ಅಧ್ಯಾಯ ಎಂಟು
[ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಹತ್ತನೇ ಕಂತು
ನಮ್ಮ ಬಂಡಿ ಯಾರ್ಮತ್ತಿಗೆ ತಲಪುವಾಗ ಪೂರ್ತಿ ಬೆಳಗಾಗಿರಲಿಲ್ಲ. ಬಂಡಿ ನಿಂತಿದ್ದು `ಡೋಲ್ಫಿನ್’ ಚಿತ್ರವಿದ್ದ ಒಂದು ಹೋಟೆಲಿನ ಎದುರು. ಈ ಹೋಟೆಲಿನಲ್ಲಿ ಎಲ್ಲವೂ ಡೋಲ್ಫಿನ್ ಸಮೇತದ್ದಾಗಿದ್ದುವು. ಡೋಲ್ಫಿನ್ ಮೇಜದ ಬಳಿ ಕುಳಿತು ಡೋಲ್ಫಿನ್ ಕಾಫಿಯನ್ನು ಕುಡಿದೆನು. ಡೋಲ್ಫಿನ್ ಹಾಸಿಗೆಯಲ್ಲಿ ಡೋಲ್ಫಿನ್ ರಗ್ಗು ಹೊದ್ದು ಮಲಗಿದೆನು. ಇದು ಚಳಿ ಸಮಯವಾಗಿದ್ದುದರಿಂದ ಡೋಲ್ಫಿನ್ ಸೌಕರ್ಯಗಳು ಬಹು ಅಗತ್ಯವಾಗಿದ್ದುವು. ನೀಲನಂದಿ ಹೋಟೆಲಿನ ಆಳಿನ ಜ್ಞಾಪಕ ನನಗೆ ಈಗಲೂ ಇದ್ದುದರಿಂದ ಈ ಹೋಟೆಲು ಸಿಕ್ಕಿದ್ದು ಬಹು ಅನುಕೂಲವೇ ಆಯಿತು. ಬೆಳಗ್ಗೆ ಒಂಬತ್ತು ಘಂಟೆಗೆ ಬಾರ್ಕಿಸನ ಬಂಡಿ ಬಂತು. ನಾನು ನನ್ನ ಸಾಮಾನುಗಳ ಸಮೇತ ಬಂಡಿಯನ್ನೇರಿ ಬ್ಲಂಡರ್ಸ್ಟನ್ ಕಡೆಗೆ ಮುಂದರಿಸಿದೆವು. ಬಾರ್ಕಿಸನ ದಡ್ಡ ಕುದುರೆ ಮೊದಲಿನಂತೆಯೇ ಬಹು ಮಂದಗಮನದಿಂದ ಸಾಗುತ್ತಿತ್ತು. ಸಂಜೆಯಾಗುವ ಸಮಯಕ್ಕೆ ದೂರದಿಂದಲೇ ನಮ್ಮ ಮನೆ ಸಮೀಪದ ಎಲ್ಮ್ ಮರಗಳು ತೋರತೊಡಗಿದುವು. ಬಾರ್ಕಿಸನು ನನ್ನಲ್ಲಿ ಪರಿಚಯವಿದ್ದವನಂತೆ ಕಾಣಿಸಿಕೊಳ್ಳಲಿಲ್ಲ. ಅವನಿಗೆ ಸಿಟ್ಟಾಗಿರಬಹುದೆಂದು ಹೆದರಿ ನಾನು ಪೆಗಟಿಗೆ ಪತ್ರ ಬರೆದಿದ್ದ ಸಂಗತಿಯನ್ನು ತಿಳಿಸಿದೆ. ಹೀಗೆ ತಿಳಿಸಿದುದರಿಂದ ಅವಳಿಂದ ಅವನಿಗೆ ಉತ್ತರ ಬರಲಿಲ್ಲವೆಂದು ಅವನು ನನಗೆ ತಿಳಿಸಿದನು. ಮದುವೆಯಾಗುವ ಇಚ್ಛೆಯಿಂದ ಪತ್ರ ಬರೆದುದಕ್ಕೆ ಯಾವ ಉತ್ತರವೂ ಬರದಿದ್ದಾಗ ಒಬ್ಬನು ಆ ರೀತಿ ಮೌನವಾಗಿರುವುದು ಸ್ವಾಭಾವಿಕವೆಂದು ನಾನು ಗ್ರಹಿಸಿಕೊಂಡೆ. ಮೊದಲೇ ಹೆಚ್ಚಿನ ಮೌನದಲ್ಲಿದ್ದವನು ಈಗಲಂತೂ ಪರಿಪೂರ್ಣ ಮೌನವಾಗಿ ಕುಳಿತಿದ್ದನು. ಆದರೆ, ನಾನು ಅವನನ್ನು ಅಷ್ಟಕ್ಕೇ ಬಿಡದೆ, ಇನ್ನಾದರೂ ಉತ್ತರ ಬರಬಾರದೇಕೆಂದು ತರ್ಕಿಸುತ್ತಾ, ಉತ್ತರ ತರಿಸುವ ಜವಾಬ್ದಾರಿಯನ್ನೇ ವಹಿಸಿಕೊಂಡೆನು.
ಕೊನೆಗೆ ಮನೆಯ ಸಮೀಪದಲ್ಲೇ ಬಂಡಿ ಬಂದು ನಿಂತಿತು. ಅಂದಿನ ಸಂಜೆಯಲ್ಲಿ ಸ್ವಲ್ಪ ಬಿರುಗಾಳಿ ಸ್ವಭಾವದಲ್ಲಿ ಗಾಳಿ ಬೀಸುತ್ತಿತ್ತು. ನಮ್ಮ ಮನೆ ಸಮೀಪದ ಆ ದೊಡ್ಡ ಮರಗಳು ಬೀಸುತ್ತಾ, ಒಂದರೊಳಗೆ ಒಂದು ನುಗ್ಗಿ ಹೊರಹೊರಡುವಂತೆ ಬೀಸಿ, ಬಗ್ಗಿ, ನೆಟ್ಟಗಾಗಿ ಪುನಃ ಬೀಸುತ್ತಾ, ಮುಷ್ಟಾಮುಷ್ಟಿ ಯುದ್ದದಲ್ಲೇ ಇದ್ದಂತೆ ತೋರಿದುವು. ಆಗಿನ ಸಮಯ ಮತ್ತು ಸನ್ನಿವೇಶಗಳನ್ನು ನೋಡಿ ನಮ್ಮ ಮನೆಯಲ್ಲಿ ನನ್ನನ್ನು ಹೇಗೆ ಸ್ವಾಗತಿಸಲಿರುವರೋ – ಅಂಥಾ ಕ್ರೂರ ಬಾಂಧವ್ಯ ಮಾತ್ರ ಇರಬಹುದೋ – ಎಂದು ಹೆದರಿದೆ.
