ಅಧ್ಯಾಯ ಇಪ್ಪತ್ನಾಲ್ಕು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ತಾರನೇ ಕಂತು
ಸ್ವಂತ ಮನೆ, ಸ್ವಂತವಾದ ಅಡಿಗೆಯ ಏರ್ಪಾಡುಗಳು, ಇಷ್ಟ ಬಂದಾಗ ಮನೆಯಿಂದ ಹೊರಹೋಗಲೂ ಇಷ್ಟ ಬಂದಾಗ ಮನೆಗೆ ಬಂದು ಸೇರಲೂ ಸ್ವಾತಂತ್ರ್ಯ, ಬೇಕಾದವರನ್ನು ಮನೆಗೆ ಆಮಂತ್ರಿಸಿ ಉಪಚರಿಸುವ ಆನುಕೂಲ್ಯಗಳು, ಮನೆ ಬೀಗದ ಕೈಗಳನ್ನು ಜೇಬಿನಲ್ಲಿಟ್ಟುಕೊಂಡು ಲಂಡನ್ ನಗರದಲ್ಲಿ ಎಲ್ಲಿ ಬೇಕಾದರಲ್ಲಿ ತಿರುಗಾಡಿ ಬರಲೂ ನನ್ನ ತರಬೇತಿಗೆ ಸಂಬಂಧಪಟ್ಟು, ಆ ಬಗ್ಗೆ ಬೇಕಾಗುವಷ್ಟೂ ಸಹ ನನಗೆ ದೊರಕಿದ್ದ ಸಮಯದ ಆನುಕೂಲ್ಯ – ಈ ಎಲ್ಲವೂ ಏಕಕಾಲದಲ್ಲಿ ದೊರೆತ ಪ್ರಥಮಾನುಭವ ಬಹು ಸಂತೋಷಕರವಾಗಿತ್ತು. ಈ ಸಂತೋಷದ ಜತೆಯಲ್ಲೇ ಮಿ. ವಿಕ್ಫೀಲ್ಡರ ಮನೆಯಲ್ಲಿ ಕಳೆದಿದ್ದ ದಿನಗಳ ನೆನವರಿಕೆ ಮತ್ತೂ ಏಗ್ನೆಸ್ಸಳ ಸ್ನೇಹ ಪರಿಚಯಗಳ ನೆನವರಿಕೆಗಳು ನನ್ನ ಈ ಏಕಾಂಗೀ ಜೀವನಕ್ಕೆ ಸ್ವಲ್ಪ ಬೇಸರವನ್ನೂ ಬೆರೆಸಿದ್ದುವು. ಆದರೂ ನನ್ನ ಜೀವನದಲ್ಲಿನ ಮುಖ್ಯ ಗುರಿ ನಿಶ್ಚಯವಾಗಿದ್ದು, ಆ ಗುರಿ ಸಾಧನೆಯನ್ನು ಕುರಿತು ನಾನು ಶ್ರದ್ಧೆ ವಹಿಸುತ್ತಿದ್ದುದರಿಂದ ಈ ನೂತನ ಜೀವನ ಕ್ರಮ ಬಹುಮಟ್ಟಿಗೆ ಸಂತೋಷದಾಯಕವೇ ಆಗಿತ್ತು.
ಸ್ಟೀಯರ್ಫೋರ್ತನನ್ನು ಕಾಣದೆ ಸ್ವಲ್ಪ ಬೇಸರವಾಗುತ್ತಿತ್ತು. ಹಾಗಾಗಿ ಅವನನ್ನು ಹುಡುಕುತ್ತಾ ಒಂದು ದಿನ ಅವನ ಮನೆಗೇ ಹೋದೆನು. ಆದರೆ ಅಲ್ಲಿಯೂ ಸ್ಟೀಯರ್ಫೋರ್ತನಿರಲಿಲ್ಲ. ಅವನು ತನ್ನ ಆಕ್ಸ್ಫರ್ಡ್ ಸ್ನೇಹಿತರೊಂದಿಗೆ ಪರಸ್ಥಳಕ್ಕೆ ಹೋಗಿದ್ದುದಾಗಿ ಅವನ ತಾಯಿ ತಿಳಿಸಿದಳು. ನಾನು ಆ ದಿನ ಮಧ್ಯಾಹ್ನದ ಊಟವನ್ನು ಅಲ್ಲೇ ಮಾಡುವಂತೆ ಸ್ಟೀಯರ್ಫೋರ್ತನ ತಾಯಿ ಒತ್ತಾಯಿಸಿದ್ದರಿಂದ, ಅಲ್ಲೇ ನಿಂತೆನು.
