(ಕೊಡಗಿನ ಸುಮಗಳು – ಕತೆ ಹನ್ನೊಂದು -೧೯೫೧)
ಇದು ಅಗಸ್ತ್ಯನ ತಪದಮಣೆ ಕಾವೇರಿ ತಾಯ ತವರ್ಮನೆ
ಕದನಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ !
– ಕವಿಶಿಷ್ಯ
ಕೊಡಗುದೇಶದಿ ಜನಿಸಿ ಕೊಡಗಿನ
ಬೆಡಗ ವರ್ಧಿಸಿ ಸಡಗರದಿ ತಾ
ನಡೆವಳೋಡುವಳೀ ಕವೇರನ ಸುತೆಯು ಕಾವೇರಿ
ಜಡರ ಪಾಪಾಂಬುಧಿಯ ನೀಗುತ
ಕಡುಬಡವರಿಗೆ ಪುಣ್ಯನಿಧಿಯಂ
ಕೊಡುತ ಹರಿವಳು ಪತಿತಪಾವನೆ ದೇವಿ ಕಾವೇರಿ
ಕಮಲಜ ಕುಧರದ ವಿಮಲತಟಾಕದಿ
ತಮವಂ ತೊರೆಯುವ ಜನಿಸುವಳು
ರಮಿಸುತ ನಲಿದು ವಸುಮತಿಗೆ ಹಸುರುಡೆ
ನಮನವಸಲ್ಲಿಸಿ ಮೆರೆಯುವಳು
ಬ್ರಹ್ಮಗಿರಿಯು ಕೊಡಗು ಸಂಸ್ಥಾನದ ಪವಿತ್ರತಮ ಪರ್ವತ. ಲೋಕ ಪಾವನೆಯಾದ ಕಾವೇರೀ ಮಾತೆಯು ಈ ಶೈಲದಲ್ಲಿ ನದೀ ರೂಪ ತಳೆದು ಮಂಗಳಪ್ರದಾಯಿನಿಯಾಗಿ ಪ್ರವಹಿಸಿ ಸಾಗುವಳು. ಯುಗ ಯುಗಾಂತರಗಳಿಂದ ಗಂಭೀರವಾಗಿ ತಲೆಯೆತ್ತಿ ನಿಂತಿರುವ ಪರ್ವತವು ನೋಟಕರಲ್ಲಿ ಆಶ್ಚರ್ಯವನ್ನೂ ಭಕ್ತಿಯನ್ನೂ ಬೀರುವುದು. ಬೃಹತ್ತಾದುದರ ಸುತ್ತಲೂ ಮಹತ್ತ್ವದ ಒಂದು ಕ್ಷೇತ್ರ ವ್ಯಾಪಿಸಿರುವುದು – ಅಯಸ್ಕಾಂತ ಶಿಲೆಯ ಸುತ್ತಲೂ ಆಕರ್ಷಣ ಕ್ಷೇತ್ರವು ಇರುವಂತೆ. ಬ್ರಹ್ಮಗಿರಿಯು ಇಂತಹ ಪವಿತ್ರವಾದ ಆಕರ್ಷಣ ಕ್ಷೇತ್ರ. ಇದು ಪ್ರತಿದಿನವೂ ಹಲವಾರು ಭಕ್ತರನ್ನು ತನ್ನ ಸಮ್ಮುಖಕ್ಕೆ ಸೆಳೆಯುವುದು. ಭಕ್ತವೃಂದ ದಾರಿಯುದ್ಧಕ್ಕೂ ಸೃಷ್ಟಿ ಸೌಂದರ್ಯದ ರಸದೂಟ ಉಣ್ಣುತ್ತ ಪುನೀತರಾಗಿ ಬ್ರಹ್ಮಗಿರಿಯ ದರ್ಶನಕ್ಕೆ ಯೋಗ್ಯತೆ ಪಡೆದು ಮೇಲೆ ಬರುವರು. ಆ ಸೌಂದರ್ಯದ ಸೌಧಕ್ಕೆ ಕಳಶವನ್ನೇರಿಸುವಂತೆ ಧೀರಗಂಭೀರವಾಗಿ, ಸ್ಥಿರತೆಯ ಪ್ರತೀಕವಾಗಿ, ಗಗನ ಚುಂಬಿಯಾಗಿ, ಭವ್ಯವಾಗಿ ನಿಂತಿರುವ ಬ್ರಹ್ಮಗಿರಿಯನ್ನು ಈಕ್ಷಿಸಿ ಸಮೀಕ್ಷಿಸಿ ಪುಳಕಿತಕಾಯರಾಗುವರು. ಮಹಾತ್ಮರ ದರ್ಶನವೇ ಪರಮಸುಖ.
ಬ್ರಹ್ಮಗಿರಿಯ ತಳದಲ್ಲಿ ತಲಕಾವೇರಿಯೆನ್ನುವ ಪವಿತ್ರ ಕ್ಷೇತ್ರವಿದೆ. ಅಲ್ಲಿಯೇ ಕಾವೇರೀ ಮಾತೆಯು ಜನನ ತಾಳುವುದು; ವರ್ಷಕ್ಕೊಮ್ಮೆ ತುಲಾಮಾಸದಲ್ಲಿ ಅಲ್ಲಿ ತೀರ್ಥೋದ್ಭವಾಗುವುದು. ಗಂಗಾಮಾತೆಯು ಆ ಶುಭಮುರ್ಹೂತದಲ್ಲಿ ತಲಕಾವೇರಿಗೆ ಅದೃಶ್ಯಳಾಗಿ ಆಗಮಿಸಿ ತೀರ್ಥಜಲದಲ್ಲಿ ಮಿಂದು ತಾನು ಭಕ್ತಜನರಿಂದ ಸಂಗ್ರಹಿಸಿದ ಪಾಪಭಾರವನ್ನು ನೀಗಿ ಪರಿಪೂತೆಯಾಗಿ ಮರಳುವಳೆಂದು ಪುರಾಣೋಕ್ತಿ. ತಲಕಾವೇರಿಯಲ್ಲಿರುವ ಕೊಳದಲ್ಲಿ ಭಕ್ತರು ಸ್ನಾನಮಾಡಿ, ಕಾವೇರೀ ತೀರ್ಥದಿಂದ ಪಾಪರಹಿತವಾಗಿ ಗಿರಿಯನ್ನೇರುವರು. ಸುತ್ತಲೂ ಸೌಂದರ್ಯ ಹಸುರಾಗಿ ಕಾಡಾಗಿ ಬಾನಾಗಿ ಪರ್ವತ ಶ್ರೇಣಿಯಾಗಿ ಹಬ್ಬಿರುವುದು. ಅಲ್ಲಿ ಯಾವುದಕ್ಕೂ ಮಿತಿಯಿಲ್ಲ, ಕೊರತೆಯಿಲ್ಲ. ಮನುಷ್ಯನ ಮಿತಿಯಿಂದ ಮಿತಿಯ ಕಲ್ಪನೆಯಾಗ ಬೇಕೇ ವಿನಾ ಅನ್ಯಥಾ ಅಲ್ಲ. ದೇವರು ಕೊಡುವಾಗ ಧಾರಾಳವಾಗಿಯೇ ಕೊಡುವನು. ಆಳೆತ್ತರ ಬೆಳೆದಿರುವ ತೃಣಾಳಿಗಳ ಮಧ್ಯೆ ದಾರಿಮಾಡಿಕೊಂಡು ಶಿಖರಾಗ್ರಕ್ಕೆ ಹೋಗಬೇಕು. ಆ ಪವಿತ್ರ ಯಾತ್ರೆಯಲ್ಲಿ ಗಾಳಿಯು ಮೃದುವಾಗಿ ತೀಡಿ ಹುಲ್ಲುಗಳ ಮೂಲಕ ಪಥಿಕರಿಗೆ ಚಾಮರ ಬೀಸುವುದು. ಕೆಳಗಿನ ಕಣಿವೆಯ ಹೂವುಗಳು ಪರಿಮಳದಿಂದ ತುಂಬಿರುವ ಗಾಳಿಯು ಅತ್ಯಂತ ಆಹ್ಲಾದಕರವಾಗಿರುವುದು. ಪ್ರಾತಃಕಾಲದ ಸಮಯ ಮೇಲೇರುತ್ತಿದ್ದರೆ ಹುಲ್ಲಿನ ಎಳೆಗಳ ಅಂಚಿನಿಂದ ಹಿಮಮಣಿಗಳ ಪ್ರತಿಫಲನದಿಂದ ಶತಕೋಟಿ ಸೂಕ್ಷ್ಮಸೂರ್ಯರು ಮಿನುಗಿ ದಾರಿಗರಿಗೆ ಉಲ್ಲಾಸ ನೀಡುತ್ತಾರೆ.
ಮುಂದೆ ಮುಂದೆ ಹೋದಹಾಗೆ ನಡೆದುಬಂದ ದಾರಿಯ ಸಿಂಹಾವಲೋಕನ ಮಾಡಬೇಕು. ಕಾಲಿನ ತಳದಲ್ಲಿ, ಕೆಳಗೆ, ತಲಕಾವೇರಿಯ ಕೊಳ, ದೇವಾಲಯ ಕಿರಿದಾಗುತ್ತ ಹೋಗುವುದು. ಅಲ್ಲಿಂದ ಮುಂದೆ ಭಯಂಕರವಾದ ಪ್ರಪಾತದಲ್ಲಿ ಕಾಡಿನ ರಾಶಿ. ಹಿಂದೊಮ್ಮೆ ಹಸುರುಕರಗಿ ಸಮುದ್ರವಾಗಿದ್ದಿರಬೇಕು; ಆ ಸಮುದ್ರ ನೊರೆ ನೊರೆಯಾಗಿ ಅಲೆಗಳನ್ನು ಚಾಚಿ ಬ್ರಹ್ಮಗಿರಿಯ ಪಾದಸ್ಪರ್ಶ ಮಾಡಲು ಬಂದಿದ್ದಿರಬೇಕು; ಆಗ ಯಾವುದೋ ಸೃಷ್ಟಿರಹಸ್ಯ ಕಾರಣದಿಂದ ಸಮುದ್ರ ಹಾಗೆಯೇ ಫಕ್ಕನೆ ಘನೀಭವಿಸಿರಬೇಕು. ಆ ರೀತಿ ದಿಗಂತದವರೆಗೆ ನಮ್ಮ ಕೆಳಗೆ ಚಾಚಿರುವ ಸಹಸ್ರಾರು ವೃಕ್ಷಗಳ ಪರ್ಣಸಮೂಹಗಳು ಗೋಚರಿಸುವುವು. ಅವುಗಳ ಮೇಲೆ ಹಗುರವಾಗಿ ಗಾಳಿಯಂತೆ ಒಯ್ಯೊಯ್ಯನೆ ಬಳುಬಳುಕಿ ಸಾಗುವುದು ಪರಮ ಸುಖಕರವೆಮದು ಮನಸ್ಸು ಊಹಿಸುವುದು, ಮತ್ತೆ ದೂರದಲ್ಲಿ, ಬಲುದೂರದಲ್ಲಿ, ಬಾನು ಬುವಿಯನ್ನು ಸೇರುವಲ್ಲಿ, ಬಿಳಿ ಮೋಡಗಳಿಗೂ ತೆಳು ಬಾನಿಗೂ ವ್ಯತ್ಯಾಸ ತೋರದೆ ನೀಲಿಯೇ ಆವಿರ್ಭಸಿರುವಂತೆ ಕಾಣುವಲ್ಲಿ ಪಶ್ಚಿಮ ಸಮುದ್ರಾಧಿಪತಿಯು ತರಂಗಕರಗಳಿಂದ ಆಕಾಶದೇವಿಯ ಅರ್ಚನೆ ಮಾಡುವುದೂ ಕಾಣಿಸುವುದು. ಹಾಗೆ ನಿಟ್ಟಿಸುತ್ತಿದ್ದಂತೆಯೇ. ದೃಷ್ಟಿಯು ಅಸ್ಪಷ್ಟವಾಗಿ, ಬಾನಿನ ನೀಲಿ ಕರಗಿ ನೀರಿಗೆ ಸುರಿದು ಆ ನೀರು ನಮ್ಮೆಡೆಗೆ ಹರಿದು ಬರುತ್ತ ಹಸುರಾಗಿ ಕಾಡಾಗಿ ಬೆಟ್ಟವಾಗಿ ಬರುವಂತೆಯೂ ಭಾಸವಾಗುವುದು. ಪೂರ್ವದಿಕ್ಕಿಗೆ ತಿರುಗಿದರೆ ಬೆಟ್ಟವು ಇಳಿದಿಳಿದು ಹುಲ್ಲುಗಾವಲಾಗಿ ಮರೆಯಾಗುವ ದೃಶ್ಯ ಕಾಣುವುದು.
