[ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ.
ಮೂಲ: ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್. ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂರನೇ ಕಂತು

ಚಾರ್ಲ್ಸ್ ಡಿಕನ್ಸರು ೧೮೧೨ನೇ ಇಸವಿಯ ಫೆಬ್ರವರಿ ೭ರಲ್ಲಿ ಇಂಗ್ಲೆಂಡಿನ ಪೋರ್ಟ್ಸ್‌ಮತ್ ಎಂಬಲ್ಲಿ ಜನಿಸಿದರು. ಇವರದು ಕೇವಲ ಒಂದು ಬಡ ಕುಟುಂಬ. ಇವರ ತಂದೆಯ ಹೆಸರು ಜಾನ್ ಡಿಕನ್ಸ್. ಜಾನ್ ಡಿಕನ್ಸ್ ಬಡತನದಿಂದ ಬಹಳ ಕಷ್ಟಗಳನ್ನು ಅನುಭವಿಸಿದರು. ಸಾಲಗಳ ಬಾಧೆ ಪರಮಾವಧಿಗೆ ಮುಟ್ಟಿ, ಈ ಕುಟುಂಬ ಸ್ವಲ್ಪ ಸಮಯ ಜೈಲಿನಲ್ಲೇ ಇತ್ತು. ಯಜಮಾನನಿಗೆ ಜೈಲಾದರೂ ಅವನ ಕುಟುಂಬವೂ ಜೈಲಿನಲ್ಲಿರುವ ಅನುಕೂಲ ಆಗಿನ ಕಾಲದಲ್ಲಿ ಇತ್ತಂತೆ. (ಇದು ಸಿವಿಲ್ ಜೈಲು ವಾಸದ ಸಮಯದಲ್ಲಿ ಮಾತ್ರ) ಹೀಗೆ ತನ್ನ ತಂದೆ ಜೈಲಿನಲ್ಲಿದ್ದಾಗ ಚಾರ್ಲ್ಸ್ ಡಿಕನ್ಸರು ಒಂದು ಕಾರ್ಖಾನೆಯಲ್ಲಿ ಕುಪ್ಪಿಗಳನ್ನು ತೊಳೆದು ಅವಕ್ಕೆ ಚೀಟಿ ಅಂಟಿಸುವ ವೃತ್ತಿಯಿಂದ ಸಂಬಳ ಸಂಪಾದಿಸುತ್ತಿದ್ದರು. ತಮ್ಮ ವೃತ್ತಿಯನ್ನೂ ವಾಸಸ್ಥಳವನ್ನೂ ಬದಲಾಯಿಸುವುದರಿಂದ ತಾವು ಬಡತನದಿಂದ ಪಾರಾಗಬಹುದೆಂದು ನಿರೀಕ್ಷಿಸಿಕೊಂಡು ಜಾನ್ ಡಿಕನ್ಸರು ಇಂಗ್ಲೆಂಡಿನ ಅನೇಕ ಪಟ್ಟಣಗಳಿಗೆ ತಮ್ಮ ಸಂಸಾರವನ್ನು ಸಾಗಿಸಿ, ಜೀವನ ನಡೆಸಿ ನೋಡಿದರು. ಒಂದು ಕ್ಷಣ ದುಃಖಭಾವದ ಅತ್ಯುಗ್ರ ಸ್ಥಿತಿಯಲ್ಲಿದ್ದು ಮರುಕ್ಷಣದಲ್ಲೇ ಸಂತೋಷಭಾವದ ಶಿಖರಕ್ಕೇರಿ ಅದರಲ್ಲಿ ತಲ್ಲೀನರಾಗಬಲ್ಲ, ಸದಾ ಶುಭನಿರೀಕ್ಷಣಿಗಳಾಗಿದ್ದ ‘ಮಿಸ್ಟರ್ ಮೈಕಾಬರರು ಜಾನ್ ಡಿಕನ್ಸರನ್ನು ಬಹುವಾಗಿ ಹೋಲುವ ಕಥಾವ್ಯಕ್ತಿ. ‘ಡೇವಿಡ್ ಕಾಪರ್ಫೀಲ್ಡ್ ಚಾರ್ಲ್ಸ್ ಡಿಕನ್ಸರ ಆತ್ಮಕಥೆಯೆಂದರೂ ವಿಶೇಷ ತಪ್ಪಾಗಲಾರದು.

ಡಿಕನ್ಸರ ಕಾದಂಬರಿಗಳಲ್ಲಿ ‘ಡೇವಿಡ್ ಕಾಪರ್ಫೀಲ್ಡ್ ಸರ್ವೋತ್ಕೃಷ್ಟವಾದುದೆಂದು ಅನೇಕ ವಿಮರ್ಶಕರ ಅಭಿಪ್ರಾಯ. ‘ಬ್ಲೀಕ್ ಹೌಸ್, ‘ನಿಕೊಲಾಸ್ ನಿಕಲ್ಬಿ, ಆಲಿವರ್ ಟ್ವಿಸ್ಟ್ ಮೊದಲಾದ ಅನೇಕ ಕಾದಂಬರಿಗಳನ್ನು ಅವರು ಬರೆದಿರುತ್ತಾರೆ. ೧೮೩೩ರಲ್ಲಿ ‘ಪಿಕ್‌ವಿಕ್ ಪೇಪರ್ಸ್ ಎಂಬ ಹಾಸ್ಯ ಪ್ರಧಾನವಾದ ಇವರ ಪುಸ್ತಕವೊಂದು ಪ್ರಕಾಶಕ್ಕೆ ಬಂತು. ಇದು ಪ್ರಚಾರಕ್ಕೆ ಬಂದು ಬಹು ಸ್ವಲ್ಪ ಸಮಯದಲ್ಲಿ ಡಿಕನ್ಸರು (ಒಂದು ರೀತಿಯ) ಅನಾಮಧೇಯ ಸ್ಥಿತಿಯಿಂದ ಜಗದ್ವಿಖ್ಯಾತೆಗೂ ಬಡತನದಿಂದ ಶ್ರೀಮಂತಿಕೆಗೂ ತಲುಪಿದರು.

ಚಾರ್ಲ್ಸ್ ಡಿಕನ್ಸರು ಎರಡಾವೃತ್ತಿ ಅಮೆರಿಕ ದೇಶವನ್ನು ಸಂದರ್ಶಿಸಿರುವರು; ಅಮೆರಿಕದ ಅವರ ಅನುಭವಗಳನ್ನು ಮಾರ್ಟಿನ್ ಚಸಲ್ ವಿಟ್ ಎಂಬ ಕಾದಂಬರಿಯಲ್ಲಿ ಚಿತ್ರಿಸಿರುವರು. ಇವರ ಖ್ಯಾತಿ ಹೆಚ್ಚಿದಂತೆಯೇ ಇವರ ಕಾದಂಬರಿಗಳನ್ನು ಇವರಿಂದಲೇ ಓದಿಸಿ ಕೇಳುವ ಒಂದು ನೂತನ ಕ್ರಮವನ್ನು ಇಂಗ್ಲಿಷ್ ಮತ್ತು ಅಮೆರಿಕದ ಜನರು ಏರ್ಪಡಿಸತೊಡಗಿದರು. ಈ ವಿಧದ ಕಥಾಕಾಲಕ್ಷೇಪ ಇವರ ಕೀರ್ತಿಯನ್ನು ಹೆಚ್ಚಿಸಿತು. ಆದರೆ ಈ ಪರಿಶ್ರಮಗಳ ಫಲವಾಗಿ ಇವರ ಆರೋಗ್ಯವು ಕೆಡುತ್ತಾ ಬಂತು. ೧೮೭೦ನೇ ಇಸವಿಯ ಜೂನ್ ತಿಂಗಳ ೯ರಲ್ಲಿ ಇವರು ದೈವಾಧೀನರಾದರು. ಇಂಗ್ಲೆಂಡಿನ ರಾಷ್ಟ್ರಕವಿಗೆ ತಕ್ಕುದಾದ ಗೌರವಗಳಿಂದ ಇವರ ಕಳೇಬರ ವೆಸ್ಟ್ ಮಿನಿಸ್ಟರ್ ಎಬ್ಬಿಯಲ್ಲಿ ಸಮಾಧಿ ಮಾಡಲ್ಪಟ್ಟಿತು.

