(ಚಕ್ರೇಶ್ವರ ಪರೀಕ್ಷಿತನ ದಿಗ್ವಿಜಯಗಳು -೨)

ಸಂದೀಪ್ ನನ್ನ ಸೈಕಲ್ ಪುನರ್ಜನ್ಮಕ್ಕೆ ಬಲ ಕೊಟ್ಟ ಗೆಳೆಯ. ಈ ತರುಣ ವೃತ್ತಿತಃ ಮಂಗಳೂರು ಇನ್ಫೊಸಿಸ್ಸಿನ ಮಾಯಾಲೋಕದೊಳಗೇ ಇದ್ದರೂ ಸದಾ `ತಪ್ಪಿಸಿಕೊಂಡು ತಿರುಗಲು’ (ಪ್ರಾಕೃತಿಕ ಸವಾಲುಗಳಿಗೆ ಮುಖ ಕೊಡಲು) ಬಯಸುತ್ತಿದ್ದವ. ಮೆರಥಾನ್ ಓಡಿದ, ಸೈಕಲ್ ಸ್ಪರ್ಧೆಯಲ್ಲಿ ನುಗ್ಗಿದ, ಈಜುಕೊಳ ಕಲಕಿದ! ಮೂರೂ ಸ್ತರದ (ಈಜು, ಓಟ ಮತ್ತು ಸೈಕಲ್ ಸವಾರಿ) ಸಂಯೋಜನೆ ಟ್ರಯತ್ಲಾನಿನಲ್ಲೂ ಉರುಡಿದ, ಎಲ್ಲಕ್ಕೂ ಮಿಗಿಲಾಗಿ ನಾನೆಲ್ಲಿಗೆ ಜತೆ ಕೇಳಿದರೂ ಸರಳವಾಗಿ “ಹೋಗಾಣಾ” ಅಂತ ತಣ್ಣಗೆ ಬರ್ತಿದ್ದ. ಸಂದೀಪರ ತಾಕತ್ತಿಗೆ ಎನೈಟಿಕೆಯ ನಿಸಾರ್ ಮತ್ತು ಕೆಲವು ಶುದ್ಧ ಸೈಕಲ್ ಗಿರ ಹಿಡಿದವರ ಬಳಗ (ಮಂಗಳೂರು ಸೈಕಲ್ಲಿಗರ ಸಂಘ – ಎಂ.ಸಿ.ಸಿ) ಭಾರೀ ಹಿಡಿಸಿತ್ತು. ಇವರ ಕರಾವಳಿ ಸೈಕಲ್ವಾಲಾಗಳ ಬಳಗ ಬೆಳಗುತ್ತಿರುವಷ್ಟರಲ್ಲೇ ಸಂದೀಪ್ ವೃತ್ತಿಯಲ್ಲಿ ಬಡ್ತಿ ಬಯಸಿ ಬೆಂಗಳೂರಿಸುವುದು ಅನಿವಾರ್ಯವಾಯ್ತು. ಆತ ಭವಿಷ್ಯ ಉಜ್ವಲಗೊಳಿಸುವುದು ಸರಿಯೇ. ಆದರೆ ಜಂಟಿ ಸೈಕಲ್ ಬಿಟ್ಟು ಒಂಟಿ ಹಿಡಿದ ನನಗೆ ಜತೆಗೊಡುವವರು ಯಾರೂಂತ ನಾನು ಗೊಣಗಿಕೊಳ್ಳುವಂತಾಯ್ತು! ಇನ್ಫೊಸಿಸ್ಸಿನಲ್ಲಿ ಸಂದೀಪ್ ಸಹೋದ್ಯೋಗಿಯಾಗಿದ್ದ, ನಾವು ತಮಾಷೆಗೆ ಗುರುತಿಸಿಕೊಂಡಂತೆ ಕಪ್ಪೆ ಕ್ಯಾಪ್ಟನ್ ದೀಪಿಕಾ “ಈಗ ನಾನೊಳ್ಳೆ ಸೈಕಲ್ ಕೊಂಡಿದ್ದೀನಿ, ದಾರಿ ತೋರ್ಸಿ” ಅಂದರು.

ದೀಪಿಕಾ ಶಾಲಾದಿನಗಳಲ್ಲಷ್ಟೇ ಸೈಕಲ್ ಬಿಟ್ಟಾಕೆ. ಇಂದಿನ ತಾಕತ್ ಪರೀಕ್ಷೆಗೆ ಕೊಟ್ಟಾರ ಕ್ರಾಸಿನಿಂದ ಕಾವೂರು ವೃತ್ತ, ಬೋಂದೆಲ್, ಪದವಿನಂಗಡಿ, ಆಕಾಶವಾಣಿ ಎಂದು ಒಂದು ಸುತ್ತು ಕರೆದೊಯ್ದೆ. ಕಾವೂರು ವೃತ್ತ ತಲಪುವ ಮೊದಲಿನ ಎರಡು ಸಣ್ಣ ಏರುಗಳಲ್ಲೇ ಈಕೆ ನೀರು ನೀರು.

ಇನ್ನೊಂದಿನ ಮಟ್ಟಸ ದಾರಿಯಲ್ಲೇ ನೋಡುವಾಂತ ಅಶೋಕನಗರ, ದಂಬೆಲ್, ಗುರುಪುರ ನದಿ ದಂಡೆಗಾಗಿ ಕೂಳೂರು ಮುಟ್ಟಿಸಿದೆ. ಆಕೆಯಲ್ಲಿ ಉತ್ಸಾಹ ಉಳಿದಂತೆ ಕಾಣಿಸಿತು. ತಣ್ಣೀರು ಬಾವಿಯತ್ತ ಮುಂದುವರಿಸಿದೆ. ಆಯಿಲ್ ಜೆಟ್ಟಿಯ ಕೊನೆ ಸುತ್ತಿ, ಅತಿಥಿಗೃಹದ ಅಂಗಳಕ್ಕಾಗಿ, ತಣ್ಣೀರುಬಾವಿ, ಬೆಂಗ್ರೆ ಎಂದು ಜಪಿಸುತ್ತಾ ನೇತ್ರಾವತಿ ಅಳಿವೆ ಬಾಗಿಲವರೆಗೂ ದಾರಿ ಬೆಳೆಸಿದೆ. ಅಲ್ಲಿ ನೇತ್ರಾವತಿ ಮತ್ತು ಗುರುಪುರ ನದಿಗಳು – ಊರಿನ ಪಾಪಹಾರಿಣಿಗಳು (ಪಾರಿಸರಿಕ ಕಲ್ಮಶಗಳು), ಅನಿವಾರ್ಯವಾಗಿ ಸಮುದ್ರರಾಜನಿಗೆ `ಪಾಲು’ ಒಪ್ಪಿಸುವ ಸನ್ನಿವೇಶ. (ಇದರಲ್ಲಿ ತುಂಬೆ ಅಣೆಕಟ್ಟಿನಲ್ಲಿ ಮನಪಾದ ಪ್ರಥಮ ಪ್ರಜೆ ಅರ್ಪಿಸಿದ ಬಾಗಿನವೂ ಇರಲೇಬೇಕು. ನಿಜವಾಗಿ ಕೊಡಗಟ್ಟಲೆ ಹಾಲನ್ನೇ ಒಪ್ಪಿಸುವವರ ಕತೆ ನೀವು ಪತ್ರಿಕೆಗಳಲ್ಲೇ ನೋಡಿರ್ತೀರಿ) ಕಡಲ ಕಿನಾರೆಯ ಡಾಮರು ದಾರಿ ಹರಕುಮುರುಕಾಗುತ್ತ, ಕೊನೆಯಲ್ಲಿ ಬರಿಯ ಕಚ್ಚಾ ಮಾರ್ಗವಾಗಿ ಒಳನಾಡಿನತ್ತ ತಿರುಗಿ ಗುರುಪುರ ನದಿದಂಡೆಯ ಮೇಲೆ ಹರಿಯುತ್ತದೆ. (ಮುಂದೆ ಒಂದಷ್ಟು ವಸತಿ ವಠಾರ, ಮಂಗಳೂರಿನ ಬಂದರಕ್ಕೆ ಹೋಗುವ ದೋಣೆಗಟ್ಟೆ ಕಳೆದು ನಾವು ಬಂದದ್ದೇ ದಾರಿ ಸೇರುತ್ತದೆ.)

