ವಿ-ಧಾರಾವಾಹಿಯ ಮೊದಲ ಕಂತು
ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ
[ಮೂಲ ಪುಸ್ತಕದ ಮೊದಲ ಮುದ್ರಣ ೧೯೬೬, ಬೃಂದಾವನ್ ಪ್ರಿಂಟರ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು ೧೮. ಪುಟಗಳು ೧೬+೫೫೦ ಬೆಲೆ ರೂ ಇಪ್ಪತ್ತೈದು ಮಾತ್ರ.]
ಅರ್ಪಣೆ
ವಿದ್ಯಾರ್ಥಿಗಳಿಗೆ ಪ್ರಿಯರೂ ಪೂಜ್ಯರೂ ಆಗಿ ಕಾಲೇಜಿನಲ್ಲಿ ಪ್ರೊಫೆಸರರಾಗಿ, ಅನಂತರ ಜಿಲ್ಲೆಯ ವಿದ್ಯಾಧಿಕಾರಿಗಳಾಗಿ ಹೆಸರು ಪಡೆದು, ಸರ್ಕಾರಿ ಕೆಲಸದಿಂದ ನಿವೃತ್ತರಾಗಿದ್ದರೂ ಸರ್ಕಾರದ ವಿದ್ಯಾ ಸಂಬಂಧದ ಕೆಲವು ಕಮಿಟಿಗಳ ಅಧ್ಯಕ್ಷರಾಗಿಯೂ, ಸಹಕಾರ ಸಂಸ್ಥೆಗಳ ಗಣನೀಯ ಸದಸ್ಯರಾಗಿಯೂ ಗೌರವ ಕಾರ್ಯಕರ್ತರಾಗಿಯೂ ಸಮಾಜದ ಸೇವೆಯನ್ನು ತಮ್ಮ ವೃದ್ಧಾಪ್ಯದಲ್ಲೂ ಸಲ್ಲಿಸುತ್ತಿರುವ ಮಂಗಳೂರಿನ ಶ್ರೀಮಾನ್ ಉಚ್ಚಿಲ ಕಣ್ಣಪ್ಪ, ಎಂ.ಎ., ಎಲ್.ಟಿ., ಇವರುಗಳಿಗೆ ಈ ಭಾವಾನುವಾದದ ಗ್ರಂಥವನ್ನು ಶಿಷ್ಯಭಾವದ ಭಯಭಕ್ತಿಗಳಿಂದ – ಹಿಂದೆ ಕಾಲೇಜಿನಲ್ಲಿ ಶಿಷ್ಯನೇ ಆಗಿದ್ದ ನಾನು – ಇದೇ ಕಾದಂಬರಿಯನ್ನು ಇಂಗ್ಲಿಷಿನ ಪಠ್ಯಪುಸ್ತಕವನ್ನಾಗಿ ಓದಿ ತಿಳಿದ ಸವಿನೆನಪಿನಿಂದ – ಅರ್ಪಿಸುತ್ತೇನೆ.
ಎ.ಪಿ. ಸುಬ್ಬಯ್ಯ
೨೦ನೇ ಅಕ್ಟೋಬರ್ ೧೯೬೬
ಪುತ್ತೂರು
ಪ್ರಕಾಶಕನ ಮಾತುಗಳು
ಎ.ಪಿ. ಸುಬ್ಬಯ್ಯ ನನ್ನ ಅಜ್ಜ (ಮಾತಾಮಹ). ಇವರು ಕೇವಲ ಸಾಹಿತ್ಯ ಪ್ರೀತಿಗಾಗಿ ಅನುವಾದ, ಪ್ರಕಾಶನಗಳನ್ನು ನಂಬಿದವರು. ಡೇವಿಡ್ ಕಾಪರ್ಫೀಲ್ಡ್‌ನ್ನು ಇವರು ಸ್ವಂತ ವೆಚ್ಚದಲ್ಲಿ, ಅವರ ಅಂದಿನ ಪುತ್ತೂರು ಮನೆ ವಿಳಾಸದಲ್ಲೇ ಪ್ರಕಟಿಸಿದರು (ಆ ಮನೆ ಸದ್ಯ ಊರ್ಜಿತದಲ್ಲಿಲ್ಲ).
ಅದರ ಪೂರ್ಣ ಮುದ್ರಣ ಮತ್ತು ವಿತರಣೆಯ ಹೊಣೆ ಹೊತ್ತವರು ಅಂದು ಬೆಂಗಳೂರಿನಲ್ಲಿದ್ದ ನನ್ನ ತಂದೆ – ಜಿ.ಟಿ. ನಾರಾಯಣ ರಾವ್ (ಸುಬ್ಬಯ್ಯನವರ ಹಿರಿಯ ಅಳಿಯ). ಐದಾರು ವರ್ಷಗಳನಂತರ, ನಾವು ಮೈಸೂರಿಗೆ ಹೋದಾಗ, ಇದರ ಮಾರಿಹೋಗದ ಅಸಂಖ್ಯ ಪ್ರತಿಗಳನ್ನು ತಂದೆ ಯಾವುದೋ ಖಾಸಗಿ ಪ್ರಕಾಶಕರಿಗೆ ಸಗಟು ದರದಲ್ಲಿ ಕೊಟ್ಟು ಕಳಚಿಕೊಳ್ಳಬೇಕಾಯ್ತು. ಆ ಪ್ರಕಾಶಕರಾದರೋ ಇದರ ನಿರಾಕರ್ಷಕ ರಟ್ಟನ್ನು ಬದಲಿಸಿ (ಹೊಸತರ ಮಾದರಿ ನನ್ನಲ್ಲಿಲ್ಲ), (ಪ್ರಕಟಣಾ ವರ್ಷವನ್ನು ‘ಅನುಕೂಲ’ಕ್ಕೆ ತಕ್ಕಂತೆ ತಿದ್ದಿಕೊಂಡಿರಬೇಕು) ಗ್ರಾಹಕಸ್ನೇಹೀ ಬೆಲೆಯನ್ನು ಅವರದೇ ‘ಅಗತ್ಯ’ಗಳಿಗೆ ತಕ್ಕಂತೆ ಹೆಚ್ಚಿಸಿ, ಎಲ್ಲೋ ಸಗಟು ಮಾರಿಕೊಂಡರೆಂದೂ ಕೇಳಿದ್ದೇನೆ.ಅಜ್ಜನ ಮೊದಲ ಅನುವಾದದ ಕಾದಂಬರಿ ದುಃಖಾರ್ತರು (ಮೂಲ ವಿಕ್ಟರ್ ಹ್ಯೂಗೋ – ಲೇ ಮಿಸರೆಬಲ್ಸ್) ಪುಸ್ತಕವನ್ನು ಮೊದಲ ಬಾರಿಗೆ ಪುತ್ತೂರಿನ ಪೊಪ್ಯುಲರ್ ನ್ಯೂಸ್ ಏಜನ್ಸಿಯ ಶಿವರಾಮ ಹೊಳ್ಳರು (೧೯೬೦) ಪ್ರಕಟಿಸಿದ್ದರು. ಅದರ ಹುಳ ಕೊರೆದ, ಕಂದುಮಾಸಿದ, ರಟ್ಟು ಮುರಿದ ಹಲವು ಪ್ರತಿಗಳನ್ನು ನಾನು ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ತೆರೆದ ಹೊಸದರಲ್ಲಿ ಖರೀದಿಸಿ ಮಾರಿದ್ದುಂಟು.