‘ಡೇವಿಡ್ ಕಾಪರ್ಫೀಲ್ಡ್ನಿಂದಲೂ ಡಿಕನ್ಸರ ಜೀವನ ಚರಿತ್ರೆಯಿಂದಲೂ ನಾವು ತಿಳಿಯಬಹುದಾದ ಉತ್ತಮ ವಿಷಯಗಳು ಅನೇಕ ಇವೆ. ಹಿಡಿದ ಕಾರ್ಯವನ್ನು ಎಡೆಬಿಡದೆ ಪರಿಶ್ರಮಗಳಿಂದ ಸಾಧಿಸುವ ಶಕ್ತಿ, ಕರ್ತವ್ಯದಲ್ಲಿ ಶ್ರದ್ಧೆ ಈ ಗುಣಗಳಿಲ್ಲದೆ ಶ್ರೀಮಂತಿಕೆಗೂ ಖ್ಯಾತಿಗೂ ಬರುವುದು ಕಷ್ಟವೆಂಬುದು ಈ ಚರಿತ್ರೆಗಳಲ್ಲಿ ಕಂಡುಬರುವುದು. ಸ್ಫೂರ್ತಿ, ಅನುಭವ, ವಾಕ್ ಶಕ್ತಿ, ಶಬ್ದ ಸಂಪತ್ತಿ, ಇವೆಲ್ಲವುಗಳ ಜತೆಗೆ ಕರ್ತವ್ಯಸಾಧನಾ ಶಕ್ತಿ ಇದ್ದರೆ ಮಾತ್ರ ಒಬ್ಬನು ಉತ್ತಮ ಸಾಹಿತಿಯಾಗಬಲ್ಲನೆಂಬುದನ್ನೂ ನಾವು ತಿಳಿಯಬಹುದು.
ಇವರ ಕಾದಂಬರಿಗಳಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಅನುಕಂಪ, ಸೌಮ್ಯವಾದ ಹಾಸ್ಯಗಳು ತುಂಬಿರುವುವು. ಒಂದು ಪಾರ್ಲಿಮೆಂಟು ಮಾಡಬಹುದಾದ ಸಮಾಜ ಸುಧಾರಣೆಗಳನ್ನು ಈ ಒಬ್ಬ ವ್ಯಕ್ತಿ ತಮ್ಮ ಕೃತಿಗಳಿಂದ ಮಾಡಿರುವರೆಂದರೆ ಅತಿಶಯೋಕ್ತಿಯಾಗಲಾರದು. ಇವರ ಕಾದಂಬರಿಗಳನ್ನೋದುವುದರಿಂದ ನಮ್ಮ ಜೀವನವು ಸಂಸ್ಕಾರ ಹೊಂದುವುದೆನ್ನಲೂಬಹುದು. ಜೀವನದಲ್ಲಿ ಇರುವ ಮುಖಗಳನ್ನು ಮಾನವ ಸ್ವಭಾವಕ್ಕೆ ಇರಬೇಕಾದ ಪ್ರೀತಿ, ಅನುಕಂಪ, ನಗುಗಳಿಂದ ನಿವಾರಿಸಬೇಕೆಂಬ ಮಾರ್ಗವನ್ನು ಡಿಕನ್ಸರು ತೋರಿಸುತ್ತಿರುವರು. ಸದುದ್ದೇಶಪೂರಿತರಾದ ಸದ್ಗುಣಿ ಪಾತ್ರಗಳಿಂದ ಚಿತ್ರಿತವಾಗಿ ತುಂಬಿರುವ ಇವರ ಕಾದಂಬರಿಗಳನ್ನು ಇಂಗ್ಲಿಷ್ ಬರುವವರೆಲ್ಲರೂ ಓದಿಯೇ ಓದುತ್ತಾರೆ.

-ಎ.ಪಿ. ಸುಬ್ಬಯ್ಯ
ನಾನು ಸುತ್ತಲಿನ ಅನುಭವವನ್ನು ಪಡೆಯುತ್ತೇನೆ

ಅಧ್ಯಾಯ ಎರಡು

ನನ್ನ ಬಾಲ್ಯದ ಅರಿವಿನ ಪರದೆಯನ್ನು ನೋಡತೊಡಗಿದರೆ ಮೊದಲೆದ್ದು ಕಾಣುವುದು ನನ್ನಮ್ಮನ ಮೃದು ಕೂದಲು, ಸುಂದರರೂಪ ಮತ್ತು ಪೆಗಟಿಯ ರೂಪರಹಿತ ಮುಖ, ಕಪ್ಪನ್ನೇ ಕಾರುವಂತಿದ್ದ ಅವಳ ಎರಡು ಕಣ್ಣು. ಪೆಗಟಿಯ ಕಣ್ಣುಗಳು ಹಾಗಿದ್ದರೂ ಅವಳ ಕೈ ಮತ್ತು ಕೆನ್ನೆಗಳು ಸೇಬು ಹಣ್ಣಿನಷ್ಟು ಕೆಂಪಾಗಿ ಇದ್ದುವು; ಈ ಕೆಂಪನ್ನು ಕಂಡು ಕಾಗೆಗಳೇಕೆ ಅವನ್ನು ತಮ್ಮ ಕೊಕ್ಕಿನಿಂದ ಕುಕ್ಕಿನೋಡದೆ ಬಿಡುವುವೆಂದು ನಾನು ಆಶ್ಚರ್ಯಪಡುತ್ತಿದ್ದೆ.

ತಾಯಿಯೂ ಪೆಗಟಿಯೂ ಮೊಣಕಾಲೂರಿಕೊಂಡು, ನನ್ನನ್ನು ಅತ್ತಿತ್ತ ನಡೆಯುವಂತೆ ಮಾಡುತ್ತಿದ್ದುದೂ, ಆಗ್ಗೆ ನಾನು ಪೆಗಟಿಯ ಸಮೀಪಕ್ಕೆ ತಲಪುವ ಮೊದಲು ಬೀಳದಂತೆ ಹಿಡಿದುಕೊಳ್ಳಲು ಅವಳು ಕೈ ನೀಡಿ ನನಗೆ ತೋರಿಸುತ್ತಿದ್ದ ಅವಳ ತೋರುಬೆರಳೂ, ನನಗೆ ಜ್ಞಾಪಕಕ್ಕೆ ಬರುತ್ತವೆ. ಬೆರಳಿನ ಜ್ಞಾಪಕದ ಜತೆಯಲ್ಲೇ ಅವಳ ಆ ಬೆರಳು ಅಡಿಕೆಯನ್ನು ಪುಡಿಮಾಡುವ ಕತ್ತರಿಯ ದೊರಗು ಭಾಗದಂತೆ ಇತ್ತೆಂಬುದೂ ನೆನಪಿಗೆ ಬರುತ್ತದೆ.

ಹಿಂದಿನ ಈ ನೆನಪು ಸ್ವಲ್ಪಾಂಶ ಕಲ್ಪನೆಯೂ ಇರಬಹುದು. ಆದರೆ, ಅಂಥ ಕಲ್ಪನೆಗಾದರೂ ಆಗಲೇ ಆಧಾರವಿದ್ದಿರಬೇಕೆಂದು ನಾವು ನಿಶ್ಚೈಸಿಕೊಂಡರೆ ತಪ್ಪಾಗಲಾರದು. ಸಾಧಾರಣ ಈ ತರ್ಕ ಸರಣಿಯಂತೆಯೇ ನಮ್ಮ ಗುಣಗಳನ್ನು ಕುರಿತು ನಾವು ನಿಶ್ಚೈಸಬಹುದೆಂದು ನಾನು ನಂಬುತ್ತೇನೆ. ಅಂದರೆ ನಾವು ದೊಡ್ಡವರಾದಾಗ ಹೊರಹಾಕುವ ನಮ್ಮ ಗುಣಗಳ ಮೂಲವೆಲ್ಲ ಬಾಲ್ಯದಲ್ಲೇ ರೂಪಹೊಂದುವುವೆಂದು ನನ್ನ ನಂಬಿಕೆ. ಬಾಲಕರಿಗೆ ಸ್ಮರಣ ಶಕ್ತಿ ತುಂಬ ಇರುತ್ತದೆ. ಹಾಗಾಗಿ ಬಾಲ್ಯದಲ್ಲಿ ಸಂಗ್ರಹವಾದ ಗುಣಗಳ ಕಾರಣ – ಆಧಾರವಾಗಿಯೇ ವಯಸ್ಸಾದನಂತರವೂ ಮನುಷ್ಯನ ಅನೇಕ ಚಟುವಟಿಕೆಗಳು ನಡೆಯುತ್ತವೆ. ಸರಳತೆ, ಸಂತೃಪ್ತಿ, ಹರ್ಷಚಿತ್ತತೆ, ಇವೆಲ್ಲಾ ಬಾಲ್ಯದ ಗುಣಗಳು. ಇಂಥ ಗುಣಗಳನ್ನು ನಾವು ಪ್ರೌಢ ವಯಸ್ಕರಲ್ಲಿ ಕಂಡಾಗ ಆ ಗುಣಗಳೆಲ್ಲ ಅವರ ಪ್ರಾಯಬಂದನಂತರ ಸಂಗ್ರಹವಾದುವಲ್ಲವೆಂದೂ ಅವೆಲ್ಲ ಅವರ ಬಾಲ್ಯದ ಗುಣಗಳ ಅವಶೇಷಗಳೆಂದೂ ನಾವು ತಿಳಿಯಬಹುದು. ನನಗೆ ಸ್ಮರಣ ಶಕ್ತಿ ತುಂಬಾ ಇತ್ತೆಂದು ನಾನು ಅನೇಕ ಪ್ರಸಂಗಗಳಿಂದ ತಿಳಿದುಕೊಂಡಿದ್ದೇನೆ. ಆದ್ದರಿಂದಲೇ ನಾನು ಹಿಂದಿನ ವಿಷಯಗಳನ್ನು ಬಹು ಸುಲಭವಾಗಿ ಅರಿವಿನ ಪರದೆಯ ಮೇಲೆ ನೋಡಬಲ್ಲೆನು. ಇನ್ನೂ ಏನೆಲ್ಲ ಜ್ಞಾಪಕವಿದೆಯೋ ನೋಡೋಣ.

