(ಭಾಗ ಒಂದು)
ಅಮ್ಮನ ಆರೈಕೆ ಎಂಬ ಪೀಠಿಕೆ

ಪ್ರಾಕೃತಿಕವಾಗಿ ನನ್ನಮ್ಮ (ಲಕ್ಷಿ ನಾ. ರಾವ್ ೧೯೩೦-) ಸದೃಢವಂತೆ, ನಿರೋಗಿ. ನನ್ನಪ್ಪನೂ (ಜಿ.ಟಿ ನಾರಾಯಣ ರಾವ್ – ೧೯೨೬-೨೦೦೮) ಸ್ವಲ್ಪ ಮಟ್ಟಿಗೆ ಹಾಗೇ – ಸದಾ ಶೀತಪ್ರವೃತ್ತಿಯೊಂದನ್ನು ಹೊರತುಪಡಿಸಿ! ಸೋರುಮೂಗು, ನಾಸಾಬಂದ್, ಕೆಮ್ಮು ಸಂಬಂಧಗಳಲ್ಲಿ ಅಪ್ಪ ಮಾಡದ ಪ್ರಯೋಗಗಳಿಲ್ಲ (ಹೊಮಿಯೋಪಥಿ, ರಾತ್ರಿ ನಿದ್ರಿಸುವ ಮುನ್ನ ಮೂಗಿಗೆ ಬಿಸಿ ತುಪ್ಪ, ಪ್ರಾಣಾಯಾಮ, ನೇತಿ, ರೇಕಿ, ಗಿಡಮೂಲಿಕೆಗಳ ಹಲವು ಬಗೆ ಮತ್ತವುಗಳ ಹಲವು ರೂಪ – ನೇರ ಸೇವನೆ, ಪರಿಷ್ಕರಣೆ, ಲೇಪನೆ ಇತ್ಯಾದಿ). ಈ ವ್ಯರ್ಥ ಕದನದ ಹತಾಶಾ ಶಿಖರದಲ್ಲಿ, ಅಂದರೆ ಸುಮಾರು ಹತ್ತು ವರ್ಷಗಳ ಹಿಂದೊಮ್ಮೆ ಅವರು ಭವರೋಗ ಧನ್ವಂತರಿಯೇ ಸರಿ ಎಂದು ನಂಬಿದ್ದ ಓರ್ವ ಯಮ.ಬಿ.ಬೀ.ಯೆಸ್ ವೈದ್ಯ ಹೆಚ್ಚುಕಮ್ಮಿ ಮರಣಾಂತಿಕವಾಗಿ ವಂಚಿಸಿದ್ದ. ಒಂದು ಕಾಲು ಗೋರಿಯೊಳಗೆ ಎಂದೇ ಹೊರಟಿದ್ದ ಅಪ್ಪನನ್ನು ನಿಜಪರಿಣತ ವೈದ್ಯರಿನ್ನೊಬ್ಬರು (ಮೈಸೂರಿನ ಬೀಯೆಮ್ಮೆಸ್ಸ್ ಆಸ್ಪತ್ರೆಯ ಡಾ| ಕುದರಿ) ಇತ್ತ ಎಳೆದು ತಂದಿದ್ದರು. ಆಗ ಸುಮಾರು ಒಂದೂವರೆ ತಿಂಗಳು ಆಸ್ಪತ್ರೆವಾಸ ಮತ್ತೆ ಮನೆಯಲ್ಲೂ ಮುಂದುವರಿದ ಅಪ್ಪನ ಆರೈಕೆಯನ್ನು ಸತಿ ಸಾವಿತ್ರಿಯಂತೇ ಮಾಡಿದವಳು ಅಮ್ಮ. ಆದರೆ ಅಪ್ಪನ ಆರೈಕೆಯಲ್ಲಿ ಸ್ವಂತದ ಪ್ರಾಯ (ಅಪ್ಪನಿಗಿಂತ ನಾಲ್ಕೇ ವರ್ಷಕ್ಕೆ ಸಣ್ಣಾಕೆ), ಅನುಪಾನ ಮತ್ತು ವಿಶ್ರಾಂತಿಗಳನ್ನು ಏರುಪೇರು ಮಾಡಿಕೊಂಡು ಬಳಲಿದ ಅಮ್ಮನಿಗೆ ಗಂಟುವಾತದ ಅನಪೇಕ್ಷಿತ ಸಂಬಂಧ ಕುದುರಿಕೊಂಡಿತು. ಅದರ ವಿವರಗಳು ಯಾವುದೇ ದೀರ್ಘ ಕಾಲೀನ ಕಾಯಿಲೆಗಳನ್ನು ಅನುಭವಿಸುವವರದ್ದಕ್ಕಿಂತ ಭಿನ್ನವಿರಲಾರದು. ಹಾಗಾಗಿ ಅಂಥ ಅನುಭವ ಇರುವವರಿಗೆ ನಾನಿಲ್ಲಿ ಹೇಳುವ ಅಗತ್ಯವಿಲ್ಲ, ಇತರರಿಗೆ ಹೇಳಿ ಪ್ರಯೋಜನವಿಲ್ಲ! ಸುಮಾರು ಹತ್ತು ವರ್ಷಗಳ ಉದ್ದಕ್ಕೆ ಈ ಅನಪೇಕ್ಷಿತ ಅತಿಥಿಯನ್ನು ‘ಸಾಕಿಕೊಂಡು ಅಮ್ಮ ನಡೆಸಿದ ಪ್ರಯೋಗಗಳು ಅಪ್ಪನದ್ದರಂತೇ ವೈವಿಧ್ಯಮಯವಾದರೂ ಅನುಭವಿಸುತ್ತಿರುವ ನೋವು ಖಂಡಿತವಾಗಿಯೂ ತೀವ್ರ ಹಾಗೂ ದೀರ್ಘತಮ.

