ಅಧ್ಯಾಯ ಇಪ್ಪತ್ತಾರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ತೆಂಟನೇ ಕಂತು
ಉರೆಯ ಏಗ್ನೆಸ್ಸಳನ್ನು ಮದುವೆಯಾಗಲು ಹವಣಿಸುತ್ತಿದ್ದಾನೆಂಬುದು ನನ್ನ ಮನಸ್ಸನ್ನು ಕೊರೆಯತೊಡಗಿತು. ಈ ವಿಷಯವನ್ನು ಏಗ್ನೆಸ್ಸಳಿಗೆ ತಿಳಿಸಬೇಕೇ ಬೇಡವೇ ಎಂದು ಆಲೋಚಿಸಿ, ಸದ್ಯ ತಿಳಿಸದಿರುವುದೇ ಲೇಸೆಂದು ನಿರ್ಧರಿಸಿದೆ. ಏಗ್ನೆಸ್ಸಳ ಪ್ರೇಮ ತಂದೆಯ ಮೇಲೆ ಎಷ್ಟಿದೆಯೆಂಬುದನ್ನು ನಾನು ಅರಿತಿತ್ತುದರಿಂದ, ಅವಳು ತಂದೆಯ ರಕ್ಷಣೆಗಾಗಿ, ಸುಖಕ್ಕಾಗಿ, ಉರೆಯನನ್ನೇ ಒಲಿಸುವವರೆಗೂ ತ್ಯಾಗ ಮಾಡುವಳೆಂದು ತಿಳಿದು ಹೆದರುತ್ತಾ ನಾನು ದುಃಖಿಸಿದೆನು. ಮಗಳ ಈ ವಿಧದ ಪ್ರೇಮವೇ ತನ್ನ ಇಚ್ಛೆಯ ಸಾಫಲ್ಯಕ್ಕಿರುವ ಸಾಧನವೆಂದು ಉರೆಯ ತಿಳಿದ ವಿಷಯವಂತೂ ನನಗೆ ಸಹಿಸಲಾರದ ಬಾಧೆಯಾಗಿ ತೋರಿತು. ಈ ಎಲ್ಲಾ ಭಾವನೆಗಳು ಜತೆಗೂಡಿ ನನ್ನ ಜೀವನವೇ ಭಾರವೂ ದುಃಖಮಯವೂ ಆಗತೊಡಗಿತು. ಏಗ್ನೆಸ್ಸಳು ನನ್ನ ಪತ್ನಿಯಾಗಬೇಕೆಂಬ ಗುರಿಯಿಂದ ನಾನವಳನ್ನು ಪ್ರೀತಿಸುತ್ತಿರಲಿಲ್ಲವಾದರೂ ಇತರರು ಅವರಲ್ಲೂ ಉರೆಯನಂಥವರು ಅವಳನ್ನು ವರಿಸಲು ಪ್ರಯತ್ನಿಸುತ್ತಿರುವುದು ನನಗೆ ದುಃಖಕರ ವಿಷಯವಾಗಿ ತೋರುತ್ತಿತ್ತು. ನನ್ನ ಹೃದಯದ ಒಂದಂಶದಲ್ಲಿ ಈ ವಿಧದ ದುಃಖವಿದ್ದಾಗಲೇ ನನ್ನ ಜೀವನ ವೃತ್ತಿಯಾದ ಪ್ರೋಕ್ಟರ್ ಕೆಲಸವೂ ಬಹು ನಿರುತ್ಸಾಹದಾಯಕವೇ ಆಗಿದ್ದುದ್ದು ಮನಸ್ಸಿನ ಒಂದು ಭಾಗದಲ್ಲಿ ಬಹು ಬೇಸರ, ಆಲಸ್ಯಗಳನ್ನೆಬ್ಬಿಸಿತು. ಈ ರೀತಿಯಾಗಿ ನನ್ನ ಅಂದಿನ ದಿನಗಳೆಲ್ಲಾ ನಿರುತ್ಸಾಹಕರವೂ ದುಃಖಮಯವೂ ಆಗಿದ್ದುವು.
ನನ್ನ ತರಬೇತಿಯ ಪರೀಕ್ಷಾರ್ಥ ಕಾಲವಾಗಿದ್ದ ಒಂದು ತಿಂಗಳೂ ದಾಟಿ ನಾನು ನಿಯಮಾನುಸಾರವಾಗಿ ಸ್ಪೆನ್ಲೋ ಮತ್ತು ಜರ್ಕಿನ್ಸರ ಇಲಾಖೆಯಲ್ಲಿ ಒಬ್ಬ ಕ್ರಮಾಗತ ಪ್ರೋಕ್ಟರನಾಗಿಯೇ ದಾಖಲು ಮಾಡಲ್ಪಟ್ಟೆನು. ಹೀಗೆ ದಾಖಲಾದ ದಿನ ನಾನು ನನ್ನ ಸಹೋದ್ಯೋಗಿಗಳಿಗೂ ನಮ್ಮ ಇಲಾಖೆಯ ಗುಮಾಸ್ತರುಗಳಿಗೂ ಒಂದು ಔತಣ ಕೊಟ್ಟೆನು. ಔತಣಕ್ಕೆ ಮಿ. ಸ್ಪೆನ್ಲೋರವರೂ ಬಂದಿದ್ದರು. ಅವರು ಔತಣದಲ್ಲಿ ಭಾಗವಹಿಸುತ್ತಾ ತಾನೂ ಒಂದು ಔತಣವನ್ನು ನಮಗೆಲ್ಲರಿಗೂ ಅವರ ಮನೆಯಲ್ಲಿ ಕೊಡುವುದಾಗಿ ಹೇಳಿದರು. ಆದರೆ, ಔತಣದ ದಿನವನ್ನು ಮಾತ್ರ, ಸ್ವಲ್ಪ ಹಿಂದಿನಿಂದ – ಪೇರಿಸ್ಸಿನಲ್ಲಿ ವಿದ್ಯಾಭ್ಯಾಸಕ್ಕೆ ಹೋಗಿದ್ದ ಅವರ ಮಗಳು ಮರಳಿ ಬಂದ ಕೂಡಲೇ ತಿಳಿಸುವುದಾಗಿಯೂ ಹೇಳಿದರು.
ನಾಲ್ಕಾರು ದಿನಗಳು ಕಳೆಯುವುದರಲ್ಲೇ ಔತಣದ ದಿನವು ಗೊತ್ತು ಮಾಡಲ್ಪಟ್ಟು ನಮಗೆಲ್ಲ ಆಮಂತ್ರಣ ಬಂದಿತು. ಆಗ ನಮ್ಮ ಆಫೀಸಿನ ಹಳೆ ಗುಮಾಸ್ತರುಗಳು ಅನೇಕ ವಿಷಯಗಳನ್ನು ಮಾತಾಡತೊಡಗಿದರು. ಹಳೆ ಗುಮಾಸ್ತರುಗಳು ಮಿ. ಸ್ಪೆನ್ಲೋರವರ ಔತಣಗಳಲ್ಲಿ ಹಿಂದೆ ಅವರು ಭಾಗವಹಿಸಿದ್ದ ಹೆಮ್ಮೆಗಾಗಿಯೇ ಅಲ್ಲಿನ ವೈಶಿಷ್ಟ್ಯಗಳನ್ನು ವರ್ಣಿಸಿದರು.