ಹರಡಿ ಮುಸುಕಿರುವ ಮೋಡಗಳ ಮಧ್ಯದಿಂದ ರೂಪಗಳು ಉದಯಿಸಿ ಬರಬಹುದಾದಂತೆ ಬಾಲ್ಯದ ಅನುಭವಗಳಿಂದ ಎದ್ದು ಕಾಣುವುವುಗಳಲ್ಲಿ ಮೊದಲನೆಯದು ನಮ್ಮ ಮನೆ ಮತ್ತು ಮನೆಯ ಜತೆಯಲ್ಲೇ ಅದರ ಹಿಂಭಾಗದಲ್ಲಿದ್ದ ಪೆಗಟಿಯ ಕೋಣೆ. ಮತ್ತೆ ಜ್ಞಾಪಕಕ್ಕೆ ಬರುವುದು ನಮ್ಮ ಅಂಗಳದ ಮಧ್ಯದಲ್ಲಿದ್ದ ಒಂದು ಕಂಬ ಮತ್ತು ಕಂಬದ ಮೇಲಿದ್ದ ಪಾರಿವಾಳದ ಗೂಡು. ಪಾರಿವಾಳದ ಗೂಡಿನಲ್ಲಿ ಮಾತ್ರ ಪಾರಿವಾಳಗಳಿರಲಿಲ್ಲ. ಹೀಗೆಯೇ ಅಂಗಳದ ಮೂಲೆಯಲ್ಲಿ ನಾಯಿಯಿಲ್ಲದಿದ್ದ ಒಂದು ನಾಯಿಗಳ ಗೂಡೂ ಇತ್ತು. ಆಂಗಳದ ಇನ್ನೊಂದು ಮೂಲೆಯಲ್ಲಿ ತುಂಬ ಕೋಳಿಗಳಿದ್ದುವು – ಆ ಕೋಳಿಗಳನ್ನು ನಾನು ಗುರುತಿಸಲಾರದೆ ಕೋಳಿಗಳ ರಾಶಿಗಳೇ ಅವೆಂದು ಗ್ರಹಿಸುತ್ತಿದ್ದೆ. ಆದರೆ ಈ ಕೋಳಿಗಳ ಪೈಕಿ ಒಂದು ದೊಡ್ಡ ಹುಂಜವು ಒಂದೊಂದಾವರ್ತಿ ಕಂಬದ ಮೇಲೇರಿ ಕೊಕ್ಕೊಕ್ಕೋ ಎಂದು ಕೂಗುತ್ತಿದ್ದುದೂ, ಅದು ನನ್ನನ್ನೇ ನೋಡಿ ಕೂಗುತ್ತಿದ್ದುದರಿಂದ, ನನ್ನನ್ನು ಉದ್ದೇಶಿಸಿಯೇ ಅದು ಏನನ್ನೋ ಹೇಳುತ್ತಿದೆಯೆಂದು ನಾನು ಗ್ರಹಿಸುತ್ತಿದ್ದುದೂ ಈಗಲೂ ಜ್ಞಾಪಕವಿದೆ. ನಮ್ಮ ಕೋಳಿಗಳಿಂದಾಚೆಗೆ ಬಾತುಕೋಳಿಗಳಿದ್ದುವು. ನಾನೇನಾದರೂ ಅಪ್ಪಿತಪ್ಪಿ ಆ ಕಡೆ ಹೋದರೆ ಅವುಗಳು ಬಳ್ಳಿಗಳಂತಿದ್ದ ತಮ್ಮ ಕುತ್ತಿಗೆಯನ್ನು ನೀಡಿ ನನ್ನನ್ನು ಅಟ್ಟಿ ಬರುತ್ತಿದ್ದುವು. ಹೀಗೆ ಅಟ್ಟಿ ಬಂದ ಅನುಭವದ ಜತೆಯಲ್ಲೇ ರಾತ್ರಿ ಸ್ವಪ್ನದಲ್ಲೂ ಆ ಭಯಂಕರ ಪ್ರಸಂಗಗಳನ್ನು ಕಂಡದ್ದು ಜ್ಞಾಪಕವಿದೆ – ಅಲ್ಲದೆ, ಸಿಂಹಗಳ ಮಧ್ಯದಲ್ಲಿ ಸಿಕ್ಕಿಬಿದ್ದ ಬೇಟೆಗಾರನು ಚೀರಬಹುದಾದಂತೆ ನಾನು ಸ್ವಪ್ನದಲ್ಲಿ ಚೀರಿದುದೂ ಜ್ಞಾಪಕಕ್ಕೆ ಬರುತ್ತದೆ.

ಇನ್ನು ಪೆಗಟಿಯ ಹಿಂಬದಿಯ ಕೋಣೆಯಿಂದ ಮನೆಯ ಮುಂಬದಿಯ ಕೋಣೆಗೆ ಬರುವಾಗ ದಾಟಬೇಕಾಗಿದ್ದ ದಾರಿಬದಿಯ ಕೋಣೆಯಲ್ಲೂ ಸ್ವಲ್ಪ ಸ್ವಾರಸ್ಯವಿದೆ. ಆ ದಾರಿಬದಿ ಕೋಣೆಯೆಂದರೆ ಒಂದು ನೀಳವಾದ ಓಣಿ. ಓಣಿಯ ಪಕ್ಕದಲ್ಲೇ ಮನೆಯ ಮುಖ್ಯ ಉಗ್ರಾಣವಿದೆ. ಈ ಉಗ್ರಾಣಕ್ಕೆ ಮನೆಯವರು ಕೆಲವೊಮ್ಮೆ ಹೋಗಿ, ಮಿನುಗು ದೀಪವನ್ನು ಹಿಡಿದುಕೊಂಡು ಹಳೆಪೆಟ್ಟಿಗೆ, ಪಾತ್ರೆ, ಹೊಸ ಡಬ್ಬಿ, ಭರಣಿ, ಗೋಣಿ ಮುಂತಾದುವುಗಳನ್ನು ನೋಡುವುದಿದೆ. ಆಗ್ಗೆ ಕಾಫಿ, ಚಾ, ಹೊಗೆಸೊಪ್ಪು, ಒಳ್ಳೆಮೆಣಸು, ಧೂಳು ಈ ಎಲ್ಲವುಗಳ ಮಿಶ್ರ ಪರಿಮಳ ಒಂದೇ ಗುಟುಕಿನಲ್ಲಿ ಬಂದುಬಿಡುತ್ತದೆ. ಉಗ್ರಾಣವು ಕತ್ತಲೆಯಾಗಿದ್ದುದರಿಂದಲೂ, ಪೆಗಟಿಯ ಕೋಣೆಯಿಂದ ಮನೆಯ ಮುಂಭಾಗಕ್ಕೆ ದೂರವಿರುವುದರಿಂದಲೂ, ಆ ಓಣಿ ಕೋಣೆಯ ದಾರಿಯು ಬಹು ಅಪಾಯಕರವೆಂದೇ ನನ್ನ ಭಾವನೆ. ಮನೆಯ ಮುಂಭಾಗದಲ್ಲಿ ಒಂದು ಉದ್ದದ ಜಗುಲಿಯೂ, ಜಗುಲಿಯ ಎರಡು ತುದಿಗಳಲ್ಲೂ ಈ ಒಂದೊಂದು ಕೋಣೆಯೂ ಇವೆ. ಈ ಎರಡು ಕೋಣೆಗಳ ಪೈಕಿ ಒಂದರಲ್ಲಿ ಪೆಗಟಿ, ನಾನು ಮತ್ತು ತಾಯಿ ಸಂಧ್ಯಾಕಾಲದಲ್ಲಿ ಕುಳಿತು ಮನಸ್ವಿಯಾಗಿ ಮಾತಾಡುತ್ತಿದ್ದೆವು.

ಇಲ್ಲಿ ಕುಳಿತು ಮಾತಾಡುವುದೆಂದರೆ ನನಗೆ ಬಹಳ ಸಂತೋಷ. ಈ ಕೋಣೆ ಸ್ವಲ್ಪ ಸಣ್ಣದು. ಮತ್ತು ಸಡಗರದ ಸಾಮಾನುಗಳಿಲ್ಲದುದು. ಇನ್ನೊಂದು ಕೋಣೆಯಿದೆಯಲ್ಲ – ಅದು ವಿಶಾಲವಾದುದು; ಸಡಗರ ಸಂಭ್ರಮಗಳ ಕೋಣೆ. ಆದಿತ್ಯವಾರಗಳಲ್ಲೂ, ವಿಶೇಷ ದಿನಗಳಲ್ಲೂ ಕುಳಿತು ಮೆರೆಯುವ ಸ್ಥಳ ಅದು. ಆದರೂ ನನಗೆ ಆ ಕೋಣೆ ಒಪ್ಪುತ್ತಿರಲಿಲ್ಲ. ಆ ಕೋಣೆಯನ್ನು ಕುರಿತು ನನಗೆ ಒಂದು ವಿಧದ ಅಂಜಿಕೆಯೇ ಇತ್ತು. ನಾನು ಕೇಳಿ ತಿಳಿದ ಪ್ರಕಾರ ನನ್ನ ತಂದೆಯ ಶವವನ್ನು ಆ ಕೋಣೆಯಲ್ಲಿಟ್ಟಿದ್ದರು. ಕಪ್ಪು ಕುಪ್ಪಸದ ಜನರು ಅಲ್ಲಿಂದಲೇ ಶವವನ್ನು ತೆಗೆದುಕೊಂಡು ಶ್ಮಶಾನಕ್ಕೆ ಮೆರವಣಿಗೆ ಹೊರಟಿದ್ದುದಂತೆ. ಆದಿತ್ಯವಾರಗಳಲ್ಲಿ ತಾಯಿ ಅಲ್ಲಿ ಕುಳಿತು ಬೈಬಲ್ಲನ್ನು ಓದುತ್ತಾಳೆ. ಬೈಬಲ್ಲನ್ನು ಓದುತ್ತಿದ್ದಾಗ ಒಂದು ಸರ್ತಿ ಲಾಸರ್ಸನು ಸತ್ತು ಪುನರ್ಜೀವಗೊಂಡ ಕಥೆ ಕೇಳಿ ನಾನು ಹೆದರಿ ಅತ್ತೆನು. ಆಗ ನನ್ನನ್ನು ಸಮಾಧಾನಪಡಿಸುವುದು ಬಹಳ ಕಷ್ಟವಾಗಿತ್ತು. ಕೊನೆಗೆ, ನಮ್ಮ ಮನೆಯ ಕೇವಲ ನೆರೆ ಕಾಂಪೌಂಡಿನಲ್ಲಿದ್ದ ಶ್ಮಶಾನದ ಗೋರಿಗಳನ್ನೇ ನನಗೆ ತೋರಿಸಿ, ಸತ್ತವರು ಏಳದೆ ಮಲಗಿರುತ್ತಾರೆಂದು ನನ್ನನ್ನು ನಂಬಿಸಿ ಸಮಾಧಾನಪಡಿಸಿದ್ದಾರೆ. ಅಂದಿನ ನನ್ನ ಸಮಾಧಾನಕ್ಕೆ ಗೋರಿಗಳು ಮಾತ್ರ ಕಾರವಾಗಿರದೆ, ಆ ಗೋರಿಗಳ ಮೇಲೂ, ಎಲ್ಲ ಕಡೆಯಲ್ಲೂ ಬಿದ್ದಿದ್ದ ಬೆಳದಿಂಗಳಿನ ಬೆಳಕೂ ರಾತ್ರಿಯ ಅಲ್ಲಿನ ಶಾಂತ ವಾತಾವರಣವೂ ಕಾರಣಗಳಾಗಿದ್ದುವೆಂದು ಈಗ ತಿಳಿಯುತ್ತೇನೆ.

ನಮ್ಮ ಇಗರ್ಜಿ ವಟಾರದ ಹುಲ್ಲುಗಾವಲಿನ ಹಸುರಿನಷ್ಟು ಸುಂದರ ಹಸುರೂ, ಅಲ್ಲಿನ ಮರಗಳ ತೋಪಿನಡಿಯ ತಂಪಿನಷ್ಟರ ತಂಪೂ, ಅಲ್ಲಿನ ಗೋರಿಗಳು ಮನಸ್ಸಿನಲ್ಲಿ ಉಂಟುಮಾಡುತ್ತಿದ್ದಷ್ಟರ ಶಾಂತಿಯೂ ಬೇರೆ ಎಲ್ಲಿಯೂ ಇಲ್ಲವೆಂದು ನಾನು ನಂಬಿದ್ದೆ. ನಮ್ಮ ಕೋಣೆಯಲ್ಲಿ ಒಂದು ಪಿಠಾರಿಯ ಮೇಲೆ ಹಾಸಿಗೆ ಹಾಸಿ ನನ್ನನ್ನು ಮಲಗಿಸುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಎದ್ದ ಹಾಗೆ ನಾನು ನೋಡುವುದೇ ಈ ಮೈದಾನವನ್ನು. ಇದರಲ್ಲಿ ಕುರಿಮಂದೆಗಳು ಸದಾ ಮೇಯುತ್ತಿದ್ದುವು. ಬೆಳಗ್ಗಿನ ಸೌಮ್ಯದ ಬಿಸಿಲು, ಕುರಿಮಂದೆ ಮೈದಾನಗಳ ಮೇಲೆ ಬಿದ್ದು ಸೃಷ್ಟಿಯನ್ನೆಲ್ಲ ಹರ್ಷಪುಳಕಿತವಾಗಿ ಮಾಡುತ್ತಿತ್ತಲ್ಲದೆ, ಮುಂದೆ ನನ್ನ ಕೋಣೆಯಲ್ಲಿದ್ದ ಛಾಯಾಯಂತ್ರದ ಮೇಲೂ ಬಿದ್ದು ಅದನ್ನು ಪ್ರಕಾಶಮಾನವಾಗಿ ಮಾಡುತ್ತಿತ್ತು. ಸೂರ್ಯೋದಯದಿಂದ ದಿನವೂ ಪ್ರಾರಂಭವಾಗಿ ಪುನಃ ತಾನು ಗಂಟೆಗಳನ್ನು ತಿಳಿಸುವ ಅವಕಾಶ ಸಿಕ್ಕಿದ್ದಕ್ಕೆ ಈ ಛಾಯಾ ಯಂತ್ರವೂ ತನ್ನಂತರಂಗದಲ್ಲೇ ಸಂತೋಷಪಡುತ್ತಿರಬೇಕೆಂದು ನಾನು ನಂಬಿಕೊಂಡಿದ್ದೆ. ಛಾಯಾ ಯಂತ್ರದ ಗುಟ್ಟನ್ನು ತಿಳಿದ ಸಂತೋಷ ಪ್ರತಿ ದಿನವೂ ನನ್ನ ಪಾಲಿಗೆ ಇತ್ತು.

ನಮ್ಮ ಮನೆಯವರಿಗೆಂದೇ ಮೀಸಲಾಗಿಟ್ಟಿದ್ದ ಒಂದು ಸೋಫಾ ನಮ್ಮ ಇಗರ್ಜಿಯಲ್ಲಿತ್ತು. ನಾವು ಇಗರ್ಜಿಗೆ ಹೋದಾಗ ಇದರಲ್ಲೇ ಕುಳಿತಿರುತ್ತಿದ್ದೆವು. ಸೋಫಾದ ಬದಿಯಲ್ಲಿದ್ದ ಕಿಟಕಿಯಿಂದ ನೋಡಿದರೆ ನಮ್ಮ ಮನೆ ಕಾಣುತ್ತಿತ್ತು. ಅದು ಕಾಣುತ್ತಿತ್ತು ಮಾತ್ರವಲ್ಲದೆ ನಾನು ಅಲ್ಲಿಗೆ ಹೋದಾಗಲೆಲ್ಲಾ ಆಗಿಂದಾಗ್ಗೆ ನಮ್ಮ ಮನೆಯನ್ನು ನೋಡುತ್ತಲೂ ಇದ್ದೆ. ನಮ್ಮ ಮನೆಯನ್ನು ತನ್ನ ಮನೆಗಿಂತಲೂ ಹೆಚ್ಚಾಗಿ ಕಾದುಕೊಳ್ಳುತ್ತಿದ್ದ ಪೆಗಟಿಯು ನಮ್ಮ ಮನೆಯನ್ನು ಯಾರಾದರೂ ದರೋಡೆ ಮಾಡಿಬಿಡಬಹುದೆಂದು ನಡು ಹಗಲಲ್ಲೇ ಆದರೂ – ನಮ್ಮ ಮನೆ ಕಡೆಗೆ ಆಗಿಂದಾಗ್ಗೆ ನೋಡುತ್ತಿದ್ದಳು. ಆದರೆ, ನಾನು ಮಾತ್ರ ನಮ್ಮ ಮನೆಕಡೆ ನೋಡಿದಾಗ, ನಾನು ಹಾಗೆ ನೋಡಬಾರದೆಂದೂ, ನಾನು ಗುರುಗಳು ಮಾಡುತ್ತಿದ್ದ ಉಪದೇಶ ಭಾಷಣವನ್ನು ಕೇಳುತ್ತಾ ಗುರುಗಳನ್ನೇ ನೋಡುತ್ತಿರಬೇಕೆಂದೂ ಎಚ್ಚರಿಸುತ್ತಿದ್ದಳು.