ಅಮ್ಮನಿಗೆ ಈಚೆಗೆ ಪ್ರಾಯ ಸಹಜವಾದ ಬಳಲಿಕೆಯೊಡನೆ ಉಪ-ಸಂಕಟವಾಗಿ ತೀವ್ರ ಶೀತದ ಪರಿಣಾಮಗಳು (ಕಫ, ತೀವ್ರ ಕೆಮ್ಮು, ಉಸಿರು ಕಟ್ಟುವುದು ಇತ್ಯಾದಿ) ಕಾಡತೊಡಗಿದುವು. ಮೈಸೂರಿನಲ್ಲಿ ಅಮ್ಮನ ಜೊತೆಗೇ ಇರುವ ತಮ್ಮ ಅನಂತನ ಕುಟುಂಬ (ಹೆಂಡತಿ ರುಕ್ಮಿಣಿ ಮತ್ತು ಮಗಳು ಅಕ್ಷರಿ) ಸತರ್ಕ ವೈದ್ಯಕೀಯ ಸಲಹೆ, ಚಿಕಿತ್ಸೆ, ಆರೈಕೆ ಸಕಾಲಿಕವಾಗಿಯೇ ನಡೆಸಿದ್ದರು. ಆದರೂ ಬಿಡದೇ ಕಾಡುವ ಕೆಮ್ಮಿನ ಸಂಕಟದಲ್ಲಿ ಅಮ್ಮ ಖಾಯಂ ಔಷಧಗಳಿದ್ದಂತೆ ತನ್ನ ನಾಟೀ ಉಪಶಮನಗಳನ್ನೂ ಮಾಡಿಕೊಂಡು ಬಹುತೇಕ ಮಾನಸಿಕವಾಗಿ ಚೇತರಿಸಿಕೊಳ್ಳುತ್ತಿದ್ದಳು. ಅವುಗಳಲ್ಲಿ ಒಂದು ‘ಜ್ಯೇಷ್ಠಮಧು ಕಫಹಾರಿ ಎಂಬ ದೃಢ ನಂಬಿಕೆ. ಹಾಗೆ ಆಗೀಗ ಜ್ಯೇಷ್ಠ ಮಧುವನ್ನು (ಒಂದು ವಿಧದ ಬೇರು) ಕಷಾಯವಾಗಿ ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದವಳು ಈಚೆಗೆ ಜಜ್ಜಿ ಬಾಯಿಯಲ್ಲೇ ಇಟ್ಟುಕೊಳ್ಳುತ್ತಿದ್ದಳು. ಇದು ಬಾಯಿಹುಣ್ಣಿಗೆ ಕಾರಣವಾಯ್ತು. ಆ ಉರಿ ಹುಣ್ಣಿನ ಸಂಪರ್ಕ ತಪ್ಪಿಸಿ ತಿಂಡಿ ಊಟ ಮಾಡುವಲ್ಲಿ ಅಮ್ಮನ ಕೃದಂತ (ಕೃತಕ ಹಲ್ಲಿನ ಕಟ್ಟು) ಜಾರಿ, ವಸಡಿನಲ್ಲಿ ಎರಡೆರಡು ಗಾಯಗಳಾಗಿ ಅವೂ ವ್ಯಗ್ರವಾದವು. ಅಲ್ಲಿನ ನಮ್ಮ ಕುಟುಂಬ ವೈದ್ಯ (ಸಂಬಂಧಿಯೂ ಹೌದು) – ಶ್ರೀನಿವಾಸ ಶರ್ಮ ಅಪಾರ ತಾಳ್ಮೆ ಮತ್ತು ಪ್ರೀತಿಯಲ್ಲಿ ಕಾರಣವನ್ನು ವಿಶ್ಲೇಷಿಸಿ, ಚಿಕಿತ್ಸೆಯನ್ನೂ ನಡೆಸಿದ್ದರು. ಆದರೆ ಒಂದು ಹಂತದಲ್ಲಿ ಅನಿವಾರ್ಯ ಮದ್ದು ಮತ್ತೂ ಮುಖ್ಯವಾಗಿ ನೋವು ಉಪಶಮನಕಾರಕಗಳು (ಪ್ರಾಯ ಸಹಜವಾದ ದೇಹ ದೌರ್ಬಲ್ಯದಿಂದ) ಇನ್ನಷ್ಟು ಬಾಯಿಹುಣ್ಣುಗಳಿಗೆ ಕಾರಣವಾಯ್ತು. ಕೆನ್ನೆ ಊದಿ, ತುಟಿ ಜೋತುಬಿದ್ದು, ನಾಲಗೆ ದದ್ದರಿಸಿ, ಬಾಯಿಗೇನಾದರೂ ಸೇರಿಸುವುದಿರಲಿ, ಜೊಲ್ಲು ನುಂಗುವುದೂ ಪ್ರಯಾಸವಾಗಿ ಹೋಯ್ತು.

ಅಪ್ಪನ ಅನಾರೋಗ್ಯದ ಉದ್ದಕ್ಕೂ ಎರಡನೇ ಬಲವಾಗಿ ದುಡಿದ ಅನಂತನ ಕುಟುಂಬ ಅಮ್ಮನ ಆರೈಕೆಗೆ ಪೂರ್ಣಾವಧಿ ಸೇವಾನಿಯೋಗವೇ ಆಗಿದೆ. ಇವರು ಅಮ್ಮನ ಮನಸ್ಸು ಮುರಿಯದೆ, ಖಚಿತ ಪರೀಕ್ಷೆಯೊಡನೆ ಪ್ರಮಾಣಿತ ವೈದ್ಯಕೀಯ ಚಿಕಿತ್ಸೆ, ಅನುಪಾನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಆದರೂ ನೋಡಬರುವ ಇಷ್ಟಮಿತ್ರರು ಅಯಾಚಿತವಾಗಿ ಕೊಡುವ ನೂರೆಂಟು ಬಿಟ್ಟಿ ಸಲಹೆಗಳು ಎಷ್ಟೋ ಸಂದರ್ಭದಲ್ಲಿ ಇವರಿಗೆ ಚುಚ್ಚು ನುಡಿಗಳೇ ಆಗಿಬಿಡುತ್ತವೆ. (ಅಯ್ಯೋ ಅನಂತೂ ಇದ್ಕೆಲ್ಲಾ ಆಯುರ್ವೇದ ಬೆಸ್ಟ್. ಅಲ್ಲೋಪಥಿ ಉಷ್ಣಾ ಎನ್ನುವವರೊಬ್ಬರು. ಹೋಮಿಯೋಪಥಿ ಗುಳಿಗೆಗಳ ಸಿಹಿಯ ಕಟರೆಯಷ್ಟೇ ಉಳಿಯಿತು. ಮನೆಮದ್ದೆಂದು ಆ ಚೊಗರು, ಈ ಕಷಾಯಗಳೆಲ್ಲಾ ಮೊಂಡು ರಾಮಬಾಣಗಳು!) ಅದೃಷ್ಟವಶಾತ್ ಅನಂತನ ಕುಟುಂಬ ಇವನ್ನು ಅರ್ಥಮಾಡಿಕೊಂಡು, ಪ್ರೀತಿಯ ಕರ್ತವ್ಯವನ್ನು ಮುಂದುವರಿಸಿಯೇ ಇದ್ದರು.

ಈ ನಡುವೆ ಅನಂತನ ಕುಟುಂಬಕ್ಕೆ ಮೂರುನಾಲ್ಕು ದಿನಗಳ ಮಟ್ಟಿಗೆ ಮೈಸೂರು ಬಿಡಲೇ ಬೇಕಾದ ಅನಿವಾರ್ಯತೆ ಬಂತು. ನಮ್ಮೊಳಗೆ ವಿಚಾರಮಥನ ನಡೆಯಿತು. ಮಂಗಳೂರಿನ ದೂರಕ್ಕೆ ಅಮ್ಮನನ್ನು ನಾವು ಕರೆಸಿಕೊಳ್ಳುವುದು ಎಲ್ಲರಿಗೂ ಹೊಳೆದ ಮೊದಲ ಯೋಚನೆ. ಮೂರೂವರೆ ದಶಕಗಳುದ್ದಕ್ಕೆ ನಾವು ಆಯ್ದುಕೊಂಡ ಭಿನ್ನ ಜವಾಬ್ದಾರಿ ಮತ್ತು ಪರಿಸರಕ್ಕೆ ಅಮ್ಮ (ಇದ್ದಾಗ ಅಪ್ಪನೂ) ಆಗೀಗ ಬಂದು, ವಾರ-ಹತ್ತುದಿನ ಉಳಿದುಕೊಳ್ಳುವುದಿತ್ತು. ಆಗೆಲ್ಲಾ ಪರಸ್ಪರ ಪ್ರೀತಿ ಉಪಚಾರಗಳಿಗೇನೂ ಕೊರೆಯಾಗದಿದ್ದರು ಅತಿಥಿ-ಭಾವವಷ್ಟೇ ಇರುತ್ತಿತ್ತು. ಆರು ದಶಕಕ್ಕೂ ಮಿಕ್ಕು, ಊರೂರುಗಳನ್ನು ಹಾಯ್ದು ತಾನೇ ಕಟ್ಟಿ ಬೆಳೆಸಿದ ‘ಮನೆ ಎಂಬ ಭಾವಕೋಶಕ್ಕೆ ಇದು ಖಂಡಿತವಾಗಿಯೂ ಭಿನ್ನವಾಗಿಯೇ ಉಳಿಯುತ್ತಿತ್ತು. ಸುಮಾರು ನಾಲ್ಕು ದಶಕ ಮೀರಿದ ಕಟ್ಟಡ (ಮೈಸೂರಿನ ಅತ್ರಿ ಮನೆ), ರೂಢಿಸಿದ ಸಾಮಾಜಿಕ, ಸಾಂಸ್ಕೃತಿಕ ಪರಿಸರಗಳೆಲ್ಲದರಿಂದ ಬೇರೆಯೇ ಆದ ಮಂಗಳೂರನ್ನು ತನ್ನದು ಎಂದೊಪ್ಪಿಕೊಳ್ಳಲು ಆಕೆಗೆ ಅಸಾಧ್ಯವಾಗುವುದು ಸಹಜವೇ ಇತ್ತು. (ಅತ್ರಿ ಸೋದರರಲ್ಲಿನ್ನೊಬ್ಬ – ಆನಂದ, ಅಮೆರಿಕಾದ ಪ್ರಜೆಯೇ ಆಗಿರುವುದರಿಂದ ಪ್ರಸ್ತುತ ಸನ್ನಿವೇಶಕ್ಕೆ ಪೂರ್ಣ ಹೊರಗಿನವನೇ ಆಗುತ್ತಾನೆ, ಬಿಡಿ) ಮತ್ತೀಗ ಅನಾರೋಗ್ಯ ಬಿಗಡಾಯಿಸಿಕೊಂಡಿರುವಾಗ ಪ್ರಯಾಣದ ಕಷ್ಟ, ವೈದ್ಯಕೀಯ ಸಲಹೆಯ ಬದಲಾವಣೆಗಳೆಲ್ಲ ಹೆಚ್ಚಿನ ನಿರುತ್ತೇಜಕ ಅಂಶಗಳಾಗಿಯೂ ಕಾಡಿದವು. ಹಾಗಾಗಿ ನಾವಿಬ್ಬರು ಅಮ್ಮನೊಡನೆ ಮೈಸೂರು ಮನೆಯನ್ನೂ ನೋಡಿಕೊಳ್ಳಲು ಅಲ್ಲಿಗೇ ಹೋಗಿದ್ದೆವು.

