ಅಧ್ಯಾಯ ಹತ್ತು
[ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಹನ್ನೆರಡನೇ ಕಂತು

ನನ್ನ ತಾಯಿ ಸತ್ತನಂತರ ನನ್ನ ಮೇಲಿನ ನಿರ್ಬಂಧಗಳು ಸಡಿಲವಾದುವು. ಬೈಠಖಾನೆಯಿಂದ ಹೊರಗೆ ಹೋಗಲೂ ಪೆಗಟಿಯೊಡನೆ ಮಾತಾಡಲೂ ಯಾರದೂ ಆಕ್ಷೇಪವಿರಲಿಲ್ಲ. “ಆ ಹುಡುಗ ಹೇಗಾದರೂ ಉದ್ಧಾರವಾಗುವವನಲ್ಲ – ಅಣ್ಣನ ದುಃಖದಲ್ಲಿ ಅಂಥವನೊಬ್ಬ ಮನೆಯಲ್ಲಿದ್ದರೆ ಅಣ್ಣನಿಗೆ ಸ್ವಲ್ಪವೂ ಶಾಂತಿ ಸಿಕ್ಕದು”, ಎಂದು ಮಿಸ್ ಮರ್ಡ್ಸ್ಟನ್ನಳು ನನಗೆ ಕೇಳುವಂತೆಯೇ ಬಂದವರೊಬ್ಬರ ಹತ್ತಿರ ಮಾತಾಡಿದ್ದನ್ನು ಕೇಳಿದ್ದೆ. ಒಂದು ತಿಂಗಳಿನಲ್ಲಿ ಪೆಗಟಿ ನಮ್ಮ ಮನೆ ಕೆಲಸದಿಂದ ನಿವೃತ್ತಳಾಗುವಳೆಂದು ಅಪ್ಪಣೆಯಾಗಿತ್ತು. ಅದೇ ರೀತಿಯ ಅಪ್ಪಣೆಯನ್ನು, ಎಡೆಯಿದ್ದಿದ್ದರೆ, ನನಗೂ ಕೊಡುತ್ತಿದ್ದರೆಂಬುದು ನಿರ್ವಿವಾದ. ಒಂದು ದಿನ ಮಿಸ್ ಮರ್ಡ್ಸ್ಟನ್ನಳು ಭರಣಿಯಿಂದ ಹುಳಿ ಉಪ್ಪಿನಕಾಯಿಯನ್ನು ತೆಗೆಯುತ್ತಿದ್ದಾಗ ಪೆಗಟಿ ಓರೆಯಲ್ಲಿ ನಿಂತು – “ಒಂದೆರಡು ವಾರಗಳ ಮಟ್ಟಿಗೆ ಡೇವಿಯು ನಮ್ಮ ಯಾರ್ಮತ್ ಮನೆಯಲ್ಲಿ ಇದ್ದು ಬಂದರಾಗಬಹುದೇ ಯಜಮಾನಿ?” ಎಂದು ಮಿಸ್ ಮರ್ಡ್ಸ್ಟನ್ನಳನ್ನು ಕೇಳಿದಳು. ಅದಕ್ಕೆ ಅವಳು, ಭರಣಿಯೊಳಗಿದ್ದ ಹುಳಿಯನ್ನೆಲ್ಲ ತನ್ನ ಮುಖದಲ್ಲಿ ಇಟ್ಟುಕೊಂಡಿದ್ದವಳಂತೆ ತೋರುತ್ತಾ – “ಅವನು ಎಲ್ಲಿದ್ದರೂ ಯಾರಿಗೂ ಉಪಕಾರಕ್ಕೆ ಬೀಳನು – ಕಡು ಸೋಮಾರಿ – ಅಣ್ಣನ ದುಃಖ ಶಮನಕ್ಕಾದರೂ ಅವನು ಹೋದರೆ ಉತ್ತಮ ಆಗಬಹುದು, ಹೋಗ್ಲಿ” ಅಂದಳು.

ಆ ಕೂಡಲೆ ನಾನು ಯಾರ್ಮತ್ತಿಗೆ ಹೋಗುವ ಏರ್ಪಾಡು ಆಯಿತು. ಬಾರ್ಕಿಸನ ಬಂಡಿಯೂ ಬಂತು. ಯಾವಾಗಲೂ ಗೇಟಿನವರೆಗೆ ಮಾತ್ರ ಬರುತ್ತಿದ್ದ ಬಾರ್ಕಿಸನು ಅಂದು ಮನೆಗೇ ಬಂದು ನಮ್ಮ ಸಾಮಾನುಗಳನ್ನು ತಾನೇ ಹೊತ್ತುಕೊಂಡು ಹೋಗಿ ಬಂಡಿಯಲ್ಲಿಟ್ಟನು. ಪೆಗಟಿಯೂ, ನಾನೂ ಬಂಡಿಯನ್ನೇರಿ ಹೊರಟೆವು. ಬಂಡಿ ಹೋಗುತ್ತಿದ ಹಾಗೆ ಬಾರ್ಕಿಸನನ್ನು ಗೌರವಿಸಲೋಸ್ಕರವೆಂದು – “ಸೌಖ್ಯವೇ ಮಿ. ಬಾರ್ಕಿಸ್” ಎಂದು ಕೇಳಿದೆನು. “ಸೌಖ್ಯವಪ್ಪ, ಸೌಖ್ಯ. ನೀವು – ಅಂದರೆ, ನೀವಿಬ್ಬರೂ – ಸೌಖ್ಯವೇ?” ಎಂದು ಅವನು ಮರುಪ್ರಶ್ನೆ ಮಾಡಿದನು, ಮತ್ತೂ – “ನಿಮಗೆ ಕುಳಿತುಕೊಳ್ಳಲು ಸ್ಥಳ ಸಾಕೇ?” ಎಂದೂ ಪ್ರಶ್ನಿಸಿದನು. ಸ್ಥಳ ಬೇಕಾದಷ್ಟಿದೆಯೆಂದು ನಾನು ಉತ್ತರವಿತ್ತರೂ ಬಾರ್ಕಿಸನು ಪುನಃ ಪುನಃ “ಸ್ಥಳ ಸಾಕೇ” ಎಂದನ್ನುತ್ತಾ, ನಮ್ಮ ಉತ್ತರವೇನಿದ್ದರೂ ಪ್ರಶ್ನೆಯ ಉತ್ಸಾಹದಲ್ಲಿ ನಮ್ಮಿಬ್ಬರನ್ನೂ ನೂಕುತ್ತಾ, ನೂಕುತ್ತಾ ಬಂಡಿಯ ಒಂದು ಮೂಲೆಗೆ ಅದುಮತೊಡಗಿದನು. ಕೊನೆಗೆ ನಮಗೆ ಸ್ಥಳ ಸಾಕೆಂದೂ ಸ್ಥಳಾನುಕೂಲ ಒದಗಿಸುವ ಉತ್ಸಾಹದಲ್ಲಿ ಇದ್ದ ಸ್ಥಳವೇ ಇಲ್ಲದಂತಾಗಿ ನಾನು ಕಷ್ಟಕ್ಕೀಡಾಗಿರುವೆನೆಂದೂ ಪೆಗಟಿ ಪರಿಹಾಸ್ಯವಾಗಿ ಹೇಳುವವರೆಗೂ ಈ ಪ್ರಶ್ನೆ ನಿಲ್ಲಲಿಲ್ಲ. ಆದರೂ ನಮ್ಮ ಪಯಣದ ವೇಳೆಯಲ್ಲಿ ಈ ಪ್ರಶ್ನೆ ಆಗಿಂದಾಗ್ಗೆ ಎದ್ದು ಬರುತ್ತಿತ್ತು. ಬಂಡಿಯ ಇನ್ನೊಂದು ತುದಿಯಲ್ಲಿ ನಾನಿದ್ದು, ಪೆಗಟಿ ಬಾರ್ಕಿಸನ ಸಮೀಪವಿದ್ದುದರಿಂದ, ಈ ಪ್ರಶ್ನೆ ಬಂದಾಗಲೆಲ್ಲಾ ನಾನು ಹೊರಗಿನ ಮರಗಳನ್ನೂ ಆಕಾಶವನ್ನೂ ನೋಡುತ್ತಾ ಪ್ರಕೃತಿ ಸೌಂದರ್ಯ ಚಿಂತನೆಯಲ್ಲಿ ಮಗ್ನನಾಗಿ ಬಿಡುತ್ತಿದ್ದೆನು.

