆ. ಕರ್ನಾಟಕಾದ್ಯಂತ ದೃಷ್ಟಿ ಕ್ಷಕಿರಣ ಹಾಯಿಸಿದ್ದೆ, ಹುಡುಕುಬಲೆಯನ್ನು ಬೀಸಿದ್ದೆ. ಬೆಂಗಳೂರು ಸೆಂಟ್ರಲ್ ಕಾಲೇಜಿನ ಗಣಿತ ಭವನದ ಮುಂದಣ ಶಿರೀಷ ವೃಕ್ಷದಡಿ ನಿಂತು ಗಂಟೆಗಟ್ಟಲೆ ನಾರಾಯಣ ರಾಯರ ಮನವೊಲಿಸಿಕೊಳ್ಳಲು ಪ್ರಯತ್ನಿಸಿದೆ. ಸಫಲವಾಗಲಿಲ್ಲ. ಆದರೂ ನಾನು ನೆಚ್ಚುಗೆಡದೆ ಕುಶಿಯವರನ್ನು ಮರೆಹೊಕ್ಕಿದ್ದೆ; ಭುವನೇಶ್ವರಿಯನ್ನು ಪ್ರಾರ್ಥಿಸುತ್ತಿದ್ದೆ. ದಿನಕಳೆದಂತೆಲ್ಲ ನನ್ನ ಸಂಕಲ್ಪ ದೃಢಗೊಳ್ಳುತ್ತಿತ್ತು. ಬೆಂಗಳೂರು ವಿಶ್ವವಿದ್ಯಾಲಯ ನಾರಾಯಣರಾಯರ ಪ್ರತಿಭಾ ಸಾಮರ್ಥ್ಯವನ್ನು, ಅವರ ದಕ್ಷತೆಯನ್ನು, ಪ್ರಾಮಾಣಿಕತೆಯನ್ನು ಗುರುತಿಸಲಾರದೆಂಬ ನಂಬಿಕೆ ನನ್ನ ಮನಸ್ಸಿನಲ್ಲಿ ಕಾವು ಕೂತಿತ್ತು. ಆ ನನ್ನ ನಂಬಿಕೆ ಹುಸಿಯಾಗಲಿಲ್ಲ. ಕೆಲವು ತಿಂಗಳಾನಂತರ ಕುಶಿಯವರೇ ನನ್ನನ್ನು ಕೇಳಿದರು: ವಿಶ್ವಕೋಶದ ಕದ ನಾರಾಯಣರಾಯರಿಗೆ ಇನ್ನೂ ತೆರೆದಿದೆಯೆ ಎಂದು. ಕೊನೆಗೂ ನನ್ನ ಪ್ರಾರ್ಥನೆ ಸಫಲವಾಯಿತೆಂಬ, ನನ್ನ ಮನೋರಥ ಈಡೇರಿತೆಂಬ, ವಿಶ್ವಕೋಶವನ್ನು ಖಂಡಿತವಾಗಿಯೂ ಪೂರೈಸುತ್ತೇನೆಂದು ಸರ್ಕಾರಕ್ಕೆಸೆದಿದ್ದ ಸವಾಲಿಗೆ ವಿಜಯ ದೊರೆಯುತ್ತದೆಂಬ ಆನಂದ ನನ್ನ ಮೈಮನ ಹೃದಯಗಳನ್ನೆಲ್ಲ ತುಂಬಿಕೊಂಡವು.