ವ್ಯಾಯಾಮವೆಂಬ ಪ್ರವೇಶಿಕೆ:

ಸೌಕರ್ಯಗಳೇನೇ ಇದ್ದರೂ ಪ್ರಯಾಣದ ನಿದ್ದೆ ನಿದ್ರೆಯಲ್ಲ ಎನ್ನುವ ದೇಹ ಪ್ರಕೃತಿ ನನ್ನದು. ಹಾಗಾಗಿ ನಿಗದಿತ ದಿನಕ್ಕೂ ಹಿಂದಿನ ದಿನ ನಾವು ಹಗಲೇ ಪಯಣಿಸಿ ಮೈಸೂರು ಸೇರಿಕೊಂಡೆವು. ನಾನು ಧೈರ್ಯಕ್ಕೆ ಜನ ಎಂದೇ ಲೆಕ್ಕ ತುಂಬಿದರೂ ನಿಜ ಕಾರ್ಯಗಳು – ಅಡುಗೆ, ಆರೈಕೆಗಳೆಲ್ಲ ದೇವಕಿಯದೇ. ಆದರೂ ನಾನು ಮೊದಲ ದಿನವಿಡೀ ಮನೆ ಬಿಟ್ಟಗಲದೇ ಇದ್ದೆ. ಹೆಚ್ಚಿನ ಹೊತ್ತು ಎಂದಿನಂತೆ ಗಣಕದೆದುರು ಹಾಜರಿ ಹಾಕಿದ್ದು ಸಾಲದೆನ್ನುವಂತೆ ಉಳಿದ ಅವಧಿಗೆ ಓದು, ಹರಟೆ ಸಾಗಿತ್ತು. ಎರಡನೇ ಬೆಳಗ್ಗೆ ವ್ಯಾಯಾಮವೆಂಬ ನೆಪ ಮಾಡಿಕೊಂಡು ಮನೆಯಲ್ಲಿದ್ದ ರುಕ್ಮಿಣಿಯ ಸೈಕಲ್ಲೇರಿ ಪ್ರಾಚೀನ ಕಾಲದ ಗೆಳೆಯ ಪಂಡಿತಾರಾಧ್ಯರ ಮನೆಗೆ ಹೋದೆ.

ಪಂಡಿತಾರಾಧ್ಯರೆಂಬ ವಿಚಿತ್ರಾಚಾರ್ಯ ವೃತ್ತಿತಃ ಮೈಸೂರು ವಿವಿನಿಲಯದ ಕನ್ನಡ ಪಂಡಿತರೆಂದರೆ (ಮೈಸೂರು ವಿವಿನಿಲಯದ ದಾಖಲೆಗಳ ಪ್ರಕಾರ ಈಚೆಗೆ ನಿವೃತ್ತರು) ಸಣ್ಣ ಮಾತಾಗುತ್ತದೆ. ಕನ್ನಡ ಭಾಷೆಯ ಅದರಲ್ಲೂ ಮುಖ್ಯವಾಗಿ ಕನ್ನಡಂಕಿಗಳ ಪುನರುತ್ಥಾನಕ್ಕೆ ಕಟಿಬದ್ಧರು (ಈಚಿನ ಯಾವುದೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಕನ್ನಡ ಅಂಕಿಗಳ ಮಳಿಗೆ, ನವನವೋನ್ಮೇಶಶಾಲಿನೀ ವಿವರಣಪತ್ರಗಳನ್ನು ನೋಡದವರಿಲ್ಲ). ಸಹಜವಾಗಿ ರಾಜ್ಯದಲ್ಲಿನ ಶಿಕ್ಷಣ ಮಾಧ್ಯಮ ನಿಷ್ಕರ್ಷೆಯಲ್ಲಿ ಶುದ್ಧ ವಿಚಾರಗಳ ವಕ್ತಾರ. ಗಣಕ ಪ್ರಪಂಚದಲ್ಲಿ ಕನ್ನಡವಿಕಾಸವನ್ನು ಬಲುದೊಡ್ಡ ಕಣ್ಣಿಂದ ಕಾಣುವ ಕನಸುಗಾರ ಮತ್ತು ಅವಿರತ ಕೆಲಸಗಾರ, ವೈಜ್ಞಾನಿಕ ಮನೋಧರ್ಮದ ವಿಸ್ತರಣೆಯಲ್ಲಿ ಸರದಾರ, ಎಲ್ಲಕ್ಕೂ ಮಿಗಿಲಾಗಿ ಮಾನವೀಯ ಪ್ರೀತಿಯಲ್ಲಿ ಅಜಾತಶತ್ರುತ್ವದಲ್ಲಿ ಅಪಾರ ನಂಬಿಕೆಯುಳ್ಳ ವ್ಯಕ್ತಿ. ಇಷ್ಟಾಗಿಯೂ ಅವರು ನಿತ್ಯ ಭವಿಷ್ಯದಲ್ಲಿ ‘ಊರಲ್ಲಿದ್ದರೆ ದುಷ್ಟ ಸಂಗ ಎಂದು ಕಂಡದ್ದಕ್ಕೋ ಏನೋ ಆ ಬೆಳಿಗ್ಗೆಯೇ ನನ್ನನ್ನು ತಪ್ಪಿಸಿಕೊಳ್ಳುವಂತೆ ಬೆಂಗಳೂರಿಸಿಬಿಟ್ಟಿದ್ದರು!

