ಅಧ್ಯಾಯ ಹದಿನೈದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಹದಿನೇಳನೇ ಕಂತು

Woman Driving Carriage Binghamton, NY

ಮಿ.ಡಿಕ್ಕರೂ ನಾನೂ ಪ್ರೀತಿಯ ಮಿತ್ರರಾದೆವು. ನಾವು ಜತೆಯಾಗಿ ಗಾಳೀಪಟವನ್ನು ಬಿಡುತ್ತಿದ್ದೆವು. ಮಿ. ಡಿಕ್ಕರು ಮನವಿಯನ್ನು ಬರೆಯುವುದೂ ನಮಗೊಂದು ಪದ್ಧತಿಯೇ ಆಗಿಹೋಯಿತು. ಮನವಿಯ ಕಾರ್ಯಕ್ಕೆ ಎಂದಾದರೂ ಅಂತ್ಯವುಂಟೇ ಎಂದು ಗ್ರಹಿಸುವ ಗೋಜಿಗೆ ಮಿ. ಡಿಕ್ಕರು ಹೇಗೂ ಹೋಗುವವರಲ್ಲ – ನಾನೂ ಈ ವಿಷಯದಲ್ಲಿ ಏನನ್ನೂ ಸ್ಪಷ್ಟವಾಗಿ ಊಹಿಸಲಾರದೇ ಹೋಗಿದ್ದೆನು. ಏನೇ ಇದ್ದರೂ ಈ ಮನವಿ ಮಿ. ಡಿಕ್ಕರಿಗೆ ಕೊಡುತ್ತಿದ್ದ ಸಂತೋಷ ಅಷ್ಟಿಷ್ಟಲ್ಲ. ಹೀಗಾಗಿ ನಮ್ಮ ನಿತ್ಯ ಕಾರ್ಯಗಳಲ್ಲಿ ಒಂದು – ಜೀವನದ ಒಂದಂಶ – ಈ ಗಾಳೀಪಟವಾಗಿತ್ತು.

ಸಂಜೆಯ ಸಮಯದಲ್ಲಿ ಮಿ. ಡಿಕ್ಕರು ನೀಲಾಕಾಶದಲ್ಲಿ ಆ ಗಾಳೀಪಟವನ್ನು ತೇಲಿಬಿಟ್ಟು, ತಾನು ಹಸುರು ಹುಲ್ಲಿನ ಮೇಲೆ ಮಲಗಿ, ತನ್ನ ಮನಸ್ಸಿನ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳುತ್ತಿದ್ದರು. ಗಾಳೀಪಟ ಗಾಳಿಯಲ್ಲಿ ತೇಲುತ್ತಿದ್ದಾಗ ಮಿ. ಡಿಕ್ಕರ ಮುಖ ಹರ್ಷಪುಳಕಿತವಾಗಿ ಕಂಡಷ್ಟು ಇನ್ನು ಯಾವ ಸಂದರ್ಭದಲ್ಲೂ ಕಾಣುತ್ತಿರಲಿಲ್ಲ. ಇತರ ಸಮಯಗಳಲ್ಲಿ ಅವರ ಮುಖದಲ್ಲಿ ತೋರಿಬರುತ್ತಿದ್ದ ಅಕಾರಣವಾದ ಮುಗುಳ್ನಗೆ ಅಂಥ ಸಂದರ್ಭದಲ್ಲಿ ಇರುತ್ತಿರಲಿಲ್ಲ. ಆಗ ಅವರ ಮುಖದಲ್ಲು ಬಹುವಾದ ಗಾಂಭೀರ್ಯವೂ ಪ್ರಸನ್ನತೆಯೂ ತೋರಿಬರುತ್ತಿದ್ದುವು. ಮನವಿಯನ್ನು ಹೊತ್ತಿದ್ದ ಆ ಗಾಳೀಪಟ ನಮ್ಮಿಂದ ದೂರ ಸರಿದಷ್ಟು ಮಿ. ಡಿಕ್ಕರ ದುಃಖವೂ ದೂರ ಸರಿಯುತ್ತಿತ್ತು. ಗಾಳೀಪಟ ಹಿಂದೆ ಬಂದ ಹಾಗೆಯೇ ಅವರ ದುಃಖವೂ ಪುನಃ ಗೋಚರಿಸಿಕೊಂಡು, ಅದು ಅವರ ಬಳಿ ನಿಶ್ಚೇತನವಾಗಿ ಬಿದ್ದಿದ್ದಾಗ್ಗೆ ಮಿ. ಡಿಕ್ಕರು ದುಃಖದ ಪ್ರತೀಕವೇ ಆಗಿಬಿಡುತ್ತಿದ್ದರು.