ಮನೆಯೊಳಗೆ ಮರ್ಡ್ಸ್ಟನ್ ಅಣ್ಣ ತಂಗಿಯರಿರಬಹುದೆಂಬ ಭೀತಿಯಿಂದಲೇ ಒಳಗೆ ಹೋದೆ. ಪುಣ್ಯವಶದಿಂದ ಅವರಿಬ್ಬರೂ ಅಲ್ಲಿರಲಿಲ್ಲ. ತನ್ನ ತಾಯಿಯ ಸವಿಮಾತುಗಳು ಮುಖ್ಯ ಬೈಠಖಾನೆಯಿಂದ ಕೇಳಿಸುತ್ತಿದ್ದುವು. ಆ ಪ್ರೀತಿಯ, ಇಂಪಾದ, ಮೃದು ಸ್ವರವನ್ನು ಆರು ತಿಂಗಳ ಹಿಂದೆ ಮಾತ್ರ ಕೇಳಿದ್ದ ನನಗೆ ಆದ ಆನಂದ ಅಷ್ಟಿಷ್ಟಲ್ಲ. ನಾನು ತಾಯಿಯಿದ್ದ ಕೋಣೆಯನ್ನು ಪ್ರವೇಶಿಸಿದೆನು. ತಾಯಿ ಒಂದು ಚಿಕ್ಕ ಮಗುವನ್ನು ತೊಡೆಯ ಮೇಲಿಟ್ಟುಕೊಂಡು ಆಡಿಸುತ್ತಾ, ತನಗೆ ತಾನೇ ಏನೋ ಒಂದು ಸಂತೋಷದ ಪದವನ್ನು ಹೇಳಿಕೊಳ್ಳುತ್ತಿದ್ದಳು. ತಾಯಿ ಹಾಡುತ್ತಿದ್ದ ಪದ ನಾನು ಚಿಕ್ಕದಾಗಿದ್ದಾಗ ಹಾಡಿದ ಪದವೇ ಎಂದು ಗ್ರಹಿಸತೊಡಗಿದೆನು. ಈ ಗ್ರಹಿಕೆ ತಪ್ಪಾಗಿರಲೂಬಹುದು. ಆದರೆ, ಇಂಥ ಗ್ರಹಿಕೆಗೇ ಆದರೂ ಹಿಂದಿನ ಪದ ಮತ್ತೂ ಸನ್ನಿವೇಶಗಳ ನೆನಪಿನ ಆಧಾರವಾದರೂ ಇರಲೇಬೇಕೆಂಬುದು ನಿರ್ವಿವಾದವಷ್ಟೆ. ಆ ಮಗುವನ್ನು ನೋಡಿ, ತಾಯಿಯ ಮೃದುಗಾನವನ್ನು ಕೇಳಿ ನಾನು ಭಾವನಾಪರವಶತೆಯಲ್ಲಿ ನನ್ನನ್ನೇ ಮರೆತುಕೊಂಡೆ. ಆ ಚಿಕ್ಕ ಮಗುವೇ ನಾನೆಂದೂ ನನ್ನನ್ನೆ ತಾಯಿ ಪದ ಹೇಳಿ ಆನಂದಿಸುತ್ತಿದ್ದಾಳೆಂದೂ ತಿಳಿದು ಆನಂದಪರವಶನಾದೆ. ಆದರೆ ನನ್ನ ಕಾಲಸಪ್ಪಳ ಕೇಳಿ ತಾಯಿ ಹಿಂತಿರುಗಿ ನೋಡಿದಳು. ನನ್ನನ್ನು ಕಂಡೊಡನೆ ಆ ಮಗುವಿನ ಸಮೇತ ಎದ್ದು ಬಂದು ನನ್ನನ್ನು ಅಪ್ಪಿಕೊಂಡಳು. ಒಂದು ಕ್ಷಣಕಾಲ ನಾವು ಮೂವರ ಹೃದಯಗಳೂ ಒಂದಾಗಿ ಆನಂದಿಸಿದೆವು. ಈ ಆನಂದದ ಸುಗ್ಗಿಯನ್ನು ಪೂರ್ಣಗೊಳಿಸಲು ಪೆಗಟಿಯೂ ಬಂದಳು – ಬಂದದ್ದೇ ತಡ ನನ್ನನ್ನೂ, ನನ್ನ ತಾಯಿಯನ್ನೂ ಅಪ್ಪಿಕೊಂಡು ಆನಂದಬಾಷ್ಪ ಸುರಿಸಿದಳು. ಈ ಸಂತೋಷದ ಶಿಖರದಲ್ಲಿದ್ದಾಗಲೇ, ಸದ್ಯ ಈಚೆಗೆ ಹೊಲಿದು ಸರಿಪಡಿಸಿಕೊಂಡಿದ್ದ ಲಂಗದ ಗುಂಡಿಗಳನ್ನು ಪುನಃ ಕಳೆದುಕೊಂಡಳು. ಅಂದಿನ ಸಂಧ್ಯಾಸಮಯ ಎಷ್ಟೊಂದು ಆನಂದಮಯವಾಗಿತ್ತೆಂದು ನಾನು ಹೇಳಿ ಪೂರ್ಣ ಚಿತ್ರಿಸಲಾರೆನು.