ಮಿ. ಸ್ಪೆನ್ಲೋರವರು ಆ ರೀತಿಯ ಔತಣಗಳನ್ನು ಈ ಮೊದಲು ಅನೇಕ ಸಲ ಏರ್ಪಡಿಸಿದ್ದರಂತೆ. ಆಮಂತ್ರಣವಿಲ್ಲದೆ ಎಂಥವರಿಗೂ ಹೋಗಿ, ನೋಡಿ, ತಿಳಿಯಲು ಅನುಕೂಲವಿಲ್ಲದಷ್ಟು ಗೋಪ್ಯವಾಗಿ, ಗಹನವಾಗಿ, ಗಂಭೀರ ಕ್ರಮಗಳಿಂದ, ಅವರ ವಸ್ತು ಒಡವೆಗಳೂ ಶಿಸ್ತು ಮರ್ಯಾದೆಗಳೂ ಇದ್ದುವಂತೆ. ಬೆಳ್ಳಿಯ ಮತ್ತು ಅತಿ ಉತ್ತಮ ತರದ ಚೈನಾ ತಟ್ಟೆಗಳನ್ನು ಮಾತ್ರ ಮಿ. ಸ್ಪೆನ್ಲೋರವರು ಉಪಯೋಗಿಸುತ್ತಿದ್ದರಂತೆ. ಅವರು ಕಡಿಮೆ ತರದ ಮಾಲುಗಳನ್ನು ಕಣ್ಣಿನಿಂದಲೂ ಸಹ ನೋಡರಂತೆ! ಊಟದಲ್ಲೂ ಸಹ ಹಾಗೆಯೇ ಅತ್ಯುತ್ಕೃಷ್ಟ ತರದ ತಿಂಡಿ ಪಾನೀಯಗಳನ್ನು ಮಾತ್ರ ಅವರು ಬಡಿಸುತ್ತಿದ್ದರಂತೆ. ಅವನ್ನೂ ಬೇಕು ಬೇಕಾದಷ್ಟೆಲ್ಲ ಬಹು ಸಂತೋಷದಿಂದ ಬಡಿಸುವ ಏರ್ಪಾಡು ಅವರದ್ದಾಗಿತ್ತಂತೆ. ಒಟ್ಟಿನಲ್ಲಿ ಅವರ ಬಂಗಲೆಯಷ್ಟು, ಅವರ ಹೂದೋಟದಷ್ಟು, ಅವರ ಊಟೋಪಚಾರಗಳಷ್ಟು, ಅವರ ಮನೆಯ ಚಿನ್ನ, ಬೆಳ್ಳಿ, ವಸ್ತ್ರ, ಉಡಿಗೆ, ಕುರ್ಚಿ, ಮೇಜು ಕಪಾಟುಗಳಷ್ಟು ಉತ್ತಮತರದ್ದು ಇನ್ನೆಲ್ಲಿಯೂ ಖಂಡಿತವಾಗಿಯೂ ಇರಲಿಲ್ಲವಂತೆ. ಅಲ್ಲಿನ ಔತಣಕ್ಕೆ ದೊರಕುವ ಆಮಂತ್ರಣವೇ ಮಹತ್ವದ್ದೆಂದೂ ಗುಮಾಸ್ತರುಗಳು ಮಾತಾಡಿಕೊಳ್ಳುತ್ತಿದ್ದರು.
ಮಿ. ಸ್ಪೆನ್ಲೋರವರು ತಾವೇ ಬಂದು ನನಗೆ ಆಮಂತ್ರಣವನ್ನಿತ್ತು, ನನ್ನನ್ನು ತನ್ನ ಜತೆಯಲ್ಲಿ ಸಾರೋಟಿನಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿದರು. ಔತಣದ ದಿನ – ನಾವು ಸಾರೋಟನ್ನು ಏರುವ ಮೊದಲು – ಆಫೀಸಿನ ಪೇದೆಗಳೂ ಗುಮಾಸ್ತರುಗಳೂ ಬಹು ಭಯ ಭಕ್ತಿಯಿಂದ, ಮೌನವಾಗಿರುತ್ತಾ ನಮ್ಮ ಸಾಮಾನುಗಳನ್ನು ಸಾರೋಟಿನಲ್ಲಿಟ್ಟರು. ಚೆನ್ನಾಗಿ ದುಸ್ತು ಮಾಡಿಕೊಂಡು ಮಿ.ಸ್ಪೆನ್ಲೋರವರೂ ನಾನೂ ಸಾರೋಟನ್ನು ಹತ್ತಿದೆವು. ಸಾರೋಟು ಬಹು ನಾಜೂಕಾಗಿತ್ತು. ಮಾತ್ರವಲ್ಲದೆ ಆ ಕುದುರೆಗಳೂ ಒಂದೇ ರೂಪ, ಬಣ್ಣ, ಠೀವಿಯಲ್ಲಿದ್ದುವು. ಒಂದು ರಾಜ ಮೆರವಣಿಗೆ ಮುಂದುವರಿಯುವಂತೆ ನಾವು ಮುಂದರಿಸಿದೆವು. ಮಜಭೂತಾದ ಆ ಕುದುರೆಗಳು ತಮ್ಮ ಉದ್ದ ಕತ್ತನ್ನು ಗರ್ವದಿಂದ ಎತ್ತಿ ಮುಂದೊತ್ತಿ ಕಾಲು ತೆಗೆಯುವಾಗ ಅವು ಮಿ. ಸ್ಪೆನ್ಲೋ ವಕೀಲರದಲ್ಲದೆ ಇನ್ನು ಯಾರದೂ ಅಲ್ಲವೆಂದು ಕುದುರೆಗಳೇ ಹೇಳುತ್ತಿರುವಂತೆ ತೋರಿದುವು.
ಔತಣಕ್ಕೆ ತುಂಬಾ ಜನರು ಬಂದಿದ್ದರು. ವಕೀಲರೆಲ್ಲ ಬಹು ಸೊಗಸಾದ ಬಟ್ಟೆಗಳನ್ನು ತೊಟ್ಟು, ಅವರ ಇಸ್ತ್ರಿಯ ಹಿಟ್ಟಿನ ಹೊಳಪಿನಿಂದ, ಆ ಕೂಟಕ್ಕೇ ಒಂದು ಅಸಾಧಾರಣ ಪ್ರಭೆಯನ್ನು ಕೊಟ್ಟಿದ್ದರು, ಎಂದರೆ ವಿಶೇಷವಾಗಲಾರದು.
ಮಿ. ಸ್ಪೆನ್ಲೋರವರ ನಮ್ಮ ಸವಾರಿಯ ಕಾಲದಲ್ಲಿ ಅನೇಕ ವಿಷಯಗಳನ್ನು ಬಹು ಮಾರ್ಮಿಕವಾಗಿ ವಿವರಿಸಿದರು. ವಕೀಲಿ ವೃತ್ತಿಯಲ್ಲಿನ ಲಾಭ ನಷ್ಟಗಳು, ಸುಖ, ಸಂತೋಷ, ಪ್ರತಿಷ್ಠೆಗಳು, ಅವುಗಳ ನಿರ್ವಹಣದಲ್ಲಿನ ನಮ್ಮ ಜವಾಬ್ದಾರಿ – ಕೆಲವರು ವರ್ತಿಸುವ ಬೇಜವಾಬ್ದಾರಿ ಮೊದಲಾದುವನ್ನೆಲ್ಲ ವಿವರಿಸಿದರು. ವಕೀಲಿ ವೃತ್ತಿ ಇತರ ಎಲ್ಲಾ ವೃತ್ತಿಗಳಂತೆಯೇ ಒಂದು ಜೀವನ ವೃತ್ತಿಯೇ ಆಗಿರುವುದಾದರೂ ಸರಕಾರದ ಶಾಸನ, ಸೂತ್ರ, ಧೋರಣೆಗಳನ್ನು ಅರ್ಥಮಾಡಿ, ವಿಮರ್ಶೆ ಮಾಡಿ, ಸಮಾಜದ ಕಲ್ಯಾಣವನ್ನು ಸಾಧಿಸಿ, ರಕ್ಷಿಸಿ, ಅವ್ಯವಸ್ಥೆಗಳನ್ನು ವ್ಯವಸ್ಥೆಗೊಳಿಸುವ ವೃತ್ತಿ ಅದೆಂದೂ ಈ ಕಾರಣದಿಂದಾಗಿ, ಜನರು ಸರಕಾರವನ್ನು ಗೌರವಿಸುವಂತೆಯೇ ವಕೀಲರನ್ನೂ ಗೌರವಿಸುವರೆಂದೂ ಸಮಾಜದ ಹಿತಾಭಿವೃದ್ಧಿಗಳಿಗೆ ಈ ವೃತ್ತಿ ಸಂಬಂಧಿಸಿರುವುದರಿಂದ ಇದೊಂದು ಧರ್ಮಪರ ವೃತ್ತಿಯೆಂದೂ ಸಮಾಜ ಕಲ್ಯಾಣ – ನ್ಯಾಯ ಧರ್ಮಗಳ ಸಮರ್ಥನೆ – ಗುರಿಯಿಂದ ಈ ವೃತ್ತಿಯನ್ನು ಅನುಸರಿಸಿದರೆ, ಇದೊಂದು ಪರಮ ಯೋಗ್ಯ ವೃತ್ತಿಯಾಗಬಲ್ಲುದೆಂದೂ ಆದರೆ, ಕೆಲವು ವಕೀಲರು ಅನುಸರಿಸುವಂತೆ – ಪರಾರ್ಥವನ್ನು ಮರೆತು ವೃತ್ತಿ ನಡೆಸಿದ್ದಾದರೆ, ಸ್ವಾರ್ಥ ಮಾತ್ರ ಉಳಿದು, ವೃತ್ತಿ ಧರ್ಮಬಾಹಿರವೂ ಸಮಾಜ ಘಾತುಕವೂ ಆಗಬಲ್ಲುದೆಂದೂ ಹೇಳಿದರು. ಒಂದು ಸಿವಿಲ್ ಕೇಸಿನಲ್ಲಿ, ಕೇಸಿಗೆ ಸಂಬಂಧಪಟ್ಟು ಆಸ್ತಿಗಳೂ ಪಾರ್ಟಿಗಳೂ ತುಂಬಾ ಇದ್ದದ್ದಾದರೆ, ವೃತ್ತಿಯ ದೃಷ್ಟಿಯಿಂದ, ಅಂಥಾ ಕೇಸು ಉತ್ತಮ. ಅದರಲ್ಲೂ ಆ ಕೇಸುಗಳಲ್ಲಿ ಅಪೀಲುಗಳೂ – ಸಿವಿಲ್ಲಿಗೆ ಸಂಬಂಧಿಸಿ ಕ್ರಿಮಿನಲ್ ಕೇಸುಗಳೂ ಇದ್ದದ್ದಾದರೆ ವಕೀಲರ ಅನುಭವ ಹೆಚ್ಚಾಗುವುದು ಮಾತ್ರವಲ್ಲದೆ, ಹಣ ಸಂಪಾದನೆಯೂ ಹೆಚ್ಚುವುದು – ಎಂದು ಮೊದಲಾಗಿ, ಕೋರ್ಟೂ ಕಮಿಟಿ, ಪಾರ್ಲಿಮೆಂಟು ಇವೆಲ್ಲವುಗಳನ್ನು ಕುರಿತೂ ಮಾತಾಡಿದರು.