ಅತ್ತೆಯ ಪ್ರೇಮ ನನ್ನ ಮೇಲೆ ಬೆಳೆಯುತ್ತಾ ಬಂತು. `ಟ್ರಾಟೂಡ್’ ಎಂದು ನನಗೆ ಹೆಸರಿಟ್ಟಿದ್ದುದನ್ನು ಬರೇ `ಟಾಟ್’ ಎಂದೇ ಮಾಡಿಕೊಂಡು ಪ್ರೀತಿಯಿಂದ ಕರೆಯತೊಡಗಿದರು. ಕೊನೆಗೆ ನನ್ನ ಕಾಲ್ಪನಿಕ ತಂಗಿ – ಬೆಟ್ಸಿ ಟ್ರಾಟೂಡ್ಡಳ – ಸ್ಥಾನವೇ ನನಗೆ ಅತ್ತೆಯ ಹೃದಯದಲ್ಲಿ ದೊರಕಿತು. ಹೀಗೆ ಕೆಲವು ದಿನ ಕಳೆಯುವುದರ ಒಳಗೆ ಅತ್ತೆಯೂ ಮಿ. ಡಿಕ್ಕರೂ ಆಲೋಚಿಸಿ ನನ್ನನ್ನು ಕೇಂಟರ್ಬರಿಯಲ್ಲಿ ಶಾಲೆಗೆ ಕಳುಹಿಸುವುದೆಂದು ನಿಶ್ಚೈಸಿದರು. ಹೀಗೆ ನಿಶ್ಚಯವಾದ ಮರುದಿನವೇ ಅತ್ತೆ ನನ್ನನ್ನು ಕರೆದುಕೊಂಡು ಕೇಂಟರ್ಬರಿಗೆ ಹೊರಟಳು. ನನ್ನ ಅಗಲುವಿಕೆಯಿಂದ ಮಿ. ಡಿಕ್ಕರಿಗೆ ತುಂಬಾ ಬೇಸರವಾಯಿತು. ಅವರು ತನ್ನಲ್ಲಿದ್ದ ಹಣವನ್ನೆಲ್ಲಾ ನನಗೆ ಕೊಟ್ಟು, ನನ್ನನ್ನು ಹರಸಿ ಕಳುಹಿಸಲು ಮುಂದೆ ಬಂದರು. ಆದರೆ, ಅತ್ತೆ ಮಧ್ಯೆ ಪ್ರವೇಶಿಸಿ – ಒಂದು ವಿಧದ ಮಧ್ಯಸ್ಥಿಕೆಯಿಂದ – ಅವರು ಹತ್ತು ಶಿಲಿಂಗ್ ಮಾತ್ರ ನನಗೆ ಕೊಟ್ಟು ಹೊರಡುವ ಏರ್ಪಾಡಾಯಿತು.

ನಾವು ಕೇಂಟರ್ಬರಿಗೆ ಹೋದದ್ದು ಅತ್ತೆಯ ಕುದುರೆ ಬಂಡಿಯಲ್ಲಿ. ಅತ್ತೆಯೇ ಸ್ವತಃ ಬಂಡಿ ಹೊಡೆಯುವವನ ಎತ್ತರ ಸ್ಥಾನದಲ್ಲಿ ಕುಳಿತು – ರಾಜ ಮೆರವಣಿಗೆಯಲ್ಲಿ ಸಿಪಾಯಿ ಬಂಡಿ ಹೊಡೆಯುವ ಠೀವಿಯಿಂದ – ಬಂಡಿಯನ್ನು ಓಡಿಸಿದಳು. ದಾರಿಯಲ್ಲಿ ಮಾತಾಡುತ್ತಾ ನನ್ನನ್ನು ಕೇಂಟರ್ಬರಿಯ ಒಬ್ಬ ವಕೀಲರು ಶಿಫಾರಸ್ಸು ಮಾಡುವ ಶಾಲೆಗೆ ಕಳುಹಿಸುವುದೆಂದು ಅತ್ತೆ ತಿಳಿಸಿದಳು.

ನಾವು ಕೇಂಟರ್ಬರಿಗೆ ತಲುಪಿದ ದಿನ ಅಲ್ಲಿ ಆ ಊರಿನ ಸಂತೆ ನಡೆಯುತ್ತಿತ್ತು. ದಾರಿಯುದ್ದಕ್ಕೂ ಜನರೂ ವಾಹನಗಳೂ ಸಾಮಾನು ಸಾಗಿಸಿಕೊಂಡು ಹೋಗುತ್ತಿದ್ದರು. ಒಬ ಸ್ತ್ರೀ ಗಂಡಸಿನಂತೆ ಬಂಡಿ ಓಡಿಸುತ್ತಿದ್ದುದನ್ನು ಕಂಡು ಚೇಷ್ಟೆ ಮಾಡುತ್ತಿದ್ದ ಜನಗಳನ್ನಾಗಲೀ ಜನಸಂದಣಿಗಳನ್ನಾಗಲೀ ವಾಹನಗಳನ್ನಾಗಲೀ ಲಕ್ಷಿಸದೇ ಅತ್ತೆ ಬಂಡಿ ಹೊಡೆಯುತ್ತಿದ್ದಳು. ನಾವು ಹೋಗಬೇಕಾಗಿದ್ದುದು ಮಿ. ವಿಕ್ಫೀಲ್ಡ್ ಎಂಬ ಒಬ್ಬ ವಕೀಲರ ಮನೆಗೆಂದು ಅತ್ತೆ ಮೊದಲೇ ತಿಳಿಸಿದ್ದಳು.