ನೆರೆಮನೆಗೆ ಹೋಗಿದ್ದ ಮರ್ಡ್ಸ್ಟನ್ ಅಣ್ಣ ತಂಗಿಯರು ಬರಲು ತುಂಬಾ ರಾತ್ರಿಯಾಗಬಹುದೆಂದೂ, ಅವರು ಬರುವ ಮೊದಲೇ ನಾವು ಊಟಮಾಡಲು ಅವರು ಅನುಮತಿಯಿತ್ತಿದ್ದರೆಂದೂ ತಿಳಿದು ನಾವು ಊಟ ಮುಗಿಸಿದೆವು. ನನ್ನ ಹಳೆ ಬಟ್ಟಲು, ಹಳೆ ಚಮಚ, ಕತ್ತರಿಗಳನ್ನಿಟ್ಟುಕೊಂಡು, ನನ್ನ ಚಿಕ್ಕಂದಿನ ಕಾಲದಲ್ಲು ಊಟಮಾಡುತ್ತಿದ್ದಂತೆಯೇ, ನಾವು ಮೂವರೂ ಸಂತೋಷದಿಂದಲೇ ಊಟಮಾಡಿದೆವು.
ಊಟವಾದನಂತರ ಪೂರ್ವ ಕ್ರಮದಲ್ಲೇ ಪೆಗಟಿ ಹೊಲಿಗೆ ಸಾಮಾನುಗಳನ್ನಿಟ್ಟುಕೊಂಡು ನನ್ನೆದುರು ಕುಳಿತಳು. ನನ್ನಿಂದ ಅದೇ ಹಳೆಯ ಮೊಸಳೆ ಕಥೆಯನ್ನು ಓದಿಸಿ ಕೇಳಿದಳು. ಮತ್ತೆ ನನ್ನ ಶಾಲೆಯ ವರ್ತಮಾನಗಳನ್ನೆಲ್ಲ ವಿವರವಾಗಿ ಕೇಳಿದಳು. ಕ್ರೀಕಲರ ಗುಣ, ಅವರನ್ನು ಕುರಿತಾದ ನನ್ನ ದುಃಖಮಯ ಪ್ರಸಂಗಗಳನ್ನು ನಾನು ಹೇಳುತ್ತಿದ್ದಾಗ ಪೆಗಟಿ ಕಣ್ಣೀರು ಸುರಿಸುತ್ತಿದ್ದಳು. ಕೊನೆಗೆ ರಜ ಸಿಕ್ಕಿದ ವಿಷಯವನ್ನೂ, ಮೊದಲಿನ ಬಾರ್ಕಿಸನ ಬಂಡಿ ಪ್ರಯಾಣದ ಅನುಭವವನ್ನೂ, ಬಾರ್ಕಿಸ-ಪೆಗಟಿಯರಿಗೆ ಸಂಬಂಧಿಸಿದ ವಿಷಯವನ್ನೂ ತಿಳಿಸಿದೆ. ಬಾರ್ಕಿಸನ `ಸದಾ ತಯಾರು’ ಎಂಬ ಮಾತುಗಳ ಅರ್ಥ ತಾಯಿಗೆ ಆಗದೆ –
“ತಯಾರು ಯಾವುದಕ್ಕಂತೆ – ಮತ್ತೂ ಯಾರಂತೆ” ಎಂದು ಕೇಳಿದಳು.
ಇದಕ್ಕೆ ಪೆಗಟಿಯೇ ಉತ್ತರ ಕೊಟ್ಟಳು –
“ನಾನು ಅವನನ್ನು ಮದುವೆಯಾಗಬೇಕಂತೆ – ಮದುವೆಗೆ ಅವನು ತಯಾರಂತೆ” ಅಂದಳು ಪೆಗಟಿ.
ತಾಯಿ ಕೇಳಿದಳು – “ಆಗಬಾರದೇಕೆ?”
“ಅದು ಸಾಧ್ಯವಿಲ್ಲ”, ಎಂದು ಪೆಗಟಿ ಹೇಳುತ್ತಾ, ಸಂದರ್ಭಗಳನ್ನು ವಿವರಿಸತೊಡಗಿದಳು –
“ಅದು ಸಾಧ್ಯವಿಲ್ಲ – ನಾನು ಮದುವೆಯಾಗಿ ಇಲ್ಲಿಂದ ಹೋದರೆ ನಿಮಗೆ ಮತ್ತೆ ಯಾರಿದ್ದಾರೆ, ನಿಮ್ಮವರಾಗಿ? ನಾನು ಇಲ್ಲಿಂದ ಹೋದರೆ ಮಿಸ್ ಮರ್ಡ್ಸ್ಟನ್ನಳಿಗೆ ಸಂತೋಷವಾಗಬಹುದು, ನಿಜ. ಅಷ್ಟೊಂದಾದರೂ ನನ್ನ ಕಡೆಯ ಸಂತೋಷವನ್ನು ನಾನು ಅವಳಿಗೆ ಕೊಡಲಾರೆ – ಅಷ್ಟಕ್ಕಾಗಿಯಾದರೂ ನಾನು ಮದುವೆಯಾಗುವುದಿಲ್ಲ.”
“ಅಯ್ಯೋ ಹುಚ್ಚೀ, ಮಿಸ್ ಜೇನ್ ಮರ್ಡ್ಸ್ಟನ್ ನಿನಗೇನು ಮಾಡಿದ್ದಾಳೆ? ನೀನು ನನ್ನ ಹಿತಕ್ಕಾಗಿ ಇರುವಂತೆಯೇ ಅವಳೂ ನನ್ನ ಹಿತಕ್ಕಾಗಿಯೇ ಇರುವಳು” ಎಂದು ತಾಯಿ ನಗಾಡುತ್ತಾ ನುಡಿದಳು.
“ಅವಳು ನಿನ್ನ ಹಿತನೋಡುವ ಮಾತು ಹಾಗಿರಲಿ – ನಾನು ಮದುವೆಯಾಗುವುದಿಲ್ಲ, ಅಷ್ಟೇ” ಎಂದುತ್ತರವಿತ್ತು ಪೆಗಟಿ ದಿಟ್ಟತನದಿಂದ ಮೌನವಾಗಿ ಕುಳಿತಳು. ಆದರೂ, ಸ್ವಲ್ಪ ಆಲೋಚಿಸಿ ಕೇಳಿದಳು –
“ಆ ಹೊತ್ತು ಬಂದ ಬೆಟ್ಸಿ ಟ್ರಾಟೂಡ್ ಬರಲಾರಳೋ?”