ಕಚ್ಚಾ ಮಾರ್ಗದಂಚಿನ ಒಂದು ದೋಣಿ ಕಾರ್ಯಾಗಾರ ಮಳೆ ಇಲ್ಲ ಎನ್ನುವುದನ್ನು ಗಟ್ಟಿ ಮಾಡಿಕೊಂಡು, ಕಾಯಕಲ್ಪಕ್ಕಾಗಿ ಎರಡು ಪುಟ್ಟ ಹಡಗುಗಳ ಋತುಮಾನದ ತಡಿಕೆ-ತಪಸ್ಸು ತಪ್ಪಿಸಿ ಇಲ್ಲಿಗೆ ಕರೆಸಿಕೊಂಡಿತ್ತು. (ನಿಮಗೆ ತಿಳಿದಿರಬಹುದು: ಬಹುತೇಕ ಮೀನುಗಾರಿಕಾ ದೋಣಿಗಳನ್ನು ತೀವ್ರ ಮಳೆಗಾಲದಲ್ಲಿ ದಂಡೆಗೇರಿಸಿ, ತಡಿಕೆ ಮರೆಕಟ್ಟಿಬಿಡುತ್ತಾರೆ) ಒಂದು ಹಡಗು ಆಗಲೇ ದಂಡೆಯೇರಿ, ಊರೆಗೋಲನ್ನು ತಾಂಗಿಕೊಂಡು, `ಫೇಶಿಯಲ್’ ಕಂಡಿತ್ತು. ಇನ್ನೊಂದು ಅರೆ ನೀರು ಬಿಟ್ಟು, ಏರಾಟದಲ್ಲಿತ್ತು. ಗಟ್ಟಿ ದಂಡೆಯಲ್ಲಿ ರಾಟೆ ಗುಂಭ ಹುಗಿದು, ಭಾರೀ ಹುರಿಹಗ್ಗ ಕಟ್ಟಿ, ಹತ್ತಿಪ್ಪತ್ತು ಮಂದಿ ಐಸಾ ಹಾಕುತ್ತ ಸುತ್ತುವುದು, ಹಡಗಿನಡಿಗೆ ದಿಮ್ಮಿ ಉರುಳಿಸುವವರ ಬೊಬ್ಬೆ ಎಲ್ಲಾ ಹಿಂದೆ ಕೇಳಿದ್ದೆ. ಈಗ ವಿರಾಮದಲ್ಲಿ ನನ್ನೆರಡು ಹೆಚ್ಚುವರಿ ಕೈ ಸೇರಿಸಲು ಉತ್ಸಾಹಯಾಗಿದ್ದೆ. ಆದರೆ ಉನ್ನತ ಕಾಂಕ್ರೀಟ್ ಪೀಠದಲ್ಲಿ ಕುಳಿತ ಮೋಟಾರ್ ಗಿರಿಜಾ ಮೀಸೆಯಂತೇ ಚಾಚಿದ ಉಕ್ಕಿನ ಮಿಣಿಗಳಲ್ಲಿ ನಿರಾಯಾಸವಾಗಿ ಹಡಗನ್ನೆಳೆಯುತ್ತ ನನ್ನತ್ತ ಗುರ್ರಾಯಿಸಿದುವು!

ಕೂಳೂರಿನವರೆಗೆ ಇಪ್ಪತ್ತು ಮೂವತ್ತಡಿ ಅಂತರದಲ್ಲಿ ನಿಷ್ಠಾವಂತ ಹಿಂಬಾಲಕಿಯಾಗಿದ್ದ ದೀಪಿಕಾ ಬೆಂಗ್ರೆಗಾಗುವಾಗ ನನಗೆ ಹತ್ತಿಪ್ಪತ್ತು ಕಡೆ ನಿಂತು ಕಾಯುವ ಹಾಗೆ ಮಾಡಿದ್ದರು! ಮತ್ತೆ ಹದಿನೆಂಟು ಕಿಮೀ ಪೆಡಲೊತ್ತುವ ಮಾನಸಿಕ ಹೊರೆಯೂ ಆಕೆಯನ್ನು ಕಾಡುತ್ತಿದ್ದಿರಬೇಕು. ಆದರೆ ಅಳಿವೆ ಬಾಗಿಲು ಸುತ್ತಿ, ನದಿ ದಂಡೆಯಲ್ಲಿ ದೋಣಿಗಟ್ಟೆ ನೋಡಿದ್ದೇ ಆಕೆ ಚುರುಕಾದಳು! “ಮಂಗಳೂರ್ಗೆ ಬೋಟಲ್ ಹೋಗೋಣ್ವಾ?” ಬೇಡ ಅನ್ನಲು ನನ್ನದೇನು ವ್ರತವಿರಲಿಲ್ಲ, ಹಾಗೇ ಮಾಡಿದೆವು. ಆದರೆ ಮತ್ತಿನ ಸರ್ಕೀಟುಗಳಿಗೆ ನಾನು ದೀಪಿಕಾರಿಗೆ ಸ್ವಾಯತ್ತತೆ ಕೊಟ್ಟೆ, ನಾನು ಒಂಟಿಯಾಗುಳಿದೆ! ನಾನು ಸಂದೀಪರಷ್ಟು ಉದಾರಿಯಾಗಲಿಲ್ಲ!!