ನಮ್ಮ ಊಟ ಮುಗಿದನಂತರ ನಾವು ಹಲವು ವಿಷಯಗಳನ್ನು ಮಾತಾಡುತ್ತ ಸ್ವಲ್ಪ ಸಮಯ ಕುಳಿತಿದ್ದೆವು. ನಮ್ಮ ಮಾತುಕಥೆಗಳಲ್ಲಿ ಮಿಸ್ ಡಾರ್ಟಲ್ಲಳೂ ಕೂಡುತ್ತಿದ್ದಳು. ಸ್ಟೀಯರ್ಫೋರ್ತನ ತಾಯಿ ಅವಳ ಸ್ವಭಾವಸಿದ್ಧವಾಗಿದ್ದಂತೆ ತನ್ನ ಮಗನ ಗುಣಗಳನ್ನೂ ಸಾಹಸಗಳನ್ನೂ ತುಂಬಾ ಪ್ರಶಂಸಿಸಿಯೇ ಮಾತಾಡಿದಳು. ಇಂಥ ಪ್ರಶಂಸೆಗಳಲ್ಲಿ ನಾನೂ ಭಾಗವಹಿಸಿ, ಆ ತಾಯಿಯನ್ನು ಮೀರಿಸುವಷ್ಟು ಸ್ಟೀಯರ್ಫೋರ್ತನ ಗುಣಗಳನ್ನು ಹೊಗಳಿದೆ. ಈ ಸಂದರ್ಭಗಳಲ್ಲಿ ಯಾರ್ಮತ್ತಿನಲ್ಲಿ ನಾವು ಮಿ. ಪೆಗಟಿಗೆ ಕೊಟ್ಟಿದ್ದ ಭೇಟಿಯನ್ನೂ ಅಲ್ಲಿನ ದಿನಗಳನ್ನೂ ಕಾರ್ಯಗಳನ್ನೂ ತಕ್ಕ ಮಟ್ಟಿಗೆ ಹೇಳುತ್ತಾ ಬಂದೆ. ಸ್ಟೀಯರ್ಫೋರ್ತನು ಅಲ್ಲಿನ ಜನರೆಲ್ಲರ ಮೆಚ್ಚುಗೆಯನ್ನು ಪಡೆದಿದ್ದ ಕ್ರಮವನ್ನು ಬಹು ವಿವರವಾಗಿಯೇ ತಿಳಿಸಿದೆ. ಡಾರ್ಟಲ್ಲಳು ಅರಿಯದ ಹೆಡ್ಡಳಂತೆ ಪ್ರಶ್ನೆ ಹಾಕಿ, ಅಡಗಿರಬಹುದಾದ ವಿಷಯಗಳನ್ನೂ ಇಂಗಿತಗಳನ್ನೂ ಒಕ್ಕಿ ತೆಗೆಯುವ – ಅವಳದೇ ಆಗಿದ್ದ – ಕ್ರಮದಿಂದ ಸ್ಟೀಯರ್ಫೋರ್ತನನ್ನು ಕುರಿತು ಅನೇಕ ಸಂಗತಿಗಳನ್ನು ಸಂಗ್ರಹಿಸಿಕೊಂಡಳು.