ಮಿ. ವಿಕ್ಫೀಲ್ಡರ ಮನೆಗೆ ಸ್ವಲ್ಪ ಹೊತ್ತಿನಲ್ಲೇ ನಾವು ತಲುಪಿದೆವು. ಅವರ ಮನೆ ಮುಖ್ಯರಸ್ತೆಗೆ ಅಡ್ಡ ರಸ್ತೆಯೊಂದು ಬಂದು ಸೇರುವ ಮೂಲೆಯ ಮೊದಲನೆಯ ಮನೆಯಾಗಿತ್ತು. ಮನೆಯನ್ನು ನೋಡುವಾಗಲೇ ಅದೊಂದು ಬಹು ಪುರಾತನದ್ದಾಗಿರಬೇಕೆಂದು ತೋರುತ್ತಿತ್ತು. ಮನೆಯ ಕಿಟಕಿಗಳೆಲ್ಲಾ ಗೋಡೆಯಿಂದ ಹೊರಗೆ ಚಾಚಿಕೊಂಡು ಇಡಲ್ಪಟ್ಟಿದ್ದುವು. ಕಿಟಕಿಗಳೆಲ್ಲಾ ಬಹು ಚಂದದ ಕೆತ್ತನೆ ಕೆಲಸದಿಂದ ಮಾಡಿದ್ದಂತೆ ತೋರುತ್ತಿದ್ದುವು. ಮನೆಯ ಒಳಗಡೆಯ ಮುಚ್ಚಿಗೆಯ ಅಡ್ಡಗಳು ಸಾಲಾಗಿ, ಒಂದೇ ಮಾನದಿಂದ, ಗೋಡೆಯ ಹೊರ ಬದಿ ಸ್ವಲ್ಪ ಮೀರಿಕೊಂಡು ಬಂದು, ಗೋಡೆಗೆ ಒಂದು ವಿಧದ ಅಲಂಕಾರವನ್ನು ಮಾಡಿದ್ದುವು. ಆ ಅಡ್ಡಗಳ ತುದಿಯಲ್ಲಿ ಮನುಷ್ಯನ ತಲೆಯ ಆಕಾರಗಳನ್ನು ಕೆತ್ತಿಟ್ಟಿದ್ದರು. ಈ ತಲೆಗಳು ಕೆಳಗಡೆ ರಸ್ತೆಯಲ್ಲಿ ಹೋಗುತ್ತಿದ್ದವರನ್ನೆಲ್ಲಾ ಸತತವೂ ನೋಡುತ್ತಲೇ ಇರುತ್ತಿದ್ದುವು. ನಾವು ಬಂಡಿಯಿಂದಿಳಿದು ಮನೆಗೆ ಸಮೀಪವಾದಾಗ ಮನೆಯ ಹೆಬ್ಬಾಗಿಲೂ ಮೆಟ್ಟಲುಗಳೂ ತೋರಿದುವು. ಬಾಗಿಲಲ್ಲಿ ಬಹು ಚಂದದ ಕೆತ್ತನೆ ಕೆಲಸ ಮಾಡಿದ್ದರು. ಮನೆಯ ನೆಲ, ಗೋಡೆ ಎಲ್ಲವೂ ಚೊಕ್ಕಟವಾಗಿದ್ದು, ಪಳಪಳನೆ ಹೊಳೆಯುತ್ತಿದ್ದುವು. ಮನೆಯ ಮುಖ್ಯ ಮೆಟ್ಟಲುಗಳು ಶ್ವೇತ ಶಿಲೆಯಿಂದ ಮಾಡಿದವಾಗಿದ್ದುವು. ಈ ರೀತಿ ಬಾಗಿಲು, ಕಿಟಕಿ, ಮೆಟ್ಟಲುಗಳೆಲ್ಲವೂ ಪರ್ವತಗಳಷ್ಟು ಪುರಾತನದವೂ ಪರ್ವತಗಳನ್ನು ಮುಚ್ಚುವ ಹಿಮದಷ್ಟು ನಿರ್ಮಲವೂ ಆಗಿದ್ದುವು.

ನಾವು ಮನೆಯ ಮೆಟ್ಟಲನ್ನು ಮುಟ್ಟುತ್ತಿದ್ದಾಗಲೇ ಮನೆಯ ಕಿಟಕಿಯಿಂದ ತಲೆ ಹೊರಹಾಕಿ ನೋಡುತ್ತಿದ್ದ ಒಂದು ಮುಖವನ್ನು ನಾನು ಕಂಡೆನು. ಆ ಮುಖವನ್ನು ನೋಡಿದಾಗ ನನಗೆ ಹೆಣದ ಮುಖ ಕಂಡಂತಾಯಿತು. ನಾವು ಮನೆಯೊಳಗೆ ನುಗ್ಗುವ ಮೊದಲೇ ಆ ಮುಖ ಹೊತ್ತ ಮನುಷ್ಯನು ಹೊರಗೆ ಬಂದು ನಮ್ಮತ್ತೆಯನ್ನು ಸ್ವಾಗತಿಸಿದನು. ಅವನ ಕೃಶ ದೇಹ, ನೀಳವಾದ ಕೈಗಳನ್ನು ಕಂಡು ನನಗೆ ಒಂದು ವಿಧದ ಜಿಗುಪ್ಸೆ ತೋರಿತು. ಅವನು ತಲೆಕೂದಲನ್ನು ಬಹು ಗಿಡ್ಡವಾಗಿ ಬೋಳಿಸಿಕೊಂಡಿದ್ದನು. ಕೂದಲ ಮೇಲೆಯೇ ಅವನಿಗೆ ದ್ವೇಷವಿದ್ದಂತೆ ಅವನ ಹುಬ್ಬುಗಳಲ್ಲೂ ಕಣ್ಣು ರೆಪ್ಪೆಗಳಲ್ಲೂ ಕೂದಲಿರಲಿಲ್ಲ. ಅವನನ್ನು ಸ್ವಲ್ಪ ವಿಚಾರದೃಷ್ಟಿಯಿಂದ ನೋಡಿದ ಹಾಗೆ ಅವನು ಕಣ್ಣು ರೆಪ್ಪೆಗಳನ್ನೇ – ಎಲ್ಲರೂ ಆಡಿಸುತ್ತಿರುವಂತೆ – ಆಡಿಸುತ್ತಿರಲಿಲ್ಲ. ಮನೆಯ ಯಜಮಾನರು ಮನೆಯಲ್ಲಿದ್ದಾರೋ ಎಂದು ಅವನೊಡನೆ ವಿಚಾರಿಸಿಕೊಂಡು ನಾವು ಮನೆಯೊಳಗೆ ಹೋದೆವು. ಅವನು ಮಿ. ವಿಕ್ಫೀಲ್ಡರ ಗುಮಾಸ್ತನೆಂದೂ ಅವನ ಹೆಸರು ಉರೆಯಾಹೀಪ್ ಎಂದೂ ಅತ್ತೆ ತಿಳಿಸಿದಳು. ಅವನಿಗೆ ಸಾಧಾರಣ ಹದಿನಾರು ವರ್ಷ ಪ್ರಾಯವಾಗಿರಬಹುದೆಂದು ನಾನು ಊಹಿಸಿದೆ.