`ಸಾಯೋ’ಕಲ್ ಸರ್ಕೀಟ್: ಒಮ್ಮೆ ವಾರದ ನಡುವೆ ಸೈಕಲ್ಲನ್ನು ತಣ್ಣೀರು ಬಾವಿಯತ್ತ ಹೊರಳಿಸಿದ್ದೆ. ಅಲ್ಲಿನ ಅರಣ್ಯ ಇಲಾಖೆ ಬಂಗ್ಲೆಯ ಒತ್ತಿನ ಗಾಳಿಮರದ ತೋಪಿನೊಳಗಿಂದಾಗಿ ಕಡಲ ಕಿನಾರೆಗೆ ಹೋದೆ. ಪರಿಸರ ಮಾಲಿನ್ಯಕ್ಕೆ ಅಮೋಘ ಕೊಡುಗೆಯಾದ ಒಂದೆರಡು ಜೂಸು, ಚಾಟು ಮಳಿಗೆಗಳೆಲ್ಲ ಖಾಲಿ ಬಿದ್ದಿದ್ದುವು. ಮಳೆಯ ಗೆಳೆತನ ಹರಿದದ್ದಕ್ಕೋ ಏನೋ ಕಡಲು ಅಬ್ಬರಿಸುತ್ತಲೇ ಇತ್ತು. ಕೇಳಿಸಿಕೊಳ್ಳಲು ಜನವೇ ಇಲ್ಲ ಎನ್ನುವ ಸ್ಥಿತಿ. ಇದ್ದ ಒಂದು ಕುಟುಂಬ ತೆರೆಗಳ ಮೋಹದಲ್ಲಿ ಪ್ಯಾಂಟಿನ ಕಾಲೇರಿಸುತ್ತಾ ಮುಂದೊತ್ತಿದ್ದರು. ಇದ್ದಕ್ಕಿದ್ದಂತೆ ಜೋರಾಗಿ ಪೋಲಿಸ್ ಶಿಳ್ಳೆ ಕೇಳಿಸಿತು. ನೋಡಿದರೆ ಹರಕು ಜೋಪಡಿಯ ನೆರಳಿನಲ್ಲಿ ಹಗ್ಗ, ಬೆಂಡು ಎಲ್ಲಾ ಇಟ್ಟುಕೊಂಡು ಕುಳಿತಿದ್ದ ಇಬ್ಬರು ಕಾವಲುಗಾರರು. ಶಿಳ್ಳೆ ಹಿಂಬಾಲಿಸಿದಂತೆ ಬೊಬ್ಬೆ ಹೊಡೆದರು “ಹಿಂದೆ ಬನ್ನಿ, ನೀರಿಗೆ ಹೋಗಬೇಡಿ.” ಎಲ್ಲವನ್ನೂ ದೂರದರ್ಶನವಷ್ಟೇ ಮಾಡುತ್ತಲಿದ್ದ ನನ್ನಲ್ಲಿ ಒಬ್ಬ ಸಾಕಷ್ಟು ಗಟ್ಟಿಯಾಗಿಯೇ ಗೊಣಗಿದ “ಸಾಯೋಕಿಲ್ಲಿ ಯಾಕೆ ಬರ್ತಾರೆ.” ಅದು ನನ್ನ ಸಾಯೋಕಲ್ಲಿನ ಟೀಕೆಯಲ್ಲದಿದ್ದರೂ ನಾನು ತಣ್ಣಗೆ ವಾಪಾಸಾದೆ.

(ಆವತ್ತಿನ ಪತ್ರಿಕಾವರದಿ: ಎಂಆರ್ಪೀಯೆಲ್ಲಿನ ಬಿಡುನೀರ ಕೊಳವೆ ಮೇಲೊಬ್ಬ ಸಾ`ಹಸೀ’ ಯುವಕ ನಡೆಯ ಹೋಗಿ ಕಡಲಿನ ಸೆಳೆತಕ್ಕೆ ಸಿಕ್ಕು ಸಾಯಲಿದ್ದವ ಕಾವಲುಗಾರರ ಸಾಹಸದಿಂದ ಬಚಾವಾದ.)

ಸರ್ಕಾರಿ ಸಂತೆಗೆ ಸಜ್ಜಾದ ಪಿಲಿಕುಳ! : ಒಂದು ಸೋಮವಾರ ಅದೇ ಮೊದಲು ಕುಲಶೇಖರದಿಂದಾಚೆ ಪೂರ್ಣ ಇಳಿದು ಸಾಗಿತ್ತು ನನ್ನ ಸೈಕಲ್ ಸವಾರಿ. ಡೈರಿ ಏರು ಸಾಮಾನ್ಯ, ಮುಂದಿನ ಇಳಿಜಾರು ಡಾಮರು ಸರಿಯಿದ್ದಿದ್ದರೆ ಕುಶಿ ಕೊಡುವಂಥದ್ದೇ. ಮತ್ತಿನ ಕುಡ್ಪು ಘಾಟಿ ಮಹಾ ಪಿಕಲಾಟಿ. ತೀವ್ರ ಕುರುಡು ತಿರುವುಗಳು, ಎದುರುಬದಿರಾಗುವ ಎರಡು ವಾಹನಗಳು ಕಷ್ಟದಲ್ಲಿ ದಾಟುವಷ್ಟೇ ವಿಸ್ತಾರ ದಾರಿ. ಮಳೆಗಾಲ ಬಿಟ್ಟು ವರ್ಷದ ಎಲ್ಲಾ ದಿನಗಳಲ್ಲೂ ಇಲ್ಲಿ ಕಲ್ಲು ಹೊತ್ತು ಬರುವ ಲಾರಿಗಳ ಉತ್ಪಾತದ ವರದಿ ಸಾಕಷ್ಟು ಕೇಳಿದ್ದೇನೆ. ಹಾಗಾಗಿ ಗಮನ ದಾರಿಯ ವಹಿವಾಟುಗಳ ಬಗ್ಗೇ ಕೇಂದ್ರೀಕರಿಸಿ, ಮುಂಬಾಗಿ, ಕೆಳಗೇರುಗಳಲ್ಲಿ ವ್ಯವಹರಿಸುತ್ತ, ರಸ್ತೆಯ ಎಡ ಅಂಚಿಗೆ ನಿಷ್ಠನಾಗಿ ಸಾಗಿದ್ದೆ. ಒಂದು ತಿರುವಿನಾಚೆಯಿಂದ ಎದುರೊಂದು ಬಸ್ಸು ಬಂತು. ಅದೇ ಸಮಯದಲ್ಲಿ ಇನ್ನೊಂದು ನನ್ನ ಹಿಂದಿನಿಂದ ರಕ್ಕಸ ಅಬ್ಬರ ಹೊರಡಿಸಿತು. ಕಿರಿಯ ವಾಹನಗಳ ಬಗ್ಗೆ ಸಹನೆಯನ್ನು ಹಿಂದಿನ ಬಸ್ಸಿನಿಂದ ನಿರೀಕ್ಷಿಸದೆ, ಮತ್ತೆ ಸ್ವಲ್ಪ ನನ್ನ ಪರ್ವತಾರೋಹಿ-ಸೈಕಲ್ ಬಗ್ಗೆ ವಿಶ್ವಾಸದಲ್ಲೂ ಧಡಕ್ಕೆಂದು ಅರ್ಧ ಅಡಿ ಕೆಳಗಿದ್ದ ಮಣ್ಣಿಗೇ ಇಳಿಸಿ ಉಸ್ಸೆಂದೆ! ಆದರೆ ಸಮಾಧಾನ ಕ್ಷಣಿಕ. ಡಾಮರಿಳಿದ ನೀರು ಅಂಚನ್ನೇ ಕೊರೆದು ಕೊರಕಲು ಉಂಟು ಮಾಡದಂತೆ ಎಬ್ಬಿಸಿದ್ದ ಸುಮಾರು ಒಂದಡಿ ಎತ್ತರದ ದಿಬ್ಬದಂತೇ ಇದ್ದ ಅಡ್ಡಚರಂಡಿ ಸಿಕ್ಕಿತು. ಕಾಲಿಳಿಸದೇ ಸೀಟಿಗೇಳದೇ ಕುಡುಪು ಗುಡ್ಡಕ್ಕಿದು ಧೀರ ಎಂದಾಗಬಹುದಾಗಿದ್ದ ನನ್ನ ಅಗ್ಗಳಿಕೆ ಅಳಿಸಿಹೋಯ್ತು; ಸೈಕಲ್ಲಿಳಿದು ದೊಡ್ಡವರಿಗೆ ದಾರಿ ಕೊಟ್ಟೆ, ಎನ್ನುವುದಕ್ಕಿಂತ ನಾನು ಬದುಕಿಕೊಂಡೆ.

