ಅಧ್ಯಾಯ ಹದಿನೇಳು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಹತ್ತೊಂಬತ್ತನೇ ಕಂತು
ನಾನು ಡೋವರಿಗೆ ತಲುಪಿದ ಕೂಡಲೇ ಪೆಗಟಿಗೆ ಒಂದು ಪತ್ರವನ್ನು ಬರೆದಿದ್ದೆನು. ಸ್ವಲ್ಪ ದಿನ ಕಳೆದನಂತರ ಡಾಕ್ಟರ್ ಸ್ಟ್ರಾಂಗರ ಮತ್ತು ಮಿ. ವಿಕ್ಫೀಲ್ಡರ ಕುರಿತೂ ಸಹ ಪುನಃ ಒಂದು ಪತ್ರ ಬರೆದಿದ್ದೆ. ಅದರಲ್ಲಿ ಏಗ್ನೆಸ್ಸಳು, ನನ್ನ ಊಟ, ವಸತಿ, ವಿದ್ಯಾಭ್ಯಾಸದ ವಿವರಗಳನ್ನೆಲ್ಲ ತಿಳಿಸಿದ್ದೆನು. ಮಿ. ಡಿಕ್ಕರು ಕೊಟ್ಟಿದ್ದ ಉಚಿತಾರ್ಥ ಹಣದಿಂದ ಪೆಗಟಿಯ ಸಾಲವನ್ನು ತೀರಿಸಿದೆನು. ಪೆಗಟಿಯೂ ಮರುತ್ತರವನ್ನು ಬರೆದಳು. ಅವಳ ಪತ್ರದಲ್ಲಿ ತುಂಬಾ ಚಿತ್ತು ಕಲೆಗಳಿದ್ದರೂ ಅವೆಲ್ಲ ಪೆಗಟಿಯ ಆನಂದಾಶ್ರುಗಳಿಂದಲೇ ಆಗಿದ್ದುವೆಂದು ನಾನು ಊಹಿಸಿ ಸಂತೋಷಗೊಂಡೆ.
ಪೆಗಟಿಯ ಪತ್ರದಿಂದ ಅನೇಕ ವಿಷಯಗಳನ್ನು ತಿಳಿದುಕೊಂಡೆನು. ಮಿ. ಮತ್ತು ಮಿಸ್ ಮರ್ಡ್ಸ್ಟನ್ನರು ಮನೆಯನ್ನು ಬಿಟ್ಟು ಹೋಗಿದ್ದರು. ಮನೆಯನ್ನು ಮಾರುವ ಏರ್ಪಾಡೂ ನಡೆಯುತ್ತಿತ್ತು. ಮಾರುವುದರ ಪೂರ್ವಭಾವಿಯಾಗಿ ಮನೆಯಲ್ಲಿದ್ದ ಮೇಜು, ಕಪಾಟು, ಕುರ್ಚಿಗಳನ್ನೆಲ್ಲ ಮಾರಿದ್ದರು. ನನಗೆ ಆ ಮನೆಯಲ್ಲಿ ಯಾವ ವಿಧದ ಶಾಸನಬದ್ಧವಾದ ಹಕ್ಕಿಲ್ಲದಿದ್ದರೂ ಆ ಮನೆ ನನ್ನದಾಗಿತ್ತು. ಅದು ನನ್ನ ಬಾಲ್ಯದ ಕಾಲ ಕಳೆದ ಮನೆ, ಮಮತೆಯ ಮಾತೆಯ ಜತೆಯಲ್ಲಿ ದಿನ ಕಳೆದ ಸವಿನೆನಪುಗಳ ವಿಶಿಷ್ಟ ಆಗಾರ ಎಂಬ ಆತ್ಮೀಯತಾ ಭಾವನೆ ನನ್ನನ್ನು ದುಃಖಕ್ಕೀಡುಮಾಡಿತು. ಮನೆ ಪರಸ್ವಾಧೀನವಾಗುವುದರಲ್ಲಿ ನನ್ನ ದೇಹದ ಒಂದಂಶವೇ ಹರಿದುಹೋಗುತ್ತದೆಂಬಂತೆ ತೋರತೊಡಗಿತು. ಪೆಗಟಿಯ ವರ್ಣನೆಗಳು ನನ್ನ ಮನಸ್ಸಿನಲ್ಲಿ ನಾನಾ ರೂಪಗಳನ್ನೂ ಭಾವನೆಗಳನ್ನೂ ಉಂಟುಮಾಡಿದುವು. ಆ ಮನೆ ದುಃಖದ ಪ್ರತೀಕವೂ ಅದರ ವಠಾರ ದುಃಖಮಯ ಕ್ಷೇತ್ರವೂ ಆಗಿ ತೋರಿದುವು. ನಮ್ಮ ಹೂದೋಟದಲ್ಲಿ ಬೆಳೆದಿದ್ದ ಆಳುದ್ದದ ಕಳೆಯನ್ನು ಚಿತ್ರಿಸಿಕೊಂಡು ದುಃಖಿಸಿದೆನು. ಮರದಡಿಗಳಲ್ಲಿ, ಕಾಲುರಸ್ತೆಯಲ್ಲಿ, ಗುಂಡಿಗುಳುಪುಗಳಲ್ಲಿ ಎಲೆಬಿದ್ದು ಕೊಳೆತು ತೇವದಿಂದೆದ್ದ ಆವಿ ಮೇಲೇರಿ ಪಸರಿಸುವುದನ್ನು ಚಿತ್ರಿಸಿಕೊಂಡೆನು. ಚಳಿಗಾಲದ ಗಾಳಿ ಎಡೆಬಿಡದೆ ಬೀಸಿ, ಸಂದಿಗೊಂದುಗಳಿಗೆ ನುಗ್ಗಿ ನುಸುಳಿ ಬೇಸತ್ತು ರೋದಿಸುತ್ತಿದ್ದ ರೋದನವನ್ನು ಕೇಳಿದೆ. ಎಡೆಬಿಡದೆ ಮಳೆ ಕಿಟಕಿಗಳಿಗೆ ಹೊಡೆದು ಕೆಳಗಿಳಿದು ಬರುವ ದೃಶ್ಯವನ್ನು ಗ್ರಹಿಸಿ ಮನೆಯೇ ಬಿಕ್ಕಿ ಬಿಕ್ಕಿ ಅಳುತ್ತದೆಂದು ಭಾವಿಸಿದೆ. ಜೀವಕಳೆಯಿಂದ ತುಂಬಿ ಮೆರೆದಿದ್ದ ಮನೆಯನ್ನು ಇಂದು ಏಕಾಂಗಿಯಾಗಿ ನಿಂತಾಗ, ಯಾರು ನೋಡದಿದ್ದರೂ ನಿಶ್ಶಬ್ದವಾಗಿ ರಾತ್ರಿಯಲ್ಲಿ ಎದ್ದು ಬಂದ ಚಂದ್ರನು ನೋಡಿದ್ದರ ಭೀಷಣ ಏಕಾಂತತೆಯನ್ನು ಭಾವಿಸಿ ಚಿಂತಿಸಿದೆ. ಆ ನಿರ್ಜನ ಪ್ರದೇಶದಲ್ಲಿ ಚಂದ್ರನ ಬೆಳಕಿಗೆ ಮರದಡಿಯ ನೆರಳುಗಳು ಅಲುಗಿ, ಅಲ್ಲಾಡಿ, ಚಲಿಸಿ, ಪ್ರೇತಗಳಂತೆ ಕಂಡೂ ಕಾಣಿಸದ ಸ್ವರೂಪಗಳನ್ನು ಗ್ರಹಿಸಿ ನಡುಗಿದೆ. ಈ ಎಲ್ಲ ಭಾವನೆಗಳು ಅಂತ್ಯವಾಗಿ ಗೋರಿಗಳ ಪ್ರಶಾಂತತೆ, ಪ್ರಪಂಚಾತೀತ ಪರಿಸ್ಥಿತಿ, ಇವನ್ನೆಲ್ಲ ನಾನಾ ಭಾವನೆ – ರೂಪ – ಬಣ್ಣಗಳಿಂದ ಚಿತ್ರಿಸಿಕೊಂಡು ದುಃಖಿಸಿದೆನು.
ಇನ್ನು ಪೆಗಟಿಯ ಪತ್ರದಲ್ಲಿ ಬಾರ್ಕಿಸನ ಗುಣವರ್ಣನೆಯೂ ಇತ್ತು. ಅವರ ದಾಂಪತ್ಯ ಸುಖದ ವಿಚಾರವೂ ಇತ್ತು. ಬಾರ್ಕಿಸನ ಜಿಪುಣತ್ವ ಒಂದಷ್ಟು ಬಿಟ್ಟರೆ ಅವರ ಜೀವನ ಸುಖಮಯವಾಗಿತ್ತಂತೆ. ಮಿ. ಪೆಗಟಿ, ಹೇಮ್, ಗಮ್ಮಿಜ್, ಎಮಿಲಿಯರು ಸುಖವಾಗಿದ್ದರೆಂದೂ ತಿಳಿದೆ. ಎಮಿಲಿ ಬೆಳವಣಿಗೆಯಲ್ಲಿ ದೊಡ್ಡವಳಾಗಿದ್ದರೂ ಒಡನಾಟದಲ್ಲಿ ಮೊದಲಿನ ಮಗುವಾಗಿಯೇ ಇದ್ದಳಂತೆ.