ಎಚ್ಚೆಸ್ಕೆ, ಜಿ.ಟಿ. ನಾರಾಯಣರಾವ್ ಮತ್ತು ಎನ್. ಪ್ರಹ್ಲಾದರಾವ್ ಈ ಮೂವರು ಘನ ವಿದ್ವಾಂಸರು, ವಿಶ್ವದ ಯಾವ ಭಾಗದಲ್ಲಾದರೂ ಮಾನ್ಯತೆ ಪಡೆಯಬಲ್ಲ ಅರ್ಹತೆಯುಳ್ಳ ಧೀಮಂತರು. ಆ ಮೂವರು ವಿಶ್ವಕೋಶಕ್ಕೆ ವರವಾಗಿ ಬಂದವರು ನನ್ನ ಅದೃಷ್ಟದ ಬಾಗಿಲನ್ನು ಸಹ ತೆರೆದರು. ಅವರು ಬಂದನಂತರ ನಾನು ವಿಶ್ವಕೋಶದ ಜವಬ್ದಾರಿಯನ್ನೆಲ್ಲ ಅವರ ಹೆಗಲುಗಳಿಗೆ ವರ್ಗಾಯಿಸಿ ನಿಶ್ಚಿಂತನಾದೆ. ಸಂಸ್ಥೆಯ ಬೇರೆ ಕಾರ್ಯಗಳಿಗೆ ನನ್ನ ಗಮನ ಹರಿಸಿದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಭಾರತದ ಯಾವ ಭಾಷೆಗಾದರೂ ಮಾದರಿಯಾಗಬಹುದಾದ ವಿಶ್ವಕೋಶವನ್ನು ರಚಿಸಿ, ಸಂಪಾದಿಸಿ, ಆರು ತಿಂಗಳಿಗೊಂದು ಸಂಪುಟವನ್ನು ಹೊರತಂದರು. ಅವರ ಶಕ್ತಿಯನ್ನರಿಯಲಾರದೆ, ವಿಶ್ವಕೋಶದ ಮಹತ್ತ್ವದ ಗಂಧವೇ ಗೊತ್ತಿಲ್ಲದ, ಅದಕ್ಷ, ಅಜ್ಞ ಅಧಿಕಾರಿಗಳು ಆ ಸಂಪಾದಕರಿಗೇ ನಿವೃತ್ತಿ [ಶ್ರೀ ಎನ್. ಪ್ರಹ್ಲಾದರಾಯರು ಮೊದಲೇ ಅಕಾಲ ಮರಣಕ್ಕೆ ತುತ್ತಾದರೆಂಬುದು ಅವರನ್ನು ಬಲ್ಲವರೆಲ್ಲರಿಗೂ ದುಃಖದ ಸಂಗತಿಯಾಗಿದೆ] ವಯಸ್ಸು ಸನ್ನಿಹಿತವಾಯಿತೆಂದು ನಿವೃತ್ತಿಗೊಳಿಸಿದ್ದು ವಿಶ್ವವಿದ್ಯಾನಿಲಯದ ದೌರ್ಭಾಗ್ಯ. ಕನ್ನಡ ವಿಶ್ವಕೋಶವನ್ನು ಇಂದಿನ ದುಃಸ್ಥಿತಿಗೆ ತಂದ, ವಿಷಯ ವಿಶ್ವಕೋಶವನ್ನು ಅನಾಥ ಸ್ಥಿತಿಗೆ ನೂಕಿದ ಉದ್ದಂಡ, ಉದ್ಧಾಮ ವಿದ್ವಜ್ಜನರು ಕೀರ್ತಿವೇಷ್ಟಿತರಾಗಿ ಬಾಳಲೆಂದು ಹಾರೈಸುತ್ತೇನೆ. ಕಣ್ಣೀರಿನಲ್ಲಿ ಲೇಖನಿಯದ್ದಿ ನಾನು ಈ ಮಾತು ಬರೆಯುವ ತನಕ ಬದುಕಬೇಕಾಯಿತೆ ಎಂದು ಮನಸ್ಸು ಉದ್ವಿಗ್ನಗೊಂಡಿದೆ. ಇಲ್ಲಿಗೆ ಅಪ್ರಕೃತವಾದರೂ ಜಿ.ಟಿ. ನಾರಾಯಣ ರಾಯರ ವಿಶೇಶ ಗುಣವನ್ನು ಪ್ರಕಟಿಸುವ ಅವರ ಮತ್ತೊಂದು ಮುಖವನ್ನು ಇಲ್ಲಿ ದಾಖಲಿಸಲೇಬೇಕು. ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷವನ್ನು ಕೊಟ್ಟಿದ್ದಾರೆ. ಎಲ್ಲ ರೀತಿಯಿಂದ ಈ ಶಿಕ್ಷಣ ನೌಕರಿಗಲ್ಲ, ಬದುಕಿಗೆ ಎಂದು ಅವರೇ ಹೇಳುತ್ತಾರೆ. ಸ್ವಾವಲಂಬನೆ ಅವರ ಜೀವನ ಮಂತ್ರ. ನಿರುದ್ಯೋಗಿಗಳ ಸಾಲಿನಲ್ಲಿ ನನ್ನ ಮಕ್ಕಳನ್ನು ಕಾಯಿಸಲಾರೆ; ಅವರಿವರ ಮುಂದೆ ನಿಂತು ನಾನು ಹಲ್ಲುಗಿಂಜಲಾರೆ; ನನ್ನ ಮಕ್ಕಳು ಆತ್ಮ ಗೌರವವನ್ನು ತೊರೆದು ಅವರಿವರ ಮುಂದೆ ಅಂಗಲಾಚುವುದನ್ನು ನಾನು ನೋಡಲಾರೆ; ಮೊದಲೇ ನಿರುದ್ಯೋಗಸ್ಥ ಅನಾಥರಾಗಿರುವ, ತನ್ನ ಮಕ್ಕಳ ಬವಣೆಯನ್ನು ನೋಡಿ ದುಃಖಾಕ್ರಾಂತಳಾಗಿರುವ ಭಾರತ ಮಾತೆಗೆ ನಾನು ಮತ್ತು ನನ್ನ ಮಕ್ಕಳು ಮತ್ತಷ್ಟು ತೊಂದರೆ ಕೊಡಬಾರದು, ಅವಳಿಗೆ ಭಾರವಾಗಬಾರದು; ನನ್ನ ಮಕ್ಕಳು ಸ್ವಾವಲಂಬಿಗಳಾಗಿ, ಸ್ವಾಭಿಮಾನಿಗಳಾಗಿ, ಸ್ವಧರ್ಮ ನಿರತರಾಗಿ ದುಡಿದು ಬದುಕಬೇಕು ಎಂಬುದು ರಾಯರ ಆಕಾಂಕ್ಷೆ ಮತ್ತು ಸಂಕಲ್ಪ. ನುಡಿದಂತೆ ನಡೆಯುವ, ಆ ನೀತಿವಂತರು ತಮ್ಮ ಆಕಾಂಕ್ಷೆಯನ್ನು ಪೂರೈಸಿಕೊಳ್ಳುವಲ್ಲಿ ಕೃತಕೃತ್ಯರಾಗಿದ್ದಾರೆ; ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಇಂಥ ಧೀಮಂತರೂ, ಶ್ರೇಷ್ಠ ವಿದ್ವಾಂಸರೂ ಸತತ ಕ್ರಿಯಾಶೀಲರೂ, ಕಾಯಕ ತಪಸ್ವಿಗಳೂ ಆದ ಪ್ರೊ. ಜಿ.ಟಿ. ನಾರಾಯಣರಾಯರು ಶ್ರೀ ಕೆ.ವಿ. ಶಂಕರ ಗೌಡ ಸ್ಮಾರಕ ಉಪನ್ಯಾಸ ಮಾಲೆಯಲ್ಲಿ ಭಾಷಣ ಮಾಡಲೊಪ್ಪಿದ್ದು ಸಂತಸದ ಸಂಗತಿ. ಮಹಾಕವಿ ಕುವೆಂಪು ಅವರಿಂದ ನಿತ್ಯಸಚಿವರೆನಿಸಿಕೊಂಡ, ಮಹಾಕಾದಂಬರಿಕಾರ ಅನಕೃ ಅವರಿಂದ ಅಪೂರ್ವ ಸಚಿವರೆಂದು ಕರೆಸಿಕೊಂಡ ಶಂಕರಗೌಡರು ಸ್ವಯಂ ವಿದ್ವಾಂಸರು, ಗಾಂಧಿ ಅನುಯಾಯಿಗಳು, ಕಲಾವಿದರು ಮಾತ್ರವಲ್ಲ, ಕಲಾಪೋಷಕರು, ನಾಟಕಕಾರರು, ಹಲವು ಸಹಕಾರ ಶಿಕ್ಷಣ ಸಂಸ್ಥೆಗಳ ನಿರ್ಮಾಪಕರು, ರೈತ ಬಾಂಧವರು ಮತ್ತು ತ್ಯಾಗವೀರರು. ಈ ಮಾಲೆಯಲ್ಲಿ ಇದು ೨೦ನೆಯ ಉಪನ್ಯಾಸ. ನ್ಯಾಯವಾಗಿ ಇದು ೨೪ನೆಯದಾಗಬೇಕಿತ್ತು. ಬರೆದುಕೊಡುವ ಮುನ್ನವೇ ಒಬ್ಬರು ತೀರಿಕೊಂಡರು. ಮತ್ತೊಬ್ಬರು ತಾವೇ ಮುದ್ರಿಸಿ ಮಡಗಿಕೊಂಡರು. ಇನ್ನಿಬ್ಬರು ಹಸ್ತಪ್ರತಿಯನ್ನೇ ಕೊಡಲಿಲ್ಲ. ಕಾರಣಾಂತರದಿಂದ ಒಂದು ಭಾಷಣ ನಡೆಯಲಿಲ್ಲ. ಕೊನೆಯದು ಹೊರತಾಗಿ, ಉಳಿದ ಉಪನ್ಯಾಸಗಳಿಗೆ ಸಂಭಾವನೆ ಸಂದಿದೆ.