ಕುಡುಪು ಘಾಟಿಯ ಕೊನೆಯೆಂದರೆ ವಾಮಂಜೂರು ಪದವು, ಪಚ್ಚನಾಡಿ ಕ್ಷೇತ್ರ. ಅಲ್ಲಿನ ಮಟ್ಟಸ ದಾರಿಯಲ್ಲೂ ಹೀಗೇ ಹಿಂದಿನಿಂದೊಂದು ಬಸ್ ಕಿವಿಗಡಚಿಕ್ಕಿತು. ನಾನು ತುಸು ಭಂಡ ಧೈರ್ಯ ತಳೆದೆ. ದಾರಿ ನೇರವಿದೆ, ಎದುರಿನಿಂದೇನೂ ಬರುತ್ತಿಲ್ಲ ಎಂಬ ಭಂಡ ಧೈರ್ಯದಲ್ಲಿ ನಾನು ಡಾಮರ್ ಇಳಿಯುವ ಲಕ್ಷಣ ತೋರಲಿಲ್ಲ. ಬಸ್ಸಿನವನೇನೋ ತುಸು ಬಲಕ್ಕೆ ಸರಿದೇ ಮುಂದುವರಿದ. ಆದರೆ ಸಂಜೆ – ಶಾಲೆ ಕಾಲೇಜು ಮಕ್ಕಳ ಹೇರಿಕೆಯ ಸಮಯ. ಆಗಲೇ ಸಾಹಸಿಕವಾಗಿ ಬಸ್ಸಿನಿಂದ ಒಂದಡಿ ಹೊರಗೇ ನೇತಾಡುತ್ತಿದ್ದ ಬಾಲಕನೊಬ್ಬನ ಬೆನ್ನಚೀಲ ನನ್ನನ್ನು ಸವರಿತ್ತು. ಅದೃಷ್ಟಕ್ಕೆ ಡಾಮರಾಚಿನ ಮಣ್ಣು ಕೊರಕಲು ಬಿದ್ದಿರಲಿಲ್ಲ, ಚರಂಡಿ ನಿಗಿದು ಹೋಗಿತ್ತು; ಅತ್ತ ಮಿಂಚಿದ್ದ ನಾನು ಯಾವುದೇ ಅವಘಡವಿಲ್ಲದೆ ಪಾರಾಗಿದ್ದೆ!

ವಾಮಂಜೂರು ಪದವಿನ ಕೊನೆಯಲ್ಲಿ ಪಿಲಿಕುಳದತ್ತ ತಿರುಗಿಕೊಂಡೆ. ಪಿಲಿಕುಳದ ವಿಚಿತ್ರ ಸ್ವಾಗತ ವೃತ್ತದಿಂದಿಳಿಯುತ್ತ ಎಡಕ್ಕೆ ಭಾರೀ ನವೀನ ವಿಜ್ಞಾನ ಕೇಂದ್ರ ಸಜ್ಜುಗೊಳ್ಳುವುದು ಕಂಡೆ. ಎಲ್ಲೂ ನಿಲ್ಲದೆ ಮತ್ತಿನ ವೃತ್ತದಲ್ಲಿ ಎಡಕ್ಕೆ ಹೊರಳಿ ಕೊಳದ (ಕುಳ) ದ್ವಾರಕ್ಕೇ ಹೋದೆ. ಕೊಳದಂಡೆಯ ಉದ್ಯಾನ ಮಾತ್ರ ತೆರೆದಿತ್ತು ಉಳಿದಂತೆ ಸೋಮವಾರ ಪಿಲಿಕುಳಕ್ಕೆ ವಾರದ ರಜಾದಿನ; ಇಡೀ ವಠಾರ ಹೆಚ್ಚು ಕಡಿಮೆ ನಿರ್ಜನ. ವಾಮಂಜೂರಿನಿಂದ ಕಾಡುತ್ತಿದ್ದ ಪಿರಿಪಿರಿ ಮಳೆ ಬಿಟ್ಟು, ಎರಡೂ ಬದಿಗಳ ಹಸಿರಿನ ಕಳೆ ಹೊತ್ತ ಮಟ್ಟಸ ಚೊಕ್ಕ ದಾರಿ ಮೋಹಕವಾಗಿತ್ತು. ಸಾಲದ್ದಕ್ಕೆ ಜೀರುಂಡೆಗಳ ಶ್ರುತಿ ಹಿಡಿದ ಕೋಗಿಲೆ ಕುಕಿಲು, ದೂರದ ನವಿಲುಲಿ ನನ್ನಲ್ಲಿ ಹೆಚ್ಚಿನ ಉತ್ಸಾಹ ತುಂಬಿತು. ಅವನ್ನು ಸ್ವಲ್ಪವಾದರೂ ದಾಖಲೀಕರಿಸುವ ಪ್ರಯತ್ನಕ್ಕಿಳಿದೆ. ವಾಪಾಸಾಗುವಾಗ ಉದ್ಯಾನವನದ ತುದಿಯಿಂದ ಪ್ರಾಣಿಸಂಗ್ರಹಾಲಯದವರೆಗೆ ಒಂದು ಕೈಯ್ಯಲ್ಲಿ ಕ್ಯಾಮರಾ ಚಾಲೂ ಮಾಡಿ ಗಟ್ಟಿ ಹಿಡಿದುಕೊಂಡು, ಇನ್ನೊಂದರಲ್ಲಿ ಸೈಕಲ್ ನಿಯಂತ್ರಿಸಿಕೊಂಡು, ಏದುಸಿರು ಕಟ್ಟಿಟ್ಟು ತುಳಿದದ್ದೇ ಬಂತು! (ಮನೆಗೆ ಬಂದ ಮೇಲಷ್ಟೇ ಫಲಿತಾಂಶದ ಕೊರತೆ ತಿಳಿಯಿತು. ಅದನ್ನು ಇಲ್ಲೇ ಹಾಕಿದ್ದೇನೆ – ನೋಡುತ್ತ ಕೇಳಿ, ನೀವೇ ಹೇಳಿ ಅದೇನೆಂದು)