ಉರೆಯಾಹೀಪನು ನಮ್ಮನ್ನು ಉದ್ದದ ಒಂದು ಕೋಣೆಯಲ್ಲಿ ಕುಳ್ಳಿರಿಸಿ, ಯಜಮಾನರಿಗೆ ತಿಳಿಸಲು ಒಳಗೆ ಹೋದನು. ನಾವು ಕುಳಿತಿದ್ದ ಕೋಣೆ ವಕೀಲರದೆಂದು ಗೊತ್ತಾಗುತ್ತಿತ್ತು. ಆ ಕೋಣೆಯಲ್ಲಿ ಮೇಜು, ಕುರ್ಚಿ, ಕಪಾಟುಗಳೂ ಇದ್ದುವಲ್ಲದೆ ಮೇಜಿನ ಮೇಲೆ ಕೆಂಪು ಲಾಡಿಗಳಿಂದ ಕಟ್ಟಲಾಗಿದ್ದ ರಿಕಾರ್ಡ್ ಕಟ್ಟುಗಳೂ ಕನ್ನಡಿ ಕಪಾಟಿನ ಒಳಗೆ ದಪ್ಪದಪ್ಪದ ಪುಸ್ತಕಗಳೂ ಇದ್ದುವು. ಆ ಕೋಣೆಗೆ ಮುಚ್ಚಿಗೆ ಇತ್ತು. ಮುಚ್ಚಿಗೆಗೆ ಒಂದೆರಡು ಮೊಳ ಕೆಳಗೆ, ಗೋಡೆಯಲ್ಲೇ ಎದ್ದು ಬರಿಸಿದ್ದ ಅಲಂಕಾರಿಕ ಚಡಿಯಲ್ಲಿ, ಒಬ್ಬ ಗೃಹಸ್ಥನದೂ ಮತ್ತು ಒಬ್ಬಳು ಗೃಹಿಣಿಯದೂ ಸುಂದರವಾದ ಎರಡು ತೈಲಚಿತ್ರಗಳು ಒಂದರಬದಿಯಲ್ಲಿ ಒಂದರಂತೆ ಇದ್ದುವು. ಗೃಹಸ್ಥನ ಹುಬ್ಬು, ಮೀಶೆಗಳು ಕಪ್ಪಗೇ ಇದ್ದರೂ ಅವನ ತಲೆಗೂದಲು ಬೆಳ್ಳಗಿತ್ತು. ಗೃಹಿಣಿ ಸುಂದರಿಯಾಗಿಯೂ ಶಾಂತ ಮುಖಮುದ್ರೆಯವಳೂ ಆಗಿದ್ದಳು. ಇಬ್ಬರೂ ಘನವಂತರೂ ಪ್ರಭಾವಶಾಲಿಗಳೂ ಎಂಬಂತೆ ತೋರುತ್ತಿದ್ದರು.