“ಆ ಹೊತ್ತು ಕೋಪದಿಂದ ಹೋದವಳು ವಾಪಾಸು ಬರಲಿಲ್ಲ – ಈಗ ಅವಳು ಸಮುದ್ರದ ಕರೆಯಲ್ಲಿ ಏಕಾಂಗಿಯಾಗಿ ಜೀವಿಸುತ್ತಿರುವಳು – ಅವಳು ಬರುವವಳಲ್ಲ – ಅವಳಿಗೆ ಡೇವಿಡ್ಡನ ಮೇಲೆ ಕೋಪವಷ್ಟೆ” ಅಂದಳು ತಾಯಿ.
“ಆದರೆ, ಡೇವಿಡ್ಡನಿಗೆ ಒಬ್ಬ ತಮ್ಮ ಹುಟ್ಟಿರುವುದರಿಂದ, ಇನ್ನು ಡೇವಿಡ್ಡನನ್ನು ಪ್ರೀತಿಸಬಹುದಷ್ಟೆ” ಎಂದು ನಿಷ್ಕಪಟ ಬುದ್ಧಿಯಿಂದ ಪೆಗಟಿ ಕೇಳಿದಳು.
ಬೆಟ್ಸಿ ಟ್ರಾಟೂಡಳಿಗೆ ನನ್ನ ತಾಯಿ ಹೆತ್ತ ಮಗುವಿನ ಮೇಲೆ ಕೋಪವೆಂದಾದ ಪಕ್ಷಕ್ಕೆ, ಸದ್ಯ ಜನಿಸಿರುವ ಮಗುವಿನ ಮೇಲಕ್ಕೆ ಆ ಕೋಪವನ್ನು ವರ್ಗಾಯಿಸಬಹುದಷ್ಟೆ ಎಂಬ ಒಂದು ವಿಧದ ತರ್ಕದಿಂದ ಪೆಗಟಿ ಹಾಗೆ ಮಾತಾಡಿದ್ದಳು. ಏನಿದ್ದರೂ, ಪೆಗಟಿ ನನ್ನ ತಾಯಿ, ಮತ್ತು ನನ್ನ ಮೇಲಿನ ಸುಖ ಮತ್ತೂ ಹಿತಕ್ಕಾಗಿ ಮಾತ್ರ ಹಾಗೆ ಮಾತಾಡಿದ್ದಳೆಂಬುದು ಸ್ಪಷ್ಟವಾಗಿತ್ತು. ಆದರೆ ತಾಯಿಗೆ ಆ ಮಾತುಗಳು ಅರ್ಥವಾಗದೆ, ಅವಕ್ಕೆ ಅಪಾರ್ಥವನ್ನೇ ಕಲ್ಪಿಸಿಕೊಂಡು, ಬಹು ದುಃಖದಿಂದಲೂ, ಸಿಟ್ಟಿನಿಂದಲೂ ಪೆಗಟಿಗೆ ಕಠಿಣವಾಗಿ ಉತ್ತರಕೊಟ್ಟಳು.
“ಪೆಗಟೀ, ಕ್ರೂರಿ, ಹುಚ್ಚಿ – ಈ ಪುಟ್ಟ ಹುಡುಗ ಯಾರಿಗೆ ಏನು ಮಾಡಿದ್ದಾನೆ. ಈ ಹಸುಗೂಸನ್ನು ಬೆಟ್ಸಿ ಟ್ರಾಟೂಡಳಿಗೆ ಬಲಿಕೊಟ್ಟು ಡೇವಿಡ್ಡನನ್ನು ಉಳಿಸಬೇಕೆಂದು – ಇವರಿಬ್ಬರೊಳಗೆ – ಭೇದ ಕಲ್ಪಿಸಲು ಪ್ರಾರಂಭಿಸಿದೆಯೇನು? ನೀನೊಬ್ಬಳು ಮಾತ್ರ ನನ್ನ ಹಿತಚಿಂತಕಳೆಂದು ಗ್ರಹಿಸಿಕೊಂಡಿರುವೆಯೇನು? ಮಿ. ಮತ್ತು ಮಿಸ್ ಮರ್ಡ್ಸ್ಟನ್ನರು ಸ್ವಲ್ಪ ಕಠಿಣಸ್ಥರೆಂದು ತೋರುವುದು ನಿಜವಾದರೂ ಅವರೇನೂ ದೂರದವರಲ್ಲ – ಅವರೂ ನಮ್ಮ ಹಿತಚಿಂತಕರೇ ಹೌದು” – ಎಂದು ಮೊದಲಾಗಿ ಹೇಳುತ್ತಾ ತಾಯಿ ಅಳತೊಡಗಿದಳು.
ತಾಯಿಗೆ ಬುದ್ಧಿಯೇ ಶೂನ್ಯವಾಗತೊಡಗಿತ್ತೆಂದು ಹೇಳಲು ಬೇಸರವಾಗುತ್ತದೆ; ಅವಳ ವ್ಯಕ್ತಿತ್ವವೆಲ್ಲ ನಾಶವಾಗಿತ್ತು. ಅವಳ ದೇಹ, ದೇಹದ ರೂಪ ಮಾತ್ರ ಉಳಿದು, ಅವಳ ವ್ಯಕ್ತಿತ್ವವೆಲ್ಲ ಮರ್ಡ್ಸ್ಟನ್ ದ್ವಯರ ಮುಷ್ಟಿಯೊಳಗೆ ಅಡಗಿ ಪುಡಿಯಾಗಿತ್ತು. ಬುದ್ಧಿಶೂನ್ಯವಾದಾಗ ದುಃಖ ಬಂದಷ್ಟೇ ಬೇಗನೆ ಸಂತೋಷವೂ ಬರುವಂತೆ, ತಾಯಿಯು ಅತ್ತು ಮುಗಿಯುವುದರೊಳಗೆ ಪೆಗಟಿಯೊಡನೆ ರಾಜಿಯೂ ಆದಳು. ತನ್ನ ವ್ಯಕ್ತಿತ್ವ ನಾಶವಾದ ಅರಿವಿನ ಕಾರಣವಾಗಿ ಅದನ್ನು ಉಳಿಸುವ ಪ್ರಯತ್ನದಿಂದ ಒಮ್ಮೆ ಸಿಟ್ಟಾದರೂ, ಕೂಡಲೇ ತನ್ನ ಅಶಕ್ತತೆಯ ಅರಿವಿನಿಂದ ತನಗೆ ಸಹಾಯಕ್ಕೆ ಯಾರಾದರೂ ಬೇಕೆಂದು ಆಶಿಸಿ ಈ ರಾಜಿ ನಡೆದಿರಬೇಕು. ಪೆಗಟಿ ಕ್ಷಮೆ ಬೇಡಿದಳು. ಪುನಃ ಮೊಸಳೆ ಕಥೆ, ನನ್ನ ಶಾಲೆಯ ವರ್ತಮಾನ ಇವುಗಳನ್ನೆಲ್ಲ ಕೇಳತೊಡಗಿದರು. ಮಿ. ಪೆಗಟಿ ಮತ್ತೂ ಹೇಮರು ನಮ್ಮ ಶಾಲೆಗೆ ಬಂದ ವರ್ತಮಾನವನ್ನೂ ತಿಳಿಸಿದೆನು. ಪೆಗಟಿಗೆ ಈ ವರ್ತಮಾನ ಕೇಳಿ ಬಹಳ ಸಂತೋಷವಾಯಿತು. ನನ್ನ ಜೀವನ ವೃತ್ತಾಂತದ ಒಂದು ವಿಶೇಷ ಭಾಗವು ಇಲ್ಲಿಗೆ ಮುಗಿಯಿತೆಂದರೂ ಸರಿಯಾಗಬಹುದು,. ಅಂದಿನ ರಾತ್ರಿಯ ನಮ್ಮ ಮಾತು ಕಥೆ, ಸುಖದುಃಖ ಮಾತು – ಎಲ್ಲವೂ ನನಗೆ ಸದಾ ಸುಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿವೆ.
ರಾತ್ರಿ ಸ್ವಲ್ಪ ಸಮಯವಾದನಂತರ ಅಣ್ಣ ತಂಗಿಯರು ಬಂದರು. ಅವರು ಮನೆ ಸೇರುವ ಮೊದಲೇ ನಾನು ಮಲಗಿರುವುದು ಉತ್ತಮವೆಂದು ಅವರು ಬರುವ ಶಬ್ದ ಕೇಳಿದೊಡನೆ ನಾನು ನನ್ನ ಕೋಣೆಯನ್ನು ಸೇರಿದೆನು. ಅಷ್ಟರವರೆಗೆ ಪ್ರೇಮ, ಉತ್ಸಾಹ, ಸಂತೋಷಗಳಿಂದ ತುಂಬಿದ್ದ ಮನೆ ಅವರು ಪ್ರವೇಶಿಸಿದೊಡನೆ ದುಃಖ, ಭಯಭೀತಿಗಳಿಂದ ತುಂಬಿತು.
ಬೆಳಗಾದಮೇಲೆ, ನಿರ್ವಾಹವಿಲ್ಲದೆ, ಮಿ. ಮರ್ಡ್ಸ್ಟನ್ನರ ಭೇಟಿಯನ್ನು ಹೆದರಿಕೊಂಡೇ ಮಾಡಿದೆನು. ಅವರಿಗೆ ನಮಸ್ಕರಿಸಿ ಹಸ್ತಲಾಘವಕ್ಕಾಗಿ ಕೈ ನೀಡಿದೆನು. ಅವರ ಕೈಯ್ಯನ್ನು ನಾನು ಕಚ್ಚಿದ್ದನಂತರ ಪುನಃ ನೋಡಿದ್ದು ಇಂದೇ ಆಗಿತ್ತು. ಅವರ ಕೈಯ್ಯನ್ನು ಕುಲುಕುವಾಗ ನಾನು ಹಿಂದೆ ಕಚ್ಚಿದ್ದ ಸ್ಥಳ ಕೆಂಪಗೆ ಕಾಣುತ್ತಿತ್ತು. ಆದರೂ ಅವರು ನನ್ನನ್ನು ನಿರ್ದಯದ, ತಿರಸ್ಕಾರದ ಭಾವನೆಯಿಂದ ನೋಡಿದಾಗ ನನ್ನ ಮುಖ ಕೆಂಪಾದಷ್ಟು ಆ ಗಾಯ ಕೆಂಪಗಿರಲಿಲ್ಲವೆಂದು ನಾನು ತಿಳಿದಿದ್ದೆ. ನಾನು ಹೆದರಿಕೊಂಡೇ –
“ಅಂದಿನ ದುಷ್ಕೃತ್ಯಕ್ಕೆ ನನ್ನನ್ನು ದಯಮಾಡಿ ಕ್ಷಮಿಸಬೇಕು” ಎಂದೆನು.
“ಇಷ್ಟು ಹೇಳುವಷ್ಟಾದರೂ ನಿನಗೆ ಬುದ್ಧಿ ಬಂತಲ್ಲವೇ?” ಅಂದರು ಮಿ. ಮರ್ಡ್ಸ್ಟನ್ನರು.
“ಅತ್ತೆಯವರೇ ಕ್ಷೇಮವೇ” ಎಂದು ಅತ್ತೆ ಕಡೆ ನೋಡಿ ಕೇಳಿದೆ.
“ಇಷ್ಟಾದರೂ ವಿನಯ ಸ್ವಭಾವವು ನಿನ್ನೊಳಗಿತ್ತೇ” ಎಂದು ಅತ್ತೆ ಅಂದರು. ಮತ್ತೂ ಹಸ್ತ ಲಾಘವಕ್ಕೆ ನಾನು ಕೈ ನೀಡಿದ್ದಕ್ಕೆ ಅವರ ಕೈಯ್ಯಲ್ಲಿದ್ದ ಚಮಚವನ್ನು ನನಗೆ ತೋರಿಸಿದರು. ಅವರು ಚಾ ಮಾಡುತ್ತಿದ್ದಾಗ ಉಪಯೋಗಿಸುತ್ತಿದ ಚಮಚವೇ ಅವರ ಪ್ರತಿನಿಧಿಯಾಗಿತ್ತು – ಉಕ್ಕಿನಂಥ ಸ್ವಭಾವದವರ ಪ್ರತಿನಿಧಿ ಕಬ್ಬಿಣವಾದುದು ನ್ಯಾಯವೆಂದು ನನಗೆ ತೋರಿತು.