ಪ್ರಾಣಿಸಂಗ್ರಹಾಲಯದ ಎದುರು ಮೂರನೇ ದಾರಿ ಹಿಡಿದರೆ ಹಳೆಯ ವಿಜ್ಞಾನ ಕೇಂದ್ರ, ಅದರೆದುರಿಗೆ ಪಾರಂಪರಿಕ ದಕಜಿಲ್ಲೆಯ ಸಜೀವ ಮಾದರಿ ವಿಕಸಿಸುತ್ತಿರುವುದೂ ನನಗೆ ತಿಳಿದಿತ್ತು. ವಿಜ್ಞಾನ ಕೇಂದ್ರದಲ್ಲಿ ಹಿರಿಯ ಗೆಳೆಯ ಡಾ| ಕೆವಿ ರಾಯರನ್ನು ಮಾತಾಡಿಸುವ ಉತ್ಸಾಹದಿಂದ ನಾನು ಅತ್ತ ಹೋದೆ. ಕೆವಿ ರಾಯರು ಅನ್ಯ ಕಾರ್ಯನಿಮಿತ್ತ ಮಂಗಳೂರಿಗೆ ಹೋಗಿಯಾಗಿತ್ತು. ಸರಿ, ನನ್ನುದ್ದೇಶವಾದರೂ ತಿರುಗುವುದೇ ಆದ್ದರಿಂದ, ಕತ್ತಲು ಮಳೆಗಳನ್ನು ಮೀರಿ ಮನೆ ಸೇರಿಕೊಳ್ಳಲು ಹೊರಟೆ. ಆಗ ಬರುವ ದಾರಿಯಲ್ಲಿ ಗಮನಿಸದ ಈ ವಿಶಿಷ್ಟ ಕಟ್ಟಡಗಳ ವಠಾರ ಕಾಣಿಸಿತು.

ಹಳೆಯ ವಿಜ್ಞಾನ ಕೇಂದ್ರಕ್ಕೂ ಮೊದಲು ಎಡದ ವಿಸ್ತಾರ ಪದವಿನಲ್ಲಿ, ಈ ಜಿಲ್ಲೆಯದೇ ವಾಸ್ತು ಶೈಲಿಯಲ್ಲಿ ತಲಾ ಐದು ಮಳಿಗೆಗಳ ಹತ್ತು-ಹದಿನೈದಕ್ಕೂ ಮಿಕ್ಕ ವ್ಯವಸ್ಥಿತ ಮಾರುಕಟ್ಟೆಯೊಂದು ಸಜ್ಜುಗೊಂಡು, ಹಾಳು ಸುರಿಯುತ್ತಿರುವುದು ಕಂಡೆ. ವಠಾರದೊಳಗೆ ಜನಸಂಚಾರಕ್ಕೆ ವಿಸ್ತಾರ ಮಾರ್ಗ, ಮಳೆನೀರ ಚರಂಡಿ, ಬೀದಿದೀಪಗಳು ಮುಕ್ತಾಯದ ಸ್ಪರ್ಷವಷ್ಟೇ ಬಾಕಿಯಿರುವಂತಲ್ಲಿಂದ ಕಳೆಕಸ ಪೇರಿಸಿಕೊಳ್ಳುತ್ತಿವೆ. ಕಟ್ಟಡಗಳ ಬಾಹ್ಯ ಲಕ್ಷಣಗಳಿಂದಲೇ ಹೇಳುವುದಿದ್ದರೆ ಒಳಗೆ ನೀರು, ವಿದ್ಯುತ್, ಶೌಚ ಸಹಿತ ಸಕಲ ಸೌಕರ್ಯಗಳು ಸಜ್ಜಾಗಿಯೂ ಉಪಯೋಗವಿಲ್ಲದೆ ತುಕ್ಕು, ಮುಕ್ಕು ತಿನ್ನುತ್ತಿರಬೇಕು. ಯಾರೋ ದಾರಿಹೋಕರು ಹೇಳಿದಂತೆ ಇಲ್ಲಿನ ನಿರ್ಮಾಣ ಚಟುವಟಿಕೆಗಳು ನಿಂತು ಕನಿಷ್ಠ ಆರೇಳು ತಿಂಗಳೇ ಕಳೆದಿತ್ತು. ಮಂಗಳೂರು ನಗರದ ಸಾಂಪ್ರದಾಯಿಕ ಮಾರುಕಟ್ಟೆಗಳನ್ನು (ಕರಂಗಲ್ಪಾಡಿ, ಕದ್ರಿ, ಕಂಕನಾಡಿ, ಕೇಂದ್ರ ಇತ್ಯಾದಿ) ಕೊಳಕುಮಂಡಲ ಮಾಡಿ, ಸೂಪರ್ ಬಜಾರ್, ಮಾಲ್‍ಗಳ ಹೊಲಸು ಬೆಳೆಗೆ ಪ್ರಶಸ್ತ ಮಾಡಿಕೊಟ್ಟವರು ಇಲ್ಲೇನು ಮಾಡಲಿದ್ದಾರೆ – ನಮ್ಮ ನಿಮ್ಮ ದುಡ್ಡಲ್ಲಿ? ಜನವಿದೂರ ಜಾಗದಲ್ಲಿ? `ಉಳ್ಳವರಿಗೆ’ ಪ್ರಾಕೃತಿಕ ವಿಹಾರತಾಣವೆಂದಷ್ಟೇ ಆಕರ್ಷಣೆ ಬೆಳೆಯಬಲ್ಲ ದೂರದಲ್ಲಿ? ಉತ್ತರ ಹೇಳುವವರು ಯಾರೂ ಇಲ್ಲವಾದ್ದಕ್ಕೆ ನಾನು ಸೀದಾ ಮರಳಿ ಮನೆ ಸೇರಿದೆ.

