ಅಧ್ಯಾಯ ಇಪ್ಪತ್ಮೂರು
[ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ತೈದನೇ ಕಂತು
ಮರುದಿನ ಬೆಳಗ್ಗೆ ನಾನು ಎದ್ದ ನಂತರವೂ ಹಿಂದಿನ ದಿನದ ಘಟನೆಗಳು ಮನಸ್ಸಿನಲ್ಲಿ ಎದ್ದು ಕಾಣುತ್ತಿದ್ದುವು. ಅದರಲ್ಲೂ ಮಾರ್ಥಳು ಹೋದನಂತರ ಎಮಿಲಿ ನಮ್ಮೊಡನೆ ಹೇಳಿಕೊಂಡು ಅತ್ತ ಕ್ರಮ, ಮತ್ತೂ ವಿಷಯಗಳು ನನ್ನ ಮನಸ್ಸಿನಲ್ಲಿ ವೇದನೆ ಕೊಡುತ್ತಾ ಕಾಣಿಸಿಕೊಳ್ಳುತ್ತಿದ್ದುವು. ಆ ಎಲ್ಲಾ ವಿಷಯಗಳೂ ನನಗೆ ಪ್ರಸಂಗವಶದಿಂದ ಮಾತ್ರ ಗೊತ್ತಾದುವೇ ಹೊರತು, ಇಲ್ಲದಿದ್ದರೆ ಅವೆಲ್ಲಾ ಗೋಪ್ಯವಾಗಿಯೇ ಉಳಿಯುತ್ತಿದ್ದುವು, ಮತ್ತು ಉಳಿಯತಕ್ಕವುಗಳೂ ಆಗಿದ್ದುವು. ಆದ್ದರಿಂದ ಆ ವಿಷಯಗಳನ್ನೆಲ್ಲ ನಾನೂ ಸಹ ಗೋಪ್ಯವಾಗಿಡುವುದು ನನ್ನ ಕರ್ತವ್ಯವೆಂದು ತಿಳಿದೆನು. ಪರಸಂಸಾರದ ಅಂತರಂಗದ ಭಾವನೆಗಳು, ದುಃಖಗಳು, ಲೋಪದೋಷಗಳು ಬಹು ಗಹನವಾದುವೂ ಮತ್ತು ಗೋಪ್ಯವಾಗಿರಬೇಕಾದುವೂ ಎಂದು ಗ್ರಹಿಸಿಯೇ ನಾನು ಈ ಯಾವ ವಿಷಯವನ್ನು ಸ್ಟೀಯರ್ಫೋರ್ತನಿಗೆ ಸಹ ತಿಳಿಸಲಿಲ್ಲ. ಹಿಂದಿನ ದಿನದ ಎಮಿಲಿಯನ್ನು ಕುರಿತಾದ ಅನುಭವ ಅವಳ ಮೇಲೆ ನನಗಿದ್ದ ಬಾಲ್ಯದ ಪ್ರೇಮವನ್ನು ಮತ್ತಷ್ಟು ಹೆಚ್ಚಿಸಿತು. ಆದ್ದರಿಂದಲೇ ಅವಳನ್ನು ಕುರಿತಾದ ವಿಶಿಷ್ಟ ವಿಷಯಗಳೂ ನನಗೆ ಬಹು ಪೂಜ್ಯವಾಗಿ ತೋರಿದುವು. ಪೂಜ್ಯತೆಯಿಂದಲೇ ಅವನ್ನು ನಾನು ಗೋಪ್ಯವಾಗಿಟ್ಟುಕೊಂಡೆನು.
ಈ ಸಮಯದಲ್ಲೇ ನನಗೆ ಅತ್ತೆಯಿಂದ ಒಂದು ಪತ್ರ ಬಂತು. ನಾನು ನನ್ನ ಜೀವನವೃತ್ತಿಯಾಗಿ ಯಾವುದಾದರೊಂದು ಉತ್ತಮ ವೃತ್ತಿಯನ್ನು ಅವಲಂಬಿಸಬೇಕಾದ ಕಾಲ ಬಂದಿದೆಯೆಂದೂ ಮಿ. ಡಿಕ್ಕರು ಸಹ ಅದೇ ಅಭಿಪ್ರಾಯದಲ್ಲಿರುವರೆಂದೂ ಪತ್ರದಲ್ಲಿ ಬರೆದಿದ್ದಳು. ನಾವು ಆ ಕೂಡಲೇ ಯಾರ್ಮತ್ತಿನಿಂದ ಹೊರಟೆವು.
ನಮ್ಮನ್ನು ಕಳುಹಿಸಿಕೊಡಲು ತುಂಬಾ ಜನರು ನೆರೆದಿದ್ದರು. ನಾವು ಬಂಡಿಯನ್ನೇರಿ, ಬಂಡಿ ಮುಂದುವರಿಯುವಾಗ ಲಿಟ್ಮರನು ಬಹು ಗಂಭೀರವಾಗಿ ನಮಗೆ ನಮಸ್ಕರಿಸುತ್ತ ರಸ್ತೆ ಬದಿಯಲ್ಲಿ ನಿಂತಿದ್ದನು. ಸ್ಟೀಯರ್ಫೋರ್ತನ ಬಾಕಿಯಿದ್ದ ಕೆಲವು ಕೆಲಸಗಳನ್ನು ಪೂರೈಸಿ ಲಿಟ್ಮರನು ಹಿಂತಿರುಗುವುದಾಗಿ ಸ್ಟೀಯರ್ಫೋರ್ತನು ಹೇಳಿದನು.