ಪೆಗಟಿಯ ಎಚ್ಚರಿಕೆಯ ಪರಿಣಾಮವಾಗಿ ಒಂದಾವರ್ತಿ ನನಗಾದ ಪ್ರಸಂಗವನ್ನು ತಿಳಿಸುವೆನು. ಪೆಗಟಿ ಹೇಳಿದ ಪ್ರಕಾರ ಗುರುಗಳನ್ನು ನೋಡಲು ನನಗೆ ಅಂಜಿಕೆಯೂ ಆಗುತ್ತಿತ್ತು, ನಾಚಿಕೆಯೂ ಆಗುತ್ತಿತ್ತು. ಇಗರ್ಜಿಯಲ್ಲಿ ಅದರಲ್ಲೂ, ಆಗ ಮಾತ್ರ – ಬಿಳೀ ವಸ್ತ್ರವನ್ನು ಹೊದೆದುಕೊಂಡು ತೋರಿಬರುತ್ತಿದ್ದ ಗುರುಗಳು ನನಗೆ, ಅವರ ಸಾದವಸ್ತ್ರದಲ್ಲಿ, ಪರಿಚಿತರೇ ಆಗಿದ್ದರು. ಅವರು ಅಲ್ಲೇಕೆ ಆ ಬಿಳಿ ವಸ್ತ್ರಧಾರಿಗಳಾಗಿದ್ದಾರೆಂದು ಅವರನ್ನು ಬಹು ಕೌತುಕದಿಂದ ನೋಡತೊಡಗಿದೆ – ಹಾಗೆ ನೋಡುತ್ತಿದ್ದ ಹಾಗೆಯೇ, ನಾನು ಹಾಗೆ ನೋಡಿದ್ದನ್ನು ಆಕ್ಷೇಪಿಸಿ ಗುರುಗಳು ನನ್ನನ್ನು ವಿಚಾರಿಸಿದರೆ ನನ್ನ ಗತಿ ಏನೆಂದು ಹೆದರಿದೆ. ಇದಕ್ಕಾಗಿ ಗುರುಗಳನ್ನು ನೋಡುವುದು ಬಿಟ್ಟು ತಾಯಿಯನ್ನು ನೋಡತೊಡಗಿದೆ. ತಾಯಿಯು ನನ್ನನ್ನು ಕಂಡರೂ ಕಾಣದಂತೆ ಮಾಡಿಕೊಂಡು ನನ್ನ ದೃಷ್ಟಿಯನ್ನೇ ಗಮನಿಸಲಿಲ್ಲ. ಹೀಗಾಗಿ ಇನ್ನೇನನ್ನು ನೋಡುವುದೆಂದು ಹೆದರಿ ದೂರದ ಬಾಗಿಲ ಹತ್ತಿರ ನಿಂತಿದ್ದ ಒಬ್ಬ ಚಿಕ್ಕ ಹುಡುಗನನ್ನು ನೋಡಿದೆ. ಅವನು ನನ್ನನ್ನು ನೋಡಿ ಮೂಗು ಡೊಂಕಿಸಿ ಅಣಕಿಸಿದನು. ಕೊನೆಗೆ ಅವನ ಮೇಲಿನ ದೃಷ್ಟಿಯನ್ನು ತಪ್ಪಿಸಿ ಹೆಬ್ಬಾಗಿಲಿಗಾಗಿ ಒಳಗೆ ಬರುತ್ತಿದ್ದ ಬಿಸಿಲನ್ನು ನೋಡಿದೆ. ಅಲ್ಲಿ ಒಳಗೆ ನುಗ್ಗಬೇಕೋ, ಹೊರಗೇ ನಿಲ್ಲಬೇಕೋ ಎಂದು ಶಂಕಿಸುತ್ತಿದ್ದ – ಭಕ್ತನಾಗಿ ಬರುತ್ತಿದ್ದ ಮನುಷ್ಯನನ್ನಲ್ಲ, ಭುಕ್ತವಾಗಲಿದ್ದ ಕುರಿಯನ್ನು ಕಂಡೆ. ಅದನ್ನು ಕಂಡು ಮೌನವಾಗಿರಲಾರೆನೆಂದು ತೋರಿತು.

ನಾನೇನಾದರೂ ಮಾತಾಡಿದರೆ ಗುರುಗಳೇನೆಂದಾರು, ಜನರೇನೆಂದಾರು ಎಂದು ಹೆದರಿ ಕಂಬಗಳ ತುದಿಯಲ್ಲಿದ್ದ ಪ್ರತಿಮೆಗಳನ್ನು ನೋಡಿದೆ. ಪ್ರತಿಮೆಗಳ ಸಾಲಿನಲ್ಲಿ ದಿವಂಗತ ಮಿಸ್ಟರ್ ಬ್ಯಾಜರ್ಸರೂ ಇದ್ದರು. ಅವರು ಸಾಯುವ ಮೊದಲು ಡಾ| ಚಿಲ್ಲಿಪ್ಪರೂ ಬಂದಿರಬೇಕಲ್ಲವೇ? ಬ್ಯಾಜರ್ಸರು ಎಷ್ಟು ದಿನ ಖಾಯಿಲೆಯಲ್ಲಿ ಮಲಗಿ ನರಳಿರಬೇಕು? ಅವರ ಪತ್ನಿ ಹೇಗೆ ಅತ್ತಿರಬೇಕು? ತನ್ನಿಂದ ಬದುಕಿಸಲಾಗದೆ ಸತ್ತ ಬ್ಯಾಜರ್ಸರ ನೆನಪು ಈಗಲೂ ವರ್ಷಕ್ಕೊಮ್ಮೆ ಡಾ| ಚಿಲ್ಲಿಪ್ಪರಿಗೆ ಆಗುವುದಿಲ್ಲವೇ? ಎಂದು ಮೊದಲಾಗಿ ಆಲೋಚಿಸಿದೆ. ಇದೇ ಆಲೋಚನೆಗೆ ಸಂಬಂಧಪಡುತ್ತಾ ಬಿಳಿ ವಸ್ತ್ರವನ್ನು ಹೊದೆದುಕೊಂಡು ಗುರುಗಳ ಸಮೀಪದಲ್ಲೇ ಇದ್ದ ಡಾಕ್ಟರ್ ಚಿಲ್ಲಿಪ್ಪರನ್ನು ನೋಡಿದೆ. ಅವರು ಡಾಕ್ಟರರಾದುದರಿಂದಲೇ ಗುರುಗಳ ವೇದಿಕೆಗೆ ಅಷ್ಟೊಂದು ಸಮೀಪದಲ್ಲಿ ಅವರ ಆಸನವಿರಬೇಕೆಂದು ಊಹಿಸಿದೆ. ಹೀಗೆ ಡಾಕ್ಟರ್ ಚಿಲ್ಲಿಪ್ಪರಿಂದ ಪ್ರಾರಂಭವಾದ ದೃಷ್ಟಿ ಗುರುಗಳ ವೇದಿಕೆಗೆ ತಲುಪಿತು. ಆವರಣವಿದ್ದ ವೇದಿಕೆಯು ಹುಗ್ಗಾಟಕ್ಕೂ ಚಿಕ್ಕತರ ಯುದ್ಧಗಳ ಆಟಕ್ಕೂ ಅನುಕೂಲವೆಂದು ತೋರಿತು. ಎತ್ತರದಲ್ಲಿ ನಿಂತು ಕೆಳಗಿನಿಂದ ಬರುವ ಶತ್ರುಗಳನ್ನು ತಡೆದು ನಿಲ್ಲಿಸುವ ಪ್ರಸಂಗವೂ ಮನಸ್ಸಿನಲ್ಲಿ ಮೂಡಿತು. ಕ್ರಮೇಣವಾಗಿ ಯುದ್ಧವೂ ವೇದಿಕೆಯೂ ಮಸಕು ಮಸಕಾಗಿ ತೋರಿದುವು. ಗುರುಗಳ ಮಂದ್ರ ಸ್ವರದ ಭಾಷಣವು ಅಸ್ಪಷ್ಟವಾಗಿ ಕೇಳತೊಡಗಿತು. ಸೆಕೆಯಿಂದಲೂ, ಯೋಚನೆಗಳಿಂದಲೂ ನನಗೆ ನಿದ್ರೆ ಬಂದಿತು. ಇನ್ನೇನಾಯಿತೆಂದು ಹೇಳಬೇಕೇ? ನಾನು ಸೋಫಾದಿಂದ ಬಿದ್ದದ್ದೂ ಆಯ್ತು. ಬಿದ್ದವನನ್ನು ಪೆಗಟಿಯು ಎತ್ತಿಕೊಂಡು ಮನೆಗೆ ಹೋದುದೂ ಜ್ಞಾಪಕವಿದೆ.

ಇನ್ನು ನಮ್ಮ ಮನೆ ವಠಾರದ ವಿಚಾರ ಹೀಗಿತ್ತು: ನಮ್ಮ ಮನೆಯ ಕಿಟಕಿಯ ಹೊರಬದಿಯಿಂದಲೇ ನಮ್ಮ ಹಣ್ಣಿನ ತೋಟವು ಪ್ರಾರಂಭವಾಗುವುದು. ಹೂ ಹಣ್ಣುಗಳ ಸುವಾಸನೆಯು ಮನೆಯೊಳಕ್ಕೆ ಸದಾ ಬರುತ್ತಿರುವುದು. ಕೆಲವೊಮ್ಮೆ ತಾಯಿಯೂ ನಾನೂ ತೋಟದೊಳಗೆ ಹೋಗುವುದಿದೆ. ನಮ್ಮ ತೋಟದಲ್ಲಿ ಬೆಳೆದಷ್ಟು ತುಂಬ ಮತ್ತು ಅಲ್ಲಿನ ಹಣ್ಣುಗಳ ಬಣ್ಣದಷ್ಟು ತೀಕ್ಷ್ಣ ಕೆಂಪು ಹಣ್ಣುಗಳು, ಇನ್ನೆಲ್ಲಿಯೂ ಬೆಳೆಯುತ್ತಿಲ್ಲವೆಂದು ನನ್ನ ನಂಬಿಕೆ. ತಾಯಿ ಹಣ್ಣುಗಳನ್ನು ಕುಯ್ದು ಬುಟ್ಟಿಯೊಳಗಿಡುವಾಗ್ಗೆ ನಾನು ಕೆಲವು ಹಣ್ಣುಗಳನ್ನು ಕದ್ದು ತಿಂದು ಏನೂ ಅರಿಯದವನಂತೆ ನಿಂತುಬಿಡುತ್ತಿದ್ದೆ.