ಸೋಮೇಶ್ವರ, ಉಚ್ಚಿಲ ಸ್ಥಳನಾಮವಲ್ಲ!

ಮಳೆಗಾಲ ತೊಡಗುತ್ತಿದಂತೆ ಮಲೆನಾಡಿನವರಿಗೆ ನೆರೆನೀರ ಹಾವಳಿಯಿದ್ದಂತೇ ಕರಾವಳಿಯವರಿಗೆ ಕಡಲ ಕೊರೆತ ಈಚಿನ ದಿನಗಳಲ್ಲಿ ಸಹಜವಾಗತೊಡಗಿದೆ. ಮಂಗಳೂರಿನ ಉತ್ತರದ ಕಡಲಕಿನಾರೆಯಲ್ಲಿ ಮುಖ್ಯವಾಗಿ ಪಣಂಬೂರಿನ ನವಮಂಗಳೂರು ಬಂದರುಗಟ್ಟೆಯಿಂದಾಗಿ ಕಡಲ ಸಹಜಸ್ಥಿತಿಯನ್ನು ಗ್ರಹಿಸುವುದು ಕಷ್ಟವಾಗುತ್ತದೆ. ಹಾಗಾಗಿ ಹೆದ್ದಾರಿಯ ಮೇಲೆ ದಕ್ಷಿಣಕ್ಕೆ ಸೈಕಲ್ ಮೆಟ್ಟುತ್ತಾ ತೊಕ್ಕೋಟು ಕಳೆದು ಕೋಟೆಕಾರು ಹಾಯುವಾಗ ಸಹಜವಾಗಿ ದೃಷ್ಟಿ ಎಡಕ್ಕೆ ತಿರುಗಿ ಅಮೃತ ಸೋಮೇಶ್ವರರನ್ನು ಹುಡುಕುತ್ತದೆ.ಪುತ್ತೂರಿನಲ್ಲಿ ಸ್ವಂತದ ಅಧ್ಯಾಪಕ ವೃತ್ತಿಯಿದ್ದರೂ ಹುಟ್ಟೂರಿನ ಮೋಹ ಕಳಚಿಕೊಳ್ಳದೆ ತನ್ನಭಿರುಚಿಯ ಒಲುಮೆಯನ್ನು (ಅವರ ಹಳೆ ಮನೆಯ ಹೆಸರೂ ಹೌದು) ಕಟ್ಟಿಕೊಂಡಿದ್ದರು. ಈಚೆಗೆ ಹೆದ್ದಾರಿಯ ಬೆಳವಣಿಗೆಯ ಹಸಿವಿಗೆ ಆ ಮನೆ ಬಲಿಯಾದದ್ದು ವಿಷಾದನೀಯ. ಆದರೆ ಸೋಮೇಶ್ವರದ ಅಮೃತರಿಗೆ ಸಾಹಿತ್ಯ, ಕಲೆ, ಮಾನವಪ್ರೀತಿಗಳ ಒಲುಮೆಯೂ ಅಮೃತ; ಅವರು ಅನ್ವರ್ಥನಾಮಿ. ನನಗೆ ಒಮ್ಮೆಲೇ ಅವರನ್ನು ನೋಡದೇ ಹಲವು ಕಾಲವಾಯ್ತಲ್ಲಾಂತನ್ನಿಸಿತು. ಆದರೆ ಅವರ ಹೊಸ ಬಿಡಾರ ಎಲ್ಲೋ ಎಂದು ತಲೆ ತುರಿಸಿಕೊಂಡಾಗ ಹೊಳೆದ ಹೆಸರು ಸದಾಶಿವ ಮಾಸ್ಟರ್.

ಸದಾಶಿವ ಮಾಸ್ಟ್ರು ಎಂದೇ ಖ್ಯಾತರಾದ, ಮೂಲತಃ ಕುಂಬಳೆಯ ಸದಾಶಿವರು ಅಧ್ಯಾಪನ ವೃತ್ತಿಯಲ್ಲಿ ಕಾವೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗುವವರೆಗೂ ದಕ ಜಿಲ್ಲೆಯ ಹತ್ತೂರು ಸುತ್ತಿದ್ದರು. ಆದರೆ ಜನ್ಮಾದಪಿ ಅಂಟಿದ `ಹುಚ್ಚು’ – ಯಕ್ಷಗಾನದ ಹವ್ಯಾಸ, ಇದನ್ನು ಶುದ್ಧ ಕಲಾಪ್ರೀತಿಗಾಗಿ ನೆಚ್ಚಿಕೊಂಡೇ ಇದ್ದರು. ಅವರ ಮೊಕ್ಕಾಂ ಎಲ್ಲೇ ಇರಲಿ, ಧಿಂಗಣ ಹಾಕಿದ್ದು ಕೋಟೇಕಾರು-ಉಚ್ಚಿಲದ ಆಸುಪಾಸಿನಲ್ಲೇ. ಅದಕ್ಕೇ ಇಂದು ಕಲಾಗಂಗೋತ್ರಿ ಅಂತಾರಾಷ್ಟ್ರೀಯ ಖ್ಯಾತಿಯ ಹವ್ಯಾಸಿ ಯಕ್ಷಗಾನ ಸಂಘವಾಗಿ (ಬಹುಶಃ ಮೂರು ದಶಕಗಳನ್ನೇ ಮೀರಿ) ಬೆಳೆದಿದೆ, ಸಂಕೊಲಿಕೆಯಲ್ಲಿ ಸ್ವಂತ ಕಟ್ಟಡದಲ್ಲಿ ಸಕ್ರಿಯವಾಗಿ ನೆಲೆಸಿದೆ. ಪ್ರಕೃತ ಕಲಾಗಂಗೋತ್ರಿಯ ನೆರಳಿನಲ್ಲಿ ಅಮೃತರು ಅಧ್ಯಕ್ಷ, ಸದಾಶಿವರು ಕಾರ್ಯದರ್ಶಿ. ಅಲ್ಲದಿದ್ದರೂ ಸದಾಶಿವರು ಪ್ರೀತಿ, ನಿಷ್ಠೆಗಳಲ್ಲಿ ಅಮೃತರಿಗೆ ಕಾರ್ಯದರ್ಶಿಯಾಗಿಯೇ ನಡೆದು ಬಂದವರು.