ಇಂತಹ ಬ್ರಹ್ಮಗಿರಿಯನ್ನೇ ಹಿಂದೆ ಬ್ರಹ್ಮದೇವನು ತಪಸ್ಸಿಗಾಗಿ ಆಶ್ರಯಿಸಿದನು ಎಂದರೆ ಆಶ್ಚರ್ಯವಿದೆಯೇ? ಸೃಷ್ಟಿಕರ್ತ ಬ್ರಹ್ಮನು ಅತ್ಯಂತ ಕುಶಲಿಯಾದ ಪ್ರತಿಭಾವಂತನಾದ ಶಿಲ್ಪಿ ಮತ್ತು ಕವಿ. ಭೂಲೋಕವೇ ಅವನ ಕೃತಿಯಾದರೂ ಈ ಬ್ರಹ್ಮಗಿರಿಯಲ್ಲಿಯ ಎರಕಹೊಯ್ದ ಸೌಂದರ್ಯವನ್ನು ಅವನು ಬಲು ಮೆಚ್ಚಿದನು. ಹಾಗಾಗಿ ಶ್ರೀಮನ್ನಾರಾಯಣನನ್ನು ಕುರಿತು ಬ್ರಹ್ಮದೇವನು ತಪಸ್ಸು ಮಾಡಬೇಕಾಗಿ ಬಂದಾಗಿ ಈ ಪರ್ವತಾಗ್ರದಲ್ಲಿ ಮಂಡಿಸಿದ್ದನು ಎಂದು ಪ್ರತೀತಿ ಇದೆ. ಹೀಗೆ ಸಾಕ್ಷಾತ್ ಬ್ರಹ್ಮನ ಪಾದಕಮಲಗಳಿಂದ, ಬ್ರಹ್ಮನ ತಪಸ್ಸಿನಿಂದ ಪಾವಿತ್ರ್ಯಗಳಿಸಿ ಅಧಿಕ ಪೂಜ್ಯತೆ ಪಡೆದ ಪರ್ವತ ಅಂದಿನಿಂದ ಬ್ರಹ್ಮಗಿರಿಯೆಂದೇ ಕರೆಯಲ್ಪಟ್ಟಿತು. ಆ ಸಮಯದಲ್ಲಿ ಬ್ರಹ್ಮಗಿರಿಯ ತಪ್ಪಲಿನಲ್ಲಿ ವಿಸ್ತಾರವಾದ ಕೊಳವೊಂದಲ್ಲದೇ ಬೇರೆ ಏನೂ ಇರಲಿಲ್ಲ ಕಾವೇರೀಮಾತೆಯಂತೂ ಜನ್ಮತಾಳಿರಲಿಲ್ಲ.
ಚಂದ್ರವರ್ಮನು ಧರ್ಮಾತ್ಮನಾದ ರಾಜ. ದಕ್ಷಿಣಭಾರತದ ದಕ್ಷಿಣಾರ್ಧ ಭಾಗವಿಡೀ ಅವನ ಆಳ್ವಿಕೆಯಲ್ಲಿದ್ದಿತು. ಚಂದ್ರವರ್ಮನ ರಾಜ್ಯಭಾರದಲ್ಲಿ ಮಳೆ ಬೆಳೆಗಳು ಸಕಾಲದಲ್ಲಿ ಆಗಿ ಪ್ರಜೆಗಳು ಸುಖಸಂತೃಪ್ತಿಯಲ್ಲಿದ್ದರು. ಧರ್ಮವು ನೆಲಸಿರುವ ರಾಜ್ಯದಲ್ಲಿ ಸಂತುಷ್ಟಿಯೂ ಬೀಡು ಬಿಟ್ಟಿರುವುದು. ಚಂದ್ರವರ್ಮನು ತನ್ನ ವಿಶಾಲ ರಾಜ್ಯದಲ್ಲಿ ಆಗಾಗ ಸಂಚರಿಸುತ್ತ ಪ್ರಜೆಗಳ ಕ್ಷೇಮವನ್ನೂ ಹಿತವನ್ನೂ ಕೋರುತ್ತಿದ್ದನು. ಕಷ್ಟ ಸಹಿಷ್ಣುಗಳೂ ಧರ್ಮಮಾರ್ಗಿಗಳೂ ಆದ ಪ್ರಜೆಗಳಿಂದ ಕೂಡಿದ ರಾಜ್ಯವು ವರ್ಧಿಸುತ್ತಿದ್ದಿತು.
ಮುಂದಿನ ಕೆಲವು ವರ್ಷಗಳಲ್ಲಿ ಕಾಲ ಪರಿಸ್ಥಿತಿಯು ವಿಪರೀತವಾಯಿತು. ಅಧರ್ಮದ ಏರಿಕೆ ಎಲ್ಲಿಯಾದರೂ ಆಯಿತೋ, ದೇವದೇವತೆಗಳಿಗೆ ಸರಿಯಾದ ಅರ್ಘ್ಯ ನೈವೇದ್ಯಗಳು ಸಲ್ಲಲಿಲ್ಲವೋ ಏನೋ ಚಂದ್ರವರ್ಮನ ಸಮೃದ್ಧವಾದ ರಾಜ್ಯದಲ್ಲಿ ಮಳೆಯು ಸರಿಯಾಗಿ ಸುರಿಯದೆ ಜನರಲ್ಲಿ ಹಾಹಾಕಾರ ಉಂಟಾಯಿತು. ವಿಶೇಷವಾಗಿ, ತಮಿಳುನಾಡಿನ ಬಯಲು ಸೀಮೆಯಲ್ಲಿ ಕ್ಷೋಭೆ ವಿಪರೀತವಾಯಿತು. ಎರಡು ವರ್ಷ ಮಳೆಯಿಲ್ಲ; ಮೂರು ವರ್ಷಗಳಾದುವು ; ನಾಲ್ಕು ವರ್ಷಗಳೂ ಮುಗಿದುವು – ಮಳೆಯ ಸುಳಿವೇ ಇಲ್ಲ. ಪ್ರತಿವರ್ಷವೂ ಮಳೆಗಾಲದ ಸಮಯದಲ್ಲಿ ರೈತರು ಆಕಾಶವನ್ನು ನೋಡಿ ನೋಡಿ ಬೇಸತ್ತರು. ಬಿಳಿ ಮೋಡಗಳು ಬಂದು ಅಣಕಿಸಿ ಹೋಗುವಂತೆ ಹೋಗುತ್ತಿದ್ದುವು. ಸೂರ್ಯೋಷ್ಣ ಪ್ರಖರವಾಯಿತು. ಭೂಮಿವಾಸಿಗಳ ಮೇಲೆ ಅತಿಯಾದ ಕೋಪದಿಂದ ಸೂರ್ಯನು ಜ್ವಲಿಸುತ್ತಿರುವಂತೆ ತೋರಿತು. ಅವನ ಕಿರಣವರ್ಷದ ಪ್ರತಿಹತಿಯನ್ನು ಸಹಿಸಲಾರದೆ ಜನರು ಗ್ರಾಮ ನಗರಗಳನ್ನು ತೊರೆದು ಅಡವಿಗಳಿಗೆ ಹೋದರು. ಭಯಂಕರ ವಿಶಾಲ ಕಾನನಗಳು ಮಳೆಯಿಲ್ಲದೆ ಒಣಗುತ್ತಿದ್ದುವು.
ವನ್ಯ ಜಂತುಗಳು ಸೆಕೆಯಿಂದ ಹುಚ್ಚು ಹುಚ್ಚಾಗಿ ಓಡಿ ಓಡಿ ದಾರಿಯಲ್ಲಿಯೇ ಬಿದ್ದು ಸತ್ತು ಹೋಗುತ್ತಿದ್ದುವು. ರಾಷ್ಟ್ರದ ಬೇರೆ ಕಡೆಗಳಿಂದ ಆದಷ್ಟು ಶೀಘ್ರಗತಿಯಿಂದ ಆಹಾರ ಪದಾರ್ಥಗಳನ್ನು ತಂದು ಜನರಿಗೆ ಹಂಚುವ ವ್ಯವಸ್ಥೆ ಮಾಡಲಾಯಿತು. ಆದರೆ ಕುಡಿಯುವ ನೀರಿಗೇನು ಗತಿ? ಮಳೆ ಮೋಡಗಳು ಎಷ್ಟೋ ಸಲ ದಿನಗಟ್ಟಲೆ ವಾರಗಟ್ಟಲೆ ಕೂಡಿ ಕೂಡಿ ಗುಡು ಗುಡು ಸದ್ದನ್ನು ಮಾಡಿ ಮಾಡಿ ಒಂದೆರಡು ಹನಿಕರೆದು ಹಾಗೆಯೇ ಗಾಳಿಯಲ್ಲಿ ಚದರಿ ಮಾಯವಾಗುತ್ತಿದ್ದುವು. ದುಃಖಿತ ಜನರಲ್ಲಿ ಇದರಿಂದ ಇನ್ನಷ್ಟು ಸಂಕಟವಾಯಿತು. ಅನಾರೋಗ್ಯ ಸಾರ್ವತ್ರಿಕವಾಗಿ ವ್ಯಾಪಿಸಿತು. ದೇವಾಲಯಗಳಲ್ಲಿ ಪೂಜೆ ಪ್ರಾರ್ಥನೆಗಳು ಅಹರ್ನಿಶೆ ನಡೆದುವು. ಅನ್ನ ಸಂತರ್ಪಣೆ ಯಥೇಚ್ಛವಾಗಿ ರಾಜನ ನೇತೃತ್ವದಲ್ಲಿಯೇ ನಡೆಯಿತು. ಸಹಸ್ರ ಶತಸಹಸ್ರ ವರುಣಜಪವೂ ನಿಷ್ಫಲವಾಯಿತು. ವರುಣ ಯಜ್ಞ ಮುಂತಾದ ಮಹಾಯಜ್ಞಗಳು ನೀರಮೇಲಿನ ಹೋಮಗಳಾದುವು – ನೀರನ್ನು ತರಲಿಲ್ಲ. ಇಷ್ಟಾಗುವಾಗ ಐದನೆಯ ವರ್ಷರ್ತುವೂ ಕ್ಷಾಮರ್ತುವಾಗಿ ಪರಿಣಮಿಸಿತು. ಎಷ್ಟೋ ವರ್ಷಗಳಿಂದ ಸಂಪತ್ಸಮೃದ್ಧವಾಗಿ ಪುಷ್ಕಳವಾಗಿ ನಂದನವನದಂತೆ ಕಣ್ಗೆಡ್ಡವಾಗಿದ್ದ ನಾಡನ್ನು ಜನರು ದುಃಖದಿಂದ ತೊರೆದು ಬೇರೆ ಭಾಗಗಳಿಗೆ ವಲಸೆಹೋಗಲು ತೊಡಗಿದರು.
ಚಂದ್ರವರ್ಮ ರಾಜನಿಗೆ ವಿಪರೀತ ಚಿಂತೆಯಾಯಿತು. ಜನಸಂಖ್ಯೆ ಕಡಿಮೆಯಾಗಿದ್ದ ಆ ದಿನಗಳಲ್ಲಿ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೀಡುಗಳನ್ನು ತೊರೆದು ಹೋದರೆ ರಾಷ್ಟ್ರಕ್ಕೆ ವಿಶೇಷ ತೊಂದರೆಯಾಗುತ್ತಿರಲಿಲ್ಲ. ಆದರೆ ಅಂತಹ ದುರ್ಮುಹೂರ್ತ ಒದಗಿ ಬಂದರೆ ಅದು ರಾಜನಿಗೆ ರಾಷ್ಟ್ರಕ್ಕೆ ಅನಿಷ್ಟ ಸಂಭವಿಸುವುದನ್ನು ಸೂಚಿಸುವುದು ಎಂದು ಎಲ್ಲರೂ ತಿಳಿದಿದ್ದರು. ದೇವತೆಗಳ ಆಕ್ರೋಶ ಹೀಗೇಕೆ ಎಂದು ಚಂದ್ರವರ್ಮನಿಗೆ ತಿಳಿಯಲಿಲ್ಲ. ಧರ್ಮದಿಂದ ಅವನು ರಾಜ್ಯಭಾರ ನಡೆಸುತ್ತಿದ್ದರೂ ಇಂತಹ ದುರ್ದೈವ ಏಕೆ ಎಂದು ಅವನಿಗೆ ಅರ್ಥವಾಗಲಿಲ್ಲ.