ನಾವು ಲಂಡನ್ನಿಗೆ ತಲಪಿದ ಕೂಡಲೇ ಸ್ಟೀಯರ್ಫೋರ್ತನು ಅವನ ಕೆಲಸಗಳಿಗಾಗಿ ಬೇರೆ ಕಡೆಗೆ ಹೋದನು. ನಾನು ಅತ್ತೆ ತಿಳಿಸಿದ್ದ ಸ್ಥಳಕ್ಕೆ ಹೋದೆನು. ನಮ್ಮ ತತ್ಕಾಲದ ವಸತಿಗಾಗಿ ಅತ್ತೆ ಲಂಡನ್ನಿನಲ್ಲಿ ಒಂದು ಮನೆಯನ್ನೇ ಬಾಡಿಗೆಗೆ ತೆಗೆದುಕೊಂಡಿದ್ದಳು. ಅತ್ತೆಗೆ ಕತ್ತೆಗಳ ಭಯವಿದ್ದಂತೆಯೇ ಬೆಂಕಿಯ ಭಯವೂ ತುಂಬಾ ಇದ್ದುದರಿಂದ, ಈ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯನ್ನು ಬಹುವಾಗಿ ಹುಡುಕಿ ನೋಡಿಯೇ ತೆಗೆದುಕೊಂಡಿದ್ದಳು. ಹಿಂದೆ ಲಂಡನ್ ನಗರಕ್ಕೆ ಬೆಂಕಿ ಬಿದ್ದಿದ್ದ ಚರಿತ್ರೆಯೇ ಅವಳ ಇಂದಿನ ಭೀತಿಗೆ ಕಾರಣವಾಗಿತ್ತು. ಡೋವರಿನ ಮನೆಯನ್ನು ಕತ್ತೆಗಳಿಂದ ರಕ್ಷಿಸುವುದಕ್ಕಾಗಿ ಅತ್ತೆ ಮಿ. ಡಿಕ್ಕರನ್ನು ಡೋವರಿನಲ್ಲೇ ಬಿಟ್ಟು, ಈ ಮನೆಗೆ ಜೇನೆಟ್ಟಳನ್ನು ಮಾತ್ರ ಕರೆದುಕೊಂಡು ಬಂದಿದ್ದಳು. ನಾವು ಈ ಲಂಡನ್ ಮನೆಯಲ್ಲಿ ಕೆಲವು ದಿನಗಳ ಕಾಲ ವಾಸಮಾಡಿಕೊಂಡಿರಬೇಕಾಗಿ ಬಂತು. ಆದರೂ ಅವಳಿಗೆ ಡೋವರಿನ ಕತ್ತೆಯ ಭಯವೂ ಲಂಡನ್ನಿನ ತರಕಾರಿ, ಹಾಲು, ಬೆಣ್ಣೆ, ಮಾಂಸಗಳನ್ನು ಕುರಿತಾದ ಜಿಗುಪ್ಸೆಯೂ ಸ್ವಲ್ಪ ಮಟ್ಟಿಗೆ ಬಾಧಿಸುತ್ತಿದ್ದುವು. ಮಿ. ಡಿಕ್ಕರು ಕತ್ತೆಗಳನ್ನು ಓಡಿಸುವಷ್ಟು ಶಕ್ತರಲ್ಲವೆಂಬುದೇ ಡೋವರಿನ ಮನೆಯ ಕುರಿತಾದ ಭಯ. ಮತ್ತೆ ಲಂಡನ್ ನಗರದ ತರಕಾರಿ, ಹಾಲು ಬೆಣ್ಣೆಗಳೆಲ್ಲ ಹಳ್ಳಿಗಳಲ್ಲಿ ಬೆಳೆಯುವ – ತಯಾರಿಸುವ – ಮಾಲುಗಳಷ್ಟು ರುಚಿಕರವೂ ಹಿತಕರವೂ ಅಲ್ಲವೆಂಬ ಅತ್ತೆಯ ಸಿದ್ಧಾಂತವೇ ಲಂಡನ್ ನಗರದ ಜೀವನದಲ್ಲಿನ ಜಿಗುಪ್ಸೆಯಾಗಿತ್ತು. ನನ್ನ ಜೀವನವೃತ್ತಿ ಯಾವುದಾಗಬಹುದು – ಆಗಬೇಕು – ಎಂಬುದನ್ನೆಲ್ಲ ನಾವು ದಿನದಿನ ವಿಚಾರಿಸಿ, ಆಲೋಚಿಸಿ, ಕೊನೆಗೆ ನಾನು ಒಬ್ಬ `ಪ್ರೋಕ್ಟರ್’ ಆಗುವುದು ಉತ್ತಮವೆಂದು ನಿರ್ಧರಿಸಿದೆವು. ಪ್ರೋಕ್ಟರ್ ಅಂದರೆ ವಕೀಲ ವೃತ್ತಿಯೇ ಆಗಿದ್ದರೂ ವಕೀಲರು – ಎಡ್ವೊಕೇಟರು – ಎಂದನ್ನಿಸಿಕೊಳ್ಳುವ ವೃತ್ತಿಗಿಂತ ಸ್ವಲ್ಪ ಕೆಳಮಟ್ಟದ್ದೆಂದು ತಿಳಿದೆವು. ಈ ವೃತ್ತಿಯಲ್ಲಿ ವಕೀಲರ ಇತರ ಎಲ್ಲಾ ಕೆಲಸಗಳಿದ್ದರೂ ಜಡ್ಜರ ಎದುರು ವಾದಿಸುವ ಅಧಿಕಾರ ಈ ವೃತ್ತಿಯವರಿಗಿರಲಿಲ್ಲ. ಕೊನೆಗೆ ಒಂದು ದಿನ ಈ ಪ್ರೋಕ್ಟರ್ ವೃತ್ತಿಗೆ ಸೇರುವುದು ಎಂದೂ ಆ ಬಗ್ಗೆ ಅತ್ತೆಯೂ ನಾನೂ ಹೋಗುವುದೆಂದೂ ನಿಶ್ಚೈಸಲಾಯಿತು. ಪ್ರೋಕ್ಟರನಾಗಿ ತರಬೇತಿ ಹೊಂದಲು ನಾನು – ನನಗೆ ತರಬೇತಿ ಕೊಡುವ ವಕೀಲರಿಗೆ – ಒಂದು ಸಾವಿರ ಪವನು ಫೀಸು ಕೊಡಬೇಕೆಂಬ ವಿಷಯ ನನಗೆ ಕೆಲವು ಆಲೋಚನೆಗಳನ್ನೆಬ್ಬಿಸಿದುವು. ಅಷ್ಟೊಂದು ಹಣವನ್ನು ನಾನು ಅತ್ತೆಯಿಂದ ಖರ್ಚು ಮಾಡಿಸುವುದು ನ್ಯಾಯವೇ. ಅತ್ತೆಗೆ ಅದು ಸಾಧ್ಯವೇ, ಎಂದು ಹೆದರತೊಡಗಿದೆ. ಹೀಗಾಗಿ, ನಾನೂ ಒಂದು ದಿನ ರಾತ್ರಿ ಅತ್ತೆಯೊಡನೆ ಈ ರೀತಿಯಾಗಿ ಹೇಳಿಕೊಂಡೆನು –
“ಅತ್ತೆ, ನೀನು ನನ್ನ ತಂದೆತಾಯಿಯರ ಸ್ಥಾನದಲ್ಲಿದ್ದು, ಅವರಿಂದಲೂ ಅಸಾಧ್ಯವಾಗಿರಬಹುದಾದ ಉತ್ತಮ ರೀತಿಯಲ್ಲಿ ಸಾಕಿ, ವಿದ್ಯಾದಾನ ಮಾಡಿ, ನನ್ನನ್ನು ಇಂದಿನ ಉತ್ತಮ ಸ್ಥಿತಿಗೆ ತಂದಿರುವೆ. ನಿನ್ನ ಸಹಾಯ, ರಕ್ಷಣೆಗಳಿಲ್ಲದಿದ್ದಿದ್ದರೆ ನಾನೊಬ್ಬ ಅನಾಮಧೇಯ ಕೂಲಿ ಕಸಬಿನವನಾಗಿ ಬದುಕಿರುತ್ತಿದ್ದೆ. ಈವರೆಗಿನ ನನ್ನ ಸಾಕುವಿಕೆಯ ಬಗ್ಗೆ ನಿನಗೆ ತುಂಬಾ ಹಣ ಖರ್ಚಾಗಿರಬೇಕೆಂಬುದು ನಿಸ್ಸಂಶಯ. ಈ ಖರ್ಚಿನ ಜತೆಗೆ ಮುಂದೆ ಈ ಪ್ರೋಕ್ಟರ್ ಕೆಲಸದ ಬಗ್ಗೆ ನಿನ್ನಿಂದ ಪುನಃ ಇಷ್ಟೊಂದು ಹಣ ಖರ್ಚು ಮಾಡಿಸುವುದು ಅನ್ಯಾಯವೆಂದು ನನಗೆ ತೋರುತ್ತದೆ. ಈವರೆಗಿನ ನಿನ್ನ ಸಹಸ್ರಾರು ಉಪಕಾರಗಳನ್ನೆಲ್ಲ ಒಪ್ಪಿ, ಅವುಗಳನ್ನು ಕುರಿತು ತುಂಬಾ ಕೃತಜ್ಞನಾಗಿರುತ್ತಾ ಇನ್ನು ಮುಂದೆ ಸ್ವಸಾಮರ್ಥ್ಯದಿಂದಲೇ ಜೀವನ ನಡೆಸಬೇಕೆಂದಿದ್ದೇನೆ. ಆದರೆ, ನಾನು ಯಾವ ವೃತ್ತಿಯನ್ನು ಅವಲಂಬಿಸುವುದಿದ್ದರೂ ನಿನ್ನ ಒಪ್ಪಿಗೆ ಬೇಕು. ನಿನ್ನ ಮನಸ್ಸಿಗೆ ಅದರಿಂದ ಸಂತೋಷವಾಗಬೇಕು. ನಿನ್ನ ಅಭಿಪ್ರಾಯವೇನೆಂದು ದಯಮಾಡಿ ತಿಳಿಸಬೇಕು.”