ನಾನು ಸೈಕಲ್ಲನ್ನು ಹೆಗ್ಗಡದೇವನ ಕೋಟೆಯ ದಾರಿಯತ್ತ ಹೊರಳಿಸಿದೆ. ಆ ದಿಕ್ಕಿನಲ್ಲಿ ಅತ್ರಿ ಮನೆಯಿಂದ ಸುಮಾರು ಎಂಟೊಂಬತ್ತು ಕಿಮೀ ಅಂತರದ ಕಳಲವಾಡಿ ಗ್ರಾಮದಲ್ಲಿರುವ ಕೃಷಿಕ್ಷೇತ್ರ ಇಂದ್ರಪ್ರಸ್ಥ ನನ್ನ ಮತ್ತಿನ ಗುರಿ. ಇದಕ್ಕೆ ರೈಲ್ವೇ ಹಳಿ ಪಕ್ಕದಲ್ಲೊಂದು ವಾಹನಯೋಗ್ಯವೇ ಆದರೂ ಒಳದಾರಿಯಿದೆ. ನಾನದನ್ನೇ ಅನುಸರಿಸಿದೆ. ಚಾಚಿ ಬಿದ್ದ ನಗರದ ಕೈಗಳು ಇನ್ನೇನು ಹಿಡಿದೇ ಬಿಟ್ಟಿತು ಎನ್ನುವಲ್ಲಿಯೇ ತೊಡಗುತ್ತದೆ ಕಳಲವಾಡಿ ಗ್ರಾಮ ಸರಹದ್ದು. ದೇವರಾಜ ಅರಸು ನಾಲೆಯ ಮೂರು ಉಪೋಪ ಕಾಲುವೆಗಳು ಇಲ್ಲಿ (ಸೇತುವೆ ಸಹಿತ) ಅಡ್ಡ ಸಿಗುತ್ತವೆ. ತಿಂಗಳ ಹಿಂದೆ ನಾನಿದೇ ದಾರಿಯಲ್ಲಿ ಬಂದಿದ್ದಾಗ ನೀರ ಹರಿವಿದ್ದ ಕಾಲುವೆಗಳು ಈಗ ಒಣಗಿಹೋಗಿದ್ದುವು. ಅವು ಕಳೆಯುತ್ತಿದ್ದಂತೆ ಬಲದಲ್ಲಿ ಒಂದಷ್ಟು ಜವುಗು ಪ್ರದೇಶ – ಎಣ್ಣೆಹೊಳೆ ಎಂಬ ಸಹಜ ಹರಿವಿನ ಜಲಮೂಲದ ವಿಸ್ತರಣೆ ಇರಬೇಕು. ಬರಿಯ ನೋಟದಿಂದ ದಟ್ಟ ಹಸುರಿನ ಹುಲ್ಲು, ಹಸಿತನದ ಕಂಪು, ಎಡೆಯಲ್ಲಿ ಕ್ವಚಿತ್ತಾಗಿ ನೀಲ ನೇರಿಳೆವರ್ಣದಲ್ಲಿ ಕುಸುಮಿಸಿದ ಪೆಂಪು, ಹಾರುಹಕ್ಕಿಗಳ ಸೊಂಪು ಎಂದೆಲ್ಲಾ ಖಾಲೀ ಪಂಪು ಹೊಡೆಯಬಹುದು; ನಮ್ಮ ಮೂಗು ಹೇಳುವ ಕತೆ ಬೇರೆಯೇ ಇತ್ತು. ಉದ್ದಗಾಲಿನ ಕೊಕ್ಕರೆಯಾದಿ ಹಕ್ಕಿಗಳು ತಾಪಸರಂತೆ ಮರವಟ್ಟಿರುವಾಗ, ಮೈಲಿಗೆಯೆಡೆಯ ಹಾರುವರಂತೆ ಹೆಕ್ಕು ನಡೆ ಅನುಸರಿಸುವಾಗ, ಆಗೀಗ ಕಿವಿದುಂಬುವ ಕುಕಿಲುಗಳನ್ನು ಸವಿಯುವಾಗ ಆಹ್! ಜೀವವೈವಿಧ್ಯ ಎಂದು ನೀವು ಉದ್ಗರಿಸಲೂಬಹುದು; ಕಣ್ಣು ಚೂಪು ಮಾಡಿ ನೋಡಿದರೆ ಚಿತ್ರ ಬೇರೆಯೇ ಇತ್ತು. ದಾರಿಬದಿಯಲ್ಲಲ್ಲಿ ಮೊಪೆಡ್ಡೋ ಸ್ಕೂಟರ್ರೋ ನಿಂತು ಕೊಂಡಿರುವುದು, ಕೆಲವಕ್ಕೆ ಹುಲ್ಲ ಹೊರೆ ಹೇರಿರುವುದೂ ಕಾಣಿಸುತ್ತಿತ್ತು. ನಗರದ ಜಾನುವಾರುಗಳ ಹಸಿರುಮೇವಿನ ಅಗತ್ಯವನ್ನು ಈ ಜವುಗುಪ್ರದೇಶ (ಮೈಸೂರಿನ ಆಸುಪಾಸಿನಲ್ಲಿ ಇಂಥವೇ ಇನ್ನೂ ಕೆಲವು ಕೆರೆ/ಜವುಗುವಲಯಗಳೂ ಇವೆಯಂತೆ) ಯಶಸ್ವಿಯಾಗಿ ಪೂರೈಸುತ್ತಿದೆ ಎನ್ನುವಾಗ ಮೈಸೂರಿನ ಕ್ಷೀರಭಾಗ್ಯದ ಕುರಿತು ಕರುಬುವುದೂ ಸಹಜವೇ ಇತ್ತು; ಆ ಹುಲ್ಲು ಹೊತ್ತು ಬರುವವರ ಸಂಕಟದ ಕತೆ ಕೇಳಿದವರಿಗೇ ಗೊತ್ತು. ಐದೇ ಮಿನಿಟಿನಲ್ಲಿ ಈ ಎಲ್ಲ ವಿರೋಧಾಭಾಸಗಳಿಗೆ ಸ್ಪಷ್ಟ ವಿವರಣೆ ಕೊಡುವಂತೆ ದಾರಿಗಡ್ಡವಾಗಿ ಸಾಕ್ಷಾತ್ ಎಣ್ಣೆಹೊಳೆಯೇ ಹರಿದಿತ್ತು. ಎಲ್ಲ ಕಲ್ಪನೆಗಳ ರಂಗು ಕಳಚುವಂತೆ ಬುರುಬುರು ನೊರೆಗುಳ್ಳೆಗಳನ್ನು ತೆಳುವಾಗಿ ಹಾರಿಸುತ್ತ ಬುರುಗಿನದೇ ದಪ್ಪ ಹೊದಿಕೆ ಹೊದ್ದ ಎಣ್ಣೆ ಹೊಳೆ. ನಾನು ಹೊಸದಾಗಿ ವಿವರಿಸುವ ಸಾಹಸ ಮಾಡುವುದಿಲ್ಲ. ವಾರಾಣಸಿಯ ಪಾಪಹಾರಿಣಿ ಗಂಗಾ, ಬೆಂಗಳೂರಿನ ಪರಮಪಾವನೆ ವೃಷಭಾವತಿ, ಮಂಗಳೂರಿನ ಫಲ್ಗುಣಿ, ಕಟೀಲಿನ ನಂದಿನಿ, ಸುಬ್ರಹ್ಮಣ್ಯದ ದರ್ಪಣತೀರ್ಥ ಎಂದು ಹೆಸರಿಸುತ್ತ ಹೋದರೆ ಎಲ್ಲವನ್ನೂ ಆಪೋಷಣೆಗೈದ ‘ನಾಗರಿಕ ಸಾಹಸ ಎಣ್ಣೆಹೊಳೆಯಲ್ಲೂ ಅಪೂರ್ವ ವಿಜಯ ಸಾಧಿಸಿದೆ.