ಮುಂದೆ ಸ್ವಂತ ಪ್ರಕಾಶನದ ಉತ್ತುಂಗದಲ್ಲಿ ನಾನೇ ಅದನ್ನು ಮರುಮುದ್ರಣ (೨೦೦೧) ಮಾಡಿಸಿದ್ದೂ ಆಯ್ತು. ಆದರೆ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಅಧೋಮುಖಿಯಾಗಿರುವ ಕನ್ನಡ ಪರಿಸರದಲ್ಲಿ (ಪ್ರಚಾರದಲ್ಲಿ ನಿಸ್ಸಂದೇಹವಾಗಿ ಬಹು ಪ್ರಖರವಾಗಿದೆ. ಕೇವಲ ಸಾಹಿತ್ಯ ಪ್ರೀತಿಯಿಟ್ಟುಕೊಂಡು ಇಂದು ಪುಸ್ತಕ ಪ್ರಕಾಶನಕ್ಕೆ ಕೈಯಿಕ್ಕಿದರೆ ಸೀದು ಹೋಗುವುದು ಖಾತ್ರಿ!) ನಾನು ಮಾಡಿಸಿದ ಸಾವಿರ ಪ್ರತಿಗಳಲ್ಲಿ ಇನ್ನೂ ನಾನೂರಕ್ಕು ಮಿಕ್ಕು ಪ್ರತಿಗಳು ನನ್ನಲ್ಲೇ ಗಟ್ಟಿಯಾಗಿ ಉಳಿದಿವೆ! (ಆಸಕ್ತರು ರೂ ಎಪ್ಪತ್ತು ಮುಂಗಡ ಕಳಿಸಿದಲ್ಲಿ ಪ್ರತಿಯೊಂದನ್ನು ನನ್ನದೇ ವೆಚ್ಚದಲ್ಲಿ ಸಾದಾ ಅಂಚೆಯಲ್ಲಿ ಕಳಿಸುತ್ತೇನೆ.) ದುಃಖಾರ್ತರನ್ನು ಪ್ರಕಟಿಸುವಂದು ಅಜ್ಜನ ಇತರ ಪುಸ್ತಕಗಳನ್ನೂ ಮರುಮುದ್ರಣಕ್ಕೆ ತೆಗೆದುಕೊಳ್ಳಲುದ್ದೇಶಿಸಿದ್ದೆ. ಮತ್ತೆ ಪ್ರಕಾಶನವಿರಲಿ, ಪುಸ್ತಕ ಮಾರಾಟಕ್ಕೂ ನಾನು ದೂರವಾದದ್ದು ನಿಮಗೆಲ್ಲ ತಿಳಿದೇ ಇದೆ.ಆದರೆ ‘ಹಿರಿಯರ ಸ್ಮರಣೆಯನ್ನು ಅವರ ಕೃತಿಗಳಲ್ಲಿ ಕಾಣು’ ಎನ್ನುವ ವಿಚಾರಕ್ಕೆ ಬದ್ಧನಾಗಿ ಈಗ ಡೇವಿಡ್ ಕಾಪರ್ಫೀಲ್ಡನ್ನು ವಿದ್ಯುನ್ಮಾನ ಧಾರಾವಾಹಿಯಲ್ಲಿ ಕನ್ನಡ ಲೋಕಕ್ಕೆ ಉಚಿತವಾಗಿ ಕೊಡುವ ಕೆಲಸಕ್ಕಿಳಿಯುತ್ತಿದ್ದೇನೆ. ಚಾರ್ಲ್ಸ್ ಡಿಕನ್ಸ್ (೧೮೧೨-೧೮೭೦) ಇಂಗ್ಲೆಂಡಿನಲ್ಲಿ ಸುಮಾರು ಎರಡು ದಶಕಗಳ ಕಾಲ ಒಂದು ಇಂಗ್ಲಿಷ್ ಸಾಪ್ತಾಹಿಕದ ಸಂಪಾದಕರಾಗಿ ದುಡಿದಿದ್ದರು.