ನನ್ನ ಬಾಲ್ಯದ ವಿಷಯ ಇನ್ನೇನೆಲ್ಲ ಜ್ಞಾಪಕವಿದೆಯೆಂದು ನೋಡೋಣ. ಒಂದು ವಸಂತ ಋತುವಿನ ಕೊನೆಯಲ್ಲಿ ಬಿರುಗಾಳಿಯೆದ್ದಿತು. ಬಿರುಗಾಳಿಯನ್ನು ಹಿಂಬಾಲಿಸಿ ಚಳಿಗಾಲ ಬಂದಿತು. ಚಳಿಗಾಲದ ಅನುಭವವೇ ಬೇರೊಂದು ತೆರನಾಗಿತ್ತು. ಮನೆಯಲ್ಲಿ ಬೆಂಕಿಯೆದುರು ಕುಳಿತು ಬೇಕಾದಷ್ಟು ಮಾತಾಡಿ ಆನಂದಪಡುವ ಸಮಯವೇ ಆ ಕಾಲ. ಮುಸ್ಸಂಜೆ ಸಮಯದಲ್ಲಿ ನಮ್ಮ ಬೈಠಖಾನೆಯಲ್ಲಿ ನಾವೆಲ್ಲ ಕುಣಿಯುತ್ತೇವೆ. ನಮ್ಮ ಜತೆಯಲ್ಲಿ ಕುಣಿದ ತಾಯಿ ದಣಿದು ಆರಾಮ ಕುರ್ಚಿಯಲ್ಲಿ ಕುಳಿತು ತನ್ನ ಗುಂಗುರು ತಲೆ ಕೂದಲನ್ನು ಕೈ ಬೆರಳಿಗೆ ಸುತ್ತಿಕೊಂಡು, ದೇಹವನ್ನು ನೆಟ್ಟಗೆ ಮಾಡಿ ಕುಳಿತುಕೊಳ್ಳುತ್ತಾಳೆ. ಆಗ ಅವಳು ಎಷ್ಟೊಂದು ಚೆಂದವಾಗಿ ಕಾಣುತ್ತಾಳೆ. ನನ್ನ ತಾಯಿ ಸುಂದರಿಯೆಂದು ನನಗೆ ಗೊತ್ತಿತ್ತು. ಅಲ್ಲದೆ ತಾಯಿಯು ತಾನು ಸುಂದರಿಯೆಂಬುದನ್ನು ಅರಿತು ಸಂತೋಷಿಸುತ್ತಿದ್ದಳೆಂದೂ ನನಗೆ ಗೊತ್ತಿತ್ತು. ಈ ಗುಟ್ಟುಗಳು ನನಗೂ ತಾಯಿಗೂ ಮಾತ್ರ ಗೊತ್ತಿದ್ದುದೆಂಬುದು ನನ್ನ ಇನ್ನೊಂದು ಸಂತೋಷ.

ನಾವು ಈ ರೀತಿ ಸಂತೋಷದಿಂದಿರುತ್ತಿದ್ದೆವು. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ತಾಯಿಯೂ ನಾನೂ ಪೆಗಟಿಯ ಆಜ್ಞೆಯಂತೆ ಸ್ವಾಭಾವಿಕವಾಗಿಯೇ ಇದ್ದು ಬಿಡುತ್ತಿದ್ದೆವು. ತಾಯಿಯ ಕಡೆ ಯಜಮಾನಿಕೆಗೆ ಅವಕಾಶವೇ ಇರಲಿಲ್ಲ ಎಂಬುದನ್ನು ನಾನು ಹೇಗೋ ತಿಳಿದುಕೊಂಡಿದ್ದೆ. ನಮ್ಮೆಲ್ಲರ ಅಪಾರವಾದ ಸಂತೋಷಕ್ಕೆ ಈ ವಿಷಯ ಹೇಗೆ ಸಂಬಂಧಿಸುತ್ತಿತ್ತೆಂಬುದನ್ನು ನಾನು ತಿಳಿದಿರಲಿಲ್ಲ.
ಒಂದು ದಿನ ರಾತ್ರಿ ಪೆಗಟಿಯೂ ನಾನೂ ಬೈಠಖಾನೆಯಲ್ಲಿ ಕುಳಿತು ನಾನು ನನ್ನ ಚಿಕ್ಕ ಪುಸ್ತಕದಿಂದ ಮೊಸಳೆಗಳ ಜೀವನಕ್ರಮವನ್ನು ಪೆಗಟಿಗೆ ಓದಿ ಹೇಳುತ್ತಿದ್ದೆ. ಕೊನೆಗೆ – ನನ್ನ ಓದೋಣವು ಹಾಗಿದ್ದೋ ಅಥವಾ ಪೆಗಟಿಯ ಬುದ್ಧಿಶಕ್ತಿ ಹಾಗಿದ್ದೋ – ಪೆಗಟಿಗೆ ಮಾತ್ರ ಮೊಸಳೆ ಅಂದರೆ ಬಸಳೆ ಎಂದರ್ಥವಾದಂತೆ ತೋರಿತು. ಬಸಳೆಯ ವಿಷಯ ಅರ್ಥವಾಗಿ ತೃಪ್ತಿಪಟ್ಟಂತೆ ಅವಳು ಮಾತಾಡಿದಳು. ನನಗೆ ನಿದ್ರೆ ಮಾಡಲು ಮನಸ್ಸಿರಲಿಲ್ಲ. ಅದಕ್ಕಾಗಿ ಏನಾದರೊಂದು ಕೆಲಸ ನನಗೆ ಬೇಕಾಗಿತ್ತು. ಯಾವಾಗಲೂ ನನ್ನನ್ನು ಬೇಗ ಮಲಗಿಸುತ್ತಿದ್ದರಾದರೂ ಆ ದಿನ ತಾಯಿಯು ನಮ್ಮ ನೆರೆಯವರ ಮನೆಗೆ ಸಂಜೆಗೇ ಹೋಗಿದ್ದವಳು ಆ ವರೆಗೂ ಬರದಿದ್ದುದರಿಂದ ನಾನು ನಿದ್ರೆ ಮಾಡದೇ ಉಳಿದಿದ್ದೆ.

ತಾಯಿ ಬರುವವರೆಗೆ ನಿದ್ರೆ ಮಾಡದೆ ಕುಳಿತಿರುವ ಸ್ವಾತಂತ್ರ್ಯವನ್ನು ಅನುಭವಿಸುವುದಕ್ಕಾಗಿ, ಬರುತ್ತಿದ್ದ ನಿದ್ರೆಯನ್ನು ನಿಲ್ಲಿಸುವುದಕ್ಕಾಗಿ, ಏನೇನೋ ಪ್ರಯತ್ನಪಡುತ್ತಿದ್ದೆ. ಕೊನೆಗೆ ರೆಪ್ಪೆಗಳನ್ನು ಬೆರಳಿನಿಂದ ಅಗಲಿಸಿ ಹಿಡಿದುಕೊಂಡು ಪೆಗಟಿಯನ್ನು ನೋಡತೊಡಗಿದೆ. ಪೆಗಟಿಯು ಹೊಲಿಗೆ ಕೆಲಸದಲ್ಲಿದ್ದಳು. ಅವಳ ಹೊಲಿಗೆ ಸಾಹಿತ್ಯಗಳನ್ನೆಲ್ಲ ಒಮ್ಮೆ ನೋಡಿದೆ – ಗಜಕೋಲು, ಸೂಜಿ, ನೂಲು, ಕತ್ತರಿ ಮತ್ತು ಇವುಗಳೆಲ್ಲ ಕೆಲಸವಿಲ್ಲದಿದ್ದಾಗ ಮಲಗುತ್ತಿದ್ದ ಮಾಡಿದ್ದ ಚಿಕ್ಕಮನೆ, ಇವನ್ನೆಲ್ಲ ನೋಡಿದೆ. ಪೆಗಟಿಯ ಕೈಬೆರಳಿನಲ್ಲಿದ್ದ ಹಿತ್ತಾಳೆ ಸೂಜೊತ್ತು ಬಹು ಆಶ್ಚರ್ಯಕರವಾಗಿ ತೋರುತ್ತಿತ್ತು. ಅದರಿಂದ ಮುಂದುವರಿದು ಪೆಗಟಿಯನ್ನೇ ನೋಡಿದೆ. ಪೆಗಟಿಯನ್ನು ನೋಡಿದಂತೆಲ್ಲ ಅವಳು ಮುದ್ದುಮುದ್ದಾಗಿ ತೋರಿದಳು. ಇದೇ ಸಮಯದಲ್ಲಿ ನಿದ್ರೆಯ ಬಾಧೆಯು ವಿಪರೀತವಾಗತೊಡಗಿತು. ಸ್ವಲ್ಪ ನಿದ್ರೆಗೆ ಎಡೆಕೊಟ್ಟರೆ ನಾನು ಅಷ್ಟು ಹೊತ್ತು ಕಾದು ಕುಳಿತದ್ದೂ ನಿರರ್ಥಕವಾಗಬಹುದೆಂದು ಹೆದರಿ – ಎಚ್ಚತ್ತು, ಬೇರೇನೂ ಮಾರ್ಗ ತೋರದೆ ಪೆಗಟಿಯೊಡನೆ ಮಾತಾಡತೊಡಗಿದೆ.

“ಪೆಗಟಿ, ನಿನಗೆ ಯಾವಾಗಲಾದರೂ ಮದುವೆಯಾಗಿದೆಯೋ?” ಎಂದು ಕೇಳಿದೆ.
“ಓ ದೇವರೇ! ನಿನ್ನ ತಲೆಗೆ ಮದುವೆ ಹೇಗೆ ಹೊಕ್ಕಿತು!” ಅಂದಳು ಪೆಗಟಿ.
ಅವಳ ಆಶ್ಚರ್ಯಸೂಚಕ ಪ್ರಶ್ನೆಯು ನನ್ನನ್ನು ಅರೆನಿದ್ರಾವಸ್ಥೆಯಿಂದ ಸಂಪೂರ್ಣ ಎಚ್ಚರಿಸಿತು. ಪೆಗಟಿಯು ತಾನು ಹೊಲಿಯುತ್ತಿದ್ದುದನ್ನು ಬಿಟ್ಟು, ನನ್ನನ್ನೇ ಆಶ್ಚರ್ಯದಿಂದ ನೋಡಿದಳು.