ಜ್ಯೋತಿಷ್ಯ ನೋಡುವವರು ಗ್ರಹಗಣಿತವನ್ನು ಅಡಿಮೇಲೆ ಮಾಡಿ ಏನೂ ಹೇಳಲಾರದವರಾದರು. ಸೂರ್ಯ ಸಿದ್ಧಾಂತದಿಂದ, ದೃಗ್ಗಣಿತದಿಂದ ಏನೂ ತಿಳಿಯಲಿಲ್ಲ. ಸೂರ್ಯನು ಮಾತ್ರ ಪ್ರಖರನಾಗಿದ್ದನು. ಗ್ರಹಗಳ ಸಂಕ್ರಾಂತಿಯೋ ನಕ್ಷತ್ರಗಳಲ್ಲಿ ಉತ್ಕ್ರಾಂತಿಯೋ ಅಂತೂ ಜನರಿಗೆ ಭಯ ಭ್ರಾಂತಿಗಳು ವಿಪರೀತವಾದವು. ಒಂದು ಕೊಳಗ, ನಾಲ್ಕು ಕೊಳಗ, ಮಳೆಯನ್ನು ಸುರಿಸಬೇಕಾದ ಮೇಘರಾಜರು ಗರ್ಜನೆ ಮಾಡಿ ಓಡಿಸಲ್ಪಟ್ಟವರಂತೆ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದರು, ಚಂದ್ರವರ್ಮನು ಪ್ರಜೆಗಳ ಕ್ಷೇಮಕ್ಕಾಗಿ ಮಳೆಯ ಅಮೃತ ವರ್ಷಕ್ಕಾಗಿ ಏನನ್ನು ಬೇಕಾದರೂ, ತನ್ನ ಜೀವವನ್ನೇ ಬೇಕಾದರೂ, ತೊರೆದು ಬಿಡಲು ಸಿದ್ಧನಾಗಿದ್ದನು.
ಚಿಂತ್ರಾಕ್ರಾಂತನಾಗಿದ್ದ ರಾಜನ ಆಸ್ಥಾನಕ್ಕೆ ಒಂದು ದಿವಸ ತೇಜಸ್ವಿಯಾದ ಋಷಿಯೊಬ್ಬನು ಬಂದನು. ರಾಜನು ಅವನಿಗೆ ಉಚಿತವಾದ ಸ್ವಾಗತೋಪಚಾರ ಸತ್ಕಾರ ಮಾಡಿ ಮರ್ಯಾದೆಯಿಂದ ಬರಮಾಡಿಕೊಂಡರು.
ಋಷಿವರ್ಯನೇ ಮಾತನ್ನು ಪ್ರಾರಂಭಿಸಿದನು, “ರಾಜನೇ, ನಿನ್ನ ರಾಜ್ಯದಲ್ಲಿ ಉಂಟಾಗಿರುವ ಕ್ಷೋಭೆಯು ಬೇಗನೆ ಕೊನೆಗಾಣುವುದು.
ರಾಜನು ಸಂತೋಷವನ್ನು ವ್ಯಕ್ತಪಡಿಸಿದನು. “ಆದರೆ ನೀನದಕಾಗಿ ಕಷ್ಟಪಡಬೇಕಾಗುವುದು.”
“ಎಂತಹ ತ್ಯಾಗವನ್ನು ಮಾಡಲೂ ಎಂತಹ ಕಷ್ಟವನ್ನು ಪಡಲೂ ನಾನು ಸಿದ್ಧನಾಗಿರುವೆನು, ಸ್ವಾಮೀ!”
“ಬ್ರಹ್ಮದೇವನನನ್ನು ಕುರಿತು ನೀನು ಏಕಾಗ್ರವಾಗಿ ನಿರಂತರವಾದ ತಪಸ್ಸನ್ನು ಮಾಡಬೇಕು. ಆಗ ನಿನ್ನ ಇಷ್ಟಾರ್ಥ ಸಿದ್ಧಿಸುವುದು.”
“ಶಿರಸಾವಹಿಸಿದೆನು ನಿಮ್ಮ ಅಪ್ಪಣೆ. ಬ್ರಹ್ಮದೇವನೇ ಈ ರೀತಿ ನಿಮ್ಮ ಬಾಯಿಯಿಂದ ಆಜ್ಞೆ ಕೊಡಿಸುತ್ತಿರುವನೆಂದು ನಂಬಿದ್ದೇನೆ.” ಋಷಿವರೇಣ್ಯನು ಚಂದ್ರವರ್ಮ ಮಹಾರಾಜನನ್ನು ಹರಸಿ ಸಾಗಿದನು.
ಮರುದಿನ ಶುಭಮೂರ್ಹತದಲ್ಲಿ ಚಂದ್ರವರ್ಮ ರಾಜನು ರಾಜ್ಯವನ್ನು ಮಂತ್ರಿಯ ವಶಕ್ಕೆ ಒಪ್ಪಿಸಿ ತಪಶ್ಚರ್ಯೆಗಾಗಿ ವನಾಂತರಕ್ಕೆ ನಿರ್ಗಮಿಸಿದನು. ಜನಜನಿತವಾಗಿದ್ದ, ಅನೇಕ ಪುಣ್ಯಶ್ಲೋಕರ ಋಷಿಗಳ ತಪಸ್ಸಿನಿಂದ ಪಾವಿತ್ರ್ಯ ಹೊಂದಿ ದೇವತ್ವ ಪಡೆದಿದ್ದ ಬ್ರಹ್ಮಗಿರಿಯೆಡೆಗೆ ಚಂದ್ರವರ್ಮನು ಹೋದನು. ಪ್ರಕೃತಿ ದೇವಿಯ ಸಮ್ಮುಖ, ವಿಶಾಲವಾದ ಸುಂದರವಾದ ಏಕಾಂತವಾದ ಪ್ರದೇಶ. ಅಂತಹ ಬ್ರಹ್ಮಗಿರಿಯ ಪ್ರದೇಶದಲ್ಲಿ ಅಲ್ಲದೆ ಬೇರೆ ಎಲ್ಲಿ ತಾನೇ ಭಗವಂತನು ಒಲಿದಾನು?
ಅಚ್ಛೋದ ಸರಸ್ಸಿನಲ್ಲಿ ಮಿಂದು ಪರಿಪೂತನಾಗಿ ಆತ್ಮ ನೈವೇದ್ಯವನ್ನು ಬ್ರಹ್ಮದೇವನಿಗೆ ಮಾಡಿ ಶುದ್ಧಾಂತಃಕರಣದಿಂದ ದೇವದೇವನನ್ನು ಸೃಷ್ಟ್ಯಧೀಶನನ್ನು ಕುರಿತು ತಪಸ್ಸು ಆಚರಿಸಲು ಚಂದ್ರವರ್ಮನು ತೊಡಗಿದನು. ಆ ನಿರ್ಧಾರಪೂರ್ವಕ ನಿರಂತರ ವ್ರತದಿಂದ ರಾಜನ ಶರೀರ ಕ್ಷೀಣವಾಯಿತು. ಆದರೆ ಅವನ ಆಯಾಸವನ್ನು ಪ್ರಕೃತಿದೇವಿಯೇ ಮಾತೃಹಸ್ತದ ಪ್ರೇಮದಿಂದ ಪರಿಹರಿಸುತ್ತಿದ್ದಳು. ದೇಹವು ಕ್ಷೀಣವಾದಂತೆ ಆತ್ಮಶಕ್ತಿಯು ವರ್ಧಿಸುತ್ತಿದ್ದಿತು. ಮನುಷ್ಯಶಕ್ತಿ, ಅಂದರೆ ಆತ್ಮಶಕ್ತಿ, ದುರ್ಧರ ಪ್ರಸಂಗಗಳಲ್ಲಿ ಮಹೌನ್ನತ್ಯವನ್ನೇರಿ ಉತ್ತರಿಸಲು ಶಕ್ತವಾಗಿರುವುದು. ಚಂದ್ರವರ್ಮನ ತಪಸ್ಸಿನ ಉಗ್ರತೇಕಾಗ್ರತೆಗಳು ಏರಿದುವು. ಪರಬ್ರಹ್ಮನಿಗೆ ಭಕ್ತನ ಅಭೀಷ್ಟದ ಗಭೀರತೆ, ಭಕ್ತಿಯ ದೃಢತೆ ಅರಿವಾದುವು.
ಭಗವಂತನು ಮೈದೋರಿ ಭಕ್ತನನ್ನು ಹರಸಿದನು. ಸರ್ವಶಕ್ತನಾದ ಪರಮಾತ್ಮನಲ್ಲಿ ಏನು ವರವನ್ನು ತಾನೇ ತೃಣ ಮನುಷ್ಯನು ಬೇಡಿಯಾನು?
“ರಾಜ್ಯಕ್ಕೆ, ಪ್ರಜೆಗಳಿಗೆ ಕ್ಷೇಮವಾಗುವಂತೆ ಅನುಗ್ರಹಿಸಬೇಕು. ಪರಮಾತ್ಮ” ಎಂದು ಕರಮುಗಿದು ಬೇಡಿಕೊಂಡನು.
“ಅದು ನಡೆದಿದೆ. ಅದೂ ಅಲ್ಲದೇ ನೀನು ತಪಸ್ಸು ಮಾಡಿರುವ ಈ ಪವಿತ್ರ ಸ್ಥಳದಲ್ಲಿ ನನ್ನ ಮಾನಸಪುತ್ರಿ ಲೋಪಾಮುದ್ರೆಯು ನದಿಯಾಗಿ ಜನ್ಮತಾಳಿ ನಿನ್ನ ರಾಜ್ಯಕ್ಕಾಗಿ ಹರಿದು ಅದನ್ನು ಶಾಶ್ವತವಾದ ನಂದನವನ್ನಾಗಿ ಮಾಡುವಳು” ಎಂದು ಬ್ರಹ್ಮದೇವನು ಆಶೀರ್ವದಿಸಿದನು. ರಾಜನು ಅಮಿತಾನಂದದಿಂದ ಕೃತಜ್ಞತೆಯಿಂದ ಶ್ರೀ ಮಹಾವಿಷ್ಣುನಾಭಿ ಕಮಲ ಸಂಭೂತನನ್ನು ಸ್ತುತಿ ಮಾಡುತ್ತಿದ್ದಂತೆಯೇ ಸೃಷ್ಟಿ ಕರ್ತೃವು ಸೃಷ್ಟಿ ಸೌಂದರ್ಯದಲ್ಲಿ ಕರಕರಗಿ ಲೀನನಾಗಿ ಹೋದನು.
ಚಂದ್ರವರ್ಮನು ತಪಸ್ಸಿಗೆ ಹೋದಾಗಲೇ ದೇಶದಲ್ಲಿ ಮಳೆಯು ಅಮೃತ ಧಾರೆಯಾಗಿ ಸುರಿಯಲು ತೊಡಗಿತು. ಪ್ರಜೆಗಳು ಮಹಾರಾಜನನ್ನು ಮಹಾನುಭಾವ ಎಂದು ಸ್ತುತಿಸಿದರು. ಊರುಬಿಟ್ಟು ಹೋದವರು ಮರಳಿಬಂದು ಕೃಷಿಯನ್ನು ಪ್ರಾರಂಭಿಸಿದರು. ಸಸ್ಯಕೋಟಿಗಳು ಚಿಗುರಿ ಹೂವನ್ನು ಬಿಟ್ಟು ನಾಡು ಪುನಃ ಸೌಂದರ್ಯದ ಬೀಡಾಯಿತು, ರಾಜನು ತಪಸ್ಸಿನಿಂದ ಪವಿತ್ರನಾಗಿ ದೇವದರ್ಶನದಿಂದ ಕೃತಾರ್ಥನಾಗಿ ಹಿಂತಿರುಗುವಾಗ ಅವನ ಕಣ್ಮನಗಳನ್ನು ಈ ಸ್ವರ್ಗೀಯ ದೃಶ್ಯಗಳು ಸೂರೆಗೊಂಡವು. ಅಪಾರ ಹರ್ಷದಿಂದ ಅವನು ನಲಿದುಲಿದು ರಾಜ್ಯಪ್ರವೇಶ ಮಾಡಿದನು. ಅಪೂರ್ವ ಸಂಭ್ರಮದಿಂದ ಪ್ರಜೆಗಳು ಅವನನ್ನು ಸ್ವಾಗತಿಸಿದರು.