ಆಗ ಅವರು ಪತ್ರಿಕೆಯ ಅಗತ್ಯಕ್ಕಾಗಿ ಡೇವಿಡ್ ಕಾಪರ್ಫೀಲ್ಡ್‌ನ್ನು ಧಾರಾವಾಹಿಯಾಗಿಯೇ ಹರಿಸಿದ್ದರಂತೆ. ಸುಮಾರು ಒಂದೂವರೆ ಶತಮಾನೋತ್ತರದಲ್ಲಿ, ಬದಲಾದ ಮಾಧ್ಯಮದಲ್ಲೇ ಆದರೂ ಕನ್ನಡದಲ್ಲಿ ಅದು ಧಾರಾವಾಹಿಯಾಗುತ್ತಿರುವುದು ಒಂದು ಯೋಗಾಯೋಗ. ಡಿಕನ್ಸ್ ಓದುಗರ ಪ್ರತಿಕ್ರಿಯೆಗಳನ್ನು ಗಮನಿಸುತ್ತ ತನ್ನ ಹೊಸ ಕಂತುಗಳನ್ನು ಪರಿಷ್ಕರಿಸಿಕೊಳ್ಳುತ್ತಿದ್ದ ಎನ್ನುತ್ತಾರೆ, ಸಾಹಿತ್ಯ ಇತಿಹಾಸಕಾರರು. (ಟೀಯಾರ್ಪೀ ನೋಡಿಕೊಂಡು ತೌಡುಗುದ್ದುವ ಅಥವಾ ಅಕಾಲ ಮರಣಿಸುವ ಇಂದಿನ ಟೀವೀ ಸರಣಿಗಳಿಗೆ ಹೋಲಿಸುವ ಅಪರಾಧ ಮಾಡಬೇಡಿ!) ಇಂದು ಲೇಖಕ ಮತ್ತು ಅನುವಾದಕ (೧೯೦೧-೭೭) ಇಬ್ಬರೂ ಕಾಲನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರಿಂದ ನಾನು ಕೇವಲ ಪುಟಸಂಖ್ಯೆ ಅಥವಾ ಅಧ್ಯಾಯಗಳ ಅನುಕೂಲ ನೋಡಿಕೊಂಡು ಕಂತುಗಳನ್ನು ನಿರ್ಧರಿಸುವ ಲಿಪಿಕಾರನಾಗಿ ಮುಂದುವರಿಯುತ್ತೇನೆ. ನನ್ನ ವಾರದ ಕಂತಿನ ಮಿತಿಯಲ್ಲಿ ಕಾದಂಬರಿಯ ಓದಿನ ರುಚಿ ನಿಮಗೆ ಹತ್ತಲೆಂದು ಮೂಲ ಪುಸ್ತಕದಲ್ಲಿ ಬಂದ ಪೀಠಿಕಾ ಪ್ರಕರಣಗಳನ್ನು ಧಾರಾವಾಹಿಯಲ್ಲಿ ಮಾತ್ರ ಮೊದಲ ಕೆಲವು ಕಂತುಗಳಿಗೆ ಹಂಚಿಕೊಡುತ್ತೇನೆ. ನಿಮ್ಮ ಪ್ರತಿಕ್ರಿಯೆಗಳು ನಿಮ್ಮ ಓದಿನ ಸಂತೋಷದ ಕುರುಹಾಗಿ, ಲಿಪಿಕಾರನಾಗಿ ಅಕ್ಷರಕ್ಷರ ಕುಟ್ಟುವ ನನಗೆ ಕುಮ್ಮಕ್ಕಾಗುವಂತೆ ಮತ್ತು ಕ್ಷಣಕಾಲಕ್ಕಾದರೂ ನನಗೆ ಸಾರ್ಥಕ್ಯ ಮೂಡಿಸುವಂತೆ ನಿರಂತರ ಬರುತ್ತಿರಲಿ.
– ಜಿ.ಎನ್. ಅಶೋಕವರ್ಧನ
ನನ್ನ ಜನನ
ಅಧ್ಯಾಯ ಒಂದು
ನನ್ನ ಜೀವನ ವೃತ್ತಾಂತದಲ್ಲಿ ನಾನೇ ಕಥಾನಾಯಕನಾಗುವೆನೋ ಅಥವಾ ಆ ಮುಖ್ಯ ಪಾತ್ರವೂ ಇತರ ಯಾರಿಗಾದರೂ ಸಲ್ಲುವುದೋ ಎನ್ನುವುದನ್ನು ಈ ಪುಸ್ತಕದ ಮುಂದಿನ ಪುಟಗಳನ್ನೋದಿ ನಿಷ್ಕರ್ಷಿಸಬೇಕಷ್ಟೆ. ಈ ವೃತ್ತಾಂತದ ಪ್ರಾರಂಭ ನನ್ನ ಜನನದಿಂದಲೇ ಆಗಬೇಕು ಎನ್ನುವುದಾದರೆ, ನನ್ನ ಕೇಳಿಕೆ ಪ್ರಕಾರ, ನಾನು ಶುಕ್ರವಾರ ರಾತ್ರಿ ಹನ್ನೆರಡು ಗಂಟೆಗೆ ಜನಿಸಿರುತ್ತೇನೆ. ಗಡಿಯಾರವು ಹನ್ನೆರಡು ಹೊಡೆದುದೂ ನಾನು ಕೂಗಿದುದೂ ಏಕಕಾಲದಲ್ಲಿ ಆಗಿತ್ತಂತೆ.
ಹುಟ್ಟಿದ ದಿನ ಮತ್ತು ಸಮಯದ ಜ್ಯೋತಿಷ್ಯಫಲದ ಪ್ರಕಾರ ಮೊದಲನೆಯದಾಗಿ ನಾನು ಬಹು ದುರದೃಷ್ಟವಂತನಾಗಿರಬೇಕು. ಎರಡನೆಯದಾಗಿ ಪ್ರೇತ ಪಿಶಾಚಗಳನ್ನು ಆಗಿಂದಾಗ್ಗೆ ಕಾಣುವಂಥವನೂ ಆಗಿರಬೇಕು. ಹೀಗೆಂದು ನನ್ನ ಹೆರಿಗೆಯ ಕಾಲದಲ್ಲಿ ನಮ್ಮ ಮನೆಯಲ್ಲಿದ್ದ ದಾದಿಯೂ ನಮ್ಮ ಸಹಾಯಕ್ಕಾಗಿ ಬಂದಿದ್ದ ನೆರಮನೆಯ ಒಬ್ಬಳು ಮುದುಕಿಯೂ ಮಾತಾಡಿಕೊಳ್ಳುತ್ತಿದ್ದರಂತೆ. ಜನನದ ಫಲಪ್ರಕಾರ ನಾನು ದುರದೃಷ್ಟವಂತನಾಗಿರುವೆನೋ ಅಥವಾ ಇಲ್ಲವೋ ಎನ್ನುವ ವಿಷಯದಲ್ಲಿ ಈ ವೃತ್ತಾಂತದ ಮುಂದಿನ ಪುಟಗಳ ಹೇಳಿಕೆಗಳಿಗಿಂತ ಉತ್ತಮ ಸಾಕ್ಷಿಯನ್ನು ಕೊಡಲಾರೆ. ಆದರೆ ಪ್ರೇತ ಪಿಶಾಚಿಗಳ ದರ್ಶನ ಲಾಭವು ನನ್ನ ಬಾಲ್ಯಾವಸ್ಥೆಯಲ್ಲೇ ಆಗಿಹೋಗಿರದಿದ್ದ ಪಕ್ಷಕ್ಕೆ, ಈ ವರೆಗೂ ನನಗೆ ಅದು ಲಭಿಸಿಲ್ಲವೆಂದಷ್ಟನ್ನು ಮಾತ್ರ ನಾನು ಹೇಳಬಲ್ಲೆ.