“ಅಲ್ಲ ಪೆಗಟಿ, ನಿನಗೆ ಎಂದಾದರೂ ಮದುವೆಯಾಗಿದೆಯೇ – ನೀನೊಬ್ಬ ಸುಂದರಿಯಲ್ಲವೇ, ಪೆಗಟಿ?” ಎಂದು ನಿಷ್ಕಪಟವಾಗಿ, ಬಹು ಕುತೂಹಲದಿಂದ ಕೇಳಿದೆ. ನನ್ನ ತಾಯಿಯ ಸೌಂದರ್ಯ ಒಂದು ವಿಧದ್ದು, ಪೆಗಟಿಯದ್ದು ಮತ್ತೊಂದು ವಿಧದ್ದು. ಆಯಾ ವಿಧದ ಸೌಂದರ್ಯದಲ್ಲಿ ಅವರವರೇ ಅತ್ಯುತ್ತಮರೆಂದು ನನ್ನ ನಂಬಿಕೆ. ನನ್ನ ಈ ನಂಬಿಕೆಗೆ ಸಾಕಷ್ಟು ಕಾರಣವೂ ಇದೆ: ನಮ್ಮ ಬೈಠಖಾನೆಯಲ್ಲಿರುವ ಕಾಲುಮಣೆಗೆ ಚಿತ್ರ ಕೆಲಸ ಮಾಡಿ ತಾಯಿಯು ಮುಚ್ಚಿದ್ದ ಮಖಮಲ್ಲಿನ ಕೆಂಪೂ ಪೆಗಟಿಯ ಕಾಂತಿಯೂ ಒಂದೇ ತರದ್ದು. ನನ್ನ ಮೆಚ್ಚಿಗೆಯ ಸೌಂದರ್ಯವನ್ನು ಒಪ್ಪದೆ, ಮೆಚ್ಚದೆ ಇರುವುದು ತಾನೆ ಹೇಗೆ?

“ನಾನು ಚೆಂದ! ನಾನು ಸುಂದರಿ! ಓ ದೇವರೇ! ಅದೆಲ್ಲಾ ಇರಲಿ, ಡೇವಿ, ನಿನ್ನ ತಲೆಗೆ ‘ಮದುವೆ’ ಹೊಕ್ಕಿದ್ದು ಹೇಗೆ?”
“ನಂಗೊತ್ತಿಲ್ಲ, ಪೆಗಟಿ – ಆದರೆ, ಈ ಪ್ರಶ್ನೆಗೆ ಉತ್ತರ ಕೊಡು. ಪೆಗಟೀ – ನೀನು ಒಂದೇ ಸರ್ತಿ ಒಬ್ಬನಿಗಿಂತ ಹೆಚ್ಚು ಗಂಡಂದಿರನ್ನು ಮದುವೆಯಾಗಬಾರದಲ್ಲ, ಪೆಗಟಿ” ಎಂದು ನಾನು ಪ್ರಶ್ನಿಸಿದೆ.
ಪೆಗಟಿಯು ಸ್ಪಷ್ಟವಾಗಿ ನುಡಿದಳು-
“ಖಂಡಿತವಾಗಿಯೂ ಕೂಡದು, ಡೇವಿ”
“ಮದುವೆಯಾದನಂತರ ಆ ಗಂಡ ಸತ್ತರೆ?” ನನ್ನ ಪ್ರಶ್ನೆ.
“ಮತ್ತೊಬ್ಬನನ್ನು ಆಗಬಾರದು ಎಂದಿಲ್ಲ – ಅದು ಅವರವರ ಕುಷಿ.”
“ನಿನ್ನ ಅಭಿಪ್ರಾಯವೇನು ಪೆಗಟಿ?” ಎಂದು ಕೇಳಿ, ಪೆಗಟಿಯನ್ನು ಪರೀಕ್ಷಿಸುತ್ತಾ ಕಾದು ಕುಳಿತೆ. ನಾನು ಅವಳ ಗುಟ್ಟನ್ನು ಕಂಡುಹಿಡಿಯಲು ಹೊರಟಿದ್ದಂತೆ ತೋರಿದ್ದರಿಂದ ಅವಳು ಪುನಃ ಹೊಲಿಗೆ ಕೆಲಸವನ್ನು ಪ್ರಾರಂಬಿಸಿದಳು. ಆದರೆ, ನಾನು, ಏನಾದರೂ ಹಟ ಹಿಡಿದು ಕೇಳದೇ ಬಿಡೆನೆಂದು ಗ್ರಹಿಸುತ್ತಾ ಇರುವಂತೆಯೂ ತೋರುತ್ತಿದ್ದಳು, ಕೊನೆಗೆ –
“ನಾನು ಮದುವೆ ಆಗಲಿಲ್ಲ – ಆದ್ದರಿಂದ ನನಗೆ ಅದೆಲ್ಲಾ ಗೊತ್ತಿಲ್ಲ” ಅಂದಳು.

“ಏನು ಪೆಗಟಿ, ನಿನಗೆ ಸಿಟ್ಟಾಯಿತೇ? ನಾನೇನೂ ಮಾಡಲಿಲ್ಲ ನಿನಗೆ” ಎಂದು ನಾನು ಬೇಸರದಿಂದ ಅಂದೆ.
ಪೆಗಟಿಗೆ ಸಿಟ್ಟಾಯಿತೆಂದು ನಾನು ಗ್ರಹಿಸಿದ್ದೆ. ಆದರೆ ಅವಳು ಹೊಲಿಯುವುದನ್ನು ಬಿಟ್ಟು ನನ್ನ ಗುಂಗುರು ತಲೆಕೂದಲು ಸಮೇತ ತಲೆಯನ್ನು ತಬ್ಬಿ ಹಿಡಿದಳು. ಕೊನೆಗೆ ನನ್ನನ್ನು ಎತ್ತಿ ತಬ್ಬಿಕೊಂಡಳು. ಹೀಗೆ ತಬ್ಬಿದ ಭರದಲ್ಲಿ ಅವಳ ಜಾಕೆಟ್ಟಿನ ಹಿಂಬದಿಯ ಗುಂಡಿಗಳು ಸಿಡಿದು ದೂರಕ್ಕೆ ಹಾರಿದುವು. ಈ ವಿಧದ ಗುಂಡಿಗಳ ಸ್ಫೋಟನ ನನಗೊಂದು ಅಪರೂಪದ್ದಾಗಿರಲಿಲ್ಲ. ನನ್ನನ್ನು ಅವಳು ಅಪ್ಪಿದಾಗಲೆಲ್ಲ ಈ ರೀತಿ ಗುಂಡಿಗಳು ಸಿಡಿಯುತ್ತಿದ್ದುವು. ನನ್ನನ್ನು ಸಂತೋಷಗೊಳಿಸಲೋಸ್ಕರವೋ ಏನೋ ಪೆಗಟಿ ಅಂದಳು –
“ಈಗ ಬಸಳೆ ಕುರಿತು ಸ್ವಲ್ಪ ಹೇಳು.” ಹಿಂದೆ ಮೊಸಳೆಯನ್ನು ಕುರಿತಾಗಿ ಪುಸ್ತಕ ಓದಿದ್ದು ಸರಿಯಾಗಲಿಲ್ಲವೆಂದು ನನಗೆ ಸ್ಪಷ್ಟವಾಯಿತು.

ಮೊದಲು ಇಲ್ಲದಿದ್ದ ಶ್ರದ್ಧೆ ಪೆಗಟಿಗೆ ಮೊಸಳೆಯನ್ನು ಕುರಿತು ಈಗ ಉಂಟಾದುದು ಹೇಗೆ? ಪೆಗಟಿ ನನ್ನನ್ನು ಹೀಗೇಕೆ ನೋಡುತ್ತಿದ್ದಾಳೆ? ಇವೆಲ್ಲಾ ನನಗೆ ಅರ್ಥವಾಗದ ಸಮಸ್ಯೆಗಳಾಗಿ ತೋರಿದುವು. ಮೊಸಳೆಯ ಪಾಠವನ್ನು ಪುನಃ ಶ್ರದ್ಧೆಯಿಂದ ನಾನು ಓದಿದೆ. ಭಯಂಕರವಾದ ಮೊಸಳೆಗಳಾದ್ದರಿಂದ ಬಹು ಎಚ್ಚರದಿಂದ ಓದಿದೆ. ತಮ್ಮ ಮೊಟ್ಟೆಗಳನ್ನು ಅವುಗಳು ಮರಳಲ್ಲಿ ಹೂತಿಡುತ್ತಿದ್ದುದನ್ನು ಅಡಗಿ ನೋಡಿದೆ. ಸೂರ್ಯನ ಶಾಖದಿಂದ ಮೊಟ್ಟೆಗಳೊಡೆದು ಒಳಗಿನ ಮೊಸಳೆಗಳು ನಮ್ಮನ್ನು ಅಟ್ಟಿಬರುವಾಗ ಮಳಲ ಮೇಲೆ ಅಡ್ಡಡ್ಡವಾಗಿ ಓಡಿದ್ದಾಯ್ತು. ಮೊಸಳೆಗಳ ದೇಹರಚನೆಯ ಅಡಚಣೆಯಿಂದ ಅವು ನಮ್ಮನ್ನು ಹಿಂಬಾಲಿಸಿ ಹಿಡಿಯಲಾರದಿದ್ದಾಗಲೇ ಊರಿನವರು ಓಡಿಬಂದರು. ಅವರನ್ನೆಲ್ಲ ಕಂಡು ನೀರಕಡೆಗೆ ಓಡುತ್ತಿದ್ದ ಮೊಸಳೆಗಳ ಬಾಯಿಗೆ ಕಲ್ಲು, ಮರ, ಮಣ್ಣನ್ನು ತುಂಬಿ ಅವನ್ನು ಕೊಂದೆವು. ನನ್ನಷ್ಟೆ ಶೌರ್ಯದಿಂದ ಪೆಗಟಿಯೂ ಈ ಎಲ್ಲಾ ಕೆಲಸಗಳನ್ನು ಮಾಡಿರುವಳೋ ಇಲ್ಲವೋ ಎಂದು ನಾನು ಹೇಳಲಾರೆ. ನಾನಂತೂ ಮೈಮರೆತು ಆವೇಶದಿಂದಲೇ ಈ ಕೆಲಸಗಳನ್ನು ಮಾಡಿದೆ. ಪೆಗಟಿಯು ಮೊಸಳೆಯನ್ನು ಅಷ್ಟರಲ್ಲೇ ಮರೆತಂತೆ ತೋರಿದಳು.

ಮೊಸಳೆ ಕಥೆಯನ್ನು ಬಿಟ್ಟು ಇನ್ನೊಂದನ್ನು ಪ್ರಾರಂಭಿಸುವಷ್ಟರಲ್ಲಿ ಹಿತ್ತಲಿನ ಬಾಗಿಲು ತೆಗೆದ ಶಬ್ದ ಕೇಳಿಸಿತು. ಬಾಗಿಲವರೆಗೆ ಹೋಗಿ ನೋಡುವಾಗ್ಗೆ ತಾಯಿಯು ಯಾರೋ ಒಬ್ಬ ಗೃಹಸ್ಥರ ಜತೆಯಲ್ಲಿ ಬರುತ್ತಿದ್ದಳು. ಆ ಗೃಹಸ್ಥರು ಕಳೆದ ಆದಿತ್ಯವಾರವೂ, ನಮ್ಮ ಮನೆವರೆಗೆ, ಇಗರ್ಜಿಯಿಂದ ನಾವು ಬರುವಾಗ ಜತೆಯಲ್ಲಿದ್ದರು. ಬಲವಾಗಿ ಬೆಳೆದಿದ್ದ ಅವರ ಕಪ್ಪು ತಲೆಕೂದಲು ಮತ್ತೂ ಕಪ್ಪು ಮೀಸೆಗಳಿಂದ ಅವರನ್ನು ನಾನು ಚೆನ್ನಾಗಿ ಗುರುತಿಸಿದೆ. ಬಂದವರು ಯಾರೆಂದು ನಾನು ಅತ್ತ ಕಡೆ ಹೋಗಿ ನೋಡಿದಾಗ ನನ್ನ ತಾಯಿಯು ಯಾವತ್ತು ಇದ್ದದ್ದಕ್ಕಿಂತ ಹೆಚ್ಚು ಚಂದವಾಗಿ ಕಾಣುತ್ತಿದ್ದಳು.

ಅವರನ್ನು ನೋಡಲು ಹೋಗಿದ್ದ ನನ್ನನ್ನು ತಾಯಿಯು ಎತ್ತಿ ಮುದ್ದಾಡಿದಾಗ ನಾನು ಒಬ್ಬ ಮಹಾರಾಜನಿಗಿಂತಲೂ ಭಾಗ್ಯಶಾಲಿಯೆಂದು (ಸಾಧಾರಣ ಈ ಅಭಿಪ್ರಾಯದ ಮಾತು ಅದಾಗಿರಬೇಕೆಂದು ನನಗೆ ಬುದ್ಧಿ ಬಂದಮೇಲೆ ನಿಶ್ಚೈಸಿಕೊಂಡೆ) ಆ ಕಪ್ಪುಮೀಸೆಯ ಗೃಹಸ್ಥರು ಅಂದರು.
ಗೃಹಸ್ಥರ ಮಾತು ನನಗರ್ಥವಾಗದೆ ಅವರಂದದ್ದೇನೆಂದು ತಾಯಿಯನ್ನು ಅಲ್ಲೇ ವಿಚಾರಿಸಿದೆ. ಯಾರೂ ಉತ್ತರ ಕೊಡಲಿಲ್ಲ. ಅದರ ಬದಲು ಗೃಹಸ್ಥರು ನನ್ನ ತಲೆಯನ್ನು ಸವರಿ ನನ್ನ ಕೈಯ್ಯನ್ನೊತ್ತಿದರು. ಹಾಗೆ ನನ್ನ ಕೈ ಒತ್ತುವಾಗ ನನ್ನ ತಾಯಿಯ ಕೈಯನ್ನೂ ಅವರು ಮುಟ್ಟಿದರು. ನನಗೆ ಆ ಮನುಷ್ಯನಾಗಲೀ, ಅವರ ದಪ್ಪ ಸ್ವರವಾಗಲೀ ಮೆಚ್ಚಲಿಲ್ಲ. ಅವರು ನನ್ನ ತಾಯಿಯನ್ನು ಮುಟ್ಟುವುದನ್ನು ಅಂತರಂಗದಲ್ಲೇ ನಿಷೇಧಿಸುತ್ತಾ ಅವರ ಕೈಯನ್ನು ನನ್ನಿಂದ ಸಾಧ್ಯವಾದಷ್ಟು ದೂರ ನೂಕಿದೆ. ಈ ಕುರಿತು ನನಗೆ ಹಟವೇ ಇತ್ತು.
“ಡೇವಿಡ್, ಹಾಗೆ ಮಾಡಬಾರದು” ಅಂದಳು ತಾಯಿ.

“ಮಗುವಿಗೆ ಅಷ್ಟೊಂದು ಮಮತೆ ನಿನ್ನ ಮೇಲಿರುವುದು ಆಶ್ಚರ್ಯವಲ್ಲ” ಅಂದರು ಅವರು.
ಈ ಮಾತು ಕೇಳಿದ್ದರಿಂದಲೋ ಏನೋ ತಾಯಿಯ ಮುಖದಲ್ಲಿ ಬಹುಬೇಗನೆ ಚಂದದ ಕಳೆಯೇರಿತು. ಗೃಹಸ್ಥರೊಡನೆ ಮರ್ಯಾದೆಯಿಂದಿರಬೇಕೆಂದು ನನಗೆ ಬುದ್ಧಿ ಹೇಳುತ್ತಾ, ಬಂದ ಗೃಹಸ್ಥರನ್ನು ಕಳುಹಿಸಿಕೊಡಲೋಸ್ಕರ ಹಸ್ತಲಾಘವವನ್ನು ಕೊಡಲು ತಾಯಿಯು ಕೈ ನೀಡಿದಳು. ಅವರು ತಾಯಿಯ ಹಸ್ತವನ್ನು ಸ್ವೀಕರಿಸಿ ಹಸ್ತ ಲಾಘವವನ್ನೀಯುತ್ತಿದ್ದಾಗ ನನ್ನ ದೃಷ್ಟಿ ಎಲ್ಲಿದೆಯೆಂದು ತಾಯಿಯು ನನ್ನನ್ನು ಓರೆಗಣ್ಣಿನಿಂದ ನೋಡುತ್ತಿದ್ದುದು ನನಗೆ ಈಗಲೂ ಜ್ಞಾಪಕವಿದೆ.
ಅವರು ನನ್ನನ್ನು ನೋಡಿ, “ಮಗುವೇ ‘ನಮಸ್ಕಾರ ಎಂದಂದುಕೊಳ್ಳುವ ನಾವೂ” ಅಂದರು.
“ನಮಸ್ಕಾರ” ಎಂದಂದೆ ನಾನು. ಆದರೆ ಹಸ್ತ ಲಾಘವಕ್ಕಾಗಿ ಅವರು ಕೈ ನೀಡಿದಾಗ, ನನ್ನ ಬಲಗೈ ತಾಯಿಯ ಕೈಯ್ಯಲ್ಲಿದ್ದುದರಿಂದ, ಎಡಗೈಯನ್ನು ನೀಡಿದೆ. ತಾಯಿಗೆ ಅದು ಸಮಾಧಾನವಾಗದೆ ನನ್ನ ಬಲಗೈ ನೀಡುವಂತೆ ಹೇಳಿದಳು. ನಾನು ಮಾತ್ರ ಹಟ ಹಿಡಿದು ಎಡಗೈಯನ್ನು ಮಾತ್ರ ನೀಡಿದೆ.
ಎಡಗೈಯನ್ನು ಕುಲುಕಿ ಹುಡುಗ ಬಲು ಧೈರ್ಯಸ್ಥ ಎಂದಂದುಕೊಂಡು ಆ ಗೃಹಸ್ಥರು ಅವರು ಬಂದಿದ್ದ ದಿಕ್ಕಿಗೇ ಹೋದರು. ಆದರೂ ಹೆಚ್ಚು ದೂರ ಹೋಗುವ ಮೊದಲು ಅವರು ನಮ್ಮನ್ನು ಹಿಂತಿರುಗಿ ನೋಡಿದರು. ಆಗ ನನಗೆ ಕಂಡ ಅವಲಕ್ಷಣದ ಮುಖವನ್ನು ನಾನೆಂದಿಗೂ ಮರೆಯಲಾರೆ.

(ಎರಡನೇ ಅಧ್ಯಾಯ ಮುಂದುವರಿಯಲಿದೆ)