ಮುಂದಿನ ದೃಶ್ಯ ಎಷ್ಟೋ ವರ್ಷಗಳ ಅನಂತರ ಪ್ರಾರಂಭವಾಗುವುದು. ಆಗ ಮಹಾರಾಜನಿಗೆ ಐವತ್ತು ವರ್ಷಪ್ರಾಯ ಮೀರಿದ್ದಿತು. ಇನ್ನು ವಾನಪ್ರಸ್ಥಾಶ್ರಮಕ್ಕೆ ಹೋಗಬೇಕೆಂದು ಅವನು ಆಲೋಚಿಸುತ್ತಿದ್ದ ಕಾಲ.
ಬ್ರಹ್ಮಗಿರಿಯ ಸಮೀಪ ಪಾಡಿಬೆಟ್ಟವಿದೆ. ಅದರ ತಪ್ಪಲಿನಲ್ಲಿ ಕವೇರ ಮಹರ್ಷಿಯ ಆಶ್ರಮವಿದ್ದಿತು. ಅವನ ಅಖಂಡ ಬ್ರಹ್ಮಚಾರೀವ್ರತಕ್ಕೆ ಆ ಸ್ಥಳ ಅತ್ಯುತ್ತಮವಾದ ಏಕಾಂತತೆಯನ್ನು ಒದಗಿಸಿಕೊಟ್ಟಿತ್ತು. ದೇವಚಿಂತನೆಗೆ ಆ ಪ್ರದೇಶವು ಸರ್ವ ವಿಧದಲ್ಲಿಯೂ ಪ್ರಶಸ್ತವಾಗಿದ್ದಿತು. ಅನೇಕ ಸ್ಥಳಗಳಲ್ಲಿ ಸಂಚರಿಸಿದ ಋಷಿವರ್ಯನು ಆ ಸ್ಥಳದ ಸುಂದರ ಮತ್ತು ಪಾವನ ಏಕಾಂತತೆಗೆ ಮಾರುಹೋಗಿ ಅಲ್ಲಿಯೇ ನೆಲೆಸುವುದೆಂದು ನಿಶ್ಚಯಿಸಿದನು. ಸೂರ್ಯೋದಯ ಪೂರ್ವದಲ್ಲಿ ಪ್ರಾರಂಭವಾಗುತ್ತಿದ್ದ ಪರಮಾತ್ಮಾರಾಧನೆಯು ಹೊತ್ತು ಏರುವವರೆಗೂ ಅಖಂಡವಾಗಿ ನಡೆಯುತ್ತಿದ್ದಿತು. ಅನಂತರ ಋಷಿಯು ವನಾಂತರದಲ್ಲಿ ಸಂಚರಿಸಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ದೇವರಿಗೆ ನೈವೇದ್ಯ ಮಾಡಿ ತಾನು ಭುಂಜಿಸಿ ವಿಶ್ರಾಂತಿ ಪಡೆಯುತ್ತಿದ್ದನು. ಸಾಯಂಕಾಲವೂ ಇದೇ ರೀತಿ ಉಪಾಸನೆ ಮುಂತಾದವುಗಳು ನಡೆಯುತ್ತಿದ್ದುವು. ಪ್ರಕೃತಿಯೂ ಕವೇರನೂ ಏಕ ಮನಸ್ಸಿನಿಂದ ಹೀಗೆ ಭಗವತ್ಸೇವೆಯನ್ನು ಅನುದಿನ ನಡೆಸುತ್ತಿದ್ದರು.
ಒಂದು ದಿನ ಸಾಯಂಕಾಲ. ಮುನಿಪುಂಗವನು ಫಲಸಂಗ್ರಹಾರ್ಥವಾಗಿ ಕಾಡುಗಳಲ್ಲಿ ಅಲೆಯುತ್ತ ಹೋಗುತ್ತಿದ್ದನು. ಹಾಗೆ ಹೋಗುತ್ತ ಬಹಳ ಹೊತ್ತು ತಿರುಗಾಡಿ ಬೇಕಾದಷ್ಟು ಹಣ್ಣುಹಂಪಲುಗಳನ್ನು ಸಂಗ್ರಹಿಸಿಕೊಂಡು ಹಿಂತಿರುಗಿದನು. ಆಶ್ರಮವನ್ನು ಪ್ರವೇಶಿಸುವಾಗ ಅವನಿಗೆ ಆಶ್ಚರ್ಯದ ಮೇಲೆ ಪರಮಾಶ್ಚರ್ಯ. ಅವನ ಕುಟೀರದೊಳಗೆ ಒಂದು ಕಿರಿಯ ಹೆಣ್ಣು ಶಿಶು ಮಲಗಿಕೊಂಡು ಮೇಲೆ ನೋಡುತ್ತ ಕೈಕಾಲು ಬಡಿದುಕೊಂಡು ಅಳುತ್ತಿತ್ತು. ಅದರ ರೋದನಧ್ವನಿಯಿಂದ ಕವೇರನು ವಿಸ್ಮಯಭರಿತನಾದನು. ನಿರ್ಜನ ಪ್ರದೇಶದಲ್ಲಿ ಒಂದು ಅನಾಥ ಶಿಶು! ಹೋಗುವಾಗ ಇರಲಿಲ್ಲ. ಈಗ ಬಂದಿದೆ! ಯಾರೋ ದೇವಾಂಶಸಂಭೂತರು ತಂದು ಮಲಗಿಸಿರಬೇಕು. ಏನದ್ಭುತ! ಆ ಶಿಶುವನ್ನೇ, ಆ ಸರ್ವಾಂಗ ಸುಂದರ ಮನುಷ್ಯ ಬಿಂಬವನ್ನೇ, ಋಷಿಯು ದೃಷ್ಟಿಸಿ ನೋಡಿದನು. ಅದನ್ನು ಎತ್ತಿಕೊಳ್ಳಲು ಲಗುಬಗೆಯಿಂದ ಮುಂದೆ ಹೋದನು. ಮುನಿಶ್ರೇಷ್ಠನ ಹೆಗಲಮೇಲೆ ಶಿಶುವು ಸಮಾಧಾನಹೊಂದಿತು. ಅದು ಶಾಂತವಾಗಿ ಕಣ್ಣರಳಿಸಿ ಸುತ್ತಲೂ ನೋಡುತ್ತಿತ್ತು. ಋಷಿಯ ಆಶ್ಚರ್ಯ ಮೇರೆ ಮೀರಿತು. ಆಶ್ರಮದಿಂದ ಹೊರಗೆ ಮಗುವನ್ನು ಎತ್ತಿಕೊಂಡು ಹೋಗಿ, ಅಲ್ಲಿ ಎಲ್ಲಿಯಾದರೂ ಆ ಮಗುವಿನ ತಂದೆತಾಯಿಯರು ಇರುವರೇ ಎಂದು ಔತ್ಸುಕ್ಯದಿಂದ ಪರೀಕ್ಷಿಸಿದನು. ನಿಸರ್ಗವು ತಾನೇ ಮಗುವಿನ ತಾಯಿಯೆನ್ನುವಂತೆ ಗಾಳಿ ಬೀಸಿ ಸಮೀಪದ ರಂಜದ ಮರದಿಂದ ಹತ್ತೆಂಟು ರಂಜದ ಹೂವುಗಳನ್ನು ಆ ಮಗುವಿನ ಮೇಲೆ ಬೀರಿತು.
ಕವೇರನು ಮಗುವನ್ನು ಮುದ್ದಿನಿಂದ ಲಾಲಿಸಿಪಾಲಿಸಿ ರಕ್ಷಿಸಿದನು. ಮಗುವು ದಿನದಿಂದ ದಿನಕ್ಕೆ ಚೆನ್ನಾಗಿ ಬೆಳೆಯುತ್ತಿದ್ದಿತು. ತನ್ನ ಬಾಲಲೀಲೆಗಳಿಂದ ಕವೇರನನ್ನು ಸಂತೋಷಪಡಿಸತೊಡಗಿತು. ಮುಂದೊಂದು ದಿವಸ ಆ ಮಾರ್ಗವಾಗಿ ಉತ್ತರಕ್ಕೆ ಪ್ರಯಣಿಸುತ್ತಿದ್ದ ಕಾಶ್ಯಪ ಋಷಿಯು ಕವೇರಾಶ್ರಮಕ್ಕೆ ಬಂದು ವಿಶ್ರಮಿಸಿದನು. ಅವನು ಈ ಹೆಣ್ಣು ಮಗುವಿನ ವಿಷಯ ತಿಳಿದು ವಿಸ್ಮಿತನಾದನು. ಸ್ವಲ್ಪ ಹೊತ್ತು ಮನಸ್ಸಿನಲ್ಲಿಯೇ ಚಿಂತಿಸಿ ಯೋಗದೃಷ್ಟಿಯಿಂದ ರಹಸ್ಯವನ್ನು ತಿಳಿದು ಕವೇರನಿಗೆ ಹೀಗೆಂದು ಹೇಳಿದನು, “ಬ್ರಹ್ಮನ ಮಾನಸ ಪುತ್ರಿಯಾದ ಈಕೆ ಅವತಾರಸ್ತ್ರೀ. ಘನೋದ್ದೇಶದಿಂದ ಭೂಮಿಯಲ್ಲಿ ಜನನ ಪಡೆದಿದ್ದಾಳೆ. ಇವಳ ಹೆಸರು ಲೋಪಾಮುದ್ರೆ. ಆದರೂ ನಿನ್ನ ಪ್ರೀತಿಯ ಸಾಕುಮಗಳಾದುದರಿಂದ ಕಾವೇರಿಯೆನ್ನುವ ಹೆಸರಿನಿಂದ ಲೋಕಪ್ರಖ್ಯಾತಳಾಗುವಳು.”
ಸ್ವಾಭಾವಿಕವಾಗಿಯೇ ಲೋಪಾಮುದ್ರೆಯಲ್ಲಿ ಕವೇರನಿಗಿದ್ದ ಪ್ರೇಮ ಈ ನೂತನ ಜ್ಞಾನದಿಂದ ಆತ್ಮೀಯತೆಯಾಗಿ ಪರಿಣಮಿಸಿತು. ಆತ್ಮೀಯತೆಗೆ ಮಹತ್ತ್ವವೂ ಸೇರಿತು. ಆ ಮಗು ಅವನಿಗೆ ಇನ್ನಷ್ಟು ಪ್ರಿಯವಾದುದಾಯಿತು. ಹೀಗೆ ಎಂಟು ಹತ್ತು ವರುಷಗಳು ಸಂದುವು. ಲೋಪಾಮುದ್ರೆಯು ಕವೇರ ಮಹರ್ಷಿಯ ಕಣ್ಮಣಿಯಾಗಿ, ಅವನಿಗೆ ಸರ್ವವಿಧದಲ್ಲಿಯೂ ಮಗಳಾಗಿ ಸಹಾಯಕಿಯಾಗಿ, ಅವನನ್ನು ಒಂದು ಕ್ಷಣವೂ ಅಗಲದೇ ಬೆಳೆದಳು. ತಂದೆ, ಮಗಳು ಪಾಡಿ ಬೆಟ್ಟಕ್ಕೆ ಜೀವಕಳೆ ತುಂಬುತ್ತ ತಮ್ಮ ದಿವ್ಯಾದರ್ಶ ಜೀವನದಿಂದ ಆ ಪ್ರದೇಶವನ್ನು ಪಾವನಗೊಳಿಸಿದ್ದರು. ಋಷ್ಯಾಶ್ರಮವು ಅನೇಕ ಜೀವಿಜಂತುಗಳ ಬಿಡಾರವಾಗಿದ್ದಿತು. ಜಿಂಕೆಗಳ ಆಟ, ಕಾಡುಕೋಣಗಳ ಓಟ, ಹುಲಿಗಳ ಗಂಭೀರವಾದ ಸ್ನೇಹಮಯವಾದ ನಡಿಗೆ, ಆನೆಗಳ ಸೇವೆ, ದನಕರುಗಳು ವಾತ್ಸಲ್ಯದ ಕರೆಯುವಿಕೆ ಇವುಗಳಿಂದ ಕೂಡಿದ ಆಶ್ರಮವು ಒಂದು ಕಿರಿಯ ಸ್ನೇಹಪೂರಿತ ಜಗತ್ತೇ ಆಗಿತ್ತು. ಪಕ್ಷಿಸಂಕುಲಗಳು ನಿತ್ಯವೂ ಸ್ವರ್ಗೀಯ ಗಾನವನ್ನು ವಿವಿಧ ರಾಗಗಳಲ್ಲಿ ಹಾಡಿ ಆಶ್ರಮದ ಸಂತೋಷವನ್ನು ವರ್ಧಿಸುತ್ತಿದ್ದುವು. ಹಸ್ತಿದಂತಗಳ ಸಾರದಿಂದಲೂ, ಲತೆಗಳ ಕೋಮಲತೆಯಿಂದಲೂ, ಪುಷ್ಪಗಳ ಸೌರಭ್ಯದಿಂದಲೂ, ವಿಹಂಗಮಗಳ ಇಂಚರದಿಂದಲೂ, ಪ್ರಕೃತಿ ಸೌಂದರ್ಯ ಸರ್ವಸ್ವದಿಂದಲೂ ಕಂಡರಸಿ ನಿರ್ಮಿತವಾದ ದಿವ್ಯ ಮೂರ್ತಿಯಂತಿದ್ದ ಲೋಪಾಮುದ್ರೆಯು ಆ ವಾತಾವರಣದ ಜೀವವಾಗಿದ್ದಳು, ಉಸಿರಾಗಿದ್ದಳು. ಋಷಿ ಕನ್ಯೆಯ ದಿವ್ಯಪ್ರೇಮಪೂರಿತ ಸನ್ನಿಧಿಯನ್ನು ಪ್ರತಿ ಜೀವಜಂತುವೂ ಪ್ರತಿನಿತ್ಯವೂ ಬಯಸುತ್ತಿದ್ದಿತು.