ನಾವು ಯಾರ್ಮತ್ತನ್ನು ಸೇರುವಾಗ ಮಿ. ಪೆಗಟಿಯೂ ಹೇಮನೂ ನಮ್ಮೆದುರು ಬಂದು ನಿಂತರು. ಅವರು ನಮ್ಮ ಪೆಗಟಿಯ ಬಂಧುಗಳಾಗಿದ್ದುದರಿಂದ ಬಾರ್ಕಿಸನು ಅವರೊಡನೆ ನಾಲ್ಕು ಮಾತುಗಳನ್ನು ಆಡಿದನು. ಮಾತುಗಳು ಮನಃಪೂರ್ವಕವೆಂಬುದರಲ್ಲಿ ಸಂಶಯವಿಲ್ಲದಿದ್ದರೂ ಅವುಗಳಿಂದ ಬಾರ್ಕಿಸನ ಹೆಡ್ಡುತನ, ಮತ್ತೂ ಮೌಢ್ಯತನ ಮಾತ್ರ ಪ್ರದರ್ಶನವಾದುವೆಂದು ನಾನು ಗ್ರಹಿಸಿದೆನು. ಇದೇ ಸಂದರ್ಭದಲ್ಲಿ ಬಾರ್ಕಿಸನೂ ಪೆಗಟಿಯೂ ತಮ್ಮೊಳಗಿನ ಅನುರಾಗವನ್ನು ಮನಬಿಚ್ಚಿ ನನಗೆ ತಿಳಿಸಿದರು. ಬಾರ್ಕಿಸನನ್ನು ತಾನು ಮದುವೆಯಾಗುವುದರಲ್ಲಿ ನನ್ನದೇನಾದರೂ ಆಕ್ಷೇಪವಿದೆಯೇ ಎಂದು ಪೆಗಟಿ ನನ್ನನ್ನು ಕೇಳಿದಳು. ನಾನು ಸ್ವಲ್ಪ ಆಲೋಚಿಸಿ, ನನ್ನ ಅಕ್ಷೇಪವಿಲ್ಲವೆಂದು ತಿಳಿಸಿದೆನು. ಪೆಗಟಿಯು ಬಾರ್ಕಿಸನ್ನು ಮದುವೆಯಾಗಲು ಇದ್ದ ಕಾರಣಗಳಲ್ಲಿ ವಾರಕ್ಕೊಮ್ಮೆಯಾದರೂ ಬಾರ್ಕಿಸನ ಜತೆಯಲ್ಲಿ ಬ್ಲಂಡರ್ಸ್ಟನ್ನಿಗೆ ಬಂದು ನನ್ನನ್ನೂ ನನ್ನ ತಾಯಿಯ ಗೋರಿಯನ್ನೂ ನೋಡಲು ಸಿಗುವ ಅನುಕೂಲವೂ ಒಂದೆಂದು ಪೆಗಟಿ ಹೇಳಿದಳು. ಪೆಗಟಿಯೊಡನೆ ನಾನು ಈ ಎಲ್ಲಾ ಮಾತುಗಳನ್ನು ಆಡುವಾಗ ಬಾರ್ಕಿಸನು ನಮ್ಮನ್ನು ಬಹು ಗೌರವದಿಂದ ನೋಡುತ್ತಿದ್ದನು. ಆದರೆ ನಮ್ಮ ಮಾತುಗಳನ್ನು ಕುರಿತಾಗಿ ಅವನ ಅಭಿಪ್ರಾಯವೇನಿರಬಹುದೆಂದು ತಿಳಿಯುವುದು ನಮಗೆ ಅಸಾಧ್ಯವಾಗಿತ್ತು. ನಡೆಯದಿದ್ದ ಗಡಿಯಾರದ ಮುಖದಿಂದ ಘಂಟೆಯನ್ನು ತಿಳಿಯಬಹುದಾಗಿದ್ದಷ್ಟೆ ಬಾರ್ಕಿಸನ ಮುಖದಿಂದ ಅವನ ಅಭಿಪ್ರಾಯವನ್ನು ತಿಳಿಯಬಹುದಿತ್ತು.