ಸ್ವಲ್ಪಹೊತ್ತಿನಲ್ಲಿ ನಮ್ಮೆದುರಿನ ಬಾಗಿಲಿಂದ ಒಬ್ಬ ಗೃಹಸ್ಥರು ಬಂದರು. ಅವರನ್ನು ಕಂಡೊಡನೆಯೇ ನಾನು ತೈಲಚಿತ್ರವನ್ನು ನೋಡುವಂತೆ ಆಯಿತು – ನಮ್ಮೆದುರು ಬಂದವರು ತೈಲಚಿತ್ರದಿಂದಲೇ ಎದ್ದು ಬಂದಿದ್ದವರಂತೆ ತೋರಿದರು. ಆದರೆ ತೈಲಚಿತ್ರದವರು ಸ್ವಲ್ಪ ಎಳೆಪ್ರಾಯದವರಾಗಿಬೇಕೆಂಬಂತಿದ್ದರು. ಬಂದವರು ನಮ್ಮನ್ನು ಕುಳಿತುಕೊಳ್ಳಲು ಹೇಳಿ – “ಮಿಸ್ ಟ್ರಾಟೂಡ್, ನೀವು ಬಂದ ಕಾರ್ಯವೇನು? ಕೋರ್ಟು ಸಂಬಂಧವಲ್ಲವಷ್ಟೇ?” ಅಂದರು. “ಕೋರ್ಟು ಸಂಬಂಧ ಬಂದದ್ದಲ್ಲ – ನನ್ನ ಅಳಿಯ ಬಂದಿದ್ದಾನೆ, ಚಿಕ್ಕವನು. ಅವನನ್ನು ಶಾಲೆಗೆ ಸೇರಿಸಬೇಕೆಂದು ಬಂದಿರುವೆನು” ಅಂದಳು ಅತ್ತೆ. ವ್ಯಾಜ್ಯ, ಕೋರ್ಟು, ಇವೆಲ್ಲಾ ಬೇಡವಮ್ಮಾ ಬೇಡ. ಅವುಗಳ ಅನುಭವ ನಮಗೆ ಇವೆ. ನಾನೇನೋ ಈ ವೃತ್ತಿಯಲ್ಲಿ – ನಿಮಗೆ ಗೊತ್ತಿದೆಯಲ್ಲ – ಆ ಒಂದು ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ. ನಿಮಗೊಬ್ಬ ಅಳಿಯನಿದ್ದಾನೆಂದು ನನಗೆ ಗೊತ್ತಿಲ್ಲ” ಅಂದರು ಮಿ. ವಿಕ್ಫೀಲ್ಡರು. “ಇವನೇ ನನ್ನಳಿಯ – ದತ್ತಕನನ್ನಾಗಿ ಸ್ವೀಕರಿಸಿ ಸಾಕುತ್ತಿದ್ದೇನೆ” ಎಂದು ಹೇಳಿ ನನ್ನನ್ನು ತೋರಿಸಿದಳು.= “ಶಾಲೆಗೆ ಸೇರುವುದು ಸರಿ, ನಿಮ್ಮ ಗುರಿಯೇನು? ಎಂಥ ವಿದ್ಯೆ? ಮುಂದಿನ ಜೀವನದ ಉದ್ದೇಶಕ್ಕೆ ಸರಿಯಾಗಿ ಇಂದಿನ ವಿದ್ಯೆ ಏನಾಗಬೇಕೆಂದು ನಾವು ಗೊತ್ತುಮಾಡಿಕೊಳ್ಳಬೇಕು” ಅಂದರು ವಕೀಲರು.

“ಈ ವಕೀಲನ ಪ್ರಶ್ನೆಯು ಯಾವಾಗಲು ಒಂದೇ ವಿಧದ್ದಿರುತ್ತದೆ. `ಉದ್ದೇಶ’, `ಗುರಿ’, `ಹೇತು’ – ನೀವು ವಿಚಾರಿಸುವುದೇ ಹೀಗೆ. ನಮಗೆ ಅದಕ್ಕೆಲ್ಲಾ ಉತ್ತರ ತಿಳಿಯದು. ನಮ್ಮ ಬಾಲಕನು ವಿದ್ಯಾವಂತನಾಗಿ, ಸುಖಜೀವನವನ್ನು ನಡೆಸಲು ಸಾಮರ್ಥ್ಯ ಪಡೆಯಬೇಕು. ಅದೇ ನಮ್ಮ ಗುರಿ” ಅಂದಳು ಅತ್ತೆ. “ಸರಿ ಹಾಗಾದರೆ, ಅರ್ಥವಾಯಿತು. ನಾನು ನಿಮ್ಮನ್ನು ಒಂದು ಶಾಲೆಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಅಲ್ಲದೆ, ಹುಡುಗನಿಗೆ ಅಲ್ಲೇ ಊಟವಸತಿಗಳ ಏರ್ಪಾಡೂ ಸಿಕ್ಕುವಂತೆ ಮಾಡಬಹುದು. ಹುಡುಗನು ಸದ್ಯ ಇಲ್ಲೇ ಇರಲಿ, ನಾವು ಹೋಗೋಣ” ಎಂದು ಹೇಳಿ ಮಿ. ವಿಕ್ಫೀಲ್ಡರು ಅತ್ತೆಯನ್ನು ಕರೆದುಕೊಂಡು ಹೋದರು.

ಉರೆಯಾಹೀಪನು ಅವನ ಪ್ರತ್ಯೇಕ ಕೋಣೆಯಲ್ಲಿದ್ದರೂ ಅವನಿಗೆ ನಮ್ಮ ಮಾತುಗಳೆಲ್ಲ ಕೇಳುವಷ್ಟರ ನೆರೆಕೋಣೆ ಅವನದಾಗಿತ್ತು. ನಾನು ಕುಳಿತಲ್ಲಿಂದ ಅವನು ಸರಿಯಾಗಿ ಕಾಣುತ್ತಿದ್ದನು. ನಮ್ಮ ಮಾತುಗಳನ್ನು ಕೇಳುತ್ತಿದ್ದರೂ ಏನೂ ಅರಿಯದವನಂತೆ ತೋರಿಸಿಕೊಳ್ಳುತ್ತಿದ್ದನೆಂದೂ ನಾನು ಊಹಿಸಿದೆನು. ಅವನ ಚರ್ಯೆಗಳು ನನಗೆ ಸಾಕಷ್ಟು ಅಂಥ ಅವಕಾಶವನ್ನು ಕೊಟ್ಟವು. ಉರೆಯನು ನನ್ನನ್ನೂ ಬಹುವಾಗಿ ನೋಡುತ್ತಿದ್ದನು. ಅವನ ನೋಟವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ನಾನು ಆ ಕೋಣೆಯ ಇನ್ನೊಂದು ಬದಿಗೆ ಹೋದೆನು.