ವಸಂತಮಾಸದ ಸುಪ್ರಭಾತ. ದಿನಮಣಿಯು ಬೆಳಕಿನ ಹುಡಿಗಳನ್ನು ತರುನಿಚಯಗಳ ಮೇಲೆರಚಿ ಆಟವನ್ನು ನೋಡುತ್ತಿದ್ದನು, ರಾರಾಜಿಸುತ್ತಿದ್ದನು. ಈ ಹುಡಿಗಳಲ್ಲಿ ಕೆಲವು ಒಂದಾಗಿ ಸೇರಿ ಹೂವುಗಳಾಗಿದ್ದಂತೆ ಮರಗಳ ಮೇಲೆ ಅಂಟಿಕೊಂಡಿದ್ದುವು. ಆನಂದ ಸಮಾಧಿಯಲ್ಲಿ ಗಿರಿವನಗಳು ತಲ್ಲೀನತೆ ಹೊಂದಿದ್ದುವು. ವಿಹಂಗಮಗಳು ಪ್ರಾತರ್ಗಾನವನ್ನು ಹಾಡುತ್ತ ನಾನಾ ದಿಗಭಿಮುಖವಾಗಿ ಹಾರಾಡಿ ನಲಿಯುತ್ತ ಹೋಗುತ್ತಿದ್ದುವು. ಚೈತನ್ಯ ಸ್ರೋತಸ್ಸು ಎಲ್ಲೆಲ್ಲಿಯೂ ತುಂಬಿ ಪ್ರವಹಿಸುತ್ತಿತ್ತು. ಆ ಮಂಗಳ ಸನ್ನಿವೇಶದಲ್ಲಿ ಮಹರ್ಷಿಯು ದೇವಾರ್ಚನೆಯನ್ನು ಏಕಾಗ್ರತೆಯಿಂದ ಮಾಡುತ್ತಿದ್ದನು. ಲೋಪಾಮುದ್ರೆಯು ಪರಿವಾರದ ಜಿಂಕೆಗಳಿಂದ ಆವೃತಗಳಾಗಿ ವನದಲ್ಲಿ ಸಂಚರಿಸುತ್ತಿದ್ದಳು, ನಾಲ್ಕು ಹಣ್ಣುಗಳನ್ನು ಕೊಯ್ಯುವಳು, ಎರಡನ್ನು ಹರಿಣಶಿಶುಗಳಿಗೆ ತಿನ್ನಿಸುವಳು, ಇನ್ನೆರಡನ್ನು ಹಸುವಿನ ಕರುಗಳಿಗೆ ತಿನ್ನಿಸುವಳು. ಆಗ ಎಳೆಯ ಗರಿಕೆ ಹುಲ್ಲು ಚಿಗುರಿರುವುದು ಕಾಣುವುದು. ಅವುಗಳನ್ನು ಪಲ್ಲವಕೋಮಲವಾದ ಅವಳ ಕೈಬೆರಳುಗಳಿಂದ ಚಿವುಟಿ ಕೊಯ್ದು ಆ ಕಿರಿಯ ಹಸುಗಳಿಗೆ ಕೊಡುವಳು. ಅವುಗಳಿಗೆಲ್ಲ ಬಂಧುರ ಸ್ನೇಹದಿಂದ ತಾಯಿಯಾಗಿ ಹಿರಿಯಕ್ಕನಾಗಿ ಲೋಪಾಮುದ್ರೆಯು ಮರದಿಂದ ಮರಕ್ಕೆ ಗಿಡದಿಂದ ಗಿಡಕ್ಕೆ ಅಲೆಯುತ್ತಿದ್ದಳು.
ಗಾಳಿಯ ಸ್ವಚ್ಛಂದತೆಯಿಂದ ಅಷ್ಟೇ ಪಾವಿತ್ರ್ಯ ಪಾರಿಶುದ್ಧ್ಯಗಳಿಂದ ಅಲ್ಲೆಲ್ಲ ಸಂಚರಿಸುತ್ತಿದ್ದಳು. ಪ್ರಕೃತಿದೇವಿಯೇ ಮೈತಳೆದು ಬಂದಂತೆ ಅಡ್ಡಾಡುತ್ತಿದ್ದಳು. ಅಲ್ಲಿ ಒಂದು ನೇರಿಳೆಯ ಮರವಿದ್ದಿತು. ಅದರ ಸ್ವಲ್ಪ ಎತ್ತರದ ಕೊಂಬೆಯಲ್ಲಿ ಕರಿದಾದ ದೊಡ್ಡ ಮಣಿಗಳನ್ನು ಪೋಣಿಸಿದಂತೆ ತುಂಬ ಹಣ್ಣುಗಳಿದ್ದುವು. ಅವುಗಳನ್ನು ಕೊಯ್ದು ತೆಗೆದುಕೊಂಡು ಹೋಗಬೇಕೆಂದು ಒಂದು ಅಡರಿನ ಸಹಾಯದಿಂದ ಹೊಡೆಯಲು ಪ್ರಯತ್ನಿಸಿದಳು. ಆದರೆ ಕೊಂಬೆಯು ಕೈಗೆ ಎಟುಕಲಿಲ್ಲ. ಪುನಃ ಪ್ರಯತ್ನ, ಪುನಃ ವಿಫಲ. ಹೀಗೆ ನಾಲ್ಕೆಂಟು ಸಲ ಪ್ರಯತ್ನಿಸಿದಳು. ಒಂದೆರಡು ಹಣ್ಣುಗಳ ಕೆಳಗೆ ಉದುರಿಬಿದ್ದು ತರಗೆಲೆ ಹುಲ್ಲುಗಳ ಮಧ್ಯೆ ಮಾಯವಾದವು. ಫಲಸಂಕುಲ ಲೋಪಾಮುದ್ರೆಯನ್ನು ಅಣಕಿಸುವಂತೆ ನೋಡಿತು. ಮುನಿಸುತೆಯು ಬೆವೆತು ಹೋದಳು. ಶ್ರಮ, ಅದಕ್ಕಿಂತಲೂ ಹೆಚ್ಚಾಗಿ ಅಭಿಮಾನಭಂಗ. ಅವಳ ಹಣೆಯಲ್ಲಿ ಕಾಣಿಸಿಕೊಂಡ ಸ್ವೇದಬಿಂದುಗಳಿಂದ ಸೂರ್ಯನು ಕಾಂತಿಬೀರಿದನು. ಅಳಕದ ಕೊನೆಯಿಂದ ಒಂದೆರಡು ಹನಿಗಳು ಜಗುಳಿದುವು. ಮತ್ತೊಮ್ಮೆ ಕೊನೆಯ ಪ್ರಯತ್ನವೆಂದು ಹಾರಿ ಹೊಡೆದಳು. ಆದರೆ ಕೊಂಬೆಯು ಬಳುಕಿ ತಪ್ಪಿಸಿಕೊಂಡಿತು. ಇನ್ನು ಆ ಕಾರ್ಯಕ್ರಮವನ್ನು ಬಿಡಬೇಕೆಂದು ದಣಿದು ನಿಂತಿದ್ದಾಗ, “ನಾನು ಕೊಯ್ದು ಕೊಡುವೆನು” ಎಂಬ ಗಂಡು ಆಶರೀರವಾಣಿಯು ಅವಳಿಗೆ ಫಕ್ಕನೆ ಕೇಳಿಸಿತು.
ಲೋಪಾಮುದ್ರೆಯು ಬೆಚ್ಚಿ ಬೆದರಿ ಕಕ್ಕಾಬಿಕ್ಕಿಯಾಗಿ ನಾರುಡೆಯನ್ನು ಸರಪಡಿಸಿಕೊಂಡು ಧ್ವನಿಯು ಬಂದ ದಿಕ್ಕಿಗೆ ತಿರುಗಿ ನೋಡಿದಳು. ಅಲ್ಲಿ ಒಬ್ಬ ತರುಣ ಋಷಿವರ್ಯನು ಗಂಭೀರವಾಗಿ ನಿಂತಿದ್ದನು. ಬ್ರಹ್ಮಚರ್ಯದ, ತಪಸ್ಸಿನ ತೇಜಸ್ಸಿನಿಂದ ಅವನು ಅಲ್ಲೆಲ್ಲ ಪ್ರಭೆ ಬೀರುವಂತೆ ತೋರುತ್ತಿದ್ದನು. ಅವನ ಸೌಂದರ್ಯದಲ್ಲಿ ದೇವತ್ವವೇ ಅಧಿಕವಾಗಿದ್ದಿತು. ಸಚ್ಛೀಲ, ಸಚ್ಚಾರಿತ್ರ್ಯಗಳಿಗೆ ಅವನು ಪ್ರತೀಕದಂತಿದ್ದನು. ಆ ದಿವ್ಯರೂಪದಿಂದ ಭ್ರಮಿಸಿ ಲೋಪಾಮುದ್ರೆಯು ಅವನನ್ನೇ ದಿಟ್ಟಿಸಿ ನೋಡಿದಳು. ಮತ್ತೆ ತನ್ನ ಹೆಣ್ತನದ ಅರಿವಾಗಿ ತಲೆತಗ್ಗಿಸಿದಳು. ಋಷಿಯು ಮುಂದೆ ಸಾಗಿ ಆ ನೇರಿಳೆಯ ಹಣ್ಣುಗಳನ್ನು ಸುಲಭವಾಗಿ ಕೊಯ್ದು ಲೋಪಾಮುದ್ರೆಗೆ ಕೊಡಲು ಹೋದನು. ಅವುಗಳನ್ನು ಅವಳು ಸ್ವೀಕರಿಸುವಾಗ ಕೃತಜ್ಞತೆಗಿಂತಲೂ ಅಧಿಕವಾಗಿ ಲಜ್ಜೆ ಅಳುಕುಗಳಿಂದ ಅವಳ ಮುಖವು ಕೆಂಪಾಗಿ ಬಿರಿಯುವಂತಾಗಿತ್ತು.
ಧರ್ಮಪುರುಷ ಋಷಿಯು ಮಾತು ಮುಂದುವರಿಸಿದನು “ಭದ್ರೇ! ನನ್ನ ಹೆಸರು ಅಗಸ್ತ್ಯನೆಂದು.”