ಡಾರ್ಟಲ್ಲಳು ಅಂದು ಬಹು ಸೌಮ್ಯವಾಗಿ, ಶಾಂತತೆಯಿಂದ, ಮೃದುವಾಗಿ ಮಾತಾಡಿದಳು. ಈ ಸೌಮ್ಯತೆಯ ಕಾರಣವಾಗಿ ಅವಳ ಮುಖದ ಗಾಯ ಕಾಣಿಸುತ್ತಲೇ ಇರಲಿಲ್ಲ. ಅವಳ ಮಾತು, ಸಾಮೀಪ್ಯ, ಇವುಗಳ ಅನುಭವವೆಲ್ಲ ಆಗುತ್ತಾ ಬಂದ ಹಾಗೆ ಅವಳು ಬಹು ಸುರೂಪಿಯಾಗಿಯೇ ತೋರಿದಳು. ನಾನು ಹೀಗೆ ಸ್ವಲ್ಪ ಹೊತ್ತು ಅಲ್ಲಿದ್ದು ಮನೆಗೆ ಬಂದೆನು. ರಾತ್ರಿ ನಮ್ಮ ಮನೆಯಲ್ಲಿ ನಾನು ಏಕಾಂತವಾಗಿ ಯೋಚಿಸುತ್ತಾ ಕುಳಿತಿದ್ದಾಗ ಮಿಸ್ ಡಾರ್ಟಲ್ಲಳಾದರೂ ಹಾಗೆ ಇದ್ದದ್ದಾಗಿದ್ದರೆ ನನ್ನ ಜೀವನ ಎಷ್ಟೊಂದು ಆನಂದಮಯವಾಗಿರುತ್ತಿತ್ತೆಂದು ಯೋಚಿಸಿದೆನು.
ಮರುದಿನ ಬೆಳಗ್ಗೆ ಸ್ಟೀಯರ್ಫೋರ್ತನು ನನ್ನ ಮನೆಗೆ ಹಠಾತ್ತಾಗಿ ಬಂದೇ ಬಂದನು. ನನ್ನ ಮನೆಯ ಆನುಕೂಲ್ಯಗಳನ್ನೆಲ್ಲ ನೋಡಿ, ಮೆಚ್ಚಿ, ಪ್ರಶಂಸಿಸಿದನು. ಲಂಡನ್ ನಗರದ ಈ ಭಾಗದಲ್ಲಿ ಅವನು ಇರಬೇಕಾದ ಸಂದರ್ಭ ಬಂದಾಗಲೆಲ್ಲಾ ಅವನು ನನ್ನ ಮನೆಯನ್ನು ತನ್ನದರ ಹಾಗೆಯೇ ಉಪಯೋಗಿಸಿಕೊಳ್ಳುವುದಾಗಿ ತಿಳಿಸಿದನು. ಅವನ ಈ ವಿಧದ ಹೊಗಳಿಕೆಯನ್ನು ಕೇಳಿ ನನ್ನ ಮನೆ ಒಳ್ಳೆಯದೇ ಇರಬೇಕೆಂದು ನಾನು ತಿಳಿಯುತ್ತಾ ಸಂತೋಷಪಟ್ಟೆನು. ಸ್ಟೀಯರ್ಫೋರ್ತನು, ಈಗಲೇ, ಬಂದಿರುವಾಗಲೇ ನನ್ನ ಮನೆಯಲ್ಲಿ ಊಟಮಾಡಬೇಕೆಂದು ಒತ್ತಾಯಿಸಿದೆನು. ಅವನು ಆ ದಿನ ಊಟ ಮಾಡಲು ಸಿದ್ಧನಿಲ್ಲವೆಂದೂ – ಅವನಿಗೆ ತುಂಬಾ ಕೆಲಸವಿದೆಯೆಂದೂ – ಹೇಳಿ, ಆದರೆ, ಸದ್ಯವೇ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ನನ್ನಲ್ಲೇ ಒಂದು ಔತಣದ ಊಟ ಮಾಡುವುದಾಗಿ ಭರವಸೆಯಿತ್ತನು. ಭರವಸೆ ಮಾತ್ರವಲ್ಲದೆ, ಔತಣದ ದಿನವನ್ನೂ, ಸಮಯವನ್ನೂ ಬರುವ ಜನರು ಎಷ್ಟೆಂಬುದನ್ನೂ ಆಗಲೇ ನಿಶ್ಚೈಸಿ ತಿಳಿಸಿದನು. ಈ ರೀತಿ ನನ್ನ ಹೊಸ ಮನೆಯಲ್ಲಿ ಸ್ನೇಹಿತರ ಒಂದು ಸಂತೋಷಕೂಟವನ್ನು ಏರ್ಪಡಿಸುವ ಭಾಗ್ಯ ನನ್ನದಾಯಿತು.