ಸಾಮಾನ್ಯರಿಗೆ ಮಾತ್ರವಲ್ಲ, ಮಹಾವಿಜ್ಞಾನಿಗಳಿಗೂ ವಿಶ್ವ ಸವಾಲಾಗಿ ನಿಗೂಢವಾಗಿ, ಆಶ್ಚರ್ಯ ಪ್ರಶ್ನೆ ಚಿಹ್ನೆಗಳ ನಡುವಣದೋಲಕವಾಗಿ, ಅರಿತಂತೆಲ್ಲ ಅರಿದಾಗಿ, ನಿರ್ದಿಗಂತವಾಗಿ ತೋರುತ್ತಿದೆ. ರೂಢಿಬದ್ಧರಾಗಿ, ವಿವಾದವಿಲ್ಲದೆಯೆ, ಶ್ರದ್ಧಾಭಕ್ತಿಗಳಿಗೆ ಅದು ಅನಾದಿ ಅನಂತವೆಂದು ಎಲ್ಲರೂ ಒಪ್ಪಿ ತೆಪ್ಪಗಾಗುತ್ತೇವೆಯೇ ಹೊರತು, ಅದನ್ನು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ತನ್ನ ಸುತ್ತಮುತ್ತ ಪ್ರತಿಕ್ಷಣವೂ ಕಣ್ಣು ಮನಸ್ಸುಗಳಿಗೆ ರಾಚುತ್ತಿರುವ ಸೃಷ್ಟಿಯ ವೈಚಿತ್ರ್ಯ ವೈವಿಧ್ಯ ವೈಭವಗಳ ಬಗೆಗೆ, ಭೂರಚನೆಯ ಬಗೆಗೆ, ವಾತಾವರಣದ ಬಗೆಗೆ ಮನುಷ್ಯ ಸಾಮಾನ್ಯವಾಗಿ ಯೋಚನೆ ಹರಿಸುವುದಿಲ್ಲ. ಇಂಥ ಯೋಚನೆ ಇಲ್ಲದೆಯೇ ಅವನು ಬದುಕು ಮುಗಿಸುತ್ತಾನೆ. ಸುತ್ತಮುತ್ತಣ ಪ್ರದೇಶವೇ ನಿಗೂಢತೆಯ ಬೀಡಾಗಿರುವಾಗ ವಿಶ್ವದ ನಿಗೂಢತೆ ಅಪ್ರಮೇಯ ಅಚಿಂತ್ಯವೆಂದೇ ಹೇಳಬೇಕು. ಆದರೂ ಸತ್ಯಾನ್ವೇಷಣಾತತ್ಪರರಾದ ಮಹಾವಿಜ್ಞಾನಿಗಳು ಅದರ ರಚನೆ ಸ್ವರೂಪ ವ್ಯಾಪ್ತಿ ವಿಸ್ತಾರ ಸೌಂದರ್ಯಾದಿ ರಹಸ್ಯಗಳನ್ನರಿಯಲು ಪ್ರಾಚೀನ ಕಾಲದಿಂದಲೂ ಪ್ರಯತ್ನಿಸುತ್ತಿದ್ದಾರೆ. ಆ ಪ್ರಯತ್ನದ ಫಲವಾಗಿ ಅನೇಕ ಶೋಧಗಳು ಬೆಳಕಿಗೆ ಬಂದಿವೆ. ಸಾಮಾನ್ಯರಿಗೆಷ್ಟು ಬೇಕೋ ಅಷ್ಟನ್ನು ಮಾತ್ರ ಸಂಗ್ರಹಿಸಿ, ಗ್ರಂಥಕರ್ಥರು ಉಪನ್ಯಾಸದ ಇತಿಮಿತಿಗಳಲ್ಲಿ ‘ವಿಶ್ವದ ಕಥೆ’ಯನ್ನು ಓದುಗರ ಮುಂದೆ ಇರಿಸಿದ್ದಾರೆ. ನಿಗೂಢ ವಿಷಯಗಳನ್ನು ವಿವರಿಸುವಾಗ ಭಾಷೆ ತುಸು ಗಟ್ಟಿಯಾಗುವುದು ಸಹಜ. ನಿಧಾನವಾಗಿ ಓದಿದಾಗ ಅದು ತನ್ನ ಹೃದಯವನ್ನು ತೆರೆದು ತೋರಿಸುತ್ತದೆ.