ನನ್ನ ಈ ಭಾಗ ಜೀವನ ವೃತ್ತಾಂತದಲ್ಲಿ ಸ್ವಲ್ಪ ಅಪ್ರಾಸಂಗಿಕವಾಗಿ ತೋರಬಹುದಾದರೂ ಮಿ. ಸ್ಪೆನ್ಲೋರವರ ಮತ್ತು ನನ್ನ ಪರಿಚಯ ಈ ರೀತಿಯಾಗಿಯೇ ಬೆಳೆದುದರಿಂದ, ಇಷ್ಟಾದರೂ ಹೇಳದೆ ನಿರ್ವಾಹವಿಲ್ಲವೆಂದು ತೋರಿ, ಇದನ್ನು ಬರೆದಿರುತ್ತೇನೆ.
ನಾವು ಮಾರ್ಗವನ್ನು ಬಿಟ್ಟು ಅವರ ಬಂಗಲೆಗೆ ತಲುಪುವ ಮೊದಲೇ ಅವರ ಹೂದೋಟ, ವಿಶ್ರಾಂತಿ ಕಟ್ಟೆ, ಕಾರಂಜಿ, ಸಾಲುಮರ ಮೊದಲಾದ ಸುಂದರ ದೃಶ್ಯಗಳನ್ನು ಕಂಡೆನು. ಅವುಗಳನ್ನು ದಾಟಿಯೇ ನಾವು ಮನೆಗೆ ತಲುಪಿದೆವು. ರಸ್ತೆಗಳೂ ಕಾಲು ರಸ್ತೆಗಳೂ ಸಮತಟ್ಟಾಗಿಯೂ ನೇರವಾಗಿಯೂ ಸಾಲುಮರಗಳ ನೆರಳಿನಿಂದ ಸುಂದರವಾಗಿಯೂ ತಂಪಾಗಿಯೂ ಇದ್ದುವು. ಹೂದೋಟದ ಮಧ್ಯಭಾಗದಲ್ಲಿ, ಶಿಲಾಚ್ಛಾದಿತವಾದ, ನುಣುಪಾಗಿ ಹೊಳೆಯುತ್ತಿದ್ದ, ಕಾಲುದಾರಿಗಳಿದ್ದುವು. ಇವನ್ನೆಲ್ಲ ನೋಡುತ್ತಾ ಮುಂದುವರಿಯುವಾಗ `ಇಲ್ಲಿ ಮಿ. ಸ್ಪೆನ್ಲೋರವರ ಮಗಳು ಸಂಜೆಯಲ್ಲಿ ತಿರುಗಾಡಬಹುದು’, `ಇಲ್ಲಿ ಅವಳು ಉದ್ಯಾನದ ಶೋಭೆಯನ್ನು ಕುಳಿತು ನೋಡಿ ಆನಂದಿಸಬಹುದು’ ಎಂದು ಗ್ರಹಿಸುತ್ತಿದ್ದೆನು.
ನಾವು ಮನೆಯನ್ನು ಪ್ರವೇಶಿಸುವ ಮೊದಲೇ ಮನೆಯ ಎಲ್ಲಾ ಕೊಠಡಿಗಳಲ್ಲು ದೀಪ ಹಚ್ಚಿದ್ದರು. ಬೈಠಖಾನೆ ಹೊಸಬರನ್ನು ತನ್ನ ಗಾಂಭೀರ್ಯದಿಂದಲೇ ದಿಗಿಲುಗೊಳಿಸುವಂತಿತ್ತು. ಬೈಠಖಾನೆಯ ಯಜಮಾನರ ಸ್ಥಾನಮಾನ ಪ್ರತಿಷ್ಠೆಗಳನ್ನು ಸದಾ ಎಚ್ಚರಿಸಿ ತೋರಿಸುತ್ತಿರುವಂತೆ ಗೋಡೆಗಳಲ್ಲಿದ್ದ ತೂಗುಗೂಟಗಳಲ್ಲಿ ತುಂಬಾ ಕ್ರಯವಿರುವ ಹೇಟುಗಳೂ ನಿಲುವಂಗಿಗಳೂ ಕುದುರೆ ಸವಾರಿ ದುಸ್ತುಗಳೂ ಚಾಟಿಗಳೂ ಕಡಚಲಿನ ದೊಣ್ಣೆಗಳೂ ಇದ್ದುವು. ನಾವು ಮನೆಯೊಳಗೆ ಹೋದಾಗ ನಮ್ಮೆದುರು ಬಂದ ಆಳನ್ನು ಸಂಬೋಧಿಸಿ “ಡೋರಾ ಎಲ್ಲಿ” ಎಂದು ಮಿ. ಸ್ಪೆನ್ಲೋರವರು ಕೇಳಿದರು. ನಾವು ಈವರೆಗೆ ನೋಡುತ್ತಾ ಬಂದಿದ್ದ ಮಿ. ಸ್ಪೆನ್ಲೋರವರ ಸಕಲ ವಸ್ತುಗಳ ಸೌಂದರ್ಯ ಮತೂ ಪ್ರಾಶಸ್ತ್ಯವನ್ನು ಅರಿತಿದ್ದ ನನಗೆ `ಡೋರಾ’ ಎಂಬ ಆ ಹೆಸರು ಸಹ ಸುಂದರವೂ ಪ್ರಶಸ್ತವೂ ಮೃದುವೂ ಪ್ರಿಯವೂ ಆಗಿ ತೋರಿತು. ಅಷ್ಟರಲ್ಲೇ ಪಕ್ಕದ ಕೋಣೆಯಿಂದ ಡೋರಾ ಬಂದಳು. ಅವಳ ಆಗಮನದ ಪ್ರಥಮ ದರ್ಶನವೇ ನನ್ನ ಮನಸ್ಸನ್ನು ತಳಮಳಗೊಳಿಸಿತು.