ಸೇತುವೆ ಕಟ್ಟೆಯ ಮೇಲೆ ಕುಳಿತಿದ್ದ ಕಳಲವಾಡಿ ಗ್ರಾಮಸ್ಥ, ಹಿರಿಯ ನಾಗರಿಕನನ್ನು ಉದ್ದೇಶಪೂರ್ವಕವಾಗಿಯೇ ಕೇಳಿದೆ ಇದೇನು ಎಣ್ಣೆ ಹೊಳೆಯೋ ಮೈಸೂರು ಮೋರಿಯೋ? ಆತ ವಿಷಾದವೂ ಸತ್ತ ಧ್ವನಿಯಲ್ಲಿ ತಾವು ಬಾಲ್ಯದಲ್ಲಿ ಇದೇ ಪಾತ್ರೆಯ ನೀರನ್ನು ಕುಡಿಯುವುದರಿಂದ ಎಲ್ಲದಕ್ಕೂ ಬಳಸುತ್ತಿದ್ದುದನ್ನು ನೆನಪಿಸಿಕೊಂಡ. ಈ ದಿನಗಳಲ್ಲಿ, ದಿನಪೂರ್ತಿ ತಪಸ್ಸು ಮಾಡಿದರೂ ಒಂದು ಕಿರುಮೀನು, ಏಡಿ ಕಾಣದ ಕೊಕ್ಕರೆ ಸಾಕ್ಷಿಯಾಗಿ ತಾವು ಎಣ್ಣೆಹೊಳೆ ನೀರು ಮುಟ್ಟುವುದಕ್ಕೂ ಹೆದರುತ್ತೇವೆ ಎಂದುಬಿಟ್ಟ! ಥೂ ಗಬ್ಬುನಾಥಾ ಎಂದು ಬೀಡಿ ಹಚ್ಚಿದ. ಆ ದುರ್ನಾತವನ್ನೇ ಉಸಿರಾಗಿಸುವ ಹಳ್ಳಿಗರು, ಅದರದೇ ಜವುಗುವಲಯದಲ್ಲಿ ಸೊಂಟಮಟ್ಟವೂ ನಡೆದು ಹುಲ್ಲು ಕಟಾಯಿಸುವವರ ಆರೋಗ್ಯ, ಹಲವು ವಿಷ ಸಂಯುಕ್ತಗಳ ಆ ರಸಾಯನ ಪೋಷಿತ ಹುಲ್ಲು ತಿಂದ ಜಾನುವಾರುಗಳ ಉತ್ಪನ್ನ, ಸೊಳ್ಳೆಗಳ ಪ್ರಸರಣದಿಂದ ಪರಿಸರದ ಜನವಸತಿಗಳಲ್ಲಿ ಹಬ್ಬುವ ಕಾಯಿಲೆ ನೆನೆನೆನೆಸಿ ವಿಷಾದ ಚಕ್ರ ಉರುಳಿದಂತೆ ಇಂದ್ರಪ್ರಸ್ಥ ತಲಪಿದ್ದೆ.

ನನ್ನ ಹಿರಿಯ ಸೋದರ ಮಾವ ಎ.ಪಿ. ತಿಮ್ಮಪ್ಪಯ್ಯನವರ ಮಗ ಚಂದ್ರಶೇಖರನಿಗೆ ಪರಂಪರೆಯಿಂದ ಹಿಡಿಯಬೇಕಾದ್ದು ಕೃಷಿ. ಆದರೆ ಆತ ವಿದ್ಯಾರ್ಥಿ ದೆಸೆಯಲ್ಲಿ ಅಧ್ಯಯನಕ್ಕೆ ಆಯ್ದುಕೊಂಡದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಆತ ಪ್ರತಿಭಾವಂತ ಪದವೀಧರನೆನಿಸಿಕೊಂಡರೂ ಸರಣಿಯಲ್ಲಿ ಉನ್ನತ ಅಧ್ಯಯನಕ್ಕೆ ಮನ ಮಾಡಲಿಲ್ಲ. ದೊಡ್ಡ ಬಿರುದುಗಳ (ಬಿದಿರುಗಳ?) ಪೊಳ್ಳನ್ನು ಕಳೆಯುವಂತೆ ತಮಿಳುನಾಡಿನಲ್ಲಿ ವರ್ಷವೊಂದರ ಕಾಲ ಅದೇ ವಿಚಾರದ ಪಾಲಿಟೆಕ್ನಿಕ್ ತರಬೇತಿ ಪಡೆದ. ಇನ್ನೂ ಮುಗಿಯಲಿಲ್ಲವೆನ್ನುವಂತೆ ಮ್ಯಾಟಡೋರ್ ಮಾರಾಟ ಸಂಸ್ಥೆಯೊಂದರ ಸೇವಾವಿಭಾಗದಲ್ಲಿ ಕಸುಬಿನ ಕಸುವನ್ನೂ ಪಡೆದ. ಕೊನೆಯಲ್ಲಿ ಸಾಮಾನ್ಯವಾಗಿ ಹೇಳುವುದಿದ್ದರೆ ಇರುವುದೆಲ್ಲವ ಬಿಟ್ಟು ಕೃಷಿಗೇ ಮರಳಿದ. ಆದರೆ ಬಗೆಗಣ್ಣಿನಲ್ಲಿ ನೋಡಿದರೆ ಇಲ್ಲ, ಆತ ಬೆಳೆದು ಬಂದ ದಕವಲಯದಿಂದ ಹೊರಗೆ ಮೈಸೂರಿನ ಈ ನೆಲವನ್ನು ಕೊಂಡು ಸಂಪೂರ್ಣ ಸ್ವಾವಲಂಬೀ ಸಾವಯವ ಕೃಷಿಯ ವ್ರತ ತಳೆದ. ಸುಮಾರು ಹದಿಮೂರು ಎಕ್ರೆಯ ಇಂದ್ರಪ್ರಸ್ಥದ ಬೆಳೆಯ ವೈವಿಧ್ಯ, ಅಲ್ಲೇ ಸಾವಯವ ತತ್ತ್ವದಲ್ಲೇ ಗುಣೋತ್ಕರ್ಷ ಕಂಡು ಸಾರ್ವಕಾಲಿಕಕ್ಕೆ ಒದಗುವ ಆಹಾರ ಉತ್ಪನ್ನಗಳು, ನಿಷ್ಪ್ರಯೋಜಕ ಕಸ ಅಥವಾ ಗೊಬ್ಬರಕ್ಕೇ ಸರಿ ಎನ್ನುವ ಇನ್ನೆಷ್ಟೋ ಕೃಷಿಮೂಲ ವಸ್ತುಗಳು ಅಲ್ಲಿನ ಪ್ರಯೋಗಾಲಯದಲ್ಲಿ ಸಾಮಾನ್ಯರ ನಿತ್ಯೋಪಯೋಗೀ ಸಾಮಗ್ರಿಗಳಾಗಿ (ಸೋಪು, ಶ್ಯಾಂಪೂ, ದಂತಧಾವನ ಚೂರ್ಣ, ಸೌಂದರ್ಯವರ್ಧಕ ಸೂತ್ರ ಇತ್ಯಾದಿ) ಪರಿವರ್ತನೆಗೊಂಡು ತಳೆಯುವ ವಿವಿಧ ರೂಪಗಳು, ಮಧ್ಯವರ್ತಿಯನ್ನು ನಿರಾಕರಿಸಿ ನೇರ ಉಪಯೋಗಿಸುವವರನ್ನು ಸಂಪರ್ಕಿಸುವ ಮಳಿಗೆ, ಗ್ರಹಿಸಿದ ತಥ್ಯಗಳನ್ನು ಇತರರಿಗೆ ಅನುಸರಿಸಲು, ಅಲ್ಲದಿದ್ದರೂ ಬಳಸಲು ಪ್ರೇರಣೆ ನೀಡುವ ಸಾಹಿತ್ಯವಾಗಿಯೂ ವಿಕಸಿಸುತ್ತ ದೃಢವಾದ ಎ,ಪಿ.ಚಂದ್ರಶೇಖರ ಅಥವಾ ಇಂದ್ರಪ್ರಸ್ಥದ ಬಗ್ಗೆ ನಾನು ಹೆಚ್ಚು ಹೇಳುವುದಕ್ಕಿಂತಲೂ ನೀವೇ ಅವನ ಸಾಹಿತ್ಯ ಓದಿ ಮುಂದುವರಿಯುವುದು ಲೇಸೆಂದು ನನ್ನ ಭಾವನೆ. ( ೧. ಬಾಣಲೆಯಿಂದ ಬೆಂಕಿಗೆ – ರೂ ೭೫, ೨. ಭೂಮಿ ನಮ್ಮ ಪಾಠಶಾಲೆ – ರೂ ೧೦೦, ೩. ಫುಕುವೊಕ -ರೂ ೫೦, ೪. ಕುಂಕುಮದಿಂದ ಕ್ರಾಂತಿ – ರೂ ೩೦, ೫. ಮದುವೆ ಮಧುವಾಗಬೇಕಾದರೆ – ರೂ ೧೦೦, ೬. ಅಡುಗೆಯ ಮೂಲಭೂತ ಸಿದ್ಧಾಂತಗಳು – ರೂ ೧೨೦, ೭. ಬೆಳೆಯೋಣ ಬನ್ನಿ – ರೂ ೫೦, ೮. ಆಮಿಷದ ಬೋನಿನೊಳಗೆ ಬೀಳಬೇಡಿ – ರೂ ೧೫, ೯. ತೆಂಗಿನ ಹಣ್ಣು – ರೂ ೬, ೧೦. ನಾವೆಲ್ಲಾ ಪ್ರಬುದ್ಧರಾಗುವುದು ಯಾವಾಗ – ರೂ ೨೫, ೧೧. ಬತ್ತದ ಕಥೆ – ರೂ ೭೫, ೧೨. ಇಂದ್ರಪ್ರಸ್ಥದೊಳಗೊಂದು ಸುತ್ತು – ರೂ ೧೫೦. ವಿಳಾಸ: ಕಳಲವಾಡಿ ಗ್ರಾಮ, ಅಂಚೆ ಉದ್ಭೂರು, ಮೈಸೂರು)