ಅತ್ತೆ ಈ ಮಾತುಗಳನ್ನು ಸಾವಧಾನದಿಂದ ಕೇಳಿದಳು. ಅನಂತರ ತುಂಬಾ ಪ್ರೀತಿಯ ಭಾವನೆಗಳನ್ನು ಮುಖದಲ್ಲೂ ಸ್ವರದಲ್ಲೂ ತೋರಿಸುತ್ತಾ –
“ನೀನು ಏನೇನೋ ಗ್ರಹಿಸುತ್ತಿರುವಂತೆ ತೋರುತ್ತದೆ. ನಿನ್ನ ಹೊರತು ನನಗೆ ಬೇರೆ ಬಂಧುಗಳಿಲ್ಲವೆಂಬುದನ್ನು ನೀನು ಮರೆತಿರುವಂತೆ ತೋರುತ್ತದೆ. ನನ್ನ ಜೀವನ ವೃತ್ತಿಯೇ ನಿನ್ನ ಜೀವನವನ್ನು ಸುಖಮಯವಾಗಿ ಮಾಡುವುದೇ ಆಗಿರುವಾಗ, ನಿನ್ನ ಸುಖವು ದೊರಕಿದಾಗಲೇ ನನ್ನ ಸುಖವು ಪೂರ್ಣವಾಯಿತೆಂದು ನಾನು ತಿಳಿಯುತ್ತೇನೆ. ನಿನ್ನ ತಂಗಿ ಬೆಟ್ಸಿಯು ನನಗೆ ಮೋಸ ಕೊಟ್ಟು ಅವಳ ಸ್ಥಾನದಲ್ಲಿ ನೀನು ಎಂದು ಡೋವರಿಗೆ ಬಂದು ನನ್ನನ್ನು ಆಶ್ರಯಿಸಿದೆಯೋ ನಾನು ನಿನ್ನನ್ನು ಸಾಕುವೆನೆಂದು ಮಾತು ಕೊಟ್ಟೆನೋ ಅಂದಿನಿಂದ ನನ್ನ ಜೀವನದಲ್ಲಿ ಸ್ಥಿರವಾದ ಆನಂದಮಯ ಜ್ಯೋತಿಯೇ ಬೆಳಗುತ್ತಿರುವಂತೆ ನನಗೆ ಭಾಸವಾಗುತ್ತದೆ. ಮಗೂ ಚಿಂತಿಸಬೇಡ – ನಿನ್ನ ವಿದ್ಯಾ ವ್ಯಾಸಂಗಕ್ಕೋ ವೃತ್ತಿ ಶಿಕ್ಷಣಕ್ಕೋ ಬೇಕಾಗುವಷ್ಟು ಹಣ ನನ್ನಲ್ಲಿದೆ. ನಿನ್ನ ಜೀವನವು ಉತ್ತಮ ಸ್ಥಿತಿಯಲ್ಲಿ ಸಾಗಿ, ನೀನು ಸಮಾಜದ ಉತ್ತಮ ವರ್ಗದಲ್ಲಿ ಒಬ್ಬ ಗಣನೀಯನಾಗಬೇಕೆಂದು ನಾನು ಈ ಪ್ರಯತ್ನದಲ್ಲಿ ತೊಡಗಿರುವೆನು” ಎಂದು ಆನಂದಾಶ್ರುಗಳನ್ನು ಸುರಿಸುತ್ತಾ ನನ್ನ ಎರಡೂ ಹಸ್ತಗಳನ್ನು ತನ್ನ ಹಸ್ತದಲ್ಲಿಟ್ಟುಕೊಂಡು, ಪ್ರೀತಿಯಿಂದ ಒತ್ತುತ್ತಾ ನನ್ನ ಮನಸ್ಸಿಗೆ ಅಂಟುವಂತೆ ಹೇಳಿದಳು.
ಮರುದಿನ ಅತ್ತೆಯೂ ನಾನೂ ವಕೀಲರ ಸಂಘಕ್ಕೆ ಹೋದೆವು. ನಮ್ಮ ಆ ದಿನದ ತಿರುಗಾಟದ ಒಂದು ಪ್ರಸಂಗವನ್ನು ಇಲ್ಲಿ ಹೇಳಬೇಕಾಗಿದೆ. ಲಂಡನ್ ನಗರದಲ್ಲಿ ಅತ್ತೆಗೆ ಬೆಂಕಿಯ ಭಯವಿದ್ದಂತೆಯೇ ಕಳ್ಳರ ಭಯವೂ ಇತ್ತು. ಇದಕ್ಕಾಗಿ ಅವಳ ಹತ್ತಿರವಿದ್ದ ಹಣದ ಚೀಲವನ್ನು ನನ್ನ ವಶಕ್ಕೆ ಒಪ್ಪಿಸಿದಳು. ಅದರಲ್ಲಿ ಸ್ವಲ್ಪ ಚಿಲ್ಲರೆ ನಾಣ್ಯಗಳೂ ಇಪ್ಪತ್ತೊಂದು ಪವನೂ ಇದ್ದುವು. ನಾವಿಬ್ಬರೂ ವಕೀಲರ ಸಂಘದ ಕಡೆಗೆ ನಡೆದು ಹೋಗುತ್ತಿದ್ದಾಗ, ಇದ್ದಕ್ಕಿದ್ದ ಹಾಗೆಯೇ ಆತ್ತೆಯ ಮುಖವು ವಿವರ್ಣವಾಯಿತು. ಅವಳ ಗಾಬರಿಗೆ ಕಾರಣವೇನಿರಬೇಕೆಂದು ನಾನು ಅತ್ತಿತ್ತ ನೋಡುವಾಗ ನಮ್ಮ ಹಿಂದುಗಡೆಯೇ ದೃಢಕಾಯನಾಗಿದ್ದ ಭಿಕ್ಷುಕನೊಬ್ಬನು ಬರುತ್ತಿದ್ದುದನ್ನು ಕಂಡೆನು. ಈ ಭಿಕ್ಷುಕನನ್ನು ಕಂಡು ಅತ್ತೆ ಗಾಬರಿಗೊಂಡದ್ದಿರಬಹುದೆ” ಎಂದು ನಾನು ಯೋಚಿಸಿ, ಅವನನ್ನು ಗದರಿಸಬೇಕೆನ್ನುವಷ್ಟರಲ್ಲೇ ಅತ್ತೆ –
“ಡೇವಿಡ್, ಒಂದು ಜಟ್ಕಾ ತೆಗೆದುಕೊಂಡು ಬಾ – ಕೂಡಲೇ ಬಾ – ನಾನು ಅವನ ಜತೆಯಲ್ಲಿ ಹೋಗಬೇಕು” ಎಂದಂದಳು. ಅತ್ತೆಯ ಕ್ರಮ ನಿಯಮಗಳನ್ನೆಲ್ಲ ನಾನು ಅರಿತಿದ್ದುದರಿಂದ, ಮುಂದೇನೂ ಮಾತಾಡದೆ ಜಟ್ಕವನ್ನು ತರಲು ಹೋದೆನು. ನಾನು ಜಟ್ಕವನ್ನು ತರಲು ಹೊರಟಾಗಲೇ ಅತ್ತೆ ಹಣದ ಚೀಲವನ್ನು ನನ್ನಿಂದ ತೆಗೆದುಕೊಂಡಳು. ನಾನು ಜಟ್ಕವನ್ನು ತಂದ ಕೂಡಲೆ – ನಾನು ಅರ್ಧ ಘಂಟೆಯ ನಂತರ ವಕೀಲರ ಸಂಘದ ಎದುರುಗಡೆ ಸಿಕ್ಕಬೇಕೆಂದು ಅತ್ತೆ ನನಗೆ ತಿಳಿಸಿ – ಅವರಿಬ್ಬರೂ ಜಟ್ಕದಲ್ಲಿ ಕುಳಿತು ಓಡಿದರು.
ನಾನು, ಗಾಬರಿಯಿಂದಲೂ ಆಶ್ಚರ್ಯದಿಂದಲೂ ಕೌತುಕದಿಂದಲೂ ವಕೀಲರ ಸಂಘದ ಕಡೆಗೆ ನಡೆದೆನು. ಒಬ್ಬ ಹುಚ್ಚ ಅತ್ತೆಯನ್ನು ಹೆದರಿಸಿದನೆಂದು ಹಿಂದೆ ನಾನು ಮಿ. ಡಿಕ್ಕರು ಹೇಳಿದ್ದ ಸಂಗತಿಗೂ ಇಂದಿನ ಪ್ರಸಂಗಕ್ಕೂ ಏನಾದರೂ ಸಂಬಂಧವಿರಬಹುದೇ ಎಂಬ ಕೌತುಕವೂ ನನ್ನಲ್ಲುಂಟಾಯಿತು.
ನನ್ನತ್ತೆಯಂಥ ಧೈರ್ಯಸ್ಥೆ, ದೃಢಮನಸ್ಸಿನವಳನ್ನು ಹೆದರಿಸಿದ್ದ ಈ ಭಿಕ್ಷುಕ ಯಾರಿರಬಹುದೆಂದು ನಾನು ತಿಳಿಯಲಾರದೆ ಹೋದೆನು. ಅರ್ಧ ಘಂಟೆಯನಂತರ ಅತ್ತೆ ಬಂದು ನನ್ನ ಜತೆ ಸೇರಿದಳು. ಆಗಲೂ ಅತ್ತೆ ಪೂರ್ಣ ಶಾಂತವಾದಂತೆ ತೋರಲಿಲ್ಲ. ಅವಳು ಶಾಂತವಾಗುತ್ತ ಹೋದ ಹಾಗೆ ಅವಳ ಕೈಯ್ಯಲ್ಲಿದ್ದ ಹಣದ ಚೀಲವನ್ನು ಪುನಃ ನನ್ನ ವಶಕ್ಕೆ ಕೊಟ್ಟಳು. ಆಗ ಆ ಚೀಲದಲ್ಲಿ ಚಿಲ್ಲರೆ ನಾಣ್ಯಗಳು ಮಾತ್ರವಿದ್ದುವೇ ಹೊರತು ಪವನುಗಳು ಇರಲಿಲ್ಲ.