ಹೀಗೆ ನಾನು ವಿದ್ಯಾ ವ್ಯಾಸಂಗದಲ್ಲಿರುವಾಗಲೇ ಅತ್ತೆ ಒಮ್ಮೊಮ್ಮೆ ಹಠಾತ್ತಾಗಿ ಕೇಂಟರ್ಬರಿಗೆ ಬಂದು ನನ್ನನ್ನು ವಿಚಾರಿಸಿಕೊಂಡು ಹೋಗುತ್ತಿದ್ದಳು. ಓಡಿಹೋಗುವ ಚಟ ನನ್ನಿಂದ ಪೂರ್ತಿಯಾಗಿ ನಾಶವಾಗಿರಲಾರದೆಂದು ಹೆದರಿಯೇ ಅತ್ತೆ ಈ ವಿಧದ ಹಠಾತ್ತಾದ ತನಿಕೆ – ಸಂದರ್ಶನಗಳನ್ನು ಮಾಡುತ್ತಿದ್ದಿರಬೇಕೆಂದು ನಾನು ಊಹಿಸಿಕೊಂಡೆನು. ಮಿ. ಡಿಕ್ಕರೂ ವಾರಕ್ಕೊಮ್ಮೆ ಕೇಂಟರ್ಬರಿಗೆ ಬಂದು ನಮ್ಮ ಜತೆಯಲ್ಲಿದ್ದು ಹೋಗುತ್ತಿದ್ದರು. ಅತ್ತೆಯ ಶಿಸ್ತಿನ ಜೀವನ ಮಿ. ಡಿಕ್ಕರ ಮೇಲೂ ಪರಿಣಾಮ ಮಾಡಿತ್ತು. ಮಿ. ಡಿಕ್ಕರ ಹತ್ತಿರ ಯಾವಾಗಲೂ ಸ್ವಲ್ಪ ಹಣವನ್ನು ಅತ್ತೆ ಕೊಟ್ಟು ಇಟ್ಟಿರುತ್ತಿದ್ದರೂ ಆ ಹಣವನ್ನು ಖರ್ಚುಮಾಡಲು ಅವರಿಗೆ ಅತ್ತೆಯ ಅನುಮತಿ ಬೇಕೇಬೇಕಾಗಿತ್ತು. ಈ ವಿಧದ ನಿರ್ಬಂಧದ ಕಾರಣವಾಗಿಯೋ ಏನೋ ಒಂದು ದಿನ ಮಿ. ಡಿಕ್ಕರು ನನ್ನೊಡನೆ ಹಠಾತ್ತಾಗಿ ಅಂದರು – “ಮಿ. ಕಾಪರ್ಫೀಲ್ಡ್, ನಮ್ಮ ಹೂತೋಟದಲ್ಲಿ ಅಡಗಿ ಕುಳಿತು ಅತ್ತೆಯನ್ನು ಹೆದರಿಸುತ್ತಾನಲ್ಲ, ಅವನ್ಯಾರು?” “ನಮ್ಮ ಅತ್ತೆಯನ್ನು ಹೆದರಿಸುವುದೇ? ಯಾರು? ಯಾವಾಗ?” ಎಂದು ನಾನು ಆಶ್ಚರ್ಯದಿಂದ ಕೇಳಿದೆ. “ಹೌದು ನಮ್ಮ ಅತ್ತೆಯನ್ನೇ – ಎರಡು ಬಾರಿ ನೋಡಿದ್ದೇನೆ. ಒಂದು ಬಾರಿ ಅವಳು ಹೆದರಿ ಸ್ಮೃತಿ ತಪ್ಪಿ ಬಿದ್ದಿದ್ದಳು” ಅಂದರು ಮಿ. ಡಿಕ್ಕರು. “ಸಾಧಾರಣ ಯಾವ ಸಮಯದಲ್ಲಿ?” ಎಂದು ನಾನು ವಿಚಾರಿಸಿದೆ. “ರಾತ್ರಿ ಸಮಯದಲ್ಲಿ – ಚಾರ್ಲ್ಸ್ ದೊರೆಯ ತಲೆ ಕಡಿದಾಗ – ಅಥವಾ ಆ ದೊರೆಯ ದುಃಖ ನನ್ನ ತಲೆಗೆ ನುಗ್ಗಿದ ಎರಡು ತಿಂಗಳ ನಂತರ” ಅಂದರು ಮಿ. ಡಿಕ್ಕರು. “ಕಂಡದ್ದು ಮಾತ್ರ ತಾನೆ? ಸ್ಪಷ್ಟವಾದದ್ದು ಮತ್ತೇನೂ ಇಲ್ಲ ತಾನೆ?” ಎಂದು ನಾನು ಕೇಳಿದ್ದಕ್ಕೆ ಅವರು ಅಂದರು – “ಅಷ್ಟು ಮಾತ್ರವಲ್ಲ – ಅತ್ತೆ ಹಣ ಲೆಖ್ಖ ಮಾಡಿ ಅವನಿಗೆ ಕೊಟ್ಟು ಕಳುಹಿಸಿದಳು. ಇದನ್ನು ನಾನು ಕಂಡದ್ದು ಎರಡನೆಯ ಬಾರಿ.”