ಪ್ರಶ್ನೆಯಿಂದ ಆಶ್ಚರ್ಯಕೆ
ಆಶ್ಚರ್ಯದಿಂದ ಪ್ರಶ್ನೆಗೆ
ಉಭಯ ಮಧ್ಯೆ ಚಲಿಪ ವಿದ್ಯೆ
ಪೂರ್ಣೆ ಶೂನ್ಯೆ ಕುಂಡಲಿನೀ – ಕುವೆಂಪು

ಈ ಗ್ರಂಥವನ್ನು ಬರೆದುಕೊಟ್ಟಿರುವ ಪ್ರೊ. ಜಿ.ಟಿ. ನಾರಾಯಣರಾಯರಿಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮತ್ತು ಶ್ರೀ ಕುವೆಂಪು ವಿದ್ಯಾ ಪರಿಷತ್ತಿನ ಪರವಾಗಿ ಹೃತ್ಪೂರ್ವಕ ಧನ್ಯವಾದವನ್ನರ್ಪಿಸುತ್ತೇನೆ.

ದೇಜಗೌ ೯-೨-೧೯೯೯ ಮೈಸೂರು ೫೭೦೦೧೨

ದೆಹಲಿ ಕರ್ನಾಟಕ ಸಂಘ ಒಪ್ಪಿಸಿದ
ಡಾ. ಶಿವರಾಮ ಕಾರಂತ ಪ್ರಶಸ್ತಿ ೨೦೦೦

ಈ ಸಂಘ ನನ್ನನ್ನು ದೆಹಲಿಗೆ ಕರೆಸಿಕೊಂಡು ನೀಡಿದ ಪ್ರಶಸ್ತಿ ಪತ್ರ:
ಸನ್ಮಾನ್ಯರಾದ ಶ್ರೀ ಜಿ.ಟಿ. ನಾರಾಯಣರಾವ್ ಅವರೇ,
೨೦೦೦ ವರ್ಷಗಳ ಸುದೀರ್ಘ ಮತ್ತು ಶ್ರೀಮಂತ ಸಾಹಿತ್ಯ ಪರಂಪರೆ ಇರುವ ಕನ್ನಡ ಭಾಷೆಯನ್ನು ವಿಜ್ಞಾನ ಸಂಬಂಧೀ ಬರಹಗಳ ಮೂಲಕ ಹೊಸ ಎತ್ತರಕ್ಕೇರಿಸಿದವರು ತಾವು. ಹಾಗೆ ಮಾಡುವುದರ ಮೂಲಕ ಕನ್ನಡ ಭಾಷೆಯನ್ನು ಆಧುನಿಕ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಪುನಾರೂಪಿಸಿ ಬೆಳೆಸಿದಿರಿ. ಕನ್ನಡಂಥ ಪ್ರಾದೇಶಿಕ ಭಾಷೆಯಲ್ಲಿ ವಿಜ್ಞಾನ ಪ್ರಪಂಚದ ಸಂಕೀರ್ಣ ಪರಿಕಲ್ಪನೆಗಳನ್ನು ವಿನೂತನ ದಾಟಿಯಲ್ಲಿ ಆಕರ್ಷಕವಾಗಿ, ಸರ್ವಗ್ರಾಹ್ಯವಾಗಿ ಮತ್ತು ಸಮಗ್ರವಾಗಿ ಮಂಡಿಸಲು ಸಾಧ್ಯ ಎಂಬುದನ್ನು ತಾವು ಸಾಧಿಸಿ ತೋರಿಸಿದಿರಿ. ಇಂತಹ ಸಾಧನೆಗಳ ಮೂಲಕವೇ ನಾಡು-ನುಡೀ ಸಮೃದ್ಧಿಗೊಳ್ಳುತ್ತದೆ ಎಂದು ನಾವು ಬಲವಾಗಿ ನಂಬಿದ್ದೇವೆ.

ಎಪ್ಪತ್ನಾಲ್ಕು ವಸಂತಗಳನ್ನು ಕಂಡ ಕವಿ ಹೃದಯದ ತಾವು, ಕಳೆದ ೫೦ ವರ್ಷಗಳಿಂದ ವಿಜ್ಞಾನ ಪ್ರಪಂಚದ ಕಾರ್ಯಕಾರಣ ಸಂಬಂಧಗಳನ್ನು ಎಲ್ಲ ತಲೆಮಾರಿನ ಜನರಿಗೆ ದಣಿವರಿಯದೆ ವಿವರಿಸುತ್ತಲೇ ಬಂದಿದ್ದೀರಿ. ಇದಕ್ಕಾಗಿ ಲೇಖನ, ಪುಸ್ತಕ, ಭಾಷಣ, ಅಧ್ಯಾಪನ ಮತ್ತಿತರ ಮಾಧ್ಯಮಗಳನ್ನು ತಾವು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತ ಬಂದಿದ್ದೀರಿ. ನಂಬಿದ ಮೌಲ್ಯಗಳಿಗಾಗಿ ಹೀಗೆ ನಿರಂತರವಾಗಿ ದುಡಿದ ಅಪೂರ್ವ ವ್ಯಕ್ತಿತ್ವ ನಿಮ್ಮದು. ನಾವೆಲ್ಲ ಅದಕ್ಕಾಗಿ ಹೆಮ್ಮೆ ಪಡುತ್ತಿದ್ದೇವೆ.

ತಾವು ಬರೆದ ಆಲ್‌ಬರ್ಟ್ ಐನ್ಸ್‌ಟೈನ್, ನೋಡೋಣು ಬಾರಾ ನಕ್ಷತ್ರ, ಪ್ಲಾಂಕ್ ಐನ್ಸ್‌ಟೈನ್ ಬೋರ್, ಸೂರ್ಯನ ಸಾಮ್ರಾಜ್ಯ, ಭವಿಷ್ಯ ವಿಜ್ಞಾನ, ಭವಿಷ್ಯ ವಾಚನ, ಗಣಿತ ಗಗನ ಗಮನ, ಸುಬ್ರಹ್ಮಣ್ಯನ್ ಚಂದ್ರಶೇಖರ್, ಐವರು ವಿಜ್ಞಾನಿಗಳು, ಧೂಮಕೇತು, ವೈಜ್ಞಾನಿಕ ಮನೋಧರ್ಮ, ಸೂಪರ್ನೋವಾ, ಶ್ರೀನಿವಾಸ ರಾಮಾನುಜನ್ ಮತ್ತಿತರ ಗ್ರಂಥಗಳು ಭೌತ ಜಗತ್ತಿನ ಪ್ರಗಲ್ಭ ವಿದ್ಯಮಾನಗಳನ್ನು ರೋಮಾಂಚಕಾರಿಯಾಗಿ ಓದುಗರಿಗೆ ವಿವರಿಸಿವೆ. ಡಾ. ಶಿವರಾಮ ಕಾರಂತರ ವಿಜ್ಞಾನ ಪ್ರಪಂಚ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶದ ವಿಜ್ಞಾನ ವಿಭಾಗದ ಸಂಪಾದಕರಾಗಿ ತಾವು ಸಲ್ಲಿಸಿದ ಸೇವೆಯೂ ಅನುಪಮವಾದುದು. ಕರ್ನಾಟಕ ಸರ್ಕಾರ ಮತು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸಮಿತಿಗಳಲ್ಲಿಯೂ ತಾವು ವಿಜ್ಞಾನದ ಕೆಲಸಗಳನ್ನು ಮಾಡುತ್ತಲೇ ಬಂದಿರುವಿರಿ. ಸಂದರ್ಭೋಚಿತವಾಗಿ ತಾವು ಬರೆದ ಪತ್ರಿಕಾ ಲೇಖನಗಳು ಹಲವು ಬಗೆಯ ಮೂಢನಂಬಿಕೆಗಳಿಗೆ ತೆರೆ ಎಳೆದಿರುವುದನ್ನು ನಾವು ಗಮನಿಸಿದ್ದೇವೆ.