“ಮಿ. ಕಾಪರ್ಫೀಲ್ಡ್, ಇವಳೇ ನನ್ನ ಮಗಳು, ಡೋರಾ ಮತ್ತು ಇವಳ ಜತೆಯಲ್ಲಿರುವವಳು ಇವಳ ಸಖಿ” ಎಂದು ಮಿ. ಸ್ಪೆನ್ಲೋರವರು ನನ್ನೊಡನೆ ಹೇಳಿದರು. ಡೋರಾಳ ಸನ್ನಿಧಿಯಲ್ಲಿ ಭ್ರಾಂತನಂತೆಯೇ ಆಗಿ ಹೋಗಿದ್ದ ನನಗೆ ಆ ಮಾತುಗಳನ್ನು ಯಾರೋ – ಎಲ್ಲಿಂದಲೋ – ಹೇಳಿದ್ದಂತೆ ತೋರಿತು. ಮಾತುಗಳು ಯಾರಿಂದ ಬಂದದ್ದೆಂದು ಯೋಚಿಸಲು ನನ್ನ ಮನಸ್ಸಿನಲ್ಲಿ ಎಡೆಯೇ ಇರದಂತೆ, ನನ್ನ ಮನಸ್ಸು ನನ್ನೆದುರು ಬರುತ್ತಿದ್ದ, ದಿವ್ಯಮೂರ್ತಿಯ ಧ್ಯಾನದಲ್ಲಿ ತಲ್ಲೀನವಾಗಿ ಹೋಗಿತ್ತು. ನಾನು ಜನ್ಮವೆತ್ತಿದುದರ ಸಂಪೂರ್ಣ ಸಾಮರ್ಥ್ಯವನ್ನೇ ಅಲ್ಲಿ ಕಂಡೆನು. ಡೋರಾಳ ದಿವ್ಯ ತೇಜಸ್ಸಿನಲ್ಲಿ ಮುಳುಗಿ ಮೈ ಮರೆತ ನಾನು ಆನಂದಾತಿಶಯದಲ್ಲೇ ಇದ್ದೆನು. ನಾನು ಆ ಮುಹೂರ್ತದಲ್ಲಿ ಡೋರಾಳನ್ನು ಎಂದೆಂದೂ – ಯಾರೂ ಪ್ರೀತಿಸದಷ್ಟು ಪ್ರೀತಿಸಿ, ಪ್ರೇಮ ಪರವಶತೆಯಿಂದ ಆನಂದತುಂದಿಲನಾಗಿ ಹೋದೆ. ಮಿಸ್ ಸ್ಪೆನ್ಲೋ ಡೋರಾಳು ಒಬ್ಬ ಅಪ್ರತಿಮ ಸೌಂದರ್ಯದ ಅಪ್ಸರೆಯಾಗಿ – ಎಲ್ಲರೂ ಅಪೇಕ್ಷಿಸುವ – ಯಾರೂ ಕಂಡಿರದ – ಸಮಸ್ತ ಸೌಂದರ್ಯದ ಜೀವಂತ ಪ್ರತಿಮೆಯಾಗಿ, ನನ್ನ ಮನೋಹರಿಯಾಗಿ, ನನ್ನ ಮನದಲ್ಲಿ ನಲಿದಳು.
ಅಂತೂ ಕ್ರಮೇಣವಾಗಿ, ನಾನು ನನ್ನ ಸುತ್ತಲಿನ ಸನ್ನಿವೇಶವನ್ನು ತಿಳಿದೆನು. ಡೋರಾಳ ಜತೆಯಲ್ಲಿ ಮಿಸ್ ಮರ್ಡ್ಸ್ಟನ್ನಳಿದ್ದಳೆಂದು ಗೊತ್ತಾಯಿತು. ನಾನು ಅವಳನ್ನು ಗುರುತಿಸಿದಂತೆಯೇ ಅವಳೂ ನನ್ನನ್ನು ಗುರುತಿಸಿದಳು. ಮಿಸ್ ಮರ್ಡ್ಸ್ಟನ್ನಳು ಮಿ. ಸ್ಪೆನ್ಲೋರವರ ಪರಿಚಯದ ಮಾತುಗಳಿಗಾಗಿ –
“ಮಿ. ಕಾಪರ್ಫೀಲ್ಡರ ಪರಿಚಯ ನನಗೆ ಈ ಮೊದಲೇ ಇದೆ” ಅಂದಳು.
ಮಿ. ಸ್ಪೆನ್ಲೋರವರು “ಎಳೆಯ ಪ್ರಾಯದ ನನ್ನ ಮಗಳಿಗೆ ವಿವೇಕವುಳ್ಳ ಒಬ್ಬಳು ಸಖಿ ಬೇಕೆಂದು ಮಿಸ್ ಮರ್ಡ್ಸ್ಟನ್ನಳನ್ನು ನೇಮಿಸಿಕೊಂಡಿದ್ದೇನೆ. ಮಿ. ಕಾಪರ್ಫೀಲ್ಡರ ಪರಿಚಯ ಮಿ. ಮರ್ಡ್ಸ್ಟನ್ನಳಿಗೆ ಮೊದಲೇ ಇರುವ ಸಂಗತಿ ತಿಳಿದು ಸಂತೋಷವಾಯಿತು” ಎಂದು ನನ್ನನ್ನು ನೋಡಿ ಹೇಳಿದರು.
ರಾತ್ರಿ ಔತಣದ ಭೋಜನ ನಡೆಯಿತು. ಭವ್ಯವಾದ ಒಂದು ವಿಶಾಲ ಕೊಠಡಿಯಲ್ಲಿ ಸುಂದರವಾದ ಮೇಜಿನ ಸುತ್ತಲೂ ನಾವು ಕುಳಿತು ಭೋಜನ ಮಾಡಿದೆವು. ಡೋರಾಳು ನನ್ನ ಪಕ್ಕದಲ್ಲೇ ಕುಳಿತಿದ್ದಳು. ಅವಳ ಸಾಮೀಪ್ಯದ ಅರಿವಿನ ಆನಂದದಿಂದ ಸಭೆಯಲ್ಲಿ ಯಾರೆಲ್ಲ ನೆರೆದಿದ್ದರು – ಏನೆಲ್ಲ ನಮಗೆ ಬಡಿಸಿದರು – ನಾನು ಏನೆಲ್ಲ ತಿಂದೆ, ಯಾವುದನ್ನೆಲ್ಲ ಬೇಡವೆಂದು ನಿರಾಕರಿಸಿ ಡೋರಾಳ ಧ್ಯಾನದಲ್ಲಿದ್ದೆ ಎಂದು ನಿಶ್ಚೈಸಲಾರದೆ ಆದೆ. ನಾನು ತಿಂದದ್ದು, ಕುಡಿದದ್ದು, ಕಂಡದ್ದು, ಎಲ್ಲವೂ ಡೋರಾಳನ್ನು ಮಾತ್ರವಾಗಿತ್ತು – ಕೇಳಿದ್ದು, ಆಲೋಚಿಸಿದ್ದೂ ಸಹ ಡೋರಾಳನ್ನೇ!
ಊಟ ಮುಗಿಸಿ ನಾವು ಸ್ವಲ್ಪ ಅತ್ತಿತ್ತ ತಿರುಗಾಡುತ್ತಿದ್ದಾಗ ಮಿಸ್ ಮರ್ಡ್ಸ್ಟನ್ನಳು ನನ್ನನ್ನು ಒಂದು ಪಕ್ಕಕ್ಕೆ ಕರೆದು ಕೆಲವು ಮಾತುಗಳನ್ನಾಡಿದಳು. ಉಕ್ಕಿನ ಮಣಿಗಳು ಈಗಲೂ ಅವಳ ಕೈಯ್ಯಲ್ಲಿದ್ದುವು. ಈಗಲೂ ಅವಳು ಪೂರ್ವದ ಉಕ್ಕಿನ ಸ್ತ್ರೀಯೆ ಆಗಿದ್ದಳು. ಆದರೂ ಉಕ್ಕೂ ಸಹ ಸವೆಯುವಂತೆ, ಈಗ ಅವಳು ಸ್ವಲ್ಪ ನುಣುಪಾಗಿ ತೋರಿದಳು. ನಮ್ಮಿಬ್ಬರ ಅಲ್ಲಿನ ಸಂಬಂಧ, ಪರಿಸ್ಥಿತಿಗಳನ್ನು ಗ್ರಹಿಸಿ ನಾವೀರ್ವರೂ ಒಂದು ವಿಧದ ಸಂಧಾನಕ್ಕೆ ಬರಬೇಕೆಂಬುದಾಗಿ ತಿಳಿಸಿದಳು. ಅವಳ ಮತ್ತೂ ಅವಳ ಅಣ್ಣನ ಆರ್ಥಿಕ ಪರಿಸ್ಥಿತಿ ಕೆಟ್ಟಿದ್ದುದರಿಂದ ಅವಳು ಇಂದಿನ `ಸಖೀ’ ವೃತ್ತಿಯನ್ನು ತೊಡಗಬೇಕಾಗಿತ್ತೆಂದಳು. ಅವಳ ಮಾತುಗಳು ಈಗಲೂ ಪೂರ್ವದ ಗರ್ವದಿಂದಲೇ ಕೂಡಿದ್ದು, ಮೆಲ್ಲಗೆ ನನ್ನ ಅತ್ತೆಯನ್ನೇ ಬೈಯ್ಯುವವರೆಗೂ ತಲುಪಿತು. ಆಗ ನಾನೂ ಅವಳ ಕ್ರಮದಿಂದಲೇ – ಅಷ್ಟೇ ಕಠಿಣವಾಗಿ ಉತ್ತರ ಕೊಟ್ಟೆ. ಕೊನೆಗೆ, ನಾವಿಬ್ಬರೂ ಯಾರ ಹತ್ತಿರವೂ ನಮ್ಮ ಪೂರ್ವಚರಿತ್ರೆ, ಪರಿಚಯಗಳ ಪ್ರಸ್ತಾಪವೆತ್ತಬಾರದೆಂಬ ಸಂಧಾನ ಮಾಡಿಕೊಂಡೆವು.