ಇದು ಮಿ. ಡಿಕ್ಕರ ಕಲ್ಪನೆಯಾಗಿರಬೇಕು ಅಥವಾ ಅವರನ್ನೇ ಅಪಹರಿಸಿ, ಅವರ ಮುಖಾಂತರ ಅತ್ತೆಯಿಂದ ಹಣ ಸುಲಿಯುವ ಹಂಚಿನಲ್ಲಿ ಯಾರಾದರೂ ಇದ್ದಾರೋ ಎಂದು ಸಂಶಯಪಟ್ಟೆನು. ನನ್ನ ಮುಖಾಂತರ ಮಿ. ಡಿಕ್ಕರ ಪರಿಚಯ ನಮ್ಮ ಶಾಲಾ ಬಾಲಕರಿಗೂ ಡಾ. ಸ್ಟ್ರಾಂಗರಿಗೂ ಅವರ ಪತ್ನಿಗೂ ಆಯಿತು. ಬಾಲಕರ ಮಧ್ಯದಲ್ಲಿ ಮಿ. ಡಿಕ್ಕರಿದ್ದಾಗ ಅವರು ಬಾಲಕರಿಗಿಂತಲೂ ಹರ್ಷಚಿತ್ತರೂ ನಿಷ್ಕಪಟಿಗಳೂ ಆಗಿ ಬಿಡುತ್ತಿದ್ದರು. ಡಾ. ಸ್ಟ್ರಾಂಗರಿಗಂತೂ ತಮ್ಮ ನಿಘಂಟಿಗೆ ಸಂಬಂಧಿಸಿದ ಕ್ಲಿಷ್ಟ ಪದಗಳನ್ನು ಕುರಿತಾಗಿ ಚರ್ಚಿಸಲು, ವಿವರಿಸಲೂ ಅವರು ತಿರುಗಾಡುತ್ತಾ ಸಂಶೋಧನೆಗಳನ್ನು ಮಾಡುತ್ತಿದ್ದಾಗ ಸಹಪಾಟಿಗಳಾಗಿ ತಿರುಗಾಡಲೂ ಮಿ. ಡಿಕ್ಕರು ತುಂಬಾ ಪ್ರಯೋಜನ ಬೀಳುತ್ತಿದ್ದರು. ಮಿ. ಡಿಕ್ಕರು ಡಾ. ಸ್ಟ್ರಾಂಗರ ವಿದ್ವತ್ತಿಗಾಗಿ ಮೆಚ್ಚಿ, ಭ್ರಮಿಸಿಯೇ ಹೋಗಿದ್ದರು. ಡಾಕ್ಟರರನ್ನು ಅವರು ಒಂದು ವಿಧದಲ್ಲಿ ಪೂಜಿಸುತ್ತಲೂ ಇದ್ದರು. ತಮ್ಮ ಗೌರವವನ್ನು ಸೂಚಿಸಲೋಸ್ಕರ ಮಿ.ಡಿಕ್ಕರು ಡಾಕ್ಟರರ ಸಮ್ಮುಖದಲ್ಲಿದ್ದಾಗ ಎಂದೂ ಹೇಟನ್ನು ಧರಿಸುತ್ತಿರಲಿಲ್ಲ. ಹೇಟನ್ನು ಸದಾ ಕಂಕುಳಲ್ಲೇ ಇಟ್ಟುಕೊಂಡಿರುತ್ತಿದ್ದರು. ಮಿ. ಡಿಕ್ಕರೂ ಡಾ. ಸ್ಟ್ರಾಂಗರೂ ತಮ್ಮ ತಮ್ಮ ಹೃದಯ ಪರಿಶುದ್ಧತೆಯಲ್ಲಿ ಸರಿಸಮಾನಸ್ಥರೇ ಆಗಿದ್ದರು. ಆ ಮಹಾನುಭಾವರಿಬ್ಬರು ಶಾಲಾ ಮೈದಾನದಲ್ಲಿ ತಮ್ಮ ತಮ್ಮ ಯೋಚನೆಗಳಲ್ಲಿ ಮಗ್ನರಾಗಿ ನಡೆಯುತ್ತಿದ್ದ ದೃಶ್ಯವನ್ನು ನಾನು ಈಗಲೂ ಸ್ಪಷ್ಟವಾಗಿ ಕಾಣಬಲ್ಲೆನು.
ಇದೇ ಸಮಯದಲ್ಲಿ ನಾನು ಉರೆಯನ ಪರಿಚಯವನ್ನೂ ಮಾಡಿಕೊಂಡೆನು. ಅವನು ನನ್ನನ್ನು ಒಂದು ದಿನ ಸಂಜೆ ಕರೆದುಕೊಂಡು ಹೋಗಿ ತುಂಬಾ ಉಪಚರಿಸಿದನು. ಉರೆಯನು ವಕೀಲಿ ವೃತ್ತಿಗೆ ಬೇಕಾದ ಪುಸ್ತಕಗಳನ್ನು ಓದುತ್ತಿದ್ದನೆಂದೂ ಅವನ ಪರಿಶ್ರಮಗಳು, ಮನೆಯ ಏರ್ಪಾಡುಗಳು, ಎಲ್ಲವೂ ಬಡತನದಿಂದ ಶ್ರೀಮಂತಿಕೆಗೆ ಏರುವ, ಮತ್ತು ದೀನತನದಿಂದ ಗೌರವ ಪರಿಸ್ಥಿತಿಗೆ ಮುಟ್ಟುವ ಕುರಿತು ಇತ್ತೆಂದೂ ನಾನು ತಿಳಿದೆ.