ವಿಜ್ಞಾನಕ್ಕೂ ಕಾವ್ಯಕ್ಕೂ ಜೈವಿಕ ಸಂಬಂಧವಿದೆ ಎಂಬುದನ್ನು ತೋರಿಸಿದ ಕೀರ್ತಿ ತಮಗೆ ಸಲ್ಲುತ್ತದೆ. ತಮ್ಮ ಗ್ರಂಥಗಳ ನಡುವೆ ಮಿಂಚಿ ಮಾಯವಾಗುವ ಕವನಗಳ ಸಾಲುಗಳು ತಮ್ಮ ಭಾಷಣಗಳಲ್ಲಿ ಅಸ್ಖಲಿತವಾಗಿ ಹರಿದು ಬರುತ್ತಿದ್ದ ಕಾವ್ಯಧಾರೆಯನ್ನು ಕನ್ನಡಿಗರೆಲ್ಲ ನೆನಪಿಟ್ಟುಕೊಳ್ಳುತ್ತಿದ್ದಾರೆ. ಕೊಡಗಿನ ಸುಮಗಳು ಹರಡಿದ ಪರಿಮಳ, ಎನ್ಸಿಸಿ ದಿನಗಳು ವಿವರಿಸಿದ ಜೀವನ ಧರ್ಮವನ್ನು ಯಾರಿಗೂ ಮರೆಯಲಾಗದು.

ತಮ್ಮ ಸಾಧನೆಗಾಗಿ ತಾವು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಹಾಗೂ ರಾಷ್ಟ್ರಕವಿ ಕುವೆಂಪು ದತ್ತಿ ನಿಧಿಯ ವಿಶ್ವಮಾನವ ಪ್ರಶಸ್ತಿಗಳನ್ನು ಪಡೆದಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕದ ಅಸಂಖ್ಯ ಓದುಗರ ಪ್ರೀತಿ-ಅಭಿಮಾನಗಳಿಗೆ ಪಾತ್ರರಾಗಿದ್ದೀರಿ. ತಮ್ಮ ಬರಹಗಳಿಂದ ಕನ್ನಡ ಭಾಷೆಗೆ ಹೊಸ ಬಗೆಯ ಚೈತನ್ಯ ಪ್ರಾಪ್ತಿಸಿದೆ. ಕರ್ನಾಟಕದ ಜನತೆಗೆ ಜ್ಞಾನದ ಬಹುಮುಖತೆ ಲಭ್ಯವಾಗಿದೆ. ಮುಂದಿನ ಶತಮಾನಗಳಿಗಾಗಿ ನಾಡುನುಡಿಗಳನ್ನು ಸಜ್ಜುಗೊಳಿಸುವ ಮಹತ್ತ್ವದ ಹೊಣೆಗಾರಿಕೆಯನ್ನು ತಾವು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ್ದೀರಿ. ನಾಡಿನ ಜನತೆ ಅದಕ್ಕಾಗಿ ತಮಗೆ ಋಣಿಯಾಗಿದೆ.

ಇವುಗಳನ್ನೆಲ್ಲ ಗಮನದಲ್ಲಿರಿಸಿಕೊಂದು ‘ಮಣ್ಣಿನಮನದಲಿ ಹೊನ್ನನೆ ಬೆಳೆಯುವ ಅಪೂರ್ವ ತೇಜದ ಮಾಂತ್ರಿಕ’ರಾದ ತಮಗೆ ದೆಹಲಿ ಕರ್ನಾಟಕ ಸಂಘವು ಎರಡನೆಯ ಶಿವರಾಮ ಕಾರಂತ ಪ್ರಶಸ್ತಿಯನ್ನು ಅಭಿಮಾನಪೂರ್ವಕವಾಗಿ ನೀಡಿ ಗೌರವಿಸುತ್ತದೆ.

ಕೆ.ಆರ್, ನಾಗರಾಜ, ಅಧ್ಯಕ್ಷರು. ಎಚ್.ವೈ. ಶಾರದಾ ಪ್ರಸಾದ್, ಅಧ್ಯಕ್ಷರು, ಡಾ. ಶಿವರಾಮ ಕಾರಂತ ಪ್ರಶಸ್ತಿ ಸಮಿತಿ. ಎಸ್. ಕೃಷ್ಣ ಭಟ್, ಪ್ರಧಾನ ಕಾರ್ಯದರ್ಶಿ. ದಿನಾಂಕ ೬-೮-೨೦೦೧ ನವದೆಹಲಿ. ಶ್ರೀ ಅನಂತ ಕುಮಾರ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರು.