ಅಗಸ್ತ್ಯನ ಹೆಸರು ಕೇಳಿ ಲೋಪಾಮುದ್ರೆಯಲ್ಲಿ ಏನೋ ಒಂದು ಭಾವನೆ ಸ್ಫುರಿಸಿದ ಹಾಗಾಯಿತು. ಅದು ಆನಂದವಿರಬಹುದು ಅಥವಾ ಬೇರೆ ಯಾವುದೋ ಒಂದು ಉದ್ದೇಶದ ಸ್ಮರಣೆಯಿರಬಹುದು. ಅವಳ ನಯನದ್ವಯಗಳಲ್ಲಿ ಕಾಂತಿಯು ಮಿಂಚಿತು. ಅವಳು ಋಷಿಯನ್ನು ಇನ್ನೊಮ್ಮೆ ದಿಟ್ಟಿಸಿ ನೋಡಿ ಅಧೋವದನೆಯಾದಳು. ಕೈಬೆರಳುಗಳು ಸೆರಗನ್ನು ಸುರುಳಿ ಮಾಡುತ್ತಿದ್ದುವು. ಕಾಲ್ಬೆರಳುಗಳು ನೆಲ ಕೆರೆಯುತ್ತಿದ್ದವು.
ಋಷಿಯು ಮಾತಾಡಿದನು “ಕವೇರಾಶ್ರಮಕ್ಕೆ ನಾನು ಹೋಗುವವನು. ಅವನ ಪುತ್ರಿಯನ್ನು ವಿವಾಹವಾಗಲು ಬಂದಿದ್ದೇನೆ.” ಲೋಪಾಮುದ್ರೆಗೆ ಸ್ಫುರಿಸಿದ ಪೂರ್ವಸ್ಮರಣೆ ಸ್ಪಷ್ಟವಾಯಿತು.
“ಈಗ ನೀನೇ ಆ ಕುವರಿ ಎನ್ನುವುದರಲ್ಲಿ ನನಗೇನೇನೂ ಸಂದೇಹವಿಲ್ಲ. ಸರಿಯೇ?” ಲೋಪಾಮುದ್ರೆಯ ಮೌನ ಸಮ್ಮತಿಯನ್ನು ವ್ಯಕ್ತಪಡಿಸಿತು.
“ನೀನು ನನ್ನ ಸಹಧರ್ಮಿಣಿಯಾಗಿ ನನ್ನನ್ನು ಧನ್ಯನನ್ನಾಗಿಸಬೇಕು.” ಲೋಪಾಮುದ್ರೆಯು ಅಳುಕಲಿಲ್ಲ; ಅವಳು ಸಾತ್ತ್ವಿಕ ಗುಣಸಂಪನ್ನೆಯಾದ ಋಷಿಕನ್ಯೆ, ಯಾರಿಗೂ ಹೆದರಬೇಕದ ಆವಶ್ಯಕತೆಯಿರಲಿಲ್ಲ.
“ಪೂಜ್ಯರೇ ! ನಿಮ್ಮ ಮಾತು ಸರಿ. ಆದರೆ ನಾನು ಜನ್ಮತಾಳಿರುವ ಉದ್ದೇಶ ಬೇರೆಯೇ ಇದೆಯೆಂದು ನನಗೀಗ ಅರಿವಾಗುತ್ತಿದೆ. ಆದುದರಿಂದ ನಿಮ್ಮನ್ನು ವಿವಾಹವಾಗುವುದು ಸಾಧ್ಯವಲ್ಲದ ಮಾತು.”
“ಸ್ತ್ರೀ ಜನ್ಮದ ಉದ್ದೇಶ ಸತ್ಕುಲಪ್ರಸೂತನಾದ ಪತಿಯನ್ನು ಹೊಂದಿ ದೇವಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿ ಪತಿವ್ರತೆಯಾಗಿದ್ದು ಸತ್ಪುತ್ರ ಪುತ್ರಿಯರನ್ನು ಪಡೆದು ಪತಿಯೊಂದಿಗೆ ಪರಲೋಕವನ್ನೈದುವುದು. ಬೇರೆ ಏನಿದೆ?” ಅಗಸ್ತ್ಯನು ಸ್ಪಷ್ಟವಾಗಿ ಹೇಳಿದನು.
“ಅದು ಸರಿ. ಆದರೆ ನಾನು ನದಿಯಾಗಿ ಹರಿದು ಜನರನ್ನು ಸಂತೃಪ್ತಿಗೊಳಿಸಲು ಜನ್ಮತಾಳಿದವಳು ಬ್ರಹ್ಮದೇವನ ಆಜ್ಞೆ ಹಾಗಿದೆ.”
“ನನ್ನನ್ನು ವಿವಾಹವಾಗಿಯೂ ಆ ಉದ್ದೇಶವನ್ನು ಸಫಲಗೊಳಿಸಬಹುದು. ಆಲೋಚನೆ ಮಾಡಿ ನೋಡು.” ಲೋಪಾಮುದ್ರೆಯು ಚಿಂತಿಸಿದಳು.
“ಆಗಲಿ, ನಾನು ನಿಮ್ಮ ಸಹಧರ್ಮಿಣಿಯಾಗಿರುವಾಗ ನೀವು ಎಂದೂ ನನ್ನನ್ನು ಅಗಲಿ ಹೋಗಕೂಡದು. ಹಾಗೆಲ್ಲಿಯಾದರೂ ಹೋದದ್ದಾದರೆ ನಾನು ನಿಮ್ಮನ್ನು ಎಡೆಬಿಡದೆ ಮೂರುಸಲ ಪತಿದೇವ – ಪತಿದೇವ- ಪತಿದೇವ ಎಂದು ಕರೆಯುವಷ್ಟು ಹೊತ್ತು ಮಾತ್ರ ಅಗಲಿರಬಲ್ಲೆನು. ಅಷ್ಟರಲ್ಲಿ ನೀವು ಬಾರದಿದ್ದರೆ ನಾನು ನದಿಯಾಗಿ ಹರಿದು ಹೋಗುವೆನು.” ಅಗಸ್ತ್ಯನು ಪರಮಸಂತೋಷದಿಂದ ಈ ನಿಬಂಧನೆಗೆ ಒಪ್ಪಿಕೊಂಡನು.
ಮುಂದೆ ಅವರಿಗೆ ಕವೇರಮಹರ್ಷಿಯ ನೇತೃತ್ವದಲ್ಲಿ ಅಗ್ನಿಸಾಕ್ಷಿಯಾಗಿ ವಿವಾಹವು ನೆರೆವೇರಿತು. ಮಂಗಳಗೀತವನ್ನು ಹಕ್ಕಿಗಳು ಹಾಡಿದುವು. ಜಿಂಕೆಮರಿಗಳು ಹಸುವಿನ ಕರುಗಳು ಇತರ ವನ್ಯಮೃಗಗಳು ನರ್ತನ ಮಾಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದುವು. ಆನೆಗಳು ಘೀಳಿಟ್ಟು ಈ ಮಂಗಳ ವಿವಾಹಬಂಧವನ್ನು ದಿಗ್ದಿಗಂತಗಳಿಗೆ ಸಾರಿದುವು. ತಂಗಾಳಿ ಹಿತಕರವಾಗಿ ಬೀಸಿ ವಧೂವರರಿಗೆ ಚಾಮರ ಬೀಸಿತು. ಗಿಡಮರಗಳಿಂದ ಪರಿಪರಿಯ ಪುಷ್ಪಗಳು ಅವರ ಮೇಲೆ ಉದುರಿಬಿದ್ದು ಸೇಸೆ ಎರಚಿದುವು. ಕವೇರ ಮಹರ್ಷಿಯು ಆನಂದಾತಿಶಯದಿಂದ, ತುಂಬಿಬಂದಿದ್ದ ಗಂಟಲಿನಿಂದ ಮಾತು ಹೊರಡದಿದ್ದರೂ, ಗದ್ಗದ ಕಂಠನಾಗಿ ತರುಣದಂಪತಿಗಳನ್ನು ಹರಸಿದನು.
“ಅಗಸ್ತ್ಯನೇ ! ಈ ಕೋಮಲ ಪುಷ್ಪವನ್ನು ರಕ್ಷಿಸುವ ಪವಿತ್ರ ಕಾರ್ಯ ಇನ್ನು ಮೇಲೆ ನಿನ್ನದು ಭಗವಂತಾರಾಧನೆ ನಿರ್ವಿಘ್ನವಾಗಿ ಸಾಗಲಿ, ಮಗಳೇ! ಪತಿದೇವನ ಒಲವೇ ನಿನ್ನ ಒಲವೆಂದು ತಿಳಿದು ಅನುಕೂಲೆಯಾಗಿದ್ದು, ಅವನು ಸದಾ ಸನ್ಮಾರ್ಗಗಾಮಿಯಾಗಿರುವಂತೆ ವರ್ತಿಸು. ನಿಮಗೆ ಮಂಗಳವಾಗಲಿ.” ಹೃದಯವು ಪೂರ್ಣವಾದಾಗ ಜಿಹ್ವೆಗೆ ಕೆಲಸವಿಲ್ಲ.
ಅಗಸ್ತ್ಯ ಕಾವೇರಿಯರು ಪಾಡಿ ಪರ್ವತದಿಂದ ಅಗಸ್ತ್ಯಾಶ್ರಮದೆಡೆಗೆ ತೆರಳಿದರು. ಅಗಸ್ತ್ಯಾಶ್ರಮ ಬ್ರಹ್ಮಗಿರಿಯ ತಪ್ಪಲಿನ ಸರೋವರದ ಸಮೀಪ ಶೋಭಿಸುತ್ತಿದ್ದಿತು. ನೂತನ ದಂಪತಿಗಳು ಅಲ್ಲಿ ಆನಂದದಿಂದ ದೇವಕಾರ್ಯದಲ್ಲಿ ಉದ್ಯುಕ್ತರಾಗಿ ಸುಖಸಂಸಾರ ಜೀವನ ನಡೆಸುತ್ತಿದ್ದರು. ಶಿಷ್ಯರಿಗೆ ಅವರೇ ತಂದೆ ತಾಯಿಯರಾಗಿದ್ದರು. ಗುರು ಸಾಕ್ಷಾತ್ ಪರಬ್ರಹ್ಮನಾದ ಮೇಲೆ ಬೇರೆ ಏನು ಬೇಕಾಗಿದೆ ಶಿಷ್ಯರಿಗೆ? ಅಗಸ್ತ್ಯನು ತನ್ನ ಮಾತಿನ ಪ್ರಕಾರ ಒಂದು ಕ್ಷಣ ಕಾಲವೂ ಕಾವೇರಿಯನ್ನು ಅಗಲದೇ ಇದ್ದನು. ಅವನು ದೂರದ ಕ್ಷೇತ್ರಗಳಿಗೆ ಸ್ಥಳಗಳಿಗೆ ಯಾತ್ರೆ ಹೋಗುವುದಾದರೆ ಆಗ ಪತ್ನಿಯನ್ನು ಜತೆಯಲ್ಲಿಯೇ ಕರೆದೊಯ್ಯುತ್ತಿದ್ದನು. ಇವರ ಈ ಗೃಹಸ್ಥಾಶ್ರಮ ಜೀವನ ಹಲವಾರು ವರುಷ ಹೀಗೆ ಸುಖಮಯವಾಗಿ ಸಾಗಿತು.
ಗಿರಿಯು ಮಹಾತಪಸ್ವಿ, ಚಿರತಪಸ್ವಿ. ಅದರ ತಪಸ್ಸಿನ ಪುಣ್ಯಪ್ರಭಾವನ್ನು ಗಿರಿಯಿಂದ ಸಂಜನಿಸಿ ಪ್ರವಹಿಸುವ ನದಿಯಲ್ಲಿ ಕಾಣಬೇಕು. ಪುರುಷನ ಪ್ರತೀಕ ಪರ್ವತವಾದರೆ ಪ್ರಕೃತಿಯ ಪ್ರತೀಕ ನದಿ. ಪ್ರಕೃತಿ ಪುರುಷನ ಕೃತಿ; ಹಾಗೆ ನದಿ ಪರ್ವತದ ಕೃತಿ. ಪುರುಷ ಪ್ರಕೃತಿಗಳು ಹೇಗ ಅವಿಭಾಜ್ಯಗಳೋ ಹಾಗೇ ಪರ್ವತ ನದಿ. ಬ್ರಹ್ಮಗಿರಿಯ ಶತಕೋಟಿ ಶತಮಾನಗಳ ತಪಸ್ಸು ಸಿದ್ಧಿಸುವ ಪರ್ವಕಾಲ ಸನ್ನಿಹಿತವಾಗುತ್ತಿತ್ತು. ಚಂದ್ರವರ್ಮನಿಗೆ ಬ್ರಹ್ಮದೇವನಿತ್ತ ವರವು ಜಲರೂಪ ಪಡೆಯುವ ಪುಣ್ಯಕಾಲ ಪ್ರಾಪ್ತವಾಗುತ್ತಿತ್ತು. ಕಾವೇರಿಯು ಸರ್ವಜನ ಪ್ರಿಯೆಯಾಗಿ ನದಿಯಾಗಿ ಹರಿಯುವ ಸುಕಾಲ ಸಮೀಪವಾಗುತ್ತಿತ್ತು. ಲೋಪಾಮುದ್ರೆಯ ಅವತಾರ ಸಂಪೂರ್ಣವಾಗಿ ಕಾವೇರೀನಾಮದಿಂದ ಪ್ರವಹಿಸುವ ಸುಸಂದರ್ಭ ಬಂದೊದಗಿತ್ತು.