ನಾವು ಮಿ. ಪೆಗಟಿಯ ಮನೆಗೆ ಬಂದಾಗ ಎಮಿಲಿ ಅಲ್ಲಿರಲಿಲ್ಲ. ಅವಳು ಶಾಲೆಗೆ ಹೋಗಿದ್ದಳೆಂದು ಕೇಳಿ ತಿಳಿದೆ. ಎಮಿಲಿಯನ್ನು ನೋಡಬೇಕೆಂಬ ಬಯಕೆ, ತವಕ ನನ್ನಲ್ಲಿದ್ದುದರಿಂದ, ನಾನು ವಿಶೇಷ ಉದ್ದೇಶ ಪಡದಿದ್ದರೂ ನನ್ನ ಕಾಲುಗಳು ತಾವಾಗಿಯೇ ನನ್ನನ್ನು ಎಮಿಲಿ ಬರುವ ಕಡೆಗೆ ಸಾಗಿಸಿದುವು. ಸ್ವಲ್ಪ ದೂರ ಹೋಗುವುದರೊಳಗೆ ಎಮಿಲಿಯು ಎದುರಾಗಿ ಬರುತ್ತಿದ್ದುದನ್ನು ಕಂಡೆನು. ಅವಳು ಒಂದು ವರ್ಷದ ಹಿಂದೆ ಕಂಡಿದ್ದ ಎಮಿಲಿಯಂತೆ ಕಾಣುತ್ತಿರಲಿಲ್ಲ. ಸ್ವಲ್ಪ ಉದ್ದವಾಗಿಯೂ, ದಪ್ಪವಾಗಿಯೂ ಬೆಳೆದಿದ್ದಳು. ಅವಳ ಮುಖವೇನೋ ಮೊದಲಿನಂತೆ ಸೌಂದರ್ಯಯುತವೂ, ಮನೋಹರವೂ ಆಗಿತ್ತು. ಅವಳು ಹೆಂಗಸಾಗಿರಬೇಕೆಂಬ ಶಂಕೆಯಿಂದ ನನಗೆ ಅವಳಲ್ಲಿ ಮೊದಲಿನ ಸಲಿಗೆ ಉಂಟಾಗಲಿಲ್ಲ. ಆದರೂ ಹತ್ತಿರ ನಿಂತು ನೋಡುತ್ತಾ ಹೋದ ಹಾಗೆಲ್ಲ ಮೊದಲಿನವಳೇ ಎಂಬ ಸಲಿಗೆಯೂ ಉಂಟಾಗುತ್ತಿತ್ತು. ಆದರೂ ನಾವೀರ್ವರೂ ಪ್ರಾಯದಲ್ಲಿ ಮುಂದುವರಿದಿದ್ದೇವೆಂಬ ಭಾವನೆಯೇ ನಮ್ಮ ಮನಸ್ಸಿನಲ್ಲಿ ಇಲ್ಲದ ನಾಚಿಕೆ, ಶಂಕೆ, ಅಂಜಿಕೆಗಳನ್ನು ತಂದೊಡ್ಡುತ್ತಿದ್ದುವು. ಅವಳನ್ನು ನೋಡಬೇಕು – ಅವಳೊಡನೆ ಮಾತಾಡಬೇಕೆಂದು ಬಹು ಇಚ್ಛೆಪಡುತ್ತಾ ಅವಳೊಡನೆ ಮಾತಾಡಲು ಪ್ರಾರಂಭಿಸುವಾಗಲೇ ಅವಳು ನನ್ನನ್ನೇ ನೋಡುತ್ತಿದ್ದಾಳೆಂಬ ತಿಳಿವೇ ನನಗೆ ಅಡ್ಡ ಬಂದು, ನಾನು ಮಾತನ್ನು ನಿಲ್ಲಿಸುವಂತೆ ಮಾಡುತ್ತಿತ್ತು. ಆದರೂ ಅವಳನ್ನು ನೋಡದವನಂತೆ ನಟಿಸಿ, ಅವಳೂ ಸಹ ನನ್ನನ್ನು ಕಾಣದವಳಂತೆ ನಟಿಸಿ ಮನೆ ಕಡೆ ನಡೆದಾಗ, ನಾನು ಅವಳನ್ನು ಹಠಾತ್ತಾಗಿ ಕಂಡವನಂತೆ ತೋರ್ಪಡಿಸಿಕೊಂಡು ಮಾತಾಡತೊಡಗಿದೆ. ಮಾತಾಡುತ್ತಾ ಕೈ ಹಿಡಿದುಕೊಂಡು ನಡೆದು, ಕ್ರಮೇಣವಾಗಿ ಪೂರ್ವಕ್ರಮದ ಮಾತು, ಆಲಿಂಗನ, ನಗೆ ಹಾರಾಟಗಳನ್ನು ಮಾಡಿದೆವು. ಆದರೂ ನಾನವಳಿಗೆ ಮುತ್ತಿಡಲು ಅವಳು ಬಿಡಲಿಲ್ಲ.

ರಾತ್ರಿ ಊಟವಾದನಂತರ ಹಿಂದೆ ನಾನು ಬಂದಿದ್ದಾಗ ಕುಳಿತ ಕ್ರಮದಲ್ಲೇ ಕುಳಿತು ಮನಸ್ವೀಯಾಗಿ ಮಾತಾಡತೊಡಗಿದೆವು. ಮಿ. ಪೆಗಟಿ ಅನೇಕ ವಿಷಯಗಳನ್ನು ಕುರಿತು ಮಾತಾಡುತ್ತಾ ನಮ್ಮ ಸೆಲಂ ಶಾಲೆಯನ್ನೂ ಕುರಿತು ಮಾತಾಡಿದರು. “ನಿಮ್ಮ ಸ್ನೇಹಿತರ ಹೆಸರು ಮಿ. ಸ್ಟಿಯರ್ಫೋರ್ತ್ ಎಂದಲ್ಲವೇ?” ಎಂದು ಮಿ. ಪೆಗಟಿ ಕೇಳಿದರು. “ರಡ್ಡರ್ ಫೋರ್ಡ್ ಎಂದಲ್ಲವೇ ?” ಎಂದು ಹೇಮನು ಕೇಳಿದನು. “ಈ ಎರಡು ಹೆಸರುಗಳೂ ನಾವಿಕರಿಗೆ ಬಹು ಯೋಗ್ಯವಾದುವು. ಸ್ಟಿಯರ್ಫೋತ್ ಅಂದರೆ ಕಷ್ಟದ ಪ್ರಸಂಗಗಳಲ್ಲಿ ದಾರಿ ಬಿಡಿಸಿಕೊಂಡು ಮುಂದೆ ಹೋಗತಕ್ಕವನು ಎಂದರ್ಥ. ರಡ್ಡರ್ಫೋರ್ಡ್ ಅಂದರೆ ಚುಕ್ಕಾಣಿ ಹಿಡಿದು ಮುಂದೆ ಸಾಗು ಎಂದರ್ಥ” ಅಂದರು ಮಿ. ಪೆಗಟಿ. “ಅವನ ವಿದ್ಯೆಯೇನು! ನಡೆನುಡಿಗಳೇನು! ಸಂಸ್ಕೃತಿಯೇನು! ಅವನ ಪ್ರಸನ್ನ ಸ್ವಭಾವವೇನು!” ಎಂದಂದೆನು ನಾನು. “ಆ ದಿನ ಐದು ನಿಮಿಷದ ಸಂಭಾಷಣೆಯಲ್ಲಿ ಮಹಾ ವ್ಯಕ್ತಿ ಎಂಬುದು ಗೊತ್ತಾಗಿದೆ” ಅಂದರು ಮಿ. ಪೆಗಟಿ.