ಇಷ್ಟಾಗಿಯೂ ಈ ಬಾರಿ ನಾನು ಇಂದ್ರಪ್ರಸ್ಥಕ್ಕೆ ಹೋದ ಉದ್ದೇಶ ಅಲ್ಲಿರುವ ಮತ್ತು ವೃದ್ಧಾಪ್ಯದ ಬೇನೆಗಳಲ್ಲಿ ತೀವ್ರ ಬಳಲುತ್ತಿರುವ ಚಂದ್ರನ ಅಪ್ಪಮ್ಮ ಅರ್ಥಾತ್ ನನ್ನ ಸೋದರ ಮಾವ ಅತ್ತೆಯರನ್ನು ನೋಡುವುದಷ್ಟೆ ಆಗಿತ್ತು. ಮಾವ – ತಿಮ್ಮಪ್ಪಯ್ಯ (೮೭ ವರ್ಷ), ಮೂರು ತಮ್ಮ ಮತ್ತು ಆರು ತಂಗಿಯರ ಅಣ್ಣನಾದ್ದಕ್ಕೆ ಬಳಕೆಯಲ್ಲಿ ನನಗೂ ಅಣ್ಣ. ಈಚಿನ ಐದಾರು ವರ್ಷಗಳ ಬಳಲಿಕೆ ಬಿಟ್ಟರೆ, ಅವರು ಗ್ರಾಮೀಣ ಜೀವನದಲ್ಲಿ ಸದಾ ಅಸಾಮಾನ್ಯ ಸಾಹಸಿ. ಮಡಿಕೇರಿ ಮೂಲದ ನನ್ನಜ್ಜ – ಎ.ಪಿ. ಸುಬ್ಬಯ್ಯ, ಪುತ್ತೂರು ಸಮೀಪದ ಮರಿಕೆ ಬಯಲಿನಲ್ಲಿ ಪಾಲಿಗೆ ಬಂದ ಬಲು ವಿಸ್ತಾರದ ಭೂಮಿಯನ್ನು ರೂಢಿಸಿ, ಜೀವನ ರೂಪಿಸಿಕೊಳ್ಳಲೆಂದೇ ಘಟ್ಟ ಇಳಿದವರು.

ಇವರ ಸಾಹಿತ್ಯ-ಸಂಗೀತ ಪ್ರೀತಿ, ಸಾಮಾಜಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಒಡಗೂಡಿದ ಆಸಕ್ತಿ ಇತ್ಯಾದಿಗಳೇನಿದ್ದರೂ ಕೃಷಿಭೂಮಿಯಲ್ಲಿ ನಿಂತು ರೂಢಿಸುವಲ್ಲಿ ಸಹಾಯಕ್ಕೆ ಬರುವಂತಿರಲಿಲ್ಲ. ಆಗ ಹಿರಿಯ ಮಗನಾಗಿಯೂ ತಂದೆಯ ಕೃಷಿ ಆಶಯಗಳ ಕ್ರಿಯಾಶಕ್ತಿಯಾಗಿಯೂ ಒಡಹುಟ್ಟಿದವರಿಗೆ ಮತ್ತವರೆಲ್ಲ ಸಂತತಿಗೂ ‘ಹಿರಿಯಣ್ಣ ತಂದೆಗೆ ಸಮಾನ ಎಂಬ ಪ್ರೀತಿ ಮತ್ತು ಪೋಷಣೆಯ ಸೆಲೆಯಾಗಿಯೂ ನಿಂತವರು ಈ ತಿಮ್ಮಪ್ಪಯ್ಯ. ಅವರ ಹೆಂಡತಿ – ರಮಾ, ನನ್ನ ಅತ್ತೆ, ಪರಿಚಯ ತುಂಬ ಸುಲಭ. ಔಪಚಾರಿಕ ಮಾತುಗಳನ್ನು ಮೀರಿಯೇ ಹೇಳುತ್ತೇನೆ ಸಾಮರ್ಥ್ಯದಲ್ಲಿ, ಕೌಟುಂಬಿಕ ಪ್ರೀತಿಯಲ್ಲಿ ಅಣ್ಣನಿಗೆ ಒಂದು ತೂಕ ಹೆಚ್ಚೇ ಈಕೆ – ಅತ್ತೆ, ಅಲ್ಲ ಅತ್ತಿಗೆ!

ಚಿರಂಜೀವಿಯಂತೇ ಕಾಣುತ್ತಿದ್ದ ಅಣ್ಣ, ಯಾವ ದುಶ್ಚಟಗಳು ಇಲ್ಲದೇ ಈಚಿನ ಕೆಲವು ವರ್ಷಗಳಲ್ಲಿ ವೃದ್ಧಾಪ್ಯದ ಬೇನೆಗಳಲ್ಲಿ ಬಳಲುತ್ತಿರುವುದು ಅವರ ಪರಿಚಿತರಿಗೆಲ್ಲ ನಂಬಲಾಗದ ಸಂಗತಿ. ಬೇನೆ ಅವರನ್ನು ದೈಹಿಕವಾಗಿಯೂ ಮಾನಸಿಕವಾಗಿಯೂ ತುಂಬ ಕುಗ್ಗಿಸಿಬಿಟ್ಟಿದೆ. ನಾನು ಇಂದ್ರಪ್ರಸ್ಥಕ್ಕೆ ಹೋಗುವ ಹಿಂದಿನ ದಿನವೂ ಜೊತೆಯಲ್ಲೇ ಇದ್ದ ಸ್ವಂತ ಮೊಮ್ಮಗನನ್ನು (ಅಭಿಜಿತ್) ಬೆಳ್ಳಾರೆಯಾಚಿರುವ ಅಳಿಯ (ವೆಂಕಟ್ರಮಣ) ಎಂದೇ ಗೊಂದಲಿಸಿಕೊಂಡಿದ್ದರಂತೆ. ಅದೃಷ್ಟವಶಾತ್ ನನ್ನನ್ನು ಕಂಡ ಕೂಡಲೇ ಗುರುತೇನೋ ಹಿಡಿದರು ಆದರೆ ಮುಂದುವರಿದ ಸ್ಪಂದನಗಳೇನೂ ಇರಲಿಲ್ಲ. ನೋಡಿದವರೆಲ್ಲ ಬೆರಗುಪಟ್ಟು ಅಯ್ಯೋ ಅಣ್ಣ ಹೀಗಾ ಎನ್ನುವ ಉದ್ಗಾರವಷ್ಟೇ ನನಗೂ ಉಳಿಯಿತು. ಆದರೆ ಅತ್ತೆ ಹಾಗಲ್ಲ…