ನಾನು ತಾಯಿಯ ಗರ್ಭದಿಂದ ಭ್ರೂಣಾವರಣ ಸಮೇತನಾಗಿ ಜನಿಸಿದವನು. ಭ್ರೂಣಾವರಣವನ್ನು ತಮ್ಮಲ್ಲಿ ಇಟ್ಟುಕೊಂಡಿರುವವರಿಗೆ ನೀರಿನಿಂದ ಸಂಭವಿಸಬಹುದಾದ ಅವಗಡಗಳ ಭಯ ಇಲ್ಲವೆಂದೂ ಆ ಭ್ರೂಣಾವರಣವು ಅಂಥ ಅವಗಡಗಳನ್ನು ತಡೆಯುವುದೆಂದೂ ನಮ್ಮೂರಿನವರು ನಂಬುತ್ತಾರೆ. ಅದರ ಈ ಪ್ರಭಾವಕ್ಕಾಗಿ ನನ್ನ ಭ್ರೂಣಾವರಣವನ್ನು ಇಪ್ಪತ್ತೈದು ಪವನುಗಳ ಕ್ರಯಕ್ಕೆ ವಿಕ್ರಯಿಸುವುದಾಗಿ ನಮ್ಮ ಕಡೆಯವರು ಪ್ರಕಟಿಸಿದ್ದರು. ಆದರೆ ಅದಕ್ಕೆ ಗ್ರಾಹಕರು ವಿಶೇಷವಾಗಿ ಬರದೆ, ಕೊನೆಗೆ ಒಬ್ಬ ವಕೀಲನು ಕೆಲವಂಶ ತನ್ನ ಶರ್ರೀವೈನನ್ನು ನಮಗೆ ಕೊಟ್ಟು ಬಾಕಿ ಅಂಶವನ್ನು ನಗದು ಹಣವಾಗಿಯೇ ಕೊಡುವ ಮೂಲಕ ಅದನ್ನು ಪಡೆದುಕೊಳ್ಳಲು ಮುಂದೆ ಬಂದನು. ನಮ್ಮ ಮನೆಯ ಶರ್ರೀವೈನೇ ಮಾರಾಟವಾಗದೇ ಉಳಿದಿದ್ದುದರಿಂದ ಈ ಕ್ರಮದ ವಹಿವಾಟಕ್ಕೆ ನಾವು ಒಪ್ಪಲಿಲ್ಲ. ಜನರಿಗೆ ಈ ಆವರಣ ಯಂತ್ರದ ಪ್ರಭಾವದಲ್ಲಿ ನಂಬಿಕೆ ಇಲ್ಲದೆಯೋ ಅಥವಾ ಅವರಲ್ಲಿ ಜೀವದಾಸೆಗಿಂತಲೂ ಹಣದಾಸೆ ಹೆಚ್ಚಾಗಿದ್ದುದರಿಂದಲೋ ನಮ್ಮ ಪ್ರಕಟಣೆಯಂತೆ ಭ್ರೂಣಾವರಣವು ಮಾರಾಟವಾಗಲಿಲ್ಲ.
ಆದರೂ ಹತ್ತು ವರ್ಷಗಳನಂತರ ನನ್ನ ಭ್ರೂಣಾವರಣವನ್ನು ಒಂದು ಚಿಟ್ಟೆ ಕ್ರಮದಿಂದ ಬಹಿರಂಗವಾಗಿ ಮಾರಿದರು. ಆ ಚಿಟ್ಟೆ ಹರಾಜಿನಲ್ಲಿ ನಾನು ಅಲ್ಲೇ ನಿಂತು ಎಲ್ಲವನ್ನೂ ನೋಡುತ್ತಿದ್ದೆ. ಕೊನೆಗೆ ಒಬ್ಬಳು ಮುದುಕಿ ಹರಾಜಿನಲ್ಲಿ ಗೆದ್ದು, ಭ್ರೂಣಾವರಣವನ್ನು ಕ್ರಯಕ್ಕೆ ಪಡೆದುಕೊಂಡಳು. ನಾನೇ ಪ್ರತ್ಯಕ್ಷ ಅಲ್ಲೇ ಇರುತ್ತಾ, ಚಿಟ್ಟೆಯಲ್ಲಿ ಗೆದ್ದವರಿಗೆ ನನ್ನದೇ ಒಂದಂಶವನ್ನು ಕೊಡಲಾಗುವುದೆಂಬ ತಿಳಿವಳಿಕೆ ನನಗೆ ಜಿಗುಪ್ಸೆ, ನಾಚಿಕೆ, ಆಶ್ಚರ್ಯಗಳನ್ನು ತಂದಿತ್ತು.
ಅನಂತರ ನಾವು ಕೇಳಿ ತಿಳಿದ ಪ್ರಕಾರ ಆ ಹೆಂಗಸು ನೀರಿನ ಅವಗಡಕ್ಕೆ ಒಳಗಾಗದೆಯೇ ತನ್ನ ತೊಂಬತ್ತನೇ ವರ್ಷದಲ್ಲಿ, ತನ್ನ ಹಾಸಿಗೆಯಲ್ಲೇ ಮಲಗಿ ಸತ್ತಿರುವಳಾಗಿ ತಿಳಿದೆವು. ಚಾ ಸೇವನೆ ಕಾಲದಲ್ಲೂ ಮತ್ತು ಸೇತುವೆಗಳಲ್ಲೇ ನದಿಗಳನ್ನು ದಾಟುವಾಗಲೂ ಮಾತ್ರ ನೀರಿನ ಸಂಪರ್ಕವಿಟ್ಟುಕೊಂಡಿದ್ದ ಆ ಮುದುಕಿ ತನ್ನಲ್ಲಿದ್ದ ಭ್ರೂಣಾವರಣದ ಪ್ರಭಾವವನ್ನು ಆಗಿಂದಾಗ್ಗೆ ಕೊಂಡಾಡುತ್ತಿದ್ದಳಂತೆ.