ನನ್ನ ಪ್ರಿಯ ಸ್ನೇಹಿತನನ್ನು ಹೊಗಳಿದ್ದು ಕೇಳಿ ನನಗೆ ಮಾತಾಡಲು ಒಂದು ವಿಧದ ಆವೇಶವೇ ಬಂತು. ನಾನು ಪುನಃ ಪುನಃ ಅಂತಃಕರಣಪೂರ್ವಕವಾಗಿ ಸ್ಟಿಯರ್ಫೋರ್ತನ ಗುಣಗಳನ್ನೆಲ್ಲ ವರ್ಣಿಸಿ ಹೇಳತೊಡಗಿದೆ. “ಅವನು ಹಿಡಿದದ್ದು ಜಯ, ಬರೆದದ್ದು ಕಾವ್ಯ, ಹಾಡಿದ್ದು ಸಂಗೀತ. ಯಾವ ಆಟ ಕೇಳುತ್ತೀರಿ – ಅದರಲ್ಲೆಲ್ಲ ಅವನು ಪ್ರವೀಣ. ಕ್ರಿಕೆಟ್ ಆಟದಲ್ಲಂತೂ ಅವನು ಜಗತ್ತಿನಲ್ಲೇ ಪ್ರಥಮ ಸ್ಥಾನ ಪಡೆದವನು” ಎಂದಂದೆ. “ಒಂದೂರಿಗೆ ಅಂಥವನೊಬ್ಬನಿದ್ದರೆ ಸಾಕು – ಆ ಊರಿಗೇ ಸುಖ ಸಿಗುತ್ತೆ. ಅವರು ನಮ್ಮೂರಿಗೆ ಬರಲಿ ನನ್ನ ಸ್ವಾಗತವು ಸದಾ ಇದೆ. ಅವರನ್ನು ಇನ್ನೂ ನೋಡಬೇಕು ಎಂದೆನಿಸುತ್ತದೆ” ಎಂದು ಮಿ. ಪೆಗಟಿಯವರು ನನ್ನನ್ನು ನೋಡುತ್ತಾ ಅಂದರು. “ಅಂಥವರನ್ನು ಎಷ್ಟು ನೋಡಿದರೂ ಸಾಲದು – ನೋಡುವುದೇನು? ಸಹಪಾಠಿಯಾಗಿ, ಜತೆಯಲ್ಲಿ ಕಲೆತು, ಬೆರೆತು ನೋಡಬೇಕು. ಅವನಿಗಿರುವಂಥ ಧೈರ್ಯ, ಸಾಹಸ, ವ್ಯಕ್ತಿತ್ವ, ದೇಹಸಾಮರ್ಥ್ಯ, ಬುದ್ಧಿಶಕ್ತಿ, ಚುರುಕುತನ, ನಾಜೂಕು, ಸರಳ ಹರ್ಷತನ ಯಾರಿಗೂ ಇಲ್ಲ. ಇಷ್ಟೂ ಅಲ್ಲದೆ ಅವನ ತೇಜಸ್ಸು ಲಕ್ಷಣ, ಸುಂದರರೂಪ, ಎಲ್ಲವೂ ಅವನೊಬ್ಬನಿಗೇ ಇರುವ ವೈಶಿಷ್ಟ್ಯ” ಎಂದು ಮೊದಲಾಗಿ ನಾನು ವಿಪರೀತವಾಗಿ – ಸ್ವಲ್ಪ ಹದ ತಪ್ಪಿಯೇ – ವರ್ಣಿಸುತ್ತಲೂ ಮಾತಾಡಿದೆ.

ಈ ಎಲ್ಲಾ ಮಾತುಗಳನ್ನು ಎಮಿಲಿ ಕೇಳುತ್ತಿದ್ದಳು ಮಾತ್ರವಲ್ಲದೆ, ಎಲ್ಲವನ್ನೂ ಹೀರಿ ಜೀರ್ಣಿಸುವಂತೆ ಉಸಿರನ್ನೇ ಬಿಗಿ ಹಿಡಿದು ಏಕಾಗ್ರಚಿತ್ತದಲ್ಲಿ – ಈ ಮಾತುಗಳಿಂದ ತನ್ನಂತರಂಗದಲ್ಲೇ ಆಗುತ್ತಿದ್ದ ಚಿತ್ರಗಳನ್ಜು – ನೋಡುತ್ತಲೂ ಇದ್ದಳು, ಎಂಬಂತೆ ಎವೆಯಿಕ್ಕದ ದೃಷ್ಟಿಯಿಂದ ನೋಡುತ್ತಿದ್ದಳು. ಆಗ್ಗೆ ಅವಳ ಎರಡು ಕಣ್ಣುಗಳೂ ವಜ್ರದ ಹರಳಿನಂತೆ ಪ್ರಕಾಶಿಸುತ್ತಿದ್ದುವು. ನಾವೆಲ್ಲರೂ ಅವಳನ್ನು ನೋಡಿ ಆಶ್ಚರ್ಯಗೊಂಡೆವು. ನಾವು ಅವಳನ್ನು ನೋಡಿದ್ದನ್ನು ಕಂಡು ನಾಚಿಕೆಪಟ್ಟುಕೊಂಡು ಅವಳು ಎದ್ದು ಹೋಗಿಬಿಟ್ಟಳು.

ಅನಂತರ ನಾವೆಲ್ಲರೂ ಹಿಂದಿನ ಕ್ರಮದಲ್ಲೇ ಅವರವರ ಸ್ಥಳದಲ್ಲಿ ಮಲಗಿದೆವು. ರಾತ್ರಿ ಸಮುದ್ರಘೋಷ ಬಹುವಾಗಿ ಕೇಳಿಸುತ್ತಿತ್ತು. ಅದು ಒಮ್ಮೊಮ್ಮೆ ಉಕ್ಕಿಬಂದು ನಮ್ಮ ಮನೆಯನ್ನೇ ಮುಳುಗಿಸಿಬಿಡುವುದೋ ಎಂಬಷ್ಟರವರೆಗೆ ಆ ಶಬ್ದ ಕೇಳಿಸುತ್ತಿತ್ತು. ನನ್ನ ನಿದ್ರೆಯಲ್ಲಿ ಸಮುದ್ರ ಘೋಷವೂ, ನನ್ನ ಬ್ಲಂಡರ್ಸ್ಟನ್ ಮನೆಯ ದುಃಖಪರಿಸ್ಥಿತಿಯೂ, ಎಮಿಲಿಯ ಸುಂದರ ಮೂರ್ತಿಯೂ – ಈ ಎಲ್ಲಾ ಶಬ್ದ, ಭಾವ, ರೂಪಗಳು ಬೆರೆತು ನಾನಾ ವಿಧವಾಗಿ ಸ್ವಪ್ನವಾಗಿ ರಾತ್ರಿಯಿಡೀ ತೋರುತ್ತಿದ್ದುವು. ನಿದ್ರೆಯಿಂದೆಚ್ಚತ್ತಮೇಲೂ ಎಮಿಲಿಯ ಹಂಬಲಿಕೆಯು ನನ್ನನ್ನು ಆವರಿಸಿತ್ತು. ನಾನು ಅಲ್ಲಿದ್ದಾಗ, ಅನುಕೂಲವಿದ್ದಾಗಲೆಲ್ಲಾ ಅವಳ ಜತೆಯಲ್ಲಿ ಒಡನಾಡುತ್ತಿದ್ದೆನು. ಅವಳಿಗೆ ಕಥೆಗಳನ್ನೋದಿ ಹೇಳುತ್ತಿದ್ದೆನು. ಚರಿತ್ರೆಯನ್ನು ಹೇಳಿಕೊಡುತ್ತಿದ್ದೆನು. ಹೀಗೆ ಎಮಿಲಿಯ ಜತೆಯಲ್ಲಿ ನಾನು ಬಹು ಸಂತೋಷದಿಂದ ದಿನ ಕಳೆಯುತ್ತಿದ್ದೆನು.

ಮಿ. ಪೆಗಟಿಯ ಮನೆಯಲ್ಲಿ ನಾನು ಹೀಗೆ ದಿನ ಕಳೆಯುತ್ತಿದ್ದಾಗಲೇ ನನಗೆ ಬಾರ್ಕಿಸನ ಪರಿಚಯವೂ ಹೆಚ್ಚಾಗತೊಡಗಿತು. ಬಾರ್ಕಿಸನು ಪ್ರತಿದಿನವೂ ಆ ಮನೆಗೆ ಬಂದು ಏನಾದರೊಂದು ವಿಶೇಷ ವಸ್ತುವನ್ನು, ಪೆಗಟಿಗೆ ಹೇಗಾದರೂ ತಲುಪಲೆಂದು, ನಮಗೆ ಗೊತ್ತುಮಾಡದೆ – ತಾನು ಮರೆತುಬಿಟ್ಟು ಹೋಗಿರುವಂತೆ – ಬಿಟ್ಟು ಹೋಗುತ್ತಿದ್ದನು. ಹಣ್ಣುಗಳು, ಮಾಂಸ, ಲೋಲಾಕ್, ಕಾಲುಚೀಲಗಳು, ಗಿಳಿಪಂಜರ, ಕನ್ನಡಿ – ಈ ರೀತಿ ಯಾರೂ ಊಹಿಸಲಾರದಂಥ ವಸ್ತುಗಳನ್ನು – ತಂದೊಪ್ಪಿಸುತ್ತಿದ್ದನು.

ಕೊನೆಗೊಂದು ದಿನ ಬಾರ್ಕಿಸ್-ಪೆಗಟಿಯರ ಮದುವೆಯೂ ನಿಶ್ಚಯವಾಯಿತು. ಆದರೆ ಮದುವೆ ಆಡಂಬರವಿಲ್ಲದೆ ಜರುಗಬೇಕೆಂದು ಮಿ. ಪೆಗಟಿ ನಿಶ್ಚೈಸಿದ್ದುದರಿಂದ ಎಮಿಲಿ, ಪೆಗಟಿ, ಬಾರ್ಕಿಸ್ ಮತ್ತೂ ನಾನು ಮಾತ್ರ ಮದುವೆಗೆ ಹೋಗಬೇಕೆಂದು ಏರ್ಪಾಡಾಯಿತು. ಒಂದು ಚಂದದ ಬಂಡಿಯನ್ನು ನಮ್ಮ ಮೆರವಣಿಗೆಗಾಗಿ ಬಾರ್ಕಿಸನು ತಂದನು. ಬಂಡಿಯನ್ನು ಅಲಂಕರಿಸಿದರು. ನಮ್ಮ ಪಯಣಕ್ಕೆ ಬೇಕಾದ ತಿಂಡಿ ತೀರ್ಥಗಳನ್ನು ಬಂಡಿಯಲ್ಲಿಟ್ಟರು. ನಮ್ಮ ಪಯಣ ಸುಖವಾಗಿ ಸಾಗಲೆಂದು ಆಶೀರ್ವಾದಪೂರ್ವಕವಾಗಿ ಪಾದರಕ್ಷೆಗಳನ್ನು ಎಸೆಯಬೇಕಾದ ಕಾರ್ಯವನ್ನು ಮಿಸೆಸ್ ಗಮ್ಮಿಜ್ಜರು ಮಾಡಿದರು. ನಮ್ಮ ಬಂಡಿ ಇಗರ್ಜಿಯ ಬಳಿ ಬಂದಾಗ ನನ್ನನ್ನೂ ಎಮಿಲಿಯನ್ನೂ ಬಂಡಿಯಲ್ಲೇ ಬಿಟ್ಟು ಪೆಗಟಿಯೂ ಬಾರ್ಕಿಸನು ಇಗರ್ಜಿಗೆ ಹೋದರು. ಇಗರ್ಜಿಯ ಕಾರ್ಯಗಳಾದನಂತರ ಪೆಗಟಿ ಮತ್ತು ಬಾರ್ಕಿಸರು ನಮ್ಮ ಜತೆ ಸೇರಿದರು. ಅನಂತರ ನಾವು ಒಂದು ಹೋಟೆಲಿಗೆ ಹೋಗಿ ಊಟ ತಿಂಡಿ ಮುಗಿಸಿಕೊಂಡು ಯಾರ್ಮತ್ತಿನ ಕಡೆಗೆ ಮರುಪಯಣವನ್ನು ಪ್ರಾರಂಭಿಸಿದೆವು. ದಾರಿಯಲ್ಲಿ ಬಾರ್ಕಿಸನು, ಮುಗುಳ್ನಗೆಯಿಂದ ನನ್ನನ್ನು ನೋಡುತ್ತಾ – “ಮಿ. ಕಾಪರ್ಫೀಲ್ಡ್, ಇವಳ ಹೆಸರೇನು, ಹೇಳಿ” ಎಂದು ಪೆಗಟಿಯನ್ನು ಮುಟ್ಟಿ ತೋರಿಸುತ್ತಾ ಕೇಳಿದನು. “ಕ್ಲೇರಾ ಪೆಗಟಿ” ಅಂದೆನು ನಾನು. “ಪೂರ್ತಿ ಸರಿಯಲ್ಲ – ಕ್ಲೇರಾ ಬಾರ್ಕಿಸ್ ಪೆಗಟಿ – ಸಿ.ಪಿ. ಬಾರ್ಕಿಸ್ ಎಂದಾಗಬೇಕು” ಎಂದು ಬಾರ್ಕಿಸನು ಅಂದನು. ಅನಂತರ ಇಗರ್ಜಿಯಲ್ಲಿ ಜರುಗಿಸಿದ ಕಾರ್ಯಗಳನ್ನೆಲ್ಲಾ ಅವನಿಂದ ಸಾಧ್ಯವಾದಷ್ಟು ವಿವರಿಸಿ ತಿಳಿಸಿದನು. ನಮ್ಮ ಬಂಡಿ ಬೇಕೆಂದೇ ಸಾವಧಾನದಿಂದ ಹೋಗುತ್ತಿತ್ತು. ಇಂಥ ಒಂದು ವಿಧದ ವಿರಾಮದಲ್ಲಿ, ಬಾರ್ಕಿಸನೂ ಪೆಗಟಿಯೂ ತಂತಮ್ಮೊಳಗೆ ಬೇಕಾದಷ್ಟೆಲ್ಲ ಮಾತಾಡಿಕೊಂಡರು.

ಎಮಿಲಿ ನಾನು ಸಹ ನಮ್ಮ ನಮ್ಮೊಳಗೆ ಬೇಕು ಬೇಕಾದಂತೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ನಾವು ಮಾತಾಡಿ ಮುದ್ದಾಡಿಕೊಂಡಿದ್ದಕ್ಕೆ ಮಿತಿಯಿಲ್ಲ. ನಾವು ಒಂದು ನೂತನ ಪ್ರಪಂಚವನ್ನೇ ಸೃಷ್ಟಿಸಿಕೊಂಡು ಅದರಲ್ಲಿ ಸಂತೋಷದಿಂದ ವಿಹರಿಸುತ್ತಿದ್ದೆವು. ನಮ್ಮ ಸುಖಕ್ಕೆ ಬಾಹ್ಯದ ಪ್ರಕೃತಿ ಸೌಂದರ್ಯ ಸಹಾಯ ಕೊಟ್ಟದ್ದಕ್ಕಿಂತಲೂ ಹೆಚ್ಚಾಗಿ ನಮ್ಮ ಅಂತರಂಗದಲ್ಲಿನ ಬಯಕೆ, ಆಲೋಚನೆ, ಕಲ್ಪನೆಗಳೇ ಸಹಾಯ ಒದಗಿಸುತ್ತಿದ್ದುವು. ನನ್ನ ಆಲೋಚನೆ ಎಮಿಲಿಯೊಡನೆ ನಾನು ಮದುವೆಯಾಗುವವರೆಗೂ ತಲುಪಿತ್ತು. ನಾನು ಎಮಿಲಿಯನ್ನು ಮದುವೆಯಾಗಿ, ನಾವೀರ್ವರೂ ವಿಶಾಲ ಮೈದಾನಗಳ ಮಧ್ಯದಲ್ಲಿ, ಜ್ವಲಿಸುವ ಬೆಳಕು ಸದಾ ಪ್ರಕಾಶಿಸುತ್ತಿರುವಾಗ, ಎತ್ತರವಾಗಿ ಬೆಳೆದ ದೊಡ್ಡ ದೊಡ್ಡ ಮರಗಳ ತಂಪಿನ ನೆರಳಿನಲ್ಲಿ, ಎಂದೂ ದೊಡ್ಡವರಾಗದೆ, ನಮ್ಮ ಅಂದಿನ ಸಂತೋಷ ಶಿಖರ ಕುಗ್ಗದೆ, ಹಾರಿ, ನಲಿದಾಡಿ, ಮುದ್ದಿಟ್ಟುಕೊಂಡು ಜೀವಿಸಬೇಕೆಂಬುದಾಗಿ ಯೋಚಿಸಿ ಸಂತೋಷಿಸುತ್ತಿದ್ದೆನು. ಒಮ್ಮೊಮ್ಮೆ ಬಂಡಿಯ ಅಲುಗಾಟದಿಂದ ನಾವು ಮನೋರಾಜ್ಯದಿಂದ ಕೆಳಗಿಳಿದು ಸುತ್ತಲಿನ ಅನುಭವವನ್ನು ಗ್ರಹಿಸುತ್ತಿದ್ದರೂ, ಎಮಿಲಿಯ ದಿವ್ಯ ಮುಖಾವಲೋಕನದಿಂದ ಪುನಃ ಕಲ್ಪನಾ ರಾಜ್ಯಗಳಿಗೆ ಹೋಗಿ ಮೊದಲಿನಂತೆಯೇ ಸುಖಿಸುತ್ತಿದ್ದೆನು. ಬಿಸಿಲೂ ನೆಳಲೂ ಇರುವಲ್ಲಿ, ಹಸಿರು ಹುಲ್ಲುಬೆಳೆದಿರುವ ಮೃದು ಮೈದಾನದಲ್ಲಿ, ಹಗಲೆಲ್ಲಾ ನಾವೀರ್ವರೂ ಜತೆಯಾಗಿ ನಲಿದಾಡಬೇಕು. ನಲಿದು ಬಳಲಿದಾಗ ಹೂಗಳ ಮಧ್ಯದಲ್ಲಿ ಆಕಾಶವನ್ನು ನೋಡುತ್ತಾ ಮಲಗಿ ವಿಶ್ರಮಿಸಬೇಕು. ರಾತ್ರಿಯಲ್ಲಿ ಮೆತ್ತನೆಯ ಹುಲ್ಲಿನ ಮೇಲೆ ಮಲಗಿ, ಮರದ ಪಾತಿಗಳ ತಲೆದಿಂಬನ್ನಿಟ್ಟುಕೊಂಡು ನಿದ್ರಿಸಿ, ನಿದ್ರೆಯಲ್ಲೇ ಅರಿಯದೆ ಸಾಯಬೇಕು. ಸತ್ತನಂತರ ಪಕ್ಷಿಗಳು ನಮ್ಮ ಸಮಾಧಿಯನ್ನು ಕಟ್ಟಿ ಸತತವೂ ಅದರ ಮೇಲೆ ಹಾರಾಡಬೇಕು – ಎಂದು ಮೊದಲಾಗಿ ಎಂದೂ ದುಃಖವನ್ನು ಕಾಣದೆ, ಆನಂದಮಯರಾಗಿ ಬದುಕುವ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಿದ್ದೆನು. ಎಮಿಲಿಯ ಮನಸ್ಸಿನಲ್ಲೂ ಈ ತೆರನಾದ ಚಿತ್ರಗಳೂ ಹಂಬಲಗಳೂ ಏಳುತ್ತಿದ್ದುವೆಂದು ನಾನು ಮಾತಾಡಿ ತಿಳಿದೆ. ನಾವೀರ್ವರೂ ನಿಷ್ಕಪಟ ಮತ್ತು ನಿಷ್ಕಳಂಕ ಪ್ರೇಮದಿಂದ ಎರಡು ನಕ್ಷತ್ರಗಳಂತೆ ಬೆಳಗಿ, ಅವುಗಳಂತೆಯೇ ವಿಸ್ಮಯಕಾರಕರೂ ಆಗಿ, ಮದುವಣಿಗರ ಮೆರವಣಿಗೆಯಲ್ಲಿ ಶುಭೋದಯದ ಗ್ರಹಗಳಾಗಿ ಬೆಳಗಿದೆವು.