ಉರೆಯನೂ ಅವನ ತಾಯಿಯೂ ತಾವು ದೀನ ದರಿದ್ರರು ಎಂದಂದುಕೊಂಡು, ನನ್ನನ್ನೂ ಮಿ. ವಿಕ್ಫೀಲ್ಡ್, ನಮ್ಮತ್ತೆ ಮೊದಲಾದವರು ಶ್ರೀಮಂತರು, ಸುಸಂಸ್ಕೃತರು, ಉತ್ತಮರು ಎಂದು ಹೊಗಳಿ ಸ್ತುತಿಸುತ್ತಾ ತಮ್ಮ ಬಡತನ, ತಮ್ಮ ಹಿರಿಯರ ದೀನತನ, ಮನೆತನದ ಅಲ್ಪತನಗಳನ್ನು ನನ್ನೆದುರು ವಿವರಿಸಿ, ನಿಷ್ಕಪಟಿಗಳೆಂದು ತೋರಿಸಿ, ಲೋಕಾನುಭವವಿಲ್ಲದ ನನ್ನ ಬಾಯಿಯಿಂದ ನನ್ನ ಬಾಲ್ಯದ ಚರಿತ್ರೆ, ಮಿ. ವಿಕ್ಫೀಲ್ಡ್ ಮತ್ತು ಏಗ್ನೆಸ್ಸಳ ದಿನಚರಿ, ಮಿ. ವಿಕ್ಫೀಲ್ಡರು ಒಂದು ವಿಧದ ಮನೋರೋಗದಿಂದಲೋ ಅಥವಾ ದುಃಖದಿಂದಲೋ ವಿಪರೀತವಾಗಿ ದ್ರಾಕ್ಷಾರಸವನ್ನು ಕುಡಿಯುತ್ತಿದ್ದ ಚರಿತ್ರೆ ಮೊದಲಾದ ವರ್ತಮಾನಗಳನ್ನೆಲ್ಲ ನನಗೆ ಅರಿಯದೆ, ನನ್ನಿಂದ ಎಳೆದು ತೆಗೆದರು. ಅವರಿಬ್ಬರು ಈ ತೆರನಾಗಿ ಮಾತಾಡುವುದರಲ್ಲಿ ನೈಪುಣ್ಯವನ್ನೇ ಪಡೆದಿದ್ದರು.
ನಾನು ಆ ದಿನ ಉರೆಯನ ಮನೆಯಲ್ಲಿದ್ದಾಗಲೇ ಮಿ. ಮೈಕಾಬರರು ನನ್ನನ್ನು ಮಾರ್ಗದಿಂದಲೇ ಕಂಡು, ನಾನಿದ್ದಲ್ಲಿಗೆ ಬಂದು ನನ್ನೊಡನೆ ಮಾತಾಡಿದರಲ್ಲದೆ, ಉರೆಯನ ಪರಿಚಯವನ್ನು ಮಾಡಿಕೊಂಡರು. ನನ್ನನ್ನು ಕಂಡೊಡನೆ ಅಂದರು – “ಮಾನವ ಜೀವನದ ಸುಖದುಃಖಗಳ ಚಂಚಲತೆಯನ್ನು ಗೊತ್ತುಪಡಿಸುವುದಕ್ಕಾಗಿಯೇ ಎಂಬಂತೆ, ಒಂದು ಅನಿರೀಕ್ಷಿತ ಘಟನೆಯಾಗಿ, ನನ್ನ ಜೀವಮಾನದ ಪ್ರಾಮುಖ್ಯ ಭಾಗದಲ್ಲಿ ಜತೆಗಾರನಾಗಿದ್ದ, ಮಿ. ಕಾಪರ್ಫೀಲ್ಡರ ದರ್ಶನವಾದುದು ಒಂದು ಮಹತ್ವದ ಸಂಗತಿ” ಅಂದರು.
ಅವರನ್ನು ಕಂಡು ನನಗೂ ತುಂಬಾ ಸಂತೋಷವಾಗಿತ್ತು. ಹಾಗಾಗಿ ನಾನು ಅವರೊಡನೆ ಮಾತಾಡತೊಡಗಿದೆನು. ಅವರ ಹೆಂಡತಿ, ಮಕ್ಕಳ ಆರೋಗ್ಯ, ಕುಟುಂಬದ ಸುಖ ಮೊದಲಾದುವನ್ನೆಲ್ಲ ವಿಚಾರಿಸಿದೆನು. ಉರೆಯನನ್ನೂ ಅವನ ತಾಯಿಯನ್ನೂ ನೋಡಿ, ಅನಂತರ ನನ್ನನ್ನು ಕುರಿತು – “ಈ ಕೊಠಡಿಯಲ್ಲಿರುವ – ನನಗೆ ಅಪರಿಚಿತರಾಗಿದ್ದರೂ ನನ್ನ ಸ್ನೇಹಿತರ ಸ್ನೇಹಸುಖದ ಭಾಗಿಗಳಾಗಿ, ಅರ್ಥಾತ್ ಆ ಮೂಲಕ ನನ್ನ ಸ್ನೇಹಿತರೆಂದರೆ ತಪ್ಪಾಗಲಾರದ – ಓರ್ವ ಗೃಹಿಣಿ ಮತ್ತೂ ಆ ಗೃಹಿಣಿಯಂತೆಯೇ ತೋರುವ ಗೃಹಸ್ಥ ಅರ್ಥಾತ್ ಮಗ – ಇವರಿಬ್ಬರ ಪರಿಚಯ ಭಾಗ್ಯವನ್ನು ನನಗೆ ದಯಮಾಡಿ ಒದಗಿಸಿರಿ” ಅಂದರು.