ಸಂಕೊಲಿಕೆಯಲ್ಲಿ ಕಲಾಗಂಗೋತ್ರಿಯ ಕಟ್ಟಡ ಹೆದ್ದಾರಿಯ ಬಲ ಪಕ್ಕದಲ್ಲೇ ಇದೆ. ಅದಕ್ಕೂ ತುಸು ಮೊದಲೇ ಬಲಕ್ಕೊಡೆಯುವ ಕವಲು ಉಚ್ಚಿಲ ರಸ್ತೆ. ಅದರಲ್ಲಿ ಐದಾರು ಮನೆಗಳ ಅಂತರದಲ್ಲೇ ಸದಾಶಿವಗೃಹ. ಸದಾಶಿವರು ಪುರಭವನದಲ್ಲಿ ಶ್ರೀಕೃಷ್ಣ ಯಕ್ಷ ಸಭಾ ನಡೆಸಿದ್ದ ಹರಕೆ ಆಟದಲ್ಲಿ ರುಚಿ ಹುಡುಕಲು ಹೋಗಿದ್ದರು. ಅವರ ಗೃಹಿಣಿ ನನಗೆ ಬೇಕಾದ ಅಮೃತರ ಮನೆಗೆ ಮಾರ್ಗಸೂಚನೆ ಕೊಟ್ಟರು. ಅಂದುಂಟಾದ ವಿಚಾರಣಾ ವಿಳಂಬ ಅಮೃತರ ಭೇಟಿಗೆ ಸಮಯಮಿತಿ ಹೇರುವುದು ಬೇಡವೆಂದು ನಾನು ಕೇವಲ ಸೈಕಲ್ ಸರ್ಕೀಟಿಗೆ ಸೀಮಿತಗೊಳಿಸಿದೆ.

ಸಂಕೊಲಿಗೆ-ಉಚ್ಚಿಲ ದಾರಿ ನೇರ ಸಮುದ್ರಮುಖಿ. ರೈಲ್ವೆ ಹಳಿದಾಟಿದ್ದೇ ಅದುವರೆಗೆ ಶಬ್ದ ಕೋಲಾಹಲದಲ್ಲಷ್ಟೇ ಕಿವಿತುಂಬುತ್ತಿದ್ದ ಸಮುದ್ರ ಸಹಸ್ರಾರು ತೆರೆ ತೋಳುಗಳನ್ನು ಚಾಚಿ ಸ್ವಾಗತಿಸುತ್ತಿತ್ತು. ಅದಕ್ಕೆ ಮರುಳಾಗದೆ, ಅಡ್ಡಕ್ಕೆ ಹಾಯುವ ಮೀನುಗಾರಿಕಾ ರಸ್ತೆಯಲ್ಲಿ ಎಡಕ್ಕೆ ಹೊರಳಿದೆ. ಅದರಲ್ಲಿ ಒಂದೆರಡು ಕಿಮೀ ಉದ್ದಕ್ಕೆ, ಕಡಲ ಕಿನಾರೆಗೆ ಹೆಚ್ಚು ಕಮ್ಮಿ ಸಮಾನಾಂತರದಲ್ಲಿ ದಕ್ಷಿಣ ತುದಿಯವರೆಗೂ ಹೋದೆ. ದಾರಿಯ ಎರಡೂ ಬದಿಗಳಲ್ಲಿ ಮಧ್ಯಮವರ್ಗದವರದ್ದೇ ಸಾಕಷ್ಟು ವಿಸ್ತಾರದ ಪೌಳಿ ಸಹಿತ ಅಂಗಳ, ಮನೆಗಳೇನೋ ಇದ್ದವು. ಆದರೆ ಕಡಲಿಗೆ ಬೆನ್ನು ಕೊಟ್ಟು ನಿಂತ ವಠಾರಗಳ `ಕನಸು’ಗಳು ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿರುವ ಕಡಲ ಕೊರೆತದಲ್ಲಿ ನಿರ್ಗತಿಕವಾಗುತ್ತಿರುವ ಸ್ಥಿತಿ ಮನಕಲಕಿತು. ಕಡಲ ಅಗಾಧತೆಗೆ ಸಾಮಾಜಿಕ ವಿಂಗಡಣೆಯ ಪೌಳಿಗೋಡೆಗಳಷ್ಟೇ ಕ್ಷುಲ್ಲಕ ತಡೆ ನಡುವಣ ದಾರಿ ಎಂಬ ಸ್ಪಷ್ಟ ಅರಿವಿನೊಡನೆ ಎಡಪಕ್ಕದ ಮನೆಗಳೂ ವಿಷಣ್ಣವಾಗಿದ್ದಂತೇ ತೋರಿದ್ದು ಸುಳ್ಳಲ್ಲ.

ಉಚ್ಚಿಲದ ಅದೇ ದಾರಿಯ ಎಡ ಸಾಲಿನಲ್ಲೇ ಹಿಂದೊಮ್ಮೆ ಇನ್ನೋರ್ವ ಹಿರಿಯ ಅಧ್ಯಾಪಕ, ಸಾಹಿತ್ಯ ಹಾಗೂ ಯಕ್ಷಪ್ರೇಮಿ ಕೇಶವ ಉಚ್ಚಿಲರ ಮನೆಯಿದ್ದದ್ದನ್ನು ಸದ್ಯ ಗುರುತಿಸಲಾರದೇ ಹೋದರೂ ನೆನಪಿಸಿಕೊಂಡೆ ಮುಂದುವರಿದೆ. ಸರಕಾರದ ಕಣ್ಕಟ್ಟಿನ ಪೂರೈಕೆಗೆ ಭಾರೀ ಬಂಡೆಗಳನ್ನು ಹೊತ್ತ ಲಾರಿಗಳು, ಮತ್ತವನ್ನು ಬಳಸಿ ಕೊರೆತದ ಎದುರು ದಂಡೆಗಟ್ಟುವ ಜೆಸಿಬಿಗಳ ದಾಂಧಲೆಯಲ್ಲಿ ದಾರಿ ಹೆಚ್ಚಿನೆಡೆಗಳಲ್ಲಿ ಕೆನ್ನೀರ ಕೊಳ, ಉಳಿದಂತೆ ಚಪ್ಪಾಚೂರು. ಬಲ ಪಕ್ಕದ ಕೆಲವು ಮನೆಗಳ ಹಿತ್ತಿಲು ನುಗ್ಗಿ, ಕೊರೆತದ ಪ್ರಮಾಣ ನೋಡಿದೆ. ಮತ್ತೆ ಒಂದೆಡೆಯಲ್ಲಿ ಲಾರಿ ಜೆಸಿಬಿಯ ಕಾಮಗಾರಿಯನ್ನೂ ಕಂಡೆ. ಕಿರಿದಂತರದಲ್ಲೇ ದಾರಿಗೊಂದು ದಕ್ಷಿಣ ಕೊನೆಗಾಣಿಸಿ ಆವರಿಸುತ್ತದೆ ಉಚ್ಚಿಲ ಹಾಗೂ ತಲಪಾಡಿ ಹೊಳೆಗಳ ಸಮುದ್ರ ಸಂಗಮದ ಹರಹು.