ಯಾರ್ಮತ್ತಿಗೆ ತಲುಪಿದನಂತರ ಈ ನೂತನ ದಂಪತಿಗಳು ಬಾರ್ಕಿಸನ ಮನೆಗೆ ಹೋದರು. ನಾನೂ ಎಮಿಲಿಯೂ ಮಿ. ಪೆಗಟಿಯ ಮನೆಗೆ ಹೋದೆವು. ಆ ದಿನ ರಾತ್ರಿ ಮಿ. ಪೆಗಟಿ ಮತ್ತು ಹೇಮರು ಬಲೆಯನ್ನು ತೆಗೆದುಕೊಂಡು ಸಮುದ್ರದ ಕಡೆಗೆ ಹೋದರು. ಎಮಿಲಿ ಮತ್ತು ಮಿಸೆಸ್ ಗಮ್ಮಿಜ್ಜರ ರಕ್ಷಣೆಯ ಭಾರವೆಲ್ಲ ನನ್ನದಾಯಿತು. ಇಂಥ ಜವಾಬ್ದಾರಿ ದೊರೆತದ್ದಕ್ಕಾಗಿ ನಾನು ಬಹಳ ಸಂತೋಷಪಟ್ಟೆನು. ಮತ್ತು ಇದರ ಸಂಪೂರ್ಣ ಫಲವನ್ನು ಪಡೆಯುವುದಕ್ಕಾಗಿ ಏನಾದರೊಂದು ವಿಶೇಷ ಘಟನೆ ಸಂಭವಿಸಿದರೂ ಆಗಬಹುದೆಂದು ನನಗೆ ತೋರುತ್ತಿತ್ತು. ಒಬ್ಬ ಭಯಂಕರ ರಾಕ್ಷಸನೋ ಒಂದು ಸಿಂಹವೋ ಬಂದು ನಮ್ಮ ಎಮಿಲಿಗೆ ಉಪದ್ರವ ಕೊಡಬೇಕಿತ್ತು, ಆಗ್ಗೆ ನನ್ನ ವೀರ ಸಾಹಸ, ತ್ಯಾಗ, ಪ್ರೇಮದ ಪರಿಪೂರ್ಣ ಪರಿಚಯವನ್ನು ಎಮಿಲಿಗೆ ಮಾಡಿಕೊಡುತ್ತಿದ್ದೆನೆಂದು ಮನಸ್ಸಿನಲ್ಲಿ ಹಂಬಲಗಳು ಏಳುತ್ತಿದ್ದುವು. ಆದರೆ ಸಿಂಹವಾಗಲೀ, ಹೆಬ್ಬಾವಾಗಲೀ ಬರದೇ, ನಾನು ನಿದ್ರಿಸಬೇಕಾಯಿತು. ಆದರೆ ನಿದ್ರೆಯಲ್ಲೊಬ್ಬ ಭಯಂಕರ ರಾಕ್ಷಸನನ್ನು ಸಂಹರಿಸಿ ಎಮಿಲಿಯನ್ನು ರಕ್ಷಿಸಿದ ಸ್ವಪ್ನವನ್ನಂತೂ ಕಂಡೆನು. ಈ ಪ್ರಸಂಗದಲ್ಲಿ ನಾನು ಕೂಗಿ, ಕನವರಿಸಿ ನಿದ್ರಿಸಿದ್ದೆನಾಗಿ ತಿಳಿದೆನು.

ಮರುದಿನ ನನ್ನನ್ನು ಬಾರ್ಕಿಸ್ ತನ್ನ ಬಂಡಿಯಲ್ಲಿ ಕರೆದುಕೊಂಡು ಹೋಗಿ ಬ್ಲಂಡರ್ಸ್ಟನ್ನಿನಲ್ಲಿ ಬಿಟ್ಟನು. ನನ್ನನ್ನು ಬೀಳ್ಕೊಡುವಾಗ ಪೆಗಟಿ ಅತ್ತಳು. ಪೆಗಟಿಯೂ ನನ್ನೊಡನೆ ಬಂಡಿಯಲ್ಲೇ ನಮ್ಮ ಮನೆಯವರೆಗೂ ಬಂದಿದ್ದಳು. ನಾನೂ ಮನೆಯೂ ಕಾಣುತ್ತಿದ್ದಷ್ಟು ಕಾಲ ಪೆಗಟಿ ಬಂಡಿಯಿಂದಲೇ ಹಿಂದೆ ಮುಖಮಾಡಿ ನೋಡುತ್ತಲೇ ಇದ್ದಳು. ಬ್ಲಂಡರ್ಸ್ಟನ್ನಿನಲ್ಲಿ ನಾನು ಅನಂತರ ಕಳೆದ ದಿನಗಳ ದುಃಖವನ್ನು ವಿವರಿಸುವುದು ಅಸಾಧ್ಯ. ಅಲಕ್ಷ್ಯ, ಅನಾದರ, ಬಹಿಷ್ಕಾರ ಇವೇ ಮರ್ಡ್ಸ್ಟನ್ ದ್ವಯರಿಂದ ನನಗೆ ದೊರಕುತ್ತಿದ್ದ ಮಾನಸಿಕ ಆಹಾರ. ಜನರ ಸಹವಾಸವಿಲ್ಲ – ಕೆಲಸವಿಲ್ಲ – ಮನಸ್ಸಿಗೆ ವಿಶ್ರಾಂತಿಯು ಇಲ್ಲ. ನಾನು ಹೇಗಾದರೂ ಹಾಳಾಗಿ ಹೋಗಬೇಕೆಂಬ ದುರುದ್ದೇಶದಿಂದಲೇ ನನ್ನನ್ನು ಹಾಗೆ ಬಿಟ್ಟಿದ್ದರೆಂದು ನಾನು ದೊಡ್ದವನಾದ ಮೇಲೆ ಗ್ರಹಿಸಿದ್ದೇನೆ.