ಅನಂತರ ನಾವು `ಸ್ಪೆನ್ಲೋ ಮತ್ತೂ ಜಾರ್ಕಿನ್ಸ್’ ಎಂಬ ಇಬ್ಬರು ವಕೀಲರ ಜತೆ ಕೂಟದ ಆಫೀಸಿಗೆ ಹೋದೆವು. ಆ ಕೂಟ ಒಂದು ಸಾವಿರ ಪವನು ಫೀಸನ್ನು ಪಡೆದುಕೊಂಡು ನನಗೆ ಪ್ರೋಕ್ಟರ್ ಕೆಲಸದಲ್ಲಿ ತರಬೇತಿ ಕೊಡಲು ಒಪ್ಪಿತ್ತು. ಆ ಕೂಟದ ಮುಖ್ಯ ಪಾಲುಗಾರರ ಆಫೀಸಿಗೆ ನಾವು ಹೋಗಿ ಕುಳಿತೆವು. ಮಿ. ಸ್ಪೆನ್ಲೋರವರು ಬಹು ವಿನಯ ಸಂಪನ್ನರು. ತುಂಬಾ ಹಿಟ್ಟು ಬೆರೆಸಿ ಇಸ್ತ್ರಿ ಮಾಡಿದ್ದ ಕರಿಕೋಟನ್ನೂ ಅದಕ್ಕೆ ತಕ್ಕದಾದ ಕಪ್ಪು ಶರಾಯಿಯನ್ನೂ ಧರಿಸಿ, ತಮ್ಮ ಕುರ್ಚಿಯಲ್ಲಿ ನೆಟ್ಟಗೆ ಕುಳಿತು ಮಾತಾಡಿದರು. ಅವರು ಅತ್ತೆಯೊಡನೆ ಮೊದಲೇ ಮಾತಾಡಿದ್ದುದರಿಂದ, ನನ್ನನ್ನು ನೋಡಿ –
“ನಿಮ್ಮನ್ನು ಇಲ್ಲಿ ಸೇರಿಸುವುದನ್ನು ಕುರಿತು ಮಿಸ್ ಟ್ರಾಟೂಡರವರು ಈ ಮೊದಲೇ ನನ್ನೊಡನೆ ಎಲ್ಲಾ ವಿವರಗಳನ್ನೂ ವಿಚಾರಿಸಿಕೊಂಡಿರುವರು. ಆದರೂ ಪ್ರೋಕ್ಟರ್ ಆಗಲಿರುವ ನಿಮ್ಮ ಅಭಿಪ್ರಾಯವನ್ನು ನಾನು ವಿಚಾರಿಸುವುದು ಅಗತ್ಯ. ನಿಮ್ಮದೇನಾದರೂ ಅಭಿಪ್ರಾಯವಿದ್ದರೆ ತಿಳಿಸಿ” ಅಂದರು.
“ಸರ್, ಈ ವೃತ್ತಿಯಲ್ಲಿ ನನಗೆ ಮನಸ್ಸಿದೆ. ಆದರೆ ಮುಂಗಡವಾಗಿ ಕೊಡಬೇಕಾದ ಹಣವನ್ನು ಸ್ವಲ್ಪವಾದರೂ ಕಡಿಮೆ ಮಾಡಲು ಅನುಕೂಲವಿದೆಯೇ? ಮತ್ತೂ ಕೆಲವು ದಿನಗಳಾದರೂ ಪರೀಕ್ಷಾರ್ಥವಾಗಿ ನಾನಿಲ್ಲಿ ಅಭ್ಯಾಸ ಮಾಡಿ ನೋಡಿ, ನನಗೆ ಒಪ್ಪಿಗೆಯಾದರೆ ಮಾತ್ರ ಪೂರ್ಣ ಫೀಯನ್ನು ಕೊಟ್ಟು ಬರಬಹುದೇ ಎಂಬ ವಿಷಯದಲ್ಲಿ ತಮ್ಮ ಕಂಪೆನಿಯ ಅಭಿಪ್ರಾಯವನ್ನು ತಿಳಿಸಿದರೆ ಆಗಬಹುದು” ಅಂದೆನು ನಾನು.
ಅದಕ್ಕೆ ಮಿ. ಸ್ಪೆನ್ಲೋರವರು –
“ನಿಮ್ಮ ಪ್ರಶ್ನೆಯು ಬಹು ನ್ಯಾಯವಾದುದು. ನಾವು ಅಗತ್ಯವಾಗಿ ಗ್ರಹಿಸಬೇಕಾದುದು. ಸಾವಿರ ಪವನೆಂದರೆ ಅಲ್ಪದ ಮೊಬಲಗಲ್ಲ. ನಮ್ಮ ಸ್ನೇಹಿತರ ಹಿತವನ್ನು ಸಹ ನಾವು ಗಮನಿಸಿದರೇನೇ ನಮ್ಮ ವೃತ್ತಿಯು ಸಾಗುವುದು. ಸರಿ, ನೀವಂದಂತೆಯೇ ಪರೀಕ್ಷಾರ್ಥ ಕಾಲವಾಗಿ ನೀವು ಒಂದು ತಿಂಗಳನ್ನು ಉಪಯೋಗಿಸಿಕೊಳ್ಳಬಹುದು. ಅನಂತರವೇ ನಮ್ಮ ಎಗ್ರಿಮೆಂಟನ್ನು ರಿಜಿಸ್ಟ್ರಿ ಮಾಡಿಕೊಳ್ಳೋಣ. ಇನ್ನು ಸಾವಿರ ಪವನಿಗಿಂತ ಕಡಿಮೆ ಫೀಸು ಮಾಡುವ ವಿಷಯದಲ್ಲಿ ಎರಡು ಮಾತುಗಳನ್ನು ಹೇಳಬೇಕಾಗಿದೆ. ನಿಮ್ಮ ಕೈಯಿಂದ ಒಂದು ಸಾವಿರ ಪವನು ಹೋಗುವುದು ನಿಜವಾದರೂ ನಮ್ಮ ಕೈಗೆ ಅಷ್ಟೆಲ್ಲ ಹಣ ಪೂರ್ತಿಯಾಗಿ ಬರುವುದಿಲ್ಲ. ಅದರಿಂದಲೇ ಸ್ಟಾಂಪ್ ಡ್ಯೂಟಿ, ರಿಜಿಸ್ಟ್ರೇಷನ್ ಫೀ ಮೊದಲಾದದ್ದು ಸಲ್ಲಬೇಕಷ್ಟೆ. ಇದು ಅಲ್ಲದೆ – ಇದಕ್ಕಿಂತಲೂ ಹೆಚ್ಚಾಗಿ – ನಮ್ಮಲ್ಲಿಗೆ ಬರುವವರ ವ್ಯವಹಾರ ಜ್ಞಾನವಿರುವ ನಾನೊಬ್ಬನೇ ಈ ಕಂಪೆನಿಯ ಪಾಲುಗಾರನಲ್ಲವೆಂಬುದನು ನಿಮಗೆ ತಿಳಿಸಬೇಕಾಗಿದೆ. ಜತೆ ಕೂಟಗಳಲ್ಲಿ ಕೂಟದವರ ಅಭಿಪ್ರಾಯದಂತೆ ನಡೆಯದಿದ್ದರೆ, ಕೂಟಗಳೇ ಉಳಿಯಲಾರವಷ್ಟೆ. ಮಿ. ಜಾರ್ಕಿನ್ಸರು ನಮ್ಮ ಕೂಟದ ಇನ್ನೊಬ್ಬ ಪಾಲುಗಾರರು – ಸ್ವಲ್ಪ ಖಂಡ ತುಂಡವಾಗಿ ವರ್ತಿಸುವವರು. ನಾನು ಹೇಳಿರುವ ಫೀಸಿಗಿಂತ ಸ್ವಲ್ಪ ಹೆಚ್ಚನ್ನೇ ಫೀಸಾಗಿ ವಸೂಲ್ಮಾಡಬೇಕೆಂದು ಹೃತ್ಪೂರ್ವಕವಾಗಿ ಹೇಳಲು ಹೆದರುವವರಲ್ಲ. ನಿಮಗೆ ಯುಕ್ತ ಕಂಡರೆ ಅವರನ್ನೂ ಬೇಕಾದರೆ ವಿಚಾರಿಸೋಣ” ಅಂದರು.
ಇಷ್ಟೊಂದು ವಿನಯಸಂಪನ್ನರೂ ತಮ್ಮ ಸ್ನೇಹಿತರ ಹಿತರಕ್ಷಕರೂ ಆಗಿರುವ ಮಿ. ಸ್ಪೆನ್ಲೋರವರನ್ನು ಮೀರಿ, ಖಂಡ ತುಂಡವಾಗಿ ನಿರ್ದಾಕ್ಷಿಣ್ಯದಿಂದ ವರ್ತಿಸುವ ಮಿ. ಜಾರ್ಕಿನ್ಸರನ್ನು ಕಾಣುವ ಅಗತ್ಯವಿಲ್ಲವೆಂದು ನಾನು ಆ ದಿನವೇ ಅವರ ಕೈಕೆಳಗಿನ ತರಬೇತಿಯ ಬಗ್ಗೆ ಆ ಜತೆಕೂಟದಲ್ಲಿ ದಾಕ್ಲು ಆದೆನು.
ಆದರೆ ನಾನು ಈ ಜತೆಕೂಟವನ್ನು ಸೇರಿ, ಅವರ ಪೈಕಿಯವನೇ ಒಬ್ಬನಾಗಿ ಪಾಠಗಳನ್ನು ಅಭ್ಯಾಸ ಮಾಡುವಾಗ ಉಗ್ರಸ್ವಭಾವದವರೆಂದು ಗ್ರಹಿಸಲ್ಪಡುತ್ತಿದ್ದ ಮಿ. ಜಾರ್ಕಿನ್ಸರ ಪರಿಚಯವು ನನಗೆ ಆಗುತ್ತಾ ಬಂತು. ಮಿ. ಜಾರ್ಕಿನ್ಸರಿಗೆ ಮಾತಾಡಲೂ ಸಾಕಷ್ಟು ಬರುತ್ತಿರಲಿಲ್ಲ – ಅವರು ಬರೇ ಹೆಡ್ಡರಾಗಿದ್ದರು. ಬಾಹ್ಯದಿಂದ ಕಠೋರವಾಗಿ ಕಾಣುತ್ತಿದ್ದ ವ್ಯಕ್ತಿಯನ್ನು ತೋರಿಸಿ, ಅವರನ್ನು ಕುರಿತಾಗಿ ಅಗತ್ಯಬಿದ್ದಂತೆ ವರ್ತಮಾನಗಳನ್ನು ನಿರ್ಮಿಸಿ, ಪ್ರಕಟಿಸಿ, ತಮ್ಮ ಜತೆಕೂಟದ ಹಣ ಸಂಪಾದನೆಯ ಅತಿಯಾದ ಲಾಲಸೆಯನ್ನು ತೃಪ್ತಿಗೊಳಿಸಿಕೊಂಡು ಹಣ ಸಂಗ್ರಹಿಸುತ್ತಿದ್ದುದು ಬಾಹ್ಯದಲ್ಲಿ ಬಹು ನಯವಿನಯವಂತರಾಗಿದ್ದ ಮಿ. ಸ್ಪೆನ್ಲೋರವರಾಗಿದ್ದರು. ನಮ್ಮ ನಗರದ ಅನೇಕ ಕೂಟ ಸಂಸ್ಥೆಗಳಲ್ಲೆಲ್ಲ ಈ ವಿಧದ ದ್ವಿಮುಖ ವ್ಯವಸ್ಥೆಯಿದೆಯೆಂದು ಕ್ರಮೇಣವಾಗಿ ನಾನು ತಿಳಿದುಕೊಂಡೆನು. ಇಲ್ಲಿ ಮಿ. ಸ್ಪೆನ್ಲೋರವರ ಬಹು ವಿನಯ, ಗಾಂಭೀರ್ಯ, ಠೀವಿ, ವಾಕ್ಚಾತುರ್ಯಗಳಿಂದ ಜನರನ್ನೂ ಹಣವನ್ನೂ ಆಕರ್ಷಿಸಿ, ತಮ್ಮ ಸಂಸ್ಥೆಯನ್ನು ಅಭಿವೃದ್ಧಿಗೊಳಿಸುತ್ತಿದ್ದರು.