ಹಿಂದಿನ ಸಲ ಮರಿಕೆಯಲ್ಲೇ ಇವರನ್ನು ನೋಡಲು ಹೋಗಿದ್ದಾಗ ನನ್ನ ‘ಶಿಲಾರೋಹಿಯ ಕಡತ ಪುಸ್ತಕ ಕೊಟ್ಟು ಬಂದಿದ್ದೆ. ಏನೇನೋ ಹಳೆಯ ಪತ್ರಿಕೆ ಕತ್ತರಿಕೆಗಳನ್ನು ಸಂಗ್ರಹಿಸಿಕೊಂಡು, ಅಷ್ಟೇನೂ ಪ್ರಸ್ತುತವಲ್ಲದ ಕೃಷಿ ಅಗತ್ಯಗಳನ್ನು ಆದ್ಯತೆಯ ಮೇಲೆ ಪೂರೈಸಿಕೊಳ್ಳುವ ಜವಾಬ್ದಾರಿ ತನಗಿದೆ ಎಂದೇ ಭ್ರಮಿಸಿ, ಕಷ್ಟಪಡುತ್ತಿದ್ದ ಅಣ್ಣನಿಗೆ ನನ್ನ ಪುಸ್ತಕದ ವಿಷಯ ತಲೆಗೆ ಹೋಗದಿದ್ದರೂ ನನ್ನ ಮೇಲಿನ ಪ್ರೀತಿಗೆ ಸುಮ್ಮನೆ ಓದಿಯಾರೆಂದು ಅಂದಾಜಿಸಿದ್ದೆ. ಆದರೆ ತಿಂಗಳು ಕಳೆದ ಮೇಲೆ ತೀರಾ ಅನಿರೀಕ್ಷಿತವಾಗಿ ಅತ್ತೆಯಿಂದ ನನಗೊಂದು ಪತ್ರ ಬಂತು. ಅವರಿಗೆ ಅಷ್ಟೇನೂ ಆಸಕ್ತಿದಾಯಕವಲ್ಲದ ನನ್ನ ಶಿಲಾರೋಹಣ ಸಾಹಸಗಳ ಕಥನವನ್ನು ಅಮೂಲಾಗ್ರ ಓದಿ ಎರಡು ಪುಟದುದ್ದಕ್ಕೆ ವಿಮರ್ಶೆ ಬರೆದಿದ್ದರು! ಅತ್ತೆ ಸ್ವಂತದ ನಿತ್ಯ ಕ್ರಿಯೆಗಳಿಗೂ ಸಹಾಯಕರನ್ನು ಬಯಸುವಂತೆ ಪಾರ್ಶ್ವವಾಯು ಪೀಡಿತೆ. ಆದರೆ ನನ್ನ ಪುಸ್ತಕವನ್ನು ಒಂದೇ ಕೈಯಲ್ಲಿ ಯಾವ್ಯಾವುದೋ ವಿಶಿಷ್ಟ ಭಂಗಿಗಳಲ್ಲಿ ಸಂಭಾಳಿಸಿಕೊಂಡು, ಕನ್ನಡಕವೇರಿಸಿ ಓದಿದ್ದೇ ಸಾಹಸ. ಸಾಲದ್ದಕ್ಕೆ ಮಂಚದಲ್ಲಿ ಕುಳಿತಲ್ಲೇ ಮಡಿಲಲ್ಲಿ ಮಣೆಯಿಟ್ಟುಕೊಂಡು ಬಲಗೈ ಸ್ವಾಧೀನವಿಲ್ಲದಿದ್ದರೇನು, ಎಡಗೈಯಲ್ಲೇ ಪೆನ್ನು ಹಿಡಿದು, ಹೊಸದಾಗಿ ಅಕ್ಷರಾಭ್ಯಾಸ ನಡೆಸಿ, ಪತ್ರ ಬರೆದದ್ದು ‘ಬಂಡೆಯಂಥ ನನ್ನ ಕಣ್ಣು ಮಂಜಾಗಿಸಿತ್ತು. ಹಾಗಾಗಿ ಈ ಬಾರಿ ಹೊಸ ಪುಸ್ತಕ ಕುಮಾರಪರ್ವತದ ಸುತ್ತಮುತ್ತವನ್ನು ನೇರ ಅವರ ಕೈಯಲ್ಲೇ ಇಟ್ಟು ಬರುವ ಏಕೈಕ ಉದ್ದೇಶ ನನ್ನದಿತ್ತು. ಅವರು ಮತ್ತೆ ತಿಣುಕಾಡಿ ಓದಿ, ಪತ್ರಿಸಬೇಕೆಂಬ ಒತ್ತಾಯ ನನ್ನದಲ್ಲ, ‘ಅಶೋಕ ತನ್ನನ್ನೇ ಉದ್ದೇಶಿಸಿ ಪುಸ್ತಕ ಕೊಟ್ಟ ಎಂಬ ಸಣ್ಣ ಸಂತೋಷ ಅವರಿಗೆ ಬಂದರೆ ನಾನು ಕೃತಾರ್ಥ.

ಇಂದ್ರಪ್ರಸ್ಥದಿಂದ ಮರಳಿದ ಸಂಜೆ ಮಾನಸಗಂಗೋತ್ರಿಯತ್ತ ಪಾದ ಬೆಳೆಸಿದೆ. ಮಾರಣೇ ದಿನ (ಫೆಬ್ರುವರಿ ೫) ಅಲ್ಲಿನ ತೆರೆದ ರಂಗಮಂಚದಲ್ಲಿ ಕರ್ನಾಟಕ ವಾರ್ತಾ ಇಲಾಖೆ ನಿರ್ಮಿಸಿದ ‘ಮನುಷ್ಯ ಜಾತಿ ತಾನೊಂದೆ ವಲಂ – ಧ್ವನಿ ಬೆಳಕಿನ ಬೃಹತ್ ರೂಪಕ, ಪ್ರದರ್ಶಿತಗೊಳ್ಳಲಿದೆ ಎಂದು ಪ್ರಚಾರ ಕೇಳಿದ್ದೆ. ಸಿದ್ಧತೆಗಳು ಹೇಗಿರಬಹುದು ಎಂದೇ ಮೊದಲು ಅಲ್ಲಿಗೆ ಹೋದೆ. ಆದರೆ ಅಲ್ಲಿನ ಸಿದ್ಧತೆಗಳು ಅದೇ ಸಂಜೆ ನಡೆಯಲಿದ್ದ ಗುರು ರವಿಶಂಕರ್ ಸತ್ಸಂಗಕ್ಕೆ ಮೀಸಲಿತ್ತು. ಇದು ನನ್ನ ತುತ್ತಲ್ಲ ಎಂದು ನೇರ ಮಾನವಿಕ ಶಾಸ್ತ್ರಗಳ ಕಟ್ಟಡಕ್ಕೆ ಹೋದೆ. ಗಂಟೆ ಐದೂವರೆ ಕಳೆದಿದ್ದುದರಿಂದ ವಿದ್ಯಾರ್ಥಿಗಳು, ಅಧ್ಯಾಪಕರು ಸಿಗುವ ನಿರೀಕ್ಷೆಯೇನೂ ಇರಲಿಲ್ಲ. ಆದರೂ ನಾನು ಅಲ್ಲೇ ಇಂಗ್ಲಿಷ್ ಸ್ನಾತಕೋತ್ತರ ವಿದ್ಯಾರ್ಥಿಯಾಗಿ ಎರಡು ವರ್ಷ ಕಳೆದ ಓಣಿ ಕೋಣೆಗಳತ್ತ ಹೀಗೇ ಕಣ್ಣು ಹಾಯಿಸುವಂತೆ ಎರಡನೇ ಮಾಳಿಗೆಗೇರಿದೆ.