ಚಾ ಕುಡಿದಾದನಂತರ ಅಮ್ಮನ ಹತ್ತಿರ ಹೋಗಿ ತಮ್ಮನನ್ನು ಕೇಳಿ ಎತ್ತಿಕೊಂಡು ಕುಳಿತೆನು.
“ಕ್ಲೇರಾ! ಕ್ಲೇರಾ! ಅಲ್ಲಿ ನೋಡು, ಎಂಥಾ ಅಪಾಯ” ಎಂದು ಬಹು ಗಾಬರಿಯಿಂದ ಮಿಸ್ ಜೇನ್ ಮರ್ಡ್ಸ್ಟನ್ನಳು ಬೊಬ್ಬಿಟ್ಟಳು. ಅಲ್ಲೆಲ್ಲೋ ಏನೋ ಅಪಾಯಕರ ಪ್ರಸಂಗ ನಡೆಯುತ್ತಿರಬೇಕೆಂದು ತಾಯಿ ಅತ್ತ ಕಡೆ ನೋಡಿದಳು. ನಾನೂ ಅತ್ತೆ ಕಡೆ ನೋಡಿದೆ.
ಜೇನಳಿಗೆ ಸ್ವಲ್ಪ ಕೋಪವೇ ಬಂದು –
“ನೋಡು, ಆ ಹುಡುಗ ನಮ್ಮ ಮಗುವನ್ನು ಎತ್ತಿದ್ದಾನೆ – ಅಪಾಯ!” ಅಂದಳು ಜೇನ್, ನನ್ನನ್ನು ತೋರಿಸಿ.
ಈ ಮಾತನ್ನು ಕೇಳಿ ತಾಯಿಗೆ ದುಃಖ ಬಂತು. ಉತ್ತರ ಕೊಡಲು ಪ್ರಯತ್ನಿಸಿದಳು. ಆ ಪ್ರಯತ್ನ ಒಂದು ವಾದವೇ ಆಗಿತ್ತು. ಆದರೆ ಉಕ್ಕಿನ ಹೆಂಗಸಿನ ವಾದದಲ್ಲಿ ಮೃದು ಸ್ವಭಾವದ ನನ್ನ ತಾಯಿ ಸೋತಳು – ಸೋತದ್ದರಿಂದ ತನ್ನ ತಪ್ಪನ್ನೂ, ಜೇನಳ ಒಪ್ಪನ್ನೂ ಒಪ್ಪಿಕೊಂಡಳು. ಮತ್ತೂ ತನ್ನನ್ನು ಸರಿದಾರಿಗೆ ತಂದದ್ದಕ್ಕಾಗಿ ಜೇನಳನ್ನು ವಂದಿಸಿ, ತನ್ನಲ್ಲಿ ನಡೆದುಹೋಗಿದ್ದ ತಪ್ಪಿಗಾಗಿ ಕ್ಷಮಾಯಾಚನೆ ಮಾಡಿದಳು. ಈ ವಿಧದ ಶಿಸ್ತಿನ ಪರಮಾವಧಿ ಅನುಭವದಿಂದ ನನ್ನ ತಾಯಿ ಸರಿಯಾಗಿ ಅತ್ತೇ ಬಿಟ್ಟಳು. ಅನಂತರ ಅವಳ ಮಗನನ್ನು ನಾನು ಎಂದೂ ಮುಟ್ಟಬಾರದೆಂದು ತಾಯಿ ನನಗೆ ಅಪ್ಪಣೆಯಿತ್ತಳು.
ಈ ಎಲ್ಲಾ ಸಂಗತಿಗಳನ್ನು ನೋಡುತ್ತಲೂ ಕೇಳುತ್ತಲೂ ಇದ್ದ ಜೇನಳ ಮುಖದಲ್ಲಿ ತನ್ನ ತರಬೇತಿ ಇಷ್ಟಾದರೂ ಯಶಸ್ವಿಯಾಯಿತಲ್ಲ, ಎಂಬ ಸಂತೃಪ್ತಿ ನಲಿದಾಡುತ್ತಿತ್ತು.
ಇದೇ ರಜೆಯಲ್ಲಿ ಒಂದು ದಿನ ಅಮ್ಮ ನನ್ನ ಕಣ್ಣುಗಳೂ ನನ್ನ ತಮ್ಮನ ಕಣ್ಣುಗಳೂ ಒಂದೇ ತೆರನಾಗಿ ಮುದ್ದುಮುದ್ದಾಗಿವೆ, ಎಂದಂದಳು. ಈ ಮಾತನ್ನು ಕೇಳುತ್ತಿದ್ದ ಮಿಸ್ ಮರ್ಡ್ಸ್ಟನ್ನಳು ಬಹು ಜಿಗುಪ್ಸೆ ಮತ್ತು ಆಶ್ಚರ್ಯದಿಂದ –
“ಏನು? – ಇಬ್ಬರ ಕಣ್ಣುಗಳೂ ಒಂದೇ ನಮೂನೆಯೇ? ಯಾರು ಹೇಳಿದರು? ಮರ್ಡ್ಸ್ಟನ್ನನ ಮಗನೆಂದಿಗೂ ಕಾಪರ್ಫೀಲ್ಡ್ನಂತೆ ಆಗಲಾರನು – ದೇವರ ಅನುಗ್ರಹದಿಂದ ಹಾಗೆಂದಿಗೂ ಆಗದಿರಲಿ” ಎಂದು ಬಿಟ್ಟು ಬಾಗಿಲನ್ನು ಬಲವಾಗಿ ಬಡಿದು ಹಾಕಿಕೊಂಡು ನಮ್ಮ ಕೋಣೆಯನ್ನು ಬಿಟ್ಟೇ ಹೋದಳು.