ಔತಣದ ಮರುದಿನ ಬೆಳಗ್ಗೆ ನಾನು ಹೂದೋಟದಲ್ಲಿ ತಿರುಗಾಡುತ್ತಿದ್ದಾಗ ನನ್ನ ಎದುರುಗಡೆಯಿಂದಲೇ ಡೋರಾಳು ಬಂದಳು. ಅವಳ ದರ್ಶನವಾದ ಕ್ಷಣದಲ್ಲೇ ನನ್ನ ದೇಹದಲ್ಲಿ ವಿದ್ಯುತ್ ಪ್ರವಾಹ ಪ್ರವೇಶಿಸಿದಂತೆ ನನಗೆ ಬೋಧೆಯಾಯಿತು. ನಾನು ಈಗ ಅದನ್ನು ಬರೆಯುತ್ತಿರುವಾಗಲೂ ಅಂದಿನ ಅನುಭವವುಂಟಾಗುತ್ತಿದೆ. ಅಂಥ ಒಂದು ಹಿತಕರವಾದ ನವಸ್ಪೂರ್ತಿ – ಚೇತನ ನನ್ನಲ್ಲಿ ತೋರುತ್ತಾ ನಾನು ಡೋರಾಳನ್ನು ಉದ್ದೇಶಿಸಿ –
“ಮಿಸ್ ಸ್ಪೆನ್ಲೋ ನೀವು ಇಷ್ಟು ಬೆಳಗ್ಗೆಯೇ ತಿರುಗಾಡಲು ಹೊರಟಿರುವಿರಷ್ಟೆ” ಎಂದು ಸ್ವಲ್ಪ ಆಶ್ಚರ್ಯ ಸೂಚಿಸಿದೆನು. ಹಾಗಂದಿರಬೇಕೆಂದು ನನ್ನ ಭಾವನೆ – ಡೊರಾಳನ್ನು ಕುರಿತಾದ ನನ್ನ ಧ್ಯಾನದ ಏಕಾಗ್ರತೆಯಲ್ಲಿ ನಾನಂದದ್ದು ಏನೆಂಬ ಸ್ಪಷ್ಟವಾದ ಜ್ಞಾನ ನನಗಿರಲಿಲ್ಲ.
“ಮರೆಯೊಳಗೇ ಮುಚ್ಚಿ ಕುಳಿತಿರಬೇಕೆನ್ನುವುದು ಹುಚ್ಚುತನ. ಬೆಳಗ್ಗಿನ ಹವ ಸಾಕಷ್ಟು ಬಿಸಿಯೋ, ಪಕ್ವವೋ ಆಗುವ ಮೊದಲು ನಾವು ತಿರುಗಾಡಬಾರದೆಂದು ಮಿಸ್ ಮರ್ಡ್ಸ್ಟನ್ನಳು ಅನ್ನುತ್ತಾಳೆ. ಆ ಮಾತಿಗೆ ನಾನು ಒಪ್ಪುವುದಿಲ್ಲ. ಪಕ್ವವಾಗುವುದಂತೆ, ಪಕ್ವ! ಬೆಳಗ್ಗಿನಷ್ಟು ಸುಖಕರ, ಸಂತೋಷಕರ ಸಮಯ ಇಡೀ ದಿನದಲ್ಲಿ ಸಿಗದಿರುವಾಗ ಅವಳ ಮಾತು ಕೇವಲ ಹುಚ್ಚು! ನಾನು ನನ್ನ ತಂದೆಗೆ ತಿಳಿಸಿ ಇಲ್ಲಿ ತಿರುಗಾಡಲು ಬಂದಿದ್ದೇನೆ” ಅಂದಳು ಡೋರಾ.
ಈ ಮಾತಿಗೆ ಹಿಂದೆಮುಂದೆ ಗ್ರಹಿಸದೆ, ನನ್ನ ಉತ್ತರ ತಾನಾಗಿಯೇ ಹೊರಟೇ ಹೋಯಿತು –
“ಹೌದು, ಬೆಳಗ್ಗೆ ತಿರುಗಾಡಲು ಸುಖವೆಂದು ನಾನೂ ಹೊರಟಿದ್ದರೂ ನಾನು ಬಂದಾಗ ಬೆಳಕು ಸಾಕಷ್ಟಿರಲಿಲ್ಲ. ಬೆಳಕು ಸಾಲದೆಂದು ನಾನು ಅಭಿಪ್ರಾಯಪಡುತ್ತಿದ್ದಾಗಲೇ ಈಗ ಈ ಸ್ಥಳವು ಬಹು ಪ್ರಭಾಮಯವಾಗಿದೆ!” ಎಂದು ಹೇಳಿದೆ.
ಪಾಪ! ಅವಳಿಗೆ ನನ್ನ ಮಾತು ಪೂರ್ತಿ ಅರ್ಥವಾಗಲಿಲ್ಲವೆಂದು ತೋರುತ್ತದೆ. ಅವಳು ಪ್ರಶ್ನಿಸಿದಳು –
“ನನ್ನ ಬರೋಣವನ್ನು ಕುರಿತಾಗಿ ನೀವು ಹೊಗಳಿದಿರೇ ಅಥವಾ ಪ್ರಕೃತಿಯೇ ಹಾಗಿತ್ತು, ಹಾಗಾಯಿತು ಎಂದು ಹೇಳಿದಿರೇ ನೀವು?”
ನಾನು ಗಾಬರಿಗೊಂಡು ಏನೇನೋ ಹೇಳಿ, ಅಂತೂ ಪ್ರಕೃತಿ ಸ್ಥಿತಿಯನ್ನು ಹಾಗೆ ವಿವರಿಸಿದ್ದಲ್ಲ. ಅವಳ ಸಮಾಗಮದಿಂದ ಮಾತ್ರ ಅಲ್ಲಿ ಬೆಳಕಾಯಿತು, ಎಂದು ಹೇಳಿದೆ.
ನನ್ನ ಈ ಮಾತುಗಳಿಂದ ಅವಳ ಮುಖದಲ್ಲಿ ಕೆಂಪು ಕಳೆಯೇರಿತು. ಅವಳ ಕರಿ ಗುಂಗುರು ಕೂದಲು ಮುಖದ ಕಾಂತಿಯನ್ನು ಬಚ್ಚಿಡಲು ಪ್ರಯತ್ನಿಸಿದರೂ ಮುಖದ ಕಾಂತಿ ಮತ್ತಷ್ಟು ಸುಂದರವಾಗಿ ಹೊರಹೊಮ್ಮಿತು. ಡೋರಾಳಿಗೊಬ್ಬಳ ಹೊರತಾಗಿ ಇನ್ನು ಯಾರಿಗೂ ಅಂಥ ಸುಂದರ ತಲೆಗೂದಲಿಲ್ಲವೆಂಬುದನ್ನು ನಾನು ಆಗಲೇ ನಿಶ್ಚೈಸಿದೆ. ಅವಳನ್ನು ಸಮಾಧಾನಪಡಿಸಲು, ಏನಾದರೂ ಮಾತಾಡಬೇಕೆಂದು –
“ನೀವು ಪೇರಿಸ್ಸಿನಿಂದ ಸದ್ಯ ತಾನೆ ಬಂದದ್ದು?” ಎಂದು ಕೇಳಿದೆ.
“ಹೌದು, ನೀವು ಪೇರಿಸ್ಸಿಗೆ ಹೋಗಿದ್ದೀರೇನು?”
“ಇಲ್ಲ.”
“ಈವರೆಗೆ ಹೋಗದಿದ್ದರೆ, ಇನ್ನಾದರೂ ಅಲ್ಲಿಗೆ ಹೋಗಿರಿ” ಅಂದಳು ಡೋರಾ.