ಮೆಟ್ಟಿಲಸಾಲು ಮುಗಿಯುವಲ್ಲೇ ಇದ್ದ ಕೊಠಡಿ ನಮ್ಮ ಕಾಲದಲ್ಲಿ ವಿಭಾಗ ಕಛೇರಿಯಾಗಿತ್ತು, ಆದರೆ ಈಗಲ್ಲ. ಮುಂದುವರಿದು ಬಲ ಬದಿಯ ಓಣಿ ಇತಿಹಾಸ ವಿಭಾಗಕ್ಕೂ ಎಡಬದಿಯ ಓಣಿ ಇಂಗ್ಲಿಷ್ ವಿಭಾಗಕ್ಕೂ ಮೀಸಲಿತ್ತು, ಆದರೆ ಈಗ ಪೂರ್ತಿ ಅಲ್ಲ! ಎಡದ್ದು ಇಂಗ್ಲಿಷಿನ ಫಲಕವನ್ನು ಹೊತ್ತಿದ್ದರೂ ಬಲಬದಿಗೆ ಅರೇಬಿಕ್ ಹಾಗೂ ಸಮೂಹಮಾಧ್ಯಮ ವಿಭಾಗಗಳ ಫಲಕಗಳು ಕಾಣಿಸಿದುವು. ಕೂಡಲೇ ನೆನಪಾದ ಹೆಸರು ಗೆಳೆಯ ನಿರಂಜನ ವಾನಳ್ಳಿ. ಹಳೆಯ ಕಟ್ಟಡ ನೇರ ಓಣಿಗಷ್ಟೇ ಮುಗಿದಿತ್ತು, ಆದರೆ ಈಗ ಅದು ಮತ್ತೆ ಬಲಕ್ಕೆ ಹೊರಳಿ ಇನ್ನಷ್ಟು ಕೊಠಡಿಗಳಿಗೆ ವಿಸ್ತರಿಸಿತ್ತು. ಅಲ್ಲೇ ಇದ್ದ ವಾನಳ್ಳಿಯವರ ಕೋಣೆಯೇನೋ ಕಾಣಿಸಿತು, ಆದರೆ ಬೀಗ ಜಡಿದಿತ್ತು; ತಪ್ಪೇನಿಲ್ಲ, ನಾನು ಹೋದದ್ದು ಅವೇಳೆ. ಮತ್ತೆ ಇಂಗ್ಲಿಷ್ ವಿಭಾಗದತ್ತ ನಡೆದೆ. ಅಲ್ಲಿನ ಎಡ ಸಾಲಿನಲ್ಲಿ ಹಿರಿಯ ಅಧ್ಯಾಪಕರುಗಳ ಖಾಸಾ ಕೋಣೆಗಳಿದ್ದುವು. ಯು. ಆರ್. ಅನಂತಮೂರ್ತಿ, ಪೋಲಂಕಿ ರಾಮಮೂರ್ತಿ, ಎಚ್.ಎಸ್. ಶಿವಣ್ಣ, ಎಚ್.ಎಚ್. ಅಣ್ಣಯ್ಯ ಗೌಡ, ಸಿ.ಡಿ ನರಸಿಂಹಯ್ಯ ಹೆಸರುಗಳನ್ನು ಅಲ್ಲಿ ಕಂಡ ನೆನಪುಗಳಲ್ಲಿ ಕೆಲವು ಖಚಿತ ಕೆಲವು ಮಸಕು. ಅಲ್ಲೀಗ ಮೊದಲ ಹೆಸರು ಸಿ.ಪಿ ರವಿಚಂದ್ರ ಕಂಡು ಕುಶಿಯಾಯ್ತು. ಈತ ವಿದ್ಯಾರ್ಥಿಯಾಗಿ ನನಗಿಂತ ಎರಡೋ ಮೂರೋ ವರ್ಷ ಕಿರಿಯ. ಆದರೆ ‘ನನ್ನ ಮೈಸೂರಿಗೆ ಬಹು ಮುಖ್ಯವಾದ ದಖ್ಖಣ ಪರ್ವತಾರೋಹಣ ಸಂಸ್ಥೆಯಲ್ಲಿ ಒಳ್ಳೆಯ ಗೆಳೆಯ ಎನ್ನುವುದು ಹೆಚ್ಚು ಮಧುರವಾದ ನೆನಪು. ಆದರೆ ಆ ಕೊಠಡಿಗೂ ಬೀಗ ಬಿದ್ದಿತ್ತು. ನೇರ ಓಣಿಯ ಕೊನೆಯಲ್ಲಿ ಬಲಕ್ಕೊಂದು ಸಣ್ಣ ಹೊರಳು.

ಅಲ್ಲಿನ ಕೊಠಡಿಗಳಲ್ಲಿ ನಾನು ಅತೀವ ಗೌರವಿಸುತ್ತಿದ್ದ ಅಧ್ಯಾಪಕ – ಬಿ. ದಾಮೋದರ ರಾವ್ ಇದ್ದದ್ದು, ಅವರು ಅಲ್ಲೇ ಓಣಿಯಲ್ಲಿ ನಿಂತು ನನ್ನೊಡನೆ ಏನಾದರೂ ಕೊಡಿ ಎಂದು ಕೇಳಿದ್ದು ನೆನಪಾಗಿ ಮನಸ್ಸು ಆರ್ದ್ರವಾಯ್ತು. ಅಲ್ಲೂ ಕಟ್ಟಡ ಇನ್ನೊಂದು ಪಾರ್ಶ್ವಕ್ಕೆ (ಸಮೂಹಮಾಧ್ಯಮಗಳ ಕೊಠಡಿ ಸಾಲಿನಂತೆ) ಸಮವಾಗುವಂತೆ ಎಡಕ್ಕೆ ಹೊರಳಿ ವಿಸ್ತರಿಸಿತ್ತು. ನಮ್ಮ ಕಾಲದಲ್ಲಿ ಅಲ್ಲೊಂದು ಬಾಗಿಲು, ತೆರೆದು ಮುಂದುವರಿದರೆ ಖಾಲಿ ತಾರಸಿ ಮಾತ್ರ ಇತ್ತು. ನಮ್ಮ ವಿಭಾಗೀಯ ಮಟ್ಟದ ಸಭೆ ಸಮಾರಂಭಗಳ ಪೀಠಿಕೆಯಾಗಿ ಅಲ್ಲಿ ನಾವು ಆಗೀಗ ಚಹಾ ಬಿಸ್ಕತ್ತು ತೆಗೆದುಕೊಂಡದ್ದು ನೆನಪಾಯ್ತು. ಅತ್ತ ನಡೆಯುತ್ತಿದ್ದಂತೆ ಮೊದಲ ಕೊಠಡಿಯಲ್ಲಿ ಒಳಗೆ ಯಾರೋ ಕುಳಿತು ಏನೋ ಕೆಲಸದಲ್ಲಿ ನಿರತರಾಗಿದ್ದರು. ಮೊದಲು ‘ಯಾಕೆ ಸುಮ್ಮನೆ ಅವರ ಕೆಲಸ ಹಾಳು ಮಾಡುವುದೆಂದು ಓಣಿ ಕೊನೆಯವರೆಗೆ ಬೀಗಗಳ ಸಾಲು ನೋಡಿ ಮರಳಿದೆ. ಮರಳಿ ಬರುವಾಗ ಕುತೂಹಲ ತಡೆಯಲಾಗದೇ ತೆರೆದ ಬಾಗಿಲಲ್ಲಿ ನಿಂತು ಏನು ಮಾತಾಡಬಹುದೆಂದು ಹೊಳೆಯದೇ ವಿಭಾಗದಲ್ಲಿ ಯಾರೂ ಇದ್ದಂತಿಲ್ಲ… ಎನ್ನುತ್ತಿದ್ದಂತೆ ಆ ವ್ಯಕ್ತಿ ಎದ್ದು ಬಂದರು. “ಅಯ್ಯೋ ನಾನು, ವಿಭಾಗ ಮುಖ್ಯಸ್ಥ, ಮಹದೇವ್ ಇದ್ದೇನೆ. ನೀವೂ…”

ಅಲ್ಲಿಗೆ ನಾನು ಯಾರು?

[ಮುಂದಿನ ಕಂತಿನಲ್ಲಿ ಮುಂದುವರಿಯಲಿದೆ – ಗೊಡ್ಡೆಮ್ಮೆ ಪುರಾಣಾ]