ಸ್ಟೀಯರ್ಫೋರ್ತನ ಇಚ್ಛೆ ಪ್ರಕಾರ, ಗೊತ್ತಾಗಿದ್ದ ದಿನದಲ್ಲಿ ಔತಣವನ್ನು ಏರ್ಪಡಿಸಿದೆನು. ಮನೆಯಲ್ಲಿದ್ದ ಕೆಲಸದವರು ಸಾಕಾಗಲಾರರೆಂದು ಒಬ್ಬಳು ಹೆಂಗುಸನ್ನೂ ಒಬ್ಬ ಗಂಡುಸನ್ನು ಕೆಲಸಕ್ಕಾಗಿ ಹೊಸತಾಗಿ, ನೇಮಿಸಿಕೊಂಡೆ. ಮಿಸೆಸ್ ಕೃಪ್ಸಳ ಸಲಹೆ ಪ್ರಕಾರ ಅವಳು ಹೇಳಿದಷ್ಟು ಔತಣದ ಸಾಹಿತ್ಯಗಳನ್ನು ಸಂಗ್ರಹಿಸಿಟ್ಟೆನು. ಔತಣದ ದಿನ ಸ್ಟೀಯರ್ಫೋರ್ತನು, ಅವನ ಇಬ್ಬರು ಸ್ನೇಹಿತರೊಂದಿಗೆ ನಿಶ್ಚಿತ ಸಮಯಕ್ಕೆ ಸರಿಯಾಗಿ ಬಂದನು. ಸ್ಟೀಯರ್ಫೋರ್ತನು ಅಂದಿನ ಸಮಾರಂಭಕ್ಕೆ ಸ್ವಾಭಾವಿಕವಾಗಿಯೇ ಅಗ್ರಸ್ಥಾನವನ್ನು – ಯಜಮಾನಿಕೆಯನ್ನೂ – ವಹಿಸಿಕೊಂಡನು. ಈ ಕಾರಣದಿಂದ ನನ್ನ ಅಜ್ಞತೆ ಹೊರಬೀಳಲಿಲ್ಲ. ಔತಣದ ಗಾಂಭೀರ್ಯವನ್ನು ಸ್ಟೀಯರ್ಫೋರ್ತನು ಅವನ ಅಗ್ರಸ್ಥಾನದಿಂದ ತುಂಬಾ ಹೆಚ್ಚಿಸಿದನು. ನಾನು ಸಂಗ್ರಹಿಸಿದ್ದ ಸಾಹಿತ್ಯ ಹದಿನಾಲ್ಕು ಜನರಿದ್ದರೂ ತಿಂದುಳಿಯುವಷ್ಟಿದೆಯೆಂದು ಸ್ಟೀಯರ್ಫೋರ್ತನು ಅಂದಾಗ ನನಗೆ ಆದ ಸಂತೋಷವಷ್ಟಿಷ್ಟಲ್ಲ.