ನಾನು ಆಗ ಕೇಳಿದ್ದು ಮಾತನ್ನಲ್ಲ – ಸಂಗೀತವನ್ನು. ಮಾತಿನ ಅರ್ಥವನ್ನು ನಾನು ಮಾಡಿದುದಕ್ಕಿಂತಲೂ ಅವಳ ಮುಖದ ಸೌಂದರ್ಯವನ್ನು ಅರ್ಥಮಾಡಿದೆ. ನಾನು ಒಂದು ವಿಧದಲ್ಲಿ ಸ್ಥೈರ್ಯ ತಪ್ಪಿದವನಾಗಿ ಏನೇನೋ ಅಂದೆ – ಯಾವ ಪ್ರಾಪಂಚಿಕ ಲಾಭ ಸಂಪಾದನೆಗಾಗಿ ಸಹ ನಾನು ಇಂಗ್ಲೆಂಡನ್ನು – ಅವಳು ನಿಂತಿರುವ ಸ್ಥಳವನ್ನು – ಬಿಟ್ಟು ಹೋಗಲಾರೆನೆಂದು ಹೇಳಿದೆ. ಡೋರಾಳಿಂದ ದೂರ ಸರಿಯಲು ನನ್ನ ಕಾಲುಗಳೇ ಒಪ್ಪವು ಎಂಬವರೆಗೂ ನಾನು ಹೇಳಿದೆ. ನನ್ನ ಮಾತುಗಳನ್ನು ಡೋರಾ ಅರ್ಥ ಮಾಡಿದಳು. ಅರ್ಥದಿಂದ ಅವಳ ಮುಖದ ಕಳೆ ಮತ್ತಷ್ಟು ಹೆಚ್ಚಿತು. ಮಾತುಗಳಿಂದ ಉತ್ತರಿಸಲಾರದೆ ಅವಳು ಮುಖವನ್ನು ಅಲುಗಾಡಿಸಿ, ಆ ಗುಂಗುರು ಕೂದಲಿನಿಂದ ಮುಖದ ಕಳೆಯನ್ನು ತೋರಿಸಿ ಬಚ್ಚಿಡುವಂತೆ ಮಾಡಿದಳು. ಅವಳ ಕೂದಲಿನ ಅಲುಗಾಟ ನನ್ನ ಪ್ರಜ್ಞೆಯನ್ನೇ ಅಲುಗಾಡಿಸಿತು. ಇನ್ನು ನಮ್ಮೊಳಗೆ ಯಾವ ವಿಧದ ಸಂಭಾಷಣೆ ನಡೆಯಬಹುದಾಗಿತ್ತೋ ಎಂಬುದನ್ನು ನಾನು ಊಹಿಸಲಾರೆ. ಆದರೆ, ಆಗಲೇ ಡೋರಾಳ ಪ್ರೀತಿಯ ಪುಟ್ಟ ನಾಯಿ ಜಿಪ್ ಓಡಿ ಬಂತು – ಓಡಿಬಂದು ನಮ್ಮೀರ್ವರನ್ನೂ ರಕ್ಷಿಸಿತು.
ಆ ನಾಯಿಗೆ ನನ್ನನ್ನು ಕಂಡರೆ ಬಹು ಕೋಪ – ಅದು ಹುಚ್ಚುಚ್ಚಾಗಿ ಬೊಗಳತೊಡಗಿತು. ಡೋರಾ ಜಿಪ್ಪನನ್ನು ಎತ್ತಿ ಬಿಗಿದಪ್ಪಿಕೊಂಡಳು. ನಾನು ಅದನ್ನು ನೋಡಿ ಸಹಿಸಲಾರದೆ ಆದೆ. ಜಿಪ್ಪನ ಅದೃಷ್ಟವೇ ಎಂದನಿಸಿತು ನನಗೆ. ನನ್ನ ಮೇಲೆ ಕೋಪವಿಡಬಾರದೆಂದು ಅವಳು ಜಿಪ್ಪನನ್ನು ಅಪ್ಪಿ ಹಿಡಿದು, ತಲೆಯನ್ನು ತನ್ನ ಮೃದು ಹಸ್ತದಿಂದ ಸವರಿದಳು. ಅದು ಬೊಗಳ ಬಾರದೆಂದು ಅದರ ಬಾಯಿಗೆ ತನ್ನ ಸುಂದರ ಬೆರಳುಗಳಿಂದ ಮುದ್ದಾಗಿ ಹೊಡೆದಳು. ಮುದ್ದು ಬೆರಳಿನ ಪೆಟ್ಟಿನಿಂದ ಜಿಪ್ ಸಮಾಧಾನಗೊಂಡಿತು; ಅದೇನಾಶ್ಚರ್ಯ! ನಾಯಿ ಆ ಹಸ್ತ ಸ್ಪರ್ಷದಿಂದ ಸಮಾಧಾನಪಡುವುದಿರಲಿ – ಯಾವ ಮನುಷ್ಯನು ತಾನೇ ಅವಳ ಕೈಯ್ಯಿಂದ ಪೆಟ್ಟು ತಿಂದು ಸಂತೃಪ್ತಿ ಸಮಾಧಾನ ಪಡೆಯದೆ ಇರಬಲ್ಲ!
ಡೋರಾ ಜಿಪ್ಪನನ್ನು ಕೈಯಲ್ಲಿ ಹಿಡಿದು ಕೊಂಡು, ನನ್ನನ್ನು ನೋಡಿ –
“ಮಿಸ್ ಮರ್ಡ್ಸ್ಟನ್ನಳ ಹತ್ತಿರ ನಿಮಗೆ ವಿಶೇಷ ಪರಿಚಯವಿಲ್ಲ ತಾನೆ?” ಎಂದು ಪ್ರಶ್ನಿಸಿ, ಹಾರಲು ಪ್ರಯತ್ನಿಸುತ್ತಿದ್ದ ಜಿಪ್ಪನನ್ನು ಕುರಿತು,
“ನನ್ನ ಮುದ್ದು” ಎಂದಂದು ಮತ್ತಷ್ಟು ಬಲವಾಗಿ ಅದನ್ನಪ್ಪಿಕೊಂಡಳು. ಕಡೇ ಎರಡು ಶಬ್ದಗಳು ಜಿಪ್ಪನಿಗೆ ಆಗಿ ಹೋದುವಲ್ಲಾ ಎಂದು ನಾನು ದುಃಖಿಸಿದೆ. ಮತ್ತೂ
“ಮಿಸ್ ಮರ್ಡ್ಸ್ಟನ್ನಳ ಹತ್ತಿರ ವಿಶೇಷ ಪರಿಚಯವಿಲ್ಲ” ಎಂದು ಉತ್ತರವಿತ್ತೆ.
“ಯಾರಿಗೂ ಒಗ್ಗದಂಥ ಸ್ವಭಾವದವಳು ಅವಳು. ಶಿಸ್ತು-ಕ್ರಮಗಳನ್ನು ಒತ್ತಾಯಿಸಲಿರುವ ಉಪದ್ರವಕಾರಿ!” ಅಂದಳು ಡೋರಾ.
ನಾನು ವಿಶೇಷ ಏನನ್ನೂ ಹೇಳಲಾರದೆ, ಆದರೂ ಏನಾದರೂ ಅನ್ನಬೇಕೆಂದು –
“ಒಬ್ಬಳೆ ಇರುವಾಗ ಜತೆಗಾದರೂ ಒಬ್ಬಳು ಬೇಕಷ್ಟೆ” ಅಂದೆ.
“ಜತೆಗೆ ಅವಳೇಕೆ? ಅವಳಿಗಿಂತ ಉತ್ತಮ – ಎಲ್ಲಾ ವಿಧದಲ್ಲೂ ಈ ನನ್ನ ಜಿಪ್ ಇದೆ” ಅಂದಳು ಡೋರಾ.