ಬೆಂಗಳೂರು ಗಾಯನ ಸಮಾಜ ತನ್ನ ಶತಮಾನೋತ್ಸವ ಸಂದರ್ಭದಲ್ಲಿ ಮಾಡಿದ ಪ್ರಶಸ್ತಿ ವಾಚನ
ಮಾನ್ಯರೆ
ಮಡಿಕೇರಿಯಲ್ಲಿ ೧೯೨೬ರಲ್ಲಿ ಜನಿಸಿದ ತಾವು ೧೯೪೨ರಲ್ಲಿ ಎಸ್ಸೆಸೆಲ್ಸಿ ತೇರ್ಗಡೆಯಾಗಿ ಮುಂದೆ ಮಂಗಳೂರು, ಮದರಾಸು ನಗರಗಳಲ್ಲಿ ಕಾಲೇಜು ಅಧ್ಯಯನವನ್ನು ಮುಂದುವರಿಸಿದಿರಿ. ೧೯೪೭ರಲ್ಲಿ ಗಣಿತ ಎಂಎ ಪದವೀಧರರಾಗಿ, ತರುವಾಯದ ಎರಡು ವರ್ಷ ಮದರಾಸಿನಲ್ಲಿ ಕಾಲೇಜ್ ಉಪನ್ಯಾಸಕರಾಗಿ ವೃತ್ತಿ ಜೀವನಾರಂಭ ಮಾಡಿದಿರಿ. ಮನೆಯೊಳಗೂ ಹೊರಗೂ ಸಂಗೀತ ಮತ್ತು ಸಾಹಿತ್ಯ ಪರಿಸರ ಮತ್ತು ಆ ದಿನಗಳ ಉತ್ತಮ ಮಟ್ಟದ ಶಿಕ್ಷಣ ತಮ್ಮಲ್ಲಿದ್ದ ಸುಪ್ತಪ್ರತಿಭೆಯನ್ನು ಜಾಗೃತಗೊಳಿಸಿ, ಸಾಹಿತ್ಯ ಮತ್ತು ಸಂಸ್ಕೃತಿಗಳ ಸೇವೆಯನ್ನು ಪ್ರೇರೇಪಿಸಿತು. ಸ್ವಭಾವತಃ ಇರುವ ವೈಜ್ಞಾನಿಕ ಮನೋಭಾವ ಮತ್ತು ಕನ್ನಡದ ಅಭಿಮಾನ ತಮ್ಮನ್ನು ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಲೇಖಕರಾಗಿ ರೂಪಿಸಿತು. ಸಂದರ್ಭಕ್ಕೆ ತಕ್ಕಂತೆ ಸ್ವಯಂ ಪ್ರೇರಣೆಯಿಂದ, ಅಂತರ್ವಾಣಿಯಿಂದ ರಚಿತವಾಗುವ ಕವಿತೆಗಳು ತಮ್ಮ ಲೋಕಜ್ಞಾನದ ಪ್ರತೀಕ ಮತ್ತು ತಮ್ಮ ಪ್ರಬುದ್ಧತೆಯ ಇನ್ನೊಂದು ಮುಖ. ತಾವೇ ಒಂದು ಸಂದರ್ಭದಲ್ಲಿ ಹೇಳಿರುವಂತೆ, “ಸಂಗೀತವೆನ್ನುಸಿರು, ಸಾಹಿತ್ಯವೆನ್ನೊಡಲು, ವಿಜ್ಞಾನವೆನ್ನುಣಿಸು” ಎಂಬ ಮಾತು ಎಷ್ಟು ಸತ್ಯ ಎಷ್ಟು ಅರ್ಥಪೂರ್ಣ!

೧೯೬೯ರಲ್ಲಿ ಬೆಂಗಳೂರಿನಲ್ಲಿದ್ದ ತಮಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಬಂದ ಆಹ್ವಾನ ತಮ್ಮನ್ನು ಮೈಸೂರಿನ ಶಾಶ್ವತವಾಸಿಗಳಾಗಿ ಮಾಡಿ ಸಂಗೀತ ಮತ್ತಿತರ ಕಲಾಪ್ರಕಾರಗಳಿಗೆ ಉಪಕಾರ ಮಾಡಿತು. ಉನ್ನತ ಮಟ್ಟದ ಸಂಗೀತ ಶ್ರವಣ, ಅಧ್ಯಯನಗಳಿಂದ ಪಕ್ವವಾಗಿದ್ದ ತಮಗೆ ಸಕ್ರಿಯವಾಗಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ೧೯೭೮ರಲ್ಲಿ ಸ್ಥಾಪಿತವಾದ ಗಾನಭಾರತೀ ಸ್ವಯಂಸೇವಾ ಸಂಸ್ಥೆ ತಮ್ಮನ್ನು ಒಬ್ಬ ಗೌರವ ಪದಾಧಿಕಾರಿಯಾಗಿ ಬರಲು ಒಲವಿನ ಕರೆಯಿತ್ತು. ೧೯೮೦ರಲ್ಲಿ ಗೌರವ ಕೋಶಾಧಿಕಾರಿ ಹೊಣೆ ವಹಿಸಿತು. ಮುಂದಿನ ಹದಿನೈದು ವರ್ಷ ತಾವು ಈ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದಿರಿ. ಈ ಅವಧಿಯಲ್ಲಿ ಇತರ ಸಮಿತಿ ಸದಸ್ಯರೊಡಗೂಡಿ ಧನ ಸಂಗ್ರಹಣೆ ಮಾಡಿ, ವೀಣೆ ಶೇಷಣ್ಣ ಭವನ ೧೯೯೧ರಲ್ಲಿ ಲೋಕಾರ್ಪಣೆಯಾಯಿತು. ಈ ನಿಟ್ಟಿನಲ್ಲಿ ತಮ್ಮ ಕಲಾಕೈಂಕರ್ಯವನ್ನು ನಾದಿನಾದ್ಯಂತ ಜನತೆ ಕೃತಜ್ಞತೆಯಿಂದ ನೆನೆಯುತ್ತದೆ.