ಒಂದು ರಾತ್ರಿ. ನಿಶೆಯು ಕಪ್ಪಾಗಿ ಗಿರಿವನಗಹ್ವರಗಳನ್ನು ಒಟ್ಟು ಬೆಸೆದು ಒಂದು ಮಾಡಿ ಹಬ್ಬಿತ್ತು. ಅಖಂಡ ಬ್ರಹ್ಮಾಂಡವು ಸಾಂದ್ರ ತಮಸ್ಸಿನ ಹಚ್ಚಡದಿಂದ ಆವೃತವಾಗಿದ್ದಿತು. ಈ ಆವರಣದಿಂದ ತಾವು ಮಾತ್ರ ಬೇರೆ ಎನ್ನುವ ಪ್ರತ್ಯೇಕತ್ವವನ್ನು ಸಾರುವ ತಾರೆಗಳು ತಮಸ್ಸಿನ ಮೊತ್ತವನ್ನು ಭೇದಿಸಲಾರದೆ ಕಣ್ಣುಗಳನ್ನು ಮಿಟಕಿಸುತ್ತಿದ್ದುವು. ಮೌನವು ಕರಗಿ ನೀರಾಗಿ ಹರಿದು ಅಲ್ಲೆಲ್ಲ ಶ್ಶ್ ಶ್ಶ್ ಎನ್ನುವ ಅವ್ಯಕ್ತ ಅಸ್ಪಷ್ಟ ನಿನದವನ್ನು ಪಸರಿಸಿತ್ತು. ಇಂತಹ ಮಧ್ಯರಾತ್ರಿಯ ನಿಶ್ಚಲತೆಯನ್ನು, ನೀರವತೆಯನ್ನು ಮೂಕ ವಾತಾವರಣವನ್ನು ಭೇದಿಸಿ ಬಿರಿದು ಒಂದು ಮಹಾಕ್ರಂದನಸ್ವರ ಅಗಸ್ತ್ಯಮಹರ್ಷಿಯ ಕರ್ಣಪಟಲವನ್ನು ಬಡಿಯಿತು. ಬಡಿದು ಅವನನ್ನು ಎಬ್ಬಿಸಿತು “ಗುರುಗಳೇ ರಕ್ಷಿಸಿ ರಕ್ಷಿಸಿ” ಎಂದು ಕೇಳಿಸಿದ ಆ ದೀನವಾಣಿ ಕರ್ಣಕಠೋರವಾಗಿತ್ತು. ಪುನಃ ಪುನಃ ಅದೇ ಕರುಣಾಜನಕ ಸ್ವರ, ಪ್ರಿಯ ಶಿಷ್ಯ ಸುಕುಮಾರ ರೋಹಿತನ ಆರ್ತಧ್ವನಿ. ಮಧ್ಯರಾತ್ರಿಯ ಶಾಂತಿಯು ಭಂಗವಾಗಿ, ಮೌನ ಸಮುದ್ರ ಕ್ಷೋಭೆಗೊಂಡಿತು. ಅಗಸ್ತ್ಯನ ಮನಸ್ಸು ಅದರ ಎರಡರಷ್ಟು ಅಶಾಂತಿಯನ್ನು ತಳೆಯಿತು. ಸುಖವಾಗಿ ನಿದ್ರಿಸಿದ್ದ ಶಿಷ್ಯನಿಗೆ ಈಗ ಏನಾಯಿತೋ? ಯಾವ ದುಷ್ಟ ಶಕ್ತಿ ಅವನನ್ನು ಸೆಳೆದುಕೊಂಡು ಹೋಗುತ್ತಿದೆಯೋ? ಮತ್ತೆ ಮತ್ತೆ ಅದೇ ದುಃಖಿತ ಧ್ವನಿಯನ್ನು ಆಲಿಸಿ ಋಷಿಯು ಶಿಷ್ಯ ರಕ್ಷಣೆಗಾಗಿ ಎದ್ದು, ಶಾಂತವಾಗಿ ನಿದ್ರಿಸುತ್ತಿದ್ದ ಪ್ರಿಯಪತ್ನಿಯನ್ನು ಒಮ್ಮೆ ನೋಡಿ, ಆಶ್ರಮದಿಂದ ಹೊರಗೆ ಧಾವಿಸಿ ಓಡಿದನು. ರೋಹಿತನ ಕರುಣಾಜನಕ ಸ್ವರ ಅಗಸ್ತ್ಯನಿಗೆ ಮಾಯಾಮೃಗವಾಯಿತು. ಆ ಸ್ವರ ಬಂದ ದಿಕ್ಕನ್ನರಸಿ ಅವನು ಮಿಂಚಿನ ವೇಗದಿಂದ ಓಡುತ್ತಿದ್ದನು. ಅಗಸ್ತ್ಯನು ಮುಂದೆಮುಂದೆ ಧಾವಿಸಿದಂತೆ ಆ ಸ್ವರವೂ ದೂರ ಕಾಡಿನಲ್ಲಿ ಜಿಗಿಯುತ್ತಿತ್ತು. ರಾತ್ರಿಯಲ್ಲಿ ಕಲ್ಲುಮುಳ್ಳಿಡಿದ ದಾರಿಯಲ್ಲಿ ಬಳ್ಳಿಹಂಬುಗಳನ್ನು ದಾಟಲಾರದೆ ಬಿದ್ದು ಎದ್ದು ಗುರುವು ಶಿಷ್ಯರಕ್ಷಣೆಗಾಗಿ ಓಡುತ್ತಿದ್ದನು. ಕೆಸರಿನ ಮೇಲೆ ಬೆಳೆದ ಹುಲ್ಲನ್ನು ಮೆಟ್ಟಿ ಜಾರಿ ಬೀಳುತ್ತಿದ್ದನು. ಬೀಳುವಾಗ ಕೈ ಹಿಡಿಯುವುದು ಒಂದು ಮುಳ್ಳಿನ ಗಿಡವನ್ನು, ಹೀಗೆ ಕೈ ಮೈ ಎಲ್ಲ ಗಾಯ. ದೇಹದ ವೇದನೆಯನ್ನು ಪರಿಗಣಿಸದೇ ಶಿಷ್ಯವತ್ಸಲನು ಕಂಗೆಟ್ಟು ಬಳಲಿ ತೊಳಲಿದನು. ನಿಬಿಡಾರಣ್ಯದ ನಡುವೆ ಕಾರ್ಗತ್ತಲೆಯ ಒಡಲೊಳಗೆ ರೋಹಿತನನ್ನು ಕೂಗಿ ಕರೆದು ಆಶ್ವಾಸನೆಯಿತ್ತನು. ಆದರೆ ಮತ್ತೆ ರೋಹಿತನ ಕರೆ ಕೇಳಿಸಲಿಲ್ಲ. ಅಗಸ್ತ್ಯನ ಭರವಸೆ ಅರಣ್ಯರೋದನವಾಯಿತು. ಶಿಷ್ಯನ ಸುಳಿವಿಲ್ಲ, ಧ್ವನಿಯಿಲ್ಲ. ಇನ್ನೇನು ಮಾಡುವುದೆಂದು ತಿಳಿಯದೆ ಒಂದು ನಿಮಿಷ ಚೇತರಿಸಿಕೊಳ್ಳಲು ಋಷಿಯು ನಿಂತನು. ಆಗ ಅವನಿಗೆ ತಾನು ಏಕಾಂಗಿಯಾಗಿ ಆಶ್ರಮದಲ್ಲಿ ಬಿಟ್ಟುಬಂದಿದ್ದ ಪ್ರಿಯಪತ್ನಿಯ ನೆನಪಾಗಿ ಉದ್ವೇಗವು ಮತ್ತಷ್ಟು ಉಮ್ಮಳಿಸಿತು.
ಬೆಟ್ಟವನ್ನಿಳಿದುದಕ್ಕಿಂತಲೂ ತ್ರಿಗುಣಿತ ವೇಗದಿಂದ ಆಶ್ರಮದೆಡೆಗೆ ಏರಿ ಏರಿ ಓಡಿದನು. ಶಿಷ್ಯರು ಆಶ್ರಮದಲ್ಲಿರುವರಲ್ಲ ಏನೂ ಭಯವಿಲ್ಲ ಎಂದು ಮನಸ್ಸಿನ ಒಂದು ಭಾಗ ಸಮಾಧಾನ ಹೇಳುತ್ತಿದ್ದರೆ ಇನ್ನೊಂದು ಭಾಗ ಪ್ರತಿಜ್ಞೆಗೆ ಭಂಗ ಬಂದಿತಲ್ಲ, ಕಾವೇರಿಯು ಇದನ್ನು ಸಹಿಸಿ ಉಳಿಯುವಂತಿಲ್ಲ ಎಂದು ಸ್ಪಷ್ಟವಾಗಿ ನುಡಿಯುತ್ತಿದ್ದಿತು. ಆಶ್ರಮದಿಂದ ಕೂಗಳತೆ ದೂರದಲ್ಲಿದ್ದಾಗಲೇ ಅಗಸ್ತ್ಯನ ಭಯ ಕಾವೇರಿಯ ಕೂಗಾಗಿ ಪರಿಣಮಿಸಿ ಅವನನ್ನು ತಿವಿಯಿತು. ನಾಲ್ಕು ಹೆಜ್ಜೆ ಇಟ್ಟು ಮುಗಿಸುವುದರೊಳಗೆ, ಉತ್ತರವನ್ನು ನುಡಿಯಲು ಉಸಿರೆಳೆದು ಗಂಟಲು ಸರಿಪಡಿಸಿಕೊಳ್ಳುವ ಮೊದಲೇ ಮೂರು ಸಲ ಲೋಪಾಮುದ್ರೆಯು “ಪತಿದೇವ” ಎಂದು ಕರೆದು ಮುಗಿಸಿದ್ದಳು. ಜ್ಞಾನಿಯಾಗಿದ್ದ ಋಷಿಯ ಹೃದಯವನ್ನು ಆ ಕೂರುದನಿ ಕೊರೆಯಿತು. ಅವನ ಮಿದುಳನ್ನು ಕದಡಿತು. ಭಾವನೆಗಳ ತುಮುಲಯುದ್ಧದಲ್ಲಿ ಮುಂಗಾಣದವನಾಗಿ, ಅಲ್ಲಿ ನಿಲ್ಲಲು ಸಾಧ್ಯವಿಲ್ಲದವನಾಗಿ, ಓಡಲು ಶಕ್ತಿಯಿಲ್ಲದವನಾಗಿ, ಅಲ್ಲಿಯೇ ಋಷಿಯು ಕುಸಿದು ಕುಕ್ಕರಿಸಿದನು. ಅಲ್ಲಿಂದ ಕೂಡಲೇ ಬೆಂಕಿಯ ಮೇಲೆ ಕುಳಿತವನಂತೆ ಎದ್ದು ಆಶ್ರಮದೆಡೆಗೆ ನೆಗೆದು ಜಿಗಿದು ಓಡಿದನು – ಶಕ್ತಿಪೂರಿತವಾದ ಓಟ ಅದಲ್ಲ. ಉದ್ವೇಗದ ಸ್ಫೋಟ, ಬುದ್ಧಿಯ ಪ್ರಭಾವ ಅದರಲ್ಲಿರಲಿಲ್ಲ, ರಾಗದ ಹಿನ್ನೆಲೆ ಆ ಓಟಕ್ಕಿತ್ತು. ಅಗಸ್ತ್ಯನು ಕುಟೀರವನ್ನು ಸೇರಿದಾಗ ಅದು ಶೂನ್ಯವಾಗಿತ್ತು – ದೈವ ಸಂಕಲ್ಪವನ್ನು ಎದುರಿಸಲಾರದೇ ಮನುಷ್ಯ ಸಂಕಲ್ಪ ಸೋತುಹೋಗಿತ್ತು. ಕಾವೇರಿಯು ಕರಗಿ ನೀರಾಗಿ ಹೋಗಿದ್ದಳು. ಸರೋವರ ಸಮೀಪದ ಅಶ್ವತ್ಥವೃಕ್ಷದ ಬುಡದಲ್ಲಿ, ಅಗಸ್ತ್ಯನು ಧ್ಯಾನಮಗ್ನನಾಗಿ ಮಂಡಿಸುತ್ತಿದ್ದ ಪವಿತ್ರ ಪ್ರದೇಶದಲ್ಲಿ, ಒಂದು ಕಿರಿಯ ಕುಂಡಿಕೆಯಾಗಿದ್ದಿತು. ಅದರಲ್ಲಿ ನೀರು ಮೇಲೆ ಕೆಳಗೆ ಅಲುಗಾಡುತ್ತಿತ್ತು. ಅಗಸ್ತ್ಯನು ಆ ಕ್ಷೋಭೆಗೊಂಡಿದ್ದ ಕುಂಡಿಕೆಯನ್ನು ನೋಡಿ ಕಾವೇರೀ! ಪ್ರಿಯ ಕಾವೇರೀ! ಹೋದೆಯಾ? ಎಂದು ದುಃಖಿಸಿದನು. ಬೆಟ್ಟದ ಇನ್ನೊಂದು ಪಾರ್ಶ್ವದಿಂದ ಏದುತ್ತ ಉಬ್ಬಸಬಿಡುತ್ತ ರೋಹಿತನೂ ಅಗಸ್ತ್ಯನ ಇತರ ಶಿಷ್ಯರೂ ಬಂದರು. ಗುರುವಿನ ದುಃಖದಲ್ಲಿ ಅವರೂ ಭಾಗಿಗಳಾದರು.