ತನ್ನ ಹೆಸರು ಕೇಳಿ ನಾಯಿ ಯಜಮಾನಿಯ ಮುಖ ನೋಡಿ ಬಾಲ ಅಲ್ಲಾಡಿಸಿತು. ಮಿಸ್ ಮರ್ಡ್ಸ್ಟನ್ನಳನ್ನು ಗ್ರಹಿಸಿದಂತೆಲ್ಲ ಡೋರಾಳಿಗೆ ಸಿಟ್ಟು ಬರುತ್ತಿರಬೇಕು – ಅವಳು ಎಳೆ ಮಕ್ಕಳಂತೆ ನುಡಿದಳು –
“ಮಿಸ್ ಮರ್ಡ್ಸ್ಟನ್ನಳು ನನ್ನ ಮನೋಬುದ್ಧಿಗಳ ವಿಕಸನಕ್ಕೆ ಸಹಾಯ ಮಾಡಲಿರುವಳಂತೆ! ಆ ಒರಟು ಹೆಂಗುಸಿಗೆ ಅಂತರಂಗವನ್ನು ಯಾರು ತಾನೆ ತಿಳಿಸಬಯಸಬಹುದು! ನನಗೆ ಪ್ರಿಯರಾದವರು, ಸ್ನೇಹಿತರಾಗಬಲ್ಲವರು ಯಾರೆಂದು ಚುನಾಯಿಸಿ ಒದಗಿಸುವ ನಿಪುಣೆಯಂತೆ ಅವಳು. ಇದು ಯಾವ ಕ್ರಮವೋ ನಾನರಿಯೆ. ಸ್ನೇಹಿತರನ್ನು ಇತರರ ಮುಖಾಂತರ ಚುನಾಯಿಸುವುದಾದ ಪಕ್ಷಕ್ಕೆ ಆ ಸ್ನೇಹಕ್ಕೆ ಬೆಲೆಯೆಷ್ಟು! ಅಲ್ಲವೇ ಜಿಪ್?” ಎಂದು ಮಗುವಿನಂತೆ ಈ ಎಲ್ಲಾ ಮಾತುಗಳನ್ನು ಆತ್ಮಗತವಾಗಿ ಮಾತ್ರ ಹೇಳುತ್ತಿದ್ದವಳಂತೆ ಗ್ರಹಿಸುತ್ತ – ಜಿಪ್ನನ್ನು ಎತ್ತಿಕೊಂಡು, ಅದನ್ನೇ ನೋಡುತ್ತಲೂ ಹೇಳಿದಳು. ಜಿಪ್ನ ಆನಂದಕ್ಕೆ ಮಿತಿಯಿರಲಿಲ್ಲ. ಅದು ಯಜಮಾನಿಯ ಮಾತನ್ನು ಪ್ರೀತಿಯಿಂದ ಆಲಿಸುತ್ತ ಬಾಲ ಅಲ್ಲಾಡಿಸುತ್ತಲೇ ಇತ್ತು. ಜತೆಯಲ್ಲೇ ಹೂಗುಟ್ಟುವಂತೆ, ಮೃದುವಾಗಿ ಗುರುಗುರು ಎಂದನ್ನುತ್ತಿತ್ತು.
ಅವಳ ಮನಸ್ಸು ಮಿಸ್ ಮರ್ಡ್ಸ್ಟನ್ನಳಿಂದ ಬಹುವಾಗಿ ಘಾಸಿಯಾಗಿರಬೇಕು – ಏನೋ ತಂದೆಯ ದಾಕ್ಷಿಣ್ಯಕ್ಕಾಗಿ ಮರ್ಡ್ಸ್ಟನ್ನಳನ್ನು ಅಷ್ಟರಲ್ಲೇ ಬೇಡವೆಂದು ಓಡಿಸಿರಲಿಲ್ಲ. ಡೋರಾ ಜಿಪ್ನೊಡನೆ ಮತ್ತೂ ಮುಂದರಿಸಿ –
“ನನಗೆ ಪ್ರೀತಿಸುವ ತಾಯಿಯಿಲ್ಲ – ಮನೆಯಲ್ಲಿ ಜನರಿಲ್ಲ. ಆ ಅಳಮೋರೆಯ ಕ್ರೂರಿ ಮಿಸ್ ಮರ್ಡ್ಸ್ಟನ್ನಳ ಸಹಾಯವನ್ನು ಪಡೆದು ಸಂತೋಷಿಸುವುದು ಹೇಗೂ ಇಲ್ಲವಾದ ಮೇಲೆ, ಅವಳನ್ನು ದ್ವೇಷಿಸಿ, ಸಾಧ್ಯವಾದರೆ ಅವಳ ಶಿಸ್ತನ್ನು ಮುರಿದು ಹಿಂಸಿಸಿ, ಹಾಗಾದರೂ ನಾವು ಸಂತೋಷಿಸೋಣ, ಅಲ್ಲವೇ ಜಿಪ್” ಎಂದನ್ನುತ್ತಾ ತನ್ನ ಮುದ್ದು ಮುಖವನ್ನೂ ಗುಂಗುರು ಕೂದಲನ್ನೂ ಅಲ್ಲಾಡಿಸುತ್ತಾ ನನ್ನ ನಯನೋತ್ಸವಕ್ಕಾಗಿ ದೇವರು ಒದಗಿಸಿರುವ ಸಂದರ್ಭವಾಗಿ ಮುದ್ದುಮುದ್ದಾಗಿ, ಮೃದು ಹೃದಯದ ವೇದನೆಗಳನ್ನು ಹೇಳಿದಳು. ಇಂಥ ಸನ್ನಿವೇಶದಲ್ಲಿ ನನ್ನ ಅಂತರಂಗವನ್ನು ಅವಳಲ್ಲಿ ತೋರಿಸಿ ಅವಳಿಗೆ ಸಮಾಧಾನಗೊಳಿಸಿ ನಾನು ತೃಪ್ತಿಪಟ್ಟುಕೊಳ್ಳಲೋಸ್ಕರ, ಅವಳ ಕಾಲ ಬಳಿ ಕುಳಿತುಕೊಳ್ಳುವಾಗಲೇ ಮಿಸ್ ಮರ್ಡ್ಸ್ಟನ್ನಳು ಬಂದು ಡೋರಾಳನ್ನು ಕರೆದುಕೊಂಡು ಹೋದಳು.
ಅನಂತರ ಬೆಳಗ್ಗಿನ ಊಟ, ಚಹಗಳನ್ನು ತೆಗೆದುಕೊಂಡೆವು. ನನಗೆ ಊಟ ಮತ್ತು ಚಹಗಳನ್ನು ಬಡಿಸಿದವಳು ಡೋರಾಳೇ ಆಗಿದ್ದುದರಿಂದ, ಅಂದು ನಾನು ಉಂಡಷ್ಟು, ಹಿಂದೆಂದೂ ಉಂಡಿರಲಿಲ್ಲ. ಡೋರಾಳ ಕೋಮಲ ಕರಗಳಿಂದ ಕೊಡಲಾಗುತ್ತಿದ್ದ ಚಹವನ್ನು ಎಷ್ಟು ಕುಡಿದರೂ ಸಾಕೆನ್ನಲು ಮನಸ್ಸು ಬರದೆ, ಅನುಭವವಿಲ್ಲದಿದ್ದ ಅವಳು ನನಗೆ ತೃಪ್ತಿಯಾಗಲಿಲ್ಲವೆಂದು ನಂಬಿ, ಪುನಃ ಪುನಃ ಚಹ ಕೊಡುತ್ತಿದ್ದುದರಿಂದ, ಅಂದು ನಾನು ಚಹ ಕುಡಿದಷ್ಟು ಹಿಂದೆಂದೂ ಕುಡಿದಿರಲಿಲ್ಲ. ಚಹ ಸೇವನೆಯಾದನಂತರ ನನ್ನ ಹೃದಯವನ್ನೇ ಆ ಮನೆಯಲ್ಲಿ ಬಿಟ್ಟು ಬಂದಷ್ಟರ ದುಃಖದಿಂದ ನನ್ನ ಮನೆಗೆ ವಾಪಾಸು ಬಂದೆ.