ಸಂಗೀತಜ್ಞರೂ ಕಲಾವಿಮರ್ಶಕರೂ ಆದ ತಮ್ಮಿಂದ ಹಲವಾರು ಲೇಖನಗಳು ಪ್ರಕಟವಾಗಿವೆ. ತಮ್ಮ ಪಕ್ಷಪಾತರಹಿತ, ಮೌಲ್ಯಾಧಾರಿತ ಕಲಾ ವಿಮರ್ಶೆಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸುತ್ತಿವೆ. ತಮ್ಮ ಸಾಹಿತ್ಯ, ವಿಜ್ಞಾನ, ಕಲಾಕ್ಷೇತ್ರಗಳ ಸೇವೆಗೆ ಹಲವಾರು ಪ್ರಶಸ್ತಿ, ಗೌರವಗಳು ಸಂದಿವೆ.

ಈ ರೀತಿ ಸಂಗೀತ ಕ್ಷೇತ್ರಕ್ಕೆ ಬಹುಮುಖ ಸೇವೆಯನ್ನು ಸಲ್ಲಿಸುತ್ತಿರುವ ತಮ್ಮನ್ನು ಬೆಂಗಳೂರು ಗಾಯನ ಸಮಾಜ ತನ್ನ ಶತಮಾನೋತ್ಸವ ವರ್ಷವನ್ನು ೮ನೇ ಮೇ ೨೦೦೫ರಂದು ಮೈಸೂರಿನಲ್ಲಿ ಆಚರಿಸುತ್ತಿರುವ ಸಂದರ್ಭದಲ್ಲಿ ವರ್ಷದ ಕಲಾವಿದರು ಎಂದು ಗೌರವಿಸಿ, ಸನ್ಮಾನಿಸಲು ಹೆಮ್ಮೆ ಪಡುತ್ತದೆ. ಕಲಾಧಿದೇವತೆಯಾದ ಶ್ರೀ ಶಾರದೆಯು ತಮಗೂ ತಮ್ಮ ಕುಟುಂಬ ವರ್ಗಕ್ಕೂ ಆಯುರಾರೋಗ್ಯ, ಐಶ್ವರ್ಯಾದಿಗಳನ್ನು ದಯಪಾಲಿಸಲಿ, ತಮ್ಮಿಂದ ಇನ್ನೂ ಹೆಚ್ಚಿನ ಕಲಾಸೇವೆ ನಡೆಯುವಂತೆ ಅನುಗ್ರಹಿಸಲಿ ಎಂದು ಹಾರೈಸುತ್ತೇವೆ.

ಗಾಯನ ಸಮಾಜದ ಪರವಾಗಿ ಎಚ್. ಕಮಲನಾಥ್, ಅಧ್ಯಕ್ಷರು, ಬೆಂಗಳೂರು ಮೈಸೂರು ೮ನೇ ಮೇ ೨೦೦೫

VIDWAN R.K. SRIKANTAN TRUST (Regd)
Bangalore
Felicitation address
Presented to
Shri G.T. Naryana Rao
Sir
You have been a noted art critic who has earned a wide reputation for your write-ups of high standard.
With your long stint as a respectable critic, you have obviously made your presence felt among the musical and dance fraternity.
It is a known fact that a critic in any art form has a significant role to play. A constructive criticism fair or unfair, irrespective of personal likes or dislikes, pressures and preferences is the need of the hour. Allowing nothing other than the dictates of your conscience influence your opinion you have indeed filled the bill appropriately as the true critic.
Your knowledge, courage and conviction gained as a result of your long association with and listening and viewing experience of music and dance performances have made your critical assessment purposeful and praise worthy.
By achieving excellence in your chosen field you have not only won many laurels personally but also served the world of music and dance with distinction.
So in due recognition of your splendid contribution to the cause of music, we are pleased to honour you on this auspicious occasion, on this day of 15-1-2005
We also pray for summons from the Almighty to bestow upon you long life and prosperity along with a fruitful career.
Yours
On behalf of the trust
Rudrapatnam S.Ramakanth
Managing Trustee

(ಮುಂದುವರಿಯಲಿದೆ)