ನಾನು ಅವರಿಬ್ಬರ ಪರಿಚಯವನ್ನು ಮಾಡಿಕೊಟ್ಟೆನು. ಅನಂತರ ಮಿ. ಮೈಕಾಬರರು ಬಹು ಘನಸ್ಥಿಕೆಯಿಂದ – “ಮಹಿಳಾಮಣಿಗಳೇ ಮತ್ತು ಮಹನೀಯರೇ ನಾನೊಬ್ಬ, ಇಂದು, ಬಹು ಭಾಗ್ಯವಂತ – ತಮ್ಮ ಪರಿಚಯದ ಲಾಭವು ನನ್ನದು” ಎಂದಂದರು. “ನಾವು ಕೇವಲ ಬಡವರು, ಮಿ. ಕಾಪರ್ಫೀಲ್ಡರ ಸ್ನೇಹಿತರೆಂದು ಪರಿಗಣಿಸಲ್ಪಡತಕ್ಕಷ್ಟು ನಾವು ಯೋಗ್ಯರಲ್ಲ – ಕಡುಬಡವರು ನಾವು. ತಮ್ಮಂಥ ಘನಸ್ಥರ ಕೃಪಾದೃಷ್ಟಿ ನಮ್ಮ ಬಡ ಸಂಸಾರದ ಮೇಲೆ ಬಿದ್ದುದೇ ನಮ್ಮ ಭಾಗ್ಯ” ಎಂದು ಉರೆಯನ ತಾಯಿ ಉತ್ತರವಿತ್ತಳು.
ಇಷ್ಟೆಲ್ಲಾ ಮಾತಾದನಂತರ ಮಿ. ಮೈಕಾಬರರು ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ನಾವು ಅವರ ಮನೆಯಲ್ಲಿ ಕುಳಿತು ಅವರ ಪತ್ನೀಸಮೇತರಾಗಿ ಬೇಕು ಬೇಕಾದಂತೆ ಮಾತಾಡಿದೆವು. ಪ್ಲಿಮತ್ತಿನಲ್ಲಿ ಸುಂಕದ ಇಲಾಖೆಯವರಿಗೆ ಮಿ. ಮೈಕಾಬರರಷ್ಟು ಉತ್ತಮ ತರದ ಯೋಗ್ಯತೆಗಳಿದ್ದ ಅಧಿಕಾರಿಗಳು ಬೇಡವಾಗಿ ಅಲ್ಲಿಂದ ಅವರು ಹಿಂತಿರುಗಿದ್ದರಂತೆ. ಅನಂತರ ಮಿಡ್ವೆಯಲ್ಲಿನ ಕಲ್ಲಿದ್ದಲಿನ ಗಣಿ ಅವರನ್ನು ಆಕರ್ಷಿಸಿ, ಅದರ ಕಂಟ್ರಾಕ್ಟರರಾಗಿ ಸೇರಿದರಂತೆ. ಅದರೆ ಆ ಕೆಲಸದ ಮಟ್ಟಿಗೆ ಮಿ. ಮೈಕಾಬರರಿಗೆ ಎಷ್ಟೇ ಅನುಭವ, ವ್ಯವಹಾರ ಜ್ಞಾನವಿದ್ದಿದ್ದರೂ ಹಣದ ಶಕ್ತಿ ಬಹು ಕಡಿಮೆಯಾಗಿದ್ದುದರಿಂದ ಅವರು ಆ ಕೆಲಸವನ್ನು ಬಿಟ್ಟು, ದೈವಿಕ ಮಹತ್ವವಿರುವ ಕೇಂಟರ್ಬರಿಯಲ್ಲಿ ತಮ್ಮ ಶಕ್ತಿ ಯೋಗ್ಯತೆಗಳಿಗೆ ತಕ್ಕಂಥ ಕೆಲಸ ಸಿಕ್ಕುವುದರಲ್ಲಿ ಅಡ್ಡಿಯಿರಲಾರದೆಂದು ಕೇಂಟರ್ಬರಿಗೆ ಬಂದಿದ್ದರಂತೆ. ಈ ವಿವರಗಳನ್ನೆಲ್ಲಾ ಅವರ ಪತ್ನಿ ಬಹು ಸಂತೋಷದಿಂದ ತಿಳಿಸಿದರು. ಆ ಮಾತನ್ನೆಲ್ಲ ಕೇಳುತ್ತಿದ್ದ ಮಿ. ಮೈಕಾಬರರು – “ಅದೆಲ್ಲ ಸಂತೋಷದ ಸಂಗತಿ – ಸದ್ಯವೇ ನನಗೆ ಉತ್ತಮ ಕೆಲಸವೊಂದು ದೊರಕಲಿದೆಯೆಂಬುದು ಸುಸ್ಪಷ್ಟ. ಆದರೆ ನೋಡಿ, ನನ್ನ ಎಂಥ ವಿಪತ್ಕಾಲದಲ್ಲೂ ನನ್ನ ಪರಮಸ್ನೇಹಿತನೊಬ್ಬನು ನನ್ನ ಜತೆಯಲ್ಲಿ ಸದಾ ಇರುವುದೊಂದು ಎಲ್ಲಾದಕ್ಕಿಂತಲೂ ಶುಭ” ಎಂದನ್ನುತ್ತಾ ಮಿ.