ಒಂದು ದಿನ ಮಿ. ಮರ್ಡ್ಸ್ಟನರ ಆಫೀಸಿಗೆ ಅವರ ಪೂರ್ವ ಸ್ನೇಹಿತ ಮಿ. ಕ್ವಿನಿಯನ್ನರು ಬಂದಿದ್ದರು. ನನ್ನನ್ನು ಹಿಂದೆ ಅವರು ಲೌಸ್ಟಾಫಿನಲ್ಲಿ ನೋಡಿದ್ದ ಜ್ಞಾಪಕದಿಂದ – “ಮಿಸ್ಟರ್ ಬ್ರೂಕ್ಸ್, ಹೇಗಿದ್ದೀರಿ” ಎಂದು ಕೇಳಿದರು. “ನಾನು ಡೇವಿಡ್ ಕಾಪರ್ಫೀಲ್ಡ್, ಸರ್” ಎಂದು ನಾನಂದೆನು. “ಹುಡುಗ ಹುಶಾರಿದ್ದಾನೆ, ಅವನನ್ನು ಶಾಲೆಗೆ ಕಳುಹಿಸಬೇಕು” ಎಂದು ಮಿ. ಕ್ವಿನಿಯನ್ನರು ಸಲಿಗೆಯಿಂದ ಹೇಳಿದರು. ಅನಂತರ ಮಿ. ಮರ್ಡ್ಸ್ಟನ್ ಮತ್ತು ಮಿ. ಕ್ವಿನಿಯನ್ನರು ತಮ್ಮೊಳಗೇ ಮಾತಾಡಿಕೊಂಡು, ಮಿ. ಮರ್ಡ್ಸ್ಟನ್ನರ ಪಾಲು ಬಂಡವಾಳವಿರುವ “ಮರ್ಡ್ಸ್ಟನ್ ಮತ್ತು ಗ್ರೀನ್ಬಿ” ಎಂಬ ಕಂಪೆನಿಯಲ್ಲಿ ನನಗೆ ಕೆಲಸ ಕೊಡಿಸುವುದಾಗಿ ಏರ್ಪಾಡಾಯಿತು. ಮಿ. ಕ್ವಿನಿಯನ್ನರು ಆ ಕಂಪೆನಿಯಲ್ಲಿ ಮೇನೇಜರರಾಗಿದ್ದುದರಿಂದ ಈ ದಾರಿ ಬಹಳ ಅನುಕೂಲವೆಂದೂ, ನನ್ನಂಥ ಮೈಗಳ್ಳ ಮತ್ತು ಹಟಮಾರಿತನವಿರುವವರನ್ನು ಸರಿದಾರಿಗೆ ತರಲು ಅಲ್ಲಿನ ಕೆಲಸ ಬಹು ಯೋಗ್ಯವೆಂದೂ ನನಗೆ ಕೇಳುವಂತೆಯೇ ಮಿ. ಮರ್ಡ್ಸ್ಟನ್ನರು ತಂಗಿಯ ಹತ್ತಿರ ಹೇಳುತ್ತಿದ್ದರು.

“ನಿನ್ನ ಊಟ, ಚಾ ಮತ್ತು ಇತರ ಖರ್ಚುಗಳ ಬಗ್ಗೆ ನಿನಗೆ ತಕ್ಕಷ್ಟು ಸಂಬಳ ದೊರಕುವ ಏರ್ಪಾಡು ಮಾಡಲಾಗಿದೆ. ಕೆಲಸಗಳನ್ನು ಸರಿಯಾಗಿ ಮಾಡಿ ಸಂಬಳ ಪಡೆದುಕೊಳ್ಳುವ ಜವಾಬ್ದಾರಿಯು ನಿನ್ನದು, ತಿಳಿಯಿತೆ?” ಅಂದರು ಮಿ. ಮರ್ಡ್ಸ್ಟನರು. ನನ್ನ ಖರ್ಚು ವೆಚ್ಚಗಳನ್ನು ಆಗಿಂದಾಗ್ಗೆ ತನಿಕೆ ಮಾಡುವ ಕೆಲಸ ತನ್ನದೆಂದು ಮಿಸ್ ಮರ್ಡ್ಸ್ಟನ್ನಳು ಅಂದಳು. ಈ ರೀತಿಯ ವ್ಯವಸ್ಥೆಯನ್ನು ಮಾಡಿಸಿಕೊಂಡು, ಒರಟು ಬಟ್ಟೆಗಳ ಇಜಾರು ಕೋಟನ್ನೂ, ಹರಿದಿದ್ದ ಹೇಟನ್ನೂ ಧರಿಸಿ, ನನ್ನದಾಗಿ ಉಳಿದಿದ್ದ ಸಾಮಾನುಗಳನ್ನು ಒಂದು ಟ್ರಂಕಿನಲ್ಲಿ ತುಂಬಿಕೊಂಡು ಮರುದಿನ ನಾನು ಮಿ. ಕ್ವಿನಿಯನ್ನರ ಜತೆಯಲ್ಲಿ ಹೊರಟೆನು.

ತನ್ನ ಬಾಲ್ಯದ ಸಂಬಂಧಗಳನ್ನೆಲ್ಲ ಕಡಿದು, ಪರಗೃಹಸ್ಥರ ಜತೆಯಲ್ಲಿ ತನ್ನ ಜೀವನದ ಯುದ್ಧದಲ್ಲಿ ಯೋಧನಾಗಿ ಧುಮುಕಿ ಬಂಡಿಯನ್ನೇರಿ ಹೋಗುತ್ತಿದ್ದ – ಸದ್ಯ ಕೆಲವು ದಿನಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ – ಅನಾಥ ಬಾಲಕನನ್ನು ಓದುಗರು ತಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಹುದು. ಬಂಡಿಯ ಚಕ್ರಗಳು ಉರುಳಿದಂತೆ ನಮ್ಮ ಮನೆ, ಇಗರ್ಜಿ ಮೊದಲಾದುವೆಲ್ಲ ಕ್ರಮೇಣವಾಗಿ ಕಾಣದೇ ಆದುವು. ಇಗರ್ಜಿ ಕಂಪೌಂಡಿನಲ್ಲಿ ಶೋಭಿಸುತಿದ್ದ ವೃಕ್ಷಸಮೂಹ, ವೃಕ್ಷಗಳಡಿಯ ತಂಪಿನಲ್ಲಿ ತೋರುತ್ತಿದ್ದ ಗೋರಿಗಳೂ ಸಹ, ಬಂಡಿ ಸಾಗಿದಂತೆ ಅಡ್ಡಬಂದ ಕಟ್ಟಡಗಳಿಂದ ಉಜ್ಜಿ ತೆಗೆದಂತೆ, ಮಾಯವಾದುವು. ಕೊನೆಗೆ ನನ್ನ ಬಾಲ್ಯದ ಆಟದ ಮೈದಾನದಿಂದ ಆಕಾಶಕ್ಕೆ ಎದ್ದು ಶೋಭಿಸುತ್ತಿದ್ದ ಇಗರ್ಜಿ ಗೋಪುರವೂ ಮಾಯವಾಯಿತು. ನಾನು ಆಕಾಶದ ಶೂನ್ಯವನ್ನೂ, ನನ್ನ ಭವಿಷ್ಯದ ಶೂನ್ಯವನ್ನೂ ಮಾತ್ರ ನೋಡಿ ಕುಳಿತಿದ್ದೆ.

(ಮುಂದುವರಿಯಲಿದೆ)