ಅಧ್ಯಾಯ ಇಪ್ಪತ್ತೇಳು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ತೊಂಬತ್ತನೇ ಕಂತು
ನಮ್ಮ ಮನೆಯ ಹೆಂಗುಸು ಸ್ಕಿಟಲ್ಸ್ ಆಟದ ಹೆಸರೆತ್ತಿದುದರಿಂದಲೋ ಏನೋ – ಕಿವಿಗೆ ಸ್ಕಿಟಲ್ಸನಂತೆಯೂ ಫಕ್ಕನೆ ತೋರುವ ಟ್ರೇಡಲ್ಸನ ಹೆಸರು ನನಗೆ ಜ್ಞಾಪಕಕ್ಕೆ ಬಂತು. ನಾನು ಟ್ರೇಡಲ್ಸನ ಮನೆಗೆ ಹೋಗಬೇಕೆಂದು ನನ್ನನ್ನು ಅವನು ಆಮಂತ್ರಿಸಿ ಕೆಲವು ದಿನಗಳಾಗಿದ್ದದ್ದರಿಂದ, ಈಗಿನ ಮನೋವ್ಯಾಕುಲದ ಸಮಯದಲ್ಲಾದರೂ ಅವನನ್ನು ಕಂಡು ಬರೋಣವೆಂದು ತೋರಿತು. ಆ ಪ್ರಕಾರ ಅವನ ಮನೆಯನ್ನು ಹುಡುಕಿಕೊಂಡು ಹೊರಟೆನು. ಕೊನೆಗೆ ಮನೆ ಸಿಕ್ಕಿತು. ಒಂದು ಕಾಲದಲ್ಲಿ ತುಂಬಾ ವೈಭವದಿಂದ ಮೆರೆದಿದ್ದು ಈಗ ಹಳತಾಗಿ, ಹಾಳು ಬಿದ್ದಿದ್ದ, ಒಂದು ವಠಾರದಲ್ಲಿತ್ತು ಅವನ ಮನೆ. ನಾನು ಆ ಮನೆಯ ಒಳ ಹೋಗಬೇಕೆಂದಿರುವಾಗಲೇ ಹಾಲು ಮಾರಾಟದವನೊಬ್ಬನು ಮನೆ ಬಾಗಿಲ ಎದುರು ಮಾರ್ಗದಲ್ಲಿ ನಿಂತುಕೊಂಡು, ಬಾಗಿಲ ಬಳಿ ಪಾತ್ರೆ ಹಿಡಿದು ನಿಂತುಕೊಂಡಿದ್ದ ಒಬ್ಬ ಚಿಕ್ಕ ಹುಡುಗಿಯ ಹಿಂಬದಿಯ – ಬಾಗಿಲ ಒಳಗಿನ – ಕತ್ತಲೆಯನ್ನೇ ಪರೀಕ್ಷಿಸಿ ನೋಡುತ್ತ ಬೈಯ್ಯುತ್ತಿದ್ದನು.
“ಈ ದಿನದ್ದೂ ಕೂಡಿ ಮೂವತ್ತು ದಿನದ್ದಾಯ್ತು. ಹಣ ಕೊಡದೆ, ನಾಳೆಯೂ ಹಣ ಕೊಡದಿದ್ದರೆ ನಾನು ಮಾಡುವ ಕೆಲಸವೇ ಬೇರೆ – ಏನು?” ಎಂದು ಗದರಿಸಿ ಹಾಲಿನವನು ಸಿಟ್ಟಿನಿಂದ ಹೋದನು.
“ಇದು ಮಿ. ಟೋಮಿ ಟ್ರೇಡಲ್ಸರವರ ಮನೆಯೇನು?” ಎಂದು ನಾನು ಹುಡುಗಿಯನ್ನು ಕೇಳಿದ್ದಕ್ಕೆ ಒಳಗಿನ ಬಾಗಿಲ ಹಿಂದಣ ಕತ್ತಲು “ಹೌದು” ಎಂದು ಉತ್ತರ ಕೊಟ್ಟಿತು. ಮತ್ತು ಆ ಉತ್ತರದನಂತರ ಹಾಲಿಗಾಗಿ ಹೊರಗೆ ಬಂದಿದ್ದ ಹುಡುಗಿಯೂ “ಹೌದು” ಅಂದಳು.