ಡೋರಾಳನ್ನು ಬಿಟ್ಟು ಬಂದನಂತರ ನನ್ನ ಜೀವನ ಕ್ರಮವನ್ನು ವಿವರಿಸುವುದೇ ಅಸಾಧ್ಯ. ನನ್ನ ಎಲ್ಲಾ ಕೆಲಸಗಳೂ ಡೋರಾಳ ಧ್ಯಾನದ ಜತೆಯಲ್ಲೇ ಸಾಗುತ್ತಿದ್ದುವು. ಅವಳ ಪ್ರೀತ್ಯರ್ಥವಾಗಿಯೇ ಆಗುತ್ತಿದ್ದುವು. ಡೋರಾಳ ಜತೆಯಲ್ಲಿ ಜೀವನ ನಡೆಸಬೇಕಾದರೆ ಏನೇನು ಅನುಕೂಲಗಳನ್ನು ಒದಗಿಸಿಕೊಳ್ಳಬೇಕು, ನಾವು ಹೇಗೆ ನಡೆದರೆ ಡೋರಾಳು ನನಗೆ ದೊರಕಬಹುದು, ಈ ತೆರನಾಗಿಯೇ ಸತತವೂ ನನ್ನ ಆಲೋಚನೆಗಳು ಹರಿಯುತ್ತಿದ್ದುವು. ನಮ್ಮ ಕೋರ್ಟಿನಲ್ಲಿ ಆಗಿದ್ದ ತೀರ್ಪಿನ ಪ್ರಕಾರ ಒಂದು ಉಯಿಲಿನ ಹಣವನ್ನು ನಾವು ಹಂಚುವಾಗ ಆ ಹಣ ನನಗೆ ದೊರಕಿದ್ದರೆ ನಾನು ಡೋರಾಳ ಜತೆಯಲ್ಲಿ ಹೇಗೆ ಸಂಸಾರ ನಡೆಸುತ್ತಿದ್ದೆನೆಂದು ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಿದ್ದೆ. ದಾಂಪತ್ಯ ವಿಚ್ಛೇದನದ ಒಂದು ವ್ಯಾಜ್ಯ ಬಂದಾಗ ಡೋರಾಳಂಥ ಒಬ್ಬ ಕೋಮಲ, ಸುಂದರ ಸ್ತ್ರೀಯನ್ನು ಕುರಿತು ಯಾರಿಗಾದರೂ ದಾಂಪತ್ಯ ವಿಚ್ಛೇದನದ ಆಲೋಚನೆ ಬರಲು ಸಾಧ್ಯವಿದೆಯೇ ಎಂದು ತರ್ಕಿಸಿಕೊಳ್ಳುತ್ತಿದ್ದೆನು. ನೌಕಾ ಸಂಬಂಧವಾಗಿ ನಡೆಯುತ್ತಿದ್ದ ಒಂದು ವ್ಯವಹರಣೆಯಲ್ಲಿ, ನೌಕೆಯ ಹೆಸರನ್ನು ಹೇಳುವಾಗ ಡೋರಾ ಎಂಬ ಹೆಸರಿನ ನೌಕೆಯಿದ್ದಿದ್ದರೆ ಅದರ ಗಾಂಭೀರ್ಯ ಎಷ್ಟಿರಬಹುದು. ಅದರಲ್ಲಿ ಪ್ರಯಾಣ ಮಾಡುವ ಆನಂದ ಏನಿರಬಹುದೆಂದೂ ಊಹಿಸಿಕೊಂಡು ಸಂತೋಷಪಡುತ್ತಿದ್ದೆನು.
ಇಷ್ಟೂ ಅಲ್ಲದೆ, ಒಳ್ಳೊಳ್ಳೆ ದುಸ್ತು ಮಾಡಿಕೊಂಡು, ತಲೆಯಲ್ಲಿ ಡೋರಾಳನ್ನು ಆನಂದದಿಂದ ಹೊತ್ತುಕೊಂಡು ಲಂಡನ್ ನಗರದ ಬೀದಿಗಳಲ್ಲಿ ತಿರುಗಾಡಲು ಪ್ರಾರಂಭಿಸಿದೆನು. ನನ್ನ ಪಾದಗಳಿಗೆ ತಕ್ಕಂಥ ಅಳತೆಯ ಬೂಟ್ಸುಗಳನ್ನು ಧರಿಸುವ ಬದಲು, ಡೋರಾಳ ಪತಿಯಾಗಲು ಪಾದಗಳ ಅಂದವನ್ನು ಹೆಚ್ಚಿಸಲೋಸ್ಕರ ಚಿಕ್ಕ ಅಳತೆಯ ಬೂಟ್ಸನ್ನು ಧರಿಸಿ ನಡೆದು ಕಷ್ಟಪಟ್ಟೂ ಸಂತೋಷಿಸಿದೆನು. ಡೋರಾ ಇಂಥಿಂಥ ರಸ್ತೆಗಳಲ್ಲಿ ತಿರುಗಾಡಬಹುದೆಂದು ಊಹಿಸಿ ಆ ರಸ್ತೆಗಳಲ್ಲೇ ನನ್ನ ಹೆಚ್ಚಿನ ತಿರುಗಾಟವನ್ನು ಸಾಗಿಸಿದೆನು. ನನ್ನ ಸಮೀಪದಲ್ಲಿ ಓಡುವ ಜಟಕಗಳಿಂದ ಯಾರಾದರೂ ಬಗ್ಗಿ ಕರವಸ್ತ್ರವನ್ನು ಬೀಸಿದರೆ ನನ್ನ ಡೋರಾಳೇ ನನ್ನನ್ನು ಕರೆದುದಾಗಿರಬೇಕೆಂದು ನಂಬಿ ಜಟ್ಕದ ಹಿಂದೆ ಓಡಿದುದೂ ಇದೆ.
ನನ್ನ ಮನೆಯ ಯಜಮಾನಿ ಮಿಸೆಸ್ ಕೃಪ್ಸಳು ನನ್ನ ಈ ಅವಸ್ಥೆಯನ್ನು ಕಂಡು, ಇದು ಅನುರಾಗಜನ್ಯವೆಂದೂ ನಾನು ಯಾವಳೋ ಒಬ್ಬ ಹುಡುಗಿಯನ್ನು ಅಪಹರಿಸಿಕೊಂಡು ಓಡುವ ಏರ್ಪಾಡುಗಳನ್ನು ಕುರಿತಾದ ಆಂತರಿಕ ದುಃಖದಲ್ಲಿರುವೆನೆಂದು ಊಹಿಸಿಕೊಂಡಳು. ಹೀಗೆ ಊಹಿಸಿಕೊಂಡಳೆಂಬುದಕ್ಕೆ ತಕ್ಕದಾಗಿ, ತನ್ನ ತಾಯಿತನದ ಅನುಭವಗಳನ್ನೂ ನನಗೆ ಓರೆ ಮಾತುಗಳಿಂದಲೇ ನುಡಿದಳು. ಅಲ್ಲದೆ, ನನ್ನ ಮನೋರೋಗಕ್ಕೆ ಬ್ರಾಂದಿ ಸೇವನೆಯೂ ಸ್ಕಿಟಲ್ಸ್ ಆಟವೂ ಪರಿಹಾರಕವೆಂದೂ ತಿಳಿಸಿದಳು. ಇದಕ್ಕಾಗಿ ಅವಳು ಬ್ರಾಂದಿ ಬಾಟ್ಲಿಯನ್ನು ತಂದಿರಿಸಿ, ನನ್ನ ಸಮಾಧಾನಕ್ಕೆಂದು ತಾನು ಸೇವಿಸಿ, ಈ ವಿಧದಿಂದ ನನ್ನನ್ನು ಕುರಿತು ಬಹುವಾದ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದಳು. ನನ್ನ ಮನಸ್ಸಿನ ಸ್ಥಿತಿ ಅವಳಿಗೆ ಗೊತ್ತಾಗಿದೆಯೆಂದು ನಾನು ತಿಳಿದು, ಮುಂದೆ ಇಂಥ ವಿಷಯದಲ್ಲಿ ಜಾಗ್ರತೆಯಿಂದಿರಬೇಕೆಂದು ನಿಶ್ಚೈಸಿಕೊಂಡೆನು.
(ಮುಂದುವರಿಯಲಿದೆ)
ನೀವು ಮೋಹಪರವಶರಾಗಿ ಓದುತ್ತಿರುವ ದೃಶ್ಯವನ್ನೂ ಅದನ್ನು ನೋಡುತ್ತಿರಬಹುದಾದಾದ ದೇವಕಿಯ ಸಂಭ್ರಮವನ್ನೂ ಕಲ್ಪಿಕೊಳ್ಳುತ್ತಾ ಕೇಳುತ್ತಾ ಆನಂದಿಸಿದೆ.
ನೀವು ಓದುವಾಗ ಕಣ್ಣಿನ ಎದುರು ಪಠ್ಯವಿದ್ದುದರಿಂದ
ಅಲ್ಲಲ್ಲಿ ಎಡೆ ಹಾಯ್ದಂತೆ ಅನಿಸುತ್ತಿತ್ತು.
ಮಹಾಪ್ರಾಣ ಇನ್ನೂ ಸುಧಾರಿಸಿದರೆ ಚೆನ್ನಾಗಿರುತ್ತದೆ.