ಸ್ವಲ್ಪ ಸಮಯದನಂತರ ಮಿ. ವಿಕ್ಫೀಲ್ಡರು ಅತ್ತೆಯೂ ಶಾಲೆಯನ್ನು ನೋಡಿಕೊಂಡು ಬಂದರು. ಅವರಿಗೆ ಶಾಲೆ ತೃಪ್ತಿಕರವಾಗಿತ್ತು. ಆದರೆ, ಊಟವಸತಿಗಳ ಅನುಕೂಲ ಅಲ್ಲಿರಲಿಲ್ಲ. ಇದ್ದರೂ ಸಾಕಷ್ಟು ಉತ್ತಮತರದ್ದಾಗಿರಲಿಲ್ಲವಂತೆ. ಕೊನೆಗೆ ಮಿ. ವಿಕ್ಫೀಲ್ಡರು ನನ್ನನ್ನು ತಮ್ಮ ಮನೆಯಲ್ಲೇ ಮಾಡಿಕೊಂಡು, ಊಟವಸತಿಗಳನ್ನು ಧರ್ಮಾರ್ಥವಾಗಿ ಒದಗಿಸುವುದಾಗಿ ಒಪ್ಪಿದರು. ಧರ್ಮಾರ್ಥ ಸಹಾಯ ಮಾಡಕೂಡದು – ಪ್ರತಿಫಲ ತೆಗೆದುಕೊಂಡೇ ಮಾಡಬೇಕು – ಎಂದು ತನ್ನ ಕಡೆಯ ಔದಾರ್ಯದಿಂದ ಅತ್ತೆ ವಾದಿಸಿದಳು. ತಾವು ಅಷ್ಟೊಂದು ಚಿಕ್ಕ ಧರ್ಮ ಸಹಾಯವನ್ನಾದರೂ ಮಾಡಿದರೆ ತಪ್ಪೇನು, ಆ ಮಟ್ಟಿಗೆ ಅತ್ತೆ ಒಪ್ಪಬೇಕು – ಎಂದು ಮಿ. ವಿಕ್ಫೀಲ್ಡರು ತಮ್ಮ ಔದಾರ್ಯವನ್ನು ವ್ಯಕ್ತಪಡಿಸಿದರು. ಕೊನೆಗೆ ಅತ್ತೆಯ ಅಪೇಕ್ಷೆಗೆ ಒಪ್ಪುವ ಔದಾರ್ಯವನ್ನು ಗೃಹಸ್ಥನು ಮಾಡಬೇಕೆಂಬ ತತ್ವಕ್ಕಾಗಿ ಮಿ, ವಿಕ್ಫೀಲ್ಡರು ಪ್ರತಿಫಲ ಸ್ವೀಕರಿಸಿಯೇ ನನ್ನನ್ನು ಒಪ್ಪಿದರು.

ಅನಂತರ ಮನೆಯ ಯಜಮಾನಿಯ ಪರಿಚಯ ಮಾಡಿಕೊಡುವುದಾಗಿ ಹೇಳುತ್ತಾ ಮಿ. ವಿಕ್ಫೀಲ್ಡರು ನಮ್ಮನ್ನು ಒಳಗೆ ಕರೆದುಕೊಂಡು ಹೋದರು. ಇವರ ವಾಸದ ವಿಭಾಗ ಮನೆಯ ಮಹಡಿಯ ಮೇಲಾಗಿತ್ತು. ಉಪ್ಪರಿಗೆ ಮೆಟ್ಟಲುಗಳನ್ನು ಹತ್ತಿ ಒಂದು ಬೈಠಖಾನೆಗೆ ಹೋದೆವು. ಅಲ್ಲಿ ಸುಸಜ್ಜಿತವಾದ ಸೋಫಾಗಳೂ ಒಂದೆರಡು ಚಿಕ್ಕ ಮೇಜುಗಳೂ ಕೆಲವು ಕುರ್ಚಿಗಳೂ ಸುಂದರವಾದ ಕೆಲವು ಕಪಾಟುಗಳೂ ಇದ್ದುವು. ಕಿಟಕಿಗಳ ರಚನಾಕ್ರಮದಲ್ಲಿ ಅವುಗಳ ಬುಡದಲ್ಲಿ ಕುಳಿತು ಹೊರಗಿನ ದೃಶ್ಯಗಳನ್ನು ನೋಡಬಹುದಾದಂಥ ಸೌಕರ್ಯವಿತ್ತು – ಕುಳಿತುಕೊಳ್ಳಲು ಬೇಕಾದಷ್ಟು ಅಗಲದ, ನುಣುಪಾದ, ಆಸನಗಳು ಅಲ್ಲಿದ್ದುವು. ಮೇಜುಗಳ ಮೇಲೆ ಹೂಗೊಂಚಲುಗಳಿದ್ದ ಸುಂದರವಾದ ಚಿಕ್ಕ ಲೋಹದ ಪಾತ್ರೆಗಳನ್ನು ಅಲಂಕಾರಕ್ಕಾಗಿ ಇಟ್ಟಿದ್ದರು. ಬೈಠಖಾನೆಯು ನಿರ್ಮಲವಾಗಿ, ತಂಪಾಗಿ, ಬಹು ಶಾಂತಭಾವನೆ ಕೊಡುವಂತೆ ಇತ್ತು. ಅಲ್ಲಿನ ಗೋಡೆಗಳಲ್ಲಿ ತೂಗಗೊಡಿಸಿದ್ದ ಒಂದೆರಡು ಚಿತ್ರಗಳು ಕೊಠಡಿಯ ಶಾಂತಿಯನ್ನೂ ಸೌಂದರ್ಯವನ್ನೂ ಹೆಚ್ಚಿಸುತ್ತಿದ್ದುವು.