ಇನ್ನು ನಮ್ಮ ಮೂಲ ಕಥಾಮುಖವಾಗಿ ಮುಂದುವರಿಯೋಣ. ಸಫಕ್ ತಾಲ್ಲೋಕಿನ ಬ್ಲಂಡರ್ ಸ್ಟನ್ ಎನ್ನುವಲ್ಲಿ ನಾನು ಹುಟ್ಟಿದೆ. ನಾನು ನನ್ನ ತಂದೆಯ ಮರಣಾನಂತರ ಹುಟ್ಟಿದವನು – ಅಂದರೆ, ಪ್ರಪಂಚದ ಬೆಳಕನ್ನು ನಾನು ನೋಡಿದ ಸಮಯಕ್ಕೆ ಆರು ತಿಂಗಳ ಮೊದಲು ನನ್ನ ತಂದೆ ಆ ಬೆಳಕನ್ನು ಅಖೈರಾಗಿ ನೋಡಿದನು. ನನ್ನ ತಂದೆ ನನ್ನನ್ನು ಎಂದೂ ನೋಡಿರುವುದಿಲ್ಲವೆಂಬ ತಿಳಿವಳಿಕೆ ಈಗಲೂ ಸಹ ನನಗೆ ಒಂದು ವಿಧದ ದುಃಖ ಮಿಶ್ರಿತ ಆಶ್ಚರ್ಯವನ್ನುಂಟು ಮಾಡುತ್ತದೆ. ಮಸಕು ಮಸಕಾಗಿ ತೋರುವ ಬಾಲ್ಯದ ನೆನಪುಗಳಲ್ಲಿ ನಮ್ಮ ಮನೆ ಸಮೀಪದಲ್ಲಿರುವ ಇಗರ್ಜಿಯ ವಠಾರ, ಅದರಲ್ಲಿ ಅಲುಗಾಡದೆ ಮಲಗಿರುವ ಶ್ವೇತ ಶಿಲೆಯಲ್ಲಿ ರಚಿಸಿರುವ ತಂದೆಯ ಗೋರಿ, ಈಗಲೂ ಕಂಡುಬರುವುವು. ಅಷ್ಟು ಮಾತ್ರವಲ್ಲದೆ, ಕತ್ತಲೆಯ ಮತ್ತು ಚಳಿಯ ರಾತ್ರಿಗಳಲ್ಲಿ ಏಕಾಂಗಿಯಾಗಿ ತಂದೆ ಹೊರಗೆ ಮಲಗಿರುವಾಗಲೇ ಅವನ ಸಂಪರ್ಕ ನಮಗೆ ಇರಬಾರದೆಂದು ಬಾಗಿಲುಗಳನ್ನು ಮುಚ್ಚಿಕೊಂಡು, ನಮ್ಮ ಬೆಚ್ಚಗಿನ ಕೋಣೆಯಲ್ಲಿ, ಬೆಳಕಿನಲ್ಲಿ, ನಾವು ಮಾತು, ನಗೆ ಮೊದಲಾದ ಚಟುವಟಿಕೆಗಳನ್ನು ನಡೆಸುತ್ತಿದ್ದಾಗ ನನಗುಂಟಾಗುತ್ತಿದ್ದ ವಿಸ್ಮಯ, ದುಃಖ ಈಗಲೂ ನೆನಪಿಗೆ ಬರುತ್ತಿದೆ.
ನಮ್ಮ ಕುಟುಂಬದಲ್ಲಿ ಹಿರಿಯರೆಂದಿದ್ದವರು ಒಬ್ಬರು ಮಾತ್ರ. ಅವರು ನನ್ನ ತಂದೆಯ ಚಿಕ್ಕತಾಯಿ – ಅಂದರೆ, ನನ್ನಜ್ಜಿ. ಈ ಅಜ್ಜಿಯನ್ನು ನನ್ನ ಬಾಲ್ಯದ ಅಭ್ಯಾಸಗಳ ಕಾರಣವಾಗಿ ಅತ್ತೆ ಎಂದೇ ಕರೆದಿರುತ್ತೇನೆ. ಅತ್ತೆಯ ಪರಿಚಯವನ್ನು ಕೂಲಂಕಷವಾಗಿ ಮುಂದೆ ತಮಗೆ ಮಾಡಿಕೊಡುವವನಿದ್ದೇನೆ. ಇಲ್ಲಿನ ಪ್ರಸಂಗಕ್ಕೆ ಸಂಬಂಧಿಸಿದಷ್ಟು ಮಾತ್ರ ನಾನಿಲ್ಲಿ ಪ್ರಸ್ತಾಪಿಸುತ್ತೇನೆ. ಅತ್ತೆಯ ಹೆಸರು ಮಿಸ್ ಬೆಟ್ಸಿ ಟ್ರಾಟೂಡ್. ನನ್ನ ತಾಯಿಗೆ ಅತ್ತೆಯನ್ನು ಕಂಡರೆ ತುಂಬಾ ಭಯ. ಆ ಭಯದ ಕಾರಣವಾಗಿ ಅತ್ತೆಯ ಪೂರ್ಣ ಹೆಸರನ್ನು ಹೇಳುವ ಬದಲು ಮಿಸ್ ಬೆಟ್ಸಿ ಎಂದು ಮಾತ್ರ ಹೇಳುತ್ತಿದ್ದಳು. ಅದರಲ್ಲೂ ಸಹ, ಆದಷ್ಟು ಅವಳ ಹೆಸರನ್ನು ಉಚ್ಚರಿಸದೇ ಮಾತಾಡುವ ಪ್ರಯತ್ನವನ್ನೇ ತಾಯಿ ಮಾಡುತ್ತಿದ್ದಳು. ಬೆಟ್ಸಿಯ ದೇಹ, ಮುಖ, ಮಾತು, ನಡತೆ, ವರ್ಚಸ್ಸು – ಎಲ್ಲವೂ – ಅಂಥ ಹೆದರಿಕೆಯನ್ನು ಉಂಟುಮಾಡುವಂಥವೇ ಆಗಿರುತ್ತಿದ್ದುವು. ಬೆಟ್ಸಿ ಒಬ್ಬ ಸುಂದರ, ಸುಲಕ್ಷಣ ಪುರುಷನನ್ನೇ ಮದುವೆಯಾಗಿದ್ದಿದ್ದರೂ ಅವನ ಸೌಂದರ್ಯ ಜೀವನದಲ್ಲಿ – ಸಂಸಾರದಲ್ಲಿ – ತೋರ್ಪಡದೆ, ಬೆಟ್ಸಿಯನ್ನು ಹಿಂಸಿಸುವುದರಲ್ಲಿ ಪರಿವರ್ತನೆ ಹೊಂದಿತ್ತು. ಹೀಗಾಗಿ ಬೆಟ್ಸಿಯು ತನ್ನ ಪತಿಗೆ ಹಣ ಕೊಟ್ಟು ಅವನ ದಾಂಪತ್ಯವನ್ನೇ ತ್ಯಜಿಸಿದ್ದಳು. ದಿಟ್ಟತನದ, ಸರಳ ಸ್ವಭಾವದ, ನಿರ್ದಾಕ್ಷಿಣ್ಯ ಪ್ರವೃತ್ತಿಯ ಬೆಟ್ಸಿಯನ್ನು ಮಹಡಿ ಮೇಲಿನಿಂದ ಕೆಳಗೆ ಒದ್ದೆಸೆದರೆ ತನಗಾಗುವ ಸಂತೋಷ ಅಷ್ಟಿಷ್ಟಲ್ಲವೆಂದೇ ಅವನೊಮ್ಮೆ ಸ್ಪಷ್ಟವಾಗಿ ತಿಳಿಸಿದ್ದನು. ತಾನು ಆ ರೀತಿ ಎಸೆಯಲ್ಪಡುವುದಕ್ಕಿಂತ ತಾನೇ ಪತಿಯನ್ನು ದಾಂಪತ್ಯದಿಂದ ಹೊರ ಎಸೆಯುವುದು ಉತ್ತಮವೆಂದು ಗ್ರಹಿಸಿದ್ದೇ ಅವಳು ಗಂಡನನ್ನು ಬಿಟ್ಟಿರಬೇಕು. ಹೆಂಡತಿ ತೆತ್ತ ಹಣದಿಂದ ಅವನು ಹಿಂದುಸ್ಥಾನಕ್ಕೆ ಹೋದನೆಂದೂ, ಅಲ್ಲಿ ಆನೆಯ ಮೇಲೆ ಅಂಬಾರಿಯನ್ನೇರಿ ಒಂದು ಬಾಬೂನ್ ಜೊತೆಯಲ್ಲಿ ಮೆರೆಯುತ್ತಿದ್ದುದನ್ನು ಇತ್ತ ಕಡೆಯವರು ಕಂಡಿದ್ದರೆಂದೂ ವದಂತಿಯಿತ್ತು. ಅವನ ಜತೆಯಲ್ಲಿದ್ದುದು ಒಂದು ಬಾಬೂನ್ ಆಗಿರಲಾರದು – ಒಬ್ಬ ಬಾಬುವೋ ಬೇಗಮಳೋ ಆಗಿರಬೇಕೆಂದು ನಾವು ಊಹಿಸುವುದೇ ನ್ಯಾಯ. ಅನಂತರ ಹತ್ತು ವರ್ಷಗಳು ಕಳೆದಮೇಲೆ ಅವನು ಪರದೇಶದಲ್ಲೇ ಸತ್ತನೆಂದೂ ವರ್ತಮಾನ ಹಬ್ಬಿತ್ತು. ಆತನ ಮರಣದ ಕುರಿತು ಅತ್ತೆ ಅತ್ತಳೋ, ಹೇಗೆ ಅತ್ತಳು, ಎಷ್ಟು ಅತ್ತಳು ಎಂಬಿತ್ಯಾದಿಯನ್ನು ತಿಳಿಯಲು ನಮ್ಮ ಮನೆಯವರಿಗೆ ಅನುಕೂಲವಿರಲಿಲ್ಲ. ಏಕೆಂದರೆ, ತಮ್ಮ ದಾಂಪತ್ಯವಿಚ್ಛೇದವಾದ ಮರುದಿನವೇ ಅತ್ತೆ ಸಮುದ್ರ ಕರಾವಳಿಯ ಬಹು ದೂರ ಪ್ರದೇಶದಲ್ಲಿ ಒಂದು ಹಿತ್ತಲು ಮನೆಯನ್ನು ಕ್ರಯಕ್ಕೆ ತೆಗೆದುಕೊಂಡು, ಒಬ್ಬಳು ಹೆಣ್ಣಾಳನ್ನು ಮಾತ್ರ ಕೆಲಸಕ್ಕಿಟ್ಟುಕೊಂಡು, ತನ್ನ ಅಖಂಡ ಏಕಾಂಗೀ ಜೀವನವನ್ನು ನಡೆಸುತ್ತಿದ್ದಳು.
ಅತ್ತೆಗೆ ನನ್ನ ತಂದೆಯ ಮೇಲೆ ತುಂಬಾ ಪ್ರೀತಿಯಿದ್ದರೂ ಅವನು ಪುನರ್ವಿವಾಹವಾಗಿದ್ದುದರಿಂದ – ಅದರಲ್ಲೂ, ಪುನರ್ವಿವಾಹದ ಪತ್ನಿಯ ಕಾರಣವಾಗಿ – ಅವನ ಮೇಲೆ ಅವಳು ಶಾಶ್ವತವಾದ ಕೋಪ ಮತ್ತು ತಿರಸ್ಕಾರವನ್ನು ತಾಳಿಬಿಟ್ಟಿದ್ದಳು. ನನ್ನ ತಾಯಿ ಬರೇ ಮಯಣದ ಬೊಂಬೆ ಎಂದು ಅತ್ತೆ ನಿಶ್ಚೈಸಿಕೊಂಡಿದ್ದಳು. ನನ್ನ ತಾಯಿಯನ್ನು ಅವಳು ಸ್ವತಃ ನೋಡಿರದಿದ್ದರೂ ನನ್ನ ತಾಯಿಗೆ ಇಪ್ಪತ್ತೆರಡು ವರ್ಷ ಪ್ರಾಯ ಪೂರಾ ಆಗಿರಲಿಲ್ಲವೆಂಬುದು ಅವಳಿಗೆ ಹೇಗೋ ಗೊತ್ತಿದ್ದಿತು. ಈ ದಾಂಪತ್ಯದಲ್ಲಿ ನನ್ನ ತಂದೆ ಅಶಕ್ತಿವಂತ ಮತ್ತು ಕೃಷದೇಹಿಯಾಗಿದ್ದುದು ಮಾತ್ರವಲ್ಲದೆ, ಅವನು ನನ್ನ ತಾಯಿಯ ಇಮ್ಮಡಿ ಪ್ರಾಯದವನೂ ಆಗಿದ್ದನು. ಇಂತಹ ವಿಷಮ ಪರಿಸ್ಥಿತಿಗಳ ಕಾರಣವಾಗಿಯೋ ಏನೋ – ನನ್ನ ತಂದೆ ಮದುವೆಯಾಗಿ ಒಂದು ವರ್ಷವಾಗುವಷ್ಟರಲ್ಲೇ – ಅಂದರೆ, ನಾನು ಜನಿಸುವ ಆರು ತಿಂಗಳ ಮೊದಲೇ ಮೃತನಾದನು.