ಈ ರೀತಿ ಆ ಮನೆಯಲ್ಲಿ – ನನ್ನಮ್ಮನ ಮನೆಯಲ್ಲೇ – ನನಗೆ ನನ್ನ ಜೀವನದ ಮೇಲೆಯೇ ಜಿಗುಪ್ಸೆ ತೋರತೊಡಗಿತು. ನನ್ನನ್ನು ಪ್ರೀತಿಸುವವರೆಲ್ಲರೂ ಅಡಗಿಯೇ ಪ್ರೀತಿಸಬೇಕಿತ್ತು. ನಾನು ಸಂತೋಷದಲ್ಲಿದ್ದೇನೆಂದು ಅವರಿಗೆ ಎಂದೂ, ಎಳ್ಳಷ್ಟೂ ಕಾಣಕೂಡದಷ್ಟು ಮರ್ಡ್ಸ್ಟನ್ ಅಣ್ಣ ತಂಗಿಯರು ಜಾಗ್ರತೆಯಲ್ಲಿದ್ದರು. ನನ್ನನ್ನು ದ್ವೇಷಿಸುವವರೆಲ್ಲ ಬಹಿರಂಗವಾಗಿಯೇ – ನನ್ನ ಎದುರೇ- ದ್ವೇಷಿಸುತ್ತಿದ್ದರು. ಮತ್ತೂ ಹೀನೈಸುತ್ತಿದ್ದರು. ನನ್ನ ಇರುವಿಕೆಯೇ – ಈ ವಿಧದ ಜೀವನದಿಂದ – ನನಗೆ ಭಾರವಾಗತೊಡಗಿತು. ನಾನೊಬ್ಬ ಮಂಕ, ನಿರಾಶಾವಾದಿ, ಕರ್ತವ್ಯಹೀನ, ಬಹಿಷ್ಕೃತ, ಅನಾಥ ಒರಟು ಪ್ರಾಣಿಯಂತೆಯೇ ಆಗಿಹೋದೆ. ಆ ಮನೆಯವರ ಸಂತೋಷದ ಪ್ರಭೆಗೆ ನಾನೊಬ್ಬ ಅನಪೇಕ್ಷಿತ ಕರಿಮೋಡದ ಮುಸುಕಿನಂತೆಯೇ ತೋರುತ್ತಿದ್ದೆ. ನಾನು ನನ್ನ ನಡೆನುಡಿಗಳಲ್ಲಿ ತಪ್ಪಿಬಿದ್ದು ನನ್ನ ಹಿರಿಯರ ಮನಸ್ಸನ್ನು ಎಲ್ಲಿ ನೋಯಿಸಿಬಿಡುವೆನೋ ಎಂದು ತಾಯಿ ನನ್ನ ಕುರಿತು ಸದಾ ಹೆದರುತ್ತಿದ್ದಂತೆಯೇ ನನ್ನ ದೆಸೆಯಿಂದ ತಾಯಿಗೆ ಎಲ್ಲಿ ದುಃಖ ಪ್ರಸಂಗ ಬಂದು ಬಿಡುವುದೋ ಎಂದು ನಾನೂ ಸಹ ಹೆದರುತ್ತಿದ್ದೆ. ಹೀಗಾಗಿ ನಾನು ಆದಷ್ಟು ಹೆಚ್ಚಿನ ಸಮಯ ತಾಯಿಯಿಂದ ದೂರವಾಗಿರುತ್ತ, ಅನುಕೂಲವಿದ್ದಾಗಲೆಲ್ಲ ನನ್ನ ಹಾಸಿಗೆಯಲ್ಲಿ ಮಲಗಿಕೊಂಡು ಕಥೆ ಪುಸ್ತಕಗಳನ್ನೋದಿ ಕಾಲಕಳೆಯುತ್ತಿದ್ದೆನು.
ನನ್ನ ದುಃಖಗಳು ಎಂದೂ ಕಡಿಮೆಯಾಗಬಾರದು, ಮತ್ತೂ ಹಗುರವಾಗಬಾರದೆಂಬಂತೆ, ಮಿ. ಮರ್ಡ್ಸ್ಟನ್ನರು ಒಂದು ಹೊಸ ಕ್ರಮವನ್ನು ಜಾರಿಗೆ ತಂದರು. ಈ ಹೊಸ ಕ್ರಮದಿಂದ ನನ್ನ ಏಕಾಂಗೀತ್ವವನ್ನು ತೊಲಗಿಸಿ, ಸಹಜೀವನದ ಶಿಸ್ತನ್ನೊದಗಿಸುವ ಗುರಿ ಮಿ. ಮರ್ಡ್ಸ್ಟನ್ನರಲ್ಲಿದ್ದಿರಬೇಕು, ಇದಕ್ಕಾಗಿ ಅವರು ನನ್ನನ್ನು ಕರೆದು –
“ಡೇವಿಡ್, ನಿನ್ನ ಹಟಮಾರಿತನ, ಅಪ್ರಸನ್ನ ಸ್ವಭಾವ ಇವನ್ನೆಲ್ಲ ಸರಿಪಡಿಸತಕ್ಕದ್ದಿದೆ. ಇಂಥಾದ್ದೆಲ್ಲ ನನ್ನೆದುರು ನಡೆಯಕೂಡದು. ನಮ್ಮ ಸಂಸರ್ಗವನ್ನೇ ಹಳಿದು ತಿರಸ್ಕರಿಸುವವನಂತೆ ನಿನ್ನ ಚರ್ಯೆಗಳಿವೆ. ಈ ವಕ್ರ ವಿಧಾನದ ದೂಷಣೆಯ ಅಪಮಾನವನ್ನು ಸಹಿಸುವವರು ನಾವಲ್ಲ. ನಿನಗೆ ಕೀಳು ಜನರ ಸಹವಾಸದಲ್ಲಿ ತುಂಬಾ ಇಷ್ಟವೆಂಬುದನ್ನು ನಾವು ತಿಳಿದಿದ್ದೇವೆ. ನಿನ್ನ ತಾಯಿ ಕ್ಲೇರಾಳ ಇಂಥ ಸ್ವಭಾವವನ್ನು ತಿದ್ದಿ ಸರಿಪಡಿಸಿರುವೆವು. ನಿಮ್ಮ ಪೆಗಟಿಯೊಡನೆ ನಿಮಗಿರುವ ಕೀಳ್ತನದ ಬಾಂಧವ್ಯ ನಮ್ಮ ಘನಸ್ತಿಕೆಗೆ ವಿರೋಧ- ಅಪಮಾನಕರ. ನೀನು ನಮ್ಮ ಕಣ್ಣೆದುರೇ ಇರಬೇಕು, ಏನು? ತಿಳಿದಿರು – ನನ್ನ ಆಜ್ಞೆಗಳನ್ನು ಮೀರಿದವರಿಲ್ಲವೆಂಬುದನ್ನು!” ಎಂದು ಭಯ ಗಂಭೀರವಾಗಿ ನುಡಿದರು.