ಬೈಠಖಾನೆಯ ಇನ್ನೊಂದು ತುದಿಯ ಬಾಗಿಲನ್ನು ತಟ್ಟಿದೊಡನೆ ಸಾಧಾರಣ ನನ್ನಷ್ಟೇ ಪ್ರಾಯದ ಒಬ್ಬ ಬಾಲಕಿ ಒಳಗಿನಿಂದ ಬಂದಳು. ಅವಳು ಕೆಳಗಿನ ಕೊಠಡಿಯಲ್ಲಿದ್ದ ತೈಲಚಿತ್ರದ ಗೃಹಿಣಿಗೆ ಬಹುಮಟ್ಟಿಗೆ ಹೋಲುತ್ತಿದ್ದಳು. ತೈಲಚಿತ್ರವೇ ಈ ಬಾಲಕಿಯಾಗಿ ಎದ್ದು ಬಂದಂತೆ ಅವಳು ತೋರುತ್ತಿದ್ದರೂ ಈ ಬಾಲಕಿಯ ಮುಖದಲ್ಲಿದ್ದ ಬುದ್ಧಿ ವಿಕಾಸತೆ ತೈಲಚಿತ್ರದ ಹೆಂಗುಸಿನಲ್ಲಿರಲಿಲ್ಲ. ಆ ಹುಡುಗಿ ತನ್ನ ಮಗಳೆಂದೂ ಅವಳ ಹೆಸರು ಏಗ್ನೆಸ್ ಎಂದೂ ಮಿ. ವಿಕ್ಫೀಲ್ಡ್ ಹೇಳಿ ಅವಳ ಪರಿಚಯ ಮಾಡಿಕೊಟ್ಟರು.

ಅನಂತರ ನನಗಾಗಿ ಬಿಡಲಿದ್ದ ಕೋಣೆಗೆ ನಮ್ಮನ್ನು ಕರೆದುಕೊಂಡು ಹೋಗಿ ತೋರಿಸಿದರು. ಆ ಕೋಣೆಯ ಕಿಟಕಿಗಳಿಗೆ ಕೆತ್ತಿ ಮಾಡಿದ ದಪ್ಪದ ಕನ್ನಡಿ ಬಾಗಿಲುಗಳಿದ್ದುವು. ಆ ಬಾಗಿಲುಗಳಿಂದ ಬೆಳಕು ಒಳಗೆ ಬರುವಾಗ ಇಗರ್ಜಿ ಒಳಗಿನ ಭಾಗಕ್ಕೆ ಹೊರಗಿನ ಬೆಳಕು ಬಂತಂಥ ಒಂದು ಸೌಮ್ಯತೆ ಕೂಡಿ ಬರುತ್ತಿತ್ತು. ಆ ಸೌಮ್ಯ ಬೆಳಕಿನಲ್ಲಿ ನಿಂತು ಏಗ್ನೆಸ್ಸಳು ನನ್ನದಾಗಲಿದ್ದ ಕೋಣೆಯನ್ನು ತೋರಿಸುತ್ತಾ ನಮ್ಮನ್ನು ಸ್ವಾಗತಿಸಿದಳು. ಇಗರ್ಜಿಯೊಳಗೆ ದೇವಕನ್ನೆಯರ ಚಿತ್ರಗಳು ಶೋಭಿಸುವಂತೆ ಏಗ್ನೆಸ್ಸಳು ಆಗ ನನಗೆ ತೋರಿಬಂದಳು. ಅಲ್ಲಿನ ಶಾಂತತೆ, ಅಲ್ಲಿನ ಬೆಳಕು, ಏಗ್ನೆಸ್ಸಳ ಪ್ರಸನ್ನ ಮುಖ ಎಲ್ಲವೂ ನನ್ನಲ್ಲಿ ಅವಳನ್ನು ಕುರಿತು ದೈವಿಕವಾದ ಭಕ್ತಿ, ಪ್ರೇಮಗಳನ್ನು ಪ್ರಚೋದಿಸಿದುವು. ಈ ರೀತಿ ನಾವು ಮನೆಯನ್ನೆಲ್ಲ ನೋಡಿದನಂತರ ಅತ್ತೆ ಸ್ವಲ್ಪ ಲಘು ಉಪಾಹಾರ ತೆಗೆದುಕೊಂಡು, ನನ್ನನ್ನು ಆಶೀರ್ವದಿಸಿ ಹೊರಟುಹೋದಳು. ಅವಳು ಹೋದ ಕ್ರಮವನ್ನು ನೋಡುವಾಗ, ಅವಳಿಗೆ ನನ್ನನ್ನು ಅಗಲುವಾಗ ಆಗುತ್ತಿದ್ದ ಬೇಸರವನ್ನು ತೋರಿಸಬಾರದೆಂದೇ ಹಾಗೆ ಮಾಡಿದ್ದೆಂದು ನಾನು ಊಹಿಸಬೇಕಾಗಿತ್ತು.