ಉಚ್ಚಿಲ ದಾರಿಯ ಕೊನೆಗೂ ತುಸು ಮೊದಲೇ ಎಡದ ಪುಟ್ಟ ಗುಡ್ಡೆ ಕೋಟೆಯೆಂದೇ ಪ್ರಸಿದ್ಧ. ಅದರ ನೆತ್ತಿಯಲ್ಲಿ ಸ್ಥಿತವಾದ ಪ್ರಾಚೀನ ವಿಷ್ಣು ದೇವಳ ಇಂದು ಆಧುನಿಕ ಜೀರ್ಣೋದ್ಧಾರ ಕಂಡು ಬೆರಗು ಹುಟ್ಟಿಸುತ್ತದೆ. ಕಲಾಗಂಗೋತ್ರಿ ಹಿಂದೊಮ್ಮೆ ಇಲ್ಲೊಂದು ಯಕ್ಷಕಮ್ಮಟವನ್ನು ಸಂಘಟಿಸಿತ್ತು. ಕಮ್ಮಟದಲ್ಲಿ ಭಾಗಿಯಾಗುವ ಉತ್ಸಾಹದಲ್ಲಿ ಹುಡುಕಿ ಹೋಗಿದ್ದ ನನಗೆ ಆ ಕ್ಷೇತ್ರ ಪ್ರಥಮ ದರ್ಶನದಲ್ಲೇ ಪ್ರೇಮಕ್ಕೂ `ಹಳೆಬೇರು ಹೊಸಚಿಗುರು’ ಕಲ್ಪನೆಗೂ ಇಂಬಾಗಿತ್ತು. ಚೊಕ್ಕ ಕಲ್ಲು ಹಾಸಿ, ಅರೆವಾಸಿ ಮಾಡು ಹೊತ್ತ ದೇವಳದ ಅಂಗಳ ಕ್ಷೇತ್ರದ ಗಾಂಭೀರ್ಯಕ್ಕೆ ಕೊರತೆ ತಾರದ ಎಲ್ಲ ಭಾವುಕರನ್ನೂ (ಯಕ್ಷಗಾನಾದಿ ಕಲೆ, ಕಡಲವೀಕ್ಷಣೆ ಇತ್ಯಾದಿ) ಮುಕ್ತವಾಗಿ ಸ್ವಾಗತಿಸುತ್ತದೆ. ತುಸು ಕೆಳ ಸ್ತರದಲ್ಲಿರುವ `ಅನ್ನಪೂರ್ಣ’ – ಭಕ್ತಾದಿಗಳ ತತ್ಕಾಲೀನ ಪೂರಕ ಸೌಕರ್ಯಕ್ಕೇ (ವನಭೋಜನ, ವಿಶ್ರಾಂತಿ ಇತ್ಯಾದಿ) ಮೀಸಲು. ಮೀನುಗಾರಿಕೆ ರಸ್ತೆಯಿಂದ ಕೋಟೆಯ ನೆತ್ತಿಯವೆರೆಗೆ ಚೊಕ್ಕ ಡಾಮರು ಕಂಡ, ಎರಡು ಹಿಮ್ಮುರಿ ತಿರುವಿನ ಸುಂದರ ಮಾರ್ಗ, ಪುಟ್ಟ ಉದ್ಯಾನವನ, ತೋಟ, ಕಾಡು ಮತ್ತು ಹೆಚ್ಚು ಕಡಿಮೆ ೨೭೦ ಡಿಗ್ರಿಯ ನೋಟಕ್ಕೂ ದಕ್ಕುವ ಕಡಲು ಗುಡ್ಡದ ಪಾದತೊಳೆಯುವ ಚಂದ ಅಕ್ಷರಗಳಿಗೆ ಮೀರಿದ್ದು.

ದೇವಳದ ಹಿತ್ತಿಲಿನ ಪೌಳಿಯನ್ನೇರಿ ಕ್ಯಾಮರಾವನ್ನೇ ಬಿಲ್ಲೆನ್ನುವಂತೆ ಎತ್ತಿ, ಕ್ಷೇತ್ರದ ಆರಾಧ್ಯ ದೈವ ವಿಷ್ಣು, ತನ್ನ ರಾಮಾವತಾರದಲ್ಲಿಟ್ಟ ಸವಾಲಿನಂತೆಯೇ ಸಮುದ್ರರಾಜನಿಗೆ ನಾನೂ ಸವಾಲೆಸೆದೆ. ಯುಗಧರ್ಮ ಗಣಿಸಿ ಆತ ನೆಲ ಬಿಟ್ಟುಗೊಡದಿದ್ದರೂ ಬುದ್ಧಿಯ ಕಿವಿ ತೆರೆದವರಿಗೆ ಅರ್ಥವಾಗುವಂತಿತ್ತು ಅವನ ಅಬ್ಬರದೊಳಗಿನ ಅಸಹಾಯಕತೆ. ಸಮುದ್ರದ ನೆಲನುಂಗುವ ಕಳ್ಳ ಹಸಿವಿನ ಹಿಂದೆ ನಾವೇ (ನವ-ನಾಗರಿಕತೆ) ಹೇರಿದ ಪಾರಿಸರಿಕ ಅನರ್ಥಗಳ ಭಾರ!

[ಮಳೆ ವಿರಳವಾಗಿರಬಹುದು, ಆದರೆ ಕೆಸರು ದಾರಿಯಲ್ಲಿ ಮೂಡಿಸಿದ ಚಕ್ರದ ಅಚ್ಚುಗಳ ಹಸಿ ಆರಿಲ್ಲ. ಸೈಕಲ್ ಸರ್ಕೀಟಿನ ಇನ್ನಷ್ಟು ಬಿಡಿ ಚಿತ್ರಗಳೊಡನೆ ನಿಮ್ಮನ್ನು ಮತ್ತೂ ಕಾಡುವಂತಾಗಲು ಮೌನ ಸಮ್ಮತಿ ಸಾಕಾಗುವುದಿಲ್ಲ. ದಯವಿಟ್ಟು ನಿಮ್ಮ ಮಳೆಗಾಲದ ರೋಚಕ ಸೈಕಲ್ ಸವಾರಿ ನೆನಪುಗಳನ್ನಾದರೂ ಕೆದಕಿ ತೆಗೆದು ಹುಚ್ಚರ ಸಂತತಿ ಸಾವಿರ ಎನ್ನುವುದನ್ನು ಶ್ರುತಪಡಿಸುವುದರೊಳಗೆ ಮುಂದಿನ ವಾರ ಬರುತ್ತೇನೆ. ಚಕ್ರೇಶ್ವರನ ಪರೀಕ್ಷೆಗಳ ದಿಗ್ವಿಜಯ ಮುಂದುವರಿಯಲಿದೆ]