ಮೈಕಾಬರರು ತನ್ನ ಕತ್ತನ್ನು ಕೊಯ್ದುಕೊಳ್ಳುವಂತೆ ಕೈಯಿಂದ ಸನ್ನೆ ಮಾಡಿ ತೋರಿಸಿದರು. ನಾನು ಗಾಬರಿಯಿಂದ ವಿಪತ್ಕಾಲದ ಆ ಸ್ನೇಹಿತನು ಯಾರೆಂದು ವಿಚಾರಿಸಿದೆ, ಅದಕ್ಕವರು – “ಕ್ಷೌರದ ಕತ್ತಿಯಿದೆಯಲ್ಲಾ, ಅದೇ ನನ್ನ ಪರಮಸ್ನೇಹಿತ” ಅಂದರು.
ಇಷ್ಟು ಹೇಳಿದ ಮರುಕ್ಷಣದಲ್ಲೇ ನನ್ನ ಅನಿರೀಕ್ಷಿತ ಭೇಟಿಯ ಸಂತೋಷಕ್ಕಾಗಿ ಒಂದು ಔತಣವನ್ನು ಏರ್ಪಡಿಸಿದರು. ನಾವೆಲ್ಲರೂ ಜತೆ ಸೇರಿ ಔತಣ ಪೂರೈಸಿ ನಾನು ನನ್ನ ಮನೆಗೆ ಹೊರಟು ಹೋದೆನು. ಔತಣದ ಮಧ್ಯೆ, ಕೇಂಟರ್ಬರಿಯನ್ನು ತಾವು – ಇದಕ್ಕಿಂತ ಹೆಚ್ಚಿನ ಒಂದು ಸಾಂಪತ್ತಿಕ ಪರಿಸ್ಥಿತಿ ದೊರಕಬಹುದಾದ ಸಂದರ್ಭದಲ್ಲಿ – ಕೂಡಲೇ ಬಿಡಲೂಬಹುದೆಂದು ತಿಳಿಸಿದ್ದರು. ನಾನು ಮರುದಿನ ಮಿ. ಮೈಕಾಬರರ ಮತ್ತೂ ಅವರ ಸಂಸಾರದ ಅಭ್ಯುದಯವನ್ನು ಊಹಿಸಿ ಸಂತೋಷಿಸುತ್ತಿದ್ದಾಗಲೇ ಅವರದೊಂದು ಪತ್ರ ನನಗೆ ಬಂತು. ಆ ಪತ್ರವು ಹೀಗಿತ್ತು:
ಪ್ರಿಯ ಮಿತ್ರರೇ
ಬಾಣವು ಹೆದೆಗೆ ಏರಿಸಲ್ಪಟ್ಟಿದೆ – ಬಿಡುವುದು ಮಾತ್ರ ಬಾಕಿ. ನಿಮಗೆ ತಿಳಿಸುವುದಕ್ಕೂ ನಾನೇ ಗ್ರಹಿಸುವುದಕ್ಕೂ ಅನುಭವಿಸುವುದಕ್ಕೂ ಅಸಾಧ್ಯವಾದ ಅವಮಾನಾಸ್ಪದವಾದ ಪ್ರಸಂಗವನ್ನು ಸಂತೋಷ, ವಿಲಾಸಗಳ ಬಣ್ಣದಿಂದ ಅಡಗಿಸಿ ನಿಮ್ಮ ಜತೆಯಲ್ಲಿ ನಿನ್ನೆ ಸಮಯ ಕಳೆದದ್ದಾಯಿತು. ನಾನು ನಮ್ಮ ನೆಂಟರೊಬ್ಬರಿಂದ ತಾತ್ಕಾಲಿಕವಾದ ಸಾಲವನ್ನು ಬಯಸಿ ಪತ್ರ ಬರೆದಿದ್ದೆ. ಅಂಥ ನಿರೀಕ್ಷಣಾ ಹಣ ಈವರೆಗೂ ಬಂದಿರುವುದಿಲ್ಲ. ನಾವು ಇನ್ನೊಬ್ಬರ ಋಣಿಯಾಗಿರಬಾರದೆಂದು, ಇಂದಿನಿಂದ ಹದಿನಾಲ್ಕು ದಿನಗಳಲ್ಲಿ, ಕೇಳಿದ ಕೂಡಲೇ ಕೊಡುವ ಶರ್ತದಿಂದ ಒಂದು ಪ್ರೋನೋಟನ್ನು ನಾನಿಳಿದುಕೊಂಡಿರುವ ಈ ಹೋಟೆಲಿನವರಿಗೆ ಬರೆದು ಕೊಟ್ಟು ಸಾಲ ತೀರಿಸಿರುತ್ತೇನೆ.