“ಗುರುಗಳೇ! ನೀವೆಲ್ಲಿ ಮಾಯವಾಗಿ ಹೋಗಿದ್ದಿರಿ? ಮಾತೆಯವರು ನಿಮ್ಮನ್ನು ಮೂರು ಸಲ ಕರೆದರು” ರೋಹಿತನೇ ಮೊದಲು ಮಾತಾಡಿದ.
“ನಿನ್ನ ಆಕ್ರಂದನ ಸ್ವರದಿಂದ ನಾನು ಭಾಗಮಂಡಲದ ಕಡೆಗೆ ಹೋಗಬೇಕಾಯಿತು. ನೀನು ಕ್ಷೇಮವೇ?” ಗುರುವಿನ ಮರುಪ್ರಶ್ನೆ.
“ನಾನಿಲ್ಲಿಯೇ ನಿದ್ರಿಸುತ್ತಿದ್ದೆನಲ್ಲ! ಮಾತೆಯವರೆದ್ದು ಪತಿದೇವನೆಲ್ಲಿ? ಎಂದು ಭಾವಾವೇಶದಿಂದ ಪ್ರಶ್ನಿಸುವಾಗ ನಮಗೇನೂ ಉತ್ತರ ಹೇಳಲು ಸಾಧ್ಯವಾಗಲಿಲ್ಲ. ನಾವು ಅವರನ್ನು ಸಮಾಧಾನಪಡಿಸಲು ಯತ್ನಿಸಿ ವಿಫಲರಾದೆವು.”
“ರೋಹಿತನೇ! ದೈವವು ನನ್ನನ್ನು ವಂಚಿಸಿತು. ಆಗಬೇಕೆಂದಿದ್ದುದು ಆಗಿಹೋಯಿತು. ಕಾವೇರಿಯು ಮತ್ತೇನು ಮಾಡಿದಳು ಹೇಳಪ್ಪ.”
“ನಿಮ್ಮನ್ನು ಮೂರುಸಲ ಕರೆದರು. ಒಡನೆಯೇ ನಾವು ಬೇಡ ಬೇಡ ಎನ್ನುತ್ತಿದ್ದ ಹಾಗೆಯೇ ನಿಮ್ಮ ಕಮಂಡಲುವಿನಿಂದ ನೀರನ್ನು ತಮ್ಮ ಮೈಮೇಲೆ ಧಾರೆಯೆರೆದುಕೊಂಡು ಹಾಗೆಯೇ ಕರಗಿ ನೆಲದೊಳಗೆ ಇಳಿದು ಹೋದರು. ಮಾತೆಯವರು ಈ ಸ್ಥಳದಲ್ಲಿ ಇಳಿದು ಹೋದುದು” ಎಂದು ಕುಂಡಿಕೆಯನ್ನು ತೋರಿಸಿದನು.
“ಆಗ ನೀವೇನು ಮಾಡಿದಿರಿ, ಹೇಳಿರಪ್ಪ, ಈ ದುಃಖಕ್ಕೆ ಸ್ವಲ್ಪ ಸಮಾಧಾನ ವಚನ ನುಡಿಯಿರಪ್ಪಾ!” ಅಗಸ್ತ್ಯನ ಕರುಣಾವಾಣಿ.
ಇನ್ನೊಬ್ಬ ಶಿಷ್ಯನು ಮುಂದುವರಿಸಿದನು “ಹೀಗೆ ಇಳಿದು ಹೋದ ಮಾತೆಯವರನ್ನು ನಾವೆಲ್ಲರೂ ಬೆಂಬಿಡದೆ ಹಿಂಬಾಲಿಸಿದೆವು. ಆದರೆ ಅವರು ನಮಗೆ ಕಾಣಿಸಿಕೊಳ್ಳದೆ ನೆಲದಡಿಯಲ್ಲಿ ಹರಿದು ಹೋದರು. ಅವರು ಎಲ್ಲಿ ಮೇಲೆ ಬರುವರು ಎಂದು ರಾತ್ರಿಯಲ್ಲಿ ಅರಸಲು ಸಾಧ್ಯವಾಗಲಿಲ್ಲ. ಹತಾಶರಾಗಿ ಮರಳಿದೆವು.” ಅಗಸ್ತ್ಯನ ದುಃಖ ಮೇರೆಮೀರಿ ಹರಿಯಿತು. ಆ ಕುಂಡಿಕೆಯ ಜಲದಲ್ಲಿ ಈ ಬಾಷ್ಪಾಂಬು ಸೇರಿ ಅದು ಮತ್ತಷ್ಟು ಕ್ಷೋಭೆಯಿಂದ ಉಕ್ಕಲಾರಂಭಿಸಿತು.
ಪ್ರಕೃತಿಯು ಮಂಗಳಗೀತವನ್ನು ಹಾಡಿದಳು. ಲೋಕಪಾವನೆ ಕಾವೇರೀ ಮಾತೆಯಾಗಿ ಹರಿದುಹೋದ ಪ್ರಥಮ ಪ್ರತ್ಯೂಷವನ್ನು ಲೋಕವೇ ಸ್ವಾಗತಿಸಿತು. ಆದರೆ ಅಗಸ್ತ್ಯಾಶ್ರಮ ನಿವಾಸಿಗಳು ದುಃಖಪೀಡಿತರಾಗಿ ದುಃಖಮಯ ಪ್ರಭಾತವನ್ನು ಕಂಡರು ಯೋಗದೃಷ್ಟಿಯಿಂದ ನಡೆದ ಮಹಾಘಟನೆಯನ್ನರಿತ ಕವೇರ ಮಹರ್ಷಿಯು ಆಗಲೇ ತಲಕಾವೇರಿಗೆ (ಅಗಸ್ತ್ಯಾಶ್ರಮದ ಸ್ಥಳ) ದಯಮಾಡಿಸಿ ಸಂದರ್ಭದ ಮಹಾತ್ಮ್ಯವನ್ನು ಅಗಸ್ತ್ಯನಿಗೆ ಅರುಹಿ ಅವನನ್ನು ಸಮಾಧಾನಪಡಿಸಿದನು. ಆ ಗಳಿಗೆಯಲ್ಲಿಯೇ ಅಗಸ್ತ್ಯನು ತಲಕಾವೇರಿಯನ್ನು ತೊರೆದನು. ಅಲ್ಲಿಯ ಆತ್ಮೀಯ ದೃಶ್ಯ ಸನ್ನಿವೇಶಗಳು ಅವನ ದುಃಖವನ್ನು ವರ್ಧಿಸುತ್ತಿದ್ದುವೇ ವಿನಾ ಕಡಿಮೆ ಮಾಡುತ್ತಿರಲಿಲ್ಲ. ಸಕಲರೂ ಭಾಗಮಂಡಲಾಭಿಮುಖರಾಗಿ ನಡೆದರು. ಅಲ್ಲಿ ಬುಳ ಬುಳ ಸಪ್ಪಳದಿಂದ ಕಿರಿಯ ತೊರೆಯೊಂದು ಹರಿದು ಹೋಗುತ್ತಿದ್ದಿತು. ಗಿಡ ಮರಗಳು. ಈ ತೀರ್ಥ ಜಲಕ್ಕೆ ಬಾಗಿ ಹೂವೆರಚಿ ಪೂಜೆಗೈಯುತ್ತಿದ್ದುವು. ಗಿರಿವನಗಳು ಮೌನ ಮಂತ್ರವನ್ನು ಪಠಿಸುತ್ತಿದ್ದುವು. ಅಗಸ್ತ್ಯ, ಕವೇರ ಮತ್ತು ಅಗಸ್ತ್ಯ ಶಿಷ್ಯರು ತುಸು ದೂರದಲ್ಲಿ ಈ ದೃಶ್ಯವನ್ನು ನೋಡುತ್ತ ನಿಂತಿದ್ದರು. ಕಂಬನಿ ತುಂಬಿದ ಕಣ್ಣುಗಳಿಂದ ಅಗಸ್ತ್ಯನಿಗೆ ಅಲ್ಲಿಯ ಪ್ರದೇಶ ಮಬ್ಬಾಗಿ ಕಾಣುತ್ತಿತ್ತು. ತೊರೆಯು ಅದರ ಗತಿಯನ್ನು ಬದಲಾಯಿಸಿ ಕವೇರ ಮತ್ತು ಅಗಸ್ತ್ಯ ಋಷಿಪುಂಗವರು ನಿಂತೆಡೆಗಾಗಿ ಬಂದು ಅವರ ದಿವ್ಯ ಪಾದಪದ್ಮಗಳನ್ನು ಸೇಚನೆ ಮಾಡಿ ಪೂಜಿಸಿ ಹರಿದುಹೋಯಿತು. ಸಾಗರವನ್ನೇ ಸ್ವಾಹಾಕರಿಸಿದ ಅಗಸ್ತ್ಯನು ಈ ಪುಣ್ಯೋದಕವನ್ನು ಕರಗಳಿಂದ ಸ್ಪರ್ಶಿಸಿ “ಪಾವನೆ ಕಾವೇರಿ ಧನ್ಯೆ ಕಾವೇರಿ!” ಎಂದು ಸ್ತುತಿಸಿದನು. ಈ ಪ್ರಶಂಸೆಯು ಮೆಚ್ಚುಗೆಯಾಯಿತೋ ಎನ್ನುವಂತೆ ಹೊಳೆಯು ಇನ್ನಷ್ಟು ಕಲಕಲರವದಿಂದ ಹರಿದು ದೂರದ ಇರುಕಿನಲ್ಲಿ ಮರೆಯಾಯಿತು.
ಮುಂದೆ ಚಂದ್ರವರ್ಮ ಮಹಾರಾಜನು ವಾನಪ್ರಸ್ಥಾಶ್ರಮಕ್ಕಾಗಿ ಬ್ರಹ್ಮಗಿರಿಗೆ ತೆರಳಿದನು. ತಲಕಾವೇರಿಯ ಪವಿತ್ರ ಕುಂಡಿಕೆಯ ತೀರ್ಥಜಲವನ್ನು ಸೇವಿಸುತ್ತ ಕೃತ್ಯಕೃತ್ಯನಾಗಿ ಕಾಲಾಂತರದಲ್ಲಿ ಬ್ರಹ್ಮನಲ್ಲಿ ಐಕ್ಯನಾದನು.
Good.Enjoyed reading.:Poetic Kannada is pleasing.M.L.SAMAGA