ನನ್ನ ಮಟ್ಟಿಗೆ ‘ವಿಶೇಷ’ವಾದ ಎಂದಂದರೆ ತಪ್ಪಾಗಲಾರದ ಆ ಶುಕ್ರವಾರ ಸಂಜೆ ಸಮಯದಲ್ಲಿ ನನ್ನ ಜೀವನ ಚರಿತ್ರೆಯ ಕೆಲವು ವಿಷಯಗಳು ಈ ತೆರನಾಗಿದ್ದುವು. ಇವುಗಳಿಗಿಂತ ಹೆಚ್ಚಿನ ವಿವರಗಳನ್ನು ನಾನು ಸಂಗ್ರಹಿಸಲಿಲ್ಲ. ಆಗಲಂತೂ ನನಗೆ ತಿಳಿಯಲೇ ಸಾಧ್ಯವಿರಲಿಲ್ಲವಷ್ಟೆ. ಅಂತೂ ನಾನು ಸಂಗ್ರಹಿಸಿರುವ ಮಟ್ಟಿನ ಚರಿತ್ರೆಯು ಈ ವಿಧದಿಂದ ನಡೆದಿದೆ.
ಮಾರ್ಚಿ ತಿಂಗಳಿನ ಪ್ರಕಾಶಮಾನವೂ ಉಷ್ಣದಾಯಕವೂ ಆಗಿರುವ ಬಿಸಿಲು ನಮ್ಮ ಮನೆಯ ಹೊರಗಡೆ ಬಿದ್ದು ಪ್ರಜ್ವಲಿಸುತ್ತಿತ್ತು. ಅದೇ ಸಮಯದಲ್ಲಿ ನಮ್ಮ ಮನೆಯ ಒಳಗೆ ತಾಯಿ ಚಳಿಯಿಂದಲೂ ಮಾನಸಿಕ ಮತ್ತು ದೇಹದ ದೌರ್ಬಲ್ಯದಿಂದಲೂ ಆರಾಮ ಕುರ್ಚಿಯಲ್ಲಿ ಕುಳಿತು ಬೆಂಕಿಯ ಶಾಖವನ್ನು ಪಡೆದುಕೊಳ್ಳುತ್ತಿದ್ದಳು. ನನ್ನ ಜನನದ ಕುರಿತು ಇತರ ಯಾರಿಗೂ ಏನೊಂದೂ ಉತ್ಸಾಹವಾಗಲೀ ಗಾಬರಿಯಾಗಲೀ ಇರದಿದ್ದರೂ ನನ್ನ ತಾಯಿಗೆ ಮಾತ್ರ ತಾನು ಹೆರಿಗೆಯಿಂದ ಪಾರಾಗುವೆನೋ – ಮುಂದೆ ಜನಿಸುವ ನನ್ನ ಸ್ಥಿತಿ ಹೇಗಾಗಬಹುದೋ – ಎಂಬಿತ್ಯಾದಿಯಾದ ವಿಷಯಗಳಲ್ಲಿ ಬಹುವಾದ ಭಯವೇ ಇತ್ತು. ಹೀಗೆ ಲೋಕದ ಭಾರವನ್ನೇ ತಾನು ಹೊತ್ತಿರುವಂತೆ ಅವಳು ಊಹಿಸಿ, ದುಃಖಿಸಿ, ಭಯಪಡುತ್ತಿದ್ದರೂ ನಾನೊಬ್ಬ ಅವಳ ಜತೆಗೆ ಬಂದು ಸೇರುವೆನೆಂಬ ಶುಭನಿರೀಕ್ಷಣೆ ಮಾತ್ರ ಅವಳೆದುರು ಸದಾ ಇರುತ್ತಿದ್ದು, ಅವಳಿಗೆ ಧೈರ್ಯ ಕೊಡುತ್ತಿತ್ತು. ಈ ರೀತಿ ತಾಯಿ ಕುಳಿತಲ್ಲಿಂದಲೇ ಸುತ್ತಲೂ ನೋಡುತ್ತಿದ್ದ ಹಾಗೆಯೇ ಒಬ್ಬ ವಿಚಿತ್ರದ ಹೆಂಗಸು ಅಂಗಳದಲ್ಲೇ ನಡೆದು ತನ್ನ ಕಡೆಗೆ ಬರುವುದನ್ನು ಕಂಡಳು. ಅವಳು ತಾಯಿಗೆ ಬಹು ಸ್ಪಷ್ಟವಾಗಿಯೇ ಕಂಡುಬರುತ್ತಿದ್ದಳು. ಬರುತ್ತಿದ್ದ ಸ್ತ್ರೀ ಬಹು ಸ್ಥಿರ ಮುಖಮುದ್ರೆಯುಳ್ಳವಳಾಗಿದ್ದಳು; ಸ್ಥಿರಪದಗತಿ, ದೃಢಕಾಯ – ಈ ರೀತಿ ಅವಳಲ್ಲಿ ಸ್ಥಿರತೆ, ಗಾಂಭೀರ್ಯ, ಮನೋದಾರ್ಢ್ಯಗಳು ಎದ್ದು ಕಾಣಿಸುತ್ತಿದ್ದುವು. ಇಂಥ ವರ್ಚಸ್ಸುಳ್ಳ ವ್ಯಕ್ತಿ ನನ್ನ ಅತ್ತೆಯಲ್ಲದೆ ಮತ್ತೆ ಯಾರೂ ಅಲ್ಲವೆಂದು ತಾಯಿ ಕೂಡಲೇ ಊಹಿಸಿಕೊಂಡಳು – ಜತೆಯಲ್ಲೇ ಹೆದರಿಕೊಂಡಳು. ಅತ್ತೆ ಕರೆಗಂಟೆಯನ್ನು ಬಾರಿಸಿ ಒಳಗೆ ಬರುವ ಸಾಂಪ್ರದಾಯಿಕ ಕ್ರಮವನ್ನು ಬಿಟ್ಟು, ಸೀದಾ ಬಂದು, ತಾಯಿ ಕುಳಿತಿದ್ದಲ್ಲಿಗೆ ಸಮೀಪದ ಕಿಟಕಿಯ ಹೊರಗಡೆ ನಿಂತು, ಕಿಟಕಿಯ ಕನ್ನಡಿಗೆ ತನ್ನ ಮೂಗನ್ನು ಒತ್ತುತ್ತಾ ಒಳಗಡೆ ನೋಡಿದಳಂತೆ. ಅಂಜುಬುರುಕಳಾಗಿದ್ದ ನನ್ನ ತಾಯಿ ಕನ್ನಡಿಗೆ ಅಂಟಿ, ಅಗಲವಾಗಿ, ಕನ್ನಡಿಯನ್ನೆಲ್ಲ ಆವರಿಸಿದ್ದ ಮೂಗನ್ನು ಕಂಡು ಮತ್ತಷ್ಟು ಹೆದರಿದಳಂತೆ. ಅತ್ತೆ ನಮ್ಮನೆಗೆ ಬಂದ ಆ ಶುಕ್ರವಾರ ದಿನವೇ ನಾನು ಜನಿಸಲು ಈ ನಾಸಿಕವಿಕಾಸದ ಪ್ರಸಂಗವೇ ಕಾರಣವಾಗಿರಬೇಕೆಂದು ನಾನು ಪ್ರಾಯ ಬಂದ ಮೇಲೆ ತರ್ಕಿಸಿ ನಿಶ್ಚೈಸಿಕೊಂಡಿದ್ದೇನೆ.