“ಒಳಗೆ ದಯಮಾಡಿಸಿರಿ, ತೋರಿಸುತ್ತೇನೆ” ಎಂದು ಕತ್ತಲೆ ಪುನಃ ಹೇಳಿದೊಡನೆಯೇ ಹುಡುಗಿಯೂ ಹಾಗೆಯೇ ಅಂದಳು. ಮುಖ್ಯವಾಗಿ, ಒಳಗಿನ ಪ್ರೇರಣೆಯಿಲ್ಲದೆ ಯಾವ ಸಂಗತಿಯೂ ಆ ಮನೆಯಿಂದ ಹೊರೆಗೆ ಬರಕೂಡದೆಂಬ ನಿಯಮ ಅಲ್ಲಿದ್ದಂತೆ ತೋರಿತು. ನಮ್ಮ ಈ ಮಾತುಗಳನ್ನೆಲ್ಲ ಟ್ರೇಡಲ್ಸನು ಎಲ್ಲಿಂದಲೋ ಕೇಳಿಯೋ ಏನೋ ಅವನೇ ನಾನು ಪೂರ್ತಿ ಒಳಗೆ ಹೋಗುವುದರ ಒಳಗೇ ನನ್ನ ಎದುರು ಬಂದು ನನ್ನನ್ನು ಅವನ ಕೋಣೆಗೆ ಕರೆದುಕೊಂಡು ಹೋದನು.
ಅವನು ಒಂದು ದೊಡ್ಡ ಕಟ್ಟಡದ ಒಂದು ಚಿಕ್ಕ ಭಾಗದಲ್ಲಿ ಮಾತ್ರ ಬಾಡಿಗೆಗೆ ಇದ್ದುದೆಂದೂ ಹಾಲಿನವರ ಜಗಳ ಜಂಜಾಟಕ್ಕೂ ಅವನಿಗೂ ಏನೂ ಸಂಬಂಧವಿಲ್ಲವೆಂದೂ ಅವನ ಕೋಣೆಯಲ್ಲಿ ಕುಳಿತು ಮಾತಾಡುವಾಗ ತಿಳಿಯಿತು.
ನಾನು ಅನಿರೀಕ್ಷಿತವಾಗಿ ಅಲ್ಲಿಗೆ ಹೋದದ್ದು ಟ್ರೇಡಲ್ಸನಿಗೆ ಬಹಳ ಸಂತೋಷವಾಯಿತು. ನಾವು ಮಾತಾಡುತ್ತಿದ್ದಾಗಲೇ ಅವನ ಕೋಣೆಯನ್ನೆಲ್ಲಾ ನೋಡಿದೆ. ಕೋಣೆ ಚಿಕ್ಕದಾಗಿತ್ತು. ಅವನ ಸಾಮಾನುಗಳನ್ನೆಲ್ಲಾ ಬಹು ಕ್ರಮದಿಂದ ಇಟ್ಟು, ಕೋಣೆಯನ್ನು ಚೊಕ್ಕಟವಾಗಿಟ್ಟುಕೊಂಡಿದ್ದನು. ಮಾತಾಡುತ್ತಾ ಅವನ ಆವರೆಗಿನ ಜೀವನ ಚರಿತ್ರೆಯನ್ನು ತಿಳಿದೆನು. ಅವನಿಗೊಬ್ಬ ಚಿಕ್ಕಪ್ಪನಿದ್ದು, ಆ ಚಿಕ್ಕಪ್ಪನಿಗೆ ಮಕ್ಕಳಿಲ್ಲದೆ ಅವನಿಂದ ಸ್ವಲ್ಪ ಹಣ ಟ್ರೇಡಲ್ಸನಿಗೆ ಸಿಕ್ಕಬಹುದೆಂದು ತೋರುತ್ತಿದ್ದಾಗಲೇ ಚಿಕ್ಕಪ್ಪನು ಪುನರ್ವಿವಾಹ ಮಾಡಿಕೊಂಡು, ಟ್ರೇಡಲ್ಸನಿಗೆ ಯಾವ ಸಹಾಯವೂ ಸಿಗದಂತಾಯಿತು. ಅವನ ಜೀವನ ನಿರ್ವಹಣಕ್ಕಾಗಿ ಅನೇಕ ವಿಧದ ಕೆಲಸಗಳನ್ನು ಮಾಡಿ ನೋಡಿ, ಈಗ ವಕೀಲಿ ವೃತ್ತಿಯನ್ನು ಅವಲಂಬಿಸಿರುವುದಾಗಿ ತಿಳಿದೆ. ಅವನ ಪ್ರೇಮ ಜೀವನದ ಅನುಭವವನ್ನೂ ತಿಳಿಸುತ್ತ, ಈಗ ಅವನು ಒಬ್ಬ ಪಾದ್ರಿಯ ಮಗಳನ್ನು ಮದುವೆಯಾಗಲು