ನಾಯಿಗೆ ಇತ್ತ ಅನುಜ್ಞೆಯನ್ನು ನಾಯಿ ಮಾತ್ರ ಪಾಲಿಸುವಂತೆ ನನಗಿತ್ತ ಆಜ್ಞೆಯನ್ನು ಅನಂತರ ಪರಿಪೂರ್ಣವಾಗಿ ಪಾಲಿಸಿದೆನು. ನನ್ನ ಕೋಣೆ, ನನ್ನ ಕಥೆ ಪುಸ್ತಕಗಳು, ಪೆಗಟಿ ಇವರೆಲ್ಲರಿಂದ ನಾನು ಪ್ರತ್ಯೇಕವಾಗಿ ಉಳಿಯತೊಡಗಿದೆನು.
ಹೀಗೆ ದಿನ ಸಾಗುತ್ತಾ ರಜೆಯ ಕಡೇ ದಿನವೂ ಸಮೀಪಿಸಿತು. ನಾನು ಮನೆಯಲ್ಲಿರುವ ದಿನಗಳನ್ನೆಲ್ಲ ಕೆಲೆಂಡರಿನಲ್ಲಿ ಪ್ರತಿ ದಿನಕ್ಕೆ ಒಂದು ತಾರೀಕಿನಂತೆ ಅಡ್ಡ ಗೆರೆಯೆಳೆದು ಸಂಪೂರ್ಣ ಅಳಿಸಿಬಿಡುತ್ತಿದ್ದ ಮಿಸ್. ಮರ್ಡ್ಸ್ಟನ್ನಳು ನನ್ನ ರಜೆಯ ಕೊನೆಯ ದಿನದ ತಾರೀಕಿಗೂ ಅಡ್ಡ ಗೆರೆಯೆಳೆದಳು. ಆಖೈರಿನ ಅಡ್ಡ ಗೆರೆಯಿಂದ ಜೇನಳಿಗೆ ತುಂಬಾ ಸಂತೋಷವಾಗಿರಬೇಕು; ಅವಳು ಆಖೈರಿನ ಚಾವನ್ನೂ ನನಗೆ ನೀಡಿದಳು. ಚಾ ಕುಡಿದಾಗುವಷ್ಟರಲ್ಲೇ ಬಾರ್ಕಿಸನ ಬಂಡಿ ಬಂದು ಮನೆಯೆದುರು ನಿಂತಿತು.
“ಕ್ಲೇರಾ, ಮನಸ್ಸನ್ನು ಬಿಗಿಹಿಡಿ” ಅಂದರು ಮಿ. ಮರ್ಡ್ಸ್ಟನ್ನರು.
ಅಮ್ಮ ಬಂದು ನನಗೆ ಮುತ್ತು ಕೊಟ್ಟು ಆಲಂಗಿಸಿದಳು. ನನ್ನ ತಮ್ಮನನ್ನು ಮುದ್ದಿಸಿ ನಾನು ಹೊರಟೆನು. ಬಾರ್ಕಿಸನ ಬಂಡಿಯನ್ನು ನಾನು ಏರಿದ ಕೂಡಲೇ ಅದು ಮಂದ ಗತಿಯಿಂದ ಮುಂದೆ ಸಾಗತೊಡಗಿತು.
ಬಂಡಿ ಮನೆಯಿಂದ ಹೋಗುವುದರೊಳಗೆ ತಾಯಿ ಗೇಟಿನ ಬಳಿಯಲ್ಲಿ ನಿಂತು ನನ್ನ ತಮ್ಮನನ್ನು ಎರಡು ಕೈಗಳಲ್ಲಿ ಎತ್ತಿ ಹಿಡಿದು, ನನ್ನನ್ನು ಮುದ್ದಾಗಿ ಕರೆದು, ಎತ್ತಿ ತೋರಿಸಿದಳು. ಆಗ ಒಂದಿಷ್ಟೂ ಗಾಳಿಯಿಲ್ಲದೆ, ತಾಯಿಯ ತಲೆಗೂದಲೂ ಸಹ ಅಲುಗಾಡುತ್ತಿರಲಿಲ್ಲ. ನನ್ನ ಮಮತೆಯ ತಾಯಿಯ ಪ್ರೇಮಪೂರಿತ ದೃಷ್ಟಿಯಿಂದ, ಸ್ಥಿರ ಪ್ರಸನ್ನತೆಯಿಂದ, ಶಿಲಾ ಪ್ರತಿಮೆಯಂತೆ ನನ್ನನ್ನೇ ನೋಡುತ್ತಾ ನಿಂತಿದ್ದಳು.
ಕಡೆಯದಾಗಿ ನಾನು ನನ್ನ ತಾಯಿಯನ್ನು ಕಂಡದ್ದು ಆ ರೀತಿ. ಅದೇ ರೂಪವನ್ನು ನಾನು ನಮ್ಮ ಶಾಲಾ ಬೋರ್ಡಿಂಗಿನಲ್ಲಿ ನಿದ್ರಿಸುತ್ತಿದ್ದಾಗ, ನನ್ನ ಹಾಸಿಗೆಯ ಬಳಿ ನಿಂತಿದ್ದಂತೆ ಕಂಡಿದ್ದೇನೆ- ಸ್ಥಿರವಾಗಿ, ಮೌನವಾದ ಪ್ರೇಮಪೂರಿತ ದೃಷ್ಟಿಯ, ಪ್ರಸನ್ನ ಮುಖದ ಆ ಪ್ರತಿಮೆ ತನ್ನ ಎರಡೂ ಕೈಗಳಲ್ಲಿ ಮಗುವನ್ನು ಎತ್ತಿ ತೋರಿಸುತ್ತಿದ್ದುದನ್ನು ಕಂಡಿದ್ದೇನೆ.
(ಮುಂದುವರಿಯಲಿದೆ)