ಸ್ವಲ್ಪ ಸಮಯದನಂತರ ಮಿ. ವಿಕ್ಫೀಲ್ಡ್ ಮತ್ತು ನನ್ನ ಊಟವಾಯಿತು. ಏಗ್ನೆಸ್ಸಳೇ ನಮಗೆ ಊಟ ಬಡಿಸಿದಳು. ಊಟವಾದನಂತರ ಮಿ. ವಿಕ್ಫೀಲ್ಡರು ಒಂದು ಆರಾಮ ಕುರ್ಚಿಯಲ್ಲಿ ಕುಳಿತು ಏಗ್ನೆಸ್ಸಳು ಕೊಟ್ಟ ವೈನನ್ನು ಕುಡಿದರು. ಆ ತಂದೆ ಮಕ್ಕಳ ಪ್ರೇಮ ಎಷ್ಟಿತ್ತೆಂಬುದು ದಿನ ಹೋದಂತೆ ನನಗೆ ಗೊತ್ತಾಯಿತು. ಪ್ರತಿದಿನವೂ ಏಗ್ನೆಸ್ಸಳು ಪಿಯಾನವನ್ನು ಬಾರಿಸುತ್ತಾ ಹಾಡುತ್ತಿದ್ದಳು. ಅವಳ ಮೃದುಮಧುರವಾದ ಗಾನವನ್ನು ಕೇಳದಿದ್ದರೆ, ಅವಳ ಕೈಯಿಂದ ಊಟಬಡಿಸಿಕೊಳ್ಳದಿದ್ದರೆ, ಅವಳ ಕೈಯಿಂದ ವೈನ್ ಹಾಕಿಸಿಕೊಂಡು ಕುಡಿಯದಿದ್ದರೆ, ಅವಳ ಜತೆಯಲ್ಲಿ ಕುಳಿತು ಮಾತಾಡದಿದ್ದರೆ ಮಿ. ವಿಕ್ಫೀಲ್ಡರ ಜೀವನವೇ ಒಂದು ಶೂನ್ಯವಾಗಿ, ಸಂತೋಷರಹಿತದ್ದಾಗುತ್ತಿತ್ತೆಂದು ನಾನು ದಿನ ಹೋದಂತೆ ತಿಳಿದೆನು.

ಆ ದಿನ ಸಂಜೆಯಲ್ಲಿ ನಾನು ಏಕಾಂಗಿಯಾಗಿ ಊರನ್ನು ಸುತ್ತಿ ನೋಡಿ ಬಂದೆ. ಮನೆಗೆ ಹಿಂತಿರುಗುವ ಸಮಯದಲ್ಲಿ ಉರೆಯಾಹೀಪನು ಎದುರು ಸಿಕ್ಕಿದನು. ಅಂದಿನ ನನ್ನ ಸಂತೋಷಗಳ ಕಾರಣವಾಗಿ, ಆ ಮನೆಗೆ ಸಂಬಂಧಪಟ್ಟ ಉರೆಯಾಹೀಪನೊಡನೆ ಮಾತಾಡುವುದು ನ್ಯಾಯವೆಂದು ತೋರಿತು. ಅವನೊಡನೆ ಮಾತಾಡಿ ಹೊರಡುವಾಗ ಅವನು ಹಸ್ತಲಾಘವವನ್ನಿತ್ತನು. ನನ್ನ ಈ ಉದಾರವರ್ತನೆಯ ಫಲವಾದ ಹಸ್ತಲಾಘವವನ್ನು ಮಾತ್ರ ನಾನು ಎಂದಿಗೂ ಮರೆಯಲಾರೆನು. ಅವನ ಉದ್ದವಾದ, ಸಪುರವಾದ ಕೈಬೆರಳುಗಳಿಂದ ಬೆವರು ಅನವರತವೂ ಜಿನುಗುತ್ತಿರಬೇಕೆಂದು ನಾನು ತಿಳಿಯುತ್ತೇನೆ. ಆ ನೆನಪಿನ ಹಸ್ತಲಾಘವ ನನ್ನನ್ನು ಆ ದಿನ ಬಹುವಾಗಿ ಬಾಧಿಸಿತು. ಆ ಬೆವರನ್ನು ನನ್ನ ಬೆರಳುಗಳಿಂದ ಒರೆಸಿ ತೆಗೆದರೂ ಬೆವರಿನ ಸ್ಮರಣೆಯನ್ನು ಒರೆಸಿ ತೆಗೆಯಲಾರದೆ ಇದ್ದೆ.

ಮನೆಗೆ ತಲುಪಿದ ಕೂಡಲೆ, ನನ್ನ ಕೋಣೆಯ ಕಿಟಕಿ ಬಾಗಿಲುಗಳನ್ನು ತೆರೆದು ಹೊರಗಿನ ತಂಪು ಗಾಳಿಯನ್ನು ಸೇವಿಸುತ್ತಾ ಬೆವರನ್ನು ಮರೆಯಲು ಪ್ರಯತ್ನಿಸಿದೆನು. ಕೋಣೆಯ ಹೊರಗೆ ನೋಡುತ್ತಿದ್ದ ಹಾಗೆ ಅಡ್ಡಗಳ ತುದಿಯಲ್ಲಿದ್ದ ಮುಖವೊಂದು ನನ್ನನ್ನೇ ನೋಡುತ್ತಿರುವಂತೆ ತೋರಿತು. ಉರೆಯನೇ ಅಡ್ಡದ ತುದಿಗೆ ತಲುಪಿ ನನ್ನನ್ನು ಹಿಂಬಾಲಿಸಿ ನೋಡುತ್ತಿರುವಂತೆ ನನಗೆ ತೋರಿ, ಅವಸರದಿಂದ ಕಿಟಕಿಯನ್ನು ಮುಚ್ಚಿ ಕುಳಿತೆನು.

(ಮುಂದುವರಿಯಲಿದೆ)