ನಾವು ನಾಲ್ವರೂ ಕುಳಿತು ಊಟಮಾಡಿ ಸರಾಯಿ, ವೈನುಗಳನ್ನು ಕುಡಿದು ಆನಂದಿಸಿದೆವು. ನಮ್ಮ ಹೊಸ ಆಳಂತೂ ಬಹು ನಮ್ರತೆಯಿಂದ ನಾವು ಕರೆದಾಗ ಮಾತ್ರ ಎದುರು ಬರುತ್ತಲೂ ಕರೆಯದಿದ್ದಾಗಲೆಲ್ಲ ಹೊರ ಕೋಣೆಯಲ್ಲೇ ಇರುತ್ತಲೂ ನಮ್ಮ ಕೆಲಸವನ್ನು ಬಹು ಶ್ರದ್ಧೆಯಿಂದ ಮಾಡುತ್ತಿದ್ದನು. ಕೆಲವೊಮ್ಮೆ ಮಾತ್ರ ಈ ನಮ್ರತೆ ಹದ ಮೀರಿ, ಅಗತ್ಯ ಬಿದ್ದಾಗಲೂ ಅವನು ಹೊರ ಕೋಣೆಯಲ್ಲೇ ನಿಂತು ಬಿಡುವವರೆಗೂ ಇತ್ತು. ಇಂಥ ಒಂದು ಸಂದರ್ಭದಲ್ಲಿ ನಾನು ಹೊರ ಕೋಣೆಯನ್ನು ನೋಡಿದಾಗ – ಅವನು ಎದುರು ಇದ್ದಿಲ್ಲವಾದರೂ – ಅವನ ನೆರಳು ಒಂದು ಬಾಟ್ಲಿಯನ್ನು ಬಾಯಿಗೆ ಬಗ್ಗಿಸಿಕೊಳ್ಳುವುದನ್ನು ಕಂಡೆನು. ಈ ನೆರಳನ್ನು ಋಜುಪಡಿಸುವಂತೆ ಸ್ವಲ್ಪವೇ ಸಮಯದಲ್ಲಿ ಮಾತೇ ಹೊರಡದ ಅವಸ್ಥೆಗೆ ಅವನು ತಲುಪಿದನು. ಇದೇ ಸಮಯದಲ್ಲಿ ನಮ್ಮ ನಾಲಿಗೆಯ ಮೇಲೂ ನಮಗೆ ಅಧಿಕಾರ ಕಡಿಮೆಯಾಗತೊಡಗಿತು. ನಮಗೆ ನಮ್ಮದೇ ಆಗಿದ್ದ ಪ್ರತಿಗಳು ಕಂಡು ಬಂದು, ನಮ್ಮ ಮೊದಲ್ನುಡಿಗಳನ್ನು ನಾವೇ ಕೇಳಿ, ನಮ್ಮ ತಪ್ಪುಗಳನ್ನು ನಾವೇ ಕಂಡು, ಹೀಗೂ ಆಗುವುದಿದೆಯೇ ಎಂದು ನಮ್ಮ ನಮ್ಮ ಪ್ರತಿಗಳನ್ನು ಕುರಿತು ಆಶ್ಚರ್ಯಪಡತೊಡಗಿದೆವು. ನಾನು ಸುಮ್ಮನೆ ಕುಳಿತಿದ್ದರೂ ಮಿ. ಡೇವಿಡ್ ಕಾಪರ್ಫೀಲ್ಡನು ಹಾಡ ತೊಡಗಿದನು. ಈ ವಿಧದ ರೋಗ ಅತಿಥಿಯೊಬ್ಬನಿಗೂ ಅಂಟಿ, ಅವನೂ ಹಾಡತೊಡಗಿದನು. “ಮಾನವ ಹೃದಯವು ದುಃಖದ ಭಾರದಿ. . .” ಎಂಬ ಪದವನ್ನು ಹಾಡಿದಾಗ ನನಗೆ ಅಳೋಣವೆಂದು ತೋರಿತು. ಅಷ್ಟರಲ್ಲೇ ಅವನು “ಇನಿಯಳ ಕೂಡಿ ದಣಿಯದೆ ನಲಿದೂ. . .” ಎಂಬ ಪದವನ್ನು ಹಾಡಲು ಪ್ರಾರಂಭಿಸಿದನು. ಆ ಪದ ಪೂರ್ಣ ಆಗುವುದರೊಳಗೆ, ಮದುವೆಯಾಗದವರ ಸಭೆಯಲ್ಲಿ “ಇನಿಯಳ ಕೂಡಿ. . .” ಎಂಬ ಶಬ್ದ ಪ್ರಯೋಗ ತಪ್ಪೆಂದೂ – ಅಪಹಾಸ್ಯವೆಂದೂ – ನಾನು ಆಕ್ಷೇಪವೆತ್ತಿದೆನು. ಈ ವಿಧದ ವಾದಗಳಿಂದ ಕ್ರಮವಾದ ಜಗಳವೇ ಆರಂಭಿಸಿತು. ಆದರೆ ಅಷ್ಟರಲ್ಲೇ ಯಾರೋ ಒಬ್ಬರು ನನ್ನನ್ನು ಬಹುವಾಗಿ ಹೊಗಳಿ ಒಂದೊಂದು ಗ್ಲಾಸು ವೈನನ್ನು ಕೊಟ್ಟರು. ವೈನು ಕುಡಿಯುತ್ತಾ ನಾವು ಸಂತೋಷ ಶಿಖರಕ್ಕೇ ಏರಿದೆವು.