ಆದರೆ, ಹಣದ ವಸೂಲಿಗೆ ಬರುವಾಗ ಹಣ ಕೊಡುವವರು ಮಾತ್ರ ಎಷ್ಟಕ್ಕೂ ಉಳಿದಿರುವುದಿಲ್ಲ. ಕಾರಣ? ಆತ – ಬರಕೊಟ್ಟವನು – ನಾಶವಾಗಿರುತ್ತಾನೆ. ಮಹಾ ವೃಕ್ಷವು ಬಿದ್ದೇ ತೀರಬೇಕೆಂಬುದು ಸುಸ್ಪಷ್ಟ – ವೃಕ್ಷಕ್ಕೆ ಸಾಕಷ್ಟು ಕೊಡಲಿಯ ಗಡಿಗಳು ಈಗಾಗಲೇ ಬಿದ್ದು ಮಹಾ ವೃಕ್ಷವು ಬಾಗತೊಡಗಿದೆ!
ಈ ಪತ್ರವನ್ನು ಬರೆಯುತ್ತಿರುವ ಮಹಾ ಪಾಪಿಯು ನಿಮ್ಮ ಜೀವನ ಪಥಕ್ಕೆ ಬೆಳಗುವ ಜ್ಯೋತಿಯಾಗಿರಲಿ. ಈ ಪಾಪಿಗೆ ಬದುಕಿರಲು ಇನ್ನು ಕೆಲವೇ ಅಂಧಕಾರಮಯ ದಿನಗಳು ಬಾಕಿ ಇವೆ. ಆದರೂ ನನ್ನ ಉದ್ದೇಶದಂತೆ ನನ್ನ ಜೀವನದ ಅನುಭವವು ನಿಮಗೆ ಮಾರ್ಗದರ್ಶಕವಾದರೆ, ಇಂದಿನ ಅಂಧಕಾರವು ಕಿಂಚಿತ್ತಾದರೂ ಪ್ರಕಾಶಮಾನವಾಗಬಹುದೆಂದು ಊಹಿಸುತ್ತೇನೆ. ಇದು ನನ್ನ ಆಖೈರು ಪತ್ರವೆಂಬುದನ್ನು ದಯಮಾಡಿ ತಿಳಿದುಕೊಳ್ಳಿರಿ.
ಇಂತೀ ದೀನ, ಹೀನ, ಸಮಾಜದ್ರೋಹಿ
ವಿಲ್ಕಿನ್ಸ್ ಮೈಕಾಬರ್
ಈ ಪತ್ರವನ್ನು ಕಂಡು ನಾನು ಹೆದರಿದೆನು. ಮಿ. ಮೈಕಾಬರರು ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು ಹೆದರಿ, ಅದನ್ನು ತಪ್ಪಿಸಲೋಸ್ಕರ ಅವರನ್ನು ನೋಡಲು ಅವರು ಇದ್ದ ಹೋಟೆಲು ಕಡೆಗೆ ಓಡಿದೆನು. ಆದರೆ ದಾರಿಯಲ್ಲೇ ಅವರು ತಮ್ಮ ಪತ್ನೀಪುತ್ರಿಯರ ಸಮೇತ ಬಂಡಿಯಲ್ಲಿ ಕುಳಿತು ಬರುತ್ತಿದ್ದುದನ್ನು ಕಂಡೆನು. ಅವರು ಒಂದು ಕಾಗದದ ಚಿಕ್ಕ ಪೊಟ್ಟಣದಿಂದ ದ್ರಾಕ್ಷಿಯನ್ನು ತಿನ್ನುತ್ತಾ ತನ್ನ ಹೆಂಡತಿ ಮಕ್ಕಳಿಗೆ ಕೊಡುತ್ತಾ ತಮ್ಮ ಶುಭ ನಿರೀಕ್ಷಣೆಯನ್ನು ಮುಖದಲ್ಲಿ ಬೀರುತ್ತಾ ಬಹು ಆನಂದದಲ್ಲಿ ಬಂಡಿಯಲ್ಲಿ ಕುಳಿತು ಬರುತ್ತಿದ್ದರು. ನಾನು ಅಡಗಿ ನೋಡುತ್ತಾ ಅವರ ಅಗಲುವಿಕೆಗಾಗಿ ಸ್ವಲ್ಪ ದುಃಖಪಟ್ಟರೂ ಅವರು ಬದುಕಿರೋಣವನ್ನು ಕಂಡು ಸಂತೋಷಪಟ್ಟೆನು.
(ಮುಂದುವರಿಯಲಿದೆ)