ಒಪ್ಪಂದ ಮಾಡಿಕೊಂಡಿದ್ದನಂತೆ. ಅವಳು ಬಹು ಸುಂದರಿಯಂತೆ. ಅವಳ ಮುಖದಷ್ಟು ಮುದ್ದಾದ ಮುಖ, ಅವಳ ಗುಣದಷ್ಟು ಒಳ್ಳೆಯ ಗುಣ, ಇನ್ನು ಯಾರಿಗೂ ಇರಲಾರದೆಂದೂ ತಿಳಿಸಿದನು. ಅವಳ ಹೆಸರು ಸೋಫಿ ಎಂದಾಗಿತ್ತು. ಸದ್ಯ ಟ್ರೇಡಲ್ಸನು ಮದುವೆಯಾಗಿ ಸಂಸಾರ ಸಾಗಿಸಬಲ್ಲಷ್ಟು ಸಂಪಾದನೆ ಮಾಡುತ್ತಿಲ್ಲವಾದ್ದರಿಂದ, ತನ್ನ ಸಂಸಾರ ಸಾಕಲು ಶಕ್ತನಾಗುವವರೆಗೆ – ಟ್ರೇಡಲ್ಸನಿಗೆ ಅರುವತ್ತು ವರ್ಷ ಪ್ರಾಯವೇ ಆದಾಗ ಮಾತ್ರ ಸಾಕಷ್ಟು ಶಕ್ತನಾಗಬಹುದಾದರೂ ಆವರೆಗೂ ಕಾದಿದ್ದು, ಆಗ ಮದುವೆಯಾಗಲು ಒಪ್ಪಿದ್ದಳಂತೆ, ಸೋಫಿ. ಟ್ರೇಡಲ್ಸನು ಬಾಲ್ಯದಲ್ಲಿದ್ದಂತೆಯೇ ಬಹು ದಾಕ್ಷಿಣ್ಯವಂತನಾಗಿಯೂ ಸದಾ ಸಂತುಷ್ಟಿ ಸಂತೃಪ್ತಿ ಸ್ವಭಾವದವನಾಗಿಯೂ ನಿಗರ್ವಿಯಾಗಿಯೂ ಸರಳ ಸ್ವಭಾವದವನಾಗಿಯೂ ಇದ್ದನು.
ನಾವು ಈ ರೀತಿ ಕುಳಿತು ಮಾತಾಡುತ್ತಿದ್ದ ಹಾಗೆಯೇ ನಮ್ಮ ಕೋಣೆಯ ಬಾಗಿಲನ್ನು ಯಾರೋ ತಟ್ಟಿದರು. ಬಾಗಿಲು ತಟ್ಟಿದ ಶಬ್ದ ಮಿ. ಮೈಕಾಬರರನ್ನು ನನಗೆ ಜ್ಞಾಪಕಕ್ಕೆ ತಂದಿತು. ಇಷ್ಟರಲ್ಲಿ ಮಿ. ಮೈಕಾಬರರೇ ಒಳಗೆ ಬಂದು ನಿಂತರು. ನನ್ನನ್ನು ಅವರು ಕಂಡ ಕೂಡಲೇ ಸಂತೋಷದಿಂದ ತನ್ನ ಪತ್ನಿಯನ್ನು ಕರೆದರು. ಅವರ ಪತ್ನಿ ಬಂದದ್ದೇ ತಡ, ಅವರ ಸಂತೋಷವನ್ನು ತಡೆಯಲಾರದೆ, ಬಹು ಧೀರರಂತೆ ಎದೆ ಮುಂದೆ ಮಾಡಿಕೊಂಡು ನಿಂತು, ಒಂದು ಮಹಾಸಭೆಗೆ ಪ್ರಸ್ತಾವನಾ ಭಾಷಣ ಮಾಡುವವರಂತೆ, ಬಹು ಗಂಭೀರ ಮುಖಭಂಗಿಯಿಂದ –
“ಜೀವನ ಪಥದಲ್ಲಿ ಏರಿಳಿತಗಳಿರುವುದು ಬಹು ಸ್ವಾಭಾವಿಕವು. ಮಿ. ಮೈಕಾಬರರ ಕುಟುಂಬವು ಸದ್ಯ ಅತ್ಯಂತ ಶೋಚನೀಯವಾದ ಇಳಿತದಲ್ಲಿರುವುದರ ಮರ್ಮವು, ಅರ್ಥಾತ್, ಲಕ್ಷಣವು, ಮುಂದೆ – ಶೀಘ್ರದಲ್ಲೇ – ಅವರ ಕುಟುಂಬಕ್ಕೆ ಒದಗಲಿರುವ ಉಚ್ಛ್ರಾಯ ಸ್ಥಿತಿಯನ್ನೇ ತೋರಿಸುವುದಾಗಿದೆ. ಇದರಲ್ಲೇನೂ ಸಂಶಯವಿಲ್ಲ. ಇಳಿತವು ಏರುವಿಕೆಯ ಮೂಲವೆಂದಾದ ಪಕ್ಷಕ್ಕೆ ನಮ್ಮ ಪ್ರಸ್ತುತದ ಅನುಭವವು ಭವಿಷ್ಯದ ಶುಭ ಪ್ರಸಂಗವನ್ನೇ ತೋರಿಸುತ್ತದೆ. ನಮ್ಮ ಕುಟುಂಬದಲ್ಲಿ ಹೊಸತೊಂದು ವ್ಯಕ್ತಿಯ ಪ್ರವೇಶವಾಗುವ ಯೋಗವು ನಮ್ಮ ಪತ್ನಿಯವರಲ್ಲಿ ಕಂಡು ಬರುತ್ತಿದೆ. ಇಂಥ ಮಹಾಯೋಗದಲ್ಲೇ – ನಮ್ಮ ಹಿಂದಿನ ಕಷ್ಟ ಕಾಲಗಳಲ್ಲಿ ಭುಜಕ್ಕೆ ಭುಜ ಕೊಟ್ಟು ಸಹಾಯವಿತ್ತು ಸಹಜೀವನ ನಡೆಸಿರುವ ಮಿ. ಕಾಪರ್ಫೀಲ್ಡರು ಇಲ್ಲಿ ಪ್ರವೇಶವಾದುದಂತೂ ನಮ್ಮ ಬಹು ಶೀಘ್ರದ ಶುಭೋದಯವನ್ನೇ ಸೂಚಿಸುತ್ತದೆ” ಎಂದು ಮೊದಲಾಗಿ, ಆವೇಶಯುಕ್ತವಾಗಿ ಮಾತಾಡಿದರು. ನಾನೂ ಅವರಿಗೆ ಸಮಾಧಾನವಾಗುವ ರೀತಿಯಲ್ಲಿ ಉತ್ತರವಿತ್ತು ಮಾತಾಡಿದೆ. ಮಿ. ಮೈಕಾಬರರು ಅದೇ ಕಟ್ಟಡದ ಇನ್ನೊಂದು ಭಾಗದಲ್ಲಿ ವಾಸಮಾಡುತ್ತಿದ್ದರು. ಆದಿನ ಮಧ್ಯಾಹ್ನಕ್ಕೆ ನಾನು ಅವರಲ್ಲಿಗೆ ಊಟಕ್ಕೆ ಹೋಗಬೇಕೆಂದು ಒತ್ತಾಯಿಸಿದರು. ಆದರೆ ನನಗೆ ಇತರ ಕೆಲಸ ಆಗಲೇ ಇದೆಯೆಂದುಕೊಂಡು, ಅವರ ಆಮಂತ್ರಣಕ್ಕೆ ಸಮ್ಮತಿಸಲಿಲ್ಲ. ಆದರೆ, ಅದೇ ಸಂದರ್ಭದಲ್ಲಿ ಮಿ. ಮೈಕಾಬರರೂ ಮಿಸೆಸ್ ಮೈಕಾಬರರೂ ಟ್ರೇಡಲ್ಸನೂ ನನ್ನ ಮನೆಗೆ ಬಂದು ನನ್ನದೊಂದು ಔತಣವನ್ನು ಸ್ವೀಕರಿಸಬೇಕೆಂದು ಅವರೆಲ್ಲರಲ್ಲಿ ವಿನಂತಿಸಿಕೊಂಡೆನು. ಔತಣದ ದಿನವನ್ನು ನಿಶ್ಚೈಸಿ ಅವರು ಆಮಂತ್ರಣವನ್ನು ಸ್ವೀಕರಿಸಿದನಂತರ ನಾನು ನನ್ನ ಮನೆಗೆ ಹೊರಟು ಹೋದೆನು.
(ಮುಂದುವರಿಯಲಿದೆ)
ತುಂಬ ಚಿಕ್ಕ ಅಧ್ಯಾಯ.ಅನುವಾದ ಮೂಲ ದಲ್ಲಿ ಮೈಕಾಬರ್ ಎಂದಿರುವುದರಿಂದ ಹಾಗೆಯೇ ಓದುವುದು ಸಹಜ. ನಾವು ಇಂಗಿಷಿನಲ್ಲಿ ಮಿಕಾಬರ್ ಎಂದು ಓದುತ್ತಿದ್ದೆವು. ಆ ಪಾತ್ರ ಪರಿಚಯಕ್ಕೆ ಶೀರ್ಷಿಕೆ ಸಮರ್ಥನೆಗೆ ಕಾಯುವಂತಾಯಿತು.