ಅಪರಿಚಿತವಾದ ಈ ಗಂಭೀರ ಮುಖವನ್ನು ಕಂಡು ತಾಯಿ ಹೆದರಿ ತಾನು ಕುಳಿತಿದ್ದ ಕುರ್ಚಿಯ ಹಿಂದೆ ಅಡಗಿದಳು. ಕಿಟಕಿಯ ಹೊರಬದಿ ಕನ್ನಡಿಯಲ್ಲಿ ಅಂಟಿದ್ದ ಕಣ್ಣುಗಳು – ಕೆಲವು ಗಡಿಯಾರಗಳಲ್ಲಿನ ಸೆಕೆಂಡಿನ ಹೊಡೆತಕ್ಕನುಸರಿಸಿ ಕಣ್ಣುಗಳು ಅತ್ತಿತ್ತ ಅಲೆದು ನೋಡುವ ತಮಾಷೆಯಂತೆ – ತಾಯಿಯನ್ನು ಹಿಂಬಾಲಿಸಿ ನೋಡತೊಡಗಿದುವು. ಈ ಅಧಿಕಾರಯುತ ಕಣ್ಣುಗಳು ತಾಯಿ ಬಾಗಿಲನ್ನು ತೆರೆಯುವಂತೆ ದೃಷ್ಟಿಯಿಂದಲೇ ಅಪ್ಪಣೆ ಕೊಟ್ಟವು. ಅತ್ತೆಯ ಕಣ್ಣು, ಕೈಕರಣ, ಹಾವಭಾವಗಳನ್ನು ನೋಡುವಾಗ ಯಾವಾಗಲೂ ಅಧಿಕಾರಾಪನ್ನಳಾಗಿಯೇ ಇದ್ದು, ಕೈಕೆಳಗಿನವರನ್ನು ಶಿಸ್ತು ನಿಯಮದಲ್ಲಿ ಇಟ್ಟುಕೊಂಡವಳಂತೆ ತೋರುತ್ತಿದ್ದಳು. ಈ ಭಾವನೆಯನ್ನೇ ಅಪ್ಪಣೆಯಾಗಿ ಅಂಗೀಕರಿಸಿ ತಾಯಿ ಬಾಗಿಲನ್ನು ತೆರೆದಳು. ಅತ್ತೆ ಒಳಗೆ ಬರುತ್ತಾ –
“ದಿವಂಗತ ಡೇವಿಡ್ ಕಾಪರ್ಫೀಲ್ಡನ ಹೆಂಡತಿ ತಾನೆ, ನೀನು?” ಎಂದು, ತಾಯಿಯ ಕೈಯ್ಯಲ್ಲಿ ಕಟ್ಟಿಕೊಂಡಿದ್ದ ಮರಣ ದುಃಖಸೂಚಕದ ಕರಿಬಟ್ಟೆಗಳನ್ನು ತೋರಿಸುತ್ತಾ ಕೇಳಿದಳು.
“ಹೌದು”, ಅಂದಳು ತಾಯಿ ಮೆತ್ತಗೆ.
“ನಾನು ಮಿಸ್ ಟ್ರಾಟೂಡ್, ಕೇಳಿದ್ದೀಯೇನು?”
ಮಿಸ್ ಟ್ರಾಟೂಡ್ಡಳ ಪರಿಚಯ ತನಗಿದೆಯೆಂದೂ, ಆ ಪರಿಚಯವು ತುಂಬಾ ಸಂತೋಷಕರವಾದುದೆಂದೂ, ತಾಯಿ ನಮ್ರತೆಯಿಂದ ಉತ್ತರ ಕೊಟ್ಟಳು. ಆದರೂ ತನ್ನ ಅಂತರಂಗದಲ್ಲಿ ಸಂತೋಷಕ್ಕಿಂತ ಭಯವೇ ಹೆಚ್ಚಿದೆಯೆಂಬ ಅರಿವಿನಿಂದ ತಾಯಿ ತುಂಬಾ ಕೆಂಪಾಗತೊಡಗಿದಳು.
“ಅವಳೇ ನಾನು” ಎಂದನ್ನುತ್ತಾ, ಬಾಗಿಲು ತೆರೆಯಲು ಹೋಗಿದ್ದ ನನ್ನ ತಾಯಿಯನ್ನು ಹಿಂಬಾಲಿಸುತ್ತಾ ಅತ್ತೆ ಬಂದಳು.
(ಮುಂದುವರಿಯಲಿದೆ)
Good job. Thank you Sir. I wish to buy translations of classics form you. Les Miserables (Dhukartha) adn this one…tell me how I can order for the books.
ನಿಮ್ಮ ಅಂಗಡಿಯಲ್ಲೇ ಡೇವಿಡ್ ಕಾಪರ್ಫೀಲ್ಡ್ ಖರೀದಿಸಿದ್ದೆ. ನನ್ನ ಸತತ ಮನೆ ಬದಲಾಯಿಸುವ ಪ್ರಕ್ರಿಯೆಯಲ್ಲಿ ಎಲ್ಲಿ ಹೋಯಿತೋ ಗೊತ್ತಿಲ್ಲ. ನನಗೆ ಬಹಳ ಹಿಡಿಸಿದ ಭಾಷಾಂತರವಿದು.
ಪ್ರಿಯ ಅಶೋಕವರ್ಧನ,ನಿಮ್ಮ ಮಾತಾಮಹರ ಅನುವಾದದ ಬಗ್ಗೆ ಕೇಳಿದ್ದೆ, ನೋಡಿರಲಿಲ್ಲ. ಈಗ ಕುತೂಹಲದಿಂದ ಓದಿದೆ. ಮುಂದಿನ ಕಂತುಗಳಿಗೆ ಕಾಯುವೆ. ಇಂಗ್ಲಿಶ್ ನಿಂದ ಆಗಿರುವ ಅನುವಾದಗಳನ್ನು ಚರ್ಚಿಸುವಾಗ ಇದೊಂದು ಗಮನಿಸಬೇಕಾದ ಕೃತಿ.
ಒಳ್ಳೆ ಸೇವೆ ಮಾಡಿದ್ದೀರ.