ನಮ್ಮ ಅಂದಿನ ಸಂಭ್ರಮದ ಪೂರ್ಣತೆಗೆ ನಾವು ನಾಟಕ ನೋಡುವುದು ಅಗತ್ಯವೆಂದು ಸ್ಟೀಯರ್ಫೋರ್ತನೆಂದನು. ಅವನ ಇಷ್ಟ ಪ್ರಕಾರ ನಾವೆಲ್ಲರೂ ನಾಟಕಕ್ಕೆ ಹೋಗಲು ಮಹಡಿಯಿಂದ ಇಳಿಯತೊಡಗಿದೆವು. ಇಳಿಯುವಾಗ ಯಾರೋ ಒಬ್ಬರು ಉರುಳುತ್ತಾ ಕೆಳಗೆ ತಲುಪಿದರು. ಉರುಳಿ ಬಿದ್ದವನನ್ನು ಸ್ಟೀಯರ್ಫೋರ್ತ್ ಮೊದಲಾದವರು ಎಬ್ಬಿಸಿ ನಿಲ್ಲಿಸಿದರು. ನಿಲ್ಲಿಸಿದರೂ ನಿಲ್ಲಲಾರದವನು ಯಾರೆಂದು ನಾನು ಕಣ್ಣು ತೆರೆದು ನೋಡುವಾಗ, ಅದು ಮಿ. ಡೇವಿಡ್ ಕಾಪರ್ಫೀಲ್ಡನೆಂದು ತಿಳಿದು, ನಾನು ಬಿದ್ದು ಬಿದ್ದು ನಗಾಡಿದೆನು.
ನಾಟಕ ಶಾಲೆಗೆ ಟಿಕೇಟು ದೊರಕುವುದೇ ನಮಗೆ ಕಷ್ಟವಾಯಿತು. ಕೊನೆಗೆ ಸ್ಟೀಯರ್ಫೋರ್ತನ ವ್ಯಕ್ತಿತ್ವ ಶಕ್ತಿಯಿಂದ ಮಾತ್ರ ಟಿಕೇಟೂ ಸಿಕ್ಕಿ, ನಾವು ರಂಗಸ್ಥಳದ ಸಮೀಪದಲ್ಲೇ ಹೋಗಿ ಕುಳಿತೆವು. ರಂಗಸ್ಥಳದಿಂದ ಬರುತ್ತಿದ್ದ ಬೆಳಕಿನ ಕಾರಣವಾಗಿ ನಾನು ನನ್ನ ಮುಂದುಗಡೆಯಿದ್ದ ಕುರ್ಚಿ ಸಾಲುಗಳಿಗಿಂತ ಮುಂದೆ ನೋಡಲಾರದೆ ಆಗಿದ್ದೆ. ನನ್ನ ಎದುರು ಸಾಲಿನಲ್ಲಿ ಏಗ್ನೆಸ್ಸಳು ಕುಳಿತಿದ್ದುದನ್ನು ಕಂಡು ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ನಾಟಕ ನನ್ನ ಪಾಲಿಗೆ ಹೇಗೂ ಇಲ್ಲದೇ ಆಗಿದ್ದುದರಿಂದ ಏಗ್ನೆಸ್ಸಳನ್ನು ಕರೆದು ಮಾತಾಡಿಸತೊಡಗಿದೆ. ಆಗ ಯಾರೋ “ಸೈಲೆನ್ಸ್” ಎಂದು ಕೂಗಿಕೊಂಡರು. ಯಾರಿಗೋ ಅಂದಿದ್ದ “ಸೈಲೆನ್ಸ್” ಶಬ್ದದಿಂದ ಏಗ್ನೆಸ್ಸಳು ಚಕಿತಳಾಗಿ, ನಾನು ರಂಗಸ್ಥಳವನ್ನು ದಯಮಾಡಿ ಬಿಟ್ಟು ಹೋಗಬೇಕೆಂದು ಕೈ ಮುಗಿದು ಬೇಡಿಕೊಂಡಳು. ಅದಕ್ಕೆ ನಾನು –
“ಏಗ್ನೆಸ್ – ನಿಂಗೆ ಸೌಖ್ಯವೇ” ಎಂದಂದೆ.