ಅಲ್ಲಿನ ಕೋರ್ಟುಗಳನ್ನೆಲ್ಲಾ ಮೊದಲ ಬಾರಿಗೆ ಕರೆದುಕೊಂಡು ಹೋಗಿ ತೋರಿಸಿದವರೂ ಮಿ. ಸ್ಪೆನ್ಲೋರವರೇ. ಕಪ್ಪು ಬಣ್ಣದ ದೊಡ್ಡ ದೊಡ್ಡ ಕೋಟುಗಳನ್ನು ಧರಿಸಿದ್ದ ವಕೀಲರುಗಳಿಂದಲೂ ಈ ಅದೇ ಬಣ್ಣದ ಅದೇ ಮಾದರಿಯ ಉಡಿಗೆಯಿದ್ದು ಎತ್ತರದಲ್ಲಿ ಬಹು ಭೂಷಣಪ್ರಾಯವಾದ ಆಸನಗಳಲ್ಲಿ ಕುಳಿತಿರುತ್ತಿದ್ದ ಜಡ್ಜರುಗಳಿಂದಲೂ ನಾನಾ ಪ್ರಾಯ, ಸ್ವರೂಪ, ಅವಸ್ಥೆಗಳಲ್ಲಿದ್ದ ಕಕ್ಷಿಕಾರರಿಂದಲೂ ಪೇದೆ, ಪೋಲೀಸ್, ನೌಕರರ ಸಮೂಹಗಳಿಂದಲೂ ಕೋರ್ಟೂ, ಕೋರ್ಟ್ ವಠಾರವೂ ತುಂಬಿಹೋಗಿತ್ತು. ಅಲ್ಲಿನ ಮಾನಸಿಕ ವಾತಾವರಣವೇ ಗಾಂಭೀರ್ಯದಿಂದ ತುಂಬಿತ್ತು. ಗಾಂಭೀರ್ಯದ ಜತೆಗೆ ಸ್ವಲ್ಪ ಭೀತಿಯೂ ಕೂಡಿದಂತಿತ್ತು. ಅಲ್ಲಿನ ಸನ್ನಿವೇಶಗಳೂ ವ್ಯವಸ್ಥೆಗಳೂ ಅನಾದಿಯಿಂದ ಮೂಂದುವರಿದು ಬಂದು, ಮುಂದೆ ಶಾಶ್ವತವಾಗಿ ಇರುವುದೆಂಬಂತೆ ತೋರುತ್ತಿದ್ದುವು. ಸಮಾಜವಿದ್ದಷ್ಟು ದಿನ ಆ ಕೋರ್ಟುಗಳೂ ಇರುತ್ತ ಸಮಾಜದ ಸುವ್ಯವಸ್ಥೆಗೆ ಆಧಾರಭೂತವಾಗಿರುವ ಆ ನ್ಯಾಯಾಲಯಗಳಲ್ಲಿ ವೃತಿಯನ್ನು ಕೈಕೊಳ್ಳುವ ಘನಸ್ಥಿಕೆಯನ್ನು ಗ್ರಹಿಸಿ, ನನಗೆ ನನ್ನ ವೃತ್ತಿಯಲ್ಲಿ ಅಭಿರುಚಿಯುಂಟಾಯಿತು.
ನನ್ನ ಪ್ರೋಕ್ಟರ್ ತರಬೇತಿ ಕಾಲದಲ್ಲಿ ನಾನಿರಲು ನನಗೊಂದೆರಡು ಬಾಡಿಗೆ ಕೋಣೆಗಳನ್ನೂ ನನ್ನ ಗೃಹಕೃತ್ಯದ ಆನುಕೂಲ್ಯಗಳನ್ನು ಒದಗಿಸಿ, ಸರಿಮಾಡಿಟ್ಟು ಬರಲು ತಕ್ಕಂಥ ಕೆಲಸದವಳೊಬ್ಬಳನ್ನು ಅತ್ತೆಯೇ ಏರ್ಪಡಿಸಿ ಕೊಟ್ಟಳು. ನನ್ನ ಕೋಣೆಗಳು ಬಾಡಿಗೆಯವಾಗಿದ್ದುವು. ಮಿಸೆಸ್ ಕೃಪ್ಸ್ ಎಂಬಾಕೆ ಸಂಬಳದ ಕೆಲಸದವಳಾಗಿ, ಗೃಹಕೃತ್ಯ ವಹಿಸಿದ್ದಳು.
(ಮುಂದುವರಿಯಲಿದೆ)
ಧನ್ಯವಾದಗಳು.