“ನನ್ನ ಸುಖ ಹಾಗಿರಲಿ. ನೀನು ಮನೆಗೆ ಹೋಗುವುದು ಒಳ್ಳೆಯದಲ್ಲವೇ?” ಎಂದವಳಂದಳು.
ಅವಳ ಮಾತಿನಿಂದ ನಾನು ಬಹುವಾಗಿ ಸಿಟ್ಟುಗೊಂಡು, ಅಲ್ಲಿಂದ ಎದ್ದೇ ಹೋಗಿಬಿಟ್ಟೆ. ಅನಂತರ ನನ್ನನ್ನು ಕಂಡದ್ದು ನನ್ನ ಹಾಸಿಗೆಯಲ್ಲೇ!
ಮರುದಿನ ಬೆಳಿಗ್ಗೆ ಏಳುವಾಗ ಅಮಲೆಲ್ಲ ಬಿರಿದಿತ್ತು. ಹಿಂದಿನ ರಾತ್ರಿ ನಡೆದಿದ್ದುದನ್ನೆಲ್ಲ ಗ್ರಹಿಸಿ ನಾಚಿಕೆಯೂ ದುಃಖವೂ ಆಯಿತು. ಏಗ್ನೆಸ್ಸಳು ನನ್ನನ್ನು ಆ ಸ್ಥಿತಿಯಲ್ಲಿ ಕಂಡದ್ದೇ ನನ್ನ ನಾಚಿಕೆಯನ್ನೂ ದುಃಖವನ್ನೂ ಹೆಚ್ಚಿಸಿತು. ಮಿಸೆಸ್ ಕೃಪ್ಸಳು ಬೆಳಿಗ್ಗೆ ಕ್ಲುಪ್ತ ಸಮಯದಲ್ಲಿ ಆ ದಿನವೇ ಕ್ರಯಕೊಟ್ಟು ತಂದಿದ್ದ ವಸ್ತುಗಳನ್ನೆಲ್ಲ ನನ್ನ ಊಟಕ್ಕೆ ಬಡಿಸಿದಳು. ಹಿಂದಿನ ದಿನದ ಸಾಹಿತ್ಯಗಳೆಲ್ಲ ಪೂರ್ತಿ ಮುಗಿದಿತ್ತಂತೆ. ಇದೂ ಒಂದು ಹೆಡ್ಡುತನ ಮತ್ತು ನಷ್ಟವೆಂದು ತಿಳಿದುಕೊಂಡೆನು. ಇಲ್ಲಿ ನನಗೆ ಆಗಿದ್ದ ನಷ್ಟಕ್ಕಾಗಿ ದುಃಖಿಸುವುದಕ್ಕಿಂತಲೂ ಹೆಚ್ಚಾಗಿ, ನನ್ನ ಅಂದಿನ ದುರ್ವ್ಯಸನಕ್ಕಾಗಿ ದುಃಖಿಸಿದೆ – ಪಶ್ಚಾತ್ತಾಪಪಟ್ಟೆನು.